Tuesday, April 9, 2024

ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ

 



'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ ಲಭಿಸಿದೆ ಎಂಬ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ😍

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು❤️🙏


'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆ: ಪ್ರಭಾಮಣಿ, ಸತೀಶ್‌, ಅರಳಿಸುರಳಿಗೆ ... 



https://www.facebook.com/share/p/5BGqzAvXVZUF2uKy/?mibextid=oFDknk

Sunday, April 7, 2024

ವಿಜಯ ಕರ್ನಾಟಕ ಯುಗಾದಿ ವಿಶೇಷ ಸಂಚಿಕೆಯಲ್ಲಿ ನನ್ನ ಲಲಿತ ಪ್ರಬಂಧ


ಈ ಸುಂದರ ಸಂಚಿಕೆದಲ್ಲಿ  ನನಗೂ ಲಲಿತ ಪ್ರಬಂಧವನ್ನು ಬರೆಯಲು ಅವಕಾಶ ನೀಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ವಿದ್ಯಾ ಮೇಡಂ ವಿದ್ಯಾರಶ್ಮಿ ಪೆಲತ್ತಡ್ಕ  ❤️🙏 ನನ್ನ ಮಗಳು Sushma Sindhu  ಬಹುಮಾನಿತ ಲೇಖನವೂ ಇರುವುದು ಇನ್ನೂ ಹೆಚ್ಚು ಸಂತಸವಾಗಿದೆ😍

https://www.facebook.com/share/p/KKeCr2fd5sXgw8de/?mibextid=oFDknk

 https://www.facebook.com/share/p/impDXh3DXeQXvMVq/?mibextid=oFDknk



Saturday, April 6, 2024

'ಸುಧಾ' ಪತ್ರಿಕೆಯಲ್ಲಿ ಲಲಿತ ಪ್ರಬಂಧ - 'ಎಡವಟ್ಟೋ… ಎಡವಟ್ಟು!

 





ಹಿಂದಿನ ವಾರದ ( ಏಪ್ರಿಲ್04, 2024) 'ಸುಧಾ' ಪತ್ರಿಕೆಯ 'ಮಂದಹಾಸ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಎಡವಟ್ಟೋ… ಎಡವಟ್ಟು!'  ನಿಮ್ಮ ಪ್ರೀತಿಯ ಓದಿಗೆ😍


ಎಡವಟ್ಟೋ… ಎಡವಟ್ಟು!

              


