Thursday, May 26, 2011

ಮನದ ಅಂಗಳದಿ.........೪೧. ಧೈರ್ಯ

‘ಧೈರ್ಯಂ ಸರ್ವತ್ರ ಸಾಧನಂ’ ಎನ್ನುವ ಒಂದು ಉಕ್ತಿ ಇದೆ. ಧೈರ್ಯವು ಎಲ್ಲ ಸಂದರ್ಭಗಳಲ್ಲಿಯೂ ಒಂದು ಸಾಧನವಿದ್ದಂತೆ. ಧೈರ್ಯವಿದ್ದರೆ ನಾವು ಯಾವುದೇ ಕಠಿಣ ಪರಿಸ್ಥಿತಿಯನ್ನಾದರೂ ಸಮರ್ಥವಾಗಿ ಎದುರಿಸಬಹುದು.

ಪ್ರಾಣಿವರ್ಗದಲ್ಲಿಯೂ ಧೈರ್ಯವಂತ ಹಾಗೂ ಅಂಜಿಕೆಯ ಪ್ರಾಣಿಗಳನ್ನು ಕಾಣುತ್ತೇವೆ. ಸಿಂಹ, ಹುಲಿ ಮುಂತಾದ ಮಾಂಸಾಹಾರಿ ಪ್ರಾಣಿಗಳಿಗೆ ಧೈರ್ಯವು ಅನುವಂಶೀಯವೆನ್ನುವಂತೆ ರಕ್ರಗತವಾಗಿ ಬಂದಿದ್ದರೆ ಅವುಗಳಿಗೆ ಆಹಾರವಾಗಬೇಕಾದ ಪ್ರಾಣಿಗಳು ಅಸಹಾಯಕವಾಗಿ ಅ೦ಜಿಕೆಯಿ೦ದ ತಲ್ಲಣಗೊಳ್ಳುತ್ತಿರುತ್ತವೆ. ಬಹಳ ಅಪರೂಪವೆನಿಸುವ೦ತೆ ಧೈರ್ಯವನ್ನು ಪ್ರದರ್ಶಿಸುವ ಸಂದರ್ಭಗಳೂ ಇರುತ್ತವೆ.

ಪೂರ್ವಾಗ್ರಹ ಪೀಡಿತವಲ್ಲದ ಮನಸ್ಸು ಧೈರ್ಯದಿಂದ ಕೂಡಿರುತ್ತದೆ. ಉದಾಹರಣೆಗೆ ಒಂದು ಪುಟ್ಟ ಮಗುವು ಯಾವುದೇ ಕೆಲಸವನ್ನಾದರೂ ಧೈರ್ಯವಾಗಿ ಮಾಡಲು ಮುನ್ನುಗ್ಗುತ್ತದೆ. ಪರಿಸರ ಹಾಗೂ ಕೆಲವು ಋಣಾತ್ಮಕ ಅನುಭವಗಳು ಕ್ರಮೇಣ ಅದನ್ನು ಹಿಮ್ಮೆಟ್ಟುವಂತೆ ಮಾಡುತ್ತವೆ.

ಧೈರ್ಯವೆಂದರೇನು? ಎಂಬ ಪ್ರಶ್ನೆ ಎದುರಾದ ತಕ್ಷಣ ನಾವು ‘ಭಯವಿಲ್ಲದಿರುವುದು’ ಎಂಬ ಉತ್ತರವನ್ನು ಕೊಡಬಯಸುತ್ತೇವೆ. ಆದರೆ ಜಿಡ್ಡು ಕೃಷ್ಣಮೂರ್ತಿಯವರು, ‘ಧೈರ್ಯವೆಂಬುದು ಭಯಕ್ಕೆ ವಿರುದ್ಧವಾದ ಪದವೂ ಅಲ್ಲ. ಭಯ ಇಲ್ಲವಾಗುವುದೆಂದರೆ ಧೈರ್ಯವಂತ ಆಗುವುದು ಎಂಬರ್ಥವಲ್ಲ.’ ಎನ್ನುತ್ತಾರೆ.

