Friday, February 22, 2013

ಹನಿಗವನ


ಅರಿವು                                                                                                                                        
ಇದುವರೆಗೂ                              
ಎಲ್ಲೆಲ್ಲೋ ಹುಡುಕಿದ್ದು                       
ಎಲ್ಲೆಲ್ಲೂ ಕಾಣದ್ದು                                      
`ನನ್ನಲ್ಲೇ ಇದೆ’                                        
ಎಂದರಿತಾಗ                              
ಏನಾಶ್ಚರ್ಯ!                              

Sunday, February 17, 2013

ಆದದ್ದೆಲ್ಲಾ........

ವಿಶೇಷ ಪರೀಕ್ಷೆಗಳಿ೦ದಲೇ

ಸಮರ್ಥವೆ೦ದರಿತು

ನೊಗಕ್ಕೆ ಬಿಗಿದ ಪಶು

 

ಉಘೇ ಪರಾಕಗಳೊ೦ದಿಗೇ

ಪ್ರಾರ೦ಭವಾಗುವ ಪ್ರತಿ `ಹೆಜ್ಜೆಗೂ

ವಿಶೇಷ ಬಿರುದು

ಬಾವಲಿಗಳ ಮೆರುಗು

 

ತುಟಿಗಿಷ್ಟು ತುಪ್ಪ

ಬಿಡುವಿಲ್ಲದ ಒಪ್ಪ

 

ಹೊತ್ತಷ್ಟೂ ಹೊರೆಯ

ಮುಗಿಯದ ಹೆಣ ಭಾರಕೆ

ಶಿರವದುರಿ ಕೊರಳು ಕೊ೦ಕಿ

ಹೆಜ್ಜೆ ತಪ್ಪಿದಷ್ಟಕ್ಕೆ

ಇಲ್ಲ ಸಲ್ಲದ ಬೆದರಿಕೆ

 

ಅತ್ತಿತ್ತ ತಿರುಗದ

ನೆಟ್ಟಗತ್ತಿನ ಮೇಲೆ

`ಗತ್ತುತೋರುವವರ ಗರ್ವ

ಭಾರ ಭರಿಸಿ ಕಾಲುಕೂಡಿಸದಿದ್ದರೆ

ಕೋಲು ಬೀಸುವ ಕಿರಿಕಿರಿ

 

ಬೇಡ ಈ ಬ೦ಧನದ ಭವ್ಯತೆ

ಸಡಿಲವಾದೊಡನೆ

ಸಡಗರದ ನಾಗಾಲೋಟ

ಬಾನೆತ್ತರಕೆ ಚಿಮ್ಮಿದ ಪಶು

ನಕ್ಕು ನುಡಿಯಿತು

ಆದದ್ದೆಲ್ಲಾ...ಒಳಿತೇ ಆಯಿತು!

                                                                                                  

                                            

 

Sunday, February 3, 2013

ಬಾಳ ಮುಸ್ಸ೦ಜೆ

ಅಗಾಧ ಜಲರಾಶಿಯ ನಡುವೆ
ಅಲೆಗಳ ಏರಿಳಿತದೊಡನೆ
ತುಯ್ದಾಡುತ್ತಾ
ಗಾಳಿ ಬೀಸಿದತ್ತ
ತೂರುತ್ತಿರುವ ಈ
ಹಾಯಿ ದೋಣಿಗೆ
ಇರಬಹುದೇ
ಭದ್ರವಾಗಿ
ನೆಲೆಯೂರುವಾಸೆ?


ಬಾಳ ಹಾದಿಯಲ್ಲಿ
ಬ೦ದವರೆಷ್ಟೋ
ಹೋದವರೆಷ್ಟೋ
ಪಾದವೂರಿದ್ದರೂ
ಗುರುತು ಉಳಿಸಲಾಗಿಲ್ಲ

ಅ೦ದು ಹೊಟ್ಟೆ ಪಾಡಿಗೆ
ಹೋಗುವಮುನ್ನ
ಸ೦ಜೆ ಬರುವುದಾಗಿ
ತಿಳಿಸಿದ್ದ ನಲ್ಲ
ಇನ್ನೂ ಹಿ೦ದಿರುಗಿಲ್ಲ!


ಬರುವನೇನೋ ಇ೦ದೋ
ಮು೦ದಿನ ಚಣವೋ ಎ೦ಬ
ನಿರೀಕ್ಷೆ ನಿರಾಶೆಗಳ
ಹೊಯ್ದಾಟದ ನಡುವೆ...
ಪ೦ಜರದ ಗಿಳಿ ದ೦ಪತಿಗಳ
ಪಿಸುಮಾತು


`ಹಾರಿ ಹಾರಿ ಮೇಲೇರಿ
ಮುಗಿಲ ಸೇರುವ
ಏರಿ ಏರಿ
ಉಡುರಾಜನ೦ಗಳಕೆ ಸಾರಿ...’
ಛೀ...! ಬರಡು
ಬ೦ಜೆ ನಿರ್ಜೀವ..


ಕಾದು ಕಾದು ವೇಳೆ
ವ್ಯರ್ಥಗೊಳಿಸಿದ
ಊರ್ಮಿಳೆ, ಶಬರಿಯರ
ಕಾಲ ಇದಲ್ಲ
ಎ೦ದರಿವಾಗುವ ಮೊದಲೇ
ಹಾರಿತ್ತು ಹರೆಯ


ಸ೦ಜೆಯಾದರೂ
ಬರಲಿಲ್ಲ ಚೆನ್ನ
ಬರುವನೇನೋ
ಕಾಲನೊಡನೆ
ಕಾಲು ಕೂಡಿಸುವ
ಮುನ್ನ
ಬಾಳ ಬಟ್ಟೆಗೆ
ತಿರುಗಿಸಬಾರದಲ್ಲ
ಬೆನ್ನ!