Wednesday, September 26, 2012

you tube ನಲ್ಲಿ ನನ್ನ ವಿಡಿಯೋ ......!

ಆತ್ಮೀಯರೇ,
ಪ್ರೊ. ನಾರಾಯಣ ಪ್ರಸಾದ್ ರವರು    ಲೇಖಕರ ವಿಡಿಯೋಗಳನ್ನು ಚಿತ್ರೀಕರಿಸಿ you tube  ನಲ್ಲಿ  
ಅಪ್ ಲೋಡ್  ಮಾಡುವ ಮೂಲಕ ಅವರ ಮನದಾಳದ ಮಾತುಗಳನ್ನು ಪ್ರಕಟಪಡಿಸುತ್ತಿದ್ದಾರೆ
ಹಾಗೂ ಅವರನ್ನು ಹೆಚ್ಚುಸಮಾನಾಭಿರುಚಿಯವರಿಗೆ ಪರಿಚಯಿಸುತ್ತಿದ್ದಾರೆ. ಇದೆ ರೀತಿ ಅವರ 
ಸ೦ಗೀತ, ಸಾಹಸ ಮು೦ತಾದ ಬ್ಲಾಗ್ ಗಳೂ ಇವೆ.  ಇಲ್ಲಿ ಅವರೇ ಪರಿಚಯಿಸಿರುವ ನನ್ನ 
ವಿಡಿಯೋ ಲಿ೦ಕ್ ಗಳಿವೆ. ಅದರ ಮೇಲೆ ಕ್ಲಿಕ್ ಮಾಡಿ, ನೋಡಿ ಪ್ರತಿಕ್ರಿಯಿಸಿ


Monday, September 24, 2012

`ಹನಿ'ಗಳು

ಭಾವನೆಗಳು

ಹಾಸಬಾರದು

ಹಸನಾದ ನವಿರು ವಸ್ತ್ರವ

ಹಾದಿ ಬೀದಿಗಳಲ್ಲಿ,

ಹಗುರಾಗಿ ಮಡಿಸಿ

ಹದವಾಗಿ ನೇವರಿಸುತ್ತಾ

ಭದ್ರಪಡಿಸಬೇಕು

ಮನದ ಸಂದೂಕದಲ್ಲಿ.


ಸತ್ವ


ಬಡಿಬಡಿದು

ಬಡಿಗೆಯಾಗಿಯೇ ಸವೆಯಿತು

ಬಂಗಾರ ಹೊಳಪಾಯಿತು,

ಅರೆದರೆದು

ಗಾಣವಾಗಿಯೇ ಉಳಿಯಿತು

ಕಬ್ಬು ರಸವಾಗಿ ಹರಿಯಿತು.

Thursday, September 20, 2012

ನನ್ನ ಮಗಳು ಸುಷ್ಮಸಿ೦ಧು ಲೇಖನ.......

ನನ್ನ ಮಗಳು ಸುಷ್ಮಸಿ೦ಧು ಬರೆದ ಲೇಖನ `ವಿಜಯ ಕರ್ನಾಟಕ'(೧೯-೯-೨೦೧೨) ದಲ್ಲಿ ಪ್ರಕಟವಾಗಿದ್ದು ನಿಮ್ಮ ಮು೦ದಿದೆ. ಓದಿ ಪ್ರತಿಕ್ರಿಯಿಸಿ.


http://www.facebook.com/photo.php?fbid=121485751332728&set=a.105510512930252.11711.100004139100699&type=1&relevant_count=1

