Friday, January 14, 2011

ಮನದ ಅ೦ಗಳದಿ................೨೫.ಸಂಕ್ರಮಣ

ನಮ್ಮ ಪುರಾತನ ಋಷಿಮುನಿಗಳು ತಮ್ಮ ವಿಶಿಷ್ಟ ಜ್ಞಾನದೀಪ್ತಿಯ ಅಂತಃಚಕ್ಷುಗಳಿಂದ ಕಂಡ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಸಾಮಾನ್ಯ ಜನತೆಗೆ ಉಪಯೋಗವಾಗುವಂತೆ, ಅವರ ಜೀವನ ಕ್ರಮಬದ್ಧವಾಗಿ ಸಾಗಲು ಅನುಕೂಲವಾಗುವಂತೆ ಅನೇಕ ರೀತಿ-ನೀತಿಗಳನ್ನು, ನೀತಿ-ನಿಯಮಗಳನ್ನು ಹಾಕಿಕೊಟ್ಟು ಅದನ್ನು ಅನುಸರಿಸಿ ಪರಸ್ಪರ ಸಹಕಾರದಿಂದ, ಶಾಂತಿಯಿಂದ ಉತ್ತಮ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಕ್ರಮೇಣ ಅವುಗಳನ್ನು ಜಾರಿಗೊಳಿಸುವ ಹಂತದಲ್ಲಿ ಸರಳಗೊಳಿಸಿ, ಸಂಭ್ರಮದಿಂದೊಡಗೂಡಿಸುವ ಸಲುವಾಗಿ ಋತುಮಾನಕ್ಕನುಗುಣವಾಗಿ ಹಬ್ಬಗಳೂ ಸೇರ್ಪಡೆಯಾಗಿವೆ ಎನಿಸುತ್ತದೆ. ಅನೇಕ ಹಬ್ಬಗಳು ಇವೆಯಾದರೂ ಗೌರಿಹಬ್ಬ, ನವರಾತ್ರಿ, ದೀಪಾವಳಿ, ಸಂಕ್ರಾಂತಿ, ಯುಗಾದಿ ಇವು ಪ್ರಮುಖವಾಗಿ ಆಚರಣೆಯಲ್ಲಿರುವ ರಾಷ್ಟ್ರೀಯ ಹಬ್ಬಗಳು. ಇವುಗಳಲ್ಲಿ ಸಂಕ್ರಾಂತಿಯು ವೈಜ್ಞಾನಿಕವಾಗಿಯೂ ವಿಶೇಷವಾದ ಮಹತ್ವವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಜನವರಿ೧೪ ಅಥವಾ ೧೫ರಂದು ಬರುವುದಲ್ಲದೆ ಉತ್ತರಾಯಣ ಅಂದರೆ ಸೂರ್ಯನ ಉತ್ತರ ದಿಕ್ಕಿನ ಪ್ರಯಾಣದ ಆರಂಭವನ್ನು ಸೂಚಿಸುವ ಕಾಲವೂ ಆಗಿದೆ. ಉತ್ತರಾಯಣದಲ್ಲಿ ಮರಣ ಹೊಂದಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಅನಾದಿ ಕಾಲದಿಂದಲೂ ಇದೆ. ಇಚ್ಛಾ ಮರಣಿಯಾದ ಭೀಷ್ಮ ಪಿತಾಮಹರು ಈ ದಿನಕ್ಕಾಗೇ ಕಾದಿದ್ದು ದೇಹತ್ಯಾಗ ಮಾಡಿದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಈ ಕಾಲವನ್ನು ‘ಮಕರ ಸಂಕ್ರಾಂತಿ’ ಎನ್ನುತ್ತಾರೆ.

ನಮ್ಮ ಕಡೆ ಸಂಕ್ರಾಂತಿ ಬಂತೆಂದರೆ ಅವರೇಕಾಯ ಸಡಗರ! ಹಬ್ಬಕ್ಕೆ ೨ದಿನಮೊದಲೇ ಅವರೇಕಾಯನ್ನು ಬಿಡಿಸಿ, ಅವರೇ ಕಾಳನ್ನು ನೆನೆಸಿಟ್ಟು, ಹಿಂದಿನ ದಿನ ಕಾಳನ್ನು ಚಿಲುಕಿಸುವ(ನೆಂದ ಕಾಳನ್ನು ಬೆರಳಿನಿಂದ ಒತ್ತಿ ಬೇಳೆಯನ್ನು ಬೇರ್ಪಡಿಸುವುದು) ಸಂಭ್ರಮ! ಹಬ್ಬದ ದಿನ ಚಿಲುಕವರೆ ಬೇಳೆಯ ಹುಗ್ಗಿ, ಅವರೆ ಕಾಳಿನ ಹುಳಿ,....ಎಲ್ಲಾ ಅವರೇಮಯ! ಜೊತೆಗೆ ಸಿಹಿ ಪೊಂಗಲ್ ಹಬ್ಬದ ವಿಶೇಷ. ಸಂಜೆ ಎಳ್ಳು ಬೀರುವ ಎಂದರೆ ಎಳ್ಳಿನ ಮಿಶ್ರಣ, ಸಕ್ಕರೆ ಅಚ್ಚು, ಕಬ್ಬು, ಬಾಳೆಹಣ್ಣು, ಉತ್ತುತ್ತೆ....ಮುಂತಾದವುಗಳನ್ನು ಮನೆಮನೆಗೂ ಹಂಚಿ ಬರುವ ಪದ್ಧತಿ. ಆಗ ಹಳ್ಳಿಯ ನಮ್ಮ ಮನೆಯಲ್ಲಿ ಬಿಳಿ ಎಳ್ಳನ್ನು ತಯಾರಿಸಲು ಎಳ್ಳನ್ನು ನೆನೆಸಿ ಸಾರಿಸಿದ ಮಣ್ಣಿನ ನೆಲದ ಮೇಲೆ ಉಜ್ಜುತ್ತಿದ್ದರು. ೧೫-೨೦ದಿನಗಳಿಗೆ ಮೊದಲೇ ಬೆಲ್ಲ ಮುರಿಯುವುದು, ಕೊಬ್ಬರಿ ಹೆಚ್ಚುವುದು, ನೆಲಗಡಲೆ ಬೀಜವನ್ನು ಹುರಿದು ಬೇಳೆ ಮಾಡಿಕೊಳ್ಳುವುದು........ಮುಂತಾದ ಕೆಲಸಗಳನ್ನು ಅಮ್ಮ ಬಿಡುವಿಲ್ಲದ ದೈನಂದಿನ ಕೆಲಸಗಳ ನಡುವೆಯೇ ಮಾಡಿಕೊಳ್ಳುತ್ತಿದ್ದರು. ಸಕ್ಕರೆ ಅಚ್ಚನ್ನು ಮಾಡಲು ಪ್ರಾರಂಭಿಸಿದರೆಂದರೆ ನಮಗೆ ಎಲ್ಲಿಲ್ಲದ ಸಡಗರ! ಈ ಹಬ್ಬದ ಪದ್ಧತಿ ಇಲ್ಲದ ಪರ ಊರುಗಳಿಂದ ಬಂದು ನೆಲೆಸಿದವರೂ ಮಕ್ಕಳಿಗೆ ನಿರಾಸೆಯಾಗಬಾರದೆಂದು ಕೊಳ್ಳಲು ಸಿಗದೇ ಇದ್ದುದರಿಂದ ವಿಧಾನವನ್ನು ತಿಳಿದುಕೊಂಡು ಎಳ್ಳುಬೆಲ್ಲ ತಯಾರಿಸುತ್ತಿದ್ದರು. ಈಗ ಸಿದ್ಧಪಡಿಸಿದ ಮಿಶ್ರಣವನ್ನೇ ಅಂಗಡಿಗಳಲ್ಲಿ ಮಾರಲು ಇಟ್ಟಿರುತ್ತಾರೆ. ಒಮ್ಮೆ ಮಾರ್ಕೆಟ್‌ಗೆ ಹೋದರೆ ಹಬ್ಬಕ್ಕೆ ಏನೇನು ಬೇಕು ಎನ್ನುವುದನ್ನು ವ್ಯಾಪಾರಿಗಳೇ ನೆನಪಿಸಿ ಕೊಡುತ್ತಾರೆ. ಆದರೆ ಈ ಎಲ್ಲಾ ಆಚರಣೆಗಳು ಮಹತ್ವವನ್ನು ಕಳೆದುಕೊಳ್ಳುತ್ತಾ ನೀರಸವಾಗುತ್ತಿವೆಯೇನೋ ಎನಿಸುತ್ತಿದೆ.

‘ಸಂಕ್ರಾಂತೀಲಿ ಶಂಕದ ದ್ವಾರಾ(ಗಾತ್ರದ) ಚಳಿ ಹೋಗಿ ಸಾಸಿವೆ ಕಾಳು ದ್ವಾರಾ ಸೆಖೆ ಬಂತು’ ಅಂತ ನಮ್ಮ ಕಡೆ ಹೇಳುತ್ತಾರೆ. ಇದುವರಗೆ ಚಳಿಯ ಕೊರೆಯಿಂದ ಮೈಯಿನ ಚರ್ಮ ಬಿರುಕು ಬಿಟ್ಟಿರುತ್ತದೆ. ಸಂಕ್ರಾಂತಿಯಲ್ಲಿ ತಯಾರಿಸಿ ಪರಸ್ಪರ ಹಂಚಿ ತಿನ್ನುವ ಪಂಚ ಕಜ್ಜಾಯವು ಎಳ್ಳು, ಕೊಬ್ಬರಿ, ನೆಲಗಡಲೆ ಬೀಜ, ಕಡಲೆ ಮತ್ತು ಬೆಲ್ಲಗಳ ಮಿಶ್ರಣವಾಗಿದ್ದು ಅದರಲ್ಲಿ ಕೊಬ್ಬಿನ ಅಂಶವಿದ್ದು ಚರ್ಮವನ್ನು ರಕ್ಷಿಸುವ ಗುಣವನ್ನು ಹೊಂದಿದೆ. ‘ಎಳ್ಳು ಬೆಲ್ಲಿ ತಿಂದು ಒಳ್ಳೆಯ ಮಾತನಾಡು’ ಎನ್ನುವ ಉಕ್ತಿಯೂ ಇದೆ.ಇದಕ್ಕೆ ಸಮೀಕರಿಸುವಂತೆ ಮಹಾರಾಷ್ಟ್ರದಲ್ಲಿ ಎಳ್ಳು ಉಂಡೆಗಳನ್ನು ತಯಾರಿಸಿ ಹಂಚುತ್ತಾರೆ ಹಾಗೂ ಹಂಚುವಾಗ, ‘ತಿಲ್ ಗುಲ್ ಘ್ಯಾ ಗೂಡ್ ಗೂಡ್ ಬೋಲ್’ ಎಂದು ಹೇಳುತ್ತಾರೆ! ಇದರಿಂದ ಸಂಕ್ರಾಂತಿಯು ಆರೋಗ್ಯ ರಕ್ಷಣೆಯಲ್ಲದೇ ಉತ್ತಮ ಸಾಮರಸ್ಯವನ್ನೂ ಕಾಪಾಡುವ ಹಬ್ಬವಾಗಿದೆ ಎಂದು ತಿಳಿಯಬಹುದು. ಆಂದ್ರಪ್ರದೇಶದಲ್ಲಿ ‘ಸಂಕ್ರಾಂತಿ’ ಎಂದೇ ಕರೆದು, ತಮಿಳ್ ನಾಡಿನಲ್ಲಿ ‘ಪೊಂಗಲ್’ಎಂದು, ಪಂಜಾಬ್ ಮತ್ತು ಹರಿಯಾಣಗಳಲ್ಲಿ ‘ಲೊಹರಿ’ ಎಂದು ಸಂಕ್ರಾಂತಿಯನ್ನು ಆಚರಿಸುತ್ತಾರೆ. ತಮಿಳುನಾಡಿನಲ್ಲಿ "ಪೊಂಗಲ್" ಅನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಾಲ್ಕು ದಿನಗಳವರೆಗೂ ನಡೆವ ಹಬ್ಬ ‘ಭೋಗಿ’ಯೊಂದಿಗೆ ಶುರುವಾಗಿ "ಸೂರ್ಯ ಪೊಂಗಲ್" ಹಾಗೂ ಮೂರನೇ ದಿನ "ಮಾಟ್ಟು ಪೊಂಗಲ್" ನಾಲ್ಕನೇ ದಿನ "ಕಾಣುಮ ಪೊಂಗಲ್" ಎಂದು ಆಚರಿಸುತ್ತಾರೆ. ಪ್ರತಿ ದಿನ ತನ್ನದೇ ಆದ ವಿಶೇಷತೆ ಇರುತ್ತದೆ. ಸಂವೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲದೊಂದಿಗೆ ಸಿಹಿಪೊಂಗಲ್ ಅನ್ನು ಅರಿಶಿಣ ಕೊಂಬಿನ ದಾರ ಹಾಗೂ ಹೂಗಳಿಂದ ಅಲಂಕರಿಸಿದ ಮಣ್ಣಿನ ಮಡಿಕೆಗಳಲ್ಲಿ ತಯಾರಿಸಲಾಗುತ್ತದೆ. ಈ ಹಬ್ಬದಲ್ಲಿಯೇ ಉತ್ತರ ಭಾರತದ ಗುಜರಾತಿನಲ್ಲಿ ಗಾಳಿಪಟಗಳನ್ನೂ ಹಾರಿಬಿಡುವ ಸಂಪ್ರದಾಯವಿದೆ. ಹೀಗಾಗಿ ಸಂಕ್ರಾಂತಿಯು ಭಾರತದಾದ್ಯಂತ ಅತ್ಯಂತ ಪ್ರಮುಖ ಹಬ್ಬವೆನಿಸಿದೆ.

ಸಂಕ್ರಾಂತಿ ಸಂವೃದ್ಧಿಯ ಸೂಚಕದ ಹಬ್ಬ. ವರ್ಷವೆಲ್ಲಾ ಕಷ್ಟಪಟ್ಟು ದುಡಿದ ರೈತರ ಫಸಲು ಕಣಜವನ್ನು ತುಂಬಿ ಸಂತಸವನ್ನು ಉಂಟುಮಾಡಿದೆ ಎಂಬುದು ಈ ಹಬ್ಬದ ಆಚರಣೆಯ ಮೂಲಕ ವ್ಯಕ್ತವಾಗುತ್ತದೆ. ರೈತರು "ಧಾನ್ಯಲಕ್ಷ್ಮಿಗೆ" ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ತಮ್ಮೊಡನೆ ದುಡಿದ ಮೂಕ ಪ್ರಾಣಿಗಳಾದ ಎತ್ತು, ದನ-ಕರುಗಳಿಗೆ ಆ ದಿನ ವಿಶೇಷವಾಗಿ ಅಲಂಕಾರ ಮಾಡಿ ಸಂತಸಪಡುತ್ತಾರೆ. ಹಳ್ಳಿಗಳಲ್ಲಿ, ಮುಖ್ಯವಾಗಿ ಮನೆ-ಮನೆಗಳನ್ನು ಸುಣ್ಣ-ಬಣ್ಣಗಳಿಂದ ಮೆರುಗುಗೊಳಿಸಿ ತಳಿರುತೋರಣಗಳಿಂದ ಅಲ೦ಕರಿಸಿರುತ್ತಾರೆ. ನಮ್ಮಲ್ಲಿ ದೀಪಾವಳಿಯ ದಿನ ‘ಕೆರಕ’ವನ್ನು ಮಾಡುವಂತೆ ಕೆಲವು ಪ್ರದೇಶಗಳಲ್ಲಿ ರಂಗೋಲಿಯ ಮಧ್ಯೆ ಸಗಣಿಯಿಂದ ಗೋಪುರ ಮಾಡಿಟ್ಟು ಅದನ್ನು ಬಗೆಬಗೆಯ ಹೂಗಳಿಂದ ಸಿಂಗರಿಸುವ ಸಂಪ್ರದಾಯವು ಇಂದಿಗೂ ಜಾರಿಯಲ್ಲಿದೆ.

