Thursday, December 14, 2023

ಸ್ವೀಟ್ 60' ಯ ವಿಮರ್ಶೆ 'ಜನತಾ ಮಾಧ್ಯಮ' ಪತ್ರಿಕೆಯಲ್ಲಿ🌼


ಸ್ವೀಟ್ 60' ಯ ವಿಮರ್ಶೆ 'ಜನತಾ ಮಾಧ್ಯಮ' ಪತ್ರಿಕೆಯಲ್ಲಿ🌼



 

ಲಲಿತ ಪ್ರಬಂಧ 'ಸ್ವೀಟ್ 60' ಗೆ ವಿಮರ್ಶೆ👌❤️

 ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರಿಂದ ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ಪ್ರೀತಿಯ ವಿಮರ್ಶೆ👌❤️

ಹಿರಿಯ ಲೇಖಕಿ ಶ್ರೀಮತಿ ಪ್ರಭಾಮಣಿ ನಾಗರಾಜ್ ಅವರ ' ಸ್ವೀಟ್ 60 ' ಪ್ರಬಂಧ ಸಂಕಲನವನ್ನು ಓದುತ್ತಾ ಹೋದಂತೆ ಅದು ಒಂದು ಸುಂದರ, ಲಾಲಿತ್ಯಪೂರ್ಣ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಮುನ್ನುಡಿ ಬೆನ್ನುಡಿಗಳ ಹಂಗಿಲ್ಲದೆ ತನ್ನ ಸತ್ವಯುತ ಪ್ರಬಂಧಗಳ ಮೂಲಕವೇ ಗಮನ ಸೆಳೆಯುವಷ್ಟು ಶಕ್ತವಾದ ಈ ಕೃತಿ ನಾನು ಇತ್ತೀಚೆಗೆ ಓದಿದ ಪ್ರಬಂಧ ಸಂಕಲನಗಳಲ್ಲೇ ಮೇರು ಮಟ್ಟದಲ್ಲಿ ನಿಲ್ಲುವಂತಹದ್ದು. ವಸ್ತು, ಬರವಣಿಗೆಯ ಶೈಲಿ, ಅದರಲ್ಲಿರುವ ಸತ್ವ, ರಂಜನೆ, ಮೌಲ್ಯ ಎಲ್ಲಾ ಸಮಪಾಕಗೊಂಡು ಹದವಾದ ಹದಿನೇಳು ಪ್ರಬಂಧಗಳನ್ನು ಓದುಗರಿಗೆ ಲೇಖಕಿ ಉಣಬಡಿಸುತ್ತಾ ಸಾಗುವರು. ಒಮ್ಮೆ ಓದಲು ಪ್ರಾರಂಭಿಸಿದರೆ ಮಾಸದ ಮುಗುಳ್ನಗೆ ಮುಖದಲ್ಲಿ ನೆಲೆಸುತ್ತದೆ.
       ಸಾಹಿತ್ಯ ನಿರ್ಮಿತಿ ಸಾಮಾನ್ಯವಾಗಿ ಆಯಾ ವ್ಯಕ್ತಿಗಳು ಬೆಳೆದಂತಹ ಪರಿಸರ ಹಾಗು ಕಾಲ ಎರಡನ್ನೂ ಅಭಿವ್ಯಕ್ತಿಸುತ್ತದೆ. ಬಾಲ್ಯದಲ್ಲಿ ತಾವು ಧರಿಸುತ್ತಿದ್ದ ಉದ್ದ ಲಂಗ, ರವಿಕೆಗಳಲ್ಲಿ ಒಂದಾದರೂ ಜೇಬಿರದೆ, ಮಂಡಿಯ ಮೇಲಿದ್ದ ತಮ್ಮನ ನಿಕ್ಕರಿನಲ್ಲಿ ಮೂರು ನಾಲ್ಕು ಜೇಬುಗಳಿದ್ದು ಅವು ವಿಶೇಷ ಖಾದ್ಯಗಳಿಂದ ತುಂಬಿ ತುಳುಕುತ್ತಾ ಅವನ ಜಿಹ್ವೆಯನ್ನು ಕ್ರಿಯಾಶೀಲವಾಗಿರಿಸಿ ರಾತ್ರಿ ಎಚ್ಚರವಾದಾಗಲೂ ಚಕ್ಕುಲಿ, ಕೋಡುಬಳೆ ಮುಚ್ಚೋರೆಗಳ ಕಟಂ ಕುಟುಂ ಶಬ್ದ ಕೇಳುತ್ತಾ ಇದ್ದುದನ್ನು ' ಜೇಬಾಯಣ ' ದಲ್ಲಿ ಸುಲಲಿತವಾಗಿ, ನವಿರಾಗಿ ತೆರೆದಿಡುತ್ತಾ ಓದುಗರಿಗೆ ಆಪ್ತವಾಗುತ್ತಾ ಹೋಗುತ್ತಾರೆ. ಇಂತಹ ಜೇಬುಗಳಿಂದ ಉಂಟಾದ ವಿಶೇಷ ಶಕ್ತಿ ಸಂಚಯನದಿಂದ ಫೈಟಿಂಗ್ ನಲ್ಲಿ ಆತ ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದ ಬಗೆಯನ್ನು ಬಹಳ ವಿನೋದವಾಗಿ ದಾಖಲಿಸಿದ್ದಾರೆ. ಗಿಡದಲ್ಲಿ ಹೂವು ಅರಳಿದಂತೆ ಸಹಜವಾಗಿ ನಗು ಉಕ್ಕಿಸುವ ಶೈಲಿ ಇವರದು.
       ಹೊಸ ಮನೆಗೆ ಬಂದ ಹೊಸತರಲ್ಲಿ ರಾತ್ರಿ ಉಳಿದ ಅನ್ನವನ್ನು ಆಚೆ ಹಾಕಲು ಕೊಂಡೊಯ್ದು ಆ ಕಡೆ ನಾಯಿಗಳನ್ನು ಏನೆಂದು ಕರೆಯುತ್ತಾರೋ ಎಂದು ಯೋಚಿಸುತ್ತಾ ಶ್ವಾನಗಳಿಗಾಗಿ ದೃಷ್ಟಿ ಹಾಯಿಸುವಾಗ ಸೂಕರವೊಂದು ವಿಚಿತ್ರ ರೀತಿಯಲ್ಲಿ ಗುಟುರು ಹಾಕುತ್ತಾ ನುಗ್ಗಿ ಬಂದಾಗ ಅನ್ನದ ತಟ್ಟೆಯನ್ನು ಎಸೆದು ಒಳಗೋಡಿದ್ದು.... ರಾಡಿನೀರಿನಲ್ಲಿ ಕ್ರೀಡಿಸಿದ ನಂತರ ಸೂರ್ಯಸ್ನಾನ ಮಾಡಿ ಮೈಯೊಣಗಿಸಿಕೊಂಡ ವರಾಹಗಳು ಆಯುರ್ವೇದ ಚಿಕಿತ್ಸೆ ಪಡೆದು ಮೃತ್ತಿಕೆಯನ್ನು ಮೈಗೆಲ್ಲಾ ಬಳಿದುಕೊಂಡ ಆರೋಗ್ಯಾನ್ವೇಷಿಗಳಂತೆ ಕಾಣುತ್ತಿದ್ದವು ಎಂಬಂತಹ ವಿವರಣೆಗಳು ಇಲ್ಲಿನ ಪ್ರಬಂಧದ ಚಿತ್ರಗಳಿಗೆ ಚಿನ್ನದ ಅಂಚನ್ನು ಕಟ್ಟಿಕೊಡುತ್ತದೆ.
        ' ಸ್ವೀಟ್ 60 ' ಪ್ರಬಂಧದಲ್ಲಿ ಬಾಲ್ಯವನ್ನು ಎಷ್ಟು ಸಡಗರ, ಸಂಭ್ರಮ, ಕುತೂಹಲದಿಂದ ಕಳೆಯುತ್ತೇವೆಯೋ ವೃದ್ಧಾಪ್ಯವನ್ನೂ ಕೂಡ ಅದೇ ರೀತಿ ನೋಡಬೇಕೆಂಬ ಉಮೇದು ಲೇಖಕಿಯದು. ಅರವತ್ತು ತಲುಪುವ ಎಲ್ಲಾ ಮಾನವ ಜೀವಿಗಳೂ ಹದಿನಾರು ಎಂದು ಕರೆಸಿಕೊಳ್ಳುವ ಮೋಹ ಪರ್ವವನ್ನು ದಾಟಿಯೇ ಬಂದಿರುತ್ತವೆ. ಬಲ್ಲವರು ಮಾತ್ರ ಬಲ್ಲರು ಈ 60ರ ಬಲ್ಲಿದ ರುಚಿಯ, ಕಾಲಾತೀತವಾದ ಈ ಬದುಕಿನಲ್ಲಿ ಎಂಥಾ ಆನಂದವಿದೆ ! ಎಂದು ರಸವತ್ತಾಗಿ ನಿರೂಪಿಸುತ್ತಾ ಹೋಗುವರು.
     ನೆನಪುಗಳನ್ನು ಆಧರಿಸಿ ಹುಟ್ಟಿರುವ ಈ ಪ್ರಬಂಧಗಳಿಗೆ ಆತ್ಮಕಥನದ ಗುಣವೂ ಸೇರಿಕೊಂಡಿದೆ. ಇಲ್ಲಿ ಜೀವಂತ ಪಾತ್ರಗಳಿವೆ. ಅವುಗಳಲ್ಲೆಲ್ಲ ಮತ್ತೆ ಮತ್ತೆ ಕಾಡುವುದು ಅವರ ಅಮ್ಮನ ಪಾತ್ರ. ' ಮುಂಜಾನೆಯ ಸವಿ ನಿದ್ದೆಯ ಹೊದಿಕೆ ಸರಿಸುವ ನಗೆ ಮೊಗದ ಅಮ್ಮಾ, ಬಾಚಿದ ತುರುಬಿಗೆ ದಂಡೆಮಲ್ಲಿಗೆ, ನೊಸಲ ಕುಂಕುಮದ ಸಿಂಗಾರ, ಅಂಗಳಕ್ಕೆ ರಂಗೋಲಿ ಚಿತ್ತಾರ....' ಎನ್ನುತ್ತಾ ಅಮ್ಮನ ಬಗ್ಗೆ ತಾವೇ ಬರೆದ ಕವನದ ಸಾಲುಗಳನ್ನು ನೆನೆಯುವರು. ತನ್ನಮ್ಮ ಅವಿಭಕ್ತ ಕುಟುಂಬದ ಅಂತ್ಯವಿಲ್ಲದ ಕೆಲಸಗಳನ್ನು ಮಾಡುತ್ತಾ ಮೂಗಿಗೆ ಕವಡೆ ಕಟ್ಟಿದ ಮೂಕಪಶುವಿನಂತೆ ದುಡಿಯುತ್ತಿದ್ದುದು... ಹಗಲೆಲ್ಲಾ ಮನೆ, ಜಮೀನಿನಲ್ಲಿ ದುಡಿಯುತ್ತಿದ್ದ ಅಮ್ಮ ರಾತ್ರಿ, ಎಲ್ಲಾ ಕೆಲಸಗಳೂ ಮುಗಿದ ನಂತರ ಬುಡ್ಡಿ ದೀಪದಲ್ಲೇ ಪುಸ್ತಕಗಳನ್ನು ಓದುತ್ತಿದ್ದುದು, ಲೈಬ್ರರಿಯಿಂದ ತಂದು ಕೊಡುತ್ತಿದ್ದ ಕಾದಂಬರಿಗಳನ್ನು ರಾತ್ರಿ ಎಲ್ಲಾ ಕುಳಿತು ಓದಿ ಮುಗಿಸುತ್ತಿದ್ದುದು, ಇದರೊಂದಿಗೆ ಅವರ ಮನೆಯಲ್ಲೂ ಓದಿನ ವಾತಾವರಣವಿದ್ದು ಅವರ ತಂದೆ, ಸೋದರತ್ತೆ, ಅಕ್ಕ ಎಲ್ಲರೂ ತಾವು ಓದಿದ ಪುಸ್ತಕಗಳ ಬಗ್ಗೆ ಬಿಡುವಿನ ಸಮಯ ಕುಳಿತು ಚರ್ಚಿಸುತ್ತಿದ್ದುದನ್ನು ನೆನೆಯುವರು. ಬಹುಶಃ ಈ ಒಂದು ಅಧ್ಯಯನಶೀಲತೆ ಹಾಗೂ ಸಾಹಿತ್ಯಕ ವಾತಾವರಣವೇ ಲೇಖಕಿಯ ಬರಹದ ಗಟ್ಟಿತನಕ್ಕೆ ಒಂದು ಸೂಕ್ತ ಬುನಾದಿಯಾಗಿರಬಹುದು.