Friday, September 14, 2012

ನಗೆಯ `ಬಗೆ’ದಂತೆ


                                       ನಾಮಕರಣ, ಚೌಲ, ಉಪನಯನ, ಮದುವೆ... ಈ ರೀತಿಯ ಯಾವುದೇ ಸಮಾರಂಭವಾದರೂ ಅವಲಕ್ಕಿ ಪುರಿಉಂಡೆ ಮಾಡುವುದು ಅವಿಭಕ್ತ ಕುಟುಂಬವಾದ ನಮ್ಮ ಮನೆಯ ಪದ್ಧತಿಯಾಗಿತ್ತು. ಉಂಡೆ ಕಟ್ಟುತ್ತಿದ್ದಂತೆಯೇ ಅವುಗಳನ್ನು ವಂದರಿಗೆ ಹಾಕಿ ವೃತ್ತಾಕಾರವಾಗಿ ತಿರುಗಿಸುತ್ತಾ ಗಟ್ಟಿಗೊಳಿಸುವ ಕಾರ್ಯ ಮಕ್ಕಳ ಪಾಲಿನದಾಗಿರುತ್ತಿತ್ತು.  ನಾನು, ನನ್ನಕ್ಕನ ನಡುವೆ ಇದಕ್ಕಾಗಿಯೇ ಸ್ಪರ್ಧೆ ಏರ್ಪಟ್ಟರೂ ಸ್ವಾಭಾವಿಕವಾಗಿಯೇ ಗೆಲುವು ಅಕ್ಕನ ಪಾಲೇ ಆಗುತ್ತಿತ್ತು. ಆದರೂ ನಾನೂ ಅವಳೊಡನೆ ಸಹಕರಿಸುತ್ತಾ, ಇಬ್ಬರೂ ಕುಲುಕುಲು ನಗುತ್ತಾ ವಂದರಿ ತಿರುಗಿಸುವ ಸಂಭ್ರಮದಲ್ಲಿ  ಕೆಲವು ಉಂಡೆಗಳು `ನಕ್ಕುಬಿಡುತ್ತಿದ್ದವು! ಅಂದರೆ ಕಳಲಿಕೊಂಡು ತಮ್ಮ ಗೋಲಾಕೃತಿಗೆ ತಿಲಾಂಜಲಿಯಿಡುತ್ತಿದ್ದವು. ನಮ್ಮ ಈ ಸಡಗರವನ್ನು ಗಮನಿಸುತ್ತಿದ್ದ ನಮ್ಮಜ್ಜಿ `ಹುಡುಗುಮುಂಡೇವು ಇವು ಹೀಗೆ ನಗ್ತಾ ಇದ್ರೆ ಉಂಡೆ ನಗದೇ ಇರುತ್ಯೆ, ಗಾಂಭೀರ್ಯ ಯಾವಾಗ ಕಲಿತು ಕೊಳ್ಳುತ್ವೋ ಇವು?’ ಎಂದು ನಮ್ಮನ್ನು ಗಂಭೀರಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಆದರೂ ಯಾವುದೇ ಸಂದರ್ಭ ಸಿಕ್ಕರೂ ನಮ್ಮದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಾ ನಗುವುದೇ ನಮ್ಮ ಸ್ವಭಾವವಾಗಿತ್ತು...ದಿನದಲ್ಲಿ ಅದೆಷ್ಟು ಭಾರಿ ನಗುತ್ತಾ ಇದ್ದೆವೋ...
                  ನಾಲ್ಕಾರು ಜನಗಳ ಮಧ್ಯೆ ಮೌನದ ಚಿಪ್ಪಿನೊಳಸೇರುತ್ತಿದ್ದ ನಾನು ಒಬ್ಬರೇ ಆತ್ಮೀಯರೊಡನಿದ್ದಾಗ ಮಾತ್ರ ಚೆನ್ನಾಗಿ ಹರಟುತ್ತಾ ಮನ:ಪೂರ್ವಕವಾಗಿ ನಕ್ಕುಬಿಡಬಲ್ಲವಳಾಗಿದ್ದೆ. ಅಪರಿಚಿತ ವಾತಾವರಣದಲ್ಲಿ ನನ್ನ ಜೀವನವನ್ನು ಮುಂದುವರಿಸಬೇಕಾದ ಸ್ಥಿತಿ ಬಂದಾಗ ಸ್ವಲ್ಪ ಗೊಂದಲವೇ ಆಯ್ತು. ನನ್ನವರಂತೂ ಮುಕ್ತವಾಗಿ ನಗಲೇ ಬಾರದವರಾಗಿದ್ದು ನಗುವವರನ್ನೂ ಸಹಿಸದವರೆಂಬುದು ಒಮ್ಮೆ ಸಾಬೀತಾಗಿಹೋಯ್ತು. ಪ್ರಾರಂಭದಲ್ಲಿ ಯಾವುದೋ ಕಾರಣಕ್ಕೆ ನನಗೊಮ್ಮೆ ತಡೆಯಲಾಗದ ನಗು ಬಂದಾಗ ಅದೇ ಸಂದರ್ಭದ ಏಕೈಕ ಪ್ರತ್ಯಕ್ಷದರ್ಶಿಯಾದ ಅವರು ನಗಲಾಗದೇ ಮೊಳಕೈಯಿಂದ ನನ್ನನ್ನು ತಿವಿದಾಗ ಇವರಲ್ಲಿ `ಹಾಸ್ಯರಸಕ್ಕಿಂತ `ಕೋಪರಸವೇ ಹೆಚ್ಚಾಗಿದೆ ಎಂದು ತಿಳಿದು `ನೋವುರಸಕ್ಕೆ ಎಡೆ ಕೊಡದಂತೆ  ಜಾಗರೂಕಳಾಗಲಾರಂಭಿಸಿದೆ! (ಅಂದರೆ ಅವರಿಗೆ ನಗುವೇ ಬರುವುದಿಲ್ಲ ಎಂದರ್ಥವಲ್ಲ. ಕ್ಯಾಮೆರಾ ಮುಂದೆ ನಿಂತಾಗ ಎಂಥಾ ಸುಂದರ ನಗೆಯನ್ನು ಮೂಡಿಸಿಬಿಡುತ್ತಾರೆಂದರೆ...ಅದಕ್ಕೆ ಸಾಕ್ಷಿಯಾಗಿ ನಾವು ಮದುವೆಯಾದ ನಂತರ ಸಾಮಾನ್ಯವಾಗಿ ಎಲ್ಲಾ ದಂಪತಿಗಳಂತೆ ತೆಗೆಸಿದ ಒಂದು ಫೋಟೊ ಗೋಡೆಯ ಮೇಲೆ ಕಾಲು ಶತಕವನ್ನು ಸಮೀಪಿಸುವ ತವಕದಲ್ಲಿ ಚಿರಸ್ಥಾಯಿಯಾಗಿದೆ! ನನ್ನದಂತೂ `ಗಂಟುಮೋರೆಎಂದು ಅದನ್ನು ನೋಡಿದವರೆಲ್ಲಾ ತೀರ್ಮಾನಕ್ಕೆ ಬಂದಿದ್ದಾರೆ.)  ಆದರೂ ಅಲ್ಲಿ ದೊರೆಯುವ ವಿಶೇಷಾವಕಾಶಗಳನ್ನು ಬಿಡದಂತೆ ಸದುಪಯೋಗಗೊಳಿಸಿಕೊಳ್ಳುತ್ತಿದ್ದೆ. ನನ್ನೊಡನೆ ಸಲಿಗೆಯಿಂದಿದ್ದ, ಸದಾ ತುಂಬಿದಂತಿದ್ದ ನಮ್ಮ ಮನೆಯಲ್ಲೇ ಆಟವಾಡಿಕೊಂಡಿರುತ್ತಿದ್ದ, ಪಕ್ಕದ ಮನೆಯ ಪುಟ್ಟ ಹುಡುಗಿ ಒಂದು ದಿನ ನಾನು ಉದ್ಯೋಗ ಮುಗಿಸಿ ಬರುವುದನ್ನೇ ಕಾದಿದ್ದಂತೆ, `ಆಂಟಿ, ನೀವು ನಾಲ್ಕು ಮನೆಗೆ ಕೇಳೋ ಹಾಗೆ ನಗ್ತೀರಾ?’ ಎಂಬ ಪ್ರಶ್ನೆಯನ್ನು ಎಸೆದುಬಿಟ್ಟಿತು! ಇದರ ಹಿನ್ನೆಲೆ ಏನಿರಬಹುದೆಂದು ತರ್ಕಿಸಿದ ನಾನು, `ನೀನು ಎಷ್ಟು ಮನೆಗೆ ಕೇಳುವಂತೆ ನಗ್ತೀಯ?’, `ನಿಮ್ಮಮ್ಮ ಎಷ್ಟು ಮನೆಗೆ ಕೇಳೋ ಹಾಗೆ ನಗ್ತಾರೆ?’... ಎಂದು ಕೇಳುತ್ತಾ ಸನ್ನಿವೇಶವನ್ನು ಹಗುರಗೊಳಿಸುವ ಪ್ರಯತ್ನ ನಡೆಸಿದ್ದೆ! (ಕಾತುರ ಕಿವಿಗಳಿಗೆ ನಿರಾಶೆಯನ್ನುಂಟುಮಾಡುತ್ತಾ...) ನಂತರ ಹಿರಿನಗೆಯನ್ನು ಕಿರಿದುಗೊಳಿಸಿ ಕಿರುನಗೆಯಾಗಿಸಿ ಮೊಗದ ಮೇಲೆ ಸ್ಥಾಯಿಗೊಳಿಸುವ ಪ್ರಯತ್ನ ನಡೆಸಲಾರಂಭಿಸಿದೆ.
                  
                    ಪರಿಚಿತರು ಎದುರಾದಾಗ ಪರಸ್ಪರ ನಗೆಯ ವಿನಿಮಯ ಸ್ವಾಭಾವಿಕ. `ನಾನು ನಗಿಸಿದರೂ ಅವರು ನಗಲಿಲ್ಲ,’ ಎಂದು ಇಲ್ಲೊಬ್ಬರು ಹೇಳುತ್ತಿದ್ದರು. `ನಗಿಸೋದುಎನ್ನುವುದರ ಪ್ರಯೋಗ ಬಹಳ ವಿಚಿತ್ರವೆನಿಸುತ್ತದೆ. ಚಕ್ಕನಗುಳಿ ಕೊಟ್ಟು ನಗಿಸುವುದೇನೋ ಎನ್ನುವಂತೆ `ಸೌಂಡ್ಆಗುತ್ತದೆ. ಆದರೆ ನ್ಯೂಟನ್ನನ ಮೂರನೇ ನಿಯಮವನ್ನು ಅನ್ವಯಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೆ ನಮ್ಮ ನಗೆ-`ಕ್ರಿಯೆಯಾದರೆ ಅವರ ನಗೆ-`ಪ್ರತಿಕ್ರಿಯೆಯಾಗುತ್ತದೆ. ಪ್ರತಿಕ್ರಿಯೆಯನ್ನು ನಿರೀಕ್ಷಿಸಿ ನಾವು ನಗುವುದರಿಂದ ಅದು `ನಗಿಸುವುದೇಆಗಿರುತ್ತದೆ!  ಹೀಗೆ ಪರಧರ್ಮಪಾಲಕರಾಗಿ (ನಗಿಸುವುದು ಪರಧರ್ಮ-ಡಿ.ವಿ.ಜಿ.) ನಗಿಸಲು ಹೊರಟವರೆದುರೂ ನಗದ ಮಾನವ(!)ಜೀವಿಗಳಿಗೆ ಏನೆಂದು ಕರೆಯುವುದು? ಮೊದಮೊದಲು ನಗೆಗೆ ನಗೆಯೇ ಪ್ರತ್ಯುತ್ತರ ಎನ್ನುವಂತೆ ನಗುನಗುತ್ತಾ ವೃತ್ತಿ ಜೀವನ ಪ್ರಾರಂಭಿಸುವವರೂ `ನಗೆಯನ್ನು `ಬಿಗುವಿನಿಂದ ಸ್ಥಾನಪಲ್ಲಟಗೊಳಿಸಿ `ಬಿಗಿಮೊಗದವರಾಗಿ ದಿನಗಳನ್ನು ನೂಕಲಾರಂಭಿಸಿಬಿಡುತ್ತಾರೆ.
                  
