Friday, November 21, 2014

ಮತ್ತೆ ಮತ್ತೆ .......ಅ೦ದು ನನ್ನ ವೃತ್ತಿ ಜೀವನದ ಕಡೆಯ ದಿನ. ಆಗಲೇ ಎಲ್ಲರೂ ಬೀಳ್ಕೊಡುಗೆ ಸಮಾರ೦ಭ ನಡೆಯಲಿರುವ ನಮ್ಮ ಕಛೇರಿಯ ಸಭಾ೦ಗಣದತ್ತ ಹೊರಟಿದ್ದರು. ನಾವು ನಮ್ಮ ವಿಷಯ ಪರಿವೀಕ್ಷಕರ ಕೊಠಡಿಯಿ೦ದ ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಹೊರಡುತ್ತಿದ್ದೆವು. ಅಷ್ಟರಲ್ಲಿ ಒಬ್ಬರು ಕೃಶಕಾಯರಾದ ಅಜ್ಜಿ  ಬಾಗಿಲ ಬಳಿ ಬ೦ದು, `ಬೆಳಗಿನಿ೦ದಲೂ ತಿ೦ಡಿಯನ್ನೂ ತಿ೦ದಿಲ್ಲ. ಎರಡು ರುಪಾಯಿ ಕೊಡಿ.' ಎ೦ದು ಕೈ ನೀಡಲೋ ಬೇಡವೋ ಎ೦ಬ೦ತೆ ಅಳುಕುತ್ತಾ ಕೈ ಚಾಚಿದರು. ಯಾರಿಗೂ ಅವರನ್ನು ಗಮನಿಸುವಷ್ಟು ವ್ಯವಧಾನವಿರಲಿಲ್ಲ.  ಅವರ ಬಳಿ ಹೋಗಿ, ನೂರು ರೂ. ಅವರ ಕೈಗಿಟ್ಟು, `ಬೇರೆ ಯಾರನ್ನೂ ಕೇಳಬೇಡಿ. ಎಲ್ಲರೂ ಗಡಿಬಿಡಿಯಲ್ಲಿದ್ದಾರೆ,' ಎ೦ದೆ.  ನಮ್ಮ ಕಛೇರಿಯ  ಬಹುತೇಕ  ನೌಕರರು ಎರಡು ರುಪಾಯಿಯ೦ತೆ  ನೀಡಿದರೆ ಬಹುಶಃ ಅಷ್ಟಾಗಬಹುದೆ೦ಬ ನನ್ನ ಲೆಕ್ಕಾಚಾರವನ್ನು ಅತ್ತ ಸರಿಸಿ ಮುನ್ನಡೆದೆ. ಆಕೆ ನ೦ತರ ಕಾಣಲಿಲ್ಲ. ಮತ್ತೆ ಮತ್ತೆ ಇ೦ತಹುದೇ ಪರಿಸ್ಥಿತಿ ಎದುರಾಗುವುದೇಕೆ? ಏಕೆ  ಈ ದುಃಸ್ಥಿತಿ?

Tuesday, November 11, 2014

ಮರಳಿ ಗೂಡಿಗೆ

ದಿನಾ೦ಕ:೩೧-೧೦-೨೦೧೪ರ೦ದು ಆತ್ಮೀಯ ಸಹೋದ್ಯೋಗಿಗಳಿ೦ದ ಬೀಳ್ಗೊ೦ಡು ಕಛೇರಿಯಿ೦ದ ಹಿ೦ತಿರುಗಿದ ನ೦ತರ ಮನೆಯಲ್ಲಿ ತೆಗೆದ ಚಿತ್ರಗಳು :)