              ನಮ್ಮ ಹಳ್ಳಿಯ ಜನ ಅನ್ವರ್ಥನಾಮ ಇಡುವುದರಲ್ಲಿ ಬಹಳ ಪ್ರವೀಣರಿದ್ದರು. ಹೊಸಬರನ್ನು ಕಂಡಾಗ ಅವರ ಹೆಸರೇನು ಎಂದು ಕೇಳುವ ಗೋಜಿಗೂ ಹೋಗದೇ ಅವರಲ್ಲಿಯ ದೈಹಿಕ ಅಥವಾ ವರ್ತನಾ ಪ್ರಧಾನ ಗೋಚರಾಂಶವನ್ನು ಗುರುತಿಸಿ ತಕ್ಷಣವೇ ಒಂದು ಅನ್ವಯನಾಮವನ್ನಿಟ್ಟು ಕರೆದೇಬಿಡುತ್ತಿದ್ದರು. ಈ ರೀತಿಯ ನಡೆಯನ್ನು ನಮ್ಮ ಮನೆಯಲ್ಲಿ ಅನಾಗರಿಕವೆಂದು ಪರಿಗಣಿಸಿದ್ದರಿಂದ ಅದಕ್ಕೆ ಆಸ್ಪದವಿರಲಿಲ್ಲ. ಆದರೂ ನಮ್ಮ ಮನೆಯ ಹಿರಿಯ ಮೇಲ್‌ ಮಕ್ಕಳು ಕದ್ದುಮುಚ್ಚಿ ಇಂಥಾ ಹೆಸರುಗಳನ್ನಿಟ್ಟು ಕೀಟಲೆಮಾಡುತ್ತಿದ್ದುದು ನಡೆದೇ ಇತ್ತು. ಇದಕ್ಕೆಲ್ಲಾ ಬಲಿಪಶುವಾಗುತ್ತಿದ್ದುದು ನಿರುಪದ್ರವಿ ಜೀವಿಯಾದ ನಾನೇ ಆದ್ದರಿಂದ ಅನಿವಾರ್ಯವಾಗಿ ನಾನು ಈ ಕೋಟಲೆಯನ್ನು ಅನುಭವಿಸಲೇಬೇಕಿತ್ತು. ಎಡವಟ್ಟ, ಎಂಗರವಟ್ಟ, ಮೊದ್ದು, ಪೆಂಗ, ಪೆಗ್ಗೆ ಮುಂತಾಗಿ ಸಂದರ್ಭಾನುಸಾರ ಕರೆಯುವುದೆಂದರೆ ಅವರಿಗೆ ಖುಷಿಯೋಖುಷಿ. ಹೀಗೆ ಬಾಲ್ಯದಿಂದಲೇ ಪಾರಂಭವಾದ ನನ್ನ ಎಡವಟ್ಟುತನ ನನ್ನೊಂದಿಗೇ ಬೆಳೆಯುತ್ತಾ ಸುತ್ತಿನವರಿಗೆಲ್ಲಾ ಆಗಾಗ ಮನರಂಜನೆಯನ್ನುಂಟುಮಾಡುತ್ತಿತ್ತು. 

ಚಿಕ್ಕಂದಿನಿಂದಲೇ ಅನಿವಾರ್ಯ ಎಡವಟ್ಟಾಂಕಿತಳಾಗಿದ್ದ ನನಗೆ ಬಹಳ ದಿನಗಳ ನಂತರ ಎಡವಟ್ಟು ಅಂದರೆ ಅರ್ಥವೇನು ಎನ್ನುವ ಸಮಸ್ಯೆ ಕಾಡಲಾರಂಭಿಸಿತು. ಎಡವಟ್ಟು ಪದದ ವ್ಯತ್ಪತ್ತಿಯನ್ನು ಶೋಧಿಸಿದಾಗ ಪ್ರೊಫೆಸರ್ ಜಿ.ವೆಂಕಟಸುಬ್ಬಯ್ಯನವರ ವಿಶ್ಲೇಷಣೆಯಂತೆ 

ʼಎಡʼ ಮತ್ತು ʼಪಡುʼ ಎರಡು ಪದಗಳು ಸೇರಿ ಎಡವಟ್ಟು ಆಗಿದೆ ಎಂದು ತಿಳಿದುಬಂತು.

