Saturday, April 30, 2011

ಮನದ ಅಂಗಳದಿ.........೩೮. ಪರಿವರ್ತನೆಯ ಐದು ಹೆಜ್ಜೆಗಳು

ಬದುಕಿನಲ್ಲಿ ಪರಿವರ್ತನೆಯೆಂದರೆ ಕೇವಲ ಶಾರೀರಿವಾದುದಕ್ಕೆ ಸೀಮಿತವಲ್ಲ. ಶರೀರ, ಮನಸ್ಸು, ಆತ್ಮ ಈ ಮೂರನ್ನೂ ಏಕತ್ರಗೊಳಿಸುವ, ಸಾರ್ವಕಾಲಿಕಗೊಳಿಸುವ ಅನ್ವಯದ ಸಮಗ್ರ ಸೂತ್ರ ಹಾಗೂ ಸಾರ್ವಕಾಲಿಕ ತಂತ್ರಗಳ ಸಮುಚ್ಛಯ.
*ರಾಬಿನ್ ಶರ್ಮ (The Monk Who Sold His Ferrary)

ನಾನು ಚಿಕ್ಕವಳಿದ್ದಾಗ ಅಕ್ಕ ತಾನು ಓದಿದ ನಂತರ ಒಳ್ಳೆಯದಾಗಿದೆ ಎನಿಸಿದ ಪುಸ್ತಕವನ್ನು ನನಗೆ ಓದಲು ಕೊಡುತ್ತಿದ್ದಳು. ಈಗ ನನ್ನ ಮಗಳು ಈ ರೀತಿಯಾಗಿ ನನಗೆ ಓದಲು ಕೊಟ್ಟ ಪುಸ್ತಕಗಳಲ್ಲಿ ನನ್ನನ್ನು ಬಹಳವಾಗಿ ಆಕರ್ಷಿಸಿದ, ನನ್ನ ಜೀವನ ಶೈಲಿಯನ್ನೇ ಬದಲಾಯಿಸಿದ ಪುಸ್ತಕ ರಾಬಿನ್ ಶರ್ಮ ಅವರ ‘The Monk Who Sold His Ferrary' ವೃತ್ತಿ ಜೀವನದಲ್ಲಿ ಬಹಳ ಗೊಂದಲವಿದ್ದು ನನ್ನಿಂದ ನಾನೇ ದೂರವಾಗುತ್ತಿದ್ದೇನೇನೋ ಎನಿಸುತ್ತಿದ್ದ, ಅನಾರೋಗ್ಯ ಸಮಸ್ಯೆಗಳಿಂದ ಮನಃಶಾಂತಿಯನ್ನೇ ಕಳೆದುಕೊಂಡಿದ್ದ ಸಮಯದಲ್ಲಿ ಈ ಪುಸ್ತಕವನ್ನು ಓದಿದೆ. (ಈಗ ಅದರ ಕನ್ನಡ ಆವೃತ್ತಿ ‘ಫೆರಾರಿ ಮಾರಿದ ಫಕೀರ'ವನ್ನೂ ತಂದುಕೊಟ್ಟಿದ್ದಾಳೆ.) ಅದರಲ್ಲಿರುವ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕು ಸಹನಶೀಲವೆನಿಸಿತು. ಈ ಪುಸ್ತಕದ ಬಗ್ಗೆ ಎಲೈನ್ ಹೇಮ್ಸ್ ಹೀಗೆ ಹೇಳುತ್ತಾರೆ, ‘ರಾಬಿನ್ ಶರ್ಮ ಅವರು ಪರಿವರ್ತನೆಯ ಶಾಸ್ತ್ರೀಯ ಸಾಧನಗಳನ್ನು ಸರಳವಾದ ಜೀವನ ದರ್ಶನವಾಗಿ ರೂಪಿಸಿ ಅತ್ಯಾಕರ್ಷಕ ಕೃತಿಯನ್ನು ಸೃಷ್ಟಿಸಿದ್ದಾರೆ. ನಿಮ್ಮ ಜೀವನ ಕ್ರಮವನ್ನೇ ಬದಲಾಯಿಸಬಲ್ಲ ಹಾಗೂ ಸಂತೋಷ ನೀಡುವ ಪುಸ್ತಕ.'

ಇದು ಬದುಕಿನ ಸಮತೋಲನವನ್ನು ಕಳೆದುಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರಣ ಕಥೆ. ವೃತ್ತಿಯ ಅತಿಸ್ಪರ್ಧೆಯ ಅಸಹನೀಯ ಒತ್ತಡಗಳು ಆತನ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಸ್ತಿತ್ವವನ್ನೇ ಹಾಳುಗೆಡವಿರುತ್ತದೆ. ಅವುಗಳಿಂದಾಗಿ ಆತನ ದೇಹ ಬಸವಳಿದಿರುತ್ತದೆ. ಮನಸ್ಸು ಭಗ್ನವಾಗಿರುತ್ತದೆ.ಅಂತರಾಷ್ಟ್ರೀಯ ಮಟ್ಟದ ಕ್ರಿಮಿನಲ್‌ಲಾಯರ್ ಎಂಬ ಪ್ರಸಿದ್ಧಿ ಪಡೆಯಲು ಆತ ಪಟ್ಟಿದ್ದ ಅಪಾರ ಶ್ರಮ, ಅಸಹನೀಯ ಒತ್ತಡಗಳು ಅವನ ಅಮೂಲ್ಯ ಅಂತಃಶಕ್ತಿಯನ್ನೇ ಕೆಡವಿಬಿಟ್ಟಿರುತ್ತವೆ. ತೀವ್ರ ಹೃದಯಾಘಾತದ ನಂತರ ಡಾಕ್ಟರು, ‘ಒಂದೋ ವೃತ್ತಿಯನ್ನು ಬಿಡಬೇಕು ಅಥವಾ ಪ್ರಾಣವನ್ನು ಬಿಡಬೇಕು,' ಎನ್ನುವ ಸವಾಲನ್ನು ಎಸೆದಾಗ ಆತ ತನ್ನಲ್ಲಿ ತಾರುಣ್ಯದಲ್ಲಿದ್ದು ಕ್ರಮೇಣ ಕುಂದಿಹೋಗಿದ್ದ ಅಂತಃಶಕ್ತಿಯನ್ನು ಪುನಃ ಜಾಗೃತಗೊಳಿಸಲು ಇದೊಂದು ಸುವರ್ಣಾವಕಾಶವೆಂದು ಭಾವಿಸುತ್ತಾನೆ.

ಈ ಪಾಶ್ಚಿಮಾತ್ಯ ಲಾಯರ್ ಜೂಲಿಯನ್ ತನ್ನ ಎಲ್ಲಾ ಆಸ್ತಿಗಳನ್ನೂ ಮಾರಿ ಪ್ರಾಚೀನ ಸಂಸ್ಕ್ರುತಿಗೆ ಹೆಸರಾದ ಭಾರತಕ್ಕೆ ಜೀವನದ ಸ್ವರೂಪವನ್ನು ಆಮೂಲಾಗ್ರವಾಗಿ ಪರಿವರ್ತನೆಗೀಡುಮಾಡುವ ತಾತ್ವಿಕತೆ ಹಾಗೂ ಅದರ ಅನುಷ್ಟಾನ ವಿಧಾನವನ್ನು ಅರಸಿಕೊಂಡು ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಳ್ಳುತ್ತಾನೆ. ಹಿಮಾಲಯದ ತಪ್ಪಲಲ್ಲಿರುವ ಕಾಶ್ಮೀರದಲ್ಲಿ ಹಿಂದೆ ತನ್ನಂತೆಯೇ ಲಾಯರಾಗಿದ್ದು ಈಗ ಸರಳ ಸಾಧು ಜೀವನ ನಡೆಸುತ್ತಿದ್ದ ಯೋಗಿ ಕೃಷ್ಣನ್ ಅವರಿಂದ ಹಿಮಾಲಯದ ಅತ್ಯುನ್ನತ ಸ್ತgಗಳಲ್ಲಿರುವ ‘ಶಿವನ'(ಸಾಕ್ಷಾತ್ಕಾರದ ಓಯಸಿಸ್)ದಲ್ಲಿರುವ ಸಾಧುಗಳು ಬದುಕಿನಲ್ಲಿ ಮಹಾನ್ ಪರಿವರ್ತನೆಯನ್ನು ಮಾಡುವ ಯಾವುದೋ ಒಂದು ವಿಧಾನವನ್ನು ಕಂಡುಹಿಡಿದಿದ್ದಾರೆ ಎಂದು ತಿಳಿಯುತ್ತಾನೆ.

‘ಶಿವನ ಸಾಧುಗಳು ತಮ್ಮ ಜೀವನಧ್ಯೇಯ ಸಾಧನೆಗಾಗಿ ಐದುಹೆಜ್ಜೆಗಳ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದರು. ಅದು ಸರಳವಾಗಿತ್ತು. ಕಾರ್ಯಸಾಧ್ಯವಾಗಿತ್ತು. ಅವು ಹೀಗಿವೆ:

ಮೊದಲನೆಯ ಹೆಜ್ಜೆ- ಪರಿಣಾಮದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮಾಡಿಕೊಳ್ಳುವುದು: ತೂಕ ಇಳಿಸಿಕೊಳ್ಳುವುದು ನಮ್ಮ ಗುರಿಯಾದರೆ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ನಮ್ಮ ತೆಳ್ಳಗಿನ, ಶಕ್ತಿಯುತವಾದ ಶರೀರವನ್ನು ಮನಸ್ಸಿನ ಪಟಲದಲ್ಲಿ ಸೃಷ್ಟಿಸಿಕೊಳ್ಳಬೇಕು. ಈ ಮಾನಸಿಕ ಚಿತ್ರ ಸ್ಪಷ್ಟವಾದಷ್ಟೂ ಪ್ರಕ್ರಿಯೆ ಸಫಲವಾಗುತ್ತದೆ. ಮನಸ್ಸು ಶಕ್ತಿಯ ಬಹುದೊಡ್ಡ ಉಗ್ರಾಣ. ಮನಸ್ಸಿನಲ್ಲಿ ನಡೆಯುವ ಚಿತ್ರದಂತಹ ಸರಳ ಸಂಗತಿ ಉದ್ದೇಶ ಸಾಧನೆಗೆ ರಾಜಮಾರ್ಗವನ್ನು ತೆರೆಯುತ್ತದೆ.

ಎರಡನೆಯ ಹೆಜ್ಜೆ- ನಮ್ಮ ಮೇಲೆಯೇ ನಾವು ಒಂದಿಷ್ಟು ಒತ್ತಡವನ್ನು ಹಾಕಿಕೊಳ್ಳುವುದು: ಹೊಸ ನಿರ್ಧಾರಗಳನ್ನು ಕೈಗೊಂಡ ನಂತರ ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವುದರಲ್ಲಿ ವಿಫಲರಾಗಲು ಕಾರಣವೇನೆಮದರೆ ಹಳೆಯ ಅಭ್ಯಾಸಕ್ಕೆ ಜಾರುವುದು ಬಹಳ ಸುಲಭ. ಒತ್ತಡ ಹಾಕುವುದು ಯಾವಾಗಲೂ ಕೆಟ್ಟದಲ್ಲ. ಒತ್ತಡವಿದ್ದಾಗಲೇ ಜನ ತಮ್ಮೊಳಗಿನ ಸುಪ್ತಶಕ್ತಿಯ ಚಿಲುಮೆಯಿಂದ ಅವಶ್ಯವಾಗಿರುವ ಚೈತನ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಮೇಲೆ ನಾವೇ ಸಕಾರಾತ್ಮಕ ಒತ್ತಡವನ್ನು ಹಾಕಿಕೊಳ್ಳುವುದಕ್ಕೆ ಅನೇಕ ಮಾರ್ಗಗಳಿವೆ. ಹೇಗೆಂದರೆ ಎಲ್ಲರ ಮುಂದೆ ಪ್ರತಿಜ್ಞೆ ಮಾಡುವುದು ಒಂದು ಉತ್ತಮ ಮಾರ್ಗ. ಈ ರೀತಿ ನಮ್ಮ ಗುರಿ ಏನೆಂಬುದು ಎಲ್ಲರೆದುರು ಸಾರ್ವಜನಿಕವಾಗಿ ಜಾಹೀರಾತಾದ ಬಳಿಕ ಅದನ್ನು ಸಾಧಿಸಲು ಗಂಭೀರವಾದ ಪ್ರಯತ್ನ ಮಾಡಲೇಬೇಕಾಗುತ್ತದೆ. ಏಕೆಂದರೆ ಇದರಲ್ಲಿ ಸೋತರೆ ಆಗುವ ಅವಮಾನವನ್ನು ಯಾರೂ ಬಯಸುವುದಿಲ್ಲ. ಶಿವನದಲ್ಲಿ ಇನ್ನೂ ಪರಿಣಾಮಕಾರಿಯಾದ ವಿಧಾನವನ್ನು ಬಳಸುತ್ತಿದ್ದರು. ಉದಾಹರಣೆಗೆ ಒಂದು ವಾರದ ಉಪವಾಸ ಅಥವಾ ಬೆಳಿಗ್ಗೆ ೪ಗಂಟೆಗೆ ಎದ್ದು ಧ್ಯಾನಮಾಡುವುದು ಸಾಧ್ಯವಾಗದಿದ್ದರೆ ಸಮೀಪದ ಕೊರೆಯುವ ತಣ್ಣೀರಿನ ಜಲಪಾತದಲ್ಲಿ ಕೈಕಾಲುಗಳು ಮರಗಟ್ಟುವವರಗೆ ನಿಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಿದ್ದರು. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಹಾಗೂ ಗುರಿಯನ್ನು ಶತಾಯಗತಾಯ ಸಾಧಿಸುವ ದೃಷ್ಟಿಯಿಂದ ಈ ಅತಿರೇಕವೆನಿಸುವ ವಿಧಾನಗಳ ಉದಾಹರಣೆ ಇದು. ನಮಗೆ ಇದು ಒಂದು ರೀತಿಯ ಹುಚ್ಚು ಎನಿಸಲೂ ಬಹುದು ಆದರೂ ಈ ಹುಚ್ಚು ತುಂಬಾ ಪರಿಣಾಮಕಾರಿ. ಒಳ್ಳೆಯ ಅಭ್ಯಾಸಗಳಿಂದ ಸಂತೋಷ, ಕೆಟ್ಟ ಅಭ್ಯಾಸಗಳಿಂದ ಕಠೋರ ಶಿಕ್ಷೆ ಪರಿಣಾಮವೆಂದಾಗ ದೌರ್ಬಲ್ಯಗಳು ಸಲೀಸಾಗಿ ಬಿದ್ದುಹೋಗುತ್ತವೆ.

ಮೂರನೆಯ ಹೆಜ್ಜೆ- ಗುರಿಸಾಧನೆಗೆ ಸಮಯದ ಮಿತಿಯನ್ನು ನಿರ್ಧರಿಸುವುದು: ‘ಡೆಡ್ ಲೈನ್' ಇಲ್ಲದಿದ್ದರೆ ಗಿರಿಸಾಧನೆಗೆ ಜೀವ ಚೈತನ್ಯ ಬರುವುದಿಲ್ಲ. ನಾಳೆಯೇ ಮಾಡಬೇಕಾದ ಕೆಲಸಕ್ಕೆ ನಾವು ನೀಡುವಷ್ಟು ಗಮನವನ್ನು ಯಾವಾಗಲೋ ಮಾಡಲಿರುವ ಕೆಲಸಕ್ಕೆ ಕೊಡುವುದಿಲ್ಲ.

