Monday, January 31, 2011

ಮನದ ಅಂಗಳದಿ..................೨೭. ಸಹನಶೀಲತೆ

ರೂಢಿಯಂತೆ ಹಳೆಯ ಪುಸ್ತಕಗಳ ನಡುವೆ ಮೈಮರೆತಿದ್ದಾಗ ಒಂದು ಕಾಲೇಜು ದಿನಗಳ ಆಟೋಗ್ರಾಫ್ ಸಿಕ್ಕಿತು. ಪುಟಗಳನ್ನು ತಿರುಗಿಸುತ್ತಿರುವಾಗ, ‘ಅತ್ಯಂತ ಸಹನಶೀಲರಾದ ತಮಗೆ ಅನಂತ ವಂದನೆಗಳು.’ ಎನ್ನುವ ಕೈಬರಹ ಕಣ್ಣಿಗೆ ಬಿತ್ತು. ಅದನ್ನು ಬರೆದ ‘ಆತ’ ಯಾರು ಎನ್ನವುದು ಹೆಸರಿನಿಂದ ನೆನಪಿಸಿಕೊಳ್ಳಲೂ ಆಗುತ್ತಿಲ್ಲ. ಆತನಿಗೆ ನನ್ನ ಸಹನೆಯಬಗ್ಗೆ ಹೇಗೆ ತಿಳಿಯಿತು?...................ಇದನ್ನೇ ಆಧರಿಸಿ ಒಂದು ಹಾಸ್ಯಬರಹವನ್ನು ಬರೆದಿದ್ದೆ.

ಸಹನೆಗೆ ಹೆಸರಾದ ಪ್ರಾಣಿ ಕತ್ತೆ. ಮೈಮೇಲೆ ಎಷ್ಟೇ ಭಾರವನ್ನು ಹೇರಿದರೂ ವಿರೋಧಿಸದೇ ಹೊರುವ ಪ್ರಯತ್ನ ನಡೆಸುತ್ತದೆ. ಕೆಲವು ವರ್ಷಗಳ ಹಿಂದೆ ಒಂದು ವಿಜ್ಞಾನ ಪತ್ರಿಕೆಯಲ್ಲಿ ‘ಸಾಯಿರಾನ್’ ಎಂಬ ಉಭಯವಾಸಿ ಜೀವಿಯ ಬಗ್ಗೆ ಓದಿದ್ದೆ. ಅದು ಎರಡು ಬರಗಾಲವನ್ನಾದರೂ ತಡೆದು ಬದುಕಬಲ್ಲ ಜೀವಿ. ಆಗ ಹೊಳೆದಿದ್ದ ಒಂದು ‘ಹನಿ’ಗೆ ‘ಸಹನೆ’ ಎಂಬ ಶೀರ್ಷಿಕೆ ಕೊಟ್ಟು ಬರೆದದ್ದು ಹೀಗಿದೆ.

‘ಎರಡು ಬರವನಾದರೂ ತಾಳಬಲ್ಲ
ಸಾಯಿರಾನ್‌ನಂತೆ
ಎದುರು ನೋಡುತ್ತಿರುವೆ
ನಿನ್ನ ಬರವ
ಓ ನನ್ನ ಕಾಂತೆ!’

‘ಸಹನೆ’ ಎಂದರೆ ತಾಳ್ಮೆ, ಸೈರಣೆ ಎಂಬ ಅರ್ಥಗಳೂ ಇವೆ. ’ಆತ ಕಷ್ಟಸಹಿಷ್ಣುವಾಗಿದ್ದ.’ ಎಂದು ಕಥೆಗಳಲ್ಲಿ ಓದುತ್ತೇವೆ. (‘ಸಹಿಷ್ಣು’-ಸಹನೆಯುಳ್ಳವನು.) ಆದರೂ ಈ ಸಹನೆ ಎಂದರೆ ಏನು? ಬೇಸರವಿಲ್ಲದೆ ಕಾಯುವುದೆ? ತಪ್ಪು ಮಾಡಿದ್ದರೂ ಕ್ಷಮಿಸುವುದು ಎಂದೆ? ‘ಕ್ಷಮಯಾ ಧರಿತ್ರಿ’- ಭೂಮಿಯಷ್ಟು ಕ್ಷಮಾಗುಣವನ್ನು ಹೊಂದಿರಬೇಕು ಎನ್ನುತ್ತಾರೆ. ಭೂಮಿಯನ್ನು ತಾಯಿ ಎಂದೇ ಕರೆಯುತ್ತಾರೆ. ವಸ್ತುತಃ ನಿರ್ಜೀವವಾಗಿರುವ, ಸಂಪ್ರದಾಯಸ್ಥರು ಮತ್ತು ಕವಿಗಳಿಗಷ್ಟೇ ಸ್ತ್ರೀಯಂತೆ ಗೋಚರಿಸುವ ಭೂಮಿತಾಯಿಯ ಸಹನೆಗಿಂತ ನನ್ನ ತಾಯಿಯ ಸಹನೆ ವರ್ಣನಾತೀತ. ಹಗಲಿನಿಂದ ರಾತ್ರಿಯವರೆಗೂ ಮನೆಯಲ್ಲಿ, ಜಮೀನಿನಲ್ಲಿ ಮೂಗಿಗೆ ಕವಡೆಕಟ್ಟಿಕೊಂಡ ಪಶುವಿನಂತೆ ದುಡಿದಿದ್ದರೂ ರಾತ್ರಿ ಸೀಮೆಎಣ್ಣೆ ಬುಡ್ಡಿ ದೀಪದ ಮುಂದೆ ಕುಳಿತು ಒಂದೊಂದು ಕಾದಂಬರಿಯನ್ನು ಓದಿ ಮುಗಿಸುತ್ತಿದ್ದ ಅವರ ಪುಸ್ತಕ ಪ್ರೇಮವೂ ಅದ್ವಿತೀಯ. ಒಮ್ಮೊಮ್ಮೆ ಈಗಿನ ಪರಿಸ್ಥತಿಗೆ ಇಂಥಾ ಸಹನೆ ಸಮಂಜಸವಲ್ಲವೇನೋ ಎನಿಸುತ್ತದೆ. ಭೂಮಿಯೂ ಮಾನವನ ಮಿತಿಮೀರಿದ ವರ್ತನೆಯಿಂದ ಭೂಕಂಪ, ಸುನಾಮಿಯಂಥಾ ವಿಕೋಪಗಳನ್ನುಂಟುಮಾಡಿ ಅನಾಹುತಕ್ಕೆ ಕಾರಣವಾಗುತ್ತಿದೆ.

‘ಸಹನಾ ಗುಣ’ವು ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿನ ಹಿರಿತನದ ಸೂಚಕವಾಗಿದೆ. ಪರಿಸ್ಥಿತಿಯು ವಿಕೋಪಕ್ಕೆ ತಿರುಗದಂತೆ ತಮ್ಮ ವಶಕ್ಕೆ ತೆಗೆದುಕೊಂಡು ವಿಶಿಷ್ಟ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವು ಕೆಲವೇ ಕೆಲವು ಜ್ಞಾನಿಗಳಲ್ಲಿ ಮಾತ್ರ ಇರುತ್ತದೆ. ಅಂಥಾ ಒಂದು ನಿದರ್ಶನ ಇಲ್ಲಿದೆ.