ಧೈರ್ಯಶಾಲಿಗಳಾಗಬೇಕೆನ್ನುವುದು ಎಲ್ಲರ ಹಂಬಲವೂ ಆಗಿದೆ. ಆದರೆ ಕೆಲವೇ ಧೈರ್ಯಶಾಲಿಗಳಿರುವುದನ್ನು ನಾವು ಕಾಣುತ್ತೇವೆ. ಧೈರ್ಯ ಒಂದು ಆಂತರಿಕ ಸುಭದ್ರ ಸ್ಥಿತಿ. ಯಾವುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಧೈರ್ಯಶಾಲಿಯು ತನ್ನ ಕಾರ್ಯ ಸಾಧನೆಯನ್ನು ಮಾಡುತ್ತಾನೆ.

ಧೈರ್ಯದ ಬಗ್ಗೆ ರಾಬಿನ್ ಶರ್ಮ ಅವರು ತಮ್ಮ 'THE MONK WHO SOLD HIS FERRARI 'ಯಲ್ಲಿ ಜೂಲಿಯನ್ ಮೂಲಕ ಹೀಗೆ ಹೇಳಿಸುತ್ತಾರೆ.

’ಧೈರ್ಯವಿದ್ದರೆ ನೀನು ನಿನ್ನದೇ ರೇಸ್ನಲ್ಲಿ ಓಡಬಹುದು. ಧೈರ್ಯವಿದ್ದರೆ ನೀನು ನಿನ್ನ ದೃಷ್ಟಿಯಲ್ಲಿ ಸರಿಯೆಂದು ಕಂಡುದನ್ನು ಮಾಡಬಹುದು. ಧೈರ್ಯವಿದ್ದರೆ ಅನ್ಯರು ಸೋತಾಗಲೂ ನೀನು ಸೋಲಿಗೆ ಶರಣಾಗದೇ ಹೋರಾಡಿ ಜಯಿಸಬಹುದು. ಅಂತಿಮವಾಗಿ ಹೇಳುವುದಾದರೆ ನೀನು ಬದುಕಿನಲ್ಲಿ ಗಳಿಸುವ ಯಶಸ್ಸು, ಸಾರ್ಥಕತೆ ನಿನ್ನಲ್ಲಿರುವ ಧೈರ್ಯದ ಪ್ರಮಾಣವನ್ನು ಅವಲಂಭಿಸಿದೆ. ತಮ್ಮ ಮೇಲೆ ಪ್ರಭುತ್ವ ಸಾಧಿಸುವವರಲ್ಲಿ ಅಪಾರ ಧೈರ್ಯವಿರುತ್ತದೆ..........

ಈ ವಿಶ್ವವು ಧೈರ್ಯಶಾಲಿಗೆ ನೆರವಾಗುತ್ತದೆ. ಚಿಕ್ಕಪುಟ್ಟ ಧೈರ್ಯದ ಕ್ರಿಯೆಗಳಿಂದ ಶಿಸ್ತು ಬೆಳೆಯುತ್ತದೆ..... ಉಕ್ಕಿನಂತಹ ಶಿಸ್ತಿನಿಂದ ಧೈರ್ಯ ಮತ್ತು ಶಾಂತಿಭರಿತವಾದ ಚಾರಿತ್ರ್ಯ ರೂಪಿತವಾಗುತ್ತದೆ. ಶಿಸ್ತು, ಧೈರ್ಯ, ಶಾಂತಿ, ಚಾರಿತ್ರ್ಯಗಳಿಲ್ಲದಿದ್ದರೆ ದಿಕ್ಸೂಚಿಯಿಲ್ಲದ ನಾವಿಕನಂತೆ ಹಡಗಿನ ಜೊತೆ ಮುಳುಗಿ ಹೋಗುವೆ..............

ಶಬ್ದಗಳಿಗೆ ಅಪಾರ ಪ್ರೇರಕ ಶಕ್ತಿಯಿದೆ. ಅವು ಶಬ್ದರೂಪದಲ್ಲಿರುವ ಶಕ್ತಿಗಳು. ಮನಸ್ಸನ್ನು ಆಶಾಭಾವನೆಗಳಿಂದ ತುಂಬಿದರೆ ಆಶಾವಾದಿಯಾಗುವೆ. ಕರುಣಾಭರಿತ ಶಬ್ದಗಳಿಂದ ತುಂಬಿದರೆ ಕರುಣಾಮಯಿಯಾಗುವೆ, ಹಾಗೆಯೇ ಧೈರ್ಯದ ಶಬ್ದಗಳಿಂದ ತುಂಬಿದರೆ ಧೈರ್ಯಶಾಲಿಯಾಗುವೆ.’

