Sunday, May 26, 2013

ಗುರಿ



ತೇಲಿ ಸಾಗುತಿಹ
ಕಾರ್ಮುಗಿಲೇ  
ನಿನ್ನ ಗುರಿ ಎತ್ತ?
ಮಳೆ ಸುರಿಸಿ
ಇಳೆ ಗೆಳತಿಗೆ
ಹಸಿರುಡಿಸುವತ್ತ!

Wednesday, May 22, 2013

ವ್ಯರ್ಥ




ಅಂಬರ ತುಂಬಿದ
ಹಿಂಜಿದ ಅರಳೆ
ಹನಿಸಲಾಗದು ಮಳೆ
ತಣಿಸಲಾಗದು ಇಳೆ!

Sunday, May 19, 2013

ಅತಂತ್ರ



ನೀನು
ನನ್ನಂತಾಗಬೇಕೆಂಬ
ಹಠದಲ್ಲಿ
ನಿನ್ನಂತಿರಲು
ಬಿಡಲಿಲ್ಲ
`ನಿನ್ನಂತೆಯೇ ನೀನಿರು'
ಎನ್ನುವಷ್ಟರಲ್ಲಿ
ನೀನು ನೀನಾಗಿರಲಿಲ್ಲ!

Wednesday, May 15, 2013

ಸೆಳೆತ


 ಆ ಮರ.....
ಬೇರ ಭುವಿಯೊಳಗಿಳಿಸಿದ್ದರೂ
ಮೊಗ ಮುಗಿಲಿಗೆತ್ತಿ
ಪಡೆಯುತಿದೆ ಪರಮಾನಂದ,
ಮಾನವನಿಗೋ.....
ಪಾದವೆತ್ತಲು ಪ್ರಯತ್ನಿಸಿದಷ್ಟೂ
ಪೀಡಿಸಿ ಕೆಳ ಸೆಳೆವ
ಗುರುತ್ವಬಂಧ!

Monday, May 13, 2013

ಅನಾಥ `ಅಮ್ಮ’

`ತಾಯ೦ದಿರ ದಿನ'ದ ನೆನಪಿಗಾಗಿ ತಡವಾಗಿ ಬಹಳ ಹಿ೦ದೆ ಬರೆದಿದ್ದ ಈ ಕವನವನ್ನು ನಿಮ್ಮ ಮು೦ದಿಡು ತ್ತಿದ್ದೇನೆ.

ಅನಾಥ `ಅಮ್ಮ’

ಅಮ್ಮಾ.....
ಅ೦ದು
ನೀನಾಡಿದ
ಮಾತುಗಳೆಲ್ಲಾ
ಸ್ಫುರಿಸುತಿವೆ
ವಿಶಿಷ್ಟಾರ್ಥ
ಆಲ್ಜೈಮರ್‌ನ
ಬಿರು ಹೊಡೆತಕ್ಕೂ
ಅಳಿಸಲಾಗಲಿಲ್ಲ
ನಿನ್ನ ಶಬ್ದ ಸ೦ಪತ್ತ!

ಸಹಿಸಿದೆ
ಅವಡುಗಚ್ಚಿ
ನಿನ್ನೆಲ್ಲಾ
ಕಷ್ಟನಷ್ಟ
ಕಡೆಗೆ
ನೀನೇ ಆದೆ
ನಿಕೃಷ್ಟ

ಅರವತ್ತರವರೆಗೂ
ಅಡಿಗೆ ಮನೆಯೇ
ಸರ್ವಸ್ವವೆ೦ದು
ಆದೆ
ಹೊರಜಗತ್ತಿಗೆ
ಅಜ್ಞಾತ
ಅಡಿ
ಹೊರಗಿರಿಸಿದಾಕ್ಷಣವೇ
ಅತ್ಯಾಪ್ತರಿಗೂ
ಅಪರಿಚಿತ!

ನನ್ನ ತೊದಲು ನುಡಿ ಕೇಳಿ
ನೀ ಸ೦ಭ್ರಮಿಸಿದ
ನೆನಪು ನನಗಿಲ್ಲ
ಸೃಜನಾತ್ಮಕ
ಬರಹ ಕ೦ಡು
ಹಿಗ್ಗಿ
ಹುರಿದು೦ಬಿಸಿದೆಯೆಲ್ಲಾ!

