Saturday, November 27, 2010

ಮನದ ಅ೦ಗಳದಿ................೧೯. ಮನಸ್ಸು- ಅದರ ಶಿಕ್ಷಣ

ಜೀವನದಲ್ಲಿ ನಾವು ಸಂತಸದಿಂದ ಇರಬೇಕಾದರೆ, ನಮ್ಮ ಪಾಲಿನ ಕರ್ತವ್ಯಗಳನ್ನು ನಿರಾತಂಕವಾಗಿ ನಿರ್ವಹಿಸಬೇಕಾದರೆ ಮೊದಲು ನಮ್ಮ ಮನಸ್ಸನ್ನು ನಾವು ಅರಿಯಬೇಕಾಗುತ್ತದೆ. ನಮ್ಮ ಮನಸ್ಸನ್ನು ನಾವು ನಿರ್ದಿಷ್ಟರೀತಿಯಲ್ಲಿ ಅಣಿಗೊಳಿಸಿಕೊಳ್ಳಬೇಕಾಗುತ್ತದೆ. ಆ ವಿಧಾನವನ್ನು ತಿಳಿದುಕೊಳ್ಳಲು ಸಂಬಂಧಿತ ತಜ್ಞರ, ಜ್ಞಾನಿಗಳ ಸಹಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಡೆಯಬೇಕಾಗುತ್ತದೆ. ಅನುಭವಿಗಳ ಹಾಗೂ ಅನುಭಾವಿಗಳ ಲೇಖನಗಳನ್ನು, ಅವರು ಬರೆದ ಪುಸ್ತಕಗಳನ್ನು ಓದುವುದು ಈ ನಿಟ್ಟಿನಲ್ಲಿ ಒಂದು ಸರಳ ಮಾರ್ಗವಾಗಿದೆ. ನಾನು ಇತ್ತೀಚೆಗೆ ಓದಿದ ಶಂಸ ಐತಾಳ ಅವರು ಬರೆದ ಸ್ವಾಮಿ ನಿರ್ಮಲಾನಂದರ ಬಗೆಗಿನ ಪುಸ್ತಕ ಹೆಚ್ಚು ಮಾರ್ಗದರ್ಶಕವಾಗಿದೆ.
‘ಮನಸ್ಸೇ ಎಲ್ಲಾ ರಾಗ-ದ್ವೇಶಗಳಿಗೆ, ಎಲ್ಲಾ ಸುಖ-ಸಂತೋಷಗಳಿಗೆ ಮೂಲ. ಮನಸ್ಸಿನ ಚೇಷ್ಟೆಗಳಿಗೆ ಸಿಲುಕಿಕೊಂಡವನು ಅದರ ಗುಲಾಮನಾಗುತ್ತಾನೆಯೇ ವಿನಾ ಅದರ ಯಜಮಾನನಾಗುವುದಿಲ್ಲ. ಮನಸ್ಸಿಗೆ ಸಂತೋಷವಾದಾಗ ಹಿಗ್ಗುವುದಾಗಲೀ, ದುಃಖವಾದಾಗ ಕುಗ್ಗುವುದಾಗಲೀ ಸರಿಯಲ್ಲ. ಬುದ್ದಿಯನ್ನು ಸಾಕ್ಷಿಯಾಗಿ ನಿಲ್ಲಿಸಿ, ಯಾವುದೇ ವಿಕಾರಕ್ಕೆ ಒಳಗಾಗದ ಸಮದೃಷ್ಟಿಯಿಂದ, ವಿಷಯಗಳನ್ನು ಪರಿಶೀಲಿಸಲು ಕಲಿಯಬೇಕು. ಈ ದೃಷ್ಟಿಯಿಂದ ಹೇಳುವುದಾದರೆ ಮನಸ್ಸಿಗೂ ಶಿಕ್ಷಣ ನೀಡಬೇಕಾದ ಅಗತ್ಯವುಂಟು.
ಮನಸ್ಸಿನ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮೂರು ಮುಖ್ಯ ಪರಿಕಲ್ಪನೆಗಳನ್ನು ನೀಡುತ್ತಾರೆ ಸ್ವಾಮೀಜಿಯವರು.
*ಸ್ಥೂಲ ಮನಸ್ಸನ್ನು ಸೂಕ್ಷ್ಮಗೊಳಿಸುವುದು,
*ಮನಸ್ಸನ್ನು ಶುದ್ಧೀಕರಿಸುವುದು
ಮತ್ತು
*ಮನಸ್ಸನ್ನು ‘ಶೂನ್ಯ’ಗೊಳಿಸುವುದು.
