Wednesday, November 30, 2011

ಜಳ್ಳು

ಎ೦ದೋ ಥಟ್ಟನೆ

ಹೊಳೆದು

ತಲೆಯಲ್ಲೇ

ಮೊರೆದು

ಮೆರೆದು

ಅಳಿದು ಹೋಗುವ

ಭಾವಗಳಿಗೆ

ಭಾಷೆಯೇ ಇಲ್ಲ

ದಟ್ಟ ಕತ್ತಲಿನ

ನಟ್ಟ ನಡುರಾತ್ರಿಯಲಿ

ಕನಸುಗಳೊಳಗಿನ

ಕನಸಾಗಿ

ರೂಪುಗೊಳ್ಳುತ್ತಾ...

ಕೈಗೆಟುಕದೆ

ಕಣ್ಣಾ ಮುಚ್ಚಾಲೆಯಾಡಿ

ಇರುಳಿನಲ್ಲೇ

ಲಯವಾಗುವ

ಭಾವನೆಗಳಿಗೆ

ಬಣ್ಣಗಳಿಲ್ಲ

ಹೊ೦ದೇ ತೀರುವೆನೆ೦ಬ

ಛಲದಲ್ಲಿ

ಶಿರವನ್ನೆಲ್ಲಾ

ಜಾಲಾಡಿ ಹೆಕ್ಕಿ

ಆತುರಾತುರದಲ್ಲಿ ಕಕ್ಕಿ

ಬಿಡುವ

ಅಕ್ಷರ ಸಮೂಹಗಳೇಕೋ

ಸ್ಪಷ್ಟವೆನಿಸುವುದಿಲ್ಲ

ಅಲ್ಲೇ ಮಸ್ತಕದಲ್ಲೇ ಮಥಿಸಿ

ಮರೆಯಾದುವುಗಳೇ

ಗಟ್ಟಿಕಾಳು

ಪುಸ್ತಕಕ್ಕಿಳಿದಿರುವ

ಅಪಕ್ವಗಳೆಲ್ಲಾ

ಜಳ್ಳು!

Saturday, November 26, 2011

ಮನದ ಅಂಗಳದಿ.........೬೮. ಅನುವಾದ


ಯಾವುದೇ ಭಾಷೆಯ ಸಾಹಿತ್ಯವು ಶ್ರೀಮಂತಗೊಳ್ಳಲು ಅದು ಇತರ ಭಾಷೆಗಳಲ್ಲಿ ಉತ್ಕ್ರುಷ್ಟವೆನಿಸಿರುವ ಕೃತಿಗಳನ್ನು ತನ್ನದಾಗಿಸಿಕೊಳ್ಳುವ ಹಾಗೂ ತನ್ನಲ್ಲಿರುವ ಅಮೂಲ್ಯ ರಚನೆಗಳನ್ನು ಬೇರೆ ಭಾಷೆಗಳಿಗೆ ತಮ್ಮದಾಗಿಸಿಕೊಳ್ಳಲು ಅನುವು ಮಾಡಿಕೊಡುವ ಉದಾತ್ತ ಗುಣವನ್ನು ಹೊಂದಿರಬೇಕು. ತಮಗೆ ಆಪ್ತವೆನಿಸಿದ ಬರಹಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಮರ್ಥವಾಗಿ ಭಾಷಾಂತರಿಸುವ ಹಾಗೂ ಆ ಮೂಲಕ ಭಾಷೆಯನ್ನು ಸಮೃದ್ಧಗೊಳಿಸುವ ಅನುವಾದಕರು ನಿಜಕ್ಕೂ ವಂದನಾರ್ಹರು.

ನಾನು ಎರಡನೇ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದಾಗ ಆರ್. ಕೆ. ನಾರಾಯಣ್ ಅವರ ‘ದ ಗೈಡ್’ ಪಠ್ಯವಾಗಿತ್ತು. ಅದನ್ನು ಓದುವಾಗಲೆಲ್ಲಾ, ನಂತರದ ಕೆಲವು ವರ್ಷಗಳಲ್ಲೂ ಅದನ್ನು ಕನ್ನಡಕ್ಕೆ ಅನುವಾದಿಸಬೇಕೆಂಬ ಹಂಬಲ ತೀವ್ರವಾಗಿತ್ತು. ಅದನ್ನು ಈಗಾಗಲೇ ಅನುವಾದಿಸಿದ್ದರೋ, ಇಲ್ಲವೋ ಎನ್ನುವ ಬಗ್ಗೆ ತಿಳಿದುಕೊಳ್ಳದೇ ಅನುವಾದಿಸಿದರೆ ಹೇಗಿರುತ್ತದೆ ಎನ್ನುವ ಕಲ್ಪನೆಯಲ್ಲೇ ತೊಡಗಿರುತ್ತಿದ್ದೆ!

