Friday, January 25, 2013

`ಹನಿ’ದ್ವಯಗಳು

ಅಂತರ
ಜನಜಂಗುಳಿಯ ನಡುವೆ
ಬಿದ್ದಿರುವ ರಸ್ತೆ
ಒಂಟಿ, ಮೌನಿ
ಜನರ ತನ್ನತ್ತ ಸೆಳೆವ
ಸಾಗರದ್ದೋ
ಎದ್ದೆದ್ದು ಅಲೆಗಳ ಅಟ್ಟುವ
ಅಬ್ಬರವೋ ಅಬ್ಬರ!

 ಯಾಂತ್ರಿಕತೆ
ದಿನದ ಜಂಜಡದಲಿ
ಭಗ್ನ
ಆತ್ಮೀಯ ನೆನಪುಗಳು
ಮನದಿಮೂಡುವ
ಮೊದಲೇ
ದಗ್ಧ
ಕನಸು ಕಲ್ಪನೆಗಳು! 

Sunday, January 13, 2013

ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು.

ಜ್ಞಾನ


ಸುರಿವ ಮಳೆನೀರ

ಹಿಡಿದಿಡಲಾಗದು ಗಿರಿಶಿಖರ

ತಮ್ಮತ್ತ ಸೆಳೆಯುತಿವೆ

ಸಾಗರ ಸರೋವರ.



ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು.

Sunday, January 6, 2013

ಮಳೆ `ಹನಿ'ಗಳು


ವ್ಯರ್ಥ

ಅಂಬರ ತುಂಬಿದ
ಹಿಂಜಿದ ಅರಳೆ
ಹನಿಸಲಾಗದು ಮಳೆ
ತಣಿಸಲಾಗದು ಇಳೆ!

ಗುರಿ

ತೇಲಿ ಸಾಗುತಿಹ
ಕಾರ್ಮುಗಿಲೇ
ನಿನ್ನ ಗುರಿ ಎತ್ತ?
ಮಳೆ ಸುರಿಸಿ
ಇಳೆ ಗೆಳತಿಗೆ
ಹಸಿರುಡಿಸುವತ್ತ!

ಸಾಪೇಕ್ಷ

ಕಾರ್ಮುಗಿಲು ಕವಿದಾಗ
ಸ್ಪಷ್ಟವಾಗುವುದು ಮಿಂಚು
ಸ್ವಚ್ಛ ಅಂಬರಕೆ
ಕನಸಲಾಗದ ಪೇಚು!



Tuesday, January 1, 2013

ಮೊದಲ ಮುಂಜಾವು

(ಇದು `ಮೊದಲ ಮುಂಜಾವು' ೨೦೦೧ರ ಪ್ರಾರಂಭದ ದಿನ ಬರೆದ ಕವನ. ನನ್ನ ಪ್ರಥಮ ಕವನ ಸಂಕಲನ `ಗರಿಕೆ’ಯಲ್ಲಿ ಸೇರ್ಪಡೆಯಾಗಿದೆ.)

ಮೊದಲ ಮುಂಜಾವು

ಹೊಸ ಶತಮಾನದ ಮುಂಜಾವೇ
ಹೊರಟೆ
ಪ್ರಕೃತಿಯ ಹೊಸತನವ
ನೋಡಲೆಂದು

ಅದೇ ತಂಪು ತುಂಬಿದ ಕುಳಿರ್ಗಾಳಿ
ಚಳಿಯ ಹೊಡೆದೋಡಿಸಲು ಫಣತೊಟ್ಟ
ಬಿಸುಪ ಕಿರಣಗಳ ಮೂಟೆ ಹೊತ್ತ
ಹೊಸ ಹಗಲ ಕತೃ
ದಿನಪನುದಯ

ಅಲ್ಲಲ್ಲಿ ಅರಳಲು ಸಜ್ಜಾದ
ಬಿರಿದ ಮೊಗ್ಗುಗಳು
ನೂತನ ದಿನದ
ನಾಂದಿಗೆ ಸಡಗರಿಸಿ
ಚಿಲಿಪಿಲಿ ಉಲಿಯುತ್ತಿರುವ
ಪಕ್ಷಿಗಳ ಸಮೂಹ

ಚೈತನ್ಯದ ಚಿಲುಮೆಯಾದ ಪ್ರಕೃತಿ
ಆದರೆ ನನ್ನಂಥಾ ನರಜೀವಿಗಳೆಲ್ಲಿ?

ಏರಿಯ ಮೇಲಿನ ಕುರಿಯ ಹಿಂಡಲಿ
ಬಿತ್ತೊಂದು ಕುರಿ ಕಾಲುಜಾರಿ
ಹಿಂದೆಯೇ ಬಿದ್ದವು ಕುರಿಗಳೆಲ್ಲಾ
ಹಾರಿಹಾರಿ!

ಅಗೋ ಅಲ್ಲೇ ಕಂಡೆ
ತೆರೆದ ಬಾಗಿಲಿಂದ
ಹೊರಗಿಣುಕುತ್ತಿರುವ
ಕೆಂಪುಕಣ್ಣುಗಳು
ಆಕಳಿಸುವ ಮುಖಗಳು

ಸಹಸ್ರಮಾನದ ಸ್ವಾಗತಕೆ
ರಾತ್ರಿಯಿಡೀ ಕುಣಿದು-
ಕುಪ್ಪಳಿಸಿದ(ವರ ನೋಡಿದ)
ಪಟಾಕಿ ಸಿಡಿಸಿ ಹೊಸದಿನವ
ಬೆದರಿಸಿದ
ದಣಿದ ದೇಹಗಳು
ನವವರ್ಷದ ಹರ್ಷದಿ
ನಲಿದ ನಿಶಾಚರಿಗಳು!

ಈಗ ಸೋಮಾರಿತನದ
ಹೊದಿಕೆ ಹೊದ್ದು
ಮತ್ತೆ ನಿದ್ದೆಯ ಜೋಂಪಿಗೆ
ಜಾರಲೆಳೆಸುವ
ಅವರ ಮೊಗಭಾವಗಳು!