Monday, November 30, 2015

ಹನಿ - `ಅದ್ವೈತ'

ಅದ್ವೈತ

ಬಿಟ್ಟುಬಿಡುವೆಯೇಕೆ
ಕಿತ್ತೋಡುವಂತೆ?
ಸೂತ್ರಹರಿದು
ಲಾಗಹೊಡೆದು
ಮತ್ತೆಲ್ಲೋ ಸಿಲುಕಿ
ಪಟಪಟಿಸಿ
ಪರ್ರೆನುವ ಮೊದಲೇ
ಸೆಳೆದುಕೊ ನಿನ್ನ ತೆಕ್ಕೆಗೆ
ವಿಹರಿಸುವುದೇನಿದ್ದರೂ
ನಿನ್ನೊಟ್ಟಿಗೇ.


Friday, November 27, 2015

`ಹನಿ' - ಸಫಲತೆ

ಸಫಲತೆ
ಎಲೆಮರೆಯ ಕಾಯಂತೆ
ತೆರೆಯ ಹಿಂದೇ ಬಲಿತು
ಫಲಿಸಲೆನ್ನೀ ಜೀವ
ಸಾರ್ಥಕ್ಯದಲ್ಲಿ

Wednesday, November 25, 2015

`ಹನಿ' - ಆಟ!

ಆಟ!

ನೀನಿಲ್ಲಿ
ಪಾದವೂರಿದಾಗಷ್ಟೇ
ನಿನ್ನ ಒಡನಾಟ,
ಅತ್ತಿತ್ತ ಹೆಜ್ಜೆ
ಸರಿಸಿದಾಕ್ಷಣವೇ
ಪತ್ತೆ ಇಲ್ಲದ ಓಟ!
ಇದೆಂಥಾ ವಿಚಿತ್ರ ಆಟ!

Saturday, November 21, 2015

ಹನಿ - ‘ಲೀನ’

ಲೀನ
ನಾನು
ಎಂಬುದ ಮೀರಿ
ನಾ
ನಿನ್ನೊಳಗೊಂದಾಗಬೇಕು,
ಸಿಂಧುವಿನಲಿ ಬಿಂದು
ಲೀನವಾಗುವಂತೆ!


Tuesday, November 17, 2015

ಹನಿ - `ನಾನರಿಯೆ'

ನಾನರಿಯೆ
ಅಲ್ಪ ಅಲ್ಪ ಕೋರಿಕೆಗಳಲೇ
ಈ ಬದುಕ ತುಂಬುತ್ತಿರುವೆಯಲ್ಲಾ...
ಎಂಬ ನಿನ್ನ ಎಚ್ಚರಿಕೆಯೇನೋ ಸರಿಯೇ
ಆದರೂ...
ಅಡಿಗಡಿಗೂ ನಿನ್ನ
ಒಡನಾಟವಿಲ್ಲದೇ
ಮುಂದಡಿಯಿಡುವುದು ಹೇಗೋ
ನಾನರಿಯೆ!


Monday, November 9, 2015

ಹನಿ - ಅರಿವು

ಅರಿತುಕೊಂಡೆ
ನನ್ನೊಳಗಿನೊಳಗಿಗೆ ಮಾತ್ರ
ನಿನ್ನೊಡನಾಡಲು
ಸಾಧ್ಯ,
ಬಾಹ್ಯ ಅಲ್ಪಾಪೇಕ್ಷೆಗಳೆಲ್ಲಾ
ವೈರುಧ್ಯ!

Tuesday, October 27, 2015

ನಮ್ಮ ಮತ್ಸ್ಯಕೊಳದಲ್ಲೀಗ ಕಾರ೦ಜಿಗಳ ವೈವಿಧ್ಯ :)

ನಮ್ಮ ಮತ್ಸ್ಯಕೊಳದಲ್ಲೀಗ ಕಾರ೦ಜಿಗಳ ವೈವಿಧ್ಯ :)



Saturday, October 24, 2015

2015ರ ದಸರಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ : `ನಾಲ್ಕು ಗೋಡೆಗಳಾಚೆ.....'

ನಾಲ್ಕು ಗೋಡೆಗಳಾಚೆ.....

ನಾಲ್ಕು ಗೋಡೆಗಳ ನಡುವಿನ                
ಬಂಧಿ ಈ ಜೀವ
ತೆರಪುಗಳಾವುದೂ ಗೋಚರಿಸದಂತೆ 
ಚಾಚಿದ ಅಗಾಧತೆಯ ಅವಿನಾಭಾವ

ಮುಂದೇನೆಂದು ಕಾಣದಾಗದ ಜೀವಕ್ಕೆ
ಹಿಂದಿನ ಮೆಲುಕುಗಳದೇ ಆಧಾರ
ಜಗಿಜಗಿದು ಸ್ವಾದರಹಿತವೆನಿಸಿದರೂ
ಉಗಿಯಲಾಗದ ವಿಚಿತ್ರ ಮೋಹದ
ತಾಂಬೂಲದಂತೆ!

ವರ್ತಮಾನವೋ ಗಾಢಾಂಧಕಾರ...
ಕತ್ತು ಹಿಡಿದು ದಬ್ಬುವಂಥಾ
ತಾಮಸತೆಯ ದರ್ಬಾರು,
ಭವಿಷ್ಯಕ್ಕೇ ಸವಾಲಿನಂತೆ
ನಾಲ್ಕು ದಿಕ್ಕುಗಳಿಗೂ ಚಾಚಿ
ಅಡ್ಡನಿಂತ ಅಖಂಡ ರಚನೆ

ಬಂದು ಬಿದ್ದಿದ್ದೆಲ್ಲಿಂದ?
ಮುಂದೆ ಸಾಗುವುದೆಲ್ಲಿಗೆ?
ನಡುವಣ ಬದುಕೆಲ್ಲಾ
ಈ ಬಂಧನಗಳಲೇ
ಕಾಲ ತುಂಬುವುದೇ?
ಬೇಸರ, ದ್ವಂದ್ವ, ತಾಕಲಾಟಗಳಲೇ
ಆಟ ಮುಗಿಸುವುದೇ?

ದೃಷ್ಟಿ ಹಾಯಿಸಿದಷ್ಟೂ
ಮುಂಚಾಚುವ ಗೋಡೆಗಳದೇ ನೋಟ
ಹೌದು, ಗೋಡೆಗಳಿಗೂ ಕಣ್ಣುಗಳಿವೆಯಂತೆ
ಕಿವಿಗಳಿರುವುದಂತೂ ಖಚಿತ!
ಕಾಣಬಲ್ಲ ಕೇಳಬಲ್ಲ
ಗೋಡೆಗಳೊಂದಿಗೇ ಸಾಂಗತ್ಯ!
ತನ್ನನ್ನೇ ಬಂಧಿಸಿದ್ದ
ಗೋಡೆಗಳೊಂದಿಗೇ ಗೆಳೆತನ!

ಗೋಡೆಗಳಿವು ಗೋಡೆಗಳಲ್ಲ
ತನ್ನ ಮುನ್ನಡೆಸುತಿರುವ ಜಾಡುಗಳು!
ತನ್ನನ್ನೇ ತಾ ಬಂಧಿಸಿಕೊಂಡ
ಕಟ್ಟುಗಳ ಸಡಿಲಿಸಿದಂತೆ
ಗೋಚರಿಸುತ್ತಿದೆ......
ನಾಲ್ಕುಗೋಡೆಗಳ ನಡುವಿನ ಬಂಧಿಗೆ
ಅನಂತಕೆ ತೆರೆದ ಕಿಟಕಿಗಳು!                                                                          
                                 
(2015ರ ದಸರಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ)





Wednesday, October 21, 2015

ದಸರಾ ಕವಿಗೋಷ್ಠಿ

2015ರ ದಸರಾ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಸ೦ದರ್ಭ:






Monday, October 12, 2015

ನಮ್ಮ ಮತ್ಸ್ಯಕೊಳಕ್ಕೆ ಮತ್ತೊಂದು ಚಿಲುಮೆ smile emoticon





Tuesday, October 6, 2015

`ಹನಿ' - ವಾಸ್ತವ

ವಾಸ್ತವ

ಬಂದಿದ್ದಾಗಿದೆ
ಓರ್ವ ಬಿಕ್ಷುಕಿಯಾಗಿ
ಈ ಭೂಮಿಗೆ,
ಬೇಡಿದಷ್ಟೂ
ತುಂಬದಾಗಿದೆ
ಈ ಬಾಳ ಜೋಳಿಗೆ!

Sunday, September 13, 2015

ಹನಿ - ಶೂನ್ಯ

ಶೂನ್ಯ
ಕಣ್ತೆರೆದು ನೋಡಿದೆ
ಎಲ್ಲವೂ ನನ್ನದಾಗಿತ್ತು
ಕಣ್ಮುಚ್ಚಿ ಕಂಡೆ
ನಾನೇ ಎಲ್ಲವೂ ಆಗಿ
ಇಲ್ಲವಾಗಿದ್ದೆ!

Saturday, September 5, 2015

`ಶಿಕ್ಷಕರ ದಿನಾಚರಣೆಯ ಶುಭಾಶಯಗಳು'

ಅಕ್ಷರವನ್ನು ಕಲಿಸುವುದರಿ೦ದ ಅ೦ತರ೦ಗದ ಅರಿವು ಮೂಡಿಸುವವರೆಗೂ ಬದುಕಿನ ಪ್ರತಿ ಹ೦ತದಲ್ಲಿಯೂ ನಮ್ಮೊ೦ದಿಗಿದ್ದು ಸಹಕರಿಸುವ, ಸಹಕರಿಸುತ್ತಿರುವ `ಗುರು'ವೆ೦ಬ ದಿವ್ಯ ಚೇತನಗಳಿಗೆ ನನ್ನ ಅನ೦ತ ನಮನಗಳು. ಜೀವನ ಪಥದಲ್ಲಿ ಒ೦ದಲ್ಲಾ ಒ೦ದು ರೀತಿಯಲ್ಲಿ `ಗುರು'ವಿನ ಸ್ಥಾನದಲ್ಲಿ ನಿ೦ತು ಉತ್ತಮ ಮಾರ್ಗದರ್ಶನ ನೀಡುತ್ತಿರುವ ಎಲ್ಲರಿಗೂ `ಶಿಕ್ಷಕರ ದಿನಾಚರಣೆಯ ಶುಭಾಶಯಗಳು' smile emoticon
ಈ ಸ೦ದರ್ಭದಲ್ಲಿ ಸೆಪ್ಟೆಂಬರ್೬, ೨೦೧೦ರ೦ದು ಪ್ರಕಟವಾಗಿದ್ದ ನನ್ನ ಒ೦ದು ಲೇಖನ:

Tuesday, September 1, 2015

ಟಫ್ಫಿ ಉವಾಚ:

ಟಫ್ಫಿ ಉವಾಚ:
ಎಷ್ಟೇ ಸುಲಿದರೂ ಒಂದು ಕಾಯನ್ನೂ ಪೂರ್ತಿ ಸುಲಿಯಕ್ಕೆ ಆಗಲೇಇಲ್ಲ. ಒ೦ದೊ೦ದು ಸಾರಿಗೆ ಒ೦ದೊ೦ದು ಕಾಯಿ ತ೦ದು ಸುಲಿಯೋ ಬದಲು ಒ೦ದೇ ಕಾಯನ್ನು ಬಿಡದ೦ತೆ ಸುಲಿದಿದ್ದರೆ ಇಷ್ಟು ದಿನಕ್ಕೆ ಒಂದು ಕಾಯಿಯನ್ನಾದರೂ ಸುಲೀತಿದ್ದೆನೋ ಏನೋ :(





Sunday, August 30, 2015

ಹನಿಗವನ : ‘ಟ್ರೆಡ್‌ಮಿಲ್

ಟ್ರೆಡ್‌ಮಿಲ್

ಒಂದೊಂದೇ
ಹೆಜ್ಜೆಯೂರಿದಾಗಲೂ
ಮುಂದೆ ಸಾಗುವಂತಿರಲಿ
ಈ ಬದುಕ ಪಯಣ,
ಹೆಜ್ಜೆಯ ನಂತರ
ಹೆಜ್ಜೆಯೂರುತ್ತಿದ್ದರೂ
ನಿಂತಲ್ಲೇ ನಡೆವ
ಟ್ರೆಡ್‌ಮಿಲ್ನಂತಾಗದಿರಲಿ
ಜೀವನ!