      ' ಕರವಸ್ತ್ರೋಪಾಖ್ಯಾನ 'ದಲ್ಲಿ ಕೈಯಲ್ಲಿ ಹಿಡಿಯುವ ವಸ್ತ್ರವೇ ಕರ ವಸ್ತ್ರವಾಗಿ ಜೇಬಿನಲ್ಲಿ ಬೆಚ್ಚಗೆ ಕೂರುವುದರಿಂದ ಅದು ಜೇಬು ವಸ್ತ್ರವೆಂದೂ, ಲೇಡೀಸ್ ಕರ್ಚಿಫ್ ಗಳು ಬಣ್ಣದ ಹೂಗಳಿಂದ ಕೂಡಿ ಸುಂದರವಾಗಿದ್ದರೂ ಕೇವಲ ಅಂಗೈಯಗಲವಿದ್ದು ಒಂದು ಕಿರುಬೆರಳನ್ನು ಒರೆಸಲೂ ಸಾಧ್ಯವಾಗದೆ ಅದನ್ನು ಕಿರುವಸ್ತ್ರ ವೆನ್ನಬಹುದು ಎನ್ನುವರು. ಕರಕ್ಕೆ ಚೀಫ್ ಆಗಿರುವ ಎಂದರೆ... ಕೈಗೆ ಪ್ರಧಾನವಾಗಿರುವ ವಸ್ತ್ರವಾದ್ದರಿಂದ ಇದು ಕರ್ಚೀಫ್ ಆಗಿರಬಹುದು ಎನ್ನುತ್ತಾ ಕರ್ಚಿಫ್ ಪದದ ಮೂಲವನ್ನು ಕೆದಕುವರು. ಜನ್ಮಕ್ಕಂಟಿದ ನೆಗಡಿಯವರಿಗೆ ಕರ್ಚಿಫ್ ಕೈಯಲ್ಲಿರಲೇಬೇಕು ಅದನ್ನು ಅವರು ಕೈಗೂ ಮೂಗಿಗೂ ಸೇತುವಾಗಿ ಬಳಸುವರು. ಗಾಂಧಾರಿ ಕಣ್ಣಿಗೆ ಕಟ್ಟಿಕೊಂಡ ಕರವಸ್ತ್ರದಿಂದ ಮಹಾ ಗ್ರಂಥಗಳಲ್ಲೂ ಕರ್ಚೀಫ್  ಸ್ಥಾನ ಪಡೆದುಕೊಂಡಿತೆಂದು ಹೇಳುವಾಗ ನಗುವಿನ ಜೊತೆ ಇನ್ನೊಂದು ಮಗ್ಗುಲಿನಿಂದ ಹೊಸ ದೃಷ್ಟಿಕೋನದ ಗಂಭೀರ ಎಳೆಯೊಂದು ಕೂಡಾ ನಮ್ಮ ಚಿಂತನೆಯ ಭಾಗವಾಗುತ್ತದೆ.
    ಯಾವುದೇ ಖಾಯಿಲೆಯಾಗಲೀ ಅದಕ್ಕೊಂದು ಘನತೆ ಇರುತ್ತದೆ. ಆದರೆ ಈ ಕೆಮ್ಮು ಅಂತಹ ಯಾವುದೇ ಮರ್ಯಾದೆಯನ್ನೂ ಪಡೆದು ಬಂದಿಲ್ಲ. ಒಮ್ಮೆ ಕೆಮ್ಮಲು ಪ್ರಾರಂಭಿಸಿದರೆ ' ಹಾಳು ಅನಿಷ್ಠ ಕೆಮ್ಮು....' ಎನ್ನುತ್ತಾ ಕೆಮ್ಮಿನೊಂದಿಗೆ ಕೆಮ್ಮುವವರನ್ನೂ ತುಚ್ಚೀಕರಿಸುವುದನ್ನು ವಿನೋದವಾಗಿ ನಿರೂಪಿಸುವರು. ತೆಲುಗಿನ ರಾಮುಲು, ಕೃಷ್ಣಲುವಿನಂತೆ ಕೆಮ್ಮುಲು ಕೂಡ ತೆಲುಗಿನದೇ ಇರಬಹುದು ಎಂದು ಹೇಳುವಾಗ ನಗೆ ಉಕ್ಕಿ ಬರುವುದು. ಇಂತಹ ಸಾಲುಗಳು ಓದಿನ ಖುಷಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ.
      ಸಹಜ, ನಿರ್ಮಲ ನಗೆ ಹೊಮ್ಮಿಸುವ ಶುದ್ಧ ಹಾಸ್ಯ ಲಹರಿಯ ಹತಾರಗಳು ಇವರ ಬತ್ತಳಿಕೆಯಲ್ಲಿ ಸಾಕಷ್ಟು ಇವೆ. ಆಧುನಿಕ ಸಂವೇದನೆ, ಸೂಕ್ಷ್ಮತೆಗಳ ಜೊತೆಗೆ ಭಾಷೆಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವ ಕಲೆ ಲೇಖಕಿಗೆ ಒಲಿದಿದೆ. ಮಾನವೀಯ ಮೃದು ಮಧುರ ಅನುಭವಗಳನ್ನು ಬಿಚ್ಚಿಡುತ್ತಾ ಅಕ್ಷರಗಳ ಮೂಲಕ ಹಂಚುವ ಪರಿ ನಿಜಕ್ಕೂ ಅಭಿನಂದನೀಯ. ಓದಿ ಮುಗಿದು ಎಷ್ಟೋ ಹೊತ್ತಾದರೂ ಮನದಲ್ಲಿ ಕೆಲವು ಪದಗಳು, ಸಾಲುಗಳು ರಿಂಗಣಿಸುತ್ತಿರುತ್ತವೆ. 2018 ರ ನುಗ್ಗೆ ಹಳ್ಳಿ ಪಂಕಜ ದತ್ತಿನಿಧಿ ಬಹುಮಾನವೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಈ ' ಸ್ವೀಟ್ 60 ' ಪ್ರಬಂಧ ಸಂಕಲನ ಭಾಜನವಾಗಿದೆ. ಅತ್ಯುತ್ತಮ ಮನಸ್ಸಿನ ಲಹರಿ ಮಿಡಿತಗಳಂತಿರುವ ಈ ಪ್ರಬಂಧಗಳನ್ನು ಎಲ್ಲರೂ ಒಮ್ಮೆಯಾದರೂ ಓದಿ ಆನಂದಿಸಬೇಕು.



