Thursday, December 14, 2023

ಸ್ವೀಟ್ 60' ಯ ವಿಮರ್ಶೆ 'ಜನತಾ ಮಾಧ್ಯಮ' ಪತ್ರಿಕೆಯಲ್ಲಿ🌼


ಸ್ವೀಟ್ 60' ಯ ವಿಮರ್ಶೆ 'ಜನತಾ ಮಾಧ್ಯಮ' ಪತ್ರಿಕೆಯಲ್ಲಿ🌼



 

ಲಲಿತ ಪ್ರಬಂಧ 'ಸ್ವೀಟ್ 60' ಗೆ ವಿಮರ್ಶೆ👌❤️

 ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರಿಂದ ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ಪ್ರೀತಿಯ ವಿಮರ್ಶೆ👌❤️

ಹಿರಿಯ ಲೇಖಕಿ ಶ್ರೀಮತಿ ಪ್ರಭಾಮಣಿ ನಾಗರಾಜ್ ಅವರ ' ಸ್ವೀಟ್ 60 ' ಪ್ರಬಂಧ ಸಂಕಲನವನ್ನು ಓದುತ್ತಾ ಹೋದಂತೆ ಅದು ಒಂದು ಸುಂದರ, ಲಾಲಿತ್ಯಪೂರ್ಣ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಮುನ್ನುಡಿ ಬೆನ್ನುಡಿಗಳ ಹಂಗಿಲ್ಲದೆ ತನ್ನ ಸತ್ವಯುತ ಪ್ರಬಂಧಗಳ ಮೂಲಕವೇ ಗಮನ ಸೆಳೆಯುವಷ್ಟು ಶಕ್ತವಾದ ಈ ಕೃತಿ ನಾನು ಇತ್ತೀಚೆಗೆ ಓದಿದ ಪ್ರಬಂಧ ಸಂಕಲನಗಳಲ್ಲೇ ಮೇರು ಮಟ್ಟದಲ್ಲಿ ನಿಲ್ಲುವಂತಹದ್ದು. ವಸ್ತು, ಬರವಣಿಗೆಯ ಶೈಲಿ, ಅದರಲ್ಲಿರುವ ಸತ್ವ, ರಂಜನೆ, ಮೌಲ್ಯ ಎಲ್ಲಾ ಸಮಪಾಕಗೊಂಡು ಹದವಾದ ಹದಿನೇಳು ಪ್ರಬಂಧಗಳನ್ನು ಓದುಗರಿಗೆ ಲೇಖಕಿ ಉಣಬಡಿಸುತ್ತಾ ಸಾಗುವರು. ಒಮ್ಮೆ ಓದಲು ಪ್ರಾರಂಭಿಸಿದರೆ ಮಾಸದ ಮುಗುಳ್ನಗೆ ಮುಖದಲ್ಲಿ ನೆಲೆಸುತ್ತದೆ.
