Friday, December 31, 2010

ಮನದ ಅ೦ಗಳದಿ.............೨೪. ಹೊಸತು-ಹಳತು

ಹೊಸತನ್ನು ಅಪೇಕ್ಷಿಸುವುದು. ಅದಕ್ಕಾಗಿ ಕಾತರಿಸುವುದು, ನಮ್ಮ ಸ್ವಭಾವದ ಒಂದು ಬಹು ಪ್ರಮುಖ ಭಾಗವಾಗಿದೆ. ಇದು ಎಳವೆಯಿಂದಲೂ ನಮಗರಿವಿಲ್ಲದೆಯೇ ನಮ್ಮೊಳಗಿನ ಒಂದು ಅಂಶವಾಗಿದೆ. ಮಗುವಿಗೆ ಕಂಡದ್ದೆಲ್ಲಾ ಹೊಸದೇ! ಅವುಗಳನ್ನು ಕಾಣುವ ಆ ಕಣ್ಣುಗಳು ಕುತೂಹಲದ ಕೊಳಗಳಾಗಿರುತ್ತವೆ. ತಮ್ಮ ಸುತ್ತಮುತ್ತಲಿನ ಪರಿಸರವನ್ನು ತದೇಕವಾಗಿ ವೀಕ್ಷಿಸುತ್ತಾ, ಅದನ್ನು ತಿಳಿದುಕೊಳ್ಳುವ, ತಮ್ಮದಾಗಿಸಿಕೊಳ್ಳುವ ಉತ್ಕಟತೆಯಲ್ಲಿ ಮಗುವಿಗೆ ದಿನದಿನವೂ ನವನವೀನವಾಗಿಯೇ ಗೋಚರಿಸುತ್ತದೇನೋ ಎನ್ನುವಂತೆ ಅದರ ಭಾವವಿರುತ್ತದೆ. ಬೆಳೆದಂತೆ ತನಗೆಲ್ಲಾ ತಿಳಿದಿದೆ ಎನ್ನುವ ಭ್ರಮೆಯಲ್ಲಿ ಅಂತೂ ನಮಗರಿವಿಲ್ಲದೆಯೇ ಜೀವನವನ್ನು ಯಾಂತ್ರಿಕಗೊಳಿಸಿಕೊಂಡುಬಿಡುತ್ತೇವೆ. ಆಗ ನಮ್ಮಲ್ಲಿ ಚೈತನ್ಯದ ಚಾಲನೆಯುಂಟಾಗಲು ನಮ್ಮ ಜೀವನದಲ್ಲಿ ಯಾವುದಾದರೂ ‘ಹೊಸತು’ ಪ್ರವೇಶಿಸಬೇಕಾದದ್ದು ಅನಿವಾರ್ಯವೆನಿಸುತ್ತದೆ. ಅದು ವಸ್ತುವಿನ ರೂಪದಲ್ಲಿರಬಹುದು, ವ್ಯಕ್ತಿಯಾಗಿರಬಹುದು, ಯಾವುದೋ ಒಂದು ಘಟನೆಯಾಗಿರಬಹುದು, ಆಲೋಚನೆಯಾಗಿರಬಹುದು.... ಅಂತೂ ಹೊಸತಿಗಾಗಿ ಕಾತರಿಸಿ, ಕನವರಿಸಿ, ಹಪಹಪಿಸುವುದೇ ಜೀವನದ ಗುರಿಯಾದಂತೆನಿಸುತ್ತದೆ.

ಇದನ್ನು ‘ಹೊಸ ಹಸಿವು’ ಎನ್ನುವ ಮಹಾನ್ ಪ್ರತಿಭಾವಂತ, ಪ್ರಭಾವಶೀಲ ಬರಹಗಾರರಾದ ಡಿ.ವಿ.ಜಿ.ಯವರು,
‘ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು|
ಅದಕಾಗಿ ಇದಕಾಗಿ ಮತ್ತೊಂದಕಾಗಿ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ|
ಕುದಿಯುತಿಹುದಾವಗಂ-ಮಂಕುತಿಮ್ಮ||’ ಎನ್ನುವುದರ ಮೂಲಕ ಜೀವನವೆಲ್ಲಾ ನಾವು ಒಂದಲ್ಲಾ ಒಂದು ಹೊಸತರ ಅಪೇಕ್ಷೆಯಲ್ಲಿ ಕುದಿಯುತ್ತಲೇ ಇರುತ್ತೇವೆ ಎಂದು ತಿಳಿಸುತ್ತಾರೆ.

ಹೊಸತರ ಆಗಮನವಾದ ನಂತರ ಅಂದರೆ ನಮ್ಮದಾಗಿಸಿಕೊಂಡ ನಂತರ ಅದನ್ನು ಜೋಪಾನವಾಗಿ ನಮ್ಮೊಂದಿಗಿರಿಸಿಕೊಂಡು ಕಾಪಾಡಿಕೊಳ್ಳುವುದರಲ್ಲಿ ಅಜಾಗರೂಕರಾಗುತ್ತೇವೆ. ಹೊಸದಾಗಿ ಕೊಂಡ ವಸ್ತುಗಳು ಮೂಲೆ ಸೇರುವುದು, ಹೊಸ ಸ್ನೇಹ, ಸಂಬಂಧಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಶಿಥಿಲವಾಗುವುದು, ಅತ್ಯಂತ ಶ್ರಮದಿಂದ, ಅನೇಕ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದು,....... ಈ ನಮ್ಮ ಮನಃಸ್ಥಿತಿಯಿಂದಲೇ ಇರಬಹುದು. ಹೊಸತು ಎನಿಸಿಕೊಂಡದ್ದು ಹಳತರ ಗುಂಪನ್ನು ಸೇರಿಯೇಬಿಡುತ್ತದೆ! ಹಳೆಯ ರಾಶಿಯಲ್ಲಿ ಒಂದಾಗಿಯೂ ಬಿಡುತ್ತದೆ! ಹಳೆಯದು ಎನ್ನುವುದು ಹೊಸದರಲ್ಲಿಯೇ ಅಡಗಿದೆ ಎನ್ನುವುದನ್ನು ಡಿ.ವಿ.ಜಿ.ಯವರು ಹೀಗೆ ಹೇಳುತ್ತಾರೆ,

`ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು|
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ||
ಹಳೆಯವಿವು ನೀನಿದರೊಳಾವುದನು ಕಳೆದೀಯೊ?|
ಹಳದು ಹೊಸದೊಳಿರದೆ? -ಮಂಕುತಿಮ್ಮ||’

ಹಳೆಯ ಬೆಟ್ಟದ ಮೇಲೆ ಬಿದ್ದ ಮಳೆ ನೀರು ಹಳೆಯ ನೆಲದ ಮೇಲೆಯೇ ಹರಿದು ಹೊಳೆಯನ್ನು ಸೇರಿದಾಗ ಅದನ್ನು ‘ಹೊಸನೀರು’ ಎನ್ನುತ್ತೇವೆ. ಹಳೆಯದೇ ಹೊಸತಾಗಿ ಬೆಳೆಯುತ್ತದೆ. ಹಾಗೆಯೇ ಹೊಸದೂ ಹಳೆಯದಾಗುತ್ತದೆ ಎನ್ನುವುದನ್ನು ತಮ್ಮ ‘ಮಂಕುತಿಮ್ಮನ ಕಗ್ಗ’ದಲ್ಲಿ ಅನೇಕ ಉದಾಹರಣೆಗಳನ್ನು ನೀಡುತ್ತಾ ಹೇಳಿದ್ದಾರೆ.

ಹಳೆಯದು ಮತ್ತು ಹೊಸದು ಎರಡರ ಸಾಮರಸ್ಯವನ್ನು, ‘ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಗಸು’ ಎಂಬುದರ ಮೂಲಕ ಸಾರುತ್ತಾರೆ. ಹಾಗೆಯೇ ಹಳೆಯದೇ ಶ್ರೇಷ್ಠವೆಂದು ಹಲುಬುತ್ತಾ ಹೊಸತಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಲಾರದೇ ಅಲ್ಲೇ ಜಡವಾಗಬಾರದೆಂದು ಹೀಗೆ ಹೇಳುತ್ತಾರೆ,

`ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು|
ರಸವು ನವನವತೆಯಿಂದನುದಿನವು ಹೊಮ್ಮಿ||
ಹಸನೊಂದು ನುಡಿಯಲ್ಲಿ ದಡೆಯಲ್ಲಿ ನೋಟದಲಿ|
ಪಸರುತಿರೆ ಬಾಳ್ ಚೆಲುವು--ಮಂಕುತಿಮ್ಮ||’

ಬದುಕಿನ ಈ ಪ್ರವಾಹದಲ್ಲಿ ನಮ್ಮನ್ನು ನಾವು ಆಯಾ ಪರಿಸ್ಥಿತಿಗೆ ತಕ್ಕಂತೆ ಸರಿಪಡಿಸಿಕೊಳ್ಳುತ್ತಾ, ಓರೆಕೋರೆಗಳನ್ನು ತಿದ್ದಿಕೊಳ್ಳುತ್ತಾ ಜೊತೆಗೇ ನಮ್ಮತನವನ್ನೂ ಉಳಿಸಿಕೊಂಡು ಮುಂದೆ ಸಾಗುವುದೇ ನಿಜವಾದ ಜೀವನ. ಇಂದಿನ ಈ ತಾಂತ್ರಿಕ ಯುಗದಲ್ಲಿ ನಮಗೆ ಅತ್ಯವಶ್ಯಕವಾದ ಜ್ಞಾನವನ್ನು ಗಳಿಸಿಕೊಂಡು ಹೊಸತರೊಟ್ಟಿಗೇ ಮುನ್ನಡೆಯಬೇಕು ಇಲ್ಲದಿದ್ದರೆ ದಂಡೆಗೆ ಸಿಕ್ಕಿಕೊಂಡ ಕೊರಡಾಗಿಬಿಡುತ್ತೇವೆ. ಯಾವುದೋ ಹಳೆಯ ಕಾಲವೇ ಶ್ರೇಷ್ಟವೆಂದು ಹಲುಬುತ್ತಾ ಅಲ್ಲೇ ಸ್ಥಗಿತವಾಗಿಬಿಡುತ್ತೇವೆ. ಇವತ್ತಿನ ನಮ್ಮ ಜೀವನ ನಿನ್ನೆಯ ಫಲಶೃತಿಯಾಗಿರುತ್ತದೆ. ‘ನಾವು ನಿನ್ನೆಯವರಾಗಿ ಬಾಳುತ್ತೇವೆ.’ ಎಂಬ ಒಂದು ಉಕ್ತಿ ಇದೆ. ನಾಳಿನ ನಮ್ಮ ಜೀವನವನ್ನು ಹಸನುಗೊಳಿಸಿಕೊಳ್ಳಲು ಇಂದಿನಿಂದಲೇ ಉತ್ತಮ ಪ್ರಯತ್ನದೊಂದಿಗೆ ರೂಪಿಸಿಕೊಳ್ಳಬೇಕಾಗುತ್ತದೆ. ಈಗ ನಾವು ಮಾಡುವ ಅತ್ಯುತ್ತಮವೆಂದುಕೊಳ್ಳುವ ಆಲೋಚನೆಗಳೂ ನಮ್ಮ ಹಿಂದಿನವರು ಆಲೋಚಿಸಿ, ಕೆಲವೊಮ್ಮೆ ದಾಖಲಿಸಿದವೇ ಆಗಿರುತ್ತವೆ ಎನ್ನುವುದೂ ನಂಬಲೇಬೇಕಾದ ಸತ್ಯವಾಗಿದೆ! ಈ ಲೇಖನವನ್ನು ಬರೆಯಲು ಪ್ರಾರಂಭಿಸಿ ಒಂದು ಪ್ಯಾರಾವನ್ನು (ನನ್ನದೇ ಸ್ವಂತವಾದ ಹೊಸ ಆಲೋಚನೆ ಎಂದುಕೊಂಡು!) ಬರೆದು ನಂತರ `ಹೊಸ ಚಿಗುರು, ಹಳೆ ಬೇರು........’ನೆನಪಾಗಿ ‘ಡಿ.ವಿ.ಜಿ. ಕೃತಿಶ್ರೇಣಿ’ಯಲ್ಲಿ `ಮಂಕುತಿಮ್ಮನ ಕಗ್ಗ’ವನ್ನು ತೆರೆದು ನೋಡಿದಾಗ ‘ಹೊಸತು-ಹಳತು’ಗೆ ಸಂಬಂಧಿಸಿದ ಅನೇಕ ಪದ್ಯಗಳಿದ್ದುದು ಕಂಡುಬಂದಿತು! ಈಗ ‘ಹೊಸತು’ ಯಾವುದು? ‘ಹಳತು’ ಯಾವುದು?
೨೦೧೦ನೇ ಇಸವಿಯು ಮುಕ್ತಾಯವಾಗಿ ೨೦೧೧ನೇ ಇಸವಿಯು ಪ್ರಾರಂಭವಾಗಿರುವ ಈ ಸಂದರ್ಭದಲ್ಲಿ ಹಳೆಯವರ್ಷ, ಹೊಸವರ್ಷ ಎನ್ನುವ ತಾರತಮ್ಯವೇಕೆ? ೨೦೧೦ರಲ್ಲಿ ನಾವು ಯಾವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆಯೋ ಅದರ ಪ್ರತಿಲನವೇ ೨೦೧೧ ಆಗಿರುತ್ತದೆ. ಇಲ್ಲದೇ ಬರಿಗೈಯಲ್ಲಿ ಅಬ್ಬರ, ಆಡಂಬರಗಳೊಡನೆ ಸ್ವಾಗತಿಸಿದರೆ ನಮಗರಿವಿಲ್ಲದಂತೆಯೇ ದಿನಗಳುರುಳಿ ವರುಷವು ಜಾರಿಹೋಗುತ್ತದೆ.

