Sunday, June 26, 2011

ಮನದ ಅಂಗಳದಿ.........೪೬. 'ಆನಂದ' ಮಂತ್ರ

'ಮಂತ್ರ' ಎನ್ನುವ ಪದವೇ ಸಂಸ್ಕೃತದಲ್ಲಿರುವ ಕೆಲವು ಪದಸಮೂಹಗಳ ನೆನಪನ್ನು ತರುತ್ತದೆ. ಇದುವರಗೆ ನಮ್ಮ ತಿಳುವಳಿಕೆಗೆ ನಿಲುಕಿರುವುದು ಅದೇ ಆಗಿದೆ. ಜೊತೆಗೆ ಸ್ತ್ರೀಯರು ಹಾಗೂ ಕೆಳ(!)ವರ್ಗದವರು ಮಂತ್ರೋಚ್ಛಾರಣೆ ಮಾಡಬಾರದು ಎನ್ನುವ ಮೌಢ್ಯವು 'ಮಂತ್ರ' ಎನ್ನುವ ಪದವನ್ನೇ ನಿಗೂಢಗೊಳಿಸಿದೆ. ಆದರೆ 'ಮಂತ್ರ' ಎನ್ನುವ ಪದದ ಅರ್ಥವೈಶಾಲ್ಯ, ಅದನ್ನು ಸದಾ ನಮ್ಮದಾಗಿಸಿಕೊಳ್ಳುವುದರಿಂದ ದೊರೆಯುವ ಆನಂದ ಇವುಗಳನ್ನು ತಿಳಿದರೆ ಅದರ ಉತ್ತಮ ಪ್ರಯೋಜನವನ್ನು ಪಡೆಯಲು ಅನುಕೂಲವಾಗುತ್ತದೆ.

ಅನೇಕ ದಿನಗಳಿಂದ ಓದಲು ಕಾತರಿಸಿದ್ದ ಸ್ವಾಮಿ ರಾಮರವರ ಆಧ್ಯಾತ್ಮಿಕ ಅನುಭವಗಳ ಕೃತಿಯಾದ, 'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ,' (ಅನುವಾದಕರು- ಡಿ. ಕೆ. ಶ್ಯಾಮಸುಂದರ ರಾವ್) ಪುಸ್ತಕವನ್ನು ಇತ್ತೀಚೆಗೆ ನನ್ನ ಮಗಳು ತಂದುಕೊಟ್ಟಳು. (ಈಗ ಆಮೆ ವೇಗದಲ್ಲಿ ಅದರ ಓದು ಸಾಗಿದೆ!) ಅದರಲ್ಲಿ 'ಮಂತ್ರ'ಗಳ ಬಗ್ಗೆ ಸ್ವಾಮಿ ರಾಮರವರ ಅನುಭವಗಳು ಬಹಳ ಕುತೂಹಲಭರಿತವೂ, ಚಿಂತನಯೋಗ್ಯವೂ ಆಗಿದ್ದು ಹೀಗೆ ಹೇಳುತ್ತಾರೆ,

'ಗಾಢವಾದ ಧ್ಯಾನಮಗ್ನ ಸ್ಥತಿಯಲ್ಲಿರುವ ಮಹರ್ಷಿಗಳ ಅನುಭೂತಿಯಿಂದ ಹೊಮ್ಮಿದ ಒಂದು ಉಚ್ಚಾರಣಾಂಶ, ಒಂದು ಶಬ್ದ, ಒಂದು ಪದ ಅಥವಾ ಒಂದು ಪದಸಮುಚ್ಚಯವನ್ನು 'ಮಂತ್ರ' ಎನ್ನುತ್ತಾರೆ. ಇದು ಮಾನವ ಜೀವಿಗಳು ಮಾತನಾಡುವ ಭಾಷೆಯಲ್ಲ. ಅತಿ ಪ್ರಜ್ಞಾವಸ್ಥೆಯಿಂದ ಪಡೆದ ಶಬ್ದಗಳು ಸಾಧಕನನ್ನು ಆತ ಪರಿಪೂರ್ಣ ಶಾಂತಸ್ಥಿತಿಯನ್ನು ಮುಟ್ಟುವ ತನ್ನ ಉನ್ನತೋನ್ನತ ಅನುಭವ ಸ್ತರಗಳಿಗೆ ಕೊಂಡೊಯ್ಯುತ್ತವೆ. ಅರಿವಿನ ಪರಿಧಿ ವಿಸ್ತಾರವಾದ ಹಾಗೆಲ್ಲಾ ಮಂತ್ರ ಹೆಚ್ಚು ಹೊಸ ಅರ್ಥಗಳನ್ನು ಹೊರಗೆಡಹುತ್ತದೆ. ಅದು ಪ್ರಜ್ಞಾವಸ್ಥೆಯ ಉನ್ನತ ಸ್ತರದ ಅರಿವನ್ನು ಮೂಡಿಸುತ್ತದೆ. ಜನಜಂಗುಳಿಯ ಸ್ಥಳದಲ್ಲಿ ಮಂತ್ರಗಳನ್ನು ಮಾರಾಟಕ್ಕಿಟ್ಟು ಉಜ್ವಲ ಪರಂಪರೆಯನ್ನು ಸ್ವಾರ್ಥಸಾಧನೆಗೆ ಬಳಸಿಕೊಳ್ಳುವುದು ಅವಿವೇಕದ ಸಂಗತಿ.

ಮಂತ್ರವು ಮಾನವ ಜೀವಿಯ ಹಾಗೆಯೇ ಸ್ಥೂಲ, ಸೂಕ್ಷ್ಮ, ಅತಿ ಸೂಕ್ಷ್ಮ, ಸೂಕ್ಷ್ಮಾತಿಸೂಕ್ಷ್ಮವಾದ ಹಲವು ಕೋಶಗಳನ್ನು ಹೊಂದಿದೆ. ಉದಾಹರಣೆಗೆ 'ಓಂಕಾರ' ನಾದ.........