Tuesday, August 25, 2015

ಆಕಾಶವಾಣಿಯಲ್ಲಿ ನನ್ನ ಚಿ೦ತನ:

24-8-2015ರ೦ದು ಆಕಾಶವಾಣಿ, ಹಾಸನ ಕೇ೦ದ್ರದಲ್ಲಿ ನನ್ನ ಚಿ೦ತನ ರೆಕಾರ್ಡಿ೦ಗ್ ಆಯ್ತು. 2015 ಅಕ್ಟೋಬರ್ 7, 14, 21 ಮತ್ತು 28ರ೦ದು(ಎಲ್ಲಾ ಬುಧವಾರಗಳ೦ದು) ಆಕಾಶವಾಣಿ(FM), ಹಾಸನ ಕೇ೦ದ್ರದಿ೦ದ ಪ್ರಸಾರವಾಗುತ್ತದೆ.

ಈ ಕೆ೦ಪು ಹೂ ಗಿಡದ ಹೆಸರೇನು?

ಈ ವಾರದ `ಸುಧಾ' ದಲ್ಲಿ ಪರಿಚಯಿಸಿರುವ ಈ ಗಿಡ ನಮ್ಮ ಕೈತೋಟದಲ್ಲಿ ಬಹಳ ವರ್ಷಗಳಿ೦ದಲೂ ಇದೆ. ಇದರ ಸ್ಥಳೀಯ ಹೆಸರನ್ನು ತಿಳಿಸಿ.

Thursday, August 6, 2015

`ಕ೦ಡಷ್ಟೇ ಬೆಳಕೆ?' ಬಗ್ಗೆ ಅಭಿಪ್ರಾಯ:

ನನ್ನ ಕವನ ಸ೦ಕಲನ `ಕ೦ಡಷ್ಟೇ ಬೆಳಕೆ?' ಬಗ್ಗೆ ಕನ್ನಡ ಉಪನ್ಯಾಸಕರಾಗಿದ್ದ ಶ್ರೀ ಟಿ. ವಿ. ಶೇಷಾದ್ರಿಯವರ ಅಭಿಪ್ರಾಯ:

Tuesday, August 4, 2015

`ಕನ್ನಡ ಪ್ರಭ' ಪತ್ರಿಕೆಯ ದಿನಾಂಕ: ೦೨-೦೮-೨೦೧೫ರ `ಈ ಹೊತ್ತಿಗೆ'ಯಲ್ಲಿ ನನ್ನ ಕವನ ಸ೦ಕಲನ `ಕ೦ಡಷ್ಟೇ ಬೆಳಕೆ?'

`ಕನ್ನಡ ಪ್ರಭ' ಪತ್ರಿಕೆಯ ದಿನಾಂಕ: ೦೨-೦೮-೨೦೧೫ರ `ಈ ಹೊತ್ತಿಗೆ'ಯಲ್ಲಿ ನನ್ನ ಕವನ ಸ೦ಕಲನ `ಕ೦ಡಷ್ಟೇ ಬೆಳಕೆ?' 



smile emoticon

Friday, July 24, 2015

`ಕರ್ಮವೀರ' ಪತ್ರಿಕೆಯಲ್ಲಿ ನನ್ನ ಹನಿಗವನಗಳು:

ಜುಲೈ೧೯, ೨೦೧೫ರ `ಕರ್ಮವೀರ' ಪತ್ರಿಕೆಯಲ್ಲಿ ನನ್ನ ಹನಿಗವನಗಳು ಪ್ರಕಟವಾಗಿವೆ smile emoticon



Sunday, July 19, 2015

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ:

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ೨೦೧೪--೧೫ ನೇ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇಕಡಾ೧೦೦ ಅ೦ಕ ಪಡೆದ ವಿದ್ಯಾರ್ಥಿಗಳಿಗೆ `ಪ್ರತಿಭಾ ಪುರಸ್ಕಾರ' ಮತ್ತು ಕನ್ನಡದಲ್ಲಿ ಪಿ.ಹೆಚ್.ಡಿ.ಪಡೆದವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದು ಕಾರ್ಯಕ್ರಮವು ದಿನಾ೦ಕ:೧೮-೭-೨೦೧೫ರ೦ದು ನಡೆಯಿತು.ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನವನ್ನು ನಿರ್ವಹಿಸಲು ನನ್ನನ್ನು ಆಹ್ವಾನಿಸಿದ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜನಾರ್ಧನ್ ರವರು, ಗೌರವ ಕಾರ್ಯದರ್ಶಿಯವರಾದ ಗೊರೂರು ಶಿವೇಶ್ ರವರು ಹಾಗೂ ಸ೦ಬ೦ಧಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ,










Monday, July 13, 2015

ಅ೦ತಃಶಕ್ತಿ

ಮತ್ತೆ ಚಿಗುರುತಿದೆ ಪಪ್ಪಾಯ
ಈಗ ರಕ್ಷಣೆ ಅತ್ಯಗತ್ಯ smile emoticon


Monday, July 6, 2015

ಹಗ್ಗ

ಹೊಸೆಯುತ್ತಿದ್ದಾನೆ ಈತ ಹಗ್ಗವ
ಹೊಸೆದ ಭಾಗವ ಕಾಲಿನಿಂದ ಮೆಟ್ಟಿ
ಆಗಾಗ ಪರೀಕ್ಷಿಸುತ್ತಾ ಗಟ್ಟಿತನವ

ಉಡಿಯುತ್ತಲೇ ಮಧ್ಯೆ ಮಧ್ಯೆ
ಸೇರಿಸುವ ಸೆಣಬು
ಎಂದೋ ಕತ್ತಾಳೆ ಕೊಳೆಯಿಸಿ
ಸಿದ್ಧಗೊಳಿಸಿದ ಕಸುಬು

ಅಲ್ಲಲ್ಲಿ ತೆಂಗಿನ ಜುಂಗು
ಈಗೀಗ ಸಂಶ್ಲೇಶಿತ ನಾರು
ಎಂದೂ ಮುಗಿಯದ
ಕಾರುಬಾರು

ಆದಿಯಿಲ್ಲದ ಈ ಹಗ್ಗ
ಚಾಚುತಿದೆ ಅನಂತಕೆ
ಜೀಗುವುದಷ್ಟೇ
ಕಸುಬುಗಾರಿಕೆ!

ಅಂದು
ತೂಗುತೊಟ್ಟಿಲಾಗಿದ್ದು
ಜೀವಜಂತುಗಳಿಗೆ
ಉರುಲೂ ಆಗಿದೆ ಇಂದು
ಅಪರಾಧಿ ನಿರಪರಾಧಿಗಳಿಗೆಲ್ಲಾ

ಆಕಾಶಕ್ಕೇರಿಸುವ
ನೂಲು ಏಣಿ
ಪ್ರಪಾತದತ್ತ
ಹಾರಲೂ ಅಣಿ!

ಸುತ್ತ ಸೆಳೆಯುತಿದೆ
ಎಲ್ಲರನೂ ತನ್ನತ್ತ
ಅಲ್ಲಲ್ಲೆ ನಿರ್ಮಿತ
ದಾಟಲಾರದ ವೃತ್ತ

ಸ್ಪೋಟಗೊಳ್ಳುತಲೇ ಇದೆ
ಅತೃಪ್ತಿ
ಹಗ್ಗಕಿದರ ಎಗ್ಗೇ ಇಲ್ಲ
ಉದ್ದುದ್ದ ಬೆಳೆಯುತ್ತಲೇ ಇದೆ
`ಕೊಳೆ’ಯನೇ ಮೆತ್ತಿಕೊಳ್ಳುತ್ತಾ...
ಆಸ್ವಾದಿಸುತ್ತಾ...

Thursday, July 2, 2015

ಪಾಪ ಪಪ್ಪಾಯ!

ಅಡಚಣೆ ಮೀರಿ ಮುನ್ನುಗ್ಗಿ ಬೆಳೆಯುತ್ತಿದ್ದ ಕವಲು ಪಪ್ಪಾಯಕ್ಕೆ ಮತ್ತೊಂದು ಮಹಾಸಂಕಟ :( ಹಾಗಿದ್ದ ಪಪ್ಪಾಯ ಹೀಗಾಯ್ತು frown emoticon ಏನೂ ಅರಿಯದ ಮುಗ್ಧ ಮೇಯುತ್ತಾ ಮುಂದೆ ಸಾಗುತ್ತಿದೆ!


Sunday, June 28, 2015

ಬಿಗಿದುಕೊಂಡಿದ್ದೇವೆ ನಮ್ಮನ್ನೇ.....








ತಾಸುಗಳಲ್ಲೇ ನಿಮಿಷಗಳು
ಸೆಕೆಂಡ್ಸ್
ಮೈಕ್ರೊ, ನ್ಯಾನೊ 
ಏನೇನೋ
ವ್ಯವಧಾನವಿಲ್ಲ
ಸೂಕ್ಷ್ಮಾತಿ ಸೂಕ್ಷ್ಮ
ಕಾಲ ಗಣನೆಗೆ
ಉರುಳುತ್ತಿವೆ
ಗಂಟೆಗಳೇ
ಹಗಲು ರಾತ್ರಿಗಳ
ನಿರಂತರ
ಜೂಟಾಟದಲ್ಲಿ...
ಚಲಿಸುತ್ತಿರುವುದು
ಗಡಿಯಾರದ
ಮುಳ್ಳುಗಳೋ
ಗಡಿಬಿಡಿಯ
ಮರುಳೋ?
`ಟಿಕ್ ಟಿಕ್ ಗೆಳೆಯನೆ
ಟಿಕ್ ಟಿಕ್ ಟಿಕ್...’ಗೆ
ಹೆಜ್ಜೆಹಾಕಿ
ಕುಣಿಯುತ್ತಿದ್ದ
ಕಾಲುಗಳಿಗೀಗ
ಪುರುಸೊತ್ತಿಲ್ಲ
ನಿಲ್ಲಲೂ!
ಕಾಲುಗಳೇ ಗಡಿಯಾರದ
ಮುಳ್ಳುಗಳಾಗಿ
ಸಾಗಿದೆ
ಕಾಲನ ಓಟ
ಜೈವಿಕ ಗಡಿಯಾರಕ್ಕೂ
ಪ್ರಾಣ ಸಂಕಟ!
ಇರುಳನೇ ಬೆಳಗಾಗಿಸಿ
ದುಡಿವ
ಕೈಗಳಿಗೀಗ
ಅಜ್ಞಾತ ತಲೆಯ
ನಿರ್ದೇಶನ
ಹೌದು
ಕಟ್ಟಿಕೊಂಡಿಲ್ಲ ನಾವು
ಗಡಿಯಾರವ
ಬಿಗಿದುಕೊಂಡಿದ್ದೇವೆ
ನಮ್ಮನ್ನೇ
ಗಡಿಯಾರಕ್ಕೆ!
(image- web)

Friday, June 26, 2015

ಅ೦ತಃಸತ್ವ!



ಅ೦ತಃಸತ್ವ!
೧. ಕಿರುತೋಟದ ಪಪ್ಪಾಯ!
೨. ಬೀದಿಯ ಬದಿಯಲಿ ತಾನಾಗೇ ಬೆಳೆದು ಪಲ್ಲೈಸುತ್ತಿರುವ ಪಪ್ಪಾಯ!
೩. ಬೇಡದ ಸಸ್ಯಗಳ ನಡುವೆ ಬೆಳೆದದ್ದನ್ನು ಕತ್ತರಿಸಿ ಎಸೆದಿದ್ದರೂ ಪುನಃ ಕವಲೊಡೆದು ಚಿಗುರಿ ನಳನಳಸುತ್ತಿರುವ ಪಪ್ಪಾಯ!

