Tuesday, February 6, 2024

ಲಲಿತ ಪ್ರಬಂಧ - 'ಸೀನಿನ sceneಗಳು'

  🌺ಎಲ್ಲರಿಗೂ ಬೆಳಗಿನ ವಂದನೆಗಳು🙏🌹

       ಈ ವಾರದ ( ಫೆಬ್ರವರಿ8,2024) 'ಸುಧಾ' ಪತ್ರಿಕೆಯ 'ಮಂದಹಾಸ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಸೀನಿನ sceneಗಳು'


ನಿಮ್ಮ ಪ್ರೀತಿಯ ಓದಿಗೆ😍


                  ಸೀನಿನ sceneಗಳು 

ಸೀನುವುದು ಅಪರೂಪವೇನಲ್ಲ. ಯಾವುದಾದ್ರೂ ಧೂಳಿನ ಪ್ರದೇಶಕ್ಕೆ ಹೋದಾಗ ಅಥವಾ ಶೀತಕಾಲದಲ್ಲಿ, ಮಳೆಗಾಲದಲ್ಲಿ... ಕೆಲವೊಮ್ಮೆ ಕಾರಣವೇ ಇಲ್ಲದಂತೆ  ಸೀನುಗಳು ಒಂದಾದ ಮೇಲೆ ಒಂದರಂತೆ  ಬರುತ್ತಲೇ ಇರುತ್ತವೆ.  ಸುತ್ತಿನ ವಾತಾವರಣವನ್ನು ಮತ್ತಷ್ಟು ಹದಗೆಡಿಸಿ ಹಾಳುಮಾಡಿ ನಮ್ಮದೆಂದು ಉಳಿಸಿಕೊಂಡಿರುವ ಅಲ್ಪಸ್ವಲ್ಪ ಮರ್ಯಾದೆಯನ್ನೂ ನುಂಗಿ ನೀರು ಕುಡಿದುಬಿಡುತ್ತದೆ.

ಈ ಸೀನಿಗೆ ಕೆಮ್ಮಿಗಿರುವಷ್ಟು ಕನಿಷ್ಠ ಗೌರವವೂ ಇಲ್ಲ. ಕೆಮ್ಮುತ್ತ ಇರುವವರಿಗೆ ಕೆಲವು ಅಲೋಪತಿ, ಆಯುರ್ವೇದಿಕ್, ಯುನಾನಿ... ಔಷದೊಪಚರಗಳನ್ನಾದರೂ ಸಲಹೆ ನೀಡುತ್ತಾರೆ. ಕಡೇಪಕ್ಷ  ಮನೆಮದ್ದುಗಳನ್ನಾದರೂ ಸಜಸ್ಟ್ ಮಾಡಿ ಸಹಸ್ಪಂದಿಸುತ್ತಾರೆ. ಆದರೆ ಯಾವುದೇ ನಿರ್ದಿಷ್ಟ ಔಷದೋಪಚಾರವನ್ನೂ ಬಯಸದ ಈ ಪರಮ ಪಾಪಿಯಾದ ಸೀನನ್ನು 'ಆ...ಕ್ಷಿ'ಸಲು ಪ್ರಾರಂಭಿಸಿದಾಕ್ಷಣವೇ ಸುತ್ತಿನವರು ತಾವೇ ಅತ್ತಿತ್ತ ಸರಿದು ಹೋಗ್ತಾರೆ ಅಥವಾ ಮುಖ ಸಿಂಡರಿಸುತ್ತಾ ನಿರ್ದಾಕ್ಷಿಣ್ಯವಾಗಿ ನಮ್ಮನ್ನೇ ಅಲ್ಲಿಂದ ಉಚ್ಛಾಟಿಸುತ್ತಾರೆ. ಕೆಮ್ಮನ್ನಾದರೂ ಮುಂಜಾಗರೂಕತೆಯಿಂದ ಮುಖಕ್ಕೆ ವಸ್ತ್ರವನ್ನು ಮುಚ್ಚಿಕೊಂಡು  ನಾಗರಿಕವಾಗಿ ಕೆಮ್ಮಬಹುದು ಆದರೆ ಅನಿರೀಕ್ಷಿತವಾಗಿ ಧಾಳಿಯಿಡುವ ಈ ಸೀನು ಇದ್ದಕ್ಕಿದ್ದಂತೆಯೇ ಅಬ್ಬರಿಸಿ ವಾತಾವರಣವನ್ನೇ ತಲ್ಲಣಿಸಿ ಸುತ್ತೆಲ್ಲಾ   ಲಾಲಾಹನಿಗಳನ್ನು ಸ್ಪ್ರಿಂಕಲ್ ಮಾಡಿ ಕಲುಷಿತಗೊಳಿಸಿ ಬಿಡುತ್ತದೆ.  

