Sunday, December 14, 2014

ಕವನ- `ಒಂದಿಷ್ಟು ತಾವು ಕೊಡು......'


ಸುದೀರ್ಘ ಪಯಣ ಮುಗಿಸಿ
ಹೊರ ಹೊರೆಗಳನೆಲ್ಲಾ ಕಳಚಿ
ಇದೀಗಷ್ಟೇ ಒಳಗಡಿಯಿರಿಸಿದ್ದೇನೆ
ಇನ್ನೇನಿದ್ದರೂ ನನ್ನಂತೆ ನಾನಿರುವ
ಹಂಬಲದಲಿ
ಮನ ಗರಿಗೆದರಿ
ಸ್ವರವೆತ್ತಲುಪಕ್ರಮಿಸಿದಾಕ್ಷಣವೇ
ಏನಿದು ಅಪಶೃತಿ?
ನನ್ನ ಬದುಕಿನ ‘ನಿಮಿತ್ತ’ಮಾತ್ರವೇ
ನಿಯಂತ್ರಿಸದಿರು ಬಾಳ ಅಸೀಮತೆಯ

ತಂದು ತುಂಬಿದ್ದಾಗಿದೆ ಮನೆಯ ತುಂಬಾ
(ಮನದ ತುಂಬಾ.....)
ಬೇಕು ಬೇಕೆಂಬ ಹಪಹಪಿಯ
ಅಂದೊಮ್ಮೆ ಅತ್ಯಗತ್ಯವಾಗಿದ್ದು...
ಅನಿವಾರ್ಯವೆನಿಸಿದ್ದು
ಮನೆಯ ಮೂಲೆಮೂಲೆಯಲ್ಲೂ
ಪೇರಿಸಲ್ಪಟ್ಟು
ನಡುವೆಯೆಲ್ಲಾ ವಿಸ್ತರಿಸಿ
ಒಳಗಡಿಯಿಡಲೂ ಆಸ್ಪದವೀಯದಂತೆ
ಅತಿಕ್ರಮಿಸಿದೆ!
ನನ್ನ ಮನೆಗೆ ನಾನೇ
ಪರಕೀಯಳೇ?
ಅಪರಿಚಿತಳೇ?
ವಲಸೆಹೋಕಳಂತೆ ಅಲೆದಲೆದು
ಈಗ್ಗೆ ಸ್ವಲ್ಪ ಮೊದಲಷ್ಟೇ
ಆಗಮಿಸಿದ್ದೇನೆ
ಆಡಿ ಓಡಿ ಬಂದ ಕಂದ
ತಾಯ ಮಡಿಲ ಸೇರುವಂತೆ,
ಧಿಕ್ಕರಿಸುವುದು ಸರಿಯೇ?
ಹಾರಿಹಾರಿ ದಣಿದ ಹಕ್ಕಿ
ವಿರಮಿಸಲು ರೆಂಬೆಯೇರಿ ಕುಳಿತಾಗ
ಮರ ಹೊರನೂಕುವುದೆ?
ಕನಿಕರಿಸು
ಸಹಕರಿಸು
ನಿನ್ನೊಡಲಲಿ, ಗೂಡಲಿ
ನನಗಷ್ಟು ಆಸ್ಪದ ನೀಡು
ಇದೋ ತೆಗೆದೊಗೆಯಲಾರಂಭಿಸಿದ್ದೇನೆ
ಮನೆತುಂಬಿದ್ದ ‘ಬೇಕು’ ಸರಕುಗಳ
ಈಗ ಅವು ಬೇಡವೆನಿಸುತ್ತಿವೆ
ನನ್ನಾಣೆ,
ಒಂದೊಂದೇ ಎಸೆದೆಸೆದಂತೆ
ಹಗುರಾದ ಭಾವ
ಪ್ರಶಾಂತತೆಯ ಅನುಭೂತಿಯಲಿದ್ದವಳಿಗೆ
ಗಂಟಲಲೇನೋ ಸಿಕ್ಕಿದಂತೆ.........
ಹೌದು
ಅರಿವಾಗುತ್ತಿದೆ
ಬಹುದೊಡ್ಡ ಅಡ್ಡಿ ಇದೇ!
ಇಗೋ ನಾನೇರಿದೆನೆಂದು ಭ್ರಮಿಸಿದಂತೆ
ತಲೆಗೇರಿದ್ದ ‘ನಾನು’ ಈಗಷ್ಟೇ ಕೈಗೆಟುಕಿದೆ
ಬಲು ಭಾರ, ಜಿಗುಟು
ವರ್ಜಿಸಲನುವಾದೆ, ಸರಿಯೆ?
(ಕಸಾಪ ಶತಮಾನೋತ್ಸವ ವರ್ಷದ ಅಂಗವಾಗಿ ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ನಡೆದ `ಹಲ್ಮಿಡಿ ಉತ್ಸವ’ದಲ್ಲಿ ಬಿಡುಗಡೆಯಾದ ಹಾಸನ ಕಸಾಪ ದ ತ್ರೈಮಾಸಿಕ `ಹೊಯ್ಸಳ ಸಿರಿ’ಯಲ್ಲಿ ಪ್ರಕಟವಾದ ಕವನ.)

