Sunday, April 29, 2012

ಮನದ ಅಂಗಳದಿ.........೯೦. ಪರಿಪೂರ್ಣತೆಯ ಪ್ರತೀಕ ‘ಕೃಷ್ಣ’

              ಎಳವೆಯಲ್ಲಿ ನಾವು ಬಹಳ ಬೇಗ ಪೂರ್ವಾಗ್ರಹ ಪೀಡಿತ ಭಾವವನ್ನು ಹೊಂದುತ್ತೇವೆ ಎನಿಸುತ್ತದೆ. ವ್ಯಕ್ತಿಗಳ ಬಗ್ಗೆ, ವಸ್ತುಗಳ ಬಗ್ಗೆ, ಕೆಲವು ಹೆಸರುಗಳ ಬಗ್ಗೆ,.........ಮುಂತಾಗಿ ನಮ್ಮ ಕಲ್ಪನೆಗಳನ್ನೇ ವಾಸ್ತವವೆಂದು ಭ್ರಮಿಸಿ ಅದೇ ಭಾವವನ್ನು ನಮ್ಮೊಳಗೆ ಜತನವಾಗಿಸಿಕೊಂಡು,ಬೆಳೆದ ನಂತರವೂ ಎಂದರೆ ಬುದ್ಧಿ ತಿಳಿದ ನಂತರವೂ ಅದೇ ಅಭಿಪ್ರಾಯಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಯಾರನ್ನೋ ನೋಡಿದಾಗ ಅಕಾರಣವಾಗಿ ಅವರ ಬಗ್ಗೆ ಅಸಮಾಧಾನ ಹೊಂದುವುದು, ಹೆಸರು ಕೇಳಿದಷ್ಟಕ್ಕೇ ಸಿಡಿಮಿಡಿಗೊಳ್ಳುವುದು ಮುಂತಾದ ನಮ್ಮ ಕೆಲವು ಭಾವಗಳು ಬುಡವಿಲ್ಲದವಾಗಿರುತ್ತವೆ. ಬಹುಶಃ ಎಳೆ ಮನಸ್ಸಿನ ಮೇಲೆ ಹಿರಿಯರಾಡಿದ ಮಾತುಗಳ ಪ್ರಭಾವವುಂಟಾಗಿ,ಸುತ್ತಿನ ಪರಿಸರದ ಆಗುಹೋಗುಗಳು ಅವಕ್ಕೆ ಇಂಬುಗೊಟ್ಟು ನಮ್ಮಲ್ಲಿ ಇಂಥಾ ಭಾವಗಳು ಉಂಟಾಗಿರಬಹುದು. ಹೀಗೇ ನನಗೆ ‘ಕೃಷ್ಣ’ ಎನ್ನುವ ಹೆಸರಿನ ಬಗ್ಗೆ ಒಂದು ನಕಾರಾತ್ಮಕ ಭಾವ ಉಂಟಾಗಿತ್ತು. ಕೃಷ್ಣ ಎಂಬ ಹೆಸರಿನವರು ಬೇಜವಾಬ್ಧಾರಿ ಸ್ವಭಾವದವರು, ಕೆಲಸದಲ್ಲಿ ಶ್ರದ್ಧೆ ಇಲ್ಲದವರು, ಒಂದು ರೀತಿ ಕಳ್ಳಬುದ್ಧಿಯವರು ಎಂದೆಲ್ಲಾ ಭಾವಿಸಿದ್ದೆ. ಚಿಕ್ಕವಳಿದ್ದಾಗ ಈ ನನ್ನ ಭಾವವನ್ನು ಪುಷ್ಟೀಕರಿಸುವಂತೆ ಕೆಲವು ಘಟನೆಗಳೂ ನಡೆದಿದ್ದವು.!
            ನಮ್ಮ ಮನೆಯಲ್ಲಿಯೇ ಹುಟ್ಟಿದ ಎರಡು ಹೋರಿ ಕರುಗಳಿದ್ದವು. ಅವುಗಳಿಗೆ ರಾಮ ಮತ್ತು ಕೃಷ್ಣ ಎಂದು ಹೆಸರಿಟ್ಟಿದ್ದರು. ಅವು ಬೆಳೆದ ನಂತರ ಅವಕ್ಕೆ ಕೃಷಿ ಕಾರ್ಯಗಳಾದ ಆರು ಉಳುವುದು, ಗಾಡಿ ಎಳೆಯುವುದು ಮುಂತಾದ ಕೆಲಸಗಳ ತರಬೇತಿ ನೀಡಲಾರಂಭಿಸಿದರು. ರಾಮ ಚೆನ್ನಾಗಿ ಕಲಿತುಬಿಟ್ಟಿತು. ಆದರೆ ಕೃಷ್ಣ ಏನಾದರೂ ಕಲಿಯಲಿಲ್ಲ. ಆರಿಗೆ ಕಟ್ಟಿದ ತಕ್ಷಣ ಕಣಿ ಹಾಕಿಕೊಂಡುಬಿಡುತಿತ್ತು! ಎಂದರೆ ನೊಗವನ್ನು ಹೊರದೇ ತಪ್ಪಿಸಿಕೊಳ್ಳುವುದು. ಆಳುಮಕ್ಕಳು ಹೊಡೆದು ಕಟ್ಟಲು ಪ್ರಯತ್ನಿಸಿದರೆ ಅಲ್ಲೇ ಮಲಗಿಬಿಡುತ್ತಿತ್ತು!ಇವುಗಳನ್ನು ಮುಂದೆ ಜೋಡಿ ಮಾಡಬಹುದೆಂದು ಹಿರಿಯರು ಅಂದುಕೊಂಡದ್ದು ಸುಳ್ಳಾಯಿತು!
         ನಮ್ಮ ಪಕ್ಕದ ಹಳ್ಳಿಯಲ್ಲಿ ರಾಮ-ಕೃಷ್ಣ ಎಂಬ ಅಣ್ಣ-ತಮ್ಮಂದಿರಿದ್ದರು.ರಾಮ ಸಜ್ಜನನಾಗಿದ್ದರೆ, ಕೃಷ್ಣ ಪೋಲಿ ಅಲೆಯುವವನಾಗಿದ್ದ!
         ‘ಕೃಷ್ಣ’ನ ಬಗ್ಗೆ ಋಣಾತ್ಮಕ ಭಾವವುಂಟಾಗಲು ಹಾಗೂ ಈ ಎಲ್ಲಾ ಅವಾಂತರಗಳಿಗೆ ಇನ್ನೂ ಮುಖ್ಯ ಕಾರಣವೆಂದರೆ ಪ್ರಚಲಿತವಿರುವ ಸಾಂಪ್ರದಾಯಿಕ ಹಾಡುಗಳು, ಕಥೆಗಳ ಮೂಲಕ ನಾನು ಕೇಳಿ ತಿಳಿದಿದ್ದಂತೆ ಕೃಷ್ಣನ ಬಾಲಲೀಲೆಗಳನ್ನು ಅವನ ಕಳ್ಳತನಕ್ಕೇ ಒತ್ತುಕೊಟ್ಟು ಚಿತ್ರಿಸಿರುವುದು ಹಾಗೂ ಯೌವನದಲ್ಲಿ ಅವನೊಬ್ಬ ಸ್ತ್ರೀಲೋಲ ಎನ್ನುವಂತೆ ಬಿಂಭಿಸಿರುವುದು. ಕೃಷ್ಣನ ವ್ಯಕ್ತಿತ್ವದ ಔನತ್ಯವನ್ನು ಅರಿಯಬೇಕಾದರೆ ಶರೀರಭಾವದಿಂದ ಆತ್ಮಭಾವಕ್ಕೆ ಏರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಫಲರಾದ ಅನೇಕ ಮಹಾತ್ಮರು ನಮ್ಮ ಕಣ್ಣು ತೆರೆಸುವ ಪ್ರಯತ್ನವನ್ನೂ ಮಾಡಿದ್ದಾರೆ. ಅಂಥಾ ಒಂದು ಪ್ರಯತ್ನ ಓಶೋರವರ `Krishna: The Man and His Philosophy’ ಯಲ್ಲಿಯೂ ಇದೆ. ಅದರ ಮೊದಲ ಅಧ್ಯಾಯದ ಮೊದಲ ಪ್ರಶ್ನೆ ಹೀಗಿದೆ:
          ನಮ್ಮ ಕಾಲಕ್ಕೂ ಪ್ರಸ್ತುತವೆನಿಸುವಂತೆ ಮಾಡುವ ಕೃಷ್ಣನಲ್ಲಿರುವ ವಿಶಿಷ್ಟ ಗುಣಗಳು ಯಾವುವು? ನಮಗೆ ಆತನ ಮಹತ್ವವೇನು?
          ಇದಕ್ಕೆ ಓಶೋರವರ ಉತ್ತರದ ಸಂಕ್ಷಿಪ್ತ ರೂಪ:
          ಕೃಷ್ಣ ಹೋಲಿಕೆಗೇ ನಿಲುಕದವನು. ಆತ ಅನನ್ಯ. ಆತನ ಜೀವನ ಪುರಾತನ ಭೂತಕಾಲದಲ್ಲಿ ಘಟಿಸಿದ್ದರೂ ಆತ ಭವಿಷ್ಯತ್ ಕಾಲಕ್ಕೂ ಸೇರ್ಪಡೆಯಾಗುವುದರಲ್ಲಿಯೇ ಆತನ ಅನನ್ಯತೆಯಿರುವುದು. ಕೃಷ್ಣನ ಸಮಕಾಲೀನತೆ ಹೊಂದಲು ಮನುಷ್ಯರಾದ ನಾವು ಇನ್ನೂ ಆ ಎತ್ತರಕ್ಕೆ ಬೆಳೆಯಬೇಕಾಗಿದೆ. ಮಾನವರ ಅರ್ಥಗ್ರಹಿಕೆಗೆ ಆತ ಅತೀತನಾಗಿದ್ದಾನೆ. ಆತ ಇನ್ನೂ ನಮ್ಮನ್ನು ಗೊಂದಲಗೊಳಿಸುತ್ತಿದ್ದಾನೆ. ಭವಿಷ್ಯದಲ್ಲಿ ಯಾವಾಗಲಾದರೂ ನಾವು ಆತನನ್ನು ಅರ್ಥಮಾಡಿಕೊಳ್ಳಲು ಮತ್ತು ಆತನ ಮಹತ್ವವನ್ನು ಪ್ರಶಂಸಿಸಲು ಸಮರ್ಥರಾಗುತ್ತೇವೆ.
            ........... ಎಲ್ಲಾ ಧರ್ಮಗಳೂ ಜೀವನವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಅವುಗಳಲ್ಲಿ ಒಂದು ಭಾಗವನ್ನು ಸ್ವೀಕರಿಸಿ ಮತ್ತೊಂದನ್ನು ನಿರಾಕರಿಸಿವೆ. ಕೃಷ್ಣ ಮಾತ್ರ ಜೀವನವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾನೆ. ಆದ್ದರಿಂದಲೇ ಭಾರತವು ಕೃಷ್ಣನನ್ನು ದೇವಾಂಶದ ಪರಿಪೂರ್ಣ ಅವತಾರ ಎಂದು ಸ್ವೀಕರಿಸಿದೆ. ಕೃಷ್ಣನನ್ನು ಒಂದು ಪರಿಪೂರ್ಣ ದೇವರು ಎನ್ನಲು ಆತ ಜೀವನದಲ್ಲಿರುವ ಎಲ್ಲ ಅಂಶಗಳನ್ನೂ ಸ್ವೀಕರಿಸಿ ತನ್ನದಾಗಿಸಿಕೊಂಡಿರುವುದೇ ಕಾರಣವಾಗಿದೆ......... ಕೃಷ್ಣ ಮಾತ್ರ ದೇಹವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾನೆ. ಸದಾ ಮುಗುಳ್ನಗುತ್ತಾ ಹಸನ್ಮುಖಿಯಾಗಿರುವ ಪರಿಪೂರ್ಣ ಕೃಷ್ಣನನ್ನು ಸ್ವೀಕರಿಸಲು, ಅರ್ಥಮಾಡಿಕೊಳ್ಳಲು ನಗುನಗುತ್ತಾ ಸಂತಸದಿಂದಿರುವ ಒಂದು ಮಾನವಕುಲವೇ ಹುಟ್ಟಿ ಬರಬೇಕಾಗಿದೆ!
         ........... ಮನುಷ್ಯನ ಮನಸ್ಸು ಯಾವಾಗಲೂ ವೈರುಧ್ಯಗಳ ನಡುವೆ ಒಂದನ್ನು ಸ್ವೀಕರಿಸಲು ಸಿದ್ಧವಾಗಿರುತ್ತದೆ. ಆದ್ದರಿಂದಲೇ ಮನುಷ್ಯ ಸಾಮಾನ್ಯವಾಗಿ ನರಕವನ್ನು ತಿರಸ್ಕರಿಸಿ, ಸ್ವರ್ಗವನ್ನು ಸ್ವೀಕರಿಸುತ್ತಾನೆ. ಶಾಂತಿಯನ್ನು ಸ್ವೀಕರಿಸಿ ಅಶಾಂತಿಯನ್ನು ತಿರಸ್ಕರಿಸುತ್ತಾನೆ. ಒಳಿತನ್ನು ಕಾಪಾಡಿ ಕೆಟ್ಟದ್ದನ್ನು ನಾಶಪಡಿಸಲು ಪ್ರಯತ್ನಿಸುತ್ತಾನೆ. ಬೆಳಕಿಗಾಗಿ ಕಾತರಿಸುತ್ತಾ ಕತ್ತಲನ್ನು ವರ್ಜಿಸುತ್ತಾನೆ. ಸುಖಕ್ಕೆ ಹಂಬಲಿಸಿ ದುಃಖವನ್ನು ಹತ್ತಿಕ್ಕುತ್ತಾನೆ. ಅವನ ಮನಸ್ಸು ಯಾವಾಗಲೂ ವಾಸ್ತವವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಅವುಗಳಲ್ಲಿ ಒಂದನ್ನು ಸ್ವೀಕರಿಸಿ ಮತ್ತೊಂದನ್ನು ನಿರಾಕರಿಸುತ್ತದೆ. ಈ ಆಯ್ಕೆಯಿಂದ ಇಬ್ಬಗೆಯುಂಟಾಗುತ್ತದೆ. ಇದು ದ್ವಂದ್ವವನ್ನೂ, ನೋವನ್ನೂ ತರುತ್ತದೆ.
        ಕೃಷ್ಣನು ವೈರುಧ್ಯಗಳನ್ನು ಒಟ್ಟಾಗಿ ಸ್ವೀಕರಿಸುವ ಪ್ರತೀಕವಾಗಿದ್ದಾನೆ. ಆದ್ದರಿಂದ ಅವನು ಮಾತ್ರ ಪರಿಪೂರ್ಣನಾಗುತ್ತಾನೆ. ಆಯ್ಕೆ ಮಾಡಿಕೊಳ್ಳುವವರು ಯಾವಾಗಲೂ ಅಪರಿಪೂರ್ಣರಾಗಿಯೇ ಉಳಿಯುತ್ತಾರೆ. ಆದ್ದರಿಂದ ಜೀವನದಲ್ಲಿ ಎಲ್ಲವನ್ನೂ ಸ್ವೀಕರಿಸಿ ಪರಿಪೂರ್ಣತೆಯನ್ನು ಸಾಧಿಸಿದಾಗ ಬದುಕಿನ ಔನತ್ಯಕ್ಕೆ ಏರಬಹುದು ಎಂದು ಸಾರುವ ಕೃಷ್ಣನು ಎಂದೆಂದಿಗೂ ಪ್ರಸ್ತುತನಾಗುತ್ತಾನೆ.