Tuesday, June 23, 2015

ಮನದ ಅಂಗಳದಿ.....

ಬೆಳೆ ಇಲ್ಲದ ಜಾಗದಲ್ಲಿ 

ಬೆಳೆವುದು ಕಳೆ
ಯಥೇಚ್ಚ


ಪೈರನ್ನೇ ಹಿಮ್ಮೆಟ್ಟಿಸಿ
ಹುಲುಸಾಗುವಲ್ಲೇ
ವಿಕಟಾಟ್ಟಹಾಸ


ಉಳಿವಿಗಾಗಿ
ಪೈಪೋಟಿಯಲ್ಲಿ
ಸಮರ್ಥ ಕಳೆಗೇ
ಉಳಿವು


ಕಳೆಯ ನಿರ್ಮೂಲನೆಗೋ
ಹತ್ತೆಂಟು ಹಾದಿ
ಕಿತ್ತಷ್ಟೂ
ಮತ್ತೆ ಚಿಗುರುವ
ರಕ್ತ ಬೀಜಾಸುರನ ವಂಶ
ಬೆಳೆಗೇಕಿಲ್ಲ
ಆ ಒಂದೂ
ಅಂಶ?


ಬೆಳೆಯನೇ
ಬಳಸುವ
ಧೃತರಾಷ್ಟ್ರಾಲಿಂಗನ
ಎತ್ತಲಿಂದಲೋ
ಬಂದವತರಿಸಿದ
ಪಾಥೇನಿಯಂ
ಪಯಣ!


ಕಳೆಯ ನಾಶದತ್ತಲೇ
ಕೇಂದ್ರೀಕೃತ ಮನವ
ಬೆಳೆಯ
ಸದೃಢಗೊಳಿಸುವತ್ತ
ಕೊಂಡೊಯ್ದರೆ ಹೇಗೆ?


ಸಮರ್ಥ ಬೆಳೆ
ನಿಂತೀತು
ಕಳೆಯನೇ ಮೆಟ್ಟಿ
ಗೊಬ್ಬರವಾಗಿಸಿಕೊಳ್ಳುತ್ತಾ.....
ಆಸ್ವಾದಿಸುತ್ತಾ..........

Wednesday, June 10, 2015

`ಹನಿ'-ಆಕಾಂಕ್ಷೆ

ಬಿದ್ದರೂ ಚಿಂತಿಲ್ಲ

ಉಳಿಗಳ ಹೊಡೆತ
ಅವಿರತ
ಕಲೆಯಾಗಬಲ್ಲೆ,
ಆಗದಿರಲಿ ಸ್ಪೋಟ
ಅನಿರೀಕ್ಷಿತ
ಛಿದ್ರವಾಗಲೊಲ್ಲೆ!

Friday, May 29, 2015

ಹನಿ `ಸಾಪೇಕ್ಷ'

ಕಾರ್ಮುಗಿಲು ಕವಿದಾಗ 
ಸ್ಪಷ್ಟವಾಗುವುದು ಮಿಂಚು 
ಸ್ವಚ್ಛ ಅಂಬರಕೆ 
ಕನಸಲಾಗದ ಪೇಚು!

Tuesday, May 26, 2015

ಹನಿ `ನಷ್ಟ'

ಕಳೆದು ಹೋದ 
ಆಲಿಕಲ್ಲ
ಹುಡುಕುವ ಸಡಗರದಲ್ಲಿ
ಕೈಯಲಿದ್ದುದು
ಕರಗಿ ನೀರು!

Monday, May 11, 2015

`ಹನಿ'- ಕತ್ತಲೆ?


ಅಳತೆಗೆ ನಿಲುಕದ
ಅಸ್ಥಿತ್ವವೇ ಇಲ್ಲದ
ಓ ಕತ್ತಲೆ,
ಬೆಳಕಿನನುಪಸ್ಥಿತಿಯಲಷ್ಟೇ
ನಿನ್ನ ನೆಲೆ!

Friday, May 8, 2015

`ಹಾಸ್ಯದ ಹೊನಲು' ವಿನಲ್ಲಿ ನನ್ನ `ಜೇಬಾಯಣ'

ಸ್ನೇಹಬಳಗ, ಮೈಸೂರು ಇವರು ಹೊರತ೦ದಿರುವ `ಹಾಸ್ಯದ ಹೊನಲು' ಹಾಸ್ಯಲೇಖನಗಳ ಸ೦ಕಲನದಲ್ಲಿ ನನ್ನ ಲಲಿತ ಪ್ರಬ೦ಧ `ಜೇಬಾಯಣ' ಸೇರ್ಪಡೆಯಾಗಿದೆ ಎ೦ದು ತಿಳಿಸಲು ಸ೦ತಸವೆನಿಸುತ್ತಿದೆ smile emoticon ಸ್ನೇಹಬಳಗದ ಸ೦ಪಾದಕವರ್ಗಕ್ಕೆ ನನ್ನ ಅನೇಕ ಧನ್ಯವಾದಗಳು 

Wednesday, April 22, 2015

ಕನ್ನಡಿಯೊಳಗಿನ ಗಂಟು .....