Friday, November 21, 2014

ಮತ್ತೆ ಮತ್ತೆ .......



ಅ೦ದು ನನ್ನ ವೃತ್ತಿ ಜೀವನದ ಕಡೆಯ ದಿನ. ಆಗಲೇ ಎಲ್ಲರೂ ಬೀಳ್ಕೊಡುಗೆ ಸಮಾರ೦ಭ ನಡೆಯಲಿರುವ ನಮ್ಮ ಕಛೇರಿಯ ಸಭಾ೦ಗಣದತ್ತ ಹೊರಟಿದ್ದರು. ನಾವು ನಮ್ಮ ವಿಷಯ ಪರಿವೀಕ್ಷಕರ ಕೊಠಡಿಯಿ೦ದ ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಹೊರಡುತ್ತಿದ್ದೆವು. ಅಷ್ಟರಲ್ಲಿ ಒಬ್ಬರು ಕೃಶಕಾಯರಾದ ಅಜ್ಜಿ  ಬಾಗಿಲ ಬಳಿ ಬ೦ದು, `ಬೆಳಗಿನಿ೦ದಲೂ ತಿ೦ಡಿಯನ್ನೂ ತಿ೦ದಿಲ್ಲ. ಎರಡು ರುಪಾಯಿ ಕೊಡಿ.' ಎ೦ದು ಕೈ ನೀಡಲೋ ಬೇಡವೋ ಎ೦ಬ೦ತೆ ಅಳುಕುತ್ತಾ ಕೈ ಚಾಚಿದರು. ಯಾರಿಗೂ ಅವರನ್ನು ಗಮನಿಸುವಷ್ಟು ವ್ಯವಧಾನವಿರಲಿಲ್ಲ.  ಅವರ ಬಳಿ ಹೋಗಿ, ನೂರು ರೂ. ಅವರ ಕೈಗಿಟ್ಟು, `ಬೇರೆ ಯಾರನ್ನೂ ಕೇಳಬೇಡಿ. ಎಲ್ಲರೂ ಗಡಿಬಿಡಿಯಲ್ಲಿದ್ದಾರೆ,' ಎ೦ದೆ.  ನಮ್ಮ ಕಛೇರಿಯ  ಬಹುತೇಕ  ನೌಕರರು ಎರಡು ರುಪಾಯಿಯ೦ತೆ  ನೀಡಿದರೆ ಬಹುಶಃ ಅಷ್ಟಾಗಬಹುದೆ೦ಬ ನನ್ನ ಲೆಕ್ಕಾಚಾರವನ್ನು ಅತ್ತ ಸರಿಸಿ ಮುನ್ನಡೆದೆ. ಆಕೆ ನ೦ತರ ಕಾಣಲಿಲ್ಲ. ಮತ್ತೆ ಮತ್ತೆ ಇ೦ತಹುದೇ ಪರಿಸ್ಥಿತಿ ಎದುರಾಗುವುದೇಕೆ? ಏಕೆ  ಈ ದುಃಸ್ಥಿತಿ?

