Sunday, February 26, 2012

ಮನದ ಅಂಗಳದಿ......... 81. ಆಕರ್ಷಣೆಯ ನಿಯಮ

ನಾವು ಶಾಲೆಯಲ್ಲಿದ್ದಾಗ ಕಾಂತಧೃವಗಳ ಆಕರ್ಷಣೆಯ ನಿಯಮವನ್ನು, ‘ಸಜಾತೀಯ ಕಾಂತಧೃವಗಳು ವಿಕರ್ಷಿಸುತ್ತವೆ ಮತ್ತು ವಿಜಾತೀಯ ಕಾಂತಧೃವಗಳು ಆಕರ್ಷಿಸುತ್ತವೆ,’ ಎಂದು ಓದಿದ್ದೇವೆ. ಹಾಗೆಯೇ ವಿದ್ಯುದಂಶಗಳ ಆಕರ್ಷಣ ನಿಯಮವೂ ಇದ್ದು, ‘ಸಜಾತೀಯ ವಿದ್ಯುದಂಶಗಳು ವಿಕರ್ಷಿಸುತ್ತವೆ ಮತ್ತು ವಿಜಾತೀಯ ವಿದ್ಯುದಂಶಗಳು ಆಕರ್ಷಿಸುತ್ತವೆ,’ಎನ್ನುವುದನ್ನೂ ತಿಳಿದಿದ್ದೇವೆ. ಈ ನಿಯಮಗಳನ್ನು ಜೀವಸಂಕುಲಕ್ಕೂ ಅಳವಡಿಸಿಕೊಂಡು ಹೆಣ್ಣು ಮತ್ತು ಗಂಡುಗಳ ನಡುವಿನ ಆಕರ್ಷಣೆಯನ್ನೂ ವಿವರಿಸುವುದಿದೆ! ಆದರೆ ಇಲ್ಲಿ ನಾನು ಪ್ರಸ್ತಾಪಿಸುತ್ತಿರುವುದು ನಮ್ಮ ಜೀವನವನ್ನು ಉತ್ತಮೀಕರಿಸಲು ಅನುಸರಿಸಬಹುದಾದ ಆಕರ್ಷಣೆಯ ನಿಯಮದ ಬಗ್ಗೆ.
‘ಸಾದೃಶಗಳು ಸಾದೃಶಗಳನ್ನು ಆಕರ್ಷಿಸುತ್ತವೆ' --`like attracts like’

