Sunday, January 29, 2012

ಮನದ ಅಂಗಳದಿ.........೭೭. ‘ಸಿರಿಭೂವಲಯ’

ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ‘ಸಿರಿಭೂವಲಯ’ ಎಂಬ ಪ್ರಾಚೀನ ಕನ್ನಡ ಅಂಕಕಾವ್ಯದ ಮೂರು ಪರಿಚಯ ಕೃತಿಗಳು (ಎರಡು ಕನ್ನಡ ಹಾಗೂ ಒಂದು ಹಿಂದಿಯಲ್ಲಿ ಅನುವಾದಿತ) ಬಿಡುಗಡೆಯಾದವು. ಆ ಕೃತಿಯ ಬಗ್ಗೆ ತಿಳಿಸಿದ ಕೆಲವೇ ವಿಷಯಗಳೂ ಕುತೂಹಲದಿಂದ ಮುಂದಿನದನ್ನು ನಿರೀಕ್ಷಿಸುವಂತೆ ಆಸಕ್ತಿಕರವಾಗಿದ್ದವು. ಈ ಗ್ರಂಥವನ್ನು ರಚಿಸಿದ ಕುಮುದೇಂದುಮುನಿಯ ಅಗಾಧ ಜ್ಞಾನಸಂಪತ್ತಿಗೆ ತಲೆಬಾಗುತ್ತಾ ಪರಿಚಯಕೃತಿಗಳಿಂದ ತಿಳಿದುಕೊಂಡ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ:

ಕ್ರಿ.ಶ.೮೦೦ರ ಸುಮಾರಿನಲ್ಲಿ ಈ ಕರ್ನಾಟಕ ಸಾಮ್ರಾಜ್ಯದ ರಾಜಧಾನಿಯಾಗಿ ನಿರ್ಮಾಣವಾದ ಮಾನ್ಯಖೇಟದ ಅರಸು ಅಮೋಘವರ್ಷನಿಗೆ ಗುರುವಾಗಿದ್ದ ಕುಮುದೇಂದುವೆಂಬ ಜೈನಯತಿಯು ಜಗತ್ತಿನ ಅತ್ಯಂತ ಅಚ್ಚರಿಯಾದ ಪ್ರಾಚೀನ ಕನ್ನಡ ಅಂಕಕಾವ್ಯವಾದ ಸಿರಿಭೂವಲಯವನ್ನು ರಚಿಸಿದನು. ‘ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ’ ಎಂಬ ಈ ಗ್ರಂಥವು, ‘ಜಗತ್ತಿನಲ್ಲಿ ಎಲ್ಲವೂ ಗಣಿತಾತ್ಮಕವಾಗಿ ರಚನೆಯಾಗಿದೆ. ಯಾವುದೂ ಆಕಸ್ಮಿಕವಾಗಿ ಸೃಷ್ಟಿಯಾಗಿಲ್ಲ. ಜೀವನದಲ್ಲಿ ಕಾಣಬರುವ ಸುಖ-ದುಃಖ, ಲಾಭ-ನಷ್ಟ, ಸತ್ಯ-ಮಿಥ್ಯ, ಒಳಿತು-ಕೆಡಕು, ಹಗಲು-ರಾತ್ರಿ, ಪಾಪ-ಪುಣ್ಯ ಇತ್ಯಾದಿ ದ್ವಂದ್ವಗಳೆಲ್ಲವೂ ಸಮವಾಗಿವೆ. ಇವುಗಳು ಎಲ್ಲರಿಗೂ ಸಮಪಾಲು. ಜಗತ್ತಿನ ಮಾನವ ಕುಲಕ್ಕೆಲ್ಲಾ ಒಂದೇ ಧರ್ಮ, ಅದು ಮಾನವ ಧರ್ಮ ಎಂಬ ಮೂರು ಮೂಲಭೂತ ಸಂಗತಿಗಳನ್ನು ಪ್ರತಿಪಾದಿಸುತ್ತದೆ.

