Saturday, November 24, 2012

ಬದುಕು

ಜೀಕಿದಷ್ಟೂ

ಈ ತುದಿಯಿಂದ

ಆ ತುದಿಗೆ,

ಆ ತುದಿಯಿಂದ

ಈ ತುದಿಗೆ

ಕೊಂಡೊಯ್ಯುವುದು

ಜೋಕಾಲಿ!

ಗೋಚರ


ಕಾರ್ಗತ್ತಲೆಯ ತೂರಿ

ಗೋಚರಿಸುವ ಬೆಳಕು

ಉಜ್ವಲ,

ಬೆಳಕಿನ ಮೂಲಕ

ಕಾಣುವ ಕತ್ತಲೆ

ಕರಾಳ!





Friday, November 23, 2012

ಸಾಪೇಕ್ಷ


ಗರಗರ

ತಿರುಗು ಚಕ್ರದ

ಅಂಚಿಗೆ

ಒಗೆಯಲ್ಪಟ್ಟ ಕಾಯ

ವಿರಮಿಸಲು ಬೆಂಬಿಡದ ಭಯ

ಸ್ವಲ್ಪ ತಂಗುವೆನೆಂದರೂ

ತಪ್ಪದ ಅಪಾಯ!



ಪಯಣ ಸಾಗಿದಂತೆ

ಪರ್ಯಾಯ

ಗರಿಷ್ಠ-ಕನಿಷ್ಠ

ಗಮನಿಸುವವರೇ ಇಲ್ಲ

ತನ್ನಿಷ್ಟ



ಒಮ್ಮೆ...

ಒಮ್ಮೆಯಾದರೂ

ಮಧ್ಯಂತರದಲಿ

ಸ್ಥಿರವಾಗಲೂ

ಆಗದಂಥಾ

ಆವರ್ತಕ ಚಲನೆ

ಆಗಾಗ ಮೀರುವುದಾಗಿದೆ

ಘರ್ಷಣೆ



ಪರಿಧಿ ಮೀರಿದರಂತೂ

ಸ್ಪರ್ಶಕದ ನೇರದಲೇ ಒಗೆತ

ಬಿಟ್ಟುಹೋಗಲೇ ಬೇಕಾಗ

ಈ ಆತ್ಮೀಯ ವೃತ್ತ



ಇದ್ದಷ್ಟು ದಿನವೂ

ತಿರುಗುತ್ತಲೇ ಇರುವುದೋ

ತಿರುಗುವುದರಲೇ

ಸಾರ್ಥಕ್ಯ ಕಾಣುವುದೋ?..?..?



ಕಾಯಕವೇ

ತಾನೆಂದೆಣಿಸಿದಾಕ್ಷಣವೇ

ಕೇಂದ್ರದತ್ತ ಪಯಣ

ಏಳು ಬೀಳುಗಳಿಲ್ಲದ

ನಿಶ್ಚಿಂತ ತಾಣ

ನಿರ್ಲಿಪ್ತ ಕಾಯಕೀಗ

ಸಮಸ್ಯೆಗಳೇ ಗೌಣ!



Wednesday, November 21, 2012

ಅನಾಥ `ಅಮ್ಮ’



ಅಮ್ಮಾ.....

ಅ೦ದು

ನೀನಾಡಿದ

ಮಾತುಗಳೆಲ್ಲಾ

ಸ್ಫುರಿಸುತಿವೆ

ವಿಶಿಷ್ಟಾರ್ಥ

ಆಲ್ಜೈಮರ್‌ನ

ಬಿರು ಹೊಡೆತಕ್ಕೂ

ಅಳಿಸಲಾಗಲಿಲ್ಲ

ನಿನ್ನ ಶಬ್ದ ಸ೦ಪತ್ತ!



ಸಹಿಸಿದೆ

ಅವಡುಗಚ್ಚಿ

ನಿನ್ನೆಲ್ಲಾ

ಕಷ್ಟನಷ್ಟ

ಕಡೆಗೆ

ನೀನೇ ಆದೆ

ನಿಕೃಷ್ಟ



ಅರವತ್ತರವರೆಗೂ

ಅಡಿಗೆ ಮನೆಯೇ

ಸರ್ವಸ್ವವೆ೦ದು

ಆದೆ

ಹೊರಜಗತ್ತಿಗೆ

ಅಜ್ಞಾತ

ಅಡಿ

ಹೊರಗಿರಿಸಿದಾಕ್ಷಣವೇ

ಅತ್ಯಾಪ್ತರಿಗೂ

ಅಪರಿಚಿತ!



ನನ್ನ ತೊದಲು ನುಡಿ ಕೇಳಿ

ನೀ ಸ೦ಭ್ರಮಿಸಿದ

ನೆನಪು ನನಗಿಲ್ಲ

ಸೃಜನಾತ್ಮಕ

ಬರಹ ಕ೦ಡು

ಹಿಗ್ಗಿ

ಹುರಿದು೦ಬಿಸಿದೆಯೆಲ್ಲಾ!



ಸುರಿವ ದುಃಖಾಶ್ರುವ

ಅಳಿಸಲೂಬಹುದು

ಒಡಲ ಕುದಿಯ

ತಣಿಸಲಾಗುವುದೆ?



ನಿನ್ನ ಮುಕ್ತಿಯ

ಬಯಸಿ

ಬತ್ತಿತು

ಕಣ್ಣೀರೆ೦ದು

ಬಗೆದೆ

ಈಗೇಕೆ ಉಕ್ಕಿ

ಹರಿಯುತಿದೆ

ದುಃಖ?



ನಿನ್ನೊಡನಾಟದ

ನೆನಪಿನಿ೦ದಲೇ?

ನಿನ್ನೇ ನೀ

ಮರೆತು

ದೇಹಮಾತ್ರವಾಗುಳಿದ

ದೈನ್ಯಾವಸ್ಥೆಯೇ?



ಅಮ್ಮಾ ,

ಅದು

ಮುಗಿದ ಅಧ್ಯಾಯ

ನಿನ್ನ೦ತೆಯೇ

`ಹಿಡಿ ಪ್ರೀತಿ’ಗಾಗಿ

ಹ೦ಬಲಿಸಿ

ಉಡಿ

ಚಾಚುತ್ತಿರುವ

ಎಷ್ಟೋ

ತಾಯ೦ದಿರಿಗಾಗಿ

`ಅಮ್ಮ’ ಎ೦ಬ

ಅನಾಥ

ಜೀವಿಗಳಿಗಾಗಿ...



Thursday, November 15, 2012

ಅರಿವು

ಹೊರಟಿತು ಹಣತೆ
ದೀಪೋತ್ಸವಕೆ
ಬೆಳಕನರಸುತ್ತಾ.......
ಝಗಮಗಿಸುವ
ಬೆಳಕಿನಬ್ಬರದಡಿ
ಅವಗಣನೆಯಾಯ್ತೆ
ತನ್ನ ಮಹತ್ವ?
ಅರಿಯಲಾಗುತ್ತಿಲ್ಲ
ಅಂತಃಸತ್ವ,
ಮರಳಿ ಅಡಗಿತು ಹಣತೆ
ಕತ್ತಲ ಗೂಡಿನಲ್ಲಿ!
          

Monday, November 12, 2012

ದೀಪಾವಳಿ `ಹನಿ’ಗಳು


ಪರಿಣಾಮ

ಕೇಳಿ ದೀಪಾವಳಿಯ

ಆಟಂಬಾಂಬಿನ

ಆರ್ಭಟ

ವರುಣ ದೇವನೂ

ತಟಸ್ಥನಾಗಿಬಿಟ್ಟ!



ಉಳಿತಾಯ

`ದೀಪದಿಂದ ದೀಪ ಹಚ್ಚು’

ಇದು ಸತ್ಸಂಪ್ರದಾಯ

`ದೀಪ ಬೆಳಗಿ ದೀಪ ಆರಿಸು

ನೀನಿದ್ದಲ್ಲಿ ಮಾತ್ರ

ಪ್ರತಿದೀಪ್ತ

ದೀಪ ಪ್ರಕಾಶಿಸು’

ಎಂದರೆ ವಿದ್ಯುಚ್ಛಕ್ತಿಯ

ಉಳಿತಾಯ!



`ಬಲಿ’ ಪಾಡ್ಯಮಿ

ಅಂದು

`ಬಲಿ’ ಬಂದ ಮೂರು ಗಳಿಗೆ

ಕಾಣುತ್ತಿದ್ದ ಭುವಿಯಲೆಲ್ಲಾ

ಸುಭಿಕ್ಷ್ಯ ಸಂಭ್ರಮ,

ಇಂದು

ಬರಲಾರನವ ಕಾಣಲು

`ಬರ’ ತುಂಬಿದ

ಭೂಮಿಯ

ದೌರ್ಭಾಗ್ಯ ವಿಭ್ರಮ.  

ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು…