Friday, December 3, 2010

ಮನದ ಅ೦ಗಳದಿ..........೨೦. ಸುಖ-ದುಃಖ

ಎಲ್ಲಾ ಜೀವಿಗಳೂ ತಮ್ಮ ಜೀವಿತದ ಅವಧಿಯಲ್ಲಿ ಸುಖ-ದುಃಖಗಳ ಅನುಭವವನ್ನು ಪಡೆದೇ ಇರುತ್ತವೆ. ತನ್ನಲ್ಲಿ ವಿವೇಚನಾ ಶಕ್ತಿಯನ್ನು ಹೊಂದಿರುವ ಮನುಷ್ಯನಿಗೆ ಈ ಅನುಭವಗಳು ಹೆಚ್ಚಿನದೇ ಪರಿಣಾಮವನ್ನು ಉಂಟುಮಾಡುತ್ತವೆ. ಸುಖ-ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿದವರು ಹೇಳುತ್ತಾರೆ. ಭಗವದ್ಗೀತೆಯು ‘ಸುಖ-ದುಃಖ ಸಮನ್ವಿತಾ’ ಎನ್ನುತ್ತದೆ. ಆದರೆ ಸಾಮಾನ್ಯರಾದ ನಾವು ಸುಖಕ್ಕಿರುವ ಮೋಹಕತೆಯಿಂದ ಆಕರ್ಷಿತರಾಗಿ ದುಃಖ ನಮ್ಮ ಪಥದಲ್ಲಿ ಬರುವುದೇ ಬೇಡವೆಂದು ಆಶಿಸುತ್ತೇವೆ! ಕೆಲವೊಮ್ಮೆ ಸುಖ-ದುಃಖಗಳು ಎಷ್ಟೊಂದು ಪರ್ಯಾಯವಾಗಿ ಬರುತ್ತವೆಂದರೆ ‘ಅವೇನು ಒಂದನ್ನೊಂದು ಅಟ್ಟಿಸಿಕೊಂಡು ಹೋಗುತ್ತಿವೆಯೆ?’ ಎನಿಸಿಬಿಡುತ್ತದೆ!
ಸುಖದ ಹಿಂದೆ ದುಃಖವೋ
ದುಃಖದ ಹಿಂದೆ ಸುಖವೋ
ತಿಳಿಯಲು ಬೆನ್ನಟ್ಟಿದೆ
ಓಡಿದಷ್ಟೂ ಪಥ ವೃತ್ತಾಕಾರವಾಗಿದೆ!
ಆಧ್ಯಾತ್ಮಿಕ ಕವಿ, ಲೇಖಕ ಖಲೀಲ್ ಗಿಬ್ರಾನ್ ಅವರ ‘ದಿ ವಾಂಡರರ್-ಹಿಸ್ ಕೊಪಾರಬಲ್ಸ್ ಅಂಡ್ ಹಿಸ್ ಸೇಯಿಂಗ್ಸ್ (ಅಲೆಮಾರಿ-ಅವನ ದೃಷ್ಟಾಂತ ಕಥೆಗಳು, ಉಕ್ತಿಗಳು) ಇದರಲ್ಲಿರುವ ‘ದಿ ಟು ಹಂಟರ್ಸ್್’(ಇಬ್ಬರು ಬೇಟೆಗಾರರು) ಎಂಬ ದೃಷ್ಟಾಂತ ಕಥೆಯು ಸುಖ- ದುಃಖ ಮೀಮಾಸೆಯನ್ನು ಕುರಿತದ್ದಾಗಿದೆ.( ಶ್ರೀ ಪ್ರಭುಶಂಕರ ಅವರ ‘ಖಲೀಲ್ ಗಿಬ್ರಾನ್’ ಪುಸ್ತಕದಿಂದ)
‘ಮೇ ತಿಂಗಳಲ್ಲಿ ಒಂದು ದಿನ ಸುಖ ಮತ್ತು ದುಃಖ ಒಂದು ಸರೋವರದ ಪಕ್ಕದಲ್ಲಿ ಭೇಟಿ ಮಾಡಿದವು. ನಮಸ್ಕಾರ ಪ್ರತಿನಮಸ್ಕಾರದ ನಂತರ ಶಾಂತವಾದ ನೀರಿನ ಪಕ್ಕದಲ್ಲಿ ಕುಳಿತು ಸಂಭಾಷಣೆ ಪ್ರಾರಂಭಿಸಿದವು. ಈ ಭೂಮಿಯ ಮೇಲಿರುವ ಸುಖ, ಕಾಡುಬೆಟ್ಟಗಳಲ್ಲಿನ ಜೀವನದಲ್ಲಿರುವ ಪ್ರತಿದಿನದ ಆಶ್ಚರ್ಯ, ಉಷೆ-ಸಂಧ್ಯೆಗಳಲ್ಲಿ ಕೇಳುವ ಗಾನ ಇವುಗಳನ್ನು ಕುರಿತು ಸುಖ ನುಡಿಯಿತು. ಸುಖ ಹೇಳಿದ್ದೆಲ್ಲವನ್ನೂ ದುಃಖ ಒಪ್ಪಿತು. ಆ ಸಮಯದ ಮಾಂತ್ರಿಕತೆ, ಅದರ ಸೌಂದರ್ಯ ದುಃಖಕ್ಕೆ ಗೊತ್ತಿತ್ತು. ಬೆಟ್ಟ ಬಯಲುಗಳಲ್ಲಿ ಮೇ ತಿಂಗಳನ್ನು ಕುರಿತು ದುಃಖ ನಿರರ್ಗಳವಾಗಿ ಮಾತನಾಡಿತು.
ಸುಖ-ದುಃಖಗಳು ಬಹಳ ಹೊತ್ತು ಮಾತನಾಡಿದವು. ತಮಗೆ ತಿಳಿದಿದ್ದ ಎಲ್ಲಾ ವಿಷಯಗಳಲ್ಲೂ ಇಬ್ಬರಿಗೂ ಒಪ್ಪಿಗೆ ಇತ್ತು.
ಸರಸ್ಸಿನ ಆ ಕಡೆ ಇಬ್ಬರು ಬೇಟೆಗಾರರು ಚಲಿಸಿದರು. ನೀರಿನಾಚೆಗೆ ನೋಡಿ ಅವರಲ್ಲೊಬ್ಬ ಹೇಳಿದ, ‘ಅಲ್ಲಿ ಕುಳಿತ ಇಬ್ಬರು ಯಾರೋ ತಿಳಿಯದಲ್ಲಾ’, ಮತ್ತೊಬ್ಬ ಹೇಳಿದ, ‘ಇಬ್ಬರು ಎಂದೆಯಾ? ನನಗೆ ಒಬ್ಬರೇ ಕಾಣುತ್ತಾರಲ್ಲಾ,’
ಮೊದಲನೆಯವನು ಹೇಳಿದ, ‘ಇಲ್ಲ, ಇಬ್ಬರಿದ್ದಾರೆ’.
ಎರಡನೆಯವನೆಂದ, ‘ನನಗೆ ಕಾಣುತ್ತಿರುವುದು ಒಬ್ಬರೇ. ಸರಸ್ಸಿನಲ್ಲಿ ಬಿದ್ದಿರುವ ಪ್ರತಿಬಿಂಬವೂ ಒಬ್ಬರದೇ.’
‘ಇಲ್ಲ, ಇಲ್ಲ ಇಬ್ಬರಿದ್ದಾರೆ, ಎರಡು ಪ್ರತಿಬಿಂಬಗಳೂ ಇವೆ.’ ಮೊದಲನೆಯವನು.
‘ನನಗೆ ಕಾಣುವವರು ಒಬ್ಬರೇ’ .ಮತ್ತೆ ಎರಡನೆಯವನೆಂದ.....
ಇಂದಿಗೂ ಒಬ್ಬ ಬೇಟೆಗಾರ ಹೇಳುತ್ತಾನೆ, ‘ಮತ್ತೊಬ್ಬನಿಗೆ ಒಂದು ಎರಡಾಗಿ ಕಾಣುತ್ತದೆ’, ಎಂದು. ಇನ್ನೊಬ್ಬ ಹೇಳುತ್ತಾನೆ, ‘ನನ್ನ ಮಿತ್ರನಿಗೆ ಸ್ವಲ್ಪ ಕುರುಡು.’
ಗಿಬ್ರಾನರ ಪ್ರಕಾರ ಸುಖ-ದುಃಖಗಳು ಎರಡಾಗಿ ನಮಗೆ ಕಂಡರೂ ಅವು ನಿಜವಾಗಿ ಒಂದೇ. ಸುಖ-ದುಃಖ ಮೀಮಾಂಸೆಯನ್ನು ಅವರು ತಮ್ಮ ‘ಪ್ರವಾದಿ’ಯಲ್ಲಿ ಅದ್ಭುತರೀತಿಯಲ್ಲಿ ಮಾಡಿದ್ದಾರೆ. ಸುಖ ಹೆಚ್ಚೋ, ದುಃಖ ಹೆಚ್ಚೋ ಎನ್ನುವ ಆಲೋಚನಾ ಜೀವಿಗಳ ಪ್ರಶ್ನೆಗೆ ‘ಪ್ರವಾದಿ’ ಹೀಗೆ ಉತ್ತರಿಸುತ್ತಾನೆ.
‘ನಿನ್ನ ಸುಖ, ಮುಖವಾಡ ಕಿತ್ತೆಸೆದ ನಿನ್ನ ದುಃಖವೇ ಆಗಿದೆ.
ಯಾವ ಭಾವಿಯಿಂದ ನಗೆ ಬುಗ್ಗೆಯುಕ್ಕುತ್ತಿದೆಯೋ ಆ ಅದೇ ಅನೇಕ ಸಲ ನಿನ್ನ ಕಂಬನಿಗಳಿಂದ ತುಂಬಿತ್ತು. ಬೇರೆ ಹೇಗಾಗಲು ಸಾಧ್ಯ?
ನಿನ್ನ ಚೇತನದ ಆಳವನ್ನು ದುಃಖ ಕೊರೆಕೊರೆದಷ್ಟೂ ಸುಖವನ್ನು ಅದು ತುಂಬಿಕೊಳ್ಳಬಲ್ಲದು!
ನಿನ್ನ ವೈನನ್ನು ತುಂಬಿರುವ ಬಟ್ಟಲೇ ಅಲ್ಲವೆ ಕುಂಬಾರನ ಒಲೆಯಲ್ಲಿ ಬೆಂದದ್ದು?
ನಿನ್ನ ಹೃದಯವನ್ನು ಸಮಾಧಾನಗೊಳಿಸುತ್ತಿರುವ ಕೊಳಲನ್ನೇ ಅಲ್ಲವೆ ಚಾಕು ಕೊರೆದು ಕೊರೆದದ್ದು?
ನೀವು ಸಂತೋಷಭರಿತರಾಗಿರುವಾಗ ನಿಮ್ಮ ಹೃದಯದಾಳವನ್ನು ನೋಡಿರಿ. ಆಗ ನಿಮಗೆ ತಿಳಿಯುತ್ತದೆ, ಯಾವುದು ನಿಮಗೆ ದುಃಖವನ್ನು ನೀಡಿತೋ ಅದೇ ಆನಂದವನ್ನು ನೀಡುತ್ತದೆ.
ನೀವು ದುಃಖಿತರಾಗಿರುವಾಗ, ನಿಮ್ಮ ಹೃದಯವನ್ನು ಹುಡುಕಿ ನೋಡಿ, ನಿಜವಾಗಿ ನೀವು ದುಃಖಿಸುತ್ತಿರುವುದು ಒಮ್ಮೆ ನಿಮ್ಮ ಆನಂದವಾಗಿದ್ದುದಕ್ಕಾಗಿ ಎಂಬುದು.
ನಿಮ್ಮಲ್ಲಿ ಕೆಲವರು ಹೇಳುತ್ತೀರಿ, ‘ದುಃಖಕ್ಕಿಂತ ಸುಖ ಹೆಚ್ಚು.’ಎಂದು. ಮತ್ತೆ ಕೆಲವರು ಹೇಳುತ್ತೀರಿ, ‘ಇಲ್ಲ ದುಃಖವೇ ಹೆಚ್ಚಿನದು’.
ಆದರೆ ನಾನು ಹೇಳುತ್ತೇನೆ, ‘ಅವೆರಡೂ ಬೇರ್ಪಡಿಸಲಾರದವು. ಅವು ಒಟ್ಟಾಗಿಯೇ ಬರುತ್ತವೆ. ಒಂದು ನಿಮ್ಮೊಡನೆ ಊಟಕ್ಕೆ ಕುಳಿತಾಗ, ನೆನಪಿಡಿ, ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತಿರುತ್ತದೆ.
ವಾಸ್ತವವಾಗಿ ನೀವು ತಕ್ಕಡಿಯ ತಟ್ಟೆಗಳಂತೆ ಸುಖ-ದುಃಖಗಳ ನಡುವೆ ಓಲಾಡುತ್ತಿದಿ ರಿ.
ಬರಿದಾಗಿರುವಾಗ ಮಾತ್ರ ನೀವು ನಿಶ್ಚಲ ಮತ್ತು ಸಮತೂಕದಲ್ಲಿರುತ್ತೀರಿ.
ಭಂಡಾರಿ ತನ್ನ ಚಿನ್ನ ಬೆಳ್ಳಿಗಳನ್ನು ತೂಗಲು ನಿಮ್ಮನ್ನು ಎತ್ತಿದಾಗ ಮಾತ್ರ ನಿಮ್ಮ ಸುಖ-ದುಃಖ ಏರುತ್ತದೆ ಅಥವಾ ಬೀಳುತ್ತದೆ.’
ಜೀವನದ ಮಹಾನ್ ಪಥದಲ್ಲಿ ಸಾಗಿದಂತೆ ಈ ಒಂದು ಸಮಸ್ಥಿತಿಗೆ ನಮ್ಮನ್ನು ನಾವು ಅಣಿಗೊಳಿಸುತ್ತಿರಬೇಕು ಅಲ್ಲವೇ.

12 comments:

 1. ಸುಖದ ಹಿಂದೆ ದುಃಖವೋ
  ದುಃಖದ ಹಿಂದೆ ಸುಖವೋ
  ತಿಳಿಯಲು ಬೆನ್ನಟ್ಟಿದೆ
  ಓಡಿದಷ್ಟೂ ಪಥ ವೃತ್ತಾಕಾರವಾಗಿದೆ!

  ಎಷ್ಟೊ೦ದು ನಿಜ....!!!

  ಸು೦ದರ ಲೇಖನ.

  ReplyDelete
 2. ಅರ್ಥಗರ್ಭಿತವಾಗಿದೆ. ಇಷ್ಟವಾಯಿತು :)

  ReplyDelete
 3. ಖಲೀಲ್ ಗಿಬ್ರಾನರ ಸಂದೇಶ ಅದ್ಭುತವಾಗಿದೆ. ಈ ಸಂದೇಶವನ್ನು ಸಮರ್ಥವಾಗಿ ನಮಗೆ ತಲುಪಿಸಿದ ನಿಮಗೆ ಧನ್ಯವಾದಗಳು.

  ReplyDelete
 4. ಪ್ರಭಾ ಅವರೇ,

  ಸುಖ ಮತ್ತು ದುಃಖಗಳ ಬಗೆಗಿನ ವ್ಯಾಖ್ಯಾನ ಬಹಳ ಹಿಡಿಸಿತು.
  ಧನ್ಯವಾದಗಳು

  ReplyDelete
 5. ಪ್ರಭಾಮಣಿ ಯವರೇ,ನಿಮ್ಮ ಸುಖ ದುಃಖ ಗಳ ಕುರಿತಾದ ಲೇಖನ ವಿಚಾರಾತ್ಮಕವಾಗಿದೆ.ಅಭಿನಂದನೆಗಳು

  ReplyDelete
 6. @ ವಿಜಯಶ್ರೀ ಯವರೇ,
  ನನ್ನ ಹನಿಯನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 7. @ ಸುಷ್ಮ ಮಗಳೇ,
  ನನ್ನ ಬ್ಲಾಗ್ ಗೆ ಬ೦ದು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete
 8. @ ಸುನಾಥ್ ರವರೇ,
  ಗಿಬ್ರಾನ್ ರವರ ಸ೦ದೇಶವನ್ನು ಆಪ್ತವಾಗಿ ಸ್ವೀಕರಿಸಿ ಪ್ರತಿಕ್ರಿಯಿಸಿದ್ದೀರಿ ಸರ್, ಧನ್ಯವಾದಗಳು.

  ReplyDelete
 9. @ದಿನಕರ ಮೊಗೇರರವರೇ,
  ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 10. @ ಸಾನ್ವಿಯ ತ೦ದೆಯರವರೇ,
  ನನ್ನ ಬರಹದ ಸುಖ ಮತ್ತು ದುಃಖಗಳ ಬಗೆಗಿನ ವ್ಯಾಖ್ಯಾನವನ್ನು ಮೆಚ್ಚಿ ಪ್ರೋತ್ಸಾಹಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್, ಬರುತ್ತಿರಿ.

  ReplyDelete
 11. @ ಕಲಾವತಿಯವರೇ,
  ನನ್ನ ಬರಹದ ವೈಚಾರಿಕತೆಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು . ನಿಮಗೆ ಸದಾ ಸ್ವಾಗತ.

  ReplyDelete