Saturday, February 4, 2012

ಮನದ ಅಂಗಳದಿ.........೭೮. ನೋವು

ಖಲೀಲ್ ಗಿಬ್ರಾನ್ ರವರ `The Pearl’ಎಂಬ ದೃಷ್ಟಾಂತ ಕಥೆಯಲ್ಲಿ ಹೀಗಿದೆ:

ಒಂದು ಸಿಂಪಿ(ಮುತ್ತಿನ ಚಿಪ್ಪು) ಮತ್ತೊಂದಕ್ಕೆ ಹೇಳಿತು, ‘ಒಳಗೆ ತುಂಬಾ ನೋಯುತ್ತಿದೆ. ತುಂಬಾ ಭಾರ, ಗುಂಡಗಿದೆ, ತುಂಬಾ ನೋವು ತಿನ್ನುತ್ತಿದ್ದೇನೆ.’

ಜಂಬದ ನೋಟದಲ್ಲಿ ಮತ್ತೊಂದು ಸಿಂಪಿ ಉತ್ತರ ಕೊಟ್ಟಿತು, ‘ದೇವರ ದಯೆ, ಸಮುದ್ರದ ಆಶೀರ್ವಾದ, ನನಗೆ ಏನೂ ನೋವಿಲ್ಲ. ನಾನು ಚೆನ್ನಾಗಿದ್ದೇನೆ. ನೆಮ್ಮದಿಯಾಗಿದ್ದೇನೆ., ಒಳಗೂ, ಹೊರಗೂ.’

ಪಕ್ಕದಲ್ಲೇ ಹೋಗುತ್ತಿದ್ದ ನಳ್ಳಿ ಇಬ್ಬರ ಮಾತನ್ನೂ ಕೇಳಿಸಿಕೊಂಡು ಚೆನ್ನಾಗಿದ್ದೇನೆ ಎಂದ ಸಿಂಪಿಗೆ ಹೇಳಿತು: ‘ಹೌದು, ನೀನು ಚೆನ್ನಾಗಿದ್ದೀಯೆ, ನೆಮ್ಮದಿಯಾಗಿದ್ದೀಯೆ. ಆದರೆ ನಿನ್ನ ನೆರೆಯ ಸಿಂಪಿ ಅನುಭವಿಸುತ್ತಿದೆಯಲ್ಲಾ ಆ ನೋವು, ಅದು ಅತೀವ ಸೌಂದರ್ಯದ ಒಂದು ಮುತ್ತು!’

ಸಿಂಪಿಯು ಇಲ್ಲಿ ಅನುಭವಿಸುತ್ತಿರುವುದು ಸಾಮಾನ್ಯವಾದ ನೋವಲ್ಲ. ಅದು ತಾನು ನೋವನ್ನು ಅನುಭವಿಸುವ ಮೂಲಕ ತನಗರಿವೇ ಇಲ್ಲದೇ, ಜಗತ್ತಿಗೆ ಉತ್ಕೃಷ್ಟವಾದ ಮುತ್ತನ್ನು ನೀಡುತ್ತಿದೆ! ಸೂರ್ಯ ಹಾಗೂ ಇತರ ನಕ್ಷತ್ರಗಳೂ ತಮ್ಮೊಳಗೆ ಕುದಿತವನ್ನು (ಉಷ್ಣಬೈಜಿಕ ಸಮ್ಮಿಳನಕ್ರಿಯೆ) ಅನುಭವಿಸುವ ಮೂಲಕ ಬೆಳಕು ಹಾಗೂ ಶಕ್ತಿಯನ್ನು ನೀಡುತ್ತಿವೆ. ಇದು ನಿರ್ಜೀವವೆನಿಸಿದರೂ ತನ್ನೊಳಗಿನ ಅಮೂಲ್ಯವೊಂದನ್ನು ನೀಡುವುದೆನ್ನುವ ಕ್ರಿಯೆಯು ಅದರ ಸೃಷ್ಟಿಗೆ ಕಾರಣವಾದ ನೋವನ್ನು ಅನುಭವಿಸುವುದು ಅನಿವಾರ್ಯವೆನಿಸುತ್ತದೆ. ಜಗತ್ತಿನ ಮಹಾನ್ ಚಿಂತಕರು, ಸಾಧಕರು ಆ ಒಂದು ಸ್ಥಿತಿಯನ್ನು ತಲುಪಬೇಕಾದರೆ ಪ್ರಾರಂಭಿಕವಾಗಿ ತಮ್ಮೊಳಗೇ ಗೊಂದಲ, ತಾಕಲಾಟ, ಖಿನ್ನತೆ ಮುಂತಾದ ಹಂತಗಳನ್ನು ದಾಟಿ ಹೋಗುತ್ತಾರೆಂಬುದನ್ನು ಅವರ ಜೀವನ ಚರಿತ್ರೆಗಳನ್ನು ಓದುವಾಗ ತಿಳಿದುಕೊಳ್ಳುತ್ತೇವೆ. ಅಂಥಾ ಮನಃಸ್ಥಿತಿಗಳೊಂದಿಗೆ ಸಂಬಂಧಿಸಿದ ಸುತ್ತಿನ ವ್ಯಕ್ತಿಗಳು ಪ್ರೀತಿಯಿಂದ, ಸೌಹಾರ್ದಯುತವಾಗಿ ವರ್ತಿಸಿದರೆ ಎಷ್ಟೋ ಸಹಕರಿಸಿದಂತಾಗುತ್ತದೆ. ಆದರೆ ಹಾಗಾಗುತ್ತದೆಯೆ?

ಜೆ.ಕೃಷ್ಣಮೂರ್ತಿಯವರು, ‘ವೇದನೆಯನ್ನು ಅರ್ಥಮಾಡಿಕೊಳ್ಳಿ? ಎನ್ನುವುದನ್ನು ಈ ರೀತಿಯಾಗಿ ಪ್ರಸ್ತುತಪಡಿಸುತ್ತಾರೆ, ‘ಮತ್ತೊಬ್ಬರ ವೇದನೆಯ ಬಗ್ಗೆ ನೀವು, ನಾನು ನಿಷ್ಕರುಣ ಉದಾಸೀನವನ್ನು ತೋರುವುದೇಕೆ? ಅತಿ ಭಾರ ಹೊರೆಯನ್ನು ಹೊತ್ತ ಕೂಲಿ, ದಿನ ತುಂಬಿದ್ದರೂ ದುಡಿಯುತ್ತಿರುವ ಹೆಣ್ಣುಮಗಳು ಇವರನ್ನೆಲ್ಲಾ ಕಂಡಾಗ ನಾವು ಉದಾಸೀನವನ್ನು ತೋರುವುದೇಕೆ? ನಾವೇಕೆ ನಿಷ್ಕರುಣಿಗಳಾಗಿದ್ದೇವೆ? ಅದನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ವೇದನೆ ನಮ್ಮನ್ನು ಮಂಕುಗೊಳಿಸುವುದೇಕೆಂದು ಅರಿಯಬೇಕು. ನಿಜವಾಗಿಯೂ ವೇದನೆಯೇ ನಮ್ಮನ್ನು ನಿಷ್ಕರುಣೆಯ ಉದಾಸೀನ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಏಕೆಂದರೆ ನಾವು ವೇದನೆಯನ್ನು ಅರ್ಥಮಾಡಿಕೊಳ್ಳದೇ ಔದಾಸೀನ್ಯವನ್ನು ಬೆಳೆಸಿಕೊಂಡಿದ್ದೇವೆ. ವೇದನೆ ನಮಗೆ ಅರ್ಥವಾದರೆ ಸಂವೇದನಾಶೀಲರಾಗುತ್ತೇವೆ...........’

ಕರುಣೆ, ಅನುಕಂಪ ಎಂಬ ಭಾವಗಳೇ ನಮ್ಮಿಂದ ದೂರವಾಗಿ, ಕೇವಲ ಆ ಪದಗಳು ಬಳಕೆಗೆ ಬಾರದಂತೆ ಪದಕೋಶದಲ್ಲಿ ಅವಿತಿವೆಯೆ?

ವೇದನೆಯನ್ನು ಜಾಗೃತ ಮತ್ತು ಸುಪ್ತ ವೇದನೆಗಳು ಎಂದು ಜೆ.ಕೆ.ಯವರು ವಿಭಾಗಿಸುತ್ತರೆ:

‘ಜಾಗೃತವಾದ, ಥಟ್ಟನೆ ಅರ್ಥವಾಗುವ ವೇದನೆಯೂ ಇದೆ. ಯಾವುದೇ ನಿರ್ದಿಷ್ಟ ಕಾರಣವಿಲ್ಲದ, ತಲೆಬುಡವಿಲ್ಲದ ವೇದನೆಯೂ ಇದೆ. ಜಾಗೃತ ದುಃಖಗಳು ನಮಗೆ ಗೊತ್ತು. ಅವುಗಳೊಡನೆ ಹೇಗೆ ವರ್ತಿಸಬೇಕೆಂಬುದನ್ನೂ ನಾವು ತಕ್ಕಮಟ್ಟಿಗೆ ಬಲ್ಲೆವು. ಧಾರ್ಮಿಕ ನಂಬಿಕೆಗಳನ್ನು ಬೆಳೆಸಿಕೊಂಡು ದುಃಖದಿಂದ ದೂರ ಓಡಿಹೋಗುತ್ತೇವೆ ಅಥವಾ ವೈಚಾರಿಕವಾಗಿ ದುಃಖವನ್ನು ವಿವರಿಸಲು ಪ್ರಯತ್ನಿಸುತ್ತೇವೆ. ಅಥವಾ ಆಳವಿಲ್ಲದ ಮನರಂಜನೆಯಲ್ಲಿ ಮೈಮರೆಯುತ್ತೇವೆ. ಇವನ್ನೆಲ್ಲಾ ಮಾಡಿಯೂ ಜಾಗೃತ ದುಃಖ ಹೋಗುವುದೇ ಇಲ್ಲ.

ಅನೇಕ ಶತಮಾನಗಳಿಂದ ಬಳುವಳಿಯಾಗಿ, ವಂಶಪಾರಂಪರ್ಯವಾಗಿ ಪಡೆದಿರುವ ದುಃಖವೂ ಇದೆ. ದುಃಖ, ಶೋಕ, ವೇದನೆ ಎಂದು ಕರೆಯಲಾಗುವ ಈ ಅಸಾಮಾನ್ಯ ಸಂಗತಿಯನ್ನು ಮೀರುವುದಕ್ಕೆ ಮನುಷ್ಯ ಪ್ರಯತ್ನ ಪಡುತ್ತಲೇ ಇದ್ದಾನೆ. ನಾವು ತೋರಿಕೆಗೆ ಸಂತೋಷವಾಗಿದ್ದಾಗಲೂ, ನಾವು ಬಯಸುವುದೆಲ್ಲಾ ನಮಗೆ ದೊರೆತಿದ್ದಾಗಲೂ, ನಮ್ಮ ಮನಸ್ಸಿನ ಆಳದಲ್ಲಿ ದುಃಖದ ಬೇರುಗಳು ಸುಪ್ತವಾಗಿ ಇದ್ದೇ ಇರುತ್ತವೆ. ಆದ್ದರಿಂದ ದುಃಖವನ್ನು ಕೊನೆಗೊಳಿಸುವ ಮಾತನಾಡಿದಾಗ ನಾವು ಜಾಗೃತ ಮತ್ತು ಸುಪ್ತ ಎಂಬ ಎರಡೂ ಬಗೆಯ ದುಃಖಗಳನ್ನು ಕೊನೆಗೊಳಿಸುವ ಬಗ್ಗೆ ಹೇಳುತ್ತಿರುತ್ತೇವೆ.

ವೇದನೆಯನ್ನು ಕೊನೆಗೊಳಿಸಬೇಕಾದರೆ ನಮ್ಮ ಮನಸ್ಸು ಅತ್ಯಂತ ಸ್ಪಷ್ಟವಾಗಿರಬೇಕು, ಅತ್ಯಂತ ಸರಳವಾಗಿರಬೇಕು. ಸರಳತೆಯು ಹೆಚ್ಚಿನ ವಿವೇಕವನ್ನೂ ಸಂವೇದನೆಯನ್ನೂ ಬಯಸುತ್ತದೆ.’

‘ವೇದನೆಯ ಚಲನೆಯನ್ನು ಅನುಸರಿಸಿ? ಎನ್ನುವುದನ್ನು ಹೀಗೆ ವಿಶ್ಲೇಷಿಸುತ್ತಾರೆ ಜೆ.ಕೆ.ಯವರು:

‘ವೇದನೆ ಎಂದರೇನು? ವೇದನೆಯ ಅರ್ಥವೇನು? ವೇದನೆ ಅನುಭವಿಸುತ್ತಿರುವುದು ಯಾರು? ಏನು? ವೇದನೆ ಏಕೆ ಇದೆ ಎಂದಲ್ಲ, ವೇದನೆಯ ಕಾರಣ ಏನು ಎಂದಲ್ಲ, ವಾಸ್ತವವಾಗಿ ಏನಾಗುತ್ತಿದೆ ಎನ್ನುವುದು ಪ್ರಶ್ನೆ. ಈ ವ್ಯತ್ಯಾಸ ನಿಮಗೆ ತಿಳಿಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ...... ನನ್ನ ವೇದನೆಯ ಬಗ್ಗೆ ನನ್ನಲ್ಲಿ ಸರಳವಾದ ಎಚ್ಚರವಿದೆ....ವೇದನೆ ನನ್ನದೇ ಭಾಗವಾಗಿ, ಇಡೀ ನಾನು ವೇದನೆ ಅನುಭವಿಸುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇನೆ. ಆಗ ವೇದನೆಯ ಚಲನೆಯನ್ನು ಗಮನಿಸುವುದು ಸಾಧ್ಯವಾಗುತ್ತದೆ. ವೇದನೆ ಎಲ್ಲಿಗೆ ತಲುಪಿಸುತ್ತದೆ ಎಂದು ತಿಳಿಯುತ್ತದೆ. ಹೀಗೆ ಮಾಡಿದಾಗ ವೇದನೆ ಅನಾವರಣಗೊಳ್ಳುತ್ತದೆ, ಅಲ್ಲವೇ?’

ವೇದನೆಯ ವಿವಿಧ ಮುಖಗಳನ್ನು ಪ್ರಸ್ತಾಪಿಸುತ್ತಾ, ಅದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ವೇದನೆಯ ಅಗತ್ಯವಿದೆಯೆ? ನೋವಿನ ಭಾವನೆಗಳು, ನನ್ನ ಮನೋಬಿಂಬವೇ ನೋವಿನ ದಾರಿ, ನೋವಿನ ಸಾಧ್ಯತೆ ಇರುವ ಎಡೆಯಲ್ಲಿ ಪ್ರೀತಿ ಇರುವುದಿಲ್ಲ, ವೇದನೆಯ ಕೇಂದ್ರ ಸ್ವರೂಪ............. ಇವುಗಳ ಬಗ್ಗೆ ನಮ್ಮ ಅರಿವಿಗೆ ಮೀರಿದ, ತರ್ಕಕ್ಕೆ ನಿಲುಕದ ವೈಶಿಷ್ಟ್ಯತೆಯಿಂದ ತಿಳಿಸುತ್ತಾ.......

‘ಕೇವಲ ನಿಮ್ಮದೂ ಅಲ್ಲದ, ನನ್ನದೂ ಅಲ್ಲದ, ಅಮೂರ್ತವಲ್ಲದ, ವಾಸ್ತವವಾದ, ನಮ್ಮೆಲ್ಲರದೂ ಆದ ವೇದನೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಹತ್ತರವಾದ ಒಳನೋಟ ಬೇಕು. ವೇದನೆಯನ್ನು ಕೊನೆಗೊಳಿಸಿದಾಗ ಕೇವಲ ನಮ್ಮೊಳಗೆ ಮಾತ್ರವಲ್ಲ, ಹೊರಗೂ ಶಾಂತಿ ಮೂಡುತ್ತದೆ, ಸಹಜವಾಗಿಯೇ,’ ಎನ್ನುತ್ತಾರೆ ಜೆ.ಕೆ.

6 comments:

 1. ಅದ್ಭುತ ಲೇಖನ ಮೇಡಂ!ಪರರ ನೋವಿಗಾಗಿ ಮರುಗಿದಾಗ,ನಮ್ಮ ನೋವು ಕಡಿಮೆಯಾಗುತ್ತದೆ!ಹೇಗಿದೆ ನೋಡಿ ....ಜೀವ ಜಾಲದ ಕೊಂಡಿ!!ಬ್ಲಾಗಿಗೆ ಬನ್ನಿ.ನಮಸ್ಕಾರ.

  ReplyDelete
 2. ಮಹತ್ತಾದದ್ದನ್ನು ಸಾಧಿಸಲು ಮಹತ್ತಾದ ವೇದನೆಯು ಬೇಕು. ಅರಿವಿನ ನುಡಿಗಳನ್ನು ತೆರೆದು ತೋರಿಸಿದ್ದೀರಿ.

  ReplyDelete
 3. ಜೆ.ಕೃಷ್ಣಮೂರ್ತಿಯವರ ಉಲ್ಲೇಖದೊಂದಿಗೆ ಬರಹಕ್ಕೆ ಮತ್ತಷ್ಟು ಮೆರಗು ಬಂದಿದೆ.

  ವೇದನೆಯ ಆಳದಲಿ ಸಾಧನೆಯ ಹಾದಿ ತೋರಿದ್ದಕ್ಕಾಗಿ ಧನ್ಯವಾದಗಳು.

  ReplyDelete
 4. ತುಂಬಾ ಚೆನ್ನಾಗಿದೆ! ಸಿಂಪಿನ ದೃಷ್ಟಾಂತ ಇಷ್ಟವಾಯಿತು... ಮೇಡಮ್ ನೀವು ಖಲೀಲ್ ಗಿಬ್ರಾನ್ ಹಾಗು ಜಿಡ್ಡು ಕೃಷ್ಣಮೂರ್ತಿಯವರ ಬಹು ದೊಡ್ಡ ಅಭಿಮಾನಿಯೆಂದುಕೊಳ್ಳುತ್ತೇನೆ?

  ReplyDelete
 5. ಉತ್ತಮ, ಉಪಯುಕ್ತ ಲೇಖನ....

  ReplyDelete