ಸಾಮಾನ್ಯ ವ್ಯಕ್ತಿಗಳು ಸಾಧಾರಣವಾಗಿ ಹೊಂದಿರುವ ಮನಸ್ಸು ಸ್ಥೂಲವಾಗಿರುತ್ತದೆ. ‘ಇಂಥಾ ಸ್ಥೂಲ ಮನಸ್ಸೆಂಬುದು ಅವಿವೇಕವಲ್ಲದೆ ಬೇರೇನೂ ಅಲ್ಲ.’ ( Gross-mindedness is stupidity.) ವಿವಿಧ ಆಲೋಚನೆಗಳಲ್ಲಿ ತೊಡಗಿರುವ ಸ್ಥೂಲ ಮನಸ್ಸು ವಿಕಾರಕ್ಕೆ ಒಳಗಾಗುವುದು ಬಹಳ ಸುಲಭ. ಸ್ಥೂಲ ಮನಸ್ಸನ್ನು ಸೂಕ್ಷ್ಮಗೊಳಿಸುವುದು ಹೇಗೆ? ಇದಕ್ಕೆ ವ್ಯಕ್ತಿ ಅಂತರಂಗ ವೀಕ್ಷಣೆ, ಆತ್ಮ ಪರೀಕ್ಷೆ, ಮತ್ತು ಆತ್ಮ ಪರಿಶೀಲನೆಗಳಿಂದ ಮನಸ್ಸನ್ನು ಶೋಧಿಸಬೇಕಾದ ಅಗತ್ಯವಿದೆ. ಆಲೋಚನಾ ತರಂಗಗಳನ್ನು ಮನಸ್ಸಿನಲ್ಲಿ ಕೇಂದ್ರೀಕರಿಸದೇ ಆತ್ಮನಲ್ಲಿ ಕೇಂದ್ರೀಕರಿಸಬೇಕು. ಆಗ ಮನಸ್ಸು ನಿರ್ಮಲವಾಗುತ್ತದೆ, ಸುಸಂ¸ÀÌø ತವಾಗುತ್ತದೆ, ಸಂವೇದನಾಶೀಲವಾಗುತ್ತದೆ ಹಾಗೂ ಸೂಕ್ಷ್ಮವಾಗುತ್ತದೆ. ಇದು ಮನಸ್ಸಿನ ಶಿಕ್ಷಣದ ಮೊದಲ ಹಂತ.
ಎರಡನೆಯ ಹಂತಕ್ಕೆ ಸಂಬಂಧಿಸಿದಂತೆ ಸ್ವಾಮಿ ನಿರ್ಮಲಾನಂದರು ‘ಮಾನಸ ತೀರ್ಥ? ಎಂಬ ಪರಿಕಲ್ಪನೆಯನ್ನು ನಮ್ಮ ಮುಂದೆ ಇಡುತ್ತಾರೆ. ನಿರಂತರ ಆತ್ಮಪರಿಶೀಲನೆಯಿಂದ, ಸತತ ಧ್ಯಾನದಿಂದ ಸ್ಥೂಲ ಮನಸ್ಸು ಸರೋವರದ ನಿಶ್ಚಲ ಹಾಗೂ ಸ್ವಚ್ಛನೀರಿನಂತೆ ಪರಿಶುದ್ಧವೂ ಪಾರದರ್ಶಕವೂ ಸೂಕ್ಷ್ಮವೂ ಆಗುತ್ತದೆ. ಶ್ರೀ ರಮಣ ಮಹರ್ಶಿಗಳು ಹೇಳಿದಂತೆ ಇದೇ ಶುದ್ಧ ಮನಸ್ಸು; ಇದೇ ಬ್ರಹ್ಮ. `The pure in heart shall see God’ ಎಂಬ ಯೇಸುಕ್ರಿಸ್ತನ ವಚನದಲ್ಲಿಯೂ ಇದೇ ಅಭಿಪ್ರಾಯವೂ ಧ್ವನಿತವಾಗುತ್ತದೆ. ಪರಿಶುದ್ಧ ಹೃದಯ ಹಾಗೂ ಪರಿಶುದ್ಧ ಮನಸ್ಮ್ಸಗಳಲ್ಲಿ ಕಂಡುಬರುವಂತಹ ದಯೆಯ, ಅನುಕಂಪದ ಸ್ವಚ್ಛ ನಿರ್ಮಲ ಜಲವೇ ‘ಮಾನಸ ತೀರ್ಥ’. ಇದರಲ್ಲಿ ಈಜಾಡಲು, ಸ್ನಾನ ಮಾಡಿ ಪುನೀತರಾಗಲು ನಾವು ಕಲಿಯಬೇಕಾಗಿದೆ. ಒಮ್ಮೆ ಮಾತ್ರವಲ್ಲ. ಸಾಧ್ಯವಾದರೆ ಯಾವಾಗಲೂ.
ಪರಿಶುದ್ಧವಾಗಿರುವ ಸೂಕ್ಷ್ಮ ಮನಸ್ಸನ್ನು ‘ಶೂನ್ಯ’ಗೊಳಿಸುವುದೇ ಮೂರನೆಯ ಹಂತ. ಈ ಹಂತದಲ್ಲಿ ವ್ಯಕ್ತಿ ಆಲೋಚನೆಗಳಿಂದ ಸಂಪೂರ್ಣವಾಗಿ ಮುಕ್ತನಾಗಿರುತ್ತಾನೆ. ‘ಶೂನ್ಯಗೊಂಡ’ ಮನಸ್ಸೇ ‘ಬುದ್ಧಚಿತ್ತ’ ಅಥವಾ ‘ಕ್ರಿಸ್ತಚಿತ್ತ’. ಈ ಉನ್ನತ ಹಂತವನ್ನು ತಲುಪಲು ನಮಗೆ ‘ಮೌನಧ್ಯಾನ’ ನೆರವಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ.
ಸತ್ಯವಂತನಾಗಿ ಬಾಳುವ ಬದಲು ವ್ಯಕ್ತಿ ತನ್ನ ಸ್ವಂತ ಮನಸ್ಸಿನಿಂದ ಹಾಗೂ ‘ಅಹಂ’ನಿಂದ ತಪ್ಪುದಾರಿಗೆ ಎಳೆಯಲ್ಪಡುವುದುಂಟು. ಇದರಿಂದ ಜೀವನದ ಹೋರಾಟ-ನರಳಾಟಗಳು ಅಧಿಕವಾಗುತ್ತವೆ. ಎಚ್ಚರಿಕೆಯಿಲ್ಲದ ಮನಸ್ಸನ್ನು ಬಳಸುವುದರಿಂದ ಹಾಗೂ ‘ಅಹಂ'ನ ಅನಿಯಂತ್ರಿತವಾದ ಪ್ರಭುತ್ವದಿಂದ ವ್ಯಕ್ತಿ ಅಪಾರ ದುಃಖಕ್ಕೆ ಈಡಾಗಬೇಕಾದ ಪರಿಸ್ಥಿತಿ ಬರುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಅಭ್ಯಾಸ ಮಾಡಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಇತರರ ವ್ಯವಹಾರಗಳಲ್ಲಿ ತಲೆತೂರಿಸದಿರುವುದು ಒಳ್ಳೆಯದು.
ಸ್ವಾಮಿ ಸುಖಬೋಧಾನಂದರ ‘ಮನಸೇ ರಿಲ್ಯಾಕ್ಸ್ ಪ್ಲೀಸ್! ಭಾಗ ೨’ ರಲ್ಲಿ ಹೀಗೆ ಹೇಳುತ್ತಾರೆ, ‘ಮೀನು ಮಾರುಕಟ್ಟೆಯ ಹಾಗೆ ನಮ್ಮ ಮನಸ್ಸಿನಲ್ಲಿ ಸದಾ ಕಾಲವೂ ಮಾತಿನ ಸದ್ದು ಕೇಳುತ್ತಲೇ ಇರುತ್ತದೆ! ಅದನ್ನು ಮೊದಲು ನಿಲ್ಲಿಸಬೇಕು. ಹೊರಗಿನಿಂದ ಬರುವ ಸದ್ದುಗಳು ನಮ್ಮ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ. ಅವುಗಳನ್ನು ಕೇಳಿಸಿಕೊಳ್ಳದೇ ಓಡಿಸಬೇಕು.ನಾವು ದೀರ್ಘವಾಗಿ ಒಳಗೆ ತೆಗೆದುಕೊಂಡು ಹೊರಗೆ ಬಿಡುವ ಉಚ್ಛ್ವಾಸ-ನಿಚ್ಛ್ವಾಸಗಳಲ್ಲಿ ಮಾತ್ರ ನಮ್ಮ ಗಮನ ಆಳವಾಗಿ ಹುದುಗಿರಬೇಕು. ಹೀಗೆ ಆಲೋಚನೆ, ಮಾತು, ಭಾವನೆ, ಸದ್ದು ಯಾವುವೂ ಇಲ್ಲದ ಆ ಶೂನ್ಯತೆ ಅಧಿಕ ಶಕ್ತಿಶಾಲಿಯಾದದ್ದು.
ಈ ಅಭ್ಯಾಸಕ್ಕೆ ‘ಧ್ಯಾನ’ ಎಂದು ಹೆಸರು ಕೊಟ್ಟಿದ್ದಾರೆ. ಧ್ಯಾನದ ಶಕ್ತಿ ಅಪಾರವಾದದ್ದು. ಹೆಚ್ಚು ಬೇಡ, ಪ್ರತಿದಿನವೂ ಒಂದು ಹತ್ತು ನಿಮಿಷ ಈ ಅಭ್ಯಾಸವನ್ನು ಮಾಡಿ ನೋಡಿರಿ.
ನೀವು ನಿಮ್ಮ ಮನಸ್ಸಿನ ಯಜಮಾನ ಆಗುತ್ತೀರಿ!’
ಹೀಗೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಂಡರೆ ನಾವೂ ಶಾಂತಿಯಿಂದ ಬಾಳಬಹುದು. ವಿಶ್ವ ಶಾಂತಿಗೂ ಕಾರಣರಾಗಬಹುದು.

10 comments:

 1. ಲೇಖನ ಅರ್ಥ ಪೂರ್ಣವಾಗಿದೆ ನಾನು ಸ್ವಾಮೀಜಿಗಳನ್ನು ನಂಬದವನು ಆದರೆ ಈ ನಿರ್ಮಲಾನಂದ ಸ್ವಾಮೀ , ಯಾರಿಗೂ ಧರ್ಮ ಭೋದನೆ ಮಾಡದೆ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಳ್ಳದೆ ನನಗೆ ವಿಸ್ಮಯ ವಾಗಿದ್ದಾರೆ. ನಿರ್ಮಲಾನಂದ ರ ಬಗ್ಗೆನಿಮ್ಮ ಬರಹ ನೋಡಿ ಖುಷಿಯಾಯ್ತು ,ಬಿಳಿಗಿರಿರಂಗನ ಬೆಟ್ಟದ ಕಾನನದಲ್ಲಿ ಎಲೆ ಮರೆಯ ಕಾಯಿಯಂತೆ ಬದುಕಿ ಜೀವಂತ ಸಮಾಧಿಯಾದರು.ಇದರಬಗ್ಗೆ ಇನ್ನೊಮ್ಮೆ ನನ್ನ ಬ್ಲಾಗಿನಲ್ಲಿ ಚಿತ್ರ ಸಹಿತ ತಿಳಿಸುತ್ತೇನೆ ಅವರ ಒಂದು ಪುಸ್ತಕ '' the garland of forest flowers'' ಪುಸ್ತಕ ನನಗೆ ಇಷ್ಟವಾಯಿತು. ನೀವು ಸಹ ಒಮ್ಮೆ ಓದಿ .