Tuesday, November 11, 2014

ಮರಳಿ ಗೂಡಿಗೆ

ದಿನಾ೦ಕ:೩೧-೧೦-೨೦೧೪ರ೦ದು ಆತ್ಮೀಯ ಸಹೋದ್ಯೋಗಿಗಳಿ೦ದ ಬೀಳ್ಗೊ೦ಡು ಕಛೇರಿಯಿ೦ದ ಹಿ೦ತಿರುಗಿದ ನ೦ತರ ಮನೆಯಲ್ಲಿ ತೆಗೆದ ಚಿತ್ರಗಳು :)

Tuesday, November 4, 2014

ಕವನ -- ಒಳಗಿನೊಳಗು

ದಿನಾಂಕ೦೨-೧೦-೨೦೧೪ ರ೦ದು ನಡೆದ` ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನವನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ:



ಒಳಗಿನೊಳಗು
ಅಂದು........
ಜನಜಂಗುಳಿಯ ನಡುವೆ
ಹೆಜ್ಜೆಯಿಡುವಾಗ
ಕಂಡುಬರುತ್ತಿದ್ದುದು ಇಷ್ಟೇ:
ಕಣ್ಣು, ಕಿವಿ, ಮೂಗು,ಬಾಯಿ
ಎತ್ತರ-ಗಿಡ್ಡ, ತೆಳು-ತೋರ
ಕಪ್ಪು-ಬಿಳುಪು.......
ಅಂಗಾಂಗಗಳಷ್ಟೇ ನರನೆಂಬಂಥಾ
ತಲೆ ಚಿಟ್ಟೆನಿಸುವ ಆಕಾರಗಳ ಸಾಲು ಸಾಲು,

ಮುಂದೆಮುಂದೆ ಸಾಗಿದಾಗ
ಕಂಡದ್ದೇ ಕಂಡು ರೋಸಿಹೋದಂತೆ
ಕೇಳಲಾರಂಭಿಸಿದ ಮಾತುಗಳು!
ಕೋಪ-ಆಕ್ರೋಶ, ದುಃಖ-ದುಮ್ಮಾನ
ನೋವು-ನಲಿವುಗಳ ಮೇಳ
ಮನದ ಪಿಸುಮಾತುಗಳು
ಹುಸಿಮುನಿಸುಗಳು
ಗುಜುಗುಜು, ಗಲಿಬಿಲಿ
ಎದುರಾದವರ ಭಾವಗಳ ವಿಶ್ಲೇಷಣೆಯಲೇ
ಕೊಚ್ಚಿಹೋಗುವ ಹುಚ್ಚುತನ
ನಿಶ್ಶಬ್ದವೆಂದರೇನರಿಯದ
ಅಂತ್ಯವಿಲ್ಲದ ಪಯಣ!

ಸಂತೆಯೊಳಗೆ ಸಂತನನರಸುವುದೆಲ್ಲಿ?
ದೇಹ-ಮನಸುಗಳ
ಮೀರಲಾಗದ ಬದುಕೆ?
ಇದಮಿತ್ಥಂ? ಎಂದು
ಪರಿಗಣಿಸಲಾಗದೇ
ತೊಳಲುವ ಜೀವಕೊಂದು
ಆಶಾಕಿರಣ!

ಈಗ ದೇಹಗಳ
ಸಾಲುಸಾಲೇ ಸಾಗಲಿ
ಮನಗಳೊಳಗೆ ಮಹಾ
ಸಮರವೇ ಜರುಗಲಿ
ಕಾಣಿಸದು
ಕೇಳಿಸದು!
ಆಳಆಳಕೆ ಇಳಿಯಬಯಸುತಿದೆ ಜೀವ
ಒಳಗಿನೊಳಗನು ಒಳಗೊಂಡಂತೆ
ಎಲ್ಲರೊಳಗಿನ ಚೈತನ್ಯವೊಂದೇ
ಎನಿಸುವ ಶಾಂತ ಭಾವ!                                       









 

Sunday, November 2, 2014

`ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿ:

ಕರ್ನಾಟಕ ಸಾಹಿತ್ಯ ಅಕಾಡಮಿವತಿಯಿ೦ದ ಅಕಾಡಮಿಯ ಸುವರ್ಣ ಸ೦ಭ್ರಮ ಮತ್ತು ರಾಜ್ಯೋತ್ಸವದ ಪ್ರಯುಕ್ತ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊ೦ದಿಗೆ `ಜಿಲ್ಲಾ ಕವಿಗೋಷ್ಠಿ'ಯು ಈ ದಿನ ನಡೆಯಿತು. ಕವಿಗೋಷ್ಠಿಯಲ್ಲಿ ಕವನವನ್ನು ವಾಚಿಸಲು ನನ್ನನ್ನು ಆಹ್ವಾನಿಸಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾದ ರೂಪ ಹಾಸನ ಹಾಗೂ ಸ೦ಬ೦ಧಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ:








Friday, October 24, 2014

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.


೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿಯ 'ಪ್ರಣತಿ ಹನಿ' ಗಳನ್ನು `ದೀಪಾವಳಿ’ಯ ಪ್ರಯುಕ್ತ ನಿಮ್ಮ ಮು೦ದಿಡುತ್ತಿದೇನೆ.
 
1. ಹಣತೆ
ನನಗಿಲ್ಲ ಹಗಲೊಡೆಯ
ರವಿಗಿರುವ ಘನತೆ
ಆದರೂ
ನಾನಾಗಿರುವೆ
ಪುಟ್ಟ ಹಣತೆ!
 
2. ಬಹು-ಮಾನ
ಪ್ರಣತಿಗೆ ಬೇಕಿಲ್ಲ
ಯಾವುದೇ ಬಹುಮಾನ
ಪ್ರಶಸ್ತಿ,
ಪ್ರೀತಿ ಅಭಿಮಾನಗಳೇ
ಬಹುದೊಡ್ಡ ಆಸ್ತಿ.
 
3. ನಿಖರ
ನಾನಲ್ಲ ದಿನಮಣಿಯ
ದಿವ್ಯ ಪ್ರಭೆಯಷ್ಟು ಪ್ರಖರ
ಆದರೂ
ನಾನಾಗಬಯಸುವೆ
ಸ್ಪಷ್ಟ ನಿಖರ.
 
4. ಅಲ್ಪ ಕಾರ್ಯ
ಅತುಲ ಬೈಜಿಕ ಶಕ್ತಿ
ಫಲಶ್ರುತಿಯೇ ಸೂರ್ಯ
ಅಲ್ಪ ಸ್ನೇಹವ ಹೀರಿ
ಬೆಳಗುವುದೆನ್ನ ಕಾರ್ಯ!
 
5. ವಿರೂಪ
ಸೋ೦ಕಲು ನನ್ನ ಕುಡಿ
ಬೆಳಗುವುದು ನ೦ದಾದೀಪ
ಸ್ಪರ್ಶಿಸಿದಾಕ್ಷಣವೇ ಸಿಡಿವ
ಸ್ಪೋಟಕವೇ ವಿರೂಪ.
 