                                  ಬಿಗಿದ ಮೊಗದಲಿ
                                  ನಗೆಯ ಅಂತ್ಯ ಸಂಸ್ಕಾರ
                                  ಅಂದವನೇ ಕಬಳಿಸುವ
                                  ಅಧಿಕಾರ!
ಅಧಿಕಾರದ ಪ್ರಮುಖ ಗುಣವೇ `ಬಿಗಿದ ಮೊಗಎಂಬ ಪೂರ್ವಾಗ್ರಹ ಪೀಡಿತ ಭಾವನೆಯಲ್ಲಿದ್ದೆ. ಕ್ರಮೇಣ ಅಧಿಕಾರದ(ಒಂದು ಭಾಗ ನಾನೂ ಆದ ನಂತರ) ಅವಳಿರೂಪಿಯಾದ ಅಹಂಕಾರವೇ ಇದರ ಮೂಲ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇನೆ!
                     `ಮುಗುಳುನಗೆಮೊಗವನಲಂಕರಿಸಲು ಎದುರಾಗುವವರು ನಮ್ಮ ನಗೆಗೆ ಪ್ರತಿನಗೆ ಬೀರುವುದು ಅತ್ಯವಶ್ಯಕ ಎನ್ನುವ ಸಿದ್ಧಾಂತದಲ್ಲಿ ಪರಿಚಿತರು ಎದುರಾದಾಗ ಹಾರ್ದಿಕವಾಗಿ ನಗೆಬೀರಿ ಎಷ್ಟೋ ಭಾರಿ ಮುಖಭಂಗಿತಳಾಗಿ ಅವರನ್ನು `ನಗಿಸಲಾರದನನ್ನ ಅಸಹಾಯಕ ಸ್ಥಿತಿಗಾಗಿ ಮರುಗಿದ್ದೇನೆ. ಇದೇ ಪುನರಾವರ್ತನೆಯಾಗಲಾರಂಭಿಸಿದಾಗ ನನ್ನ ಮೊಗದ ಮೇಲೆ ನಗೆಯನ್ನು ಚಿರಸ್ಥಾಯಿಯಾಗಿಸಲು ಬೇರೆಯವರನ್ನು ಏಕೆ ಆಶ್ರಯಿಸಬೇಕು` ನಮ್ಮನ್ನೇ ನೋಡಿ ನಾವೇಕೆ ಮುಗುಳ್ನಗಬಾರದು ಎನಿಸಿದಾಗ ಕನ್ನಡಿಯ ಮುಂದೆ ನಿಂತು `ಬಿಂಬೇಸ್ಮಿನ್ ಸನ್ನಿಧಿಂ ಕುರುಎನ್ನುವಂತೆ `ಪ್ರತಿಬಿಂಬನಗೆಯ ಪ್ರಯತ್ನ ನಡೆಸಲು ಮೊದಲಿಟ್ಟೆ! ಇದಕ್ಕೆ ಪುಷ್ಟಿ ನೀಡುವಂತೆ `ನಗಬೇಕು ಎನಿಸದಿದ್ದರೂ ಕನ್ನಡಿಯನ್ನು ನೋಡಿಕೊಂಡು ಒಂದೆರಡು ನಿಮಿಷವಾದರೂ ನಗುವುದು ಒಳ್ಳೆಯದು,’ಎಂದು ನನ್ನ ಪುಸ್ತಕ ಜ್ಞಾನವೂ ಬೆನ್ನು ತಟ್ಟಿತು. ಇದರಿಂದ ಮನೆಯಲ್ಲಿ ಎಲ್ಲಿ ಹೋದರೂ ಕನ್ನಡಿಗೆ ಎದುರಾಗುವಂತೆ ಅಡುಗೆಮನೆ, ಬಚ್ಚಲುಮನೆ, ರೂಂಗಳು, ವರಾಂಡಾ, ಹಾಲ್...(ಶೌಚಾಲಯವೊಂದನ್ನು ಹೊರತುಪಡಿಸಿ!) ಎಲ್ಲಾ ಕಡೆಯೂ ಆಯಾ ಸ್ಥಳಗಳ ಯೋಗ್ಯತೆಗನುಗುಣವಾಗಿ ಕನ್ನಡಿಗಳು ಆಕ್ರಮಿಸಿಕೊಂಡವು. ಆದರೂ ಇದ್ದ ಪ್ರಮುಖ ತೊಂದರೆಯೆಂದರೆ ಹೊರಗೆ ಹೋಗಬೇಕಾದ ಸಂದರ್ಭಗಳಲ್ಲಿ ಸದಾ ನಗುತ್ತಿರಬೇಕೆಂದರೆ ಕೈಲೊಂದು ಕನ್ನಡಿಯನ್ನು ಹಿಡಿದಿರಲೇ ಬೇಕು. ಎಂದರೆ `ದರ್ಪಣ ಸುಂದರಿನಾನಾಗಬೇಕು! ಇದರಿಂದ ನನ್ನ ನೋಡಿ ಬೇರೆಯವರು ನಗುವಂತಾಗುವ ಪರಿಸ್ಥತಿ ಎದುರಾಗಬಹುದೆಂದು ಹೆದರಿ...ಛೆ ಛೆ ಸ್ವತ: ತಾವೇ `ನಗಲಾಗದವರ ಬಗ್ಗೆ ಯೋಚಿಸುವುದೂ ಬೇಡ, ಸದಾ ಕನ್ನಡಿಯ ಮುಂದೆ ಹೋಗುವುದೂ ಸರಿಯಲ್ಲ, ಕನ್ನಡಿ ಹಿಡಿದೇ ಇರಲೂ ಸಾಧ್ಯವಿಲ್ಲ. ನನ್ನ ಅಂತರಂಗದ ಕನ್ನಡಿಯಲ್ಲಿಯೇ ನನ್ನ ಪ್ರತಿಬಿಂಬವನ್ನು ಕಾಣುತ್ತಾ ಹಸನ್ಮುಖಿಯಾಗಿರುವಂತಿದ್ದರೆ!  