Sunday, December 30, 2012

ಮೂರು `ಹನಿ’ಗಳು

`ನಮಸ್ಕಾರ’

ಈಗೀಗ `ನಮಸ್ಕಾರ’

ಎನ್ನುವುದಾಗಿದೆ ಕಾಟಾಚಾರ

`ಗೌರವ ಕೊಟ್ಟು ಕೊಳ್ಳುವ’

ಸಂಸ್ಕ್ರುತಿಗಾದ ದುರ್ಗತಿ

ಏಕಮುಖ ಸಂಚಾರ!


ಸಂಬಂಧ!

ಚಪ್ಪಲಿಗಳು ಮನುಷ್ಯರಂತಲ್ಲ

ಒಂದನೊಂದು ಬಿಟ್ಟಿರುವುದಿಲ್ಲ

ಒಮ್ಮೆ ಅಗಲಿದರಂತೂ

ಮತ್ತೆಂದೂ

ಸೇರುವುದಿಲ್ಲ!


ಸಲಹೆ

ನಮ್ಮಲ್ಲಿ ಹೇರಳ ಲಭ್ಯ

ಪುಕ್ಕಟೆ ಸಲಹೆ

ಸಲ ಸಲವೂ ಬಲಿಪಶು-

ವಾಗುತಿಹ ನನ್ನ

ಹೇ `ಮಾತೇ’

ದಯೆಯಿಟ್ಟು ಸಲಹೆ!
Tuesday, December 25, 2012

ಈ ಗೋವು...... (ಭಾಗ೨)

ನಮ್ಮ ಕೊಟ್ಟಿಗೆಯ ತುಂಬಾ ದನಗಳಿದ್ದವು. ಬೆಳಿಗ್ಗೆ ಮೇಯಲು ಬಿಟ್ಟಾಗ ಒಂದರೊಡನೊಂದು ಮಂದಗತಿಯಲ್ಲಿ ಹೊರಟರೆ ನಮ್ಮ ಬೀದಿಯನ್ನೇ ತುಂಬಿಬಿಡುತ್ತಿತ್ತು ಅವುಗಳ ಮೆರವಣಿಗೆ! ಅವುಗಳನ್ನು ‘ದನ’ ಎಂದು ಪ್ರತ್ಯೇಕಿಸುವಂತಿರಲಿಲ್ಲ. ಒಂದುರೀತಿಯಲ್ಲಿ ನಮ್ಮ ಮನೆಯ ಸದಸ್ಯರಂತೆಯೇ ಇದ್ದವು. ನಮ್ಮ ಮುತ್ತಜ್ಜಿಗೆ ಬಳುವಳಿಯಾಗಿ ಬಂದಿದ್ದ ತಳಿಯ ಹಸುಗಳು ನಮ್ಮ ಗೋಸಮೂಹದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದವು. ಲಕ್ಷ್ಮಿ ಎಂಬ ಹಸುವನ್ನು ಬಳುವಳಿಯಾಗಿ ತಂದಿದ್ದರಂತೆ ಅದ...ರ ಮಕ್ಕಳು ಮೊಮ್ಮಕ್ಕಳಲ್ಲಿ ಪ್ರಮುಖವಾಗಿ ಸಿಂಧು, ಕಪಿಲ, ಕಾವೇರಿ, ಚಿಂತಾಮಣಿ, ಉಷಾ, ತಾರಾ... ಹೀಗೆ ಸಂತತಿ ಮುಂದುವರಿದಿತ್ತು. ಅವುಗಳಲ್ಲಿ ಚಿಂತಾಮಣಿ ನನ್ನ ಓರಗೆಯದು ಎಂದು ಹೇಳುತ್ತಿದ್ದರು. ಅದು ಶಕ್ತಿಯಿದ್ದಾಗ ಗೋಸಮೂಹದಲ್ಲೇ ರಾಣಿಯಂತೆ ಮೆರೆದು ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ನಮ್ಮ ಕೊಟ್ಟಿಗೆಯಲ್ಲೇ ಕಾಲು ಚಾಚಿಕೊಂಡು ಮಲಗಿ ಪ್ರಾಣಬಿಟ್ಟಿತ್ತು. ಚಿಂತಾಮಣಿ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದ ಸಂದರ್ಭದಲ್ಲೇ ಅದೇ ಕೊಟ್ಟಿಗೆಯಲ್ಲೇ ಹುಟ್ಟಿದ್ದ ಪುಟ್ಟ ಹಂಸ ತನ್ನ ಬಟ್ಟಲುಗಣ್ಣುಗಳಲ್ಲಿ ಈ ಹೊಸ ಪ್ರಪಂಚವನ್ನು ಪರಿಚಯಿಸಿಕೊಳ್ಳುವ ಕಾತುರದಲ್ಲಿತ್ತು. ಆಗ ಬರೆದಿದ್ದ ಒಂದು ದೀರ್ಘ ಕವನ ಇಂದಿಗೂ ನನ್ನ ಬಳಿ ಭದ್ರವಾಗಿ ಅಪ್ರಕಟಿತ ಸ್ಥಿತಿಯಲ್ಲೇ ಇದೆ!

‘ಒಂದೆಡೆ ಗಾಡಾಂಧತೆ ಮತ್ತೊಂದೆಡೆ ಬೆಳಕು

ಒಂದೆಡೆ ಮುಚ್ಚುತಿಹ ಕುಮುದ ಮತ್ತೊಂದೆಡೆ ಕಮಲೆ

...............

