Wednesday, April 22, 2015

ಕನ್ನಡಿಯೊಳಗಿನ ಗಂಟು .....

ಹಿ೦ದಿನ ಹಾಸ್ಯ ಬರಹ ಇ೦ದಿನ ಓದಿಗೆ:
                                          ಕನ್ನಡಿಯೊಳಗಿನ ಗಂಟು  .....
`
 ಕನಸಿನ ನಂಟು ಕನ್ನಡಿಯೊಳಗಿನ ಗಂಟು’ ಸಮಯಾನುಸಾರ ಅಜ್ಜಿ ಈ ನುಡಿಗಟ್ಟುಗಳನ್ನು ಬಳಸಿದಾಗ ಚಿಕ್ಕವಳಲ್ಲಿ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಪೂವಾರ್ಧ ನನ್ನನ್ನಷ್ಟು ಚಿಂತೆಗೀಡುಮಾಡುತ್ತಿರಲಿಲ್ಲ. ಹಳ್ಳಿಯಲ್ಲಿ ವಾಸವಾಗಿದ್ದ ನಮ್ಮ ಮನೆಯಲ್ಲಿ ಯಾರಾದರೂ ಅತಿಥಿ ಅಭ್ಯಾಗತರಿಲ್ಲದೆ ಊಟಮಾಡುತ್ತಿದ್ದುದರ ನೆನಪೇ ಇಲ್ಲ. ಬೇಸಿಗೆ ರಜೆ ಬಂತೆಂದರೆ ಮನೆಯ ತುಂಬಾ ಬಂಧು ಬಳಗ! ಮಕ್ಕಳ ಒಂದು ಸೈನ್ಯವೇ ನಿರ್ಮಾಣವಾಗಿ ಹಗಲೆಲ್ಲಾ ಗದ್ದೆಬಯಲುಗಳಲ್ಲಿ ಅಲೆದು, ರಾತ್ರಿಯಾಯಿತೆಂದರೆ ಲ್ಯಾಂಪಿನ ಅಥವಾ ಬುಡ್ಡಿದೀಪದ ಬೆಳಕಿನಲ್ಲಿ ಗುಡ್ಡೆಹಾಕಿಕೊಂಡು ಕುಳಿತು ಅಜ್ಜಿಯೋ, ತಾತನೋ, ಆಳು ಪುಟ್ಟಪ್ಪನೋ ಹೇಳುವ ಕಥೆಗಳನ್ನು ಕೇಳುತ್ತಾ, ಬೆಳದಿಂಗಳಿತ್ತೆಂದರೆ ಅಂಗಳದಲ್ಲಿ ಹಾಸಿದ್ದ ಚಾಪೆಯಮೇಲೆ ಉರುಳಿಕೊಂಡು ಹರಟುತ್ತಾ....... ಕಾಲ ಕಳೆಯುತ್ತಿದ್ದುದರ ಅರಿವೇ ನಮಗಾಗುತ್ತಿರಲಿಲ್ಲ! ವಾಸ್ತವದಲ್ಲೇ ನಂಟೆಂಬ `ಅಂಟು’ ಸಹನಾತೀತವಾಗಿದ್ದುದರಿಂದ ?ಕನಸಿನ ನಂಟು? ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. `ಗಂಟು’ ಎನ್ನುವ ಪದ ಹಣಕ್ಕೇ ಸಂಬಂಧಿಸಿದುದೆಂಬ ಅರಿವಿದ್ದರಿಂದ- ಏಕೆಂದರೆ ನಾನು ಕೇಳುತ್ತಿದ್ದ ಕಥೆಗಳಲ್ಲೆಲ್ಲಾ ಸಾಮಾನ್ಯವಾಗಿ ಹಣದ ಗಂಟು-ಥೈಲಿಯ ಪ್ರಸ್ತಾಪವಿರುತ್ತಿದ್ದರಿಂದ ಮತ್ತು ಈ ಹಣದಿಂದ ನಾನು ಏನೇನೋ ಮಾಡಬೇಕೆಂಬ ಯೋಜನೆ ಇದ್ದುದರಿಂದ ಕನ್ನಡಿಯ ಒಳಗೆ ಹೇಗೆ ಈ ಗಂಟು ಹೋಗಿ ಸೇರಿಕೊಂಡಿತು? ಅದನ್ನು ಹೊರ ತೆಗೆಯುವ ಬಗೆ ಹೇಗೆ? ಎನ್ನುವುದೇ ನನ್ನ ಸಮಸ್ಯೆಯಾಗಿತ್ತು!
