Sunday, February 27, 2011

ಮನದ ಅಂಗಳದಿ..................30. ದಾನ.

‘ಅನ್ನದಾನವು ಮಹಾದಾನವಾದರೆ ವಿದ್ಯಾದಾನವು ಅದಕ್ಕಿಂತಲೂ ಹೆಚ್ಚಿನದು. ಅನ್ನದಾನದಿಂದ ಆಕ್ಷಣದಲ್ಲಿ ತೃಪ್ತಿಯಾಗುತ್ತದೆ. ಆದರೆ ವಿದ್ಯಾದಾನವು ಜೀವನಪರ್ಯಂತವಿರುತ್ತದೆ,' ಎನ್ನುವ ಅರ್ಥದ ಒಂದು ಸುಭಾಷಿತವಿದೆ. ನಮ್ಮ ಪುರಾಣಗಳಲ್ಲಿಯೂ ಶಿಬಿಚಕ್ರವರ್ತಿಯು ತನ್ನನ್ನು ಆಶ್ರಯಿಸಿ ಬಂದ ಪಾರಿವಾಳದ ಪ್ರಾಣ ಉಳಿಸಲು ತನ್ನ ದೇಹದ ಭಾಗವನ್ನೇ ಕತ್ತರಿಸಿಕೊಟ್ಟದ್ದು, ಜೀಮೂತವಾಹನನು ತಾನೇ ಆಹಾರವಾಗಲು ಹೋಗಿ ಬಂಡೆಗಲ್ಲಿನ ಮೇಲೆ ಮಲಗಿದ್ದು, ಬಲಿಚಕ್ರವರ್ತಿಯು ಮೂರುಹೆಜ್ಜೆ ದಾನ ಬೇಡಿದ ವಾಮನನಿಗೆ ಭೂಮಿ, ಆಕಾಶಕ್ಕೆ ಒಂದೊಂದು ಪಾದವೂರಿದ ನಂತರ ಮೂರನೇ ಹೆಜ್ಜೆಯೂರಲು ತನ್ನ ತಲೆಯನ್ನೇ ತೋರಿಸಿದ್ದು..... ಮುಂತಾದ ಆಕರ್ಷಕ ಹಾಗೂ ರೋಚಕ ಕಥೆಗಳಿವೆ!

‘ದಾನ' ಎನ್ನುವ ಕ್ರಿಯೆ ಎಲ್ಲಾ ಧರ್ಮಗಳಲ್ಲಿಯೂ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಸಾ0ಪ್ರದಾಯಿಕವಾಗಿ ಆಚರಿಸುವ ಕೆಲವು ಹಬ್ಬಗಳಲ್ಲಿ ದಾನದ್ದೇ ಪ್ರಮುಖ ಭಾಗವಾಗಿರುತ್ತದೆ. ಈಗಿನ ದಿನಗಳಲ್ಲಿ ಭಿಕ್ಷುಕರಿಗೆ, ದೀನರಿಗೆ, ಅಸಹಾಯಕರಿಗೆ, ಧಾರ್ಮಿಕ ಕಾರ್ಯಗಳಿಗೆ, ಸಾಮಾಜಿಕ ಉದ್ದೇಶಗಳಿಗೆ..... ನೀಡುವುದಲ್ಲದೇ ರಕ್ತದಾನ, ನೇತ್ರದಾನ, ಮೂತ್ರಪಿಂಡದಾನ, ದೇಹದಾನ, ಅಂಗಾಂಶದಾನ.....ಮುಂತಾದ ದಾನಗಳಿಂದ ದಾನದ ವೈಶಾಲ್ಯತೆ ಹೆಚ್ಚುತ್ತಾ ಹೋಗಿದೆ.

ವಿಶ್ವದ ಅತಿದೊಡ್ಡ ಶ್ರೀಮಂತರು ಈಗ ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ದಾನರೂಪದಲ್ಲಿ ಕೊಡಲು ಮನಸ್ಸು ಮಾಡಿ ಪರಸ್ಪರ ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ಪತ್ರಿಕೆಯಲ್ಲಿ ಸುದ್ದಿಯಾಗಿತ್ತು.

ದಾನದ ಬಗ್ಗೆ ಖಲೀಲ್ ಗಿಬ್ರಾನ್ ತಮ್ಮ ‘ಪ್ರವಾದಿ'ಯಲ್ಲಿ ಈ ರೀತಿ ಹೇಳುತ್ತಾರೆ,

‘ನೀವು ನಿಮ್ಮ ಸ್ವತ್ತುಗಳೊಳಗಿಂದ ಕೊಡುವುದಾದಲ್ಲಿ ಅಲ್ಪವಾದುದನ್ನೇ ಕೊಟ್ಟಂತಾಗುವುದು.ನೀವು ನಿಮ್ಮನ್ನೇ ಕೊಟ್ಟುಕೊಂಡಾಗ ಮಾತ್ರ ನಿಜವಾದ ಕೊಡುಗೆಯಾಗುವುದು. ಏಕೆಂದರೆ ನಿಮ್ಮ ಸ್ವತ್ತುಗಳೆಂದರೇನು? ನಾಳಿಗೆ ನಿಮಗೆ ಬೇಕಾಗಬಹುದೆಂಬ ಭಯದಿಂದ ಕಾದಿಟ್ಟುಕೊಂಡ ಮತ್ತು ಉಳಿಸಿಕೊಂಡ ವಸ್ತುಗಳೇ ಅವು. ಮತ್ತೆ ನಾಳೆ!

ಪುಣ್ಯಕ್ಷೇತ್ರದ ತೀರ್ಥಯಾತ್ರೆಗೆ ಹೊರಟಿರುವ ಯಾತ್ರಿಕರ ಹಿಂದೆ ಹಿಂದೆ ಹೊರಟಿರುವ ಅತಿ ಚತುರವಾದ ನಾಯಿಯು ನಾಳೆ ತನಗೆ ಪ್ರಯೋಜನ ಬಂದೀತೆಂದು ಜಾಡಿಲ್ಲದ ಉಸುಕಿನಲ್ಲಿ ಎಲುವುಗಳನ್ನು ಮುಚ್ಚಿಟ್ಟಲ್ಲಿ ನಾಳೆ ಅದು ಅವುಗಳ ಪ್ರಯೋಜನವನ್ನು ಹೊಂದೀತೆ?........ಬೇಡಿದಾಗ ಕೊಡುವುದು ಒಳ್ಳೆಯದೇ; ಆದರೆ ಬೇಡದಿದ್ದಾಗ ಕೂಡ ತಿಳಿದು ಕೊಡುವುದು ಅದಕ್ಕೂ ಒಳ್ಳೆಯದು. ಕೊಡುಗೈಯವನಿಗೆ ತನ್ನ ಕೊಡುಗೆಗಿಂತ ಕೊಡುಗೆಯನ್ನು ಸ್ವೀಕರಿಸುವವರನ್ನು ಶೋಧಿಸುವುದೇ ಹೆಚ್ಚು ಆನಂದದಾಯಕವಾಗಿದೆ. ನೀವು ಉಳಿಸಿಟ್ಟುಕೊಳ್ಳಬೇಕೆಂದಿರುವುದು ಏನಾದರೂ ಇದೆಯೆ? ಒಂದಿಲ್ಲೊದುದಿನ ನಿಮ್ಮಲ್ಲಿದ್ದುದೆಲ್ಲವನ್ನೂ ಕೊಡಲೇಬೇಕಾಗುವುದು! ಆದುದರಿಂದ ಈಗಲೇ ಕೊಟ್ಟುಬಿಡಿ; ಅಂದರೆ ಕೊಡುವ ಸಂಧಿ ನಿಮ್ಮದೇ ಆಗುವುದು. ನಿಮ್ಮ ಉತ್ತರಾಧಿಕಾರಿಗಳದಾಗುವುದಿಲ್ಲ.'