Monday, April 23, 2012

ಮನದ ಅಂಗಳದಿ.........೮೯. ಅರಳುವಿಕೆ(Blossoming)

ಜೀವಜಗತ್ತಿನ ಪ್ರತಿಯೊಂದು ಜೀವಿಗೂ ಹುಟ್ಟು ಸಾವುಗಳು ಹೇಗೆ ಅನಿವಾರ್ಯವೊ ಹಾಗೆಯೇ ಬೆಳೆಯುವುದೂ ಆಗಿದೆ. ದೈಹಿಕವಾಗಿ ನಾವು ನಮ್ಮ ಅನುವಂಶೀಯತೆಗೆ ಅನುಗುಣವಾಗಿ ಬೆಳೆಯುತ್ತೇವೆ. ಪರಿಸರವೂ ತನ್ನ ಪಾಲನ್ನು ನೀಡಿರುತ್ತದೆ. ಪೋಷಕರ ಬೆಂಬಲ, ಸ್ವಪ್ರಯತ್ನಕ್ಕೆ ಅನುಗುಣವಾಗಿ ವಿದ್ಯಾಭ್ಯಾಸ ಮಾಡಿ, ನೌಕರಿ ಹಿಡಿದು, ಸಂಸಾರಸ್ಥರಾಗಿ, ಬೇಕಾದ-ಬೇಡವಾದ ಆಸ್ತಿ-ನಗ-ನಾಣ್ಯಗಳನ್ನು ಸಂಗ್ರಹಿಸುತ್ತಾ, ಮುಂದಿನ ಪೀಳಿಗೆಗೂ ಕೂಡಿಡುವ ಸಂಭ್ರಮ, ಕಷ್ಟ-ನಷ್ಟಗಳಲ್ಲಿ.......... ಜೀವನವು ಸಾಗುತ್ತದೆ. ನಮ್ಮ ಸುತ್ತಿನವರು, ಬಂಧುಬಾಂಧವರು, ಸಮಾಜವು ನಮ್ಮ ಈ ಬಾಹ್ಯ ಬೆಳವಣಿಗೆಯಲ್ಲೇ ನಮ್ಮನ್ನು ಅಳೆಯುತ್ತದೆ. ಇದನ್ನೇ ಜೀವನದ ಸಾರ್ಥಕತೆಯೆಂದು ಭ್ರಮಿಸುತ್ತಾ ನಮ್ಮ ಜೀವನ ಯಾತ್ರೆಯನ್ನು ಮುಂದುವರೆಸುತ್ತೇವೆ! ಯಾವುದೋ ಒಂದು ಘಟ್ಟದಲ್ಲಿ ನಾನು ಏನನ್ನೋ ಕಳೆದುಕೊಂಡೆ, ನನ್ನ ಜೀವನವನ್ನು ಇನ್ನೂ ಉತ್ತಮಗೊಳಿಸಿಕೊಳ್ಳಬಹುದಿತ್ತು, ನನಗಾಗಿ, ನನ್ನ ಆತ್ಮತೃಪ್ತಿಗಾಗಿ ನಾನು ಏನನ್ನು ಮಾಡಿಕೊಂಡೆ? ಎಂಬ ಪ್ರಶ್ನೆಗಳು ಎಲ್ಲೋ ಕೆಲವರಲ್ಲಿ ಉದ್ಭವಿಸಬಹುದು. ಚಿಕ್ಕಂದಿನಿಂದಲೇ ನಮ್ಮಲ್ಲಿ ಈ ಪ್ರಶ್ನೆ ಉಂಟಾಗಿದ್ದರೆ, ಅಥವಾ ನಮ್ಮ ಮಕ್ಕಳನ್ನು ಬೆಳೆಸುವ ಹಂತದಲ್ಲಾದರೂ ನಾವು ಈ ಬಗ್ಗೆ ಚಿಂತಿಸಿದ್ದರೆ ಬದುಕು ಇನ್ನೂ ಹಸನಾಗುತ್ತಿತ್ತೇನೋ? ಈ ಜಗತ್ತಿಗೆ ನಮ್ಮ ಒಂದು ಕೊಡುಗೆ ಸಾಧ್ಯವಿತ್ತೇನೋ ಎನಿಸಲೂಬಹುದು. ನಮ್ಮ ಈ ಎಲ್ಲಾ ಪ್ರಶ್ನೆಗಳಿಗೂ ತಮ್ಮ ಅನೇಕ ನಿಖರ ಪ್ರಶ್ನೆಗಳ ಮೂಲಕ ನಮ್ಮಲ್ಲೇ ನಾವು ಉತ್ತರವನ್ನು ಕಂಡುಕೊಳ್ಳುವಂತೆ ಪ್ರೇರೇಪಿಸುತ್ತಾರೆ ಮಹಾನ್ ಚಿಂತಕರಾದ ಜಿಡ್ಡು ಕೃಷ್ಣಮೂರ್ತಿಯವರು. ಬ್ರಾಕ್‌ವುಡ್ ಪಾರ್ಕಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಜಿಡ್ಡು ಕೃಷ್ಣಮೂರ್ತಿಯವರು ನಡೆಸಿದ ಒಂದು ಸಂವಾದದಲ್ಲಿ ಅಂತರ್ಮುಖ ಅರಳುವಿಕೆಯ ಬಗ್ಗೆ ವಿಶ್ಲೇಷಿಸಿದ್ದಾರೆ: ‘ಪ್ರಿತಿಯೊಬ್ಬರೂ ಆಂತರಿಕವಾಗಿ ಅರಳುತ್ತಿದೇವೆಯೋ ಮತ್ತು ಬೆಳೆಯುತ್ತಿದ್ದೇವೆಯೋ ಅಥವಾ ಒಂದು ಕಿರಿದಾದ ಸಂದುಮಾರ್ಗವನ್ನು ಅನುಸರಿಸುತ್ತಿದ್ದೇವೆಯೋ ಎನ್ನುವ ಕುರಿತು ಮಾತನಾಡಲು ಇಲ್ಲಿ ಸೇರಿದ್ದೇವೆ. ನಮ್ಮ ಜೀವಿತಾವಧಿಯ ಕಡೆಗಾಲದಲ್ಲಿ ನಾವು ಸಂಪೂರ್ಣವಾಗಿ ಅರಳುವ ಅವಕಾಶವನ್ನು ಪಡೆದುಕೊಳ್ಳಲೇ ಇಲ್ಲ ಎಂದು ಶೇಷಾಯುಷ್ಯದಲ್ಲಿ ಕೊರಗುವಂತಾಗಬಾರದು ಅಲ್ಲವೆ? ನಾವು ಕೇವಲ ದೈಹಿಕವಾಗಿ ಎತ್ತರವಾಗಿ ಮತ್ತು ದಪ್ಪವಾಗಿ ಬೆಳೆದರಷ್ಟೇ ಸಾಲದು. ಮಾನಸಿಕವಾಗಿಯೂ ಸದೃಢರಾಗಬೇಕು, ಆಂತರಿಕವಾಗಿಯೂ ಅರಳಬೇಕು. ನನ್ನ ರೀತಿದಲ್ಲಿ ‘ಅರಳುವುದು’ ಎಂದರೆ ಯಾವ ಅಡೆತಡೆಗಳೂ ಇಲ್ಲದೆ, ಯಾವ ಅಡ್ಡಿಆತಂಕಗಳೂ ಇಲ್ಲದಂತೆ, ನಾವು ಅಂತರ್ಮುಖವಾಗಿ, ಆಳವಾಗಿ, ಬೆಳೆಯುವುದು ಎಂದು ಅರ್ಥ. ನಮ್ಮಲ್ಲಿ ಬಹಳಷ್ಟು ಮಂದಿ ಎಂದಿಗೂ ಅರಳುವುದೇ ಇಲ್ಲ. ನಮ್ಮ ಜೀವಿತಾವಧಿಯಲ್ಲಿ ನಮ್ಮನ್ನು ನಿರರ್ಥಕಗೊಳಿಸುವ, ನಮ್ಮಲ್ಲಿ ಜಡತ್ವವನ್ನುಂಟುಮಾಡುವ, ಇದ್ದೂ ಸತ್ತಂತೆ ಇರುವ ಪರಿಸ್ಥಿತಿಯಲ್ಲಿಡುವ ಯಾವುದೊ ಘಟಿಸುತ್ತಿದೆ. ಅದು ನಮ್ಮಲ್ಲಿ ಆಳವಾದ ಆಂತರಿಕ ಪೋಷಣೆ ಇಲ್ಲದಂತೆ ಮಾಡುತ್ತಿದೆ. ಇದಕ್ಕೆ ಕಾರಣ ಬಹುಷಃ ನಮ್ಮ ಸುತ್ತಿನ ಪ್ರಪಂಚ ನಮ್ಮನ್ನು ಡಾಕ್ಟರ್‌ಗಳು, ಇಂಜಿನಿಯರ್‌ಗಳು, ವಿಜ್ಞಾನಿಗಳು, ಮುಂತಾದ ವಿಶೇಷ ತಜ್ಞರಾಗುವಂತೆ ನಮ್ಮ ಮೇಲೆ ಒತ್ತಡವನ್ನು ಹೇರುತ್ತಿರುವುದೇ ಆಗಿರಬಹುದು. ಅದರಿಂದಲೇ ನಮಗೆ ಮಾನಸಿಕವಾಗಿ ಬೆಳೆಯಲು ಆಗದೇ ಇರಬಹುದು. ನಾವು ನಮ್ಮ ಸಮಾಜದಿಂದ ಒತ್ತಾಯಕ್ಕೆ ಒಳಗಾಗಿದ್ದೇವೆಯೇ? ನಮ್ಮ ಪೋಷಕರಿಂದ ನಿರ್ಬಂಧಿಸಲ್ಪಟ್ಟಿದ್ದೇವೆಯೇ? ನಮ್ಮ ಧರ್ಮ ನಮ್ಮನ್ನು ತಡೆಯುತ್ತಿದೆಯೆ? ನಮ್ಮ ಬುದ್ಧಿಶಕ್ತಿಯೇ ನಮ್ಮನ್ನು ಹಿಮ್ಮೆಟ್ಟಿಸುತ್ತಿದೆಯೆ? ಈ ಎಲ್ಲಾ ಪರಿಸರದ ಅಂಶಗಳೂ ನಮ್ಮನ್ನು, ನಮ್ಮ ಅರಳುವಿಕೆಯನ್ನು ಪ್ರತಿಬಂಧಿಸುತ್ತಿವೆಯೇ? ನಾವು ಒಂದು ಧರ್ಮದ ಅನುಯಾಯಿಗಳಾಗಿದ್ದರೆ ನಮ್ಮ ಮನಸ್ಸು, ನಮ್ಮ ಮೆದುಳು, ನಮ್ಮ ಸಂಪೂರ್ಣ ಮಾನಸಿಕ ರಚನೆಯೇ ಆ ಅವಸ್ಥೆಗೆ ಒಳಪಟ್ಟಿರುತ್ತದೆ. ಹುಟ್ಟಿದಾಗಿನಿಂದಲೇ ನಮ್ಮ ಪೋಷಕರು ನಮ್ಮನ್ನು ಆ ಧರ್ಮಕ್ಕೆ ಅನುಸಾರವಾಗಿ ಬೆಳೆಸಲಾರಂಭಿಸುತ್ತಾರೆ. ನಮ್ಮನ್ನು ದೇವಸ್ಥಾನ/ಮಸೀದಿ/ಚರ್ಚ್..........ಗೆ ಹೋಗಲು ಹೇಳುತ್ತಾರೆ. ನಾವು ಅಲ್ಲಿ ಬರುವ ಇತರರನ್ನು, ಅವರ ರೀತಿನೀತಿಗಳನ್ನು ಗಮನಿಸುತ್ತೇವೆ. ಅದರಿಂದ ಪ್ರಭಾವಿತರಾಗುತ್ತೇವೆ. ನಮ್ಮ ಮನಸ್ಸು ಸಂಪೂರ್ಣವಾಗಿ ಆ ಅವಸ್ಥೆಗೇ ಒಳಪಡುತ್ತದೆ. ನಾವು ಆ ಒಂದು ವ್ಯವಸ್ಥೆಯೊಳಗಿನ ಕಿರಿದಾದ ಮಾರ್ಗದಲ್ಲಿ ಚಲಿಸಲಾರಂಭಿಸುತ್ತೇವೆ. ಆ ಒಂದು ಮಾರ್ಗ, ಆ ಒಂದು ವ್ಯವಸ್ಥೆ, ಆ ಒಂದು ಚಟುವಟಿಕೆಯೇ ಬಹಳ ಸೀಮಿತವಾಗಿರುತ್ತದೆ. ಆದ್ದರಿಂದ ಅಲ್ಲಿ ಅರಳುವಿಕೆಯು ಸಾಧ್ಯವಾಗುವುದೇ ಇಲ್ಲ. ವಿದ್ಯಾರ್ಥಿಗಳ ಮೇಲೆ ಅನೇಕ ರೀತಿಯ ಒತ್ತಡಗಳಿರುತ್ತವೆ. ಗೆಲ್ಲಲೇಬೇಕೆಂಬ ಒತ್ತಡ, ಯಾರೋ ಆಗಬೇಕೆಂಬ ಒತ್ತಡ, ಯಾರನ್ನೋ ಅನುಸರಿಸಬೇಕೆಂಬ ಒತ್ತಡ, ಸ್ಪರ್ಧಾತ್ಮಕ ಒತ್ತಡ........ ಇವುಗಳನ್ನು ಇಲ್ಲಿ ಪರಿಗಣಿಸುತ್ತಿಲ್ಲ. ಸಕಾರಾತ್ಮಕವಾದ ಒತ್ತಡವು ನಮ್ಮನ್ನು ಆಂತರಿಕವಾಗಿ ಬೆಳೆಯುವಂತೆ ಮಾಡುತ್ತದೆ, ಅರಳುವಂತೆ ಮಾಡುತ್ತದೆ. ಅರಳುವಿಕೆಯು ಇಲ್ಲದಿದ್ದರೆ ಒಬ್ಬ ವ್ಯಕ್ತಿಯು ಸಾಧಾರಣವಾದ ಪ್ರಾಪಂಚಿಕ ಜೀವನವನ್ನು ನಡೆಸಿ ಎಪ್ಪತ್ತೋ ಎಂಭತ್ತೋ ವರ್ಷಕ್ಕೆ ಸಾಯುತ್ತಾನೆ. ಒಬ್ಬ ಸಾಧಾರಣ ಮನುಷ್ಯನ ಸಾಮಾನ್ಯವಾದ ಜೀವನವದು. .......... ಈ ಅರಳುವಿಕೆಯ ಪ್ರಾಮುಖ್ಯತೆಯನ್ನು ನಾವು ಅರಿತಿದ್ದೇವೆಯೇ? ಅರಳುವಿಕೆಯ ಪ್ರಾಮುಖ್ಯತೆ, ಅರಳುವಿಕೆಯ ಸತ್ಯ, ಅರಳುವಿಕೆಯ ವಾಸ್ತವತೆ, ಅರಳುವಿಕೆಯ ಅಗತ್ಯ, ಅರಳುವಿಕೆಯ ಸೌಂದರ್ಯ್, ಇವುಗಳ ಬಗ್ಗೆ ನಮಗೆ ತಿಳುವಳಿಕೆ ಇದೆಯೆ? ಸಂಬಂಧಗಳು, ಎಂದರೆ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವು ಅರಳಲು ಸಹಕಾರಿಯಾಗುತ್ತದೆಯೆ? ಪರಸ್ಪರ ಪ್ರೀತಿಯು ಅರಳುವಿಕೆಗೆ ಪೋಷಣೆ ನೀಡುತ್ತದೆಯೆ? ಪ್ರೀತಿಯು ಮಾನವನ ಮೆದುಳಿನ, ಮಾನವನ ಮನಸ್ಸಿನ, ಮಾನವನ ಹೃದಯದ, ಮಾನವೀಯ ಗುಣಗಳ ಅರಳುವಿಕೆಗೆ ಸಹಕರಿಸುತ್ತದೆಯೆ? ಬ್ರಾಕ್ ವುಡ್ ನಲ್ಲಿನ ವಾಸ್ತವ್ಯವು ನಿಮ್ಮ ಅರಳುವಿಕೆಗೆ ಸಹಕಾರಿಯಾಗಿದೆಯೆ? ತಾಂತ್ರಿಕವಾಗಿಯಲ್ಲ, ತಜ್ಞರನ್ನಾಗಿಸುವುದರಲ್ಲಿ ಅಲ್ಲ. ಮಾನಸಿಕವಾಗಿ, ಆಂತರಿಕವಾಗಿ, ಆಂತರ್ಯದಲ್ಲಿ ಬೆಳೆಯುತ್ತಿರುವಿರ? ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಅರಳಲು ಸಾಧ್ಯವಾಗುತ್ತಿದೆಯೆ? ನಿಮ್ಮನ್ನು ನಿಮ್ಮ ಪೋಷಕರು ನಿಜವಾಗಿಯೂ ಪ್ರೀತಿಸಿದ್ದರೆ ಅರಳಲು ಪೂರಕವಾಗಿ ನಿಮ್ಮ ಮೇಲೆ ಯಾವುದೇ ಒತ್ತಾಯವನ್ನೂ ಹೇರದೇ ಬೆಳೆಸುತ್ತಿದ್ದರು. ನೀವೊಬ್ಬ ಮಾನವ ಜೀವಿಯಾಗಿದ್ದೀರಿ. ನೀವೇ ಪ್ರಪಂಚ. ನೀವು ಅರಳದಿದ್ದರೆ ಈ ಪ್ರಪಂಚದಲ್ಲಿ ನೀವು ಬಂಧಿಯಾಗುತ್ತೀರಿ. ಇತರ ಮಾನವ ಜೀವಿಗಳನ್ನು ನೀವು ನಾಶಗೊಳಿಸುತ್ತೀರಿ. ನಿಮ್ಮ ಪೋಷಕರು ನಿಮ್ಮನ್ನು ನಿಜವಾಗಿಯೂ ಪ್ರೀತಿಸಿದ್ದೇ ಆದರೆ ನೀವು ಸರಿಯಾದ ಶಿಕ್ಷಣವನ್ನು ಪಡೆಯುತ್ತಿದ್ದೀರಾ ಎನ್ನುವುದನ್ನು ಗಮನಿಸುತ್ತಾರೆ. ಕೇವಲ ತಾಂತ್ರಿಕ ಶಿಕ್ಷಣವಲ್ಲ, ಉದ್ಯೋಗವನ್ನು ಪಡೆಯುವ ಶಿಕ್ಷಣವಲ್ಲ. ನಿಮ್ಮೊಳಗೆ ಯಾವುದೇ ದ್ವಂದ್ವಗಳೂ ಇಲ್ಲದಂತಹ ಶಿಕ್ಷಣ. ನಿಮ್ಮ ಆಂತರ್ಯದ ಅರಳುವಿಕೆಯ ಶಿಕ್ಷಣ......’ ನಮ್ಮ ಮಕ್ಕಳಿಗೆ ನಾವು ಆಂತರಿಕವಾಗಿ ಅರಳುವಂತೆ ಅವಕಾಶ ನೀಡಿದರೆ, ಈಗ ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾದಕತೆ, ಆತ್ಮಹತ್ಯೆ ಮುಂತಾದ ಘಾತುಕಗಳನ್ನು ತಡೆಯುವಲ್ಲಿ, ವಿಶ್ವಶಾಂತಿ ನೆಲೆಸುವುದರಲ್ಲಿ ನಮ್ಮ ಪಾಲಿನ ಪುಟ್ಟ ಕೊಡುಗೆಯನ್ನು ನೀಡಿದಂತಾಗುತ್ತದೆ ಎನಿಸುತ್ತದೆ.

Thursday, April 19, 2012

ಮನದ ಅಂಗಳದಿ..........೮೮. ಅಂತಃ ಪ್ರಜ್ಞೆ (INTUITION)

ನಾವು ದಾರಿಯಲ್ಲಿ ಕೆಲವೊಮ್ಮೆ ಮೈಮರೆತು ನಡೆಯುವಾಗ ತಕ್ಷಣ ಹಾವೊಂದು ಎದುರಾದರೆ ನಮಗರಿವಿಲ್ಲದಂತೆಯೇ ಕಾಲಿಗೆ ಬುದ್ಧಿ ಹೇಳಿರುತ್ತೇವೆ! ಇದಂತೂ ದೇಹದ ತತ್‌ಕ್ಷಣದ ಪ್ರತಿಕ್ರಿಯೆ (Instinct) ಎನ್ನುವುದು ನಮಗೆ ತಿಳಿದಿದೆ. ಆದರೆ
ಕೆಲವು ಸಂದಿಗ್ಧ ಸಂದರ್ಭಗಳಲ್ಲಿ, ಕೆಲವು ನಿರ್ಣಾಯಕ ಹಂತಗಳಲ್ಲಿ ಯಾವುದೋ ಒಂದು ‘ಹೊಳವು’ ನಮ್ಮ ಸಮಸ್ಯೆಗಳನ್ನೇ ಪರಿಹರಿಸಿಬಿಟ್ಟಿರುತ್ತದೆ. ಅದು ಏನು? ಎಲ್ಲಿಂದ ಬಂತು? ಹೇಗೆ ಉಂಟಾಯಿತು? ಯಾವ ಪ್ರಶ್ನೆಗಳಿಗೂ ಉತ್ತರ ದೊರಕುವುದಿಲ್ಲ. ಅಥವಾ ಪ್ರಶ್ನಿಸಲೇ ಆಗುವುದಿಲ್ಲ! ನಮಗೆ ದೊರಕಿದ ಆ ಅಪೂರ್ವ ಕೊಡುಗೆಯಿಂದ ದೊರಕಿದ ನಿರಾಳದಿಂದ ನಾವು ಧನ್ಯತಾಭಾವವನ್ನಷ್ಟೇ ಅನುಭವಿಸಬಲ್ಲವರಾಗಿರುತ್ತೇವೆ. ನಮ್ಮ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಅದನ್ನು ನಾವು ಹೇಗಾದರೂ ಅರ್ಥೈಸಬಹುದು. ಅದನ್ನೇ ‘ಅಂತಃ ಪ್ರಜ್ಞೆ? ಅಥವಾ `Intuition’ ಎನ್ನುತ್ತಾರೆ. ಓಶೋರವರ `Intuition’ Knowing Beyond Logic ಪುಸ್ತಕದಲ್ಲಿ ಈ ಬಗ್ಗೆ ಸಮೃದ್ಧ ಮಾಹಿತಿಯನ್ನು ಪಡೆದುಕೊಳ್ಳಬಹುದು:
`Intuition’ ಅನ್ನು ವೈಜ್ಞಾನಿಕವಾಗಿ ವಿವರಿಸಲಾಗುವುದಿಲ್ಲ, ಏಕೆಂದರೆ ಆ ಒಂದು ಪೂರ್ಣ ಚಮತ್ಕಾರವೇ ಅವೈಜ್ಞಾನಿಕ ಮತ್ತು ಅತಾರ್ಕಿಕವಾಗಿದೆ. `Intuition’ ಅನ್ನು ವಿವರಿಸುವುದೆಂದರೆ ಅದನ್ನು ಬುದ್ಧಿಮಟ್ಟಕ್ಕೆ (Intellect) ಇಳಿಸುವುದೇ ಆಗಿದೆ. `Intuition’ಎನ್ನುವುದು Intellectನ್ನು ಮೀರಿದ್ದಾಗಿದೆ. ಬುದ್ಧಿಶಕ್ತಿಯು ಎಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತದೋ ಅಲ್ಲಿಂದ `Intuition’ ಪ್ರಾರಂಭವಾಗುತ್ತದೆ! ಬುದ್ಧಿಯು ಅದನ್ನು ಅನುಭವಿಸುತ್ತದೆ ಆದರೆ ವಿವರಿಸಲಾರದು............ ವಿವರಣೆಯೆಂದರೆ ಎಲ್ಲಿಂದ ಬಂತು? ಏಕೆ ಬಂದಿತು? ಬರಲು ಕಾರಣವೇನು? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವುದಾಗಿದೆ. ಬುದ್ದಿಯು ತನಗೆ ಮೀರಿದ್ದು ಏನೋ ನಡೆದಿದೆ ಎಂದಷ್ಟೇ ತಿಳಿದುಕೊಳ್ಳಬಹುದು. ಬುದ್ಧಿಯು ವಿವರಿಸಲಾಗದ್ದನ್ನು ನಾನು ನಂಬುವುದಿಲ್ಲ ಎಂದು ನಾವೆಂದುಕೊಂಡರೆ ನಾವು ಕೆಳಮಟ್ಟದಲ್ಲೇ ಜೀವಿಸುತ್ತೇವೆ. ‘ಅಂತಃ ಪ್ರಜ್ಞೆ’ಯು ನಮ್ಮೊಂದಿಗೆ ಮಾತನಾಡಲು ನಾವು ಅವಕಾಶವನ್ನೇ ನೀಡುವುದಿಲ್ಲ.
ನಾವೇನಾದರೂ ತಾರ್ಕಿಕ ಮನೋಭಾವದವರಾದರೆ, ನಮ್ಮನ್ನು ನಾವೇನಾದರೂ ತಾರ್ಕಿಕವಾಗಿ ತರಬೇತುಗೊಳಿಸಿಕೊಂಡಿದ್ದರೆ, ನಾವು ಈ ಉನ್ನತಮಟ್ಟದ ಅಸ್ತಿತ್ವವನ್ನು ಅಲ್ಲಗಳೆಯುತ್ತೇವೆ. ‘ಇದು ಸಾಧ್ಯವೇ ಇಲ್ಲ. ಇದು ನನ್ನ ಕಲ್ಪನೆಯಾಗಿರಬಹುದು. ಕನಸೂ ಆಗಿರಬಹುದು. ತಾರ್ಕಿಕವಾಗಿ ಇದನ್ನು ಸಾಧಿಸಲಾಗದಿದ್ದರೆ ಇದನ್ನು ನಾನು ಸ್ವೀಕರಿಸುವುದಿಲ್ಲ,’ ಎಂದುಕೊಳ್ಳುವ ತಾರ್ಕಿಕ ಮನಸ್ಸು ಮುಚ್ಚಲ್ಪಡುತ್ತದೆ. ತನ್ನದೇ ತಾರ್ಕಿಕ ಕಾರಣಗಳ ಚೌಕಟ್ಟಿನೊಳಗೆ ಬಂಧಿಯಾಗುತ್ತದೆ. ಅಂತಃಪ್ರಜ್ಞೆಯು ಪ್ರಕಟಗೊಳ್ಳಲು ಅಲ್ಲಿ ಅವಕಾಶವೇ ಇರುವುದಿಲ್ಲ.
ಬುದ್ಧಿಶಕ್ತಿಯನ್ನು ಸಂಕುಚಿತಗೊಳಿಸಿಕೊಳ್ಳದೇ ನಾವು ತೆರೆದ ಮನಸ್ಸಿನವರಾದರೆ ಆಗ ಬುದ್ಧಿಯ ಸಹಾಯದಿಂದಲೇ ನಾವು ಉನ್ನತ ಮಟ್ಟದ ಅಂತಃಪ್ರಜ್ಞೆಯನ್ನು ಸ್ವೀಕರಿಸಬಲ್ಲವರಾಗುತ್ತೇವೆ.
`Intuition’ ಬಗ್ಗೆ ಒಂದು ಉತ್ತಮವಾದ ಝೆನ್ ಕಥೆಯಿದೆ. ಝೆನ್ ಗುರು ಗೊಸೊ ಹೊಯೆನ್ ಹೇಳಿದ ಕಥೆ ಇದು:
ವೃದ್ಧನಾಗುತ್ತಿದ್ದ ಒಬ್ಬ ಕಳ್ಳನ ಮಗ ತಂದೆಗೆ, ‘ನನಗೂ ಈ ವೃತ್ತಿಯ ಮರ್ಮ ಕಲಿಸಿಕೊಡು,’ ಎಂದು ಕೇಳುತ್ತಾನೆ. ಆ ರಾತ್ರಿ ಕಳ್ಳ ಮಗನಿಗೆ ತನ್ನ ವೃತ್ತಿಯನ್ನು ಕಲಿಸಲು ಅವನನ್ನು ಒಂದು ಮನೆಗೆ ಕರೆದುಕೊಂಡು ಹೋಗುತ್ತಾನೆ. ಇಬ್ಬರೂ ಒಟ್ಟಾಗಿ ಮನೆಯೊಳಗೆ ನುಗ್ಗುತ್ತಾರೆ. ಒಂದು ಕೊಠಡಿಯ ಬಳಿಹೋಗಿ, ‘ಈ ಕೊಠಡಿಯಲ್ಲಿ ತಿಜೋರಿ ಇದೆ. ನೀನು ಒಳಗೆ ಹೋಗಿ ಕದ್ದು ಬಾ,’ ಎಂದು ಮಗನನ್ನು ಒಳಗೆ ಕಳಿಸಿ ಕಳ್ಳ ಬಾಗಿಲ ಬಳಿ ನಿಲ್ಲುತ್ತಾನೆ. ಮಗ ಒಳಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲನ್ನು ಹಾಕಿಕೊಂಡು ಜೋರಾಗಿ ಶಬ್ದ ಮಾಡಿ ಅಲ್ಲಿಂದ ಪರಾರಿಯಾಗುತ್ತಾನೆ. ಒಳಗೆ ಇದ್ದ ಮಗನಿಗೆ ದಿಕ್ಕೇ ತೋಚದಂತಾಗುತ್ತದೆ. ಅಪ್ಪ ಮಾಡಿದ ಈ ಕೆಲಸದಿಂದ ವಿಪರೀತ ಕೋಪವೂ ಬಂದು ಹೊರಗೆ ಹೋಗುವುದು ಹೇಗೆಂದು ತಿಳಿಯದೇ ಭಯದಿಂದ ತತ್ತರಿಸುತ್ತಾನೆ. ಮನೆಯವರು ಸದ್ದಿನಿಂದ ಎಚ್ಚರವಾಗಿ ಬಿಟ್ಟಿರುತ್ತಾರೆ. ಇದ್ದಕ್ಕಿದ್ದಂತೆಯೇ ಏನೋ ಹೊಳೆದಂತಾಗಿ ಬೆಕ್ಕಿನಂತೆ ಕೂಗಿಬಿಡುತ್ತಾನೆ!
ಮನೆಯಾಕೆ ಕೆಲಸದವಳಿಗೆ, ‘ದೀಪಹಚ್ಚಿಕೊಂಡು ಕೊಠಡಿಯೊಳಗೆ ನೋಡು,’ ಎಂದು ಹೇಳುತ್ತಾಳೆ. ಕೊಠಡಿಯ ಬಾಗಿಲನ್ನು ತೆರೆದ ತಕ್ಷಣ ಹುಡುಗ ದೀಪಕ್ಕೆ ಗಾಳಿ ಊದಿ ಆರಿಸಿ ಅವಳನ್ನು ತಳ್ಳಿಕೊಂಡು ಹೊರಗೋಡುತ್ತಾನೆ. ಅಷ್ಟರಲ್ಲೇ ಸೇರಿದ್ದ ಜನರು ಅವನನ್ನು ಓಡಿಸಿಕೊಂಡು ಹೋಗುತ್ತಾರೆ. ಓಡುತ್ತಾ ದಾರಿಯಲ್ಲಿ ಒಂದು ಬಾವಿಯನ್ನು ಕಾಣುತ್ತಾನೆ. ಶೀಘ್ರವೇ ಒಂದು ದಪ್ಪ ಕಲ್ಲನ್ನು ಬಾವಿಯೊಳಗೆ ಹಾಕಿ ಕತ್ತಲಲ್ಲಿ ಅವಿತುಕೊಳ್ಳುತ್ತಾನೆ. ಎಲ್ಲರೂ ಬಾವಿಯ ಸುತ್ತಾ ಸೇರಿ ಕಳ್ಳ ಬಾವಿಯ ನೀರಿನಲ್ಲಿ ಮುಳುಗುವುದನ್ನು ನೋಡುತ್ತಾ ನಿಲ್ಲುತ್ತಾರೆ!
ಹುಡುಗ ಮನೆಗೆ ಬಂದು ಕೋಪದಿಂದ ತಂದೆಗೆ ತಾನು ತಪ್ಪಿಸಿಕೊಂಡು ಬಂದ ಕಥೆಯನ್ನು ಹೇಳಲಾರಂಭಿಸುತ್ತಾನೆ. ಆಗ ಅಪ್ಪ, ‘ನೀನು ಕಥೆಯನ್ನು ಹೇಳುವ ಅಗತ್ಯವಿಲ್ಲ. ನೀನಿಲ್ಲಿದ್ದೀಯ. ನೀನು ಕಳ್ಳತನದ ಮರ್ಮವನ್ನು ಕಲಿತಿದ್ದೀಯ,’ ಎಂದು ಹೇಳುತ್ತಾನೆ!
ಕಳ್ಳರು Intuition ಮೂಲಕ ಕೆಲಸ ಮಾಡುತ್ತಾರೆ. ಪೋಲೀಸರು ಬುದ್ದಿಶಕ್ತಿಯನ್ನು ಅವಲಂಭಿಸುತ್ತಾರೆ. ಅದಕ್ಕೇ ಕಳ್ಳರನ್ನು ಹಿಡಿಯುವಲ್ಲಿ ವಿಫಲರಾಗುತ್ತಾರೆ ಎನ್ನುವ ಮಾತಿದೆ!
ಯಾವುದೇ ಅಳತೆಗೂ ನಿಲುಕದ ಅಂತಃಪ್ರಜ್ಞೆ ನಮ್ಮೊಳಗೇ ಅಡಗಿರುತ್ತದೆ. ಅದು ನಮ್ಮೊಂದಿಗೆ ಸ೦ವಹಿಸಲು ನಾವು ತೆರೆದ ಮನಸ್ಸಿನವರಾಗಿ, ಬುದ್ದಿಯನ್ನೂ ಸಹಕರಿಸುವಂತೆ ಅನುವುಗೊಳಿಸಿ ಅವಕಾಶನೀಡುವುದು ಪ್ರಮುಖವಾಗುತ್ತದೆ.

Friday, April 13, 2012

`ಸ೦ಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ನನ್ನ ಬ್ಲಾಗ್ ಪರಿಚಯ

31-03-2೦12ರ `ಸ೦ಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ನನ್ನ ಬ್ಲಾಗ್ ಅನ್ನು ಪರಿಚಯಿಸಿದ್ದಾರೆ. ಸ೦ಬ೦ಧಿಸಿದ ಪತ್ರಿಕೆಯ ಎಲ್ಲರಿಗೂ ಧನ್ಯವಾದಗಳು.ಪತ್ರಿಕೆಯ ಆ ಭಾಗವನ್ನು ನಿಮ್ಮ ಮು೦ದಿಟ್ಟು, ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ!