ನಾನು ವಿಜ್ಞಾನದ ವಿದ್ಯಾರ್ಥಿಯಾದ ನಂತರ ದರ್ಪಣ-ಪ್ರತಿಫಲನ ಎಂದೆಲ್ಲಾ ಓದುವಾಗ ಕನ್ನಡಿಯೊಳಗಿನ ಗಂಟು ಒಂದು ಪ್ರತಿಬಿಂಬ ಎಂದು ತಿಳಿದುಕೊಂಡೆ. ಪ್ರತಿಬಿಂಬ ಉಂಟಾಗಬೇಕಾದರೆ ಒಂದು ವಸ್ತು ಇರಲೇ ಬೇಕಲ್ಲ! `ಗಂಟು’ ಹೊರಗಿದ್ದಾಗ ಮಾತ್ರ ಕನ್ನಡಿಯ ಒಳಗೂ ಅದು ಕಾಣಲು ಸಾಧ್ಯ ಎಂಬ ತರ್ಕ ಪ್ರಾರಂಭವಾಯಿತು!
`ನಂಟ’ನ್ನು ಸಾಮಾನ್ಯವಾಗಿ ಸ್ವೀಕರಿಸಿ `ಗಂಟು’ ಬಗ್ಗೆ ತಲೆಕೆಡಿಸಿಕೊಳ್ಳುತ್ತಾ ಸಮಯ ವ್ಯರ್ಥಮಾಡುತ್ತಿದ್ದಾಗಲೇ ಅಜ್ಜಿಯ `ಗಂಟೂ ಪೋಯ, ನಂಟೂ ಪೋಯ’ ಎನ್ನುವ ಮತ್ತೊಂದು ಆರ್ಯೋಕ್ತಿ ವಿರೋಧಾಭಾಸವನ್ನುಂಟುಮಾಡಿತು. ಈ ಪರಿಸ್ಥಿತಿ ಆಗಾಗ ನಮ್ಮ ಮನೆಯಲ್ಲಿ ಉಂಟಾಗುತ್ತಿದ್ದ ಘಟನೆಗಳಿಂದ ಮೂರ್ತರೂಪ ಪಡೆದದ್ದು ಎನ್ನುವುದು ನಂತರ ನನಗೆ ಗೋಚರಿಸುತ್ತಾ ಹೋಯಿತು. ಆದರೆ `ಗಂಟು ಪೋಯ’ ಎನ್ನುವುದಷ್ಟೇ ಸತ್ಯವಾಗಿ ಬಹಳ ಉದಾರ ಮನಸ್ಕರಾದ ನಮ್ಮ ತಂದೆಯ ಸಹನಶೀಲತೆಗೆ, ಕ್ಷಮಾಗುಣಕ್ಕೆ ಪ್ರತಿಫಲವೋ ಎಂಬಂತೆ `ನಂಟೂ ಪೋಯ’ವಾಗಲು ಆಸ್ಪದವಾಗುತ್ತಿರಲಿಲ್ಲ. ಆ `ನಂಟು’ ಮುಂದಿನ ಬೇಸಿಗೆ ರಜಕ್ಕೆ ಸಕುಟುಂಬ ಪರಿವಾರ `ಸಮೇತ’(!)ರಾಗಿ ನಮ್ಮ ಮನೆಯಲ್ಲಿ ಠಿಕಾಣಿ ( ತಂದೆಯ ಕ್ಷಮಾಗುಣ ಅವರ `ಕುಟುಂಬ’ಕ್ಕೆ ಸದಾಕಾಲ ಸಿದ್ಧಿಸಿಲ್ಲದಿದ್ದರಿಂದ ಅಥವಾ ಅವರನ್ನು ಪೊರೆಯುವ ಎಂದರೆ ಉದರ ಪೋಷಣೆ ಮಾಡುವ ಗುರುತರವಾದ ಜವಾಬ್ಧಾರಿ ಇದ್ದ ನಮ್ಮ ತಾಯಿಯ ಹೊಣೆಗಾರಿಕೆಯ ಸ್ಪಷ್ಟ ಅಭಿವ್ಯಕ್ತಿಯನ್ನೇ ಬಳಸುತ್ತಿದ್ದೇನೆ!) ಹೂಡುತ್ತಿದ್ದರು. ಎಲ್ಲಾ ಹೊಟ್ಟೆಗಳನ್ನೂ ತುಂಬುವಷ್ಟು ಧವಸ ಧಾನ್ಯಗಳನ್ನು ನಮ್ಮ ಜಮೀನು ಒದಗಿಸುತ್ತಿತ್ತು. ತರಕಾರಿ, ಸೊಪ್ಪು ಸೆದೆಗಳನ್ನು ನಮ್ಮ ಹಿತ್ತಿಲು ಪೂರೈಸುತ್ತಿತ್ತು. ಒಬ್ಬ ಭಕ್ತ `ದೇವರೇ ನಾನು ನಿನ್ನನ್ನು ಹೆಚ್ಚೇನನ್ನೂ ಕೇಳುವುದಿಲ್ಲ. ನನ್ನ, ನನ್ನ ಆಶ್ರಿತರ ಹೊಟ್ಟೆತುಂಬಿಸುವಷ್ಟು, ಅತಿಥಿಗಳನ್ನು ಸತ್ಕರಿಸುವಷ್ಟು ಕೊಟ್ಟರೆ ಸಾಕು.’ ಎಂದು ಕೇಳುವಂತೆ ಸಾತ್ವಿಕರಾಗಿದ್ದ ನನ್ನ ತಂದೆಯ ಪ್ರಾರ್ಥನೆಯೂ ಆಗಿದ್ದಿರಬಹುದು.
ಓದಿ, ಕೆಲಸಕ್ಕೆ ಸೇರಿ ಆರ್ಥಿಕ ಸ್ವಾವಲಂಬಿಯಾಗಿ, ಗಂಡ-ಮಕ್ಕಳು-ಮನೆ ಎಂಬೆಲ್ಲಾ `ಸಕಲ'ಗಳ ನಡುವೆಯೂ ಇದ್ದಷ್ಟರಲ್ಲೇ ಸಾಕೆನ್ನುವಂತಿದ್ದ, ವೇತನಕ್ಕೆಂದೇ ಗೊತ್ತುಪಡಿಸಿದ, ತಿಂಗಳ ಕಡೆಗೆ ಬ್ಯಾಂಕ್‌ನವರು ನಿಗಧಿಪಡಿಸಿದ ಕನಿಷ್ಟ ಮೊತ್ತವನ್ನು ಮಾತ್ರ ಹೊಂದಿರುತ್ತಿರುವ ಎಸ್. ಬಿ. ಖಾತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ ಡಿಪಾಸಿಟ್ಸ್ ಹೊಂದಿಲ್ಲದ ನಮ್ಮ ಬೋಳೆ ಸ್ವಭಾವ ತಿಳಿದಿದ್ದ ನನ್ನ ಆತ್ಮೀಯರು ತಾವು ಲಾಭದಾಯಕ ಎಂದು ಕಂಡುಕೊಂಡ `ಹಣದ್ವಿಗುಣ’ಗೊಳಿಸುವ ಒಂದು ಸ್ಕೀಮಿಗೆ ನನ್ನನ್ನು ಪರಿಚಯಿಸಿ ನಾನೂ ಅದರಲ್ಲಿ ಹಣವನ್ನು ತೊಡಗಿಸಲು ಒತ್ತಾಯಿಸಿದರು. ತಾವೇ ಮುಂದೆ ನಿಂತು ಶೂರಿಟಿಯನ್ನೂ ಕೊಟ್ಟು ಬ್ಯಾಂಕ್ ಒಂದರಲ್ಲಿ ಸಾಲವನ್ನು ಮಾಡಿಸಿ ಆ ಸ್ಕೀಮಿಗೆ ಹಣವನ್ನು ಕಟ್ಟಿಸಿ ನನ್ನನ್ನು ಆರ್ಥಿಕೋದ್ಧಾರಗೊಳಿಸಿದ ಕೃತಾರ್ಥ ಭಾವದಲ್ಲಿ ಅವರು ಇರುವಾಗಲೇ ಅವರ ಜೊತೆಗೆ ನನ್ನ... (ಕ್ಷಮಿಸಿ, ಹೊಸದಾಗಿ ಸೇರ್ಪಡೆಯಾದ ನನ್ನ ಕಾಲ್ಗುಣ ಅಲ್ಲ ಕೈಗುಣವಾದ್ದರಿಂದ ನನ್ನ ಜೊತೆಗೆ ಅವರ) `ಗಂಟೂ’ ಮುಳುಗಿ ನಿಜಕ್ಕೂ `ಗಂಟೂ ಪೋಯ’ ಆಗೇ ಹೋಯ್ತು! ಈಗ ಅಪ್ಪಿ ತಪ್ಪಿಯೂ ಯಾರೂ ನನ್ನೆದುರು ಹಣಕಾಸಿನ ಪ್ರಸ್ತಾಪವನ್ನು ಎತ್ತುವುದೇ ತಪ್ಪೆನ್ನುವಂತೆ ವರ್ತಿಸುತ್ತಾ ನನ್ನನ್ನು ವಿತ್ತಾಸ್ಪರ್ಶಳನ್ನಾಗಿಸಿದ್ದಾರೆ!
`ಗಂಟು’ ಎನ್ನುವ ಬಗ್ಗೆ ಮೊದಲಿನಿಂದಲೂ ನನ್ನಲ್ಲಿ ಇದ್ದ ಜಿಜ್ಞಾಸೆಯ ಫಲವೋ, ಬಾಹ್ಯವಾಗಿ ಆರ್ಥಿಕವಾಗಿ `ಗಂಟು’ಮಾಡಲಾಗದ (ಅ!)ಸಾಮರ್ಥ್ಯವೋ ಏನೋ ಕ್ರಮೇಣ ನನ್ನೊಳಗೇ `ಗಂಟು’ಗಳು ಬೆಳೆಯಲಾರಂಭಿಸಿಬಿಟ್ಟವು! ಕತ್ತಿನಸುತ್ತ ಬೆಳೆಯಲಾರಂಭಿಸಿದ ಗಂಟುಗಳನ್ನು ಸಾಮಾನ್ಯ ಔಷಧಿಗಳಿಂದ ಜಗ್ಗಿಸಲಾಗದೇ (ಜಗ್ಗದ, ಕುಗ್ಗದ, ಕರಗದ....)ವಿಶೇಷ ತಜ್ಞರಿಗೆ ತೋರಿಸಿದಾಗ ಕ್ಷ-ಕಿರಣ, ರಕ್ತಪರೀಕ್ಷೆ, ಸ್ಕ್ಯಾನಿಂಗ್,... ಇತ್ಯಾದಿ ಎಲ್ಲರೀತಿಯ ಪ್ರಯೋಗಗಳನ್ನೂ ಮಾಡಿ ಬೆಟ್ಟ ಅಗೆದು ಇಲಿ ಹಿಡಿದಂತೆ `ಲಿಂಫ್ ನೋಡ್ಸ್’ ಎನ್ನುವ ತೀರ್ಮಾನಕ್ಕೆ ಬಂದು ಔಷದೋಪಚಾರ ಪ್ರಾರಂಭವಾಯ್ತು. `ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ’ ಎನ್ನುವ ಪ್ರಕೃತಿಯವಳಾದ್ದರಿಂದ `ಅಲರ್ಜಿ’ ಭೂತದ ಹಾವಳಿಯುಂಟಾಗಿ ಒಂದಕ್ಕೆ ಒಂದು ಫ್ರೀ ಎನ್ನುವಂತೆ ಉಪ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಮತ್ತು ವರ್ಷಾನುಗಟ್ಟಲೆ ತೆಗೆದುಕೊಂಡ ಔಷಧಿಗಳ ಸಕಾರಾತ್ಮಕ ಪರಿಣಾಮಗಳೂ ಕಾಣದಂತಾಗಿ ಆಲೋಪತಿಗೆ ತಾತ್ಕಾಲಿಕ ವಿದಾಯ ಹೇಳಿ ಆಯುರ್ವೇದಿಕ್ ಮೊರೆಹೋದದ್ದಾಯ್ತು. ಲೇಹ್ಯ, ಚೂರ್ಣ, ಕಷಾಯ, ಗುಳಿಗೆ, ತೈಲಾದಿಗಳದೇ ಲೇಪ, ಧೂಪಗಳಿಂದ ಕತ್ತನ್ನು ಉಪಚರಿಸುವ ಸಡಗರದಲ್ಲಿ ಗಂಟೋತ್ಪಾಟನಾ ಕಾರ್ಯದಲ್ಲಿ ತೊಡಗಿದ್ದಾಗ `ಎಲ್ಲಿ ಗಂಟು ಬಿದ್ದಳೋ ಇವಳು’ ಎಂದು ಗೊಣಗಿಕೊಳ್ಳುವಂತೆ (ಬ್ರಹ್ಮಗಂಟು!) ಪತಿಯ ಅವಕೃಪೆಗೊಳಗಾಗುವ ಕುತ್ತುಂಟಾಯಿತು. ಆದರೂ ಛಲಬಿಡದೇ ನಿಯಮಿತವಾಗಿ ವರ್ಷಗಟ್ಟಳೇ ವೈದ್ಯರ ಸಲಹೆಯಂತೆ ಮದ್ದುಗಳನ್ನು ಸೇವಿಸುತ್ತಾ `ಅನುವಂಶೀಯ’ ಗುಣವೇ ಇರಬಹುದಾದ ವೈದ್ಯ ಸ್ನೇಹಕ್ಕೆ ಭಾಜನಳಾದೆ! ನಾವಿದ್ದ ಹಳ್ಳಿಗೆ ಯಾರೇ ವೈದ್ಯರು ಬಂದರೂ ನಮ್ಮ ತಂದೆ ಅವರ ಸ್ನೇಹ ಸಂಪಾದಿಸಿ ಅವರು ಅನೇಕ ವಿಷಯದಲ್ಲಿ ನಮ್ಮ ತಂದೆಯ ಸಲಹೆ ಪಡೆಯುವಷ್ಟು ಸಲಿಗೆಯುಂಟಾಗುತ್ತಿತ್ತು. ಹೊಸ ವೈದ್ಯನಿಗಿಂತ ಹಳೆಯ ರೋಗಿಯೇ ವಾಸಿ ಎನ್ನುವಂತೆ ನನ್ನ ಸ್ಥಾನ ಮಾನವೂ ದಿನೇ ದಿನೇ ಏರಲಾರಂಭಿಸಿದ್ದಕ್ಕೆ ನಾನು ನನ್ನ ?ಗಂಟು?ಗಳಿಗೆ ವಂದನೆಗಳನ್ನು ಸಲ್ಲಿಸಲೇ ಬೇಕು! ಇದೇ ಧನ್ಯತಾ ಭಾವದಲ್ಲಿ ನಾನಿದ್ದಾಗ ಉಪಚಾರ ಹೆಚ್ಚಾದಾಗ ಕೆಲಸವಿಲ್ಲದ ಅಳಿಯ ಮಾವನ ಮನೆಯಲ್ಲಿಯೇ ಟೆಂಟ್ ಹಾಕುವಂತೆ ಕತ್ತನ್ನು ಸುತ್ತುವರಿದಿದ್ದ ಗಂಟುಗಳು ಕಿರಿದಾದ ಮರಿಗಳೊಡಗೂಡಿ ವಿಹರಿಸಲಾರಂಭಿಸಿದವು! ಹೇಗೋ ಒಬ್ಬ ಪರ್ಮದನೆಂಟ್ ಗಿರಾಕಿ ಸಿಕ್ಕಿತೆಂದು ಹಾಯಾಗೇ ಇದ್ದ ವೈದ್ಯರೂ ಹೌಹಾರಿ ಮತ್ತೊಮ್ಮೆ ಎಲ್ಲಾ ರೀತಿಯ ಪರೀಕ್ಷೆಗಳನ್ನೂ ಮಾಡಿಸಬೇಕೆಂದು ಸಲಹೆ ನೀಡಿದರು. ಹಣವನ್ನು ನೀರಿನಂತೆ_ ಕ್ಷಮಿಸಿ ವಾರಕ್ಕೆ ಒಮ್ಮೆಯೋ, ಎರಡು ಭಾರಿಯೋ ನೀರು ಬರುವುದರಿಂದ ನೀರುಹಿಡಿಯುವುದರಲ್ಲಿ (ಬಿಂದು ಬಿಂದು ಸೇರಿ ಸಿಂಧು!) ಕಣ್ಣೀರೂ ಬಂದಿರುತ್ತದೆ!_ಖರ್ಚುಮಾಡಿದ್ದಾಯಿತೇ ವಿನಾ ಪ್ರಯೋಜನವೇನೂ ಆಗಲಿಲ್ಲ. ಮತ್ತೊಮ್ಮೆ ಮೊದಲಿನ ಎಲ್ಲಾ ಪರೀಕ್ಷೆಗಳೊಡನೆ ಸಿಟಿಸ್ಕ್ಯಾನ್‌ನಂತಹ ನವನವೀನ ಪರೀಕ್ಷೆಗಳಿಗೆ ದೇಹವನ್ನು ಒಡ್ಡಿ ಹೊಸ ಅನುಭವಗಳನ್ನು ಪಡೆದುಕೊಂಡಿದ್ದಾಯ್ತು! ವೈದ್ಯರು ತೋರಿಸುತ್ತಿದ್ದ ಅನುಮಾನ, ಆತಂಕಗಳಿಂದ ಭಯಗೊಂಡ ಕುಟುಂಬವರ್ಗದವರು ಹಾಗೂ ಬಂಧುಬಾಂಧವರು ನನ್ನ ಬಗ್ಗೆ ತೋರಿಸುತ್ತಿದ್ದ ವಿಶೇಷ ಪ್ರೀತಿ, ಪ್ರಾಮುಖ್ಯತೆಗಳಿಂದ ನಾನೊಬ್ಬ ವಿ.ವಿ.ಐ.ಪಿ.ಯಾಗುವ ಅವಕಾಶ ಕೂಡಿ ಬಂದು ನನ್ನ ಈ ಗಂಟುಗಳಿಗೆ ಚಿರಋಣಿಯಾಗಿರುವ ಸಂದರ್ಭವೊದಗಿ ಬಂದಿದೆಯೆನಿಸಿತು! ಈ ಆಂತರಿಕ ಗಂಟುಗಳೊಡನೆಯೇ ರಾಜಿ ಮಾಡಿಕೊಂಡು ಜೀವನ ನಡೆಸಬೇಕೇನೋ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಸರಣಿ ಆಲೋಪತಿಕ್ ಔಷದೋಪಚಾರ ಪ್ರಾರಂಭವಾಯ್ತು! ಈಗಂತೂ ದಿನನಿತ್ಯದ ಆಹಾರ (ನನ್ನಂತೆಯೇ ಸಪ್ಪೆ!) ಸೇವನೆಯೊಂದಿಗೇ `ಗುಳಿಗಾ ಸ್ವಾಹಾ’ವನ್ನೂ ಅತ್ಯಂತ ಸಹಜವಾಗೇ ಸ್ವೀಕರಿಸಿ `ಗಂಟು’ಸೇವೆಯನ್ನು ಮುಂದುವರಿಸಲಾರಂಭಿಸಿದೆ! ತಮ್ಮದೇ ಅನೇಕ ಗೌರವಾನ್ವಿತ ಅನಾರೋಗ್ಯ ಸಮಸ್ಯೆಗಳ ರಾಜಯೋಗದಲ್ಲಿದ್ದು, ದಿನಕ್ಕೆ ಕಮ್ಮಿಯೆಂದರೂ ೨೦-೨೫ ಮಾತ್ರೆಗಳನ್ನು ಸೇವಿಸುತ್ತಿದ್ದ `ಇವರ’ ಎದುರು ನಾನಂತೂ ‘ಯಃಕಚಿತ್’’ ಆಗೇ ಉಳಿಯಬೇಕಾಯಿತು!
ವಾಹನಗಳ ಬಳಕೆ ಕಡಿಮೆ ಇದ್ದ ಕಾಲದಲ್ಲಿ ಅಗಸರು ಒಗೆಯಬೇಕಾದ ಬಟ್ಟೆಗಳನ್ನು ಗಂಟುಕಟ್ಟಿ ಕತ್ತೆಯ ಮೇಲೆ ಹೇರಿಕೊಂಡು ಹೋಗುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯವನ್ನು ಕಾಣಬಹುದು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ `ನೀ ನನಗಿದ್ದರೆ ನಾ ನಿನಗೆ’ ಎಂಬ ಪದ್ಯ ಓದಿದ್ದು, ಅದರಲ್ಲಿ ಕೊಟ್ಟಿದ್ದ ಚಿತ್ರ, ‘ಕತ್ತೆ ಬೆನ್ನ ಮೇಲಿನ ಹೊರೆಯ ಭಾರ ತಾಳಲಾರದೇ ಗೋಳಾಡುತ್ತಿರುವುದು, ಕುದುರೆ ತನಗೇನೂ ಸಂಬಂದಿಸಿಲ್ಲವೆನ್ನುವಂತೆ ನಿಂತಿರುವುದು,’ ಇನ್ನೂ ಮನಃಪಟಲದಲ್ಲಿ ನಿಶ್ಚಳವಾಗಿದೆ! ಅಜ್ಞಾತ ವಾಸ ಪ್ರಾರಂಭವಾದಾಗ ಪಾಂಡವರು ತಮ್ಮ ಆಯುಧಗಳನ್ನೆಲ್ಲಾ ಗಂಟುಕಟ್ಟಿ ಬನ್ನಿಮರದ ಮೇಲೆ ಇಟ್ಟಿದ್ದರು ಎನ್ನುವುದನ್ನು ನೆನಪು ಮಾಡುತ್ತಾ ವಿಜಯದಶಮಿಯ ದಿನ ಬನ್ನಿ ಮುಡಿಯುವುದನ್ನು ಸಂಪ್ರದಾಯವಾಗಿಸಿದ್ದಾರೆ.
ನಾನು ಚಿಕ್ಕವಳಿದ್ದಾಗ (ಈಗಲೂ ಚಿಕ್ಕವಳೆಂದೇ ಭಾವಿಸಿದ್ದೇನೆ! ನೋಡಿದವರು ಸಹಿಸಿಕೊಳ್ಳಬೇಕು ಅಷ್ಟೆ! ನಿನ್ನೆ ಇವತ್ತಿಗಿಂತ ಚಿಕ್ಕವಳಿದ್ದೆ-ನಾಳೆಗೆ ಇವತ್ತಿಗಿಂತ ದೊಡ್ಡವಳಾಗಿರುತ್ತೇನೆ. ಆದ್ದರಿಂದ ಕೆಲವು ವರ್ಷಗಳ ಹಿಂದೆ...) `ರಾಮದಾಸರು ಗಂಟು ಬಿಚ್ಚಿದರು’ ಎನ್ನುವ ಒಂದು ಲೇಖನವನ್ನು ಓದಿದ್ದೆ. ಒಮ್ಮೆ ಸಮರ್ಥ ರಾಮದಾಸರು ರೈಲಿನಲ್ಲಿ ಪ್ರಯಾಣಮಾಡುವಾಗ ಚೆಕಿಂಗ್‌ನವರು ಅನುಮಾನದಿಂದ ಗಂಟಿನಲ್ಲಿ ಏನಿದೆಯೋ ಎಂದು ಬಿಚ್ಚಿಸಿದಾಗ ಅದರೊಳಗಿದ್ದ ಆಧ್ಯಾತ್ಮಿಕ ಸಂಪತ್ತನ್ನು ನೋಡಿ ಆಶ್ಚರ್ಯಚಕಿತರಾದರೆಂಬ ನೆನಪು. ರಾಹುಲ ಸಾಂಕೃತ್ಯಾಯನ ಎಂಬ ಮಹಾಜ್ಞಾನಿ ಅನೇಕ ಭಾರಿ ಟಿಬೆಟ್ ಯಾತ್ರೆ ಮಾಡಿ ನಮ್ಮ ಭರತಖಂಡದಿಂದ ಟಿಬೆಟ್‌ಗೆ ಕೊಂಡೊಯ್ದಿದ್ದ ಅಮೂಲ್ಯ ಬೌದ್ಧಗ್ರಂಥಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಗಂಟುಕಟ್ಟಿಕೊಂಡು ತಂದು ನಮ್ಮ ಜ್ಞಾನ ಸಂಪತ್ತನ್ನು ಸಂರಕ್ಷಿಸಿದರು. `ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ....’ವಿಶ್ವಾದ್ಯಂತ ಅನೇಕ ಭಾರಿ ಸಂಚರಿಸಿ, ಕಳೆದ ಸುಮಾರು ೨೫ವರ್ಷಗಳಿಂದ ಬಿಳಿಗಿರಿರಂಗನ ಬೆಟ್ಟದ ಪ್ರಶಾಂತ ತಾಣದಲ್ಲಿ ಏಕಾಂತವಾಸಿಗಳಾಗಿರುವ ಸ್ವಾಮಿ ನಿರ್ಮಲಾನಂದರ ಬಗ್ಗೆ ಓದುವಾಗ ಗಮನ ಸೆಳೆದ ವಾಕ್ಯಗಳಿವು. ಬಾಳಬಟ್ಟೆಯಲ್ಲಿ ವ್ಯಕ್ತ, ಅವ್ಯಕ್ತ ಗಂಟುಮೂಟೆಗಳನ್ನು ಹೊತ್ತು ಸಾಗುವ ನಾವು ಅವುಗಳೊಂದಿಗೇ ನಮ್ಮನ್ನು ನಾವು ತಾದ್ಯಾತ್ಮಗೊಳಿಸಿಕೊಂಡು ಬಿಟ್ಟಿರುತ್ತೇವೆ. ನಾವು ಬಿಡುತ್ತೇವೆಂದರೂ ನಮ್ಮನ್ನು ಬಿಡದ ಈ ಗಂಟು ಮೂಟೆಗಳು `ತಲೆನೋವು ಬಂದಾಗ ತಲೆ ಇದೆ’ ಎಂದು ಸಾಬೀತಾಗುವಂತೆ ತಮ್ಮ ಇರವಿನಿಂದ ನಮ್ಮ ಬದುಕಿಗೊಂದು ಅರ್ಥ ಎನ್ನುವಂತೆ ನಮ್ಮನ್ನೇ ಆಳಲಾರಂಭಿಸಿಬಿಡುತ್ತವೆ. ಅವುಗಳ ತೂಕ ಸಹನೀಯವೆನಿಸುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳೋಣ, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು, ಬದುಕ ಕಗ್ಗಂಟುಗಳನ್ನು ಮೂಟೆಕಟ್ಟಿ ದೂರಬಿಸುಟು ಧನಾತ್ಮಕಗಳನ್ನು ನಮ್ಮದಾಗಿಸಿಕೊಂಡು ಮೂಟೆಯ ಭಾರವನ್ನು ಹಗುರಗೊಳಿಸಿಕೊಳ್ಳೋಣ. ನಗುತ, ನಗಿಸುತ ಬದುಕುವ ಕಲೆಯನ್ನು ಕಲಿಯೋಣ...ಎಂದುಕೊಳ್ಳುತ್ತಾ ಗಂಟು ಮೋರೆಯೊಂದಿಗೆ ನನ್ನನ್ನೇ ನಾನು ಸಂತೈಸಿಕೊಳ್ಳುವಂತಾಗಿಬಿಟ್ಟಿದೆ `ಗಂಟು’ಗಳು ಉಂಟು ಮಾಡಿರುವ ನನ್ನ ಈ ಪರಿಸ್ಥಿತಿ!
ಹಿಂದೊಮ್ಮೆ ಅಜ್ಜಿಯು ಹೇಳುತ್ತಿದ್ದ `ಕನ್ನಡಿಯೊಳಗಿನ ಗಂಟು’ ನನ್ನ ಎಳೆಮನದಲ್ಲಿ `ಆ ಗಂಟನ್ನು ಹೊರತೆಗೆಯುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ಈಗಿನ ಎಲ್ಲಾ ಗೋಜಲುಗಳು `ಈ ಗಂಟನ್ನು ಪುನಃ ಕನ್ನಡಿಯ ಒಳಗೇ ಸೇರಿಸುವುದು ಹೇಗೆ?’ ಎಂದು ನನ್ನನ್ನೇ ಪ್ರಶ್ನಿಸುತ್ತಿವೆ! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು’ಆಗೇ ಉಳಿದುಬಿಡಲಿ. ಅದರ ಸಹವಾಸವೇ ಬೇಡ. ಎಂದರೆ `ಪಲಾಯನವಾದ’ವೆನ್ನುತ್ತೀರಾ?
( ಇದು ಅಕ್ಟೋಬರ್ ೦೨, ೨೦೧೧ರ ‘ಕರ್ಮವೀರ’ ಸಾಪ್ತಾಹಿಕದಲ್ಲಿ ಪ್ರಕಟವಾಗಿದೆ.)

1 comment:

  1. `ಕನ್ನಡಿಯೊಳಗಿನ ಗಂಟು’ ಹಲವು ಬಾರಿ ನಿಜವಾಗಿಯೂ ವರವೇ ಸರಿ!

    ReplyDelete