Saturday, January 22, 2011

ಮನದ ಅಂಗಳದಿ..................೨೬. ಒಳಿತು-ಕೆಡಕು

ನಮ್ಮ ಸುತ್ತಮುತ್ತಲಿನ ಆಗುಹೋಗುಗಳು, ಜನರ ಸ್ವಭಾವ, ಅವರ ರೀತಿನೀತಿಗಳಲ್ಲಿ ನಾವು ಸಾಮಾನ್ಯವಾಗಿ ಒಳಿತು-ಕೆಡಕುಗಳನ್ನು ಗಮನಿಸುತ್ತಲೇ ಇರುತ್ತೇವೆ. ಅಲ್ಲದೇ ನಾವು ಸಂಪರ್ಕಿಸುವ ವ್ಯಕ್ತಿಗಳನ್ನು, ಕಾಣುವ-ಕೇಳುವ ಘಟನೆಗಳನ್ನು ಒಳ್ಳೆಯದು-ಕೆಟ್ಟದ್ದನ್ನಾಗಿ ವಿಭಾಗಿಸಲು ಪ್ರಯತ್ನಿಸುತ್ತೇವೆ. ಇತರರೆದುರು, ವಿಶೇಷವಾಗಿ ಹೊಸಬರೆದುರು ನಮ್ಮನ್ನು ಒಳ್ಳೆಯವರನ್ನಾಗಿ ತೋರ್ಪಡಿಸುವ ಯತ್ನವನ್ನೂ ಮಾಡುತ್ತೇವೆ. ‘ಒಳ್ಳೆಯವರು' ಎನಿಸಿದವರನ್ನು ಹೊಗಳುವುದರಲ್ಲಿ ನಮಗೆ ಎಲ್ಲಿಲ್ಲದ ಉತ್ಸಾಹ! ‘ಕೆಟ್ಟವರು' ಎಂದು ತಿಳಿದಾಗ ಅವರನ್ನು ತೆಗಳುವುದರಲ್ಲಿಯೂ ಹಿಂದೆ ಬೀಳುವುದಿಲ್ಲ. ಆದರೆ ಆ ಒಳ್ಳೆಯತನ ನಮ್ಮಲ್ಲಿದೆಯೇ ಎಂದು ನಮ್ಮನ್ನೇ ನಾವು ಕೇಳಿಕೊಳ್ಳುವುದಿಲ್ಲ. ಅಥವಾ ಆ ಒಳ್ಳೆಯತನವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ನಮ್ಮಲ್ಲಿರಬಹುದಾದ ಕೆಟ್ಟತನವನ್ನು ನಿವಾರಿಸಿಕೊಳ್ಳಲೂ ಮುಂದಾಗುವುದಿಲ್ಲ. ಮಾನವರಾದ ನಮ್ಮ ಈ ಗುಣದ ಬಗ್ಗೆ ಆಲೋಚಿಸಿದಾಗ ಹೀಗನಿಸಿತು,

‘ಒಳ್ಳೆಯತನ'ವಿರುವುದು
ಹಾಡಿ-ಹೊಗಳುವುದಕ್ಕೆ
ದೂರ ತಳ್ಳುವುದಕ್ಕೆ,
‘ಕೆಟ್ಟತನ'ವಿರುವುದು
ನೋಡಿ ಜರಿಯುವುದಕ್ಕೆ
ಮೈಗೂಡಿಸಿಕೊಳ್ಳುವುದಕ್ಕೆ!

ಖಲೀಲ್ ಗಿಬ್ರಾನ್‌ರ ‘ಪ್ರವಾದಿ' (ದಿ ಪ್ರೊಫೆಟ್)ಯಲ್ಲಿ ‘ಆಲ್ ಮುಸ್ತಾಫಾ' ತನ್ನ ‘ಮಹಾ ಪ್ರಸ್ತಾನ'ವನ್ನು ಕೈಗೊಳ್ಳುವ ಮೊದಲು ‘ಆರ್ಫಲಿಸ್' ಜನರಿಗೆ ಅವರ ಪ್ರಾರ್ಥನೆಯಂತೆ ತಾನು ಕಂಡ ಸತ್ಯರಹಸ್ಯವನ್ನು ತಿಳಿಸುತ್ತಾನೆ. ಆಗ ‘ಒಳಿತು-ಕೆಡಕು'ಗಳ ಬಗ್ಗೆ ಹೀಗೆ ಹೇಳುತ್ತಾನೆ,

‘ನಿಮ್ಮಲ್ಲಿದ್ದ ಒಳಿತಿನ ಬಗ್ಗೆ ನಾನು ನುಡಿಯಬಲ್ಲೆ; ಆದರೆ ನಿಮ್ಮಲ್ಲಿಯ ಕೆಡುಕಿನ ಬಗ್ಗೆ ಮಾತ್ರ ನುಡಿಯಲಾರೆ. ಏಕೆಂದರೆ ಹಸಿವೆ-ತೃಷೆಗಳಿಂದ ಪೀಡಿತವಾದ ಒಳಿತೇ ಕೆಡಕಲ್ಲದೆ ಇನ್ನೇನು? ಒಳಿತು ಹಸಿದಾಗ, ನಿಶ್ಚಯವಾಗಿ ಕತ್ತಲೆಯ ಗುಹೆಯಲ್ಲಿಯೂ ಅನ್ನವನ್ನು ಶೋಧಿಸಿಕೊಳ್ಳುತ್ತದೆ; ತೃಷೆಯಾದಾಗ ಮೃತೋದಕವನ್ನೂ ಕುಡಿಯುತ್ತದೆ.

ನೀವು ನಿಮ್ಮೊಳಗಿನೊಳಗೇ ಒಂದಾದಾಗ, ನೀವು ಒಳ್ಳೆಯವರಾಗಿರುತ್ತೀರಿ. ಆದರೆ ನೀವು ನಿಮ್ಮೊಳಗಿನೊಳಗೇ ಒಂದಾಗದಾಗ ಕೂಡ, ನೀವು ಕೆಡಕರಾಗಿರುವುದಿಲ್ಲ........ ಚುಕ್ಕಾಣಿಯಿಲ್ಲದ ಹಡಗು ಮನಬಂದಂತೆ ತೇಲುತ್ತ ಅಪಾಯಕರ ದ್ವೀಪಗಳ ಮಧ್ಯೆ ಗೊತ್ತುಗುರಿಯಿಲ್ಲದೆ ತಿರುಗುತ್ತಿರಬಹುದು; ಆದರೂ ಅದು ತಳ ಕಾಣುವಂತೆ ಮುಳುಗಲಾರದು.

ನಿಮ್ಮನ್ನೇ ನೀವು ಕೊಟ್ಟುಕೊಳ್ಳುತ್ತಿರುವಾಗ ನೀವು ಒಳ್ಳೆಯವರಾಗಿರುವಿರಿ. ಆದರೆ ನೀವು ನಿಮಗಾಗಿ ಲಾಭ ಪಡೆಯುತ್ತಿರುವಾಗ ಕೂಡ ನೀವು ಕೆಡಕರಾಗಿರುವುದಿಲ್ಲ. ಏಕೆಂದರೆ ನೀವು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವಾಗ ನೀವೊಂದು ನೆಲದಲ್ಲಿಳಿದು ಭೂಮಿತಾಯಿಯ ಸ್ತನಪಾನ ಮಾಡುವ ಬೇರು ಆಗಿ ಮಾತ್ರ ಪರಿಣಮಿಸುತ್ತೀರಿ. ‘ಪರಿಪಕ್ವ ಮತ್ತು ರಸಭರಿತ ಹಾಗೂ ಸಮೃದ್ಧಿಯನ್ನೇ ಸದಾ ಸಮರ್ಪಿಸುವ ನನ್ನಂತೆ ಆಗು,' ಎಂದು ಹಣ್ಣು ಬೇರಿಗೆ ನಿಶ್ಚಯವಾಗಿಯೂ ಹೇಳಲಾರದು. ಏಕೆಂದರೆ ಬೇರಿಗೆ ಸ್ವೀಕಾರವೇ ಅವಶ್ಯಕವಿದ್ದಂತೆ ಹಣ್ಣಿಗೆ ಸಮರ್ಪಣವು ಅವಶ್ಯಕವಾಗಿದೆ.

ನಿಮ್ಮ ಮಾತಿನಲ್ಲಿ ನೀವು ಸಂಪೂರ್ಣ ಎಚ್ಚರಿಕೆಯಿಂದಿದ್ದಾಗ ನೀವು ಒಳ್ಳೆಯವರಾಗಿರುತ್ತೀರಿ. ಆದರೆ ನಿದ್ರೆಯಲ್ಲಿ ಏನೂ ಉದ್ದೇಶವಿಲ್ಲದೆ ಬಡಬಡಿಸುವಾಗಲೂ ನೀವು ಕೆಡಕರಾಗಿರುವುದಿಲ್ಲ. ಸ್ಖಲಿತ ಭಾಷಣವು ಕೂಡ ದುರ್ಬಲವಾಣಿಯನ್ನು ಸಬಲ ಮಾಡಬಲ್ಲದು.

ನಿಶ್ಚಿತವಾದ ಮತ್ತು ಧೈರ್ಯದ ಹೆಜ್ಜೆಗಳಿಂದ ನಿಮ್ಮ ಗುರಿಯತ್ತ ನೀವು ಸಾಗುತ್ತಿರುವಾಗ ನೀವು ಒಳ್ಳೆಯವರಾಗಿರುತ್ತೀರಿ. ಆದರೆ ನಿಮ್ಮ ಗುರಿಯತ್ತ ನೀವು ಕುಂಟುತ್ತ ಸಾಗಿರುವಾಗಲೂ ನೀವು ಕೆಡಕರಾಗಿರುವುದಿಲ್ಲ. ಕುಂಟುತ್ತ ಸಾಗುವವರು ಕೂಡ ಹಿಮ್ಮುಖವಾಗಿ ಹೋಗಲಾರರು. ಸಬಲರೂ ಚಪಲರೂ ಆಗಿದ್ದ ನೀವು ದಯೆತೋರಿಸಬೇಕೆಂದು ಕುಂಟರ ಜೊತೆಗೆ ನೀವೂ ಕುಂಟುತ್ತ ನಡೆಯದಂತೆ ನೋಡಿಕೊಳ್ಳಿರಿ.

ಅನೇಕ ರೀತಿಗಳಲ್ಲಿ ನೀವು ಒಳ್ಳೆಯವರಾಗಿದ್ದೀರಿ; ನೀವು ಒಳ್ಳೆಯವರಾಗದಿದ್ದಾಗ ಕೂಡ ಕೆಡಕರಾಗಿರುವುದೇ ಇಲ್ಲ. ನೀವು ಕೇವಲ ಉಂಡಾಡಿಗರೂ, ಆಲಸಿಗಳೂ ಮಾತ್ರ ಆಗಿರುತ್ತೀರಿ. ಚಿಗರಿಗೆ ತನ್ನ ಚಪಲತೆಯನ್ನು ಆಮೆಗೆ ಕಲಿಸಬರದುದು ಶೋಚನೀಯವೇ ಸರಿ. ನಿಮ್ಮ ವಿರಾಟ ಸ್ವರೂಪದ ಸಿದ್ಧಿಗಾಗಿ, ಆಕಾಂಕ್ಷಿಯಾಗಿರುವುದರಲ್ಲಿಯೇ ಒಳ್ಳೆಯತನವಿರುತ್ತದೆ; ಆ ಆಕಾಂಕ್ಷೆಯು ನಿಮ್ಮೆಲ್ಲರಲ್ಲಿ ಇದ್ದೇ ಇದೆ. ಆದರೆ ನಿಮ್ಮೊಳಗಿನ ಹಲವರಲ್ಲಿ ಆ ಆಕಾಂಕ್ಷೆಯು, ಗುಡ್ಡಗಾಡುಗಳ ಗುಪಿತ ಹಾಗೂ ಅರಣ್ಯದ ಸಂಗೀತಗಳಿಂದ ಕೂಡಿಕೊಂಡು ಸಮುದ್ರದೆಡೆಗೆ ರಭಸದಿಂದ ಪ್ರವಹಿಸುತ್ತಿರುವ ಪ್ರವಾಹದಂತಿರುತ್ತದೆ. ಉಳಿದ ಹಲವರಲ್ಲಿ ಅದು ಸಮುದ್ರವನ್ನು ಸಂಗಮಿಸುವ ಪೂರ್ವದಲ್ಲಿಯೇ ತನ್ನ ಅಂಕುಡೊಂಕಿನ ತಿರುವುಗಳಲ್ಲಿ ಹ್ರಾಸ ಹೊಂದುವ ಮಂದ ಪ್ರವಾಹದಂತಿರುತ್ತದೆ. ಆದರೆ ಹೆಚ್ಚಿನ ಆಕಾಂಕ್ಷೆಯುಳ್ಳವನು ಕಡಿಮೆ ಆಕಾಂಕ್ಷೆಯುಳ್ಳವನಿಗೆ ‘ನಿನ್ನ ಗತಿ ಮಂದವೇಕೆ? ನೀನೇಕೆ ಹೀಗೆ ತಡೆದು ನಿಲ್ಲುತ್ತೀ?' ಎಂದು ಕೇಳದಿರಲಿ. ಏಕೆಂದರೆ ನಿಜವಾಗಿಯೂ ಒಳ್ಳೆಯನಾದವನು ವಿವಸ್ತ್ರನಿಗೆ, ‘ನಿನ್ನ ವಸ್ತ್ರಗಳೆಲ್ಲಿ?' ಎಂದೂ, ಗೃಹರಹಿತನಿಗೆ, ‘ನಿನ್ನ ಮನೆ ಏನಾಯಿತು?' ಎಂದೂ ಕೇಳುವುದಿಲ್ಲ.'

ಜಿಡ್ಡು ಕೃಷ್ಣಮೂರ್ತಿಯವರು ‘ಕೆಡುಕನ್ನು ನಾವು ಸಮರ್ಥಿಸಿಕೊಳ್ಳುತ್ತಿದ್ದೇವೆ,' ಎಂಬುದನ್ನು ಹೀಗೆ ಹೇಳುತ್ತಾರೆ, ‘ಹಿಂದೆ ಕೆಡುಕನ್ನು ಕೆಡುಕೆಂದೂ, ಕೊಲೆಯನ್ನು ಕೊಲೆಯೆಂದೂ ಗುರುತಿಸುತ್ತಿದ್ದೆವು. ಈಗ ಕೊಲೆಯೆಂಬುದು ಉದಾತ್ತವಾದ ಪರಿಣಾಮವನ್ನು ಸಾಧಿಸಲು ಇರುವ ಒಂದು ಮಾರ್ಗವಾಗಿಬಿಟ್ಟಿದೆ. ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಕೊಲೆ ಸಮರ್ಥನೀಯ ಎಂಬ ವಿಚಾರ ಈಗ ಜಗತ್ತಿನ ಎಲ್ಲೆಡೆಗಳಲ್ಲಿ ಕಾಣುತ್ತಿದೆ. ಕೆಡುಕನ್ನು ಸಮರ್ಥಿಸುವ ವಿಚಾರಗಳ ಮಹಾನ್ ಸೌಧವನ್ನೇ ನಿರ್ಮಿಸಿಕೊಂಡಿದ್ದೇವೆ. ಕೆಡುಕು ಎಂದಿಗೂ ಕೆಡುಕೇ, ಅದು ಒಳಿತನ್ನು ತರಲಾರದು. ಯುದ್ಧದ ದಾರಿಯಿಂದ ಶಾಂತಿಯನ್ನು ಪಡೆಯಲಾಗದು.'

`ಒಳಿತಿಗೆ ಉದ್ದೇಶಗಳಿಲ್ಲ.' ಎನ್ನುವ ಬಗ್ಗೆ ಹೇಳುತ್ತಾ ......‘ಏಕೆಂದರೆ ಎಲ್ಲ ಉದ್ದೇಶಗಳೂ ನಾನು ಎಂಬ ಸ್ವ-ಅರ್ಥದಲ್ಲಿ ಬೇರುಬಿಟ್ಟಿವೆ. ಉದ್ದೇಶವೆಂಬುದು ಮನಸ್ಸಿನ ಸ್ವ-ಕೇಂದ್ರಿತವಾದ ರಚನೆ. ಸಂಪೂರ್ಣ ಗಮನವಿದ್ದಾಗ ಮಾತ್ರ ಒಳ್ಳೆಯತನವಿರುತ್ತದೆ. ಗಮನದಲ್ಲಿ ಉದ್ದೇಶಗಳಿಲ್ಲ. ಗಮನಕ್ಕೂ ಒಂದು ಉದ್ದೇಶವಿದ್ದಾಗ ಗಮನವಿರಲು ಸಾಧ್ಯವೇ? ಏನನ್ನೋ ಸಂಪಾದಿಸಬೇಕೆಂಬ, ಸಂಗ್ರಹಿಸಬೇಕೆಂಬ, ಉದ್ದೇಶದಿಂದ ಗಮನಿಸಲು ತೊಡಗಿದರೆ ಆಗ ಗಮನವಿರುವುದಿಲ್ಲ. ವಿಕರ್ಷಣೆ ಮಾತ್ರವಿರುತ್ತದೆ. ಗಮನ ಮತ್ತು ಗಮನದ ಉದ್ದೇಶಗಳೆಂಬ ಭೇದವಿರುತ್ತದೆ. ಏನೋ ಆಗಬೇಕೆಂಬ ಅಥವಾ ಏನೋ ಆಗಬಾರದೆಂಬ ಯಾವ ಉದ್ದೇಶವೂ ಇಲ್ಲದ ಪರಿಪೂರ್ಣ ಗಮನವಿದ್ದಾಗ ಮಾತ್ರ ‘ಒಳಿತು' ಇರುತ್ತದೆ.' ಎಂದು ಸ್ಪಷ್ಟಪಡಿಸುತ್ತಾರೆ.

ಆದ್ದರಿಂದ ಯಾರನ್ನೋ ಮೆಚ್ಚಿಸುವುದಕ್ಕಾಗಿಯೋ, ಅಥವಾ ಯಾವುದೋ ಉದ್ದೇಶಕ್ಕಾಗಿ ನಮ್ಮತನವನ್ನು ಬಲಿಕೊಟ್ಟು, ಯಾ ನಮಗೆ ನಾವೇ ಮೋಸಮಾಡಿಕೊಂಡು ಒಳ್ಳೆಯತನವನ್ನು ಪ್ರದರ್ಶಿಸುವುದು ಬೇಡ. ನಮ್ಮ ಅಂತರಾತ್ಮ ಮೆಚ್ಚುವಂತೆ ನಾವಿದ್ದು, ನಮ್ಮೊಳಗಿನೊಳಗೇ ಒಂದಾಗಲು ಪ್ರಯತ್ನಿಸೋಣ.

18 comments:

 1. ಮಾರ್ಗದರ್ಶಕ ಮಾತುಗಳಿಂದ ತುಂಬಿದ ಲೇಖನ...ಚೆನ್ನಾಗಿದೆ.

  ReplyDelete
 2. ಪ್ರಭಾ ಅವರೇ,
  ಮಾರ್ಗದರ್ಶಕವಾದ ಲೇಖನ.
  ಕೊನೆಯ ಸಾಲು ಲೇಖನಕ್ಕೆ ಕಳಶವಿಟ್ಟಂತಿದೆ.

  ReplyDelete
 3. @ ನಾರಾಯಣ್ ಭಟ್ ರವರೆ,
  ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದಿದ್ದೀರಿ. ನಿಮಗೆ ಮತ್ತೊಮ್ಮೆ ಸ್ವಾಗತ. ಗಿಬ್ರಾನ್ ರವರ ಒ೦ದೊ೦ದು ಉಕ್ತಿಯೂ ಮಾರ್ಗದರ್ಶಕವಾಗಿದೆ. ಜಿಡ್ಡು ಕೃಷ್ಣಮೂರ್ತಿಯವರ ಮಾತುಗಳೂ ಉನ್ನತ ಸ್ತರಕ್ಕೆ ನಮ್ಮನ್ನು ಕೊ೦ಡೊಯ್ಯುವ ಸಾಮರ್ಥ್ಯವನ್ನು ಹೊ೦ದಿವೆ. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 4. @ ಸಾನ್ವಿಯ ತ೦ದೆಯವರೇ,
  `ನಮ್ಮ ಅಂತರಾತ್ಮ ಮೆಚ್ಚುವಂತೆ ನಾವಿದ್ದು, ನಮ್ಮೊಳಗಿನೊಳಗೇ ಒಂದಾಗಲು ಪ್ರಯತ್ನಿಸೋಣ.' ಎ೦ಬ ಸಾಲಿಗೆ ಮೆಚ್ಚುಗೆ ತಿಳಿಸಿ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.ನಿಮಗೆ ಸದಾ ಸ್ವಾಗತ.

  ReplyDelete
 5. ಪ್ರಭಾಮಣಿಯವರೆ,
  ನಿಮ್ಮ ಲೇಖನವನ್ನು ಓದುತ್ತಿದ್ದಂತೆ, ನಿಜಗುಣಿ ಶಿವಯೋಗಿಯವರ ಹಾಡೊಂದು ನೆನೆಪಿಗೆ ಬಂದಿತು:
  "ಜನ ಮೆಚ್ಚಿ ನಡಕೊಂಡರೇನುಂಟು ಲೋಕದಿ?
  ಮನ ಮೆಚ್ಚಿ ನಡಕೊಂಬುವದೆ ಚಂದವು.
  ಮನ ಮೆಚ್ಚಿ ನಡೆಯದೆ, ಜನ ಮೆಚ್ಚಿ ನಡೆದರೆ,
  ಮನದಾಣ್ಮ ಗುರುಸಿದ್ಧ ಮರೆಯಾಗುವನಲ್ಲ!"
  ನಿಮ್ಮದು ಬೆಳಕು ನೀಡುವ ಲೇಖನ.

  ReplyDelete
 6. ನಮ್ಮ ಅಂತರಾತ್ಮ ಒಪ್ಪುವಂತೆ ನಾವಿದ್ದರೆ ಸಾಕು ಮೇಡಂ. ಹೀಗಿದ್ದರೆ ಯಾವ ಸಮಸ್ಯೆಗಳೂ ಉದ್ಭವಿಸುವುದಿಲ್ಲ.

  ReplyDelete
 7. ಒಳಿತು-ಕೆಡುಕಿನ ಬಗ್ಗೆ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು..

  ‘ಒಳ್ಳೆಯತನ'ವಿರುವುದು
  ಹಾಡಿ-ಹೊಗಳುವುದಕ್ಕೆ
  ದೂರ ತಳ್ಳುವುದಕ್ಕೆ,
  ‘ಕೆಟ್ಟತನ'ವಿರುವುದು
  ನೋಡಿ ಜರಿಯುವುದಕ್ಕೆ
  ಮೈಗೂಡಿಸಿಕೊಳ್ಳುವುದಕ್ಕೆ!

  ಈ ಕವನದ ವಿಡಂಬನೆ ಇಷ್ಟ ಆಯ್ತು!

  ReplyDelete
 8. ಪ್ರಭಾಮಣಿಯವರೆ,
  ನಿಮ್ಮ ಎಲ್ಲಾ ಲೇಖನಗಳಲ್ಲೂ ಜೀವನದಲ್ಲಿ ತಿಳಿದುಕೊಳ್ಳಬೇಕಾದ ಅನೇಕ ಅ೦ಶಗಳಿರುತ್ತವೆ.
  ಪ್ರಸ್ತುತ ಲೇಖನ ಕೂಡಾ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತದೆ.
  ಉತ್ತಮ ಅ೦ಶಗಳನ್ನೊಳಗೊ೦ಡ ಲೇಖನಗಳು ಹೀಗೆಯೆ ನಿಮ್ಮಿ೦ದ ಬರುತ್ತಿರಲಿ.
  ವ೦ದನೆಗಳು.

  ReplyDelete
 9. ಮಾರ್ಗದರ್ಶಕ ಲೇಖನ..
  ನನ್ನನ್ನು ಗೊಂದಲಗಳ ಸುಳಿಗಾಳಿಗೆ ಅಲ್ಲಲ್ಲಿ ಸಿಕ್ಕಿಸಿತು..

  ReplyDelete
 10. prabhamaniyavare olitu kedakugalu nammalle hege vijrumbhisuttave embudannu arthavattaagi teredittiddira.dhanyavaadagalu.

  ReplyDelete
 11. @ ಸುನಾಥ್ ರವರೆ,
  ನಿಜಗುಣಿ ಶಿವಯೋಗಿಯವರ ಹಾಡನ್ನು ನೆನೆಪಿಸಿದ್ದಕ್ಕಾಗಿ ಧನ್ಯವಾದಗಳು. ಜಗತ್ತಿಗೆ ಬೆಳಕು ನೀಡಿದ ಸಾಧಕರ ಉಕ್ತಿಗಳನ್ನು ಆಧರಿಸಿದ ಲೇಖನವನ್ನು ತಮ್ಮ ಮು೦ದಿಡುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ವ೦ದನೆಗಳು.

  ReplyDelete
 12. @ ಸತೀಶ್ ರವರೆ,
  ಲೇಖನದ ಉತ್ತಮ ಅ೦ಶವನ್ನು ನಿಮ್ಮದಾಗಿಸಿಕೊ೦ಡಿದ್ದಕ್ಕಾಗಿ ಹಾಗೂ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

  ReplyDelete
 13. @ ಪ್ರದೀಪ್ ರವರೆ,
  ನನ್ನ `ಹನಿ'ಯನ್ನು ಮೆಚ್ಚಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ವ೦ದನೆಗಳು. ಈ ಹನಿಯು ೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿ ಸೇರ್ಪಡೆಯಾಗಿದೆ.

  ReplyDelete
 14. @ ಮನಮುಕ್ತಾ ರವರೆ,
  `ಒಳಿತು' ಎಲ್ಲಿ೦ದಲೇ ದೊರೆತರೂ ನನ್ನದಾಗಿಸಿಕೊಳ್ಳ ಬೇಕೆ೦ಬ ಹ೦ಬಲ ನನ್ನದು. ನನಗೆ ದೊರೆತದ್ದನ್ನು ಎಲ್ಲರೊಡನೆಯೂ ಹ೦ಚಿಕೊಳ್ಳುತ್ತಿದ್ದೇನೆ. ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ನಮನಗಳು.ಬರುತ್ತಿರಿ

  ReplyDelete
 15. @ ಗುರುಪ್ರಸಾದ್ ರವರೆ,
  ನೀವು ಮಾರ್ಗದರ್ಶನ ಪಡೆದರೆ ಬಹಳ ಸ೦ತಸವೆನಿಸುತ್ತದೆ. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ಧನ್ಯವಾದಗಳು.

  ReplyDelete
 16. @ ಕಲಾವತಿಯವರೆ,
  ಲೇಖನವು ಅರ್ಥವತ್ತಾಗಿದೆ ಎ೦ದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ಧನ್ಯವಾದಗಳು.

  ReplyDelete
 17. ಒಳಿತು ಕೆಡುಕುಗಳ ವ್ಯಾಖ್ಯಾನ ಚೆನ್ನಾಗಿ ಮೂಡಿಬಂದಿದೆ.ಜಿಡ್ಡು ಕೃಷ್ಣಮೂರ್ತಿ ಯವರಂತಹ ಮಹಾನ್ ಚಿಂತಕರ ಇನ್ನಷ್ಟು ಲೇಖನಗಳು ನಿಮ್ಮ ಬ್ಲಾಗಿನಲ್ಲಿ ಬರಲಿ.

  ReplyDelete
 18. @ ಡಾ. ಕೃಷ್ಣಮೂರ್ತಿಯವರೇ,
  `ಜಿಡ್ಡು ಕೃಷ್ಣಮೂರ್ತಿ ಯವರಂತಹ ಮಹಾನ್ ಚಿಂತಕರ ಇನ್ನಷ್ಟು ಲೇಖನಗಳು ನಿಮ್ಮ ಬ್ಲಾಗಿನಲ್ಲಿ ಬರಲಿ.' ಎಂದು ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ವ೦ದನೆಗಳು.

  ReplyDelete