ಜನರು ಪ್ರಾಪಂಚಿಕ ವಸ್ತುಗಳನ್ನು ಸಂಗ್ರಹಿಸುವಂತೆ ನಾನು ಮಂತ್ರಗಳನ್ನು ಸಂಗ್ರಹಿಸುವ ಪರಿಪಾಠವನ್ನು ಹೊಂದಿದ್ದೆ. ನನಗೆ ಸಿಗಬಹುದಾದ ಯಾವುದಾದರೂ ಹೊಸ ಮಂತ್ರ ಈಗಾಗಲೇ ನನ್ನಲಿರೋ ಮಂತ್ರಕ್ಕಿಂತಲೂ ಉಪಯುಕ್ತವಾದದ್ದು ಇದ್ದೀತು ಎಂಬ ನಿರೀಕ್ಷೆ ನನ್ನದು. ಕೆಲಸಲ ನನನ್ನು ಸಹಪಾಠಿಗಳಿಗೆ ಹೋಲಿಸಿಕೊಂಡು 'ನನ್ನ ಮಂತ್ರ ಅವನ ಮಂತ್ರಕ್ಕಿಂತ ಉತ್ತಮವಾದದ್ದು,' ಎಂದು ಆಲೋಚಿಸುತ್ತಿದ್ದೆ. ನಾನಾಗ ತೀರಾ ಅಪಕ್ವಸ್ಥಿತಿಯಲ್ಲಿದ್ದೆ. ಅದನ್ನು 'ಗೀಳಿನ ಆಧ್ಯಾತ್ಮಿಕತೆ' ಎನ್ನುತ್ತೇನೆ ನಾನು.

ಹಿಮಾಲಯದ ದಟ್ಟವಾದ ಕಾಡಿನಲ್ಲಿ ಉತ್ತರಕಾಶಿ ಮತ್ತು ಹರ್ ಸಿಲ್ ಪ್ರದೇಶಗಳ ನಡುವಿನ ಪ್ರದೇಶದಲ್ಲಿ ಒಬ್ಬ ಸಾಧು ಶಾಂತವಾಗಿ ವಾಸಿಸುತ್ತಿದ್ದರು. ನಾನು ಅವರನ್ನು ನೋಡುವುದಕ್ಕೆ ಹೋದೆ. ಆಗ ಅವರು, 'ನೀನು ಬಂದ ಉದ್ದೇಶ ಏನು?' ಎಂದು ವಿಚಾರಿಸಿದರು.

'ಒಂದು ಮಂತ್ರವನ್ನು ಪಡೆಯಲು ಬಂದೆ,' ನಾನು ಸ್ಪಷ್ಟಪಡಿಸಿದೆ.

'ನೀನು ಸ್ವಲ್ಪ ಕಾಲ ಕಾಯಬೇಕಾಗುತ್ತೆ.' ಹೇಳಿದರವರು.

ಪಾಶ್ಚಾತ್ಯರು ಒಂದು ಮಂತ್ರ ಕಲಿಯಲು ಹೋದರೆ ಎಷ್ಟಾದರೂ ಹಣ ಖರ್ಚು ಮಾಡಲು ತಯಾರಿರುತ್ತಾರೆ. ಆದರೆ ಕಾಯೋದಕ್ಕೆ ತಯಾರಿರೋದಿಲ್ಲ. ನಾನೂ ಹಾಗೇ ಹೇಳಿದೆ, 'ಸ್ವಾಮೀಜಿ, ನನಗೆ ಸಮಯವಿಲ್ಲ.'

'ಹಾಗಾದರೆ ಮುಂದಿನ ವರ್ಷ ಬಾ.'

'ನಾನು ಈಗ ಇಲ್ಲೇ ಉಳಿದರೆ ಎಷ್ಟು ದಿನ ಕಾಯಬೇಕಾಗುತ್ತದೆ?'

'ಎಷ್ಟು ದಿನ ನೀನಿಲ್ಲಿರಬೇಕು ಅಂತಾ ನನಗನಿಸುತ್ತದೋ ಅಷ್ಟು ದಿನ ನೀನು ಇರಬೇಕಾಗುತ್ತದೆ.' ಸ್ವಾಮಿ ಖಂಡಿತವಾಗಿ ಹೇಳಿದರು.

ಸಮಾಧಾನದಿಂದ ನಿರೀಕ್ಷಣೆ ಮಾಡಿದೆ. ಒಂದು ದಿನ, ಎರಡು ದಿನ, ಮೂರು ದಿನ.. ಆದರೂ ಸ್ವಾಮಿ ಮಂತ್ರ ನೀಡಲಿಲ್ಲ. ನಾಲ್ಕನೇ ದಿನ, 'ನಿನಗೆ ಒಂದು ಮಂತ್ರವನ್ನು ಹೇಳಿಕೊಡಬೇಕು ಅಂತಾ ತೀರ್ಮಾನಿಸಿದ್ದೇನೆ. ಆದರೆ ಸದಾ ಅದನ್ನು ನೆನಪಿಟ್ಟುಕೊಂಡೇ ಇರ್‍ತೀನಿ ಅನ್ನೋ ಪ್ರಮಾಣ ಮಾಡ್ಬೇಕು ನೀನು.' ಎಂದರು. ಪ್ರಮಾಣ ಮಾಡಿದೆ.........