        ಈ ಸೀನಿನ ವಿವಿಧ  ನಾದ ಮಾದರಿಗಳಂತೂ ಕೇಳಲು ವಿಚಿತ್ರವಾಗಿರುತ್ತವೆ. ನಮ್ಮ ಸೋದರ ಮಾವ  ತಾರಕ ಸ್ಥಾಯಿಯಲ್ಲಿ ಸೀನಿದರೆ ಮನೆಯ ಹಂಚುಗಳೆಲ್ಲಾ ಹಾರಿಹೋಗುವಂತೆ  ಮನೆಯೇ ಅದುರುತ್ತಿತ್ತು. ಆಗೇನಾದರೂ ನಮ್ಮ ಕಪ್ಪಿ-ಕೆಂಪಿ ಬೆಕ್ಕಿನ ಮರಿಗಳು ಹತ್ತಿರದ ಟೇಬಲ್ ಮೇಲೆ ಆಟವಾಡುತ್ತಿದ್ದರೆ ಹಠಾತ್ ಶಬ್ಧಸ್ಪೋಟಕ್ಕೆ ಅಂಜಿ  ಕೆಳಗೆ ಬಿದ್ದು ಉರುಳಾಡಿ ಎದ್ದು ಓಡಿಹೋಗುತ್ತಿದ್ದವು. 

ಒಮ್ಮೆ ಮೊದಲಬಾರಿಗೆ  ಮನೆಗೆ ಬಂದಿದ್ದ  ನಮ್ಮ ಹೊಸಪರಿಚಯಸ್ಥರ ಮಗು ಮಾವನ ಸೀನಿನ ಶಾಕ್ ನಿಂದ ಬೆಚ್ಚಿಬಿದ್ದು ಅಳಲು ಪ್ರಾರಂಭಿಸಿದ್ದು ಯಾರು ಹೇಗೇ ಸಮಾಧಾನಿಸಿದರೂ ಅಳು ನಿಲ್ಲಿಸಲೇ ಇಲ್ಲ. ಏನು ಮಾಡುವುದೆಂದು ತೋಚದೇ ಎಲ್ಲರೂ ಕಂಗೆಟ್ಟಿದ್ದಾಗ, ಅದೆಲ್ಲಿತ್ತೋ ಆ ಸೀನು, ಮಾವ ಇದ್ದಕ್ಕಿದ್ದಂತೆಯೇ ಬೋಬ್ಬಿರಿಯುವಂತೆ ಮತ್ತೊಮ್ಮೆ ಸೀನಿಬಿಟ್ಟರು! ಮನೆಮಂದಿಯೆಲ್ಲಾ ಗಡಬಡಿಸಿಹೋದ ಈ ಆರ್ಭಟಕ್ಕೆ ಮಗು ಸ್ತಬ್ಧವಾಯಿತು. ಮಗುವಿಗೇನಾಗುತ್ತೋ ಎಂದು ಎಲ್ಲಾ ನೋಡುತ್ತಿದ್ದಂತೆಯೇ ಏನೋ ಚೋದ್ಯವನ್ನು ಕಂಡಂತೆ ಮಗು ಕಿಲಕಿಲನೆ ನಗಲಾರಂಭಿಸಿಬಿಟ್ಟಿತು. ಈ ಅಯೋಮಯ ಸ್ಥಿತಿಯಿಂದ ಗಾಬರಿಗೊಂಡ ಅವರು ದಡಬಡಾಯಿಸಿ ಎದ್ದು ಮಗುವನ್ನು ಎತ್ತಿಕೊಂಡು ಹೊರಟೇಬಿಟ್ಟರು!

