Friday, April 8, 2011

ಮನದ ಅಂಗಳದಿ.................೩೪. ಕೊಟ್ಟದ್ದು.....!

ಅಂದು ನಾನು ಬಸ್ಸಿನಲ್ಲಿ ಪಯಣಿಸುತ್ತಿದ್ದಾಗ ಬಹಳ ದಿನಗಳ ನಂತರ ಆತ ಕಂಡ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಆತ ನನ್ನನ್ನು ಗಮನಿಸಿದ್ದನೋ ಅಥವಾ ಕಂಡೂ ಕಾಣದಂತೆ ವರ್ತಿಸುತ್ತಿದ್ದಾನೋ ತಿಳಿಯಲಿಲ್ಲ. ಆತ ಸಿಕ್ಕಿದ್ದರಿಂದ ಆತ ನಮ್ಮಿಂದ ಪಡೆದಿದ್ದ ದುಬಾರಿಯಾದ ಆ ಹಣವನ್ನು ಕೇಳಲೇ ಬೇಕೆಂದು ತೀರ್ಮಾನಿಸಿದೆ. ಎರಡು ವರ್ಷಗಳ ಹಿಂದೆ ಸಾಲಮಾಡಿ ಯಾವುದೋ ಕಾರ್ಯನಿಮಿತ್ತ ಕೊಟ್ಟದ್ದು. ಬಹುಶಃ ಸಾಲಕ್ಕೆ ಕಟ್ಟುತ್ತಿರುವ ಬಡ್ಡಿಯ ಹಣದಷ್ಟೇ ಆತನೊಂದಿಗೆ ಮಾತನಾಡಲು ಖರ್ಚುಮಾಡಿರಬಹುದು! ಕೆಲಸವೂ ಆಗಲಿಲ್ಲ. ಹಣವನ್ನಾದರೂ ಹಿಂತಿರುಗಿಸಲಿ ಎಂದು ಕೇಳಿದರೂ ಪ್ರಯೋಜನವಾಗಿಲ್ಲ. ಕೆಲವು ದಿನಗಳಿಂದ ಯಾವಾಗ ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಸ್ವಿಚ್ಡ್ ಆಫ್! ಯಾವುದೇ ದಾಖಲೆಗಳಿಲ್ಲದೇ ಕೇವಲ ನಂಬಿಕೆಯ ಆಧಾರದ ಮೇಲೆ ನೀಡಿರುವ ಹಣ. ಮೋಸ ಹೊಂದುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದನ್ನು ಸಾಕ್ಷೀಕರಿಸುವಂತೆ ಈ ವ್ಯಕ್ತಿ ವರ್ತಿಸುತ್ತಿದ್ದಾನೆ. ಅಂದಿನಿಂದ ಇಂದಿನವರೆಗೂ ಕಣ್ಣಿಗೇ ಬೀಳದಂತಿದ್ದ, ಕರೆಗೂ ಸಿಗದಂತಿದ್ದ ವ್ಯಕ್ತಿ ಈ ದಿನ ಮುಂದಿನ ಸೀಟಿನಲ್ಲೇ ಪ್ರತಿಷ್ಟಾಪನೆಯಾಗಿದ್ದಾನೆ. ಮೊಬೈಲ್‌ನಲ್ಲಿ ಮಾತನಾಡುವುದರಲ್ಲಿ ತಲ್ಲೀನನಾದಂತಿದ್ದ ಆತ ಇತ್ತ ತಿರುಗುವುದೂ ಅಸಾಧ್ಯವೆನ್ನುವಂತಿತ್ತು. ನಿರೀಕ್ಷೆಯಿಂದ ಬೇಸತ್ತು ಬ್ಯಾಗಿನಲ್ಲಿದ್ದ ಪ್ರಭುಶಂಕರರ ‘ಖಲೀಲ್ ಗಿಬ್ರಾನ್' ಪುಸ್ತಕವನ್ನು ಹೊರತೆಗೆದು ಒಂದು ಪುಟವನ್ನು ಯಾದೃಚ್ಛಿಕವಾಗಿ ತೆರೆದೆ. ಅಲ್ಲಿ ಹೀಗಿತ್ತು:

‘ಗಿಬ್ರಾನ್ ಅತ್ಯಂತ ಉದಾರಿ. ಅವನ ಅಲೌಕಿಕತೆಗೂ ನಿತ್ಯ ಬದುಕಿಗೂ ಅಂತಹ ಅಂತರ ಇರಲಿಲ್ಲ. ತನಗೆ ಅನ್ಯಾಯ ಆದಾಗಲೂ ತಾನು ತನ್ನ ನ್ಯಾಯವಾದ ನಿಲುವಿನಿಂದ ಅತ್ತಿತ್ತ ಸರಿಯುತ್ತಿರಲಿಲ್ಲ. ಒಮ್ಮೆ ತುಂಬಾ ಹಣದ ಪ್ರಶ್ನೆಯಿದ್ದ ಒಂದು ಆಸ್ತಿಯ ವಿಷಯದಲ್ಲಿ ಆತ ವ್ಯವಹಾರಕ್ಕೆ ತೊಡಗಬೇಕಾಯಿತು. ಪ್ರತಿಪಕ್ಷಿಗಳು ಇಬ್ಬರು ಸ್ತ್ರೀಯರು. ಅಂಥಾ ಸಂದರ್ಭದಲ್ಲಿ ಆತ ಹೇಳಿದ: ‘ಈ ಸ್ತ್ರೀಯರನ್ನು ನಾನು ಕೋರ್ಟಿಗೆ ಎಳೆಯಬೇಕು, ಇಲ್ಲ ಹಣ ಕಳೆದುಕೊಳ್ಳಬೇಕು.' ಅದರಲ್ಲಿ ಒಬ್ಬಳು ಒಂದು ಚಿಕ್ಕ ಪುಸ್ತಕವನ್ನು(ಪ್ರವಾದಿ) ನನ್ನ ಮುಖದ ಮುಂದೆ ಆಡಿಸಿ ಹೇಳಿದಳು: ‘ನೀನು ಈ ಪುಸ್ತಕ ಬರೆದಿದ್ದೀಯೆ. ಈಗ ಈ ವಿಷಯ ಏನು ಮಾಡುತ್ತೀಯೆ?' ಆತ ಒಂದು ನಿಮಿಷ ಮೌನವಾಗಿದ್ದು ಹೇಳಿದ: ‘ನಾನು ಯಾವುದನ್ನು ನಂಬಿದ್ದೆನೋ ಅದನ್ನು ನಂಬಿ, ನಾನು ಏನನ್ನು ಬರೆದಿದ್ದೇನೆಯೋ ಅದನ್ನು ನಂಬಿ ನಾನು ಈ ಸ್ತ್ರೀಯರ ಮೇಲೆ ಅಪರಾಧ ಹೊರಿಸಲೆ? ನ್ಯಾಯಾಧೀಶರ ಮುಂದೆ ಹೋಗಲೆ? ನಾನು ಸಾಕ್ಷಿಕಟ್ಟೆಯಲ್ಲಿ ಆ ಸ್ತ್ರೀಯರನ್ನು ಅಪರಾಧಕ್ಕೆ ಗುರಿಮಾಡುವುದನ್ನು ನೋಡುತ್ತಿರಲೆ?'

ಆತನ ಆಪ್ತ ಗೆಳತಿ ಬಾರ್ಬರಾ ಯಂಗ್ ಹೇಳಿದಳು: ‘ಇಲ್ಲ, ನೀನು, ನೀನು ಏನಾಗಿದ್ದೀಯೋ ಅದಾಗಿ, ಹಾಗೆ ಮಾಡಲೇ ಕೂಡದು.' ಆತನ ಮುಖ ತಿಳಿಯಾಯಿತು. ‘ನನ್ನ ಎಲ್ಲಾ ಸ್ನೇಹಿತರೂ ಹೇಳುತ್ತಾರೆ, ನಾನು ಆ ಹಣ ಪಡೆಯಲೇ ಬೇಕು ಎಂದು. ನಾನು ಆ ಹಣವನ್ನು ಪಡೆದದ್ದೇ ಆದರೆ ಆ ಪುಟ್ಟ ಪುಸ್ತಕವನ್ನು ನಾನು ಎಂದೆಂದೂ ಬಿಚ್ಚಲೇ ಕೂಡದು.'

ಅನಂತರ ಆತ ಒಂದು ಪುಟ್ಟ ಕಾಗದದ ಚೂರಿನ ಮೇಲೆ ನಿದಾನವಾಗಿ ಬರೆದ: ‘ನಿನ್ನ ಉಡುಪಿನ ಮೇಲೆ ತನ್ನ ಕೊಳೆಯಾದ ಕೈಯನ್ನು ಒರೆಸಿದವನು ಆ ಉಡುಪನ್ನು ತೆಗೆದುಕೊಂಡು ಹೋಗಲಿ. ಅವನಿಗದು ಬೇಕಾಗುತ್ತದೆ, ನಿನಗಂತೂ ಅಲ್ಲ!'

ಈ ಘಟನೆ ನಡೆದಿದ್ದು ಅತ್ಯಂತ ಕಾಕತಾಳೀಯವಾಗಿ! ನಂತರದ ಕೆಲವು ದಿನಗಳಲ್ಲಿ ನಮ್ಮ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ಒಕ್ಕೂಟದಲ್ಲಿ ಸ್ವತಃ ಅಧಿಕಾರಿಯಾದ ಆತನ ನೇತೃತ್ವದಲ್ಲಿಯೇ ವಿಶೇಷ ಭೋಜನದ ವ್ಯವಸ್ಥೆಯಾಗಿತ್ತು. ನನ್ನದು ಸಾತ್ವಿಕ ಆಹಾರವಾದ್ದರಿಂದ ಡಬ್ಬಿಯೂಟದಲ್ಲಿಯೇ ತೃಪ್ತಿಹೊಂದಿದೆ! ಆ ಹಣದ ಬಗ್ಗೆ ಪ್ರಸ್ತಾಪ ಮಾಡುವುದು ವ್ಯರ್ಥವೆನಿಸಿದರೂ ಆತನಿಗೆ ಶೀಘ್ರವೇ ಹಿಂತಿರುಗಿಸುವಂತೆ ಹೇಳಿದೆ!