ರೋಂಡ ಬೈರ್ನೆಯವರ ಕೃತಿ ‘ದ ಸೀಕ್ರೆಟ್’ನಲ್ಲಿ ಲೇಖಕ, ತತ್ವಶಾಸ್ತ್ರಜ್ಞರಾದ ಬಾಬ್ ಪ್ರೊಕ್ಟರ್, ‘ನಿಮಗೆ ಬೇಕೆನಿಸುವ ಆರೋಗ್ಯ, ಸಂಪತ್ತು, ಆನಂದ ಯಾವುದನ್ನಾದರೂ ‘ಸೀಕ್ರೆಟ್’ ನೀಡುತ್ತದೆ,’ ಎನ್ನುವುದನ್ನು ಈ ರೀತಿಯಾಗಿ ವಿವರಿಸುತ್ತಾರೆ:
‘ನಾವು ಭಾರತ, ಆಸ್ಟ್ರೇಲಿಯ, ನ್ಯೂಯಾರ್ಕ್........... ಎಲ್ಲೇ ಇರಲಿ, ನಾವೆಲ್ಲರೂ ಒಂದೇ ಶಕ್ತಿಯಿಂದ ಕಾರ್ಯ ನಿರ್ವಹಿಸುತ್ತಿರುತ್ತೇವೆ, ಅದೇ ಆಕರ್ಷಣೆಯ ನಿಯಮ!
ನಮ್ಮ ಜೀವನದಲ್ಲಿ ನಾವು ಏನನ್ನೇ ಪಡೆದುಕೊಂಡಿದ್ದರೂ ನಾವು ಅದನ್ನು ನಮ್ಮ ಜೀವನದೊಳಗೆ ಆಕರ್ಷಿಸಿರುತ್ತೇವೆ. ನಮ್ಮ ಕಲ್ಪನೆಯ ಮೂಲಕ ನಾವು ಏನನ್ನು ಪಡೆದುಕೊಳ್ಳಬೇಕೆಂದು ಮೆದುಳಿನಲ್ಲಿ ಚಿತ್ರಣ ಮಾಡಿಕೊಂಡಿರುತ್ತೇವೆಯೋ ಅದನ್ನೇ ನಮ್ಮತ್ತ ಆಕರ್ಷಿಸುತ್ತೇವೆ.’
ಪ್ರಂಟೇಸ್ ಮಲ್ ಫೋರ್ಡ್ ಹೀಗೆ ತಿಳಿಸುತ್ತಾರೆ: ‘ಆಕರ್ಷಣೆಯ ನಿಯಮವೇ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ನಿಯಮವೆಂದು ತಮ್ಮ ಸಾಧನೆಗಳ ಮೂಲಕ ಮಹಾನ್ ವ್ಯಕ್ತಿಗಳಾದವರು ತಿಳಿಸಿದ್ದಾರೆ. ಸುಪ್ರಸಿದ್ಧ ಕವಿಗಳಾದ ವಿಲಿಯಂ ಶೇಕ್ಸ್ಪಿಯರ್, ರಾಬರ್ಟ್ ಬ್ರೌನಿಂಗ್, ವಿಲಿಯಂ ಬ್ಲೇಕ್ ತಮ್ಮ ಕವನಗಳ ಮೂಲಕ, ಲುಡ್ ವಿಂಗ್ ವಾನ್ ಬೆಥೊವೆನ್ ನಂತಹ ಸಂಗೀತಗಾರರು ತಮ್ಮ ಸಂಗೀತದ ಮೂಲಕ, ಲಿಯೊನಾರ್ಡೊ ದಾ ವಿಂಸಿಯಂಥಾ ಚಿತ್ರಕಾರರು ತಮ್ಮ ಚಿತ್ರಗಳ ಮೂಲಕ, ಸಾಕ್ರಟೀಸ್, ಪ್ಲೇಟೊ, ಎಮರ್ಸನ್, ಪೈಥಾಗೊರಸ್ರಂಥಾ ಚಿಂತಕರು ತಮ್ಮ ಚಿಂತನೆಗಳ ಮೂಲಕ ಈ ನಿಯಮವನ್ನು ಹಂಚಿಕೊಂಡಿದ್ದಾರೆ ಹಾಗೂ ಅಮರರಾಗಿದ್ದಾರೆ.
ಹಿಂದೂ, ಬೌದ್ಧ, ಕ್ರೈಸ್ತ, ಇಸ್ಲಾಂ ಮುಂತಾದ ಧರ್ಮಗಳು, ಬ್ಯಾಬಿಲೊನಿಯನ್ ಮತ್ತು ಈಜಿಪ್ಟಿಯನ್ ನಾಗರೀಕತೆಗಳು ಕಥೆಗಳ ಮೂಲಕ ಹಾಗೂ ಲಿಖಿತ ರೂಪದಲ್ಲಿ ಇದನ್ನೇ ದಾಖಲೀಕರಿಸಿವೆ.
ಆಕರ್ಷಣನಿಯಮವು ಕಾಲದೊಂದಿಗೇ ಪ್ರಾರಂಭವಾಗಿದೆ. ಯಾವಾಗಲೂ ಇದೆ, ಮುಂದೆಯೂ ಇರುತ್ತದೆ.
ನಾವು ಯಾರು, ಎಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ. ಆಕರ್ಷಣನಿಯಮವು ನಮ್ಮ ಸಂಪೂರ್ಣ ಜೀವನದ ಅನುಭವವನ್ನೇ ರೂಪಿಸುತ್ತದೆ. ಅದು ನಮ್ಮಿಂದಲೇ ಕ್ರಿಯಾಶೀಲವಾಗುತ್ತದೆ, ನಮ್ಮ ಆಲೋಚನೆಗಳ ಮೂಲಕವೇ ರೂಪುಗೊಳ್ಳುತ್ತದೆ.
ಬಾಬ್ ಪ್ರೊಕ್ಟರ್ ಹಣವನ್ನು ಗಳಿಸುವ ಬಗೆಗೆ ಅನ್ವಯವಾಗುವ ಆಕರ್ಷಣನಿಯಮಕ್ಕೆ ಒಂದು ಉದಾಹರಣೆಯನ್ನು ನೀಡುತ್ತಾರೆ: ಅಪಾರ ಸಂಪತ್ತನ್ನು ಗಳಿಸಿದ ವ್ಯಕ್ತಿಯೊಬ್ಬ ಅದನ್ನೆಲ್ಲಾ ಕಳೆದುಕೊಂಡರೂ ಸ್ವಲ್ಪ ಕಾಲದಲ್ಲೇ ಪುನಃ ಅದಕ್ಕಿಂತಲೂ ಅಧಿಕವಾಗಿ ಗಳಿಸುತ್ತಾನೆ! ಅವನಿಗೆ ಅರಿವಿದ್ದೋ ಇಲ್ಲದೆಯೋ ಅವನ ಮನದ ತುಂಬೆಲ್ಲಾ ಹಣಗಳಿಕೆಯೇ ಇರುತ್ತದೆ ಆದ್ದರಿಂದ ಮೊದಲು ಅವನು ಅಪಾರ ಸಂಪತ್ತನ್ನು ಗಳಿಸುತ್ತಾನೆ. ಆಗ ಅವನ ಮನಸ್ಸಿನಲ್ಲಿ ಅದು ಕಳೆದು ಹೋದರೆ ಎನ್ನುವ ಭೀತಿ ಆವರಿಸುತ್ತದೆ. ‘ಕಳೆದುಕೊಂಡರೆ’ ಎನ್ನುವುದೇ ಪ್ರಧಾನ ಆಲೋಚನೆಯಾಗುವುದರಿಂದ ಅವನು ಗಳಿಸಿದ್ದನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಆಗ ‘ಕಳೆದು ಹೋದರೆ’ ಎನ್ನುವ ಭಯವು ನಿವಾರಣೆಯಾಗುತ್ತದೆ ಹಾಗೂ ಹಣಗಳಿಕೆಯ ಆಲೋಚನೆಯೇ ಹೆಚ್ಚು ಶಕ್ತಿಶಾಲಿಯಾಗುತ್ತದೆ. ಪುನಃ ಅವನು ಮೊದಲಿನಂತೆಯೇ ಅಪಾರ ಸಂಪತ್ತನ್ನು ಪಡೆದುಕೊಳ್ಳುತ್ತಾನೆ!
ಜಾನ್ ಆಶ್ರಫ್, ‘ವಿಶ್ವದಲ್ಲಿ ನೀವು ಅತ್ಯಂತ ಶಕ್ತಿಶಾಲಿಯಾದ ಅಯಸ್ಕಾಂತ! ಈ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿಯಾದ ಆಕರ್ಷಣಶಕ್ತಿಯನ್ನು ನೀವು ಹೊಂದಿದ್ದೀರಿ. ಈ ಅಳತೆಗೆ ನಿಲುಕಲಾರದ ಆಕರ್ಷಣಶಕ್ತಿಯನ್ನು ನೀವು ನಿಮ್ಮ ಆಲೋಚನೆಗಳ ಮೂಲಕ ಹೊರಸೂಸುತ್ತಿರುತ್ತೀರಿ!’
ಲೇಖಕ ಹಾಗೂ ಆಕರ್ಷಣನಿಯಮದ ತಜ್ಞರಾದ ಬಾಬ್ ಡಯಲ್ ರವರು ಈರೀತಿ ಹೇಳುತ್ತಾರೆ, `-`like attracts like’. ನಾವು ಒಂದು ಆಲೋಚನೆಯನ್ನು ಮಾಡಿದಾಗ ಅದೇ ರೀತಿಯ ಆಲೋಚನೆಗಳನ್ನು ಆಕರ್ಷಿಸುತ್ತೇವೆ. ನಾವೇನಾದರೂ ನಮಗೆ ಅಸಂತೋಷವನ್ನುಂಟುಮಾಡುವಂತಹ ಆಲೋಚನೆಗಳನ್ನು ಮಾಡಿದಾಗ ಅಂಥಾ ಅಸಂತೋಷದ ಆಲೋಚನೆಗಳೇ ನಮ್ಮತ್ತ ಆಕರ್ಷಿತವಾಗಿ ಪರಿಸ್ಥಿತಿಯನ್ನು ಕ್ಲಿಷ್ಟಕರವನ್ನಾಗಿ ಮಾಡುತ್ತವೆ.
ಮತ್ತೊಂದು ಉದಾಹರಣೆ: ನಾವು ಒಂದು ಹಾಡನ್ನು ಕೇಳಿದಾಗ ಆ ಹಾಡು ನಮ್ಮ ಮನಸ್ಸಿನಲ್ಲೇ ಆಗಾಗ ಮೂಡುತ್ತಾ ಮೆದುಳಿನಲ್ಲಿ ನೆಲೆಸಿಬಿಡುತ್ತದೆ. ಆ ಹಾಡನ್ನು ತಲೆಯಿಂದ ತೆಗೆಯಲೇ ಆಗುವುದಿಲ್ಲ. ಆ ಹಾಡಿನ ಬಗ್ಗೇ ಆಕರ್ಷಿತರಾಗಿ ಹೆಚ್ಚುಹೆಚ್ಚು ತಿಳಿದುಕೊಳ್ಳಲಾರಂಭಿಸುತ್ತೇವೆ!
ನಾವು ಒಳ್ಳೆಯದನ್ನು ಆಕರ್ಷಿಸಬೇಕು, ಕೆಟ್ಟದ್ದನ್ನಲ್ಲ. ಜಾನ್ ಆಶ್ರಫ್ ಹೀಗೆ ಹೇಳುತ್ತಾರೆ, ‘ಸಮಸ್ಯೆ ಇರುವುದು ಇಲ್ಲಿ. ಸಾಮಾನ್ಯವಾಗಿ ಜನರು ತಮಗೆ ಯಾವುದು ‘ಬೇಡ’ ಎನ್ನುವುದನ್ನೇ ಆಲೋಚಿಸುತ್ತಿರುತ್ತಾರೆ, ‘ಬೇಕು’ ಎನ್ನುವುದನ್ನಲ್ಲ! ‘ಬೇಡ’ ಎನ್ನುವುದು ಸಾಂಕ್ರಾಮಿಕವಾಗಿಬಿಟ್ಟಿದೆ. ಅದನ್ನು ‘ಬೇಕು’ ಎಂದು ಬದಲಾಯಿಸುವ ಕ್ರಾಂತಿಯಾಗಬೇಕಿದೆ.’
ಲಿಸ ನಿಖೋಲ್ಸ್ ಮೇಲಿನ ಹೇಳಿಕೆಯನ್ನು ಈ ರೀತಿ ಸ್ಪಷ್ಟಪಡಿಸುತ್ತಾರೆ, ‘ಆಕರ್ಷಣೆಯ ನಿಯಮವು ನಮಗೆ ಏನು ಬೇಕೊ ಅದನ್ನೇ ನಿಖರವಾಗಿ ಕೊಡುತ್ತದೆ. ಆದರೆ ಅದಕ್ಕೆ ಬೇಕು-ಬೇಡಗಳ ವ್ಯತ್ಯಾಸ ತಿಳಿಯುವುದಿಲ್ಲ! ‘ನಾನು ತಡವಾಗಿ ಹೋಗುವುದಿಲ್ಲ,’ ಎಂದುಕೊಂಡರೆ ಅದು ‘ತಡ’ ಎನ್ನುವುದನ್ನು ಮಾತ್ರ ತೆಗೆದುಕೊಳ್ಳುತ್ತದೆ. ಋಣಾತ್ಮಕವಾದ ಹೇಳಿಕೆಗಳನ್ನು ಅದು ಮಾನ್ಯ ಮಾಡುವುದಿಲ್ಲ. ನಮಗೆ ಬೇಕಾದ್ದನ್ನು ಸರಳವಾದ ಧನಾತ್ಮಕ ಆಲೋಚನೆಯನ್ನಾಗಿಸಬೇಕು.
‘ನಾವು ನಂಬಲಿ-ಬಿಡಲಿ, ಅರ್ಥಮಾಡಿಕೊಳ್ಳಲಿ-ಮಾಡಿಕೊಳ್ಳದಿರಲಿ, ಆಕರ್ಷಣೆಯ ನಿಯಮವು ಯಾವಾಗಲೂ ಕಾರ್ಯೋನ್ಮುಖವಾಗಿರುತ್ತದೆ,’ ಎಂದು ಬಾಬ್ ಪ್ರೊಕ್ಟರ್ ಹೇಳುತ್ತಾರೆ. ಆದ್ದರಿಂದ ಉತ್ತಮ, ಧನಾತ್ಮಕ ಆಲೋಚನೆಗಳನ್ನು ಮಾಡೋಣ. ನಮಗೆ ಅಗತ್ಯವಾದದ್ದನ್ನು ಪಡೆದುಕೊಳ್ಳುತ್ತಾ ಬದುಕನ್ನು ಉನ್ನತೀಕರಿಸಿಕೊಳ್ಳೋಣ.

Sunday, February 19, 2012

ಮನದ ಅಂಗಳದಿ.........8೦. ದ ಸೀಕ್ರೆಟ್

ನನ್ನ ಎರಡನೇ ಹನಿಗವನ ಸಂಕಲನ ‘ಗುಟ್ಟು’ ೨೦೦೯ರಲ್ಲಿ ಪ್ರಕಟವಾದಾಗಲೂ ನನಗೆ ಮುಂದೆ ನಾನು `The Secret’ ಎನ್ನುವ ಅದ್ಭುತ ಚಿತ್ರವನ್ನು ನೋಡುತ್ತೇನೆಂದಾಗಲೀ ಅಥವಾ ಪುಸ್ತಕವನ್ನು ಓದುತ್ತೇನೆಂದಾಗಲೀ ತಿಳಿದೇ ಇರಲಿಲ್ಲ! ಸಾಮಾನ್ಯವಾಗಿ ತಂದೆ-ತಾಯಿಯರು ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುತ್ತಾರೆ. ಆದರೆ ನನ್ನ ವಿಷಯದಲ್ಲಿ ಮಕ್ಕಳು ನನ್ನ ಮುಂದೆ ಒಂದು ಹೊಸ ಜಗತ್ತನ್ನೇ ತೆರೆದಿಟ್ಟರು!
‘ಗುಟ್ಟು’ ಸಂಕಲನದ ಪ್ರಾತಿನಿಧಿಕ ‘ಹನಿ’ ಈರೀತಿ ಇದೆ:
‘ಹೊರ ಮನಕ್ಕೆ
ಹೊಣೆಯಿತ್ತರೆ
ಹೊರೆ ಆತಂಕ,
ಒಳಮನಕ್ಕಿತ್ತರೆ
ನಿರಾತಂಕ!’
‘ದ ಸೀಕ್ರೆಟ್’(ರಹಸ್ಯ) ಪುಸ್ತಕದ ಲೇಖಕಿ ರೋಂಡ ಬೈರ್ನೆೀ ( Rhonda Byrne -born 12 March 1951)) ಆಸ್ಟ್ರೇಲಿಯನ್ ಟೆಲಿವಿಷನ್ ಚಿತ್ರ ನಿರ್ಮಾಪಕಿ ಹಾಗೂ ಲೇಖಕಿ. ‘ದ ಸೀಕ್ರೆಟ್’ ಎನ್ನುವ ಚಿತ್ರವನ್ನು ನಿರ್ಮಿಸುವ ಹಿನ್ನೆಲೆಯನ್ನು ಅವರು ಹೀಗೆ ತೆರೆದಿಡುತ್ತಾರೆ:
‘ಆಗ ನನ್ನ ಜೀವನ ತ್ರಾಸದಾಯಕವಾಗಿತ್ತು. ಆಕಸ್ಮಿಕವಾಗಿ ನನ್ನ ತಂದೆ ಮೃತರಾದರು. ನನ್ನ ವೃತ್ತಿಜೀವನದ ಸಹೋದ್ಯೋಗಿಗಳು, ನನ್ನ ಪ್ರೀತಿಪಾತ್ರರು ನನ್ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಈ ನನ್ನ ತೀವ್ರ ನಿರಾಶೆಯ ಸಮಯದಲ್ಲಿ ನನಗೊಂದು ವರದಾನ ಸಿಕ್ಕಿತು!
ನನ್ನ ಮಗಳು ಹೈಲೆ (Hayley) ನನಗೆ ಒಂದು ನೂರುವರ್ಷಗಳಷ್ಟು ಹಳೆಯದಾದ ಪುಸ್ತಕವನ್ನು ಕೊಟ್ಟಳು. ಅದರಲ್ಲೇ ನಾನು ಜೀವನದ ರಹಸ್ಯವನ್ನೇ(ಸೀಕ್ರೆಟ್) ಕಂಡುಕೊಂಡೆ! ಸೀಕ್ರೆಟ್‌ನ ಜಾಡನ್ನು ಚರಿತ್ರೆಯ ಪುಟಗಳಲ್ಲಿ ಪತ್ತೆಮಾಡಲಾರಂಭಿಸಿದಾಗ ನಂಬಲಸಾಧ್ಯವಾಗುವಂತೆ ಅನೇಕರು ಅದರ ಬಗ್ಗೆ ತಿಳಿದಿದ್ದರು! ಆ ಚಾರಿತ್ರಿಕ ಮಹಾನ್ ವ್ಯಕ್ತಿಗಳು: ಪ್ಲಾಟೊ, ಶೇಕ್ಸ್‌ಪಿಯರ್, ನ್ಯೂಟನ್, ಹ್ಯೂಗೊ, ಬೀಥೆವೆನ್, ಲಿಂಕನ್, ಎಮೆರ್ಸಂನ್, ಎಡಿಸನ್, ಐನ್‌ಸ್ಟೈನ್.
‘ಎಲ್ಲರೂ ಏಕೆ ಇದರ ಬಗ್ಗೆ ತಿಳಿದುಕೊಳ್ಳಬಾರದು?’ ಎಂಬ ಮಹದಾಕಾಂಕ್ಷೆಯೊಂದಿಗೆ ಜಗತ್ತಿನೊಂದಿಗೆ ಹಂಚಿಕೊಳ್ಳಲು ಸಿದ್ಧಳಾದೆ ಮತ್ತು ಸೀಕ್ರೆಟ್ ಬಗ್ಗೆ ತಿಳಿದುಕೊಂಡು ಈಗ ಸಾಧಿಸುತ್ತಿರುವವರ ಶೋಧದಲ್ಲಿ ತೊಡಗಿದೆ.
ಅಂಥಾ ವ್ಯಕ್ತಿಗಳು ಒಬ್ಬೊಬ್ಬರಾಗಿ ಗೋಚರಿಸಲಾರಂಭಿಸಿದರು. ನಾನು ಒಂದು ಅಯಸ್ಕಾಂತದಂತಾಗಿ ಅವರನ್ನು ಹುಡುಕಲಾರಂಭಿಸಿದೆ.........’
ಎಂಟು ತಿಂಗಳ ಸತತ ಪರಿಶ್ರಮದಲ್ಲಿ ಅವರ ತಂಡ ‘ದ ಸೀಕ್ರೆಟ್’ ಫಿಲಂಅನ್ನು ತಯಾರಿಸುತ್ತಾರೆ. ‘ಈ ಚಿತ್ರದ ಮುಖ್ಯ ಉದ್ದೇಶ ಪ್ರಪಂಚದ ಎಲ್ಲ ವ್ಯಕ್ತಿಗಳನ್ನೂ ಸಂತಸದಿಂದ ಇರುವಂತೆ ಮಾಡುವುದೇ ಆಗಿದೆ,’ ಎಂದು ತಿಳಿಸುತ್ತಾರೆ.

ಸೀಕ್ರೆಟ್‌ನ ಸಾರಾಂಶ ಹೀಗಿದೆ:
* ಜೀವನದ ಮಹಾನ್ ಸೀಕ್ರೆಟ್ ‘ಆಕರ್ಷಣೆಯ ನಿಯಮ’ವೇ ಆಗಿದೆ.
* ‘ಆಕರ್ಷಣೆಯ ನಿಯಮ’ ಈ ರೀತಿ ಇದೆ: `like attracts like’ ನಾವು ಒಂದು ಆಲೋಚನೆ ಮಾಡಿದರೆ, ಅದೇ ರೀತಿಯ ಆಲೋಚನೆಗಳನ್ನು ನಮ್ಮತ್ತ ಆಕರ್ಷಿಸಿರುತ್ತೇವೆ.
* ಆಲೋಚನೆಗಳು ಅಯಸ್ಕಾಂತೀಯ ಗುಣಗಳನ್ನು ಹೊಂದಿವೆ. ಆಲೋಚನೆಗಳಿಗೆ ‘ಆವರ್ತಾಂಕ’ (frequency)ವಿರುತ್ತದೆ. ನೀವು ಆಲೋಚನೆಗಳನ್ನು ಯೋಚಿಸಿದಾಗ ಅವು ವಿಶ್ವಕ್ಕೆ(universe) ಕಳುಹಿಸಲ್ಪಡುತ್ತವೆ. ಅಲ್ಲಿ ಅವು ಕಾಂತೀಯವಾಗಿ ತಮ್ಮದೇ ಆವರ್ತಾಂಕದ ಸಾದೃಶಗಳನ್ನು ಆಕರ್ಷಿಸುತ್ತವೆ. ಕಳುಹಿಸಿದ ಎಲ್ಲ ಆಲೋಚನೆಗಳೂ ತಮ್ಮದೇ ಆಕರಕ್ಕೆ(ನೀವು) ಹಿಂತಿರುಗುತ್ತವೆ.
* ನೀವು ಮಾನವ ರೂಪದ ಪ್ರಸರಣ ಗೋಪುರವಿದ್ದಂತೆ (human transmission tower). ನಿಮ್ಮ ಆಲೋಚನೆಗಳ ಮೂಲಕ ನಿರ್ದಿಷ್ಟ ಆವರ್ತಗಳನ್ನು ಪ್ರಸರಣ ಮಾಡುತ್ತಿರುತ್ತೀರಿ. ನೀವೇನಾದರೂ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದ್ದರೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಆವರ್ತವನ್ನು ಬದಲಾಯಿಸಿ.
* ನಿಮ್ಮ ಇಂದಿನ ಆಲೋಚನೆಗಳು ಭವಿಷ್ಯದ ಜೀವನವನ್ನು ಸೃಷ್ಟಿಸುತ್ತವೆ. ನೀವು ಯಾವುದರ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತೀರೋ ಅಥವಾ ಮನಸ್ಸನ್ನು ಕೇಂದ್ರೀಕರಿಸುತ್ತೀರೋ ಅದೇ ನಿಮ್ಮ ಜೀವನವಾಗಿ ಗೋಚರಿಸಲಾರಂಭಿಸುತ್ತದೆ.
* ನಿಮ್ಮ ಆಲೋಚನೆಗಳೇ ವಸ್ತುಗಳಾಗುತ್ತವೆ(Your thoughts become things.)

`The Secret’ ಪುಸ್ತಕದ ಪ್ರತಿ ಅಧ್ಯಾಯದ ನಂತರವೂ ನೀಡಿರುವ ಸಾರಾಂಶಗಳು ಬಹಳ ಉಪಯುಕ್ತವಾಗಿವೆ. ಹಣದ ಸಂಪಾದನೆಯ ಬಗ್ಗೆ, ಸಂಬಂಧಗಳನ್ನು ಉತ್ತಮಗೊಳಿಸುವುದು, ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಜೀವನವನ್ನು ಅರ್ಥಮಾಡಿಕೊಳ್ಳುವುದು, ನಮ್ಮನ್ನು ನಾವು ಅರಿತುಕೊಳ್ಳುವುದು.......... ಮುಂತಾದ ಸೀಕ್ರೆಟ್‌ಗಳನ್ನು ತಿಳಿದುಕೊಳ್ಳಬಹುದು. ನಮಗೆ ಒಳಿತೆನಿಸುವ, ಸಂತಸದಾಯಕವಾದ ಜೀವನದ ಸೀಕ್ರೆಟ್‌ಅನ್ನು ಅರಿತು, ಅಳವಡಿಸಿಕೊಂಡು, ಅದರ ರಹಸ್ಯವನ್ನು ಎಲ್ಲರೊಡನೆ ಹಂಚಿಕೊಂಡು, ಜಗದ ಸಂತಸಕ್ಕೆ ನಮ್ಮ ಅಲ್ಪ ಕಾಣಿಕೆಯನ್ನು ನೀಡುವ ಶಕ್ತಿಯನ್ನು ಪಡೆಯೋಣ.

Sunday, February 12, 2012

ಮನದ ಅಂಗಳದಿ.................೭೯. ಹೊಗಳಿಕೆ

ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ‘ಕಾಗೆ ಮತ್ತು ನರಿ’ ಎಂಬ ಪದ್ಯವಿತ್ತು. ಅದನ್ನು
‘ಕಾಗೆಯೊಂದು ಹಾರಿ ಬಂದು
ಮರದ ಮೇಲೆ ಕುಳಿತುಕೊಂಡು
ಬಾಯಲಿದ್ದ........’
ಎಂದು ರಾಗವಾಗಿ ಹಾಡುತ್ತಿದ್ದೆವು. ಕಾಗೆ ತಂದ ಆಹಾರದ ತುಣುಕನ್ನು ನರಿಯು ತಾನು ಪಡೆದುಕೊಳ್ಳುವುದಕ್ಕಾಗಿ ಮಾಡಿದ ಉಪಾಯ,
‘ನಿನ್ನ ದನಿಯದೆಷ್ಟು ಚಂದ
ನಿನ್ನ ರಾಗವೆಷ್ಟು ಅಂದ
ನಿನ್ನ ನೋಡಿ ಮನುಜರೆಲ್ಲ ಹಿಗ್ಗಿ ಕುಣಿವರು,’
ಎಂದು ಹೊಗಳಿ, ಅದು ಹಾಡುವಂತೆ ಮಾಡಿ, ಬಾಯಿಂದ ಕೆಳಗೆ ಬಿದ್ದ ಆಹಾರದ ತುಂಡನ್ನು ನರಿಯು ಎತ್ತಿಕೊಂಡು ಓಡಿಹೋದಾಗ ಕಾಗೆಯ ಬಗ್ಗೆ ನಮಗೆ ಎಲ್ಲಿಲ್ಲದ ಮರುಕ, ಮೋಸ ಮಾಡಿದ ನರಿಯ ಬಗ್ಗೆ ಕೋಪ ಬರುತ್ತಿತ್ತು. ಆದರೆ ಕಾಗೆಯು ಹೊಗಳಿಕೆಗೆ ಮನಸೋತು ತನಗೆ ತಾನೇ ಮೋಸಹೊಂದಿತು ಎನ್ನುವ ಅಂಶ ಅರ್ಥವಾಗುತ್ತಲೇ ಇರಲಿಲ್ಲ. ನಂತರದ ದಿನಗಳಲ್ಲಿ ಅದು ಈಸೋಪನ ನೀತಿಕಥೆ ಎನ್ನುವುದು ತಿಳಿಯಿತು. ಸುಮಾರು ಕ್ರಿ.ಪೂ.೬೨೦ರಿಂದ೫೬೪ರವರಗೆ ಜೀವಿಸಿದ್ದನೆಂದು ತಿಳಿದಿರುವ ಈಸೋಪನದೆಂದು ನಂಬಲಾದ ಹಲವಾರು ಕಥೆಗಳು ಅನೇಕ ಭಾಷೆಗಳಲ್ಲಿ ಲಭ್ಯವಿವೆ, ಅವುಗಳಲ್ಲಿ ಇದೂ ಒಂದು ಪ್ರಮುಖವಾದ ಕಥೆ. ಮನುಷ್ಯರ ರೀತಿಯಲ್ಲಿಯೇ ಮಾತನಾಡುವ ಪ್ರಾಣಿಗಳ ಮೂಲಕ ಜಗತ್ತಿಗೆ ನೀತಿಯನ್ನು ಸಾರಿರುವುದು ಈ ಕಥೆಗಳ ವೈಶಿಷ್ಟ್ಯ. ‘ಹೊಗಳುವವರನ್ನು ನಂಬಬಾರದು.’ ಎನ್ನುವುದೇ ಈ ಕಥೆಯ ನೀತಿ.
ಸುಷ್ಮಸಿಂಧುವಿನ ಕನಸುಗಳ ಕಥಾ ಸಂಕಲನವಾದ ‘ಪಯಣ ಸಾಗಿದಂತೆ...........’ಯಲ್ಲಿನ ‘ಶೋಧ’ ಎಂಬ ದೀರ್ಘ ಕನಸಿನ ಒಂದು ತುಣುಕು ಈ ರೀತಿ ಇದೆ:
‘ಅದೊಂದು ಹಸಿರು ಹಸಿರಾದ ಜಾಗ. ಒಳ್ಳೆಯ ಹೂವುಗಳ, ಹಣ್ಣುಗಳ ಗಿಡಗಳು, ಅವುಗಳನ್ನು ಆಸ್ವಾದಿಸುವ ಜನ, ಪಕ್ಷಿಗಳು, ಇವೆಲ್ಲದರ ಮಧ್ಯೆ ‘ಆ’ ಮರ ತಲೆಯೆತ್ತಿ ನಿಂತಿತ್ತು. ಅದರ ಮೈತುಂಬಾ ಬರೀ ಮುಳ್ಳುಗಳು. ‘ಹಸಿರು’ ತನ್ನ ಉಸಿರನ್ನು ಕಳೆದುಕೊಂಡು ಅಲ್ಲಿ ಮಲಗಿತ್ತು. ಸನಿಹದಲ್ಲೇ ಒಂದು ಮಾವಿನ ಮರ ಸೊಂಪುಸೊಂಪಾಗಿ ಬೆಳೆದಿತ್ತು. ಅದರ ಬುಡದಲ್ಲಿ ತಾವು ತಂದಿದ್ದ ಬುತ್ತಿ ಗಂಟನ್ನು ಬಿಚ್ಚಿ ತಿನ್ನುತ್ತಾ, ಮರದ ನೆರಳಿನಲ್ಲಿ ವಿಶ್ರಮಿಸುತ್ತಾ, ಅದರ ಮಾವುಗಳನ್ನು ತಿಂದು ತೇಗಿ ಹೊಗಳುವುದರಲ್ಲೇ ತಲ್ಲೀನವಾಗಿದ್ದ ಮಂದಿ. ಜೊತೆಗೆ ಗೂಡನ್ನು ಕಟ್ಟಿ ವಾಸಿಸುತ್ತಿದ್ದ ಮಂದಿಯ ನಿನಾದ! ಆ ಮರದ ಮುಖದಲ್ಲಿ ತುಂಬು ತೃಪ್ತಿ. ಅದರ ಸಂತೃಪ್ತಿಗೂ, ಮುಳ್ಳುಮರದ ಅತೃಪ್ತಿಗೂ ಅಜಗಜಾಂತರ ವ್ಯತ್ಯಾಸ. ಅಲ್ಲಿಗೆ ಬಂದವರದ್ದೆಲ್ಲಾ ಒಂದೇ ಮಾತು. ‘ಆ ಹಾಳು ಮುಳ್ಳಿನ ಮರ ತೆಗೆಸಿ ಅಲ್ಲೊಂದು ಹಣ್ಣಿನ ಮರ ಹಾಕಬಾರದ?’ ಈ ಮಾತುಗಳನ್ನು ಕೇಳೀ ಕೇಳೀ ಮುಳ್ಳಿನ ಮರ ರೋಸಿಹೋಗಿತ್ತು. ತನ್ನ ಸುತ್ತ ಚಿಗುರಿ ಪಲ್ಲೈಸುತ್ತಿದ್ದ ಗಿಡ, ಮರಗಳನ್ನು ಕಂಡು ಅದು ತನ್ನನ್ನು ತಾನೇ ಶಪಿಸಿಕೊಳ್ಳುತ್ತಿತ್ತು, ದೂಶಿಸಿಕೊಳ್ಳುತ್ತಿತ್ತು.
ಹಲವಾರು ತಿಂಗಳುರುಳಿದ ನಂತರ ಅದೊಂದು ದಿನ ಬಂದೇಬಿಟ್ಟಿತು. ಅಂದು ಮಾವಿನಲ್ಲಿ ನೆರಳಿರಲಿಲ್ಲ, ಹಣ್ಣಿರಲಿಲ್ಲ. ಕೆಳಗೆ ಹೊಗಳುವ ಜನರಿರಲಿಲ್ಲ. ನಿನಾದ ಹೊರಡಿಸುವ ಮಂದಿ ಇರಲಿಲ್ಲ............. ಅದು ಅಗಾಧ ಯಾತನೆಯಲ್ಲಿ ನರಳುತ್ತಿತ್ತು......... ಬರಬಾರದಾಗಿದ್ದ ‘ಬರ’ ಬಂದು ಎಲೆಗಳು ನೆಲದ ಮೇಲೆ ಸತ್ತು ಮಲಗಿದ್ದವು. ಉದ್ದದ ಬೋಳು ರೆಂಬೆಗಳು ‘ಏನನ್ನೋ’ ಹಂಬಲಿಸುತ್ತಿದ್ದವು. ಇತ್ತ ನಿಂತಿದ್ದ ಮುಳ್ಳಿನ ಮರ ಮಾವಿನ ಸ್ಥತಿ ಕಂಡು ಮರುಗಿತ್ತು. ಅದರೆಡೆಗೆ ಮುಖ ಮಾಡಿ ಹೇಳಿತು, ‘ಗೆಳತೀ ನಿನ್ನ ವೇದನೆಗೆ ನನ್ನ ಸಾಂತ್ವನವಿರಲಿ. ಅಂದು ಚಿಗುರಿ ನಗುತ್ತಿದ್ದ ನಿನ್ನನ್ನು ನೋಡಿ ಹೊಗಳುತ್ತಾ ನನ್ನನ್ನು ‘ಕಿತ್ತೊಗೆಯುವ’ ಸಲಹೆಗಳನ್ನು ನೀಡುತ್ತಿದ್ದ ಜನರೆಲ್ಲಿ? ಚೀರುತ್ತಾ ಸಂಗೀತ ಹಾಡುತ್ತಿದ್ದ ಆ ಮುದ್ದು ಸಖಿಯರೆಲ್ಲ? ಇಂದು ನಿನ್ನನ್ನು ಕಂಡು ನನಗೆ ನಿಜಕ್ಕೂ ದುಃಖವಾಗುತ್ತಿದೆ. ಎಂಥಾ ಬಾಳು ನಿನ್ನದು? ಬರೀ ನೆನಪುಗಳೇ ನಿನಗೆ ಆಧಾರ. ಆ ಸುಂದರ ಮಾತುಗಳೇ ಮುಂದಿನ ಕನಸುಗಳು. ಆದರೆ ಒಮ್ಮೆ ನನ್ನತ್ತ ತಿರುಗಿ ನೋಡು. ಅಂದು ಹೇಗಿದ್ದೆನೋ, ಇಂದೂ ಹಾಗೇ ನಿಂತಿದ್ದೇನೆ. ನನ್ನ ಪಾಲಿಗೆ ನೀನು ಅನುಭವಿಸಿದ ಸುಂದರ ನೆನಪುಗಳಿರಲಿಲ್ಲ. ನನ್ನೆದುರಿಗಿರುವುದು ನಾನೊಬ್ಬ ಮಾತ್ರ. ಅಂದೂ ಇಂದೂ ಹಾಗೇ ಇರುವ ‘ಸ್ಥಿರತೆ’ ಮಾತ್ರ. ನಾನು ನನಗೇ ಆಧಾರ. ನನ್ನ ಭಾವನೆಗಳೇ ನನಗೆ ಸಾಂತ್ವನ. ಹಾಗೆಂದು ನಾನು ನಿನ್ನನ್ನು ಹಂಗಿಸುತ್ತಿಲ್ಲ ಗೆಳತೀ, ನಿನ್ನೆದುರಿಗೆ ಇನ್ನೂ ಸುಂದರವಾದ ದಿನಗಳು ಬರಲಿ. ನಿನ್ನ ಸುಖ ಮರುಕಳಿಸಲಿ. ಆದರೆ...........ಆ ಜನರ ಬಣ್ಣದ ಮಾತುಗಳಿಗೆ ಮತ್ತೆ ಮೋಡಿಯಾಗಬೇಡ. ನಂತರ ಹೀಗೆ ರೋಧಿಸಲೂ ಬೇಡ. ನನ್ನ ಮೇಲಿನ ಮುಳ್ಳುಗಳನ್ನು ಮಾತ್ರ ನೋಡಿ ನನ್ನ ಅಂತರಂಗವ ಅರಿಯದ ಜನರನ್ನು ನಾನೇನನ್ನಲಿ ಹೇಳು? ಆದರೆ ಒಂದು ಮಾತು ಸತ್ಯ. ಯಾರೇ ನಮ್ಮನ್ನಗಲಿದರೂ ನಾವು ಬದುಕಬಲ್ಲೆವು. ನಾವು ನಮ್ಮಲ್ಲಿದ್ದರೆ ಮಾತ್ರ! ಅದೂ ಸ್ಥಿರವಾಗಿ!’
ಹೊಗಳಿಕೆ ನಮಗೆ ಅತ್ಯಂತ ಪ್ರಿಯವಾದದ್ದು. ನಮ್ಮ ಅಂದ-ಚಂದ, ನಾವು ಮಾಡಿದ ಕೆಲಸ, ನಮ್ಮ ಗುಣ-ಸ್ವಭಾವಗಳನ್ನು ಯಾರಾದರೂ ಹೊಗಳಿದರೆ ಅದರಿಂದ ಸ್ಫೂರ್ತಿಗೊಂಡು ನಮ್ಮನ್ನು ಇನ್ನೂ ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಈ ಗುಣ ಎಳವೆಯಲ್ಲಿ ಹೆಚ್ಚಾಗಿರುತ್ತದೆ. ಬೆಳೆದಂತೆ ಸರಿ-ತಪ್ಪು, ಸತ್ಯ-ಅಸತ್ಯಗಳ ವಿವೇಚನೆ ಹೆಚ್ಚಾಗುವುದರಿಂದ ಯಾವುದು ಸಹಜ, ಯಾವುದು ಅಸಹಜ ಎನ್ನಿಸುವುದನ್ನು ಅರಿತು ನಡೆಯಬೇಕಾಗುತ್ತದೆ. ಹೊಗಳುತ್ತಿರುವವರು ತಮ್ಮ ಸ್ವಾರ್ಥಸಾಧನೆಗಾಗಿ ಹಾಗೆ ಮಾಡುತ್ತಿದ್ದಾರೋ ಅಥವಾ ಗುಣಗ್ರಾಹಿಗಳೋ ಎನ್ನುವುದನ್ನು ತಿಳಿದುಕೊಂಡರೆ ಕ್ಷೇಮ.

Saturday, February 4, 2012

ಮನದ ಅಂಗಳದಿ.........೭೮. ನೋವು

ಖಲೀಲ್ ಗಿಬ್ರಾನ್ ರವರ `The Pearl’ಎಂಬ ದೃಷ್ಟಾಂತ ಕಥೆಯಲ್ಲಿ ಹೀಗಿದೆ:

ಒಂದು ಸಿಂಪಿ(ಮುತ್ತಿನ ಚಿಪ್ಪು) ಮತ್ತೊಂದಕ್ಕೆ ಹೇಳಿತು, ‘ಒಳಗೆ ತುಂಬಾ ನೋಯುತ್ತಿದೆ. ತುಂಬಾ ಭಾರ, ಗುಂಡಗಿದೆ, ತುಂಬಾ ನೋವು ತಿನ್ನುತ್ತಿದ್ದೇನೆ.’

ಜಂಬದ ನೋಟದಲ್ಲಿ ಮತ್ತೊಂದು ಸಿಂಪಿ ಉತ್ತರ ಕೊಟ್ಟಿತು, ‘ದೇವರ ದಯೆ, ಸಮುದ್ರದ ಆಶೀರ್ವಾದ, ನನಗೆ ಏನೂ ನೋವಿಲ್ಲ. ನಾನು ಚೆನ್ನಾಗಿದ್ದೇನೆ. ನೆಮ್ಮದಿಯಾಗಿದ್ದೇನೆ., ಒಳಗೂ, ಹೊರಗೂ.’

ಪಕ್ಕದಲ್ಲೇ ಹೋಗುತ್ತಿದ್ದ ನಳ್ಳಿ ಇಬ್ಬರ ಮಾತನ್ನೂ ಕೇಳಿಸಿಕೊಂಡು ಚೆನ್ನಾಗಿದ್ದೇನೆ ಎಂದ ಸಿಂಪಿಗೆ ಹೇಳಿತು: ‘ಹೌದು, ನೀನು ಚೆನ್ನಾಗಿದ್ದೀಯೆ, ನೆಮ್ಮದಿಯಾಗಿದ್ದೀಯೆ. ಆದರೆ ನಿನ್ನ ನೆರೆಯ ಸಿಂಪಿ ಅನುಭವಿಸುತ್ತಿದೆಯಲ್ಲಾ ಆ ನೋವು, ಅದು ಅತೀವ ಸೌಂದರ್ಯದ ಒಂದು ಮುತ್ತು!’

ಸಿಂಪಿಯು ಇಲ್ಲಿ ಅನುಭವಿಸುತ್ತಿರುವುದು ಸಾಮಾನ್ಯವಾದ ನೋವಲ್ಲ. ಅದು ತಾನು ನೋವನ್ನು ಅನುಭವಿಸುವ ಮೂಲಕ ತನಗರಿವೇ ಇಲ್ಲದೇ, ಜಗತ್ತಿಗೆ ಉತ್ಕೃಷ್ಟವಾದ ಮುತ್ತನ್ನು ನೀಡುತ್ತಿದೆ! ಸೂರ್ಯ ಹಾಗೂ ಇತರ ನಕ್ಷತ್ರಗಳೂ ತಮ್ಮೊಳಗೆ ಕುದಿತವನ್ನು (ಉಷ್ಣಬೈಜಿಕ ಸಮ್ಮಿಳನಕ್ರಿಯೆ) ಅನುಭವಿಸುವ ಮೂಲಕ ಬೆಳಕು ಹಾಗೂ ಶಕ್ತಿಯನ್ನು ನೀಡುತ್ತಿವೆ. ಇದು ನಿರ್ಜೀವವೆನಿಸಿದರೂ ತನ್ನೊಳಗಿನ ಅಮೂಲ್ಯವೊಂದನ್ನು ನೀಡುವುದೆನ್ನುವ ಕ್ರಿಯೆಯು ಅದರ ಸೃಷ್ಟಿಗೆ ಕಾರಣವಾದ ನೋವನ್ನು ಅನುಭವಿಸುವುದು ಅನಿವಾರ್ಯವೆನಿಸುತ್ತದೆ. ಜಗತ್ತಿನ ಮಹಾನ್ ಚಿಂತಕರು, ಸಾಧಕರು ಆ ಒಂದು ಸ್ಥಿತಿಯನ್ನು ತಲುಪಬೇಕಾದರೆ ಪ್ರಾರಂಭಿಕವಾಗಿ ತಮ್ಮೊಳಗೇ ಗೊಂದಲ, ತಾಕಲಾಟ, ಖಿನ್ನತೆ ಮುಂತಾದ ಹಂತಗಳನ್ನು ದಾಟಿ ಹೋಗುತ್ತಾರೆಂಬುದನ್ನು ಅವರ ಜೀವನ ಚರಿತ್ರೆಗಳನ್ನು ಓದುವಾಗ ತಿಳಿದುಕೊಳ್ಳುತ್ತೇವೆ. ಅಂಥಾ ಮನಃಸ್ಥಿತಿಗಳೊಂದಿಗೆ ಸಂಬಂಧಿಸಿದ ಸುತ್ತಿನ ವ್ಯಕ್ತಿಗಳು ಪ್ರೀತಿಯಿಂದ, ಸೌಹಾರ್ದಯುತವಾಗಿ ವರ್ತಿಸಿದರೆ ಎಷ್ಟೋ ಸಹಕರಿಸಿದಂತಾಗುತ್ತದೆ. ಆದರೆ ಹಾಗಾಗುತ್ತದೆಯೆ?

ಜೆ.ಕೃಷ್ಣಮೂರ್ತಿಯವರು, ‘ವೇದನೆಯನ್ನು ಅರ್ಥಮಾಡಿಕೊಳ್ಳಿ? ಎನ್ನುವುದನ್ನು ಈ ರೀತಿಯಾಗಿ ಪ್ರಸ್ತುತಪಡಿಸುತ್ತಾರೆ, ‘ಮತ್ತೊಬ್ಬರ ವೇದನೆಯ ಬಗ್ಗೆ ನೀವು, ನಾನು ನಿಷ್ಕರುಣ ಉದಾಸೀನವನ್ನು ತೋರುವುದೇಕೆ? ಅತಿ ಭಾರ ಹೊರೆಯನ್ನು ಹೊತ್ತ ಕೂಲಿ, ದಿನ ತುಂಬಿದ್ದರೂ ದುಡಿಯುತ್ತಿರುವ ಹೆಣ್ಣುಮಗಳು ಇವರನ್ನೆಲ್ಲಾ ಕಂಡಾಗ ನಾವು ಉದಾಸೀನವನ್ನು ತೋರುವುದೇಕೆ? ನಾವೇಕೆ ನಿಷ್ಕರುಣಿಗಳಾಗಿದ್ದೇವೆ? ಅದನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ವೇದನೆ ನಮ್ಮನ್ನು ಮಂಕುಗೊಳಿಸುವುದೇಕೆಂದು ಅರಿಯಬೇಕು. ನಿಜವಾಗಿಯೂ ವೇದನೆಯೇ ನಮ್ಮನ್ನು ನಿಷ್ಕರುಣೆಯ ಉದಾಸೀನ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಏಕೆಂದರೆ ನಾವು ವೇದನೆಯನ್ನು ಅರ್ಥಮಾಡಿಕೊಳ್ಳದೇ ಔದಾಸೀನ್ಯವನ್ನು ಬೆಳೆಸಿಕೊಂಡಿದ್ದೇವೆ. ವೇದನೆ ನಮಗೆ ಅರ್ಥವಾದರೆ ಸಂವೇದನಾಶೀಲರಾಗುತ್ತೇವೆ...........’

ಕರುಣೆ, ಅನುಕಂಪ ಎಂಬ ಭಾವಗಳೇ ನಮ್ಮಿಂದ ದೂರವಾಗಿ, ಕೇವಲ ಆ ಪದಗಳು ಬಳಕೆಗೆ ಬಾರದಂತೆ ಪದಕೋಶದಲ್ಲಿ ಅವಿತಿವೆಯೆ?

ವೇದನೆಯನ್ನು ಜಾಗೃತ ಮತ್ತು ಸುಪ್ತ ವೇದನೆಗಳು ಎಂದು ಜೆ.ಕೆ.ಯವರು ವಿಭಾಗಿಸುತ್ತರೆ:

‘ಜಾಗೃತವಾದ, ಥಟ್ಟನೆ ಅರ್ಥವಾಗುವ ವೇದನೆಯೂ ಇದೆ. ಯಾವುದೇ ನಿರ್ದಿಷ್ಟ ಕಾರಣವಿಲ್ಲದ, ತಲೆಬುಡವಿಲ್ಲದ ವೇದನೆಯೂ ಇದೆ. ಜಾಗೃತ ದುಃಖಗಳು ನಮಗೆ ಗೊತ್ತು. ಅವುಗಳೊಡನೆ ಹೇಗೆ ವರ್ತಿಸಬೇಕೆಂಬುದನ್ನೂ ನಾವು ತಕ್ಕಮಟ್ಟಿಗೆ ಬಲ್ಲೆವು. ಧಾರ್ಮಿಕ ನಂಬಿಕೆಗಳನ್ನು ಬೆಳೆಸಿಕೊಂಡು ದುಃಖದಿಂದ ದೂರ ಓಡಿಹೋಗುತ್ತೇವೆ ಅಥವಾ ವೈಚಾರಿಕವಾಗಿ ದುಃಖವನ್ನು ವಿವರಿಸಲು ಪ್ರಯತ್ನಿಸುತ್ತೇವೆ. ಅಥವಾ ಆಳವಿಲ್ಲದ ಮನರಂಜನೆಯಲ್ಲಿ ಮೈಮರೆಯುತ್ತೇವೆ. ಇವನ್ನೆಲ್ಲಾ ಮಾಡಿಯೂ ಜಾಗೃತ ದುಃಖ ಹೋಗುವುದೇ ಇಲ್ಲ.

ಅನೇಕ ಶತಮಾನಗಳಿಂದ ಬಳುವಳಿಯಾಗಿ, ವಂಶಪಾರಂಪರ್ಯವಾಗಿ ಪಡೆದಿರುವ ದುಃಖವೂ ಇದೆ. ದುಃಖ, ಶೋಕ, ವೇದನೆ ಎಂದು ಕರೆಯಲಾಗುವ ಈ ಅಸಾಮಾನ್ಯ ಸಂಗತಿಯನ್ನು ಮೀರುವುದಕ್ಕೆ ಮನುಷ್ಯ ಪ್ರಯತ್ನ ಪಡುತ್ತಲೇ ಇದ್ದಾನೆ. ನಾವು ತೋರಿಕೆಗೆ ಸಂತೋಷವಾಗಿದ್ದಾಗಲೂ, ನಾವು ಬಯಸುವುದೆಲ್ಲಾ ನಮಗೆ ದೊರೆತಿದ್ದಾಗಲೂ, ನಮ್ಮ ಮನಸ್ಸಿನ ಆಳದಲ್ಲಿ ದುಃಖದ ಬೇರುಗಳು ಸುಪ್ತವಾಗಿ ಇದ್ದೇ ಇರುತ್ತವೆ. ಆದ್ದರಿಂದ ದುಃಖವನ್ನು ಕೊನೆಗೊಳಿಸುವ ಮಾತನಾಡಿದಾಗ ನಾವು ಜಾಗೃತ ಮತ್ತು ಸುಪ್ತ ಎಂಬ ಎರಡೂ ಬಗೆಯ ದುಃಖಗಳನ್ನು ಕೊನೆಗೊಳಿಸುವ ಬಗ್ಗೆ ಹೇಳುತ್ತಿರುತ್ತೇವೆ.

ವೇದನೆಯನ್ನು ಕೊನೆಗೊಳಿಸಬೇಕಾದರೆ ನಮ್ಮ ಮನಸ್ಸು ಅತ್ಯಂತ ಸ್ಪಷ್ಟವಾಗಿರಬೇಕು, ಅತ್ಯಂತ ಸರಳವಾಗಿರಬೇಕು. ಸರಳತೆಯು ಹೆಚ್ಚಿನ ವಿವೇಕವನ್ನೂ ಸಂವೇದನೆಯನ್ನೂ ಬಯಸುತ್ತದೆ.’

‘ವೇದನೆಯ ಚಲನೆಯನ್ನು ಅನುಸರಿಸಿ? ಎನ್ನುವುದನ್ನು ಹೀಗೆ ವಿಶ್ಲೇಷಿಸುತ್ತಾರೆ ಜೆ.ಕೆ.ಯವರು:

‘ವೇದನೆ ಎಂದರೇನು? ವೇದನೆಯ ಅರ್ಥವೇನು? ವೇದನೆ ಅನುಭವಿಸುತ್ತಿರುವುದು ಯಾರು? ಏನು? ವೇದನೆ ಏಕೆ ಇದೆ ಎಂದಲ್ಲ, ವೇದನೆಯ ಕಾರಣ ಏನು ಎಂದಲ್ಲ, ವಾಸ್ತವವಾಗಿ ಏನಾಗುತ್ತಿದೆ ಎನ್ನುವುದು ಪ್ರಶ್ನೆ. ಈ ವ್ಯತ್ಯಾಸ ನಿಮಗೆ ತಿಳಿಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ...... ನನ್ನ ವೇದನೆಯ ಬಗ್ಗೆ ನನ್ನಲ್ಲಿ ಸರಳವಾದ ಎಚ್ಚರವಿದೆ....ವೇದನೆ ನನ್ನದೇ ಭಾಗವಾಗಿ, ಇಡೀ ನಾನು ವೇದನೆ ಅನುಭವಿಸುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇನೆ. ಆಗ ವೇದನೆಯ ಚಲನೆಯನ್ನು ಗಮನಿಸುವುದು ಸಾಧ್ಯವಾಗುತ್ತದೆ. ವೇದನೆ ಎಲ್ಲಿಗೆ ತಲುಪಿಸುತ್ತದೆ ಎಂದು ತಿಳಿಯುತ್ತದೆ. ಹೀಗೆ ಮಾಡಿದಾಗ ವೇದನೆ ಅನಾವರಣಗೊಳ್ಳುತ್ತದೆ, ಅಲ್ಲವೇ?’

ವೇದನೆಯ ವಿವಿಧ ಮುಖಗಳನ್ನು ಪ್ರಸ್ತಾಪಿಸುತ್ತಾ, ಅದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ವೇದನೆಯ ಅಗತ್ಯವಿದೆಯೆ? ನೋವಿನ ಭಾವನೆಗಳು, ನನ್ನ ಮನೋಬಿಂಬವೇ ನೋವಿನ ದಾರಿ, ನೋವಿನ ಸಾಧ್ಯತೆ ಇರುವ ಎಡೆಯಲ್ಲಿ ಪ್ರೀತಿ ಇರುವುದಿಲ್ಲ, ವೇದನೆಯ ಕೇಂದ್ರ ಸ್ವರೂಪ............. ಇವುಗಳ ಬಗ್ಗೆ ನಮ್ಮ ಅರಿವಿಗೆ ಮೀರಿದ, ತರ್ಕಕ್ಕೆ ನಿಲುಕದ ವೈಶಿಷ್ಟ್ಯತೆಯಿಂದ ತಿಳಿಸುತ್ತಾ.......

‘ಕೇವಲ ನಿಮ್ಮದೂ ಅಲ್ಲದ, ನನ್ನದೂ ಅಲ್ಲದ, ಅಮೂರ್ತವಲ್ಲದ, ವಾಸ್ತವವಾದ, ನಮ್ಮೆಲ್ಲರದೂ ಆದ ವೇದನೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಹತ್ತರವಾದ ಒಳನೋಟ ಬೇಕು. ವೇದನೆಯನ್ನು ಕೊನೆಗೊಳಿಸಿದಾಗ ಕೇವಲ ನಮ್ಮೊಳಗೆ ಮಾತ್ರವಲ್ಲ, ಹೊರಗೂ ಶಾಂತಿ ಮೂಡುತ್ತದೆ, ಸಹಜವಾಗಿಯೇ,’ ಎನ್ನುತ್ತಾರೆ ಜೆ.ಕೆ.