ಮಹಾರಾಷ್ಟ್ರದ ಮಹಾನ್ ವಿಠ್ಠಲ ಭಕ್ತರಾದ, ಸಹನಶೀಲತೆಗೆ ಹೆಸರಾದ ಸಂತ ಏಕನಾಥ ಮಹಾರಾಜರು ಗೋದಾವರಿ ತೀರದಲ್ಲಿರುವ ಪೈಠಣವೆಂಬ ಊರಿನಲ್ಲಿ ವಾಸವಾಗಿದ್ದರು. ಇವರು ರಚಿಸಿದ ಭಕ್ತಿ ಕಾವ್ಯ ಏಕನಾಥರ ಭಾರೂಡ ಎಂಬ ಹೆಸರಿನಿಂದ ಇಂದಿಗೂ ಪ್ರಸಿದ್ಧವಾಗಿದೆ. ಸಾಮಾನ್ಯ ಜನರ ಜೀವನದ ಬಗ್ಗೆ ಹಾಸ್ಯಭರಿತವಾಗಿ ರಚಿಸಿದ ಇವರ ಭಾರೂಡವನ್ನು ಇಂದಿಗೂ ಮಹಾರಾಷ್ಟ್ರದಲ್ಲಿ ಭಕ್ತಿಭಾವದಲ್ಲಿ ಹಾಡಿ ನಲಿಯುತ್ತಾರೆ ಎಂಬ ಮಾತಿದೆ.

ಇಂಥಾ ಮಹಾನ್ ಸಂತರ ಸಹನ ಶೀಲತೆಯನ್ನು ಪರೀಕ್ಷಿಸುವ ದುಃಸ್ಸಾಹಸವನ್ನು ಒಬ್ಬ ಕುಚೋದ್ಯನು ನಡೆಸಿದನು. ಏಕನಾಥರು ವಾಡಿಕೆಯಂತೆ ಗೋದಾವರಿ ನದಿಯಲ್ಲಿ ಸ್ನಾನಮಾಡಿ ದೇವಾಲಯಕ್ಕೆ ಹೋಗಲುದ್ಯುಕ್ತರಾದಾಗ ಕಟ್ಟೆಯ ಮೇಲೆ ಕುಳಿತ ಆತ ಎಲೆಅಡಿಕೆ ತಂಬಾಕು ತಿಂದ ಬಾಯಿಯಿಂದ ಇವರ ಮೈಮೇಲೆ ಉಗುಳಿದನು. ಏಕನಾಥರು ಯಾವ ಭಾವವನ್ನೂ ವ್ಯಕ್ತಪಡಿಸದೆ ಮರಳಿ ನದಿಗೆ ಹೋಗಿ ಸ್ನಾನಮಾಡಿ ದೇವಾಲಯಕ್ಕೆ ಹೊರಟಾಗ ಆತ ಅವರ ಮೈಮೇಲೆ ಪುನಃ ಉಗುಳಿದನು. ಸಂತರು ನಿರ್ವಿಕಾರ ಮನಸ್ಸಿನಿಂದ ಮತ್ತೆ ನದಿಗೆ ಹೋಗಿ ಸ್ನಾನ ಮಾಡಿ ದೇವಾಲಯಕ್ಕೆ ಹೋಗುತ್ತಿರಲು ಮತ್ತೊಮ್ಮೆ ಉಗುಳಿದನು. ಸಂತರು ಪುನಃ ಸ್ನಾನಮಾಡಿ ಹೊರಡಲುದ್ಯುಕ್ತರಾದಾಗ ಆತ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ‘ಮಹಾರಾಜರೇ, ನಾನು ಮಹಾ ಪಾತಕಿ, ನಿಮ್ಮನ್ನು ಮೂರುಸಲ ಅಪವಿತ್ರತ್ರಗೊಳಿಸಿದ ನನ್ನನ್ನು ಕ್ಷಮಿಸಿ.’ ಎಂದಾಗ ಅವರು, ‘ಮಹಾರಾಜರೇ, ಈ ನಿಮ್ಮ ಕೃತ್ಯದಿಂದ ನೀವು ನನಗೆ ಮೂರುಸಲ ಗೋದಾವರಿ ಸ್ನಾನದ ಪುಣ್ಯ ಒದಗಿಸಿ ಕೊಟ್ಟ ಪುಣ್ಯವಂತರು. ನಿಮಗೆ ನಾನು ಕೃತಜ್ಞನು.’ ಎಂದರು!

‘ಸಮಯವೇ ಸಂಪತ್ತು. ಸಹನೆಯೇ ಆರೋಗ್ಯ.’ ಎನ್ನುವ ಉಕ್ತಿ ಇದೆ. ನಾವು ಆರೋಗ್ಯವಂತರಾಗಿರಲು ಬಹಳ ಮುಖ್ಯವಾಗಿ ಸಹನಾಗುಣವನ್ನು ಹೊಂದಿರಬೇಕು. ಆತುರ, ಆತಂಕ, ಅಸಹನೆಗಳು ಅನಾರೋಗ್ಯದ ಮೂಲವಷ್ಟೇ ಅಲ್ಲ, ಎಲ್ಲಾ ಅನಾಹುತಗಳ ಮೂಲವೂ ಆಗಿದೆ. ನಮ್ಮ ರಾಜಕೀಯ ಮುತ್ಸದ್ದಿಗಳು ಸ್ವಲ್ಪ ಸಹನೆಯಿಂದ ವರ್ತಿಸಿದರೆ ಯಾವುದೇ ಅವಾಂತರಗಳೂ ಇಲ್ಲದೆ ಉತ್ತಮರೀತಿಯಲ್ಲಿ ಆಡಳಿತವನ್ನು ನಡೆಸಬಹುದು.

ಕಾಲೇಜು ದಿನಗಳಲ್ಲಿ ನಾನು ಓದಿದ್ದ E.M. Forster ಅವರ 'Tolerance' ಎಂಬ ಪ್ರಬಂಧ ನನಗೆ ಬಹಳ ಇಷ್ಟವಾಗಿ ಈಗಲೂ ಆಗಾಗ ನೆನಪಾಗುತ್ತಿರುತ್ತದೆ. ಈ ಪ್ರಬಂಧದಲ್ಲಿ ಲೇಖಕರು ಪ್ರೀತಿ ಮತ್ತು ಸಹನೆಯ ಅಳವಡಿಕೆಯ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದಾರೆ. ಅದು ಯಥಾವತ್ತಾಗಿ ನೆನಪಾಗದೇ ಇರುವುದರಿಂದ ಅಂತರ್ಜಾಲದಲ್ಲಿ ಜಾಲಾಡಿದಾಗ ದೊರೆತ ಪ್ರಮುಖಾಂಶಗಳು ಹೀಗಿವೆ,

'There are two possible approaches toward those whom we do not like. The first is the Nazi solution to kill or punish them. The second is the democratic and civilized way of tolerating them. It is no more possible to exterminate any nation from this world. We must check fanaticism and spread tolerance if we want to rebuild this world as a peaceful and safe place.’