ನಾಲ್ಕನೆಯ ಹೆಜ್ಜೆ- ೨೧ರ ಮಾಂತ್ರಿಕ ಸೂತ್ರ: ಶಿವನದ ಎಲ್ಲಾ ಜ್ಞಾನಿಗಳ ಪ್ರಕಾರ ಯಾವುದೇ ಒಂದು ಹೊಸ ಅಭ್ಯಾಸ ಅಥವಾ ಜೀವನಶೈಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕಾದರೆ ೨೧ದಿನವಾದರೂ ಅವ್ಯಾಹತವಾಗಿ ಸಾಧನೆ ಮಾಡಬೇಕು. ಹೊಸ ಅಭ್ಯಾಸವನ್ನು ಬಲವಾಗಿ ಸ್ಥಾಪಿಸಬೇಕಾದರೆ ಅದರ ಕಡೆಗೆ ನಮ್ಮ ಸಮಸ್ತ ಶಕ್ತಿಯನ್ನೂ ಕೇಂದ್ರೀಕರಿಸಿ ಪ್ರಯೋಗಿಸಬೇಕು. ಆಗ ಹಳೆಯ ಅಭ್ಯಾಸ ತನ್ನಷ್ಟಕ್ಕೇ ಕಳಚಿಕೊಳ್ಳುತ್ತದೆ. ಸಾಮಾನ್ಯವಾಗಿ ೨೧ದಿನಗಳ ಕಾಲಾವಧಿಯಲ್ಲಿ ಹೊಸ ಅಭ್ಯಾಸ ಸ್ಥಾಪಿತವಾಗುತ್ತದೆ. ಯಾವುದೇ ಹೊಸ ಚಟುವಟಿಕೆಯನ್ನು ೨೧ದಿನಗಳ ಕಾಲ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ರೀತಿಯಲ್ಲಿ ಪ್ರತಿದಿನವೂ ಮಾಡುವುದರಿಂದ ಅದು ಬಲಿಷ್ಟ ಅಭ್ಯಾಸವಾಗಿ ಬೆಳೆಯುತ್ತದೆ. ಬೇಗ ಏಳುವ, ಧ್ಯಾನಮಾಡುವ, ಒಂದು ತಾಸು ಓದುವ ಅಥವಾ ಇನ್ಯಾವುದೇ ಚಟುವಟಿಕಟಯಾಗಲೀ ಹಲ್ಲುಜ್ಜುವಂತಹ ಅನಿವಾರ್ಯ ಅಭ್ಯಾಸವಾಗಿಬಿಡುತ್ತದೆ.

ಐದನೆಯ ಹೆಜ್ಜೆ- ಸಾಧನೆಯ ಪ್ರಕ್ರಿಯೆಯನ್ನು ಆನಂದಿಸುವುದು: ಶಿವನ ಸಾಧುಗಳು ‘ನಗುವಿಲ್ಲದ, ಪ್ರೀತಿಯಿಲ್ಲದ ದಿನವೆಂದರೆ ಜೀವವಿಲ್ಲದ ದಿನ'ವೆಂದು ನಂಬಿದ್ದರು. ಗುರಿಸಾಧನೆಯ ಮಾರ್ಗದಲ್ಲಿ ಮುನ್ನಡೆಯುತ್ತಿರುವಾಗ ಸಂತೋಷವಾಗಿರಬೇಕು. ಎಲ್ಲಾ ಚರಾಚರ ವಸ್ತುಗಳಲ್ಲಿರುವ ಸೌಂದರ್ಯವನ್ನು ಆನಂದಿಸಬೇಕು.'

ಪಾಶ್ಚಾತ್ಯ ಲಾಯರ್ ಒಬ್ಬ ನಮ್ಮ ಭಾರತದ ಋಷಿಮುನಿಗಳಿಂದ ಪರಂಪರಾಗತವಾಗಿ ಕಲಿಸಲ್ಪಟ್ಟ ಪ್ರಾಚೀನ ತತ್ವಜ್ಞಾನ ಹಾಗೂ ಅನುಷ್ಟಾನ ತಂತ್ರಗಳನ್ನು ತನ್ನದಾಗಿಸಿಕೊಂಡು ತನ್ನ ದೇಶಕ್ಕೆ ಹೋಗಿ ಅಲ್ಲಿ ಅವಶ್ಯಕತೆಯಿರುವವರಿಗೆ ಹಂಚುವ ಕಾರ್ಯದಲ್ಲಿ ಪ್ರವೃತ್ತನಾಗುತ್ತಾನೆ. ನಾವೂ ಈ ತಂತ್ರಗಳನ್ನು ನಮ್ಮದಾಗಿಸಿಕೊಂಡು ಜೀವನವನ್ನು ಸಂತಸದಿಂದ ಸಾರ್ಥಕಗೊಳಿಸಿಕೊಳ್ಳೊಣ.

Friday, April 29, 2011

ಹನಿ HONEY ಹಾಸ್ಯ

‘ಕಸ್ತೂರಿ' ವಾಹಿನಿಯಲ್ಲಿ ‘`ಹನಿ HONEY ಹಾಸ್ಯ' ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ಹನಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಬೇರೆಬೇರೆ ಶೀರ್ಷಿಕೆಗಳಡಿಯಲ್ಲಿ ಬರೆಯಲು ತಿಳಿಸಿದ್ದರು. ಈ ಮೊದಲೇ ಬರೆದು ಪ್ರಕಟವಾದವುಗಳೂ ಸೇರಿದಂತೆ ವಿಭಾಗಿಸಿದ್ದೇನೆ.

ಶಾಲಾ ಕಾಲೇಜು:

ಚೆಲ್ಲು- ಸೋಶಿಯಲ್ಲು
ಹುಡುಗಿ
ಎಲ್ಲರೊಡನೆ ಕಲೆತು
ಕುಲು ಕುಲು ನಕ್ಕರೆ
ಬರೀ ಚೆಲ್ಲು ಚೆಲ್ಲು
ಹುಡುಗ
ನಗುನಗುತ್ತಾ ಬೆರೆತು
ಕೈ ಕೊಟ್ಟರೂ
ಬಹಳ ಸೋಶಿಯಲ್ಲು!

ನಲಿ-ಕಲಿ
ಸ್ಲೇಟು ಬಳಪವು ಇಲ್ಲ
ಏಟು ಬೈಗುಳವಿಲ್ಲ
ನಲಿಯುತಲೇ ಶಿಕ್ಷಕರು
ಕಲಿಸುತಿಹರಲ್ಲಾ...
ಆದರೀಗ ಶಾಲೆಗಳಲ್ಲಿ
ಮಕ್ಕಳೇ ಇಲ್ಲ!

ಪ್ರೀತಿ ಪ್ರೇಮ:

ವಾಸ್ತವ
ತನ್ನ ಮನದಳಲನ್ನೆಲ್ಲಾ
ನಿವೇದಿಸಿಕೊಂಡ ಆತ
ಅಂಗಲಾಚಿದ ಪ್ರೇಯಸಿಗೆ
ಇನ್ನಾದರೂ ನನ್ನ ವರಿಸು'
ಛಟ್ಟನೆ ಬಿತ್ತೊಂದು ಕೆನ್ನೆಗೆ
ಚುರು ಚುರು ಎಂದಾಗಲೇ...
ತಿಳಿದದ್ದು
ಅದು ಒಂದು ಕನಸು!

ಅಭಿ-ರುಚಿ
ಆಕೆ ತಿಳಿಯಲಿಚ್ಛಿಸಿದಳು
ಆತನ ಅಭಿರುಚಿ
ಉತ್ಸುಕನಾದ ಆತ
ಹೇಳಲಾರಂಭಿಸಿದ
ಬೂಂದಿ, ಬೋಂಡ, ಬಜಿ
ಒಂದಲ್ಲ ನೂರಾರು...
ತರತರದ ರುಚಿ
ಪಟ್ಟಿ ಮುಗಿವ ವೇಳೆಗೆ
ಬುದ್ಧಿ ಹೇಳಿದ್ದಳವಳು ಕಾಲಿಗೆ!


ದಾಂಪತ್ಯ:

ನೋಟ
ಪ್ರಿಯಾ
ಸಾಕಿನ್ನು ನಿನ್ನ
ಪ್ರೇಮ ಪೂರಿತ
ಆರಾಧನಾ ನೋಟ
ತಿಂಗಳಿಗೊಮ್ಮೆಯಾದರೂ
ಕೊಡು
ಕೈತುಂಬ ನಿನ್ನ
ಸಂಬಳದ ನೋಟ!

ಲೇ-LOW
ಪತಿ ಪತ್ನಿಯನ್ನು
`ಲೇ' ಎನ್ನುತ್ತಾನೆ,
ಪತ್ನಿ ಪತಿಯನ್ನೇಕೆ
`ಲೋ' ಎನ್ನುವುದಿಲ್ಲ?
ಏಕೆಂದರೆ
ಆಕೆ ಅಷ್ಟು
LOW ಅಲ್ಲ!

ಸ್ಪರ್ಧೆ
ಅವಳು ಗಂಡನಲ್ಲಿ
ಬೇಡಿಕೆ ಇಟ್ಟಳು
ಅಮೇರಿಕನ್ ಡೈಮಂಡ್ ಓಲೆಗೆ
ಆತ ಹಣಕೂಡಿಸಿ
ಓಲೆ ಮಾಡಿಸುವ ವೇಳೆಗೆ
ಅವಳ ಕಿವಿಯ ಮೇಲಿನ
ಕೂದಲೆಲ್ಲಾ ತುತ್ತಾಗಿತ್ತು
ಬಿಳಿ ನೆರೆಯ ಧಾಳಿಗೆ
ಓಲೆ ಹಾಕಿಕೊಂಡಾಗ.....
ಹರಳಿನ ಹೊಳಪು
ಕೇಶದ ಬಿಳುಪು
ಇಳಿದಿದ್ದವು ಸ್ಪರ್ಧೆಗೆ!

ರಾಜಕೀಯ

ಪಕ್ಷಾಂತರಿ
ರೆಂಬೆಯಿಂದ ರೆಂಬೆಗೆ
ಹಾರುವ ಮಂಗವೇ
ಏಕೆ ಕೂರುವುದಿಲ್ಲ
ಒಂದೆಡೆ ಸ್ಥಿರವಾಗಿ?
ರೆಂಬೆಗಳೆಲ್ಲಾ ಟೊಳ್ಳು ಅಭದ್ರ
ಹುಡುಕುತಿರುವೆ ಗಟ್ಟಿ
ನೆಲೆಗಾಗಿ!

ಸು(Some)ರಂಗ
ಮಾರ್ಗ ಸುಗಮವಾಗಲು
ತೋಡುತ್ತಾರೆ
ಸುರಂಗ
ಆಡಳಿತ ತಮ್ಮದಾಗಿಸಿಕೊಳ್ಳಲು
ಹೂಡುತ್ತಾರೆ
Someರಂಗ!

ಜನ ನಾಯಕರು
ಜನರನ್ನು ಓಲೈಸಿ
ಪಡೆಯುವರು ಓಟು
ಚೆಲ್ಲಿ ಎಲ್ಲೆಂದರಲ್ಲಿ
ಯಥೇಚ್ಛ ನೋಟು
ನೀಡುವರು ಏನೆಲ್ಲಾ
ತುಂಬು ಆಶ್ವಾಸನೆ
ಗೆದ್ದ ನಂತರ
ಸಾಗುವರು
ಕಂಡರೂ ಕಾಣದಂತೆ
ಸುಮ್ಮನೆ!

ನನ್ನ ಮೆಚ್ಚಿನ ಸ್ವರಚಿತ ಹನಿಗವನ:

ಲಕ್ಷ್ಮಣ ರೇಖೆ
ಅಂದು ಆ ರೇಖೆ ದಾಟಿ
ಪಜೀತಿ ಪಟ್ಟಳು
ತರಳೆ
ಇಂದು
ಈ ರೇಖೆ ದಾಟಿಯೂ
ಜೀವ ಉಳಿಸಿಕೊಳ್ಳುತಿವೆ
ಜಿರಲೆ!

(ಎಪ್ರಿಲ್ ಪ್ರಾರ೦ಭದಲ್ಲೆ ಹಾಕಬೇಕೆ೦ದಿದ್ದೆ . ಅಂತ್ಯದಲ್ಲಾದರೂ ಆಯಿತಲ್ಲಾ ಎನ್ನುವುದೇ ಸ೦ತಸ.
`ಹನಿ'ಗಳು ನಿಮ್ಮೆದುರಿವೆ.`ಹಾಸ್ಯ'ಕ್ಕಾಗಿ ಶೋಧಿಸಿ ಪ್ರತಿಕ್ರಿಯಿಸಿ!)

Monday, April 25, 2011

ಮನದ ಅಂಗಳದಿ.........೩೭. ಹಿಂಸೆ-ಅಹಿಂಸೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ‘ಚೈತನ್ಯ’ ತರಬೇತಿ ನೀಡುವ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ನನಗೆ ‘ಮೌಲ್ಯ ಶಿಕ್ಷಣ’ದ ಒಂದು ಅವಧಿಯೂ ಇರುತ್ತಿತ್ತು. ತರಗತಿಯ ಪ್ರಾರಂಭದಲ್ಲಿ ಅವರಿಗೆ ಮೌಲ್ಯಗಳಿಗೆ ಸಂಬಂಧಿಸಿದಂತೆ ಒಂದು ಆಟವನ್ನು ಆಡಿಸುತ್ತಿದ್ದೆ. ‘ಈಗ ಕೆಲವು ಪದಗಳನ್ನು ಹೇಳುತ್ತೇನೆ. ನಿಮಗದು ಬೇಕು ಎನಿಸಿದರೆ (ಸ್ವೀಕಾರ ಯೋಗ್ಯವಾಗಿದ್ದರೆ) ‘ಜೈ ಜೈ’ ಎಂದು ಹೇಳಿರಿ. ಬೇಡ ಎನಿಸಿದರೆ ‘ಛೀ ಛೀ’ ಎನ್ನಿರಿ ಎಂದು ಸೂಚನೆಯನ್ನು ನೀಡಿ ಪ್ರಾರಂಭಿಸುತ್ತಿದ್ದೆ.........ಅಸತ್ಯ-‘ಛೀ ಛೀ’, ಅನ್ಯಾಯ-‘ಛೀ ಛೀ’, ಅಗೌರವ-‘ಛೀ ಛೀ’, ಅಧರ್ಮ-‘ಛೀ ಛೀ’, ಅನೀತಿ-‘ಛೀ ಛೀ’, ..........ಹೀಗೆ ಹೇಳುತ್ತಾ ‘ಅಹಿಂಸೆ’ ಎಂದಾಗ ಎಲ್ಲರೂ ಒಟ್ಟಾಗಿ ‘ಛೀ ಛೀ’ ಎಂದು ಬಿಡುತ್ತಿದ್ದರು! ‘ಈಗ ನಮ್ಮ ಜೀವನ ಕ್ರಮದಲ್ಲಿ ‘ಅಹಿಂಸೆ’ಯ ಸ್ಥಾನ ಹೀಗೇ ಇರುವುದು,’ ಎನ್ನಬೇಕಾಗುತ್ತಿತ್ತು.

ಯಾವುದೇ ಸಮೂಹವನ್ನು ಗಮನಿಸಿದರೂ ಬಹುತೇಕರ ಆಹಾರ ಪದ್ಧತಿ ಹಿಂಸೆಯನ್ನು ಒಳಗೊಂಡೇ ಇರುತ್ತದೆ. ನಮ್ಮ ಕೆಲವು ಹಳ್ಳಿಯ ಶಾಲೆಗಳಲ್ಲಂತೂ ತರಗತಿಗೆ ಒಂದಿಬ್ಬರು ತಮ್ಮದು ಸಸ್ಯಾಹಾರ ಎಂದು ಸಂಕೋಚದಿಂದ ಹೇಳುವ ಪರಿಸ್ಥಿತಿಯಿರುತ್ತದೆ. ಎಲ್ಲವೂ ಮೊದಲಿನಿಂದ ಬೆಳೆದು ಬಂದ ಪದ್ಧತಿಗಳು. ಅವರಿಗೆ ಅಹಿಂಸೆಯ ಬಗ್ಗೆ ಏನೆಂದು ಹೇಳುವುದು?

