Saturday, October 27, 2012

ಮನದ ಅಂಗಳದಿ.....


ಬೆಳೆ ಇಲ್ಲದ ಜಾಗದಲ್ಲಿ

ಬೆಳೆವುದು ಕಳೆ

ಯಥೇಚ್ಚ



ಪೈರನ್ನೇ ಹಿಮ್ಮೆಟ್ಟಿಸಿ

ಹುಲುಸಾಗುವಲ್ಲೇ

ವಿಕಟಾಟ್ಟಹಾಸ



ಉಳಿವಿಗಾಗಿ

ಪೈಪೋಟಿಯಲ್ಲಿ

ಸಮರ್ಥ ಕಳೆಗೇ

ಉಳಿವು



ಕಳೆಯ ನಿರ್ಮೂಮಲನೆಗೋ

ಹತ್ತೆಂಟು ಹಾದಿ

ಕಿತ್ತಷ್ಟೂ

ಮತ್ತೆ ಚಿಗುರುವ

ರಕ್ತ ಬೀಜಾಸುರನ

ವಂಶ

ಬೆಳೆಗೇಕಿಲ್ಲ

ಆ ಒಂದೂ

ಅಂಶ?



ಬೆಳೆಯನೇ

ಬಳಸುವ

ಧೃತರಾಷ್ಟ್ರಾಲಿಂಗನ

ಎತ್ತಲಿಂದಲೋ

ಬಂದವತರಿಸಿದ

ಪಾಥೇನಿಯಂ

ಪಯಣ!



ಕಳೆಯ ನಾಶದತ್ತಲೇ

ಕೇಂದ್ರೀಕೃತ ಮನವ

ಬೆಳೆಯ

ಸದೃಢಗೊಳಿಸುವತ್ತ

ಕೊಂಡೊಯ್ದರೆ ಹೇಗೆ?



ಸಮರ್ಥ ಬೆಳೆ

ನಿಂತೀತು

ಕಳೆಯನೇ ಮೆಟ್ಟಿ

ಗೊಬ್ಬರವಾಗಿಸಿಕೊಳ್ಳುತ್ತಾ.....









Tuesday, October 23, 2012

ಎರಡು `ಹನಿ'ಗಳು

ಬಹಳ ದಿನಗಳಿ೦ದ  ಮನಸ್ಸಿಗೆ ಏನೂ ಹೊಳೆಯದೆ ಮನವೇ ಬರಡಾಯಿತೇನೋ ಎನ್ನುವಷ್ಟು ಬೇಸರವೆನಿಸುತ್ತಿತ್ತು. ಈ ದಿನ ಬೆಳಿಗ್ಗೆ ಮೂಡಿದ ಎರಡು `ಹನಿ'ಗಳನ್ನು ನಿಮ್ಮ ಮು೦ದಿಡುತ್ತಿದ್ದೇನೆ.

ಸ್ಥಿತಿ


ಮೇಲ್ಮೈಯಲ್ಲಿ ಹೊಳೆವ

ನಕ್ಷತ್ರಗಳ

ಅಂತರಂಗ

ಅಗ್ನಿಕುಂಡ!



ಹೊಳವು

ವಸ್ತುಗಳ ಹೊಳಪು

ಮೇಲ್ಮೈಗಷ್ಟೇ ಸೀಮಿತ,

ಮನದ ‘ಹೊಳವ’ ಮೂಲವೋ

ಅಂತರ್ಗತ







Tuesday, October 16, 2012

ಶೂನ್ಯ


ಕಣ್ತೆರೆದು ನೋಡಿದೆ
ಎಲ್ಲವೂ ನನ್ನದಾಗಿತ್ತು,
ಕಣ್ಮುಚ್ಚಿ ಕಂಡೆ
ನಾನೇ ಎಲ್ಲವೂ ಆಗಿ
ಇಲ್ಲವಾಗಿದ್ದೆ!

Sunday, October 14, 2012

ಮೋಹ


ಒಂದಕೊಂದೊಂದು

ಮತ್ತೊಂದು

ಹೆಣೆದ್ಹೆಣೆದು ಸೇರುತಿರೆ...

ಹಿಡಿದರೆ

ಎಲ್ಲವೂ ನನ್ನದೇ,

ಬಿಟ್ಟರೆ

ಯಾವುದೂ ನನ್ನದಲ್ಲ!

Friday, October 5, 2012

ಆಕಾಂಕ್ಷೆ



ಬಿದ್ದರೂ ಚಿಂತಿಲ್ಲ
ಉಳಿಗಳ ಹೊಡೆತ
ಅವಿರತ
ಕಲೆಯಾಗಬಲ್ಲೆ,
ಆಗದಿರಲಿ ಸ್ಪೋಟ
ಅನಿರೀಕ್ಷಿತ
ಛಿದ್ರವಾಗಲೊಲ್ಲೆ!