ಪ್ರೀತಿಯನ್ನು ನಾವು ನಮ್ಮ ವೈಯಕ್ತಿಕ ಆಚರಣೆಯಾಗಿಸಿಕೊಳ್ಳಬಹುದು ಆದರೆ ಸಾರ್ವಜನಿಕಗೊಳಿಸಲಾಗುವುದಿಲ್ಲ. ಎಲ್ಲ ರೀತಿಯ ವ್ಯಕ್ತಿಗಳನ್ನೂ ಪ್ರೀತಿಯಿಂದ ಕಾಣಲಾಗುವುದಿಲ್ಲ. ಆದ್ದರಿಂದ ಯಾರನ್ನು ಪ್ರೀತಿಸಲಾಗುವುದಿಲ್ಲವೋ ಅವರನ್ನು ಸಹಿಸಿಕೊಳ್ಳಬೇಕಾಗುತ್ತದೆ. ‘ಸಹನೆ' ಎನ್ನುವುದು ಋಣಾತ್ಮಕವಾಗಿ ತೋರಿದರೂ, ಅದು ಶುಷ್ಕವಾದ, ಕಳಪೆಯಾದ ಗುಣದಂತಿದ್ದರೂ, ವಿಶ್ವಶಾಂತಿಯನ್ನು ಕಾಪಾಡುವುದಕ್ಕಾಗಿ ಹಾಗೂ ಈ ನಮ್ಮ ಭೂಮಿಯನ್ನು ರಕ್ಷಿತ ತಾಣವನ್ನಾಗಿ ಮಾಡಿಕೊಳ್ಳಲಾದರೂ ನಾವು ಸಹನಶೀಲತೆಯನ್ನು ನಮ್ಮದನ್ನಾಗಿಸಿಕೊಳ್ಳಬೇಕಾಗುತ್ತದೆ ಎನ್ನುವ E.M. Forster ಅವರ ಚಿಂತನೆ ಪ್ರಸ್ತುತ ಸನ್ನಿವೇಶದಲ್ಲಿ ಎಷ್ಟೊಂದು ಅಗತ್ಯವೆನಿಸುತ್ತದೆ ಅಲ್ಲವೆ? ನಾಗರೀಕರೆನಿಸಿಕೊಳ್ಳುವ ನಾವು ಸಹನಶೀಲತೆಯನ್ನು ನಮ್ಮ ಸ್ವಭಾವವನ್ನಾಗಿಸಿಕೊಳ್ಳಲು ಪ್ರಯತ್ನಿಸಿ ವಿಶ್ವಶಾಂತಿಗೆ ನಮ್ಮ ಅಳಿಲು ಸೇವೆಯನ್ನು ಮಾಡಲು ಕಾರ್ಯೋನ್ಮುಖರಾಗೋಣ.

Friday, January 28, 2011

ಸುಖ-ದು:ಖ

ದು:ಖ-ಹೆಜ್ಜೆಗೆ
ಅಡ್ಡವಾಗುವ
ಬಂಡೆ
ಸುಖ-ಪಾದಕ್ಕೆ
ತಂಪೆರೆದು
ಸಾಗುವ
ಸಲಿಲ

ಶ್ರಮವಹಿಸಿ
ಬಂಡೆ
ಸರಿಸಿದಾಗ
ಪಥ ನಿಚ್ಚಳ
ಹರಿದು
ಸಾಗುವ
ಜಲವೋ
ಹಿಡಿಯಲಾಗದಷ್ಟು
ಚಂಚಲ!



ಸುಖದ ಹಿಂದೆ
ದು:ಖವೋ
ದು:ಖದ ಹಿಂದೆ
ಸುಖವೋ
ತಿಳಿಯಲು
ಬೆನ್ನಟ್ಟಿದೆ
ಓಡಿದಷ್ಟೂ
ಮುಗಿಯದ ಪಥ
ವೃತ್ತಾಕಾರವಾಗಿದೆ!


ತುಂಬಿ
ಉಕ್ಕೇರುವ
ದು:ಖವ
ಹೊರಚಲ್ಲ
ಬಯಸಿ
ಆಗಬೇಕೆಂದಿದ್ದೆ
ನಿರಾಳ
ಸುತ್ತಿನವರ
ಸಲಹೆಗಳ
ಕೋಟೆ
ಹೆಚ್ಚಿಸುತ್ತಿದೆ
ಅದರ ಆಳ!


ಹೊರಗಿನ
ಸಂತಸ
ಒಳಗಿನ
ಆನಂದದೊಡನೆ
ಸೇರಿ
ಉಕ್ಕೇರಿ
ಸುತ್ತಲೂ ಪಸರಿಸಿ
ಮೂಸೆಯ
ಹಗುರಗೊಳಿಸಲಿ


ಹೊರಗಿನ ದ:ಖ
ಒಳಗುಳಿದ
ಪಾಕದೊಡನೆ
ಬೆರೆತು
ಇಂಗಿ
ಮೂಸೆಯ
ಗಟ್ಟಿಗೊಳಿಸಲಿ!


(ಮನದ ಅ೦ಗಳದಿ ............... ಯಲ್ಲಿ `ಸುಖ-ದು:ಖ' ಬರೆದ ನ೦ತರ ಈ ಕವನವನ್ನು ಹಾಕಬೆಕೆ೦ದಿದ್ದೆ. ಆದರೆ ನನ್ನ ಪಿ.ಸಿ.ತೊ೦ದರೆಯಿ೦ದ ಆಗಿರಲಿಲ್ಲ. ಈಗ ನಿಮ್ಮ ಮು೦ದಿದೆ.)

Saturday, January 22, 2011

ಮನದ ಅಂಗಳದಿ..................೨೬. ಒಳಿತು-ಕೆಡಕು

ನಮ್ಮ ಸುತ್ತಮುತ್ತಲಿನ ಆಗುಹೋಗುಗಳು, ಜನರ ಸ್ವಭಾವ, ಅವರ ರೀತಿನೀತಿಗಳಲ್ಲಿ ನಾವು ಸಾಮಾನ್ಯವಾಗಿ ಒಳಿತು-ಕೆಡಕುಗಳನ್ನು ಗಮನಿಸುತ್ತಲೇ ಇರುತ್ತೇವೆ. ಅಲ್ಲದೇ ನಾವು ಸಂಪರ್ಕಿಸುವ ವ್ಯಕ್ತಿಗಳನ್ನು, ಕಾಣುವ-ಕೇಳುವ ಘಟನೆಗಳನ್ನು ಒಳ್ಳೆಯದು-ಕೆಟ್ಟದ್ದನ್ನಾಗಿ ವಿಭಾಗಿಸಲು ಪ್ರಯತ್ನಿಸುತ್ತೇವೆ. ಇತರರೆದುರು, ವಿಶೇಷವಾಗಿ ಹೊಸಬರೆದುರು ನಮ್ಮನ್ನು ಒಳ್ಳೆಯವರನ್ನಾಗಿ ತೋರ್ಪಡಿಸುವ ಯತ್ನವನ್ನೂ ಮಾಡುತ್ತೇವೆ. ‘ಒಳ್ಳೆಯವರು' ಎನಿಸಿದವರನ್ನು ಹೊಗಳುವುದರಲ್ಲಿ ನಮಗೆ ಎಲ್ಲಿಲ್ಲದ ಉತ್ಸಾಹ! ‘ಕೆಟ್ಟವರು' ಎಂದು ತಿಳಿದಾಗ ಅವರನ್ನು ತೆಗಳುವುದರಲ್ಲಿಯೂ ಹಿಂದೆ ಬೀಳುವುದಿಲ್ಲ. ಆದರೆ ಆ ಒಳ್ಳೆಯತನ ನಮ್ಮಲ್ಲಿದೆಯೇ ಎಂದು ನಮ್ಮನ್ನೇ ನಾವು ಕೇಳಿಕೊಳ್ಳುವುದಿಲ್ಲ. ಅಥವಾ ಆ ಒಳ್ಳೆಯತನವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ನಮ್ಮಲ್ಲಿರಬಹುದಾದ ಕೆಟ್ಟತನವನ್ನು ನಿವಾರಿಸಿಕೊಳ್ಳಲೂ ಮುಂದಾಗುವುದಿಲ್ಲ. ಮಾನವರಾದ ನಮ್ಮ ಈ ಗುಣದ ಬಗ್ಗೆ ಆಲೋಚಿಸಿದಾಗ ಹೀಗನಿಸಿತು,