ಒಂದೆಡೆ ತಾ ಮಲಗಿದೆ ಹಸು

ಸೋತು ನಾಲ್ಕು ಕಾಲ ಚಾಚಿ

ಬೆಂದ ಮನದ ಅಳಲ

ಕಣ್ಣಿನಿಂದ ಸುರಿಸುತ

ಬಂದ ನೋವ ಕಾಲ ಬಡಿತದಿಂದ ಹರಿಸುತ


ಮತ್ತೊಂದೆಡೆ ಮುದ್ದುಕರು

....... ಏಳ್ವ ಬಯಕೆ ಬಲವು ಇಲ್ಲ.......’ ಹೀಗೆ ಸಾಗುವ ಕವನದಲ್ಲಿ ಸಾವಿನಂಚಿನಲ್ಲಿರುವ ಹಸು, ಕೆಲವೇ ಕ್ಷಣಗಳ ಹಿಂದೆ ಜಗತ್ತಿಗೆ ಕಣ್ಣುಬಿಟ್ಟ ಕರು, ಇವುಗಳ ಹೋಲಿಕೆಗಳನ್ನು ಆಗ ನನಗೆ ತಿಳಿದಂತೆ ತೆರೆದಿಡುತ್ತದೆ.

ನಮ್ಮ ಮನೆಯಲ್ಲಿ ಹುಟ್ಟಿದ ಕರುಗಳು ಹೆಣ್ಣಾದರೆ ಇಲ್ಲೇ ಕರುಹಾಕಿ, ಹಾಲು ಕೊಟ್ಟು, ಹೋರಿಯಾದರೆ ನಮ್ಮಲ್ಲೇ ದುಡಿಮೆ ಮಾಡಿ ಕಡೆಗಾಲದಲ್ಲಿ ನಮ್ಮ ಕೊಟ್ಟಿಗೆಯಲ್ಲೇ ಕಡೆಯುಸಿರೆಳೆಯುವುದು ಮೊದಲಿನಿಂದಲೂ ನಡೆದುಬಂದಿತ್ತು. ಕರು ಹುಟ್ಟುತ್ತದೆ ಎಂದು ತಿಳಿದಾಕ್ಷಣದಿಂದಲೇ ಅದಕ್ಕೆ ಯಾವ ಹೆಸರಿಡುವುದು ಎನ್ನುವ ಚರ್ಚೆ ಪ್ರಾರಂಭವಾಗುತ್ತಿತ್ತು. ಅವುಗಳಲ್ಲಿ ಇಷ್ಟವಾದವುಗಳ ಒಂದು ಪಟ್ಟಿಯನ್ನು ಸಿದ್ಧಗೊಳಿಸಿ ಆಯ್ಕೆಯ ಪ್ರಕ್ರಿಯೆ ಕಡೆಯ ಕ್ಷಣದವರೆಗೂ ನಡೆಯುತ್ತಲೇ ಇರುತ್ತಿತ್ತು. (ಈಗೀಗ ಹಳ್ಳಿಯ ನಮ್ಮ ಮನೆಯಲ್ಲಿಯೂ ಕರುಗಳಿಗೆ ಹೆಸರಿಡುವ ಪರಿಪಾಠವೇ ತಪ್ಪಿಹೋಗಿದೆ.) ಹಂಸೆ ಹುಟ್ಟಿದಾಗ ಅದರೊಂದಿಗಿನ ಗೆಳೆತನವನ್ನು, ‘ಹಂಸೆ ನನ್ನ ಪುಟ್ಟ ಕರು’ ಎಂಬ ಒಂದು ಕವನದ ಮೂಲಕ ವರ್ಣಿಸಿದ್ದೆ!

ಶಾಲೆಗೆ ರಜವಿದ್ದಾಗಲೆಲ್ಲಾ ನಾನು, ನನ್ನ ತಮ್ಮ ದನಕಾಯಲು ಹೋಗುತ್ತಿದ್ದೆವು! ಹೀಗೆ ನಮ್ಮ ಹಸುಗಳ ನಡುವೆ ನಮಗೆ ಅವಿನಾಭಾವ ಸಂಬಂಧವೇರ್ಪಟ್ಟಿತ್ತು.

ಕಾಲಸರಿದಂತೆ........(ಇದು ನನ್ನ ಒಂದು ಕವನದ ಶೀರ್ಷಿಕೆಯೂ ಹೌದು. ಇದರಲ್ಲಿ ಭಾವನೆಗಳನ್ನೇ ಹೊಮ್ಮಿಸಲಾರದ ಮಿಶ್ರತಳಿಯ ಆಗಮನದೊಂದಿಗೆ ಹಸುಗಳ ಜೀವನ ಹೇಗೆ ಯಂತ್ರೀಕೃತವಾಗುತ್ತಾ ಸಾಗಿತು ಎಂಬ ನೋವಿದೆ.)