Monday, April 9, 2012

ಮನದ ಅಂಗಳದಿ.........87. ಸ್ವ-ಜ್ಞಾನ

‘ಯಾವಾಗಲೂ ಸ್ವಬುದ್ಧಿ ಇರಬೇಕು,’ ಎಂದು ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ‘ನಮ್ಮ ಬುದ್ದಿ ನಮ್ಮ ಕೈಲಿರಬೇಕು,’ ಎನ್ನುವ ಮಾತೂ ನಾವು ಸ್ವಂತ ಬುದ್ಧಿಯನ್ನು ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನೇ ಬಿಂಬಿಸುತ್ತದೆ. ಹೇಳಿಕೆಯ ಮಾತನ್ನು ಕೇಳಬಾರದು, ಸ್ವವಿವೇಚನೆಯಿರಬೇಕು ಎನ್ನುವುದು ಎಲ್ಲ ಕಾಲಕ್ಕೂ ಸತ್ಯ. ಈ ವಿವೇಚನೆ ಅಥವಾ ವಿವೇಕವು ನಮಗೆ ಸ್ವ-ಜ್ಞಾನವಿದ್ದಾಗ ಮಾತ್ರ ಲಭಿಸುತ್ತದೆ ಎನ್ನುವುದನ್ನು ಜಿಡ್ಡು ಕೃಷ್ಣಮೂರ್ತಿಯವರು (ಅನುದಿನ ಚಿಂತನ) ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ:
‘ನಾವು ಬುದ್ಧಿ ಮತ್ತು ಭಾವಗಳನ್ನು ಬೇರ್ಪಡಿಸಿ, ಭಾವವನ್ನು ಬಲಿಗೊಟ್ಟು ಬುದ್ಧಿಯನ್ನು ಬೆಳೆಸಿಕೊಂಡಿದ್ದೇವೆ. ಒಂದು ಕಾಲು ಉಳಿದೆರಡಕ್ಕಿಂತ ಬಹಳ ಉದ್ದವಾಗಿರುವ, ಸಮತೋಲ ಕಳೆದುಕೊಂಡಿರುವ, ಮೂರು ಕಾಲಿನ ಪ್ರಾಣಿಗಳಂತಿದ್ದೇವೆ ನಾವು. ಬುದ್ಧಿಜೀವಿಗಳಾಗಿರುವ ತರಬೇತಿ ನಮಗೆಲ್ಲಾ ಸಿಕ್ಕಿದೆ. ನಮ್ಮ ಶಿಕ್ಷಣವು ಬುದ್ಧಿಗೆ ಸಾಣೆ ಹಿಡಿದು, ಸಂಗ್ರಹಶೀಲವಾಗುವಂತೆ, ತಂತ್ರಿಗಳಾಗುವಂತೆ ಮಾಡಿದೆ. ಆದ್ದರಿಂದಲೇ ನಮ್ಮ ಬದುಕಿನಲ್ಲಿ ಬುದ್ಧಿಗೆ ಅಪಾರ ಪ್ರಾಮುಖ್ಯ ದೊರಕಿದೆ. ವಿವೇಕವು ಬುದ್ಧಿಗಿಂತಲೂ ದೊಡ್ಡದು, ಮಿಗಿಲಾದದ್ದು. ಅದರಲ್ಲಿ ವಿಚಾರ ಮತ್ತು ಪ್ರೀತಿಗಳ ಸಂಯೋಗವಿದೆ. ನಾನು ಎಂಬ ಇಡೀ ಪ್ರಕ್ರಿಯೆಯನ್ನು ಆಳವಾಗಿ ಅರ್ಥಮಾಡಿಕೊಂಡಾಗ ಬರುವ ಸ್ವ-ಜ್ಞಾನ ನಮ್ಮಲ್ಲಿದ್ದಾಗ ಮಾತ್ರ ವಿವೇಕಿಗಳಾಗುತ್ತೇವೆ.’
ಆಸೆ ಮತ್ತು ಸ್ವ-ಜ್ಞಾನಕ್ಕಿರುವ ಸಂಬಂಧವನ್ನು ವಿಶ್ಲೇಷಿಸುತ್ತಾ ‘......ಅನುಭವದ ಆಸೆಯೇ ಅನುಭವಿಯನ್ನು ಸೃಷ್ಟಿಸುತ್ತದೆ. ಆ ಅನುಭವಿ ಅನುಭವವನ್ನು ಸಂಗ್ರಹಿಸಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಆಸೆಯೇ ಆಲೋಚಕನನ್ನೂ ಮತ್ತು ಆಲೋಚನೆಯನ್ನು ಬೇರೆಬೇರೆ ಮಾಡುತ್ತದೆ. ಏನೋ ಆಗುವ, ಅನುಭವಿಸುವ, ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳುವ ಆಸೆ ಅನುಭವಕ್ಕೂ ಅನುಭವಿಗೂ ನಡುವೆ ಭೇದವನ್ನು ಕಲ್ಪಿಸುತ್ತದೆ. ಆಸೆಯ ದಾರಿಗಳನ್ನು ಅರಿಯುವುದೇ ಸ್ವ-ಜ್ಞಾನ, ಸ್ವ-ಜ್ಞಾನವೇ ಧ್ಯಾನದ ಆರಂಭ,’ ಎಂದು ತಿಳಿಸುತ್ತಾರೆ.
‘ನಾನು’ ಎಂದರೇನೆಂದು ಅರ್ಥ ಮಾಡಿಕೊಳ್ಳುವುದೇ ಆತ್ಮಜ್ಞಾನ. `ಯಾರಿಗೆ ಆತ್ಮಜ್ಞಾನವಾಗಿರುತ್ತದೋ ಅವರು ಚಿಕ್ಕಚಿಕ್ಕ ಘಟನೆಗಳಿಂದ ಅಧಿಕವಾಗಿ ಅಶಾಂತಿ ಅಥವಾ ಉತ್ತೇಜನಕ್ಕೆ ಒಳಗಾಗುವುದಿಲ್ಲ. ಲಾಭ-ಹಾನಿ, ಜೀವನ-ಮರಣ, ಮಿಲನ-ವಿರಸ, ಮಾನ-ಅಪಮಾನ, ಲೋಭ-ಕ್ರೋಧ, ರಾಗ-ದ್ವೇಷ ಯಾವುವೂ ಅವರನ್ನು ಅಧಿಕವಾಗಿ ಬಾಧಿಸುವುದಿಲ್ಲ. ಏಕೆಂದರೆ ಇದು ನಿತ್ಯಪರಿವರ್ತನಶೀಲವಾದ ಈ ಸಂಸಾರದ ನಿತ್ಯ ಸ್ವಾಭಾವಿಕ ರೂಪ ಎಂದು ಅವರು ತಿಳಿದಿರುತ್ತಾರೆ. ಮನಸ್ಸಿಗೆ ಇಷ್ಟವಾದ ವಸ್ತಿ ಅಥವಾ ಸ್ಥಿತಿ ಯಾವಾಗಲೂ ದೊರೆಯುವುದಿಲ್ಲ. ಕಾಲಚಕ್ರದ ಪರಿವರ್ತನೆ ಆದೊಡನೆಯೇ ಬೇಡದ ಘಟನೆಗಳು ಘಟಿಸುತ್ತವೆ. ಆದ್ದರಿಂದ ಆ ಘಟನೆಗಳನ್ನು ಒಂದು ಮನೋರಂಜನೆಯಂತೆ, ನಾಟಕದಂತೆ, ಕುತೂಹಲ ಮತ್ತು ವಿನೋದ ದೃಷ್ಟಿಯಿಂದ ನೋಡುತ್ತಾನೆ. ಯಾವುದೇ ಅಹಿತಕರ ಘಟನೆ ಘಟಿಸಿದರೆ ಅದರಿಂದ ಅಶಾಂತನಾಗುವುದಿಲ್ಲ. ಆತ್ಮಜ್ಞಾನಿಯು ಅಂತಹ ಮಾನಸಿಕ ಕಷ್ಟಗಳಿಂದ ಸಹಜವಾಗಿಯೇ ದೂರವಿರುತ್ತನೆ.........’ ಎಂದು ಶ್ರೀರಾಮ ಶರ್ಮಾ ಆಚಾರ್ಯರವರು ತಮ್ಮ ‘ನಾನು ಯಾರು?’ ಪುಸ್ತಕದಲ್ಲಿ ವಿಶದಪಡಿಸುತ್ತಾರೆ. ‘ಆತ್ಮದರ್ಶನವೆಂದರೆ ನಿನ್ನ ಇರವು, ಶರೀರ ಮತ್ತು ಸಾಧನೆಗಳ ಸರಿಸರಿಸ್ವರೂಪವನ್ನು ನಿನ್ನ ಮಾನಸ ಪಟಲದಲ್ಲಿ ಅತಿ ಆಳವಾಗಿ ಅಂಕಿತಗೊಳಿಸಿಕೊಳ್ಳುವುದು. ಅದನ್ನು ದಿನವಿಡೀ ಜೀವನದಲ್ಲಿ ಎಂದೂ ಮರೆಯದಿರುವುದು.......’ಎಂದೂ ತಿಳಿಸುತ್ತಾರೆ.
ಸುಪ್ರಸಿದ್ಧ ಕವಿ, ಚಿತ್ರಕಾರ ಖಲೀಲ್ ಗಿಬ್ರಾನ್‌ರ ‘ದ ಪ್ರೊಫೆಟ್'(ಕನ್ನಡಾನುವಾದ ‘ಪ್ರವಾದಿ’ ಅನುವಾದಕರು ಶ್ರೀ ದೇವದತ್ತ) ನಲ್ಲಿ ಮಹಾಪ್ರಸ್ಥಾನಕ್ಕೆ ಹೊರಟ ‘ಆಲ್ ಮುಸ್ತಾಫಾ’ನನ್ನು ಒಬ್ಬ ಮನೀಷಿಯು ಆತ್ಮಜ್ಞಾನದ ಬಗ್ಗೆ ಹೇಳಿರಿ ಎಂದು ಕೇಳುತ್ತಾನೆ. ಆಗ ಅವನು ಹೀಗೆ ಉತ್ತರಿಸುತ್ತಾನೆ:
‘ಹಗಲು-ಇರುಳುಗಳ ರಹಸ್ಯವನ್ನು ನಿಮ್ಮ ಹೃದಯಗಳು ಮೌನದಿಂದಲೇ ತಿಳಿದುಕೊಳ್ಳುತ್ತವೆ. ಆದರೆ ನಿಮ್ಮ ಹೃದಯದ ದನಿಯನ್ನು ಕೇಳಲು ನಿಮ್ಮ ಕಿವಿಗಳು ತೃಷಿತವಾಗಿರುತ್ತವೆ. ವಿಚಾರದಲ್ಲಿ ತಿಳಿದುಕೊಂಡಿದ್ದನ್ನು ನೀವು ಶಬ್ದಗಳಲ್ಲಿ ತಿಳಿಯಬಯಸುತ್ತೀರಿ. ನಿಮ್ಮ ಕನಸಿನ ನಗ್ನ ದೇಹವನ್ನು ನಿಮ್ಮ ಬೆರಳುಗಳಿಂದ ನೀವು ಸೋಂಕಬಯಸುತ್ತೀರಿ. ಹೀಗೆ ನೀವು ಬಯಸುತ್ತಿರುವುದು ಒಳ್ಳೆಯದೇ. ನಿಮ್ಮ ಆತ್ಮದ ನಿಗೂಢ ಬಾವಿಬುಗ್ಗೆಯು ಹೊರ ಚಿಮ್ಮಿ ಬಂದು ಕಲರವಗೈಯುತ್ತ ಸಾಗರದೆಡೆಗೆ ಬಿದ್ದು ಹರಿಯುವುದು ಅವಶ್ಯವಾದ ಮಾತೇ ಆಗಿದೆ. ನಿಮ್ಮ ಅನಂತ ಅಗಾಧತೆಯಲ್ಲಿಯ ನಿಧಿಯು ನಿಮ್ಮ ಕಣ್ಣೆದುರು ಪ್ರಕಟವಾಗುವುದು ಅವಶ್ಯವಿದೆ.
ಆದರೆ, ನಿಮ್ಮ ಅಜ್ಞಾತ ನಿಧಿಯನ್ನು ತೂಗಲೆಂದು ನಿಮ್ಮಲ್ಲಿ ತಕ್ಕಡಿ ಮಾತ್ರ ಇರದಿರಲಿ.
ಕೋಲಿನಿಂದ ಅಥವಾ ಹಗ್ಗದಿಂದ ನಿಮ್ಮ ತಿಳಿವಿನ ಆ ಆಳವನ್ನು ನೀವು ನೋಡಬಯಸಬೇಡಿರಿ. ಏಕೆಂದರೆ ‘ಆತ್ಮ?ವು ಅಸೀಮವೂ ಅಮೇಯವೂ ಆದ ಸಾಗರವಾಗಿದೆ. ‘ನಾನು ಸತ್ಯವನ್ನೇ ಕಂಡೆ,' ಎನ್ನಬೇಡಿ; ಬೇಕಾದರೆ, ‘ನಾನು ಒಂದು ಸತ್ಯವನ್ನು ಕಂಡೆ,’ ಎನ್ನಿರಿ.
‘ನಾನು ಆತ್ಮದ ಮಾರ್ಗವನ್ನೇ ಕಂಡೆ,’ ಎನ್ನಬೇಡಿ; ಬೇಕಾದರೆ, ‘ನಾನು ನನ್ನ ಮಾರ್ಗದಲ್ಲಿ ಬರುವ ಆತ್ಮವನ್ನು ಕಂಡೆ,’ ಎನ್ನಿರಿ. ಏಕೆಂರೆ ಆತ್ಮವು ಸಕಲ ಮಾರ್ಗಗಳಲ್ಲಿಯೂ ಅಡ್ಡಾಡುತ್ತಿರುತ್ತದೆ. ಆತ್ಮವು ಒಂದೇ ಗೆರೆಗುಂಟ ಅಡ್ಡಾಡುವುದಿಲ್ಲ; ಅಥವಾ ಗಲಗಿನಂತೆ ಬೆಳೆಯುವುದಿಲ್ಲ. ಅಸಂಖ್ಯ ದಳಗಳ ಪದ್ಮದಂತೆ, ಆತ್ಮವು ತನ್ನಷ್ಟಕ್ಕೆ ತಾನೇ ಬಿಚ್ಚಿ ಅರಳುತ್ತದೆ.
ಮಹಾನ್ ಆತ್ಮಜ್ಞಾನಿಗಳು ತಾವು ತಮ್ಮ ಅಂತರ್ದರ್ಶನದಿಂದ ಕಂಡ ಸತ್ಯವನ್ನು ತೆರೆದಿಟ್ಟಿದ್ದಾರೆ. ನಾವು ನಮ್ಮ ಶಕ್ತ್ಯಾನುಸಾರ ಪಡೆದುಕೊಳ್ಳಬಹುದು.