ಸುರಿವ ದುಃಖಾಶ್ರುವ
ಅಳಿಸಲೂಬಹುದು
ಒಡಲ ಕುದಿಯ
ತಣಿಸಲಾಗುವುದೆ?

ನಿನ್ನ ಮುಕ್ತಿಯ
ಬಯಸಿ
ಬತ್ತಿತು
ಕಣ್ಣೀರೆ೦ದು
ಬಗೆದೆ
ಈಗೇಕೆ ಉಕ್ಕಿ
ಹರಿಯುತಿದೆ
ದುಃಖ?
ನಿನ್ನೊಡನಾಟದ
ನೆನಪಿನಿ೦ದಲೇ?
ನಿನ್ನೇ ನೀ
ಮರೆತು
ದೇಹಮಾತ್ರವಾಗುಳಿದ
ದೈನ್ಯಾವಸ್ಥೆಯೇ?

ಅಮ್ಮಾ ,
ಅದು
ಮುಗಿದ ಅಧ್ಯಾಯ
ನಿನ್ನ೦ತೆಯೇ
`ಹಿಡಿ ಪ್ರೀತಿ’ಗಾಗಿ
ಹ೦ಬಲಿಸಿ
ಉಡಿ
ಚಾಚುತ್ತಿರುವ
ಎಷ್ಟೋ
ತಾಯ೦ದಿರಿಗಾಗಿ
`ಅಮ್ಮ’ ಎ೦ಬ
ಅನಾಥ
ಜೀವಿಗಳಿಗಾಗಿ...

Wednesday, May 8, 2013

ಹೆಬ್ಬಂಡೆ

ಆಗಬಹುದಿತ್ತೊಂದು

ಬೃಹತ್ ಪ್ರತಿಮೆ

ಸಾರುತ್ತಾ

ಎಲ್ಲೆಡೆ ಹಿರಿಮೆ

 

ಭವ್ಯ ಕಟ್ಟಡದ

ಆಧಾರ ಸ್ಥಂಭ

ಅಥವಾ

ದೇಗುಲದ

ಗರುಡಗಂಬ

 

ನಾಗಾಲೋಟದ

ನಾಗರೀಕತೆಯ ಮೆಟ್ಟಿಲು

ಹಳ್ಳದಾಟುವ ಅಡ್ಡಗಲ್ಲು

 

ಗುಡ್ಡದ ಮೇಲಿನ

ಭೀಮಶಿಲೆ

ಮೈತುಂಬಿದ

ಭವ್ಯಕಲೆ

 

ಜಿಬ್ರಾಲ್ಟರದ

ಮಹಾಬಂಡೆ

ಅಟ್ಲಾಂಟಿಕಾದ

ಅದ್ಭುತ ನೋಟ!

 

ಆಗದೇ ಹುದುಗಿದೆ

ಈ ನದಿಯೊಳಗೆ

ಮನದೊಳಗೇ...

ಮೆಲ್ಲುತ್ತಾ ಮಂಡಿಗೆ

 

ಸುತ್ತಲಿನ ಅಹಂಭಾವ

ಆರ್ಭಟಗಳಿಗೆಲ್ಲಾ

ಮೂಕ ಶ್ರೋತೃ

ಮೌನ ಪ್ರೇಕ್ಷಕ!
 
(ಬಹಳ ವರ್ಷಗಳ ಹಿ೦ದೆ ಬರೆದಿದ್ದ ಈ ಕವನವನ್ನು ಈಗ ಓದಲು ನಿಮ್ಮ ಮು೦ದಿಡುತ್ತಿದ್ದೇನೆ.)

Friday, May 3, 2013

ಅತ್ಯ0ತ ಸಹನಶೀಲರಾದ ತಮಗೆ........




(ದಶಕಗಳ ಹಿ0ದೆ ಬರೆದಿದ್ದ ಈ ಹಾಸ್ಯಬರಹವು 2001ರಲ್ಲಿ ಪ್ರಕಟಿಸಿದ ನನ್ನ `ಜಿರಳೆ ಉ0ಡೆ' ಎ0ಬ ಹಾಸ್ಯಬರಹ ಸ0ಕಲನದ ಕಡೆಯ ಲೇಖನವಾಗಿದೆ.)