Saturday, October 28, 2023

ತಿರು ಶ್ರೀಧರ್ ಸರ್ 🙏

ಆತ್ಮೀಯ ಶ್ರೀಧರ್ ಸರ್, ನಿಮ್ಮ ಪ್ರೀತಿಪೂರ್ವಕ ಶುಭ ಹಾರೈಕೆಗಳಿಗೆ ಹೃತ್ಪೂರ್ವಕ ನಮನಗಳು. ನಿಮ್ಮ  ವಿಷಯಗಳ ಕ್ರೂಢೀಕರಣ, ಉತ್ತಮ ಜೋಡಣೆ, ಪ್ರಬುದ್ಧ ನಿರೂಪಣೆಗಳ ಹಿಂದಿರುವ ವಿಶ್ವಾಸಕ್ಕೆ ನನ್ನ ಅನಂತ ಕೃತಜ್ಞತೆಗಳು🙏❤️🙏


 ಪ್ರಭಾಮಣಿ ನಾಗರಾಜ

Happy birthday Prabha Mani 🌷🙏🌷


ಪ್ರಭಾಮಣಿನಾಗರಾಜ ಎಂಬ ಕಾವ್ಯನಾಮದ ಎಚ್. ಡಿ. ಪ್ರಭಾಮಣಿ ಅವರು ಸಾಹಿತ್ಯ, ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕರಾಗಿದ್ದಾರೆ.


ಪ್ರಭಾಮಣಿ ಅವರು 1954ರ ಅಕ್ಟೋಬರ್ 28ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ, ಶ್ರೀನಿವಾಸಪುರದಲ್ಲಿ ಜನಿಸಿದರು. ತಂದೆ ದಕ್ಷಿಣಾಮೂರ್ತಿ ಜೋಯಿಸ್.  ತಾಯಿ ಸುಬ್ಬಲಕ್ಷ್ಮಮ್ಮ.  ಪ್ರಭಾಮಣಿ ಅವರು ಬಿ.ಎಸ್‍ಸಿ, ಬಿ.ಎಡ್ ಪದವಿಗಳನ್ನು ಗಳಿಸಿದರು. 


ಪ್ರಭಾಮಣಿ ಅವರು ಪ್ರೌಢಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕಿಯಾಗಿ, ಚೈತನ್ಯ ಸಂಪನ್ಮೂಲ ವ್ಯಕ್ತಿಯಾಗಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿ, ಕ್ಲಸ್ಟರ್ ಸಹಾಯಕ ಶಿಕ್ಷಣಾಧಿಕಾರಿ(CAEO)ಯಾಗಿ,  ವಿಷಯ ಪರಿವೀಕ್ಷಕರಾಗಿ (subject inspector) ವೃತ್ತಿ ಜವಾಬ್ದಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅವರು ಹಾಸನದಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ಸಕ್ರಿಯರಾಗಿದ್ದಾರೆ. ಅವರದ್ದೇ pratheekshe.blogspot.com ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಕ್ರಿಯರಾಗಿ ಬರಹ ಮಾಡುತ್ತಿದ್ದಾರೆ. ಇವರ ಸಾಹಿತ್ಯ ಸಂಬಂಧಿ ವಿಡಿಯೊಗಳು ಯೂಟ್ಯೂಬ್‍ನಲ್ಲಿವೆ.

 