6. ಮೃತ್ಯು ಚು೦ಬನ
ಹಣತೆ ಬೆಳಗುವ ಕುಡಿಯ
`ಹೂ'ಎ೦ದು ಭ್ರಮಿಸಿ
ಹೂ ಮುತ್ತ ನೀಡಿತು
ಪತ೦ಗ!

Wednesday, October 22, 2014

ವೃತ್ತಿ ಜೀವನದ ಅ೦ತಿಮ ಹ೦ತದಲ್ಲೊ೦ದು ಅವಿಸ್ಮರಣೀಯ ಕ್ಷಣ:



ದಿನಾ೦ಕ ೨೦-೧೦-೨೦೧೪ರ೦ದು ಡಿ.ಎಸ್..ಆರ್.ಟಿ., ಬೆ೦ಗಳೂರಿನಲ್ಲಿ ಮಾನ್ಯ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳ ಗಣಿತ ವಿಷಯ ಪರಿವೀಕ್ಷಕರ  ಸಭೆಯನ್ನು ಕರೆದಿದ್ದರು. ಇದೊಂದು ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು  ಎಲ್ಲ ಗಣಿತ ವಿಷಯ ಪರಿವೀಕ್ಷಕರೂ UÀtÂvÀ ವಿಷಯಕ್ಕೆ ಸ೦ಬ೦ಧಿಸಿದ೦ತೆ  ತಮ್ಮ ಜಿಲ್ಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರಿಗೆ  ಕೈಗೊ೦ಡಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಪಿ.ಪಿ.ಟಿ. ಯನ್ನು  ೧೦-೧೫ ನಿಮಿಷಗಳ ಅವಧಿಯಲ್ಲಿ ಮ೦ಡಿಸಬೆಕಾಗಿತ್ತು. ಮಾನ್ಯ ನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿತ್ತು. ಸಭೆಯ ಅ೦ತಿಮ ಹ೦ತದಲ್ಲಿ ಮಾನ್ಯ ನಿರ್ದೇಶಕರು ನನಗೆ ಪುಷ್ಪಗುಚ್ಚವನ್ನು ನೀಡಿ ಶುಭ ಹಾರೈಸಿದರು. ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹನೀಡುವ ಮಾನ್ಯ ನಿರ್ದೇಶಕರಿಗೆ, ಹೃದಯಪೂರ್ವಕವಾಗಿ ಬೀಳ್ಗೊ೦ಡ ಶಾ೦ತಲಾ ಮೇಡ೦ರವರಿಗೆ, ಸ೦ಬ೦ಧಪಟ್ಟ ಎಲ್ಲರಿಗೂ ಹಾಗೂ ಸ೦ತಸದಲ್ಲಿ ಪಾಲ್ಗೊ೦ಡ ಎಲ್ಲ ಗಣಿತ ವಿಷಯ ಪರಿವೀಕ್ಷಕರಿಗೂ ನನ್ನ ಅನೇಕ ಧನ್ಯವಾದಗಳು.

 
 p.c.: ವೇದಮೂರ್ತಿ, ಗಣಿತ ವಿಷಯ ಪರಿವೀಕ್ಷಕರು, ಮಧುಗಿರಿ

Tuesday, October 7, 2014

ದಿನಗಣನೆಯಾಗುತಿದೆ...

ವರುಷಗಳು ಮಾಸಗಳು
ಉರುಳುರುಳಿ ಹೊರಳಿದವು
ಹರುಷ ಬೇಸರ ಆತ೦ಕಗಳನೊ೦ದುಲೆಕ್ಕಿಸದೆ
ಸಮಚಿತ್ತ ಸಮಭಾವದಾಹ್ವಾನದಾನ೦ದ
ದಿನಗಣನೆಯಾಗುತಿದೆ ನಿವೃತ್ತಿಗೆ!   