ಹಿ೦ದಿನ ಹಾಸ್ಯ ಬರಹ ಇ೦ದಿನ ಓದಿಗೆ:
                                          ಕನ್ನಡಿಯೊಳಗಿನ ಗಂಟು  .....
`
 ಕನಸಿನ ನಂಟು ಕನ್ನಡಿಯೊಳಗಿನ ಗಂಟು’ ಸಮಯಾನುಸಾರ ಅಜ್ಜಿ ಈ ನುಡಿಗಟ್ಟುಗಳನ್ನು ಬಳಸಿದಾಗ ಚಿಕ್ಕವಳಲ್ಲಿ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಪೂವಾರ್ಧ ನನ್ನನ್ನಷ್ಟು ಚಿಂತೆಗೀಡುಮಾಡುತ್ತಿರಲಿಲ್ಲ. ಹಳ್ಳಿಯಲ್ಲಿ ವಾಸವಾಗಿದ್ದ ನಮ್ಮ ಮನೆಯಲ್ಲಿ ಯಾರಾದರೂ ಅತಿಥಿ ಅಭ್ಯಾಗತರಿಲ್ಲದೆ ಊಟಮಾಡುತ್ತಿದ್ದುದರ ನೆನಪೇ ಇಲ್ಲ. ಬೇಸಿಗೆ ರಜೆ ಬಂತೆಂದರೆ ಮನೆಯ ತುಂಬಾ ಬಂಧು ಬಳಗ! ಮಕ್ಕಳ ಒಂದು ಸೈನ್ಯವೇ ನಿರ್ಮಾಣವಾಗಿ ಹಗಲೆಲ್ಲಾ ಗದ್ದೆಬಯಲುಗಳಲ್ಲಿ ಅಲೆದು, ರಾತ್ರಿಯಾಯಿತೆಂದರೆ ಲ್ಯಾಂಪಿನ ಅಥವಾ ಬುಡ್ಡಿದೀಪದ ಬೆಳಕಿನಲ್ಲಿ ಗುಡ್ಡೆಹಾಕಿಕೊಂಡು ಕುಳಿತು ಅಜ್ಜಿಯೋ, ತಾತನೋ, ಆಳು ಪುಟ್ಟಪ್ಪನೋ ಹೇಳುವ ಕಥೆಗಳನ್ನು ಕೇಳುತ್ತಾ, ಬೆಳದಿಂಗಳಿತ್ತೆಂದರೆ ಅಂಗಳದಲ್ಲಿ ಹಾಸಿದ್ದ ಚಾಪೆಯಮೇಲೆ ಉರುಳಿಕೊಂಡು ಹರಟುತ್ತಾ....... ಕಾಲ ಕಳೆಯುತ್ತಿದ್ದುದರ ಅರಿವೇ ನಮಗಾಗುತ್ತಿರಲಿಲ್ಲ! ವಾಸ್ತವದಲ್ಲೇ ನಂಟೆಂಬ `ಅಂಟು’ ಸಹನಾತೀತವಾಗಿದ್ದುದರಿಂದ ?ಕನಸಿನ ನಂಟು? ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. `ಗಂಟು’ ಎನ್ನುವ ಪದ ಹಣಕ್ಕೇ ಸಂಬಂಧಿಸಿದುದೆಂಬ ಅರಿವಿದ್ದರಿಂದ- ಏಕೆಂದರೆ ನಾನು ಕೇಳುತ್ತಿದ್ದ ಕಥೆಗಳಲ್ಲೆಲ್ಲಾ ಸಾಮಾನ್ಯವಾಗಿ ಹಣದ ಗಂಟು-ಥೈಲಿಯ ಪ್ರಸ್ತಾಪವಿರುತ್ತಿದ್ದರಿಂದ ಮತ್ತು ಈ ಹಣದಿಂದ ನಾನು ಏನೇನೋ ಮಾಡಬೇಕೆಂಬ ಯೋಜನೆ ಇದ್ದುದರಿಂದ ಕನ್ನಡಿಯ ಒಳಗೆ ಹೇಗೆ ಈ ಗಂಟು ಹೋಗಿ ಸೇರಿಕೊಂಡಿತು? ಅದನ್ನು ಹೊರ ತೆಗೆಯುವ ಬಗೆ ಹೇಗೆ? ಎನ್ನುವುದೇ ನನ್ನ ಸಮಸ್ಯೆಯಾಗಿತ್ತು!
ನಾನು ವಿಜ್ಞಾನದ ವಿದ್ಯಾರ್ಥಿಯಾದ ನಂತರ ದರ್ಪಣ-ಪ್ರತಿಫಲನ ಎಂದೆಲ್ಲಾ ಓದುವಾಗ ಕನ್ನಡಿಯೊಳಗಿನ ಗಂಟು ಒಂದು ಪ್ರತಿಬಿಂಬ ಎಂದು ತಿಳಿದುಕೊಂಡೆ. ಪ್ರತಿಬಿಂಬ ಉಂಟಾಗಬೇಕಾದರೆ ಒಂದು ವಸ್ತು ಇರಲೇ ಬೇಕಲ್ಲ! `ಗಂಟು’ ಹೊರಗಿದ್ದಾಗ ಮಾತ್ರ ಕನ್ನಡಿಯ ಒಳಗೂ ಅದು ಕಾಣಲು ಸಾಧ್ಯ ಎಂಬ ತರ್ಕ ಪ್ರಾರಂಭವಾಯಿತು!
`ನಂಟ’ನ್ನು ಸಾಮಾನ್ಯವಾಗಿ ಸ್ವೀಕರಿಸಿ `ಗಂಟು’ ಬಗ್ಗೆ ತಲೆಕೆಡಿಸಿಕೊಳ್ಳುತ್ತಾ ಸಮಯ ವ್ಯರ್ಥಮಾಡುತ್ತಿದ್ದಾಗಲೇ ಅಜ್ಜಿಯ `ಗಂಟೂ ಪೋಯ, ನಂಟೂ ಪೋಯ’ ಎನ್ನುವ ಮತ್ತೊಂದು ಆರ್ಯೋಕ್ತಿ ವಿರೋಧಾಭಾಸವನ್ನುಂಟುಮಾಡಿತು. ಈ ಪರಿಸ್ಥಿತಿ ಆಗಾಗ ನಮ್ಮ ಮನೆಯಲ್ಲಿ ಉಂಟಾಗುತ್ತಿದ್ದ ಘಟನೆಗಳಿಂದ ಮೂರ್ತರೂಪ ಪಡೆದದ್ದು ಎನ್ನುವುದು ನಂತರ ನನಗೆ ಗೋಚರಿಸುತ್ತಾ ಹೋಯಿತು. ಆದರೆ `ಗಂಟು ಪೋಯ’ ಎನ್ನುವುದಷ್ಟೇ ಸತ್ಯವಾಗಿ ಬಹಳ ಉದಾರ ಮನಸ್ಕರಾದ ನಮ್ಮ ತಂದೆಯ ಸಹನಶೀಲತೆಗೆ, ಕ್ಷಮಾಗುಣಕ್ಕೆ ಪ್ರತಿಫಲವೋ ಎಂಬಂತೆ `ನಂಟೂ ಪೋಯ’ವಾಗಲು ಆಸ್ಪದವಾಗುತ್ತಿರಲಿಲ್ಲ. ಆ `ನಂಟು’ ಮುಂದಿನ ಬೇಸಿಗೆ ರಜಕ್ಕೆ ಸಕುಟುಂಬ ಪರಿವಾರ `ಸಮೇತ’(!)ರಾಗಿ ನಮ್ಮ ಮನೆಯಲ್ಲಿ ಠಿಕಾಣಿ ( ತಂದೆಯ ಕ್ಷಮಾಗುಣ ಅವರ `ಕುಟುಂಬ’ಕ್ಕೆ ಸದಾಕಾಲ ಸಿದ್ಧಿಸಿಲ್ಲದಿದ್ದರಿಂದ ಅಥವಾ ಅವರನ್ನು ಪೊರೆಯುವ ಎಂದರೆ ಉದರ ಪೋಷಣೆ ಮಾಡುವ ಗುರುತರವಾದ ಜವಾಬ್ಧಾರಿ ಇದ್ದ ನಮ್ಮ ತಾಯಿಯ ಹೊಣೆಗಾರಿಕೆಯ ಸ್ಪಷ್ಟ ಅಭಿವ್ಯಕ್ತಿಯನ್ನೇ ಬಳಸುತ್ತಿದ್ದೇನೆ!) ಹೂಡುತ್ತಿದ್ದರು. ಎಲ್ಲಾ ಹೊಟ್ಟೆಗಳನ್ನೂ ತುಂಬುವಷ್ಟು ಧವಸ ಧಾನ್ಯಗಳನ್ನು ನಮ್ಮ ಜಮೀನು ಒದಗಿಸುತ್ತಿತ್ತು. ತರಕಾರಿ, ಸೊಪ್ಪು ಸೆದೆಗಳನ್ನು ನಮ್ಮ ಹಿತ್ತಿಲು ಪೂರೈಸುತ್ತಿತ್ತು. ಒಬ್ಬ ಭಕ್ತ `ದೇವರೇ ನಾನು ನಿನ್ನನ್ನು ಹೆಚ್ಚೇನನ್ನೂ ಕೇಳುವುದಿಲ್ಲ. ನನ್ನ, ನನ್ನ ಆಶ್ರಿತರ ಹೊಟ್ಟೆತುಂಬಿಸುವಷ್ಟು, ಅತಿಥಿಗಳನ್ನು ಸತ್ಕರಿಸುವಷ್ಟು ಕೊಟ್ಟರೆ ಸಾಕು.’ ಎಂದು ಕೇಳುವಂತೆ ಸಾತ್ವಿಕರಾಗಿದ್ದ ನನ್ನ ತಂದೆಯ ಪ್ರಾರ್ಥನೆಯೂ ಆಗಿದ್ದಿರಬಹುದು.
ಓದಿ, ಕೆಲಸಕ್ಕೆ ಸೇರಿ ಆರ್ಥಿಕ ಸ್ವಾವಲಂಬಿಯಾಗಿ, ಗಂಡ-ಮಕ್ಕಳು-ಮನೆ ಎಂಬೆಲ್ಲಾ `ಸಕಲ'ಗಳ ನಡುವೆಯೂ ಇದ್ದಷ್ಟರಲ್ಲೇ ಸಾಕೆನ್ನುವಂತಿದ್ದ, ವೇತನಕ್ಕೆಂದೇ ಗೊತ್ತುಪಡಿಸಿದ, ತಿಂಗಳ ಕಡೆಗೆ ಬ್ಯಾಂಕ್‌ನವರು ನಿಗಧಿಪಡಿಸಿದ ಕನಿಷ್ಟ ಮೊತ್ತವನ್ನು ಮಾತ್ರ ಹೊಂದಿರುತ್ತಿರುವ ಎಸ್. ಬಿ. ಖಾತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ ಡಿಪಾಸಿಟ್ಸ್ ಹೊಂದಿಲ್ಲದ ನಮ್ಮ ಬೋಳೆ ಸ್ವಭಾವ ತಿಳಿದಿದ್ದ ನನ್ನ ಆತ್ಮೀಯರು ತಾವು ಲಾಭದಾಯಕ ಎಂದು ಕಂಡುಕೊಂಡ `ಹಣದ್ವಿಗುಣ’ಗೊಳಿಸುವ ಒಂದು ಸ್ಕೀಮಿಗೆ ನನ್ನನ್ನು ಪರಿಚಯಿಸಿ ನಾನೂ ಅದರಲ್ಲಿ ಹಣವನ್ನು ತೊಡಗಿಸಲು ಒತ್ತಾಯಿಸಿದರು. ತಾವೇ ಮುಂದೆ ನಿಂತು ಶೂರಿಟಿಯನ್ನೂ ಕೊಟ್ಟು ಬ್ಯಾಂಕ್ ಒಂದರಲ್ಲಿ ಸಾಲವನ್ನು ಮಾಡಿಸಿ ಆ ಸ್ಕೀಮಿಗೆ ಹಣವನ್ನು ಕಟ್ಟಿಸಿ ನನ್ನನ್ನು ಆರ್ಥಿಕೋದ್ಧಾರಗೊಳಿಸಿದ ಕೃತಾರ್ಥ ಭಾವದಲ್ಲಿ ಅವರು ಇರುವಾಗಲೇ ಅವರ ಜೊತೆಗೆ ನನ್ನ... (ಕ್ಷಮಿಸಿ, ಹೊಸದಾಗಿ ಸೇರ್ಪಡೆಯಾದ ನನ್ನ ಕಾಲ್ಗುಣ ಅಲ್ಲ ಕೈಗುಣವಾದ್ದರಿಂದ ನನ್ನ ಜೊತೆಗೆ ಅವರ) `ಗಂಟೂ’ ಮುಳುಗಿ ನಿಜಕ್ಕೂ `ಗಂಟೂ ಪೋಯ’ ಆಗೇ ಹೋಯ್ತು! ಈಗ ಅಪ್ಪಿ ತಪ್ಪಿಯೂ ಯಾರೂ ನನ್ನೆದುರು ಹಣಕಾಸಿನ ಪ್ರಸ್ತಾಪವನ್ನು ಎತ್ತುವುದೇ ತಪ್ಪೆನ್ನುವಂತೆ ವರ್ತಿಸುತ್ತಾ ನನ್ನನ್ನು ವಿತ್ತಾಸ್ಪರ್ಶಳನ್ನಾಗಿಸಿದ್ದಾರೆ!
`ಗಂಟು’ ಎನ್ನುವ ಬಗ್ಗೆ ಮೊದಲಿನಿಂದಲೂ ನನ್ನಲ್ಲಿ ಇದ್ದ ಜಿಜ್ಞಾಸೆಯ ಫಲವೋ, ಬಾಹ್ಯವಾಗಿ ಆರ್ಥಿಕವಾಗಿ `ಗಂಟು’ಮಾಡಲಾಗದ (ಅ!)ಸಾಮರ್ಥ್ಯವೋ ಏನೋ ಕ್ರಮೇಣ ನನ್ನೊಳಗೇ `ಗಂಟು’ಗಳು ಬೆಳೆಯಲಾರಂಭಿಸಿಬಿಟ್ಟವು! ಕತ್ತಿನಸುತ್ತ ಬೆಳೆಯಲಾರಂಭಿಸಿದ ಗಂಟುಗಳನ್ನು ಸಾಮಾನ್ಯ ಔಷಧಿಗಳಿಂದ ಜಗ್ಗಿಸಲಾಗದೇ (ಜಗ್ಗದ, ಕುಗ್ಗದ, ಕರಗದ....)ವಿಶೇಷ ತಜ್ಞರಿಗೆ ತೋರಿಸಿದಾಗ ಕ್ಷ-ಕಿರಣ, ರಕ್ತಪರೀಕ್ಷೆ, ಸ್ಕ್ಯಾನಿಂಗ್,... ಇತ್ಯಾದಿ ಎಲ್ಲರೀತಿಯ ಪ್ರಯೋಗಗಳನ್ನೂ ಮಾಡಿ ಬೆಟ್ಟ ಅಗೆದು ಇಲಿ ಹಿಡಿದಂತೆ `ಲಿಂಫ್ ನೋಡ್ಸ್’ ಎನ್ನುವ ತೀರ್ಮಾನಕ್ಕೆ ಬಂದು ಔಷದೋಪಚಾರ ಪ್ರಾರಂಭವಾಯ್ತು. `ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ’ ಎನ್ನುವ ಪ್ರಕೃತಿಯವಳಾದ್ದರಿಂದ `ಅಲರ್ಜಿ’ ಭೂತದ ಹಾವಳಿಯುಂಟಾಗಿ ಒಂದಕ್ಕೆ ಒಂದು ಫ್ರೀ ಎನ್ನುವಂತೆ ಉಪ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಮತ್ತು ವರ್ಷಾನುಗಟ್ಟಲೆ ತೆಗೆದುಕೊಂಡ ಔಷಧಿಗಳ ಸಕಾರಾತ್ಮಕ ಪರಿಣಾಮಗಳೂ ಕಾಣದಂತಾಗಿ ಆಲೋಪತಿಗೆ ತಾತ್ಕಾಲಿಕ ವಿದಾಯ ಹೇಳಿ ಆಯುರ್ವೇದಿಕ್ ಮೊರೆಹೋದದ್ದಾಯ್ತು. ಲೇಹ್ಯ, ಚೂರ್ಣ, ಕಷಾಯ, ಗುಳಿಗೆ, ತೈಲಾದಿಗಳದೇ ಲೇಪ, ಧೂಪಗಳಿಂದ ಕತ್ತನ್ನು ಉಪಚರಿಸುವ ಸಡಗರದಲ್ಲಿ ಗಂಟೋತ್ಪಾಟನಾ ಕಾರ್ಯದಲ್ಲಿ ತೊಡಗಿದ್ದಾಗ `ಎಲ್ಲಿ ಗಂಟು ಬಿದ್ದಳೋ ಇವಳು’ ಎಂದು ಗೊಣಗಿಕೊಳ್ಳುವಂತೆ (ಬ್ರಹ್ಮಗಂಟು!) ಪತಿಯ ಅವಕೃಪೆಗೊಳಗಾಗುವ ಕುತ್ತುಂಟಾಯಿತು. ಆದರೂ ಛಲಬಿಡದೇ ನಿಯಮಿತವಾಗಿ ವರ್ಷಗಟ್ಟಳೇ ವೈದ್ಯರ ಸಲಹೆಯಂತೆ ಮದ್ದುಗಳನ್ನು ಸೇವಿಸುತ್ತಾ `ಅನುವಂಶೀಯ’ ಗುಣವೇ ಇರಬಹುದಾದ ವೈದ್ಯ ಸ್ನೇಹಕ್ಕೆ ಭಾಜನಳಾದೆ! ನಾವಿದ್ದ ಹಳ್ಳಿಗೆ ಯಾರೇ ವೈದ್ಯರು ಬಂದರೂ ನಮ್ಮ ತಂದೆ ಅವರ ಸ್ನೇಹ ಸಂಪಾದಿಸಿ ಅವರು ಅನೇಕ ವಿಷಯದಲ್ಲಿ ನಮ್ಮ ತಂದೆಯ ಸಲಹೆ ಪಡೆಯುವಷ್ಟು ಸಲಿಗೆಯುಂಟಾಗುತ್ತಿತ್ತು. ಹೊಸ ವೈದ್ಯನಿಗಿಂತ ಹಳೆಯ ರೋಗಿಯೇ ವಾಸಿ ಎನ್ನುವಂತೆ ನನ್ನ ಸ್ಥಾನ ಮಾನವೂ ದಿನೇ ದಿನೇ ಏರಲಾರಂಭಿಸಿದ್ದಕ್ಕೆ ನಾನು ನನ್ನ ?