ಪ್ರಕೃತಿಯಲ್ಲಿನ ಆಹಾರ ಸರಪಣಿಯನ್ನು ಗಮನಿಸಿದಾಗ ಮೇಲ್ಮಟ್ಟಕ್ಕೆ ಹೋದಂತೆ ಒಂದು ಜೀವಿಯು ಮತ್ತೊಂದು ಜೀವಿಯನ್ನು ಆಧರಿಸಿಯೇ ಬದುಕುವುದು. ಅದನ್ನು ಅತಿಕ್ರಮಿಸಿದರೆ ಮಾಂಸಾಹಾರಿ ಜೀವಿಗಳು ಬದುಕುವುದಾದರೂ ಹೇಗೆ? ‘ಪುಣ್ಯಕೋಟಿಯ ಕಥೆ’ಯಲ್ಲಿ ಗೋವನ್ನು ತಿನ್ನುವುದಿಲ್ಲವೆಂದು ನಿರ್ಧಾರ ಮಾಡಿದ ಹುಲಿರಾಯ ಏಕೆ ಬೆಟ್ಟದಿಂದ ಹಾರಿ ಬಿದ್ದು ಪ್ರಾಣವನ್ನು ಕಳೆದುಕೊಂಡಿತು ಎಂದು ಮೊದಲು ಯೋಚಿಸುವಂತಾಗುತ್ತಿತ್ತು. ಮಾಂಸಾಹಾರಿಯಾದ ಹುಲಿಯು ಅಹಿಂಸೆಯನ್ನು ಪಾಲಿಸಲು ತೀರ್ಮಾನ ಮಾಡಿದ ನಂತರ ಅದು ತಿನ್ನುವುದಾದರೂ ಏನನ್ನು? ಎನ್ನುವುದು ಆನಂತರದ ಓದಿನಲ್ಲಿ ತಿಳಿಯಿತು. ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಮಾತ್ರವಲ್ಲ. ಮಾನಸಿಕ ಹಿಂಸೆಯೂ ಹಿಂಸೆಯೇ.

ಈಗ ಹಿಂಸೆ-ಅಹಿಂಸೆಯ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಏನನ್ನು ಹೇಳುತ್ತಾರೆಂದು ತಿಳಿಯೋಣ:

‘ನೀವು ಹಿಂಸೆ ಎನ್ನುತ್ತೀರಲ್ಲ, ಆ ಮಾತಿಗೆ ನೀವು ಕೊಡುವ ಅರ್ಥವೇನು? ಈ ಲೋಕದಲ್ಲಿ ಬದುಕುತ್ತಿರುವ ಮನುಷ್ಯ ಹಿಂಸಕನಾಗದೆ ಇರಲು ಸಾಧ್ಯವೇ? ಎಂಬ ಪ್ರಶ್ನೆಯನ್ನು ಆಳವಾಗಿ ಪರಿಶೀಲಿಸತೊಡಗಿದರೆ ಅದು ನಮ್ಮ ಕುತೂಹಲವನ್ನು ಕೆರಳಿಸುತ್ತದೆ. ಸಮಾಜಗಳು, ಧಾರ್ಮಿಕ ಸಂಘಟನೆಗಳು ಪ್ರಾಣಿಗಳನ್ನು ಕೊಲ್ಲದೇ ಇರಲು ಪ್ರಯತ್ನಿಸಿವೆ. ಕೆಲವರಂತೂ ‘ಪ್ರಾಣಿಗಳನ್ನು ಕೊಲ್ಲದಿರುವುದೇನೋ ಸರಿ ತರಕಾರಿ, ಸಸ್ಯಗಳನ್ನು ಕೊಲ್ಲುವುದಾದರೂ ಹೇಗೆ? ಎಂದು ಹೇಳಿರುವುದೂ ಉಂಟು. ನಾವು ಬದುಕಿರುವುದೇ ಅಸಾಧ್ಯ ಎಂಬ ಮಟ್ಟಕ್ಕೂ ಇದನ್ನು ಒಯ್ಯುವುದು ಸಾಧ್ಯವಿದೆ. ಹಿಂಸೆ-ಅಹಿಂಸೆಗಳ ನಡುವೆ ಎಲ್ಲಿ ಗೆರೆ ಎಳೆಯುತ್ತೀರಿ ನೀವು? ವೈಯಕ್ತಿಕ ಕೋಪ, ಅಂದರೆ ವ್ಯಕ್ತಿಯೊಬ್ಬ ತೊಡಗಿಕೊಳ್ಳುವ ಹಿಂಸಕ ಕ್ರಿಯೆಗೂ ಮತ್ತೊಂದು ಸಮಾಜವನ್ನು ನಾಶಮಾಡುವ ಸಲುವಾಗಿ ಸೈನ್ಯವನ್ನು ಕಟ್ಟಿಕೊಳ್ಳಲು ಪ್ರಚೋದಿಸುವ ಸಮಾಜದ ಸಂಘಟಿತ ದ್ವೇಷಕ್ಕೂ ನಡುವೆ ವ್ಯತ್ಯಾಸವಿದೆಯೇ?.....ಮನುಷ್ಯರ ಪಾಲಿಗೆ, ಅವರ ಅಂತರಂಗಕ್ಕೆ ಮತ್ತು ಬಹಿರಂಗಕ್ಕೆ ಹಿಂಸೆ ಎಷ್ಟು ಭಯಂಕರ ಎಂದು ಕಾಣುತ್ತೇವೆ. ಈ ಹಿಂಸೆಯನ್ನು ಕೊನೆಗಾಣಿಸಲು ಸಾಧ್ಯವೇ?

ಪ್ರಾಣಿಗಳು ಹಿಂಸಕವಾಗಿರುತ್ತವೆ. ಪ್ರಾಣಿಗಳ ಫಲಿತವಾದ ಮನುಷ್ಯರೂ ಹಿಂಸಕರೇ. ಕೋಪಗೊಳ್ಳುವುದು, ಅಸೂಯೆಪಡುವುದು, ಅಧಿಕಾರವನ್ನು ಅರಸುವುದು, ಅಂತಸ್ತು ಮತ್ತು ಗೌರವಗಳಿಗಾಗಿ ಹಂಬಲಿಸುವುದು, ಆಳುವುದು, ಉಗ್ರರಾಗಿರುವುದು ಇವೆಲ್ಲಾ ಮನುಷ್ಯಜೀವಕ್ಕೇ ಸೇರಿದವು.ಮನುಷ್ಯ ಹಿಂಸಕನೆನ್ನುವುದನ್ನು ಸಾವಿರ ವರ್ಷಗಳಿಂದ ಯುದ್ಧಗಳು ತೋರಿಸಿವೆ.ಜೊತೆಗೇ ಮನುಷ್ಯ ‘ಅಹಿಂಸೆ’ ಎಂದು ಕರೆಯಲಾಗುವ ಐಡಿಯಾಲಜಿಯನ್ನೂ ಬೆಳೆಸಿಕೊಂಡಿದ್ದಾನೆ......ನಾವು ವಾಸ್ತವವಾಗಿ ಹಿಂಸಕರಾಗಿದ್ದು ಅಹಿಂಸೆಯ ಐಡಿಯಾಲಜಿಯನ್ನೂ ಇಟ್ಟುಕೊಂಡಿದ್ದರೆ ಸಂಘರ್ಷ ಹುಟ್ಟುತ್ತದೆ. ನಾವು ಸದಾ ಅಹಿಂಸಾತ್ಮಕವಾಗಿರಲು ಬಯಸುತ್ತೇವೆ. ಅದು ಸಂಘರ್ಷದ ಒಂದು ಭಾಗ......ಹಿಂಸೆಯ ವಾಸ್ತವವನ್ನು ನೋಡುವ ಕ್ರಿಯೆ ಅಂತರವನ್ನು ಸೃಷ್ಟಿಸುತ್ತದೆ. ಹೀಗೆ ಕಾಲಕ್ಕೆ ಅವಕಾಶಮಾಡಿಕೊಟ್ಟಾಗ ಹಿಂಸೆಗೆ ಕೊನೆಯೇ ಇರುವುದಿಲ್ಲ. ಅಹಿಂಸೆಯನ್ನು ಬೋಧಿಸುತ್ತಾ ಹಿಂಸೆಯಲ್ಲಯೇ ತೊಡಗಿರುತ್ತೇವೆ......

ಹಿಂಸೆಯನ್ನು ಕೊನೆಗಾಣಿಸುವ ಮಹತ್ವವನ್ನು ನಾವೆಲ್ಲಾ ಅರಿತಿದ್ದೇವೆ. ಅಹಿಂಸೆಯ ಆದರ್ಶ ನಮ್ಮನ್ನು ಹಿಂಸೆಯಿಂದ ಪಾರುಮಾಡಲಾರದು. ಹಿಂಸೆಯ ವಿಶ್ಲೇಷಣೆಯೂ ನಮ್ಮೊಳಗಿನ ಹಿಂಸೆಯನ್ನು ಲಯಗೊಳಿಸಲಾರದು. ಹಾಗಾದರೆ ನಾವೇನು ಮಾಡಬೇಕು? ಇದು ನಮ್ಮ ಮುಖ್ಯ ಸಮಸ್ಯೆಗಳಲ್ಲಿ ಒಂದಲ್ಲವೇ? ಇಡೀ ಜಗತ್ತು ಹಿಂಸೆಯಲ್ಲಿ, ಯುದ್ಧಗಳಲ್ಲಿ ಸಿಲುಕಿದೆ. ನಮ್ಮ ಸಂಗ್ರಹಶೀಲ ಸಮಾಜದ ರಚನೆಯೇ ಮೂಲಭೂತವಾಗಿ ಹಿಂಸಾತ್ಮಕವಾದದ್ದು....... ಸ್ವಕೇಂದ್ರ್ರಿತರಾಗದೇ ನಾವು ಮಾಡಬೇಕಾದದ್ದು ಏನು? .......‘ಹಿಂಸಕನಾಗದಿರುವುದು ಹೇಗೆ?’ ಎಂದು ಕೇಳಿಕೊಂಡು ಸುಮ್ಮಸುಮ್ಮನೆ ಅಹಿಂಸೆಯ ಆದರ್ಶವನ್ನು ಕಟ್ಟಿಕೊಳ್ಳುವುದು ವ್ಯರ್ಥವೆಂದೇ ನಾನು ತಿಳಿದಿದ್ದೇನೆ. ಹಿಂಸೆಯನ್ನು ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಹಿಂಸೆಯನ್ನು ಲಯಗೊಳಿಸುವ ಸಾಧ್ಯತೆ ಬಹುಷಃ ಕಂಡೀತು.’

‘ಅಹಿಂಸಾ ಪರಮೋ ಧರ್ಮಃ’ ಎಂಬ ಅತ್ಯಮೂಲ್ಯವಾದ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾವೀರರ ಜಯಂತಿಯನ್ನು ಏಪ್ರಿಲ್ ೧೬ರಂದು ಆಚರಿಸಿದ್ದೇವೆ. ನಮ್ಮಲ್ಲಿರುವ ಹಿಂಸೆಯ ಅಂಶವನ್ನು ಲಯಗೊಳಿಸುವಲ್ಲಿ ಪ್ರವೃತ್ತರಾಗೋಣ. ಆಗ ಅಹಿಂಸೆಯು ತಾನೇತಾನಾಗಿ ನಮ್ಮ ಒಂದು ಭಾಗವಾಗುತ್ತದೆ.

Wednesday, April 20, 2011

ಮನದ ಅಂಗಳದಿ.........೩೬. ಕಾಲ

‘ಕಾಲ’ ಎನ್ನುವ ಪದಕ್ಕೆ ಅನೇಕ ಅರ್ಥಗಳಿದ್ದರೂ ನಾವು ಸಾಮಾನ್ಯವಾಗಿ ‘ಸಮಯ’ ಎನ್ನುವ ಅರ್ಥದಲ್ಲಿಯೇ ಅದನ್ನು ಬಳಸುತ್ತೇವೆ. ಸಮಯವನ್ನು ಅಳತೆಮಾಡುವ ಅತ್ಯಂತ ನವನವೀನ ಉಪಕರಣಗಳು ನಾಗರೀಕತೆಯು ಬೆಳೆದಂತೆ ರೂಢಿಗೆ ಬಂದವು. ಅತ್ಯಂತ ಸೂಕ್ಷ್ಮವಾದ ಮೈಕ್ರೋ, ನ್ಯಾನೊ ಸೆಕೆಂಡ್‌ಗಳಂತಹವನ್ನೂ ನಿಖರವಾಗಿ ತಿಳಿಯಬಲ್ಲಂತಹ ತಾಂತ್ರಿಕತೆಯೂ ಪ್ರಗತಿಹೊಂದಿತು. ಈ ಬೆಳವಣಿಗೆಯಲ್ಲಿ ನಮ್ಮನ್ನು ನಾವೇ ಗಡಿಯಾರಕ್ಕೆ ಬಿಗಿದುಕೊಂಡಂತೆ ಜೀವನದ ಯಾಂತ್ರಿಕ ಓಟ ಪ್ರಾರಂಭವಾಯಿತು. ಹಗಲು-ಇರುಳುಗಳು ಒಂದನ್ನೊಂದು ಅಟ್ಟಿಸಿಕೊಂಡು ಓಡುತ್ತಿರುವ ಮಾದರಿಯಲ್ಲಿ ದಿನಗಳು ಉರುಳಲಾರಂಭಿಸಿದವು. ಈ ಬಿಡುವಿಲ್ಲದ ಓಟದಲ್ಲಿ ನಮ್ಮ ಪಾತ್ರವೇನು? ನಮ್ಮ ಗುರಿಯೇನು? ಎನ್ನುವುದನ್ನು ವಿವೇಚಿಸಲಾರದಷ್ಟು ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆಯೇ?

ಕಳೆದ ಶತಮಾನ ಕಂಡ ಮಹಾನ್ ವಿಜ್ಞಾನಿ ಐನ್‌ಸ್ಟೈನ್ ಅವರು ಸಮಯದ ಸಾಪೇಕ್ಷತೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ನಾವು ಯಾರನ್ನಾದರೂ ಕಾಯುತ್ತಿರುವಾಗ, ಕೆಟ್ಟ ಚಲನಚಿತ್ರವನ್ನು ವೀಕ್ಷಿಸುವಾಗ ಸಮಯವು ಬಹಳ ದೀರ್ಘವೆನಿಸುತ್ತದೆ. ಅದೇ ಪ್ರಿಯಕರನೊಡನೆಯಿರುವ ಪ್ರೇಯಸಿಗೆ ಸಮಯವು ಶೀಘ್ರಗತಿಯಲ್ಲಿ ಜಾರುತ್ತದೆ!

ಸಮಯ ಬಹು ಅಮೂಲ್ಯವಾದದ್ದು. ಕಳೆದ ಸಮಯ ಮತ್ತೆ ದೊರಕುವುದಿಲ್ಲ ಎನ್ನುವುದನ್ನು ಹಿರಿಯರಿಂದ ತಿಳಿದಿದ್ದೇವೆ. ಯಾವುದೇ ದುಃಖವನ್ನು ಮರೆಸಲೂ ಕಾಲವೇ ತಕ್ಕ ಔಷಧ ಎನ್ನುವುದನ್ನು ಅನುಭವದಿಂದ ಅರಿತಿದ್ದೇವೆ.