ಪ್ರಸಿದ್ಧ ಇಂಗ್ಲಿಷ್ ಕವಿಗಳ ಕವನಗಳನ್ನು ಕನ್ನಡದಲ್ಲಿ ಇಂಗ್ಲಿಷ್ ಗೀತಗಳುಆಗಿ ಅನುವಾದಿಸಿದ ಬಿ.ಎಂ.ಶ್ರೀಕಂಠಯ್ಯನವರು(ಬಿ.ಎಂ.ಶ್ರೀ) ಕವನ ರಚನೆಗೆ ಒಂದು ಹೊಸ ಮಾರ್ಗವನ್ನೇ ಹಾಕಿಕೊಟ್ಟರು. ಅವರ ಬಗ್ಗೆ ಹಾಗೂ ಆ ಕೃತಿಯು ಮಾಡಿದ ಪ್ರಭಾವದ ಬಗ್ಗೆ, ಲಲಿತ ಪ್ರಬಂಧಗಳ ಪ್ರಕಾರಕ್ಕೊಂದು ಗೌರವವನ್ನು ತಂದುಕೊಟ್ಟಿರುವ ಡಾ. ಎ.ಎನ್. ಮೂರ್ತಿರಾಯರು ಬಿ.ಎಮ್.ಶ್ರೀ.ಎಂಬ ಪ್ರಬಂಧದಲ್ಲಿ ಈ ರೀತಿ ಬರೆದಿದ್ದಾರೆ,

ಶ್ರೀಕಂಠಯ್ಯನವರು ಮಾಡಿದ ಎಲ್ಲ ಕೆಲಸಗಳಿಗಿಂತಲೂ ಮುಖ್ಯವಾದವು ಇವು: ಅವರು ಛಂದಸ್ಸಿನಲ್ಲಿ ಸ್ವತಂತ್ರ ಮಾರ್ಗವನ್ನು ಅನುಸರಿಸಿದರು. ನಮಗೆ ಹೊಸ ಮಾದರಿಗಳನ್ನು ತೋರಿಸಿಕೊಟ್ಟರು. ಸರಳವಾದ ಭಾಷೆ ಕಾವ್ಯಕ್ಕೆ ಉತ್ತಮ ಎಂಬುದನ್ನು, ತಿಳಿಯಾದ ಅಚ್ಚ ಹೊಸಕನ್ನಡದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಬರೆಯಬಹುದು ಎಂಬುದನ್ನು ತೋರಿಸಿಕೊಟ್ಟರು. ಇದಕ್ಕಿಂತಲೂ ಹೆಚ್ಚಿನ ಉಪಕಾರವೆಂದರೆ: ನಮ್ಮ ಸ್ವಂತ ಅನುಭವ, ನಾವು ಕಣ್ಣಲ್ಲಿ ಕಂಡದ್ದು, ಕಿವಿಯಲ್ಲಿ ಕೇಳಿದ್ದು, ಮನಸ್ಸಿನಲ್ಲಿ ಸಂಕಟಪಟ್ಟಿದ್ದು ಅಥವಾ ಸಂತೋಷಪಟ್ಟದ್ದು-ಇವೆಲ್ಲಾ ಕಾವ್ಯಕ್ಕೆ ವಿಷಯವಾಗಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದು ಅವರಿಂದಲೇ ಇರಬೇಕು-ಯಾವತ್ತು ಅವರ ಇಂಗ್ಲಿಷ್ ಗೀತಗಳುಎಂಬ ಪುಸ್ತಕ ಪ್ರಕಟವಾಯಿತೋ, ಹೆಚ್ಚುಕಡಿಮೆ ಅದರ ಮಾರನೆಯ ದಿನದಿಂದಲೇ ಕನ್ನಡ ನಾಡಿನ ಎಲ್ಲ ಕಡೆಗಳಿಂದಲೂ ಹಾಡು ಕೇಳಿಬರುವಂತಾಯಿತು. (ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು.......) ಎಲ್ಲರ ಮನಸ್ಸಿನಲ್ಲಿಯೂ ಹಿಂದಿನ ಕಾವ್ಯಗಳ ಬಗ್ಗೆ ಸ್ವಲ್ಪ ಅತೃಪ್ತಿಯಿತ್ತು ಅಂತ ಕಾಣುತ್ತೆ. ಹೊಗೆಯಾಡುತ್ತಿತ್ತು ಆ ಅತೃಪ್ತಿ. ಅದಕ್ಕೆ ಬಿ.ಎಂ.ಶ್ರೀಯವರು ಒಂದು ಜ್ಯೋತಿ ಸ್ಪರ್ಷಮಾಡಿದರು......ಎಲ್ಲ ಕಡೆಯಲ್ಲೂ ಬೆಳಕು ಹರಡಿಕೊಂಡಿತು. ಈ ಉಪಕಾರ ಅಷ್ಟಿಷ್ಟು ಅಂತ ಹೇಳಲಾಗುವುದಿಲ್ಲ......