‘ಕವಿರಾಜಮಾರ್ಗ’ವೇ ಕನ್ನಡದ ಪ್ರಾಚೀನ ಕೃತಿ, ‘ಹಲ್ಮಿಡಿ’ಶಾಸನವೇ ಪ್ರಾಚೀನ ಬರಹ, ಪಂಪನೇ ಕನ್ನಡದ ಆದಿ ಕವಿ, ಅವನ ಕಾವ್ಯವೇ ಕನ್ನಡದ ಪ್ರಾಚೀನ ಹಳಗನ್ನಡಕಾವ್ಯ ಮುಂತಾಗಿ ನಾವು ಇದುವರೆಗೆ ತಿಳಿದುಕೊಂಡಿರುವುದೆಲ್ಲವೂ ತಪ್ಪು ಎಂಬುದಕ್ಕೆ ಸಿರಿಭೂವಲಯ ಗ್ರಂಥವು ಸಾಕ್ಷಿಯಾಗಿದೆ. ಕನ್ನಡ ಅಕ್ಷರಲಿಪಿ ಹಾಗೂ ಕನ್ನಡಅಂಕಿಗಳ ಉಗಮ ಮತ್ತು ವಿಕಾಸವನ್ನು ಕುರಿತಂತೆ ಇದುವರೆಗಿನ ನಿರ್ಧಾರಗಳು ಹಾಗೂ ಹೇಳಿಕೆಗಳು ತಪ್ಪು ಎಂಬುದನ್ನೂ ಸಿರಿಭೂವಲಯವು ನಿರೂಪಿಸುತ್ತದೆ.

ವ್ಯಾಸಮುನಿಯು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸುವುದನ್ನು ಚಿತ್ರಿಸಿರುವುದನ್ನು ನಾವು ಓದಿ ಅಥವಾ ಕೇಳಿ ತಿಳಿದಿದ್ದೇವೆ. ಆದರೆ ಶ್ರೀಕೃಷ್ಣನಿಗೆ ಭಗವದ್ಗೀತೆಯ ಉಪದೇಶವಾಗಿರುವುದು ನೇಮಿತೀರ್ಥಂಕರನಿಂದ ಎಂಬ ಮೂಲಭೂತ ಸತ್ಯಸಂಗತಿಯನ್ನು ಸಿರಿಭೂವಲಯವು ಖಚಿತವಾಗಿ ಚಿತ್ರೀಕರಿಸುತ್ತದೆ. ಆದಿತೀರ್ಥಂಕರ ಋಷಭದೇವನಿಂದ ಮಗಳು ಸುಂದರಿಗೆ ಬೋಧಿಸಲ್ಪಟ್ಟ ಕೇವಲಜ್ಞಾನವನ್ನು ಗ್ರಹಿಸಿದ ಬಾಹುಬಲಿಯು ಮುಂದೆ ಗೊಮ್ಮಟನೆನಿಸುತ್ತಾನೆ. ಪಶು-ಪಕ್ಷಿಸಹಿತವಾದ ಸಕಲ ಜೀವರಾಶಿಗೂ ಅರ್ಥವಾಗುವಂತೆ ತಿಳಿಯಹೇಳಿದ ಈ ಕೇವಲಜ್ಞಾನವೇ ‘ದಿವ್ಯಧ್ವನಿ’ ಎನಿಸಿ, ಪ್ರತಿಯೊಬ್ಬ ತೀರ್ಥಂಕರನ ಗಣಧರರ ಮೂಲಕ ಮುಂದಿನ ತೀರ್ಥಂಕರರ ಮೂಲಕ ನೇಮಿಯ ಕಾಲದವರೆವಿಗೂ ಹರಿದು ಬಂದಿತು. ಆತನಿಂದ ಈ ದಿವ್ಯವಾಣಿಯು ಶ್ರೀಕೃಷ್ಣನಿಗೆ ಉಪದೇಶವಾಯಿತು. ಕೃಷ್ಣನು ವ್ಯಾಸಮುನಿಗೆ ಇದನ್ನು ತಿಳಿಸಿಕೊಟ್ಟ. ಅವನು ತನ್ನ ಜಯಕಾವ್ಯದಲ್ಲಿ ಇದನ್ನೇ ೧೬೩ಶ್ಲೋಕಗಳ ಭಗವದ್ಗೀತೆಯಾಗಿ ನಿರೂಪಿಸಿದ್ದಾನೆ. ಯುದ್ಧವಿಮುಖನಾಗಲಿದ್ದ ಪಾರ್ಥನಿಗೂ ಕೃಷ್ಣನು ಗೀತೋಪದೇಶದ ರೂಪದಲ್ಲಿ ಈ ದಿವ್ಯಧ್ವನಿಯನ್ನು ಉಪದೇಶಿಸಿದ.(ಕ್ರಿ.ಪೂ. ೧೯೫೪)

