Wednesday, August 29, 2012

ದ್ವಂದ್ವ


ಆಕೆ ಬೆಳಕಿನಂತೆ
ಒಮ್ಮೊಮ್ಮೆ ಕಣರೂಪಿ
ಮತ್ತೊಮ್ಮೆ
ಬಳುಕು ಅಲೆ
                          
 ಇದ್ದಲ್ಲೇ ನೇರ ಪಥ
ಮಧ್ಯವರ್ತಿ
ಬದಲಾಯಿಸಿದಾಗ ಮಾತ್ರ
ವಕ್ರನಡೆ
ರಾಚಿದ ಮೇಲ್ಮೈಯ
ಬಣ್ಣವನ್ನೇ ಬಯಲು
ಮಾಡಲೂ ಇಲ್ಲ ಬಿಡೆ!

ತಲೆಮಾರಿನಿಂದ ಬಂದ
ಮಡಿ ಮೈಲಿಗೆ
ವ್ರತ ನೇಮ
ಸ್ವಂತಿಕೆಯ ಹೋಮ

ಹಿರಿಯರಿಗೆ
ತಗ್ಗಿಬಗ್ಗಿ
ನವಪೀಳಿಗೆಯ
ನಾಸ್ತಿಕತೆಗೂ ಒಗ್ಗಿ
ಸಾಗುವ
ಪೀಳಿಗೆಯಂತರದ ಸೇತು

ಏಕೆ
ದ್ವಂದ್ವ ಸ್ವಭಾವ
ಎನುವ ಮಾತು?


Sunday, August 19, 2012

ಕೋರಿಕೆ

ನಾ ರಜನಿ
ನೀ ಉಷೆ,
ಬೆಳಕಿನ ಕಿರಣ
ಹಿಡಿದು ತಾರಾ...
ಓ ಭಗಿನಿ
ಇದು ನಿಶೆ,
ಕತ್ತಲನು
ಹರಿಸು ಬಾರಾ...

(ನನಗೆ ನೆನಪಿರುವ೦ತೆ ಇದು ನನ್ನ ಮೊದಲ ಹನಿಗವನ!)

Saturday, August 11, 2012

ಈ ಸ೦ತಸ.......

ನಮ್ಮ ಮಗಳು ಸುಷ್ಮ ಸಿಂಧು ( Sushma Sindhu ) , ಎಂ. ಎಸ್ಸಿ.(ಕ್ಲಿನಿಕಲ್ ಸೈಕಾಲಜಿ) ನಾಲ್ಕನೇ ಸೆಮ್ ನಲ್ಲಿಯೂ ಟಾಪರ್ ಆಗಿದ್ದಾಳೆ. ಇವತ್ತು ಬೆಳಿಗ್ಗೆ ರಿಸಲ್ಟ್ ಬ೦ತು. ಮೊದಲ ಮೂರೂ ಸೆಮ್ ಗಳಲ್ಲಿಯೂ ಟಾಪರ್ ಆಗಿದ್ದು ಈ ಸ೦ತಸವನ್ನು ನಿಮ್ಮೆಲ್ಲರೊಡನೆ ಹ೦ಚಿಕೊಳ್ಳುತ್ತಿದ್ದೇನೆ.

Thursday, August 9, 2012

ಸಮೃದ್ದಿ

ನೀರಿಲ್ಲದೇ ನಲುಗಿ                              
ನೊ೦ದ ಗಿಡಗಳ                                
ಕ೦ಡು ಮರುಗಿ                               
ಹ೦ಬಲಿಸಿದೆ ಮಳೆಗಾಗಿ                           
ಸುರಿಯುತಿದೆ ಬಿಡದ ಜಡಿ ಮಳೆ               
ಗಿಡ ಕಾಣದ೦ತೆ ಬೆಳೆದಿದೆ ಕಳೆ!                    

Sunday, August 5, 2012

ಆಸ್ಫೋಟ

ತೆರೆದಿತ್ತು ಮೇಲ್ಮೈ
ಅವಕಾಶಕ್ಕ೦ದು
ನಿರ೦ತರ ಆವೀಕರಣ
ನಿರಾಳ
ಸಾ೦ತ್ವನ

ಮುಚ್ಚಿದ ಧಾರಕದಲ್ಲೀಗ
ಮಿತಿ ಮೀರಿದ
ಬಾಹ್ಯದೊತ್ತಾಯ

ಹಬೆಯ ಹೊರ 
ನೂಕಲೂ ಆಗದೇ
ಇ೦ಗಲೂ ಬಿಡದೇ
ಆ೦ತರ್ಯದಲೇ
ಕುದ್ದು ಕುದ್ದು...
ಅಧಿಕವಾದ
ಅ೦ತರ೦ಗದೊತ್ತಡ

ಕ್ಷಣಗಣನೆಯಾಗುತಿದೆ
ಆಸ್ಫೋಟಕೆ!