ನಮ್ಮ ವಿಶ್ವವಿದ್ಯಾನಿಲಯದ ಒಳಗೂ ಹೊರಗೂ ಜನ ಏನಾದರೂ ಬರೆಯುವುದಕ್ಕೆ ಶುರು ಮಾಡಿದರೆಂದರೆ-ಶ್ರೀಕಂಠಯ್ಯನವರು ಇಂಗ್ಲಿಷ್ ಗೀತಗಳುಎನ್ನುವ ಪುಸ್ತಕ ಪ್ರಕಟಿಸಿದ ಮೇಲೆ.........

ಎಸ್. ದಿವಾಕರ್ ರವರು ತಾವು ಓದಿ ಮೆಚ್ಚಿಕೊಂಡ ಹಲವು ದೇಶಗಳ, ಹಲವು ಭಾಷೆಗಳ ಕತೆಗಳಲ್ಲಿ ಕೆಲವನ್ನು ಅನುವಾದಿಸಿ ಜಗತ್ತಿನ ಅತಿ ಸಣ್ಣಕತೆಗಳುಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಪ್ರಸ್ತಾವನೆಯಲ್ಲಿ ಅತಿ ಸಣ್ಣ ಕಥೆಯ ಉಗಮ, ರೂಪುರೇಶೆಗಳು, ಅದರ ವಿಶಿಷ್ಟ ನಿರೂಪಣಾ ಶಕ್ತಿ ಇವುಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ನಮ್ಮ ಪಂಚತಂತ್ರ’, ‘ಕಥಾ ಸರಿತ್ಸಾಗರಗಳಲ್ಲಿಯೂ ತೀರ ಸಣ್ಣವೆನಿಸುವ ಕಥೆಗಳಿದ್ದು ಅವೂ ಸಂಸ್ಕೃತದಿಂದ ವಿವಿಧ ಭಾಷೆಗಳಿಗೆ ಅನುವಾದಗೊಂಡ ನಂತರವೇ ಎಲ್ಲರಿಗೂ ಲಭಿಸುವಂತಾದವು. ಪಾಶ್ಚಾತ್ಯ ಸಾಹಿತ್ಯದಲ್ಲಿ ಎದ್ದು ಕಾಣುವ ಈಸೋಪನ ನೀತಿ ಕಥೆಗಳು, ಝೆನ್ ಕಥೆಗಳು, ಮುಲ್ಲಾ ನಸಿರುದ್ದೀನನ ಕಥೆಗಳು ಕೂಡ ಈಗ ಜನಜನಿತವಾಗಿವೆ. ನೀತಿ ಬೋಧನೆಗೆ ಸೀಮಿತವಾಗಿರುವ ಈ ಕಥೆಗಳನ್ನು ಇವತ್ತಿನ ದೃಷ್ಟಿಯಲ್ಲಿ ಅತಿ ಸಣ್ಣಕಥೆಗಳೆನಿಸುವುದಿಲ್ಲ, ಸಾಹಿತ್ಯ ಕ್ಷೇತ್ರದ ದೃಷ್ಟಾಂತ ಕಥೆಗಳು ಎನ್ನುತ್ತಾರೆ. ಏನೇ ಆದರೂ ಇವೆಲ್ಲಾ ಮಕ್ಕಳ ಎಳೆ ಮನಸ್ಸನ್ನು ಆಕರ್ಷಿಸುತ್ತಿವೆ ಹಾಗೂ ಹಿರಿಯರೆನಿಸಿಕೊಂಡವರನ್ನು ಚಿಂತನೆಗೆ ಹಚ್ಚುವಂತಿವೆ.

ರವೀಂದ್ರನಾಥ ಟಾಗೋರರ `stray birds’ ಎಂಬ ಮುಕ್ತಕಗಳ ಕಿರು ಸಂಗ್ರಹವನ್ನು ವಿ. ಶ್ರೀನಿವಾಸ್ ರವರು ದಾರಿ ತಪ್ಪಿ ಬಂದ ಹಕ್ಕಿಗಳುಎಂದು ಇಡಿಯಾಗಿ ಕನ್ನಡಕ್ಕೆ ಭಾವಾನುವಾದಮಾಡಿದ್ದಾರೆ.

ಎತ್ತರವಾಗಿದೆ ಎಂಬ ಕಾರಣಕ್ಕಾಗಿ ನಿನ್ನ

ಪ್ರೇಮವನ್ನು ಕಡಿದಾದ ಬಂಡೆಗಲ್ಲಿನ ಮೇಲೆ ಕೂರಿಸಬೇಡ.

ನಾನು ಅತ್ಯುತ್ತಮವಾದುದನ್ನು ಆರಿಸಿಕೊಳ್ಳಲಾರೆ,

ಅತ್ಯುತ್ತಮವಾದದ್ದೇ ನನ್ನನ್ನು ಆರಿಸಿಕೊಳ್ಳುತ್ತದೆ.