       ಸಾಹಿತ್ಯ ನಿರ್ಮಿತಿ ಸಾಮಾನ್ಯವಾಗಿ ಆಯಾ ವ್ಯಕ್ತಿಗಳು ಬೆಳೆದಂತಹ ಪರಿಸರ ಹಾಗು ಕಾಲ ಎರಡನ್ನೂ ಅಭಿವ್ಯಕ್ತಿಸುತ್ತದೆ. ಬಾಲ್ಯದಲ್ಲಿ ತಾವು ಧರಿಸುತ್ತಿದ್ದ ಉದ್ದ ಲಂಗ, ರವಿಕೆಗಳಲ್ಲಿ ಒಂದಾದರೂ ಜೇಬಿರದೆ, ಮಂಡಿಯ ಮೇಲಿದ್ದ ತಮ್ಮನ ನಿಕ್ಕರಿನಲ್ಲಿ ಮೂರು ನಾಲ್ಕು ಜೇಬುಗಳಿದ್ದು ಅವು ವಿಶೇಷ ಖಾದ್ಯಗಳಿಂದ ತುಂಬಿ ತುಳುಕುತ್ತಾ ಅವನ ಜಿಹ್ವೆಯನ್ನು ಕ್ರಿಯಾಶೀಲವಾಗಿರಿಸಿ ರಾತ್ರಿ ಎಚ್ಚರವಾದಾಗಲೂ ಚಕ್ಕುಲಿ, ಕೋಡುಬಳೆ ಮುಚ್ಚೋರೆಗಳ ಕಟಂ ಕುಟುಂ ಶಬ್ದ ಕೇಳುತ್ತಾ ಇದ್ದುದನ್ನು ' ಜೇಬಾಯಣ ' ದಲ್ಲಿ ಸುಲಲಿತವಾಗಿ, ನವಿರಾಗಿ ತೆರೆದಿಡುತ್ತಾ ಓದುಗರಿಗೆ ಆಪ್ತವಾಗುತ್ತಾ ಹೋಗುತ್ತಾರೆ. ಇಂತಹ ಜೇಬುಗಳಿಂದ ಉಂಟಾದ ವಿಶೇಷ ಶಕ್ತಿ ಸಂಚಯನದಿಂದ ಫೈಟಿಂಗ್ ನಲ್ಲಿ ಆತ ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದ ಬಗೆಯನ್ನು ಬಹಳ ವಿನೋದವಾಗಿ ದಾಖಲಿಸಿದ್ದಾರೆ. ಗಿಡದಲ್ಲಿ ಹೂವು ಅರಳಿದಂತೆ ಸಹಜವಾಗಿ ನಗು ಉಕ್ಕಿಸುವ ಶೈಲಿ ಇವರದು.
       ಹೊಸ ಮನೆಗೆ ಬಂದ ಹೊಸತರಲ್ಲಿ ರಾತ್ರಿ ಉಳಿದ ಅನ್ನವನ್ನು ಆಚೆ ಹಾಕಲು ಕೊಂಡೊಯ್ದು ಆ ಕಡೆ ನಾಯಿಗಳನ್ನು ಏನೆಂದು ಕರೆಯುತ್ತಾರೋ ಎಂದು ಯೋಚಿಸುತ್ತಾ ಶ್ವಾನಗಳಿಗಾಗಿ ದೃಷ್ಟಿ ಹಾಯಿಸುವಾಗ ಸೂಕರವೊಂದು ವಿಚಿತ್ರ ರೀತಿಯಲ್ಲಿ ಗುಟುರು ಹಾಕುತ್ತಾ ನುಗ್ಗಿ ಬಂದಾಗ ಅನ್ನದ ತಟ್ಟೆಯನ್ನು ಎಸೆದು ಒಳಗೋಡಿದ್ದು.... ರಾಡಿನೀರಿನಲ್ಲಿ ಕ್ರೀಡಿಸಿದ ನಂತರ ಸೂರ್ಯಸ್ನಾನ ಮಾಡಿ ಮೈಯೊಣಗಿಸಿಕೊಂಡ ವರಾಹಗಳು ಆಯುರ್ವೇದ ಚಿಕಿತ್ಸೆ ಪಡೆದು ಮೃತ್ತಿಕೆಯನ್ನು ಮೈಗೆಲ್ಲಾ ಬಳಿದುಕೊಂಡ ಆರೋಗ್ಯಾನ್ವೇಷಿಗಳಂತೆ ಕಾಣುತ್ತಿದ್ದವು ಎಂಬಂತಹ ವಿವರಣೆಗಳು ಇಲ್ಲಿನ ಪ್ರಬಂಧದ ಚಿತ್ರಗಳಿಗೆ ಚಿನ್ನದ ಅಂಚನ್ನು ಕಟ್ಟಿಕೊಡುತ್ತದೆ.