ನಾವೂ ನಮ್ಮ ಜೀವನವು ಕೊಂಡೊಯ್ದಂತೆ ನಮ್ಮ ಹಳ್ಳಿಯ ಮನೆಯಿಂದ ದೂರವಾಗುತ್ತಾ ಹೋದೆವು. ಒಮ್ಮೊಮ್ಮೆ ಊರಿಗೆ ಹೋದಾಗಲೂ ಹಸುಗಳೊಂದಿಗಿನ ಅಪರಿಚಯತೆ ನಮ್ಮನ್ನು ಕಾಡುತ್ತಿತ್ತು. ನಮ್ಮಜ್ಜಿಯ ಬಳುವಳಿಯ ತಳಿ ತಾರೆಯ ಕರು ಮಿಶ್ರತೆಯತ್ತ ಸಾಗಿ ‘ಗುಂಡಿ?ಯಾಗಿ ಮುಂದಿನವು ಅನಾಮದೇಯಗಳಾಗಿದ್ದವು! ಪ್ರಯೋಜನಕ್ಕೆ ಬಾರದ ಹಸುಗಳು ಕೊಟ್ಟಿಗೆಯಿಂದ ಕಣ್ಮರೆಯಾಗಿದ್ದವು.ಸಾಮಾನ್ಯವಾಗಿ ಹಬ್ಬಗಳಲ್ಲಿ ಹಸುಗಳಿಗೆ ವಿಶೇಷ ಮರ್ಯಾದೆ. ಅದರಲ್ಲೂ ದೀಪಾವಳಿ ಬಂತೆಂದರೆ ಅವುಗಳನ್ನು ಅಲಂಕರಿಸುವುದೇ ಒಂದು ಸಂಭ್ರಮ. ಹಸುಗಳಿಗೆ ಮೈತೊಳೆದು, ಚೆಂಡುಹೂವಿನ ಹಾರವನ್ನು ಕತ್ತು, ಕೊಂಬುಗಳಿಗೆ ಹಾಕಿ ಅಲಂಕರಿಸುತ್ತಿದ್ದೆವು. ಒಂದು ಮತ್ತೊಂದರ ಹಾರವನ್ನು ತಿಂದುಬಿಡುತ್ತವೆಂದು ದೂರ-ದೂರ ಕಟ್ಟಬೇಕಾಗುತ್ತಿತ್ತು. ಅಮ್ಮ ಮಾಡಿಕೊಡುತ್ತಿದ್ದ ಕಡುಬುಗಳನ್ನು ಹರಿವಾಣದಲ್ಲಿ ತಂದು ತಿನ್ನಿಸುವಾಗ ಅವುಗಳ ಆತುರ ಹೇಳತೀರದು!

ದೀಪಾವಳಿಯಂದೇ ನಡೆದ ಆ ಘಟನೆ ಕಾಕತಾಳೀಯವೋ ಎನಿಸುವಂತಿತ್ತು. ನಡುರಾತ್ರಿಯಲ್ಲಿ ನಾಯಿಗಳ ಕಾದಾಟ, ನಡುವೆಯೇ ಒಂದು ಆಕ್ರಂದನ ಕೇಳಿ ಧಾವಿಸಿದ ನನ್ನ ಮಗ, ನಾಯಿಗಳು ಒಂದು ಕರುವನ್ನು ಎಳೆದಾಡುತ್ತಾ ಅದು ಜೀವಂತವಾಗಿರುವಂತೆಯೇ ಅದನ್ನು ತಿನ್ನುತ್ತಿದ್ದ ದೃಶ್ಯವನ್ನು ಕಂಡು, ಕಲ್ಲುಹೊಡೆದು ನಾಯಿಗಳನ್ನು ಓಡಿಸಿದ್ದ. ಏಳಲಾಗದ ಸ್ಥಿತಿಯಲ್ಲಿದ್ದ ಆ ಕರುವನ್ನು ತಿನ್ನಲು ನಾಯಿಗಳು ಹೊಂಚುಹಾಕುತ್ತಾ ಆಕ್ರಮಿಸುತ್ತಿದ್ದುದರಿಂದ ಅದನ್ನು ಆ ಸ್ಥಿತಿಯಲ್ಲಿ ಬಿಡುವಂತೆಯೇ ಇರಲಿಲ್ಲ. ಆ ಅವೇಳೆಯಿಂದಲೇ ಮೊಬೈಲ್‌ನಿಂದ ಕರೆ ಮಾಡುತ್ತಾ, ಸಹಾಯಕ್ಕಾಗಿ ಯಾಚಿಸುತ್ತಾ ಬೆಳಗಿನವರೆಗೂ ಹಿಂಡುಹಿಂಡಾಗಿ ಬರುತ್ತಿದ್ದ ನಾಯಿಗಳನ್ನು ಓಡಿಸುತ್ತಾ ಜಾಗರಣೆ ಮಾಡಿದೆವು. ಹಗಲಾದ ನಂತರ ಯಾರಾದರೂ ಬಂದು ‘ಇದು ನಮ್ಮದು' ಎಂದು ಅದರ ಜವಾಬ್ಧಾರಿ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದ ನಮ್ಮ ಅನಿಸಿಕೆ ಸುಳ್ಳಾಯಿತು. ಕೆಲವು ಪ್ರಮುಖ ವ್ಯಕ್ತಿಗಳ ಮೂಲಕ ದೊರೆತ ಸಹಕಾರದಿಂದ ಕರುವಿಗೆ ಉತ್ತಮ ಚಿಕಿತ್ಸೆ ನೀಡಿಸಿ, ಮುಂದಿನ ನಿಗಕ್ಕಾಗಿ ಆಶ್ರಮದಲ್ಲಿ ಬಿಡುವಲ್ಲಿ ಅರ್ಧ ದಿನವೇ ಕಳೆಯಿತು ಆದರೂ ಈ ದೀಪಾವಳಿಯಲ್ಲಿ ಒಂದು ಉತ್ತಮ ಕಾರ್ಯ ಮಾಡಿದ ಸಂತಸ ನಮ್ಮದಾಗಿತ್ತು. ಬದುಕಿನ ಕರಾಳಮುಖದ ದರ್ಶನದೊಂದಿಗೆ ಪ್ರಾರಂಭವಾದ ಘಟನೆ, ಬದುಕಿನ ಸೌಂದರ್ಯದ ಮುಖಾಮುಖಿಯೊಂದಿಗೆ ಒಂದು ಹಂತವನ್ನು ತಲುಪಿತ್ತು! ಆದರೆ ಆ ಸಮಾಧಾನ ಹೆಚ್ಚು ದಿನ ಉಳಿಯಲಿಲ್ಲ. ಸಕಾಲದ ಚಿಕಿತ್ಸೆ ಹಾಗೂ ಆಶ್ರಮದ ಶುಶ್ರೂಷೆಯ ನಡುವೆಯೂ ನಮ್ಮ ‘ಬಲೀಂದ್ರ' ಇಹಲೋಕವನ್ನು ತ್ಯಜಿಸಿದ. ‘ಇಂಥಾ ತಬ್ಬಲಿ ಮಗ'-ಹೋರಿಗಳನ್ನು ನಾನು ಕಛೇರಿಗೆ ಹೋಗುವ ದಾರಿಯುದ್ದಕ್ಕೂ ಗಮನಿಸಲಾರಂಭಿಸಿದೆ. ಕಸದ ತೊಟ್ಟಿಗಳ ಬಳಿ ೩-೪ ಹೋರಿಕರುಗಳು ನಿಂತು ಹೊಟ್ಟೆತುಂಬಿಸಿಕೊಳ್ಳಲು ಹೆಣಗುತ್ತಿರುತ್ತಿದ್ದವು. ಮತ್ತೊಂದು ದಿನ ನಡುರಾತ್ರಿಯಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಮೂರು ಕರುಗಳು ಮೇಯುತ್ತಿರುವುದು ಕಾಣಿಸಿತು. ಒಂದೆರಡು ದಿನಗಳ ಹಿಂದೆ ನಮ್ಮ ಬಡಾವಣೆಯಲ್ಲಿಯೇ ಬೀದಿನಾಯಿಗಳ ಧಾಳಿಗೆ ತುತ್ತಾದ ಒಂದು ಕರು ಅವುಗಳಿಗೆ ಆಹಾರವಾಗಿದ್ದ ಸುದ್ಧಿ ತಿಳಿದಿದ್ದು, ಎಷ್ಟೇ ನಿಗಾ ವಹಿಸಿದರೂ ನಮ್ಮನ್ನಗಲಿದ ‘ಬಲೀಂದ್ರ'ನ ನೆನಪೂ ಕಾಡುತ್ತಲೇ ಇದ್ದುದರಿಂದ ಈಸಲ ಕರುಗಳ ಬಳಿಗೆ ನಾಯಿ ಬರದಂತೆ ಜಾಗ್ರತೆ ವಹಿಸಬೇಕೆಂದು ತೀರ್ಮಾನಿಸಿದೆವು. ಕಲ್ಲುಗಳನ್ನು ಗುಡ್ಡೆಹಾಕಿಕೊಂಡು ಮನೆಯವರೆಲ್ಲಾ ಬೆಳಗಿನವರೆಗೂ ಸರಧಿಯಲ್ಲಿ ಕಾಯ್ದುಕೊಂಡಿದ್ದು ಸೂರ್ಯದರ್ಶನವಾದಾಗ ಸಮಾಧಾನಹೊಂದಿದೆವು! ಇದು ಮುಗಿಯದ ಕಥೆ ಎಂದು ಮನವರಿಕೆಯಾದಾಗ ಹೇಗಾದರೂ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು ಹಾಗೂ ಹಾಗೂ ಕ್ರೂರವಾಗಿ ಬೀದಿನಾಯಿಗಳ ಧಾಳಿಗೆ ಬಲಿಯಾಗುತ್ತಿರುವ ಕರುಗಳ ಜೀವ ಉಳಿಸಬೇಕು ಎಂದು ಮುಂದಾದಾಗ ತಿಳಿದ ವಿಷಯ ಮೈನಡುಗಿಸುವಂತಿತ್ತು. ಮಿಶ್ರತಳಿ ಗೋವುಗಳಲ್ಲಿ ಹೋರಿಕರುಗಳಿಗೆ ಬೆಲೆ ಇಲ್ಲದ್ದರಿಂದ ಅಂದರೆ ಯಾವುದೇ ಪ್ರಯೋಜನವೂ ಇಲ್ಲದ್ದರಿಂದ ಅವುಗಳನ್ನು ಬೀದಿಗೆ ಅಟ್ಟುತ್ತಿದ್ದಾರೆ! ಅಥವಾ ಸ್ಲಾಟರ್‌ಗಳಿಗೆ ಮಾರಿದ್ದು ಅವರು ಅವುಗಳನ್ನು ಹೀಗೆ ಬಿಟ್ಟಿರುತ್ತಾರೆ!

ಅಯ್ಯೋ ಪರಿತ್ಯಕ್ತ ಜೀವವೆ, ಮನುಷ್ಯರಲ್ಲಾದರೆ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ, ಸ್ತ್ರೀ ಭ್ರೂಣಹತ್ಯೆ, ಕೆಲವು ಬುಡಕಟ್ಟುಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನೇ ಕೆಲವು ಹೇಯ ವಿಧಾನಗಳಿಂದ ಕೊಲ್ಲುತ್ತಾರೆ. ಜೀವಗಳ ಮೌಲ್ಯವನ್ನೇ ಅರಿಯಲಾಗದ ವೈಪರೀತ್ಯ.