ಗಂಟು?ಗಳಿಗೆ ವಂದನೆಗಳನ್ನು ಸಲ್ಲಿಸಲೇ ಬೇಕು! ಇದೇ ಧನ್ಯತಾ ಭಾವದಲ್ಲಿ ನಾನಿದ್ದಾಗ ಉಪಚಾರ ಹೆಚ್ಚಾದಾಗ ಕೆಲಸವಿಲ್ಲದ ಅಳಿಯ ಮಾವನ ಮನೆಯಲ್ಲಿಯೇ ಟೆಂಟ್ ಹಾಕುವಂತೆ ಕತ್ತನ್ನು ಸುತ್ತುವರಿದಿದ್ದ ಗಂಟುಗಳು ಕಿರಿದಾದ ಮರಿಗಳೊಡಗೂಡಿ ವಿಹರಿಸಲಾರಂಭಿಸಿದವು! ಹೇಗೋ ಒಬ್ಬ ಪರ್ಮದನೆಂಟ್ ಗಿರಾಕಿ ಸಿಕ್ಕಿತೆಂದು ಹಾಯಾಗೇ ಇದ್ದ ವೈದ್ಯರೂ ಹೌಹಾರಿ ಮತ್ತೊಮ್ಮೆ ಎಲ್ಲಾ ರೀತಿಯ ಪರೀಕ್ಷೆಗಳನ್ನೂ ಮಾಡಿಸಬೇಕೆಂದು ಸಲಹೆ ನೀಡಿದರು. ಹಣವನ್ನು ನೀರಿನಂತೆ_ ಕ್ಷಮಿಸಿ ವಾರಕ್ಕೆ ಒಮ್ಮೆಯೋ, ಎರಡು ಭಾರಿಯೋ ನೀರು ಬರುವುದರಿಂದ ನೀರುಹಿಡಿಯುವುದರಲ್ಲಿ (ಬಿಂದು ಬಿಂದು ಸೇರಿ ಸಿಂಧು!) ಕಣ್ಣೀರೂ ಬಂದಿರುತ್ತದೆ!_ಖರ್ಚುಮಾಡಿದ್ದಾಯಿತೇ ವಿನಾ ಪ್ರಯೋಜನವೇನೂ ಆಗಲಿಲ್ಲ. ಮತ್ತೊಮ್ಮೆ ಮೊದಲಿನ ಎಲ್ಲಾ ಪರೀಕ್ಷೆಗಳೊಡನೆ ಸಿಟಿಸ್ಕ್ಯಾನ್‌ನಂತಹ ನವನವೀನ ಪರೀಕ್ಷೆಗಳಿಗೆ ದೇಹವನ್ನು ಒಡ್ಡಿ ಹೊಸ ಅನುಭವಗಳನ್ನು ಪಡೆದುಕೊಂಡಿದ್ದಾಯ್ತು! ವೈದ್ಯರು ತೋರಿಸುತ್ತಿದ್ದ ಅನುಮಾನ, ಆತಂಕಗಳಿಂದ ಭಯಗೊಂಡ ಕುಟುಂಬವರ್ಗದವರು ಹಾಗೂ ಬಂಧುಬಾಂಧವರು ನನ್ನ ಬಗ್ಗೆ ತೋರಿಸುತ್ತಿದ್ದ ವಿಶೇಷ ಪ್ರೀತಿ, ಪ್ರಾಮುಖ್ಯತೆಗಳಿಂದ ನಾನೊಬ್ಬ ವಿ.ವಿ.ಐ.ಪಿ.ಯಾಗುವ ಅವಕಾಶ ಕೂಡಿ ಬಂದು ನನ್ನ ಈ ಗಂಟುಗಳಿಗೆ ಚಿರಋಣಿಯಾಗಿರುವ ಸಂದರ್ಭವೊದಗಿ ಬಂದಿದೆಯೆನಿಸಿತು! ಈ ಆಂತರಿಕ ಗಂಟುಗಳೊಡನೆಯೇ ರಾಜಿ ಮಾಡಿಕೊಂಡು ಜೀವನ ನಡೆಸಬೇಕೇನೋ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಸರಣಿ ಆಲೋಪತಿಕ್ ಔಷದೋಪಚಾರ ಪ್ರಾರಂಭವಾಯ್ತು! ಈಗಂತೂ ದಿನನಿತ್ಯದ ಆಹಾರ (ನನ್ನಂತೆಯೇ ಸಪ್ಪೆ!) ಸೇವನೆಯೊಂದಿಗೇ `ಗುಳಿಗಾ ಸ್ವಾಹಾ’ವನ್ನೂ ಅತ್ಯಂತ ಸಹಜವಾಗೇ ಸ್ವೀಕರಿಸಿ `ಗಂಟು’ಸೇವೆಯನ್ನು ಮುಂದುವರಿಸಲಾರಂಭಿಸಿದೆ! ತಮ್ಮದೇ ಅನೇಕ ಗೌರವಾನ್ವಿತ ಅನಾರೋಗ್ಯ ಸಮಸ್ಯೆಗಳ ರಾಜಯೋಗದಲ್ಲಿದ್ದು, ದಿನಕ್ಕೆ ಕಮ್ಮಿಯೆಂದರೂ ೨೦-೨೫ ಮಾತ್ರೆಗಳನ್ನು ಸೇವಿಸುತ್ತಿದ್ದ `ಇವರ’ ಎದುರು ನಾನಂತೂ ‘ಯಃಕಚಿತ್’’ ಆಗೇ ಉಳಿಯಬೇಕಾಯಿತು!
ವಾಹನಗಳ ಬಳಕೆ ಕಡಿಮೆ ಇದ್ದ ಕಾಲದಲ್ಲಿ ಅಗಸರು ಒಗೆಯಬೇಕಾದ ಬಟ್ಟೆಗಳನ್ನು ಗಂಟುಕಟ್ಟಿ ಕತ್ತೆಯ ಮೇಲೆ ಹೇರಿಕೊಂಡು ಹೋಗುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯವನ್ನು ಕಾಣಬಹುದು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ `ನೀ ನನಗಿದ್ದರೆ ನಾ ನಿನಗೆ’ ಎಂಬ ಪದ್ಯ ಓದಿದ್ದು, ಅದರಲ್ಲಿ ಕೊಟ್ಟಿದ್ದ ಚಿತ್ರ, ‘ಕತ್ತೆ ಬೆನ್ನ ಮೇಲಿನ ಹೊರೆಯ ಭಾರ ತಾಳಲಾರದೇ ಗೋಳಾಡುತ್ತಿರುವುದು, ಕುದುರೆ ತನಗೇನೂ ಸಂಬಂದಿಸಿಲ್ಲವೆನ್ನುವಂತೆ ನಿಂತಿರುವುದು,’ ಇನ್ನೂ ಮನಃಪಟಲದಲ್ಲಿ ನಿಶ್ಚಳವಾಗಿದೆ! ಅಜ್ಞಾತ ವಾಸ ಪ್ರಾರಂಭವಾದಾಗ ಪಾಂಡವರು ತಮ್ಮ ಆಯುಧಗಳನ್ನೆಲ್ಲಾ ಗಂಟುಕಟ್ಟಿ ಬನ್ನಿಮರದ ಮೇಲೆ ಇಟ್ಟಿದ್ದರು ಎನ್ನುವುದನ್ನು ನೆನಪು ಮಾಡುತ್ತಾ ವಿಜಯದಶಮಿಯ ದಿನ ಬನ್ನಿ ಮುಡಿಯುವುದನ್ನು ಸಂಪ್ರದಾಯವಾಗಿಸಿದ್ದಾರೆ.
ನಾನು ಚಿಕ್ಕವಳಿದ್ದಾಗ (ಈಗಲೂ ಚಿಕ್ಕವಳೆಂದೇ ಭಾವಿಸಿದ್ದೇನೆ! ನೋಡಿದವರು ಸಹಿಸಿಕೊಳ್ಳಬೇಕು ಅಷ್ಟೆ! ನಿನ್ನೆ ಇವತ್ತಿಗಿಂತ ಚಿಕ್ಕವಳಿದ್ದೆ-ನಾಳೆಗೆ ಇವತ್ತಿಗಿಂತ ದೊಡ್ಡವಳಾಗಿರುತ್ತೇನೆ. ಆದ್ದರಿಂದ ಕೆಲವು ವರ್ಷಗಳ ಹಿಂದೆ...) `ರಾಮದಾಸರು ಗಂಟು ಬಿಚ್ಚಿದರು’ ಎನ್ನುವ ಒಂದು ಲೇಖನವನ್ನು ಓದಿದ್ದೆ. ಒಮ್ಮೆ ಸಮರ್ಥ ರಾಮದಾಸರು ರೈಲಿನಲ್ಲಿ ಪ್ರಯಾಣಮಾಡುವಾಗ ಚೆಕಿಂಗ್‌ನವರು ಅನುಮಾನದಿಂದ ಗಂಟಿನಲ್ಲಿ ಏನಿದೆಯೋ ಎಂದು ಬಿಚ್ಚಿಸಿದಾಗ ಅದರೊಳಗಿದ್ದ ಆಧ್ಯಾತ್ಮಿಕ ಸಂಪತ್ತನ್ನು ನೋಡಿ ಆಶ್ಚರ್ಯಚಕಿತರಾದರೆಂಬ ನೆನಪು. ರಾಹುಲ ಸಾಂಕೃತ್ಯಾಯನ ಎಂಬ ಮಹಾಜ್ಞಾನಿ ಅನೇಕ ಭಾರಿ ಟಿಬೆಟ್ ಯಾತ್ರೆ ಮಾಡಿ ನಮ್ಮ ಭರತಖಂಡದಿಂದ ಟಿಬೆಟ್‌ಗೆ ಕೊಂಡೊಯ್ದಿದ್ದ ಅಮೂಲ್ಯ ಬೌದ್ಧಗ್ರಂಥಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಗಂಟುಕಟ್ಟಿಕೊಂಡು ತಂದು ನಮ್ಮ ಜ್ಞಾನ ಸಂಪತ್ತನ್ನು ಸಂರಕ್ಷಿಸಿದರು. `ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ....’ವಿಶ್ವಾದ್ಯಂತ ಅನೇಕ ಭಾರಿ ಸಂಚರಿಸಿ, ಕಳೆದ ಸುಮಾರು ೨೫ವರ್ಷಗಳಿಂದ ಬಿಳಿಗಿರಿರಂಗನ ಬೆಟ್ಟದ ಪ್ರಶಾಂತ ತಾಣದಲ್ಲಿ ಏಕಾಂತವಾಸಿಗಳಾಗಿರುವ ಸ್ವಾಮಿ ನಿರ್ಮಲಾನಂದರ ಬಗ್ಗೆ ಓದುವಾಗ ಗಮನ ಸೆಳೆದ ವಾಕ್ಯಗಳಿವು. ಬಾಳಬಟ್ಟೆಯಲ್ಲಿ ವ್ಯಕ್ತ, ಅವ್ಯಕ್ತ ಗಂಟುಮೂಟೆಗಳನ್ನು ಹೊತ್ತು ಸಾಗುವ ನಾವು ಅವುಗಳೊಂದಿಗೇ ನಮ್ಮನ್ನು ನಾವು ತಾದ್ಯಾತ್ಮಗೊಳಿಸಿಕೊಂಡು ಬಿಟ್ಟಿರುತ್ತೇವೆ. ನಾವು ಬಿಡುತ್ತೇವೆಂದರೂ ನಮ್ಮನ್ನು ಬಿಡದ ಈ ಗಂಟು ಮೂಟೆಗಳು `ತಲೆನೋವು ಬಂದಾಗ ತಲೆ ಇದೆ’ ಎಂದು ಸಾಬೀತಾಗುವಂತೆ ತಮ್ಮ ಇರವಿನಿಂದ ನಮ್ಮ ಬದುಕಿಗೊಂದು ಅರ್ಥ ಎನ್ನುವಂತೆ ನಮ್ಮನ್ನೇ ಆಳಲಾರಂಭಿಸಿಬಿಡುತ್ತವೆ. ಅವುಗಳ ತೂಕ ಸಹನೀಯವೆನಿಸುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳೋಣ, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು, ಬದುಕ ಕಗ್ಗಂಟುಗಳನ್ನು ಮೂಟೆಕಟ್ಟಿ ದೂರಬಿಸುಟು ಧನಾತ್ಮಕಗಳನ್ನು ನಮ್ಮದಾಗಿಸಿಕೊಂಡು ಮೂಟೆಯ ಭಾರವನ್ನು ಹಗುರಗೊಳಿಸಿಕೊಳ್ಳೋಣ. ನಗುತ, ನಗಿಸುತ ಬದುಕುವ ಕಲೆಯನ್ನು ಕಲಿಯೋಣ...ಎಂದುಕೊಳ್ಳುತ್ತಾ ಗಂಟು ಮೋರೆಯೊಂದಿಗೆ ನನ್ನನ್ನೇ ನಾನು ಸಂತೈಸಿಕೊಳ್ಳುವಂತಾಗಿಬಿಟ್ಟಿದೆ `ಗಂಟು’ಗಳು ಉಂಟು ಮಾಡಿರುವ ನನ್ನ ಈ ಪರಿಸ್ಥಿತಿ!
ಹಿಂದೊಮ್ಮೆ ಅಜ್ಜಿಯು ಹೇಳುತ್ತಿದ್ದ `ಕನ್ನಡಿಯೊಳಗಿನ ಗಂಟು’ ನನ್ನ ಎಳೆಮನದಲ್ಲಿ `ಆ ಗಂಟನ್ನು ಹೊರತೆಗೆಯುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ಈಗಿನ ಎಲ್ಲಾ ಗೋಜಲುಗಳು `ಈ ಗಂಟನ್ನು ಪುನಃ ಕನ್ನಡಿಯ ಒಳಗೇ ಸೇರಿಸುವುದು ಹೇಗೆ?’ ಎಂದು ನನ್ನನ್ನೇ ಪ್ರಶ್ನಿಸುತ್ತಿವೆ! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು’ಆಗೇ ಉಳಿದುಬಿಡಲಿ. ಅದರ ಸಹವಾಸವೇ ಬೇಡ. ಎಂದರೆ `ಪಲಾಯನವಾದ’ವೆನ್ನುತ್ತೀರಾ?
( ಇದು ಅಕ್ಟೋಬರ್ ೦೨, ೨೦೧೧ರ ‘ಕರ್ಮವೀರ’ ಸಾಪ್ತಾಹಿಕದಲ್ಲಿ ಪ್ರಕಟವಾಗಿದೆ.)