        ' ಸ್ವೀಟ್ 60 ' ಪ್ರಬಂಧದಲ್ಲಿ ಬಾಲ್ಯವನ್ನು ಎಷ್ಟು ಸಡಗರ, ಸಂಭ್ರಮ, ಕುತೂಹಲದಿಂದ ಕಳೆಯುತ್ತೇವೆಯೋ ವೃದ್ಧಾಪ್ಯವನ್ನೂ ಕೂಡ ಅದೇ ರೀತಿ ನೋಡಬೇಕೆಂಬ ಉಮೇದು ಲೇಖಕಿಯದು. ಅರವತ್ತು ತಲುಪುವ ಎಲ್ಲಾ ಮಾನವ ಜೀವಿಗಳೂ ಹದಿನಾರು ಎಂದು ಕರೆಸಿಕೊಳ್ಳುವ ಮೋಹ ಪರ್ವವನ್ನು ದಾಟಿಯೇ ಬಂದಿರುತ್ತವೆ. ಬಲ್ಲವರು ಮಾತ್ರ ಬಲ್ಲರು ಈ 60ರ ಬಲ್ಲಿದ ರುಚಿಯ, ಕಾಲಾತೀತವಾದ ಈ ಬದುಕಿನಲ್ಲಿ ಎಂಥಾ ಆನಂದವಿದೆ ! ಎಂದು ರಸವತ್ತಾಗಿ ನಿರೂಪಿಸುತ್ತಾ ಹೋಗುವರು.
     ನೆನಪುಗಳನ್ನು ಆಧರಿಸಿ ಹುಟ್ಟಿರುವ ಈ ಪ್ರಬಂಧಗಳಿಗೆ ಆತ್ಮಕಥನದ ಗುಣವೂ ಸೇರಿಕೊಂಡಿದೆ. ಇಲ್ಲಿ ಜೀವಂತ ಪಾತ್ರಗಳಿವೆ. ಅವುಗಳಲ್ಲೆಲ್ಲ ಮತ್ತೆ ಮತ್ತೆ ಕಾಡುವುದು ಅವರ ಅಮ್ಮನ ಪಾತ್ರ. ' ಮುಂಜಾನೆಯ ಸವಿ ನಿದ್ದೆಯ ಹೊದಿಕೆ ಸರಿಸುವ ನಗೆ ಮೊಗದ ಅಮ್ಮಾ, ಬಾಚಿದ ತುರುಬಿಗೆ ದಂಡೆಮಲ್ಲಿಗೆ, ನೊಸಲ ಕುಂಕುಮದ ಸಿಂಗಾರ, ಅಂಗಳಕ್ಕೆ ರಂಗೋಲಿ ಚಿತ್ತಾರ....' ಎನ್ನುತ್ತಾ ಅಮ್ಮನ ಬಗ್ಗೆ ತಾವೇ ಬರೆದ ಕವನದ ಸಾಲುಗಳನ್ನು ನೆನೆಯುವರು. ತನ್ನಮ್ಮ ಅವಿಭಕ್ತ ಕುಟುಂಬದ ಅಂತ್ಯವಿಲ್ಲದ ಕೆಲಸಗಳನ್ನು ಮಾಡುತ್ತಾ ಮೂಗಿಗೆ ಕವಡೆ ಕಟ್ಟಿದ ಮೂಕಪಶುವಿನಂತೆ ದುಡಿಯುತ್ತಿದ್ದುದು... ಹಗಲೆಲ್ಲಾ ಮನೆ, ಜಮೀನಿನಲ್ಲಿ ದುಡಿಯುತ್ತಿದ್ದ ಅಮ್ಮ ರಾತ್ರಿ, ಎಲ್ಲಾ ಕೆಲಸಗಳೂ ಮುಗಿದ ನಂತರ ಬುಡ್ಡಿ ದೀಪದಲ್ಲೇ ಪುಸ್ತಕಗಳನ್ನು ಓದುತ್ತಿದ್ದುದು, ಲೈಬ್ರರಿಯಿಂದ ತಂದು ಕೊಡುತ್ತಿದ್ದ ಕಾದಂಬರಿಗಳನ್ನು ರಾತ್ರಿ ಎಲ್ಲಾ ಕುಳಿತು ಓದಿ ಮುಗಿಸುತ್ತಿದ್ದುದು, ಇದರೊಂದಿಗೆ ಅವರ ಮನೆಯಲ್ಲೂ ಓದಿನ ವಾತಾವರಣವಿದ್ದು ಅವರ ತಂದೆ, ಸೋದರತ್ತೆ, ಅಕ್ಕ ಎಲ್ಲರೂ ತಾವು ಓದಿದ ಪುಸ್ತಕಗಳ ಬಗ್ಗೆ ಬಿಡುವಿನ ಸಮಯ ಕುಳಿತು ಚರ್ಚಿಸುತ್ತಿದ್ದುದನ್ನು ನೆನೆಯುವರು. ಬಹುಶಃ ಈ ಒಂದು ಅಧ್ಯಯನಶೀಲತೆ ಹಾಗೂ ಸಾಹಿತ್ಯಕ ವಾತಾವರಣವೇ ಲೇಖಕಿಯ ಬರಹದ ಗಟ್ಟಿತನಕ್ಕೆ ಒಂದು ಸೂಕ್ತ ಬುನಾದಿಯಾಗಿರಬಹುದು.
      ' ಕರವಸ್ತ್ರೋಪಾಖ್ಯಾನ 'ದಲ್ಲಿ ಕೈಯಲ್ಲಿ ಹಿಡಿಯುವ ವಸ್ತ್ರವೇ ಕರ ವಸ್ತ್ರವಾಗಿ ಜೇಬಿನಲ್ಲಿ ಬೆಚ್ಚಗೆ ಕೂರುವುದರಿಂದ ಅದು ಜೇಬು ವಸ್ತ್ರವೆಂದೂ, ಲೇಡೀಸ್ ಕರ್ಚಿಫ್ ಗಳು ಬಣ್ಣದ ಹೂಗಳಿಂದ ಕೂಡಿ ಸುಂದರವಾಗಿದ್ದರೂ ಕೇವಲ ಅಂಗೈಯಗಲವಿದ್ದು ಒಂದು ಕಿರುಬೆರಳನ್ನು ಒರೆಸಲೂ ಸಾಧ್ಯವಾಗದೆ ಅದನ್ನು ಕಿರುವಸ್ತ್ರ ವೆನ್ನಬಹುದು ಎನ್ನುವರು. ಕರಕ್ಕೆ ಚೀಫ್ ಆಗಿರುವ ಎಂದರೆ... ಕೈಗೆ ಪ್ರಧಾನವಾಗಿರುವ ವಸ್ತ್ರವಾದ್ದರಿಂದ ಇದು ಕರ್ಚೀಫ್ ಆಗಿರಬಹುದು ಎನ್ನುತ್ತಾ ಕರ್ಚಿಫ್ ಪದದ ಮೂಲವನ್ನು ಕೆದಕುವರು. ಜನ್ಮಕ್ಕಂಟಿದ ನೆಗಡಿಯವರಿಗೆ ಕರ್ಚಿಫ್ ಕೈಯಲ್ಲಿರಲೇಬೇಕು ಅದನ್ನು ಅವರು ಕೈಗೂ ಮೂಗಿಗೂ ಸೇತುವಾಗಿ ಬಳಸುವರು. ಗಾಂಧಾರಿ ಕಣ್ಣಿಗೆ ಕಟ್ಟಿಕೊಂಡ ಕರವಸ್ತ್ರದಿಂದ ಮಹಾ ಗ್ರಂಥಗಳಲ್ಲೂ ಕರ್ಚೀಫ್  ಸ್ಥಾನ ಪಡೆದುಕೊಂಡಿತೆಂದು ಹೇಳುವಾಗ ನಗುವಿನ ಜೊತೆ ಇನ್ನೊಂದು ಮಗ್ಗುಲಿನಿಂದ ಹೊಸ ದೃಷ್ಟಿಕೋನದ ಗಂಭೀರ ಎಳೆಯೊಂದು ಕೂಡಾ ನಮ್ಮ ಚಿಂತನೆಯ ಭಾಗವಾಗುತ್ತದೆ.
    ಯಾವುದೇ ಖಾಯಿಲೆಯಾಗಲೀ ಅದಕ್ಕೊಂದು ಘನತೆ ಇರುತ್ತದೆ. ಆದರೆ ಈ ಕೆಮ್ಮು ಅಂತಹ ಯಾವುದೇ ಮರ್ಯಾದೆಯನ್ನೂ ಪಡೆದು ಬಂದಿಲ್ಲ. ಒಮ್ಮೆ ಕೆಮ್ಮಲು ಪ್ರಾರಂಭಿಸಿದರೆ ' ಹಾಳು ಅನಿಷ್ಠ ಕೆಮ್ಮು....' ಎನ್ನುತ್ತಾ ಕೆಮ್ಮಿನೊಂದಿಗೆ ಕೆಮ್ಮುವವರನ್ನೂ ತುಚ್ಚೀಕರಿಸುವುದನ್ನು ವಿನೋದವಾಗಿ ನಿರೂಪಿಸುವರು. ತೆಲುಗಿನ ರಾಮುಲು, ಕೃಷ್ಣಲುವಿನಂತೆ ಕೆಮ್ಮುಲು ಕೂಡ ತೆಲುಗಿನದೇ ಇರಬಹುದು ಎಂದು ಹೇಳುವಾಗ ನಗೆ ಉಕ್ಕಿ ಬರುವುದು. ಇಂತಹ ಸಾಲುಗಳು ಓದಿನ ಖುಷಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ.
      ಸಹಜ, ನಿರ್ಮಲ ನಗೆ ಹೊಮ್ಮಿಸುವ ಶುದ್ಧ ಹಾಸ್ಯ ಲಹರಿಯ ಹತಾರಗಳು ಇವರ ಬತ್ತಳಿಕೆಯಲ್ಲಿ ಸಾಕಷ್ಟು ಇವೆ. ಆಧುನಿಕ ಸಂವೇದನೆ, ಸೂಕ್ಷ್ಮತೆಗಳ ಜೊತೆಗೆ ಭಾಷೆಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವ ಕಲೆ ಲೇಖಕಿಗೆ ಒಲಿದಿದೆ. ಮಾನವೀಯ ಮೃದು ಮಧುರ ಅನುಭವಗಳನ್ನು ಬಿಚ್ಚಿಡುತ್ತಾ ಅಕ್ಷರಗಳ ಮೂಲಕ ಹಂಚುವ ಪರಿ ನಿಜಕ್ಕೂ ಅಭಿನಂದನೀಯ. ಓದಿ ಮುಗಿದು ಎಷ್ಟೋ ಹೊತ್ತಾದರೂ ಮನದಲ್ಲಿ ಕೆಲವು ಪದಗಳು, ಸಾಲುಗಳು ರಿಂಗಣಿಸುತ್ತಿರುತ್ತವೆ. 2018 ರ ನುಗ್ಗೆ ಹಳ್ಳಿ ಪಂಕಜ ದತ್ತಿನಿಧಿ ಬಹುಮಾನವೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಈ ' ಸ್ವೀಟ್ 60 ' ಪ್ರಬಂಧ ಸಂಕಲನ ಭಾಜನವಾಗಿದೆ. ಅತ್ಯುತ್ತಮ ಮನಸ್ಸಿನ ಲಹರಿ ಮಿಡಿತಗಳಂತಿರುವ ಈ ಪ್ರಬಂಧಗಳನ್ನು ಎಲ್ಲರೂ ಒಮ್ಮೆಯಾದರೂ ಓದಿ ಆನಂದಿಸಬೇಕು.



(ನವೆಂಬರ್17,2023ರ FB ಯಲ್ಲಿ ಪ್ರಕಟವಾಗಿದೆ.)