ಎಡ ಅಂದರೆ ಎಡಗಡೆ, ಎಡಗೈಯಿಂದ ಒಳ್ಳೆಯ ಕೆಲಸ ಮಾಡಬಾರದು ಅಂತ ಅಜ್ಜಿ ಆಗಾಗ ಹೇಳ್ತಿದ್ದರು. ಬೆಳಿಗ್ಗೆ ಏಳುವಾಗಿನಿಂದಲೇ ಎಡಮಗ್ಗುಲಲ್ಲಿ ಏಳಬಾರದು ಎನ್ನುವುದರಿಂದ ಪ್ರಾರಂಭವಾಗಿ ಎಡಗೈಲಿ ಊಟ ಮಾಡಬಾರದು, ಎಡಗೈಲಿ ಬರೆಯಬಾರದು, ದೇವರಿಗೆ ಪ್ರದಕ್ಷಿಣೆಯನ್ನೂ ಎಡಗಡೆಯಿಂದ ಮಾಡಬಾರದು… ಮುಂತಾಗಿ ಎಡ ನಿಷೇಧಗಳ ಲಿಸ್ಟ್‌ ಮುಂದುವರಿಯುತ್ತಿತ್ತು. ಇನ್ನು ʼಪಡುʼ ಅನ್ನೋದು ಪಟ್ಟು ರೂಪ ಪಡೆದು, ಎಡ ಮತ್ತು ಪಟ್ಟು ಸೇರಿ ಸಮಾಸವಾಗುವಾಗ ಎಡವಟ್ಟು ಆಗಿದೆ!. ಅಬ್ಬಬ್ಬಾ ಎಡವಟ್ಟೇ! ಹಾಗಾಗಿ ಎಡವಟ್ಟು ಅಂದರೆ ಎಡಕ್ಕೆ ಬಿದ್ದ, ಕ್ರಮ ತಪ್ಪಿದ, ಸರಿ ಹೋಗದ.. ಇತ್ಯಾದಿ ಅರ್ಥ ಬರುತ್ತದೆ ಎಂದು ತಿಳಿಯಿತು. ಈ ಹಾಳು ಹಿರೀಹುಡುಗರು ಎಡವರಿಯದ ಪಾಪದ ಜೀವಿಯಾದ ನನ್ನ ತಲೆಗೆ ಏಕೆ ಈ ಹುಳವನ್ನು ಬಿಟ್ಟರೋ ಕಾಣೆ. ನಾಲ್ಕಕ್ಷರ ಕಲಿತ ನಂತರ ಎಲ್ಲೆಲ್ಲೂ ನನಗೆ ಎಡವಟ್ಟೇ ಕಾಣಲಾರಂಭಿಸಿತು.

ಮೆಡಿಸಿನ್ ತಿಂದು ಎಡವಟ್ಟಾಗಿ ಮಹಿಳೆಯೊಬ್ಬರ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಿದ್ದು ಮಾತ್ರವಲ್ಲದೇ ನಾಲಿಗೆಯಲ್ಲಿ ಪೂರ್ತಿ ಕೂದಲು ಬೆಳೆಯಿತೆನ್ನುವ ವಾರ್ತೆಯಿಂದ ಯಾವುದೇ ಮೆಡಿಸಿನ್‌ ತೆಗೆದುಕೊಳ್ಳುವುದಕ್ಕೂ ಹಿಂದೆಮುಂದೆ ನೋಡುವಂತಾಯ್ತು. 

ಬ್ಯಾಂಕ್ ಸಿಬ್ಬಂದಿ ಎಡವಟ್ಟಿನಿಂದ ಖಾತೆಗೆ 6,000ರೂ ಬದಲು 6ಲಕ್ಷರೂ ಜಮಾ ಆಯ್ತು ಎನ್ನುವ ಸುದ್ಧಿಯನ್ನು ಓದಿದಾಗ ನನಗಾದರೂ ಆ ಅದೃಷ್ಟ ಖುಲಾಯಿಸಿದ್ದರೆ ಎನಿಸುವ ಬದಲು ಸಧ್ಯ ನಾನು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿಲ್ಲವಲ್ಲ ಎಂದು ಸಾರ್ವಜನಿಕ ಎಡವಟ್ಟಾಂಕಿತದಿಂದ ಪಾರಾದ ಬಗ್ಗೆ ಸಮಾಧಾನದ ನಿಟ್ಟುಸಿರಿಟ್ಟೆ.

