Friday, December 24, 2010

ಮನದ ಅ೦ಗಳದಿ.............೨೩. ದಿವ್ಯ ಚೇತನ

ಬಹಳ ಹಿಂದಿನಿಂದಲೂ ಒಂದು ನಂಬಿಕೆಯಿದೆ. ಭೂಮಿಯ ಮೇಲೆ ಅನ್ಯಾಯ, ಅಧರ್ಮಗಳು ಹೆಚ್ಚಾದಾಗ ದಿವ್ಯಶಕ್ತಿಯು ಜನ್ಮವೆತ್ತಿ ಧರ್ಮದ ಪುನಃಸ್ಥಾಪನಾ ಕಾರ್ಯವು ನಡೆಯುತ್ತದೆ, ಎಂದು. ಅದನ್ನೇ ಭಗವದ್ಗೀತೆಯಲ್ಲಿ ‘ಧರ್ಮ ಸಂಸ್ಥಾಪನಾಯಾರ್ಥಂ ಸಂಭವಾಮಿ ಯುಗೇ ಯುಗೇ’ ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಈ ಭೂಮಿಯ ಮೇಲೆ ನಮ್ಮೆಲ್ಲರ ನಡುವೆಯೇ ನಮ್ಮೆಲ್ಲರಂತೆಯೇ ಜನಿಸಿ ತಮ್ಮ ಅದ್ವಿತೀಯ ಜ್ಞಾನ ಪ್ರಭೆಯಿಂದ, ಅನನ್ಯ ಪ್ರೀತಿಯಿಂದ ತಮ್ಮ ಅಂತರಾಳದ ದಿವ್ಯ ಸಂದೇಶವನ್ನು ಸಾರಿ ನಿರ್ಗಮಿಸಿದ ಚೇತನಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದೇವೆ. ಭೂಮಂಡಲದ ಬೇರೆಬೇರೆ ಪ್ರದೇಶಗಳಲ್ಲಿ ಹುಟ್ಟಿ, ಬೆಳೆದು, ತಮ್ಮ ಅಂತಃಪ್ರಜ್ಞೆಗೆ ಗೋಚರಿಸಿದುದನ್ನು ಅವರು ಸಾರಿದ್ದರೂ ಮೂಲತಃ ಆ ಎಲ್ಲಾ ಚಿಂತನೆಗಳ ಸಾರವೂ ಒಂದೇ ಆಗಿರುವುದನ್ನು ಮನಗಾಣುತ್ತೇವೆ. ಏಕೆಂದರೆ ಅವೆಲ್ಲದರ ಮೂಲವೂ ಒಂದೇ ಆಗಿದೆ. ಪ್ರಕೃತಿಯು ಜೈವಿಕ, ಅಜೈವಿಕಗಳ ನಡುವೆ ಸಮತೋಲನವನ್ನು ಕಾಪಾಡಲು ಪ್ರಯತ್ನಿಸುತ್ತಿರುವಂತೆಯೇ ಮೌಲ್ಯಗಳು ಅಪಮೌಲ್ಯವಾಗದಂತೆಯೂ ಒಂದು ಪ್ರಯತ್ನ ನಡೆಯುತ್ತಿದೆಯೇನೋ ಎನಿಸುತ್ತದೆ. ಆದರೆ ಮನುಕುಲ ದಿವ್ಯ ಚೇತನಗಳು ನೀಡಿರುವ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಶಾಂತಿಯಿಂದ ಬಾಳದೇ ಒಂದೊಂದು ಪ್ರತ್ಯೇಕ ಗುಂಪಾಗಿ ತಮ್ಮನ್ನೇ ತಾವು ಶ್ರೇಷ್ಠರೆಂದು ಪರಿಗಣಿಸಿಕೊಂಡು, ಇತರ ಗುಂಪುಗಳನ್ನು ತುಚ್ಛೀಕರಿಸುತ್ತಾ, ಅಥವಾ ತಮ್ಮ ಗುಂಪಿನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಾ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಮೌಢ್ಯದಿಂದ ಮೂಢನಂಬಿಕೆಗಳನ್ನೇ ಪೋಷಿಸಿಕೊಂಡು ಅವನತಿಗೆ ಪ್ರೇರಕರಾಗುತ್ತಿದ್ದಾರೆ. ಏನೇ ಆದರೂ ತಮ್ಮ ವಿಶಿಷ್ಟ ಆಲೋಚನಾ ಶಕ್ತಿಯಿಂದ, ಅಂತಃಸತ್ವದಿಂದ ಜಗತ್ತನ್ನು ಬೆಳಗುವ ಚೇತನಗಳು ಅಲ್ಲೊಂದು, ಇಲ್ಲೊಂದು ಉದಯಿಸುತ್ತಲೇ ಇವೆ! ಅಂಥಾ ಒಂದು ಚಿರ ಸ್ಮರಣೀಯ ಚೇತನ ಯೇಸುಕ್ರಿಸ್ತ.
ಒಬ್ಬ ವ್ಯಕ್ತಿಯ ಅಂತರಾಳವನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನ ಮನದಾಳಕ್ಕಿಳಿಯುವ ಸಾಮರ್ಥ್ಯವನ್ನು ಹೊಂದಿರುವವರೇ ಆಗಬೇಕು. ಆಧ್ಯಾತ್ಮಿಕ ಕವಿ ಖಲೀಲ್ ಗಿಬ್ರಾನ್ ಅವರ ಅಪರೂಪವೆನಿಸುವ ಪುಸ್ತಕ Jesus, The Son Of Man (His Words and His deeds as told and recorded by those who knew Him) ದಲ್ಲಿ ಈ ಕೆಲಸವನ್ನು ಸಮರ್ಥವಾಗಿ ಕೈಗೊಂಡಿದ್ದಾರೆ. ‘ಖಲೀಲ್ ಗಿಬ್ರಾನ್’ ಪುಸ್ತಕದ ಲೇಖಕ ಪ್ರಭುಶಂಕರರು ಹೀಗೆ ಹೇಳುತ್ತಾರೆ, ‘ಇದು ಕಲ್ಪನೆಯ ಸೃಷ್ಟಿ. ಅವನನ್ನು ಕಂಡವರು, ಬಲ್ಲವರು ಹೇಗೆ ಹೇಳಿರಬಹುದು ಎಂಬುದನ್ನು ಅಂದಿನ ಆವರಣವನ್ನು ರಚಿಸಿಕೊಂಡು ಮತ್ತೆ ಸೃಷ್ಟಿ ಮಾಡಿದ್ದು ಮತ್ತೆ ಯೇಸು ನಮ್ಮ ನಡುವೆ ಬಾಳುತ್ತಿರುವಂತಹ ಅನುಭವವನ್ನು ತಂದಿದೆ ಗಿಬ್ರಾನನ ಕಲಾಮಯ ಲೇಖನಿ. ಅವನ ವರ್ಣ ಶಿಲ್ಪ, ಕಾವ್ಯ ಶಕ್ತಿ ಎರಡೂ ಒಂದು ಕಡೆ ಅಭೂತಪೂರ್ವವಾಗಿ ಮಿಳಿತವಾಗಿದ್ದರೆ ಅದು ಇಲ್ಲಿ. ಎಪ್ಪತ್ತು