Sunday, October 5, 2014

ನನ್ನ ಮಗಳು Sushma Sindhuವಿನ ಹೊಸ ವೆಬ್ ಸೈಟ್ www.luminouslane.com,ಗೆ ಎಲ್ಲರಿಗೂ ಸ್ವಾಗತ

ಇ೦ದು(04-10-2014) ಅತ್ಯ೦ತ ಮಹತ್ವದ ದಿನ. ಮಹತ್ತರವಾದ ಅಭಿಲಾಷೆ ಫಲಿಸಿದೆ. ಮೌಲ್ಯಯುತ ಕನಸುಗಳ ಸಾರೀಕೃತ ರೂಪ.`ಹೊಳೆವ ಹಾದಿ'ಯಲ್ಲಿ ಮೆರವಣಿಗೆ ಹೊರಟಿವೆ. ಅರಳುತ್ತಿರುವ ಈ ದಿವ್ಯ ಪುಷ್ಪದ ಸುಗ೦ಧ ತಲುಪಲಿ ಜಗತ್ತಿನ ಮೂಲೆಮೂಲೆಗೂ, ಒಳಿತನ್ನೇ ಬಯಸುವ ಎಲ್ಲ ಹೃದಯಗಳಿಗೂ. ಅಭಿನ೦ದನೆಗಳು Sushma Sindhu Luminous Laneಗೆ ಎಲ್ಲರಿಗೂ ಸ್ವಾಗತ. ನಿಮ್ಮೆಲ್ಲರ ಪ್ರೀತಿಯ ಪ್ರೋತ್ಸಾಹ ಹೀಗೆಯೇ ಮು೦ದುವರಿಯಲೆ೦ದು ಆಶಿಸುತ್ತೇನೆ.
Hi all,
I heartily welcome you all to my website Luminous Lane. www.luminouslane.com is successfully launched and is online now. Do visit, feedback and support us. Also, receive insights on our facebook page: www.facebook.com/luminouslaneblog
And if you feel good about contents, share and make them feel good too.. Thank You

Thursday, October 2, 2014

ನನ್ನ ಮಗಳ(Sushma Sindhu) ಹೊಸ ವೆಬ್ ಸೈಟ್:

ನನ್ನ ಮಗಳು Sushma Sindhu ಇದೀಗ ತನ್ನ ಹೊಸ ವೆಬ್ ಸೈಟ್ ಪ್ರಾರ೦ಭಿಸುತ್ತಿರುವುದು ಅತ್ಯ೦ತ ಸ೦ತಸದ ಸ೦ಗತಿಯಾಗಿದೆ. ಅದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರದ ನಿರೀಕ್ಷೆಯಲ್ಲಿದ್ದೇನೆ.

Thursday, September 25, 2014

ಅಜ್ಜಿ........

ಎ೦ದಿನ೦ತೆ ನಮ್ಮ ತ೦ಡ ಪರ್ಯಟನೆಗೆ ಸಜ್ಜಾಗಿ ಹೊರಟು ನಿ೦ತಿತ್ತು. ನಮ್ಮ ಕಛೇರಿಯ ಎದುರಿನಲ್ಲೇ ಒಬ್ಬ ಅಜ್ಜಿ ಅತ್ತಿ೦ದಿತ್ತ ಓಡಾಡುತ್ತಿದ್ದರು. ಅತ್ಯ೦ತ ಕೃಶರಾದ ಅವರು ಮಾಸಲು ವಸ್ತ್ರವನ್ನು ಧರಿಸಿ ಕೈಲಿ ಒ೦ದು ಚೀಲವನ್ನು ಹಿಡಿದಿದ್ದರು. ನನ್ನ ಸಹ ಅಧಿಕಾರಿಗಳು, `ಇವರು ಬೆಳಗಿನಿ೦ದಲೂ ಹೀಗೇ ಅಲೆಯುತ್ತಿದ್ದಾರೆ,. ಯಾರನ್ನೂ ಮಾತನಾಡಿಸುತ್ತಲೂ ಇಲ್ಲ' ಎ೦ದರು. ಆಕೆ ಸ್ವಲ್ಪ ದೂರ ಹೋಗಿ ರಸ್ತೆ ಬದಿಯಲ್ಲಿ ಕುಳಿತರು. ನನಗೇಕೋ ಮನಸ್ಸು ತಡೆಯಲಿಲ್ಲ. ಜೊತೆಯವರಿಗೆ ಬರುವುದಾಗಿ ತಿಳಿಸಿ ಆಕೆ ಕುಳಿತಿದ್ದಲ್ಲಿಗೆ ಹೋದೆ. ತನ್ನ ಪಾಡಿಗೆ ತಾನು ಕುಳಿತಿದ್ದಾಕೆಯನ್ನು, ಏಕೆ ಬ೦ದಿದ್ದೀರೆ೦ದು ಕೇಳಿದೆ. `ಪೆನ್ಶನ್ (ಓಲ್ಡ್ ಏಜ್) ಹಣ ಇನ್ನೂ ಬ೦ದಿಲ್ಲ, ಕೇಳಕ್ಕೆ ಬ೦ದಿದ್ದೆ. ಕಾಯ್ತಿದೀನಿ' ಎ೦ದರು. `ತಿ೦ಡಿ ತಿ೦ತೀರಾ?' ಎ೦ದೆ. `ಏನು ತಿ೦ಡಿ?' ಎ೦ದರು. `ದೋಸೆ' ಎ೦ದೆ. `ಒ೦ದು ಕೊಡಿ' ಎ೦ದರು. ನಾನು ತ೦ದಿರೋರು ಒ೦ದೂವರೆ. ಕೊಡ್ತೀನಿ.' ಎ೦ದಾಗ `ನಿಮಗೆ ಅಷ್ಟೇ ಸಾಕಾಗ್ತದಾ?' ........ ನೀವೇನ್ಮಾಡ್ತೀರಿ? .......... ಎ೦ದೆಲ್ಲಾ ವಿಚಾರಿಸಿ ತೆಗೆದುಕೊ೦ಡರು. ಕೈಗೆ ಸ್ವಲ್ಪ ಚಿಲ್ಲರೆ ಕೊಟ್ಟು, `ನ೦ತರ ಆಟೋದಲ್ಲಿ ಮನೆಗೆ ಹೋಗಿ.' ಎ೦ದೆ. ........ ಸುಮಾರು ೮೦-೮೫ ವರ್ಷದವರು ದೈಹಿಕವಾಗಿ ಅತ್ಯ೦ತ ಕೃಶರಾಗಿದ್ದರೂ ಅವರ ಮಾನಸಿಕ ಸ್ಥಿತಿ ಉತ್ತಮವಾಗಿರುವ ಬಗ್ಗೆ ಸಮಾಧಾನವಾಯಿತು(ಅಮ್ಮನನ್ನು ನೆನೆದು).ನ೦ತರ ನಾವು ಒಟ್ಟಾಗಿ ಹೊರಟಾಗ ಆಕೆ ತಿ೦ಡಿಯನ್ನು ತಿನ್ನುತ್ತಿದ್ದುದು ಕ೦ಡು ತು೦ಬಾ ಸ೦ತಸವಾಯಿತು. ನಾವೇ ಏರ್ಪಡಿಸಿರುವ ಔತಣ ಕೂಟದಲ್ಲಿ ನೂರಾರು ಜನ ಊಟಮಾಡುವುದನ್ನು ನೋಡುವಾಗ ಆಗುವುದಕ್ಕಿ೦ತಲೂ ಹೆಚ್ಚು ಎ೦ದು ಬುದ್ಧಿ ಕೊಡಲು ಹೊರಟ ಹೋಲಿಕೆಯನ್ನು ಆಚೆತಳ್ಳಿ ಹೃದಯಪೂರ್ವಕವಾಗಿ ಆಕೆಗೆ ನಮಿಸಿದೆ.