ಕಾಲವನ್ನು ‘ಭೌತಿಕ ಕಾಲ’ ಮತ್ತು ‘ಮಾನಸಿಕ ಕಾಲ’ ಎಂದು ವರ್ಗೀಕರಿಸುತ್ತಾ ‘ಕಾಲ’ ಎನ್ನುವುದರ ವಿಶ್ಲೇಷಣೆಯನ್ನು ಜಿಡ್ಡು ಕೃಷ್ಣಮೂರ್ತಿಯವರು ಈ ರೀತಿಯಾಗಿ ಮಾಡುತ್ತಾರೆ:

‘ನಾವು ಕಾಲದ ಬಗ್ಗೆ ಮಾತನಾಡುತ್ತಿರುವಾಗ ಗಡಿಯಾರವು ತೋರುವ, ಕ್ರಮಾಗತವಾದ, ಭೌತಿಕ ಕಾಲದ ವಿಷಯವಾಗಿ ಮಾತನಾಡುತ್ತಿಲ್ಲ. ಆ ಕಾಲ ಇರುತ್ತದೆ ಮತ್ತು ಇದ್ದೇ ಇರಬೇಕು. ಬಸ್ಸು ಹಿಡಿಯುವುದಿದ್ದರೆ, ರೈಲಿಗೆ ಸಮಯಕ್ಕೆ ಸರಿಯಾಗಿ ಹೋಗುವುದಿದ್ದರೆ, ನಾಳೆ ಯಾರನ್ನೋ ಭೇಟಿಮಾಡುವುದಿದ್ದರೆ ನಮಗೆ ಕ್ರಮಾಗತವಾದ ಕಾಲದ ಅಗತ್ಯ ಇದ್ದೇ ಇರುತ್ತದೆ. ಆದರೆ ಮಾನಸಿಕವಾಗಿ ನಾಳೆ ಎಂಬುದು ನಿಜವಾಗಲೂ ಇದೆಯೆ? ಆಂಥಾ ಮಾನಸಿಕ ಕಾಲವಿದೆಯೆ? ಅಥವಾ ಅಂಥಾ ಮಾನಸಿಕ ನಾಳೆ ನಮ್ಮ ಆಲೋಚನೆಗಳಿಂದ ಸೃಷ್ಟಿಗೊಂಡದ್ದೋ? ಏಕೆಂದರೆ ಆಲೋಚನೆಯು ನೇರವಾದ ತತ್ ಕ್ಷಣದ ಬದಲಾವಣೆಯನ್ನು ಕಾಣಲಾರದು..... ನನ್ನ ಬದುಕಿನ ರೀತಿಯಲ್ಲಿ, ನನ್ನ ಆಲೋಚನೆ, ಭಾವನೆ ಮತ್ತು ಕ್ರಿಯೆಗಳ ವಿಧಾನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದುಕೊಳ್ಳಲು ಬಯಸಿ ‘ಹೀಗೆ ಬದಲಾಗಲು ಸಮಯ ಬೇಕು. ನಾನು ನಾಳೆಯಿಂದ ಅಥವಾ ಮುಂದಿನ ತಿಂಗಳಲ್ಲಿ ಬದಲಾಗುತ್ತನೆ.’ಎಂದುಕೊಳ್ಳುತ್ತೇನೆ. ಇಂಥಾ ಕಾಲದ ಬಗ್ಗೆ, ಕಾಲದ ಮಾನಸಿಕ ರಚನೆಯ ಬಗ್ಗೆ ನಾವೀಗ ಮಾತನಾಡುತ್ತಿದ್ದೇವೆ. ನಾಳೆ, ಮುಂದಿನ ತಿಂಗಳು, ಸುದೂರ ಭವಿಷ್ಯ ಇವನ್ನು ಕಲ್ಪಿಸಿಕೊಂಡು ನಾವು ಅದರಲ್ಲಿ ಬದುಕತೊಡಗುತ್ತೇವೆ. ಭೂತ, ವರ್ತಮಾನ,ಭವಿಷ್ಯಗಳ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ಗಡಿಯಾರದ ಕಾಲದ ಬಗ್ಗೆ ಅಲ್ಲ. ನಾನು ನಿನ್ನೆ ಇದ್ದವನು, ಆ ನಿನ್ನೆ ಇಂದು ಎಂಬ ವರ್ತಮಾನದಲ್ಲಿ ವ್ಯವಹರಿಸುತ್ತಾ ನಾಳೆಯನ್ನು ಸೃಷ್ಟಿಸುತ್ತದೆ. ಕಳೆದ ವರ್ಷ ನನ್ನ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರುವಂಥಾ ಘಟನೆಯು ನಡೆದಿತ್ತು. ಇಂದು ನನಗೆ ಆಗುವ ಅನುಭವವನ್ನು ಆ ಅನುಭವಕ್ಕೆ ತಕ್ಕಂತೆ, ಜ್ಞಾನಕ್ಕೆ ತಕ್ಕಂತೆ, ಪರಂಪರೆ ಮತ್ತು ರೂಢಿಗೆ ತಕ್ಕಂತೆ ಅನುವಾದಿಸಿಕೊಳ್ಳುತ್ತಾ ನಾಳೆಯನ್ನು ಸೃಷ್ಟಿಸಿಕೊಳ್ಳುತ್ತೇವೆ. ಹೀಗೆ ಮಾಡುತ್ತಾ ಕಾಲದ ವರ್ತುಲದಲ್ಲಿ ಸಿಕ್ಕಿಬೀಳುತ್ತೇವೆ. ಇದನ್ನೇ ನಾವು ಬದುಕು ಅಥವಾ ಕಾಲ ಎನ್ನುತ್ತೇವೆ. ನೀವು ಎಂದರೆ ಕಾಲ. ಎಲ್ಲ ನೆನಪು, ರೂಢಿ, ಐಡಿಯಾ, ಆಸೆ, ಹತಾಶೆ, ಬದುಕಿನ ಅಸಹನೀಯ ಒಂಟಿತನ ಇವೆಲ್ಲವೂ ಕಾಲವೇ..... ಇವೆಲ್ಲವೂ ಇಲ್ಲವಾಗುವ ಕಾಲಾತೀತ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮನಸ್ಸು ಅನುಭವ ಮುಕ್ತವಾಗಿರಬಲ್ಲದೇ, ಅಂದರೆ ಕಾಲ ಮುಕ್ತವಾಗಿರಬಲ್ಲದೇ ಎಂದು ಪರಿಶೀಲಿಸಬೇಕು.’

ಕಾಲವೆಂದರೆ ಆಲೋಚನೆ. ಕಾಲವೆಂಬುದು ನಮ್ಮ ಮಟ್ಟಿಗೆ ಅತ್ಯಂತ ವಿಶೇಷವಾದ ರೀತಿಯಲ್ಲಿ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದೆ. ಕಾಲವು ಭಯದ ಒಂದು ಅಂಶ. ಕಾಲವೆಂದರೆ ಕ್ಷಣ, ನಿಮಿಷ, ಗಂಟೆ, ದಿನ, ವರ್ಷ ಎಂಬ ಗಡಿಯಾರದ ಕಾಲ ಎಂಬರ್ಥದಲ್ಲಿ ಹೇಳುತ್ತಿಲ್ಲ. ಕಾಲವೆಂಬುದು ಅಂತರಂಗದ, ಮಾನಸಿಕವಾದ ಪ್ರಕ್ರಿಯೆಯೂ ಹೌದು. ಆ ವಾಸ್ತವವೇ ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತದೆ. ಕಾಲವೇ ಭಯವಾದುದರಿಂದ ಕಾಲವು ಭಯವನ್ನು ಹುಟ್ಟಿಸುವುದಿಲ್ಲ. ಕಾಲವೇ ಕಸಿವಿಸಿ, ಸಂಘರ್ಷಗಳನ್ನು ಹುಟ್ಟಿಸುತ್ತದೆ. ವಾಸ್ತವದ ತತ್‌ಕ್ಷಣ ಗ್ರಹಿಕೆಯು, ವಾಸ್ತವದ ಕಾಣ್ಕೆಯು ಕಾಲಾತೀತವಾದದ್ದು.....ಆದ್ದರಿಂದ ಭಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಕಾಲದ ಬಗ್ಗೆ ಎಚ್ಚರವಿರಬೇಕು. ಮನಸ್ಸು ಕಾಲದ ಸಂಕೀರ್ಣತೆಯನ್ನು ಅರಿಯದೇ ಭಯವನ್ನು ಇಡಿಯಾಗಿ ಅರ್ಥಮಾಡಿಕೊಳ್ಳಲಾರದು. ಕಾಲ ಮತ್ತು ಭಯ ಒಟ್ಟೊಟ್ಟಿಗೇ ಇರುವಂಥವು.

ಕಾಲವೆಂದರೆ ‘ಇರುವ ಸ್ಥಿತಿ’ಯಿಂದ `ಇರಬೇಕಾದ ಸ್ಥಿತಿ’ಯತ್ತ ಚಲಿಸುವುದು. ಉದಾಹರಣೆಗೆ ನನ್ನಲ್ಲಿ ಭಯವಿದೆ. ಒಂದಲ್ಲಾ ಒಂದು ದಿನ ನಾನು ಭಯಮುಕ್ತನಾಗುತ್ತೇನೆ. ಆದ್ದರಿಂದ ಭಯಮುಕ್ತನಾಗುವುದಕ್ಕೆ ಸಮಯ, ಕಾಲ ಅಗತ್ಯ. ನಾವು ಯೋಚಿಸುವುದೇ ಹೀಗೆ. ಇರುವ ಸ್ಥಿತಿಯಿಂದ ಇರಬೇಕಾದ ಸ್ಥಿತಿಯತ್ತ ಸಾಗುವುದು ಕಾಲವನ್ನು ಒಳಗೊಂಡಿದೆ. ಈ ಕಾಲವು ಇರುವ ಸ್ಥಿತಿಗೂ ಇರಬೇಕಾದ ಸ್ಥಿತಿಗೂ ನಡುವಿನ ಸ್ಥಿತಿಗೂ ನಡುವಿನ ಅಂತರದಲ್ಲಿ ನಾವು ಮಾಡಬೇಕಾದ ಪ್ರಯತ್ನಗಳನ್ನೆಲ್ಲಾ ಒಳಗೊಂಡಿದೆ. ಇದರಿಂದ ಸಂಘರ್ಷವನ್ನು ಅನುಭವಿಸುತ್ತಿರುತ್ತೇವೆ..... ಅಂದರೆ ಕಾಲವೇ ಅವ್ಯವಸ್ಥೆಯನ್ನು ಸೃಷ್ಟಿಸುತ್ತಿರುತ್ತದೆ.

ನಾವು ಭೌತಿಕ ಮತ್ತು ಮಾನಸಿಕ ಕಾಲಗಳ ನಡುವೆ ಸಿಕ್ಕಿಬಿದ್ದಿದ್ದೇವೆ. ನಾವು ಬಸ್ಸು ಅಥವಾ ರೈಲನ್ನು ಹಿಡಿಯಲು ಭೌತಿಕ ಕಾಲವನ್ನು ಒಪ್ಪಿಕೊಳ್ಳಲೇ ಬೇಕು. ಆದರೆ ಮಾನಸಿಕ ಕಾಲವನ್ನು ನಿರಾಕರಿಸಿದರೆ ಮಾತ್ರ ಇವೆರಡಕ್ಕೂ ಸಂಬಂಧಪಟ್ಟಿರದ ಬೇರೆಯದೇ ಬಗೆಯ ಕಾಲವನ್ನು ಪಡೆಯಬಹುದು. ಆ ಕಾಲಕ್ಕೆ ನೀವೂ ನನ್ನೊಡನೆ ಬರಬೇಕೆಂದು ಆಶಿಸುತ್ತೇನೆ! ಆಗ ಕಾಲವು ಅವ್ಯವಸ್ಥೆಯಾಗಿರುವುದಿಲ್ಲ. ಅಗಾಧವಾದ ವ್ಯವಸ್ಥೆಯಾಗಿರುತ್ತದೆ.....’

ಹೀಗೆ ‘ಕಾಲ’ದ ಬಗ್ಗೆ ಹೊಸ ಆಯಾಮವನ್ನು ನೀಡಿ ತಮ್ಮ ವಿಶಿಷ್ಟವಾದ ವೈಚಾರಿಕ ತೀಕ್ಷ್ಣತೆಯಿಂದ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುವ ಪ್ರಯತ್ನವನ್ನು ನಡೆಸುತ್ತಾರೆ ಜಿಡ್ಡು ಕೃಷ್ಣಮೂರ್ತಿಯವರು. ಕಡೆಯಪಕ್ಷ ‘ತರಣಿ ದರುಶನಕಿಂತ ಕಿರಣಾನುಭವ ಲೇಸು’ ಎನ್ನುವ ಸಾಲಿನಂತೆ ನಮ್ಮ ನಮ್ಮ ಶಕ್ತ್ಯಾನುಸಾರ ಈ ವಿಚಾರಗಳನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಸೋಣ.

Saturday, April 16, 2011

'ಸ೦ಯುಕ್ತ ಕರ್ನಾಟಕ' ದಲ್ಲಿ ನನ್ನ ಸ೦ದರ್ಶನದ ಲೇಖನ

ಆತ್ಮೀಯರೇ,

ದಿನಾ೦ಕ: ೦೧-೧೦-೨೦೧೦ರ 'ಸ೦ಯುಕ್ತ ಕರ್ನಾಟಕ' ಪತ್ರಿಕೆಯ ಶುಕ್ರವಾರದ 'ಅ೦ದದೂರು ಬೆ೦ಗಳೂರು' ವಿಶೇಷ ಆವೃತ್ತಿಯ 'ಆಮುಖ' ಅ೦ಕಣದಲ್ಲಿ ಭುವನೇಶ್ವರಿ. ಹೆಚ್.ಸಿ.ಯವರು ನನ್ನ ಸ೦ದರ್ಶನದ ಲೇಖನವನ್ನು ಬರೆದು ಅದರ pdf ಅನ್ನು e -mail ಮೂಲಕ ಕಳುಹಿಸಿದ್ದರು. ಆಗಿನಿ೦ದಲೂ ಇದನ್ನು ತಮ್ಮೊ೦ದಿಗೆ ಹ೦ಚಿಕೊಳ್ಳಬೇಕೆ೦ಬ ಹ೦ಬಲ ಹಾಗೂ ಬ್ಲಾಗ್ ಗೆ ಹಾಕುವುದು ನಾನಾದ್ದರಿ೦ದ ನನ್ನ ಬಗ್ಗೆ ನಾನೇ ಹೇಳಿಕೊಳ್ಳುವ೦ತಾಗುವುದೆ೦ಬ ಅಳುಕು, ಜೊತೆಗೆ ಸಮಯದ ಅಭಾವ, ಇವುಗಳ ನಡುವೆ ಮು೦ದೂಡುತ್ತಾ ಬ೦ದೆ. ಈಗ ಗಟ್ಟಿ ಮನಸ್ಸುಮಾಡಿ ನಿಮ್ಮೆದುರು ಇಟ್ಟಿದ್ದೇನೆ....

ಪರಿವೀಕ್ಷಕಿ ಸದಾಚಾರದ ನಿರೀಕ್ಷಕಿ

ಕಥೆ,ಕವನ,ಚುಟುಕು, ಲಲಿತಪ್ರಬಂಧ ಮತ್ತು ಹಾಸ್ಯಬರಹಗಳಲ್ಲಿ ಆರೋಗ್ಯಯುತ ಫಸಲನ್ನು ನೀಡಿರುವ ಈ ಕವಿ ಆಶುಕವಿ! ಬಿಡುವಿಲ್ಲದ ದುಡಿತದ ನಡುವೆ ‘ಕೀಲೆಣ್ಣೆ'ಯಾಗಿರುವ ಸಾಹಿತ್ಯಾಭಿರುಚಿ ಸಿಂಚನ ಸೇತು! ಅವರದೇ ಮಾತುಗಳಲ್ಲಿ; ‘ಸಾಗಿದಂತೆ ಬದುಕ ಯಾಂತ್ರಿಕ ಬಂಡಿ ಥಟ್ಟನೆ ಹೊಳೆವ ಚುಟುಕುಗಳೇ ಸಾಹಿತ್ಯ ಕ್ಷೇತ್ರದೊಡನೆ ಸೇರಿಸುವ ಕೊಂಡಿ!'

‘ನಾನು ಏನನ್ನಾದರೂ ಸಾಧಿಸಿದ್ದೇನೆ ಎಂದು ನಾನು ಖಂಡಿತ ಭಾವಿಸಿಲ್ಲ. ಬರೆಯುವುದು ನನಗೆ ಸಂತಸದ, ಸಮಾಧಾನ ನೀಡುವ, ಸಾರ್ಥಕ ಭಾವವನ್ನುಂಟುಮಾಡುವ ಕ್ಷಣ, ಅಷ್ಟೆ' ಎನ್ನುವ ತುಂಬು ಮನಃ ಸ್ಥಿತಿಯ ನಮ್ಮ ನಿಮ್ಮ ನಡುವಿನ ಬರಹಗಾತಿ ಪ್ರಭಾಮಣಿ ನಾಗರಾಜರ ಲೇಖನಿಯ ಕಸುವು ಈ ಸಾರಿಯ ಆ ಮುಖದಲ್ಲಿ..

ಬರೆಯಬೇಕೆಂಬಾಸೆ ಮನದ ತುಂಬೆಲ್ಲಾ
ಆದರೀ ಯಾಂತ್ರಿಕತೆ ಸಮಯ ಸಿಗದಲ್ಲಾ
ಅದಕಾಗೇ ಭಾವನೆಗಳನೆಲ್ಲಾ ಮೊಟಕು ಗೊಳಿಸಿ
ಆಗಿದ್ದೇನೆ ಸಾಹಿತ್ಯ ದೇವಿಗೆ ಚುಟುಕು ದಾಸಿ!

ಎಂದು ತಾನು ಆರಿಸಿಕೊಂಡ ಅಥವಾ ತನಗೆ ಒಗ್ಗಿದ, ಒಗ್ಗಿಸಿಕೊಂಡ(!) ಸಾಹಿತ್ಯ ಪ್ರಕಾರದ ಬಗ್ಗೆ ಮುಕ್ತವಾಗಿ ತೆರೆದಿಡುವ ಹಾಸನ ನೆಲದ ಪ್ರಭಾಮಣಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರಕ್ಕೂ ಸಲ್ಲಿಸುತ್ತಿರುವ ಸೇವೆ ಮಾದರಿ. ಗಣಿತ ವಿಷಯ ಪರಿವೀಕ್ಷಕರಾಗಿರುವ ಈಕೆಯ ನಡೆ ನುಡಿ, ಚಿಂತನೆ, ಬರಹ ಸಮಾಜ ವಿಜ್ಞಾನಕ್ಕೆ ದೊಡ್ಡಕೊಡುಗೆ.

‘ಬರೆಯುವುದರಲ್ಲಿ 'ನಿರೀಕ್ಷಿತ ಸಾಧನೆ' ಎನ್ನುವುದು ಯಾವುದೂ ನನಗೆ ತಿಳಿಯುತ್ತಿಲ್ಲ. ನಾನು ಬರೆಯುತ್ತಲೇ ಇರಬೇಕು. ನಾನು ಬರೆಯಬೇಕೆನಿಸಿದ್ದನ್ನು ಬರೆದಾಗ ಸಂತಸವಾಗುತ್ತದೆ. ನಾನು ಬರೆದದ್ದನ್ನು ಪ್ರಕಟಿಸಿ ಆಸಕ್ತರು ಓದಿ ಪ್ರತಿಕ್ರಿಯಿಸಿದಾಗ ಇನ್ನೂ ಹೆಚ್ಚು ಸಂತಸವಾಗುತ್ತದೆ' ಎನ್ನುವ ಹಮ್ಮುಬಿಮ್ಮಿಲ್ಲದ, ತಾರುಮಾರಿಲ್ಲದ ಹದಮನಸ್ಕಲೇಖಕಿಯೊಂದಿಗಿನ ಮಾತಿನ ಸಾರ....

ಬಾಲ್ಯದ ಮೌನ ಹರಹು:
ನಮ್ಮದು ಅವಿಭಕ್ತ ಕುಟುಂಬ. ನನ್ನ ತಂದೆ, ತಾಯಿ, ಸೋದರತ್ತೆ, ಅಕ್ಕ, ತಮ್ಮ ಎಲ್ಲರಿಗೂ ಓದುವುದು ಮೆಚ್ಚಿನ ಹವ್ಯಾಸವಾಗಿತ್ತು. ಶಾಲಾ ಗ್ರಂಥಾಲಯದಿಂದ ಅಕ್ಕ ತಂದ ಪುಸ್ತಕಗಳನ್ನು ಅಮ್ಮ, ಹಗಲೆಲ್ಲಾ ಕೆಲಸದ ಪರಂಪರೆ ಇರುತ್ತಿದ್ದುದರಿಂದ ರಾತ್ರಿ ವೇಳೆಯಲ್ಲಿ ಸೀಮೆಯೆಣ್ಣೆ ಬುಡ್ಡಿ ದೀಪದಲ್ಲಿ ಓದಿ ಮುಗಿಸುತ್ತಿದ್ದರು. ಸಾಮಾನ್ಯವಾಗಿ ಊಟಕ್ಕೆ ಕುಳಿತಾಗ ಇತ್ತೀಚೆಗೆ ಓದಿದ ಪುಸ್ತಕದ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿತ್ತು. ಊಟ ಮುಗಿದರೂ ಚರ್ಚೆ ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ಚರ್ಚೆಯ ಕಾವೇರಿ ಜಗಳದ ರೂಪವನ್ನೂ ಪಡೆಯುತ್ತಿತ್ತು! ಅಕ್ಕನದು ಅದರಲ್ಲಿ ಪ್ರಮುಖ ಪಾತ್ರ. ನಾನು ಮೌನ ಕೇಳುಗಳಾಗಿರುತ್ತಿದ್ದೆ. ನಾನು ಓದಿದ್ದಕ್ಕಿಂತ ಕೇಳಿ(ತಿಳಿದುಕೊಂಡ)ದ್ದೇ ಹೆಚ್ಚು(ಈಗಲೂ!) ರಾಮಾಯಣ, ಮಹಾಭಾರತ ಇವುಗಳ ಪಾತ್ರಗಳ ಬಗ್ಗೆ ವಿಫುಲವಾದ ವಾದ, ವಿವಾದಗಳು ನಡೆಯುತ್ತಿದ್ದವು. ಅತ್ತೆ ನೂರಾರು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು..... ಹೀಗೆ ಸಾಹಿತ್ಯ, ಸಂಗೀತದ ವಾತಾವರಣದಲ್ಲಿ (ಹಳ್ಳಿಯ ಕಷ್ಟ-ಕಾರ್ಪಣ್ಯಗಳ ನಡುವೆಯೂ) ನನ್ನ ಮೌನವಾದ ಬಾಲ್ಯ ವಿಹರಿಸುತ್ತಿತ್ತೇನೋ ಎಂದು ಈಗ ಎನಿಸುತ್ತದೆ.

‘ಅಕ್ಕ...ನ ಅರಿವಿನಿಂದ ಬರಹದೆಡೆಗೆ:
ನಾನು ನನ್ನ ಮೊದಲ ಕಥೆಯಾದ ‘ಅಕ್ಕ ಬರ್ತಾಳೆ‘ಯನ್ನು ಬಹುಶಃ ಏಳನೇ ತರಗತಿಯಲ್ಲಿದ್ದಾಗ ಬರೆದ ನೆನಪು. ನಮ್ಮ ಬೀದಿಯಲ್ಲೇ ಇದ್ದ ನನ್ನ ಓರಗೆಯವಳೇ ಆಗಿದ್ದ ಹುಡುಗಿಯ ದುರಂತಮಯ ಸಾವಿನ ಬಗ್ಗೆ ವ್ಯಥಿತಳಾಗಿ, ಅವಳನ್ನೇ ಸಂಪೂರ್ಣವಾಗಿ ಅವಲಂಭಿಸಿದ್ದ ಅವಳ ತಮ್ಮನ ದೃಷ್ಟಿಕೋನದಲ್ಲಿ ಬರೆದ ಕಥೆಯದು. ಸುಮಾರು ೫-೬ ಪುಟಗಳಲ್ಲಿದ್ದ ಆ ಕಥೆಯನ್ನು ಬರೆದ ನಂತರವೇ ನನಗೆ ಒಂದು ರೀತಿಯ ಬಿಡುಗಡೆಯ ಭಾವ ದೊರೆತದ್ದು ಎನ್ನುವುದು ಈಗಲೂ ನೆನಪಿದೆ. ಆಗಿನಿಂದ ಬರೆಯುವುದೇ ನನ್ನ ಬದುಕಾಯ್ತು. ಸಂತಸವಿರಲಿ, ದುಃಖವಿರಲಿ ಆ ಕ್ಷಣದಲ್ಲಿ ಹೇಗೆ ತೋಚುವುದೋ ಹಾಗೆ ಅದರ ಮಂಥನ ನಡೆದು , (ಸಾಮಾನ್ಯವಾಗಿ ನಾನು ಯಾರಲ್ಲಿಯೂ ನನ್ನ ಭಾವನೆಗಳನ್ನು ಹೇಳಿಕೊಳ್ಳದೇ ಇರುವುದರಿಂದಲೋ ಏನೋ) ಬರೆಯಲೇ ಬೇಕೆಂಬ ತೀವ್ರತೆಯುಂಟಾದಾಗ ಒಂದು ಕಡೆ ಬರೆದಿಡುತ್ತಿದ್ದೆ. ನಾನು ಮೊದಲು ಕವನ ಬರೆದದ್ದು, ಮೊದಲು ಹಾಸ್ಯಬರಹ ಬರೆದದ್ದು ಎಲ್ಲಾ ಹೀಗೇ ನೆನಪಿದೆ. ಆ ಸಮಯದಲ್ಲೇ ನನ್ನ ಊರಿನ ಬಗ್ಗೆ ಸುಮಾರು ೨೦೦ ಪುಟಗಳ ಕಾದಂಬರಿಯನ್ನೂ ಬರೆದಿದ್ದೆ. ಆಗ ಸಾಹಿತ್ಯ ಎಂದರೆ ಏನೆಂಬ ಅರಿವು ಇಲ್ಲದಿದ್ದರೂ ಬರೆಯಬೇಕೆಂಬ ತೀವ್ರ ಹಂಬಲ ಉಂಟಾಗುತ್ತಿತ್ತು!

ಪ್ರತ್ಯೇಕತೆಗಿಂತ ಏಕತೆ ಸಾಕಲ್ಲವೆ... :
ಒಂದು ಕಾಲಕ್ಕೆ ಆರ್ಥಿಕವಾಗಿ ಸಂಪೂರ್ಣ ಪರಾವಲಂಬಿಯಾಗಿದ್ದ ಮಹಿಳೆ ಈಗ ವಿದ್ಯಾವಂತಳಾಗಿ, ದುಡಿಯುವ ಮಹಿಳೆಯಾಗಿ, ಅಥವಾ ಸ್ವಉದ್ಯೋಗ ಮಾಡಬಲ್ಲವಳಾಗಿ, ವಿವಿಧ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿರುವುದು ಸಂತೋಷದ ವಿಷಯವೇ. ಮಹಿಳೆಯರಾದ ನಮ್ಮ ಇಂದಿನ ಈ ಸ್ಥಿತಿಗೆ ನಾವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಭಾರಿಯಾಗಿರಬೇಕು! ಆತ್ಮಸ್ಥೈರ್ಯ ಮತ್ತು ಸ್ವವಿವೇಚನೆಯಿರುವ ಎಲ್ಲರ ಜೀವನವೂ ಗಟ್ಟಿ ನೆಲೆಗಟ್ಟಿನ ಮೇಲೆಯೇ ಇರುತ್ತದೆ. 'ಮಹಿಳೆ' ಎಂಬ ಪ್ರತ್ಯೇಕತೆಯ ಅಗತ್ಯವಿಲ್ಲ ಎಂದು ನನಗನಿಸುತ್ತದೆ. ಮಹಿಳೆ ತನ್ನ ಸ್ವಸಾಮರ್ಥ್ಯದಿಂದ ಏನನ್ನಾದರೂ ಸಾಧಿಸಬಲ್ಲಳು. ಅವಳಿಗೆ ದೊರೆಯಬಹುದಾದ ಅವಕಾಶವನ್ನು ಕಸಿದುಕೊಳ್ಳದಿದ್ದರೆ ಸಾಕು. ಸುತ್ತಲಿನ ಪರಿಸರ ಪೂರಕವಾಗಿರಬೇಕು.

ಯಾವುದೂ ಹೆಚ್ಚುಗಾರಿಕೆಯಲ್ಲ:
ಮಹಿಳೆ ಮನೆ, ಉದ್ಯೋಗ, ತಾಯಿಯಾಗಿ ನಿಭಾಯಿಸುವುದು ದೊಡ್ಡ ವಿಷಯವೇ ಅಲ್ಲ. ಬದುಕಿನ ವಿವಿಧ ಹಂತಗಳ ಕೆಲ ಮಗ್ಗುಲುಗಳು ಇವು ಅಷ್ಟೆ. ಇದರಲ್ಲಿ ಯಾವುದೂ ಹೆಚ್ಚುಗಾರಿಕೆಯಿಲ್ಲ. ‘ನನ್ನ ಪಾತ್ರ ದೊಡ್ಡದು' ಎಂದುಕೊಂಡಾಕ್ಷಣ ಕುಸಿತ ಆರಂಭವಾಗುತ್ತದೆ. ಅದಾಗಬಾರದು. ಎಲ್ಲವನ್ನೂ ಮನಸ್ಸಿಗೆ ಒಪ್ಪುವಂತೆ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಅಷ್ಟೆ.

ವ್ಯಕ್ತಿತ್ವ ನಾಶ ಸಲ್ಲದು:

‘ರಿಸ್ಕ್ ಯಾಕೆ ತಿಂದುಂಡು ಹಾಯಾಗಿರೋಣ,. ಒಂದಿಷ್ಟು ಸಿಂಗರಿಸಿಕೊಂಡು, ಮೆಚ್ಚುಗೆ ಗಳಿಸೋಣ' ಎಂಬ ಮನೋಭಾವ ಹೆಣ್ಣುಗಳ ಅಂತಃಸತ್ವವನ್ನು ಕದಲಿಸುತ್ತದೆ ಒಳಗನ್ನು ಕೊಂದುಕೊಂಡು ಎನ್ನುವುದಕ್ಕಿಂತ ಒಳಗಿನ ಉಸಿರನ್ನು ಬಂಧಿಸಿ ‘ಅವನನ್ನು ಚೆನ್ನಾಗಿ ನೋಡಿಕೊಂಡು' ಬಾಳುವುದು ವ್ಯಕ್ತಿತ್ವ ನಾಶ ವಲ್ಲದೆ ಬೇರೇನೂ ಅಲ್ಲ. ಈಗ ಆರ್ಥಿಕ ಪರಾವಲಂಬನೆ ಕಡಮೆಯಾಗಿದೆ. ಮಹಿಳೆ ತನ್ನ ಅಸ್ತಿತ್ವವನ್ನು ತಾನು ಕಂಡುಕೊಳ್ಳುತ್ತಿದ್ದಾಳೆ. ಆದರೂ ಅಧಿಕ ಪ್ರಮಾಣದಲ್ಲಿ ಬದಲಾವಣೆಯಾದಾಗ ಸರಿಸಮ ಎನ್ನುವ ಪದ ಸರಿಹೋಗಬಹುದು.

‘ನಾಲಗೆ ದಾಸ'ನಾಗಿರುವ ಮನುಜ:

ನಾನೂ ಪ್ರಕೃತಿಯ ಅಂಶ ಎಂಬುದನ್ನು ಅರಿಯಬೇಕಾದ ಮನುಜ ಪ್ರಕೃತಿಯಲ್ಲಿರುವುದೆಲ್ಲಾ ನನಗಾಗಿ ಎಂಬ ದುರಾಸೆಗೆ ಬಿದ್ದ ಫಲಿತಗಳಲ್ಲಿ ಒಂದು ಮಾಂಸಾಹಾರ. ಸಾತ್ವಿಕ ಆಹಾರದಿಂದ ಚಿಂತನೆಯೂ ಸಾತ್ವಿಕವಾಗಿರುತ್ತದೆ ಅಲ್ಲವೇ. ಎಲ್ಲಾ ಜೀವಿಗಳೂ ಒಂದೇ. ಒಂದು ಕುಡಿ ಚಿವುಟೋದು, ಗಿಡ ಮುರಿಯೋದು ಕೂಡಾ ಹೃದಯ ಹಿಂಡುವಂಥ ಘಟನೆಯೇ. ನಾಲಗೆಗೆ ದಾಸನಾಗಿರುವ ಮನುಜ ಆ ಪ್ರವೃತ್ತಿ ಬಿಟ್ಟು ತಾನೂ ಬದುಕಿ ಇತರ ಜೀವಿಗಳಿಗೂ ಬದುಕಲು ಅವಕಾಶ ಮಾಡಿಕೊಟ್ಟರೆ ಚೆನ್ನ.

ಆತ್ಮ ಸಂತೋಷ ಮತ್ತು ಆತ್ಮ ವಂಚನೆ:

ಯಾವೊಬ್ಬ ವ್ಯಕ್ತಿ ತನ್ನ ಆತ್ಮ ಸಂತೋಷಕ್ಕಾಗಿ ‘ಕೆಲಸ' ಮಾಡಬೇಕು. ಆ ಆತ್ಮ ಸಂತೋಷವೇ ವಿಸ್ತ್ರುತ ರೂಪ ಪಡೆದು ಸಮಾಜ ಮುಖಿಯಾಗಲು ಅವಕಾಶ ತೆರೆದುಕೊಳ್ಳುತ್ತದೆ! ಈ ಹಂತದಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ಅಂದರೆ ಯಾವಾಗ ತನ್ನ ಸಂತೋಷ ಮರೆತು ಇತರರನ್ನು ಇತರ ಉದ್ದೇಶಗಳಿಗಾಗಿ ಮೆಚ್ಚಿಸಲು ‘ಕೆಲಸ'ಮಾಡಲಾರಂಭಿಸುತ್ತೇವೆಯೋ ಆಗ ‘ಆತ್ಮ ವಂಚನೆ' ತೆರೆಯ ಮೇಲೆ ಬಂದು ವಿಜೃಂಭಿಸಲಾರಂಭಿಸುತ್ತದೆ. ಈ ರೀತಿಯ ಬದುಕು ಯಾಕೆ ಬೇಕು? ‘ತನ್ನನ್ನು ತಾನು ಮೊದಲು ಮೆಚ್ಚಿಸಿಕೊಳ್ಳಲು' ಎಲ್ಲರೂ ಪ್ರಯತ್ನಿಸಬೇಕು, ರಾಜಕಾರಣಿ ಮತ್ತು ಸಾಹಿತಿ ಇದಕ್ಕೆ ಹೊರತಲ್ಲ.