ಪಾತ್ರಗಳುಮಾತನಾಡುತ್ತವೆ. ಎಲ್ಲಾ ಈ ಲೆಬನಾನಿನ ವ್ಯಕ್ತಿಯ ಮೂಲಕ. ಎಪ್ಪತ್ತು ಪಾತ್ರಗಳಿಗೆ ಪ್ರತ್ಯೇಕ ವ್ಯಕ್ತಿತ್ವ ಉಂಟು. ಎಪ್ಪತ್ತು ಜತೆ ಕಣ್ಣುಗಳ ಮೂಲಕ ಕ್ರಿಸ್ತನನ್ನು ಕಂಡ ಭಾಗ್ಯ ಈತನದು.’
ಮೊದಲನೆಯ ನಿರೂಪಣೆ ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಜೇಮ್ಸನದು. ‘ಯೇಸು ಜೆರೂಸೆಲಮ್ಮಿನಲ್ಲಿ ಜನ ಸಮೂಹಕ್ಕೆ ಸ್ವರ್ಗದ ರಾಜ್ಯವನ್ನು ಕುರಿತು ಮಾತನಾಡಿದ. ಆತ ಕಾರಕೂನರನ್ನೂ ಕರ್ಮಜಡರನ್ನೂ ತೆಗಳಿದ. ಆಗ ಆ ಗುಂಪಿನಲ್ಲಿ ಕೆಲವರು ಅವರನ್ನೂ ವಹಿಸಿಕೊಂಡು ಯೇಸುವಿನ ಮೇಲೆ, ನಮ್ಮ ಮೇಲೆ ಕೂಡ ಕೈ ಮಾಡಬಂದರು. ಅಲ್ಲಿಂದ ಹೊರಟ ಯೇಸು ನಮ್ಮನ್ನು ಕುರಿತು ಹೀಗೆ ಹೇಳಿದ, ‘ನನ್ನ ಕಾಲ ಇನ್ನೂ ಬಂದಿಲ್ಲ. ನಾನು ನಿಮಗೆ ಹೇಳಬೇಕಾದ್ದು ಬಹಳ ಇದೆ. ನಾನು ಜಗತ್ತನ್ನು ಬಿಡುವ ಮೊದಲು ಮಾಡಬೇಕಾದ ಕೆಲಸವೂ ಬಹಳ ಇದೆ.’
ಎರಡನೆಯ ನಿರೂಪಣೆ ಅನ್ನ, ಮೇರಿಯ ತಾಯಿ, ಎಂದರೆ ಯೇಸುವಿನ ಅಜ್ಜಿಯದು. ಮೊಮ್ಮಗನ ಜನನ, ಮಗಳ ಭಾವನೆಗಳು, ಕ್ರಿಸ್ತನ ಸಾವನ್ನು ತಿಳಿಯದೆ, ಅವನನ್ನು ಕಾಣದೆ ಅವಳು ಪಡುವ ಪರಿತಾಪ ಇವುಗಳನ್ನು ಗಿಬ್ರಾನ್ ಹೃದಯಂಗಮವಾಗಿ ಚಿತ್ರಿಸಿದ್ದಾನೆ. ಅಜ್ಜಿ ಹೇಳುತ್ತಾಳೆ, ‘.....ಮಗು ದೇಹ, ಚೇತನಗಳಲ್ಲಿ ಬೆಳೆಯಿತು. ಅದಕ್ಕೂ ಇತರ ಮಕ್ಕಳಿಗೂ ವ್ಯತ್ಯಾಸವಿತ್ತು.ಅದು ತನ್ನಷ್ಟಕ್ಕೆ ತಾನು ಇರುತ್ತಿತ್ತು.ಅದನ್ನು ಹತೋಟಿಯಲ್ಲಿಡುವುದೇ ಕಷ್ಟವಾಗಿತ್ತು. ಅವನನ್ನು ಹೊಡೆಯುವುದು ನನಗೆ ಸಾಧ್ಯವೇ ಇರಲಿಲ್ಲ. ಆದರೆ ನಜರೆತ್ ನಲ್ಲಿ ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು. ಅದು ಏಕೆ ಎಂದು ನನ್ನ ಹೃದಯಕ್ಕೆ ತಿಳಿದಿತ್ತು. ಅನೇಕ ಸಲ ಅವನು ಆಹಾರವನ್ನು ತೆಗೆದುಕೊಂಡು ಹೋಗಿ ದಾರಿಯಲ್ಲಿ ಹೋಗುವವರಿಗೆ ಕೊಟ್ಟುಬಿಡುತ್ತಿದ್ದ.