ತಾನು ಧರಿಸಿದ ದುಪ್ಪಟ್ಟದಲ್ಲಿದ್ದ ಬೆಲೆಯ ಟ್ಯಾಗ್ ತೆಗೆಯುವುದನ್ನು ಮರೆತುಹೋದ ಎಡವಟ್ಟಿನಿಂದ ಪ್ರಸಿದ್ಧ ನಟಿಯೊಬ್ಬರು ಟ್ರೋಲ್‌ ಆದದ್ದನ್ನು ನೋಡಿದಾಗ ನನಗೆ ಒಮ್ಮೆ ಪರಮ ಎಡವಟ್ಟಳಾದ ನಾನು ಉಲ್ಟಾ ಸೀರೆಯುಟ್ಟು ದಿನವಿಡೀ ಡ್ಯೂಟಿ ಮುಗಿಸಿ ಹಿಂತಿರುಗಲು ಬಸ್‌ ಹತ್ತುವಾಗ ಸೆರಗನ್ನು ಹಿಡಿದ ಕೈಗೆ ಸೀರೆಯ ಫಾಲ್‌ ಸಿಕ್ಕಿ ಕಕ್ಕಾಬಿಕ್ಕಿಯಾದದ್ದು ನೆನಪಾಯ್ತು! 

ʼಎಡವಟ್‌ʼ ಎಂಬ ಶಬ್ದ ಕಿವಿಯ ಮೇಲೆ ಬಿದ್ದಾಕ್ಷಣವೇ ನನ್ನ ಶ್ರವಣೇಂದ್ರಿಯಗಳು ಚುರುಕಾಗುತ್ತಿದ್ದುದರಿಂದ ಎಡವಟ್ಟಾಯಿತು ಫೋನ್ ಡೆಡ್ ಆಯ್ತು ಎನ್ನುವ ನ್ಯೂಸನ್ನು ಕಿವಿಗೊಟ್ಟು ಕೇಳಿದೆ. ಒಂದು ಮಾಡಕ್ ಹೋಗಿ ಮತ್ತೊಂದ್ ಮಾಡಿದ್ರಂತೆ ಎಂಬ ಗಾದೆ ಮಾತಿನಂತೆ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯ ಮೇಲೆ ತೆರೆದುಕೊಂಡಿದ್ದ ಮ್ಯಾನ್ ಹೋಲ್ ಮುಚ್ಚಲು ಹೋಗಿ ಬಿಎಸ್ಎನ್ಎಲ್ ವೈರ್ ಕತ್ತರಿಸಿ ಹಾಕಿದ ಎಡವಟ್ಟಿನಿಂದ ಇಡೀ ಗ್ರಾಮದ ಲ್ಯಾಂಡ್ ಫೋನ್ ಡೆಡ್ ಆಗಿ ಗ್ರಾಮಸ್ಥರು ಪರದಾಡುವಂತಾಗಿದೆ ಎಂಬ ಸುದ್ಧಿಯಿಂದ ಮೊಬೈಲ್‌ ಇನ್ನೂ ಸಕಲರ ಕರಸ್ಥಳದಲ್ಲಿ ಇಂಬುಗೊಳ್ಳದಿದ್ದ ಆ ಕಾಲದಲ್ಲಿ ಲ್ಯಾಡ್‌ ಫೋನ್‌ ಎಷ್ಟೊಂದು ಮುಖ್ಯವಾಗಿತ್ತೆನ್ನುವುದು ಸ್ಮೃತಿಪಟಲದಲ್ಲಿ ಮೂಡಿತು. 