ಅಂದರೆ ನಮ್ಮ ಒಳಗಿನೊಡನೆ ಸಂಪರ್ಕವಿರಿಸಿಕೊಂಡು ನಾವೇ ನಗುವುದು ತಾನೆ? ತಮಗೆ ತಾವೇ ನಗುವವರು `ಪ್ರೇಮಿಗಳುಇಲ್ಲವೇ `ಹುಚ್ಚರು’(ಕ್ಷಮಿಸಿ, ಈ ಪದ ಬಹಳ ಅನಾಗರಿಕವಾಗಿ ಕಂಡುಬಂದರೂ ರೂಢಿಗತ...). ಪ್ರೇಮಿಗಳು ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ, ಸವಿ ಕ್ಷಣಗಳನ್ನು ಮೆಲುಕುಹಾಕುತ್ತಾ, ನಗೆಯಮೋಡಿಗೆ ಸಿಲುಕಿದ್ದರೆ, ಅವರ ಭ್ರಾತೃವರ್ಗದವರು ತಮ್ಮೊಡನೆ ತಾವೇ ಸಲ್ಲಾಪಿಸುತ್ತಾ ಹಿರಿ,ಕಿರು, ಬಿರುನಗೆಗಳನ್ನಲ್ಲಾ ಬೀರುತ್ತಿರುತ್ತಾರೆ. ಮೊದಲ ವರ್ಗಕ್ಕೆ ಸೇರಲು ಸಾಮಾಜಿಕ ಒಪ್ಪಿಗೆ ದೊರೆಯದೇ ಇರುವುದರಿಂದ ಎರಡನೇ ವರ್ಗಕ್ಕೆ ಸೇರಿಸುವುದೇ ನಿಶ್ಚಿತವೆನಿಸಿ ಆ ಯೋಜನೆಯನ್ನೇ ಕೈಬಿಟ್ಟೆ!  
                    ನಾವು ಚಿಕ್ಕವರಾಗಿದ್ದಾಗ ಓದಿದ ಒಂದು ಕಥೆ ಇನ್ನೂ ನನ್ನ ನೆನಪಿನಲ್ಲಿದೆ. ಒಂದೂರಿನಲ್ಲಿ ಒಬ್ಬ ರಾಜ ಮತ್ತು ರಾಣಿಯರಿರ್‍ತಾರೆ. ಅವರಿಗೆ ಮಕ್ಕಳೇ ಇರುವುದಿಲ್ಲ. ಬಹಳ ವರ್ಷಗಳ ನಂತರ ಒಂದು ಹೆಣ್ಣು ಮಗು ಹುಟ್ಟುತ್ತೆ. ಪೂರ್ಣ ಚಂದ್ರಮನಂತೆ ಬೆಳೆಯಲಾರಂಭಿಸಿದ(!) ಅದು- ಆ ರಾಜಕುಮಾರಿ, ಒಮ್ಮೆಯೂ ನಕ್ಕಿದ್ದೇ ಇಲ್ಲ! ಅವಳ ತಂದೆ, ತಾಯಿ ಅಂದರೆ ರಾಜ-ರಾಣಿಯರಿಗೆ ಈ ಬಗ್ಗೆ ಬಹಳ ಚಿಂತೆಯಾಗಿ ಕಡೆಗೆ ಯಾರು ಅವಳನ್ನು ನಗಿಸುತ್ತಾರೋ ಅವರಿಗೇ ಅವಳನ್ನು ಮದುವೆ ಮಾಡಿ ಕೊಡುವುದಾಗಿ ಸಾರಿಸುತ್ತಾರೆ. ಅನೇಕ ರಾಜಕುಮಾರರು ಬಂದು ಏನೆಲ್ಲಾ ಸಾಹಸ ಮಾಡಿದರೂ ರಾಜಕುಮಾರಿ ನಗುವುದೇ ಇಲ್ಲ! ರಾಜ-ರಾಣಿಯರು ಬಹಳ ನಿರಾಶರಾಗಿ ಕೈ ಚೆಲ್ಲಿ ಕುಳಿತಿದ್ದಾಗ ಒಂದು ದಿನ ರಾ.ಕು. ಬಿದ್ದುಬಿದ್ದು ನಗುತ್ತಿರುತ್ತಾಳೆ. ಏಕೆಂದು ಎಲ್ಲರೂ ಓಡಿಹೋಗಿ ನೋಡಿದಾಗ ಒಬ್ಬ ಹುಡುಗ ಕತ್ತೆ ಹೊತ್ತುಕೊಂಡು ಹೋಗುತ್ತಿರುತ್ತಾನೆ! ಅವನೇ ನಮ್ಮ `ಪೆದ್ದಗುಂಡ’! ಕತ್ತೆ ಹೊರುವ ಮೊದಲು ಅವನು ಮಾಡಿದ ಪೆದ್ದ ಕೆಲಸಗಳ ಒಂದು ಸರಣಿಯೇ ಇದೆ. ಇಲ್ಲಿ ಎಂದೂ ನಗದ ರಾಜಕುಮಾರಿ ನಕ್ಕಿದ್ದು ಮುಖ್ಯವಾಗಿರುವುದರಿಂದ ನಗುವಂತಾದಾಗ ಅವನೇನು ಮಾಡ್ತಿದ್ದ ಎನ್ನುವುದಷ್ಟನ್ನೇ ತಿಳಿಸಿದ್ದೇನೆ. ಇನ್ನು ಅವನೊಡನೆ ರಾಜಕುಮಾರಿಯ ಮದುವೆಯಾಯ್ತು. ಅವನೇ ಮುಂದೆ ರಾಜನಾದ ಎನ್ನುವುದೆಲ್ಲಾ ಅಪ್ರಸ್ತುತ.
                      ಹಿಂದೆ ರಾಜರ ಜೊತೆ ವಿದೂಷಕರು ಇದ್ದು ಅವರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಿದ್ದರು. ಅಕ್ಬರ್-ಬೀರ್‌ಬಲ್, ಕೃಷ್ಣದೇವರಾಯ-ತೆನಾಲಿರಾಮಕೃಷ್ಣರ ಕಥೆಗಳಲ್ಲಿ ವಿದ್ವತ್ ಪೂರ್ಣವಾದ ಹಾಸ್ಯ ತುಂಬಿತುಳುಕಿದೆ. ಹಳೆಯ ಚಲನಚಿತ್ರಗಳಲ್ಲೂ ನಾಯಕನ ಆಪ್ತಮಿತ್ರನಾಗಿ ಒಂದು ಹಾಸ್ಯಪಾತ್ರವಿರುತ್ತಿತ್ತು. ಅದಂತೂ ತನ್ನ ಪೆದ್ದುತನದಿಂದ ನಗೆಯುಕ್ಕಿಸುತ್ತಿತ್ತು. ಈಗ ನಮ್ಮಲ್ಲೇ ನಾವು ಈ ಎರಡೂ ಪಾತ್ರಗಳನ್ನು ಮೇಳೈಸಿಕೊಂಡರೆ ಹೇಗೆ?
                       ಹಾಸ್ಯಗೋಷ್ಟಿಗಳಿಗೆ ನನ್ನನ್ನು ಆಹ್ವಾನಿಸಿ ನಗಿಸುವ ಜವಾಬ್ಧಾರಿ ನೀಡಿದಾಗ ನಾನಂತೂ ಅದು ಮುಗಿಯುವವರೆಗೂ `ತಾಕತ್ತಿದ್ದರೆ ನಗಿಸಿ ನೋಡೋಣಎನ್ನುವಂತೆ ಬಿಗಿಮೊಗದಲಿ ಕುಳಿತುಕೊಳ್ಳುವ ಪ್ರೇಕ್ಷಕರನ್ನು  `ಹೇಗೆ ನಗಿಸುವುದು?’ಎನ್ನುವ ಗೊಂದಲದಲ್ಲಿ ಸ್ವತ: ನಗುವುದನ್ನೇ ಮರೆತುಬಿಟ್ಟಿದ್ದೇನೆ. ನಮ್ಮಲ್ಲಿ `ಪೆದ್ದಗುಂಡನ್ನ ಯಾ ವಿದೂಷಕನನ್ನು ಆವಾಹನೆ ಮಾಡಿಕೊಂಡರೆ ಮಾತ್ರ ನಗಿಸುವ ಕಾರ್ಯ ಸುಸೂತ್ರವಾಗಬಹುದೇನೋ! ಅಥವಾ ನಮ್ಮಲ್ಲಿ ಸುಪ್ತವಾಗಿ ಅಡಗಿರುವ `ಪೆದ್ದುವಿದೂಷಕತನವನ್ನು ಗುರುತಿಸಿಯೇ ಈ ಆಹ್ವಾನವೋ... ಸಧ್ಯದಲ್ಲಂತೂ ಈ ಗೊಂದಲವಿಲ್ಲ!
                      ನಾವು ಕಾಲೇಜಿನಲ್ಲಿದ್ದಾಗ ಬಹಳ ಹಾಸ್ಯಪ್ರಸಂಗಗಳನ್ನು ಹೇಳುತ್ತಿದ್ದ ಉಪನ್ಯಾಸಕರೊಬ್ಬರು,`ಈಗ ಜೋಕ್ ಹೇಳ್ತೀನಿಎಂದ ತಕ್ಷಣ ಎಲ್ಲರೂ ಬಿದ್ದು ಬಿದ್ದು ನಕ್ಕುಬಿಡುತ್ತಿದ್ದರು. ಅವರು ಜೋಕ್ ಹೇಳಿದ ನಂತರ ಪಿನ್‌ಡ್ರಾಪ್ ಸೈಲೆನ್ಸ್! ಆ ಜೋಕ್‌ಅನ್ನು ಮತ್ತೆ ಯಾವುದಾದರೂ ಸಂದರ್ಭದಲ್ಲಿ ಉಪಯೋಗಿಸಿಕೊಂಡು ನಗುತ್ತಿದ್ದ ಅವರ (ನಾನು ?ನೆಗ್ಲಿಜಿಬಲ್? ಆಗಿದ್ದರಿಂದ ಲೆಕ್ಕಕ್ಕಿಲ್ಲದ ನನ್ನನ್ನು ಬಿಟ್ಟು!) ಸಂಯಮ ಅಭಿನಂದನೀಯ! 
                      ಮಕ್ಕಳಿಗೆ ಕಾರಣವೇ ಇಲ್ಲದೇ ಸಣ್ಣ ಪುಟ್ಟದ್ದಕ್ಕೆಲ್ಲಾ ಕಿಲಕಿಲನೆ ನಗುತ್ತಲೇ ಇರುತ್ತವೆ. ಮಕ್ಕಳ ಮೊಗದಲ್ಲಿ ಮೂಡುವ ನಿಷ್ಕಳಂಕವಾದ ಆ ನಗೆಯನ್ನು ನೋಡುವುದೇ ಒಂದು ಸುಂದರವಾದ ಅನುಭವ. ಅದು ಅವುಗಳ ಅಂತರಂಗದಿಂದ ಹೊರಹೊಮ್ಮುವ ಆನಂದದ ಊಟೆಯೇ ಆಗಿರುತ್ತದೆ. ಬೆಳೆದಂತೆ ಎಲ್ಲವೂ ತೋರಿಕೆಯಾಗಲಾರಂಭಿಸುತ್ತದೆ.
ನಾಲ್ಕುವರ್ಷದ ಮಗು ಒಂದು ದಿನಕ್ಕೆ ಸುಮಾರು ಮುನ್ನೂರು ಭಾರಿ ನಗುತ್ತದೆಯಂತೆ. ಆದರೆ ಸಾಮಾನ್ಯ ವಯಸ್ಕರು ಹದಿನೈದು ಭಾರಿ ನಕ್ಕರೆ ಹೆಚ್ಚು ಎಂದು ಸ್ವತ: ನಗಲಾರದ (ಅವರೂ ವಯಸ್ಕರೇ ಎಂದು ನಂಬಿ!) ಸಂಶೋಧಕರಿಂದ ತಿಳಿದು ಬಂದಿದೆ. `ನಾವು ಸಂತೋಷವಾಗಿರುವುದರಿಂದ ನಗುವುದಲ್ಲ. ನಗುವುದರಿಂದ ಸಂತೋಷವಾಗಿರುತ್ತೇವೆ.ಎಂದು ವಿಲಿಯಂ ಜೇಮ್ಸ್ ಹೇಳಿದ್ದಾರೆ. `ನಗೆಕ್ಲಬ್ಗಳು ಎಲ್ಲರನ್ನೂ ಸೇರಿಸಿ ನಗಿಸುವ ವ್ಯಾಯಾಮ ಮಾಡುವುದು ಒಂದು ರೀತಿ ಒಳ್ಳೆಯದೇ ಎನಿಸುತ್ತದೆ. ಅಲ್ಲಿ ಬಲವಂತದಿಂದ ನಗು ಪ್ರಾರಂಭವಾದರೂ ನಗುತ್ತಾ ಸಾಗಿದಂತೆ `ನಗೆಯೇ ಸ್ವಭಾವವಾಗಲೂ ಬಹುದು! ಜೋರಾಗಿ ನಗಲು ಜೋಡಿಯ ಅಗತ್ಯವಿರುತ್ತದೆ. ಗುಂಪಿನಲ್ಲಿ ನಗುವುದೆಂದರೆ ನಗೆಯೇ ಸಾಂಕ್ರಾಮಿಕವಾಗಿ ಅಲೆಅಲೆಯಾಗಿ ನಗಲಾರೆನೆಂಬುವವರನ್ನೂ ಬಿಡಲಾರೆನೆಂದು ನಗಿಸುವಷ್ಟು ಪ್ರಚೋದಕವಾಗಿಬಿಡುತ್ತದೆ. (ನಗೆಯ ಕೇಳುತ ನಗುವುದತಿಶಯದ ಧರ್ಮ-ಡಿ.ವಿ.ಜಿ.) ನಾನು ಇತ್ತೀಚೆಗೆ ಓದಿದ ಒಂದು ಪುಸ್ತಕದಲ್ಲಿ `ಹಿಮಾಲಯದಲ್ಲಿರುವ ಶಿವಾನಾ ಸಂತರು ಉಷ:ಕಾಲದಲ್ಲಿ ಹರಿಯುವ `ಸಂತಸದರಸವನ್ನು ಆಸ್ವಾದಿಸಲು ಮುಂಜಾವವೇ ಎದ್ದು ಕೆಲವು ನಿಮಿಷಗಳು ಯಾವುದೇ ಪ್ರಚೋದನೆಯಿಲ್ಲದಿದ್ದರೂ ನಗುತ್ತಾರೆ’, ಎಂದಿತ್ತು. `ವಿರಸರವೇ ಅಧಿಕವಾಗಿರುವ ನಮ್ಮ ಉಷ್ಣಪ್ರದೇಶಗಳಲ್ಲಿ `ಸಂತಸರಸಆವಿಯಾಗೇ ಹೋಗಿಬಿಟ್ಟಿರಬಹುದು!

                    `ನಗುವುದು ಮಾನವನಿಗೆ ಮಾತ್ರ ಸಿದ್ಧಿಸಿರುವ ವರದಾನಎಂದು ಮೊದಲಿನಿಂದಲೂ ನಂಬಿದ್ದರು. ಆದರೂ ಅನಾದಿಕಾಲದಿಂದಲೂ ನಮ್ಮ ಉಪಮಾಪ್ರಿಯರಂತೂ `ನರಿನಗೆ ಅವನದ್ದು’, `ಮಂಗನ ಹಾಗೆ ಹಲ್ಲು ಕಿರಿಯಬೇಡ’, (ಈಗ ಎಲ್ಲೆಡೆಯೂ ಸುಂದರವಾದ ದಂತಪಂಕ್ತಿ ಪ್ರದರ್ಶಿಸುವ ತೋರಿಕೆಯ ನಗೆಮೊಗಗಳ ಹಿಂದಿನ ದಂತವೈದ್ಯರ ಶ್ರಮ ವರ್ಣನಾತೀತ!) ಎನ್ನುವುದರ ಮೂಲಕ ಕೆಲವು ಪ್ರಾಣಿಗಳಲ್ಲೂ ನಗೆಯನ್ನು ಗುರುತಿಸಿದ್ದಾರೆ. ಚಿಂಪಾಂಜಿ ನಗುವುದನ್ನು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಯಾರು ಏನೇ ಹೇಳಲಿ  ನಮ್ಮ `ಜಿಮ್ಮಿಯಂತೂ ಆಗಾಗ ನಗುತ್ತಲೇ ಇರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸಂಪೂರ್ಣ ಶಕ್ತಿಯೊಡನೆ ಬಾವನ್ನು ಅಲ್ಲಾಡಿಸುತ್ತಾ  ನಗುನಗುತ್ತಾ ಕುಣಿಯುವ ನಡಿಗೆಯೊಡನೆ ಕಿರುನಗೆ ಚೆಲ್ಲುತ್ತಾ ಬೆಳಗಿನ ವಸೂಲಿಗೆ ಒಳನುಗ್ಗಿಬಿಡುತ್ತದೆ. ರಾತ್ರಿ ಇವರು ಕೆಲಸ ಮುಗಿಸಿ ಮನೆಗೆ ಬರುವ ಸೂಚನೆ ದೊರೆಯುವುದು `ಜಿಮ್ಮಿಜೋರಾಗಿ ಕೂಗುತ್ತಾ ನೆಗೆದಾಡುತ್ತಾ...ಹಿರಿನಗೆ ನಕ್ಕಾಗಲೇ! ಕೈಲಿ ಬಿಸ್ಕತ್ತು ಹಿಡಿದರಂತೂ ನೆಗೆಯುತ್ತಾ, ಬಾಲವಲ್ಲಾಡಿಸುತ್ತಾ ಕುಣಿಯುವಾಗ ಅದರ ಮುಖ ಮುಗುಳುನಗೆಯಿಂದ ಅರಳಿರುತ್ತದೆ! ಅದರಿಂದಲೇ ಇರಬಹುದು ಈಗಾಗಲೇ ದಶಾಯುವಾಗಿದ್ದರೂ  ಚಿರಯುವತಿಯಾಗಿರುವುದು.
                      ನಗುವುದರಿಂದ ಅಬಾಲವೃದ್ಧರೂ ಕನಸುವ `ಯೌವನವನ್ನು ಕಾಪಾಡಿಕೊಳ್ಳಬಹುದಂತೆ.                     
                   