ಅವನಿಗೆ ತಿನ್ನಲು ಎಂದು ಕೊಟ್ಟ ಸಿಹಿಯನ್ನು ತಾನು ರುಚಿ ನೋಡದೆ ಉಳಿದ ಮಕ್ಕಳಿಗೆ ಹಂಚುತ್ತಿದ್ದ. ನಮ್ಮ ತೋಟದ ಮರಗಳನ್ನು ಹತ್ತಿ ಹಣ್ಣುಗಳನ್ನು ಕೀಳುತ್ತಿದ್ದ, ಆದರೆ ಅದು ಅವನಿಗಲ್ಲ! ಮಲಗಲೆಂದುನಾನು ಹಾಸಿಗೆಗೆ ಒಯ್ದಾಗ ಅವನು ಹೇಳುತ್ತಿದ್ದ: ನಮ್ಮ ಅಮ್ಮನಿಗೂ ಬೇರೆಯವರಿಗೂ ಹೇಳು, ನನ್ನ ದೇಹ ಮಾತ್ರ ನಿದ್ರಿಸುತ್ತದೆ. ನನ್ನ ಮನಸ್ಸೆಲ್ಲಾ ಅವರ ಜೊತೆ ಇರುತ್ತದೆ, ಅವರ ಮನಸ್ಸು ನನ್ನ ಬೆಳಗ್ಗೆಗೆ ಬರುವವರೆಗೂ.....’
ಅತ್ಯಂತ ಹೃದಯಂಗಮವಾದ ನಿರೂಪಣೆ ಮೇರಿ ಮಗ್ದಲೀನಳದು. ‘ನಾನಾಗ ನನ್ನ ಆತ್ಮದಿಂದ ವಿಚ್ಛೇದನ ಪಡೆದಿದ್ದ ಹೆಂಗಸಾಗಿದ್ದೆ......ಆದರೆ ಆತನ ಉಷಸ್ಸಿನ ಕಣ್ಣುಗಳು ನನ್ನ ಕಣ್ಣುಗಳ ಒಳಗನ್ನು ನೋಡಿದಾಗ ನನ್ನ ರಾತ್ರಿಯ ನಕ್ಷತ್ರಗಳು ಮಾಸಿಹೋದವು. ನನ್ನೊಳಗಿನ ವಿಷಸರ್ಪ ನಾಶವಾಯಿತು. ನಾನು ಮಿರಿಯಮ್, ಬರೀ ಮಿರಿಯಮ್ ಆದೆ....’
ಮತ್ತೊಬ್ಬಳು ಜೇವಾನಾ, ಅವಳು ತನ್ನ ಪ್ರಿಯನ ಜೊತೆಯಲ್ಲಿದ್ದಾಗ ಹಿಡಿದು ಯೇಸು ಉಪದೇಶ ಕೊಡುತ್ತಿದ್ದ ಕಡೆಗೆ ಕರೆದುಕೊಂಡು ಹೋಗುತ್ತಾರೆ. ‘ಅವರ ಉದ್ದೇಶ ಯೇಸುವಿನ ಮುಂದೆ ನನ್ನನ್ನು ನಿಲ್ಲಿಸಿ ಅವರನ್ನು ಪರೀಕ್ಷಿಸಿ ಬೋನಿಗೆ ಬೀಳಿಸುವುದು. ಆದರೆ ಯೇಸುಸ್ವಾಮಿ ನನ್ನನ್ನು ವಿಚಾರಣೆ ಮಾಡಲಿಲ್ಲ. ನನ್ನನ್ನು ನಾಚಿಕೆಗೆ ಗುರಿಮಾಡಿದ್ದವರನ್ನೇ ನಾಚಿಕೆಗೆ ಗುರಿಮಾಡಿದರು. ಅವರನ್ನೇ ದೂಷಿಸಿದರು....ಬಳಿಕ ಬದುಕಿನ ಎಲ್ಲ ರುಚಿಹೀನ ಫಲಗಳೂ ನನ್ನ ಬಾಯಿಗೆ ಮಧುರವಾದವು, ವಾಸನೆಯಿಲ್ಲದ ಹೂಗಳೆಲ್ಲಾ ನನ್ನ ಮೂಗಿಗೆ ಕಂಪನ್ನು ಸೂಸಿದವು. ಕಳಂಕವಿಲ್ಲದ ನೆನಪುಗಳ ಹೆಣ್ಣು ನಾನಾದೆ. ಸ್ವತಂತ್ರಳಾದೆ, ಇತರರೆದುರು ತಲೆತಗ್ಗಿಸಬೇಕಾದ ಸ್ಥಿತಿಯಿಂದ ಬಿಡುಗಡೆ ಪಡೆದೆ.’........
ಇನ್ನು ಆತ ದೂಷಿಸಿದವರ ದೃಷ್ಟಿಯಿಂದಲೂ ಗಿಬ್ರಾನ್ ಯೇಸುವನ್ನು ನೋಡಿದ್ದಾನೆ. ದೂಷಕರ ಪಂಕ್ತಿಯಲ್ಲಿ ಸೃಷ್ಟಿಯಾಗಿರುವ ‘ಗಲಿಲಿಯಾದ ವಿಧವೆ’ ಎಂಬುದು ಒಂದು ಕರುಣೆಯ ಕಾವ್ಯ. ಯೇಸುವಿನ ವ್ಯಕ್ತಿತ್ವದಿಂದ ಆಕರ್ಷಿತನಾದ ಆಕೆಯ ಮಗ ಯೇಸುವಿನೊಡನೆ ಹೊರಟುಹೋದ. ಇದರಿಂದ ಅಳಿಸಲಾಗದ ದ್ವೇಷವನ್ನು ಹೊಂದಿದ ಆಕೆ ಹೀಗೆ ಹೇಳುತ್ತಾಳೆ, ‘......ನಜರೆತ್ತಿನ ಯೇಸು ದುಷ್ಟ. ಏಕೆಂದರೆ ಯಾವ ಸಜ್ಜನ ತಾನೆ ತಾಯಿ ಮಕ್ಕಳನ್ನು ಅಗಲಿಸುತ್ತಾನೆ?........’
ಗಿಬ್ರಾನನ ಕಣ್ಣಿನಲ್ಲಿ ಕ್ರಿಸ್ತ ದಿವ್ಯ ಜ್ಞಾನ ಪಡೆದ ಮಾನವ, ಎಲ್ಲೆಯಿಲ್ಲದ, ಅಳೆಯಲಾರದ ಶಕ್ತಿಯನ್ನು ಪಡೆದವನು, ಪರಮ ಕವಿ! ಕೊನೆಯಲ್ಲಿ ಒಂದು ದೀರ್ಘ ಕವನವನ್ನು ಬರೆದು ಅದರಲ್ಲಿ ಯೇಸು ನಮ್ಮ ನಡುವೆ ಇನ್ನೂ ಇದ್ದಾನೆ, ಅವನ ಬದುಕಿಗೆ ಸಂಬಂಧಪಟ್ಟವರು, ಅವನನ್ನು ಬದುಕಿನಲ್ಲಿ ಕಂಡವರು ನಮ್ಮ ನಡುವೆ ಇನ್ನೂ ಇದ್ದಾರೆ ಎಂದು ತೋರಿಸಿದ್ದಾನೆ!
ಪ್ರೀತಿ, ಕರುಣೆ, ಕ್ಷಮಾಗುಣವನ್ನು ತನ್ನ ಉಸಿರಾಗಿಸಿಕೊಂಡಿದ್ದು ಜಗತ್ತಿನ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡ ಯೇಸುವಿನ ಜನ್ಮದಿನದ ಈ ಸಂದರ್ಭದಲ್ಲಿ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

8 comments:

 1. ಪ್ರಭಾಮಣಿಯವರೆ,
  ನಿಮಗೂ ಸಹ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

  ReplyDelete
 2. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಉಪಯುಕ್ತ ಮಾಹ್ತಿಯುಳ್ಳ ಸುಂದರ ಬರಹ.ಆ ಸ್ವಾಮಿಯು ಎಲ್ಲರಿಗೂ ಶಾಂತಿ ಮತ್ತು ನೆಮ್ಮದಿಯನ್ನು ಕೊಡಲಿ.ನಿಮಗೂ ,ಸರ್ವರಿಗೂ ಕ್ರಿಸ್ಮಸ್ ಹಬ್ಬವು ಶುಭವನ್ನು ತರಲಿ.

  ReplyDelete
 3. ಪ್ರಭಾಮಣಿ ಯವರೇ, ಗಿಬ್ರಾನನ ದೃಷ್ಟಿಯಲ್ಲಷ್ಟೇ ಅಲ್ಲದೆ ,ಜಗತ್ತಿನ ದೃಷ್ಟಿಯಲ್ಲೇ ಕರುಣಾಮಯಿ ಎನಿಸಿದಏಸುವಿನ ಲೇಖನ ಹೃದಯಸ್ಪರ್ಶಿಯಾಗಿದೆ.
  ತಲೆಯನುರುಳಿಸಿದವರ
  ತಲೆಯನುಳಿಸೆಂದು
  ತನ್ನ ತಲೆ ಬಲಿಗೊಟ್ಟು
  ತಾಳ್ಮೆ ಏರಿ ನಿಲಲು
  ನೇಣನೇರಲು ಪೋಗನೆ ಕರುಣಾಳು ಏಸು
  ನಿಮಗೂ "ಕ್ರಿಸ್ಮಸ್ ಹಬ್ಬದ ಶುಭಾಶಯಗಳು" ಹಾಗು ಅಭಿನಂದನೆಗಳು.

  ReplyDelete
 4. ಮೊದಲನೆಯದಾಗಿ ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಇಂಥ ಸಂದರ್ಭದಲ್ಲಿ ಯೇಸುವಿನ ಬಗ್ಗೆ ತಿಳಿಸಿದ್ದೀರಿ. ಧನ್ಯವಾದಗಳು. ಭಗವದ್ಗೀತೆಯ ‘ಧರ್ಮ ಸಂಸ್ಥಾಪನಾಯಾರ್ಥಂ ಸಂಭವಾಮಿ ಯುಗೇ ಯುಗೇ’ ಎಂಬಾ ಮಾತುಗಳು ಗಮನ ಸೆಳೆದವು. ಕ್ರಿಸ್ಮಸ್ ದಿನ ಚರ್ಚ್ ಒಂದಕ್ಕೆ ಹೋಗಿ ಮೌನವಾಗಿ ಕುಳಿತು ಪ್ರಾರ್ಥಿಸಿದಾಗ ಮನಸ್ಸಿಗೆ ಎಲ್ಲೂ ದೊರಕದಷ್ಟು ಶಾಂತಿ ದೊರೆಯಿತು.

  ReplyDelete
 5. ಪ್ರಭಾ ಅವರೇ,

  ದಿವ್ಯ ಚೇತನಯುಕ್ತಾ ಏಸುವಿನ ಬಗ್ಗೆ ವಿವರಣೆ ಚೆನ್ನಾಗಿದೆ.
  ನಿಮಗೆ ತಡವಾದ ಕ್ರಿಸ್ಮಸ್ ಶುಭಾಶಯಗಳು !

  ReplyDelete
 6. @ ಸುನಾಥ್ ರವರೆ,
  ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 7. @ ಡಾ. ಕೃಷ್ಣಮೂರ್ತಿಯವರೇ,
  ಆತ್ಮೀಯವಾಗಿ ಪ್ರತಿಕ್ರಿಯಿಸಿ, ಶುಭ ಹಾರೈಸಿದ್ದೀರಿ ಸರ್, ಧನ್ಯವಾದಗಳು.

  ReplyDelete
 8. @ ಕಲಾವತಿಯವರೇ,
  ಒ೦ದು ಸು೦ದರ ಕವನದೊ೦ದಿಗೆ ಲೇಖನವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete