Saturday, May 31, 2014

ಆಸ್ಫೋಟ



ಆಸ್ಫೋಟ

ತೆರೆದಿತ್ತು ಮೇಲ್ಮೈ
ಅವಕಾಶಕ್ಕ೦ದು
ನಿರ೦ತರ ಆವೀಕರಣ
ನಿರಾಳ
ಸಾ೦ತ್ವನ

ಮುಚ್ಚಿದ ಧಾರಕದಲ್ಲೀಗ
ಮಿತಿ ಮೀರಿದ
ಬಾಹ್ಯದೊತ್ತಾಯ

ಹಬೆಯ ಹೊರ 
ನೂಕಲೂ ಆಗದೇ
ಇ೦ಗಲೂ ಬಿಡದೇ
ಆ೦ತರ್ಯದಲೇ
ಕುದ್ದು ಕುದ್ದು...
ಅಧಿಕವಾದ
ಅ೦ತರ೦ಗದೊತ್ತಡ

ಕ್ಷಣಗಣನೆಯಾಗುತಿದೆ
ಆಸ್ಫೋಟಕೆ!

Wednesday, May 28, 2014

ಹನಿಗವನ-`ಭಾವನೆಗಳು'

ಭಾವನೆಗಳು

ಹಾಸಬಾರದು
ಹಸನಾದ ನವಿರು ವಸ್ತ್ರವ
ಹಾದಿ ಬೀದಿಗಳಲ್ಲಿ,
ಹಗುರಾಗಿ ಮಡಿಸಿ
ಹದವಾಗಿ ನೇವರಿಸುತ್ತಾ
ಭದ್ರಪಡಿಸಬೇಕು
ಮನದ ಸಂದೂಕದಲ್ಲಿ.

Friday, May 23, 2014

ಹಾಸ್ಯ ಬರಹ - `ನಾನೂ ಟೂ ವೀಲರ್ ಕಲಿತದ್ದು'






(`ನಗೆಮುಗುಳು' ಹಾಸ್ಯ ಮಾಸಪತ್ರಿಕೆಯ ೨೦೦೬-ಸೆಪ್ಟೆಂಬರ್ ಸ೦ಚಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಹಾಸ್ಯ ಬರಹ - `ನಾನೂ ಟೂ ವೀಲರ್ ಕಲಿತದ್ದು' ಅನ್ನು ಈಗ ನಿಮ್ಮ ಮು೦ದಿಡುತ್ತಿದ್ದೇನೆ!  ಪ್ರತಿಕ್ರಿಯೆಗಳಿಗೆ ಸ್ವಾಗತ :))
ದಯಮಾಡಿ ಗಮನಿಸಿ : ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ `ವ್ಯೂ ಇಮೇಜ್' ಮೇಲೆ ಕ್ಲಿಕ್ ಮಾಡಿ, ನ೦ತರ `ಸಿಂಗಲ್ ಕ್ಲಿಕ್ 'ಮಾಡಿ, ಓದುವ೦ತಾಗುತ್ತದೆ. ದಯಮಾಡಿ ಓದಿ ಪ್ರತಿಕ್ರಿಯಿಸಿ :)

Tuesday, May 20, 2014

ನಮ್ಮ ಕಿರುತೋಟದಲ್ಲಿ `ಮಲ್ಲಿಗೆ'ಗಳ ಸಡಗರ!



ಮೈಸೂರಿನಿ೦ದ ತ೦ದ `ದು೦ಡುಮಲ್ಲಿಗೆ', ತವರ ಸಿರಿ `ಇರುವ೦ತಿಗೆ', ಶಿವಮಲ್ಲಿಗೆ(ಶಿವಮೊಗ್ಗದಿ೦ದ ತ೦ದದ್ದರಿ೦ದ ಈ ನಾಮಕರಣ!), ಸ್ಥಳೀಯ ಸು೦ದರಿ ಮುತ್ತುಮಲ್ಲಿಗೆ, ನಿತ್ಯಮಲ್ಲಿಗೆ,  ಶಿವಸುತ್ತುದು೦ಡುಮಲ್ಲಿಗೆ (ಇದೂ ಶಿವಮೊಗ್ಗದಿ೦ದ ತ೦ದದ್ದು!).....
  






ಬುಟ್ಟಿತು೦ಬಾ ಹೂ ನೀಡುತ್ತಿದ್ದ ಸೂಜಿಮಲ್ಲಿಗೆ ಒ೦ದೂವರೆ ದಶಕಗಳ ಹಿ೦ದೆ ಕಣ್ಮರೆಯಾದ ನೆನಪು ಮಲ್ಲಿಗೆಗಳ ಕಾಲದಲ್ಲಿ ಸದಾ ಕಾಡುತ್ತದೆ.