                   ಕನಸುತದೆ ಬಾಲ್ಯ ಯೌವನವ ಪಡೆಯಲು
                   ಶ್ರಮಿಸುತದೆ ವೃದ್ಧಾಪ್ಯ ಯೌವನವ ಹಿಡಿದಿಡಲು! 

ಅಂಥಾ ಯೌವನವನ್ನು ನಗೆಯಿಂದಲೇ ಪಡೆಯಲೂಬಹುದು, ಹಿಡಿದಿಡಲೂಬಹುದು ಅಂದಮೇಲೆ ನಗುನಗುತ್ತಾ ಇರಬಹುದಲ್ಲವೆ?  
                       
                                                *ಪ್ರಭಾಮಣಿನಾಗರಾಜ, ಹಾಸನ.

                                                                                                                                                                          

Sunday, September 9, 2012

ತಿರುವು

ನೇರವೆ೦ದೇ ಭ್ರಮಿಸಿ

ನಡೆದದ್ದು ನಿಜ

ಆದರೆ ಹಠಾತ್ತನೆ

ಎದುರಾಗಿ ಬಿಟ್ಟಿದೆ

ಈ ತಿರುವು!



ಕ್ರಮಿಸಿದ ಹಾದಿ

ಎಷ್ಟೇ ಸು೦ದರವೆನಿಸಿದರೂ

ಎಲ್ಲಾ ಮೆಲುಕು..



ಹಿ೦ದಿಡಲಾಗದ ಹೆಜ್ಜೆಯ

ಮು೦ದಿಡಲೂ

ಮಾರ್ಗ ಅಸ್ಪಷ್ಟ



ಒಮ್ಮೊಮ್ಮೆ ಕಣ್ಣ ತೂರಿ

ಕಾಣಲು ಶ್ರಮಿಸಿದರೂ

ಮೊಬ್ಬು ಇಳಿಹೊತ್ತು



ಎಲ್ಲಿ ಕಳೆಯಿತು ಆ

ಚುಮುಚುಮು ಹಗಲು

ಝಳ ಝಳ ಬಿಸಿಲು?



ಸ೦ಜೆಯ ತ೦ಗಾಳಿಗೆ

ಮೈಯೊಡ್ಡಿ

ಮೈಮರೆತಾಗಲೇ

ಈ ತಿರುವೇ?

ಮು೦ದಿನದೆಲ್ಲಾ

ಹೆಜ್ಜೆಗಷ್ಟೇ ಅರಿವೆ?