ನಮ್ಮ ಚಿಕ್ಕತ್ತೆಗೆ  ಸೀನು ಬಂದರೆ ನಿಲ್ಲುತ್ತಲೇ ಇರಲಿಲ್ಲ.  ಅವರ ಮಕ್ಕಳಂತೂ ತಾಯಿ ಸೀನಲು  ಪ್ರಾರಂಭಿಸಿದಾಕ್ಷಣವೇ ಸುತ್ತಲೂ ಘೇರಾಯಿಸಿ ಒಂದು, ಎರಡು, ಮೂರು, ನಾಲ್ಕು,... ಎಂದು ಒಕ್ಕೊರಲಿನಲ್ಲಿ ಎಣಿಸಿದ್ದೂ ಎಣಿಸಿದ್ದೆ!  ಕನಿಷ್ಠ 20 ಸೀನನ್ನಾದರೂ ಅವರು ಒಮ್ಮೆಗೇ ಸೀನುತ್ತಿದ್ದರು!  ಈ  ಮಕ್ಕಳು ಎಣಿಸೋ ಲೆಕ್ಕ ಕಲಿತಿದ್ದು ಅವರಮ್ಮ ಸೀನೋದ್ರಿಂದಲೇ ಎಂದು ಎಲ್ಲರೂ  ತಮಾಷೆ ಮಾಡುತ್ತಿದ್ದರು.  ನಮ್ಮ  ತಾತ ಸೀನಿನ ಶಕುನವನ್ನು ಬಹಳವಾಗಿ ನಂಬುತ್ತಿದ್ದರು. ಯಾವುದಾದರೂ ಕೆಲಸಕ್ಕೆ ಹೊರಟಾಗ ನಮ್ಮ ಮನೆಯ ಕರು ಸೀನಿದರೆ ಆ ಕೆಲಸ ಆಗೇತೀರುತ್ತದೆ ಎನ್ನುವುದು ಅವರ ಅಚಲ ನಂಬಿಕೆ. ಒಮ್ಮೆ ಹೀಗೇ ಯಾವುದೋ ಪ್ರಮುಖ ಕಾರ್ಯಕ್ಕೆ ಅವರು ಹೊರಟು ನಿಂತಾಗ ನಾನು ತಟ್ಟನೆ 'ಆ....ಕ್ಷಿ' ಎಂದುಬಿಟ್ಟೆ. 'ಅಯ್ಯೋ ಒಂಟಿ ಸೀನು' ಎಂದುಕೊಂಡು ಅವರು ಕುಳಿತೇಬಿಟ್ಟರು. ಅಕ್ಕ ನನಗೆ 'ಇನ್ನೊಂದು ಸಾರಿ ಸೀನಿಬಿಡೆ, ತಾತ ಬಯ್ತಾರೆ.' ಎಂದು ಒತ್ತಾಯಿಸಲಾರಂಭಿಸಿದಳು. ಹುಸಿಕೆಮ್ಮನ್ನಾದರೂ ಕೆಮ್ಮಬಹುದು. ಆದರೆ ಹುಸಿ ಸೀನು ಸಾಧ್ಯವೆ? ಕರು ಸೀನಿದರೆ ಖುಷಿಪಡೋ ತಾತ ನಾನು ಸೀನಿದರೆ ಏಕೆ ಅಪಶಕುನ ಅಂತಾರೆ ಎನ್ನುವುದೇ ಸಮಸ್ಯೆಯಾಗಿತ್ತು. ಮನೆಯಲ್ಲಿ ಏನಾದರೂ ಗಹನವಾದ ಮಾತುಕತೆ ನಡೆಯುತ್ತಿದ್ದಾಗ ಅಮ್ಮ ಅಪ್ಪಿತಪ್ಪಿಯೂ ನನ್ನನ್ನು ಹತ್ತಿರದಲ್ಲಿ ಕೂರಲು ಬಿಡುತ್ತಿರಲಿಲ್ಲ! ಈ ಕಳಂಕದಿಂದ ಪಾರಾಗಲು ನಾನು ಎಷ್ಟೊಬಾರಿ ಬರುವ ಸೀನನ್ನು ತಡೆಯಲು ಪ್ರಯತ್ನಿಸಿ ಅದು ಒಳಗೂ ಉಳಿಯದೆ ಹೊರಗೂ ಬರದೇ ತ್ರಿಶಂಕು ಸ್ಥಿತಿಯಾಗಿ 'ಹ್ಹ ಹ್ಹ ಹ್ಹ...'ಎನ್ನುತ್ತಾ ಪಡುತ್ತಿದ್ದ ಸಂಕಟ ಅಜ್ಜಿ ಹೇಳುವಂತೆ ನಮ್ಮ ಶತೃವಿಗೂ ಬೇಡ!

      ನಾವು ಚಿಕ್ಕವರಿದ್ದಾಗ ಸೀನಿದರೆ ಮೊದಲನೆಯದಕ್ಕೆ ಶತಾಯಸ್, ಎರಡನೆಯದಕ್ಕೆ ಧೀರ್ಘಾಯಸ್ ಎನ್ನುತ್ತಿದ್ದರು. ಇಂಗ್ಲೀಷ್  ಮಾತನಾಡುವ ರಾಷ್ಟ್ರಗಳಲ್ಲಿ , ಸಾಮಾನ್ಯವಾಗಿ ಯಾರಾದರು ಸೀನಿದಾಗ ಅವರಿಗೆ 'ಬ್ಲೆಸ್ ಯು' ಎನ್ನುತ್ತಾರಂತೆ. ನಮ್ಮಂತೆಯೇ ವಿದೇಶಗಳಲ್ಲಿಯೂ ಸೀನಿನ ಬಗ್ಗೆ ವಿವಿಧ ನಂಬಿಕೆಗಳಿವೆ. ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳ ಭವಿಷ್ಯ ಸೂಚಕ ಸಂಕೇತಗಳು ಎಂದು ನಂಬುತ್ತಿದ್ದರಂತೆ. ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ ಯಾವುದೇ ಕಾರಣವಿಲ್ಲದೆ ಸೀನು ಬಂದರೆ, ಸಾಮಾನ್ಯವಾಗಿ ಆ ಕ್ಷಣದಲ್ಲಿ ಯಾರೋ ಸೀನಿದವರ ಬಗ್ಗೆ ಮಾತನಾಡ್ತಿದಾರೆ ಅಂದುಕೊಳ್ತಾರೆ. ಒಂಟಿಸೀನು ಬಂದರೆ  ಸೀನುವವನ ಬಗ್ಗೆ ಒಳ್ಳೆಯದು ಹೇಳಿದ್ದಾರೆಂದು, ಒಟ್ಟಿಗೆ ಜೋಡಿಸೀನು ಬಂದರೆ  ಕೆಟ್ಟ ಮಾತನಾಡಿದ್ದಾರೆಂದೂ, ಸಾಲಾಗಿ ಮೂರು ಸೀನುಬಂದರೆ ಯಾರಾದರು ಅವರನ್ನು ಪ್ರೀತಿಸುತ್ತಿದ್ದಾರೆಂದು ತಿಳಿಯುತ್ತಾರೆ. ಎಲ್ಲಿಂದೆಲ್ಲಿಗೆ ಹೋದರೂ ಒಂದಲ್ಲಾ ಒಂದು ಕೊನೆ ಮೊದಲಿಲ್ಲದ ನಂಬಿಕೆಗಳು! ಹೀಗೆ ನಮ್ಮ ಈ ಸೀನು ಪ್ರಪಂಚದಾದ್ಯಂತ  ಮೌಢ್ಯವ್ಯಾಪಿಯಾಗಿದೆ.   

ಸೀನಿನ ವೇಗ 35ರಿಂದ40 mphನ ಸಮೀಪದಲ್ಲಿರುತ್ತದೆ ಎಂದು ವೈಜ್ಞಾನಿಕವಾಗಿ ಅಂದಾಜು ಮಾಡಿದಾರೆ. ಈ ವೇಗದಲ್ಲಿ ಸೀನು 15 ರಿಂದ 20 ಅಡಿಗಳವರೆಗೆ ಸಣ್ಣ ಹನಿಗಳನ್ನು ಸುತ್ತೆಲ್ಲಾ ಎರಚುತ್ತದಂತೆ. ಅದಕ್ಕೇ ರೋಗಗಳನ್ನು ಹರಡುವುದರಲ್ಲಿ ಸೀನಿಗೇ ಅಗ್ರಸ್ಥಾನ. ಕೆಲವೊಮ್ಮೆ ಸೀನಿನ ವೇಗ 100mph ಕೂಡ ಆಗಿರುತ್ತಂತೆ. ಬಹುಶಃ ನಮ್ಮ ಸೋದರಮಾವನ ವೇಗ ಇದೇ ಆಗಿತ್ತೇನೋ! 