ಭದ್ರಬಾಹುಮುನಿಯ ಕಾಲದಲ್ಲಿ ಕಳ್ವಪ್ಪುವಿಗೆ(ಇಂದಿನ ಶ್ರವಣಬೆಳಗೊಳ) ಪ್ರವೇಶಿಸುವ ಮೂಲಕ ಜೈನಧರ್ಮವು ಕನ್ನಡನಾಡಿನಲ್ಲಿ ಪ್ರಚಾರಕ್ಕೆ ಬಂದಿತೆಂಬುದು ಇದುವರೆಗಿನ ನಮ್ಮ ತಿಳುವಳಿಕೆಯಾಗಿತ್ತು, ಆದರೆ ಜೈನಸಂಪ್ರದಾಯದ ಮೊದಲ ತೀರ್ಥಂಕರ ಋಷಭದೇವನೇ ಕನ್ನಡಿಗನೆಂಬ ಕೋಟ್ಯಾಂತರ ವರ್ಷಗಳ ಹಿಂದಿನ ಸತ್ಯಸಂಗತಿಯನ್ನು ಸಿರಿಭೂವಲಯವು ಖಚಿತವಾಗಿ ವಿವರಿಸುತ್ತದೆ! ಆದಿ ತೀರ್ಥಂಕರ ಋಷಭದೇವನು ಬ್ರಾಹ್ಮಿ ಮತ್ತು ಸುಂದರಿ ಎಂಬ ತನ್ನ ಕುವರಿಯರಿಗೆ ತಿಳಿಸಿಕೊಟ್ಟ ಕನ್ನಡದ ೬೪ ಮೂಲಾಕ್ಷರಗಳ ವರ್ಣಮಾಲೆ ಹಾಗೂ ಸೊನ್ನೆಯಿಂದ ಹುಟ್ಟಿದ ೧ರಿಂದ ೯ರವರೆಗಿನ ಹತ್ತು ಅಂಕಿಗಳೇ ಮುಂದೆ ಬ್ರಾಹ್ಮಿ, ಸುಂದರಿ ಹೆಸರಿನ ಲಿಪಿಯೆಂದು ಪ್ರಸಿದ್ಧವಾದವು. ಲಭ್ಯವಿರುವ ಸಾಹಿತ್ಯಿಕ ಮಾಹಿತಿಗಳ ಆಧಾರದಲ್ಲಿ ಲೆಕ್ಕಹಾಕಿದರೆ, ಇದು ಕೋಟ್ಯಾಂತರ ವರ್ಷಳ ಹಿಂದಿನ ಇತಿಹಾಸವಾಗುತ್ತದೆ!