ಈ ವಿಷಯದಲ್ಲಿ ನನ್ನ ನಿಲುವು ವ್ಯಾವಹಾರಿಕವಲ್ಲದೇ ಇರಬಹುದು. ಆದರೂ ನನಗನಿಸುವಂತೆ ಈಗ ಹಣವನ್ನಂತೂ ಕಳೆದುಕೊಂಡಿದ್ದೇವೆ. ಆ ಹಣವನ್ನು ಪಡೆದೇ ತೀರುವೆನೆಂದು ಪ್ರಯತ್ನಶೀಲಳಾಗುವುದೆಂದರೆ ದಾಖಲೆ ಇಲ್ಲದೇ ನೀಡಿರುವ ಹಣವಾದ್ದರಿಂದ ಆತನಿಗೆ ಚತುರೋಪಾಯಗಳಲ್ಲಿ ಕಡೆಯದನ್ನೇ (ಸಾಮ, ದಾನ, ಭೇದ ಮತ್ತು ದಂಡ) ಪ್ರಯೋಗಿಸಬೇಕು. ಅದಕ್ಕೆ ಬೇರೆ ಪ್ರಭಲರನ್ನು ಆಶ್ರಯಿಸಿ (ರೌಡಿಸಂ!) ಅವರ ಮೂಲಕ ಹೋರಾಡಬೇಕು. ನನ್ನದು ಹೇಡಿಯ ಲಕ್ಷಣ ಎನಿಸಿದರೂ ಚಿಂತೆಯಿಲ್ಲ. ಕಳೆದುಕೊಂಡಿರುವ ಹಣದ ಜೊತೆಗೆ ಮಾನಸಿಕ ಶಾಂತಿಯನ್ನೂ ಕಳೆದುಕೊಂಡು, ಅದರಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳಿಂದ ನರಳುತ್ತಾ, ಅದಕ್ಕಾಗಿ ಮತ್ತಷ್ಟು ಹಣ ಮತ್ತು ಸಮಯವನ್ನು ವ್ಯಯಿಸುತ್ತಾ.....ಇದು ಸಾಮಾನ್ಯರಾದ ನಮ್ಮ ಆಲೋಚನೆ. ಆದರೆ ಖಲೀಲ್ ಗಿಬ್ರಾನ್ ತನಗೆ ಬರಬೇಕಾಗಿದ್ದ, ತನ್ನದೇ ಆಗಿದ್ದ ಆಸ್ತಿಯನ್ನು ಆ ಸ್ತ್ರೀಯರಿಗೆ ಬಿಟ್ಟುಕೊಡುವ ಮನಸ್ಸು ಮಾಡಿದ್ದು ತನ್ನ ಅಮೂಲ್ಯ ಆಸ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ! ಮೊದಲ ಅಭಿಪ್ರಾಯವಾಗಿ ಆ ಸ್ತ್ರೀಯು ‘ಪ್ರವಾದಿ' ಪುಸ್ತಕವನ್ನು ಗಿಬ್ರಾನ್ ಎದುರು ಹಿಡಿದು ಹಾಗೆ ಕೇಳಿದ್ದು ಒಂದು ರೀತಿ ಬ್ಲಾಕ್ ಮೇಲ್ ತಂತ್ರವಲ್ಲವೇ ಎನಿಸಿತು. ಅವರ ಗುರಿ ಇದ್ದದ್ದು ಹೇಗಾದರೂ ಮಾಡಿ ಆ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುವುದು! ಅದಕ್ಕಾಗಿ ಅವರು ಯಾವುದೇ ಮಾರ್ಗವನ್ನು ಅನುಸರಿಸಲು ಸಿದ್ಧರಿರುತ್ತಾರೆ. ಅಂತಹ ವ್ಯಕ್ತಿಗಳೊಡನೆ ಗಿಬ್ರಾನ್ ತನ್ನ ಮೌಲ್ಯಯುತ ನಿಲುವಿನಿಂದ ತನ್ನತನವನ್ನು ಉಳಿಸಿಕೊಂಡಿದ್ದಾರೆ.

ಈ ಘಟನೆಗಳಲ್ಲಿ ಸಾಮ್ಯತೆ ಕಂಡುಬಂದರೂ, ಆಕಸ್ಮಿಕವಾಗಿ ಆ ಸಂದರ್ಭದಲ್ಲಿಯೇ ಗಿಬ್ರಾನ್ ಅವರ ಜೀವನದ ಸನ್ನಿವೇಶವನ್ನು ಓದಿದ್ದು ಆಶ್ಚರ್ಯವನ್ನೇ ಉಂಟುಮಾಡಿದರೂ, ನಮ್ಮ ಅಸಹಾಯಕತೆಯನ್ನೇ ಆ ವ್ಯಕ್ತಿ ದೌರ್ಬಲ್ಯವೆಂದು ಪರಿಗಣಿಸದೇ ಕೊಟ್ಟರೆ ಕೊಡಲಿ. ಈಗಾಗಲೇ ಆತ ವರ್ತಿಸಿ ತೋರ್ಪಡಿಸಿರುವ ತನ್ನ ಯೋಗ್ಯತೆಯಿಂದ ಹಣ ಹಿಂತಿರುಗಿರುವುದು ಅಸಾಧ್ಯದ ಮಾತೇ ಸರಿ. ನಾನಂತೂ ಅದಕ್ಕಾಗಿ ನನ್ನ ಮನಸ್ಸಿನ ಸಮಾಧಾನವನ್ನು ಕಳೆದುಕೊಳ್ಳುವುದು ಬೇಡವೆಂದುಕೊಂಡಿದ್ದೇನೆ. ಇದು ಸರಿಯೋ? ತಪ್ಪೋ? ತೀರ್ಮಾನ ನಮ್ಮನಮ್ಮ ಮನಃಸ್ಥಿತಿಗೆ ಸಂಬಂಧಿಸಿದ್ದು!

7 comments:

 1. sariyaada teermaana. idannu naanu halavaaru baari maadiddene. haagentaa avaru sikkaaga chaati eseyuvadannu biduvadilla. andare neenu nanagobba odahuttidavanante endu heli biduttene, adara munde avarige bittaddu. naanaage kare madolla, haagu korogolla aadare avara mukha khandaaga kalleseyade bidolla. nanagaagiddu bereyavarige aagabaaradu nodi,,,,

  ReplyDelete
 2. hanavannu hintirugisuva saamarthyaviddu hanavannu hintirugisade iruvavrannu summane bida baaradu..Badavaraagiddare balavanta maadabaaradu...

  ReplyDelete
 3. ಮನದಲ್ಲಿ ದುಗುಡವನ್ನು ಹೊತ್ತುಕೊಂಡು ಇರುವದಕ್ಕಿಂತ ಇಂತಹ ಖೂಳರನ್ನು ಮರೆತು ಬಿಡುವದೇ ಲೇಸು. ಆದರೆ ಒಮ್ಮೆ ಕೈ ಸುಟ್ಟುಕೊಂಡಿರುವಿರಿ, ಮತ್ತೊಮ್ಮೆ ಸುಟ್ಟುಕೊಳ್ಳದಿರಿ!

  ReplyDelete
 4. ರೌಡಿಸಂ ಜಿಂದಾಬಾದ್! ಬೇಡ ಬಿಡಿ. ಸಾಲ ಪಡೆದು ನಿಮ್ಮಂತವರ ಸ್ನೇಹ ಕಳೆದುಕೊಂಡರು.

  ReplyDelete
 5. ಈಗಾಗಲೇ.. ದುಡ್ಡು ಕೊಟ್ಟು ದುಗುಡದಿಂದ ಇರುವ ನೀವು.. ಅದನ್ನು ಹಿಂದಿರುಗಿ ಪಡೆಯಲು (ಪ್ರಬಲರನ್ನು ಅಶ್ರಯಿಸಿದ್ದರೆ) ಅನುಸರಿಸಿದ ಮಾರ್ಗ ಸರಿಯಿತ್ತೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸ ಬೇಕಾಗದಂತೆ... ಗಿಬ್ರಾನ್ ನಿಮ್ಮನ್ನು ತಡೆದ ಎನ್ನಬಹುದೇನೋ.. ನಿಮ್ಮ ಮನಸ್ಥಿತಿಯ ಚಿತ್ರಣ ಸಹಜವಾಗಿ ಚಿತ್ರಿತವಾಗಿದೆ.


  ಶ್ಯಾಮಲ

  ReplyDelete
 6. ಉತ್ತಮ ತೀರ್ಮಾನ ಪ್ರಭಾಮಣಿಯವರೆ - ಪಾಪೋಸು ಹೋದವಲ್ಲ - ಎ೦ದಿದ್ದಾರೆ, ದಾಸರು. ಒ೦ದು ಅರ್ಥದಲ್ಲಿ ಪಾಪೋಸು ಎ೦ದರೆ ಪಾದರಕ್ಷೆಯಾದರೂ, ಅದನ್ನು ಬಿಡಿಸಿದಾಗ "ಪಾಪ ಓಸು" ಹೋದವು ಎ೦ದರ್ಥವಾಗುತ್ತದೆ. ತಮಗೆ ಒಳಿತಾಗಲಿ.

  ಅನ೦ತ್

  ReplyDelete