Tuesday, April 12, 2011

ಮನದ ಅಂಗಳದಿ.........೩೫. ನಂಬಿಕೆ.

ನಾವು ‘ನಂಬಿಕೆ'ಯ ಆಧಾರದ ಮೇಲೆಯೇ ಈ ಜೀವನ ನಡೆಯುತ್ತಿದೆ ಎನ್ನುವ ತಿಳುವಳಿಕೆಯಲ್ಲಿದ್ದೇವೆ. ಸ್ನೇಹ-ಸಂಬಂಧಗಳು ಸುಸ್ಥಿತಿಯಲ್ಲಿರಲು ಪರಸ್ಪರ ನಂಬಿಕೆ ಇರಬೇಕು. ಜೀವನದಲ್ಲಿ ಶಾಂತಿ-ನೆಮ್ಮದಿ ಇರಬೇಕಾದರೆ ದೇವರಲ್ಲಿ ನಂಬಿಕೆ ಇರಬೇಕು ಎಂಬ ನಂಬಿಕೆಗಳನ್ನು ಹೊಂದಿದ್ದೇವೆ. ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ.....' ಎಂದು ದಾಸರೂ ಹಾಡಿದ್ದಾರೆ. ಈ ‘ನಂಬಿಕೆ?ಯ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಏನನ್ನು ಹೇಳಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳೋಣ:

‘ಬದುಕನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ, ನಿಜವಾಗಲೂ ಯಾವ ನಂಬಿಕೆಗಳೂ ಬೇಕಾಗಿಲ್ಲ. ಪ್ರೀತಿಸುವಾತನಲ್ಲಿ ನಂಬಿಕೆ ಇರುವುದಿಲ್ಲ. ಪ್ರೀತಿ ಮಾತ್ರ ಇರುತ್ತದೆ. ಯಾರು ಬುದ್ಧಿಗೆ ಆಹಾರವಾಗಿರುತ್ತಾರೋ ಅವರಿಗೆ ಮಾತ್ರ ನಂಬಿಕೆಗಳು ಬೇಕು. ಬುದ್ಧಿ ಯಾವಾಗಲೂ ಕ್ಷೇಮವನ್ನು, ರಕ್ಷಣೆಯನ್ನು ಬಯಸುತ್ತಿರುತ್ತದೆ. ಆದ್ದರಿಂದ ತಾನು ಆಶ್ರಯ ಪಡೆಯಬಹುದಾದ ಆದರ್ಶ, ನಂಬಿಕೆ, ವಿಚಾರ, ಐಡಿಯಾಗಳನ್ನು ಕಟ್ಟಿಕೊಳ್ಳುತ್ತದೆ.'

‘ನಾವು ನಂಬುವುದು ಏನನ್ನು?' ಎನ್ನುವ ವಿಚಾರವಾಗಿ ಹೀಗೆ ತಿಳಿಸುತ್ತಾರೆ:
‘ನಂಬಿಕೆಯಿಂದ ಉತ್ಸಾಹ ಹುಟ್ಟುತ್ತದೆಯೇ? ನಂಬಿಕೆ ಇಲ್ಲದೆ ಉತ್ಸಾಹ ಇರಬಲ್ಲದೇ?..........ನಂಬಿಕೆಯನ್ನು ಆಧರಿಸಿರದ, ಸ್ವಯಂಪೋಷಕವಾದ ಚೈತನ್ಯ, ಶಕ್ತಿ ಒಂದಿದೆಯೇ? ಮತ್ತೊಂದು ಪ್ರಶ್ನೆಯೆಂದರೆ ನಮಗೆ ಯಾವುದೇ ಒಂದು ಬಗೆಯ ನಂಬಿಕೆ ಬೇಕೆ? ಯಾಕೆ ಬೇಕು? ಎಂಬ ಪ್ರಶ್ನೆ! ಬಿಸಿಲು ಇದೆ, ಬೆಟ್ಟ ಇದೆ, ನದಿ ಇದೆ ಎಂಬ ನಂಬಿಕೆ ನಮಗೆ ಅಗತ್ಯವಿಲ್ಲ. ಅವು ಇವೆ. ಜೀವನವು ನಿರಂತರವಾದ ಸಂಘರ್ಷ, ವೇದನೆ, ನರಳಾಟ, ಆಸೆ ಎಂಬ ನಂಬಿಕೆ ಬೇಕಾಗಿಲ್ಲ. ಅದು ಹಾಗೆ ಇದೆ. ಇರುವುದನ್ನು ಬಿಟ್ಟು ಇಲ್ಲದ ಅಸತ್ಯಕ್ಕೆ ಪಲಾಯನ ಮಾಡಲು ನಮಗೆ ನಂಬಿಕೆ ಬೇಕಾಗುತ್ತದೆ.'

‘ನಂಬಿಕೆಯ ತಳಮಳ'ವನ್ನು ವಿವರಿಸುತ್ತಾ ಈ ರೀತಿಯಾಗಿ ಹೇಳುತ್ತಾರೆ:
‘ನಿಮ್ಮ ಧರ್ಮ, ದೇವರು ಎಲ್ಲವೂ ಸತ್ಯದಿಂದ ತಪ್ಪಿಸಿಕೊಳ್ಳಲೆಂದೇ ಇರುವ ಮಾರ್ಗಗಳು. ಕ್ರೌರ್ಯದಿಂದ, ಅಪ್ರಾಮಾಣಿಕತೆಯಿಂದ, ತಂತ್ರಗಾರಿಕೆಯಿಂದ, ಶೋಷಣೆಯಿಂದ ಹಣವನ್ನು ಕೂಡಿಹಾಕಿಕೊಳ್ಳುವ ಶ್ರೀಮಂತ ದೇವರನ್ನು ನಂಬುತ್ತಾನೆ. ನೀವೂ ದೇವರನ್ನು ನಂಬುತ್ತೀರಿ. ನಿಮ್ಮಲ್ಲೂ ತಂತ್ರಗಾರಿಕೆ, ಕ್ರೌರ್ಯ, ಅಸೂಯೆಗಳಿವೆ.......ನಿಮ್ಮ ಸಂಬಂಧಗಳ ಸ್ವರೂಪವನ್ನು ಅರಿಯದಿದ್ದರೆ ನಿಮ್ಮ ಮನಸ್ಸಿನಲ್ಲಿ ಗೊಂದಲವಿರುತ್ತದೆ. ನಂಬಿಕೆಯ ತಳಮಳಕ್ಕೆ ಸಿಕ್ಕಿ ತೊಳಲುವ ಮನಸ್ಸು ಸತ್ಯವನ್ನು ಕಾಣಲಾರದು.'

‘ನಂಬಿಕೆಯಾಚೆಗೆ' ವಿಮರ್ಷಿಸುತ್ತಾ.....
‘ಬದುಕು ವಿಕಾರವಾಗಿದೆ, ನೋವಿನಿಂದ ತುಂಬಿದೆ, ದುಃಖಮಯವಾಗಿದೆ ಎಂದು ನಮಗೆ ಗೊತ್ತು. ಇದೆಲ್ಲಾ ಏಕೆ ಹೀಗೆ ಎಂದು ವಿವರಿಸಿಕೊಳ್ಳುವುದಕ್ಕೆ ಒಂದು ಸಿದ್ಧಾಂತ, ಊಹೆ, ತತ್ವ ಏನಾದರೂ ಸಿಕ್ಕರೆ ನಮಗೆ ಸಮಾಧಾನವೆನಿಸುತ್ತದೆ. ಹಾಗಾಗಿ ನಾವು ವಿವರಣೆಯ ಪದಗಳಲ್ಲಿ, ಊಹೆ, ಸಿದ್ಧಾಂತ, ತತ್ವಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಕ್ರಮೇಣ ನಂಬಿಕೆಗಳು ಆಳವಾಗಿ ಬೇರು ಬಿಟ್ಟುಕೊಳ್ಳುತ್ತದೆ. ನಂಬಿಕೆಗಳು ಅಲುಗಾಡಿಸಲಾಗದಷ್ಟು ಬಲವಾಗುತ್ತವೆ. ಏಕೆಂದರೆ ನಂಬಿಕೆಗಳ ಹಿಂದೆ, ತತ್ವ, ಸಿದ್ಧಾಂತಗಳ ಹಿಂದೆ, ಅಪರಿಚಿತವಾದದ್ದರ ಬಗೆಗಿನ ಭಯವಿದೆ. ನಂಬಿಕೆಗಳು ಗಟ್ಟಿಯಾದಷ್ಟೂ ಸಿದ್ಧಾಂತಗಳೂ ಗಟ್ಟಿಯಾಗುತ್ತವೆ.
ವಿವಿಧ ಧರ್ಮಗಳ ನಂಬಿಕೆಗಳನ್ನು ಪರಿಶೀಲಿಸಿದಾಗ ಅವು ಜನರನ್ನು ಬೇರೆಬೇರೆ ಮಾಡುತ್ತವೆ ಎಂದು ತಿಳಿಯುತ್ತದೆ. ಒಂದೊಂದು ಸಿದ್ಧಾಂತದ ಹಿಂದೆಯೂ, ಒಂದೊಂದು ನಂಬಿಕೆಯ ಹಿಂದೆಯೂ ಆಚರಣೆಗಳ ಒಂದು ಸರಣಿಯೇ ಇರುತ್ತದೆ. ಮನುಷ್ಯರನ್ನು ಒಗ್ಗೂಡಿಸುವ ಮತ್ತು ಬೇರ್ಪಡಿಸುವ ಒತ್ತಾಯಗಳಿರುತ್ತವೆ. ಸತ್ಯವಾದದ್ದು ಏನು ಎಂದು ಹುಡುಕಲು ಹೊರಟು, ನೋವು, ನರಳಾಟ, ಹೋರಾಟಗಳ ಅರ್ಥವೇನು ಎಂದು ತಿಳಿಯಲು ಹೊರಟು ನಂಬಿಕೆ, ಆಚರಣೆ, ಸಿದ್ಧಾಂತಗಳಲ್ಲಿ ಸಿಕ್ಕುಬೀಳುತ್ತೇವೆ.
ನಂಬಿಕೆ ಬ್ರಷ್ಟವಾದದ್ದು. ಏಕೆಂದರೆ ನಂಬಿಕೆ ಮತ್ತು ನೀತಿಯ ಹಿನ್ನೆಲೆಯಲ್ಲಿ ನಾನು ಎಂಬುದು ಸದಾ ಬೆಳೆಯುತ್ತಲೇ ಇರುವ, ಪ್ರಬಲವಾಗುತ್ತಿರುವ ನಾನು ಎಂಬುದು ಇರುತ್ತದೆ. ದೇವರನ್ನು ನಂಬುವುದು, ಮತ್ತೇನನ್ನೋ ನಂಬುವುದು ಎಂದರೆ ಧರ್ಮ ಎಂದು ಪರಿಗಣಿಸುತ್ತೇವೆ. ನಂಬಿಕೆ ಇಲ್ಲದವರನ್ನು ನಾಸ್ತಿಕರೆಂದು ಕರೆದು ಸಮಾಜ ತಿರಸ್ಕಾರ ತೋರುತ್ತದೆ. ಒಂದು ಸಮಾಜ ದೇವರನ್ನು ನಂಬುವವರನ್ನು ತಿರಸ್ಕರಿಸಿದರೆ ಇನ್ನೊಂದು ಸಮಾಜ ದೇವರನ್ನು ನಂಬದೇ ಇರುವವರನ್ನು ತಿರಸ್ಕರಿಸುತ್ತದೆ. ನಿಜವಾಗಿ ಎರಡೂ ಸಮಾಜಗಳೂ ಒಂದೇ. ಧರ್ಮ ನಂಬಿಕೆಯ ವಿಚಾರವಾಗುತ್ತದೆ. ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಯ ಪ್ರಭಾವಕ್ಕೆ ಸಿಕ್ಕಿದ ಮನಸ್ಸು ಸ್ವತಂತ್ರವಾಗಿರಲು ಸಾಧ್ಯವಾಗುವುದಿಲ್ಲ. ನಂಬಿಕೆಯ ಮೂಲಕ ಅಲ್ಲ. ಸ್ವಾತಂತ್ರ್ಯವಿದ್ದಾಗ ಮಾತ್ರ ಸತ್ಯವೆಂದರೇನು, ದೇವರು ಯಾರು ಎಂದು ಕಾಣಲು ಸಾಧ್ಯ. ಏಕೆಂದರೆ ನಿಮ್ಮಲ್ಲಿರುವ ನಂಬಿಕೆಯು ನೀವು ಏನನ್ನು ನಂಬಿದ್ದೀರೋ ಅದನ್ನೇ, ಏನನ್ನು ಆಲೋಚಿಸುತ್ತೀರೋ ಅದನ್ನೇ ದೇವರೆಂದು, ಸತ್ಯವೆಂದು ಬಿಂಬಿಸುತ್ತಿರುತ್ತದೆ. ಅದನ್ನೇ ನೀವು ಸತ್ಯವೆಂದುಕೊಳ್ಳುತ್ತಿರುತ್ತೀರಿ.'

‘ನಂಬಿಕೆಯ ತೆರೆ'ಯ ಕುರಿತು ಹೀಗೆ ವಿಷದಪಡಿಸುತ್ತಾರೆ:
‘ಕೆಲವರು ದೇವರನ್ನು ನಂಬುತ್ತಾರೆ, ಕೆಲವರು ನಂಬುವುದಿಲ್ಲ. ನಂಬಿಕೆಯೇ ಜನರನ್ನು ಪರಸ್ಪರ ದೂರ ಮಾಡಿದೆ. ಜಗತ್ತಿನಾದ್ಯಂತ ನಂಬಿಕೆಗಳು ಹಿಂದೂ, ಕ್ರಿಶ್ಚಿಯನ್, ಬೌದ್ಧ.....ಎಂದು ವ್ಯವಸ್ಥೆಗೊಂಡಿದೆ. ಜನರ ನಡುವೆ ಭೇದ ಕಲ್ಪಿಸಿವೆ. ನಮ್ಮಲ್ಲಿ ಗೊಂದಲವಿದೆ. ನಂಬಿಕೆಯ ಮುಖಾಂತರ ಗೊಂದಲವನ್ನು ಪರಿಹರಿಸಿಕೊಂಡು ಮನಸ್ಸನ್ನು ತಿಳಿಯಾಗಿಸಿಕೊಳ್ಳಬಹುದು ಎಂದುಕೊಂಡಿದ್ದೇವೆ. ಗೊಂದಲದ ಮೇಲೆ ನಂಬಿಕೆಯನ್ನು ಹೇರಿಕೊಂಡಿದ್ದೇವೆ. ಆದರೆ ನಂಬಿಕೆಯೆಂಬುದು ಗೊಂದಲವೆಂಬ ಸತ್ಯವನ್ನು ಎದುರಿಸಲಾರದೇ ಮಾಡುವ ಪಲಾಯನ. ಸತ್ಯವನ್ನು ಕಣ್ಣಾರೆ ಕಂಡು ಅರ್ಥಮಾಡಿಕೊಳ್ಳುವ ಬದಲಾಗಿ ನಮ್ಮಲ್ಲಿರುವ ಸತ್ಯದಿಂದ ಪಾರಾಗುವ ದಾರಿಯೇ ನಂಬಿಕೆ. ಗೊಂದಲವನ್ನು ಅರ್ಥಮಾಡಿಕೊಳ್ಳುವುದಕ್ಕೆ ನಂಬಿಕೆ ಬೇಡ. ನಮಗೂ ನಮ್ಮ ಸಮಸ್ಯೆಗಳಿಗೂ ನಡುವೆ ನಂಬಿಕೆ ಅಡ್ಡ ತೆರೆಯಾಗಿ ಇರುತ್ತದೆ.......'

‘ಬದುಕನ್ನು ಹೊಸತಾಗಿ ಕಾಣುವುದು' ಹೇಗೆಂಬುದನ್ನು ಈ ರೀತಿಯಾಗಿ ಸ್ಪಷ್ಟಪಡಿಸುತ್ತಾರೆ:
‘......ಗತಕಾಲದ ರೂಢಿಗಳಿಂದ ಹುಟ್ಟಿಕೊಂಡ ಅಭ್ಯಾಸಗತ ಪ್ರತಿಕ್ರಿಯೆಗಳಿಲ್ಲದೇ, ಕ್ಷಣಕ್ಷಣ, ಅನುಕ್ಷಣ ಬದುಕನ್ನು ಕಾಣುವ ಸಾಮರ್ಥ್ಯ ಬಂದಾಗ ನಮಗೂ ಏನಿದೆಯೋ ಅದಕ್ಕೂ ನಡುವೆ ಸಂಚಿತ ನೆನಪುಗಳ ತೆರೆ, ನಂಬಿಕೆಗಳ ತೆರೆ ಇರುವುದಿಲ್ಲ. ಆಗ ಸತ್ಯ ಕಾಣುತ್ತದೆ.'

‘ನಂಬಿಕೆ'ಯ ಕುರಿತಂತೆ ತಮ್ಮದೇ ಪ್ರಖರ ವಿಚಾರಸರಣಿಯಲ್ಲಿ ನಾವು ಯಾವುದನ್ನು ನಂಬಿಕೆ ಎಂದುಕೊಂಡಿದ್ದೇವೆಯೋ ಆ ನಂಬಿಕೆಗಳನ್ನೆಲ್ಲಾ ಬುಡಮೇಲು ಮಾಡಿ ಸತ್ಯದ ದರ್ಶನ ಮಾಡಿಸುವ ಪ್ರಯತ್ನವನ್ನು ನಡೆಸಿದ್ದಾರೆ ಜಿಡ್ಡು ಕೃಷ್ಣಮೂರ್ತಿಯವರು. ಅದನ್ನು ಅರ್ಥಮಾಡಿಕೊಂಡು ಅನ್ವಯಿಸಿಕೊಳ್ಳುವ ಪ್ರಬುದ್ಧತೆ ನಮ್ಮದಾಗಲಿ.

Friday, April 8, 2011

ಮನದ ಅಂಗಳದಿ.................೩೪. ಕೊಟ್ಟದ್ದು.....!

ಅಂದು ನಾನು ಬಸ್ಸಿನಲ್ಲಿ ಪಯಣಿಸುತ್ತಿದ್ದಾಗ ಬಹಳ ದಿನಗಳ ನಂತರ ಆತ ಕಂಡ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಆತ ನನ್ನನ್ನು ಗಮನಿಸಿದ್ದನೋ ಅಥವಾ ಕಂಡೂ ಕಾಣದಂತೆ ವರ್ತಿಸುತ್ತಿದ್ದಾನೋ ತಿಳಿಯಲಿಲ್ಲ. ಆತ ಸಿಕ್ಕಿದ್ದರಿಂದ ಆತ ನಮ್ಮಿಂದ ಪಡೆದಿದ್ದ ದುಬಾರಿಯಾದ ಆ ಹಣವನ್ನು ಕೇಳಲೇ ಬೇಕೆಂದು ತೀರ್ಮಾನಿಸಿದೆ. ಎರಡು ವರ್ಷಗಳ ಹಿಂದೆ ಸಾಲಮಾಡಿ ಯಾವುದೋ ಕಾರ್ಯನಿಮಿತ್ತ ಕೊಟ್ಟದ್ದು. ಬಹುಶಃ ಸಾಲಕ್ಕೆ ಕಟ್ಟುತ್ತಿರುವ ಬಡ್ಡಿಯ ಹಣದಷ್ಟೇ ಆತನೊಂದಿಗೆ ಮಾತನಾಡಲು ಖರ್ಚುಮಾಡಿರಬಹುದು! ಕೆಲಸವೂ ಆಗಲಿಲ್ಲ. ಹಣವನ್ನಾದರೂ ಹಿಂತಿರುಗಿಸಲಿ ಎಂದು ಕೇಳಿದರೂ ಪ್ರಯೋಜನವಾಗಿಲ್ಲ. ಕೆಲವು ದಿನಗಳಿಂದ ಯಾವಾಗ ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್ಡ್ ಆಫ್! ಯಾವುದೇ ದಾಖಲೆಗಳಿಲ್ಲದೇ ಕೇವಲ ನಂಬಿಕೆಯ ಆಧಾರದ ಮೇಲೆ ನೀಡಿರುವ ಹಣ. ಮೋಸ ಹೊಂದುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದನ್ನು ಸಾಕ್ಷೀಕರಿಸುವಂತೆ ಈ ವ್ಯಕ್ತಿ ವರ್ತಿಸುತ್ತಿದ್ದಾನೆ. ಅಂದಿನಿಂದ ಇಂದಿನವರೆಗೂ ಕಣ್ಣಿಗೇ ಬೀಳದಂತಿದ್ದ, ಕರೆಗೂ ಸಿಗದಂತಿದ್ದ ವ್ಯಕ್ತಿ ಈ ದಿನ ಮುಂದಿನ ಸೀಟಿನಲ್ಲೇ ಪ್ರತಿಷ್ಟಾಪನೆಯಾಗಿದ್ದಾನೆ. ಮೊಬೈಲ್‌ನಲ್ಲಿ ಮಾತನಾಡುವುದರಲ್ಲಿ ತಲ್ಲೀನನಾದಂತಿದ್ದ ಆತ ಇತ್ತ ತಿರುಗುವುದೂ ಅಸಾಧ್ಯವೆನ್ನುವಂತಿತ್ತು. ನಿರೀಕ್ಷೆಯಿಂದ ಬೇಸತ್ತು ಬ್ಯಾಗಿನಲ್ಲಿದ್ದ ಪ್ರಭುಶಂಕರರ ‘ಖಲೀಲ್ ಗಿಬ್ರಾನ್' ಪುಸ್ತಕವನ್ನು ಹೊರತೆಗೆದು ಒಂದು ಪುಟವನ್ನು ಯಾದೃಚ್ಛಿಕವಾಗಿ ತೆರೆದೆ. ಅಲ್ಲಿ ಹೀಗಿತ್ತು:

‘ಗಿಬ್ರಾನ್ ಅತ್ಯಂತ ಉದಾರಿ. ಅವನ ಅಲೌಕಿಕತೆಗೂ ನಿತ್ಯ ಬದುಕಿಗೂ ಅಂತಹ ಅಂತರ ಇರಲಿಲ್ಲ. ತನಗೆ ಅನ್ಯಾಯ ಆದಾಗಲೂ ತಾನು ತನ್ನ ನ್ಯಾಯವಾದ ನಿಲುವಿನಿಂದ ಅತ್ತಿತ್ತ ಸರಿಯುತ್ತಿರಲಿಲ್ಲ. ಒಮ್ಮೆ ತುಂಬಾ ಹಣದ ಪ್ರಶ್ನೆಯಿದ್ದ ಒಂದು ಆಸ್ತಿಯ ವಿಷಯದಲ್ಲಿ ಆತ ವ್ಯವಹಾರಕ್ಕೆ ತೊಡಗಬೇಕಾಯಿತು. ಪ್ರತಿಪಕ್ಷಿಗಳು ಇಬ್ಬರು ಸ್ತ್ರೀಯರು. ಅಂಥಾ ಸಂದರ್ಭದಲ್ಲಿ ಆತ ಹೇಳಿದ: ‘ಈ ಸ್ತ್ರೀಯರನ್ನು ನಾನು ಕೋರ್ಟಿಗೆ ಎಳೆಯಬೇಕು, ಇಲ್ಲ ಹಣ ಕಳೆದುಕೊಳ್ಳಬೇಕು.' ಅದರಲ್ಲಿ ಒಬ್ಬಳು ಒಂದು ಚಿಕ್ಕ ಪುಸ್ತಕವನ್ನು(ಪ್ರವಾದಿ) ನನ್ನ ಮುಖದ ಮುಂದೆ ಆಡಿಸಿ ಹೇಳಿದಳು: ‘ನೀನು ಈ ಪುಸ್ತಕ ಬರೆದಿದ್ದೀಯೆ. ಈಗ ಈ ವಿಷಯ ಏನು ಮಾಡುತ್ತೀಯೆ?' ಆತ ಒಂದು ನಿಮಿಷ ಮೌನವಾಗಿದ್ದು ಹೇಳಿದ: ‘ನಾನು ಯಾವುದನ್ನು ನಂಬಿದ್ದೆನೋ ಅದನ್ನು ನಂಬಿ, ನಾನು ಏನನ್ನು ಬರೆದಿದ್ದೇನೆಯೋ ಅದನ್ನು ನಂಬಿ ನಾನು ಈ ಸ್ತ್ರೀಯರ ಮೇಲೆ ಅಪರಾಧ ಹೊರಿಸಲೆ? ನ್ಯಾಯಾಧೀಶರ ಮುಂದೆ ಹೋಗಲೆ? ನಾನು ಸಾಕ್ಷಿಕಟ್ಟೆಯಲ್ಲಿ ಆ ಸ್ತ್ರೀಯರನ್ನು ಅಪರಾಧಕ್ಕೆ ಗುರಿಮಾಡುವುದನ್ನು ನೋಡುತ್ತಿರಲೆ?'

ಆತನ ಆಪ್ತ ಗೆಳತಿ ಬಾರ್ಬರಾ ಯಂಗ್ ಹೇಳಿದಳು: ‘ಇಲ್ಲ, ನೀನು, ನೀನು ಏನಾಗಿದ್ದೀಯೋ ಅದಾಗಿ, ಹಾಗೆ ಮಾಡಲೇ ಕೂಡದು.' ಆತನ ಮುಖ ತಿಳಿಯಾಯಿತು. ‘ನನ್ನ ಎಲ್ಲಾ ಸ್ನೇಹಿತರೂ ಹೇಳುತ್ತಾರೆ, ನಾನು ಆ ಹಣ ಪಡೆಯಲೇ ಬೇಕು ಎಂದು. ನಾನು ಆ ಹಣವನ್ನು ಪಡೆದದ್ದೇ ಆದರೆ ಆ ಪುಟ್ಟ ಪುಸ್ತಕವನ್ನು ನಾನು ಎಂದೆಂದೂ ಬಿಚ್ಚಲೇ ಕೂಡದು.'

ಅನಂತರ ಆತ ಒಂದು ಪುಟ್ಟ ಕಾಗದದ ಚೂರಿನ ಮೇಲೆ ನಿದಾನವಾಗಿ ಬರೆದ: ‘ನಿನ್ನ ಉಡುಪಿನ ಮೇಲೆ ತನ್ನ ಕೊಳೆಯಾದ ಕೈಯನ್ನು ಒರೆಸಿದವನು ಆ ಉಡುಪನ್ನು ತೆಗೆದುಕೊಂಡು ಹೋಗಲಿ. ಅವನಿಗದು ಬೇಕಾಗುತ್ತದೆ, ನಿನಗಂತೂ ಅಲ್ಲ!'

ಈ ಘಟನೆ ನಡೆದಿದ್ದು ಅತ್ಯಂತ ಕಾಕತಾಳೀಯವಾಗಿ! ನಂತರದ ಕೆಲವು ದಿನಗಳಲ್ಲಿ ನಮ್ಮ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ಒಕ್ಕೂಟದಲ್ಲಿ ಸ್ವತಃ ಅಧಿಕಾರಿಯಾದ ಆತನ ನೇತೃತ್ವದಲ್ಲಿಯೇ ವಿಶೇಷ ಭೋಜನದ ವ್ಯವಸ್ಥೆಯಾಗಿತ್ತು. ನನ್ನದು ಸಾತ್ವಿಕ ಆಹಾರವಾದ್ದರಿಂದ ಡಬ್ಬಿಯೂಟದಲ್ಲಿಯೇ ತೃಪ್ತಿಹೊಂದಿದೆ! ಆ ಹಣದ ಬಗ್ಗೆ ಪ್ರಸ್ತಾಪ ಮಾಡುವುದು ವ್ಯರ್ಥವೆನಿಸಿದರೂ ಆತನಿಗೆ ಶೀಘ್ರವೇ ಹಿಂತಿರುಗಿಸುವಂತೆ ಹೇಳಿದೆ!

ಈ ವಿಷಯದಲ್ಲಿ ನನ್ನ ನಿಲುವು ವ್ಯಾವಹಾರಿಕವಲ್ಲದೇ ಇರಬಹುದು. ಆದರೂ ನನಗನಿಸುವಂತೆ ಈಗ ಹಣವನ್ನಂತೂ ಕಳೆದುಕೊಂಡಿದ್ದೇವೆ. ಆ ಹಣವನ್ನು ಪಡೆದೇ ತೀರುವೆನೆಂದು ಪ್ರಯತ್ನಶೀಲಳಾಗುವುದೆಂದರೆ ದಾಖಲೆ ಇಲ್ಲದೇ ನೀಡಿರುವ ಹಣವಾದ್ದರಿಂದ ಆತನಿಗೆ ಚತುರೋಪಾಯಗಳಲ್ಲಿ ಕಡೆಯದನ್ನೇ (ಸಾಮ, ದಾನ, ಭೇದ ಮತ್ತು ದಂಡ) ಪ್ರಯೋಗಿಸಬೇಕು. ಅದಕ್ಕೆ ಬೇರೆ ಪ್ರಭಲರನ್ನು ಆಶ್ರಯಿಸಿ (ರೌಡಿಸಂ!) ಅವರ ಮೂಲಕ ಹೋರಾಡಬೇಕು. ನನ್ನದು ಹೇಡಿಯ ಲಕ್ಷಣ ಎನಿಸಿದರೂ ಚಿಂತೆಯಿಲ್ಲ. ಕಳೆದುಕೊಂಡಿರುವ ಹಣದ ಜೊತೆಗೆ ಮಾನಸಿಕ ಶಾಂತಿಯನ್ನೂ ಕಳೆದುಕೊಂಡು, ಅದರಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳಿಂದ ನರಳುತ್ತಾ, ಅದಕ್ಕಾಗಿ ಮತ್ತಷ್ಟು ಹಣ ಮತ್ತು ಸಮಯವನ್ನು ವ್ಯಯಿಸುತ್ತಾ.....ಇದು ಸಾಮಾನ್ಯರಾದ ನಮ್ಮ ಆಲೋಚನೆ. ಆದರೆ ಖಲೀಲ್ ಗಿಬ್ರಾನ್ ತನಗೆ ಬರಬೇಕಾಗಿದ್ದ, ತನ್ನದೇ ಆಗಿದ್ದ ಆಸ್ತಿಯನ್ನು ಆ ಸ್ತ್ರೀಯರಿಗೆ ಬಿಟ್ಟುಕೊಡುವ ಮನಸ್ಸು ಮಾಡಿದ್ದು ತನ್ನ ಅಮೂಲ್ಯ ಆಸ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ! ಮೊದಲ ಅಭಿಪ್ರಾಯವಾಗಿ ಆ ಸ್ತ್ರೀಯು ‘ಪ್ರವಾದಿ' ಪುಸ್ತಕವನ್ನು ಗಿಬ್ರಾನ್ ಎದುರು ಹಿಡಿದು ಹಾಗೆ ಕೇಳಿದ್ದು ಒಂದು ರೀತಿ ಬ್ಲಾಕ್ ಮೇಲ್ ತಂತ್ರವಲ್ಲವೇ ಎನಿಸಿತು. ಅವರ ಗುರಿ ಇದ್ದದ್ದು ಹೇಗಾದರೂ ಮಾಡಿ ಆ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುವುದು! ಅದಕ್ಕಾಗಿ ಅವರು ಯಾವುದೇ ಮಾರ್ಗವನ್ನು ಅನುಸರಿಸಲು ಸಿದ್ಧರಿರುತ್ತಾರೆ. ಅಂತಹ ವ್ಯಕ್ತಿಗಳೊಡನೆ ಗಿಬ್ರಾನ್ ತನ್ನ ಮೌಲ್ಯಯುತ ನಿಲುವಿನಿಂದ ತನ್ನತನವನ್ನು ಉಳಿಸಿಕೊಂಡಿದ್ದಾರೆ.

ಈ ಘಟನೆಗಳಲ್ಲಿ ಸಾಮ್ಯತೆ ಕಂಡುಬಂದರೂ, ಆಕಸ್ಮಿಕವಾಗಿ ಆ ಸಂದರ್ಭದಲ್ಲಿಯೇ ಗಿಬ್ರಾನ್ ಅವರ ಜೀವನದ ಸನ್ನಿವೇಶವನ್ನು ಓದಿದ್ದು ಆಶ್ಚರ್ಯವನ್ನೇ ಉಂಟುಮಾಡಿದರೂ, ನಮ್ಮ ಅಸಹಾಯಕತೆಯನ್ನೇ ಆ ವ್ಯಕ್ತಿ ದೌರ್ಬಲ್ಯವೆಂದು ಪರಿಗಣಿಸದೇ ಕೊಟ್ಟರೆ ಕೊಡಲಿ. ಈಗಾಗಲೇ ಆತ ವರ್ತಿಸಿ ತೋರ್ಪಡಿಸಿರುವ ತನ್ನ ಯೋಗ್ಯತೆಯಿಂದ ಹಣ ಹಿಂತಿರುಗಿರುವುದು ಅಸಾಧ್ಯದ ಮಾತೇ ಸರಿ. ನಾನಂತೂ ಅದಕ್ಕಾಗಿ ನನ್ನ ಮನಸ್ಸಿನ ಸಮಾಧಾನವನ್ನು ಕಳೆದುಕೊಳ್ಳುವುದು ಬೇಡವೆಂದುಕೊಂಡಿದ್ದೇನೆ. ಇದು ಸರಿಯೋ? ತಪ್ಪೋ? ತೀರ್ಮಾನ ನಮ್ಮನಮ್ಮ ಮನಃಸ್ಥಿತಿಗೆ ಸಂಬಂಧಿಸಿದ್ದು!

Monday, April 4, 2011

ಯುಗಾದಿಯ ಶುಭಾಶಯಗಳು

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಸರ್ವರಿಗೂ `ಶ್ರೀಕರ' ಸುಖ, ಶಾ೦ತಿ, ನೆಮ್ಮದಿಯನ್ನು೦ಟುಮಾಡಲಿ.

Saturday, April 2, 2011

ಮನದ ಅಂಗಳದಿ..................೩೩. ಅವಕಾಶ

ಚಲಿಪಾರಣ್ಯದ ಪಕ್ಷಿಗೊಂದು ತರುಗೊಡ್ಡಾಗಲ್ ಫಲಂ ತೀವಿದಾ|
ಮರಗಳ್ ಪುಟ್ಟವೆ ಪುಷ್ಪಮೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೆ||
ನಿರುತಂ ಸತ್ಕವಿಗೋರ್ವ ಗರ್ವಿ ಪುಸಿಯುತ್ತಂ ಲೋಭಿಯಾಗಲ್ ನಿಜಂ|
ಧರೆಯೋಳ್ ದಾತರು ಪುಟ್ಟರೇ ಹರಹರಾ ಶ್ರೀ ಚನ್ನ ಸೋಮೇಶ್ವರಾ||

‘ಕಾಡಿನಲ್ಲಿ ಸುತ್ತುತ್ತಿರುವ ಪಕ್ಷಿಗೆ ಆ ಕಾಡಿನಲ್ಲಿರುವ ಒಂದು ಮರವು ಹಣ್ಣು ಬಿಡದೆ ಹೋದರೆ ಹಣ್ಣುಳ್ಳ ಬೇರೆ ಮರಗಳು ದೊರೆಯುವುದಿಲ್ಲವೇ? ಗಿಡದಲ್ಲಿ ಒಂದು ಹೂ ಬಾಡಿಹೋದರೆ ತುಂಬಿಗೆ ಮಧುವಿರುವ ಬೇರೆ ಹೂ ದೊರೆಯುವುದಿಲ್ಲವೆ? ಹಾಗೆಯೇ ಯಾವನೋ ಒಬ್ಬನು ಗರ್ವದಿಂದ ಸತ್ಕವಿಗೆ ಸುಳ್ಳು ಹೇಳುತ್ತ ಜಿಪುಣನಾಗಿದ್ದರೆ ಆ ಕವಿಗೆ ದ್ರವ್ಯ ಸಹಾಯ ಮಾಡುವವರು ಲೋಕದಲ್ಲಿ ಯಾರೂ ಸಿಕ್ಕುವುದೇ ಇಲ್ಲವೇ?' ಎನ್ನುವ ತಾತ್ಪರ್ಯದ ಈ ಸೋಮೇಶ್ವರ ಶತಕವನ್ನು ನಾನು ಬಹುಷಃ ೭ನೇ ತರಗತಿಯಲ್ಲಿ ಓದಿದ ನೆನಪು. ಅಷ್ಟೇ ಅಲ್ಲ ಕೆಲವು ಸಂದರ್ಭಗಳಲ್ಲಿ ಇದು ನನಗೆ ಆತ್ಮವಿಶ್ವಾಸವನ್ನೂ ತುಂಬಿದೆ. ಆ ಕಾಲದಲ್ಲಿ ರಾಜಾಶ್ರಯ ಅಥವಾ ಧನಿಕರ ಆಶ್ರಯವಿಲ್ಲದೇ ಒಬ್ಬ ಕವಿಗೆ ಬದುಕುವುದು ಕಷ್ಟಕರವಾಗಿತ್ತು ಎನ್ನುವುದನ್ನು ತಿಳಿಸುವುದರೊಟ್ಟಿಗೇ ಯಾರೋ ಒಬ್ಬ ಅಹಂಕಾರಿಯು ಆಶ್ರಯ ಕೊಡದಿದ್ದ ಮಾತ್ರಕ್ಕೆ ಭೂಮಿಯಮೇಲೆ ಆಶ್ರಯದಾತರು ಹುಟ್ಟುವುದೇ ಇಲ್ಲವೆ? ಎಂಬ ಪ್ರಶ್ನೆಯ ಮೂಲಕ ಕವಿಗೆ ಅಭಯವನ್ನೂ ನೀಡುವಂತಿದೆ.

ಬರೆಯುವುದರಿಂದಲೇ ಬದುಕುತ್ತೇನೆ ಎನ್ನುವ ಸಂಕಲ್ಪದೊಂದಿಗೆ ಬದುಕನ್ನು ಆರಂಭಿಸಿ ಅನೇಕ ಸಂಕಷ್ಟಗಳನ್ನು ಎದುರಿಸಿ ಜೀವನ ಯಾತ್ರೆಯನ್ನು ಸಾರ್ಥಕವಾಗಿ ಪೂರೈಸಿದ ಮಹನೀಯರ ಬಗ್ಗೆ ತಿಳಿದಿದ್ದೇವೆ. ಆದರೆ ಇತ್ತೀಚೆಗೆ ಜೀವನವನ್ನು ಸುಗಮವಾಗಿ ಸಾಗಿಸಲು ಒಂದು ವೃತ್ತಿಯನ್ನು ಆಶ್ರಯಿಸಿ, ಪ್ರವೃತ್ತಿಯನ್ನು ನಮ್ಮ ಸಂತಸಕ್ಕಾಗಿಯೇ ಅಲ್ಲದೇ ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಲು ರೂಢಿಸಿಕೊಳ್ಳುತ್ತಲಿದ್ದೇವೆ. ನಮ್ಮ ಕನಸು ಏನಾಗಿರುತ್ತದೋ ಅದನ್ನೇ ಹೊಂದಲು ಪ್ರಯತ್ನಿಸುತ್ತೇವೆಯಾದ್ದರಿಂದ ನಮ್ಮ ದೃಷ್ಟಿ ಪ್ರಶಸ್ತಿಗಳು, ಸನ್ಮಾನ, .....ಗಳ ಕಡೆಗೆ ಕೇಂದ್ರೀಕೃತವಾಗಿ ಮೂಲತಃ ನಮ್ಮ ಹವ್ಯಾಸದಿಂದ ದೊರೆಯಬಹುದಾದ ಆನಂದ ನಗಣ್ಯವಾಗಲಾರಂಭಿಸುತ್ತದೆ. ಇದರೊಟ್ಟಿಗೇ ಸ್ಪರ್ಧೆ ಏರ್ಪಟ್ಟು ಪ್ರಾರಂಭದಲ್ಲಿದ್ದ ಪರಸ್ಪರ ಸಹಕಾರ, ಪ್ರೋತ್ಸಾಹಗಳೆಲ್ಲವೂ ಮರೆಯಾಗಿ ನಮ್ಮನ್ನು ನಾವೇ ವಿಶೇಷವಾಗಿ ಗೌರವಿಸಿಕೊಳ್ಳುತ್ತಾ ‘ಅಹಂ'ಭಾವವನ್ನು ಪೋಷಿಸಲಾರಂಭಿಸುತ್ತೇವೆ.

‘ಅವಕಾಶ'ಕ್ಕಾಗಿ ನಡೆಯುವ ಹೋರಾಟದಲ್ಲಿ ಪ್ರಭಲರದೇ ಮೇಲುಗೈಯಾಗಿಬಿಡುವುದು ಸರ್ವೇಸಾಮಾನ್ಯವಾಗಿದೆ. ತಮ್ಮತನವನ್ನೇ ಮರೆತು ಇರುವ ಅವಕಾಶಗಳೆಲ್ಲಾ ತಮಗಾಗೇ ರೂಪುಗೊಂಡಿದ್ದು ಎನ್ನುವಂಥಾ ಅವಕಾಶವಾದಿಗಳ ಪಡೆಯೇ ಇರುತ್ತದೆ. ತಮಗೆ, ತಮ್ಮವರಿಗೆ ಹೊಂದುವಂಥಾ ಅವಕಾಶಗಳನ್ನು ಸೃಷ್ಟಿಮಾಡುವವರನ್ನೂ ಕಾಣುತ್ತೇವೆ!

‘ಅವಕಾಶ' ವಂಚಿತ ಪ್ರತಿಭೆಗಳೇ ನಿರಾಶರಾಗದಿರಿ. ಇಲ್ಲಿ ಸಿಗದ ಅವಕಾಶ ಮತ್ತೆಲ್ಲಿಯೂ ಸಿಗಲಾರದೆಂದು ಚಿಂತಿಸದಿರಿ. ಆ ‘ಅವಕಾಶ'ವೆನ್ನುವುದಾದರೂ ಯಾವುದು? ಕೇವಲ ಕೀರ್ತಿಗಾಗಿ ಹಪಹಪಿಯೇ? ಕೀರ್ತಿಯಿಂದ ಆನಂದ ದೊರೆಯುವುದೆ? ಆತ್ಮೋನ್ನತಿಯಾಗುವುದೇ? ನಮ್ಮ ರಾಷ್ಟ್ರ ಕವಿ ಕುವೆಂಪುರವರು ‘ಕೀರ್ತಿಶನಿ ತೊಲಗಾಚೆ' ಎಂದಿರುವುದು ಈ ಕಾರಣಕ್ಕೇ ಇರಬಹುದು.

ನನ್ನ ‘ಗರಿಕೆ' ಕವನದಲ್ಲಿ ‘ಒಂದಾದರೂ ಅವಕಾಶ ಸಿಕ್ಕರೆ ಆಕಾಶಕ್ಕೇರುವೆನೆಂದು ಪರಿತಪಿಸುತ್ತಾ.....'ಎನ್ನುವ ಸಾಲಿದೆ. ಸಾಮಾನ್ಯವಾಗಿ ನಮ್ಮೆಲ್ಲರ ಹಂಬಲವೂ ಅದೇ ಆಗಿರುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ‘ನನ್ನನ್ನೇನಾದರೂ ಓದಿಸಿದ್ದರೆ ದೊಡ್ಡ ಆಫೀಸರೇ ಆಗ್ತಿದ್ದೆ' ಎಂದು ಕೊರಗುವುದು, ರಾಜಕಾರಿಣಿ ‘ನನಗೇನಾದರೂ ಟಿಕೆಟ್ ಸಿಕ್ಕಿದ್ದರೆ ಮುಖ್ಯಮಂತ್ರಿಯೇ ಆಗುತ್ತಿದ್ದೆ.' ಎನ್ನುವುದು..... ಇವೆಲ್ಲಾ ಸಾದಾರಣವಾಗಿ ಕೇಳುವ ಮಾತುಗಳೇ ಆಗಿರುತ್ತವೆ. ಏನಿದೆಯೋ ಅದನ್ನು ಬಿಟ್ಟು ಇಲ್ಲದುದಕ್ಕಾಗಿ, ಕಳೆದು ಹೋದ ಕಾಲಕ್ಕಾಗಿ ಚಿಂತಿಸುವುದು, ಯಾರಿಂದಲೋ ಈ ಪರಿಸ್ಥಿತಿ ಉಂಟಾಯಿತೆಂದು ಹಲುಬುವುದು ಕೆಲವೊಮ್ಮೆ ನಮ್ಮ ಬಾಲಿಷತನವಾಗುತ್ತದೆ. ನನ್ನದಾಗಬೇಕಾಗಿದ್ದ ಅವಕಾಶವನ್ನು ನನಗೆ ನೀಡಲಿಲ್ಲವೆ? ನನ್ನದೇ ಆಗಬೇಕೆಂದುಕೊಳ್ಳಲು ನನ್ನಲ್ಲಿರುವ ಯೋಗ್ಯತೆಯಾದರೂ ಏನು? ತಾನೊಬ್ಬನೇ ದಾತನೆಂದು ಭಾವಿಸಿದ್ದರೆ ಅದು ಆ ವ್ಯಕ್ತಿಯ ಅಲ್ಪತನವೇ ಆದೀತು. ನಿಜವಾದ ಸಾಮರ್ಥ್ಯ ನನ್ನಲ್ಲಿದ್ದರೆ ಇದಕ್ಕಿಂತಲೂ ಉತ್ತಮವಾದ ಅವಕಾಶ ನನಗಾಗೇ ಕಾದಿರಲೂ ಬಹುದು. ಎಂದು ಅವಕಾಶದ ಬಗ್ಗೆಯೇ ಚಿಂತಿಸುತ್ತಾ ನಮ್ಮೊಳಗಿನ ಅಮೂಲ್ಯತೆಯನ್ನು ಕಡೆಗಣಿಸುವುದೂ ಬೇಡ.

ಈ ಬದುಕೇ ನಮಗೊಂದು ಅವಕಾಶವಾಗಿದೆ. ಈ ಬದುಕಿನಲ್ಲಿ ನಾವು ಏನನ್ನಾದರೂ ಸಾಧಿಸಬಹುದು. ಈ ವಿಶ್ವ ವಿಶಾಲವಾಗಿದೆ. ನಮ್ಮ ಸುತ್ತಮುತ್ತಲಿರುವ ಉನ್ನತ ಸ್ಥಾನದಲ್ಲಿರುವವರು ನಮಗೆ ದೊರೆಯಬಹುದಾದ ಅವಕಾಶವನ್ನು ನೀಡಲಿಲ್ಲವೆಂದು ಕೊರಗುವುದು ಬೇಡ. ನಮ್ಮ ವೃತ್ತಿಯನ್ನೋ, ಪ್ರವೃತ್ತಿಯನ್ನೋ ನಮ್ಮ ಮನಸ್ಸಿಗೆ ಒಪ್ಪುವಂತೆ ಮಾಡುತ್ತಾ ಅದರಲ್ಲಿ ದೊರೆಯುವ ಆತ್ಮ ಸಂತೋಷವನ್ನು ಹೊಂದುತ್ತಾ ಮುನ್ನಡಿಯಿಡೋಣ. ಒಂದಲ್ಲಾ ಒಂದು ದಿನ ನಮ್ಮದಾಗಲೇ ಬೇಕಾದ ಅವಕಾಶ ನಮ್ಮನ್ನರಸುತ್ತಾ ಬಂದೇಬರುತ್ತದೆ. ಆದರೆ ಆ ದಿನಕ್ಕಾಗಿ ಕಾಯುತ್ತಾ ಕೂರುವುದು ಬೇಡ.