ದಾನಿಗಳ ವಿಧಗಳನ್ನು, ವೈವಿಧ್ಯಗಳನ್ನು ಗಿಬ್ರಾನ್ ಬಹಳ ಚೆನ್ನಾಗಿ ವಿಂಗಡಿಸಿದ್ದಾರೆ. ‘ತಮ್ಮಲ್ಲಿರುವ ಅಮಿತದೊಳಗಿಂದ ಅಲ್ಪವನ್ನು ಮಾತ್ರ ಕೊಡುವವರು ಕೆಲವರಿದ್ದಾರೆ, ಅವರು ಹೆಸರಿಗಾಗಿ ಮಾತ್ರ ಕೊಡುವವರಾಗಿದ್ದಾರೆ. ಅವರ ಈ ಒಳಬಯಕೆ ಅವರ ಕೊಡುಗೆಯನ್ನೇ ಕಹಿಯನ್ನಾಗಿ ಮಾಡುತ್ತದೆ. ಮತ್ತೆ ಕೆಲವರಲ್ಲಿ ಅಲ್ಪ ಮಾತ್ರವಿರುತ್ತದೆ, ಅವರು ಅದೆಲ್ಲವನ್ನೂ ಕೊಟ್ಟುಬಿಡುತ್ತಾರೆ. ಇವರೇ ಬಾಳಿನಲ್ಲಿ ಶ್ರದ್ಧೆಯಿರುವವರು. ಬಾಳಿನ ವಿಫುಲ ಔದಾರ್ಯದಲ್ಲಿ ನಂಬಿಕೆ ಇರುವವರು. ಇಂಥಾ ಇವರ ಕೋಶ ಎಂದೂ ಬರಿದಾಗುವುದಿಲ್ಲ.

ಆನಂದದಿಂದ ಕೊಡುವವರು ಹಲವರಿದ್ದಾರೆ, ಆನಂದವೇ ಅವರ ಕೊಡುಗೆಯ ಪ್ರತಿಫಲವಾಗಿದೆ. ಕೊರಗಿನಿಂದ ಕೊಡುವ ಹಲವರಿದ್ದಾರೆ. ಆ ಕೊರಗಿನಿಂದಲೇ ಅವರು ಪುನೀತರಾಗುತ್ತಾರೆ. ಇನ್ನೂ ಹಲವು ಕೊಡುಗೆದಾರರಿದ್ದಾರೆ; ಅವರಿಗೆ ಈ ಕೊಡುವುದರಲ್ಲಿ ದುಃಖವೆನಿಸುವುದಿಲ್ಲ, ಸಂತೋಷದ ಅಪೇಕ್ಷೆಯಿರುವುದಿಲ್ಲ ಅಥವಾ ಅದೊಂದು ಪುಣ್ಯಕಾರ್ಯವೆಂವ ಅರಿವೂ ಇರುವುದಿಲ್ಲ. ಕೊಳ್ಳದೊಳಗಿನ ಅಡಿವೆ ಮಲ್ಲಿಗೆಯ ಕಂಟಿ, ತನ್ನ ಮಲ್ಲಿಗೆಗಳ ಕಂಪನ್ನು ಸುತ್ತೆಲ್ಲಾ ಹರಡುತ್ತಿರುವಂತೆ ಅವರು ದಾನ ಮಾಡುತ್ತಿರುತ್ತಾರೆ. ಇಂಥವರ ಮೂಲಕವೇ ದೇವರು ದನಿಸುತ್ತಾನೆ; ಅವರ ಕಂಗಳ ಹಿಂದೆ ನಿಂತು ಭೂಮಿಯ ಮೇಲೆ ತನ್ನ ಮುಗುಳುನಗೆ ಬೀರುತ್ತಾನೆ.'

ನಮ್ಮಲ್ಲಿ ಸತ್ಪಾತ್ರರಿಗೆ ಮಾತ್ರ ದಾನ ಮಾಡಬೇಕೆಂಬ ನಂಬಿಕೆ ಇದೆ. ಈ ಬಗ್ಗೆ ಗಿಬ್ರಾನ್ ಹೀಗೆ ಹೇಳುತ್ತಾರೆ,

‘ನೀವು ಆಗಾಗ ಅನ್ನುತ್ತಿರುವಿರಿ: ‘ನಾನು ಕೊಡುವೆನು; ಆದರೆ ಸತ್ಪಾತ್ರರಿಗೆ ಮಾತ್ರ ಕೊಡುವೆ' ನಿಮ್ಮ ತೋಟದಲ್ಲಿಯ ಗಿಡಮರಗಳು ಹಾಗೆನ್ನುವುದಿಲ್ಲ. ತಾವು ಬದುಕಬೇಕೆಂದು ಅವು ಕೊಡುತ್ತವೆ. ಏಕೆಂದರೆ ಉಳಿಸಿಟ್ಟುಕೊಳ್ಳುವುದೇ ವಿನಾಶ!