‘ಒಳ್ಳೆಯತನ'ವಿರುವುದು
ಹಾಡಿ-ಹೊಗಳುವುದಕ್ಕೆ
ದೂರ ತಳ್ಳುವುದಕ್ಕೆ,
‘ಕೆಟ್ಟತನ'ವಿರುವುದು
ನೋಡಿ ಜರಿಯುವುದಕ್ಕೆ
ಮೈಗೂಡಿಸಿಕೊಳ್ಳುವುದಕ್ಕೆ!

ಖಲೀಲ್ ಗಿಬ್ರಾನ್‌ರ ‘ಪ್ರವಾದಿ' (ದಿ ಪ್ರೊಫೆಟ್)ಯಲ್ಲಿ ‘ಆಲ್ ಮುಸ್ತಾಫಾ' ತನ್ನ ‘ಮಹಾ ಪ್ರಸ್ತಾನ'ವನ್ನು ಕೈಗೊಳ್ಳುವ ಮೊದಲು ‘ಆರ್ಫಲಿಸ್' ಜನರಿಗೆ ಅವರ ಪ್ರಾರ್ಥನೆಯಂತೆ ತಾನು ಕಂಡ ಸತ್ಯರಹಸ್ಯವನ್ನು ತಿಳಿಸುತ್ತಾನೆ. ಆಗ ‘ಒಳಿತು-ಕೆಡಕು'ಗಳ ಬಗ್ಗೆ ಹೀಗೆ ಹೇಳುತ್ತಾನೆ,

‘ನಿಮ್ಮಲ್ಲಿದ್ದ ಒಳಿತಿನ ಬಗ್ಗೆ ನಾನು ನುಡಿಯಬಲ್ಲೆ; ಆದರೆ ನಿಮ್ಮಲ್ಲಿಯ ಕೆಡುಕಿನ ಬಗ್ಗೆ ಮಾತ್ರ ನುಡಿಯಲಾರೆ. ಏಕೆಂದರೆ ಹಸಿವೆ-ತೃಷೆಗಳಿಂದ ಪೀಡಿತವಾದ ಒಳಿತೇ ಕೆಡಕಲ್ಲದೆ ಇನ್ನೇನು? ಒಳಿತು ಹಸಿದಾಗ, ನಿಶ್ಚಯವಾಗಿ ಕತ್ತಲೆಯ ಗುಹೆಯಲ್ಲಿಯೂ ಅನ್ನವನ್ನು ಶೋಧಿಸಿಕೊಳ್ಳುತ್ತದೆ; ತೃಷೆಯಾದಾಗ ಮೃತೋದಕವನ್ನೂ ಕುಡಿಯುತ್ತದೆ.

ನೀವು ನಿಮ್ಮೊಳಗಿನೊಳಗೇ ಒಂದಾದಾಗ, ನೀವು ಒಳ್ಳೆಯವರಾಗಿರುತ್ತೀರಿ. ಆದರೆ ನೀವು ನಿಮ್ಮೊಳಗಿನೊಳಗೇ ಒಂದಾಗದಾಗ ಕೂಡ, ನೀವು ಕೆಡಕರಾಗಿರುವುದಿಲ್ಲ........ ಚುಕ್ಕಾಣಿಯಿಲ್ಲದ ಹಡಗು ಮನಬಂದಂತೆ ತೇಲುತ್ತ ಅಪಾಯಕರ ದ್ವೀಪಗಳ ಮಧ್ಯೆ ಗೊತ್ತುಗುರಿಯಿಲ್ಲದೆ ತಿರುಗುತ್ತಿರಬಹುದು; ಆದರೂ ಅದು ತಳ ಕಾಣುವಂತೆ ಮುಳುಗಲಾರದು.

ನಿಮ್ಮನ್ನೇ ನೀವು ಕೊಟ್ಟುಕೊಳ್ಳುತ್ತಿರುವಾಗ ನೀವು ಒಳ್ಳೆಯವರಾಗಿರುವಿರಿ. ಆದರೆ ನೀವು ನಿಮಗಾಗಿ ಲಾಭ ಪಡೆಯುತ್ತಿರುವಾಗ ಕೂಡ ನೀವು ಕೆಡಕರಾಗಿರುವುದಿಲ್ಲ. ಏಕೆಂದರೆ ನೀವು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವಾಗ ನೀವೊಂದು ನೆಲದಲ್ಲಿಳಿದು ಭೂಮಿತಾಯಿಯ ಸ್ತನಪಾನ ಮಾಡುವ ಬೇರು ಆಗಿ ಮಾತ್ರ ಪರಿಣಮಿಸುತ್ತೀರಿ. ‘ಪರಿಪಕ್ವ ಮತ್ತು ರಸಭರಿತ ಹಾಗೂ ಸಮೃದ್ಧಿಯನ್ನೇ ಸದಾ ಸಮರ್ಪಿಸುವ ನನ್ನಂತೆ ಆಗು,' ಎಂದು ಹಣ್ಣು ಬೇರಿಗೆ ನಿಶ್ಚಯವಾಗಿಯೂ ಹೇಳಲಾರದು. ಏಕೆಂದರೆ ಬೇರಿಗೆ ಸ್ವೀಕಾರವೇ ಅವಶ್ಯಕವಿದ್ದಂತೆ ಹಣ್ಣಿಗೆ ಸಮರ್ಪಣವು ಅವಶ್ಯಕವಾಗಿದೆ.

ನಿಮ್ಮ ಮಾತಿನಲ್ಲಿ ನೀವು ಸಂಪೂರ್ಣ ಎಚ್ಚರಿಕೆಯಿಂದಿದ್ದಾಗ ನೀವು ಒಳ್ಳೆಯವರಾಗಿರುತ್ತೀರಿ. ಆದರೆ ನಿದ್ರೆಯಲ್ಲಿ ಏನೂ ಉದ್ದೇಶವಿಲ್ಲದೆ ಬಡಬಡಿಸುವಾಗಲೂ ನೀವು ಕೆಡಕರಾಗಿರುವುದಿಲ್ಲ. ಸ್ಖಲಿತ ಭಾಷಣವು ಕೂಡ ದುರ್ಬಲವಾಣಿಯನ್ನು ಸಬಲ ಮಾಡಬಲ್ಲದು.

ನಿಶ್ಚಿತವಾದ ಮತ್ತು ಧೈರ್ಯದ ಹೆಜ್ಜೆಗಳಿಂದ ನಿಮ್ಮ ಗುರಿಯತ್ತ ನೀವು ಸಾಗುತ್ತಿರುವಾಗ ನೀವು ಒಳ್ಳೆಯವರಾಗಿರುತ್ತೀರಿ. ಆದರೆ ನಿಮ್ಮ ಗುರಿಯತ್ತ ನೀವು ಕುಂಟುತ್ತ ಸಾಗಿರುವಾಗಲೂ ನೀವು ಕೆಡಕರಾಗಿರುವುದಿಲ್ಲ. ಕುಂಟುತ್ತ ಸಾಗುವವರು ಕೂಡ ಹಿಮ್ಮುಖವಾಗಿ ಹೋಗಲಾರರು. ಸಬಲರೂ ಚಪಲರೂ ಆಗಿದ್ದ ನೀವು ದಯೆತೋರಿಸಬೇಕೆಂದು ಕುಂಟರ ಜೊತೆಗೆ ನೀವೂ ಕುಂಟುತ್ತ ನಡೆಯದಂತೆ ನೋಡಿಕೊಳ್ಳಿರಿ.

ಅನೇಕ ರೀತಿಗಳಲ್ಲಿ ನೀವು ಒಳ್ಳೆಯವರಾಗಿದ್ದೀರಿ; ನೀವು ಒಳ್ಳೆಯವರಾಗದಿದ್ದಾಗ ಕೂಡ ಕೆಡಕರಾಗಿರುವುದೇ ಇಲ್ಲ. ನೀವು ಕೇವಲ ಉಂಡಾಡಿಗರೂ, ಆಲಸಿಗಳೂ ಮಾತ್ರ ಆಗಿರುತ್ತೀರಿ. ಚಿಗರಿಗೆ ತನ್ನ ಚಪಲತೆಯನ್ನು ಆಮೆಗೆ ಕಲಿಸಬರದುದು ಶೋಚನೀಯವೇ ಸರಿ. ನಿಮ್ಮ ವಿರಾಟ ಸ್ವರೂಪದ ಸಿದ್ಧಿಗಾಗಿ, ಆಕಾಂಕ್ಷಿಯಾಗಿರುವುದರಲ್ಲಿಯೇ ಒಳ್ಳೆಯತನವಿರುತ್ತದೆ; ಆ ಆಕಾಂಕ್ಷೆಯು ನಿಮ್ಮೆಲ್ಲರಲ್ಲಿ ಇದ್ದೇ ಇದೆ. ಆದರೆ ನಿಮ್ಮೊಳಗಿನ ಹಲವರಲ್ಲಿ ಆ ಆಕಾಂಕ್ಷೆಯು, ಗುಡ್ಡಗಾಡುಗಳ ಗುಪಿತ ಹಾಗೂ ಅರಣ್ಯದ ಸಂಗೀತಗಳಿಂದ ಕೂಡಿಕೊಂಡು ಸಮುದ್ರದೆಡೆಗೆ ರಭಸದಿಂದ ಪ್ರವಹಿಸುತ್ತಿರುವ ಪ್ರವಾಹದಂತಿರುತ್ತದೆ. ಉಳಿದ ಹಲವರಲ್ಲಿ ಅದು ಸಮುದ್ರವನ್ನು ಸಂಗಮಿಸುವ ಪೂರ್ವದಲ್ಲಿಯೇ ತನ್ನ ಅಂಕುಡೊಂಕಿನ ತಿರುವುಗಳಲ್ಲಿ ಹ್ರಾಸ ಹೊಂದುವ ಮಂದ ಪ್ರವಾಹದಂತಿರುತ್ತದೆ. ಆದರೆ ಹೆಚ್ಚಿನ ಆಕಾಂಕ್ಷೆಯುಳ್ಳವನು ಕಡಿಮೆ ಆಕಾಂಕ್ಷೆಯುಳ್ಳವನಿಗೆ ‘ನಿನ್ನ ಗತಿ ಮಂದವೇಕೆ? ನೀನೇಕೆ ಹೀಗೆ ತಡೆದು ನಿಲ್ಲುತ್ತೀ?' ಎಂದು ಕೇಳದಿರಲಿ. ಏಕೆಂದರೆ ನಿಜವಾಗಿಯೂ ಒಳ್ಳೆಯನಾದವನು ವಿವಸ್ತ್ರನಿಗೆ, ‘ನಿನ್ನ ವಸ್ತ್ರಗಳೆಲ್ಲಿ?' ಎಂದೂ, ಗೃಹರಹಿತನಿಗೆ, ‘ನಿನ್ನ ಮನೆ ಏನಾಯಿತು?' ಎಂದೂ ಕೇಳುವುದಿಲ್ಲ.'

ಜಿಡ್ಡು ಕೃಷ್ಣಮೂರ್ತಿಯವರು ‘ಕೆಡುಕನ್ನು ನಾವು ಸಮರ್ಥಿಸಿಕೊಳ್ಳುತ್ತಿದ್ದೇವೆ,' ಎಂಬುದನ್ನು ಹೀಗೆ ಹೇಳುತ್ತಾರೆ, ‘ಹಿಂದೆ ಕೆಡುಕನ್ನು ಕೆಡುಕೆಂದೂ, ಕೊಲೆಯನ್ನು ಕೊಲೆಯೆಂದೂ ಗುರುತಿಸುತ್ತಿದ್ದೆವು. ಈಗ ಕೊಲೆಯೆಂಬುದು ಉದಾತ್ತವಾದ ಪರಿಣಾಮವನ್ನು ಸಾಧಿಸಲು ಇರುವ ಒಂದು ಮಾರ್ಗವಾಗಿಬಿಟ್ಟಿದೆ. ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಕೊಲೆ ಸಮರ್ಥನೀಯ ಎಂಬ ವಿಚಾರ ಈಗ ಜಗತ್ತಿನ ಎಲ್ಲೆಡೆಗಳಲ್ಲಿ ಕಾಣುತ್ತಿದೆ. ಕೆಡುಕನ್ನು ಸಮರ್ಥಿಸುವ ವಿಚಾರಗಳ ಮಹಾನ್ ಸೌಧವನ್ನೇ ನಿರ್ಮಿಸಿಕೊಂಡಿದ್ದೇವೆ. ಕೆಡುಕು ಎಂದಿಗೂ ಕೆಡುಕೇ, ಅದು ಒಳಿತನ್ನು ತರಲಾರದು. ಯುದ್ಧದ ದಾರಿಯಿಂದ ಶಾಂತಿಯನ್ನು ಪಡೆಯಲಾಗದು.'

`ಒಳಿತಿಗೆ ಉದ್ದೇಶಗಳಿಲ್ಲ.' ಎನ್ನುವ ಬಗ್ಗೆ ಹೇಳುತ್ತಾ ......‘ಏಕೆಂದರೆ ಎಲ್ಲ ಉದ್ದೇಶಗಳೂ ನಾನು ಎಂಬ ಸ್ವ-ಅರ್ಥದಲ್ಲಿ ಬೇರುಬಿಟ್ಟಿವೆ. ಉದ್ದೇಶವೆಂಬುದು ಮನಸ್ಸಿನ ಸ್ವ-ಕೇಂದ್ರಿತವಾದ ರಚನೆ. ಸಂಪೂರ್ಣ ಗಮನವಿದ್ದಾಗ ಮಾತ್ರ ಒಳ್ಳೆಯತನವಿರುತ್ತದೆ. ಗಮನದಲ್ಲಿ ಉದ್ದೇಶಗಳಿಲ್ಲ. ಗಮನಕ್ಕೂ ಒಂದು ಉದ್ದೇಶವಿದ್ದಾಗ ಗಮನವಿರಲು ಸಾಧ್ಯವೇ? ಏನನ್ನೋ ಸಂಪಾದಿಸಬೇಕೆಂಬ, ಸಂಗ್ರಹಿಸಬೇಕೆಂಬ, ಉದ್ದೇಶದಿಂದ ಗಮನಿಸಲು ತೊಡಗಿದರೆ ಆಗ ಗಮನವಿರುವುದಿಲ್ಲ. ವಿಕರ್ಷಣೆ ಮಾತ್ರವಿರುತ್ತದೆ. ಗಮನ ಮತ್ತು ಗಮನದ ಉದ್ದೇಶಗಳೆಂಬ ಭೇದವಿರುತ್ತದೆ. ಏನೋ ಆಗಬೇಕೆಂಬ ಅಥವಾ ಏನೋ ಆಗಬಾರದೆಂಬ ಯಾವ ಉದ್ದೇಶವೂ ಇಲ್ಲದ ಪರಿಪೂರ್ಣ ಗಮನವಿದ್ದಾಗ ಮಾತ್ರ ‘ಒಳಿತು' ಇರುತ್ತದೆ.' ಎಂದು ಸ್ಪಷ್ಟಪಡಿಸುತ್ತಾರೆ.