(ನವೆಂಬರ್17,2023ರ FB ಯಲ್ಲಿ ಪ್ರಕಟವಾಗಿದೆ.)





Sunday, November 26, 2023

🪔ಬೆಳಕ ಹನಿಗಳು🪔:


ನವೆಂಬರ್12ರಿಂದ 26ರವರೆಗೆ ಫೇಸ್ಬುಕ್ ನಲ್ಲಿ ಹಂಚಿಕೊಂಡ 🪔ಬೆಳಕ ಹನಿಗಳು🪔:
1.🪔ಸೃಜನಶೀಲತೆ🪔
2.🪔ಸಾರ್ಥಕ್ಯ🪔
3. 🪔ಪ್ರಣತಿ🪔  
4. 🪔ಅಲ್ಪ-ತೃಪ್ತ🪔
5🪔ಅಲ್ಪ ಕಾರ್ಯ 🪔
6. 🪔ಅತಂತ್ರ 🪔
7. 🪔ತೃಪ್ತಿ 🪔
8.🪔ಬಹು-ಮಾನ
9.🪔 ಮೃತ್ಯು ಚುಂಬನ 🪔
10.🪔 ಸಾಫಲ್ಯ? 🪔
11.🪔 ಅರಿವು!🪔
12.🪔 ತಮಸೋಮಾ🪔

13.🪔 ವೈರುಧ್ಯ🪔

14.🪔 ಸಾಪೇಕ್ಷ🪔
15.🪔 ಕೋರಿಕೆ🪔





 



















Wednesday, November 1, 2023

ಡಾ. ಕೃಷ್ಣಮೂರ್ತಿ ಸರ್ ರವರು ನನ್ನನ್ನು ಚಿತ್ರಿಸಿದ್ದು ಹೀಗೆ👌🙏

 


ನನ್ನ ಹುಟ್ಟಿದ ಹಬ್ಬದ ದಿನದಂದು(ಅಕ್ಟೋಬರ್28) ಡಾ. ಕೃಷ್ಣಮೂರ್ತಿ ಸರ್ ರವರು ನನಗೇ ಅಚ್ಚರಿಯಾಗುವಷ್ಟು ಚೆನ್ನಾಗಿ ನನ್ನನ್ನು ಚಿತ್ರಿಸಿ ಶುಭ ಹಾರೈಸಿದ್ದು  ಹೀಗೆ🙏
'ಸಾಹಿತ್ಯ,ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ, ಬಹಳಷ್ಟು ಸಾಧನೆ ಮಾಡಿರುವ ಹೆಸರಾಂತ ಕವಿಯಿತ್ರಿ ಮತ್ತು ಲೇಖಕಿ,ಶ್ರೀಮತಿ ಪ್ರಭಾಮಣಿ ನಾಗರಾಜ್ ಮೇಡಂ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐💐💐💐🎂🎂🎂🎂🎂🎂🎂 Prabha Mani .'


ನಿಮ್ಮ ಪ್ರೀತಿಪೂರ್ವಕ ಶುಭ ಹಾರೈಕೆಗಳಿಗೆ ನನ್ನ  ಹೃತ್ಪೂರ್ವಕ ಧನ್ಯವಾದಗಳು ಸರ್❤️🙏ನಿಮ್ಮ  ಕಲಾತ್ಮಕತೆಗೆ, ಅದರ ಹಿಂದಿನ ಪರಿಶ್ರಮದ  ವಿಶ್ವಾಸಕ್ಕೆ ನನ್ನ ಅನಂತ ಕೃತಜ್ಞತೆಗಳು🙏❤️🙏

Saturday, October 28, 2023

ತಿರು ಶ್ರೀಧರ್ ಸರ್ 🙏

ಆತ್ಮೀಯ ಶ್ರೀಧರ್ ಸರ್, ನಿಮ್ಮ ಪ್ರೀತಿಪೂರ್ವಕ ಶುಭ ಹಾರೈಕೆಗಳಿಗೆ ಹೃತ್ಪೂರ್ವಕ ನಮನಗಳು. ನಿಮ್ಮ  ವಿಷಯಗಳ ಕ್ರೂಢೀಕರಣ, ಉತ್ತಮ ಜೋಡಣೆ, ಪ್ರಬುದ್ಧ ನಿರೂಪಣೆಗಳ ಹಿಂದಿರುವ ವಿಶ್ವಾಸಕ್ಕೆ ನನ್ನ ಅನಂತ ಕೃತಜ್ಞತೆಗಳು🙏❤️🙏


 ಪ್ರಭಾಮಣಿ ನಾಗರಾಜ

Happy birthday Prabha Mani 🌷🙏🌷


ಪ್ರಭಾಮಣಿನಾಗರಾಜ ಎಂಬ ಕಾವ್ಯನಾಮದ ಎಚ್. ಡಿ. ಪ್ರಭಾಮಣಿ ಅವರು ಸಾಹಿತ್ಯ, ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕರಾಗಿದ್ದಾರೆ.


ಪ್ರಭಾಮಣಿ ಅವರು 1954ರ ಅಕ್ಟೋಬರ್ 28ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ, ಶ್ರೀನಿವಾಸಪುರದಲ್ಲಿ ಜನಿಸಿದರು. ತಂದೆ ದಕ್ಷಿಣಾಮೂರ್ತಿ ಜೋಯಿಸ್.  ತಾಯಿ ಸುಬ್ಬಲಕ್ಷ್ಮಮ್ಮ.  ಪ್ರಭಾಮಣಿ ಅವರು ಬಿ.ಎಸ್‍ಸಿ, ಬಿ.ಎಡ್ ಪದವಿಗಳನ್ನು ಗಳಿಸಿದರು. 


ಪ್ರಭಾಮಣಿ ಅವರು ಪ್ರೌಢಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕಿಯಾಗಿ, ಚೈತನ್ಯ ಸಂಪನ್ಮೂಲ ವ್ಯಕ್ತಿಯಾಗಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿ, ಕ್ಲಸ್ಟರ್ ಸಹಾಯಕ ಶಿಕ್ಷಣಾಧಿಕಾರಿ(CAEO)ಯಾಗಿ,  ವಿಷಯ ಪರಿವೀಕ್ಷಕರಾಗಿ (subject inspector) ವೃತ್ತಿ ಜವಾಬ್ದಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅವರು ಹಾಸನದಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ಸಕ್ರಿಯರಾಗಿದ್ದಾರೆ. ಅವರದ್ದೇ pratheekshe.blogspot.com ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಕ್ರಿಯರಾಗಿ ಬರಹ ಮಾಡುತ್ತಿದ್ದಾರೆ. ಇವರ ಸಾಹಿತ್ಯ ಸಂಬಂಧಿ ವಿಡಿಯೊಗಳು ಯೂಟ್ಯೂಬ್‍ನಲ್ಲಿವೆ.

 

ಪ್ರಭಾಮಣಿ ಅವರ ಕಥೆ, ಕವನ, ಹಾಸ್ಯಬರಹ, ಹನಿಗವನ, ಲಲಿತ ಪ್ರಬಂಧಗಳು ಮುಂತಾದ ಬರಹ ವೈವಿಧ್ಯಗಳು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ನಗೆಮುಗುಳು, ಕರ್ಮವೀರ, ಮಯೂರ, ಮಂಗಳ, (ಕರ್ಮವೀರ ಮತ್ತು ಮಂಗಳ ದೀಪಾವಳಿ ವಿಶೇಷಾಂಕಗಳು), ಸುಧಾ, ಉದಯವಾಣಿ, ವಿಕ್ರಮ, ದಿಗಂತ, ತುಷಾರ, ಅಕ್ಷಯ, ಹೊರನಾಡ ಸಂಗಾತಿ, ಸಂಚಯ, ಸಂಕ್ರಮಣ, ಸಮಾಜಮುಖಿ, ಲಕ್ನೋಕನ್ನಡಿಗ, ಮುಂತಾದ ರಾಜ್ಯಮಟ್ಟದ ಹಾಗೂ ಸ್ಥಳೀಯ ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿಶೇಷಾಂಕಗಳಲ್ಲಿ, ‘ಕೆಂಡಸಂಪಿಗೆ’, 'ಪಂಜು', 'ಮರಳ ಮಲ್ಲಿಗೆ’(ಕುವೈತ್ ಅಂತರ್ಜಾಲ ಪತ್ರಿಕೆ) ಮುಂತಾದ ಅಂತರ್ಜಾಲ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತ ಬಂದಿವೆ.  ಇವರ ಕಾರ್ಯಕ್ರಮಗಳು ಆಕಾಶವಾಣಿ, ಹಾಸನ ಕೇಂದ್ರದಿಂದ ಬಿತ್ತರವಾಗಿವೆ. 'ಹಾಸನವಾಣಿ’ ಪತ್ರಿಕೆಯಲ್ಲಿ ಇವರ 'ಮನದ ಅಂಗಳದಿ..........’ ಅಂಕಣ ಬರಹವು 100ಕಂತುಗಳಲ್ಲಿ ಪ್ರಕಟವಾಗಿದೆ. ಇವರ

‘ಗರಿಕೆ’ ಕವನವು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯವರು ಪ್ರಕಟಿಸುವ ಕವಿತೆ-2000 ವಾರ್ಷಿಕ ಸಂಕಲನದಲ್ಲಿ ಸೇರ್ಪಡೆಯಾಗಿದೆ. 'ಒಳಗಿನೊಳಗು’ ಎಂಬ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಸುವರ್ಣ ಸಂಭ್ರಮ2014ರ ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ,  ಆ ಪ್ರಯುಕ್ತ ಪ್ರಕಟಿಸಿದ ರಾಜ್ಯಮಟ್ಟದ ಕವನ ಸಂಕಲನದಲ್ಲಿ ಸೇರ್ಪಡೆಯಾಗಿದೆ. 'ಮನದ ಅಂಗಳದಿ.....’ ಕವನವು ಕುವೈತ್ ಕನ್ನಡ ಕೂಟವು ಪ್ರಕಟಿಸುವ ‘ಮರಳ ಮಲ್ಲಿಗೆ’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. 2010ರಲ್ಲಿ ಇವರು ತಮ್ಮ  ಬ್ಲಾಗ್ 'ಪ್ರತೀಕ್ಷೆ’ಯನ್ನು ಪ್ರಾರಂಭಿಸಿದ ನಂತರ ತಮ್ಮ ಅನೇಕ ಪ್ರಕಟಿತ ಸ್ವರಚಿತ ಹಾಸ್ಯಬರಹ, ಹನಿಗವನ, ಲಲಿತ ಪ್ರಬಂಧಗಳನ್ನು  ಅದರಲ್ಲಿ ಕ್ರೋಡೀಕರಿಸಿದ್ದಾರೆ. ಇವರ ಲಲಿತ ಪ್ರಬಂಧ 'ಸ್ವೀಟ್60’ಯು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯವರು ಪ್ರಕಟಿಸುವ ಲಲಿತ ಪ್ರಬಂಧ -2016 ವಾರ್ಷಿಕ ಸಂಕಲನದಲ್ಲಿ ಸೇರ್ಪಡೆಯಾಗಿದೆ.  2014ರಲ್ಲಿ ಸ್ನೇಹಬಳಗ, ಮೈಸೂರು, ಇವರು ಹೊರತಂದಿರುವ, 'ಹಾಸ್ಯದ ಹೊನಲು’ ಹಾಸ್ಯ ಲೇಖನಗಳ ಸಂಕಲನದಲ್ಲಿ ಇವರ ಲಲಿತ ಪ್ರಬಂಧ 'ಜೇಬಾಯಣ!’ ಸೇರ್ಪಡೆಯಾಗಿದೆ.  2017ರಲ್ಲಿ ಸ್ನೇಹಬಳಗ, ಮೈಸೂರು, ಇವರು ಹೊರತಂದಿರುವ 'ಲೇಖಕಿಯರ ಲಲಿತ ಪ್ರಬಂಧಗಳ ಸಂಚಯ’ದಲ್ಲಿ ಇವರ ಲಲಿತ ಪ್ರಬಂಧ 'ವರಾಹಾವತಾರ!’ ಸೇರ್ಪಡೆಯಾಗಿದೆ.