ಸ್ವಾಮಿ ವಿವೇಕಾನಂದರು ‘ಧೈರ್ಯವಂತರಾಗಿ’ ಎನ್ನುವುದನ್ನು ಹೀಗೆ ತಿಳಿಸುತ್ತಾರೆ:

’ದಕ್ಷಿಣ ಸಮುದ್ರ ದ್ವೀಪಗಳ ಸಮೀಪದಲ್ಲಿ ಬಿರುಗಾಳಿಗೆ ಸಿಕ್ಕಿದ ಕೆಲವು ಹಡಗುಗಳ ಕಥೆಯನ್ನು ನಾನು ಒಮ್ಮೆ ನೋಡಿದೆ. ಇಲಸ್ಟ್ರೇಟೆಡ್ ಲಂಡನ್ ನ್ಯೂಸ್‌ನಲ್ಲಿ ಅದರ ಒಂದು ಚಿತ್ರವಿತ್ತು. ಇಂಗ್ಲೀಷಿನವರ ಹಡಗೊಂದನ್ನು ಬಿಟ್ಟು ಉಳಿದ ಎಲ್ಲಾ ಹಡಗುಗಳೂ ನಾಶವಾದವು. ಅದು ಈ ಪ್ರಚಂಡ ಬಿರುಗಾಳಿಯಲ್ಲಿ ಮುಂದುವರೆಯುತ್ತಿತ್ತು. ಮುಳುಗುತ್ತಿದ್ದ ಹಡಗಿನಲ್ಲಿದ್ದ ಜನರು ಮೇಲಿನ ಅಂತಸ್ತಿನ ಮೇಲೆ ನಿಂತು ಮುಂದೆ ಹೋಗುತ್ತಿದ್ದ ಹಡಗಿನ ಜನರನ್ನು ನೋಡಿ ಹುರಿದುಂಬಿಸುತ್ತಿದ್ದ ಒಂದು ಚಿತ್ರವಿತ್ತು. ಅದರಂತೆ ಧೈರ್ಯವಾಗಿರಿ, ಉದಾರಿಗಳಾಗಿರಿ.’

ಇದುವರಗೆ ಮಹಾನ್ ಸಾಧನೆಗಳನ್ನು ಮಾಡಿದಂತಹ ಸಾಧಕರು ತಮ್ಮ ಪಥದಲ್ಲಿ ಧೈರ್ಯದಿಂದ ಮುನ್ನುಗ್ಗಿದವರೇ ಆಗಿದ್ದಾರೆ. ಅವರು ತಾವೂ ಧೈರ್ಯದಿಂದಿದ್ದು ಇತರರಿಗೂ ಆ ಮಾರ್ಗವನ್ನು ಸ್ಪಷ್ಟಪಡಿಸುವ ಪ್ರಯತ್ನವನ್ನು ನಡೆಸುತ್ತಾರೆ.

‘ನಾನು ಗೋಚರಿಸುವುದಕ್ಕಿಂತಲೂ ಬಲಿಷ್ಠನಾಗಿದ್ದೇನೆ. ವಿಶ್ವದ ಎಲ್ಲಾ ಶಕ್ತಿ ಸಾಮರ್ಥ್ಯಗಳೂ ನನ್ನೊಳಗೇ ಅಂತರ್ಗತವಾಗಿವೆ’ ಈ ಮಂತ್ರವನ್ನು ಪ್ರತಿದಿನ ನಾವು ಕನಿಷ್ಟ ೩೦ಸಲವಾದರೂ ಜಪಿಸುವುದರಿಂದ ನಾವು ಧೈರ್ಯಶಾಲಿಗಳಾಗಬಹುದು, ನಮಗೆ ಇಚ್ಛಿತವಾದುದನ್ನು ಸಾಧಿಸಬಹುದು ಎನ್ನುವುದನ್ನು 'THE MONK WHO SOLD HIS FERRARI '’ಯಲ್ಲಿ ಶಿವನ ಯೋಗಿಗಳ ಮೂಲಕ ತಿಳಿದು ಬಂದ ಜೂಲಿಯನ್, ಜಾನ್‌ನ ಮೂಲಕ ನಮ್ಮೆಲ್ಲರಿಗೂ ತಿಳಿಸುತ್ತಾನೆ!