ಚಾರಣ ಹೊರಟು, ಜತೆಗಾರರಿಂದ ತಪ್ಪಿಸಿಕೊಂಡು ಭಯ, ಆತಂಕದಲ್ಲೇ ಮೂರ್ನಾಲ್ಕು ದಿನ ಕಾಡುಮೇಡು ಅಲೆದು ಅದೃಷ್ಟವಶಾತ್ ಬದುಕಿ ಬಂದ ಚಾರಣಿಗ ಕೊಟ್ಟ ಕಾರಣ ಕಾಲಿಗೆ ಹತ್ತಿದ ಜಿಗಣೆ ಕಿತ್ತು ಹಾಕಲು ಒಂದು ಕ್ಷಣ ಬಾಗಿದ ಎಡವಟ್ಟು. ಅಷ್ಟರಲ್ಲೇ ದಟ್ಟ ಮಂಜು ಮುಸುಕಿ  ಮುಂದೆ ಏನೂ ಕಾಣದಂತಾಗಿ, ಜೋರಾಗಿ ಕಿರುಚಿಕೊಂಡರೂ ಧಾರಾಕಾರ ಮಳೆಯ ಸದ್ದು, ಪಕ್ಕದಲ್ಲೆ ಹರಿಯುತ್ತಿದ್ದ ನೀರಿನ ಬೋರ್ಗರೆತದಿಂದ ಕೂಗು ಜತೆಗಾರರಿಗೆ ಕೇಳಿಸದಂತಾಗಿ… ಪ್ರಯೋಜನವಾಗಿರಲಿಲ್ಲ ಎನ್ನುವುದು ಚಾರಣಿಗರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಹೀಗೇ ಎಡವಟ್ಟನ್ನೇ ಅರಸುತ್ತಾ ಎಡವಟ್ಟಾಗಿ ಜೀವನ ಮುನ್ನಡೆಯುತ್ತಿದ್ದಾಗ ನನ್ನ ವೈಯಕ್ತಿಕ ಬದುಕಿನಲ್ಲಿ ಮರಿಎಡವಟ್ಟಾಗಮನದ ಲಕ್ಷಣಗಳು ಕಂಡುಬಂದವು. ಆಗೆಲ್ಲಾ ಖಾಸಗಿ ಆಸ್ಪತ್ರೆಗಳು ಅಷ್ಟೇನೂ ಸುಸಜ್ಜಿತವಾಗಿಲ್ಲದಿರುತ್ತಿದ್ದರಿಂದ ನನಗೆ ಟ್ರೀಟ್‌ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯ ಡಾಕ್ಟರ್‌ ನನ್ನನ್ನು ಜಿಲ್ಲಾಕೇಂದ್ರದ ಸರ್ಕಾರಿ ಆಸ್ಪತ್ರೆಗೆ ರೆಫರ್‌ ಮಾಡಿದರು. ಸಿಝೇರಿಯನ್‌ ಆಗಿ ಮಗು ಹುಟ್ಟಿದ ನಂತರ ನನ್ನ ಜೊತೆಗಿದ್ದ ನಮ್ಮಮ್ಮ ನರ್ಸ್‌ ಮಗುವನ್ನು ಎಲ್ಲಿ ಕರೆದುಕೊಂಡು ಹೋದರೂ ಜೊತೆಯಲ್ಲಿಯೇ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು. ಮಗು ಏನಾದರೂ ಅದಲುಬದಲಾದರೆ ಎನ್ನುವುದೇ ಅವರ ಚಿಂತೆ. ಅಮ್ಮನ ಈ ಓವರ್‌ ಪ್ರೊಟಕ್ಷನ್‌ ಕೇರ್‌ ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ನಂತರದ ದಿನಗಳಲ್ಲಿ ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ಸುದ್ಧಿ ʼಪ್ರತಿಷ್ಠಿತ ಆಸ್ಪತ್ರೆಯೊಂದರ ಸಿಬ್ಬಂದಿ ಎಡವಟ್ಟಿನಿಂದ ಮಗುವನ್ನು ಅದಲು-ಬದಲು ಮಾಡಿದ್ದಾರೆ..ʼ ಎನ್ನುವುದನ್ನು ನೋಡಿ ಗಾಬರಿಬೀಳುವಂತಾಯ್ತು. ಅಮ್ಮಾ…