ಸಿರಿಭೂವಲಯವೆಂಬ ಅಂಕಕಾವ್ಯವು ೧ರಿಂದ ೬೪ರವರೆಗಿನ ಕನ್ನಡ ಅಂಕಿಗಳನ್ನು ಬಳಸಿ ರಚಿಸಲಾಗಿರುವ ಕಾವ್ಯವಾಗಿದೆ. ಇದರ ವ್ಯಾಪ್ತಿಯು ೧೬೦೦ ಪುಟಗಳು! ಇವುಗಳನ್ನು ‘ಚಕ್ರ’ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಪುಟದಲ್ಲಿಯೂ ಸುಮಾರು ಆರು ಅಂಗುಲಗಳಷ್ಟು ಉದ್ದಗಲದ ಒಂದು ದೊಡ್ಡದಾದ ಚೌಕಾಕೃತಿ. ಅದನ್ನು ಉದ್ದಸಾಲಿನಲ್ಲಿ ೨೭; ಅಡ್ಡಸಾಲಿನಲ್ಲಿ ೨೭ ಚಿಕ್ಕಚಿಕ್ಕ ಮನೆಗಳಿರುವಂತೆ ೭೨೯ ಚೌಕಗಳಾಗಿ ರೂಪಿಸಲಾಗುತ್ತದೆ. ಇವುಗಳಲ್ಲಿ ೧ರಿಂದ ೬೪ರವರೆಗಿನ ಅಂಕಿಗಲನ್ನು ಸೂತ್ರಬದ್ಧವಾಗಿ ತುಂಬಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ ೬೪ಅಕ್ಷರಗಳನ್ನು ೬೪ ಅಂಕಿಗಳಿಗೆ ಅಳವಡಿಸಿಕೊಳ್ಳಬೇಕು. ಆಗ ಗ್ರಂಥದ ಅಕ್ಷರ ಚಕ್ರ ದೊರೆಯುತ್ತದೆ. ಈ ಅಕ್ಷರ ಚಕ್ರದಲ್ಲಿ ಜಗತ್ತಿನ ೭೧೮ ಭಾಷೆಗಳ ಸಾಹಿತ್ಯವು ದೊರೆಯುತ್ತದೆ.ಗ್ರಂಥವನ್ನು ಒಂಭತ್ತು ಖಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಖಂಡದಲ್ಲೂ ಹಲವಾರು ಅಧ್ಯಾಯಗಳಿರುತ್ತವೆ. ಅಕ್ಷರ ಚಕ್ರವನ್ನು ಗ್ರಂಥದಲ್ಲಿ ಸೂಚಿಸಿರುವ ಸುಮಾರು ೪೦ಬಂಧಗಳಲ್ಲಿ ಜೋಡಿಸಿಕೊಮಡು ಓದಿದಾಗ, ಬೇರೆಬೇರೆ ಭಾಷೆಗಳ ಸಾಹಿತ್ಯವು ದೊರೆಯುತ್ತದೆ. ಇದು ಈ ಸಾಹಿತ್ಯದ ಬಾಹ್ಯರೂಪ. ವಿಶ್ವಭಾಷೆಯ ಸರಪಳಿಯಲ್ಲಿ ಬರುವ ೭೧೮ ಭಾಷೆಗಳಿಗೆ ಸೇರಿದ ಸಾಹಿತ್ಯದ ಸಾರ, ೩೬೩ ಮತಧರ್ಮಗಳಿಗೆ ಸಂಬಂಧಿಸಿದ ವಿಚಾರಗಳು;(ಸರ್ವಧರ್ಮ ಸಮನ್ವಯ) ಇತಿಹಾಸ, ಪಶುಪಾಲನೆಯಿಂದ ಮೊದಲ್ಗೊಂಡು ಅಣುವಿಜ್ಞಾನ, ಅಂಕಗಣಿತ, ಆಯುರ್ವೇದ, ಗಣಕಯಂತ್ರಕ್ರಮ, ಜ್ಯೋತಿಷ್ಯ, ಭೌತಶಾಸ್ತ್ರ, ಲೋಹಶಾಸ್ತ್ರ, ರಸಾಯನಶಾಸ್ತ್ರ, ಸಂಗೀತಶಾಸ್ತ್ರ, ನಾಟ್ಯಶಾಸ್ತ್ರ, ದಾಂಪತ್ಯವಿಜ್ಞಾನ ಮುಂತಾದ ೬೪ ವಿದ್ಯೆಗಳ ವಿಚಾರಗಳು ಮಾತ್ರವಲ್ಲ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ಸಹಸ್ರನಾಮ ಮುಂತಾದ ಭಾರತದ ಪ್ರಾಚೀನ ಸಾಹಿತ್ಯವೆಲ್ಲವೂ ಈ ಗ್ರಂಥದಲ್ಲಿ ಅಡಕವಾಗಿವೆ. ಇದನ್ನು ಬರೆದ ಕುಮುದೇಂದುಮುನಿಯು ಕನ್ನಡನಾಡಿನ ಚಿನ್ನದ ಭೂಮಿಯೆಂದು ಪ್ರಸಿದ್ಧವಾದ ಕೋಲಾರದ ಸಮೀಪದ ನಂದಿಬೆಟ್ಟದ ತಪ್ಪಲಿನ ಯಲವಳ್ಳಿಯಲ್ಲಿ ಸುಮಾರು ೧೨೦೦ವರ್ಷಗಳಷ್ಟು ಹಿಂದೆ ವಾಸವಿದ್ದವನು. ಇವನು ‘ಯಲವಭೂರಿಸಿ? ಎಂದು ಪ್ರಸಿದ್ಧನಾಗಿದ್ದ. ‘ಸಿರಿಭೂವಲಯ’ ಎಂಬುದನ್ನು ಹಿಂದುಮುಂದಾಗಿ ಓದಿದರೆ ಈ ಗ್ರಂಥಕರ್ತನ ಹೆಸರಾದ ‘ಯಲವಭೂರಿಸಿ’ ಎಂದಾಗುತ್ತದೆ!