Tuesday, November 4, 2014

ಕವನ -- ಒಳಗಿನೊಳಗು

ದಿನಾಂಕ೦೨-೧೦-೨೦೧೪ ರ೦ದು ನಡೆದ` ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನವನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ:ಒಳಗಿನೊಳಗು
ಅಂದು........
ಜನಜಂಗುಳಿಯ ನಡುವೆ
ಹೆಜ್ಜೆಯಿಡುವಾಗ
ಕಂಡುಬರುತ್ತಿದ್ದುದು ಇಷ್ಟೇ:
ಕಣ್ಣು, ಕಿವಿ, ಮೂಗು,ಬಾಯಿ
ಎತ್ತರ-ಗಿಡ್ಡ, ತೆಳು-ತೋರ
ಕಪ್ಪು-ಬಿಳುಪು.......
ಅಂಗಾಂಗಗಳಷ್ಟೇ ನರನೆಂಬಂಥಾ
ತಲೆ ಚಿಟ್ಟೆನಿಸುವ ಆಕಾರಗಳ ಸಾಲು ಸಾಲು,

ಮುಂದೆಮುಂದೆ ಸಾಗಿದಾಗ
ಕಂಡದ್ದೇ ಕಂಡು ರೋಸಿಹೋದಂತೆ
ಕೇಳಲಾರಂಭಿಸಿದ ಮಾತುಗಳು!
ಕೋಪ-ಆಕ್ರೋಶ, ದುಃಖ-ದುಮ್ಮಾನ
ನೋವು-ನಲಿವುಗಳ ಮೇಳ
ಮನದ ಪಿಸುಮಾತುಗಳು
ಹುಸಿಮುನಿಸುಗಳು
ಗುಜುಗುಜು, ಗಲಿಬಿಲಿ
ಎದುರಾದವರ ಭಾವಗಳ ವಿಶ್ಲೇಷಣೆಯಲೇ
ಕೊಚ್ಚಿಹೋಗುವ ಹುಚ್ಚುತನ
ನಿಶ್ಶಬ್ದವೆಂದರೇನರಿಯದ
ಅಂತ್ಯವಿಲ್ಲದ ಪಯಣ!

ಸಂತೆಯೊಳಗೆ ಸಂತನನರಸುವುದೆಲ್ಲಿ?
ದೇಹ-ಮನಸುಗಳ
ಮೀರಲಾಗದ ಬದುಕೆ?
ಇದಮಿತ್ಥಂ? ಎಂದು
ಪರಿಗಣಿಸಲಾಗದೇ
ತೊಳಲುವ ಜೀವಕೊಂದು
ಆಶಾಕಿರಣ!

ಈಗ ದೇಹಗಳ
ಸಾಲುಸಾಲೇ ಸಾಗಲಿ
ಮನಗಳೊಳಗೆ ಮಹಾ
ಸಮರವೇ ಜರುಗಲಿ
ಕಾಣಿಸದು
ಕೇಳಿಸದು!
ಆಳಆಳಕೆ ಇಳಿಯಬಯಸುತಿದೆ ಜೀವ
ಒಳಗಿನೊಳಗನು ಒಳಗೊಂಡಂತೆ
ಎಲ್ಲರೊಳಗಿನ ಚೈತನ್ಯವೊಂದೇ
ಎನಿಸುವ ಶಾಂತ ಭಾವ!                                       

 

Sunday, November 2, 2014

`ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿ:

ಕರ್ನಾಟಕ ಸಾಹಿತ್ಯ ಅಕಾಡಮಿವತಿಯಿ೦ದ ಅಕಾಡಮಿಯ ಸುವರ್ಣ ಸ೦ಭ್ರಮ ಮತ್ತು ರಾಜ್ಯೋತ್ಸವದ ಪ್ರಯುಕ್ತ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊ೦ದಿಗೆ `ಜಿಲ್ಲಾ ಕವಿಗೋಷ್ಠಿ'ಯು ಈ ದಿನ ನಡೆಯಿತು. ಕವಿಗೋಷ್ಠಿಯಲ್ಲಿ ಕವನವನ್ನು ವಾಚಿಸಲು ನನ್ನನ್ನು ಆಹ್ವಾನಿಸಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾದ ರೂಪ ಹಾಸನ ಹಾಗೂ ಸ೦ಬ೦ಧಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ: