Saturday, November 27, 2010

ಮನದ ಅ೦ಗಳದಿ................೧೯. ಮನಸ್ಸು- ಅದರ ಶಿಕ್ಷಣ

ಜೀವನದಲ್ಲಿ ನಾವು ಸಂತಸದಿಂದ ಇರಬೇಕಾದರೆ, ನಮ್ಮ ಪಾಲಿನ ಕರ್ತವ್ಯಗಳನ್ನು ನಿರಾತಂಕವಾಗಿ ನಿರ್ವಹಿಸಬೇಕಾದರೆ ಮೊದಲು ನಮ್ಮ ಮನಸ್ಸನ್ನು ನಾವು ಅರಿಯಬೇಕಾಗುತ್ತದೆ. ನಮ್ಮ ಮನಸ್ಸನ್ನು ನಾವು ನಿರ್ದಿಷ್ಟರೀತಿಯಲ್ಲಿ ಅಣಿಗೊಳಿಸಿಕೊಳ್ಳಬೇಕಾಗುತ್ತದೆ. ಆ ವಿಧಾನವನ್ನು ತಿಳಿದುಕೊಳ್ಳಲು ಸಂಬಂಧಿತ ತಜ್ಞರ, ಜ್ಞಾನಿಗಳ ಸಹಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಡೆಯಬೇಕಾಗುತ್ತದೆ. ಅನುಭವಿಗಳ ಹಾಗೂ ಅನುಭಾವಿಗಳ ಲೇಖನಗಳನ್ನು, ಅವರು ಬರೆದ ಪುಸ್ತಕಗಳನ್ನು ಓದುವುದು ಈ ನಿಟ್ಟಿನಲ್ಲಿ ಒಂದು ಸರಳ ಮಾರ್ಗವಾಗಿದೆ. ನಾನು ಇತ್ತೀಚೆಗೆ ಓದಿದ ಶಂಸ ಐತಾಳ ಅವರು ಬರೆದ ಸ್ವಾಮಿ ನಿರ್ಮಲಾನಂದರ ಬಗೆಗಿನ ಪುಸ್ತಕ ಹೆಚ್ಚು ಮಾರ್ಗದರ್ಶಕವಾಗಿದೆ.
‘ಮನಸ್ಸೇ ಎಲ್ಲಾ ರಾಗ-ದ್ವೇಶಗಳಿಗೆ, ಎಲ್ಲಾ ಸುಖ-ಸಂತೋಷಗಳಿಗೆ ಮೂಲ. ಮನಸ್ಸಿನ ಚೇಷ್ಟೆಗಳಿಗೆ ಸಿಲುಕಿಕೊಂಡವನು ಅದರ ಗುಲಾಮನಾಗುತ್ತಾನೆಯೇ ವಿನಾ ಅದರ ಯಜಮಾನನಾಗುವುದಿಲ್ಲ. ಮನಸ್ಸಿಗೆ ಸಂತೋಷವಾದಾಗ ಹಿಗ್ಗುವುದಾಗಲೀ, ದುಃಖವಾದಾಗ ಕುಗ್ಗುವುದಾಗಲೀ ಸರಿಯಲ್ಲ. ಬುದ್ದಿಯನ್ನು ಸಾಕ್ಷಿಯಾಗಿ ನಿಲ್ಲಿಸಿ, ಯಾವುದೇ ವಿಕಾರಕ್ಕೆ ಒಳಗಾಗದ ಸಮದೃಷ್ಟಿಯಿಂದ, ವಿಷಯಗಳನ್ನು ಪರಿಶೀಲಿಸಲು ಕಲಿಯಬೇಕು. ಈ ದೃಷ್ಟಿಯಿಂದ ಹೇಳುವುದಾದರೆ ಮನಸ್ಸಿಗೂ ಶಿಕ್ಷಣ ನೀಡಬೇಕಾದ ಅಗತ್ಯವುಂಟು.
ಮನಸ್ಸಿನ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮೂರು ಮುಖ್ಯ ಪರಿಕಲ್ಪನೆಗಳನ್ನು ನೀಡುತ್ತಾರೆ ಸ್ವಾಮೀಜಿಯವರು.
*ಸ್ಥೂಲ ಮನಸ್ಸನ್ನು ಸೂಕ್ಷ್ಮಗೊಳಿಸುವುದು,
*ಮನಸ್ಸನ್ನು ಶುದ್ಧೀಕರಿಸುವುದು
ಮತ್ತು
*ಮನಸ್ಸನ್ನು ‘ಶೂನ್ಯ’ಗೊಳಿಸುವುದು.
ಸಾಮಾನ್ಯ ವ್ಯಕ್ತಿಗಳು ಸಾಧಾರಣವಾಗಿ ಹೊಂದಿರುವ ಮನಸ್ಸು ಸ್ಥೂಲವಾಗಿರುತ್ತದೆ. ‘ಇಂಥಾ ಸ್ಥೂಲ ಮನಸ್ಸೆಂಬುದು ಅವಿವೇಕವಲ್ಲದೆ ಬೇರೇನೂ ಅಲ್ಲ.’ ( Gross-mindedness is stupidity.) ವಿವಿಧ ಆಲೋಚನೆಗಳಲ್ಲಿ ತೊಡಗಿರುವ ಸ್ಥೂಲ ಮನಸ್ಸು ವಿಕಾರಕ್ಕೆ ಒಳಗಾಗುವುದು ಬಹಳ ಸುಲಭ. ಸ್ಥೂಲ ಮನಸ್ಸನ್ನು ಸೂಕ್ಷ್ಮಗೊಳಿಸುವುದು ಹೇಗೆ? ಇದಕ್ಕೆ ವ್ಯಕ್ತಿ ಅಂತರಂಗ ವೀಕ್ಷಣೆ, ಆತ್ಮ ಪರೀಕ್ಷೆ, ಮತ್ತು ಆತ್ಮ ಪರಿಶೀಲನೆಗಳಿಂದ ಮನಸ್ಸನ್ನು ಶೋಧಿಸಬೇಕಾದ ಅಗತ್ಯವಿದೆ. ಆಲೋಚನಾ ತರಂಗಗಳನ್ನು ಮನಸ್ಸಿನಲ್ಲಿ ಕೇಂದ್ರೀಕರಿಸದೇ ಆತ್ಮನಲ್ಲಿ ಕೇಂದ್ರೀಕರಿಸಬೇಕು. ಆಗ ಮನಸ್ಸು ನಿರ್ಮಲವಾಗುತ್ತದೆ, ಸುಸಂ¸ÀÌø ತವಾಗುತ್ತದೆ, ಸಂವೇದನಾಶೀಲವಾಗುತ್ತದೆ ಹಾಗೂ ಸೂಕ್ಷ್ಮವಾಗುತ್ತದೆ. ಇದು ಮನಸ್ಸಿನ ಶಿಕ್ಷಣದ ಮೊದಲ ಹಂತ.
ಎರಡನೆಯ ಹಂತಕ್ಕೆ ಸಂಬಂಧಿಸಿದಂತೆ ಸ್ವಾಮಿ ನಿರ್ಮಲಾನಂದರು ‘ಮಾನಸ ತೀರ್ಥ? ಎಂಬ ಪರಿಕಲ್ಪನೆಯನ್ನು ನಮ್ಮ ಮುಂದೆ ಇಡುತ್ತಾರೆ. ನಿರಂತರ ಆತ್ಮಪರಿಶೀಲನೆಯಿಂದ, ಸತತ ಧ್ಯಾನದಿಂದ ಸ್ಥೂಲ ಮನಸ್ಸು ಸರೋವರದ ನಿಶ್ಚಲ ಹಾಗೂ ಸ್ವಚ್ಛನೀರಿನಂತೆ ಪರಿಶುದ್ಧವೂ ಪಾರದರ್ಶಕವೂ ಸೂಕ್ಷ್ಮವೂ ಆಗುತ್ತದೆ. ಶ್ರೀ ರಮಣ ಮಹರ್ಶಿಗಳು ಹೇಳಿದಂತೆ ಇದೇ ಶುದ್ಧ ಮನಸ್ಸು; ಇದೇ ಬ್ರಹ್ಮ. `The pure in heart shall see God’ ಎಂಬ ಯೇಸುಕ್ರಿಸ್ತನ ವಚನದಲ್ಲಿಯೂ ಇದೇ ಅಭಿಪ್ರಾಯವೂ ಧ್ವನಿತವಾಗುತ್ತದೆ. ಪರಿಶುದ್ಧ ಹೃದಯ ಹಾಗೂ ಪರಿಶುದ್ಧ ಮನಸ್ಮ್ಸಗಳಲ್ಲಿ ಕಂಡುಬರುವಂತಹ ದಯೆಯ, ಅನುಕಂಪದ ಸ್ವಚ್ಛ ನಿರ್ಮಲ ಜಲವೇ ‘ಮಾನಸ ತೀರ್ಥ’. ಇದರಲ್ಲಿ ಈಜಾಡಲು, ಸ್ನಾನ ಮಾಡಿ ಪುನೀತರಾಗಲು ನಾವು ಕಲಿಯಬೇಕಾಗಿದೆ. ಒಮ್ಮೆ ಮಾತ್ರವಲ್ಲ. ಸಾಧ್ಯವಾದರೆ ಯಾವಾಗಲೂ.
ಪರಿಶುದ್ಧವಾಗಿರುವ ಸೂಕ್ಷ್ಮ ಮನಸ್ಸನ್ನು ‘ಶೂನ್ಯ’ಗೊಳಿಸುವುದೇ ಮೂರನೆಯ ಹಂತ. ಈ ಹಂತದಲ್ಲಿ ವ್ಯಕ್ತಿ ಆಲೋಚನೆಗಳಿಂದ ಸಂಪೂರ್ಣವಾಗಿ ಮುಕ್ತನಾಗಿರುತ್ತಾನೆ. ‘ಶೂನ್ಯಗೊಂಡ’ ಮನಸ್ಸೇ ‘ಬುದ್ಧಚಿತ್ತ’ ಅಥವಾ ‘ಕ್ರಿಸ್ತಚಿತ್ತ’. ಈ ಉನ್ನತ ಹಂತವನ್ನು ತಲುಪಲು ನಮಗೆ ‘ಮೌನಧ್ಯಾನ’ ನೆರವಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ.
ಸತ್ಯವಂತನಾಗಿ ಬಾಳುವ ಬದಲು ವ್ಯಕ್ತಿ ತನ್ನ ಸ್ವಂತ ಮನಸ್ಸಿನಿಂದ ಹಾಗೂ ‘ಅಹಂ’ನಿಂದ ತಪ್ಪುದಾರಿಗೆ ಎಳೆಯಲ್ಪಡುವುದುಂಟು. ಇದರಿಂದ ಜೀವನದ ಹೋರಾಟ-ನರಳಾಟಗಳು ಅಧಿಕವಾಗುತ್ತವೆ. ಎಚ್ಚರಿಕೆಯಿಲ್ಲದ ಮನಸ್ಸನ್ನು ಬಳಸುವುದರಿಂದ ಹಾಗೂ ‘ಅಹಂ'ನ ಅನಿಯಂತ್ರಿತವಾದ ಪ್ರಭುತ್ವದಿಂದ ವ್ಯಕ್ತಿ ಅಪಾರ ದುಃಖಕ್ಕೆ ಈಡಾಗಬೇಕಾದ ಪರಿಸ್ಥಿತಿ ಬರುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಅಭ್ಯಾಸ ಮಾಡಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಇತರರ ವ್ಯವಹಾರಗಳಲ್ಲಿ ತಲೆತೂರಿಸದಿರುವುದು ಒಳ್ಳೆಯದು.
ಸ್ವಾಮಿ ಸುಖಬೋಧಾನಂದರ ‘ಮನಸೇ ರಿಲ್ಯಾಕ್ಸ್ ಪ್ಲೀಸ್! ಭಾಗ ೨’ ರಲ್ಲಿ ಹೀಗೆ ಹೇಳುತ್ತಾರೆ, ‘ಮೀನು ಮಾರುಕಟ್ಟೆಯ ಹಾಗೆ ನಮ್ಮ ಮನಸ್ಸಿನಲ್ಲಿ ಸದಾ ಕಾಲವೂ ಮಾತಿನ ಸದ್ದು ಕೇಳುತ್ತಲೇ ಇರುತ್ತದೆ! ಅದನ್ನು ಮೊದಲು ನಿಲ್ಲಿಸಬೇಕು. ಹೊರಗಿನಿಂದ ಬರುವ ಸದ್ದುಗಳು ನಮ್ಮ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ. ಅವುಗಳನ್ನು ಕೇಳಿಸಿಕೊಳ್ಳದೇ ಓಡಿಸಬೇಕು.ನಾವು ದೀರ್ಘವಾಗಿ ಒಳಗೆ ತೆಗೆದುಕೊಂಡು ಹೊರಗೆ ಬಿಡುವ ಉಚ್ಛ್ವಾಸ-ನಿಚ್ಛ್ವಾಸಗಳಲ್ಲಿ ಮಾತ್ರ ನಮ್ಮ ಗಮನ ಆಳವಾಗಿ ಹುದುಗಿರಬೇಕು. ಹೀಗೆ ಆಲೋಚನೆ, ಮಾತು, ಭಾವನೆ, ಸದ್ದು ಯಾವುವೂ ಇಲ್ಲದ ಆ ಶೂನ್ಯತೆ ಅಧಿಕ ಶಕ್ತಿಶಾಲಿಯಾದದ್ದು.
ಈ ಅಭ್ಯಾಸಕ್ಕೆ ‘ಧ್ಯಾನ’ ಎಂದು ಹೆಸರು ಕೊಟ್ಟಿದ್ದಾರೆ. ಧ್ಯಾನದ ಶಕ್ತಿ ಅಪಾರವಾದದ್ದು. ಹೆಚ್ಚು ಬೇಡ, ಪ್ರತಿದಿನವೂ ಒಂದು ಹತ್ತು ನಿಮಿಷ ಈ ಅಭ್ಯಾಸವನ್ನು ಮಾಡಿ ನೋಡಿರಿ.
ನೀವು ನಿಮ್ಮ ಮನಸ್ಸಿನ ಯಜಮಾನ ಆಗುತ್ತೀರಿ!’
ಹೀಗೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಂಡರೆ ನಾವೂ ಶಾಂತಿಯಿಂದ ಬಾಳಬಹುದು. ವಿಶ್ವ ಶಾಂತಿಗೂ ಕಾರಣರಾಗಬಹುದು.

Friday, November 19, 2010

ಮನದ ಅ೦ಗಳದಿ............೧೮.ಪ್ರವಾಸ

`ಜಗತ್ತಿನ ಇತರ ರಾಷ್ಟ್ರಗಳಲ್ಲಿ ಸಮಾಜದ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿದುಕೊಳ್ಳಲು ನಮ್ಮ ಯುವ ಜನರು ಪ್ರವಾಸ ಮಾಡಬೇಕಾದ ಅಗತ್ಯವುಂಟು’
*ಸ್ವಾಮಿ ವಿವೇಕಾನಂದರು

ಇದು ಶಾಲಾ ಪ್ರವಾಸವನ್ನು ಕೈಗೊಳ್ಳುವ ಸಮಯ. ಕೆಲವು ಶಾಲೆಗಳಲ್ಲಿ ಈಗಾಗಲೇ ಪ್ರವಾಸಕ್ಕೆ ಹೋಗಿ ಬಂದ ಸಂಭ್ರಮದಲ್ಲಿದಾರೆ. ಎಷ್ಟೋ ಶಾಲೆಗಳಲ್ಲಿ ಪ್ರವಾಸಕ್ಕೆ ಹೊರಡುವ ಸಡಗರದ ವಾತಾವರಣವಿದೆ. ಹೊರಡಲು ಸಿದ್ದರಾದ ಮಕ್ಕಳಲ್ಲಿ ಕಾತುರ, ಕುತೂಹಲಗಳ ನಿರೀಕ್ಷೆಯಿದ್ದರೆ, ತಮ್ಮ ಪೋಷಕರ ಆರ್ಥಿಕ ತೊಂದರೆಯಿಂದ ಹೋಗಲಾಗದ ಮಕ್ಕಳ ಮನಸ್ಸುಗಳಲ್ಲಿ ನಿರಾಸೆ ಮಡುಗಟ್ಟಿದೆ.
ಮೂಲತಃ ಅಲೆಮಾರಿಯಾಗಿದ್ದ ಮಾನವ ಸಾಂಸ್ಕ?ತಿಕ ವಿಕಾಸದ ಹಾದಿಯಲ್ಲಿ ಒಂದೆಡೆ ನೆಲೆಸಿ ಜೀವಿಸಲಾರಂಭಿಸಿದ್ದರೂ ?ಪ್ರವಾಸ?ಮಾಡಬೇಕೆಂಬ ಇಚ್ಛೆಯನ್ನು ತನ್ನಲ್ಲೇ ಪೋಷಿಸುತ್ತಾ ಬಂದಿದ್ದಾನೆ. ಪ್ರಾರಂಭದಲ್ಲಿ ಎಲ್ಲೇ ದೂರ ಪ್ರಯಾಣ ಮಾಡಬೇಕಾದರೂ ತಮ್ಮದೇ ಕಾಲುಗಳನ್ನೋ ಇತರ ಪ್ರಾಣಿಗಳನ್ನೋ ಅವಲಂಭಿಸಬೇಕಾಗಿದ್ದ ಸಂದರ್ಭದಲ್ಲಿದ್ದ ತೊಂದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ನಂತರ ಇಲ್ಲವಾಗಿದೆ. ಹಣದ ಬೆಂಬಲವೊಂದಿದ್ದರೆ ದೂರದ ರಾಷ್ಟ್ರಗಳಿಗೆ ಹೋಗಿಬರುವುದೂ ಸರಾಗವೆನಿಸಿದೆ.
ಪ್ರವಾಸ ಏಕೆ ಬೇಕು? ಎನ್ನುವ ಬಗ್ಗೆ ವಿಶ್ವದ ಅನೇಕ ರಾಷ್ತ್ರಗಳಲ್ಲಿ ಸಂಚರಿಸಿ ಬಂದು ಈಗ ಬಿಳಿಗಿರಿರಂಗನ ಬೆಟ್ಟದಲ್ಲಿ `ವಿಶ್ವಶಾಂತಿನಿಕೇತನ?ದಲ್ಲಿ ನೆಲೆಸಿರುವ ಸ್ವಾಮಿ ನಿರ್ಮಲಾನಂದರು ಹೀಗೆ ಹೇಳುತ್ತಾರೆ, ` ಸತ್ಯವನ್ನು ಅನ್ವೇಶಿಸುವುದೇನನ್ನ ಜೀವನದ ಮೊತ್ತಮೊದಲ ಹಾಗೂ ಅತ್ಯಂತ ಮುಖ್ಯವಾದ ಮಹತ್ವಾಕಾಂಕ್ಷೆಯಾಗಿದ್ದರೂ, ಭಾರತ ಹಾಗೂ ವಿದೇಶಗಳಲ್ಲಿ ಪ್ರವಾಸ ಮಾಡಬೇಕೆಂಬ ಮತ್ತು ಎಲ್ಲ ರಾಷ್ರಗಳ ಜನಾಂಗಗಳ ಜನರ ಜೊತೆ ಬೆರೆಯಬೇಕೆಂಬ ಹೆಬ್ಬಯಕೆಯನ್ನು ಚಿಕ್ಕ ಹುಡುಗನಾಗಿದ್ದಾಗಲೇ ನಾನು ಇರಿಸಿಕೊಂಡಿದ್ದೆ. ಇಂಥದೊಂದು ಪ್ರವಾಸ ಕಾರ್ಯಕ್ರಮಕ್ಕೆ ನಾನು ವಿಶೇಷ ಮಹತ್ವವನ್ನೂ ನೀಡಿದ್ದೆ. `ಅಲೆದಾಟದಿಂದಲೇ ಜೇನು ಮಧುಸಂಗ್ರಹ ಮಾಡುತ್ತದೆ.? ಎಂಬ ಅರ್ಥದ ಸಂಸ್ಕ?ತ ಸೂಕ್ತಿಯೊಂದಿದೆ. ನಿಜವಾಗಿ ಹೇಳುವುದಾದರೆ ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ. ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಏನು ಪ್ರಯೋಜನ? ಜಗತ್ ಪ್ರವಾಸ ಮಾಡುವ ಮಂದಿ ಈ ದಿನಗಳಲ್ಲಿ ಎಲ್ಲೆಡೆಯೂ ಇದ್ದಾರೆ. ಈಚೆಗೆ ಇಂಥಾ ಪ್ರವಾಸವು ಹಿಂದೆಂದಿಗಿಂತ ಹೆಚ್ಚು ಸುಲಭವೂ ಸುಗಮವೂ ಆಗಿದೆ. ರಾಜಕಾರಣಿಗಳೂ, ವಾಣಿಜ್ಯೋದ್ಯಮಿಗಳೂ ಎಷ್ಟು ತಿರುಗುವುದಿಲ್ಲ? ಆದರೆ ಇವರ ಪ್ರವಾಸ ಸ್ವಾರ್ಥಮೂಲವಾಗಿರುವುದರಿಂದ ಪ್ರವಾಸದ ಪರಿಣಾಮವಾಗಿ ಅವರ ವ್ಯಕ್ತಿತ್ವದಲ್ಲಿ ಮೂಲಭೂತವಾದ ಯಾವ ಬದಲಾವಣೆಯೂ ಸಂಭವಿಸುವುದಿಲ್ಲ. ಯಾವುದಾದರೂ ಮಹದೋದ್ದೇಶವನ್ನು ಇರಿಸಿಕೊಂಡು ಸೂಕ್ಷ್ಮ ವೀಕ್ಷಣೆ ಮಾಡುತ್ತಾ ಪ್ರವಾಸ ಮಾಡುವುದು ಪ್ರಯೋಜನಕರ ಮತ್ತು ಅಪೇಕ್ಷಣೀಯ. ಇಂಥ ಪ್ರವಾಸಗಳಿಂದ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕಿಂತಲೂ ಮಿಗಿಲಾದ ಉಪಯೋಗವುಂಟು. ಇಂಥಾ ಪ್ರವಾಸ ವ್ಯಕ್ತಿಯ ಅನುಭವವನ್ನು ಶ್ರೀಮಂತಗೊಳಿಸುತ್ತದೆ; ಅವನ ದೃಷ್ಟಿಯನ್ನು ವಿಶಾಲಗೊಳಿಸುತ್ತದೆ.?
ಸತ್ಯಾನ್ವೇಷಣೆಯ ಘನ ಉದ್ದೇಶವನ್ನು ಇರಿಸಿಕೊಂಡು ಸ್ವಾಮಿ ನಿರ್ಮಲಾನಂದರು (ಜನನ ಡಿಸೆಂಬರ್೨, ೧೯೨೪) ೧೯೫೭ರಲ್ಲಿ ಭಾರತ ಪ್ರವಾಸವನ್ನು ಕೈಗೊಂಡರು. ಭಾರತದಲ್ಲಿ ಸುಮಾರು ಹದಿನೈದು ಸಾವಿರ ಮೈಲುಗಳಷ್ಟು ವಿಸ್ತಾರವಾಗಿ ದಿಬ್ರುಗಡದಿಂದ ಡಾರ್ಜಲಿಂಗ್ವರೆಗಿನ; ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಅನೇಕ ಆಶ್ರಮಗಳನ್ನು ಸಂದರ್ಶಿಸಿ ಅಲ್ಲಿ ತಾವು ಭೇಟಿಯಾದ ಅನೇಕ ಆಧ್ಯಾತ್ಮಿಕ ಗುರುಗಳಿಂದ ಸಲಹೆ-ಸೂಚನೆ-ಸಹಾಯ-ಮಾರ್ಗದರ್ಶನ ಪಡೆದರು. ೧೯೫೯ರಿಂದ ೧೯೬೪ರವರೆಗೆ ಸುಮಾರು ನಾಲ್ಕೂವರೆ ವರ್ಷಗಳ ಕಾಲದ ದೀರ್ಘ ವಿದೇಶ ಪ್ರವಾಸವನ್ನು ಮಾಡಿದರು. ಮೊದಲು ಭೂಮಾರ್ಗವಾಗಿ ಯೂರೋಪಿಗೆ ತೆರಳಿ ಅಲ್ಲಿಂದ ಮಧ್ಯಪ್ರಾಚ್ಯ ರಾಷ್ರಗಳಿಗೆಹೋಗಿ ಅನಂತರದ ಹತ್ತು ತಿಂಗಳ ಅವಧಿಯಲ್ಲಿ ಇಸ್ರೇಲನ್ನೂ ಪುಣ್ಯಭೂಮಿ ಪ್ಯಾಲಸ್ಟೈನಿನ ಎಲ್ಲಾ ಪವಿತ್ರ ಸ್ಥಳಗಳನ್ನೂ ಸಂದರ್ಶಿಸಿದರು.ತುರ್ಕಿ, ಗ್ರೀಸ್, ಫ್ರಾನ್ಸ್, ಬೆಲ್ಜಿಯಂ, ಹಾಲೆಂಡ್ಗಳಿಗೆ ಹೋದರು.
ಆಮ್ಸ್ಟರ್ಡಮ್ನಲ್ಲಿದ್ದಾಗ ಅವರಿಗೆ ಒಂದು ಅಪೂರ್ವ ಆಧ್ಯಾತ್ಮಿಕ ಅನುಭವವುಂಟಾಯಿತು. ಅದರ ಪರಿಣಾಮದಿಂದ ಪ್ರವಾಸದ ಗುರಿ ಬೇರೆಯೇ ಆಯಿತು. ಅವರೇ ಹೇಳುವಂತೆ ಇನ್ನಾರೋ ಹೇಳಿದ್ದನ್ನು ಗಿಳಿಪಾಠದಂತೆ ಪುನರುಚ್ಛರಿಸದೇ ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ಮಾತನಾಡಲು ಅವರು ಸಮರ್ಥರಾಗಿದ್ದರು. ಲೋಕಸಂಚಾರವನ್ನು ಮುಂದುವರೆಸಿ ವಿಶ್ವಾದ್ಯಂತ ಮತ್ತೆಮತ್ತೆ ಸಂಚರಿಸಿದರು.
ಹೀಗೆ ವಿಶ್ವದ ವಿವಿಧ ಭಾಗಗಳಲ್ಲಿನ ಅನೇಕ ಜನರೊಂದಿಗೆ ಉಂಟಾದ ಸ್ನೇಹಸಂಪರ್ಕ ಮತ್ತು ದೀರ್ಘ, ನಿರಂತರ ಹಾಗೂ ದುರ್ಗಮ ಪ್ರವಾಸ- ಇವುಗಳು ತಮ್ಮ ಒಳನೋಟವನ್ನೂ ಜೀವನಾನುಭವವನ್ನೂ ವಿಸ್ತರಿಸಿದವು, ಶ್ರೀಮಂತಗೊಳಿಸಿದುವು ಎನ್ನುತ್ತಾರೆ ಸ್ವಾಮೀಜಿ. ಒಟ್ಟಿನಲ್ಲಿ ಪುಸ್ತಕಗಳಿಂದ ಕಲಿತದ್ದಕ್ಕಿಂತ ಪ್ರವಾಸಗಳಿಂದ ಕಲಿತದ್ದೇ ಹೆಚ್ಚು ಎನ್ನುವುದು ಅವರ ಅಭಿಪ್ರಾಯವಾಗಿದೆ.
ಮಹಾ ಪಂಡಿತ ರಾಹುಲ ಸಾಂಕೃತ್ಯಾನಂದರು ನಿರಂತರ ಯಾತ್ರಿಕರಾಗಿದ್ದರು. ಯಾವುದೇ ಗಟ್ಟಿ ಆರ್ಥಿಕ ಬಲವಿಲ್ಲದಿದ್ದರೂ, ಸರ್ಕಾರಗಳ ಸಹಕಾರವಿಲ್ಲದಿದ್ದರೂ ಟಿಬೆಟಿಗೆ ಮೂರು ಭಾರಿ ಭೇಟಿನೀಡಿ ಅಪೂರ್ವವಾದ ಸಂಸ್ಕ?ತ ಗ್ರಂಥಗಳನ್ನು ಭಾರತಕ್ಕೆ ತಂದರು. ಶ್ರೀಲಂಕಾಗೆ ಹೋಗಿ ಬೌದ್ಧಮತದ ಅಧ್ಯಯನ ನಡೆಸಿದರು. ಸುದೀರ್ಘವಾದ ಏಶ್ಯಾ ಮಹಾಯಾತ್ರೆಯನ್ನು ಕೈಗೊಂಡರು. ರಂಗೂನ್, ಪೆನಾಂಗ್, ಸಿಂಗಾಪುರ, ಹಾಂಗ್ಕಾಂಗ್, ಜಪಾನ್, ಕೊರಿಯಾ, ಮಂಚೂರಿಯಾ........ಮುಂತಾದ ಪ್ರಮುಖ ಸ್ಥಳಗಳನ್ನು ಸಂದರ್ಶಿಸಿ ಆಯಾ ಪ್ರದೇಶಗಳ ಭಾಷೆ, ಸಂಸ್ಕ?ತಿ, ಜನಜೀವನವನ್ನು ಕುತೂಹಲದಿಂದ ಗಮನಿಸುತ್ತಾ ಅಧ್ಯಯನ ಮಾಡುತ್ತಾ ಬರವಣಿಗೆ ಕಾರ್ಯವನ್ನು ಮುಂದುವರಿಸಿದರು.
ಮಹಾನ್ ಸಂತರು, ಜ್ಞಾನಾಕಾಂಕ್ಷಿಗಳು, ಲೇಖಕರು...ಮುಂತಾದವರು ಪ್ರವಾಸವನ್ನು ಮಾಡಿ ತಮ್ಮ ಅನುಭವವನ್ನು ಪ್ರವಚನ ಅಥವಾ ಲೇಖನದ ಮೂಲಕ ಎಲ್ಲರಿಗೂ ತಲುಪಿಸುವ ಪ್ರಯತ್ನ ನಡೆಸಿ ನಮ್ಮ ಅರಿವಿನ ಜಗತ್ತನ್ನು ವಿಸ್ತಾರಗೊಳಿಸಿದ್ದಾರೆ. ಪ್ರವಾಸ ಸಾಹಿತ್ಯಗಳು ಈ ದೃಷ್ಟಿಯಿಂದ ಬಹಳ ಅಮೂಲ್ಯವೆನಿಸುತ್ತವೆ. ಎಲ್ಲರಿಗೂ ಪ್ರಪಂಚದ ಮೂಲೆ ಮೂಲೆಗಳನ್ನು ಸುತ್ತಿ ಬರುವುದು ಅಶಕ್ಯವಾಗಿರುವುದರಿಂದ ಸುತ್ತಿ ಬಂದವರ ಅನುಭವವನ್ನು ಓದಿಯಾದರೂ ಕಲ್ಪನಾ ಪ್ರವಾಸವನ್ನು ಕೈಗೊಳ್ಳಬಹುದು. ಅಥವಾ..... ಅರಿವಿನ ಉನ್ನತ ಸ್ತರಗಳನ್ನು ಏರಬಲ್ಲವರಾದರೆ, ` ` THE BEST JOURNEY IS THE INWARD JOURNEY’ಎನ್ನುವುದರ ಅರ್ಥವರಿತು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು.

Friday, November 12, 2010

ಮನದ ಅಂಗಳದಿ..........೧೭.ಮಕ್ಕಳ ದಿನಾಚರಣೆ

ನವೆಂಬರ್ ೨೦, ವಿಶ್ವ ಮಕ್ಕಳ ದಿನ. ನಮ್ಮ ಭಾರತದಲ್ಲಿ ಮಕ್ಕಳ ದಿನವನ್ನು ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನವಾದ ನವೆಂಬರ್೧೪ ರಂದು ಆಚರಿಸುತ್ತೇವೆ. ಮಕ್ಕಳ ಹಿತರಕ್ಷಣೆಗಾಗಿ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರವು ಅನೇಕ ಉಪಯುಕ್ತ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಅದಕ್ಕಾಗೇ ಇರುವ ಸಂಬಂಧಿತ ಇಲಾಖೆಗಳು ಅವುಗಳನ್ನು ಕಾರ್ಯರೂಪಗೊಳಿಸುವ ಪ್ರಯತ್ನದಲ್ಲಿಯೂ ಇವೆ. ಆದರೂ ಉತ್ತಮವಾದ ಫಲ ಗೋಚರಿಸುವಲ್ಲಿ ಎಲ್ಲೋ ವಿಫಲತೆಯನ್ನು ಕಾಣುತ್ತಿದ್ದೇವೆ ಎನಿಸುತ್ತದೆ. ಅದಕ್ಕೆ ಕಾರಣವೇನು?
ಮಾನವ ಸಂಕುಲದ ಆದಿಯಿಂದಲೂ ಮನುಷ್ಯ ತನ್ನ ಸಂತಾನದ ಪ್ರಗತಿಗಾಗಿ ಶ್ರಮಿಸಿರುವುದು ಸುಳ್ಳಲ್ಲ. ಎಲ್ಲಾ ಜೀವಿಗಳಲ್ಲಿಯೂ ಇದು ಮೂಲಭೂತವಾದ ಕ್ರಿಯೆಯಾಗಿದ್ದರೂ ಮನುಷ್ಯ ಅದನ್ನು ಮತ್ತೂ ವಿಸ್ತರಿಸಿಕೊಂಡು ತನ್ನ ಮುಂದಿನ ಪೀಳಿಗೆಗಾಗಿಯೇ ಸ್ಥಿರ, ಚರಾಸ್ತಿಗಳ ಸಂಗ್ರಹದಲ್ಲಿಯೇ ತನ್ನ ಜೀವಿತಾವಧಿಯನ್ನು ಕಳೆಯುತ್ತಿದ್ದಾನೆ. ತನ್ನ ಜೀವನ ಮಟ್ಟಕ್ಕಿಂತಾ ತನ್ನ ಮಕ್ಕಳದ್ದು ಉನ್ನತದ್ದಾಗಿರಬೇಕೆಂಬುದು ಅವನ ಹಂಬಲವಾಗಿದೆ. ಅದರೂ...
ಒಂದು ಕಾಲಕ್ಕೆ ಮಕ್ಕಳಾಗಿದ್ದ ನಾವು ಆ ಸಂದರ್ಭದಲ್ಲಿ ನಮ್ಮ ಅನುಭವಗಳನ್ನು, ಎಂದರೆ ಎದುರಿಸಿದ ಸಮಸ್ಯೆಗಳು, ಗೊಂದಲಗಳು, ಕಾತರಗಳನ್ನು ನಮ್ಮ ಮಕ್ಕಳಲ್ಲಿ ಗುರುತಿಸಿ ತಿಳಿದುಕೊಳ್ಳಲು ವಿಫಲರಾಗಿದ್ದೇವೆ, ಅಥವಾ ಅದನ್ನು ನಿರ್ಲಕ್ಷಿಸಿ ನಮ್ಮದೇ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದಷ್ಟೇ ನಮ್ಮ ಪ್ರೀತಿ ಎಂದುಕೊಂಡಿದ್ದೇವೆ. ಅವರಿಗೆ ಬೇಕು-ಬೇಡಗಳನ್ನು ಪೂರೈಸುವುದೇ ನಮ್ಮ ಜವಾಬ್ಧಾರಿ ಎಂದು ಭಾವಿಸುತ್ತೇವೆ. ಆ ಬೇಕು-ಬೇಡಗಳು ಭೌತಿಕ ವಸ್ತುಗಳಿಗಷ್ಟೇ ಸೀಮಿತವಾಗಿದ್ದು ಅವರ ನಿಜವಾದ ಬೇಡಿಕೆ ಏನು ಎಂದು ಗುರುತಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ. ನಮ್ಮ ಮಕ್ಕಳೊಡನೆ ಕುಳಿತು, ಅವರ ಮನದಾಳದ ಮಾತುಗಳನ್ನು ಆಲಿಸುವ ವ್ಯವಧಾನವನ್ನು ನಾವು ತೋರಿಸುತ್ತಿಲ್ಲ. ಎಷ್ಟೋ ಸಮಯ ಹಾಗೆ ಮಾತನಾಡುವ ಸಲಿಗೆಯನ್ನೂ ಅವರಿಗೆ ಕೊಟ್ಟಿರುವುದಿಲ್ಲ. ಅವರನ್ನು ನಮ್ಮ ದಾರಿಗೆ ಎಳೆಯುವ ಸಡಗರದಲ್ಲಿ ಅವರಂತೆ ಅವರಿರಲು ಅವಕಾಶವನ್ನೇ ನೀಡುತ್ತಿಲ್ಲ. ಈ ಸಂದರ್ಭಕ್ಕೆ ಹೊಂದುವಂತಹ ಒಂದು ‘ಹನಿ?ಯನ್ನು ಇಲ್ಲಿ ಉದಾಹರಿಸಬಹುದು.

‘ನನ್ನಂತೆ ನೀನಾಗಬೇಕೆಂಬ
ಹಟದಲ್ಲಿ
ನಿನ್ನಂತಿರಲು ಬಿಡಲಿಲ್ಲ,
ನಿನ್ನಂತೆಯೇ ನೀನಿರು
ಎನ್ನುವಷ್ಟರಲ್ಲಿ
ನೀನು ನೀನಾಗಿರಲಿಲ್ಲ!?

ಹೀಗೆ ಮಕ್ಕಳನ್ನು ಅತಂತ್ರರಾಗಿಸುವಲ್ಲಿ ಸಫಲರಾಗುತ್ತಿದ್ದೇವೆ. ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವುದೆಂದರೆ ಆರ್ಥಿಕವಾಗಿ ಸಬಲರನ್ನಾಗಿಸುವುದಷ್ಟೇ ನಮ್ಮ ಗುರಿ ಎಂದುಕೊಂಡಿದ್ದೇವೆ ಅಥವಾ ಅವರನ್ನು ದುಡಿಯುವ ಯಂತ್ರಗಳನ್ನಾಗಿ ಮಾಡುತ್ತಿದ್ದೇವೆ. ಮಗುವಿಗೆ ತನ್ನ ನಿಜವಾದ ಹವ್ಯಾಸ ಯಾವುದು ಎಂದು ತಿಳಿದುಕೊಳ್ಳಲು ಅವಕಾಶವನ್ನೇ ನೀಡದೇ ಎಳವೆಯಲ್ಲೇ ಶಾಲೆಗೆ ಹೋಗುವುದರ ಜೊತೆಗೇ ನೃತ್ಯ, ಸಂಗೀತ, ಕರಾಟೆ, ಈಜು....ಹೀಗೆ ನಾಲ್ಕಾರು ಕಡೆಗೆ ಅವರನ್ನು ಕಳುಹಿಸಿ ಅವರ ಬಾಲ್ಯವನ್ನೇ ಯಾಂತ್ರಿಕಗೊಳಿಸಿಬಿಡುತ್ತಿದ್ದೇವೆ. ನಿಜವಾದ ತನ್ನ ಆಸಕ್ತಿ ಯಾವ ಕಡೆಗಿದೆ ಎಂದು ತಿಳಿಯಲಾಗದೇ ಮಗು ಗೊಂದಲಗೊಳ್ಳುತ್ತದೆ. ಇದರ ಜೊತೆಗೇ ಮಗು ಕಲಿತದ್ದನ್ನೆಲ್ಲಾ ಸ್ಪರ್ಧೆಗೆ ಒಡ್ಡಿ ಅದರಲ್ಲಿ ಆತಂಕವನ್ನು ಸೃಷ್ಟಿಸುತ್ತಿದ್ದೇವೆ. ಎಷ್ಟೋ ವೇಳೆ ಗೆಲುವು ಮಗುವಿನಲ್ಲಿ ಮೇಲರಿಮೆಯನ್ನೂ (ಕ್ರಮೇಣ ಇದೇ ಅಹಂಕಾರವಾಗಿ ನೈಜ ಪ್ರಗತಿಗೇ ಅಡ್ಡವಾಗುತ್ತದೆ.) ಸೋಲು ಕೀಳರಿಮೆಯನ್ನೂ ಉಂಟುಮಾಡುತ್ತದೆ. ಮಗು ತನ್ನ ಸ್ವಾಭಾವಿಕ ರೀತಿಯಲ್ಲಿ ಬೆಳೆಯಲು, ಪ್ರಗತಿಹೊಂದಲು ಇದು ಅಡ್ಡಿಯಾಗುತ್ತದೆ. ಮಗುವಿಗೆ ಒಂದು ಉತ್ತಮ ಹವ್ಯಾಸ ಬಾಲ್ಯದಿಂದಲೇ ರೂಪುಗೊಳ್ಳದಿದ್ದರೆ ಮುಂದೆ ಒತ್ತಡಗಳ ನಿವಾರಣೆಗೆ ಮಾರ್ಗವಿಲ್ಲದೇ ಅದು ಗೊಂದಲದ ಗೂಡಾಗುವ ಸಂಭವವಿರುತ್ತದೆ.

ಜಗತ್ತಿನಪ್ರಸಿದ್ಧ ಆಧ್ಯಾತ್ಮಿಕ ಸಾಹಿತಿಯಾದ ಖಲೀಲ್ ಗಿಬ್ರಾನ್ ತಮ್ಮ ಮಹೋನ್ನತ ಕೃತಿಯಾದ ‘ಪ್ರವಾದಿ?(ಪ್ರೊಫೆಟ್)ಯಲ್ಲಿ ಮಕ್ಕಳ ಬಗ್ಗೆ ಹೀಗೆ ಹೇಳಿದ್ದಾರೆ.