ಅವಸರದಲ್ಲಿ ಎಡವಟ್ಟು ಕೆಲಸ ಮಾಡುವುದನ್ನು ಅಬಾದುಬಿ ಎನ್ನುತ್ತಾರಂತೆ. ಈ ಪದದ ಮೂಲ ಹಿಂದಿಯ ʼಅಪಾಧಾಪಿʼಯಾಗಿದ್ದು, ಅದರ ಅರ್ಥ ಆಪತ್ತಿನ ಸಮಯದಲ್ಲಿ ದಿಕ್ಕು ತೋಚದೆ ಎತ್ತೆತ್ತೆಲೋ ಓಡಾಟ ಮಾಡುವುದೆಂದು ತಿಳಿದುಬಂದಿತು. ನಾನಿಂಥಾ ಅಬಾದುಬಿಗಳನ್ನು ಎಷ್ಟು ಮಾಡಿದ್ದೇನೆನ್ನುವುದಕ್ಕೆ ಲೆಕ್ಕವೇ ಇಲ್ಲ. ಅಮ್ಮ ಒಮ್ಮೆ ʼಬಚ್ಚಲಿಗೆ ನೀರು ಹುಯ್ಯಿʼ ಎಂದು ಕೊಟ್ಟ ನೀರನ್ನು ಸ್ಕೂಲಿಗೆ ಹೋಗುವ ಆತುರದಲ್ಲಿ ನೇರವಾಗಿ ಹೋಗಿ ಉರೀತಿದ್ದ ಒಲೆಗೇ ಹುಯ್ದಿದ್ದೆ. ಮಳೆಗಾಲದಲ್ಲಿ ಹಸಿಸೌದೆಯನ್ನು ಒಂದು ಸಾರಿ ಹಚ್ಚೋದೇ ಕಷ್ಟ. ನನ್ನ ಅಬಾದುಬಿಯಿಂದ ಅಮ್ಮ ಪಾಡುಪಡುವಂತಾಯ್ತು. 

       ಸೀಮೆಎಣ್ಣೆ ದೀಪದ ಕಾಲವಾಗಿದ್ದ ಅಂದು ನಮ್ಮ ಮನೆಯಲ್ಲಿ ಒಂದು ಕಡೆ ಇಡಲು ಸ್ಟ್ಯಾಂಡ್ ದೀಪ, ಹಿಡಿದುಕೊಂಡು ಓಡಾಡಲು ಲಾಟೀನುಗಳಿದ್ವು. ಅವಕ್ಕೆ ಗಾಜಿನ ಚಿಮಣಿ ಹಾಕ್ತಿದ್ರು. ನಾನು ಆ ದೀಪ ಹಿಡಿದುಕೊಂಡಾಗಲೇ ಚಿಮಣಿ ಬಿದ್ದು ಒಡೆದು ಹೋಗ್ತಿತ್ತು. ಗಾಜಿನ ಸೀಸಗಳನ್ನೂ ಹೀಗೇ ಗತಿಕಾಣಿಸುತ್ತಿದ್ದೆ. ಅದಕ್ಕೇ ನನಗೆ ʼಸೀಸ ಒಡೆದ ಬೂಸಣ್ಣಿʼ ಎಂದೇ ಅಡ್ಡಹೆಸರಿಟ್ಟಿದ್ದರು. ಇದು ಹೀಗೇ ಮುಂದುವರೆದು… ಕಾಲೇಜಿನಲ್ಲಿದ್ದಾಗ ಒಬ್ಬ ಕೆಮಿಸ್ತ್ರಿ ಪ್ರೊಫೆಸರ್ ಕಂಡ್ರೆ ವಿನಾಕಾರಣ ನನಗೆ ತುಂಬಾ ಭಯವಾಗ್ತಿತ್ತು.   ಲ್ಯಾಬ್‌ನಲ್ಲಿ ಟೈಟ್ರೇಷನ್‌ ಎಕ್ಸ್‌ಪೆರಿಮೆಂಟ್ ಮಾಡುವಾಗ ಅವರೇನಾದರೂ  ಬಂದರೆ ಕೈಲಿ ಹಿಡಿದಿದ್ದ ಬ್ಯೂರೆಟ್ಅನ್ನು ಹಾಗೇ ಬಿಟ್ಟು ಫೈನ್‌ ಕಟ್ಟುವಂತಾಗುತ್ತಿತ್ತು. ಒಂದು ಸಾರಿಯಂತೂ ಅವರು ಬಂದದ್ದೇ ಆಸಿಡ್‌ಅನ್ನು ಪಿಪೆಟ್‌ ಮಾಡುತ್ತಿದ್ದವಳು ಹಾಗೇ ಸೊರ್ರನೆ ಹೀರಿಕೊಂಡು ಕುಡಿದು ಅದ್ವಾನವಾಗಿಹೋಗಿತ್ತು. ನನ್ನ ಈ ವೀಕ್ನೆಸ್‌ ಗಮನಿಸಿದ್ದ ನನ್ನ ಬ್ಯಾಚ್ಮೇಟ್ಗಳು   ʼಪ್ರೊಫೆಸರ್ ಬಂದ್ರುʼ ಎಂದು ಹೇಳಿ ನಾನು ಬೆಚ್ಚಿಬೀಳುವುದನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದರು. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ! ಮನೆಯಲ್ಲಿ ಚಿಮಣಿಗಳನ್ನು ಚೂರುಮಾಡುತ್ತಿದ್ದಂತೆ ಆಗಾಗ ಟೆಸ್ಟ್‌ಟ್ಯೂಬ್‌, ಬೀಕರ್,‌ ಫ್ಲಾಸ್ಕ್..‌ ಗಳನ್ನು ಒಡೆದು  ಫೈನ್‌ ಕಟ್ಟುವುದು ಸರ್ವೇಸಾಮಾನ್ಯವಾಗಿಹೋಗಿತ್ತು. ಸಧ್ಯ ಅಲ್ಲಿ ಯಾರೂ ನನ್ನನ್ನು ʼಬೂಸಣ್ಣಿʼಎಂದು ಕರೆಯುವವರು ಇರಲಿಲ್ಲ! 

ಈ ಸಾಮಾನ್ಯ ಎಡವಟ್ಟುಗಳ ನಡುವೆ ಕೆಲವು ಮಹಾ ಎಡವಟ್ಟುಗಳೂ ಪದೇಪದೇ ಗಮನ ಸೆಳೆಯುತ್ತಿರುತ್ತವೆ!

ವಿದೇಶೀ ಧ್ವಜ ಇರುವ ರಾಕೆಟ್‌ ಬಳಸಿ ಜಾಹೀರಾತನ್ನು ನೀಡಿ ಪಜೀತಿ ಮಾಡಿಕೊಂಡದ್ದು, ಸುಳ್ಳು ಮಾಹಿತಿಗಳನ್ನೇ ನೀಡಿ ಪ್ರಪಂಚದೆಲ್ಲೆಡೆ ಕೊರೊನಾ ವೈರಸ್ ಹರಡಲು ಕಾರಣವಾಗಿದ್ದು, ಚಲನ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್ ಗಳ ಅಡಾವುಡಿ….. ಕೆಲವು ಮಹಾ ಎಡವಟ್ಟುಗಳ ಝಲಕ್‌ಗಳಷ್ಟೆ! ಹಾಗಾದರೆ ನಾನಷ್ಟೇ ಅಲ್ಲ, ಮಹಾನ್‌ ಎನಿಸಿಕೊಂಡವುಗಳಿಂದಲೂ ಮಹಾ ಎಡವಟ್ಟುಗಳೇ ನಡೆಯುತ್ತದೆನ್ನುವುದೇ ಸಮಾಧಾನದ ಸಂಗತಿ.

  ಮೊದಲೆಲ್ಲಾ ಪದೇಪದೇ ಎಡವಟ್ಟ ಎನಿಸಿಕೊಂಡು, ನಂತರ ಎಲ್ಲೆಲ್ಲಿಯೂ ಎಡವಟ್‌ ಸಮಾಚಾರಗಳನ್ನು ನೋಡಿ-ಕೇಳಿ ಕೆಟ್ಟಿದ್ದ ತಲೆಗೆ  ʼಜಾಕಿʼ ಚಿತ್ರದ ʼಎಡವಟ್‌ʼ ಹಾಡನ್ನು ಅಷ್ಟದಿಕ್ಕುಗಳಿಂದಲೂ ಕೇಳಿಕೇಳಿ, ಕೇಳಿದ್ದೆಲ್ಲವೂ ಎಡವಟ್ಟಾಗಿ ಕಡೆಗೆ ಮುಳ್ಳಿನಿಂದಲೇ ಮುಳ್ಳನ್ನು ತೆಗೆಯುವಂತೆ ಎಡವಟ್ಟೇ ತಲೆಯಿಂದ ಎರೇಸ್‌ ಆಗಲು ಸಹಕಾರಿಯಾಯ್ತು. ಇನ್ನು ಈ ಎಡವಟ್‌ ಸಹವಾಸವೇ ಬೇಡ ಎಂದುಕೊಳ್ಳುವಾಗಲೇ ನಮ್ಮ ತಂದೆ ಸದಾ ನನಗೆ ಹೇಳುತ್ತಿದ್ದ ʼಯಾಕಮ್ಮ ಇಷ್ಟೊಂದು ಆಭಾಸ ಮಾಡ್ತೀಯʼ ಎನ್ನುವ ಮಾತು ಕೊರೆಯಲಾರಂಭಿಸಿ ಆಭಾಸದ ಆನ್ವೇಷಣೆಯಲ್ಲಿ ತೊಡಗಿದೆ. ʼಆಭಾಸʼ ಎಂದರೆ ಅಧ್ವಾನ, ಗೊಂದಲ, ನಗೆಪಾಟಲು, ಪ್ರಮಾದ, ತಪ್ಪು ತಿಳುವಳಿಕೆ, ಎಡವಟ್ಟು.. ಓಹೋ ಮತ್ತೆ ಎಡವಟ್ಟು! ಎಡವಟ್ಟಿನ ಅರ್ಥವ್ಯಾಪ್ತಿಯಲ್ಲಿ ʼಆಭಾಸʼವಿರಲಿಲ್ಲ. ಆಭಾಸದಲ್ಲಿ ಎಡವಟ್ಟೂ ಸೇರಿದೆಯೆಂದರೆ… ನಮ್ಮ ತಂದೆಯೂ ನನ್ನನ್ನು ಸುಸಂಸ್ಕೃತವಾಗಿ ಎಡವಟ್ಟ ಅಂತಲೇ ಕರೆಯುತ್ತಿದ್ದರ? 

ನಮ್ಮ ಕನ್ನಡ ಭಾಷೆಯ ಉಚ್ಛಾರ, ಬರವಣಿಗೆ ಹಾಗೂ ಇತ್ತೀಚಿನ ಗೂಗಲ್‌ ಟ್ರಾನ್ಸ್ಲೇಷನ್‌ನಲ್ಲಿನ ಅಕ್ಷರ/ಪದಗಳ ಪ್ರಯೋಗ, ಸಾರ್ವಜನಿಕ ಕ್ಷೇತ್ರದಲ್ಲಿನ ಘಟನಾವಳಿಗಳು ಎಲ್ಲೆಡೆಯಲ್ಲೂ ನಡೆಯುತ್ತಿರುವ ಈ ಆಭಾಸಕ್ಕೆ ಕೊನೆಮೊದಲೇ ಇಲ್ಲ. ಈಗೀಗ ಎಡವಟ್ಟಿನಿಂದ ಹೇಗೋ ಪಾರಾಗಿದ್ದಾಗಿದೆ. ಸಧ್ಯದಲ್ಲಿ ವಿಶ್ರಮಿಸಿ ನಂತರ ನನ್ನ ಹಾಗೂ ನನ್ನಂಥಾ ಆಭಾಸಿಗಳ ಬಗ್ಗೆ ಹೇಳಹೊರಟರೆ ಆಭಾಸವಾಗುವುದಿಲ್ಲ ತಾನೆ! 

                      

  ~ಪ್ರಭಾಮಣಿ ನಾಗರಾಜ