ರವೀಂದ್ರನಾಥ ಟಾಗೋರರ ಗೀತಾಂಜಲಿಯ ಹಾಗೂ ಇತರ ಕೃತಿಗಳ ಅನುವಾದವೂ ನಮಗೆ ಅವರ ಅಗಾಧತೆಯನ್ನು ಪರಿಚಯಿಸುತ್ತವೆ. ಅನುವಾದದಿಂದ ಸಂವಹಿಸಿದ ಸಾಹಿತ್ಯರಾಶಿಯು ಅಪಾರವಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿಯೂ ಅನುವಾದದಿಂದ ಮಹತ್ತರವಾದ ಅನುಕೂಲಗಳನ್ನು ಪಡೆಯುತ್ತಿದ್ದೇವೆ. ನಮ್ಮ ಪ್ರಾಚೀನ ಭಾರತದ ಋಷಿಮುನಿಗಳು ಕಂಡ ಸತ್ಯ, ಅವರಿಂದ ಮೌಖಿಕವಾಗಿ ಹರಿದುಬಂದದ್ದು, ಓಲೆಗರಿಗಳಲ್ಲಿ ದಾಖಲಾದದ್ದು ಈಗ ಪ್ರಪಂಚದ ಮೂಲೆಮೂಲೆಗಳಲ್ಲಿಯೂ ಆಸಕ್ತರನ್ನು ತಲುಪಿದೆ ಹಾಗೂ ಜೀವಂತವಾಗಿದ್ದು ಮುಂದಿನ ಪೀಳಿಗೆಗೂ ತಲುಪಲು ಸಶಕ್ತವಾಗಿದೆ.

ಒಳಿತು ಎಲ್ಲೇ ಇದ್ದರೂ ಅದನ್ನು ನಮ್ಮದಾಗಿಸಿಕೊಳ್ಳೋಣ. ನಮ್ಮಲ್ಲಿರಬಹುದಾದ ಒಳಿತನ್ನು ಇತರರಿಗೂ ಹಂಚಿ ನಮ್ಮನ್ನು ನಾವು ಸಮೃದ್ಧಗೊಳಿಸಿಕೊಳ್ಳುತ್ತಾ ಸಾಗಿದರೆ ಹಸನಾಗುವುದು ಬದುಕು.

Sunday, November 20, 2011

ಮನದ ಅಂಗಳದಿ.........೬೭.ಯೇಗ್ದಾಗ್‘ಏನೆಲ್ಲಾ...!’ಐತೆ

ನಮ್ಮ ಕನ್ನಡ ಸಾಹಿತ್ಯ ಸಂಪತ್ತನ್ನು ಅಕ್ಷರ ಕಲಿತವರು ಮಾತ್ರ ಸಮೃದ್ಧಗೊಳಿಸಿದ್ದಾರೆ ಎಂದುಕೊಳ್ಳುವಂತಿಲ್ಲ. ಓದುಬರಹವನ್ನು ಅರಿಯದ ಜಾನಪದರು ನೀಡಿದ ಕೊಡುಗೆಯೂ ಅಪಾರ. ಅವರು ಹಾಡಿದ ಪದಗಳು, ಆಡಿದ ಮೌಲ್ಯಯುತ ಮಾತುಗಳನ್ನು ಅಕ್ಷರರೂಪಕ್ಕಿಳಿಸಿ ದಾಖಲಿಸಿದವರೂ ಅಭಿನಂದನಾರ್ಹರು. ಹಾಗೆಯೇ ನಿರಕ್ಷರಕುಕ್ಷಿಗಳೆಂದು ಲೋಕದ ದೃಷ್ಟಿಯಲ್ಲಿ ಕಂಡುಬಂದರೂ ಸ್ವಯಂ ಯೋಗಸಿದ್ಧಿಯನ್ನು ಹೊಂದಿದ್ದಂತಹ ಮಹಾನ್ ಚೇತನಗಳೂ ಈ ಭುವಿಯನ್ನು ಬೆಳಗಿದ್ದಾರೆ. ಅಂಥವರಲ್ಲಿ ಒಬ್ಬರಾದ ಮುಕುಂದೂರು ಸ್ವಾಮಿಗಳ ಬಗ್ಗೆ ಬೆಳಗೆರೆ ಕೃಷ್ಣಶಾಸ್ತ್ರಿಯವರು ಬರೆದ, ‘ಯೇಗ್ದಾಗೆಲ್ಲಾ ಐತೆಎನ್ನುವ ಪುಸ್ತಕದ ಬಗ್ಗೆ ಅಲ್ಲಲ್ಲಿ ಅಲ್ಪಸ್ವಲ್ಪ ಓದಿದ ನಂತರ ಆ ಪುಸ್ತಕವನ್ನು ಪೂರ್ತಿಯಾಗಿ ಓದುವ ಅಭಿಲಾಶೆಯುಂಟಾಯಿತು. ಇದನ್ನು ಅರಿತ ಮಗಳು ಇತ್ತೀಚೆಗೆ ಪುಸ್ತಕವನ್ನು ತಂದುಕೊಟ್ಟಳು. ಬೆಂಗಳೂರಿಗೆ ವೃತ್ತಿಗೆ ಸಂಬಂಧಿಸಿದ ಒಂದು ಸಭೆಯಲ್ಲಿ ಭಾಗವಹಿಸಲು ಹೋಗಬೇಕಾಗಿದ್ದುದರಿಂದ ಬಸ್ಸಿನಲ್ಲಿ ಓದಲು ಇಟ್ಟುಕೊಂಡೆ. ಅದನ್ನು ಓದುತ್ತಾ ಸಾಗಿದಂತೆ ಹೇಗೆ ಆವರಿಸಿಕೊಂಡಿತೆಂದರೆ ನನ್ನನ್ನೇ ಮರೆತು ಲೀನವಾದೆ! ಲೇಖಕರೇ ಹೇಳುವಂತೆ ಅವರ ಲೋಕಾನುಭವ, ಆಧ್ಯಾತ್ಮಿಕ ದೃಷ್ಟಿ, ಅವರದೇ ರೀತಿಯ ವಿಚಾರ, ನಿರೂಪಣಾ ವಿಧಾನ, ಸದಾ ನಕ್ಕುನಗಿಸುವ ಸಹಜ ಆನಂದ, ಎಲ್ಲದರಲ್ಲೂ ಅವರದು ವಿಚಿತ್ರ ರೀತಿ.

ಯಾವುದೇ ಕಾಲದಲ್ಲಿಯೂ ಒಬ್ಬ ಅವಧೂತ ಈ ಭೂಮಿಯ ಮೇಲೆ ಉದಯಿಸಿದಾಗಲೆಲ್ಲಾ ಆತನನ್ನು ಖಂಡಿಸುವ, ಅವಹೇಳನ ಮಾಡುವ, ಅವಮಾನಿಸುವ ಒಂದು ಗುಂಪು ಸದಾ ಕಾರ್ಯತತ್ಪರವಾಗಿದ್ದುದನ್ನು ಚರಿತ್ರೆಯು ಸಾರುತ್ತಲೇ ಬಂದಿದೆ. ಅಂಥಾ ಸಂದರ್ಭಗಳಲ್ಲಿ ಕಬ್ಬನ್ನು ಹಿಂಡಿದಾಗ ಸಿಹಿಯಾದ ರಸವು ಬರುವಂತೆ ಅವರು ತಮ್ಮ ವಿಶೇಷ ಜ್ಞಾನ ಸಂಪತ್ತನ್ನು ಹೊರಹೊಮ್ಮಿಸಿ ಜಗದ್ವಂದ್ಯರಾಗಿದ್ದಾರೆ. ಮುಕುಂದೂರು ಸ್ವಾಮಿಗಳನ್ನು ದೇವನೂರಿನ ಕನ್ನಡ ಸಂಘದವರು ಗೀತಾ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಅವಮಾನಿಸಲು ಪ್ರಯತ್ನಿಸಿದ ಸನ್ನಿವೇಶವೊಂದು ಈ ರೀತಿ ಇದೆ:

ಏನಾದರೂ ಒಂದು ಸಮಯ ನೋಡಿ ಈ ಸನ್ಯಾಸಿಗೆ ಚೆನ್ನಾಗಿ ಅವಮಾನ ಮಾಡಿ, ಈ ಶಾಸ್ತ್ರಿ ಮೇಷ್ಟ್ರಿಗೆ ಛೀಮಾರಿಹಾಕಿ ಬುದ್ಧಿ ಕಲಿಸಬೇಕು....ಎಂದು ದೇವನೂರಿನ ಜನ ಮಾತನಾಡಿಕೊಳ್ಳುತ್ತಿದ್ದುದನ್ನು ಲೇಖಕರು ಆಕಸ್ಮಿಕವಾಗಿ ಕೇಳಿಸಿಕೊಂಡು ದೇವನೂರಿಗೆ ಇನ್ನೆಂದೂ ಸ್ವಾಮಿಗಳನ್ನು ಕರೆತರಬಾರದು ಎಂದು ನಿಶ್ಚಯಿಸಿರುತ್ತಾರೆ. ಆದರೆ ಅವರ ಇಚ್ಛೆಗೆ ಹಾಗೂ ತಡೆಯುವ ಪ್ರಯತ್ನಕ್ಕೆ ವಿರುದ್ಧವಾಗಿ sಸ್ವಾಮಿಯವರೇ ಗೀತೋಪನ್ಯಾಸ ನೀಡುವಂತೆ ಸಂಚು ರೂಪಿಸುತ್ತಾರೆ! ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದು, ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಲೇಖಕರಿಗೆ ಇಕ್ಕಟ್ಟಾಗುತ್ತದೆ. ಅವರೇ ಹೇಳುವಂತೆ:

ಒಬ್ಬರು ನನ್ನಲ್ಲಿಗೆ ಬಂದು, ’ಸ್ವಾಮಿಗಳಿಗೆ ಅರ್ಥವೇ ಆಗಲಿಲ್ಲವೆಂದು ತೋರುತ್ತದೆ. ಉಪನ್ಯಾಸ ಮಾಡಬೇಕೆಂದು ನೀವೇ ಹೇಳಿ,’ ಎಂದು ನಕ್ಕಾಗ ನನ್ನ ಬೆನ್ನಿಗೆ ಬರೆ ಹಾಕಿದಂತಾಯ್ತು. ಗತ್ಯಂತರವಿಲ್ಲದೇ ಸ್ವಾಮಿಗಳನ್ನು ಸಮೀಪಿಸಿ, ‘ನೀವೇ ಮಾತನಾಡಬೇಕಂತೆ,’ ಎಂದೆ.

ನೀನೊಳ್ಳೆ ಮೇಷ್ಟ್ರಾದೆ. ಏನೂ ಹೇಳಿಕೊಡದೇನೇ ಈಗಲೇ ಪಾಠ ಒಪ್ಪಿಸು ಅಂದ್ರೆ ಯೆಂಗೆ?’ ಎನ್ನುತ್ತಿದ್ದಂತೆಯೇ ಜನ ಗೊಳ್ಳೆಂದು ನಕ್ಕರು. ನನಗೋ ಹೊಟ್ಟೆಯಲ್ಲಿ ಬಾಕು ಹಾಕಿದಂತೆ.

ಹೂಂ...ಇದಕ್ಕೇ ಮತ್ತೆ ಹುಡುಗ್ರು ಸ್ಕೂಲ್ ಗೆ ಹೋಗು ಅಂದ್ರೆ ಅಳ್ತಾವೆ!

ಸಭಿಕರೆಲ್ಲಾ ಮತ್ತೆಮತ್ತೆ ನಕ್ಕರು. ನನಗೆ ತಲೆ ಸುತ್ತಿದಂತಾಯ್ತು.

ಈಗೇನ್ಮಾಡ್ಬೇಕು ಹೇಳಪ್ಪ, ನೀನೊಳ್ಳೇನಾದೆ,’ ನಕ್ಕರು.

ನೀವು ಗೀತೋಪನ್ಯಾಸ ಮಾಡ್ಬೇಕಂತೆ,’ ಎಂದೆ ಹೆಡ್ಡನೊಬ್ಬನಿಗೆ ಹೇಳುವಂತೆ.

ಹಂಗಂದ್ರೇನು ಒಂದಿಷ್ಟು ಹೇಳಿಕೊಡೋ ಮಾರಾಯ! ನೀನು ಒಳ್ಳೇ ಮೇಷ್ಟ್ರಾದೆಲ್ಲಾ,’ ನಗುತ್ತಾ ನುಡಿದರು. ಗತ್ಯಂತರವಿಲ್ಲದೇ ಹೀಗೆ ಹೇಳಿದೆ: ಮಹಾಭಾರತದಲ್ಲಿ ಪಾಂಡವರು, ಕೌರವರು ಯುದ್ಧ ಮಾಡಿದರು.......... ಅರ್ಜುನ ತನ್ನ ತಾತ, ಗುರುಗಳು, ಸ್ನೇಹಿತರು ಸಂಬಂಧಿಕರ ವಿರುದ್ಧ ಯುದ್ಧ ಮಾಡುವುದಿಲ್ಲ ಎಂದು ಯುದ್ಧಭೂಮಿಯಲ್ಲಿ ದುಃಖಿಸಿದಾಗ ಕೃಷ್ಣ ಏನೇನು ಹೇಳಿದ, ಅರ್ಜುನ ಹೇಗೆ ಯುದ್ಧಕ್ಕೆ ಒಪ್ಪಿಕೊಂಡಎಂಬ ವಿಚಾರವನ್ನೇ ಭಗವದ್ಗೀತೆ ಅಂತಾರೆ. ಆ ವಿಚಾರವನ್ನೇ ನೀವೀಗ ಈ ಸಭೆಗೆ ತಿಳಿಸಬೇಕಂತೆಎಂದೆ ಬೇಸರದಿಂದ. ಬಲೆ ಒಡ್ಡಿದವರೆಲ್ಲಾ ಜಯಶಾಲಿಗಳಾಗಿದ್ದರು. ನನಗೋ ಸಹಿಸಲಾರದ ತಳಮಳ.

ಓಹೋ! ಅದೇನಪ್ಪಾ! ಭಾರೀ ದೊಡ್ಡ ವಿಚಾರ! ಹೇಳಿದೋನು ಶ್ರೀಕೃಷ್ಣ-ಕೇಳಿದವನು ಅರ್ಜುನ. ಅದೇನ್ ಪುಗಸಟ್ಟೆ ಮಾತೇ!ಜನರ ನಗುವಿನ ನಡುವೆ ತಾವು ಕುಳಿತ ತೋಳಿನ ಕುರ್ಚಿಯನ್ನು ತೋರಿಸಿ, ‘ಇವನೇಕೋ ಒಂದೀಟು ಕಿರಿಕಿರಿ ಮಾಡ್ತಾನಪ್ಪಾ. ಇವ್ನು ಬ್ಯಾಡ. (ಮೇಜಿನ ಮೇಲೆ ಕೈಯಾಡಿಸಿ) ಇವ್ನೊಳ್ಳೆ ಆರಾಮಾಗಿದಾನೆ. ಇವ್ನ ಮೇಲೆ ಕುಂತ್ಕೋಬಹುದೋ,’ ಎಂದು ಅಧ್ಯಕ್ಷರ ಅನುಮತಿ ಪಡೆದು ಅದರ ಮೇಲೆ ಪದ್ಮಾಸನದಲ್ಲಿ ಕುಳಿತು ತಮ್ಮ ಬಟ್ಟೆಗಳನ್ನು ಸರಿಪಡಿಸಿಕೊಳ್ಳುತ್ತಾ ತಮಗೆ ತಾವೇ, ‘ಎಲೇ, ಇದು ಇಸ್ಕೋಲು, ಸರಿಯಾಗಿ ಪಾಠ ಒಪ್ಸು, ತಪ್ಪಿದರೆ ಛಡಿ ಏಟು ಬೀಳ್ತಾವೆ,’ ಎಂದಾಗ ಜನ ಬಿದ್ದು ಬಿದ್ದು ನಕ್ಕರು.

ಸ್ವಾಮಿಗಳು ನಿಜಗುಣರ ಒಂದು ಹಾಡನ್ನು ತಾಳ, ಲಯಬದ್ಧವಾಗಿ, ಅರ್ಥಪೂರ್ಣವಾಗಿ ಅಂಗನ್ಯಾಸ, ಕರನ್ಯಾಸಗಳೊಂದಿಗೆಹಾಡಿದರು. ಅವರು ಹಾಗೆ ಶರೀರದ ಭಾಗಗಳನ್ನು ಮುಟ್ಟಿ ತೋರಿಸಿ ಹಾಡುತ್ತಿದ್ದರೆ ಮತ್ತೆ ಯಾವ ವಿವರಣೆಯೂ ಬೇಕಾಗಿರಲಿಲ್ಲ. ಆದರೂ ಅದರ ವಾಕ್ಯಾರ್ಥ, ಭಾವಾರ್ಥ, ಲಕ್ಷ್ಯಾರ್ಥಗಳನ್ನು ವಿವರಿಸುತ್ತಾ, ‘ಲೋಕಹಿತವೇ ಧರ್ಮ, ಧರ್ಮದ ಉಳಿವಿಗಾಗಿ ಕರ್ಮ. ನಿಷ್ಕಾಮದಲ್ಲಿ ತಾನಿಲ್ಲ, ಆದ್ದರಿಂದ ಕರ್ಮ ನನಗೆ ಅಂಟುವುದಿಲ್ಲ ಎಂದು ಸುಮ್ಮನೆ ಇರಕೂಡದು. ಅದು ಬೇಜವಾಬ್ಧಾರಿ, ಸೋಮಾರಿತನ ಆಗುತ್ತೆ. ರಾಜ್ಯದ ಆಸೆ ಬೇಡಂದರೆ ಹೋಗ್ಲಿ, ಧರ್ಮ ಉಳಿಯುವುದೂ ಬೇಡವೇ? ಧರ್ಮ ಉಳಿಯಬೇಕು ಎಂದರೆ ಅಧರ್ಮವನ್ನು ಹೊಡೆದು ಹಾಕಬೇಕಲ್ಲಾ?! ಇದೆಲ್ಲಾ ಬಿಟ್ಟು ನನಗ್ಯಾಕೆ ಎಂದರೆ ಅದು ನಿಷ್ಕರ್ಮ ಆಗುತ್ತೆ. ಆಗ ಅದು ದುಷ್ಕರ್ಮವೂ ಆದೀತು. ಆದ್ದರಿಂದ ಲೋಕಹಿತಕ್ಕಾಗಿ ದುಷ್ಟತನವನ್ನು ಹೊಡೆದು ಹಾಕಲೇ ಬೇಕು. ಅದರಿಂದ ಪಾಪದ ಲೇಪ ಇಲ್ಲ......ಹೀಗೆ ಮತ್ತೆ ಹಾಡು, ಅದರ ವಿವರಣೆ, ಮತ್ತೊಂದು ಹಾಡು-ಗಾದೆಗಳು ಅದರ ವಿವರಣೆ ಹೀಗೆಯೇ ಸಾಗುತ್ತಿರುವಾಗ ಒಂದು ಪೆಟ್ರೋಮ್ಯಾಕ್ಸ್ ದೀಪ ತಂದಿಡುತ್ತಾರೆ. ಗಂಭೀರವಾಗಿ ಆಲಿಸುತ್ತಲಿದ್ದ ಜನರಿಗೆ ಆಗ ಕತ್ತಲಾಗಿರುವುದು ತಿಳಿಯುತ್ತದೆ! ಹೊತ್ತೇ ಗೊತ್ತಾಗಲಿಲ್ಲವಲ್ಲಾ, ಆಗಲೇ ಕತ್ತಲಾಗಿಬಿಟ್ಟಿದೆ!ಎಂದು ಸಭಿಕರು ಮಾತನಾಡಿದಾಗ-

ಎಲೇ! ಕೇಳೋರು ಕೇಳೇ ಕೇಳ್ತಾರೆ ಅಂದ್ರೆ ಯೇಳೇ ಯೆಳ್ತೀಯಲ್ಲೋ, ಸಾಕು ಎದ್ದು ನಡಿ,’ ಎಂದು ತಮ್ಮ ತೊಡೆಗೆ ಒಂದು ಏಟು ಕೊಟ್ಟು ಮೇಜಿನಿಂದ ಧುಮುಕಿ ಹೊರಗೆ ಓಡಲಾರಂಭಿಸುತ್ತಾರೆ! ಸಭೆಯಲ್ಲಿದ್ದ ಜನರೆಲ್ಲಾ ಕೂಗುತ್ತಾ, ಕೇಕೇ ಹಾಕುತ್ತಾ ಅವರ ಹಿಂದೇ ಓಡುತ್ತಾರೆ!....... ಸ್ವಲ್ಪ ಸಮಯದ ನಂತರ ಸಾಮೂಹಿಕ ಭಜನೆ ಕೇಳಿಬರುತ್ತದೆ. ಸ್ವಾಮಿಗಳೇ ಹೇಳಿಕೊಡುತ್ತಾ ಕುಣಿಯುತ್ತಾ ಮುಂದೆ ಬರುತ್ತಿರುತ್ತಾರೆ. ಹಿಂದೆ ನೂರಾರು ಮಂದಿ ಕುಣಿಯುತ್ತಾ, ಹಾಡುತ್ತಾ ಬರುತ್ತಿರುತ್ತಾರೆ! ಎಲ್ಲರೂ ಶಾಲೆಯ ಮುಂದಿನ ಬಯಲಿನಲ್ಲಿ ಸೇರಿ ಸ್ವಾಮಿಗಳು ನಿಂತಕೂಡಲೇ ರಾಘವ ಅಯ್ಯಂಗಾರರು ಅವರ ಪಾದಕ್ಕೆ ತಲೆಯಿಟ್ಟು ದೀರ್ಘದಂಡ ಪ್ರಣಾಮ ಮಾಡಿ, ‘ನಾನು ಅಹಂಕಾರಿ, ನಿಮ್ಮನ್ನು ಏನೇನೋ ಅಂದು ಆಡಿಕೊಂಡಿದ್ದೆ. ನನ್ನನ್ನು ಕ್ಷಮಿಸಬೇಕೆಂದು ಕೇಳುವುದಿಲ್ಲ. ಒಂದು ಸಲ ನಿಮ್ಮ ಪಾದದಿಂದ ನನ್ನ ತಲೆಯನ್ನು ಮೆಟ್ಟಿಬಿಡಿ. ನನ್ನ ಅಹಂಕಾರ ಅಳಿಯಲಿ,’ ಎಂದು ಗದ್ಗದಿತರಾದಾಗ......ನಿಂದೇನೈತೆ ತಪ್ಪು? ಅವನು ಅಂಗಾಡ್ತಾನೆ ಬಿಡು,’ ಎಂದು ಸಮಾಧಾನಪಡಿಸುತ್ತಾರೆ!

ಈ ಮಹನೀಯರೊಂದಿಗಿನ ಒಡನಾಟದ ಸಂದರ್ಭಗಳನ್ನು, ಅವರಾಡುತ್ತಿದ್ದ ಹಾಸ್ಯಭರಿತ, ಅಮೂಲ್ಯಮಾತುಗಳನ್ನು ಅವರದೇ ಆಡುಭಾಷೆಯಲ್ಲಿ ಈ ಕೃತಿಯಲ್ಲಿ ತುಂಬಿ ಶಾಶ್ವತಗೊಳಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಯವರಿಗೆ ಚಿರಋಣಿ.