ಪ್ರಭಾಮಣಿ ಅವರ ಕಥೆ, ಕವನ, ಹಾಸ್ಯಬರಹ, ಹನಿಗವನ, ಲಲಿತ ಪ್ರಬಂಧಗಳು ಮುಂತಾದ ಬರಹ ವೈವಿಧ್ಯಗಳು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ನಗೆಮುಗುಳು, ಕರ್ಮವೀರ, ಮಯೂರ, ಮಂಗಳ, (ಕರ್ಮವೀರ ಮತ್ತು ಮಂಗಳ ದೀಪಾವಳಿ ವಿಶೇಷಾಂಕಗಳು), ಸುಧಾ, ಉದಯವಾಣಿ, ವಿಕ್ರಮ, ದಿಗಂತ, ತುಷಾರ, ಅಕ್ಷಯ, ಹೊರನಾಡ ಸಂಗಾತಿ, ಸಂಚಯ, ಸಂಕ್ರಮಣ, ಸಮಾಜಮುಖಿ, ಲಕ್ನೋಕನ್ನಡಿಗ, ಮುಂತಾದ ರಾಜ್ಯಮಟ್ಟದ ಹಾಗೂ ಸ್ಥಳೀಯ ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿಶೇಷಾಂಕಗಳಲ್ಲಿ, ‘ಕೆಂಡಸಂಪಿಗೆ’, 'ಪಂಜು', 'ಮರಳ ಮಲ್ಲಿಗೆ’(ಕುವೈತ್ ಅಂತರ್ಜಾಲ ಪತ್ರಿಕೆ) ಮುಂತಾದ ಅಂತರ್ಜಾಲ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತ ಬಂದಿವೆ.  ಇವರ ಕಾರ್ಯಕ್ರಮಗಳು ಆಕಾಶವಾಣಿ, ಹಾಸನ ಕೇಂದ್ರದಿಂದ ಬಿತ್ತರವಾಗಿವೆ. 'ಹಾಸನವಾಣಿ’ ಪತ್ರಿಕೆಯಲ್ಲಿ ಇವರ 'ಮನದ ಅಂಗಳದಿ..........’ ಅಂಕಣ ಬರಹವು 100ಕಂತುಗಳಲ್ಲಿ ಪ್ರಕಟವಾಗಿದೆ. ಇವರ

‘ಗರಿಕೆ’ ಕವನವು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯವರು ಪ್ರಕಟಿಸುವ ಕವಿತೆ-2000 ವಾರ್ಷಿಕ ಸಂಕಲನದಲ್ಲಿ ಸೇರ್ಪಡೆಯಾಗಿದೆ. 'ಒಳಗಿನೊಳಗು’ ಎಂಬ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಸುವರ್ಣ ಸಂಭ್ರಮ2014ರ ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ,  ಆ ಪ್ರಯುಕ್ತ ಪ್ರಕಟಿಸಿದ ರಾಜ್ಯಮಟ್ಟದ ಕವನ ಸಂಕಲನದಲ್ಲಿ ಸೇರ್ಪಡೆಯಾಗಿದೆ. 'ಮನದ ಅಂಗಳದಿ.....’ ಕವನವು ಕುವೈತ್ ಕನ್ನಡ ಕೂಟವು ಪ್ರಕಟಿಸುವ ‘ಮರಳ ಮಲ್ಲಿಗೆ’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. 2010ರಲ್ಲಿ ಇವರು ತಮ್ಮ  ಬ್ಲಾಗ್ 'ಪ್ರತೀಕ್ಷೆ’ಯನ್ನು ಪ್ರಾರಂಭಿಸಿದ ನಂತರ ತಮ್ಮ ಅನೇಕ ಪ್ರಕಟಿತ ಸ್ವರಚಿತ ಹಾಸ್ಯಬರಹ, ಹನಿಗವನ, ಲಲಿತ ಪ್ರಬಂಧಗಳನ್ನು  ಅದರಲ್ಲಿ ಕ್ರೋಡೀಕರಿಸಿದ್ದಾರೆ. ಇವರ ಲಲಿತ ಪ್ರಬಂಧ 'ಸ್ವೀಟ್60’ಯು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯವರು ಪ್ರಕಟಿಸುವ ಲಲಿತ ಪ್ರಬಂಧ -2016 ವಾರ್ಷಿಕ ಸಂಕಲನದಲ್ಲಿ ಸೇರ್ಪಡೆಯಾಗಿದೆ.  2014ರಲ್ಲಿ ಸ್ನೇಹಬಳಗ, ಮೈಸೂರು, ಇವರು ಹೊರತಂದಿರುವ, 'ಹಾಸ್ಯದ ಹೊನಲು’ ಹಾಸ್ಯ ಲೇಖನಗಳ ಸಂಕಲನದಲ್ಲಿ ಇವರ ಲಲಿತ ಪ್ರಬಂಧ 'ಜೇಬಾಯಣ!’ ಸೇರ್ಪಡೆಯಾಗಿದೆ.  2017ರಲ್ಲಿ ಸ್ನೇಹಬಳಗ, ಮೈಸೂರು, ಇವರು ಹೊರತಂದಿರುವ 'ಲೇಖಕಿಯರ ಲಲಿತ ಪ್ರಬಂಧಗಳ ಸಂಚಯ’ದಲ್ಲಿ ಇವರ ಲಲಿತ ಪ್ರಬಂಧ 'ವರಾಹಾವತಾರ!’ ಸೇರ್ಪಡೆಯಾಗಿದೆ.

 

ಪ್ರಭಾಮಣಿ ಅವರ  ಪ್ರಕಟಿತ ಕೃತಿಗಳಲ್ಲಿ 'ಗರಿಕೆ', 'ಕಂಡಷ್ಟೇ ಬೆಳಕೆ?' ಕವನ ಸಂಕಲನಗಳು; ‘ನಾವೀಗ ಹೊಸಬರಾಗಬೇಕು.....’ ಕಥಾ ಸಂಕಲನ; ಜಿರಲೆ ಉಂಡೆ’ ಹಾಸ್ಯ ಬರಹಗಳ ಸಂಕಲನ; 

'ಗುಟುಕು’, 'ಗುಟ್ಟು' ಎಂಬ ಹನಿಗವನ ಸಂಕಲನಗಳು;  ‘ಸ್ವೀಟ್60' ಎಂಬ ಲಲಿತ ಪ್ರಬಂಧ ಸಂಕಲನ ಮುಂತಾದವು ಸೇರಿವೆ.

 

ಪ್ರಭಾಮಣಿ ಅವರಿಗೆ ‘ಗರಿಕೆ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ. ಅನಂತ ಸ್ವಾಮಿ ದತ್ತಿ ನಿಧಿ ಪ್ರಶಸ್ತಿ,ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, 'ಜಿರಲೆ ಉಂಡೆ’ ಹಾಸ್ಯ ಬರಹಗಳ ಸಂಕಲನಕ್ಕೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ,  ‘ಗುಟುಕು’ ಹನಿಗವನ ಸಂಕಲನಕ್ಕೆ ಎಮ್.ಜಿ.ರಂಗನಾಥನ್ ಸ್ಮಾರಕ ಪುಸ್ತಕ ಪ್ರಶಸ್ತಿ, ‘ನಾವೀಗ ಹೊಸಬರಾಗಬೇಕು.....’ ಕಥಾ ಸಂಕಲನಕ್ಕೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ,  ಲಲಿತ ಪ್ರಬಂಧ 'ಜೇಬಾಯಣ’ಕ್ಕೆ ಪಡುಕೋಣೆ  ರಮಾನಂದರಾವ್ ಸ್ಮಾರಕ ಹಾಸ್ಯಲೇಖನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ; ಲಲಿತ ಪ್ರಬಂಧ 'ಸ್ವೀಟ್60’ಗೆ 2016ರ 'ಸುಧಾ ಯುಗಾದಿ ವಿಶೇಷಾಂಕ ಪ್ರಬಂಧ ಸ್ಪರ್ಧೆ’ಯ ದ್ವಿತೀಯ ಬಹುಮಾನ, ನುಗ್ಗೇಹಳ್ಳಿ ಪಂಕಜ  ದತ್ತಿ ನಿಧಿ ಬಹುಮಾನ,  ಶಾರದಾ ಆರ್ ರಾವ್  ದತ್ತಿ ಪ್ರಶಸ್ತಿ; 2023ರಲ್ಲಿ ಲಲಿತ ಪ್ರಬಂಧ 'ಅನುಭವಗಳ ಆಗರ ‘ಅಡುಗೆ ಎಂಬ ಸಾಗರ'ಕ್ಕೆ ಧೃತಿ ಮಹಿಳಾ ಮಾರುಕಟ್ಟೆ ಏರ್ಪಡಿಸಿದ್ದ ಅಡುಗೆ ಸಡಗರ ಪ್ರಬಂಧ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ, ಹಂಬಲ’ ಕವಿತೆಗೆ ‘ಸಂಚಯ 2005

ಸಾಹಿತ್ಯ ಸ್ಪರ್ಧೆ’ಯಲ್ಲಿ ಬಹುಮಾನ. ‘ಕಿಡಿ’ ಕವನಕ್ಕೆ ‘ಸಂಕ್ರಮಣ ಸಾಹಿತ್ಯ ಸ್ಪರ್ಧೆ-2001’ರ ಬಹುಮಾನ  ‘ಹಗ್ಗ’ ಕವನಕ್ಕೆ ‘ಹಂಬಲ ಸಾಹಿತ್ಯ ಬಹುಮಾನ’, 'ಗರಿಕೆ’ ಕವನಕ್ಕೆ ಗುಡಿಬಂಡೆ ಪೂರ್ಣಿಮಾ ಸಾಹಿತ್ಯ ಬಹುಮಾನ ಸೇರಿದಂತೆ ಅನೇಕ ಸಂಘ ಸಂಸ್ತೆಗಳ ಪ್ರಶಸ್ತಿ ಬಹುಮಾನಗಳು ಸಂದಿವೆ. 

 

ಪ್ರಭಾಮಣಿ ಅವರು 2003ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವದಲ್ಲಿ ನಡೆದ ಹಾಸ್ಯಗೋಷ್ಠಿಯಲ್ಲಿ; ಉದಯ ಟಿ.ವಿ.ಯವರ ‘ಜಿದ್ದಾಜಿದ್ದಿ' ಕಾರ್ಯಕ್ರಮದಲ್ಲಿ;  2006ರಲ್ಲಿ ಬೀದರ್‍ನಲ್ಲಿ ನಡೆದ ಅಖಿಲ ಭಾರತ 72ನೇ ಕನ್ನಡ ಸಾಹಿತ್ಯ  ಸಮ್ಮೇಳನದ ಹನಿಗವನಗೋಷ್ಠಿಯಲ್ಲಿ, ‘ಕಸ್ತೂರಿ’ ಟಿ.ವಿ.ಯವರ ‘ಜಾಣರ ಜಗಲಿ’ಯಲ್ಲಿ, ಅಷ್ಟಾವಧಾನದಲ್ಲಿ ಆಶುಕವಿಯಾಗಿ, ಹಾಸನ ಜಿಲ್ಲೆಯ 

ಚನ್ನರಾಯಪಟ್ಟಣದ ಪ್ರಥಮ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿ, 2014ರ ಹಾಸನ ಜಿಲ್ಲೆಯ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಪ್ರಬಂಧ ಮಂಡನೆಗಾಗಿ, 2015ರಲ್ಲಿ ಮೈಸೂರಿನ ದಸರಾ ಕವಿಗೋಷ್ಠಿಯಲ್ಲಿ ಹಾಗೂ ಅನೇಕ ಸ್ಥಳೀಯ ಮತ್ತು ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ, ವಿಜ್ಞಾನ, ಮೌಲ್ಯಗಳು ಹಾಗೂ ಹಾಸ್ಯದ (ನಗುವಿನ) ಪ್ರಾಮುಖ್ಯತೆಯ ಬಗ್ಗೆ ಶಾಲಾ-ಕಾಲೇಜುಗಳು ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಭಾಷಣಗಳನ್ನು ಮಾಡಿದ್ದಾರೆ. 81ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಸಂದರ್ಭದಲ್ಲಿ ಪುಸ್ತಕ ಪ್ರಕಟಣಾ ಸಂಪಾದಕ ಮಂಡಲಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ

 

ಪ್ರಭಾಮಣಿ ಅವರು ‘ಚಂದನ’ ಟಿ.ವಿ. ಯಲ್ಲಿ ‘ಮಾಂಗಲ್ಯಂ ತಂತುನಾನೇನ’ ದಲ್ಲಿ, ಸ್ಥಳೀಯ ಟಿ.ವಿ.ಯಲ್ಲಿ, ಆಕಾಶವಾಣಿ, ಹಾಸನ ಕೇಂದ್ರದಲ್ಲಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ, ಸ್ಥಳೀಯ ವಿವಿಧ ಪತ್ರಿಕೆಗಳಲ್ಲಿನ ಸಂದರ್ಶನಗಳಲ್ಲಿ ಹಾಗೂ

ಕರ್ನಾಟಕದ ಕವಯತ್ರಿಯರ ಕಾವ್ಯ ಮತ್ತು ಸಾಧನೆ ಕುರಿತ ಸಾಕ್ಷ್ಯ ಚಿತ್ರದ   ಚಿತ್ರೀಕರಣದಲ್ಲಿ ಮೂಡಿಬಂದಿದ್ದಾರೆ.


ಸಾಧಕರಾದ ಪ್ರಭಾಮಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


(ನಮ್ಮ ಕನ್ನಡ ಸಂಪದ  Kannada Sampada ದಲ್ಲಿ ಮೂಡಿಬರುತ್ತಿರುವ ಲೇಖನಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ)

Tuesday, October 3, 2023

ವಿಮರ್ಶೆ : 'ಇಳಿಸಬೇಕೀಗ ಹೊರೆಯನಿನ್ನು'



 ಇವತ್ತಿನ ಜೇನುಗಿರಿ ಪತ್ರಿಕೆಯ 'ನಾ ಮೆಚ್ಚಿದ ಕವಿತೆ'ಯಲ್ಲಿ ಶಾಂತಾ ಅತ್ನಿಯವರು ವಿಮರ್ಶಿಸಿರುವ ನನ್ನ ಕವನ: 'ಇಳಿಸಬೇಕೀಗ ಹೊರೆಯನಿನ್ನು'



ಕವನ : #ಇಳಿಸಬೇಕೀಗ ಹೊರೆಯನಿನ್ನು

 ಈ ವಾರದ ( 27/9/2023) ಮಂಗಳ ಪತ್ರಿಕೆಯಲ್ಲಿ  ಪ್ರಕಟವಾಗಿರುವ ನನ್ನ ಕವನ :

#ಇಳಿಸಬೇಕೀಗ ಹೊರೆಯನಿನ್ನು

ಹೊತ್ತು ಹೊರಡುವ
ಹೆಗಲ ಚೀಲ
ಮಣ ಭಾರ

ಬಾಯಾರಿಕೆಗೆ  ನೀರಿನ
ಬಾಟಲು 
ಹಸಿವೆಗೆಂದೇ ಬಿಸ್ಕೆಟ್ 
ಸ್ನ್ಯಾಕ್ಸ್ ಗಳು
ಬಿಡುವಿಲ್ಲದಂತೆ ಅಗಿಯಲೇ ಬೇಕಾದ
ಚುಯಿಂಗಮ್ ಚಾಕಲೇಟ್ ಗಳು
ಜೊತೆಗೊಂದಿಷ್ಟು
ಮುಗಿಯದ ಮೆಲುಕುಗಳು

ಮಕ್ಕಳ ಶೀತ ಕೆಮ್ಮುಗಳಿಗೆ
ಟ್ಯಾಬ್ಲೆಟ್  ಸಿರಪ್ಪು
ಗಂಡನ ಗ್ಯಾಸ್ಟ್ರಿಕ್...
ಅತ್ತೆಗೆ ಆಂಟಿಬಯೋಟಿಕ್
ಪೇನ್ ಕಿಲ್ಲರ್
ಅನಾರೋಗ್ಯದ ಅನೇಕಾನೇಕ
ಸಾಧ್ಯಾಸಾಧ್ಯತೆಗಳು
ಸಿದ್ಧತೆಗಳು!

ಪುಟ್ಟ ಕನ್ನಡಿ ಕೂಮ್ಬ್
ವೆಟ್ ಟಿಸ್ಸ್ಯು 
ಮೊಬೈಲ್ ಗೊಂದು ಶಾಶ್ವತ ಖಾನೆ
ಅವರಿವರ ದಾಕ್ಷಿಣ್ಯಕೆ
ತುಂಬುವ ಖಜಾನೆ
ಅಗತ್ಯ ವಸ್ತುಗಳಿಗಿದೇ ತವರು
ಆಕೃತಿಯೋ ದಿನ ತುಂಬಿದ ಬಸಿರು

ತಲೆಯಾಗಿದೆ ನೆನಪುಗಳ 
ಗೋಜಲು ಗೋಜಲು
ಭವಿಷ್ಯದ ಭಯ ತಲ್ಲಣಗಳ 
ಮಜಲು
ಸದಾ ಮೇಲೆತ್ತಲಾಗದ
ಶಿರ ಭಾರ
ಧಾವಂತವೇ ಬದುಕಾದ
ಸುಧೀರ್ಘ ನಿಸ್ಸಾರ

ಕೊಡವಿಕೊಂಡು ಬಿಡಬೇಕು
ನಿನ್ನೆ ನಾಳೆಗಳನೆಲ್ಲಾ
ಪೂರ್ವಾಪರವರಿಯದ
ಎಡರುತೊಡರುಗಳೂ ಸಲ್ಲ

ಬಿಡದಂತೆ 
ಭೂತ ಭವಿಷ್ಯಗಳಲೇ
ಅಂಡಲೆವ
ಅಲೆಮಾರಿ ಜೀವಕೆ
ನೆಮ್ಮದಿಯೆನ್ನುವುದೇ
ಮರೀಚಿಕೆ
ಹೊರೆಯೆಲ್ಲಾ ಇಳಿಸಿ
ನೆಲೆಗೊಳಿಸಬೇಕಿದೆ
ಅಂತರ್ಯವನಿನ್ನು 
ಆನಂದದ
ಹಸಿರ ಸಮೃದ್ಧಿಯಲಿ
              ~ಪ್ರಭಾಮಣಿ ನಾಗರಾಜ