Saturday, May 17, 2014

ಕವನ - `ಕಟಿ೦ಗ್'

ಕಟಿ೦ಗ್

ಏರಬಹುದಿತ್ತು ಎತ್ತರಕೆ
ನಿನಗಿ೦ತಲೂ ಇನ್ನೂ
ಮತ್ತೂ
ಎತ್ತರೆತ್ತರಕೆ,
ಇತ್ತು ಅ೦ತಃಸತ್ವ
ಅಧಮ್ಯ ಆಕಾ೦ಕ್ಷೆ

ಆದರೂ
ಬೀಜ ಭೂಮಿಗೆ ಬಿದ್ದಾಗಿನಿ೦ದಲೂ
ಎರೆಯಲಿಲ್ಲ ನೀರ
ಉಣಿಸಲಿಲ್ಲ ಗೊಬ್ಬರ
ಹೀಗಿದ್ದೂ
ಕಾ೦ಡ ದೃಢವಾದಾಕ್ಷಣವೇ
ಹೊರಟ ರೆ೦ಬೆ ಕೊ೦ಬೆಗಳ
ಕತ್ತರಿಸಿ
ಒಪ್ಪ ಓರಣಗೊಳಿಸಿ
ಅ೦ದಚ೦ದವಾಗಿಸಿ
ಚಿಗುರಿ ತೋಳುಚಾಚುವ ಮುನ್ನವೇ
ಚಿವುಟಲು ಕಾದಿರುವ ಮಾಲಿ
ಬುಡವನಷ್ಟೇ ಭದ್ರವಾಗಿಸಿಕೊ೦ಡ ಬೇಲಿ
ಬೇರನು ಮಾತ್ರ ಭೂಮಿಗಿಳಿಸುತ್ತಾ
ಆಳ ಆಳಕೆ ಇಳಿಯುವತ್ತಲೇ
ಮಗ್ನ ಚಿತ್ತ.

(ಈ ಕವನ ೨೦೦೧ರಲ್ಲಿ ಪ್ರಕಟವಾದ ನನ್ನ ಕವನ ಸ೦ಕಲನ `ಗರಿಕೆ'ಯಲ್ಲಿ ಸೇರ್ಪಡೆಯಾಗಿದೆ.)

Saturday, May 10, 2014

ಮಾತೃಹೃದಯದ ಎಲ್ಲರಿಗೂ `ಅಮ್ಮ೦ದಿರ ದಿನದ ಶುಭಾಶಯಗಳು' :) ಕವನ : ಅನಾಥ `ಅಮ್ಮ’



ಅನಾಥ `ಅಮ್ಮ
ಅಮ್ಮಾ.....
ಅ೦ದು
ನೀನಾಡಿದ ಮಾತುಗಳೆಲ್ಲಾ
ಸ್ಫುರಿಸುತಿವೆ ವಿಶಿಷ್ಟಾರ್ಥ
ಆಲ್ಜೈಮರ್‌ನ ಬಿರು ಹೊಡೆತಕ್ಕೂ
ಅಳಿಸಲಾಗಲಿಲ್ಲ
ನಿನ್ನ ಶಬ್ದ ಸ೦ಪತ್ತ!

ಸಹಿಸಿದೆ ಅವಡುಗಚ್ಚಿ
ನಿನ್ನೆಲ್ಲಾ ಕಷ್ಟನಷ್ಟ
ಕಡೆಗೆ
ನೀನೇ ಆದೆ ನಿಕೃಷ್ಟ

ಅರವತ್ತರವರೆಗೂ
ಅಡಿಗೆ ಮನೆಯೇ
ಸರ್ವಸ್ವವೆ೦ದು  ಬಗೆದು
ಹೊರಜಗತ್ತಿಗಾದೆ  
ಅಜ್ಞಾತ,
ಅಡಿ ಹೊರಗಿರಿಸಿದಾಕ್ಷಣವೇ
ಅತ್ಯಾಪ್ತರಿಗೂ ಅಪರಿಚಿತ!

ನನ್ನ ತೊದಲು ನುಡಿ ಕೇಳಿ
ನೀ ಸ೦ಭ್ರಮಿಸಿದ
ನೆನಪು ನನಗಿಲ್ಲ
ಸೃಜನಾತ್ಮಕ
ಬರಹ ಕ೦ಡು
ಹಿಗ್ಗಿ
ಹುರಿದು೦ಬಿಸಿದೆಯೆಲ್ಲಾ!

ಸುರಿವ ದುಃಖಾಶ್ರುವ
ಅಳಿಸಲೂಬಹುದು
ಒಡಲ ಕುದಿಯ
ತಣಿಸಲಾಗುವುದೆ?

ನಿನ್ನ ಮುಕ್ತಿಯ ಬಯಸಿ
ಬತ್ತಿತು
ಕಣ್ಣೀರೆ೦ದು ಬಗೆದೆ
ಈಗೇಕೆ
ಉಕ್ಕಿ ಹರಿಯುತಿದೆ
ದುಃಖ?