‘ನಿಮ್ಮ ಮಕ್ಕಳು ನಿಮ್ಮ ಮಕ್ಕಳೇ ಅಲ್ಲ. ಅವರು ಜೀವನೋತ್ಕಂಟಿತ ಜೀವನದ ಬಾಲಕ, ಬಾಲಿಕೆಯಾಗಿದ್ದಾರೆ. ಅವರು ನಿಮ್ಮೊಳಗಿನಿಂದ ಬಂದಿರುವರಲ್ಲದೆ ನಿಮ್ಮಿಂದ ಬಂದಿರುವುದಿಲ್ಲ. ಅವರು ನಿಮ್ಮ ಬಳಿ ಇರುತ್ತಿದ್ದಾಗ್ಯೂ ನಿಮಗಾಗಿಯೇ ಇರುವುದಿಲ್ಲ. ಅವರಿಗೆ ನೀವು ನಿಮ್ಮ ಪ್ರೀತಿಯನ್ನೀಯಬಹುದು. ಆದರೆ ನಿಮ್ಮ ವಿಚಾರಗಳನ್ನಲ್ಲ. ಏಕೆಂದರೆ ಅವರಿಗೆ ತಮ್ಮವೇ ಆದ ವಿಚಾರಗಳಿರುತ್ತವೆ. ಅವರ ಮೈಗಾಗಿ ನೀವು ಮನೆ ಮಾಡಿಕೊಡಿ; ಆದರೆ ಆತ್ಮಕ್ಕಾಗಿ ಬೇಡ. ಏಕೆಂದರೆ ಅವರ ಆತ್ಮಗಳೆ ಮುಂಬರುವ ಮನೆಯಲ್ಲಿ ವಾಸಿಸುವವು. ಆ ಮನೆಗಳನ್ನು ನೀವು ಕಾಣಲಾರಿರಿ. ನಿಮ್ಮ ಕನಸುಗಳಲ್ಲಿ ಕೂಡ ಕಾಣಲಾರಿರಿ.
ಅವರಂತಾಗಲು ನೀವು ಹವಣಿಸಿರಿ; ಆದರೆ ನಿಮ್ಮಂತೆ ಅವರನ್ನು ಮಾಡಲು ಮಾತ್ರ ಹವಣಿಸಬೇಡಿ. ಏಕೆಂದರೆ ಜೀವನವು ಹಿಂದೆ ಹೋಗದು. ಮತ್ತು ನಿನ್ನೆಯೊಂದಿಗೆ ನಿಲ್ಲದು.
ನೀವು ಬಿಲ್ಲುಗಳು; ಅವುಗಳಿಂದ ಬಿಟ್ಟ ಜೀವಂತ ಬಾಣಗಳೇ ನಿಮ್ಮ ಮಗುಗಳು. ಆ ಬಿಲ್ಲುಗಾರನು ಅನಂತ ಪಥದ ಮೇಲಿನ ತನ್ನ ಗುರಿಯನ್ನು ಲಕ್ಷಿಸಿ ನಿಮ್ಮನ್ನು ತನ್ನ ಶಕ್ತಿಯಿಂದ ಬಗ್ಗಿಸಿ ತನ್ನ ಬಾಣಗಳು ಶೀಘ್ರ ವೇಗದಿಂದ ಹೋಗುವಂತೆ ಮಾಡುತ್ತಾನೆ. ಆ ಬಿಲ್ಲುಗಾರನು ತನ್ನ ಕೈಮುಟ್ಟ ಮಣಿಸುವ ನಿಮ್ಮ ಮಣಿತವು ನಿಮಗೆ ಆನಂದದಾಯಕವೆನಿಸಲಿ. ಆದರೆ ಚಿಮ್ಮಿ ಹೋಗುವ ಬಿಲ್ಲನ್ನು ಆತನು ಪ್ರೀತಿಸುವಂತೆ ಟ್ಟಿಮುಟ್ಟಾದ ಬಿಲ್ಲನ್ನೂ ಆತನು ಪ್ರೀತಿಸುವನು.?

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ, ಪ್ರಗತಿಗೆ ಅವರೊಂದಿಗೆ ನಾವಿದ್ದು ಸಹಕರಿಸೋಣ. ಆದರೆ ನಮ್ಮ ದಾರಿಗೆ ಅವರನ್ನು ಎಳೆದು, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನೆಲ್ಲಾ ಅವರಲ್ಲಿಯೂ ತುಂಬಿ ಅವರನ್ನು ಪಥ ಭ್ರಷ್ಟರನ್ನಾಗಿಸುವುದು ಬೇಡ. ನಮ್ಮನ್ನು ಗಮನಿಸಿದಾಗ ಕೆಲವಾದರೂ ಮೌಲ್ಯಗಳನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತೆ ಹಿರಿಯರೆನಿಸಿಕೊಳ್ಳಲು ಇಚ್ಛಿಸುವ ನಾವು ಹಿರಿತನದಿಂದ ನಮ್ಮನ್ನು ನಾವು ತಿದ್ದಿಕೊಳ್ಳೋಣ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಇದನ್ನೇ ನಮ್ಮ ಕೊಡುಗೆ ಎಂದು ಭಾವಿಸಿ ಮಕ್ಕಳೊಂದಿಗೆ ನಾವೂ ಸಕ್ರಿಯವಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಿದ್ಧರಾಗೋಣ.

Saturday, November 6, 2010

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು
ದೀಪಾವಳಿಯ ಪ್ರಯುಕ್ತ ೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿಯ 'ಪ್ರಣತಿ ಹನಿ' ಗಳನ್ನು ನಿಮ್ಮ ಮು೦ದಿಡುತ್ತಿದ್ದೆನೆ.
ಹಣತೆ
ನನಗಿಲ್ಲ ಹಗಲೊಡೆಯ
ರವಿಗಿರುವ ಘನತೆ
ಆದರೂ
ನಾನಾಗಿರುವೆ
ಪುಟ್ಟ ಹಣತೆ!

ಬಹು-ಮಾನ
ಪ್ರಣತಿಗೆ ಬೇಕಿಲ್ಲ
ಯಾವುದೇ ಬಹುಮಾನ
ಪ್ರಶಸ್ತಿ
ಪ್ರೀತಿ ಅಭಿಮಾನಗಳೇ
ಬಹುದೊಡ್ಡ ಆಸ್ತಿ.

ನಿಖರ
ನಾನಲ್ಲ ದಿನಮಣಿಯ
ದಿವ್ಯ ಪ್ರಭೆಯಷ್ಟು ಪ್ರಖರ
ಆದರೂ
ನಾನಾಗಬಯಸುವೆ
ಸ್ಪಷ್ಟ ನಿಖರ.

ಅಲ್ಪ ಕಾರ್ಯ
ಅತುಲ ಬೈಜಿಕ ಶಕ್ತಿ
ಫಲಶ್ರುತಿಯೇ ಸೂರ್ಯ
ಅಲ್ಪ ಸ್ನೇಹವ ಹೀರಿ
ಬೆಳಗುವುದೆನ್ನ ಕಾರ್ಯ!

ವಿರೂಪ
ಸೋ೦ಕಲು ನನ್ನ ಕುಡಿ
ಬೆಳಗುವುದು ನ೦ದಾದೀಪ
ಸ್ಪರ್ಶಿಸಿದಾಕ್ಷಣವೇ ಸಿಡಿವ
ಸ್ಪೋಟಕವೇ ವಿರೂಪ.

ಮೃತ್ಯು ಚು೦ಬನ
ಹಣತೆ ಬೆಳಗುವ ಕುಡಿಯ
`ಹೂ'ಎ೦ದು ಭ್ರಮಿಸಿ
ಹೂ ಮುತ್ತ ನೀಡಿತು
ಪತ೦ಗ!

Thursday, November 4, 2010

ಮನದ ಅ೦ಗಳದಿ......... ೧೬- ಒಂದು ಸಾರ್ಥಕ ಸಂಜೆ

(ವರಕವಿ ಬೇಂದ್ರೆಯವರ ನೆನಪು)

ತಾನು ಹೋದ ಕಡೆಗೆಲ್ಲಾ ನನ್ನನ್ನೂ ಕರೆದುಕೊಂಡು ಹೋಗಿ ಸ್ಥಳ ಪರಿಚಯ ಮಾಡಿಕೊಡುತ್ತಿದ್ದರು ನನ್ನಕ್ಕ. ಹಾಗೆಯೇ ಅವರು ಧಾರವಾಡಕ್ಕೆ ಮೌಲ್ಯಮಾಪನಕಾರ್ಯಕ್ಕೆ ಹೋದಾಗ ನನ್ನನ್ನೂ ಕರೆದುಕೊಂಡು ಹೋದರು. (ಆಗ S.S.L.C. ಉತ್ತರ ಪತ್ರಿಕೆಗಳ ಬೇರೆ ಬೇರೆ ವಿಷಯಗಳ ಮೌಲ್ಯಮಾಪನಕಾರ್ಯ ಬೇರೆಬೇರೆ ಊರುಗಳಲ್ಲಿ ನಡೆಯುತ್ತಿತ್ತು) ಬೇರೆಬೇರೆ ಸ್ಥಳಗಳಿಂದ ಹೋದವರಿಗೆ ಉಳಿಯಲೂ ವ್ಯವಸ್ಥೆ ಮಾಡಿದ್ದರು. ನಮ್ಮ ಕ್ಯಾಂಪಸ್ ಮುಂದೇ ಸಾಧನಕೇರಿಯ ಬಸ್ ಹಾದು ಹೋಗುತ್ತಿತ್ತು. ಧಾರವಾಡಕ್ಕೆ ಹೋಗುತ್ತೇವೆಂದು ತಿಳಿದಾಗಲೇ ವರಕವಿ ಬೇಂದ್ರೆಯವರನ್ನು ನೋಡಬೇಕು ಎಂದುಕೊಂಡಿದ್ದ ನಮಗೆ ಆ ಬಸ್ ನೋಡಿದ ತಕ್ಷಣ ಸಾಧನಕೇರಿ ಕೈ ಬೀಸಿ ಕರೆದಂತಾಯ್ತು. ಯಾವಾಗ ಅಲ್ಲಿಗೆ ಹೋಗುತ್ತೇವೆಯೋ ಎನ್ನುವ ತವಕ . ಆದರೆ ಅಕ್ಕನಿಗೆ ಬಿಡುವೇ ಇಲ್ಲ.
ಒಂದು ದಿನ ಸಂಜೆ ನಾವು ಸಮೀಪದಲ್ಲೇ ನಡೆಯುತ್ತಿದ್ದ ಒಂದು ಸಂಗೀತ ಕಛೇರಿಗೆ ಹೋದೆವು. ಪಕ್ಕದಲ್ಲಿ ಕುಳಿತ ಮಹಿಳೆ, `ನೀವು ಮೈಸೂರಿನ ಕಡೆಯವರೇ?’ ಎಂದು ಪ್ರಶ್ನಿಸಿದರು. ಅಕ್ಕ `ಹೌದು’ ಎಂದರು. `ನಿಮಗೆ ಕರ್ನಾಟಕ ಸಂಗೀತ ಕೇಳಿ ರೂಢಿಯಾಗಿರುವುದರಿಂದ ಹಿಂದೂಸ್ಥಾನಿ ಕೇಳುವುದು ಸ್ವಲ್ಪ ಬೇರೆ ರೀತಿಯೇ ಎನಿಸಬಹುದು’. ಎಂದು ಮೆಲುದನಿಯಲ್ಲಿ ಮಾತಿಗಾರಂಭಿಸಿದರು. ವೇದಿಕೆಯ ಮೇಲೆ ಕುಳಿತು ಹಾಡುತ್ತಿದ್ದ ಗಾಯಕಿಗೆ ಹಿಂದೆಯೇ ಕುಳಿತು ಪ್ರೋತ್ಸಾಹ ಕೊಡುತ್ತಿದ್ದವರು ಅವರ ತಂದೆ ಎಂದು ಹೇಳಿದ ಅವರು, `ನಾನೂ ಚಿಕ್ಕವಳಿದ್ದಾಗ ನೃತ್ಯ ಮಾಡುತ್ತಿದ್ದೆ. ಆಗ ನಮ್ಮ ತಂದೆಯವರು ಕಾಲಿಗೆ ಗೆಜ್ಜೆ ಕಟ್ಟಿ ಆಶೀರ್ವದಿಸುತ್ತಿದ್ದರು. ಈಗ ಆ ಪ್ರೋತ್ಸಾಹ ಬರೀ ನೆನಪು ಮಾತ್ರ...’ಎಂದು ತಮ್ಮ ವಿಷಯವನ್ನೂ ಹೇಳಿದರು. ನಾವು ನಮಗೆ ಬೇಂದ್ರೆಯವರನ್ನು ನೋಡಬೇಕೆಂಬ ಹಂಬಲವನ್ನು ತಿಳಿಸಿದೆವು. ಬೇಂದ್ರೆಯವರು ಹಾಗೆ ಎಲ್ಲರನ್ನೂ ನೋಡಿ ಮಾತನಾಡಿಸುವುದಿಲ್ಲ. ನನಗೆ ಚೆನ್ನಾಗಿ ಪರಿಚಯವಿದ್ದಾರೆ. ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ನಿಮಗೆ ಯಾವಾಗ ಬಿಡುವಾಗುತ್ತದೆ ತಿಳಿಸಿ.? ಎಂದರು.

ಸಾರ್ವಜನಿಕ ರಜಾದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಅರ್ಧದಿನ ಮಾತ್ರ ನಡೆಯುತ್ತಿತ್ತು. ಅಂಥಾ ಒಂದು ದಿನವನ್ನು ಹೇಳಿ ಅಕ್ಕ ವೇಳೆಯನ್ನು ಗೊತ್ತುಪಡಿಸಿಕೊಂಡರು. ಅವರು ಸಾಧನಕೇರಿಯ ಬಸ್ಸ್ಟಾಪಿನಲ್ಲಿ ತಮಗಾಗಿ ಕಾಯಬೇಕಾಗಿ ತಿಳಿಸಿದರು. ನಾವು ಹೊಸ ಹುಮ್ಮಸ್ಸಿನಿಂದ ಆ ದಿನಕ್ಕಾಗಿ ಕಾಯಲಾರಂಭಿಸಿದೆಡವು. ಆ ದಿನವೂ ಬಂದು ಸಾಧನಕೇರಿ ಸ್ಟಾಪಿನಲ್ಲಿ ಇಳಿದು ಆಕೆಗಾಗಿ ಕಾದದ್ದೇ ಆಯ್ತು. ಸಂಜೆಯಾದರೂ ಅವರು ಬರಲೇ ಇಲ್ಲ. ಏನು ತೊಂದರೆಯಾಯಿತೋ ಏನೋ ಎನಿಸಿದರೂ ಅಲ್ಲಿಯವರೆಗೂ ಹೋಗಿ ಬೇಂದ್ರೆಯವರನ್ನು ನೋಡದೇ ಬರಲು ಮನಸ್ಸು ಒಪ್ಪಲಿಲ್ಲ.

ಅಂಥಾ ಸುಪ್ರಸಿದ್ಧ ಕವಿಯ ಮನೆಯನ್ನು ಹುಡುಕುವುದು ಕಷ್ಟವೇನೂ ಆಗಲಿಲ್ಲ. `ಶ್ರೀಮಾತಾ’ ಬಾಗಿಲ ಬಳಿ ನಿಂತು ಅಂಜುತ್ತಾ, ಅಳುಕುತ್ತಾ ಕರೆಗಂಟೆಯನ್ನು ಒತ್ತಿದಾಗ ನಮ್ಮ ಎದೆಬಡಿತ ನಮಗೇ ಕೇಳುತ್ತಿತ್ತು. ಸ್ವತ: ಬೇಂದ್ರೆಯವರೇ ಬಾಗಿಲು ತೆರೆದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ. ಆದರೆ ಏನು ಮಾತನಾಡಬೇಕೆಂದೇ ತಿಳಿಯಲಿಲ್ಲ. ಬೇಂದ್ರೆಯವರೇ ನಮಗೆ ಒಳಗೆ ಬಂದು ಕುಳಿತುಕೊಳ್ಳಲು ಹೇಳಿ, `ಎಲ್ಲಿಂದ ಬಂದಿರಿ?’ ಎಂದು ವಿಚಾರಿಸಿಕೊಂಡರು. ನಾವು ವಿಷಯ ತಿಳಿಸಿದಾಗ, `ಎಲ್ರಿಗೂ ರಜ ಸಿಕ್ಕಾಗ ಸಿನೇಮಾ, ಪಿಕ್ನಿಕ್ ಅಂತ ಹೋಗ್ತಾರೆ. ನೀವು ಈ ಮುದುಕನ್ನ ನೋಡಕ್ಕೆ ಬಂದಿದೀರಲ್ಲ’ ಎಂದು ನಗುತ್ತಾ ಹೇಳಿದರು. (ಕ್ಷಮಿಸಿ, ಅವರದ್ದೇ ಮಾತಿನ ಧಾಟಿಯಲ್ಲಿ ಬರೆಯಲು ಆಗುತ್ತಿಲ್ಲ. ಸಾರಾಂಶ ತಿಳಿಸುತ್ತೇನೆ.) ನಂತರ ನಮ್ಮ ತಂದೆ, ತಾಯಿ, ಊರಿನಬಗ್ಗೆ ಎಲ್ಲಾ ವಿಚಾರಿಸಿಕೊಂಡರು. ಮಾತನಾಡುತ್ತಾ ನಮಗೂ ಮೊದಲಿನ ಅಂಜಿಕೆ ಕಮ್ಮಿಯಾಯ್ತು. `ನಮ್ಮ ತಂದೆಗೆ ಸಂತ, ಭೂಗೋಳ, ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಇತ್ತು. ಇಂಗ್ಲಿಷ್ ವ್ಯಾಕರಣವನ್ನು ಚೆನ್ನಾಗಿ ತಿಳಿದಿದ್ದರು.’ ಎಂದು ಹೇಳಿದೆವು. ನಮ್ಮ ಹೆಸರನ್ನು ಕೇಳಿದರು. ನಮ್ಮಕ್ಕ `ಸೀತ’ ಎಂದರು. ನಾನು `ಪ್ರಭಾ’ ಎಂದೆ. `ನಿಮ್ಮ ಪೂರ್ತಿ ಹೆಸರು ಹೇಳಿ. ಇಷ್ಟೆಲ್ಲಾ ತಿಳೀದುಕೊಂಡಿರುವ ನಿಮ್ಮ ತಂದೆ ನಿಮಗೆ ಇಷ್ಟು ಚಿಕ್ಕ ಹೆಸರು ಇಟ್ಟಿರಲಾರರು.’ ಎಂದರು. ಆಗ ನಮ್ಮ ಪೂರ್ತಿ ಹೆಸರುಗಳಾದ `ಸೀತಾಲಕ್ಷ್ಮಿ’ ಮತ್ತು `ಪ್ರಭಾಮಣಿ’ ಗಳನ್ನು ಹೇಳಿದೆವು.

`ಹಿಂದೆ ಎರಡು ಹೆಸರುಗಳನ್ನು ಏಕೆ ಇಡ್ತಿದ್ದರು ಎಂದರೆ ಒಂದು ಹೆಸರಿನಿಂದ ಒಳ್ಳೆಯದು ಆಗದಿದ್ದರೆ ಮತ್ತೊಂದರಿಂದಲಾದರೂ ಒಳ್ಳೆಯದಾಗಲಿ ಎಂದು’ ಎಂಬ ಕಾರಣವನ್ನು ತಿಳಿಸಿದರು. ಅದುವರೆಗೂ ಹ್ರಸ್ವನಾಮದ ಮೋಹದಲ್ಲಿದ್ದ ನಾನು ನಂತರ ಪೂರ್ಣ ಹೆಸರನ್ನು ಹೇಳಲಾರಂಭಿಸಿದೆ. ಈಗಂತೂ ನನ್ನ ಹೆಸರಿನ ಜೊತೆಗೆ ಅಷ್ಟೇ ಅಕ್ಷರಗಳ `ಇವರ’ ಹೆಸರನ್ನೂ ಸೇರಿಸಿಕೊಂಡು ದೀರ್ಘನಾಮಳಾಗಿದ್ದೇನೆ. ಜೀವಶಾಸ್ತ್ರದ ಬೈ ನಾಮಿಯಲ್ ನಾಮಿಂಕ್ಲೇಚರ್ನಂತೆ! (ದ್ವಿನಾಮ ನಾಮಕರಣ!)

ಸಾಹಿತ್ಯದ ಬಗ್ಗೆ ಯಾವುದೇ ಮಾತನಾಡುವುದೂ ಬೇಡ. ಅವರನ್ನು ನೋಡಿ ಬಂದರಷ್ಟೇ ಸಾಕು ಎಂದು ಮೊದಲೇ ತೀರ್ಮಾನಿಸಿಕೊಂಡು ಹೋಗಿದ್ದರೂ ಅದು ಹೇಗೋ ಮಾತು ಸಾಹಿತ್ಯದ ಕಡೆಗೇ ಹೊರಳಿತು. ಬೇಂದ್ರೆಯವರು, `ನನ್ನ ಸಾಹಿತ್ಯ ಎಂದರೆ ಕಾಸಾರದಲ್ಲಿ ಈಜಾಡಿದಂತೆ. ಅವರ ಕೃತಿಗಳನ್ನು ಓದುವುದು ಎಂದರೆ ಪರ್ವತವನ್ನು ಏರಿದಂತೆ. ಯಾವುದು ಹೆಚ್ಚು ಸಂತೋಷ ನೀಡುತ್ತದೆ ನೀವೇ ಹೇಳಿ’ ಎಂದರು. ಅದನ್ನು ಹೇಳುವಷ್ಟು ನಾವು ಪ್ರಬುದ್ಧರಾಗಿರಲಿಲ್ಲ. ಆದರೂ ಎರಡಕ್ಕೂ ತಮ್ಮದೇ ಆದ ಘನತೆ, ಆನಂದ ಇದೆ ಎಂದುಕೊಂಡೆವು. ಅಷ್ಟರಲ್ಲಿ ಜೋರಾಗಿ ಮಳೆ ಬೀಳಲಾರಂಭಿಸಿತು. ಒಳಗೆ ವರಾಂಡದಲ್ಲಿ ಕುಳಿತಿದ್ದ ನಮಗೂ ಇರಚಲು ಹೊಡೆಯುತ್ತಿತ್ತು. ನಮ್ಮನ್ನು ಒಳ ಮನೆಗೆ ಕರೆದುಕೊಂಡು ಹೋದರು.

`ನನ್ನ ನೋಡಕ್ಕೆ ದೂರದ ಊರಿನಿಂದ ಇಬ್ಬರು ಹೆಣ್ಣುಮಕ್ಕಳು ಬಂದಾಗ ರಂಬೆ, ಊರ್ವಶಿ ನರ್ತನ ಮಾಡ್ದಂಗೆ ಮಳೆ ಬರ್ತಿತ್ತು ಅಂತ ಇನ್ನು ಮುಂದ ಮಳೆ ಬಂದಾಗಲೆಲ್ಲಾ ನಿಮ್ಮ ನೆನಪು ಮಾಡ್ಕೋತೀನಿ’, ಎಂದರು. ನಮಗೆ ಒಂದು ಡಬ್ಬಿಯಿಂದ ಸಕ್ಕರೆ ತೆಗೆದು ಕೊಟ್ಟು ತಿನ್ನಲು ಹೇಳಿದರು. ತಮಗೆ ಪ್ರಿಯರಾದವರಿಗೆ ಮಾತ್ರ ಸಕ್ಕರೆ ತಿನ್ನಲು ಕೊಡ್ತಾರೆ ಎಂದು ಕೇಳಿ ತಿಳಿದಿದ್ದ ನಮಗೆ ಬಹಳ ಸಂತೋಷವಾಯ್ತು. ಅವರು ಕುಳಿತಿದ್ದಾಗ ಅವರ ಕಾಲ ಬಳಿಯೇ ಸುಳಿದಾಡುತ್ತಿದ್ದ ಬೆಕ್ಕನ್ನು ತೋರಿಸಿ ಅದು ತಮ್ಮ ಪತ್ನಿಯ ಮನೆಯಿಂದ ತಂದ ಸಂತತಿ ಎಂದು ತಿಳಿಸಿದರು. ಒಂದು ಪುಸ್ತಕ ಕೊಟ್ಟು ಅದರಲ್ಲಿ ನಮ್ಮ ಪೂರ್ಣ ವಿಳಾಸ ಬರೆಯಲು ತಿಳಿಸಿದರು. ಅಲ್ಲಿದ್ದ ಬ್ರಹ್ಮ ಚೈತನ್ಯರ ಫೋಟೋ ನೋಡಿ ನಮ್ಮ ತಂದೆಯವರೂ ಅವರ ಆರಾಧಕರು ಎಂದು ಹೇಳಿದಾಗ ಅವರಿಗೆ ತುಂಬಾ ಸಂತೋಷವಾಯಿತು.

ಸಂಜೆ ಸರಿದು ಇರುಳು ಪಸರಿಸಲಾರಂಭಿಸಿತು. ಒಲ್ಲದ ಮನಸ್ಸಿನಿಂದಲೇ ನಾವು ಹೊರಡಬೇಕಾಯ್ತು. ಇನ್ನೂ ಮಳೆ ಹನಿಯುತ್ತಿದ್ದುದರಿಂದ ನಮ್ಮನ್ನು ಬಸ್ಸ್ಟಾಪ್ವರಗೆ ಛತ್ರಿ ಹಿಡಿದು ಕಳುಹಿಸಿ ಬರಲು ತಮ್ಮ ಮಗನಿಗೆ ಹೇಳಿದರು. ನಾವು ಗಾಭರಿಯಿಂದ ಬೇಡವೆಂದು ತಿಳಿಸಿ ಬೀಳ್ಕೊಂಡು ಬಂದೆವು. ಆ ಒಂದು ಸಂಜೆ ಎಂದಿಗೂ ಮರೆಯಲಾಗದ ಸಂಜೆಯಾಗಿದೆ.
ಅದೇ ವರ್ಷ ದೀಪಾವಳಿಯ ದಿನವೇ ನಮಗೆ ಬೇಂದ್ರೆಯವರು ನಿಧನರಾದ ಸುದ್ಧಿ ತಿಳಿಯಿತು. ಆದಿನ ನಮಗೆ ಹಬ್ಬದಂತೆ ಕಾಣಲಿಲ್ಲ. ನನ್ನಕ್ಕ ಬೇಂದ್ರೆಯವರ ನೆನಪಿನಲ್ಲಿ ಅತ್ತೂ ಅತ್ತೂ ಸಾಕಾದರು. ನಾನೂ ಮೂಕವಾಗಿ ರೋಧಿಸುತ್ತಿದ್ದೆ. ಎಲ್ಲರ ಮನೆಗಳಲ್ಲೂ ದೀಪಗಳು ಬೆಳಗಬೇಕಾದ ದಿನ ಸಾಹಿತ್ಯಕ್ಷೇತ್ರವನ್ನೇ ತನ್ನ ದಿವ್ಯಪ್ರಭೆಯಿಂದ ಬೆಳಗಿದ ಒಂದು ಮಹಾನ್ ಜ್ಯೋತಿ ನಂದಿಹೋಗಿತ್ತು. ಆದರೆ ಆ ಜ್ಯೋತಿ ನೀಡಿದ ಬೆಳಕು ಚಿರನೂತನವಾಗಿದೆ. ಚಿರಸ್ಥಾಯಿಯಾಗಿದೆ.