ಚಿಕ್ಕವರಿದ್ದಾಗ ನಮ್ಮಲ್ಲಿ ಧೈರ್ಯ ತುಂಬಲು ದೇವರ ನಾಮಮಂತ್ರವನ್ನು ಪದೇಪದೇ ಹೇಳಿಕೊಳ್ಳುತ್ತಿರುವ೦ತೆ ಹೇಳುತ್ತಿದ್ದರು. ಕೆಲವು ಮಂತ್ರಗಳ ಉಚ್ಛಾರಣೆಯಿ೦ದ ಧೈರ್ಯಶಾಲಿಗಳಾಗುತ್ತಾರೆ ಎನ್ನುವುದು ರೂಢಿಯಲ್ಲಿತ್ತು. ಈಗ ‘ನಾನು ಗೋಚರಿಸುವುದಕ್ಕಿಂತಲೂ ಬಲಿಷ್ಠನಾಗಿದ್ದೇನೆ..............’ ಎನ್ನುವ ಉಕ್ತಿಯನ್ನು ಹೇಳಿಕೊಳ್ಳುವುದರೊಡನೆ ದಿನಕ್ಕೆ ೨೧ಸಲ ಇತರ ಧನಾತ್ಮಕ ಅಂಶಗಳೂ ಸೇರಿದಂತೆ, ’ನಾನು ಧೈರ್ಯಶಾಲಿಯಾಗಿದ್ದೇನೆ,’ ಎಂದು ಹೇಳಿಕೊಳ್ಳುವ ಮೂಲಕ ಧೈರ್ಯವಂತಳಾಗುವ ಪ್ರಯತ್ನವನ್ನು ಮುಂದುವರಿಸಿದ್ದೇನೆ!

7 comments:

 1. ಪ್ರಭಾಮಣಿಯವರೆ,
  ಒಳ್ಳೆಯ ಲೇಖನ.ಧೈರ್ಯದ ಬಗ್ಗೆ ತು೦ಬಾ ಚೆನ್ನಾಗಿ ಸರಳವಾಗಿ ವಿವರಿಸಿದ್ದೀರಿ.

  ReplyDelete
 2. ನೀವು ಹೇಳಿದ ಮಂತ್ರವು ಜೀವನಕ್ಕೆ ಅತ್ಯಂತ ಅವಶ್ಯವಾದ ಮಂತ್ರವಾಗಿದೆ.

  ReplyDelete
 3. ತುಂಬಾ ಸುಂದರ ಲೇಖನ.ಧನ್ಯವಾದಗಳು ಮೇಡಂ.

  ReplyDelete
 4. ಧೈರ್ಯದ ಬಗ್ಗೆ ಒಳ್ಳೆ ಮಾಹಿತಿ ...
  ಚಿಕ್ಕ ವಯಸಿನಿಂದಲೇ ತಂದೆ ತಾಯಿಯಾರು ಧೈರ್ಯದ ಪಾಠ ಹೇಳಿಕೊಟ್ರೆ .
  ಮಂತ್ರ ಹೇಳೋ ಪ್ರಮೇಯವೇ ಬರೋಲ್ಲ ..

  ReplyDelete
 5. ಉತ್ತಮ ಲೇಖನ ಮೇಡಮ್.. ಜೀವನದ ಎಲ್ಲಾ ಹಂತಗಳಲ್ಲೂ ಪ್ರಗತಿಗೆ ಧೈರ್ಯ ಅತ್ಯಾವಶ್ಯಕ. ವಿವೇಕಾನಂದರ ಉದಾಹರಣೆ ಮನಸೆಳೆಯಿತು.

  ReplyDelete
 6. ಉತ್ತಮ ಲೇಖನ ಧೈರ್ಯ ದೇಹದ ಒಂದು ಅವಿಭಾಜ್ಯ ಅಂಗದಂತೆ.....

  ReplyDelete