Thursday, May 26, 2011

ಮನದ ಅಂಗಳದಿ.........೪೧. ಧೈರ್ಯ

‘ಧೈರ್ಯಂ ಸರ್ವತ್ರ ಸಾಧನಂ’ ಎನ್ನುವ ಒಂದು ಉಕ್ತಿ ಇದೆ. ಧೈರ್ಯವು ಎಲ್ಲ ಸಂದರ್ಭಗಳಲ್ಲಿಯೂ ಒಂದು ಸಾಧನವಿದ್ದಂತೆ. ಧೈರ್ಯವಿದ್ದರೆ ನಾವು ಯಾವುದೇ ಕಠಿಣ ಪರಿಸ್ಥಿತಿಯನ್ನಾದರೂ ಸಮರ್ಥವಾಗಿ ಎದುರಿಸಬಹುದು.

ಪ್ರಾಣಿವರ್ಗದಲ್ಲಿಯೂ ಧೈರ್ಯವಂತ ಹಾಗೂ ಅಂಜಿಕೆಯ ಪ್ರಾಣಿಗಳನ್ನು ಕಾಣುತ್ತೇವೆ. ಸಿಂಹ, ಹುಲಿ ಮುಂತಾದ ಮಾಂಸಾಹಾರಿ ಪ್ರಾಣಿಗಳಿಗೆ ಧೈರ್ಯವು ಅನುವಂಶೀಯವೆನ್ನುವಂತೆ ರಕ್ರಗತವಾಗಿ ಬಂದಿದ್ದರೆ ಅವುಗಳಿಗೆ ಆಹಾರವಾಗಬೇಕಾದ ಪ್ರಾಣಿಗಳು ಅಸಹಾಯಕವಾಗಿ ಅ೦ಜಿಕೆಯಿ೦ದ ತಲ್ಲಣಗೊಳ್ಳುತ್ತಿರುತ್ತವೆ. ಬಹಳ ಅಪರೂಪವೆನಿಸುವ೦ತೆ ಧೈರ್ಯವನ್ನು ಪ್ರದರ್ಶಿಸುವ ಸಂದರ್ಭಗಳೂ ಇರುತ್ತವೆ.

ಪೂರ್ವಾಗ್ರಹ ಪೀಡಿತವಲ್ಲದ ಮನಸ್ಸು ಧೈರ್ಯದಿಂದ ಕೂಡಿರುತ್ತದೆ. ಉದಾಹರಣೆಗೆ ಒಂದು ಪುಟ್ಟ ಮಗುವು ಯಾವುದೇ ಕೆಲಸವನ್ನಾದರೂ ಧೈರ್ಯವಾಗಿ ಮಾಡಲು ಮುನ್ನುಗ್ಗುತ್ತದೆ. ಪರಿಸರ ಹಾಗೂ ಕೆಲವು ಋಣಾತ್ಮಕ ಅನುಭವಗಳು ಕ್ರಮೇಣ ಅದನ್ನು ಹಿಮ್ಮೆಟ್ಟುವಂತೆ ಮಾಡುತ್ತವೆ.

ಧೈರ್ಯವೆಂದರೇನು? ಎಂಬ ಪ್ರಶ್ನೆ ಎದುರಾದ ತಕ್ಷಣ ನಾವು ‘ಭಯವಿಲ್ಲದಿರುವುದು’ ಎಂಬ ಉತ್ತರವನ್ನು ಕೊಡಬಯಸುತ್ತೇವೆ. ಆದರೆ ಜಿಡ್ಡು ಕೃಷ್ಣಮೂರ್ತಿಯವರು, ‘ಧೈರ್ಯವೆಂಬುದು ಭಯಕ್ಕೆ ವಿರುದ್ಧವಾದ ಪದವೂ ಅಲ್ಲ. ಭಯ ಇಲ್ಲವಾಗುವುದೆಂದರೆ ಧೈರ್ಯವಂತ ಆಗುವುದು ಎಂಬರ್ಥವಲ್ಲ.’ ಎನ್ನುತ್ತಾರೆ.

ಧೈರ್ಯಶಾಲಿಗಳಾಗಬೇಕೆನ್ನುವುದು ಎಲ್ಲರ ಹಂಬಲವೂ ಆಗಿದೆ. ಆದರೆ ಕೆಲವೇ ಧೈರ್ಯಶಾಲಿಗಳಿರುವುದನ್ನು ನಾವು ಕಾಣುತ್ತೇವೆ. ಧೈರ್ಯ ಒಂದು ಆಂತರಿಕ ಸುಭದ್ರ ಸ್ಥಿತಿ. ಯಾವುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಧೈರ್ಯಶಾಲಿಯು ತನ್ನ ಕಾರ್ಯ ಸಾಧನೆಯನ್ನು ಮಾಡುತ್ತಾನೆ.

ಧೈರ್ಯದ ಬಗ್ಗೆ ರಾಬಿನ್ ಶರ್ಮ ಅವರು ತಮ್ಮ 'THE MONK WHO SOLD HIS FERRARI 'ಯಲ್ಲಿ ಜೂಲಿಯನ್ ಮೂಲಕ ಹೀಗೆ ಹೇಳಿಸುತ್ತಾರೆ.

’ಧೈರ್ಯವಿದ್ದರೆ ನೀನು ನಿನ್ನದೇ ರೇಸ್ನಲ್ಲಿ ಓಡಬಹುದು. ಧೈರ್ಯವಿದ್ದರೆ ನೀನು ನಿನ್ನ ದೃಷ್ಟಿಯಲ್ಲಿ ಸರಿಯೆಂದು ಕಂಡುದನ್ನು ಮಾಡಬಹುದು. ಧೈರ್ಯವಿದ್ದರೆ ಅನ್ಯರು ಸೋತಾಗಲೂ ನೀನು ಸೋಲಿಗೆ ಶರಣಾಗದೇ ಹೋರಾಡಿ ಜಯಿಸಬಹುದು. ಅಂತಿಮವಾಗಿ ಹೇಳುವುದಾದರೆ ನೀನು ಬದುಕಿನಲ್ಲಿ ಗಳಿಸುವ ಯಶಸ್ಸು, ಸಾರ್ಥಕತೆ ನಿನ್ನಲ್ಲಿರುವ ಧೈರ್ಯದ ಪ್ರಮಾಣವನ್ನು ಅವಲಂಭಿಸಿದೆ. ತಮ್ಮ ಮೇಲೆ ಪ್ರಭುತ್ವ ಸಾಧಿಸುವವರಲ್ಲಿ ಅಪಾರ ಧೈರ್ಯವಿರುತ್ತದೆ..........

ಈ ವಿಶ್ವವು ಧೈರ್ಯಶಾಲಿಗೆ ನೆರವಾಗುತ್ತದೆ. ಚಿಕ್ಕಪುಟ್ಟ ಧೈರ್ಯದ ಕ್ರಿಯೆಗಳಿಂದ ಶಿಸ್ತು ಬೆಳೆಯುತ್ತದೆ..... ಉಕ್ಕಿನಂತಹ ಶಿಸ್ತಿನಿಂದ ಧೈರ್ಯ ಮತ್ತು ಶಾಂತಿಭರಿತವಾದ ಚಾರಿತ್ರ್ಯ ರೂಪಿತವಾಗುತ್ತದೆ. ಶಿಸ್ತು, ಧೈರ್ಯ, ಶಾಂತಿ, ಚಾರಿತ್ರ್ಯಗಳಿಲ್ಲದಿದ್ದರೆ ದಿಕ್ಸೂಚಿಯಿಲ್ಲದ ನಾವಿಕನಂತೆ ಹಡಗಿನ ಜೊತೆ ಮುಳುಗಿ ಹೋಗುವೆ..............

ಶಬ್ದಗಳಿಗೆ ಅಪಾರ ಪ್ರೇರಕ ಶಕ್ತಿಯಿದೆ. ಅವು ಶಬ್ದರೂಪದಲ್ಲಿರುವ ಶಕ್ತಿಗಳು. ಮನಸ್ಸನ್ನು ಆಶಾಭಾವನೆಗಳಿಂದ ತುಂಬಿದರೆ ಆಶಾವಾದಿಯಾಗುವೆ. ಕರುಣಾಭರಿತ ಶಬ್ದಗಳಿಂದ ತುಂಬಿದರೆ ಕರುಣಾಮಯಿಯಾಗುವೆ, ಹಾಗೆಯೇ ಧೈರ್ಯದ ಶಬ್ದಗಳಿಂದ ತುಂಬಿದರೆ ಧೈರ್ಯಶಾಲಿಯಾಗುವೆ.’

ಸ್ವಾಮಿ ವಿವೇಕಾನಂದರು ‘ಧೈರ್ಯವಂತರಾಗಿ’ ಎನ್ನುವುದನ್ನು ಹೀಗೆ ತಿಳಿಸುತ್ತಾರೆ:

’ದಕ್ಷಿಣ ಸಮುದ್ರ ದ್ವೀಪಗಳ ಸಮೀಪದಲ್ಲಿ ಬಿರುಗಾಳಿಗೆ ಸಿಕ್ಕಿದ ಕೆಲವು ಹಡಗುಗಳ ಕಥೆಯನ್ನು ನಾನು ಒಮ್ಮೆ ನೋಡಿದೆ. ಇಲಸ್ಟ್ರೇಟೆಡ್ ಲಂಡನ್ ನ್ಯೂಸ್‌ನಲ್ಲಿ ಅದರ ಒಂದು ಚಿತ್ರವಿತ್ತು. ಇಂಗ್ಲೀಷಿನವರ ಹಡಗೊಂದನ್ನು ಬಿಟ್ಟು ಉಳಿದ ಎಲ್ಲಾ ಹಡಗುಗಳೂ ನಾಶವಾದವು. ಅದು ಈ ಪ್ರಚಂಡ ಬಿರುಗಾಳಿಯಲ್ಲಿ ಮುಂದುವರೆಯುತ್ತಿತ್ತು. ಮುಳುಗುತ್ತಿದ್ದ ಹಡಗಿನಲ್ಲಿದ್ದ ಜನರು ಮೇಲಿನ ಅಂತಸ್ತಿನ ಮೇಲೆ ನಿಂತು ಮುಂದೆ ಹೋಗುತ್ತಿದ್ದ ಹಡಗಿನ ಜನರನ್ನು ನೋಡಿ ಹುರಿದುಂಬಿಸುತ್ತಿದ್ದ ಒಂದು ಚಿತ್ರವಿತ್ತು. ಅದರಂತೆ ಧೈರ್ಯವಾಗಿರಿ, ಉದಾರಿಗಳಾಗಿರಿ.’

ಇದುವರಗೆ ಮಹಾನ್ ಸಾಧನೆಗಳನ್ನು ಮಾಡಿದಂತಹ ಸಾಧಕರು ತಮ್ಮ ಪಥದಲ್ಲಿ ಧೈರ್ಯದಿಂದ ಮುನ್ನುಗ್ಗಿದವರೇ ಆಗಿದ್ದಾರೆ. ಅವರು ತಾವೂ ಧೈರ್ಯದಿಂದಿದ್ದು ಇತರರಿಗೂ ಆ ಮಾರ್ಗವನ್ನು ಸ್ಪಷ್ಟಪಡಿಸುವ ಪ್ರಯತ್ನವನ್ನು ನಡೆಸುತ್ತಾರೆ.

‘ನಾನು ಗೋಚರಿಸುವುದಕ್ಕಿಂತಲೂ ಬಲಿಷ್ಠನಾಗಿದ್ದೇನೆ. ವಿಶ್ವದ ಎಲ್ಲಾ ಶಕ್ತಿ ಸಾಮರ್ಥ್ಯಗಳೂ ನನ್ನೊಳಗೇ ಅಂತರ್ಗತವಾಗಿವೆ’ ಈ ಮಂತ್ರವನ್ನು ಪ್ರತಿದಿನ ನಾವು ಕನಿಷ್ಟ ೩೦ಸಲವಾದರೂ ಜಪಿಸುವುದರಿಂದ ನಾವು ಧೈರ್ಯಶಾಲಿಗಳಾಗಬಹುದು, ನಮಗೆ ಇಚ್ಛಿತವಾದುದನ್ನು ಸಾಧಿಸಬಹುದು ಎನ್ನುವುದನ್ನು 'THE MONK WHO SOLD HIS FERRARI '’ಯಲ್ಲಿ ಶಿವನ ಯೋಗಿಗಳ ಮೂಲಕ ತಿಳಿದು ಬಂದ ಜೂಲಿಯನ್, ಜಾನ್‌ನ ಮೂಲಕ ನಮ್ಮೆಲ್ಲರಿಗೂ ತಿಳಿಸುತ್ತಾನೆ!

ಚಿಕ್ಕವರಿದ್ದಾಗ ನಮ್ಮಲ್ಲಿ ಧೈರ್ಯ ತುಂಬಲು ದೇವರ ನಾಮಮಂತ್ರವನ್ನು ಪದೇಪದೇ ಹೇಳಿಕೊಳ್ಳುತ್ತಿರುವ೦ತೆ ಹೇಳುತ್ತಿದ್ದರು. ಕೆಲವು ಮಂತ್ರಗಳ ಉಚ್ಛಾರಣೆಯಿ೦ದ ಧೈರ್ಯಶಾಲಿಗಳಾಗುತ್ತಾರೆ ಎನ್ನುವುದು ರೂಢಿಯಲ್ಲಿತ್ತು. ಈಗ ‘ನಾನು ಗೋಚರಿಸುವುದಕ್ಕಿಂತಲೂ ಬಲಿಷ್ಠನಾಗಿದ್ದೇನೆ..............’ ಎನ್ನುವ ಉಕ್ತಿಯನ್ನು ಹೇಳಿಕೊಳ್ಳುವುದರೊಡನೆ ದಿನಕ್ಕೆ ೨೧ಸಲ ಇತರ ಧನಾತ್ಮಕ ಅಂಶಗಳೂ ಸೇರಿದಂತೆ, ’ನಾನು ಧೈರ್ಯಶಾಲಿಯಾಗಿದ್ದೇನೆ,’ ಎಂದು ಹೇಳಿಕೊಳ್ಳುವ ಮೂಲಕ ಧೈರ್ಯವಂತಳಾಗುವ ಪ್ರಯತ್ನವನ್ನು ಮುಂದುವರಿಸಿದ್ದೇನೆ!

Sunday, May 22, 2011

ಸಂಸ್ಕಾರ

ಆಗಿದೆ
ಶವಸಂಸ್ಕಾರ
ಅಸ್ಥಿ ಸಂಚಯನ
ಆಗಬೇಕಿನ್ನೂ
ಪುಣ್ಯ ತೀರ್ಥಗಳಲ್ಲಿ

ಅಲೆಯುವುದಾಗಿದೆ
ಹೊತ್ತು
ಎಲುಬುಗಳ
ಮಡಕೆಯ
ಶುದ್ಧ ಸಲಿಲವನರಸುತ್ತಾ
[ಹರಿವ ನೀರಿಗೆ
ಮೈಲಿಗೆ ಇಲ್ಲವಂತೆ!]

ಹಿಂದೊಮ್ಮೆ
'ಪವಿತ್ರ ನದಿ'
ಎನಿಸಿದವುಗಳಿಗೂ
ಧರಿಸಲಾಗುತ್ತಿಲ್ಲ
ಸತ್ಯದ ಎಲುಬುಗಳ
ತಮ್ಮೊಳಗೆ

ಅಂತ್ಯವಿಧಿಗಳ
ಪೂರೈಸದೆ
ಇರಲಾದೀತೆ?

ಕುಟ್ಟಿ ಪುಡಿಮಾಡಿ
ಮೂಳೆಗಳ
ಹರಡಿಬಿಟ್ಟರೆ ಹೇಗೆ
ಭುವಿಯ
ಒಡಲೊಳಗೆಲ್ಲಾ?

ಹಿಂದೊಮ್ಮೆ
ಮಣ್ಣುಪಾಲಾದ
ಮಾನವೀಯತೆಯ
ತುಣುಕಾದರೂ
ಅಂಟಿ
ಮೊಳೆಯಬಹುದೇನೊ

ಸಲ್ಲುವಂತಿದ್ದರೆ ಸಾಕು
'ಸಾಪೇಕ್ಷ ಸತ್ಯ'
ಈ ಕಾಲಕ್ಕೆ!

Tuesday, May 17, 2011

ಮನದ ಅಂಗಳದಿ.........೪೦. ಬದುಕಿಗೆ.....

ಕೊಚ್ಚಿ ಸಾಗುತ್ತಿರುವ ಜೀವನದ ಹುಚ್ಚು ಪ್ರವಾಹ ಎಲ್ಲೋ ಯಾರನ್ನೋ ಸಂಧಿಸುವಂತೆ ಮಾಡಿ ದೂರ ಸರಿಸಿ ಕೆಲವು ವೇಳೆ ಮತ್ತೆಲ್ಲೋ ಯಾವುದೋ ಸ್ಥಿತಿಗಳಲ್ಲಿ ಪುನಃ ಭೇಟಿಯಾಗುವಂತೆ ಮಾಡುತ್ತದೆ. ಆ ಅವಧಿಯಲ್ಲಿ ನಮ್ಮ ಜೀವನಗಳಲ್ಲಿ ಅಗಾಧ ಬದಲಾವಣೆಗಳೂ ಆಗಿರಬಹುದು. ಅದು ಹಾಗೇ ಆಯಿತು. ಆಕೆಯನ್ನು ಮೊದಲು ನೋಡಿದಾಗಿನ, ಕೆಲವು ವರ್ಷಗಳು ಅಕ್ಕಪಕ್ಕದವರಾಗಿದ್ದ ಸಂದರ್ಭ, ನಂತರ ನೋಡಲು ಹೋಗಿದ್ದ ಈ ಪರಿಸ್ಥಿತಿ.......

ಮಾತೃತ್ವದ ರಜೆಯ ಅವಧಿ ಮುಗಿಯುತ್ತಾ ಬಂದಾಗಲೂ ಏನೇ ಪ್ರಯತ್ನ ಪಟ್ಟರೂ ಮಗು ಬಾಟಲ್ ಹಾಲನ್ನು ಕುಡಿಯಲು ಅಭ್ಯಾಸ ಮಾಡಿಕೊಳ್ಳದೇ ಇದ್ದಾಗ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದ ಸ್ಥಳದ ಹತ್ತಿದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಹೋಗಬೇಕಾಯಿತು. ಅಲ್ಲಿಯೇ ಪಕ್ಕದ ಮನೆಯವರಾಗಿದ್ದ ಆಕೆಯ ಒಡನಾಟ ಪ್ರಾರಂಭವಾಗಿದ್ದು. ನನಗೆ ಎನ್ನುವುದಕ್ಕಿಂತಲೂ ಅಮ್ಮನೊಡನೆ ಆಕೆಯ ಬಾಂಧವ್ಯ ಹೆಚ್ಚು ಗಾಢವಾಗಿತ್ತು. ಯಾರೊಡನೆಯೂ ಸಾಮಾನ್ಯವಾಗಿ ಬೆರೆಯದೆ ತಮ್ಮ ಕೆಲಸ, ಬಿಡುವಿನ ವೇಳೆಯಲ್ಲಿ ಓದುವುದು ಎನ್ನುವಂತೆ ತಮ್ಮ ಪಾಡಿಗೆ ತಾವಿರುತ್ತಿದ್ದ ಅಮ್ಮನಿಗೆ ವಯಸ್ಸಿನ ತಾರತಮ್ಯವನ್ನೂ ಮರೆಸುವ ಆಕೆಯೊಂದಿಗಿನ ಸ್ನೇಹ ಸಂತಸದಾಯಕವಾಗಿತ್ತು. ಆಕೆಯೂ ಮಕ್ಕಳಂತೆ 'ಅಮ್ಮಾಜಿ’ ಎಂದೇ ಕರೆಯುತ್ತಿದ್ದರು! ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಮೂರು ಮಕ್ಕಳನ್ನು ಹೊ೦ದಿದ್ದು, ಅವರನ್ನು ಓದಿಸಲೆಂದು ತಮ್ಮ ಎಸ್ಟೇಟ್‌ನಿಂದ ಇಲ್ಲಿ ಬಂದು ನಮ್ಮಂತೆಯೇ ಬಾಡಿಗೆ ಮನೆಯಲ್ಲಿದ್ದ ಆಕೆ ತಮ್ಮ ಕೆಲಸಗಳ ನಡುವೆಯೇ ಆಗಾಗ ಬಂದು ನಮ್ಮ ಮಗುವನ್ನು ಎತ್ತಿ ಆಡಿಸುತ್ತಿದ್ದರು, `ಏನೇ ಸಮಸ್ಯೆ ಇದ್ದರೂ ಮಗುವನ್ನು ಎತ್ತಿ ಆಡಿಸುವಾಗ ಎಲ್ಲಾ ಮರೆತುಹೋಗುತ್ತದೆ,’ ಎನ್ನುತ್ತಲಿದ್ದ ಅವರಿಗೆ ಎಳೆಯ ಕಂದಗಳನ್ನು ಎತ್ತಿ ಆಡಿಸುವುದೆಂದರೆ ಬಹಳ ಪ್ರೀತಿ. ಮಧ್ಯಾಹ್ನ ಮಗು ಮಲಗಿದ ವೇಳೆಯಲ್ಲಿ ಪಗಡೆಯಾಟವಾಡುವುದು,(ಅಮ್ಮ ನಮ್ಮ ಹಳ್ಳಿಯಿಂದ ಪಗಡೇಕಾಯಿ ತಂದು ಅವರಿಗೂ ಆಟ ಕಲಿಸಿದ್ದರು!) ಸಂಜೆ ನಾನು ಶಾಲೆಯಿಂದ ಬಂದ ತಕ್ಷಣ ಮಗುವನ್ನು ನನ್ನ ಜವಾಬ್ಧಾರಿಗೆ ಬಿಟ್ಟು ಇಬ್ಬರೂ ವಾಕಿಂಗ್‌ಗೆ ಹೋಗಿಬರುವುದು ಅವರ ದಿನಚರಿಯಾಗಿತ್ತು. ಅಲ್ಲಿದ್ದಾಗಲೇ ಹುಟ್ಟಿದ ಎರಡನೇ ಮಗುವನ್ನೂ ಅಕ್ಕರೆಯಿಂದ ಬೆಳೆಸಿದರು. ಮಕ್ಕಳಿಬ್ಬರಿಗೂ ಅವರ ಮನೆಯಲ್ಲಿರುವುದೆಂದರೆ ಬಹಳ ಇಷ್ಟ. ತಿಂಡಿ, ಊಟ, ಆಟ ಎಲ್ಲವೂ ಅಲ್ಲೇ! ಮನೆಯಲ್ಲಿದ್ದಾಗಲೂ, ಆಂಟಿ ಊಟ ಹೇಗೆ ಮಾಡ್ತಾರೆ, ರೊಟ್ಟಿ ಹೇಗೆ ಬಡೀತಾರೆ ಎನ್ನುವುದನ್ನು ಅನುಕರಿಸಿ ತೋರಿಸುತ್ತಿದ್ದರು.......ಮಕ್ಕಳು ಚಿಕ್ಕವರಿದ್ದಾಗಲೇ ನಾವು ಜಿಲ್ಲಾ ಕೇಂದ್ರದಲ್ಲಿ ನೆಲೆಸುವ ಸಲುವಾಗಿ ಅಲ್ಲಿಂದ ಶಿಫ್ಟ್ ಆದೆವು. ನನಗೆ ನಗರದಲ್ಲಿ ಖಾಲಿ ಸ್ಥಳ ದೊರಕದಿದ್ದರಿಂದ ಸಮೀಪದ ಹಳ್ಳಿಯೊಂದಕ್ಕೆ ವರ್ಗ ಮಾಡಿಸಿಕೊಳ್ಳಬೇಕಾಯಿತು. ಅಲ್ಲಿ ಇದ್ದಂತಹ ಅನುಕೂಲ, ಒಡನಾಟ,......ಯಾವುದೂ ದೊರೆಯದಂತಾಗಿ,