ಎಳ್ಳಿನಲ್ಲಿ ಇರುವ ಸ್ವಲ್ಪ ಪ್ರಮಾಣದ ಕಹಿ ರುಚಿಯನ್ನೂ, ಬೆಲ್ಲದ ಸಿಹಿ ರುಚಿಯನ್ನೂ ಮಿಶ್ರಗೊಳಿಸುವ ಎಳ್ಳು-ಬೆಲ್ಲವು ಯುಗಾದಿಯ ಬೇವು-ಬೆಲ್ಲವನ್ನು ನೆನಪಿಸುತ್ತದೆ. ಜೀವನವು ಕಹಿ-ಸಿಹಿಗಳ ಸಮ್ಮಿಶ್ರಣ ಎನ್ನುವುದನ್ನು ಈ ಹಬ್ಬವೂ ಸಾರುತ್ತದೆ. ಸುಖ-ದುಃಖಗಳನ್ನು ಸಮಭಾವದಲ್ಲಿ ಸ್ವೀಕರಿಸಬೇಕು ಎನ್ನುವುದು ನಮ್ಮ ಎಲ್ಲಾ ಆಚರಣೆಗಳ ಮೂಲ ಉದ್ದೇಶವಾಗಿದೆ. ಇದನ್ನು ಅರ್ಥಮಾಡಿಕೊಂಡು ನಡೆದರೆ ಒಳ್ಳೆಯದೇ. ಆದರೆ ಎಲ್ಲೋ ಕೆಲವರು ತಮ್ಮ ನಂಬಿಕೆಗಳನ್ನು ಒರೆಗೆ ಹಚ್ಚಿ ನೋಡುವವರಾದರೆ ಅನೇಕರು ಮೌಢ್ಯತೆಯ ಪರಮಾವಧಿಯನ್ನು ತಲುಪುತ್ತಿದ್ದಾರೇನೋ ಎನಿಸುವಂತಿದೆ. ಇದಕ್ಕೆ ನಮ್ಮ ದೃಶ್ಯ ಮಾಧ್ಯಮಗಳೂ ಇಂಬುಗೊಡುತ್ತಿವೆ.

ಸಂಕ್ರಮಣ ಅಥವಾ ಸಂಕ್ರಾಂತಿ ಎಂದರೆ ಸಂಧಿ ಕಾಲ. ದಾಟುವಿಕೆ ಅಥವಾ ಮುಂದುವರಿಯುವಿಕೆ ಎಂಬ ಅರ್ಥವೂ ಇದೆ. ನಮ್ಮ ಈ ಸಂದಿಗ್ಧತೆಯಲ್ಲಿ ಆಚರಿಸುತ್ತಿರುವ ‘ಸಂಕ್ರಾಂತಿ’ಯು ನಮ್ಮನ್ನು ಧನಾತ್ಮಕತೆಯಿಂದೊಡಗೂಡಿದ ಉತ್ತಮರನ್ನಾಗಿಸಲಿ. ಎಲ್ಲೆಲ್ಲೂ ಶಾಂತಿ, ಸಂವೃದ್ಧಿಯು ನೆಲೆಸುವಂತಾಗಲಿ ಎಂದು ಆಶಿಸುತ್ತಾ.........‘ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.’