ಗಂಗೆಯ ತೀರಕ್ಕೆ ಕರೆದೊಯ್ದರು. 'ನಾನು ಈ ಮಂತ್ರವನ್ನು ಮರೆಯುವುದಿಲ್ಲ'ವೆಂದು ಅನೇಕ ಭಾರಿ ಪ್ರಮಾಣಮಾಡಿ ಪುನರುಚ್ಛರಿಸಿದೆ. ಆದರೂ ಅವರು ವಿಳಂಬ ಮಾಡುತ್ತಾ ಇದ್ದರು. ಕೊನೆಗೆ, 'ಎಲ್ಲಾದರೂ ಇರು, ಹರ್ಷಚಿತ್ತನಾಗಿರು. ಇದೇನೇ ಮಂತ್ರ. ಸದಾ ಕಾಲ, ಒಂದು ವೇಳೆ ಜೈಲಿಗೆ ಹಾಕಲ್ಪಟ್ಟರೂ ಗೆಲುವಾಗಿರು. ನೀನು ಎಲ್ಲಿಯೇ ಇದ್ದರೂ, ನರಕ ಸದೃಶ ಸ್ಥಳವಾದರೂ ಸರಿ. ಅಲ್ಲೇ ಒಂದು ಸ್ವರ್ಗವನ್ನು ಸೃಷ್ಟಿಮಾಡು. ಮಗೂ ನೆನಪಿಡು, ಹರ್ಷಚಿತ್ತತೆಯನ್ನು ನೀನು ನಿನಗಾಗಿಯೇ ಸೃಜಿಸಬೇಕು. ನನ್ನ ಈ ಮಂತ್ರವನ್ನು ನೆನಪಿಟ್ಟುಕೊ.'

ನನಗೆ ತುಂಬಾ ಸಂತೋಷ, ಬಹಳಾ ಬೇಸರ, ಎರಡೂ ಆದದ್ದುಂಟು. ಬೇಸರಕ್ಕೆ ಕಾರಣವೆಂದರೆ, ಯಾವುದಾದರೂ ವಿಶಿಷ್ಟವಾದ ಶಬ್ದ ಸಮುಚ್ಚಯವನ್ನು ಜಪಿಸಬೇಕಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿಕೊಂಡಿದ್ದು. ಈ ಮಂತ್ರವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಮಾತ್ರವಲ್ಲ ಇದು ಯಾವಾಗಲೂ ಯಶಸ್ವಿಯಾಗಿರುವುದನ್ನು ಕಂಡಿದ್ದೇನೆ. ತನ್ನನ್ನು ತಾನೇ ಗುಣಪಡಿಸಿಕೊಳ್ಳಲು ರಾಮಬಾಣ ಈ ಮಂತ್ರ.'

ಇದಲ್ಲದೆ ಜೇನುನೊಣಗಳೊಡನೆ ಮಾತನಾಡ ಬಲ್ಲ 'ಮಧುಕರ ಮಂತ್ರ' ಕಲಿತು ಆದ ಅನುಭವದ ಬಗ್ಗೆ ತಿಳಿಸುತ್ತಾರೆ. ತಮ್ಮ ಗುರುಗಳು ಎಷ್ಟೇ ಬೇಡವೆಂದಿದ್ದರೂ ಕೇಳದೆ 'ಪ್ರಯೋಗಶಾಸ್ತ್ರ'ವೊಂದನ್ನು ರಹಸ್ಯವಾಗಿ ಓದಿ ಮಂತ್ರವನ್ನು ಪಠಿಸುತ್ತಾ ಭ್ರಾಂತಿಗೆ ಒಳಗಾಗಿ ಅಪಾಯಕ್ಕೆ ಗುರಿಯಾದದ್ದನ್ನು ವಿವರಿಸುತ್ತಾ, 'ಭ್ರಮೆಗಳೇನಿದ್ದರೂ ಅಶುದ್ಧ ಹಾಗೂ ಅಪಕ್ವ ಮನಸ್ಸಿನ ಉತ್ಪನ್ನಗಳು. ಮನಸ್ಸು ಶುದ್ಧವಾಗಿದ್ದಾಗ ಮತ್ತು ಅಂತರ್ಮುಖಿಯಾದಾಗ ಮಂತ್ರ ಸಹಕಾರಿಯಾಗುತ್ತದೆ. ಮಂತ್ರದ ಅರ್ಥವನ್ನು ತಿಳಿಯದ ಹೊರತು, ಉಚಿತವಾದ ಭಾವ ಮೂಡುವುದಿಲ್ಲ. ತೀವ್ರವಾದ ಭಾವ ಇಲ್ಲದೆ ಹೋದಲ್ಲಿ ಮಂತ್ರ ಹಾಗೂ ಅದರ ಮಾಂತ್ರಿಕ ಪಠಣ ಹೆಚ್ಚು ಪರಿಣಾಮಕಾರಿ ಅಲ್ಲ.' ಎನ್ನುತ್ತಾರೆ.

'ಕೈಝೆನ್' ತತ್ವಗಳನ್ನು ಅನುಸರಿಸಲು ಪಾಲಿಸಬೇಕಾದ ಹತ್ತು ಪರಿಣಾಮಕಾರೀ ತಂತ್ರಗಳಲ್ಲಿ ಒಂದಾದ 'ಮಂತ್ರ ಸಿದ್ಧಿ'ಯ ಕುರಿತು ಸ್ಪಷ್ಟಪಡಿಸುತ್ತಾ The Monk Who Sold His Ferraryಯಲ್ಲಿಯ ಜೂಲಿಯನ್, 'ವಿಶ್ವದಲ್ಲಿ ಶುಭವಾಗಿರುವುದೆಲ್ಲವನ್ನೂ ನಾನು ಮಂತ್ರಗಳ ಮೂಲಕ ಮನನ ಮಾಡುತ್ತಿರುತ್ತೇನೆ......ಲಿಖಿತ ಮಂತ್ರಗಳೂ ಪರಿಣಾಮಕಾರಿಯಾಗಿರುತ್ತವೆ. ಆದರೆ ಮಂತ್ರಗಳನ್ನು ಸಾಕಷ್ಟು ಗಟ್ಟಿಯಾಗಿ ಉಚ್ಛರಿಸಿದಾಗ ನಮ್ಮ ಅಂತಃಪ್ರಜ್ಞೆಯ ಮೇಲೆ ಅದ್ಭುತ ಪ್ರಭಾವ ಬೀರುವುದನ್ನು ಅನುಭವಿಸಿದ್ದೇನೆ. ನನಗೆ ಯಾವ ಕಾರ್ಯಕ್ಕಾದರೂ ಸ್ಫೂರ್ತಿ ಅಗತ್ಯವೆನಿಸಿದಾಗ, 'ನಾನು ಸ್ಪೂರ್ತನಾಗಿದ್ದೇನೆ, ಸ್ವನಿಯಂತ್ರಿತನಾಗಿದ್ದೇನೆ, ಚೈತನ್ಯಭರಿತನಾಗಿದ್ದೇನೆ,'(I am inspired, disciplined, energized) ಎಂದೂ, ಆತ್ಮವಿಶ್ವಾಸವನ್ನು ಉನ್ನತ ಮಟ್ಟದಲ್ಲಿ ಉಳಿಸಿಕೊಳ್ಳಲು, 'ನಾನು ಶಕ್ತಿಶಾಲಿಯೂ, ಸಮರ್ಥನೂ, ಶಾಂತನೂ(I am strong, able, calm) ಆಗಿದ್ದೇನೆ,' ಎಂದೂ ಆರೋಗ್ಯಕ್ಕಾಗಿ 'I am healthy, dynamic, fully ಅಳಿವೆ',ಎಂದೂ ಮಂತ್ರವನ್ನು ಪಠಿಸುತ್ತೇನೆ.....'ಎನ್ನುತ್ತಾನೆ.

'ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು,'ಎನ್ನುವುದು, 'ಶಾಂತಿಮಂತ್ರ' ಮುಂತಾಗಿ ನಮ್ಮ ಪುರಾತನ ಋಷಿಮುನಿಗಳು ಅನೇಕ ಮಂತ್ರಗಳ ಭಂಡಾರವನ್ನೇ ವಿಶ್ವದ ಒಳಿತಿಗಾಗಿ ಇರಿಸಿದ್ದಾರೆ. ಸಕಾರಾತ್ಮಕ ಪ್ರಭಾವವನ್ನುಂಟುಮಾಡುವ ಮಂತ್ರಗಳನ್ನು (ಭಾಷಾತೀತವಾಗಿ) ನಮ್ಮದಾಗಿಸಿಕೊಂಡು ಜೀವನವನ್ನು 'ಆನಂದ'ದಿಂದ ಕೂಡಿರುವಂತೆ ರೂಪಿಸುವುದು ಒಳಿತು.

Sunday, June 19, 2011

ಮನದ ಅಂಗಳದಿ.........೪೫. 'ಸು''ಸಂಸ್ಕೃತ’

ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಪ್ರಥಮ ಭಾಷೆಯಾಗಿ 'ಸಂಸ್ಕೃತ’ವನ್ನು ತೆಗೆದುಕೊಂಡಿದ್ದೆ. 'ತೆಗೆದುಕೊಂಡಿದ್ದೆ' ಎನ್ನುವುದಕ್ಕಿಂತಲೂ ನಮ್ಮ ತಂದೆ ಅವರಿಗೆ ಅತ್ಯಂತ ಪ್ರಿಯವಾದ 'ಸಂಸ್ಕೃತ’ವನ್ನು ನಾವೂ ಕಲಿಯಲಿ ಎಂದು ನಮ್ಮೆಲ್ಲರಿಗೂ ಕೊಡಿಸಿದ್ದರು. ಮನೆಯಲ್ಲಿಯೇ ಆ ಮೊದಲೇ ಸಾಕಷ್ಟು 'ಸಂಸ್ಕೃತ’ ಶ್ಲೋಕಗಳನ್ನು ಕಲಿತಿದ್ದರಿಂದ ಹಾಗೂ ಅದಕ್ಕೆ ಸಂಬಂಧಿಸಿದ ಅನೇಕ ಕಥೆ-ಉಪಕಥೆಗಳು ಪ್ರಚಲಿತವಿದ್ದುದರಿಂದ 'ಸಂಸ್ಕೃತ’ ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. ಅಕ್ಕನಂತೆ ನಾನೂ ಸರಾಗವಾಗಿ 'ಸಂಸ್ಕೃತ’ ಪಾಠಗಳನ್ನು ಓದಬೇಕು ಎನ್ನುವುದು ನನ್ನ ಕನಸಾಗಿತ್ತು! ನಮ್ಮ ಶಾಲೆಯಲ್ಲಿ ಇದ್ದ 'ಸಂಸ್ಕೃತ’ ಪಂಡಿತರು ಶ್ಲೋಕಗಳಿಗೆ ಸಂಬಂಧಿಸಿದ ಕಥೆಗಳನ್ನು ಬಹಳ ಆಕರ್ಷಕವಾಗಿ ಹೇಳುತ್ತಿದ್ದರು. ಆಗ ಕೇಳಿದ ಆ ಶ್ಲೋಕಗಳು ಹಾಗೂ ಅದರ ಕಥೆಗಳು ಈಗಲೂ ಅಚ್ಚಳಿಯದಂತೆ ಮನದ ಮೂಲೆಯಲ್ಲಿ ಹುದುಗಿವೆ. ಒಬ್ಬಳೇ ನಡೆಯುತ್ತಿರುವಾಗ ಆಗಾಗ ನೆನಪಿಗೆ ಬಂದು ತಮ್ಮ ಇರುವನ್ನು ಸಾರುತ್ತವೆ. ಅವುಗಳಲ್ಲಿ ಎರಡನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ:

ಅಂಬಾ ಕುಪ್ಯತಿ ನ ಮಯಾ ನ ತಯಾ

ಸಾಪಿ ಕುಪ್ಯತಿ ನ ಅಂಬಾ ನ ಮಯಾ|

ಅಹಮಪಿ ಕುಪ್ಯಾಮಿ ನ ತಯಾ ನ ತಯಾ

ವದಾ ರಾಜನ್ ಕಸ್ಯ ದೋಷೋಯಂ||

ಒಮ್ಮೆ ಎಂದಿನಂತಯೇ ರಾಜನು ರಾತ್ರಿ ವೇಳೆಯಲ್ಲಿ ಮಾರುವೇಶದಲ್ಲಿ ನಗರ ಪರ್ಯಟನೆ ಮಾಡುತ್ತಿರುತ್ತಾನೆ. ಒಂದು ಮನೆಯಿಂದ ಜೋರಾದ ಜಗಳದ ಶಬ್ದ ಕೇಳುತ್ತದೆ. ಆ ಮನೆಯ ಬಳಿ ಹೋಗಿ ಗಮನಿಸಿದಾಗ ಒಬ್ಬ ವೃದ್ದೆ, ಓರ್ವ ಹೆಂಗಸು ಹಾಗೂ ಗಂಡಸೊಬ್ಬನ ಕಿರುಚಾಟ ಕೇಳುತ್ತಿರುತ್ತದೆ. ಒಬ್ಬರು ಮತ್ತೊಬ್ಬರ ಮಾತನ್ನು ಲೆಕ್ಕಿಸದೇ ತಮ್ಮದೇ ರೀತಿಯಲ್ಲಿ ಕೂಗಾಡುತ್ತಿರುತ್ತಾರೆ. ಏನೊಂದೂ ಅರ್ಥವಾಗದೆ ಹಿಂತಿರುಗಿದ ರಾಜ ಹಗಲಾದ ನಂತರ ತನ್ನ ಭಟರನ್ನು ಕಳುಹಿಸಿ ಆ ಮನೆಯ ಯಜಮಾನನ್ನು ಕರೆಸುತ್ತಾನೆ. ಆ ಮನೆಯ ಸ್ಥಿತಿಯ ಬಗ್ಗೆ ವಿಚಾರಿಸಿದಾಗ ಆತ ಮೇಲಿನ ಶ್ಲೋಕದಂತೆ ಈ ರೀತಿಯಾಗಿ ಹೇಳುತ್ತಾನೆ:

'ಅಮ್ಮ ಕೋಪಿಸಿಕೊಳ್ಳುವಳು

ನಾ ಕಾರಣವಲ್ಲ, 'ಅವಳು' ಅಲ್ಲ

'ಅವಳು' ಕೋಪಿಸಿಕೊಳ್ಳುವಳು

ಕಾರಣ ಅಮ್ಮನಲ್ಲ, ನಾನೂ ಅಲ್ಲ

ನಾನೂ ಕೋಪಿಸಿಕೊಳ್ಳುವೆನು

ಅವರಿಬ್ಬರೂ ಕಾರಣರಲ್ಲ

ಹೇಳು ರಾಜನೇ, ಯಾರ ದೋಷವಿದು?'

ರಾಜನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅವರ ಬಡತನವನ್ನು ನೀಗುವ ವ್ಯವಸ್ಥೆಯನ್ನು ಮಾಡುತ್ತಾನೆ.

ಈ ಕಥೆಯಲ್ಲಿ ರಾಜನು ಮಾರುವೇಶದಲ್ಲಿ ಹೋಗಿ ತನ್ನ ಪ್ರಜೆಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ರೀತಿ ನನಗೆ ಬಹಳ ಪ್ರಿಯವೆನಿಸುತ್ತಿತ್ತು!

ಮತ್ತೊಂದು ಶ್ಲೋಕ ಹೀಗಿದೆ:

ಭಟ್ಟಿರ್ನಷ್ಟಃ ಭಾರವೀಯೋಪಿ ನಷ್ಟಃ

ಭಿಕ್ಷುರ್ನಷ್ಟಃ ಭೀಮಸೇನೋಪಿ ನಷ್ಟಃ|

ಭಭಾವಳ್ಯಾಮಂತಕಃ ಸನ್ನಿವಿಷ್ಟಃ

ಭುಕ್ಕುಂಡೋಹಂ ಭೂಪತಿಃ ತ್ವಂ ಹಿ ರಾಜನ್||

ಒಂದುಸಾರಿ ಒಬ್ಬ ಕಳ್ಳನನ್ನು ರಾಜಾಸ್ಥಾನಕ್ಕೆ ಹಿಡಿದು ತರುತ್ತಾರೆ. ಅವನು ಮಾಡಿದ ಅಪರಾಧಗಳನ್ನು ಪರಿಶೀಲಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಕಳ್ಳನು ತನ್ನ ಕಡೆಯ ಆಸೆಯಾಗಿ ರಾಜನಲ್ಲಿ ಈ ರೀತಿಯಾಗಿ ಅರಿಕೆ ಮಾಡಿಕೊಳ್ಳುತ್ತಾನೆ.

'ಭಟ್ಟಿ ಸತ್ತನು, ಭಾರವಿಯೂ ಸತ್ತನು

ಭಿಕ್ಷು ಸತ್ತನು ಭೀಮಸೇನನೂ ಸತ್ತನು

ಭ ಭಾ ....ಸರದಿಯಂತೆ ಯಮನು ಕೊಂಡೊಯ್ಯುತಿರುವನು

ರಾಜನೇ, ಭುಕ್ಕುಂಡ ನಾನು, ಭೂಪತಿ ನೀನು !'

ಇದರಲ್ಲಿರುವ ಚಮತ್ಕಾರವನ್ನು ಗಮನಿಸಬೇಕು. ಯಮನು ಭ ಭಾ ಭಿ ಭೀ...ರೀತಿಯಲ್ಲಿ ಸೆಳೆದೊಯ್ಯುತ್ತಿದ್ದಾನೆ. ಕಳ್ಳನ ಹೆಸರು 'ಭುಕ್ಕುಂಡ', ಎಂದರೆ 'ಭು' ನಿಂದ ಪ್ರಾರಂಭವಾಗುತ್ತದೆ. ಅವನ ಸಾವಿನ ನಂತರದ ಸರದಿ 'ಭೂ'-ಭೂಪತಿ, ಎಂದರೆ ರಾಜನೇ ಆಗುತ್ತಾನೆ!

ಕಳ್ಳನ ಚತುರತೆಯನ್ನು ಅರ್ಥಮಾಡಿಕೊಂಡ ರಾಜ, 'ಆತ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದಿದ್ದಾನೆ,' ಎಂದು ವಿಶ್ಲೇಷಿಸಿ ಅವನಿಗೆ ಜೀವದಾನಮಾಡಿ ಉದ್ಯೋಗವನ್ನು ನೀಡುತ್ತಾನೆ.

ಆಗಿನ ರಾಜರು ಗುಣಗ್ರಾಹಿಗಳಾಗಿದ್ದರು ಎನ್ನುವುದನ್ನು ಇವುಗಳಿಂದ ನಾವು ತಿಳಿದಿದ್ದೆವು. ಒಬ್ಬ ಸಾಮಾನ್ಯ ಪ್ರಜೆಯೇ ಆಗಲೀ, ಕಳ್ಳನೇ ಆಗಲೀ ಅವರಲ್ಲಿರುವ ವಿಶೇಷತೆಯನ್ನು ಅರ್ಥಮಾಡಿಕೊಂಡು ಅವರ ಕಷ್ಟಗಳಿಗೆ ಸ್ಪಂದಿಸುವ ಹಾಗು ಮನಃ ಪರಿವರ್ತನೆಯನ್ನು ಮಾಡುವ ದೊಡ್ಡತನವನ್ನು ಆ ರಾಜರು ಹೊಂದಿದ್ದರು. ಆಳುವ ವರ್ಗದಲ್ಲಿ ಇಂಥಾ ಗುಣ ವಿಶೇಷಗಳಿದ್ದರೆ ಯಾವುದೇ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ.

ಪಿ.ಯು.ಸಿ.ಯ ನಂತರ 'ಸಂಸ್ಕೃತ’ವನ್ನು ಓದಲಾಗಲಿಲ್ಲವಲ್ಲ ಎನ್ನುವ ಕೊರಗು ಬಹಳ ದಿನ ಬಾಧಿಸಿತು. ಆದರೆ ಆಗ ಕಲಿತ ಸುಭಾಷಿತಗಳು ಈಗಲೂ ದಾರಿದೀಪವಾಗಿವೆ.

Tuesday, June 14, 2011

ಮನದ ಅಂಗಳದಿ.........೪೪. ಕೈಝೆನ್-ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು



ಮನದ ಅಂಗಳದಿ.........೪೪. ಕೈಝೆನ್-ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು

ಚಿಕ್ಕಂದಿನಲ್ಲಿ 'ಅಲ್ಲಾವುದ್ದೀನನ ಅದ್ಭುತ ದೀಪ'ದ ಕಥೆ ಕೇಳಿದಾಗ ಆ ದೀಪವೇನಾದರೂ ದೊರೆತಿದ್ದರೆ ಬೇಕೆನಿಸಿದ್ದನ್ನೆಲ್ಲಾ ಪಡೆಯುತ್ತಿದ್ದೆವು ಎಂದು ಆಸೆ ಪಟ್ಟಿರುತ್ತೇವೆ. ಈಗಲೂ ನಮ್ಮನ್ನು ನಾವು ಉತ್ತಮ ಪಡಿಸಿಕೊಳ್ಳುವಂತಹ, ನಮಗೆ ಸಾಧ್ಯವಾದಷ್ಟು ಔನತ್ಯಕ್ಕೇರುವಂತಹ ಯಾವುದಾರೂ ಮಂತ್ರವೋ ತಂತ್ರವೋ ಇದ್ದಿದ್ದರೆ ಎಷ್ಟು ಚಂದವಿರುತ್ತಿತ್ತು ಎಂದು ಕೆಲವೊಮ್ಮೆ ಅಂದುಕೊಂಡಿರಬಹುದು. ಆ ಒಂದು ಸಾಮರ್ಥ್ಯ ನಮ್ಮಲ್ಲೇ ಇದೆ, ನಾವೇ ನಮ್ಮನ್ನು ಉನ್ನತೀಕರಿಸಿಕೊಳ್ಳಬಹುದು ಎನ್ನುವುದು ಕೈಝೆನ್ ನಲ್ಲಿ ಅಡಗಿದೆ. 'ಕೈಝೆನ್' ಎನ್ನುವ ಜಪಾನೀ ಪದದ ಅರ್ಥ-ನಿರಂತರ, ಅಂತ್ಯವಿಲ್ಲದ ಪ್ರಗತಿ. ಅದು ಜೀವನವನ್ನು ಅದರ ಅತ್ಯುನ್ನತ ಸ್ತರದ ಪೂರ್ಣಪ್ರಜ್ಞೆಯಲ್ಲಿ ಬದುಕುವ ವ್ಯಕ್ತಿಗಳ ಲಕ್ಷಣ. 'ಕೈಝೆನ್' ಬಗ್ಗೆ ರಾಬಿನ್ ಶರ್ಮ ಅವರು ತಮ್ಮ 'The Monk Who Sold His Ferrary'ಯಲ್ಲಿ ತಿಳಿಸಿರುವುದನ್ನು ಸಂಕ್ಷಿಪ್ತಗೊಳಿಸಿ ನಿಮ್ಮ ಮುಂದಿಡುತ್ತಿದ್ದೇನೆ.

''ಕೈಝೆನ್' ಎಂಬ ವಿಶಿಷ್ಟ ತತ್ವಜ್ಞಾನವನ್ನು ಸಾವಿರಾರು ವರ್ಷಗಳ ಹಿಂದೆ ಪೌರ್ವಾತ್ಯ ದಾರ್ಶನಿಕರು ಪಡೆದು ಪರಿಷ್ಕರಿಸಿದ್ದರು.....