ತನ್ನ ಹಗಲಿರುಳುಗಳನ್ನು ಸ್ವೀಕರಿಸಲು ಯಾವನು ಪಾತ್ರನೋ ಅವನು ಉಳಿದುದನ್ನಲ್ಲಾ ನಿಮ್ಮಿಂದ ಸ್ವೀಕರಿಸಲು ಪಾತ್ರನಿದ್ದಾನೆ. ಜೀವನ ಸಾಗರದ ನೀರನ್ನು ಕುಡಿಯಲು ಯಾವನು ಪಾತ್ರನೋ ಅವನೇ ನಿಮ್ಮ ಚಿಕ್ಕ ಝರಿಯಿಂದ ತನ್ನ ಪಾತ್ರೆಯನ್ನು ತುಂಬಿಕೊಳ್ಳಲು ಪಾತ್ರನಿದ್ದಾನೆ. ಕೊಡುಗೆಯನ್ನು ಧೈರ್ಯದಿಂದ, ನಿಶ್ಶಂಕೆಯಿಂದ, ಅಲ್ಲಾ ಔದಾರ್ಯದಿಂದ ಸ್ವೀಕರಿಸುವುದಕ್ಕಿಂತ ಹೆಚ್ಚಿನ ಪಾತ್ರತೆ ಯಾವುದು? ಜನರು ತಮ್ಮ ಎದೆ ಬಿಚ್ಚಿ, ಅಭಿಮಾನ ತೊರೆದು, ಬತ್ತಲೆಯಾಗಿ, ಲಜ್ಜಾಹೀನ ಸ್ಥಿತಿಯಿಂದ ತಮ್ಮ ಪಾತ್ರತೆಯ ಸಿದ್ಧತೆಯನ್ನು ನಿಮಗೆ ತೋರಿಸಲು ನೀವಾರು? ಕೊಡುಗೆಗಾರರಾಗಲು ನೀವೇ ಸ್ವತಃ ಪಾತ್ರರಿದ್ದೀರಾ? ಎಂಬುದನ್ನು ಮೊಟ್ಟಮೊದಲು ನೀವೇ ನೋಡಿಕೊಳ್ಳಿರಿ. ಏಕೆಂದರೆ ಬದುಕಿಗೆ ಬದುಕೇ ದಾನಮಾಡುವುದು ನಿಜವಾದುದು. ದಾನಿಯೆಂದು ತಿಳಿದುಕೊಳ್ಳುವ ನೀವು ಕೇವಲ ಸಾಕ್ಷೀಸ್ವರೂಪ.

ಮತ್ತೆ ಸ್ವೀಕರಿಸುವ ಜನರೇ ನೀವೆಲ್ಲರೂ ಸ್ವೀಕರಿಸುವವರೇ. ನೀವು ಕೃತಜ್ಞತಾಭಾವದ ಭಾರದಿಂದ ಬಾಗಬೇಡಿರಿ. ಹಾಗೆ ಮಾಡಿದಿರಾದರೆ ನಿಮಗೂ ನಿಮ್ಮ ದಾತೃಗಳಿಗೂ ನೀವೇ ನೊಗ ಹೇರಿದಂತಾಗುವುದು. ಆದುದರಿಂದ ಪಕ್ಕ ಪಡೆದ ಹಕ್ಕಿಯಂತೆ ದಾನವನ್ನು ಪಡೆದು ದಾತೃವಿನೊಡನೆ ಮೇಲಕ್ಕೇರಿರಿ. ಏಕೆಂದರೆ ನಿಮ್ಮ ಋಣದ ಅತಿಚಿಂತನವನ್ನು ಮಾಡುವುದೆಂದರೆ, ಉದಾರ ಹೃದಯೀ ವಸುಂಧರೆಯಂಥಾ ತಾಯಿ, ಪರಮೇಶ್ವರನಂಥಾ ತಂದೆ ಇದ್ದ ದಾತೃವಿನ ಉದಾರತೆಯ ಬಗ್ಗೆ ಶಂಕೆ ತೋರಿಸಿದಂತೆಯೇ ಸರಿ.'

ದಾನದ ಬಗೆಗಿನ ಖಲೀಲ್ ಗಿಬ್ರಾನ್ ರವರ ಈ ಮಾತುಗಳನ್ನು ಅರ್ಥಮಾಡಿಕೊಂಡು ನಮ್ಮದಾಗಿಸಿಕೊಳ್ಳಲು, ಕಾರ್ಯರೂಪಕ್ಕೆ ತರಲು ನಾವು ಪ್ರಬುದ್ಧತೆಯನ್ನು ಸಾಧಿಸಬೇಕಿದೆ

Saturday, February 19, 2011

ಸ್ವಯಂ 'ಪ್ರಭೆ'

ಎಂದೋ ಹಚ್ಚಿದ
ಧೂಮ ಹೆಚ್ಚಿದ
ಕಿಲುಬು ಗಟ್ಟಿದ
ಮಬ್ಬು ಬೆಳಕಲಿ
ತಬ್ಬಿಬ್ಬು

ಮುಂದಾಳು ಯಾರೋ
ಎಂದರಿಯದೆ
ಅಂಧಾನುಕರಣೆಯಲಿ
ಬೆಳೆದ ಸಾಲಿನ
ಭಾಗವಾಗಿ
ಸಾಗುತ್ತಿರುವುದು
'ಗತಾನು ಗತಿಕೋ.....'
ಎಂಬ ಉಕ್ತಿಯ
ಸಾರ್ಥಕಗೊಳಿಸಲೆಂದೆ?

ಏಕೋ
ಅರ್ಥಗಳ
ಅನರ್ಥವಾಗಿಸುತಿಹ
ಈ ಎರವಲು
ಮಂಕು 'ಪ್ರಭೆ'ಗಿಂತ
ಶುದ್ಧ, ಸ್ವಚ್ಛ
ಸ್ವಯಂ'ಪ್ರಭೆ'ಯ
ಕುಡಿ ಬೆಳಕಾದರೂ
ಸಾಕೆನಿಸುತಿದೆ
ಮಾರ್ಗ
ಸ್ಪಷ್ಟವೆನಿಸಲು!

Monday, February 14, 2011

ಮನದ ಅಂಗಳದಿ..................೨೮. ರುಚಿ-ಅಭಿರುಚಿ

ಭಗವಾನ್ ಬುದ್ಧರು ಹೇಳಿದ ಕಥೆ ಇದು:

ಒಬ್ಬ ವ್ಯಕ್ತಿ ನಡೆಯುತ್ತಿದ್ದಾಗ ಎದುರಿಗೆ ಒಂದು ಹುಲಿ ಕಂಡಿತು. ಆತ ಹೆದರಿ ಓಡಿದ. ಹುಲಿ ಅವನನ್ನು ಅಟ್ಟಿಸಿಕೊಂಡು ಹೋಯಿತು. ಓಡುತ್ತ, ಓಡುತ್ತ ಆತ ಒಂದು ಕೊರಕಲಿನಲ್ಲಿ ಬಿದ್ದ. ಬೀಳುವಾಗ ಯಾವುದೋ ಕಾಡುಸಸ್ಯದ ಬೇರೊಂದನ್ನು ಫಕ್ಕನೆ ಹಿಡಿದುಕೊಂಡ. ಆ ಬೇರಿನ ಆಧಾರದಿಂದಲೇ ನೇತಾಡುತ್ತಾ ಮೇಲೆ ನೋಡಿದ. ಅಲ್ಲಿ ಹುಲಿ ಪ್ರಪಾತದ ಅಂಚಿನಲ್ಲಿ ಕುಳಿತು ಅವನ ಕಡೆಯೇ ನೋಡುತ್ತಾ ಗಾಳಿಯನ್ನು ಮೂಸುತ್ತಿತ್ತು. ಅವನು ಕಾಲ ಕೆಳಗೆ ನೋಡಿದ. ಕೆಳಗೆ ಪ್ರಪಾತದಲ್ಲಿ ಇನ್ನೊ೦ದು ಹುಲಿ ಮೇಲಕ್ಕೆ ಇವನ ಕಡೆಯೇ ನೋಡುತ್ತಾ ನಾಲಿಗೆಯಿಂದ ಬಾಯನ್ನು ನೆಕ್ಕಿಕೊಳ್ಳುತ್ತಿತ್ತು. ಮೇಲೆ ಹುಲಿ, ಕೆಳಗೆ ಹುಲಿ. ಕೇವಲ ಗಿಡವೊಂದರ ಆಧಾರದ ಮೇಲೆ ಈತ ನೇತಾಡುತ್ತಿರುವಾಗ ಒಂದು ಬಿಳಿಯ ಇಲಿ , ಒಂದು ಕಪ್ಪು ಇಲಿ ಅವನು ಹಿಡಿದಿದ್ದ ಬೇರನ್ನು ಮೆಲ್ಲಗೆ ಕಡಿಯತೊಡಗಿದವು. ಆ ಕ್ಷಣ ಅವನಿಗೆ ಅಲ್ಲೊಂದು ಬಳ್ಳಿ ಕಂಡಿತು. ಬಳ್ಳಿಯಲ್ಲಿ ಒಂದು ದ್ರಾಕ್ಷಿಯ ಗೊಂಚಲು. ಹಣ್ಣು ಕಿತ್ತು ಬಾಯಿಗೆ ಹಾಕಿಕೊಂಡ. ಹಣ್ಣು ಎಷ್ಟೊಂದು ರುಚಿಕರವಾಗಿತ್ತು!

ವಿಶಿಷ್ಟ ಅಂತರಾರ್ಥವನ್ನು ಹೊಂದಿರುವ ಈ ಕಥೆಯು ಜೀವಕ್ಕೇ ಆಪತ್ತು ಒದಗಿರುವಂಥಾ ಸಂದರ್ಭದಲ್ಲಿಯೂ ನಾವು ‘ರುಚಿ’ಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆ ಎನ್ನುವುದಕ್ಕೆ ಒಂದು ನಿದರ್ಶನವೂ ಆಗಿದೆ.

ಲೇಖಕಿ ಸುನಂದಾ ಬೆಳಗಾವಕರ ಅವರು ಬರೆದಿರುವ ‘ರುಚಿ’ ಪ್ರಬಂಧದಲ್ಲಿ ತಮ್ಮ ತಂದೆಯವರ ಮಾತು ರುಚಿಯ ಲೇಖನಕ್ಕೆ ಸಾಹಿತ್ಯ ಒದಗಿಸಿತ್ತು ಎನ್ನುವುದನ್ನು ಹೀಗೆ ಹೇಳುತ್ತಾರೆ, ‘ದೇವರ ದೇಣಿಗೆ ರಸನೇಂದ್ರಿಯ. ಎಲ್ಲ ರಸಗಳ ರುಚಿಯಿರಬೇಕು. ಸಿಹಿ, ಕಹಿ, ಹುಳಿ, ಉಪ್ಪು, ಖಾರ ಸಮ್ಮಿಶ್ರಣವೇ ರುಚಿ. ಆ ರುಚಿ ತಿಳಿಯದೇ ಊಟ ಮಾಡುವುದು ಅನಾರೋಗ್ಯದ ಲಕ್ಷಣ. ರಸಾಸ್ವಾದನ ಮಾಡದ ಅರಸಿಕ ಪ್ರಾಣಿಗಳಿಗೂ ರುಚಿ ಗೊತ್ತದ. ಮಾಂಸದ ರುಚಿಯಿದ್ದ ಸಿಂಹ ಹುಲ್ಲು ತಿನ್ನೋದಿಲ್ಲ.’ ಧಾರವಾಡದ ವಿಶಿಷ್ಟ ತಿನಿಸುಗಳ ರುಚಿ, ವಿಶೇಷವಾಗಿ ಪೇಡೆಯ ರುಚಿ, ಹಣ್ಣು-ತರಕಾರಿಗಳ ರುಚಿ ಅಲ್ಲಿಯ ಮಣ್ಣಿನ ವೈಶಿಷ್ಟ್ಯವನ್ನು, ‘ಮನೆಮನೆಗೂ ಕವಿಗಳು, ಗಾಯಕರು, ನಾಟಕಕಾರರು, ಭಾಷಣಕಾರರು, ಕಲಾಕಾರರು,..... ಇದ್ದಾರೆ ಎಂದು ತಿಳಿಸುತ್ತಾ...ರುಚಿಯಿಂದ ಅಭಿರುಚಿಯತ್ತ ಹೆಜ್ಜೆ ಹಾಕುತ್ತಾರೆ. ‘ಲೋಕೋ ಭಿನ್ನರುಚಿಃ’ ಎನ್ನುವ ಉಕ್ತಿ ಎಂಥಾ ಅರ್ಥವೈಶಾಲ್ಯವನ್ನು ಹೊಂದಿದೆ!

‘ಚೈತನ್ಯ’ ಕಾರ್ಯಾಗಾರವನ್ನು ನಡೆಸುತ್ತಿದ್ದಾಗ ಮೊದಲು ಪರಸ್ಪರ ಪರಿಚಯವಿರುತ್ತಿತ್ತು. ‘ನಿಮ್ಮ ಅಭಿರುಚಿಯನ್ನು ತಿಳಿಸಿ’ ಎನ್ನುವುದಕ್ಕೆ ಒಬ್ಬ ಮಹಾಶಯರು ಬರೆದ ಉತ್ತರ ನನ್ನ ಒಂದು ‘ಹನಿ’ (ರುಚಿ-ಅಭಿರುಚಿ)ಗೆ ಪ್ರೇರಣೆಯಾಯಿತು!

ಆಕೆ ತಿಳಿಯಲಿಚ್ಛಿಸಿದಳು
ಆತನ ಅಭಿರುಚಿ
ಉತ್ಸುಕನಾದ ಆತ
ಹೇಳಲಾರಂಭಿಸಿದ
ಬೂಂದಿ, ಬೋ0ಡ, ಬಜಿ...
ಒಂದಲ್ಲ ನೂರಾರು
ತರತರದ ರುಚಿ,
ಪಟ್ಟಿ ಮುಗಿಯುವ ವೇಳೆಗೆ
ಬುದ್ಧಿ ಹೇಳಿದ್ದಳವಳು ಕಾಲಿಗೆ!

ಹಸಿವಾದಾಗ ಸಿಕ್ಕಿದ್ದನ್ನು ಹಸಿಹಸಿಯಾಗೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಲಿದ್ದ ಆದಿಮಾನವ ಕ್ರಮೇಣ ಬೇಯಿಸಿ ತಿನ್ನುವುದನ್ನು ಹೇಗೆ ಕಲಿತ ಎನ್ನುವುದಕ್ಕೂ ಒಂದು ಕಥೆ ಇದೆ.

ಒಮ್ಮೆ ಕಾಡಿಗೆ ಬೆಂಕಿ ಬಿದ್ದು ಪ್ರಾಣಿಗಳೆಲ್ಲಾ ಸುಟ್ಟುಹೋಗಿದ್ದವು. ಹಾಗೇ ಬೆಂದ ಹಂದಿಯ ದೇಹ ಮಾತ್ರ ಪೂರ್ಣಾಕೃತಿಯಲ್ಲಿ ಅವಿಚ್ಛಿನ್ನವಾಗಿದ್ದುದನ್ನು ಕಂಡು ಒಬ್ಬ ಕಾಡುಮಾನವ ಕುತೂಹಲದಿಂದ ಅದರ ಮೇಲೆ ಬೆರಳೂರಿದ್ದಾನೆ. ಒಳಹೊದ ಬೆರಳು ಸುಟ್ಟಿದ್ದೇ ತಡ ತಕ್ಷಣ ಬಾಯಿಗಿಟ್ಟುಕೊಂಡಿದ್ದಾನೆ. ನಾಲಿಗೆಗೆ ರುಚಿ ಹತ್ತಿದೆ. ಆಗಿನಿಂದ ಬೇಯಿಸಿ ತಿನ್ನುವುದನ್ನು ಕಲಿತಿದ್ದೇ ಅಲ್ಲದೆ ಹಂದಿ ರುಚಿಕರ ಎಂದೂ ತಿಳಿದುಕೊಂಡಿದ್ದಾನೆ. ಕಲ್ಲೊಂದು, ಹಕ್ಕಿ ಎರಡು!

ನಾಗರಿಕತೆ ಬೆಳೆದಂತೆ ಆದಿಮಾನವತ್ವದ ಕಡೆಗೇ ಆಹಾರ ಪದ್ದತಿಯಲ್ಲಿ ಓಲುತ್ತಿರುವ ಮನುಷ್ಯ ಮಾಂಸಾಹಾರವನ್ನು ಗೀಳಾಗಿಸಿಕೊಳ್ಳುತ್ತಿದ್ದಾನೆ. ನಾನು ಒಮ್ಮೆ ಭಾಗವಹಿಸಿದ್ದ ಒಂದು ಜನಪದಗೋಷ್ಠಿಯಲ್ಲಿ ಜನಪದ ಅಡುಗೆ ಎಂದರೇ ಮಾಂಸಾಹಾರ ಎನ್ನುವಂತೆ ಬಿಂಬಿಸಿದ ಭಾಷಣಕಾರರು ಅದರ ಸ್ವಾದವನ್ನು ಅಕ್ಷರಶ: ಅನುಭವಿಸುತ್ತಾ (ಬಾಯಲ್ಲಿ ಲಾಲಾರಸವನ್ನು ಯಥೇಚ್ಛವಾಗಿ ಸ್ರವಿಸುತ್ತಾ!) ’ಬಾಡೆಸರು’ ಎಂದು ಪದೇ ಪದೇ ಹೇಳುವಾಗಿನ ತಾದ್ಯಾತ್ಮವು ಸಹನಾತೀತವಾಗಿತ್ತು. `ಯಾವುದು ಹೆಚ್ಚಾಗಿ ಉತ್ಪಾದನೆಯಾಗುತ್ತೋ ಅದನ್ನು ತಿನ್ನುವುದರಿಂದ ಪರಿಸರಕ್ಕೇನೂ ಹಾನಿ ಇಲ್ಲ’ ಎಂದು ಘೋಶಿಸಿದ ಅವರಲ್ಲೊಬ್ಬರು ’ಕೋಳಿ, ಹಂದಿ...... ಇವೆಲ್ಲಾ ಲೆಕ್ಕ ಇಲ್ಲದಂತೆ ಹುಟ್ತಾವೆ ಬಿಡಿ’ ಎಂದೂ ಸೇರಿಸಿದರು! ’ಹಂದಿ ಬಾಳಾ ರುಚಿ. ಮಳಲಿ ಗಿಡ್ಡಮ್ಮಂಗೆ ಹಂದೀನೇ ಬಾಳಾ ಪ್ರೀತಿ ಅಲ್ವಾ?......’ ಭೂಮಿಯ ಮೇಲಿರುವುದೆಲ್ಲಾ (ಬಾಹ್ಯಾಕಾಶದಿಂದ ಪತನವಾದರೂ ಸರಿಯೇ!) ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಮಗೇ ಸೇರಬೇಕೆನ್ನುವುದೇ ನಮ್ಮ ತತ್ವವಲ್ಲವೇ!

‘ಜಿಹ್ವಾ ಚಾಪಲ್ಯ’ ಎನ್ನುವುದು ರುಚಿಗಾಗಿ ಹಂಬಲಿಸುವಂತೆ ಮಾಡುತ್ತದೇನೊ. ಇತ್ತೀಚೆಗೆ ಎಲ್ಲೆಲ್ಲೂ ರುಚಿಯನ್ನಷ್ಟೇ ಪ್ರಧಾನವಾಗಿ ಹೊಂದಿರುವ ವಿವಿಧ ಖಾದ್ಯಗಳನ್ನು ಎಲ್ಲೆಲ್ಲೂ ಮಾರಾಟಕ್ಕಿಟ್ಟು ಆಶೆ ತೋರಿಸಿ ಆಕರ್ಶಿಸುವ ಜಾಲ ಹೆಚ್ಚಾಗಿದೆ. ನಾವು ರುಚಿಗಷ್ಟೇ ಮಹತ್ವವನ್ನು ನೀಡಿ ನಮ್ಮ ಆರೋಗ್ಯ, ಅಭಿರುಚಿಗಳನ್ನೇ ಕಡೆಗಣಿಸುತ್ತಿದ್ದೇವೆ. ಕೇವಲ ನಾಲಿಗೆಯನ್ನು ತಣಿಸುವುದನ್ನೇ ನಮ್ಮ ಗುರಿಯಾಗಿಸಿಕೊಳ್ಳದೇ ಉದರಸ್ನೇಹಿಗಳೂ ಆಗೋಣ, ಉತ್ತಮ ಅಭಿರುಚಿಗಳನ್ನೂ ರೂಢಿಸಿಕೊಳ್ಳೋಣ.