Saturday, December 22, 2012

ಶ್ರೀನಿವಾಸ್ ರಾಮಾನುಜನ್ ಅವರ ಮಾಯಾಚೌಕ

ಇಂದು ಅದ್ಭುತ ಗಣಿತಜ್ಞರಾದ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನ. ಇವತ್ತಿನ `ಕನ್ನಡ ಪ್ರಭ'ದಲ್ಲಿ ಅವರು ರಚಿಸಿದ ಮಾಯಾಚೌಕ ಕೊಟ್ಟಿದ್ದಾರೆ. ಬಹಳ ಆಸಕ್ತಿಕರವಾಗಿದೆ. ನಾನು ನನ್ನ ಹುಟ್ಟಿದ ದಿನಾಂಕಕ್ಕೆ ಪ್ರಯತ್ನಿಸಿದೆ. 111ಮೊತ್ತದ ಮಾಯಾಚೌಕ ಆಯಿತು. ಇನ್ನೂ ಎರಡು ದಿನಾಂಕಗಳಿಗೂ ಸರಿಯಾಗಿ ಬಂತು. ಬಹಳ ಸಂತಸವೆನಿಸಿತು. ಯುಟ್ಯೂಬ್ ನಲ್ಲಿಯೂ ನೋಡಿದೆ. ಅದರ ಲಿಂಕ್ ಕೊಟ್ಟಿದ್ದೇನೆ. ನೀವೂ ಪ್ರಯತ್ನಿಸಿ. ಆ ಮಹಾನ್ ಚೇತನಕ್ಕೆ ನನ್ನ ನಮನಗಳು.
http://www.youtube.com/watch?v=IW74oqvhSuI

Friday, December 21, 2012

ಈ ಗೋವು......


ಪುರಾತನ ಕಾಲದಿಂದಲೂ ಗೋವು ಸಂಪತ್ತಿನ ಸಂಕೇತವಾಗಿದೆ ಹಾಗೂ ಹಿಂದೂಗಳಿಗೆ ಪೂಜನೀಯವಾಗಿದೆ. ಸಾಮಾನ್ಯವಾಗಿ ಮೊದಲಿನಿಂದಲೂ ತನ್ನ ಉಳಿವಿಗೆ ಕಾರಣವಾಗುವ ಎಲ್ಲವಕ್ಕೂ ಮಾನವ ದೈವತ್ವದ ಸ್ಥಾನವನ್ನು ನೀಡಿ ಪೂಜಿಸುತ್ತಲೇ ಬಂದಿದ್ದಾನೆ. ನಾವು ಉಸಿರಾಡುವ ಗಾಳಿ, ಜೀವನದ ಎಲ್ಲ ಕ್ರಿಯೆಗಳಿಗೂ ಅತ್ಯಗತ್ಯವಾದ ನೀರು, ಆಹಾರವನ್ನು ತಯಾರಿಸಲು ಬೇಕಾದ ಬೆಂಕಿ, .... ಎಲ್ಲವುಗಳಿಗೂ ಪೂಜನೀಯ ಸ್ಥಾನ ದೊರೆತಿದೆ. ಹಾಗೆಯೇ ಹಾಲನ್ನು ನೀಡುವ, ಉಳುಮೆ ಮಾಡಿ ಆಹಾರಧಾನ್ಯಗಳನ್ನು ಬೆಳೆಯಲು ಸಹಕರಿಸುವ, ಬೆರಣಿ, ಗೊಬ್ಬರವಾಗುವ..... ಹೀಗೆ ಜೀವನದ ಪ್ರತಿ ಹಂತದಲ್ಲೂ ಅತ್ಯುಪಯುಕ್ತವಾದ ದನಗಳು ಮನುಷ್ಯನಿಗೆ ಪೂಜ್ಯವೆನಿಸಿವೆ. ಹಸುವಿನ ಬಹು ಉಪಯುಕ್ತತೆಯನ್ನು

‘ಇಟ್ಟರೆ ಸಗಣಿಯಾದೆ

ತಟ್ಟಿದರೆ ಕುರುಳಾದೆ

ಸುಟ್ಟರೆ ನೊಸಲಿಗೆ ವಿಭೂತಿಯಾದೆ

.....’ ಎಂಬ ಕವನದಲ್ಲಿ ಬಹಳ ಚೆನ್ನಾಗಿ ವರ್ಣಿಸಿದ್ದಾರೆ ಅಲ್ಲದೇ ‘ನೀನಾರಿಗಾದೆಯೋ ಎಲೆ ಮಾನವ?’ ಎಂದು ಪ್ರತಿ ಹಂತದಲ್ಲಿಯೂ ಪ್ರಶ್ನಿಸುತ್ತಾ ಮಾನವರೆನಿಸಿಕೊಂಡಿರುವ ನಮ್ಮ ಪ್ರಯೋಜನವೇನು? ಎಂದು ನಮ್ಮನ್ನೇ ನಾವು ಸ್ವವಿಮರ್ಷೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಹಾಲನ್ನು ನೀಡಿ ಕಂದಗಳನ್ನು ಪೋಷಿಸುವ ಹಸುವನ್ನು ‘ಗೋಮಾತೆ’ ಎಂದು ಆರಾಧಿಸಿದರು. ಹಸುವಿನ ಹಾಲು ಸಾತ್ವಿಕ ಗುಣವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.