 

ಪ್ರಭಾಮಣಿ ಅವರ  ಪ್ರಕಟಿತ ಕೃತಿಗಳಲ್ಲಿ 'ಗರಿಕೆ', 'ಕಂಡಷ್ಟೇ ಬೆಳಕೆ?' ಕವನ ಸಂಕಲನಗಳು; ‘ನಾವೀಗ ಹೊಸಬರಾಗಬೇಕು.....’ ಕಥಾ ಸಂಕಲನ; ಜಿರಲೆ ಉಂಡೆ’ ಹಾಸ್ಯ ಬರಹಗಳ ಸಂಕಲನ; 

'ಗುಟುಕು’, 'ಗುಟ್ಟು' ಎಂಬ ಹನಿಗವನ ಸಂಕಲನಗಳು;  ‘ಸ್ವೀಟ್60' ಎಂಬ ಲಲಿತ ಪ್ರಬಂಧ ಸಂಕಲನ ಮುಂತಾದವು ಸೇರಿವೆ.

 

ಪ್ರಭಾಮಣಿ ಅವರಿಗೆ ‘ಗರಿಕೆ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ. ಅನಂತ ಸ್ವಾಮಿ ದತ್ತಿ ನಿಧಿ ಪ್ರಶಸ್ತಿ,ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, 'ಜಿರಲೆ ಉಂಡೆ’ ಹಾಸ್ಯ ಬರಹಗಳ ಸಂಕಲನಕ್ಕೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ,  ‘ಗುಟುಕು’ ಹನಿಗವನ ಸಂಕಲನಕ್ಕೆ ಎಮ್.ಜಿ.ರಂಗನಾಥನ್ ಸ್ಮಾರಕ ಪುಸ್ತಕ ಪ್ರಶಸ್ತಿ, ‘ನಾವೀಗ ಹೊಸಬರಾಗಬೇಕು.....’ ಕಥಾ ಸಂಕಲನಕ್ಕೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ,  ಲಲಿತ ಪ್ರಬಂಧ 'ಜೇಬಾಯಣ’ಕ್ಕೆ ಪಡುಕೋಣೆ  ರಮಾನಂದರಾವ್ ಸ್ಮಾರಕ ಹಾಸ್ಯಲೇಖನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ; ಲಲಿತ ಪ್ರಬಂಧ 'ಸ್ವೀಟ್60’ಗೆ 2016ರ 'ಸುಧಾ ಯುಗಾದಿ ವಿಶೇಷಾಂಕ ಪ್ರಬಂಧ ಸ್ಪರ್ಧೆ’ಯ ದ್ವಿತೀಯ ಬಹುಮಾನ, ನುಗ್ಗೇಹಳ್ಳಿ ಪಂಕಜ  ದತ್ತಿ ನಿಧಿ ಬಹುಮಾನ,  ಶಾರದಾ ಆರ್ ರಾವ್  ದತ್ತಿ ಪ್ರಶಸ್ತಿ; 2023ರಲ್ಲಿ ಲಲಿತ ಪ್ರಬಂಧ 'ಅನುಭವಗಳ ಆಗರ ‘ಅಡುಗೆ ಎಂಬ ಸಾಗರ'ಕ್ಕೆ ಧೃತಿ ಮಹಿಳಾ ಮಾರುಕಟ್ಟೆ ಏರ್ಪಡಿಸಿದ್ದ ಅಡುಗೆ ಸಡಗರ ಪ್ರಬಂಧ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ, ಹಂಬಲ’ ಕವಿತೆಗೆ ‘ಸಂಚಯ 2005

ಸಾಹಿತ್ಯ ಸ್ಪರ್ಧೆ’ಯಲ್ಲಿ ಬಹುಮಾನ. ‘ಕಿಡಿ’ ಕವನಕ್ಕೆ ‘ಸಂಕ್ರಮಣ ಸಾಹಿತ್ಯ ಸ್ಪರ್ಧೆ-2001’ರ ಬಹುಮಾನ  ‘ಹಗ್ಗ’ ಕವನಕ್ಕೆ ‘ಹಂಬಲ ಸಾಹಿತ್ಯ ಬಹುಮಾನ’, 'ಗರಿಕೆ’ ಕವನಕ್ಕೆ ಗುಡಿಬಂಡೆ ಪೂರ್ಣಿಮಾ ಸಾಹಿತ್ಯ ಬಹುಮಾನ ಸೇರಿದಂತೆ ಅನೇಕ ಸಂಘ ಸಂಸ್ತೆಗಳ ಪ್ರಶಸ್ತಿ ಬಹುಮಾನಗಳು ಸಂದಿವೆ. 