Monday, February 7, 2011

ಮನದ ಅಂಗಳದಿ..................೨೮.ಆಲೋಚನೆ

ಸಾಮಾನ್ಯವಾಗಿ ನಮಗೆ ಬುದ್ದಿ ತಿಳಿದಾಗಿನಿಂದ ನಾವು ಒಂದಲ್ಲಾ ಒಂದು ಆಲೋಚನೆಯಲ್ಲಿ ತೊಡಗಿರುತ್ತೇವೆ. ನಮ್ಮ ಮನಸ್ಸು ಸದಾ ಯಾವುದಾದರೊಂದು ವಿಷಯವ ಕುರಿತು ಆಲೋಚಿಸುತ್ತಲೇ ಇರುತ್ತದೆ. ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿದೆವೆಂದರೆ ತೀರಿತು. ಗೋಜಲು ಗೋಜಲಾದ ಆಲೋಚನೆಗಳು ನಮ್ಮನ್ನು ಮುತ್ತಿಕೊಂಡು ಮುಕ್ಕಿಬಿಡುತ್ತವೆ. ಈ ‘ಆಲೋಚನೆ' ಎಂದರೆ ಏನು? ಹೇಗೆ ಉಂಟಾಗುತ್ತದೆ? ಕೆಟ್ಟ ಆಲೋಚನೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಎನ್ನುವ ನಿರಂತರ ಪ್ರಶ್ನೆಗಳಿಗೆ ಉತ್ತರ ದೊರೆತದ್ದು ‘ಅನುದಿನ ಚಿಂತನ' ಎಂಬ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕವನ್ನು ಚಿತ್ರದುರ್ಗದಲ್ಲಿ ನಡೆದ ಸಾಹಿತ್ಯಸಮ್ಮೇಳನದಲ್ಲಿ ತೆಗೆದುಕೊಂಡು ಸ್ವಲ್ಪ ಸ್ವಲ್ಪವೇ ಓದಲಾರಂಭಿಸಿದಾಗ. ಇದು ‘ದಿ ಬುಕ್ ಆಫ್ ಲೈಫ್: ಡೈಲಿ ಮೆಡಿಟೇಶನ್ಸ್ ವಿತ್ ಕೃಷ್ಣಮೂರ್ತಿ' ಎಂಬ ಪುಸ್ತಕದ ಕನ್ನಡ ಅನುವಾದ.(ಅನುವಾದಿಸಿದವರು-ಓ. ಎಲ್. ನಾಗಭೂಷಣಸ್ವಾಮಿ). ಈ ಪುಸ್ತಕದಲ್ಲಿ ಇಂಗ್ಲೆಂಡಿನ ಮಾರ್ಕ್ ಲೀ ಅವರು ಜೆಕೆಯವರ ಮಾತುಗಳನ್ನು ಸಂಗ್ರಹಿಸಿ ಸಂಪಾದಿಸಿದ್ದಾರೆ. ಇದರಲ್ಲಿ ಒಂದು ವಾರಕ್ಕೆ ಒಂದು ವಿಷಯ ಎಂಬಂತೆ ವರ್ಷದ ೫೨ವಾರಗಳಿಗೆ ೫೨ವಿಷಯಗಳನ್ನು, ವಾರದ ದಿನಗಳಿಗೆ ದಿನಕ್ಕೊಂದು ಎಂಬಂತೆ ವಿಷಯದ ಒಂದೊಂದು ಅಂಶವನ್ನು ಆಯ್ದು ಪೋಣಿಸಿದೆ.

‘ಆಲೋಚನೆ ಪ್ರಯತ್ನವನ್ನು ಹುಟ್ಟಿಸುತ್ತದೆ' ಎನ್ನುವ ಚಿಂತನೆಯಲ್ಲಿ ಹೀಗಿದೆ:

‘ಕೆಟ್ಟ ಆಲೋಚನೆಗಳಿಂದ, ಅಸ್ತವ್ಯಸ್ತ ಚಿಂತನೆಗಳಿಂದ ಹೇಗೆ ಮುಕ್ತನಾಗಲಿ?' ಆಲೋಚನೆ, ಕೆಟ್ಟ ಆಲೋಚನೆ, ಅಸ್ತವ್ಯಸ್ತ ಆಲೋಚನೆಗಳಿಂದ ಬೇರೆಯಾದ ಆಲೋಚಕ ಒಬ್ಬನಿದ್ದಾನೆಯೇ? ದಯವಿಟ್ಟು ನಿಮ್ಮ ಮನಸ್ಸನ್ನೇ ನೋಡಿಕೊಳ್ಳಿ. ‘ಇದು ಅಸ್ತವ್ಯಸ್ತ ಆಲೋಚನೆ, ಇದು ಕೆಟ್ಟದ್ದು, ನಾನು ಹೀಗೆ ಯೋಚಿಸಬಾರದು, ಇದೆಲ್ಲಾ ಹೇಳಿಕೊಳ್ಳುವ ‘ನಾನು', ‘ನನ್ನ' ಒಂದು ಭಾಗ ಪ್ರತ್ಯೇಕವಾಗಿದೆ' ಎಂದೆನ್ನುವಿರಾ?.....ಹಾಗೆ ಬೇರೆ ಎಂದುಕೊಳ್ಳುವ ನಾನು ಸದಾ ಗೆಲ್ಲಲು, ನನ್ನನ್ನು ಪಕ್ಕಕ್ಕೆ ದಬ್ಬಲು, ಏನೋ ಆಗಲು ಪ್ರಯತ್ನಿಸುತ್ತಿರುತ್ತದೆ. ಕೆಟ್ಟ ಆಲೋಚನೆಗಳನ್ನು ಮಾಡದಿರುವ, ಅಸ್ತವ್ಯಸ್ತ ಚಿಂತನೆಗಳನ್ನು ದೂರತಳ್ಳುವ ಸಂಘರ್ಷ ಹುಟ್ಟಿಕೊಳ್ಳುತ್ತದೆ....ನಾನು ಬೇರೆ, ನಾನು ನಿಯಂತ್ರಿಸ ಬಯಸುವ ಆಲೋಚನೆ, ಭಾವನೆಗಳೆ ಬೇರೆ ಎಂದ ತಕ್ಷಣ ಪ್ರಯತ್ನ ಪಡುವುದು, ಸಂಘರ್ಷ ಎಲ್ಲವೂ ಬಂದುಬಿಡುತ್ತದೆ. ನಮ್ಮ ದಿನನಿತ್ಯ ಬದುಕಿನ ವಾಸ್ತವ ಇದೇ.

‘ಆಲೋಚನೆಗಳ ನಡುವಿನ ವಿರಾಮ'ದ ಬಗ್ಗೆ ಹೇಳುತ್ತಾ....

ಆಲೋಚನೆಗಳು ಗತ ಮತ್ತು ವರ್ತಮಾನದ ನಡುವೆ ಲೋಲಕದಂತೆ ತುಯ್ಯುತ್ತಿರುವುದನ್ನು ಮಾತ್ರವಲ್ಲ, ಆಲೋಚನೆಗಳ ನಡುವೆ ಇರುವ ವಿರಾಮವನ್ನೂ ಮನಸ್ಸು ಕಂಡು ಅರ್ಥಮಾಡಿಕೊಳ್ಳಬೇಕು.....ಎರಡು ಆಲೋಚನೆಗಳ ನಡುವೆ ಆ ಎರಡೂ ಆಲೋಚನೆಗಳಿಗೆ ಸಂಬಂಧಿಸಿರದ ಮೌನದ ಒಂದು ಅವಧಿ ಇರುತ್ತದೆ.....ಮನಸ್ಸು ತನ್ನನ್ನು ತಾನು ಆಲೋಚನೆಗಳಿಗೆ ತೆತ್ತುಕೊಳ್ಳದೆ ಇರುವಾಗ, ಹುಟ್ಟಿಸಿಕೊಂಡದ್ದೋ ಕಲ್ಪಿತವೋ ಅಲ್ಲದ ನಿಷ್ಕಾರಣ ನಿಶ್ಚಲತೆ ಇರುವಾಗ, ಆಗ ಮಾತ್ರ ಎಲ್ಲ ಹಿನ್ನೆಲೆಗಳಿಂದ ಬಿಡುಗಡೆ ಇರುತ್ತದೆ.

‘ಆಲೋಚನೆಯ ಸ್ವಾತಂತ್ರ್ಯವಿಲ್ಲ' ಎನ್ನುವುದನ್ನು ಹೀಗೆ ಸ್ಪಷ್ಟಪಡಿಸುತ್ತಾರೆ:

ನಾವು ವೈರುಧ್ಯದ ಸ್ಥಿತಿಯಲ್ಲಿದ್ದೇವೆ. ಶಾಂತಿಯ ಬಗ್ಗೆ ಮಾತನಾಡುತ್ತಾ ಯುದ್ಧಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ, ಅಹಿಂಸೆಯ ಬಗ್ಗೆ ನುಡಿಯುತ್ತೇವೆ ಆದರೆ ಹಿಂಸಕರಾಗಿರುತ್ತೇವೆ, ಒಳ್ಳೆಯವರಾಗಿರುವುದರ ಬಗ್ಗೆ ಹೇಳುತ್ತೇವೆ ಆದರೆ ಒಳ್ಳೆಯವರಾಗಿರುವುದಿಲ್ಲ,.....ಈ ವೈರುಧ್ಯದಿಂದ ಹುಟ್ಟುವ ಎಲ್ಲ ಕ್ರಿಯೆಗಳೂ ಹತಾಶೆಯನ್ನು, ಮತ್ತಷ್ಟು ವೈರುಧ್ಯವನ್ನು ಸೃಷ್ಟಿಸುತ್ತವೆ.....

ಎಲ್ಲ ಆಲೋಚನೆಗಳೂ ಅಂಶಿಕವೇ ಹೊರತು ಪೂರ್ಣವಲ್ಲ. ಆಲೋಚನೆ ಎಂಬುದು ನೆನಪಿನ ಪ್ರತಿಕ್ರಿಯೆ. ನೆನಪು ಯಾವಾಗಲೂ ಅಂಶಿಕವೇ. ಏಕೆಂದರೆ ಅದು ಅನುಭವದ ಫಲಿತಾಂಶ.....ಆದ್ದರಿಂದ ನಮಗಿರುವ ಸಮಸ್ಯೆಯನ್ನು ಆಲೋಚನೆ ಪರಿಹರಿಸಲಾರದು.

‘ಆಲೋಚಕನಿಲ್ಲದ ಆಲೋಚನೆ'ಯ ಕುರಿತು.....

ಮರದ ಮೇಲಿರುವ ಕೋತಿಗೆ ಹಸಿವೆಯಾಗುತ್ತದೆ. ಯಾವುದಾದರೂ ಹಣ್ಣನ್ನು ಹುಡುಕಬೇಕೆಂಬ ಒತ್ತಾಯ ಹುಟ್ಟಿಕೊಳ್ಳುತ್ತದೆ. ಮೊದಲು ಕ್ರಿಯೆ ಜರುಗುತ್ತದೆ. ಆನಂತರ ಸಿಕ್ಕಿದ ಹಣ್ಣನ್ನು ಎತ್ತಟ್ಟುಕೊಳ್ಳಬೇಕೆಂಬ ಐಡಿಯಾ ಬರುತ್ತದೆ....ಯಾವುದು ಮೊದಲು? ಕ್ರಿಯೆಯೊ? ಕತೃವೊ? ಕ್ರಿಯೆ ಇಲ್ಲದ ಕತೃ ಇರಲು ಸಾಧ್ಯವೇ?.....ನಾವು ಸದಾ ಅನ್ವೇಶಿಸುತ್ತಿರುವುದು ಇದನ್ನೇ. ನೋಡುತ್ತಿರುವವರು ಯಾರು? ಗಮನಿಸುತ್ತಿರುವವರು ಯಾರು? ತನ್ನ ಆಲೋಚನೆಗಿಂತ ಭಿನ್ನವಾದ ಆಲೋಚಕ, ನಾವು ವೀಕ್ಷಿಸುತ್ತಿರುವ ವಸ್ತುವಿಗಿಂತ ಭಿನ್ನವಾದ ವೀಕ್ಷಕ, ತನ್ನ ಅನುಭವದಿಂದ ಪ್ರತ್ಯೇಕವಾಗಿನಿಲ್ಲುವ ಅನುಭವಿಸುವಾತ, ಕ್ರಿಯೆಗಿಂತ ಭಿನ್ನನಾದ ಕತೃ ಇದ್ದಾನೆಯೇ?.....ಕ್ರಿಯೆಗೆ ಒಂದು ಗುರಿಯಿದ್ದರೆ ಆ ಗುರಿಯನ್ನು ತಲುಪುವುದರಲ್ಲಿಯೇ ಒಬ್ಬ ಕತೃ ಸೃಷ್ಟಿಗೊಳ್ಳುತ್ತಾನೆ. ನೀವು ಸ್ಪಷ್ಟವಾಗಿ ಆಲೋಚಿಸಿದರೆ, ಯಾವುದೇ ಪೂರ್ವಾಗ್ರಹವಿಲ್ಲದೇ, ಯಾವುದೇ ಹೊಂದಾಣಿಕೆಯಿಲ್ಲದೇ, ಯಾರನ್ನಾದರೂ ಒಪ್ಪಿಸಬೇಕೆಂಬ ಹಟವಿಲ್ಲದೇ ಯಾವುದೇ ಗುರಿಯನ್ನು ಎದುರಿಗಿಟ್ಟುಕೊಳ್ಳದೇ ಆಲೋಚಿಸಿದರೆ ಆ ಆಲೋಚನೆಯಲ್ಲಿ ಆಲೋಚಕ ಇರುವುದೇ ಇಲ್ಲ. ಕೇವಲ ಆಲೋಚನೆ ಮಾತ್ರ ಇರುತ್ತದೆ.