  --

  ReplyDelete
 2. ಮನಸ್ಸನ್ನು ಉನ್ನತಿಗೆ ಏರಿಸುವ ಈ ಲೇಖನಕ್ಕಾಗಿ ನಿಮಗೆ ಧನ್ಯವಾದಗಳು.

  ReplyDelete
 3. ಅದ್ಭುತ ಲೇಖನ!ಮನಸ್ಸಿನ ಬಗ್ಗೆ ,ಅದರ ನಿಯಂತ್ರಣದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಮೇಡಂ!ಅನಂತ ಧನ್ಯವಾದಗಳು.ನಮಸ್ಕಾರ.

  ReplyDelete
 4. ಮನಸ್ಸಿನ ಬಗ್ಗೆ ಉತ್ತಮ ಬರಹ.
  ಮಾರ್ಗದರ್ಶನ ನೀಡುವಂತಹ ಲೇಖನಕ್ಕೆ ಧನ್ಯವಾದಗಳು

  ReplyDelete
 5. ನಿಜವಾಗಿಯೂ ಎಲ್ಲರೂ ಓದಬೇಕಾದ ಲೇಖನ, ಚೆನ್ನಾಗಿದೆ

  ReplyDelete
 6. @ ಬಾಲುರವರೆ,
  '' The garland of forest flowers'' ಪುಸ್ತಕ ನನ್ನ ಬಳಿಯೂ ಇದೆ. ಸ್ವಲ್ಪ ಸ್ವಲ್ಪವೇ ಓದಿ ಆನ೦ದಿಸುತ್ತಿರುತ್ತೇನೆ. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.`ಒಳಿತು' ಎಲ್ಲಿ೦ದಲೇ ದೊರೆತರೂ ಸ್ವೀಕರಿಸಬೇಕೆನ್ನುವುದು ನನ್ನ ಅಭಿಲಾಷೆ. ನಿರ್ಮಲಾನಂದರ ಬಗ್ಗೆ ನಿಮ್ಮ ಲೇಖನಕ್ಕಾಗಿ ಕಾದಿರುತ್ತೇನೆ.

  ReplyDelete
 7. @ ಸುನಾಥ್ ರವರೆ,
  `ಮನಸ್ಸು' ಎಂಥಾ ಅದ್ಭುತ ಅಲ್ಲವೇ? ನನ್ನ ಮಗಳು ಸುಷ್ಮಾ ಗೆ ವಿಶಿಷ್ಟ ಕನಸುಗಳು ಬರಲಾರ೦ಭಿಸಿದ ನ೦ತರ ನನಗೆ ಮನಸ್ಸಿನ ಬಗ್ಗೆ ಹೆಚ್ಚು ತಿಳಿಯಬೇಕೆ೦ಬ ಆಸಕ್ತಿ ಮೂಡಿತು. ನಿಮ್ಮ ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 8. @ಕೃಷ್ಣಮೂರ್ತಿಯವರೇ,
  ಮನಸ್ಸಿನ ಶಿಕ್ಷಣದ ಬಗ್ಗೆ ನಮಗೆ ತಿಳುವಳಿಕೆ ನೀಡಿರುವ ನಿರ್ಮಲಾನಂದರಿಗೆ ತಮ್ಮ ಗೌರವ ಸಲ್ಲುತ್ತದೆ ಸರ್.
  .ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

  ReplyDelete
 9. ಪ್ರಭಾಮಣಿಯವರೆ,

  ಮತ್ತೆ ಮತ್ತೆ ಓದಬೇಕೆನಿಸುವ೦ತಹ ಉತ್ತಮ ಲೇಖನ.. ಹಿಡಿಸಿತು.
  ಧನ್ಯವಾದಗಳು.

  ReplyDelete