ಆದ್ದರಿಂದ ಯಾರನ್ನೋ ಮೆಚ್ಚಿಸುವುದಕ್ಕಾಗಿಯೋ, ಅಥವಾ ಯಾವುದೋ ಉದ್ದೇಶಕ್ಕಾಗಿ ನಮ್ಮತನವನ್ನು ಬಲಿಕೊಟ್ಟು, ಯಾ ನಮಗೆ ನಾವೇ ಮೋಸಮಾಡಿಕೊಂಡು ಒಳ್ಳೆಯತನವನ್ನು ಪ್ರದರ್ಶಿಸುವುದು ಬೇಡ. ನಮ್ಮ ಅಂತರಾತ್ಮ ಮೆಚ್ಚುವಂತೆ ನಾವಿದ್ದು, ನಮ್ಮೊಳಗಿನೊಳಗೇ ಒಂದಾಗಲು ಪ್ರಯತ್ನಿಸೋಣ.

Friday, January 14, 2011

ಮನದ ಅ೦ಗಳದಿ................೨೫.ಸಂಕ್ರಮಣ

ನಮ್ಮ ಪುರಾತನ ಋಷಿಮುನಿಗಳು ತಮ್ಮ ವಿಶಿಷ್ಟ ಜ್ಞಾನದೀಪ್ತಿಯ ಅಂತಃಚಕ್ಷುಗಳಿಂದ ಕಂಡ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಸಾಮಾನ್ಯ ಜನತೆಗೆ ಉಪಯೋಗವಾಗುವಂತೆ, ಅವರ ಜೀವನ ಕ್ರಮಬದ್ಧವಾಗಿ ಸಾಗಲು ಅನುಕೂಲವಾಗುವಂತೆ ಅನೇಕ ರೀತಿ-ನೀತಿಗಳನ್ನು, ನೀತಿ-ನಿಯಮಗಳನ್ನು ಹಾಕಿಕೊಟ್ಟು ಅದನ್ನು ಅನುಸರಿಸಿ ಪರಸ್ಪರ ಸಹಕಾರದಿಂದ, ಶಾಂತಿಯಿಂದ ಉತ್ತಮ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಕ್ರಮೇಣ ಅವುಗಳನ್ನು ಜಾರಿಗೊಳಿಸುವ ಹಂತದಲ್ಲಿ ಸರಳಗೊಳಿಸಿ, ಸಂಭ್ರಮದಿಂದೊಡಗೂಡಿಸುವ ಸಲುವಾಗಿ ಋತುಮಾನಕ್ಕನುಗುಣವಾಗಿ ಹಬ್ಬಗಳೂ ಸೇರ್ಪಡೆಯಾಗಿವೆ ಎನಿಸುತ್ತದೆ. ಅನೇಕ ಹಬ್ಬಗಳು ಇವೆಯಾದರೂ ಗೌರಿಹಬ್ಬ, ನವರಾತ್ರಿ, ದೀಪಾವಳಿ, ಸಂಕ್ರಾಂತಿ, ಯುಗಾದಿ ಇವು ಪ್ರಮುಖವಾಗಿ ಆಚರಣೆಯಲ್ಲಿರುವ ರಾಷ್ಟ್ರೀಯ ಹಬ್ಬಗಳು. ಇವುಗಳಲ್ಲಿ ಸಂಕ್ರಾಂತಿಯು ವೈಜ್ಞಾನಿಕವಾಗಿಯೂ ವಿಶೇಷವಾದ ಮಹತ್ವವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಜನವರಿ೧೪ ಅಥವಾ ೧೫ರಂದು ಬರುವುದಲ್ಲದೆ ಉತ್ತರಾಯಣ ಅಂದರೆ ಸೂರ್ಯನ ಉತ್ತರ ದಿಕ್ಕಿನ ಪ್ರಯಾಣದ ಆರಂಭವನ್ನು ಸೂಚಿಸುವ ಕಾಲವೂ ಆಗಿದೆ. ಉತ್ತರಾಯಣದಲ್ಲಿ ಮರಣ ಹೊಂದಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಅನಾದಿ ಕಾಲದಿಂದಲೂ ಇದೆ. ಇಚ್ಛಾ ಮರಣಿಯಾದ ಭೀಷ್ಮ ಪಿತಾಮಹರು ಈ ದಿನಕ್ಕಾಗೇ ಕಾದಿದ್ದು ದೇಹತ್ಯಾಗ ಮಾಡಿದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಈ ಕಾಲವನ್ನು ‘ಮಕರ ಸಂಕ್ರಾಂತಿ’ ಎನ್ನುತ್ತಾರೆ.