Wednesday, April 4, 2012

ಮನದ ಅಂಗಳದಿ.........86. ಸಾವಿತ್ರಿ

‘ಸತ್ಯವಾನ್-ಸಾವಿತ್ರಿ’ ಎಂದೇ ಪ್ರಸಿದ್ಧವಾದ ಪುರಾಣದ ಸಾವಿತ್ರಿಯ ಕಥೆಯನ್ನು ನಾವು ಓದಿ ಅಥವಾ ಕೇಳಿ ತಿಳಿದಿದ್ದೇವೆ.
‘ಮದ್ರ ರಾಜ್ಯದ ಅರಸನಾದ ಅಶ್ವಪತಿಗೆ ಮಕ್ಕಳಿರಲಿಲ್ಲ. ಅವನು ಸಾವಿತ್ರಿ ದೇವಿಯನ್ನು ಆರಾಧಿಸಿ ಸುಮಾರು ಹದಿನೆಂಟು ವರ್ಷಗಳಕಾಲ ತಪಸ್ಸನ್ನು ಮಾಡಿ ಪಡೆದ ಮಗುವಿಗೆ ‘ಸಾವಿತ್ರಿ’ ಎಂದೇ ನಾಮಕರಣವನ್ನು ಮಾಡಲಾಗುತ್ತದೆ. ಮಗು ಬೆಳೆದಂತೆ ವೃದ್ಧಿಯಾಗುತ್ತಿರುವ ದಿವ್ಯ ತೇಜಸ್ಸು, ಅಪೂರ್ವ ಮುಖಕಾಂತಿ ಮತ್ತು ಅನುಪಮ ಸೌಂದರ್ಯದ ಮಹಾಶಕ್ತಿಯನ್ನು ನೋಡಿದವರು ಯಾರೂ ಸಹ ಆ ರಾಜಕುಮಾರಿಯ ಕೈ ಹಿಡಿಯಲು ಸಮರ್ಥರಾಗುವುದಿಲ್ಲ. ಸಾವಿತ್ರಿಯೇ ತನಗೆ ಅನುರೂಪನಾದ ಪತಿಯ ಅನ್ವೇಷಣೆಗೆ ಹೊರಡುತ್ತಾಳೆ. ಎರಡು ವರ್ಷಗಳ ನಂತರ ವಾಪಸಾಗುತ್ತಾಳೆ. ಕಣ್ಣುಗಳನ್ನೂ, ರಾಜ್ಯವನ್ನೂ ಕಳೆದುಕೊಂಡು, ಅರಣ್ಯವಾಸಿಯಾಗಿದ್ದ ದ್ಯುಮತ್ಸೇನನ ಮಗನಾದ ಸತ್ಯವಾನನನ್ನು ತನ್ನ ಪತಿಯಾಗಿ ಆಯ್ಕೆ ಮಾಡಿದ ಸಂಗತಿಯನ್ನು, ತನ್ನ ತಂದೆಯ ರಾಜಾಸ್ಥಾನದಲ್ಲಿ ಬಹಿರಂಗ ಪಡಿಸುತ್ತಾಳೆ. ಆದರೆ ಸತ್ಯವಾನನು ಅಲ್ಪಾಯು, ಇನ್ನು ಕೇವಲ ಒಂದು ವರ್ಷದಲ್ಲಿ ಸಾಯಲಿದ್ದಾನೆಂದು ಆಸ್ಥಾನದಲ್ಲಿ ಉಪಸ್ಥಿತರಿದ್ದ ನಾರದರಿಂದ ತಿಳಿಯುತ್ತದೆ. ಆದರೂ ಸಾವಿತ್ರಿಯು ಅಂಜದೆ, ತನ್ನ ನಿರ್ಧಾರವನ್ನು ಬದಲಿಸದಿದ್ದರಿಂದ ಅವನೊಂದಿಗೇ ವಿವಾಹವು ನಡೆಯುತ್ತದೆ. ಸಾವಿತ್ರಿಯು ತನ್ನ ಪತಿಯೊಡನೆ ಸರಳ ಜೀವನವನ್ನು ನಡೆಸುತ್ತಿದ್ದಂತೆ ಕಾಲವು ಉರುಳಿ ಅವನು ಮರಣಹೊಂದುವ ಸಮಯವು ಸಮೀಪಿಸುತ್ತದೆ. ಅದಕ್ಕೆ ಮೂರುದಿನ ಹಿಂದಿನಿಂದಲೇ ನಿರಂತರವಾಗಿ ಪ್ರಾರ್ಥನೆಯನ್ನು ಮಾಡಲಾರಂಭಿಸುತ್ತಾಳೆ. ಯಮ ಪ್ರತ್ಯಕ್ಷನಾಗಿ ಸತ್ಯವಾನನನ್ನು ಸೆಳೆದು ಒಯ್ಯುತ್ತಿರುವಾಗ ಸಾವಿತ್ರಿ ಅತ್ಯಂತ ಧೀರತನದಿಂದ ಯಮನೊಂದಿಗೆ ಚರ್ಚೆ ನಡೆಸಿ, ಮೃತ್ಯುವನ್ನು ತನ್ನ ಮಾತಿನ ಜಾಲದಲ್ಲಿ ಸಿಲುಕಿಸಿ, ಸೋಲಿಸಿ, ಪತಿಯನ್ನು ಮರಳಿ ಪಡೆಯುತ್ತಾಳೆ.’
ಈ ಪುರಾಣ ಕಥೆಯನ್ನು ಮಹರ್ಷಿ ಶ್ರೀ ಅರವಿಂದರು ಅಮರತ್ವ ಸಾಮ್ರಾಜ್ಯದ ಕಿರೀಟಕ್ಕಾಗಿ ತೊಡಗಿದ ಮಾನವತೆಯ ಅನ್ವೇಷಣೆಯ ಪ್ರತೀಕವನ್ನಾಗಿ ಮಾಡಿದ್ದಾರೆ. ಅರವಿಂದರ ಕಾವ್ಯ ರಚನೆಗಳಲ್ಲಿ ಅತ್ಯಂತ ಪ್ರಸಿದ್ಧವಾದ ‘ಸಾವಿತ್ರಿ'ಯು ೨೪೦೦೦ ಸಾಲುಗಳ ಒಂದು ಮಹಾಕಾವ್ಯ. ಈ ಕಾವ್ಯದಲ್ಲಿ ಜ್ಞಾನ-ಅಜ್ಞಾನ, ನಿತ್ಯತೆ-ಅನಿತ್ಯತೆಗಳ ನಡುವಿನ ಘರ್ಷಣೆ ಅತ್ಯಂತ ರಮ್ಯವಾಗಿ ನಿರೂಪಿತವಾಗಿದೆ. ಇಲ್ಲಿ ಸಾವಿತ್ರಿ ಒಬ್ಬ ಸಾಮಾನ್ಯ ಮನುಜಳಲ್ಲ. ಆಕೆ ಒಂದು ದಿವ್ಯ ಚೇತನ. ಸಾವನ್ನು ಸೋಲಿಸಿ, ಜಗತ್ತಿನ ಆತ್ಮ ರಕ್ಷಣೆಗಾಗಿ ಅವತರಿಸಿದವಳು. ಸತ್ಯವಾನ ಇಲ್ಲಿ ಸಾವಿತ್ರಿಯ ಪತಿಯಷ್ಟೇ ಅಲ್ಲ., ಜಗತ್ತಿನ ಆತ್ಮಕ್ಕೆ ಆತ ಪ್ರತೀಕ. ಈ ಕ್ಷಣಿಕ ಜಗತ್ತಿನಲ್ಲಿ ಸತ್ಯ ಸ್ಥಾಪನೆ ಮಾಡಲು ಹೊರಟಿರುವ ಆ ಸತ್ಯವಾನನಿಗೆ ಪೂರ್ವಯೋಜಿತವಾದ ಒಂದು ನಿಶ್ಚಿತ ದಿನದಂದು ಸಾವೆಂಬುದು ಎದುರಾಗುತ್ತದೆ. ಆದರೆ ದಿವ್ಯ ಕಟಾಕ್ಷವನ್ನು ಹೊಂದಿರುವ ಸಾವಿತ್ರಿಯು, ವಿನಾಶದ ಅಗ್ರೇಸರನೊಂದಿಗೆ ಸೆಣಸಾಡಿ, ತನ್ನ ಆತ್ಮ ಬಲದಿಂದ ಅವನ ಸ್ವರೂಪವನ್ನೇ ಇಲ್ಲವಾಗಿಸಿ, ಮಾನವ ಮತ್ತು ನವನಿರ್ಮಾಣವಾಗಲಿರುವ ಪ್ರಪಂಚಕ್ಕೆ ಗೆಲುವನ್ನು ತರುತ್ತಾಳೆ. ವಿಶ್ವ ಕಾವ್ಯದಲ್ಲಿ ‘ಸಾವಿತ್ರಿ?ಗೆ ಒಂದು ವಿಶೇಷವಾದ ಸ್ಥಾನವಿದೆ. ಶ್ರೀ ಅರವಿಂದರು ಈ ಪುರಾಣ ಕಥೆಯ ಭೂಮಿಕೆಗೆ, ಆಧ್ಯಾತ್ಮ ಸಂಪತ್ತನ್ನೂ ಮತ್ತು ನಿಗೂಢ ಭಾವಿಕ ರೂಪಗಳನ್ನೂ ತುಂಬುವುದರ ಜೊತೆಗೆ, ವಿವಿಧ ಪಾತ್ರಗಳಿಗೆ ಅದ್ಭುತ ವಿಕಸನದ ಲಕ್ಷಣಗಳನ್ನು ಸಂಯೋಜಿಸಿ, ಪುನೀತ ಮಾನವನ ಮೃತ್ಯುಂಜಯಕ್ಕೆ ನಾಂದಿಯಾಗುವಂತಹ, ಸರ್ವೋತ್ತಮ, ಪರಮ ಪವಿತ್ರ ಗ್ರಂಥವನ್ನಾಗಿ ಮಾಡಿ ಹೊಸ ಆಯಾಮವನ್ನು ಕೊಟ್ಟಿದ್ದಾರೆ........ ವೇದಗಳಂತೆ ಇದು ವಿವಿಧ ಮನಗಳಿಗೆ ವಿವಿಧ ಅಂತರಾರ್ಥಗಳನ್ನು ಫಲಿಸುವಂತಿದೆ.
ಜೀವನ-ಧರ್ಮ ಶುಭ ಸಂಕೇತವಾದ ಅಶ್ವಪತಿಯು, ಅಜ್ಞಾನ ವಿಮೋಚನೆಯಿಂದ ಸ್ವಾತಂತ್ರ್ಯ ಜೀವನದವರೆಗೂ, ಜೀವ ಪಾಲನೆಯಿಂದ ವಾಸ್ತವ ಜ್ಞಾನ, ದಿವ್ಯಶಕ್ತಿ, ಪರಮಾನಂದ, ಅಮರತ್ವಗಳನ್ನು ಪಡೆಯುವವರೆಗೂ, ತಪಾಸಣೆ ಮಾಡುತ್ತಿರುವ ಮಾನವನ ಚಿಹ್ನೆಯಾಗಿದ್ದಾನೆ. ವಿವಿಧ ಯೋಗ ಸಾಧನೆ, ಪ್ರಪಂಚ ಜ್ಞಾನ, ಆತ್ಮವಿದ್ಯೆ, ಪರಮಾತ್ಮ ಸಾಕ್ಷಾತ್ಕಾರಗಳಿಸುವ ಕಾರ್ಯಗಳಲ್ಲಿ ಅಶ್ವಪತಿಯು ಅವಿರತ ನಿರತನಾಗಿದ್ದಾನೆ. ಆತ್ಮಸಾಧನೆಯ ಅಂತಿಮ ಘಟ್ಟದಲ್ಲಿ ನೆಲೆಸಿರುವ ಅಶ್ವಪತಿಯು, ಈ ಮಾರಕ ಪ್ರಪಂಚವನ್ನು ಉಳಿಸಲು ಮತ್ತು ಅಸಹಾಯಕ, ದುರ್ಬಲ ಮಾನವತೆಯನ್ನು ಉದ್ಧರಿಸಲು, ಧರೆಗೆ ಇಳಿದು ಬರುವಂತೆ ಆ ವಿಶ್ವತಾಯಿಯಲ್ಲಿ ಮೊರೆಯಿಡುತ್ತಾನೆ. ಈ ಹೃದಯಂಗಮ ಕರೆಗೆ ಓಗೊಟ್ಟ, ಆ ಕರುಣಾಮಯಿಯ ಕೃಪಾಕಟಾಕ್ಷದಿಂದ, ಮಾನವ ಜನ್ಮವೆತ್ತಿ ಬಂದ ಮಹಾ ಸ್ತ್ರೀಯೇ ಆ ಸಾವಿತ್ರಿ.
ಅಶ್ವಪತಿಯ ಆಧ್ಯಾತ್ಮ ವಿಕಸನದ ನಿರಂತರ ಮನೋಪಯಣವನ್ನು ಹಂತಹಂತವಾಗಿ ರಮಣೀಯವಾಗಿ ವಿವರಿಸಿದ್ದಾರೆ. ಸಾವಿತ್ರಿ ಮತ್ತು ಯಮನ ನಡುವಿನ ವಾದ-ವಿವಾದಕ್ಕೆ ಬೇರೆಯದೇ ಆಯಾಮವನ್ನು ನೀಡಿದ್ದಾರೆ. ತನ್ನ ಆಳವಾದ ಸಮಾದಿ ಸ್ಥಿತಿಯಲ್ಲಿ ಸಾವಿತ್ರಿಯ ದಿವ್ಯ ಚೇತನವು ನಡೆಸಿದ ಹೋರಾಟವದು ಎಂದು ಅರ್ಥೈಸಿದ್ದಾರೆ. ಯಾವುದೇ ಪ್ರಲೋಭನೆಗಳನ್ನು ಮುಂದಿಟ್ಟರೂ ಒಪ್ಪದೇ ‘ಸತ್ಯ?ವನ್ನು ಭೂಮಿಗೆ ಮರುಪಡೆದು ತಂದ ಸಾಹಸಗಾಥೆಯದು. ‘ಪ್ರೇಮ ಮತ್ತು ಐಕ್ಯತೆಯೇ ಬದುಕಿನ ಸಾರ. ಇದೇ ಸುವರ್ಣ ಪರಿವರ್ತನೆಯ ಮರ್ಮ. ಇದೇ ನಾನು ಕಾಣಬಯಸುವ ಅಥವಾ ತಿಳಿದಿರುವ ಸತ್ಯ,’ ಎನ್ನುವ ಸಂದೇಶವನ್ನು ಸಾವಿತ್ರಿಯ ಮೂಲಕ ಮನುಕುಲಕ್ಕೆ ನೀಡಿದ್ದಾರೆ.
‘ಸಾವಿತ್ರಿ’ ಕಾವ್ಯದಿಂದ ಆಯ್ದ ಕೆಲವು ಉಲ್ಲೇಖಗಳು(Quotes):
*One man's perfection
Still can save the world.
*He Who Chooses The Infinite Has Been Chosen by the Infinite
*A cave of darkness guards the eternal Light.
*All our earth starts from mud and ends in sky.
(ಸಾಯಿಬಿಂದು(ಎಚ್. ವಿ. ಶ್ರೀನಿವಾಸ) ಅವರು ಶ್ರೀ ಅರೋಬಿಂದೋ ಅವರ ‘ಸಾವಿತ್ರಿ’ಯನ್ನು ಎಂ.ಪಿ. ಪಂಡಿತ್ ಅವರ `Summary of Savitri’ಗ್ರಂಥದಿಂದ ಆಯ್ದು, ಅರ್ಥೈಸಿ ಕನ್ನಡಿಸಿದ್ದಾರೆ. ಈ ಪುಸ್ತಕದಿಂದ ಹಾಗೂ ಅಂತರ್ಜಾಲದಿಂದ ಸಂಗ್ರಹಿಸಿ ಬರೆದಿದ್ದೇನೆ.)