'ಗರಗರ ತಿರುಗು ಚಕ್ರದ ಅಂಚಿಗೆ
ಒಗೆಯಲ್ಪಟ್ಟ ಕಾಯ,
ವಿರಮಿಸಲು ಬೆಂಬಿಡದ ಭಯ
ಸ್ವಲ್ಪ ತಂಗುವೆನೆಂದರೂ
ತಪ್ಪದ ಅಪಾಯ!.....’

ಎನ್ನುವಂತೆ ಜೀವನವು ತೀವ್ರ ಯಾಂತ್ರಿಕವಾಗಿ ದಿನಗಳು ಓಡುವ ರಭಸದಲ್ಲಿ ವರ್ಷಗಳೇ ಉರುಳಿ ಹೋದವು. ಪ್ರಾರಂಭದ ವರ್ಷಗಳಲ್ಲಿ ಆಕೆ ಒಂದೆರಡು ಭಾರಿ 'ಅಮ್ಮಾಜಿ’ಯನ್ನು ನೋಡಲು ಬಂದಿದ್ದರು. ಆ ಸಮಯದಲ್ಲಿ ನಾನು ಕೆಲಸಕ್ಕೆ ಹೋಗಿರುತ್ತಿದ್ದರಿಂದ ಅವರನ್ನು ನೋಡಲು ಆಗಲೇ ಇಲ್ಲ. ಕ್ರಮೇಣ ನಮ್ಮ ಸಂಪರ್ಕ ಕಡಿದುಹೋಯಿತು...

ಸುಮಾರು ೧೬ವರ್ಷಗಳ ನಂತರ ಅವರ ಬಂಧುವೊಬ್ಬರ ಮೂಲಕ ಈಗ ಆಕೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಅವರನ್ನೊಮ್ಮೆ ನೋಡಿ ಬರುವ ಹಂಬಲವಾಯಿತು. ಎಲ್ಲರೂ ಒಟ್ಟಾಗಿ ಹೋಗಿ ಕಾಣಬೇಕೆನ್ನುವಷ್ಟರಲ್ಲಿ ಅವರನ್ನು ಕಿದ್ವಾಯ್‌ನಿಂದ ನಮ್ಮೂರಿನ ಆಯುರ್ವೇದ ಆಸ್ಪತ್ರೆಗೇ ಕರೆತಂದಿದ್ದಾರೆಂದು ತಿಳಿಯಿತು. ಅವರನ್ನು ಕಂಡಾಗಿನ ಆ ಪರಿಸ್ಥಿತಿ ನನ್ನ ಊಹೆಗೆ ನಿಲುಕದಾಗಿತ್ತು. ಆ ಸುಂದರವಾದ ಸುರುಳಿ ಕೂದಲು, ಸದಾ ಹಸನುಖಿಯಾಗಿ ಹರ್ಷದ ಚಿಲುಮೆಯಂತಿದ್ದ, ಎತ್ತರದ ನಿಲುವಿನ ಆಕೆ ರಸ ಹೀರಿದ ಕಬ್ಬಿನಂತೆ ಗೋಡೆಯ ಕಡೆಗೆ ಮುಖಮಾಡಿ ಹಾಸಿಗೆಗಂಟಿ ಮಲಗಿದ್ದರು. ಅವರೊಡನಿದ್ದ ೪-೫ಸಮೀಪ ಬಂಧುಗಳು ನಮ್ಮನ್ನು ನೋಡಿದ ತಕ್ಷಣವೇ ಗುರುತಿಸಿ ಮಾತನಾಡಲಾರಂಭಿಸಿದರು. ಜೀವನದ ಕರಾಳತೆಯೊಡನೆ ಮುಖಾಮುಖಿಯಾದಂತಿದ್ದ ಆ ಸಂದರ್ಭದಲ್ಲಿ ನನಗೆ ಅವರನ್ನು ಹೇಗೆ ಎದುರಿಸುವುದು ಎನ್ನುವ ಪ್ರಶ್ನೆ ಕಾಡಲಾರಂಭಿಸಿತ್ತು.

ಎಚ್ಚರವಾದ ತಕ್ಷಣವೇ 'ತುಂಬಾ ಸುಸ್ತು ಕಣವ್ವ, ಆಗ್ತಾ ಇಲ್ಲ...’ಎಂದು ನರಳಲಾರಂಭಿಸಿದರೂ ತಾವು ಆಡಿ ಬೆಳೆಸಿದ ಮಕ್ಕಳನ್ನು ನೋಡಿ ಮಾತನಾಡಿಸಿದರು. ದುಃಖದ ಸಂಗತಿಯೆಂದರೆ ಎಳೆಕಂದಗಳ ಒಡನಾಟ ಬಯಸುತ್ತಿದ್ದ ಅವರು ತಮ್ಮದೇ ೪ತಿಂಗಳು ಮತ್ತು ೧೦ತಿಂಗಳ ಎರಡು ಮೊಮ್ಮಕ್ಕಳೊಡನೆ ಸಂತಸ ಪಡಲಾರದ ಸ್ಥಿತಿಯಲ್ಲಿದ್ದರು. ಅವರ ಈ ಸ್ಥಿತಿಯನ್ನು ಕಂಡು ಮರುಗಬೇಕಾಗಿದ್ದ 'ಅಮ್ಮಾಜಿ’ ನಮ್ಮನ್ನಗಲಿ ಆಗಲೇ ೬ವರ್ಷಗಳಾಗಿವೆ.

ಈ ಮೊದಲು ಅವರು ಹೇಗಿದ್ದರು ಎನ್ನುವ ನೆನಪು ನನ್ನ ಮಗಳಿಗೆ ಅಲ್ಪಸ್ವಲ್ಪ ಇತ್ತು ಆದರೆ ನನ್ನ ಮಗನಿಗೆ ಸ್ವಲ್ಪವೂ ಇರಲಿಲ್ಲ. ಮನೆಗೆ ಬಂದ ತಕ್ಷಣ ಹಳೆಯ ಆಲ್ಬಂಗಳನ್ನು ಹುಡುಕಿ ಮಕ್ಕಳಿಗೆ ಅವರ ಆಗಿನ ಚಿತ್ರ ತೋರಿಸಿದೆ. ಗೊಂದಲ ಹೊಂದಿದ ಮನಸ್ಸಿಗೆ ಸಾಂತ್ವನ ನೀಡುವ ಓದಿನ ಅಗತ್ಯ ಬೇಕಿತ್ತು. ಅನುಪಮಾ ನಿರಂಜನರ 'ನೆನಪು ಸಿಹಿಕಹಿ’ಗಾಗಿ ಹುಡುಕಿದೆ. ಅಕ್ಕ ತೆಗೆದುಕೊಂಡು ಹೋಗಿದ್ದು ನೆನಪಾಯಿತು. ಮಹಾ ಶ್ವೆತಾದೇವಿಯವರ `ಸ್ಥನದಾಯಿನಿ'ಯ ನೆನಪಾಯಿತು. ಮಗಳು ಓದಲು ಕೊಟ್ಟ Ryandi Pash ಅವರ 'THE LAST LECTURE’ ಓದಲು ನಿರ್ಧರಿಸಿದೆ. ಅಮೇರಿಕ ಜನರಿಂದ ’ಪಿಟ್ಸ್ ಬರ್ಗ್ ನ ಸಂತ’ ಎಂದು ಕರೆಸಿಕೊಂಡ, ಬಾಲ್ಯದಲ್ಲಿ ಕಂಡ ಅನೇಕ ಕನಸುಗಳನ್ನು ನನಸು ಮಾಡಿಕೊಂಡ, ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್, ವಿಜ್ಞಾನಿ,....ಯಾದ Ryandi Pash ಕೇವಲ ನಲವತ್ತೇಳನೇ ವಯಸ್ಸಿಗೇ ಕ್ಯಾನ್ಸರ್ ಗೆ ಬಲಿಯಾದರೂ ತಾನು ಇನ್ನು ನಾಲ್ಕೇ ತಿಂಗಳು ಜೀವಿಸಿರುತ್ತೇನೆ ಎಂದು ತಿಳಿದಾಗಲೂ ತನ್ನ 'THE LAST LECTURE’ ಮೂಲಕ ಸಾವಿನ ಸಾಂಗತ್ಯದಲ್ಲೂ ಬದುಕಿನ ಸಾರ್ಥಕತೆಯನ್ನು ಸಾರುತ್ತಾನೆ.......

ಆದರೂ ಆಕೆ ಅನುಭವಿಸುತ್ತಿದ್ದ ಸುಸ್ತು, ಸಂಕಟಗಳನ್ನು ನೆನಪುಮಾಡಿಕೊಳ್ಳುವಾಗ ಇಲ್ಲಿಯವರೆಗಿನ ಈ ಬದುಕಿಗೆ ಕೃತಜ್ಞತೆ ಸಲ್ಲಿಸುವ ಸಮಯದಲ್ಲಾದರೂ ಸ್ವಲ್ಪ ನೆಮ್ಮದಿ ಲಭಿಸದಿದ್ದರೆ ಈ ಬದುಕಿಗೇನು ಅರ್ಥ? ಎನ್ನುವ ಪ್ರಶ್ನೆ ಕಾಡುತ್ತದೆ. ಅದಕ್ಕಾಗಿ 'ಬದುಕಿಗೆ’ ನನ್ನದೊಂದು ಬಿನ್ನಹ,

’ಬೇಕಾದಂತೆ ಬಳಸಿಕೊ
ನಿನ್ನ ತೆಕ್ಕೆಯಲ್ಲಿ ಬಂಧಿ ನಾನಿಲ್ಲಿ
ಆದರೆ......
ಬಂದಮುಕ್ತಳಾಗುವಾಗ
ತೃಪ್ತಿಯಲಿ ತುಟಿಯರಳಲಿ! ’

Wednesday, May 11, 2011

ಮನದ ಅಂಗಳದಿ.........೩೯.ಭಯ

‘A coward dies many a times but a valiant dies but once.’

ನಾನು ಪಿ.ಯು.ಸಿ. ಯಲ್ಲಿದ್ದಾಗ ಓದಿದ್ದ ` THE VALIENT’ ಎಂಬ ನಾಟಕದಲ್ಲಿದ್ದ ಸಾಲು ಇದು.

ವಿದ್ಯುತ್ ಸಂಪರ್ಕವೇ ಇಲ್ಲದ ಹಳ್ಳಿಯ ಮನೆಯಲ್ಲಿ ರಾತ್ರಿಯ ವೇಳೆಯಲ್ಲಿ ಕತ್ತಲ ಮೂಲೆಗಳನ್ನು ನೋಡಿದಾಗಲೆಲ್ಲಾ ಸದಾ ಹಿರಿಯರು ಹೇಳುತ್ತಿದ್ದ ಕಥೆಗಳಿಂದ, ಮಕ್ಕಳಾದ ನಮ್ಮ ಚರ್ಚೆಯ ಪ್ರಮುಖಾಂಶವಾಗಿ ಪ್ರಚಲಿತದಲ್ಲಿರುತ್ತಿದ್ದ ದೆವ್ವ ಭೂತಗಳ ಕಲ್ಪನೆಯಲ್ಲಿ ನಡುಗುತ್ತಾ ಬಾಲ್ಯವನ್ನು ಕಳೆದಿದ್ದ ನನಗೆ ಈ ಸಾಲು ಬಹಳ ಪ್ರಿಯವಾಗಿತ್ತು. ಮನೆಯಲ್ಲಿ ಅಮ್ಮನಿಂದ ತಮ್ಮನವರೆಗೆ ಎಲ್ಲರೂ ನಿರ್ಭಯರಾಗಿದ್ದುದರಿಂದ ನನ್ನ ‘ಭಯ' ಎಲ್ಲರ ಆಡಿಕೆಯ ವಿಷಯವಾಗಿತ್ತು. ಆ ಭಯ ಎಷ್ಟೊಂದು ವೈಪರೀತ್ಯಕ್ಕೆ ತಲುಪಿತ್ತೆಂದರೆ ಹಗಲು ವೇಳೆಯೂ ಒಬ್ಬಳೇ ನೀರು ಕುಡಿಯಲು ಅಡುಗೆ ಮನೆಗೆ ಹೋಗುವುದಕ್ಕೂ ಜೊತೆಯನ್ನು ಅಪೇಕ್ಷಿಸುವಂತಾಗುತ್ತಿತ್ತು. ನನ್ನ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದ ನಮ್ಮ ಗೌರಮ್ಮ(ಸೋದರತ್ತೆ) ಕುಳಿತ ಜಾಗದಿಂದಲೇ, ‘ಪ್ರಭಾ, ನಾನು ನಿನ್ನ ಜೊತೇಲಿದೀನಿ. ಹೋಗು!' ಎಂದು ಹೇಳುತ್ತಾ ನನ್ನನ್ನು ಹುರಿದುಂಬಿಸುತ್ತಿದ್ದರು. ಬೆಳೆದಂತೆ ‘ಅದೆಲ್ಲಾ ನಮ್ಮದೇ ಕಲ್ಪನೆ' ಎಂದು ಎಷ್ಟೇ ಮನಸ್ಸನ್ನು ಸದೃಢ ಪಡಿಸಿಕೊಳ್ಳಲು ಪ್ರಯತ್ನಿಸಿದರೂ ‘ರಾತ್ರಿ-ಕತ್ತಲು'ಗಳ ಭಯ ನನ್ನೊಡನೆ ಪತಿಗೃಹವನ್ನೂ ಪ್ರವೇಶಿಸಿತು. ಇದನ್ನು ಅರಿತುಕೊಂಡ ನನ್ನ ಅತ್ತೆ ಅಪೇಕ್ಷಿತ ಸಂದರ್ಭಗಳಲ್ಲಿ ಜೊತೆಗೆ ಬರುತ್ತಿದ್ದರು. ಅದೇ ಮನೆಯಲ್ಲಿ ಅವರು ಮರಣಹೊಂದಿದಾಗ, ‘ನನಗೆ ಧೈರ್ಯ ನೀಡುತ್ತಲಿದ್ದವರೇ ಇಲ್ಲದಾಗ ಅವರ ಬಗ್ಗೇ ಭಯಪಡಬಾರದು,'ಎಂದುಕೊಂಡು ನನ್ನನ್ನೇ ನಾನು ಸುಧಾರಿಸಿಕೊಳ್ಳಲಾರಂಭಿಸಿದೆ.........ಭಯ ಉಂಟುಮಾಡಬಹುದಾದ ಎಲ್ಲ ರೀತಿಯ ಋಣಾತ್ಮಕ ಅನುಭವವನ್ನು ಹೊಂದುವುದರಲ್ಲಿ ಪರಿಣತಳಾಗಿದ್ದ ನಾನು, ‘ತಲ್ಲಣ' ಎನ್ನುವ ಕಥೆಯ ಮೂಲಕ ಅದನ್ನು ವ್ಯಕ್ತಪಡಿಸಿದ್ದೆ! ನನ್ನ ಮಕ್ಕಳೇ ಚಿಕ್ಕಂದಿನಿಂದಲೂ ಭಯದ ಪರಿಚಯವೇ ಇಲ್ಲದವರಂತೆ ನಿರ್ಭಯವಾಗಿ ಆರಾಮವಾಗಿರುತ್ತಿದ್ದುದನ್ನು ನೋಡಿದಾಗ ಆಶ್ಚರ್ಯವೆನಿಸುತ್ತಿತ್ತು! ಅವರೆದುರು ನಾನು ನೀಡಿದ್ದ ನನ್ನ ನಿರ್ಭಯ ಚಿತ್ರಣದಿಂದಲೋ ಏನೋ, ಅದುವರೆಗೂ ಭಯದಿಂದ ಹೇಡಿಯಂತೆ ಕ್ಷಣಕ್ಷಣವೂ ಸಾವಿನಂಚಿಗೆ ತಲುಪುತ್ತಿದ್ದ ನನಗೆ ‘ನಿರ್ಭಯ'ಳಾಗಬೇಕೆನ್ನುವುದೇ ಹಂಬಲವಾಗಿತ್ತು! ಈಗ ಅದು ನಿರಂತರ ಅಭ್ಯಾಸದಿಂದ ಸಾಕಾರಗೊಳ್ಳುತ್ತಿದೆ.

ಭಯದ ಬಗ್ಗೆ ರಾಬಿನ್ ಶರ್ಮ ಅವರು ತಮ್ಮ ‘The Monk Who Sold His Ferrary’ಯಲ್ಲಿ ಹೀಗೆ ಹೇಳುತ್ತಾರೆ.

'ನಕಾರಾತ್ಮಕ ಪ್ರಜ್ಞಾಪ್ರವಾಹವೇ ಭಯ. ಅದು ನಾವೇ ಸೃಷ್ಟಿಸಿಕೊಂಡಿರುವ ರಾಕ್ಷಸ. ನಮ್ಮಲ್ಲಿರುವ ಭಯಗಳೆಲ್ಲಾ ಮನಸ್ಸಿನೊಳಗೆ ಅನೇಕ ವರ್ಷಗಳಿಂದ ಸಂಗ್ರಹವಾಗಿರುವ ಸ್ವಯಂ ಸೃಷ್ಟಿತ ಕ್ರಿಮಿಗಳೇ ಆಗಿವೆ. ಅವು ನಾವು ಏನಾದರೂ ಮಾಡಹೊರಟಾಗ ತಡೆಯುತ್ತವೆ. ಆಗ ಅವುಗಳ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ಆದರೆ ಭಯಗಳನ್ನು ಜಯಿಸಿದರೆ ಜೀವನವನ್ನೇ ಜಯಿಸಿದಂತೆ.....

ಭಯವು ಒಂದು ರೀತಿಯ ಸಿದ್ಧ ಪ್ರತಿಕ್ರಿಯೆ. ನಾವು ಜಾಗೃತರಾಗಿರದಿದ್ದರೆ ನಮ್ಮ ಎಲ್ಲಾ ಚೈತನ್ಯ, ಸೃಜನಶೀಲತೆ, ಸ್ಪೂರ್ತಿಗಳನ್ನು ನುಂಗಿ ಜೀವನವನ್ನೇ ಹಿಂಡುವ ಚಟವಾಗಬಹುದು. ಭಯ ತಲೆಯೆತ್ತಿದಾಗ ಅದನ್ನು ಕೂಡಲೇ ಮೊಟಕಬೇಕು. ಯಾವುದನ್ನು ಮಾಡಲು ನಾವು ಹೆದರುತ್ತೇವೆಯೋ ಅದನ್ನೇ ಹಟಹಿಡಿದು ಮಾಡುವುದೇ ಭಯವನ್ನು ಗೆಲ್ಲುವ ಮಾರ್ಗ. ಅದು ನಮ್ಮದೇ ಆದ ಸೃಷ್ಟಿ. ಯಾವುದೇ ಸೃಷ್ಟಿಯಂತೆ ಅದನ್ನು ಹರಿದು ಹಾಕುವುದೂ ಸಾಧ್ಯ. ವ್ಯವಸ್ಥಿತವಾದ ರೀತಿಯಲ್ಲಿ ಮನಸ್ಸಿನ ಕೋಟೆಯಲ್ಲಿ ಅಡಗಿರುವ ಭಯಗಳನ್ನು ಹುಡುಕಿ ಹೊಸಕಿಹಾಕಬೇಕು. ಅದೊಂದೇ ನಮಗೆ ಸಾಕಷ್ಟು ಮನಶ್ಶಾಂತಿ, ಆತ್ಮವಿಶ್ವಾಸ ಹಾಗೂ ಸಂತೋಷಗಳನ್ನು ನೀಡುತ್ತದೆ.' ಜೀವನದ ಸಾಕ್ಷಾತ್ಕಾರವನ್ನು ಪಡೆದ ಜೂಲಿಯನ್ ತನ್ನ ಜೂನಿಯರ್ ಜಾನ್ ಗೆ ಹೀಗೆ ಹೇಳಿದಾಗ,

‘ಮನುಷ್ಯನ ಮನಸ್ಸು ಸಂಪೂರ್ಣವಾಗಿ ನಿರ್ಭಯವಾಗಿರಲು ಸಾಧ್ಯವೇ?' ಎಂದು ಜಾನ್ ಪ್ರಶ್ನಿಸುತ್ತಾನೆ.

‘ಖಂಡಿತ ಸಾಧ್ಯ, ಶಿವನದಲ್ಲಿನ ಪ್ರತಿಯೊಬ್ಬ ಸಾಧುವೂ ನಿರ್ಭಯವಾಗಿದ್ದ. ಅವರ ನಡಿಗೆಯಲ್ಲೇ ಅದನ್ನು ಕಾಣಬಹುದಾಗಿತ್ತು. ಅವರ ಮಾತಿನಲ್ಲೂ, ಅವರ ಕಣ್ಣಿನಲ್ಲಿ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದಾಗ ಕಾಣಬಹುದಿತ್ತು........ನಾನೂ ನಿರ್ಭಯನಾಗಿದ್ದೇನೆ. ನನಗೆ ನಾನು ಯಾರೆಂದು ತಿಳಿದಿದೆ. ನನ್ನ ಮೂಲ ಸ್ವರೂಪದಲ್ಲಿ ಅಗಾಧ ಸಾಧ್ಯತೆ ಹಾಗೂ ಅಪಾರ ಶಕ್ತಿಯಿದೆ ಎಂದು ನನಗೆ ಮನದಟ್ಟಾಗಿದೆ. ಇಷ್ಟು ವರ್ಷಗಳ ಕಾಲ ನಿರ್ಲಕ್ಷ್ಯ ಹಾಗೂ ಅಸಮತೋಲನದ ಯೋಚನೆಗಳ ಕಾರಣ ಬಂಧಿತನಾಗಿದ್ದೆ.....ಭಯವನ್ನು ಮನಸ್ಸಿನಿಂದ ಅಳಿಸಿಹಾಕಿದರೆ ಸಾಕು-ನಮ್ಮ ಆರೋಗ್ಯ ವರ್ಧಿಸುತ್ತದೆ, ಯೌವನ ಮರುಕಳಿಸುತ್ತದೆ.' ಎನ್ನುತ್ತಾನೆ ಜೂಲಿಯನ್,

'ಭಯ'ದ ಬಗ್ಗೆ ಜಿಡ್ಡು ಕೃಷ್ಟಮೂರ್ತಿಯವರು ಹೇಳುವುದು ಹೀಗೆ,

'ಜನ ನಮ್ಮ ಬಗ್ಗೆ ಏನೆಂದುಕೊಳ್ಳುವರೋ ಎನ್ನುವ ಭಯವಿರುತ್ತದೆ. ಏನನ್ನೋ ಸಾಧಿಸಲಾರೆವು ಎಂಬ ಭಯ, ಏನನ್ನೋ ಪೂರ್ಣಗೊಳಿಸಲಾರೆವು ಎಂಬ ಭಯ, ಇದ್ದ ಅವಕಾಶವನ್ನು ಕಳೆದುಕೊಂಡೆವು ಅಥವಾ ಕಳೆದುಕೊಂಡೇವು ಎಂಬ ಭಯ ಇರುತ್ತದೆ. ಇದೆಲ್ಲದರಿಂದ ನಮ್ಮಲ್ಲಿ ತಪ್ಪಿತಸ್ಥ ಭಾವನೆ, ನಾವು ಅಪರಾಧಿಗಳೆಂಬ ಭಾವನೆ ಹುಟ್ಟುತ್ತದೆ......

ಭಯವೆನ್ನುವುದು ಮನುಷ್ಯನೊಳಗಿನ ವಿನಾಶಕಾರೀ ಶಕ್ತಿ. ಅದು ಮನಸ್ಸನ್ನು ಒಣಗಿಸುತ್ತದೆ. ಆಲೋಚನೆಯನ್ನು ವಿಕೃತಗೊಳಿಸುತ್ತದೆ, ಜಾಣತನದ ಸೂಕ್ಷ್ಮ ಸಿದ್ಧಾಂತಗಳನ್ನು ಹುಟ್ಟಿಹಾಕುತ್ತದೆ, ಅಸಂಗತ ಮೂಢನಂಬಿಕೆ, ನಂಬಿಕೆಗಳಿಗೆ ಜನ್ಮನೀಡುತ್ತದೆ......

ನಮ್ಮೊಳಗಿನ ಭಯವನ್ನು ನಿವಾರಿಸಿಕೊಳ್ಳದೇ ಮತ್ತೊಬ್ಬರನ್ನು ಹಿಂಬಾಲಿಸುವುದು ಅಥವಾ ಮತ್ತೊಬ್ಬರು ನಮ್ಮನ್ನು ಹಿಂಭಾಲಿಸುವುದು ಎರಡಕ್ಕೂ ಅರ್ಥವಿಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲಿರುವ ಭಯ, ಅದು ಕಾಣಿಸಿಕೊಳ್ಳುವ ವಿವಿಧ ರೂಪಗಳು ಇವನ್ನು ತಿಳಿದುಕೊಳ್ಳುವುದು ಮಾತ್ರ ಅರ್ಥಪೂರ್ಣವಾಗುತ್ತದೆ. ನಾವು ಭಯದಿಂದ ಮುಕ್ತರಾದಾಗ ಮಾತ್ರ ಅಂತರಂಗದ ಅರಿವು, ಅನುಭವ ಅಥವಾ ಜ್ಞಾನದ ಸಂಗ್ರಹವಲ್ಲದ ಏಕಾಂಗಿತನ ನಮ್ಮದಾಗುತ್ತದೆ. ಆಗ ಮಾತ್ರ ವಾಸ್ತವವನ್ನು ಕಾಣುವ ಸ್ಪಷ್ಟತೆ ನಮಗೆ ಲಭಿಸುತ್ತದೆ.

'ಭಯದಿಂದ ಮುಕ್ತರಾಗುವುದು ಹೇಗೆ?' ಎಂಬ ಪ್ರಶ್ನೆ ಮುಖ್ಯವಲ್ಲವೇ ಅಲ್ಲ. ಭಯದಿಂದ ಮುಕ್ತರಾಗುವ ಒಂದು ದಾರಿ, ಒಂದು ವಿಧಾನ, ಒಂದು ಕ್ರಮವನ್ನು ಹುಡುಕುತ್ತಾ ಹೊರಟರೆ ಆಗ ನೀವು ಶಾಶ್ವತವಾಗಿ ಭಯಕ್ಕೆ ಸಿಕ್ಕಿಬೀಳುತ್ತೀರಿ. ಆದರೆ ಭಯವನ್ನು ಅರ್ಥಮಾಡಿಕೊಂಡರೆ, ಹಸಿವನ್ನು ನೇರವಾಗಿ ಕಾಣುವಂತೆ ಭಯವನ್ನೂ ನೇರವಾಗಿ ಕಾಣುವುದಕ್ಕೆ ಆದರೆ, ಉದಾಹರಣೆಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಭಯ ನೇರವಾಗಿ ಎದುರಾದರೆ, ಆಗ ನೀವು ಏನಾದರೂ ಮಾಡುತ್ತೀರಿ. ಏನಾದರೂ ಮಾಡುವ ಆ ಕ್ಷಣ ಎಲ್ಲ ರೀತಿಯ ಭಯ ಇಲ್ಲವಾಗುವುದು ನಿಮಗೆ ತಿಳಿಯುತ್ತದೆ.'

ನಮ್ಮದೇ ಸೃಷ್ಟಿಯಾಗಿದ್ದು ನಮ್ಮ ಪ್ರಗತಿಗೇ ಅಡ್ಡವಾಗಿರುವ ಈ 'ಭಯ'ವನ್ನು ಸಕಾರಾತ್ಮಕವಾಗಿ ಕಾರ್ಯಪ್ರವೃತ್ತರಾಗಿ ಇಲ್ಲವಾಗಿಸಿ, ನಮ್ಮದೇ ನಿರ್ಭಯದ ಪಥದಲ್ಲಿ ಮುಂದೆ ಸಾಗೋಣ.

Thursday, May 5, 2011

ಪಲ್ಲಟ

ಸಂಜೆ ಕಾಲೇಜಿನಿಂದ ಹೊರಟವಳನ್ನು ಅಚಾನಕ್ಕಾಗಿ ಅವಳ ಕಾಲುಗಳು ನದಿಯ ಕಡೆಗೇ ಎಳೆದವು. ಏಕೋ ಮನೆಗೆ ಹೋಗಬೇಕೆನಿಸುತ್ತಲೇ ಇಲ್ಲವಲ್ಲ..... ಮನೆ? ಯಾರ ಮನೆ ಅದು? ನನ್ನದ? ನನ್ನದು ಅಂದರೆ ಏನು? ಯೋಚನೆಗಳು ಅಸಂಬದ್ಧವಾಗುತ್ತಿವೆಯೇ? ಯಾರ ಸಹವಾಸವೂ ಬೇಡ, ಹೀಗೇ ಒಬ್ಬಳೇ ಮೌನವಾಗಿ ಜುಳುಜುಳು ಹರಿದು ಸಾಗುವ ನೀರನ್ನೇ ನೋಡುತ್ತಾ ಕೂರಬೇಕೆನಿಸುತ್ತಿದೆ. ಮಾತುಗಳು ಏಕೆ ಬೇಕು? ಆಡಿದ ನಂತರ ಅರ್ಥವನ್ನೇ ಕಳೆದುಕೊಳ್ಳುವ ಪದಪುಂಜಗಳು.....

ಆ ಹರವಾದ ಬಂಡೆಯ ಮೇಲೆ ಕುಳಿತು ಕಾಲುಗಳನ್ನು ನೀರಿನಲ್ಲಿ ಮುಳುಗಿಸಿ, ದೃಷ್ಟಿಯನ್ನು ಎತ್ತಲೋ ನೆಟ್ಟು.....ಪಾದಗಳನ್ನು ಹರಿವ ನೀರಿನ ತಣ್ಪು ತಂಪಾಗಿಸುತ್ತಿದ್ದರೂ ತಲೆಯ ಬಿಸಿ ಇಳಿದಿರಲಿಲ್ಲ. ಮೊದಲಾಗಿದ್ದರೆ ಆ ಕಾಲುಗಳು ಸುಮ್ಮನಿರುತ್ತಿದ್ದವೇ? ನೀರೊಳಗೆ ಇಳಿಬಿಟ್ಟರೆ ಸಾಕು, ದಬದಬ ಬಡಿಯುತ್ತಾ, ನೀರಹನಿ ಮೇಲೆ ಹಾರಿ ಮುಖದಮೇಲೆ ಬಿದ್ದಾಗ ಕಿಲಕಿಲನೆ ನಗುತ್ತಾ.... ಕೈಗಳಿಂದಲೂ ನೀರನ್ನು ಎರಚುತ್ತಾ.....ಆ ದಿನಗಳನ್ನು ನೆನೆದೇ ಅವಳ ತುಟಿಯ ಮೇಲೆ ಕಿರುನಗೆ ಮೂಡಿತು!

‘ಏ...ಏ...ಸುಮ್ಮನಿರು ಸುಮಾ, ಡ್ರೆಸ್ ಒದ್ದೆಯಾಗುತ್ತೆ. ಸಂಜೆಹೊತ್ತು ಒಣಗಲ್ಲ. ಮನೆಗೆ ಹೋಗೋವಾಗ ನೋಡಿದವರು ಏನಂತಾರೆ.....' ಅವನ ದನಿ ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಲೇ ಇದೆ. ಆಗ ಸ್ವಲ್ಪ ಬಟ್ಟೆ ಒದ್ದೆಯಾದರೆ ಜನ ಏನಂತಾರೆ ಎನ್ನುವಂತಿದ್ದ ಸಾಮಾಜಿಕ ಪ್ರಜ್ಞೆ ಈಗೆಲ್ಲಿ ಹೋಯ್ತು? ಇಷ್ಟು ವರ್ಷಗಳ ತಮ್ಮ ದಾಂಪತ್ಯ ಜೀವನವನ್ನು ಬಿಗಿಯಾಗಿ ಬಂಧಿಸಿದ್ದ ಆ ನಂಬಿಕೆ ಎಂಬ ಕೊಂಡಿ ಎಲ್ಲಿ ಕಳಚಿತು?

ನಿನ್ನೆಯೂ ಅಷ್ಟೆ, ಬಂದು ಈ ಬಂಡೆಯ ಮೇಲೆ ಕುಳಿತವಳು ಇಡೀ ರಾತ್ರಿ ಅಲ್ಲೇ ಕಳೆದಿದ್ದಳು. ತಾನು ಓದಿದ ಒಂದು ಕಾದಂಬರಿಯಲ್ಲಿ ಅದರ ನಾಯಕಿ ಬೇಸರವಾದಾಗಲೆಲ್ಲಾ ರಾತ್ರಿ ಯಾವ ವೇಳೆಯಾದರೂ ಸರಿ, ಒಬ್ಬಳೇ ಕಾರಿನಲ್ಲಿ ಬೆಟ್ಟದ ಮೇಲೆ ಹೋಗಿ ಕುಳಿತು, ಕೈಯಲ್ಲಿ ಲೋಡ್ ಮಾಡಿದ ಪಿಸ್ತೂಲು ಹಿಡಿದು.....ಅವಳಿಗೇನು ಭಯ ಎನ್ನುವುದೇ ಇರಲಿಲ್ಲವೇ? ದೆವ್ವ-ಭೂತಗಳ ಭಯ ಬೇಡ, ಕಳ್ಳ-ಕಾಕರ ಭಯವೂ ಇರಲಿಲ್ಲವೇ? ಎನಿಸಿತ್ತು. ಆದರೆ ಈಗ? ತನ್ನ ಯೋಚನಾ ಲಹರಿಯಲ್ಲಿ ಹೊತ್ತು ತನಗೆ ತಾನೇ ಸರಿದು ಕತ್ತಲು ಕರಗಿ ಬೆಳಕು ಮೂಡಿದ್ದೇ ತಿಳಿದಿರಲಿಲ್ಲ. ಹೀಗೇ ತನ್ನ ಬಾಳಿನಲ್ಲೂ.....

ಹೊತ್ತೇರಿದಂತೆ ಕರ್ತವ್ಯಪ್ರಜ್ಞೆ ಕೂಗಿ ಕರೆದಂತಾಗಿ ಕಾಲೇಜಿನತ್ತಲೇ ಹೆಜ್ಜೆಗಳು ಸಾಗಿದ್ದವು. ನಿನ್ನಯದೇ ಉಡುಗೆ, ಕೆದರಿದ ಕೇಶ, ಮ್ಲಾನವದನ....ಎಲ್ಲರೂ ತನ್ನತ್ತಲೇ ನೋಡುತ್ತಿರುವರೇ? ತಾನು ಮಾತ್ರ ತಲೆ ತಗ್ಗಿಸಿಕೊಂಡೇ....(ತಲೆ ತಗ್ಗಿಸಿದ್ದೇಕೆ? ತಾನೇನೂ ತಪ್ಪು ಮಾಡಿಲ್ಲವಲ್ಲ. ಬಾಹ್ಯರೂಪ ವೈಪರೀತ್ಯವೂ....ಅಲ್ಲ, ಅಲಂಕಾರರಾಹಿತ್ಯವೂ ತಲೆ ತಗ್ಗಿಸುವಂತೆ ಮಾಡುತ್ತದೆಯೇ?) ಕ್ಲಾಸ್‌ರೂಂನೊಳಗೆ ಹೋಗಿ ಪಾಠ ಮಾಡಿ ಬಂದಿದ್ದಳು. ವಿದ್ಯಾರ್ಥಿಗಳೊಡನಿದ್ದ ಆ ಕೆಲವು ವೇಳೆ ಎಂದಿನಂತೆ ತನ್ನನ್ನೇ ತಾನು ಮರೆತು ಲೀನವಾಗಲು ಪ್ರಯತ್ನಿಸಿದ್ದರೂ.....ಏನೋ ಅವರ ನಡುವೆಯೇ ಗುಸು-ಗುಸು, ಪಿಸು-ಪಿಸು....ಪ್ರತಿದಿನದಂತೆ ತನ್ನ ಪಾಠವನ್ನು ಅವರು ಮನಸ್ಸಿಟ್ಟು ಕೇಳುತ್ತಿಲ್ಲ ಎನ್ನುವುದು ಬಹಳ ಬೇಗನೆ ಅರಿವಿಗೆ ಬಂದಿತ್ತು.

ಸ್ಟಾಫ್‌ರೂಂನತ್ತ ಬಂದಾಗ ಒಳಗಿನಿಂದ ಎದ್ದ ನಗೆಯ ಅಲೆಗಳು ಕಿವಿಗಪ್ಪಳಿಸಿ ಏನೋ ಸಂಶಯವಾದಂತೆನಿಸಿ ಹೊರಗೇ ನಿಂತುಬಿಟ್ಟಳು. ತಕ್ಷಣ ಜಾಗರೂಕಳಾಗಿ ಪ್ರಿನ್ಸಿಪಾಲರೂ ಒಳಗೆ ಇದ್ದಾರೆ ಎನ್ನುವುದನ್ನು ಗಮನಿಸಿ, ತನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾದಾಗ ಅಲ್ಲೇ ಕಂಬಕ್ಕೊರಗಿದಳು. ಅವಳ ಸ್ವಭಾವಕ್ಕೆ ವ್ಯತಿರಿಕ್ತ ರೀತಿಯಲ್ಲಿ ಒಳಗಿನ ಸಂಭಾಷಣೆಯನ್ನು ಕೇಳಿಸಿಕೊಳ್ಳಲು ಕಿವಿಗಳು ಕಾತರಿಸಿದವು.

‘ರಾತ್ರಿ ಪೂರ್ತ ನದಿ ಮಧ್ಯದ ಬಂಡೆಯ ಮೇಲೇ ಕುಳಿತಿದ್ದಳಂತೆ ಸರ್.' ಮೊದಲಿನಿಂದಲೂ ತನ್ನನ್ನು ರೈವಲ್ ಎಂದೇ ಪರಿಗಣಿಸಿದ್ದ ಸಹೋದ್ಯೋಗಿ ರೇವತಿಯ ದನಿ.

‘ಇವತ್ತು ಅಟೆಂಡೆನ್ಸ್‌ಗೆ ಸೈನ್ ಮಾಡಕ್ಕೆ ಬಂದಾಗಲೇ ಏನೋ ವಿಚಿತ್ರವಾಗಿ ಕಾಣ್ತಿದಾರೆ ಅಂದುಕೊಂಡೆ. ಪ್ರತಿದಿನದಂತೆ ವಿಷ್ ಕೂಡ ಮಾಡಲಿಲ್ಲ.' ಸ್ವಗತವೆನ್ನುವಂತೆ ಪ್ರಿನ್ಸಿಪಾಲರ ಮಾತು.

‘ಇಷ್ಟು ಸಣ್ಣ ವಿಷಯಕ್ಕೆಲ್ಲಾ ಹೀಗೆ ತಲೆ ಕೆಡಿಸಿಕೊಳ್ಳೋದಾ ಸರ್, ಹೇಮಂತ್ ಏನ್ ಕಡಿಮೆ ಮಾಡಿದಾರೆ ಅಂತ ಹೀಗಾಡ್ತಾರೋ,.....' ಪ್ರಿನ್ಸಿಪಾಲರ ಜೊತೆ ಮಾತನಾಡುತ್ತಿದ್ದೇನೆಂಬ ವಿವೇಚನೆಯೂ ಇಲ್ಲದೇ ಪಕ್ಕದ ಮನೆಯವರ ಜೊತೆ ಹರಟುವಂತೆ ಹೇಮಂತ್ ತನಗೆ ಏನೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾನೆ ಎನ್ನುವ ಲಿಸ್ಟನ್ನೇ ಕೊಡುತ್ತಿದ್ದಾಳೆ. ಪರವಾಗಿಲ್ಲ ತನ್ನ ಬಗ್ಗೆ ಬಹಳ ಚನ್ನಾಗೇ ಅಂಕಿ-ಅಂಶಗಳೊಡನೆ ಮಾಹಿತಿ ಸಂಗ್ರಹಿಸಿದ್ದಾಳೆ ಎನಿಸುವುದರೊಡನೆಯೇ ಸದಾ ತನ್ನೊಡನೆ ಸ್ಪರ್ಧೆಗಿಳಿದಂತೆ ವರ್ತಿಸುವ ಅವಳ ವರ್ತನೆಯ ಕುರಿತು ಜುಗುಪ್ಸೆಯುಂಟಾದಂತಾಗಿ...

‘ಸೆಣೆಸುವೆ ಏಕೆ ನಿರಂತರ
ನನ್ನ ಮೇಲಿನ ಜಯಕ್ಕಾಗಿ,
ಜಯ-ಅಪಜಯ ಅಪ್ರಸ್ತುತ
ನಾನೀಗ ತಟಸ್ಥ' ಎನ್ನುವ ಸಾಲುಗಳು ಅಪ್ರಯತ್ನವಾಗಿ ಮನಸ್ಸಿನಲ್ಲಿ ಮೂಡಿದವು!

‘ಸಾಕು ನಿಲ್ಲಿಸಿ ರೇವತಿ, ಸುಮಾನೂ ಆರ್ಥಿಕ ಸ್ವಾವಲಂಭಿ ಅನ್ನೋದನ್ನ ಮರೀಬೇಡಿ.' ಕನ್ನಡ ಉಪನ್ಯಾಸಕಿ ಶಾರದಾ ಮಿಸ್ ವಿರೋಧ.

‘ಮೊದಲು ವಿಷಯ ಏನು ಅನ್ನೋದನ್ನ ಸರಿಯಾಗಿ ತಿಳಿಸಿ.' ಯಾರ ಸಹವಾಸಕ್ಕೂ ಬರದ ಸಂಸ್ಕ?ತ ಲೆಕ್ಚರರ್ ಅಯ್ಯಂಗಾರರ ಕುತೂಹಲ!

‘ಸುಮಾಮಿಸ್ ಹಸ್ಬೆಂಡ್ ಹೇಮಂತ್ ಬೇರೆ ಯಾರೋ ಹುಡುಗಿ ಜೊತೆಯಲ್ಲಿ ಓಡಾಡ್ತಿದಾರೆ ಅಂತ ಸುದ್ಧಿ. ಅದಕ್ಕೆ ಇವರ ವಿರೋಧ......'ಎಂದು ತಾನು ನದಿಯ ಬಂಡೆಯ ಮೇಲೆ ಕುಳಿತಿದ್ದನ್ನು ಸ್ವತಃ ಕಂಡಂತೆ ವಿವರಿಸುತ್ತಿರುವ ರೇವತಿ.

'ಸಾರ್, ವಿಷಯ ತಿಳಿದ ಹೇಮಂತ್ ಅವಳೊಬ್ಬಳು ಹುಚ್ಚಿ, ಹಾಳಾಗಿ ಹೋಗ್ಲಿ ಅಂದ್ರಂತೆ.'

‘ಹುಚ್ಚಿ' ಎನ್ನುವ ಪದ ಕಿವಿಗೆ ಬಿದ್ದದ್ದೇ ಎಲ್ಲರೂ ಹುಚ್ಚೆದ್ದು ನಗುತ್ತಿರುವಂತೆ ಭಾಸವಾಗುತ್ತಿದೆ. ಇದು ತನ್ನ ಕಲ್ಪನೆಯೆ? ? ? ಇಲ್ಲ... ನಿಜಕ್ಕೂ ನಗುತ್ತಿದ್ದಾರೆ!

‘ಸಾಕುಮಾಡಿ ರೇವತಿ, ನೀವೂ ಒಬ್ಬ ದುಡಿಯುವ ಮಹಿಳೆಯಾಗಿ, ವಿದ್ಯಾವಂತೆಯಾಗಿ ಹೀಗಾ ಮಾತಾಡೋದು? ನಿಮಗೇ ಇಂಥಾ ಪರಿಸ್ಥಿತಿ ಬಂದಿದ್ರೆ ಏನ್ ಮಾಡ್ತಿದ್ರಿ?' ಪ್ರಿನ್ಸಿಪಾಲ್ ಎದುರಿಗಿದ್ದಾರೆನ್ನುವುದನ್ನೂ ಪರಿಗಣಿಸದೆ ಜೋರು ದನಿಯಲ್ಲೇ ಗದರಿಬಿಟ್ಟರು ಶಾರದಾಮಿಸ್! ಅವರಿಗೆ ಬಂದಂತಹ ಆವೇಶ ತನಗೇಕೋ ಬರುತ್ತಲೇ ಇಲ್ಲ! ಬದಲಿಗೆ ಈ ಸಂದರ್ಭದಲ್ಲೂ ಅವರು ಅಚ್ಚ ಕನ್ನಡದಲ್ಲೇ ಮಾತನಾಡುವ ಪರಿಗೆ ಅಚ್ಚರಿ ಮೂಡುತ್ತಿದೆ! ಹಾಗಾದರೆ ತನ್ನನ್ನು ಹಿಂಸಿಸುತ್ತಿರುವ ಈ ಭಾವ ಯಾವುದು?

‘ಓ. ಕೆ., ವಿಷಯ ಹೀಗೆ ಟರ್ನ್ ತಗೊಳ್ಳುತ್ತೆ ಅಂತ ನನಗೆ ತಿಳೀಲಿಲ್ಲ. ಐ ಫೀಲ್ ಪಿಟಿ ಫಾರ್ ಹರ್,' ಎಂದು ಪ್ರಿನ್ಸಿಪಾಲ್ ಮೇಲೆದ್ದರು. ಅವರು ಹೊರಟಿದ್ದನ್ನು ಗಮನಿಸಿದ ಸುಮಾ ಅವರಿಗೆ ಕಾಣಿಸದಂತೆ ಕಂಬದ ಹಿಂದೆ ಮರೆಯಾದಳು. ಪಿಟಿ.....ಕರುಣೆ..... ತಾನು ಯಾರಿಂದಲೂ, ಎಂದೂ ಅಪೇಕ್ಷಿಸದ ಭಾವನೆ. ಇನ್ನು ಬೆಲ್ ಆಗುವ ಸಮಯ.ಎಲ್ಲರೂ ಒಬ್ಬೊಬ್ಬರಾಗಿ ಹೊರಡುತ್ತಾರೆ ಎನಿಸಿ ತಾನೇ ಮೊದಲು ಹೊರಟು ಬೇಗಬೇಗ ಹೆಜ್ಜೆ ಹಾಕಿದಳು.

ಹಿಂದಿನ ದಿನ ತಾನೇಕೆ ಹೀಗೆ ಬಂದು ಇಲ್ಲಿ ಕುಳಿತೆ ಎನ್ನುವುದು ಪೂರ್ಣವಾಗಿ ಸ್ಪಷ್ಟವಾಗಿರಲಿಲ್ಲ. ಈಗ..... ಕುಳಿತಾಕ್ಷಣವೇ ಮನಃಪಟಲದ ಮೇಲೆ ಮೂಡುತ್ತಿರುವ.....ಮೊದಲಿನಿಂದಲೂ ತನ್ನ ಬಗ್ಗೆ ಈರ್ಷೆಯನ್ನೇ ಹೊಂದಿದ್ದ ರೇವತಿ ಏನೋ ದಿಗ್ವಿಜಯ ಸಾಧಿಸಿದಂತೆ ತನ್ನ ಬಗ್ಗೆ ಸಂಗ್ರಹಿಸಿದ ವಿಷಯಗಳ ಮಂಡನೆ, ಶಾರದಾಮಿಸ್ ತನ್ನನ್ನು ವಹಿಸಿಕೊಂಡು, ತನ್ನ ಪರವಾಗಿ ಆಡಿದ ಮಾತುಗಳು, ತನಗೆ ಸ್ಪಷ್ಟವಾಗಿ ಕಾಣದಿದ್ದರೂ ಕಲ್ಪಿಸಿಕೊಳ್ಳಬಹುದಾದ ಪ್ರಿನ್ಸಿಪಾಲ್ ಹಾಗೂ ಇತರರ ಮೊಗದ ಮೇಲಿನ ಭಾವನೆಗಳು......

ಈ ಖಾಸಗಿ ಸಂಸ್ಥೆಗಳಲ್ಲಿ ನವಯುವತಿಯರಾಗಿ ಕೆಲಸಕ್ಕೆ ಸೇರಿದವರು ಮಧ್ಯವಯಸ್ಕರಾದರೂ ಅದೇ ಸಹೋದ್ಯೋಗಿಗಳ ಮುಖಗಳನ್ನು ನೋಡುತ್ತಾ, ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಸುಕ್ಕುಗಳಿಗೆ ಆಹ್ವಾನಕೊಡುವುದು ಬೇಸರವೆನಿಸಿದರೂ. ಆರ್ಥಿಕವಾಗಿ ತನ್ನ ದುಡಿಮೆ ಅನಿವಾರ್ಯವಲ್ಲದಿದ್ದರೂ ತನ್ನ ವ್ಯಕ್ತಿತ್ವ ಉಳಿಸಿಕೊಳ್ಳಲು ಎನ್ನುವುದಕ್ಕಿಂತಲೂ ತನಗೆ ದೊರೆಯುತ್ತಿದ್ದ ಮಾನಸಿಕ ತೃಪ್ತಿಗಾಗಿ, ಖುಷಿಗಾಗಿ ಕೆಲಸಕ್ಕೆ ಬರಲು ಕಾತರಿಸುತ್ತಿದ್ದಳು. ಆಗೆಲ್ಲಾ ತನ್ನಂದಿಗೇ ಸ್ಪಂಧಿಸುತ್ತಿದ್ದ, ಒತ್ತಾಸೆಯಾಗಿದ್ದ ಹೇಮಂತ್ ಈಗ, ಇಷ್ಟು ವರ್ಷಗಳ ನಂತರ.....

ದೂರದ ಊರಿನಲ್ಲಿ ಮೆಡಿಕಲ್ ಓದುತ್ತಿರುವ ಮಗ, ಅವನ ಭವಿಷ್ಯ..... ಜವಾಬ್ಧಾರಿಯಿಂದಿರಬೇಕಾದ ವಯಸ್ಸಿನಲ್ಲಿ ಹೀಗೇಕಾದ? ‘ನಿಮ್ಮ ಹೇಮಂತ್.....'ಎಂಬ ಮಾತು ಕಿವಿಯ ಮೇಲೆ ಬಿದ್ದರೂ ಮುಗುಳ್ನಕ್ಕು ಅಲ್ಲಿಗೇ ತಡೆಯುತ್ತಿದ್ದ ತಾನು ನಂಬಿಯೇ ಇರಲಿಲ್ಲವಲ್ಲಾ..... ಕೆಲವು ದಿನಗಳಿಂದ ಅವನ ವರ್ತನೆಯಲ್ಲಿ ಏನೋ ಮಾರ್ಪಾಡು, ತನ್ನ ಬಗ್ಗೆ ನಿರಾಸಕ್ತಿಯ ಸುಳಿವು ಕಂಡರೂ ತಾನು ಅದನ್ನು ಅಷ್ಟಾಗಿ ಪರಿಗಣಿಸಿರಲೇ ಇಲ್ಲವೆನಿಸುತ್ತಿದೆ.

ದಾಂಪತ್ಯದಲ್ಲಿ ಬೌದ್ಧಿಕ ಸಾಹಚರ್ಯ ಬಹಳ ಪ್ರಮುಖವಾದದ್ದು ಎನ್ನುವ ತನ್ನ ಅಭಿಪ್ರಾಯಕ್ಕೆ ಮನ್ನಣೆಯಿತ್ತಿದ್ದವನು, ಪ್ರಾರಂಭದಲ್ಲಿ ತನ್ನದು ಪರ್‍ಮನೆಂಟ್ ಕೆಲಸವಾಗಿದ್ದು ಅವನದ್ದು ಕಾಂಟ್ರಾಕ್ಟ್ ಎನ್ನುವ ಕಾರಣಕ್ಕೆ ಅವನಿಗೆ ಕೀಳರಿಮೆ ಬರುವುದು ಬೇಡವೆಂದು ಪ್ರಾಮುಖ್ಯತೆ ಕೊಟ್ಟಿದ್ದು ಹೆಚ್ಚಾಗಿರಲೂ ಬಹುದು. ಕೆಲಸ ಪರ್‍ಮನೆಂಟ್ ಆದ ನಂತರ ವರುಷಗಳು ಕಳೆದಂತೆ ಅಹಮಿಕೆ ಬೆಳೆಯಲಾರಂಭಿಸಿತು. ತಾನು ಪಿಹೆಚ್.ಡಿ. ಮಾಡುವಾಗ ಮನೆಯ, ಮಗುವಿನ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದವನು ನಂತರ ತನ್ನಿಂದಲೇ ಇವಳಿಗೆ ಪಿಹೆಚ್.ಡಿ. ಮಾಡಲು ಸಾಧ್ಯವಾಯಿತು ಎನ್ನುವಂತೆ ಸ್ನೇಹಿತರು, ಬಂಧುಗಳ ನಡುವೆ ಬಿಂಭಿಸಲಾರಂಭಿಸಿದ. ಡಾಕ್ಟರೇಟ್ ಆದ ನಂತರ ಮೊದಲಿಗಿಂತಲೂ ಹೆಚ್ಚಾಗಿ ಕಾರ್ಯಕ್ರಮಗಳಿಗೆ ಭಾಷಣಕಾರಳನ್ನಾಗಿ ಆಹ್ವಾನಿಸಲಾರಂಭಿಸಿದರು. ವೃತ್ತಿಕ್ಷೇತ್ರದಲ್ಲಿ ಹಾಗೂ ಪ್ರವೃತ್ತಿಯಲ್ಲಿ ತನ್ನ ಜವಾಬ್ಧಾರಿ ಹೆಚ್ಚಾದಂತೆ ಎಷ್ಟೋ ವೇಳೆ ಅವನನ್ನು ಗಮನಿಸಲು ತನಗೆ ಸಾಧ್ಯವಾಗುತ್ತಿಲ್ಲವೆನಿಸಿ ಕನಿಕರವುಂಟಾಗುತ್ತಿತ್ತೇ ವಿನಾ...... ತಮ್ಮಿಬ್ಬರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತೆ?

ನಿನ್ನೆ ಕಾಲೇಜಿನಿಂದ ಮನೆಗೆ ಬಂದಾಗ ಒಳಗಿನಿಂದ ಕೇಳಿದ ಅವರ ನಗು! ಓಹ್ ಅವಳನ್ನು ಮನೆಗೇ ಕರೆತಂದಿದ್ದಾನೆಯೇ? ಸೀದಾ ಒಳಗೆ ಹೋಗಿ ಯಾರವಳು? ಏಕೆ ಕರೆದುಕೊಂಡು ಬಂದಿದ್ದಾನೆ?....ವಿವರಗಳನ್ನು ಪರಿಶೀಲಿಸಿ......ಉಹುಂ, ಮನಸ್ಸು ಅಷ್ಟಕ್ಕೆಲ್ಲಾ ಅವಕಾಶ ನೀಡದೇ ನೇರ ಇಲ್ಲಿಗೇ ಎಳೆದು ತಂದದ್ದೇಕೆ?

ಬಂಡೆಯನ್ನು ಬಳಸಿ ಮುಂದೆ ಹರಿಯುವ ನೀರು ಸಮತಟ್ಟಾಗಿ ಚಾಪೆ ಹಾಸಿದಂತೆ ಕಾಣುತ್ತಿದೆ. ಅದನ್ನು ನೋಡುತ್ತಲೇ ಇದ್ದಂತೆಯೇ......

‘ಹೇಮು ಅಲ್ಲಿ ನೋಡು, ನೀರು ಹೇಗೆ ಸಮತಟ್ಟಾದ ಮೇಲ್ಮೈ ಹೊಂದಿದೆ! ಒಳ್ಳೆ ಚಾಪೆ ಹಾಸಿದಂತೆ ಕಾಣ್ತಾ ಇದೆ! ಸೂರ್ಯ ರಶ್ಮಿಗೆ ಫಳಫಳಾಂತ ಹೊಳೀತಿದೆ!'

'ಮೊದಲೇ ಹೇಮಾವತಿ ನದಿ ಅಲ್ವ? ಚಿನ್ನದಂತೆ ಹೊಳೀತಿರೋದರಿಂದಲೇ ಈ ಹೆಸರು ಬಂದಿರೋದು. ಮೊದಲು ಇದನ್ನ ಸಗಣೀ ಹೊಳೆ ಅಂತಾ ಅಂತಿದ್ರಂತೆ.....' ಎಂದು ನದಿಯ ಇತಿಹಾಸದತ್ತ ಹೊರಳುತ್ತಿದ್ದ ಇತಿಹಾಸದ ಉಪನ್ಯಾಸಕ!

ಆ ಸಮತಟ್ಟಾಗಿರೋ, ಚಾಪೆ ಹಾಸಿದಂತಿರೋ ನೀರಿನ ಮೇಲೆ ನೀಳವಾಗಿ ಕಾಲು ಚಾಚಿ ಮಲಗಿ ತೇಲುತ್ತಾ ಹೋಗಬೇಕು ಎನ್ನುವ ತನ್ನ ಆಸೆಯನ್ನು ಹೇಳಿದಾಗಲೆಲ್ಲಾ ತನ್ನ ಅನಿಸಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಭಾವುಕನಾಗಿಬಿಡುತ್ತಿದ್ದ! ಈಗ ತನ್ನನ್ನು ಮಾತಿನಲ್ಲಿ, ಕ್ರಿಯೆಯಲ್ಲಿ ತಡೆಯುವವರು ಯಾರೂ ಇಲ್ಲ. ಇಲ್ಲಿಂದಲೇ ಹೇಡಿಯಂತೆ ‘ಗುಳುಂ' ಎಂದು ಮುಳುಗದೇ ಆ ಸೇತುವೆಯ ಮೇಲೆ ನಡೆದು ಬಂದು ಒಂದೇ ಸಾರಿ ಹಾರಿದರೆ....ತೇಲುತ್ತಾ.....ತೇಲುತ್ತಾ.......ಅಂದರೆ ಆತ್ಮಹತ್ಯೆಯ ಆಲೋಚನೆಯೇ? ಇವತ್ತು ಅವನು ‘ಹುಚ್ಚಿ' ಅಂದ ನಾಳೆ......

‘ಅಮ್ಮಾ.....ಅಮ್ಮಾ......'ವಿರಂಚಿಯ ಕೂಗು ಕತ್ತಲನ್ನು ಸೀಳಿ ಬರುತ್ತಿದೆ! ಏಕೆ ಬಂದ ಇವನು? ಇವನಿಗೆ ತಾನು ಇಲ್ಲಿದ್ದೇನೆ ಎಂದು ಯಾರು ಹೇಳಿದರು? ‘ಈ ಸರೀ ರಾತ್ರೀಲಿ ಇಲ್ಲೇಕೆ ಕುಳಿತಿದೀಯಮ್ಮ?' ಎಂದು ಕೇಳಿದರೆ ಏನೆಂದು ಉತ್ತರಿಸಲಿ? ಬಹುಷಃ ಅವನಿಗೆ ತನ್ನ ತಂದೆ ಈ ವಯಸ್ಸಿನಲ್ಲಿ ಒಬ್ಬ ಹುಡುಗಿಯ ಜೊತೆ ಓಡಾಡುತ್ತಿದ್ದಾರೆ ಎನ್ನುವುದಕ್ಕಿಂತಾ ಇಷ್ಟೆಲ್ಲಾ ಓದಿರುವ, ಸ್ವಂತ ವ್ಯಕ್ತಿತ್ವವನ್ನು ಹೊಂದಿರುವ ತನ್ನ ತಾಯಿ ಇಂಥಾ ಕ್ಷುಲ್ಲಕ ಕಾರಣಕ್ಕಾಗಿ ಮನೆ ಬಿಟ್ಟು ರಾತ್ರಿಯೆಲ್ಲಾ ನದೀ ಮಧ್ಯದ ಬಂಡೆಯ ಮೇಲೆ ಒಬ್ಬಳೇ ಹುಚ್ಚಿಯಂತೆ ಕುಳಿತಿದ್ದಳು ಅಥವಾ ನದಿಗೇ ಹಾರಿದಳು ಎನ್ನುವುದು ಹೆಚ್ಚು ಅವಮಾನಕರವೆನಿಸಬಹುದು. ತಾನೇಕೆ ಹೀಗೆ ಮಾಡಿದೆ? ಈ ನದಿಯ ನೀರು ತನ್ನ ಪಥಕ್ಕೆ ಅಡ್ಡವಾದ ಬಂಡೆಯನ್ನೇ ಬಳಸಿ ಮುಂದೆ ಸಾಗುತ್ತಿಲ್ಲವೆ? ತಾನೂ ಹೀಗೆಯೇ ಸಮಸ್ಯೆಯನ್ನು ಎದುರಿಸಲಾಗದಿದ್ದಾಗ ಉಪೇಕ್ಷಿಸಿ......ಛೀಛೀ, ತನ್ನ ಮನಸ್ಸೇಕೆ ಇಷ್ಟು ದುರ್ಬಲವಾಯ್ತು? ತಾನು ಪಲಾಯನವಾದಿಯಾಗುತ್ತಿದ್ದೇನೆಯೇ? ಈಗ ವಿರಂಚಿಯನ್ನು ಹೇಗೆ ಎದುರಿಸಲಿ? ಎಂದುಕೊಳ್ಳುತ್ತಿರುವಾಗಲೇ.....‘ಬಾರಮ್ಮ' ಎನ್ನುತ್ತಾ ವಿರಂಚಿ ಕೈನೀಡಿ ಎಬ್ಬಿಸಿ ಕೈಹಿಡಿದು ಮೌನವಾಗಿ ಹೆಜ್ಜೆಹಾಕಲಾರಂಭಿಸಿದ......

ಅಂದರೆ ಒಂದು ಆಸರೆ ಕಳಚಿತೆನ್ನುವಾಗ ಮತ್ತೊಂದು ಆಸರೆಗೆ ಕೈಚಾಚುವುದೆ? ಅರ್ಧ ಶತಮಾನ ಸಮೀಪಿಸುತ್ತಿದ್ದರೂ ತನ್ನನ್ನೇ ತಾನು ನಿಭಾಯಿಸಿಕೊಳ್ಳಲಾಗದ ಪರಿಸ್ಥಿತಿಯೇ? ಹೇಡಿ ಮನದ ಕಲ್ಪನೆಗಳಿಗೆ ಪೂರ್ಣವಿರಾಮ ನೀಡಿ ಆಂತರ್ಯದ ಕರೆಗೆ ಓಗೊಟ್ಟು ಮೇಲೆದ್ದು ನಡೆಯಲಾರಂಭಿಸಿದವಳಿಗೆ ಅಂಧಕಾರದಲ್ಲೂ ಮಾರ್ಗ ಸ್ಪಷ್ಟವೆನಿಸಿತು.
************************************************
(ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವ ಈ ನನ್ನ ಮೊದಲ ಕಥೆಯು ಮೇ ೦೮,೨೦೧೧ರ 'ಕರ್ಮವೀರ' ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅದನ್ನೂ ಸ್ಕ್ಯಾನ್ ಮಾಡಿ ಹಾಕಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.)