‘ಆಲೋಚನೆಯನ್ನು ಗಮನಿಸುವುದು' ಇದರ ಪ್ರಮುಖ್ಯತೆಯನ್ನು ತಿಳಿಸುತ್ತಾ, ‘ಏನು ಇದೆಯೋ ಅದನ್ನು ಅರ್ಥಮಾಡಿಕೊಳ್ಳಲು ನಾವು ಹೇಗೆ ಆಲೋಚಿಸುತ್ತೇವೆ, ಭಾವಿಸುತ್ತೇವೆ ಎಂಬುದನ್ನು ಕ್ಷಣಕ್ಷಣವೂ ಅರ್ಥಮಾಡಿಕೊಳ್ಳಬೇಕು' ಎನ್ನುತ್ತಾರೆ. ಹಾಗೆಯೇ ‘ಆಲೋಚನೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಿ', ಎಂಬುದನ್ನು ತಿಳಿಯಪಡಿಸುವುದು ಈ ರೀತಿಯಾಗಿದೆ:

ನೀವು ಒಂದೂ ಧಾರ್ಮಿಕ ಪುಸ್ತಕ, ಒಂದೂ ಮನಃಶಾಸ್ತ್ರೀಯ ಪುಸ್ತಕವನ್ನು ಓದಿರದಿದ್ದರೆ ಆಗ ಏನು ಮಾಡುತ್ತಿದ್ದಿರಿ?.......ಗುರುಗಳಿಲ್ಲ, ಧಾರ್ಮಿಕ ಸಂಘಟನೆಗಳಿಲ್ಲ, ಬುದ್ಧನಿಲ್ಲ, ಕ್ರಿಸ್ತನಿಲ್ಲ.....ಎಂಬುದಾಗಿ ನೀವು ಎಲ್ಲವನ್ನೂ ಮೊದಲಿನಿಂದಲೇ ಅರಿಯಬೇಕಾಗಿ ಬಂದಿದ್ದರೆ ಏನು ಮಾಡುತ್ತಿದ್ದಿರಿ?......ಮೊದಲಿಗೆ ನಿಮ್ಮ ಆಲೋಚನೆಯ ವಿಧಾನ, ಪ್ರಕ್ರಿಯೆಗಳನ್ನೇ ಪರಿಶೀಲಿಸಿಕೊಳ್ಳುತ್ತಿರಿ, ಅಲ್ಲವೆ? ನಿಜವಾಗಿ ಹೊಸತಾದುದನ್ನು ಕಂಡುಕೊಳ್ಳಲು ಅದೇ ಸರಿಯಾದ ದಾರಿಯಲ್ಲವೇ?

.....ನಿಜವಾದ ಅರ್ಥದಲ್ಲಿ ಸೃಜನಶೀಲರಾಗುವುದು ಎಂದರೆ ಗತದಿಂದ ಸಂಪೂರ್ಣವಾಗಿ ಮುಕ್ತರಾಗಿ ಕ್ಷಣದಿಂದ ಕ್ಷಣಕ್ಕೆ ಬದುಕುವುದು ಎಂದು ಅರ್ಥ. ಹೊಸತನ್ನೇನಾದರೂ ಕಾಣಬೇಕಾದರೆ ಸ್ವತಃ ನೀವೇ ಕಾಣಲು ತೊಡಗಬೇಕು. ಮುಖ್ಯವಾಗಿ ಯಾವ ಜ್ಞಾನದ ಬೆಂಬಲವೂ ಇಲ್ಲದೆ ಸ್ವತಃ ನೀವೇ ನಿಮ್ಮ ಪಯಣಕ್ಕೆ ತೊಡಗಬೇಕು.

‘ಆಲೋಚನೆಯ ವಲಯದಾಚೆಗೆ' ಬದಲಾವಣೆಯನ್ನು ಆಗುಮಾಡಿಕೊಳ್ಳುವುದಕ್ಕೆ ಸಾಧ್ಯವಿದೆಯೆ? ಆಮೂಲಾಗ್ರ ಬದಲಾವಣೆ ಆಲೋಚನೆಯ ವಲಯದಾಚೆಗೆ ಸಂಭವಿಸಬಹುದೇ ಹೊರತು ಒಳಗೆ ಅಲ್ಲ. ಈ ವಲಯದ ಮಿತಿಗಳನ್ನು, ಗಡಿರೇಖೆಗಳನ್ನು ಮನಸ್ಸು ಕಂಡುಕೊಂಡಾಗ, ಈ ಮಿತಿಯೊಳಗೆ ಆಗುವ ಬದಲಾವಣೆಗಳು ನಿಜವಲ್ಲ ಎಂದು ಸಾಕ್ಷಾತ್ಕರಿಸಿಕೊಂಡಾಗ ಮಾತ್ರ ಆಲೋಚನೆಯ ವಲಯವನ್ನ್ರು ಮೀರಲು ಸಾಧ್ಯವಾಗುತ್ತದೆ. ಇದೇ ನಿಜವಾದ ಧ್ಯಾನ.

‘ಆಲೋಚನೆ'ಯ ಬಗೆಗಿನ ಜೆಕೆಯವರ ಗಹನವಾದ ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳುವ, ಅನುಸರಿಸುವ, ಆಲೋಚನಾರಹಿತ ಸ್ಥಿತಿಗೇರುವ ಪ್ರಯತ್ನವನ್ನು ಪ್ರಾರಂಭಿಸೋಣ.

Thursday, February 3, 2011

ಅತ್ಯ೦ತ ಸಹನಶೀಲರಾದ ತಮಗೆ.....

(ಇದು ೨೦೦೧ರಲ್ಲಿ ಪ್ರಕಟವಾದ ನನ್ನ ಹಾಸ್ಯ ಬರಹ ಸ೦ಕಲನ `ಜಿರಲೆ ಉ೦ಡೆ'ಯಲ್ಲಿ ಸೇರ್ಪಡೆಯಾದ ಕೊನೆಯ ಲೇಖನವಾಗಿದೆ. ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.)