‘ನವ ನವ ಪ್ರಶ್ನೆಗಳು, ನವ ನವ ಪರೀಕ್ಷೆಗಳು
ದಿವಸಾಬ್ಧ ಯುಗಚಕ್ರ ತಿರುತಿರುಗಿದಂತೆ
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ
ಅವಿರತದ ಚೈತನ್ಯ -ಮಂಕುತಿಮ್ಮ.’ ಎಂದು ಡಿ.ವಿ.ಜಿ.ಯವರು ಹೇಳಿದಂತೆ ಕಾಲಗತಿಯಲ್ಲಿ ಹೊಸ ಹೊಸ ಪ್ರಶ್ನೆಗಳು, ಹೊಸ ಹೊಸ ಪರೀಕ್ಷೆಗಳನ್ನು ಎದುರಿಸಲು ನಮ್ಮನ್ನು ಸಮರ್ಥರಾಗಿಸಿಕೊಂಡು ನಮ್ಮಲ್ಲಿಯ ‘ಚೈತನ್ಯ'ವನ್ನು ನಿರಂತರವಾಗಿ ಕಾಯ್ದುಕೊಳ್ಳೋಣ.

ಎಲ್ಲರಿಗೂ ೨೦೧೧ರ ಶುಭಾಶಯಗಳು.

7 comments:

  1. ಹಳತು,ಹೊಸತುಗಳ ನಡುವಿನ ಸಂಬಂಧವನ್ನು ಚೆನ್ನಾಗಿ ವಿವರಿಸಿರುವಿರಿ.
    ಹೊಸ ವರ್ಷದ ಶುಭಾಶಯಗಳು.

    ReplyDelete
  2. Olleya VivareNe .. DVG yavara kagga evergreen truth ...

    ReplyDelete
  3. ವಿವರಣೆ ಚೆನ್ನಾಗಿದೆ...
    ಹೊಸ ವರ್ಷದ ಶುಭಾಶಯಗಳು...

    ReplyDelete
  4. ಆರಂಭಕ್ಕೊಂದು ಉತ್ತಮ ಲೇಖನ..

    ReplyDelete
  5. ಪ್ರಭಾಮಣಿ ಯವರೇ ಹಳತರ ಅಗತ್ಯ ,ಹೊಸತರ ಅನಿವಾರ್ಯತೆ ಯನ್ನು ಲೇಖನದಲ್ಲಿ ಅರ್ಥಪೂರ್ಣವಾಗಿ ಬರೆದಿದ್ದೀರಿ.ಧನ್ಯವಾದಗಳು.

    ReplyDelete
  6. ಚೆನ್ನಾಗಿದೆ.. ನಿಮಗೂ ಸಹ ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು

    ReplyDelete
  7. ಹೊಸತು ಹಳತಾಗುವ, ಮತ್ತೆ ಹೊಸತನಕ್ಕೆ ಹಾತೊರೆಯುವ... ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ ಮೇಡಂ. ಡಿ.ವಿ.ಜಿ.ಯವರ ಜೀವನಾನುಭವ ದೊಡ್ಡದು ಮೇಡಂ. ಅವರೆಂದರೆ ನನಗೆ ತುಂಬಾ ಇಷ್ಟ.

    ReplyDelete