೧೯೫೩ಕ್ಕೆ ಮೊದಲು ಕರ್ಲಮಂಗಲಂ ಶ್ರೀಕಂಠಯ್ಯನವರು ಸಂಶೋಧಿಸಿ ಅಕ್ಷರಲಿಪಿಯಲ್ಲಿ ಮುದ್ರಿಸಿದ ಈ ಅಚ್ಚರಿಯ ಗ್ರಂಥಕ್ಕೆ ಕೆಲವು ವಿದ್ವಾಂಸರು ಪುನಃ ಜೀವತುಂಬುವ ಕಾರ್ಯ ನಡೆಸಿದರು. ಆದರೆ ಗೊಂದಲವೇ ಉಂಟಾಯಿತು........

ಸುಧಾರ್ಥಿ, ಹಾಸನ ಇವರು ಈ ಮೊದಲು ‘ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯಸಾರ’ ಹಾಗೂ ‘ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ’ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದು ಇದೀಗ ‘ಸಿರಿಭೂವಲಯದ ಒಂದು ಮಿಂಚುನೋಟ’ ಹಾಗೂ ‘ಜಯಾಖ್ಯಾನಾಂತರ್ಗತ ಭಗವದ್ಗೀತೆ’ ಎಂಬ ಎರಡು ಪರಿಚಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿರಿಭೂವಲಯಸಾರದ ಸಂಕ್ಷಿಪ್ತ ಹಿಂದೀ ಭಾವಾನುವಾದ-‘ಸಿರಿಭೂವಲಯ ಕೀ ಏಕ್ ಝಾಂಕಿ’ಯನ್ನು ಶ್ರೀ ಎಸ್. ರಾಮಣ್ಣನವರು ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಇವು ಸಿರಿಭೂವಲಯದ ಸೂಕ್ತ ಪರಿಚಯಕ್ಕೆ ಉಪಯುಕ್ತ ಮಾರ್ಗದರ್ಶಿಗಳಾಗಿವೆ.

‘ಇದು ಒಬ್ಬಿಬ್ಬರಿಂದ ಮುನ್ನಡೆಯುವ ಕಾರ್ಯವಲ್ಲ. ಗ್ರಂಥದ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕಾದರೆ ೭೧೮ಭಾಷೆಗಳನ್ನು ತಿಳಿದವರಿರಬೇಕು; ಸಕಲ ಜ್ಞಾನ-ವಿಜ್ಞಾನ-ಶಾಸ್ತ್ರ; ಇತಿಹಾಸ; ಸಾಹಿತ್ಯ ಮುಂತಾದುವನ್ನು ಬಲ್ಲವರು ಒಂದೆಡೆ ಕಲೆತು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರವೇ ಕುಮುದೇಂದುವಿನ ಜ್ಞಾನನಿಧಿಯಾದ ಸಿರಿಭೂವಲಯದ ವಿಶ್ವರೂಪದರ್ಶನವು ಜಗತ್ತಿಗೆ ದೊರೆಯಲು ಸಾಧ್ಯವಾಗುತ್ತದೆ,’ ಎನ್ನುವುದು ಸುಧಾರ್ಥಿ, ಹಾಸನ ಇವರ ಅಭಿಪ್ರಾಯವಾಗಿದೆ.

‘ಸಿರಿಭೂವಲಯ’ದ ಬಗ್ಗೆ ಅಂತರ್ಜಾಲದಲ್ಲಿ ವೀಕ್ಷಿಸಿದಾಗ ಸಾಕಷ್ಟು ಮಾಹಿತಿಗಳಿರುವುದು ಕಂಡುಬಂದಿತು. ಇಂಥಾ ಒಂದು ಮಹಾನ್ ಗ್ರಂಥವು ಎಲ್ಲ ಆಸಕ್ತರನ್ನೂ ತಲುಪುವಂತಾಗಲಿ ಎಂದು ಆಶಿಸೋಣ.

10 comments:

 1. ಉತ್ತಮವಾದ ಮಾಹಿತಿಗಾಗಿ ವಂದನೆಗಳು. ಗೀತೋಪದೇಶದ ಕಾಲವನ್ನು ೧೯೫೪ ಕ್ರಿ.ಪು ಎಂದು ತಿಳಿಸಿದ್ದಿರಿ. ಅದರ ಬಗ್ಗೆ ಇತಿಹಾಸಕಾರರಲ್ಲಿ ಸ್ವಲ್ಪ ಗೊಂದಲವಿದೆ ಎಂದು ಓದಿದ ನೆನಪು. ಹೊರತಾಗಿ, ಎಲ್ಲವೂ ಚೆನ್ನಾಗಿದೆ.

  ReplyDelete
 2. ಅಬ್ಬಾ! This is amazing!

  ReplyDelete
 3. ಸಿರಿಭೂವಲಯ ಕೃತಿಯು ಹುಟ್ಟು ಹಾಕಿದ ಆದಿ ಕವಿ ಪಂಪನ ಮತ್ತು ಅಕ್ಷರ ಲಿಪಿಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಮ್ಮ ಭಾಷಾ ವಿಧ್ವಾಂಸರು ಮತ್ತು ಇತಿಹಾಸ ಪ್ರಾಜ್ಞರೂ ಸಂಶೋಧನೆ ಮಾಡಬೇಕಿದೆ.

  ನೇಮಿತೀರ್ಥಂಕರರು ಭಗವತ್ ಗೀತೆಯನ್ನು ಶ್ರೀಕೃಷ್ಣನಿಗೆ ಬೋಧಿಸಿದರೇ? ಯಾವುದು ನಿಜ?

  ಅಂಕ ಕಾವ್ಯದ ಚಿತ್ರ ಹಾಕಿದ್ದರೆ ನಮಗೆ ಅನುಕೂಲವಾಗುತ್ತಿತ್ತು ಮೇಡಂ.

  ReplyDelete
 4. ನಿಜಕ್ಕೂ ಆಸಕ್ತಿದಾಯಕ ಲೇಖನ, ನೀವು ಹೇಳಿದಂತೆ ಭಾಷಾ ಪಂಡಿತರೇ ಸಿರಿಭೂವಲಯದ ವಿಶ್ವರೂಪ ತೋರಿಸಬೇಕಿದೆ. ಧನ್ಯವಾದಗಳು ಒಳ್ಳೆ ವಿಷಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ.

  ReplyDelete
 5. ಉಪಯುಕ್ತ ಮಾಹಿತಿಗಳನ್ನು ನಿಮ್ಮ ಲೇಖನದ ಮೂಲಕ ನೀಡಿದ್ದೀರಿ, ಧನ್ಯವಾದಗಳು....

  ReplyDelete
 6. ಕರ್ನಾಟಕದ, ಕನ್ನಡ ಸಾಹಿತ್ಯದ, ಹಾಗು ಜೈನ ಧರ್ಮದ ಇತಿಹಾಸದ ಬಗ್ಗೆ ಎಲ್ಲರಿಗೂ ಇದ್ದ ಹಲವು ಊಹೆ, ನಂಬಿಕೆಗಳನ್ನು ಈ ಕೃತಿ ತಲೆಕೆಳಕು ಮಾಡಿದೆ. ಓಮ್ಮೆ ಓದಿ ನೋಡಬೇಕು... ಒಳ್ಳೆಯ ಮಾಹಿತಿ ನೀಡಿದ್ದೀರಿ... ಧನ್ಯವಾದಗಳು!

  ReplyDelete
 7. ಪ್ರಭಾಮಣಿ ಮೇಡಂ.. ಕನ್ನಡ ಅಥವಾ ದ್ರಾವಿಡ ಭಾಷಾ ಆದಿಯ ಜಿಜ್ಞಾಸೆಗಳಿಗೆ ನನಗೆ ಉತ್ತರ ಇನ್ನೂ ಸಿಕ್ಕಿಲ್ಲ... ನನಗೆ ಸಿಕ್ಕ ಮಾಹಿತಿ ಪ್ರಕಾರ ತಮಿಳಿನ ನಂತರ ಉದಯಿಸಿದ್ದು ಕನ್ನಡ ಆ ನಂತರ ತೆಲುಗು...ಹೀಗೆ.. ಹಲ್ಮಿಡಿಗೂ ಮುಂಚಿನ ಶಾಸನ ಸಿಕ್ಕಿದೆ ಅಂತ ಕೆಲ ಮಾಹಿತಿ...
  ಜೈನ ಧರ್ಮದ ಪರ್ವಕಾಲ ಕನ್ನಡದ ಪರ್ವಕಾಲವಾಗಿತ್ತು ಎನ್ನುವುದು ನಿರ್ವಿವಾದ... ಆದರೆ ನೇಮಿತೀರ್ಥಂಕರರ ಕಾಲಕ್ಕೂ ಕೃಷ್ಣನ ಕಾಲಕ್ಕೂ ಎಲ್ಲಿಯ ಸಾಮ್ಯ..?? ಅರ್ಥವಾಗಲಿಲ್ಲ...

  ReplyDelete
 8. Jains and Budhists have been fighting over such rows for a long time since time immemorial. They claim that every branch of knowledge sprouted from their roots. Wonderful. But, if you study the PURANAS, specially the PADMA PURANA, you will come to know about all these things in detail.
  There are so many other things to be sorted out before giving any conclusion. Kumudendu Muni was no doubt a scholar, but his writings are being interpreted in any way the reader finds it convenient for him/her. Just consider the cross - references too.
  Bedre Manjunath
  http://bedrefoundation.blogspot.com

  ReplyDelete
 9. views of Hampa Nagarajaiah on siribhuvalaya may also be seen in
  http://yaksha-siribhuvalaya.blogspot.in/


  There are many important issues to be addressed properly regarding SIRIBHUVLAYA

  Please see the views of Dr. Hampa Nagarajaiah atyaksha-siribhuvalaya.blogspot.in/  ReplyDelete