ನಮ್ಮ ಆಂತರಿಕ ಯಶಸ್ಸಿನ ಮೇಲೆ ಬಾಹ್ಯ ಯಶಸ್ಸು ಅವಲಂಭಿಸಿದೆ. ಆದ್ದರಿಂದ ದೇಹದ ಆರೋಗ್ಯ, ಆರ್ಥಿಕ ಸ್ಥಿತಿ ಅಥವಾ ಮಾನವ ಸಂಬಂಧ ಮುಂತಾದ ಯಾವುದೇ ಬಾಹ್ಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕಾದರೆ ಮೊದಲು ನಮ್ಮ ಅಂತರಂಗದ ಪ್ರಪಂಚವನ್ನು ಸುಧಾರಿಸಬೇಕಾಗುತ್ತದೆ. ಇದಕ್ಕೆ ನಿರಂತರ ಸ್ವಯಂ ಪ್ರಗತಿಯ ಅಭ್ಯಾಸವೊಂದೇ ದಾರಿ....... ಅಂತರಂಗದ ಪ್ರಪಂಚದ ಸುಧಾರಣೆ ಎಂದರೆ ವ್ಯಕ್ತಿತ್ವದ ವಿಕಾಸ ಹಾಗೂ ವಿಸ್ತಾರ ಎಂದು ಅರ್ಥ. ಇದು ನಮಗೆ ನಾವೇ ಮಾಡಿಕೊಳ್ಳುವ ಅತ್ಯುತ್ತಮ ಸಹಾಯ.........

ಕೈಝೆನ್ ತತ್ವಗಳನ್ನು ಅನುಸರಿಸಲು ಹತ್ತು ಪರಿಣಾಮಕಾರೀ ತಂತ್ರಗಳಿವೆ. ಇವುಗಳನ್ನು ಶ್ರದ್ಧಾಪೂರ್ವಕವಾಗಿ ಅವ್ಯಾಹತವಾಗಿ ದಿನವೂ ಆಚರಿಸಿದರೆ ಒಂದು ತಿಂಗಳ ಅವಧಿಯಲ್ಲಿಯೇ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅನಂತರ ಅದನ್ನು ನಮ್ಮ ದಿನಚರಿಯ ಅನಿವಾರ್‍ಯ ಭಾಗವಾಗುವಂತೆ ಸಾಧನೆ ಮಾಡಿದರೆ ಅವು ಬಿಡಲಾರದ ಅಭ್ಯಾಸಗಳಾಗಿ ಬೆಳೆದು ಶಾಶ್ವತ ಆನಂದವನ್ನೂ, ಅಪಾರ ಶಕ್ತಿಯನ್ನೂ, ಉತ್ತಮ ಆರೋಗ್ಯವನ್ನೂ ನೀಡುವುದು ಖಂಡಿತ.......

ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳು ಯಾವುವೆಂದರೆ:

ಮೊದಲನೆಯ ತಂತ್ರ- ಏಕಾಂತದ ಸಾಧನೆ: ಇದರಲ್ಲಿ ಪ್ರತಿದಿನವೂ ನಿರ್ದಿಷ್ಟ ಕಾಲದಲ್ಲಿ ಶಾಂತಿಯಿಂದಿರಬೇಕು. ಆ ಅವಧಿಯಲ್ಲಿ ಮೌನದ ಗುಣಪಡಿಸುವ ಶಕ್ತಿಯನ್ನೂ ನಮ್ಮ ನಿಜ ಸ್ವರೂಪವೇನೆಂಬುದನ್ನೂ ತಿಳಿಯಬಹುದು. ಇದು ಧೀರ್ಘ ರಸ್ತೆಯಲ್ಲಿ ಓಡಿಸಿ ಕಾದಿರುವ ಎಂಜಿನ್ನಿಗೆ ಕೊಂಚ ರೆಸ್ಟ್ ನೀಡಿದಂತೆ. ಏಕಾಂತ ಸಾಧನೆಯನ್ನು ಪ್ರತಿದಿನ ಒಂದೇ ಸಮಯದಲ್ಲಿ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಎರಡನೇ ತಂತ್ರ- ಶಾರೀರಿಕತೆಯ ತಂತ್ರ: ದೇಹವೆಂಬ ದೇಗುಲಕ್ಕೆ ಶ್ರಮಭರಿತ ವ್ಯಾಯಾಮ ನೀಡಲು ದಿನವೂ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಅದು ಪ್ರಾಣಾಯಾಮ, ಯೋಗ, ವೇಗದ ನಡಿಗೆ, ?ಪುಶ್‌ಅಪ್? ವ್ಯಾಯಾಮ ಯಾವುದಾದರೂ ಆಗಬಹುದು. ದೇಹದ ಅಂಗಾಂಗಗಳಿಗೆ ಸಾಕಷ್ಟು ಚಲನೆ, ಶ್ವಾಸಕೋಶಗಳಲ್ಲಿ ಒಂದಿಷ್ಟು ವಾಯುಸಂಚಾರ ಆಗುವುದು ಮುಖ್ಯ.

ಮೂರನೆಯ ತಂತ್ರ-ಜೀವಂತ ಪೋಷಣೆಯ ತಂತ್ರ: ನಿಸರ್ಗದ ಅಂಗಗಳಾದ ಸೂರ್ಯ, ಗಾಳಿ, ನೀರು, ಮಣ್ಣುಗಳಿಂದ ಸೃಷ್ಟಿಯಾಗಿರುವ ಸಸ್ಯಾಹಾರವೇ ಸಜೀವ ಆಹಾರ. ನಿತ್ಯವೂ ಹಸಿತರಕಾರಿ, ಹಣ್ಣು, ಬೇಳೆಕಾಳುಗಳನ್ನಷ್ಟೇ ತಿನ್ನುತ್ತಿದ್ದರೆ ಚಿರಂಜೀವಿಗಳಾಗಬಹುದು. ಸಸ್ಯಾಹಾರವು ದೀರ್ಘಾಯುಷ್ಯದ ರಹಸ್ಯಗಳಲ್ಲೊಂದು. ಫಿನ್‌ಲ್ಯಾಂಡಿನಲ್ಲಿ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಕೇವಲ ಏಳು ತಿಂಗಳಿಂದ ಸಸ್ಯಾಹಾರಿಗಳಾಗಿ ಬದಲಾದವರಲ್ಲಿ ೩೮% ಮಂದಿ ಹಿಂದಿಗಿಂತ ಹೆಚ್ಚು ಉತ್ಸಾಹವನ್ನೂ ಕಡಿಮೆ ಆಯಾಸವನ್ನೂ ಅನುಭವಿಸುತ್ತಿರುವರೆಂದು ತಿಳಿದಿದೆ. ಊಟದಲ್ಲಿ ಹೆಚ್ಚು ಸಲಾಡ್ಗಳನ್ನು ಬಳಸುವುದು ಒಳ್ಳೆಯದು.