(`ಮರಳ ಮಲ್ಲಿಗೆ'ಯ `ಸುಗ್ಗಿಯ ಸ೦ಕ್ರಾ೦ತಿ ಹಬ್ಬ' ಲೇಖನದಿ೦ದ ಮಾಹಿತಿಯನ್ನು ಪಡೆದಿದ್ದೇನೆ. ಲೇಖಕರಾದ ವೀಣಾ ಕುಲಕರ್ಣಿ ಯವರಿಗೆ ಧನ್ಯವಾದಗಳು.)

21 comments:

 1. ನಿಮಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು!!
  ಪಂಜಾಬ್ ಕಡೆ ಬೈಸಾಖಿ ಅಂತಲೂ ಕರೆಯುತ್ತಾರೆ.
  ಹಳೆ ಸಂಭ್ರಮ ಈಗ ಕಡಿಮೆಯಾಗಿದೆ.ಎಳ್ಳು-ಬೆಲ್ಲ-ಕೊಬ್ಬರಿ ರೆಡಿ ಸಿಗುತ್ತೆ!!

  ReplyDelete
 2. ತಮ್ಮೆಲ್ಲರಿಗೂ ಮಕರ ಸಂಕ್ರಮಣದ ಶುಭಾಶಯಗಳು

  ReplyDelete
 3. ನಿಮಗೂ ಮಕರ ಸ೦ಕ್ರಾ೦ತಿಯ ಶುಭಹಾರೈಕೆಗಳು.

  ReplyDelete
 4. ಸಂಕ್ರಾಂತಿ ಹಬ್ಬದ ಶುಭಾಶಯಗಳು.ಸಂಕ್ರಮಣದ ಬಗ್ಗೆ ಸುಂದರ ಲೇಖನ.

  ReplyDelete
 5. ಸಂಕ್ರಾಂತಿ ಎಂದರೆ ನಮಗೆ ನೆನಪಾಗುವುದು ಮಕರ ಸಂಕ್ರಾಂತಿ. ಸೂರ್ಯ ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ ದಿನವಿದು. ಸೂರ್ಯ ಪ್ರತಿ ಮಾಸವೂ ರಾಶಿಯಿಂದ ರಾಶಿಗೆ ಕ್ರಮಿಸುತ್ತಾನೆ. ಅವೂ ಸಂಕ್ರಾಂತಿಗಳೇ. ಈ ಸಂಕ್ರಾಂತಿಯ ದಿನ ಸೂರ್ಯ ದಕ್ಷಿಣ ದಿಕ್ಕಿನ ಚಲನೆಯನ್ನು ನಿಲ್ಲಿಸಿ ಉತ್ತರ ದಿಕ್ಕಿನ ಚಲನೆ ಪ್ರಾರಂಭಿಸುತ್ತಾನೆ. ದಕ್ಷಿಣ ದಿಕ್ಕು ಯಮನ ದಿಕ್ಕು, ಅಂದರೆ ಸಾವಿನದಿಕ್ಕು. ಉತ್ತರದಿಕ್ಕು ದೇವತೆಗಳ ದಿಕ್ಕು. ಸಾವಿನಿಂದ ದೈವತ್ವದ ಕಡೆಗೆ ಹೊರಳುವ ಕಾರಣದಿಂದ ಇದನ್ನು ಹಬ್ಬದಂತೆ ಆಚರಿಸುತ್ತಿರಬಹುದು. (ಸೂರ್ಯ ದಕ್ಷಿಣದಿಕ್ಕಿಗೆ ಹೊರಳುವ ಸಂಕ್ರಾಂತಿ ಕರ್ಕಾಟಕ ಸಂಕ್ರಾಂತಿ.)
  ಸಂಕ್ರಾಂತಿಯ ಪುಣ್ಯಕಾಲ ೧೬ ಘಳಿಗೆಯಷ್ಟಿರುತ್ತದೆ.(ಸುಮಾರು ೬ ಘಂಟೆ ೧೬ ನಿಮಿಷಗಳು.)ಮಕರ ರಾಶಿಯ ಪ್ರವೇಶದ ಕ್ಷಣದಿಂದ ಹಿಂದಿನ ೩ ಘಂಟೆ ೮ ನಿಮಿಷಗಳು, ಮುಂದಿನ ಅಷ್ಟೆ ಹೊತ್ತು ಪುಣ್ಯಕಾಲವಾಗಿರುತ್ತದೆ. ಈ ಹೊತ್ತಿನಲ್ಲಿ ಪುಣ್ಯಸ್ನಾನ,ದಾನ ಇತ್ಯಾದಿಗಳನ್ನು ಮಾಡಿದರೆ ಮೋಕ್ಷ ಎಂಬುದು ನಂಬಿಕೆ.

  ReplyDelete
 6. ಮೇಡಮ್,

  ಸಂಕ್ರಮಣದ ಬಗ್ಗೆ ಸೊಗಸಾದ ಲೇಖನವನ್ನು ಬರೆದಿದ್ದೀರಿ..ಇಷ್ಟವಾಯಿತು. ಬಿಡುವಾದರೆ ನನ್ನ ಬ್ಲಾಗಿನ ಪೆಂಟಟಾಮಿ ಬಗ್ ಚಿತ್ರ ಲೇಖನವನ್ನು ನೋಡಿ ನಿಮಗೆ ಇಷ್ಟವಾಗಬಹುದು.

  ReplyDelete
 7. habbada bagegina sogasaada lekhana ... nimagu habbada shubhaashaya.....

  ReplyDelete
 8. @ ಮಾಲತಿಯವರೇ,
  `ಸ೦ಕ್ರಾ೦ತಿ'ಯನ್ನು ಪ೦ಜಾಬ್ ನಲ್ಲಿ `ಬೈಸಾಖಿ' ಎಂದು ಕರೆಯುವ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

  ReplyDelete
 9. @ ವಿ. ಆರ್.ಭಟ್ ರವರೇ,
  @ ಮನಮುಕ್ತಾರವರೇ,
  @ ಡಾ. ಕೃಷ್ಣಮೂರ್ತಿ ಯವರೇ,
  `ಸ೦ಕ್ರಮಣ' ಲೇಖನಕ್ಕೆ ಪ್ರತಿಕ್ರಿಯಿಸಿ `ಸ೦ಕ್ರಾ೦ತಿಯ ಶುಭಾಶಯ'ಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು

  ReplyDelete
 10. @ ಮೃತ್ಯುಂಜಯ ಹೊಸಮನೆಯವರೇ,
  `ಸ೦ಕ್ರಾ೦ತಿ'ಯ ಆಚರಣೆಯ ಬಗ್ಗೆ ವಿಶೇಷ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. ಬರಿತ್ತಿರಿ.

  ReplyDelete
 11. @ ಶಿವು ಕೆ. ರವರೇ,
  `ಸ೦ಕ್ರಮಣ' ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬ್ಲಾಗಿನ ಬಗ್ ಚಿತ್ರ ಲೇಖನವನ್ನು ಓದಿದೆ. ಇಷ್ಟವಾಯಿತು. ಅದ್ಭುತವಾಗಿದೆ..

  ReplyDelete
 12. @ ದಿನಕರ ಮೊಗೇರ ರವರೇ,
  `ಸ೦ಕ್ರಮಣ' ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ವ೦ದನೆಗಳು. ಸ೦ಕ್ರಾ೦ತಿಯ ಶುಭಾಶಯ'ಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು

  ReplyDelete
 13. sankranti habbada shubhashayagaLu haage nimma lekhana bahaLastu maahiti needitu

  ReplyDelete
 14. ಪ್ರಭಾ ಅವರೇ,

  ಸಂಕ್ರಾಂತಿ ಲೇಖನ ಮಾಹಿತಿಯುಕ್ತವಾಗಿತ್ತು.
  ನಿಮಗೆ ಮತ್ತು ಕುಟುಂಬದವರಿಗೆ ಸಂಕ್ರಾಂತಿ ಶುಭಾಶಯಗಳು !

  ReplyDelete
 15. ಪ್ರಭಾಮಣಿ ಯವರೇ ಸಂಕ್ರಾಂತಿಯ ವಿಶೇಷತೆಯನ್ನು ವಿವರವಾಗಿ ಬರೆದಿದ್ದಿರ. ಧನ್ಯವಾದಗಳು.ನಿಮಗೂ ನಿಮ್ಮ ಪರಿವಾರಕ್ಕೂ ಸಂಕ್ರಾಂತಿಯ ಶುಭಾಶಯಗಳು

  ReplyDelete
 16. prabhaamani nagaraja..,

  ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು...

  ಶುಭಾಶಯಗಳು...

  ReplyDelete
 17. Highly informative article madam. I remember 3 years back, we have shoot Hassan district special. all Avarekai cookery program in a village called Kothangatta, near Shravanbelugola.

  ReplyDelete
 18. ಪ್ರಭಾಮಣಿ ಮೇಡಂ , ನಿಮ್ಮ ಬ್ಲಾಗ್ ವಿಶೇಷ ಇರುವುದೇ ನೀವು ಹೆಕ್ಕಿ ನೀಡುವ ಉತ್ತಮ ಮಾಹಿತಿಗಳಿಂದ , ಸಂಕ್ರಾಂತಿ ಬಗ್ಗೆ ಎಷ್ಟೊಂದು ಮಾಹಿತಿ ನೀಡಿದ್ದೀರಿ ,ಹಾಗೆ ನಿಮ್ಮ ಲೇಖನ ನನ್ನ ಬಾಲ್ಯದ ದಿನಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮನೆಯಲ್ಲಿ ಎಳ್ಳನ್ನು ಉಜ್ಜುತ್ತಿದ್ದ ,ಕೊಬ್ಬರಿ ಹೆಚ್ಚುತಿದ್ದ, ಕಡಲೆ ,ಕಡಲೇಕಾಯಿ ಬೀಜ ಬೆಲ್ಲ ಇವುಗಳ ಹದವಾದ ಮಿಶ್ರಣ ಮಾಡುತ್ತಿದ್ದ ಹಾಗು ಸಕ್ಕರೆ ಅಚ್ಚು ತಯಾರಿಸುವಾಗ ನಾವುಗಳು ಮುರಿದುಹೋದ ಅಚ್ಚುಗಳನ್ನು ಗುಳುಂ ಮಾಡುತಿದ್ದ ತುಂಟಾಟದ ದಿನಗಳಿಗೆ ಕರೆದೊಯ್ದಿತ್ತು.ನಿಮಗೆ ಥ್ಯಾಂಕ್ಸ್.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 19. ಮಾಹಿತಿಯುಕ್ತ ಲೇಖನಕ್ಕೆ ವಂದನೆಗಳು.

  ReplyDelete
 20. @ ಸುಗುಣರವರೆ,

  ನೀವು ಕಳುಹಿಸಿದ `ಮರಳ ಮಲ್ಲಿಗೆ'ಯಲ್ಲಿ ವೀಣಾ ಕುಲಕರ್ಣಿಯವರ `ಸುಗ್ಗಿಯ ಸ೦ಕ್ರಾ೦ತಿ ಹಬ್ಬ' ಲೇಖನದಿ೦ದ ಮಾಹಿತಿಯನ್ನು ಪಡೆದಿದ್ದೇನೆ. ಅದಕ್ಕಾಗಿ ಹಾಗೂ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ

  ನಿಮಗೂ ಧನ್ಯವಾದಗಳು.

  ReplyDelete
 21. @ ಸಾನ್ವಿಯ ತ೦ದೆಯವರೇ,
  ಲೇಖನ ಮಾಹಿತಿಯುಕ್ತವಾಗಲು ಪರೋಕ್ಷವಾಗಿ ಸಹಕರಿಸಿದ ಲೇಖಕರಿಗೆ ವ೦ದಿಸುತ್ತಾ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

  ReplyDelete