ತ್ಯಾಗಕ್ಕೆ ಪ್ರಸಿದ್ಧಿಯಾದ ‘ಪುಣ್ಯಕೋಟಿ’ಯ ಕಥನಕವನ ನಮ್ಮಲ್ಲಿ ಮನೆಮಾತಾಗಿದೆ. ನಮ್ಮ ಸುಪ್ರಸಿದ್ಧ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರು ಈ ಕವನವನ್ನು ಆಧರಿಸಿಯೇ ಬರೆದಿರುವ ಕಾದಂಬರಿ, ‘ತಬ್ಬಲಿಯು ನೀನಾದೆ ಮಗನೆ’ ಗೋವುಗಳ ಬಗ್ಗೆ ಬದಲಾದ ಭಾವನೆಗಳು, ಅಧೋಮುಖವಾಗಿ ಸಾಗಿದ ಅವುಗಳ ಸ್ಥಿತಿಗತಿಗಳ ಬಗ್ಗೆ ಒಂದು ಸ್ಪಷ್ಟ ಚಿತ್ರಣವನ್ನೇ ನೀಡಿದೆ.

‘ಸ್ಮ್ರುತಿ’ಯಲ್ಲಿ ಹಸುವನ್ನು ಮಾನವನ ತಾಯಿ ಮತ್ತು ಎತ್ತನ್ನು ತಂದೆ ಎಂದು ತಿಳಿಸಿದ್ದಾರೆ. ಹಸುವಿನ ಹಾಲನ್ನೂ ತಾಯಿಯ ಹಾಲಿನಂತೆಯೇ ಪರಿಗಣಿಸಿರುವುದರಿಂದ ಹಾಗೂ ಅದು ಮಾನವ ಸಮಾಜಕ್ಕೆ ಅತ್ಯಗತ್ಯವಾದ್ದರಿಂದ ಹಸು ತಾಯಿಯೆನಿಸಿದೆ. ತಂದೆಯ ಕರ್ತವ್ಯ ದುಡಿದು ತನ್ನ ಮಕ್ಕಳನ್ನು ಸಾಕುವುದು. ಹಾಗೆಯೇ ಎತ್ತು ಭೂಮಿಯನ್ನು ಉಳುಮೆ ಮಾಡಿ ಆಹಾರ ಧಾನ್ಯಗಳನ್ನು ಬೆಳೆಯಲು ಸಹಕರಿಸುತ್ತದೆ.

ಸ್ವರ್ಗದಲ್ಲಿರುವ ‘ಸುರಭಿ’ಯು ಭೂಮಿಯ ಮೇಲಿನ ಎಲ್ಲಾ ಗೋವುಗಳ ಮೂಲ ಎಂದು ಭಾಗವತ ಪುರಾಣವು ತಿಳಿಸುತ್ತದೆ. ‘ಹರಿವಂಶ’ದಲ್ಲಿ ಕೃಷ್ಣನನ್ನು ದನಗಳನ್ನು ಕಾಯುವ ಗೊಲ್ಲನನ್ನಾಗಿ ಚಿತ್ರಿಸಿದ್ದಾರೆ. ಅವನನ್ನು ‘ಬಾಲ ಗೋಪಾಲ’ ಎಂದರೆ ಗೋವುಗಳನ್ನು ರಕ್ಷಿಸುವ ಬಾಲಕ ಎಂದಿದ್ದಾರೆ. ಅವನ ಮತ್ತೊಂದು ಹೆಸರು ‘ಗೋವಿಂದ? ಎಂದು. ಅದರ ಅರ್ಥ ಗೋವುಗಳಿಗೆ ತೃಪ್ತಿಯನ್ನು ಉಂಟುಮಾಡುವವನು ಎಂದಾಗಿದೆ.

ಪುರಾಣಗಳು ತಿಳಿಸುವಂತೆ ‘ಕಾಮಧೇನು' ಇಷ್ಟಾರ್ಥಗಳನ್ನೆಲ್ಲಾ ನೀಡುವ ಹಸುವಾಗಿದ್ದು ಇದು ಎಲ್ಲಾ ಗೋವುಗಳ ಮಾತೆಯಾಗಿದೆ. ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಇದು ಅತ್ಯಂತ ಪವಿತ್ರವಾದ ಗೋವು ಹಾಗೂ ಎಲ್ಲ ದೇವತೆಗಳೂ ಇದರ ದೇಹದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆಯಿದೆ.

ಗೋವುಗಳ ಬಗ್ಗೆ ಇದ್ದಂಥಾ ಭಕ್ತಿಭಾವವು ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿ ಸಿಪಾಯಿದಂಗೆಗೆ ಕಾರಣವಾಯಿತು. ಮಹಾಭಾರತದಲ್ಲಿಯೂ ಗೋಗ್ರಹಣದಿಂದಾಗಿಯೇ ಅಜ್ಞಾತವಾಸದಲ್ಲಿದ್ದ ಪಾಂಡವರು ಯುದ್ಧಕ್ಕೆ ಬರಬೇಕಾದ ಸನ್ನಿವೇಶವುಂಟಾಗುತ್ತದೆ.