ನಾಲ್ಕನೆಯ ತಂತ್ರ- ಸಮೃದ್ಧ ಜ್ಞಾನದ ತಂತ್ರ: ಈ ತಂತ್ರವು ನಾವು ಜೀವನದ ವಿದ್ಯಾರ್ಥಿಗಳಾಗಬೇಕೆನ್ನುವುದನ್ನು ಹೇಳುತ್ತದೆ. ಅದಕ್ಕಿಂತಲೂ ಮಿಗಿಲಾಗಿ ಜೀವನ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡ ಜ್ಞಾನವನ್ನು ಬಳಸಬೇಕೆಂಬುದನ್ನು ಹೇಳುತ್ತದೆ. ಪ್ರತಿದಿನವೂ, ದಿನಕ್ಕೆ ಅರ್ಧತಾಸು ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮಾಡಿದರೆ ಅದರಿಂದ ಗಮನಾರ್ಹ ಪರಿಣಾಮವಾಗುತ್ತದೆ.

ಐದನೆಯ ತಂತ್ರ:-ವೈಯಕ್ತಿಕ ಆತ್ಮ ಪರೀಕ್ಷೆಯ ತಂತ್ರ: ನಮ್ಮೊಳಗೆ ನಿದ್ರಿತ ಅಥವಾ ಸುಪ್ತ ಸ್ಥಿತಿಯಲ್ಲಿರುವ ಅನೇಕ ಪ್ರತಿಭೆಗಳಿವೆ. ಅದನ್ನು ಗುರುತಿಸುವ ಮೂಲಕ ಜಾಗೃತಗೊಳಿಸಬಹುದು. ಇದು ನಮ್ಮನ್ನು ಹೆಚ್ಚು ಚೈತನ್ಯಭರಿತರನ್ನಾಗಿಯೂ, ವಿವೇಕಿಯಾಗಿಯೂ ಮಾಡುತ್ತದೆ.

ಆರನೆಯ ತಂತ್ರ-ಶೀಘ್ರಜಾಗೃತಿ: ಎಂದರೆ ಬೇಗನೇ ಏಳುವುದು. ಸೂರ್‍ಯೋದಯಕ್ಕೇ ಏಳುವುದು ಹಾಗೂ ದಿನಚರಿಯನ್ನು ಚೆನ್ನಾಗಿ ಆರಂಭಿಸುವುದು ಬಹಳ ಮುಖ್ಯ.

ಏಳನೆಯ ತಂತ್ರ-ಸಂಗೀತದ ತಂತ್ರ: ಪ್ರತಿದಿನ ಕೊಂಚ ಸಮಯವನ್ನು ಸಂಗೀತಕ್ಕೆ ಮೀಸಲಾಗಿಡುವುದು ಉತ್ತಮ. ಬೇಸರವಾದಾಗ ಸಂಗೀತ ಕೇಳುವುದು ಉತ್ಸಾಹ ನೀಡುವ ಉತ್ತಮ ಸಾಧನ.

ಎಂಟನೆಯ ತಂತ್ರ- ಮಂತ್ರ ಸಿದ್ಧಿ: 'ಮಂತ್ರ' ಎಂದರೆ ಸಕಾರಾತ್ಮಕ ಪ್ರಭಾವವನ್ನುಂಟುಮಾಡುವ ರೀತಿಯಲ್ಲಿ ರಚಿಸಿರುವ ಶಬ್ದಗಳ ಜೋಡಣೆ. ಮಂತ್ರಗಳನ್ನು ಗಟ್ಟಿಯಾಗಿಉಚ್ಚರಿಸಿದಾಗ ನಮ್ಮ ಅಂತಃಪ್ರಜ್ಞೆಯ ಮೇಲೆ ಅದ್ಭುತ ಪ್ರಭಾವವುಂಟಾಗುತ್ತದೆ.

ಒಂಭತ್ತನೆಯ ತಂತ್ರ-ಸಮಗ್ರ ಚಾರಿತ್ರ್ಯ: ನಮ್ಮ ಚಾರಿತ್ರ್ಯ ವರ್ಧನೆಗಾಗಿ ಪ್ರತಿದಿನವೂ ಹಿಂದಿನ ದಿನಕ್ಕೀತ ಸ್ವಲ್ಪ ಹೆಚ್ಚು ಪ್ರಯತ್ನ ಮಾಡುತ್ತಾ ಹೋಗಬೇಕು. ಅದಕ್ಕಾಗಿ ಸದ್ಗುಣವನ್ನು ಬೆಳೆಸುವ ಯಾವ ಅಭ್ಯಾಸವನ್ನೂ, ಯೋಚನೆಯನ್ನೂ ಮಾಡಬಹುದು.

ಹತ್ತನೆಯ ತಂತ್ರ-ಸರಳತೆಯ ತಂತ್ರ: ಮುಖ್ಯವಾದ, ಆದ್ಯತೆಗೆ ಅರ್ಹವಾದ ಕಾರ್ಯಗಳ ಕಡೆಗೇ ಗಮನವನ್ನು ಏಕಾಗ್ರಗೊಳಿಸಿ ಸರಳವಾದ ಜೀವನವನ್ನು ನಡೆಸಬೇಕು.

ಈ ಹತ್ತು ತಂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಶಕ್ತಗೊಳಿಸಿ, ಚೈತನ್ಯಪೂರ್ಣ ಬದುಕಿಗೆ ನಾಂದಿಯನ್ನು ಹಾಡೋಣ.