ನಮ್ಮ ಕಡೆ ಸಂಕ್ರಾಂತಿ ಬಂತೆಂದರೆ ಅವರೇಕಾಯ ಸಡಗರ! ಹಬ್ಬಕ್ಕೆ ೨ದಿನಮೊದಲೇ ಅವರೇಕಾಯನ್ನು ಬಿಡಿಸಿ, ಅವರೇ ಕಾಳನ್ನು ನೆನೆಸಿಟ್ಟು, ಹಿಂದಿನ ದಿನ ಕಾಳನ್ನು ಚಿಲುಕಿಸುವ(ನೆಂದ ಕಾಳನ್ನು ಬೆರಳಿನಿಂದ ಒತ್ತಿ ಬೇಳೆಯನ್ನು ಬೇರ್ಪಡಿಸುವುದು) ಸಂಭ್ರಮ! ಹಬ್ಬದ ದಿನ ಚಿಲುಕವರೆ ಬೇಳೆಯ ಹುಗ್ಗಿ, ಅವರೆ ಕಾಳಿನ ಹುಳಿ,....ಎಲ್ಲಾ ಅವರೇಮಯ! ಜೊತೆಗೆ ಸಿಹಿ ಪೊಂಗಲ್ ಹಬ್ಬದ ವಿಶೇಷ. ಸಂಜೆ ಎಳ್ಳು ಬೀರುವ ಎಂದರೆ ಎಳ್ಳಿನ ಮಿಶ್ರಣ, ಸಕ್ಕರೆ ಅಚ್ಚು, ಕಬ್ಬು, ಬಾಳೆಹಣ್ಣು, ಉತ್ತುತ್ತೆ....ಮುಂತಾದವುಗಳನ್ನು ಮನೆಮನೆಗೂ ಹಂಚಿ ಬರುವ ಪದ್ಧತಿ. ಆಗ ಹಳ್ಳಿಯ ನಮ್ಮ ಮನೆಯಲ್ಲಿ ಬಿಳಿ ಎಳ್ಳನ್ನು ತಯಾರಿಸಲು ಎಳ್ಳನ್ನು ನೆನೆಸಿ ಸಾರಿಸಿದ ಮಣ್ಣಿನ ನೆಲದ ಮೇಲೆ ಉಜ್ಜುತ್ತಿದ್ದರು. ೧೫-೨೦ದಿನಗಳಿಗೆ ಮೊದಲೇ ಬೆಲ್ಲ ಮುರಿಯುವುದು, ಕೊಬ್ಬರಿ ಹೆಚ್ಚುವುದು, ನೆಲಗಡಲೆ ಬೀಜವನ್ನು ಹುರಿದು ಬೇಳೆ ಮಾಡಿಕೊಳ್ಳುವುದು........ಮುಂತಾದ ಕೆಲಸಗಳನ್ನು ಅಮ್ಮ ಬಿಡುವಿಲ್ಲದ ದೈನಂದಿನ ಕೆಲಸಗಳ ನಡುವೆಯೇ ಮಾಡಿಕೊಳ್ಳುತ್ತಿದ್ದರು. ಸಕ್ಕರೆ ಅಚ್ಚನ್ನು ಮಾಡಲು ಪ್ರಾರಂಭಿಸಿದರೆಂದರೆ ನಮಗೆ ಎಲ್ಲಿಲ್ಲದ ಸಡಗರ! ಈ ಹಬ್ಬದ ಪದ್ಧತಿ ಇಲ್ಲದ ಪರ ಊರುಗಳಿಂದ ಬಂದು ನೆಲೆಸಿದವರೂ ಮಕ್ಕಳಿಗೆ ನಿರಾಸೆಯಾಗಬಾರದೆಂದು ಕೊಳ್ಳಲು ಸಿಗದೇ ಇದ್ದುದರಿಂದ ವಿಧಾನವನ್ನು ತಿಳಿದುಕೊಂಡು ಎಳ್ಳುಬೆಲ್ಲ ತಯಾರಿಸುತ್ತಿದ್ದರು. ಈಗ ಸಿದ್ಧಪಡಿಸಿದ ಮಿಶ್ರಣವನ್ನೇ ಅಂಗಡಿಗಳಲ್ಲಿ ಮಾರಲು ಇಟ್ಟಿರುತ್ತಾರೆ. ಒಮ್ಮೆ ಮಾರ್ಕೆಟ್‌ಗೆ ಹೋದರೆ ಹಬ್ಬಕ್ಕೆ ಏನೇನು ಬೇಕು ಎನ್ನುವುದನ್ನು ವ್ಯಾಪಾರಿಗಳೇ ನೆನಪಿಸಿ ಕೊಡುತ್ತಾರೆ. ಆದರೆ ಈ ಎಲ್ಲಾ ಆಚರಣೆಗಳು ಮಹತ್ವವನ್ನು ಕಳೆದುಕೊಳ್ಳುತ್ತಾ ನೀರಸವಾಗುತ್ತಿವೆಯೇನೋ ಎನಿಸುತ್ತಿದೆ.

‘ಸಂಕ್ರಾಂತೀಲಿ ಶಂಕದ ದ್ವಾರಾ(ಗಾತ್ರದ) ಚಳಿ ಹೋಗಿ ಸಾಸಿವೆ ಕಾಳು ದ್ವಾರಾ ಸೆಖೆ ಬಂತು’ ಅಂತ ನಮ್ಮ ಕಡೆ ಹೇಳುತ್ತಾರೆ. ಇದುವರಗೆ ಚಳಿಯ ಕೊರೆಯಿಂದ ಮೈಯಿನ ಚರ್ಮ ಬಿರುಕು ಬಿಟ್ಟಿರುತ್ತದೆ. ಸಂಕ್ರಾಂತಿಯಲ್ಲಿ ತಯಾರಿಸಿ ಪರಸ್ಪರ ಹಂಚಿ ತಿನ್ನುವ ಪಂಚ ಕಜ್ಜಾಯವು ಎಳ್ಳು, ಕೊಬ್ಬರಿ, ನೆಲಗಡಲೆ ಬೀಜ, ಕಡಲೆ ಮತ್ತು ಬೆಲ್ಲಗಳ ಮಿಶ್ರಣವಾಗಿದ್ದು ಅದರಲ್ಲಿ ಕೊಬ್ಬಿನ ಅಂಶವಿದ್ದು ಚರ್ಮವನ್ನು ರಕ್ಷಿಸುವ ಗುಣವನ್ನು ಹೊಂದಿದೆ. ‘ಎಳ್ಳು ಬೆಲ್ಲಿ ತಿಂದು ಒಳ್ಳೆಯ ಮಾತನಾಡು’ ಎನ್ನುವ ಉಕ್ತಿಯೂ ಇದೆ.ಇದಕ್ಕೆ ಸಮೀಕರಿಸುವಂತೆ ಮಹಾರಾಷ್ಟ್ರದಲ್ಲಿ ಎಳ್ಳು ಉಂಡೆಗಳನ್ನು ತಯಾರಿಸಿ ಹಂಚುತ್ತಾರೆ ಹಾಗೂ ಹಂಚುವಾಗ, ‘ತಿಲ್ ಗುಲ್ ಘ್ಯಾ ಗೂಡ್ ಗೂಡ್ ಬೋಲ್’ ಎಂದು ಹೇಳುತ್ತಾರೆ! ಇದರಿಂದ ಸಂಕ್ರಾಂತಿಯು ಆರೋಗ್ಯ ರಕ್ಷಣೆಯಲ್ಲದೇ ಉತ್ತಮ ಸಾಮರಸ್ಯವನ್ನೂ ಕಾಪಾಡುವ ಹಬ್ಬವಾಗಿದೆ ಎಂದು ತಿಳಿಯಬಹುದು. ಆಂದ್ರಪ್ರದೇಶದಲ್ಲಿ ‘ಸಂಕ್ರಾಂತಿ’ ಎಂದೇ ಕರೆದು, ತಮಿಳ್ ನಾಡಿನಲ್ಲಿ ‘ಪೊಂಗಲ್’ಎಂದು, ಪಂಜಾಬ್ ಮತ್ತು ಹರಿಯಾಣಗಳಲ್ಲಿ ‘ಲೊಹರಿ’ ಎಂದು ಸಂಕ್ರಾಂತಿಯನ್ನು ಆಚರಿಸುತ್ತಾರೆ. ತಮಿಳುನಾಡಿನಲ್ಲಿ "ಪೊಂಗಲ್" ಅನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಾಲ್ಕು ದಿನಗಳವರೆಗೂ ನಡೆವ ಹಬ್ಬ ‘ಭೋಗಿ’ಯೊಂದಿಗೆ ಶುರುವಾಗಿ "ಸೂರ್ಯ ಪೊಂಗಲ್" ಹಾಗೂ ಮೂರನೇ ದಿನ "ಮಾಟ್ಟು ಪೊಂಗಲ್" ನಾಲ್ಕನೇ ದಿನ "ಕಾಣುಮ ಪೊಂಗಲ್" ಎಂದು ಆಚರಿಸುತ್ತಾರೆ. ಪ್ರತಿ ದಿನ ತನ್ನದೇ ಆದ ವಿಶೇಷತೆ ಇರುತ್ತದೆ. ಸಂವೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲದೊಂದಿಗೆ ಸಿಹಿಪೊಂಗಲ್ ಅನ್ನು ಅರಿಶಿಣ ಕೊಂಬಿನ ದಾರ ಹಾಗೂ ಹೂಗಳಿಂದ ಅಲಂಕರಿಸಿದ ಮಣ್ಣಿನ ಮಡಿಕೆಗಳಲ್ಲಿ ತಯಾರಿಸಲಾಗುತ್ತದೆ. ಈ ಹಬ್ಬದಲ್ಲಿಯೇ ಉತ್ತರ ಭಾರತದ ಗುಜರಾತಿನಲ್ಲಿ ಗಾಳಿಪಟಗಳನ್ನೂ ಹಾರಿಬಿಡುವ ಸಂಪ್ರದಾಯವಿದೆ. ಹೀಗಾಗಿ ಸಂಕ್ರಾಂತಿಯು ಭಾರತದಾದ್ಯಂತ ಅತ್ಯಂತ ಪ್ರಮುಖ ಹಬ್ಬವೆನಿಸಿದೆ.

ಸಂಕ್ರಾಂತಿ ಸಂವೃದ್ಧಿಯ ಸೂಚಕದ ಹಬ್ಬ. ವರ್ಷವೆಲ್ಲಾ ಕಷ್ಟಪಟ್ಟು ದುಡಿದ ರೈತರ ಫಸಲು ಕಣಜವನ್ನು ತುಂಬಿ ಸಂತಸವನ್ನು ಉಂಟುಮಾಡಿದೆ ಎಂಬುದು ಈ ಹಬ್ಬದ ಆಚರಣೆಯ ಮೂಲಕ ವ್ಯಕ್ತವಾಗುತ್ತದೆ. ರೈತರು "ಧಾನ್ಯಲಕ್ಷ್ಮಿಗೆ" ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ತಮ್ಮೊಡನೆ ದುಡಿದ ಮೂಕ ಪ್ರಾಣಿಗಳಾದ ಎತ್ತು, ದನ-ಕರುಗಳಿಗೆ ಆ ದಿನ ವಿಶೇಷವಾಗಿ ಅಲಂಕಾರ ಮಾಡಿ ಸಂತಸಪಡುತ್ತಾರೆ. ಹಳ್ಳಿಗಳಲ್ಲಿ, ಮುಖ್ಯವಾಗಿ ಮನೆ-ಮನೆಗಳನ್ನು ಸುಣ್ಣ-ಬಣ್ಣಗಳಿಂದ ಮೆರುಗುಗೊಳಿಸಿ ತಳಿರುತೋರಣಗಳಿಂದ ಅಲ೦ಕರಿಸಿರುತ್ತಾರೆ. ನಮ್ಮಲ್ಲಿ ದೀಪಾವಳಿಯ ದಿನ ‘ಕೆರಕ’ವನ್ನು ಮಾಡುವಂತೆ ಕೆಲವು ಪ್ರದೇಶಗಳಲ್ಲಿ ರಂಗೋಲಿಯ ಮಧ್ಯೆ ಸಗಣಿಯಿಂದ ಗೋಪುರ ಮಾಡಿಟ್ಟು ಅದನ್ನು ಬಗೆಬಗೆಯ ಹೂಗಳಿಂದ ಸಿಂಗರಿಸುವ ಸಂಪ್ರದಾಯವು ಇಂದಿಗೂ ಜಾರಿಯಲ್ಲಿದೆ.

ಎಳ್ಳಿನಲ್ಲಿ ಇರುವ ಸ್ವಲ್ಪ ಪ್ರಮಾಣದ ಕಹಿ ರುಚಿಯನ್ನೂ, ಬೆಲ್ಲದ ಸಿಹಿ ರುಚಿಯನ್ನೂ ಮಿಶ್ರಗೊಳಿಸುವ ಎಳ್ಳು-ಬೆಲ್ಲವು ಯುಗಾದಿಯ ಬೇವು-ಬೆಲ್ಲವನ್ನು ನೆನಪಿಸುತ್ತದೆ. ಜೀವನವು ಕಹಿ-ಸಿಹಿಗಳ ಸಮ್ಮಿಶ್ರಣ ಎನ್ನುವುದನ್ನು ಈ ಹಬ್ಬವೂ ಸಾರುತ್ತದೆ. ಸುಖ-ದುಃಖಗಳನ್ನು ಸಮಭಾವದಲ್ಲಿ ಸ್ವೀಕರಿಸಬೇಕು ಎನ್ನುವುದು ನಮ್ಮ ಎಲ್ಲಾ ಆಚರಣೆಗಳ ಮೂಲ ಉದ್ದೇಶವಾಗಿದೆ. ಇದನ್ನು ಅರ್ಥಮಾಡಿಕೊಂಡು ನಡೆದರೆ ಒಳ್ಳೆಯದೇ. ಆದರೆ ಎಲ್ಲೋ ಕೆಲವರು ತಮ್ಮ ನಂಬಿಕೆಗಳನ್ನು ಒರೆಗೆ ಹಚ್ಚಿ ನೋಡುವವರಾದರೆ ಅನೇಕರು ಮೌಢ್ಯತೆಯ ಪರಮಾವಧಿಯನ್ನು ತಲುಪುತ್ತಿದ್ದಾರೇನೋ ಎನಿಸುವಂತಿದೆ. ಇದಕ್ಕೆ ನಮ್ಮ ದೃಶ್ಯ ಮಾಧ್ಯಮಗಳೂ ಇಂಬುಗೊಡುತ್ತಿವೆ.

ಸಂಕ್ರಮಣ ಅಥವಾ ಸಂಕ್ರಾಂತಿ ಎಂದರೆ ಸಂಧಿ ಕಾಲ. ದಾಟುವಿಕೆ ಅಥವಾ ಮುಂದುವರಿಯುವಿಕೆ ಎಂಬ ಅರ್ಥವೂ ಇದೆ. ನಮ್ಮ ಈ ಸಂದಿಗ್ಧತೆಯಲ್ಲಿ ಆಚರಿಸುತ್ತಿರುವ ‘ಸಂಕ್ರಾಂತಿ’ಯು ನಮ್ಮನ್ನು ಧನಾತ್ಮಕತೆಯಿಂದೊಡಗೂಡಿದ ಉತ್ತಮರನ್ನಾಗಿಸಲಿ. ಎಲ್ಲೆಲ್ಲೂ ಶಾಂತಿ, ಸಂವೃದ್ಧಿಯು ನೆಲೆಸುವಂತಾಗಲಿ ಎಂದು ಆಶಿಸುತ್ತಾ.........‘ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.’

(`ಮರಳ ಮಲ್ಲಿಗೆ'ಯ `ಸುಗ್ಗಿಯ ಸ೦ಕ್ರಾ೦ತಿ ಹಬ್ಬ' ಲೇಖನದಿ೦ದ ಮಾಹಿತಿಯನ್ನು ಪಡೆದಿದ್ದೇನೆ. ಲೇಖಕರಾದ ವೀಣಾ ಕುಲಕರ್ಣಿ ಯವರಿಗೆ ಧನ್ಯವಾದಗಳು.)