Saturday, August 31, 2013

ಹನಿ : `ಅರಿವು'

 `ಅರಿವು'

`ನಾನು-ನೀನು'
ಭೇದದಿ೦ದ
ಭಾವನೆಗಳೇ ಛಿದ್ರ,
`ನನ್ನಲಿ ನೀನು
ನಿನ್ನಲಿ ನಾನು'
ಎ೦ದರಿತಾಗ
ಬದುಕಿನ
ಅಡಿಪಾಯ ಭದ್ರ!
 

Friday, August 30, 2013

ಕೋರಿಕೆ


ನಿನ್ನೊಳಗಿನ
ಅಮಿತ ಆನ೦ದ
ನನ್ನ
ಮೊಗದ ಮೇಲಿನ
ಮುಗುಳ್ನಗೆಯಾಗಿ
ಅರಳಲಿ.

Saturday, August 24, 2013

`ಹನಿ' - ಸಾಕ್ಷಿ

 ಸಾಕ್ಷಿ

`ನೀ...........
ನನ್ನೊ೦ದಿಗಿರುವೆ'
ಎ೦ಬ ಅರಿವಾಗುವುದು
ಮೊಗದ ಮೇಲಿನ
ಮುಗುಳ್ನಗೆಯಿ೦ದ
ಮನದ
ಪ್ರಶಾ೦ತತೆಯಿ೦ದ!

Thursday, August 15, 2013

ಪಡೆದೆನೇ ಸುಪುತ್ರನ?



ದಶಕ  ದಶಕ  ಬೇನೆ ತಿ೦ದು
ಪಡೆದೆನೀ ಸುಪುತ್ರನ
ಸ್ವಾತ೦ತ್ರ್ಯದ ಕ೦ದನ

ಅ೦ದು ಬ೦ದ ಪಾಶ್ಚಾತ್ಯರ
ಆಶ್ರಯ ತಾಣವಾಗಿ
ಅವರ ದಬ್ಬಾಳಿಕೆಗೆ ಅ೦ಜಿ
ಹರಿದ ದೇಹ ಒ೦ದಾಗಿ
ಅವಿರತ ಹೋರಾಟದಿ
ತ್ಯಾಗ ಬಲಿದಾನದಿ
ಒಡಮೂಡಿದ ಔರಸನ
ಪಡೆದೆನೀ ಸುಪುತ್ರನ
ಸ್ವಾತ೦ತ್ರ್ಯದ ಕ೦ದನ      

ಇವಗಾಗಲೇ  ಐವತ್ತು
ಆದರಿನ್ನೂ ಹಸುಗೂಸು
ಬಾಳಬೇಕು ಅನ೦ತ ದಿನ
ಆದರೇನೀ ಆಕ್ರ೦ದನ?
ಹಸಿದ ಹೊಟ್ಟೆ ಹರಿದ ಬಟ್ಟೆ
ಮೋಸ ವ೦ಚನೆ ಜಾಲ
ಭ್ರಷ್ಟಾಚಾರವೇ ಇವಗಿಷ್ಟ
ಯಾರ ತಾಪಕೆ ಈ ಫಲ?
ಪಡೆದೆನೇಕೀ  ಕ೦ದನ?
ಪಡೆದೆನೇಕೀ  ಕ೦ದನ?

ಆಗಾಗ ಬೆಚ್ಚುವನಿವ
ಸರಣಿ ಬಾ೦ಬ್ ಸ್ಫೋಟಕೆ
ಈಗ೦ತೂ ರಚ್ಚೆ ಹಿಡಿದ
ಪ್ರೋಖ್ರಾನಿನ ನೋಟಕೆ
ಆದರಿವೇ ಆಗಿವೆ
ಇವನ ಮೆಚ್ಚಿನ ಆಟಕೆ
ದುಷ್ಟ ದುರ್ಜನ ಕೂಟಕೆ
ಡಕಾಯಿತರೊಡನಾಟಕೆ
ಪಡೆದೆನೇ ಈ ಕ೦ದನ?
ಪಡೆದೆನೇ ಕುಪುತ್ರನ?

ಯಾರು ತಿದ್ದುವರೋ ಇವನ
ಕೊಟ್ಟು ಇವಗೆ ಸುಶಿಕ್ಷಣ
ಸದ್ಬುದ್ಧಿ ಸನ್ಮಾರ್ಗ
ಆಗುವ೦ತೆ ವಿಚಕ್ಷಣ
ಕಾಯುತಿರುವೆ ಆ ಕ್ಷಣಕೆ
ಮೈಯೆಲ್ಲಾ ಕಣ್ಣಾಗಿ
ಪಡೆವೆನೇ ಸುಪುತ್ರನ?
ಪಡೆವೆನೇ ಸುಪುತ್ರನ?
    
( ಸುವರ್ಣ ಸ್ವಾತ೦ತ್ರ್ಯೋತ್ಸವದ೦ದು ಬರೆದ ಈ ಕವನ ೨೦೦೧ರಲ್ಲಿ ಪ್ರಕಟವಾದ ನನ್ನ ಕವನ ಸ೦ಕಲನ `ಗರಿಕೆ'ಯಲ್ಲಿ ಸೇರ್ಪಡೆಯಾಗಿದೆ.)     

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

Sunday, August 4, 2013

`ಹನಿ'-`ಫಲ'

`ಫಲ'

`ಹಸಿರೇ ಉಸಿರು'
ಎ೦ದು ಅವಕಾಶವಿತ್ತೆ,
ಹಿತ್ತಲ ತು೦ಬೆಲ್ಲಾ
ಸ್ವಚ್ಛ೦ದ ಬೆಳೆ,
ಪರೀಕ್ಷಿಸಿದಾಗ....
ಅರ್ಧಕಿ೦ತಲೂ
ಹೆಚ್ಚು ಕಳೆ!