 

ಪ್ರಭಾಮಣಿ ಅವರು 2003ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವದಲ್ಲಿ ನಡೆದ ಹಾಸ್ಯಗೋಷ್ಠಿಯಲ್ಲಿ; ಉದಯ ಟಿ.ವಿ.ಯವರ ‘ಜಿದ್ದಾಜಿದ್ದಿ' ಕಾರ್ಯಕ್ರಮದಲ್ಲಿ;  2006ರಲ್ಲಿ ಬೀದರ್‍ನಲ್ಲಿ ನಡೆದ ಅಖಿಲ ಭಾರತ 72ನೇ ಕನ್ನಡ ಸಾಹಿತ್ಯ  ಸಮ್ಮೇಳನದ ಹನಿಗವನಗೋಷ್ಠಿಯಲ್ಲಿ, ‘ಕಸ್ತೂರಿ’ ಟಿ.ವಿ.ಯವರ ‘ಜಾಣರ ಜಗಲಿ’ಯಲ್ಲಿ, ಅಷ್ಟಾವಧಾನದಲ್ಲಿ ಆಶುಕವಿಯಾಗಿ, ಹಾಸನ ಜಿಲ್ಲೆಯ 

ಚನ್ನರಾಯಪಟ್ಟಣದ ಪ್ರಥಮ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿ, 2014ರ ಹಾಸನ ಜಿಲ್ಲೆಯ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಪ್ರಬಂಧ ಮಂಡನೆಗಾಗಿ, 2015ರಲ್ಲಿ ಮೈಸೂರಿನ ದಸರಾ ಕವಿಗೋಷ್ಠಿಯಲ್ಲಿ ಹಾಗೂ ಅನೇಕ ಸ್ಥಳೀಯ ಮತ್ತು ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ, ವಿಜ್ಞಾನ, ಮೌಲ್ಯಗಳು ಹಾಗೂ ಹಾಸ್ಯದ (ನಗುವಿನ) ಪ್ರಾಮುಖ್ಯತೆಯ ಬಗ್ಗೆ ಶಾಲಾ-ಕಾಲೇಜುಗಳು ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಭಾಷಣಗಳನ್ನು ಮಾಡಿದ್ದಾರೆ. 81ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಸಂದರ್ಭದಲ್ಲಿ ಪುಸ್ತಕ ಪ್ರಕಟಣಾ ಸಂಪಾದಕ ಮಂಡಲಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ

 

ಪ್ರಭಾಮಣಿ ಅವರು ‘ಚಂದನ’ ಟಿ.ವಿ. ಯಲ್ಲಿ ‘ಮಾಂಗಲ್ಯಂ ತಂತುನಾನೇನ’ ದಲ್ಲಿ, ಸ್ಥಳೀಯ ಟಿ.ವಿ.ಯಲ್ಲಿ, ಆಕಾಶವಾಣಿ, ಹಾಸನ ಕೇಂದ್ರದಲ್ಲಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ, ಸ್ಥಳೀಯ ವಿವಿಧ ಪತ್ರಿಕೆಗಳಲ್ಲಿನ ಸಂದರ್ಶನಗಳಲ್ಲಿ ಹಾಗೂ

ಕರ್ನಾಟಕದ ಕವಯತ್ರಿಯರ ಕಾವ್ಯ ಮತ್ತು ಸಾಧನೆ ಕುರಿತ ಸಾಕ್ಷ್ಯ ಚಿತ್ರದ   ಚಿತ್ರೀಕರಣದಲ್ಲಿ ಮೂಡಿಬಂದಿದ್ದಾರೆ.


ಸಾಧಕರಾದ ಪ್ರಭಾಮಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


(ನಮ್ಮ ಕನ್ನಡ ಸಂಪದ  Kannada Sampada ದಲ್ಲಿ ಮೂಡಿಬರುತ್ತಿರುವ ಲೇಖನಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ)

Tuesday, October 3, 2023

ವಿಮರ್ಶೆ : 'ಇಳಿಸಬೇಕೀಗ ಹೊರೆಯನಿನ್ನು'



 ಇವತ್ತಿನ ಜೇನುಗಿರಿ ಪತ್ರಿಕೆಯ 'ನಾ ಮೆಚ್ಚಿದ ಕವಿತೆ'ಯಲ್ಲಿ ಶಾಂತಾ ಅತ್ನಿಯವರು ವಿಮರ್ಶಿಸಿರುವ ನನ್ನ ಕವನ: 'ಇಳಿಸಬೇಕೀಗ ಹೊರೆಯನಿನ್ನು'



ಕವನ : #ಇಳಿಸಬೇಕೀಗ ಹೊರೆಯನಿನ್ನು

 ಈ ವಾರದ ( 27/9/2023) ಮಂಗಳ ಪತ್ರಿಕೆಯಲ್ಲಿ  ಪ್ರಕಟವಾಗಿರುವ ನನ್ನ ಕವನ :

#ಇಳಿಸಬೇಕೀಗ ಹೊರೆಯನಿನ್ನು

ಹೊತ್ತು ಹೊರಡುವ
ಹೆಗಲ ಚೀಲ
ಮಣ ಭಾರ

ಬಾಯಾರಿಕೆಗೆ  ನೀರಿನ
ಬಾಟಲು 
ಹಸಿವೆಗೆಂದೇ ಬಿಸ್ಕೆಟ್ 
ಸ್ನ್ಯಾಕ್ಸ್ ಗಳು
ಬಿಡುವಿಲ್ಲದಂತೆ ಅಗಿಯಲೇ ಬೇಕಾದ
ಚುಯಿಂಗಮ್ ಚಾಕಲೇಟ್ ಗಳು
ಜೊತೆಗೊಂದಿಷ್ಟು
ಮುಗಿಯದ ಮೆಲುಕುಗಳು

ಮಕ್ಕಳ ಶೀತ ಕೆಮ್ಮುಗಳಿಗೆ
ಟ್ಯಾಬ್ಲೆಟ್  ಸಿರಪ್ಪು
ಗಂಡನ ಗ್ಯಾಸ್ಟ್ರಿಕ್...
ಅತ್ತೆಗೆ ಆಂಟಿಬಯೋಟಿಕ್
ಪೇನ್ ಕಿಲ್ಲರ್
ಅನಾರೋಗ್ಯದ ಅನೇಕಾನೇಕ
ಸಾಧ್ಯಾಸಾಧ್ಯತೆಗಳು
ಸಿದ್ಧತೆಗಳು!