Wednesday, April 8, 2015

ಮತ್ತೊ೦ದು ಹಿ೦ದಿನ ಬರಹ : ಲಸನ್ ಮಂದಹಾಸ.....

                                            ಲಸನ್ ಮಂದಹಾಸ.....
       
                                 `............ಮಂದಹಾಸ ಪ್ರಭಾ ವಕ್ರ ತುಂಡ
                                  ಚಲತ್ ಚಂಚಲ...............................’
          ನಿದ್ದೆಯ ಮಂಪರಿನಲ್ಲೇ ದಿನದ ಪ್ರಾರಂಭಕ್ಕಾಗಿ ಮನಸ್ಸನ್ನು ಅಣಿಗೊಳಿಸಿಕೊಳ್ಳುವ ವೇಳೆಯಲ್ಲಿ ಆಕಾಶವಾಣಿಯಿಂದ ತೇಲಿಬರುತ್ತಿದ್ದ ಈ ಸಾಲುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದ್ದವು. ಬೆಳಗಾದದ್ದನ್ನು ಸಾರುತ್ತಿದ್ದುದೇ ಅಮ್ಮ ಪ್ರತಿದಿನ ತಪ್ಪದಂತೆ ಹಾಕುತ್ತಿದ್ದ ಆಕಾಶವಾಣಿಯ ಗೀತಾರಾಧನಾ ಕಾರ್ಯಕ್ರಮ. ಅಮ್ಮ ವೇಳೆ ತಿಳಿಯಲು ಗಡಿಯಾರ ನೋಡುತ್ತಿದ್ದುದೇ ಅಪರೂಪ.  `ಆಗಲೇ ಚಿಂತನ ಬರ್‍ತಿದೆ ಇನ್ನೂ ಎಲ್ಲರಿಗೂ ಕಾಫಿ ಆಗಿಲ್ಲ’, `ವಾರ್ತೆ ಬರೋ ಹೊತ್ತಿಗಾದರೂ ಹಾಲು ಕರೆದಿರಬೇಕು’,, ಎಂದು ಸ್ವಗತ ಸಂಭಾಷಣೆಗಳಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಈ ಶಾರದಾ ಭುಜಂಗ ಸ್ತೋತ್ರದಲ್ಲಿ `ಪಿ.ಬಿ’(ಅಮ್ಮ ತನ್ನ ಮೆಚ್ಚಿನ ಗಾಯಕರನ್ನು `ಪಿ.ಬಿ’., `ಎಸ್.ಪಿ’, ಎಂದೇ ಹ್ರಸ್ವವಾಗಿ ಕರೆಯುತ್ತಿದ್ದುದು ನಮಗೂ ರೂಢಿಯಾಗಿತ್ತು.) `ಪ್ರಭಾಎಂದು ಉಚ್ಛರಿಸುತ್ತಿದ್ದ ಘನ ಘಂಭೀರ ಧನಿಗೆ ನಾನು ಬಹಳವಾಗಿ ಮನಸೋತಿದ್ದೆ! ಇದೇ ಗುಂಗಿನಲ್ಲಿ ಬೆಳೆದ ನಾನು ಮುಂದೆ ಇಂತಹದೇ ಕರೆಯನ್ನು ನನ್ನ ಪತಿಯಿಂದ ನಿರೀಕ್ಷಿಸಿದ್ದು ನನಗೆ ಕಿರಿಕಿರಿಯೇ ಆಗುವಂತಾಯ್ತು. ಅವರಿಗೆ ಈ ರೀತಿ ಸಂಭೋದನಾ ಚತುರತೆಯೇ ಸಿದ್ಧಿಸಿರಲಿಲ್ಲ. ಅವರ `ಮೆಗಾಕುಟುಂಬದಲ್ಲಿ ಎಲ್ಲರೂ ಈ ಎಲ್ಲಾ ಚಾತುರ್ಯವನ್ನೂ ತಮ್ಮ ಹಿರಿಯಣ್ಣನಿಗೇ ಮೀಸಲಿಟ್ಟಂತಿದ್ದರು. ಮೊದಲ ಸಾರಿ ಅವರ ಮನೆಗೆ ಹೋದಾಗ ಪೂಜೆಗೆ ಕುಳಿತಿದ್ದ `ಹಿರಿಯಣ್ಣನಿಮಿಷಕ್ಕೊಮ್ಮೆ `ಲಲಿತಾ..., ಲಲಿತಾ...ಎಂದು ಕೂಗುವುದನ್ನು ಕೇಳಿ ನಮ್ಮ ಸಂಬಂಧಿಯೊಬ್ಬರು `ಇದೇನು ಲಲಿತಾ ಸಹಸ್ರನಾಮ ಮಾಡುತ್ತಿದ್ದಾರೆಯೇ?’ ಎಂದು ಕೇಳಿದ್ದರು!
           ಮೊದಲ ಭಾರಿಗೆ ಇವರೊಡನೆ ಹೊಟೆಲ್‌ಗೆ ಹೋದದ್ದನ್ನು ಮರೆಯುವಂತೆಯೇ ಇಲ್ಲ. ಕುಳಿತ ತಕ್ಷಣವೇ ಇವರು `ಮಾಣಿಪ್ರವರ ಒಪ್ಪಿಸುವುದನ್ನೂ ಕಾಯದೇ ಅಥವಾ ಮುಖ್ಯವಾಗಿ ನನ್ನನ್ನೂ ಕೇಳದೇ ಮಸಾಲೆ ದೋಸೆಗೆ ಆರ್ಡರ್ ಮಾಡಿದಾಗ ಇವರು ಪರ(ಪರಸ್ತ್ರೀ)ಇಂಗಿತ ಪ್ರಜ್ಞರಂತೆಯೇ ಕಂಡಿದ್ದರು. ತಟ್ಟೆಗಳಲ್ಲಿ ಹಾಯಾಗಿ ಪವಡಿಸಿದ ದೋಸೆಯುಕ್ತ ಪ್ಲೇಟ್‌ಗಳು ಟೇಬಲ್ ಮೇಲೆ ಹಾಜರಾದ ತಕ್ಷಣವೇ ಗರಿಗರಿ ದೋಸೆಯ ಅಂತರಂಗವನ್ನು ಬಗೆದ (ಹಿರಣ್ಯಕಷ್ಯಪನ ಉದರವನ್ನು ಸೀಳಿದ ಸಾಕ್ಷಾತ್  ನರಸಿಂಹಾವತಾರವೇ ಮೂರ್ತಿವೆತ್ತಂತೆ!) ಇವರು ಹೇಳದೇ ಕೇಳದೇ ಎದ್ದು ಹೊರನಡೆದೇ ಬಿಟ್ಟರು. ಇನ್ನೇನು ಬರಬಹುದು ಎಂದು ಮುರಿದ ದೋಸೆಯ ತುಂಡನ್ನು ಕೈಯಲ್ಲಿ ಹಿಡಿದಿದ್ದ ನಾನು `ಕೈಯೊಳಗೇತಕೆ ಬಾಯೊಳಗಿದ್ದರೆ ಆಗದೆ ಮರಿಕಪಿಯೊಂದಾಗ `ಎಂದ ಮನದ ಮಾತನ್ನು ಪುಷ್ಠೀಕರಿಸಿ ಮೆಲ್ಲ ಮೆಲ್ಲನೆ ಮೆಲ್ಲುತ್ತಾ ಹಿಂತಿರುಗಿ ನೋಡಿದಾಗ ಕೌಂಟರ್‌ನಲ್ಲಿ ಹಣ ನೀಡಿ ಹೊರನಡೆಯುತ್ತಿದ್ದ ಇವರನ್ನು ಕಂಡು ರಸಭಂಗವಾದಂತೆ ತಿನ್ನುವುದನ್ನು ಅಷ್ಟಕ್ಕೇ ಬಿಟ್ಟು ಒಲ್ಲದ ಮನಸ್ಸಿನಿಂದಲೇ ಹೊರ ಬಂದಿದ್ದೆ. ನಂತರವೇ ತಿಳಿದದ್ದು ಆ ದೋಸೆಗೆ ಬಳಿದಿದ್ದ ಕೆಂಪು ಚಟ್ನಿಗೆ ಬೆಳ್ಳುಳ್ಳಿ ಹಾಕಿದ್ದರು ಎಂದು.
            ಈರುಳ್ಳಿಗೇ ವಾರದಲ್ಲಿ ಮೂರುದಿನ ನಿಷಿದ್ಧವಿದ್ದ ನಮ್ಮ ಮನೆಯಲ್ಲಿ ಅಡುಗೆಯ ಮನೆಯ ಸಾಮ್ರಾಜ್ಞಿ ಅಮ್ಮ ಬೆಳ್ಳುಳ್ಳಿಯನ್ನು ಬಳಸುತ್ತಲೇ ಇರಲಿಲ್ಲ. ಆದರೂ ಆ ವಿಶಿಷ್ಟ ಘಾಟು ವಾಸನಾಯುಕ್ತ ತೀವ್ರ ರುಚಿಯ ಬಗ್ಗೆ ನಮಗೆ ಏನೋ ವಿಚಿತ್ರ ಮೋಹ. ಅಟ್ಟಲು ಗದ್ದೆ ಸಮಯದಲ್ಲಿ ಆಳುಮಕ್ಕಳಿಗೆ ಮಾಡುತ್ತಿದ್ದ `ಮೆಣಸು ಬೆಳ್ಳುಳ್ಳಿ’ ಕಾರವನ್ನು ನಾವೂ ಕಣ್ಣು ಮೂಗಲ್ಲೆಲ್ಲಾ ನೀರು ಸುರಿಸಿಕೊಂಡು `ಹಾ...ಹಾ...’ ಎನ್ನುತ್ತಾ ತಿನ್ನುತ್ತಿದ್ದೆವು! ಇವರಿಗೆ ಬೆಳ್ಳುಳ್ಳಿಯ ಬಗ್ಗೆ ಇರುವ ಈ ಬಗೆಯ ಆದರವನ್ನು ನೋಡಿ ನನಗಂತೂ ತೀವ್ರ ನಿರಾಸೆಯೇ ಆಯ್ತು. ನನ್ನ ಆಸೆಯ ಈ ಘಾಟನ್ನು ಆಘ್ರಾಣಿಸಿದವರಂತೆ `ಈಗ ಸಾಮಾನ್ಯವಾಗಿ ಎಲ್ಲಾ ಹೊಟೆಲ್‌ಗಳಲ್ಲೂ ಬೆಳ್ಳುಳ್ಳಿಯನ್ನ ಉಪಯೋಗಿಸ್ತಾರೆ...’ಎಂದುಕೊಂಡು ಅನಿವಾರ್ಯವೆನಿಸಿದರೂ ಹೊಟೆಲ್‌ಗೆ ಹೋಗುವುದನ್ನೇ ನಿಲ್ಲಿಸಿ ಉಳಿತಾಯ ಯೋಜನೆ ಪ್ರಾರಂಭಿಸಿಬಿಟ್ಟರು. ನಮ್ಮ ಮನೆಗಂತೂ ಯಾವ ಕಾರಣಕ್ಕೂ ಬೆಳ್ಳುಳ್ಳಿಗೆ ಪ್ರವೇಶವೇ ಇಲ್ಲ ಎನ್ನುವುದಂತೂ ಖಚಿತವಾಗಿಹೋಯ್ತು. `ಬಾಣಂತಿ’ಊಟವಾಗಿ ಬರುತ್ತಿದ್ದ ಬೆಳ್ಳುಳ್ಳಿಗೂ ಬಹಿಷ್ಕಾರವಾಯ್ತು. ಹೀಗೆ ಒಂದು ದಿವ್ಯೌಷಧ, ರಾಮಬಾಣವೆನಿಸಿದ ಬೆಳ್ಳುಳ್ಳಿಯ ನಿಷಿದ್ಧ ಪ್ರದೇಶವಾಗಿ ನಮ್ಮ ಮನೆ ರೂಪುಗೊಂಡಿತು.
             ಇವರು ಇಷ್ಟೆಲ್ಲಾ ವರ್ಜಿಸಿದ್ದರೂ ಒಮ್ಮೆಯಂತೂ ಈ ದಿವ್ಯೌಷಧಿಯೇ ಇವರ ಕೆಳಗಿಳಿದ ರಕ್ತದೊತ್ತಡವನ್ನು ಮೇಲೇರಿಸುವುದರಲ್ಲಿ ಸಹಕಾರಿಯಾಗಿದ್ದನ್ನು ನೆನಪಿಸಿಕೊಳ್ಳಲೇ ಬೇಕು. ಇವರಿಗೆ ಒಮ್ಮೆ ಅನಾರೋಗ್ಯವಾಗಿ ತೀವ್ರನಿಗಾಘಟಕದಲ್ಲಿ ಇಟ್ಟಿದ್ದಾಗ ಇದ್ದಕ್ಕಿದ್ದಂತೆಯೇ ರಕ್ತದೊತ್ತಡ ಇಳಿಯಲಾರಂಭಿಸಿತು. ಡಾಕ್ಟರ್‌ಗಳೆಲ್ಲಾ ತರಾತುರಿಯಲ್ಲಿ ಚಿಕಿತ್ಸೆ ನೀಡಿ ಸಹಜಸ್ಥಿತಿಗೆ ತರುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಪೇಷೆಂಟ್ ಊಟ ಬಂದಿದ್ದರಿಂದ ಕ್ರಮೇಣ ಸರಿಹೋಗುವುದಾಗಿ ತಿಳಿಸಿ ಊಟ ಕೊಡಲು ಹೇಳಿದರು. ತಿಳಿಸಾರು ಅನ್ನ ಕಲೆಸಿ ಸ್ಪೂನ್‌ನಲ್ಲಿ ಇನ್ನೇನು ಬಾಯಿಗಿಡಬೇಕು ಆ ಕ್ಷಣವೇ ಬಿ.ಪಿ. ನಾರ್‍ಮಲ್ ಬಿಟ್ಟು ಮೇಲೇರಲಾರಂಭಿಸಿತು! ಇವರಂತೂ ಬಾಯಿ ಬಿಡದೇ ಎಳೇ ಮಗುವಿನಂತೆ ಹಠ ಹಿಡಿದು ಊಟ ಬೇಡವೆಂದು ಸನ್ನೆ ಮಾಡಲಾರಂಭಿಸಿದರು. ಮೊದಲೇ ಗಾಭರಿಗೊಂಡಿದ್ದ ನಾನು ಆಗ ಗಮನಿಸಿದೆ ಸಾರಿಗೆ ಬೆಳ್ಳುಳ್ಳಿ ಹಾಕಿದ್ದಾರೆಂಬುದನ್ನು! ಆದರೂ ..., ಹೃದಯಕ್ಕೆ ಒಳ್ಳೆಯದು ಎಂದು ಯಾವ ಡಯಟೀಷಿಯನ್ ಏನೇ ಹೇಳಿದರೂ ಇವರ ವ್ರತಭಂಗ ಮಾಡಲಾಗಲಿಲ್ಲ!
              ಕುಟುಂಬದವರೆಲ್ಲಾ ಒಮ್ಮೆ ಶಿರಡಿಯಾತ್ರೆ ಕೈಗೊಂಡರು. ಈ ಮೊದಲೇ ಎಂದರೆ ಮದುವೆಯಾದ ಹೊಸತರಲ್ಲೇ ದಕ್ಷಿಣ ಕರ್ನಾಟಕದ ಪ್ರಮುಖ ಯಾತ್ರಾಸ್ಥಳಗಳಿಗೆಲ್ಲಾ ಇವರ ಹರಕೆಗಳನ್ನು ತೀರಿಸಲು(!) ಹೋಗಿದ್ದ ಹಾಗೂ ಹೋಗುತ್ತಿದ್ದ ನನಗೆ ಯಾತ್ರಗಳೇನೂ ಹೊಸತಾಗಿರಲಿಲ್ಲ! ಆಗಲೇ ನಿಂತರೂ ಕುಳಿತರೂ ಭಗವನ್ನಾಮ ಸ್ಮರಣೆಯನ್ನು ಜಪಿಸಲಾರಂಭಿಸಿದ್ದ (ಸಧ್ಯ ನನ್ನ ಹೆಸರನ್ನು ಕರೆಯದೇ ಇದ್ದುದು ಒಳ್ಳೆಯದೇ ಆಯ್ತು. ಇಲ್ಲದಿದ್ದರೆ `ಸ್ಥಾನಪಲ್ಲಟ’ವಾದ ನೋವನ್ನು ಅನುಭವಿಸುವಂತಾಗುತ್ತಿತ್ತು!)ಇವರೂ ಇಷ್ಟ ದೈವದರ್ಶನದ ಆನಂದ ಸ್ಥಿತಿಯಲ್ಲಿ ಪ್ರಸಾದ ಸೇವನೆಗೆ ಕುಳಿತಾಗ ಊಟದ ಎಲ್ಲಾ ಐಟಂಗಳಲ್ಲಿಯೂ ಬೆಳ್ಳುಳ್ಳಿಯೇ ರಾರಾಜಿಸುತ್ತಿದ್ದುದನ್ನು ನೋಡಿ (ಆಘ್ರಾಣಿಸಿ) ಎದ್ದು ಹೊರ ನಡೆದೇ ಬಿಟ್ಟರು. ಅದುವರೆಗೂ `ಬೆಳ್ಳುಳಿ’ ಎಂದರೇನೆಂದೇ ಅರಿಯದ ಮಕ್ಕಳೂ ಆ ವಿಶೇಷ ಕಟುವಾಸನೆಗೆ ಬೆದರಿ ಅಪ್ಪನ ಹಿಂದೇ ಓಟ ಕಿತ್ತರು (ಬಸವನ ಹಿಂದೆ ಬಾಲದಂತೆ!) ನಾನೂ ಸಿಕ್ಕ ಒಂದು ವಿಶೇಷಾವಕಾಶ ವಂಚಿತಳಾಗಿ ಅವರನ್ನು ಹಿಂಬಾಲಿಸಿದೆ. ಹಸಿದ ಹೊಟ್ಟೆಯನ್ನು ತುಂಬಲು ಪ್ರತಿ ಹೊಟೆಲ್ ಮುಂದೂ ನಿಂತು `ಅಮ್ಮಾ..., ತಾಯೀ...,’ ಎನ್ನುವಂತೆ , `ಅಡುಗೆಗೆ ಬೆಳ್ಳುಳ್ಳಿ ಹಾಕಿದೀರಾ...?’ಎಂದು ಹರುಕು ಮುರುಕು ಹಿಂದಿಯಲ್ಲಿ ವಿಚಾರಿಸುತ್ತಾ ಅಲೆದಲೆದು ಕಡೆಗೆ `ಆಂದ್ರ ಸ್ಪೆಷಲ್’ ಎಂಬ ಹೊಟೆಲ್‌ನಲ್ಲಿ ಒಂದಕ್ಕೆರಡರಷ್ಟು ಬೆಲೆತೆತ್ತು ಅಲ್ಲಿದ್ದಷ್ಟು ದಿನವೂ ಊಟ ಮಾಡಿದ್ದಾಯ್ತು!
                ನಾವು ಸೈಟನ್ನು ತೆಗೆದುಕೊಂಡು ಬಹಳದಿನ ( ಏಕೆ ವರ್ಷಗಳೇ)ಆ ಕಡೆಗೆ ತಲೆ ಹಾಕದೇ ಕಟ್ಟಿದ ಮನೆಯನ್ನೇ ಕೊಳ್ಳುವ ಯೋಜನೆಯಲ್ಲಿ ಸಾಕಷ್ಟು ಅಲೆದಲೆದು ಯಾವುದೂ ಸರಿಬರದಿದ್ದಾಗ (ನಮ್ಮ ಆರ್ಥಿಕ ಮಿತಿಗೆ ಹೊಂದದಿದ್ದಾಗ!) ಸ್ವತ: ಕಟ್ಟುವ ತೀರ್ಮಾನಕ್ಕೆ ಬಂದು ಸೈಟನ್ನು ನೋಡಲು ಹೋದೆವು. ದೂರದಿಂದಲೇ ನಮ್ಮ ಸೈಟಿನಲ್ಲಿ ಧವಳಾಚ್ಛಾದಿತ ರಾಶಿಯನ್ನು ನೋಡಿ ಏನಿರಬಹುದೆಂಬ ಕುತೂಹಲದಲ್ಲಿ ಹತ್ತಿರ ಸಾರುವ ಮೊದಲೇ ನಮ್ಮ ಬಳಿಗೇ ತನ್ನ ಇರವನ್ನು ವಾಸನಾ ರೂಪದಲ್ಲಿ ಸಾರಿಬಿಟ್ಟಿತು! ಆಗಲೇ ಗೊತ್ತಾಗಿದ್ದು ಅಲ್ಲಿ ಸುತ್ತೆಲ್ಲಾ ತಲೆ ಎತ್ತಿರುವ ಗೃಹಗಳ ನಿವಾಸಿಗಳು ಬೆಳ್ಳುಳ್ಳಿ ವ್ಯಾಪಾರ ಮಾಡುವವರು ಎಂದು. ಕ್ಲೀನ್ ಮಾಡಬೇಕಾದ ಬೆಳ್ಳುಳ್ಳಿಯನ್ನು ರಾಶಿರಾಶಿಯಾಗಿ ಖಾಲಿ ಸೈಟ್‌ಗಳಲ್ಲಿ ಸುರಿದಿರುತ್ತಿದ್ದರು. ಈಗಾಗಲೇ ಮನೆ ಹುಡುಕಿ ಹುಡುಕಿ ದಣಿದಿದ್ದ ಇವರು ಈ `ಲಸನ್’ ವಾಸನಾಸ್ತ್ರದಿಂದ ಹಿಮ್ಮೆಟ್ಟದೇ ಮನೆ ಕಟ್ಟಲು ನಿರ್ಧರಿಸೇಬಿಟ್ಟರು. ಗೃಹ ಪ್ರವೇಶವಾದನಂತರ ಸುತ್ತಿನ ವಾಸನಾ ಜಗತ್ತಿನ ಬಲದಿಂದ `ಬೆಳ್ಳು’ಗೆ ಮನೆಯ ಗುಪ್ತ ಸ್ಥಳವೊಂದರಲ್ಲಿ ವಾಸ ಪರವಾನಗಿ ನೀಡಿದೆ. ಇವರು ಪರ ಊರುಗಳಿಗೆ ಪ್ರಯಾಣ ಬೆಳೆಸಿದಾಗ ಅಡುಗೆಯ ವಿಶೇಷ `ಬೆಳ್ಳು’ವಿನಿಂದೊಡಗೂಡಿರುವುದು ಮಕ್ಕಳಿಗೆ ಸರ್ವೇ ಸಾಮಾನ್ಯವಾಯಿತು. ಅಂತೂ ಈ ಮೂಲಕ ಮಕ್ಕಳನ್ನು ಒಂದು ವಿಶಿಷ್ಟ ಆರೋಗ್ಯಕರ ರುಚಿಗೆ ಪರಿಚಯಿಸಿದ ಹಾಗೂ ಯಾವುದೇ ಶಾಕಾಹಾರೀ ಹೊಟೆಲ್‌ಗಳಲ್ಲಿಯೂ ಊಟಮಾಡಬಹುದಾದ ಸಾಮರ್ಥ್ಯವನ್ನು ದಯಪಾಲಿಸಿದ ಭಾಗ್ಯ ನನ್ನದಾಯಿತು!