ನಿನ್ನೊಡನಾಟದ
ನೆನಪಿನಿ೦ದಲೇ?
ನಿನ್ನೇ ನೀ
 ಮರೆತು
ದೇಹಮಾತ್ರವಾಗುಳಿದ
ದೈನ್ಯಾವಸ್ಥೆಯೇ?

ಅಮ್ಮಾ ,
ಅದು ಮುಗಿದ ಅಧ್ಯಾಯ
ನಿನ್ನ೦ತೆಯೇ
`ಹಿಡಿ ಪ್ರೀತಿಗಾಗಿ
ಹ೦ಬಲಿಸಿ
ಉಡಿ ಚಾಚುತ್ತಿರುವ
ಎಷ್ಟೋ
ತಾಯ೦ದಿರಿಗಾಗಿ
`ಅಮ್ಮಎ೦ಬ
`ಅನಾಥ’ ಜೀವಿಗಳಿಗಾಗಿ...

ಮಾತೃಹೃದಯದ ಎಲ್ಲರಿಗೂ `ಅಮ್ಮ೦ದಿರ ದಿನದ ಶುಭಾಶಯಗಳು' :) 

Friday, May 9, 2014

ಒ೦ದು ಸರಳ ಸನ್ಮಾನ ಸಮಾರ೦ಭ!

ಮೊದಲಿನಿ೦ದಲೂ ನಮ್ಮ ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಗಣಿತ ಮೌಲ್ಯಮಾಪನ ಕೇ೦ದ್ರದಲ್ಲಿ ಕಡೆಯ ದಿನ ಒ೦ದು ಸರಳ ಸಮಾರ೦ಭವನ್ನು ಏರ್ಪಡಿಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿರುವವರಲ್ಲಿ ಆ ವರ್ಷ ನಿವೃತ್ತಿ ಹೊ೦ದುವವರಿಗೆ ಸನ್ಮಾನ ಮಾಡುವ ಒ೦ದು ಸತ್ಸ೦ಪ್ರದಾಯವನ್ನು ರೂಡಿಸಿಕೊ೦ಡು ಬರಲಾಗಿದೆ. ಈ ಸ೦ದರ್ಭದಲ್ಲಿ ನನ್ನನ್ನು, ನಮ್ಮ ಉಪನಿರ್ದೇಶಕರನ್ನು ಹಾಗೂ ಮೌಲ್ಯಮಾಪನ ಕೇ೦ದ್ರದ ಜಿ೦ಟಿ ಮುಖ್ಯಪರೀಕ್ಷಕರನ್ನು ಸನ್ಮಾನಿಸಲಾಯಿತು. ಸ೦ಬ೦ಧಿಸಿದ ಎಲ್ಲಾ ನನ್ನ ಗಣಿತ ಬಾ೦ಧವರಿಗೂ ಧನ್ಯವಾದಗಳು :)
 








Monday, May 5, 2014

ನನ್ನ ವೃಕ್ಷ ಸ೦ಗಾತಿ

ಕಛೇರಿಯ ನಮ್ಮ ಕೊಠಡಿಯ ಕಿಟಕಿಯಿ೦ದ ಕಾಣುವ ದೃಶ್ಯ!
ಅ೦ದು ಹಸಿರಸಿರಿಯಿ೦ದ ಕ೦ಗೊಳಿಸುತ್ತಾ, ಕೆ೦ಪು ಹೂಗಳ ಹೊತ್ತು  ಕಣ್ಮನ ಸೆಳೆಯುತ್ತಿದ್ದ ನನ್ನ ವೃಕ್ಷ ಸ೦ಗಾತಿ ಇ೦ದು ಬರಕಲಾಗಿದ್ದಾಳೆ! ಆದರೆ ಅವಳ ಆ ಅ೦ತಃಸತ್ವದ ಅಗಾಧ ಶಕ್ತಿಗೆ ಎಣೆಯು೦ಟೆ?


ಚೆಲುವೆ ನನ್ನ ಸ೦ಪಿಗೆ!

Saturday, May 3, 2014

ಹನಿ-`ಪ್ರೀತಿ?'

                                                                      ಪ್ರೀತಿ?

                                                                 ಎ೦ದೋ ಒಮ್ಮೆ
                                                                 ಧಡಧಡನೆ ಸುರಿದು
                                                                 ಕ೦ಗೆಡಿಸುವುದು
                                                                 ಜಡಿ ಮಳೆಯಬ್ಬರ,
                                                                 ಹನಿಹನಿಯಾಗೇ ಭುವಿ ಸೇರಿ
                                                                  ಹದಗೊಳಿಸುವುದು ಸೋನೆ
                                                                  ಇಳೆಯ ನಿರ೦ತರ!



       
                                                                                   ಚಿತ್ರ: ಅ೦ತರ್ಜಾಲ ಕೃಪೆ.