ಗೋವುಗಳ ಬಗ್ಗೆ ಗಾಂಧೀಜಿಯವರ ಅಭಿಪ್ರಾಯ ಹೀಗಿದೆ, ‘ನಾನು ಗೋವುಗಳನ್ನು ಪೂಜಿಸುತ್ತೇನೆ ಮತ್ತು ಇದನ್ನು ಇಡೀ ಜಗತ್ತಿನ ಎದುರೇ ಸಮರ್ಥಿಸುತ್ತೇನೆ. ಹಿಂದೂತ್ವದ ಮೂಲ ತತ್ವವೇ ಗೋಸಂರಕ್ಷಣೆಯಾಗಿದೆ. ಗೋಮಾತೆಯು ಈ ಭೂಮಿಯ ಮೇಲಿನ ಎಲ್ಲಾ ಮಾತೆಯರಿಗಿಂತಲೂ ಶ್ರೇಷ್ಟಳಾಗಿದ್ದಾಳೆ. ಅವಳು ಮಾನವತ್ವದ ಮಾತೆಯಾಗಿದ್ದಾಳೆ. ನಮ್ಮ ತಾಯಿ ಸತ್ತಾಗ ಅವಳಿಗೆ ಅಂತ್ಯಸಂಸ್ಕಾರ ಮಾಡುವ ಖರ್ಚು ಇರುತ್ತದೆ. ಆದರೆ ಗೋಮಾತೆಯ ಸಾವಿನ ನಂತರವೂ ಬದುಕಿದ್ದಾಗ ಇದ್ದಷ್ಟೇ ಉಪಯೋಗವು ಇರುತ್ತದೆ. ಆಕೆಯ ದೇಹದ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ....... ಒಂದು ರಾಷ್ಟ್ರದ ಹಿರಿತನ ಹಾಗೂ ಮೌಲ್ಯಗಳ ಅಭಿವೃದ್ಧಿಯನ್ನು ಆ ರಾಷ್ಟ್ರವು ತನ್ನಲ್ಲಿರುವ ಪ್ರಾಣಿವರ್ಗವನ್ನು ಹೇಗೆ ರಕ್ಷಿಸುತ್ತಿದೆ ಎನ್ನುವುದರ ಮೂಲಕ ಮಾಪನ ಮಾಡಬಹುದು. ಗೋಸಂರಕ್ಷಣೆಯು ನನಗೆ ಕೇವಲ ಗೋವುಗಳನ್ನು ಸಂರಕ್ಷಿಸುವುದಾಗಿ ಗೋಚರಿಸುತ್ತಿಲ್ಲ. ಅದು ಈ ಭೂಮಿಯ ಮೇಲಿರುವ ಎಲ್ಲಾ ಅಸಹಾಯಕ, ದುರ್ಬಲ ಜೀವಿಗಳನ್ನು ಸಂರಕ್ಷಿಸುವುದಾಗಿದೆ. ಗೋವುಗಳೆಂದರೆ ಇಡೀ ಉಪಮಾನವ(ssubhuman) ವಿಶ್ವವೇ ಆಗಿದೆ. ‘ನಮ್ಮದು ಹಳ್ಳಿಯ ಜೀವನವಾದ್ದರಿಂದ ಚಿಕ್ಕಂದಿನಿಂದಲೂ ಬೆಳೆದದ್ದು ದನಕರುಗಳ ಒಡನಾಟದಲ್ಲಿಯೇ........                                                                                                                              (ಮು೦ದುವರೆಯುವುದು)

Saturday, December 15, 2012

ಗಮ

ನಿಲುದಾಣವಿದೆಂಬ

ಅರಿವಿದ್ದರೂ

ನಿಲ್ಲದೆ ಚಲಿಸಿದೆ

ಭೂಮಿ ಗುಂಡಗಿದೆ ಎನಲು,

ತಪ್ಪಿತು ತಾಳೆ

ವ್ಯರ್ಥವಾಯ್ತು ವೇಳೆ

ಕ್ರಮಿಸಿದ ಬಿಂದುವ

ಮತ್ತೆ ತಲುಪಲಾಗದೆಂಬ

ಅರಿವಾಗುವ ಮೊದಲು.

Wednesday, December 12, 2012

ಮಲಗಿದ್ದಾನೆ...


ಮಲಗಿದ್ದಾನೆ ಈತ 
ಉದ್ದಂಡ
ಮಣ್ಣನ್ನೇ ನಂಬಿದವನು
ಮಣ್ಣಾಗಲು ಸಜ್ಜಾಗಿ

ತಲತಲಾಂತರದಿಂದ
ತುಂಡು ಭೂಮಿಯಿಂದಲೇ
ಹೊಟ್ಟೆ ಹೊರೆದಿದ್ದರು
ಇವನ ಅಜ್ಜ
ಮುತ್ತಜ್ಜಂದಿರು
ತಲೆಗಾದರೆ
ಕಾಲಿಗಿಲ್ಲವೆಂದಿದ್ದರೂ

ಆದರೀಗ ಆಮಿಷಗಳ
ಬಿಸಿಲುಗುದುರೆ
ಏರಿಹೊರಟವ
ಬೆಳೆಸಾಲ ಕಳೆಸಾಲ...
ಸಾಲಗಳ ಬಲೆಯೊಳಗೇ ...
ಆಕಾಶಕ್ಕೇ ಹಾಕಿದ್ದ ನೂಲೇಣಿ!


ಲಕ್ಷ ಲಕ್ಷ ಎಣಿಸುವ ಕನಸಲ್ಲಿ
ವಾಸ್ತವವನ್ನೇ ಅಲಕ್ಷಿಸಿ
ಆಶ್ರಿತರನ್ನೇ ಅನಾಥರಾಗಿಸಿ
ಚಕ್ರವ್ಯೂಹ ಭೇದಿಸಲಾಗದೇ
ಬಿದ್ದಿದ್ದಾನೆ ಉದ್ದಂಡ
ಜಾಗತೀಕರಣದ ಫಲವೀ
ತಲೆದಂಡ.


Monday, December 10, 2012

ಕಾಲ ಸರಿದ೦ತೆ....