ಪುಟ್ಟ ಕನ್ನಡಿ ಕೂಮ್ಬ್
ವೆಟ್ ಟಿಸ್ಸ್ಯು 
ಮೊಬೈಲ್ ಗೊಂದು ಶಾಶ್ವತ ಖಾನೆ
ಅವರಿವರ ದಾಕ್ಷಿಣ್ಯಕೆ
ತುಂಬುವ ಖಜಾನೆ
ಅಗತ್ಯ ವಸ್ತುಗಳಿಗಿದೇ ತವರು
ಆಕೃತಿಯೋ ದಿನ ತುಂಬಿದ ಬಸಿರು

ತಲೆಯಾಗಿದೆ ನೆನಪುಗಳ 
ಗೋಜಲು ಗೋಜಲು
ಭವಿಷ್ಯದ ಭಯ ತಲ್ಲಣಗಳ 
ಮಜಲು
ಸದಾ ಮೇಲೆತ್ತಲಾಗದ
ಶಿರ ಭಾರ
ಧಾವಂತವೇ ಬದುಕಾದ
ಸುಧೀರ್ಘ ನಿಸ್ಸಾರ

ಕೊಡವಿಕೊಂಡು ಬಿಡಬೇಕು
ನಿನ್ನೆ ನಾಳೆಗಳನೆಲ್ಲಾ
ಪೂರ್ವಾಪರವರಿಯದ
ಎಡರುತೊಡರುಗಳೂ ಸಲ್ಲ

ಬಿಡದಂತೆ 
ಭೂತ ಭವಿಷ್ಯಗಳಲೇ
ಅಂಡಲೆವ
ಅಲೆಮಾರಿ ಜೀವಕೆ
ನೆಮ್ಮದಿಯೆನ್ನುವುದೇ
ಮರೀಚಿಕೆ
ಹೊರೆಯೆಲ್ಲಾ ಇಳಿಸಿ
ನೆಲೆಗೊಳಿಸಬೇಕಿದೆ
ಅಂತರ್ಯವನಿನ್ನು 
ಆನಂದದ
ಹಸಿರ ಸಮೃದ್ಧಿಯಲಿ
              ~ಪ್ರಭಾಮಣಿ ನಾಗರಾಜ




 

Tuesday, August 1, 2023


ಹಾಸನದಲ್ಲಿ ಆಗಸ್ಟ್, 2019ರಲ್ಲಿ ನಡೆದ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ಕ್ಷಣಗಳು😊



 

Monday, July 31, 2023

'ಕರ್ಮವೀರ' ಪತ್ರಿಕೆಯಲ್ಲಿ ನನ್ನ ಕವನ, 'ಏಕತ್ವ'🌼


ಜುಲೈ30,2023ರ 'ಕರ್ಮವೀರ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ, 'ಏಕತ್ವ'🌼

ಏಕತ್ವ

ಸೆಣೆಸುವಿಕೆಯಿಲ್ಲ
ಸ್ಪರ್ಧೆಗಿಳಿಯುತ್ತಲೂ ಇಲ್ಲ
ಸುತ್ತಿನವರ 
ಸ್ತುತಿ ನಿಂದೆಗಳು
ಮತ್ತೆ ಮತ್ತೆ 
ಕಾಡುತ್ತಲೂ ಇಲ್ಲ
ಗೌಜು ಗದ್ದಲಗಳ 
ಬಳಿಯಲೂ
ಸುಳಿದಿಲ್ಲ

ಈ ಎಲ್ಲಾ
ಇಲ್ಲ ಇಲ್ಲಗಳ 
ನಡುವೆಯೂ
ಎಲ್ಲೋ ಒಂದು 
ಕೊಂಡಿ ಕಳಚಿ
ಮೇಲ್ನೋಟದ ತಾಟಸ್ಥ್ಯ
ಒಳಗೆ ತಾಳ ತಪ್ಪಿ
ತಾಳೆಯಾಗದ
ಅಸಮತೋಲನ

ತಲೆಕಾಲುಗಳನ್ನೆಲ್ಲಾ 
ಒಳಗೆಳೆದುಕೊಂಡ 
ಆಮೆಯ 
ಹೃದಯದ ಬಡಿತ
ಹೇಗಿರುತ್ತದೋ ಎಂದು 
ಸಂದೇಹಿಸದಂತೆ
ಲವಲೇಶ 
ಬಾಹ್ಯ ಸೋಂಕಿಲ್ಲದೇ
ದೀರ್ಘ ಶ್ವಾಸೋಚ್ಚಾಸದಲಿ 
ಶತಾಯುರ್ ವಜ್ರದೇಹಾಯ...

ಹೊರನಿರ್ಲಿಪ್ತತೆಯೊಂದಿಗೇ
ಒಳತನವೂ ಬಲಿತು
ಒಳಹೊರ ಭಾವಗಳೆಲ್ಲಾ
ಏಕೀಭವಿಸಿ
ಭವ ಮೀರುವ
ಆಂತರ್ಯದರಿವಿನತ್ತ
ಗಮಿಸಬೇಕಿದೆ
ಸಂಪೂರ್ಣ ಚಿತ್ತ.
 
                 ~ಪ್ರಭಾಮಣಿ ನಾಗರಾಜ




 

 

Sunday, July 23, 2023

'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ನನ್ನ ಹನಿಗವನಗಳು🌼

ಇಂದಿನ(22/07/2023) ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಹನಿಗವನಗಳು🌼



 

Tuesday, May 16, 2023

ಕವನ - ` `ಬೇಕುಗಳ ಬೆಟ್ಟ!' '


ಈ ವಾರದ (ಮೇ10, 2023) ಮಂಗಳ ಪತ್ರಿಕೆಯಲ್ಲಿ  ನನ್ನ ಕವನ - ` `ಬೇಕುಗಳ ಬೆಟ್ಟ!' '

 

 


Thursday, March 23, 2023

ಪ್ರಭಾ ಹನಿಗಳು






 

ಕವನ - 'ಸಾಂಪ್ರತ'


ಮಾರ್ಚ್12,2023ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕವನ 'ಸಾಂಪ್ರತ'🌺 


 

Monday, January 16, 2023

ಕವನ - 'ಏಕಾಂತವನಂತ'🌼


 ಜನವರಿ11,2023ರ 'ಮಂಗಳ' ಪತ್ರಿಕೆಯಲ್ಲಿ  ನನ್ನ ಕವನ 'ಏಕಾಂತವನಂತ'🌼

  (2023ರ ಮೊದಲ ಪ್ರಕಟಿತ ಕವನ)