                   ಬೆಳ್ಳುಳ್ಳಿ ಮತ್ತು ಇವರ ನಡುವಿನ ವಿಕರ್ಷಣಾ ಸಂಬಂಧ ಎಷ್ಟೊಂದು ಗಾಢವಾಗಿದೆಯೆಂದರೆ (ಆಕರ್ಷಣೆಗಿಂತ ವಿಕರ್ಷಣೆಯೇ ಅತ್ಯಂತ ಪ್ರಭಲವಾದ ಶಕ್ತಿ ಎಂದು ನಂಬಲು ನನಗೆ ಇದಕ್ಕಿಂತಾ ಪುರಾವೆ ಬೇಕು ಎನಿಸುವುದಿಲ್ಲ!) ಇವರ ಬಗ್ಗೆ ಹೇಳದೇ ಬೆಳ್ಳುಳ್ಳಿಯ ಬಗ್ಗೆ ಹೇಳಲು ಸಾಧ್ಯವಾಗುತ್ತಲೇ ಇಲ್ಲ. ಆದರೂ ಒಮ್ಮೆ ಬೆಳ್ಳುಳ್ಳಿಯ ಅರ್ಥ ಲೋಕವನ್ನು ಪ್ರವೇಶಿಸಿದಾಗ ಎಂದರೆ ನಿಘಂಟುಗಳನ್ನು ತೆರೆದಾಗ ನನಗೆ ತೀವ್ರ ಆಘಾತವೇ ಕಾದಿತ್ತು! ಎಲ್ಲಾ ಮನುಜ ನಿರ್ಮಿತ ವರ್ಗಗಳಲ್ಲೂ ಭೇದ ಭಾವವಿರುವಂತೆ ಸಹೋದರ ರೂಪಿಗಳಾದ ಈರುಳ್ಳಿ ಬೆಳ್ಳುಳ್ಳಿಗಳಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. `ಈರುಳ್ಳಿ’ ಎಂದರೆ ಉಳ್ಳೇಗೆಡ್ಡೆ, ನೀರುಳ್ಳೆ ಎಂದಿದ್ದರೆ `ಬೆಳ್ಳುಳ್ಳಿ’ ಎನ್ನುವ ಪದವೇ ಕಾಣಲಿಲ್ಲ! ಇರಲಿ ಎಂದು ಆಂಗ್ಲ ಪದ GARLIC ( ಗಾರ್ಲಿಕ್) ಅನ್ನು ನೋಡಿದೆ. `A plant with bulbous strong smelling root—ಬೆಳ್ಳುಳ್ಳಿಎಂದಿತ್ತು. ಅಯ್ಯೋ ನಮ್ಮ ಬೆಳ್ಳುಳ್ಳಿಯ ಸ್ಥತಿಯೇ ಎಂದುಕೊಂಡು ಛಲ ಬಿಡದಂತೆ ಹಿಂದಿಯಲ್ಲಿ `ಲಸನ್ಎನ್ನುತ್ತಾರೆ ಎಂದು ತಿಳಿದು ಆ ಪದವನ್ನೇನಾದರೂ ಕೊಟ್ಟಿದ್ದಾರೆಯೋ ನೋಡೋಣ ನಮ್ಮ ಸರ್ವಭಾಷಾ ಸಮನ್ವಯ ಭಾವಾಪ್ರಿಯ ಪಂಡಿತರು ಎನ್ನುವ ಕುತೂಹಲದಿಂದ ಹಾಳೆಗಳನ್ನು ಮಗುಚಿದೆ. ಓಹೋ ಸಿಕ್ಕೇ ಬಿಟ್ಟಿತು! ಲಸನ್ ಅಲ್ಲ `ಲಶುನಎಂದರೆ ಬೆಳ್ಳುಳ್ಳಿ ಎಂದು! ನಮ್ಮ ಹಿಂದೂ ಸಂಪ್ರದಾಯದ ಮದುವೆಯಲ್ಲಿ ಭೂಮದ ಊಟದಲ್ಲಿ ವರನು ವಧುವಿನ ( ವಧು ಬಲಭಾಗದಲ್ಲಿ ಕೂರುವ ಅನಾನುಕೂಲದಿಂದಲೋ ಏನೋ!) ಕತ್ತನ್ನು ಬಳಸಿ ಬಾಯಿಗೆ ತುತ್ತನ್ನು ಇಟ್ಟಂತೆ! ಬಿಳಿಯ ಬಣ್ಣದಿಂದಲೇ ಈ ಹೆಸರು ಬಂದಿದೆ ಎಂದು ತರ್ಕಿಸಿ `ಬೆಳ್’ (ಬೆಳ್ಳುಳ್ಳಮ್ಮ ಬೆಳ್ಳುಳ್ಳಿ ಬೆಳ್ಳಿ ಬೆಳಕಿನ ಬೆಳ್ಳುಳ್ಳಿ..!) ಎನ್ನುವ ಪದದ ಅರ್ಥ ಶೋಧನೆಗೆ ಹೊರಟೆ. `ಬೆಳ್ಎಂದರೆ ಬಿಳುಪಾದ , ದಡ್ಡತನ(!)ದಿಂದ ಕೂಡಿದ ಎನ್ನುವುದರ ಜೊತೆಗೇ `ಉಳ್ಳಿಸೇರಿಸಿದಾಗ ಅಡುಗೆಗೆ ಉಪಯೋಗಿಸುವ ಕಟು ವಾಸನೆ ಮತ್ತು ರುಚಿಯುಳ್ಳ ಒಂದು ಜಾತಿಯ ಗೆಡ್ಡೆ ಎಂದಿತ್ತು. ಅದರ ರುಚಿ, ವಾಸನೆಯೇ ಮುಖ್ಯವಾಯಿತೇ ಹೊರತು ಅದರ ವೈದ್ಯಕೀಯ ಪ್ರಾಮುಖ್ಯತೆಯ ಬಗ್ಗೆ ಸೂಚಿಸಿಲ್ಲವಲ್ಲಾ ಎನ್ನುವ ತವಕದಲ್ಲೇ `ಉಳ್ಳಿಅರ್ಥಾನ್ವೇಷಿಯಾದೆ. ನೀರುಳ್ಳಿ, ಉರುಳುಗೆಡ್ಡೆ ಎಂದು ಒಂದು ಕಡೆ ಇದ್ದರೆ ಈರುಳ್ಳಿ, ಬೆಳ್ಳುಳ್ಳಿ ಎಂದು ಮತ್ತೊಂದು ಕಡೆ ಸಿಕ್ಕಿತು. `ಉಳ್ಳಿಎಂದರೆ ಹುರುಳಿಕಾಳು ಎಂದು ಮಾತ್ರ ತಿಳಿದಿದ್ದೆ. `ಉಳ್ಳಿ ತಿಂದಮ್ಮನಿಗೆ ಉಳುಕಿತು. ಬೆಳ್ಳುಳ್ಳಿ ತಿಂದಮ್ಮನಿಗೆ ನಾರ್‍ತು.’  ಎನ್ನುವುದು ನಮ್ಮ ಕಡೆಯ ಸಾಮಾನ್ಯ ಮಾತಾಗಿತ್ತು.     
                  ನನ್ನ ದೃಷ್ಟಿಯಲ್ಲಿ ಇವರ ಮತ್ತು ಬೆಳ್ಳುಳ್ಳಿಯ ನಡುವೆ ಹೇಗೆ ಅವಿನಾಭಾವ ಸಂಬಂಧ ಏರ್ಪಟ್ಟಿದೆಯೋ ಅದೇ ರೀತಿ ಆಂತರಿಕವಾಗಿ ಬೆಳ್ಳುಳ್ಳಿ ನನ್ನೊಳಗಿನ ವಿಕಟಕವಿಯನ್ನು ಬಡಿದೆಬ್ಬಿಸಿ ಮೊಗದ ಮೇಲಿನ ನಗೆಯಾಗಿ ಮಾರ್ಪಟ್ಟು ನನ್ನಲ್ಲಿ ಲಸನ್ ಮಂದಹಾಸವಾಗಿ (`ಲಸನ್ ಮಂದಹಾಸ ಪ್ರಭಾ ವಕ್ರ ತುಂಡ...!)ಮೂಡಿ ಮೆರೆಯುತ್ತಿದೆ! ಈಗ ಅಕ್ಕಪಕ್ಕದಲ್ಲಿ ಮನೆಗಳಾಗಿ ಅವರ ಮನೆಗಳಲ್ಲಿ ಅಟ್ಟುವ ಅಡುಗೆಯ ಪರಿಮಳ ನಮ್ಮ ಮನೆಯನ್ನೂ ತುಂಬುವುದರಿಂದ ಆ ಲಶುನ ವಾಸನಾ ತೆರೆಯ ಮರೆಯಲ್ಲಿಯೇ ನಮ್ಮ ಮನೆಯಲ್ಲಿಯೂ ಬೆಳ್ಳುಳ್ಳಿಯನ್ನು ಅಡುಗೆಯ ಒಂದು ಭಾಗವನ್ನಾಗಿಸುವ ಪ್ರಯತ್ನವನ್ನು ಮುಂದುವರಿಸೇ ಇದ್ದೇನೆ. ಈ ಸೂಕ್ಷ್ಮವನ್ನು ಮನಗಂಡ ಇವರು ಹುರಿಯುವ, ಅರೆಯುವ,...ಒಗ್ಗರಣೆಹಾಕುವಂತಹ ಪ್ರಮುಖ ಕಾರ್ಯಭಾರಗಳನ್ನು ತಮ್ಮದಾಗಿಸಿಕೊಂಡು ನನಗೆ ಅಡುಗೆಮನೆಗೆ ಪ್ರವೇಶ ನಿಶಿದ್ಧ ಮಾಡುವ ಸನ್ನಾಹದಲ್ಲಿದ್ದಾರೆ! ಆದರೂ..... ಫಲಕಾರಿಯಾಗುವ ಆಶಾಭಾವನೆಯಲ್ಲಿ ಕೋಲಿನ ತುದಿಗೆ ಕಟ್ಟಿದ ಹುಲ್ಲಿನ ಆಸೆಗೆ ಮುನ್ನುಗ್ಗುತ್ತಿರುವ ಕುದುರೆಯಂತೆ ಬದುಕ ಬಂಡಿಯನ್ನು ಓಡಿಸುತ್ತಿದ್ದೇನೆ!