ಈ ಗೋವು

ಮುತ್ತಜ್ಜಿಯ

ಬಳುವಳಿಯ ತಳಿ

ಅವರೋಹಣ ಗತಿಯಲ್ಲಿ

ಸಾಗುತ್ತಿರುವ

ಅ೦ಶಗಳ ವ೦ಶಾವಳಿಅಜ್ಜಿ ಗೋಪೂಜೆ ಮಾಡದೇ

ಹನಿ ನೀರ

ಬಾಯಿಗೆ ಬಿಟ್ಟವರಲ್ಲ

ಅಮ್ಮನೂ

ಕಾರ್ಯ ಪರ೦ಪರೆಯಲೇ

ಅವ್ಯಾಜ ಅರ್ತಿಯಲಿ

ಅಸನವಿಟ್ಟವಳುಸಿ೦ಧು, ಕಾವೇರಿ, ಚಿ೦ತಾಮಣಿ,

ಉಷೆ, ತಾರಾ...

ಪ೦ಚ ಕನ್ಯೆಯರಲ್ಲ

ಮನೆಗೆ ಪ೦ಚ ಪ್ರಾಣಗಳ೦ತೆ

ತಲತಲಾ೦ತರದಿ೦ದ

ಸವಿಹಾಲು ಹರಿಸಿದವರುಕರಿಮಣಿ ಸರದಲಿ

ಬಿಳಿಮುತ್ತ ಕೋದ೦ಥಾ

ಮೈ ಬಣ್ಣ

ಬಾಗು ಕೊ೦ಬು

ಉಬ್ಬು ಹಿಳಲು

ಕಣ್ತು೦ಬುವ ಮೈಮಾಟ

ನೆನಪಿಸುತ್ತಿತ್ತು

ಅಮೃತ ಮಹಲುಈ ಹಸುವಿಗೂ

ಅದೇ ವರ್ಣ ಚಿತ್ತಾರ

ಆದರೆ.....

ಕೊ೦ಬಿಲ್ಲ

ಹಿಳಲಿಲ್ಲ

ಅಸಲಿಗೆ ಹೆಸರೇ ಇಲ್ಲ!

ತು೦ಬು ಕೆಚ್ಚಲಿನದೇ

ಮಹತ್ವ

ಪೂತನಿಯ೦ತೆ!ಸಿರ್ರನೆ ಕೋಪ

ಕೊ೦ಬಿಗೇರಿಸಿ

ಗುಡ್ಡವ ಗುದ್ದಿ

`ಹೂ೦’ಕರಿಸಿ

ಎಚ್ಚರಿಸುತ್ತಿದ್ದ ಚಿ೦ತಾಮಣಿ,

ಮೈ ನೇವರಿಸಿದ೦ತೆ

ಗ೦ಗೆದೊಗಲು ಭುಜಕ್ಕೊತ್ತಿ

ಮುಳ್ಳು ಜಿಹ್ವೆಯಲಿ

ಮೈನೆಕ್ಕುತ್ತಾ

ತು೦ಬು ಪ್ರೀತಿ

ತೋರುತ್ತಿದ್ದ ಉಷೆ, ತಾರೆ...ಈ ಅನಾಮಿಕ ಮಿಶ್ರ ತಳಿಗೋ

ಘನ ಘೋರ ಸ್ಥಿತ ಪ್ರಜ್ಞತೆ

`ಮು೦ದೆ ಬ೦ದರೆ ಹಾಯಲಾರೆ

ಹಿ೦ದೆ ಬ೦ದರೆ ಒದೆಯಲಾರೆ’

ಕರೆದಾಗ ಕ್ಷೀರ ಸುರಿಸುವ

ಯಾ೦ತ್ರಿಕ ಕಾಮಧೇನು!....... ಉಷೆ ಮನೆಯಲೇ ಕಾಲುಚಾಚಿ

ಕಡೆಯುಸಿರೆಳೆದದ್ದು ಪ್ರ

ಹಿತ್ತಲಲ್ಲೇ ಗುದ್ದು ಮಾಡಿ

ಹೂವೇರಿಸಿ

ರೊಟ್ಟಿ ಹಾಕಿ ಅತ್ತಿದ್ದು...

ಎಲ್ಲಾ ಹಚ್ಚ ಹಸಿರು

ಈಗೀಗ ಕರೆಯಲಾಗದ್ದ

ಕಟುಕರಿಗೆ ಹೊಡೆದುದ ಕೇಳಿ

ಬೆಚ್ಚಿದ್ದರು ಅಮ್ಮ

ಭವಿಷ್ಯದತ್ತ ಕಣ್ಣುಕೀಲಿಸಿ....Sunday, December 2, 2012

`ಹನಿ'ಗಳು

ನಷ್ಟ


ಕಳೆದು ಹೋದ

ಆಲಿಕಲ್ಲ

ಹುಡುಕುವ        

ಸಡಗರದಲ್ಲಿ

ಕೈಯಲಿದ್ದುದು

ಕರಗಿ

ನೀರುಸಾಪೇಕ್ಷ

ಕಾರ್ಮುಗಿಲು ಕವಿದಾಗ

ಸ್ಪಷ್ಟವಾಗುವುದು ಮಿಂಚು

ಸ್ವಚ್ಛ ಅಂಬರಕೆ

ಕನಸಲಾಗದ ಪೇಚು!


ವ್ಯರ್ಥ

ಅಂಬರ ತುಂಬಿದ

ಹಿಂಜಿದ ಅರಳೆ

ಹನಿಸಲಾಗದು ಮಳೆ

ತಣಿಸಲಾಗದು ಇಳೆ!