                               ~ ಪ್ರಭಾಮಣಿ ನಾಗರಾಜ 


Saturday, February 3, 2024

ನಳಿನಿ ಟಿ. ಭೀಮಪ್ಪ ಅವರಿಂದ ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ವಿಮರ್ಶೆ👌❤️

 

                     ಮುಂಚೂಣಿಯಲ್ಲಿರುವ ಸುಪ್ರಸಿದ್ಧ ಲೇಖಕಿಯಾದ ನಳಿನಿ ಟಿ. ಭೀಮಪ್ಪ ಅವರಿಂದ  ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ಪ್ರೀತಿಯ ವಿಮರ್ಶೆ👌❤️

        ಲಲಿತಪ್ರಬಂಧಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಲೇಖಕಿ ಎಂದರೆ ಪ್ರಭಾಮಣಿಯವರು ಎನ್ನಬಹುದು.  ಇಷ್ಟು ದಿವಸ ಇವರ ಪರಿಚಯ ಇರಲಿಲ್ಲ.  ಎಲ್ಲೋ ಅಲ್ಲೊಂದು ಇಲ್ಲೊಂದು ಲೇಖನ ಓದಿ ಇವರ ಭಾಷಾಪ್ರೌಢಿಮೆಗೆ ಅಚ್ಚರಿಪಟ್ಟಿದ್ದೆ.  ಇತ್ತೀಚೆಗೆ ಮುಖಪುಸ್ತಕದಿಂದ ಅವರು ಸಂಪರ್ಕಕ್ಕೆ ಬಂದಾಗ, ಅಲ್ಲಿ ಅವರು ಹಾಕುತ್ತಿದ್ದ ಬರಹಗಳನ್ನು ಓದಿ ಆನಂದಿಸಿ, ಅವರ ಪುಸ್ತಕ ಕಳಿಸಲೇಬೇಕು ಎಂದು ದುಬಾಲು ಬಿದ್ದು ತರಿಸಿಕೊಂಡೆ.  ಅದರಲ್ಲಿನ ‘ಲೇಖಕರ ಮಾತು’ ಓದುವಾಗಲೇ ಪ್ರಭಾಮಣಿಯವರ ಹಾಸ್ಯದ ಝಲಕುಗಳು ಅಪ್ಪಳಿಸುತ್ತ ನಗಿಸಿದ್ದವು.  ಈ ಪುಸ್ತಕಕ್ಕೆ ‘ಸ್ವೀಟ್ ೬೦’ ಎನ್ನುವ ಹೆಸರು ಆಯ್ಕೆ ಮಾಡಿರುವುದಕ್ಕೆ ಕೊಟ್ಟಿರುವ ಕಾರಣವನ್ನು ಓದಿ ಬಿದ್ದೂ ಬಿದ್ದೂ ನಕ್ಕಿದ್ದೇನೆ.  ಇದು ಮುಖಸ್ತುತಿಯಂತೂ ಅಲ್ಲವೇ ಅಲ್ಲ.

‘ಸ್ವೀಟ್ ೬೦’ ಲೇಖಕಿ ಪ್ರಭಾಮಣಿಯವರ ಲಲಿತಪ್ರಬಂಧಗಳ ಸಂಕಲನ.  ಈ ಸಂಕಲನವನ್ನು ಕೈಗೆತ್ತಿಕೊಂಡಾಗ ಸರಸರನೆ ಓದಿ ಮುಗಿಸಿಬಿಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದೆ.  ಆದರೆ ಇವು ಸುಮ್ಮನೆ ಕಣ್ಣಾಡಿಸಿ ಇಡುವಂತಹ ಪ್ರಬಂಧಗಳಲ್ಲ ಎನ್ನುವುದು ಬಹುಬೇಗನೆ ಅರಿವಿಗೆ ಬಂತು.  ಬರಹಗಳಲ್ಲಿನ ಪ್ರತಿಯೊಂದು ಪದ, ಸಾಲುಗಳನ್ನೂ ಇಂಚಿAಚಾಗಿ ಸವಿಯುತ್ತ ಹೋದಂತೆಲ್ಲ, ತುಟಿಯಂಚಿನಲ್ಲಿ ನಮಗರಿವಿಲ್ಲದೆ ಹಾಸ್ಯದ ಬುಗ್ಗೆಯನ್ನೇ ಹರಿಸುವ ತಾಕತ್ತಿನವು ಎಂದು ಹೇಳಬಹುದು.  ನಿಜವಾಗಿಯೂ ಓದುಗರಿಗೆ ಇದು ರಸದೌತಣ ಎನ್ನಬಹುದು. 
ಗಂಭೀರ ಬರವಣಿಗೆಯಲ್ಲಿ ಹಾಸ್ಯವನ್ನು ಓದುಗರಿಗೆ ಮನಮುಟ್ಟುವಂತೆ ಉಣಬಡಿಸಿದ್ದಾರೆ.  ಪ್ರತಿಯೊಂದು ಲೇಖನವನ್ನು ಓದುವಾಗಲೂ ಅದೆಷ್ಟು ಪ್ರಬುದ್ಧ, ಪಕ್ವ ಬರವಣಿಗೆ ಲೇಖಕಿಯದು ಎಂದು ಸ್ಪಷ್ಟವಾಗಿ ಅರಿವಿಗೆ ಬಂದುಬಿಡುತ್ತದೆ.  ಅದರಲ್ಲೂ ಅವರ ಬರವಣಿಗೆ ಎಂದರೆ ಹಳಿಗಳ ಮೇಲೆ ತಡವರಿಸದೆ ಓಡುವ ರೈಲಿನಂತೆ. ಸರಳ ವಿಷಯಗಳು, ಸರಾಗವಾದ ಓಘ.  ಬರೆಯುತ್ತಿರುವ ವಿಷಯ ಬಿಟ್ಟು ಒಂದಿAಚೂ ಆಚೀಚೆ ಕದಲುವುದಿಲ್ಲ.  ಆರಂಭ, ವಿಷಯ ವಿಸ್ತರಣೆ, ಅಂತ್ಯ ಎಲ್ಲವೂ ಅಚ್ಚುಕಟ್ಟು.  ಬಹುಶಃ ಇತ್ತೀಚಿನ ಬರಹಗಾರರಲ್ಲಿ, ಅದರಲ್ಲೂ  ಲಲಿತಪ್ರಬಂಧಗಳ ಪ್ರಾಕಾರದ ಪೈಕಿ, ಪ್ರಭಾಮಣಿಯವರದು ಒಂದು ಕೈಮೇಲೆಯೇ ಎಂದು ಹೇಳಬಹುದು.  ಅಷ್ಟು ತೂಕವಿದೆ ಅವರ ಬರಹಗಳಲ್ಲಿ.  ಪ್ರತಿಯೊಂದು ಬರಹವೂ ಸರಳವಾದ ವಿಷಯಗಳನ್ನು ಒಳಗೊಂಡಿದ್ದರೂ,  ವಿಭಿನ್ನ, ವಿಶಿಷ್ಟ  ವಾಗಿ ಗಮನ ಸೆಳೆಯುತ್ತದೆ.

ಲಲಿತಪ್ರಬಂಧಗಳನ್ನು, ಹಾಸ್ಯವನ್ನು ಬರೆಯುವವರಿಗೆ ಮಾರ್ಗದರ್ಶನವಾಗಬಲ್ಲದು.  ನಾನಂತೂ ಪದೇ ಪದೇ ಓದಿ ಅವರ ಬರವಣಿಗೆಯ ಕೌಶಲ್ಯಕ್ಕೆ ಅಚ್ಚರಿಗೊಂಡಿದ್ದೇನೆ, ಅಭಿಮಾನಿಯಾಗಿದ್ದೇನೆ.  ಅವರ ಅಷ್ಟೂ ಲಲಿತಪ್ರಬಂಧಗಳ ಪುಸ್ತಕಗಳನ್ನು ಓದುವ ಆಸೆ ಇದೆ.  ಮೇಡಂ ಮತ್ತಷ್ಟು ಪುಸ್ತಕಗಳು ನಿಮ್ಮ ಲೇಖನಿಯಿಂದ ಹೊರಬರಲಿ ಎಂದು ಹಾರೈಸುತ್ತೇನೆ.
ನಳಿನಿ ಟಿ. ಭೀಮಪ್ಪ
ಧಾರವಾಡ