Sunday, December 25, 2011

ಮನದ ಅಂಗಳದಿ.........೭೨. ಚಲನ ‘ಚಿತ್ರ’

ನಾನು ಚಿಕ್ಕವಳಿದ್ದಾಗ ನೋಡಿದ ಚಲನ ಚಿತ್ರಗಳು ಬೆರಳೆಣಿಕೆಯಷ್ಟೇ ಇದ್ದವು. ಅವುಗಳನ್ನು, ಮೊದಲು ನೋಡಿದ್ದು- ಚಂದ್ರಸೇನೆ, ಎರಡನೆಯದು-ಮಕ್ಕಳ ರಾಜ್ಯ, ಮೂರನೆಯದು....... ಮುಂತಾಗಿ ಬೆರಳಿನಲ್ಲಿ ಎಣಿಸಿಕೊಂಡು ಆಗಾಗ ನೆನಪುಮಾಡಿಕೊಳ್ಳುತ್ತಾ ಇದ್ದುದು ಮನಸ್ಸಿನಲ್ಲಿ ಹಸಿರಾಗೇ ಇದೆ. ನಮ್ಮದು ಹಳ್ಳಿಯಾದ್ದರಿಂದ ನಾವು ಸಿನೇಮಾ ನೋಡಲು ಐದು ಮೈಲಿ ದೂರದ (ಆಗ ಹೇಳುತ್ತಿದ್ದಂತೆ! ಈಗಾದರೆ ಎಂಟು ಕಿ.ಮೀ.) ಪಟ್ಟಣಕ್ಕೇ ಎತ್ತಿನಗಾಡಿ ಕಟ್ಟಿಕೊಂಡು ಹೋಗಬೇಕಾಗಿತ್ತು. ನಮ್ಮ ಸೋದರತ್ತೆಗೆ ದೇವರ ಚಿತ್ರಗಳು ಯಾವುದೇ ಬಂದರೂ ನೋಡುವ ಹಂಬಲ. ಅಕ್ಕ ಯಾವಾಗಲೂ ಅತ್ತೆಯ ಜೊತೆಯೇ ಇರುತ್ತಿದ್ದುದರಿಂದ ಅವರೊಡನೆ ಸಾಕಷ್ಟು ಚಿತ್ರಗಳನ್ನು ನೋಡುತ್ತಿದ್ದಳು. ನಮಗೆಲ್ಲಾ ಅದರ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದಳು. ನನಗೂ ನೋಡಬೇಕೆನ್ನುವ ಆಸೆ. ಆದರೆ ನಾನು ಸದಾ ಇನ್ನೊಬ್ಬ ಸೋದರತ್ತೆಯ ಜೊತೆ ಇರುತ್ತಿದ್ದೆ. ಅವರಿಗೆ ಕಣ್ಣು ಸರಿಯಾಗಿ ಕಾಣದೇ ಇದ್ದುದರಿಂದ ಸಿನೇಮಾ ನೋಡಲು ಹೋಗುತ್ತಿರಲಿಲ್ಲ. ನನ್ನ ಆಸೆ ಆಸೆಯಾಗಿಯೇ ಉಳಿದಿತ್ತು. ಒಮ್ಮೆ ಅಮ್ಮ ಅಣ್ಣ(ತಂದೆ)ನ ಜೊತೆ ಮಕ್ಕಳಾದ ನಾವು ಕುಣಿಗಲ್‌ನ ಬಂಧುವೊಬ್ಬರ ಮನೆಗೆ ಸಮಾರಂಭಕ್ಕೆ ಹೋಗಿದ್ದೆವು. ಸಂಜೆ ನಾವೆಲ್ಲಾ ಚಲನ ಚಿತ್ರ ನೋಡಲು ಹೋಗುವ ಏರ್ಪಾಡಾಯಿತು. ಈಗಿನಂತೆ ಆಟೋಗಳಿಲ್ಲದ್ದರಿಂದ ಎಳೆಯರಾದ ನಮ್ಮನ್ನು ಹೆಗಲ ಮೇಲೆ ಕೂರಿಸಿಕೊಂಡು ಹೊರಟರು. ಆದರೆ ದಾರಿಯಲ್ಲಿ ಅಕ್ಕ ಸಿನೆಮಾ ನೋಡೋದು ಬೇಡವೇ ಬೇಡ ಎಂದು ಹಟ ಮಾಡಿದಾಗ ನಮ್ಮ ಸವಾರಿ ಕುದುರೆ ಲಾಯದ ಕಡೆಗೆ ಹೊರಟಿತು! ಆಗ ಆದ ನಿರಾಶೆ ಬಹಳ ದಿನ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು! ಆದರೆ ಅಕ್ಕನಿಗೆ ಕೆಲಸ ಸಿಕ್ಕಿದ ನಂತರ ನಾನು ಅವಳಿದ್ದ ಊರಿಗೆ ಹೋದಾಗಲೆಲ್ಲಾ ಒಳ್ಳೆಯ ಚಿತ್ರಗಳಿದ್ದರೆ ನನ್ನನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದುದನ್ನು ಮಾತ್ರ ಮರೆಯುವಂತಿಲ್ಲ.

ಮಕ್ಕಳಾಗಿದ್ದ ನಾವು ಸ್ವಲ್ಪ ಬೆಳೆದ ನಂತರ ಎಲ್ಲರೂ ಒಟ್ಟಾಗಿ ಎತ್ತಿನ ಗಾಡಿಯಲ್ಲಿ ಪಟ್ಟಣಕ್ಕೆ ಹೋಗಿ ಸಿನೇಮಾ ನೋಡಿಕೊಂಡು ಬರುವಾಗ, ಬೆಳದಿಂಗಳ ರಾತ್ರಿಯಲ್ಲಿ ದಾರಿಯುದ್ದಕ್ಕೂ ಜೋರಾಗಿ ಹಾಡು ಹೇಳಿಕೊಂಡು ಬರುತ್ತಿದ್ದೆವು. ಅದು ನಮ್ಮೊಳಗಿನ ಭಯವನ್ನು ಓಡಿಸುವ ತಂತ್ರವೂ ಆಗಿತ್ತು! ಒಳ್ಳೆಯ ಚಿತ್ರ ಬಂದಾಗ ಮಾತ್ರ ಹಾಗೆ ಹೋಗುತ್ತಿದ್ದುದರಿಂದ ಹಾಗೂ ಒಳ್ಳೆಯದು ಎಂದು ಆಯ್ಕೆ ಮಾಡಿಕೊಟ್ಟ ಪುಸ್ತಕಗಳನ್ನು ಮಾತ್ರ ಓದುತ್ತಿದ್ದುದರಿಂದ ಪ್ರಾರಂಭದಿಂದಲೂ ಒಳ್ಳೆಯದು ಎನಿಸಿಕೊಂಡಿದ್ದೇ ಮನಸ್ಸಿನಲ್ಲಿ ಉಳಿಯುವಂತಾಯಿತೇನೋ! ಕಾಲ ಚಕ್ರ ಉರುಳಿದಂತೆ ನಮ್ಮ ಮಕ್ಕಳು ಹುಟ್ಟಿ, ಬೆಳೆದು ಈಗ ಅವರ ಸ್ನೇಹದ ವರ್ತುಲದಲ್ಲಿ ನನ್ನನ್ನು ನಾನು ಉತ್ತಮೀಕರಿಸಿಕೊಳ್ಳುವ ಅವಕಾಶ ಕೂಡಿಬಂದಿದೆ. ಚಲನ ಚಿತ್ರಗಳನ್ನು ನೋಡುವುದು ಕೇವಲ ಮನರಂಜನೆಗಾಗಿ ಎನ್ನುವುದರಿಂದ ಮುಂದುವರೆದು ಅದರಲ್ಲಿರುವ ಸಂಭಾಷಣೆಗಳನ್ನು ಅರ್ಥೈಸಿಕೊಂಡು, ಆಸ್ವಾದಿಸುವ ಅವಕಾಶ ಈಗ ದೊರೆತಿದೆ. ಸದಾ ಒಂದಿಲ್ಲೊಂದು ಕೆಲಸವನ್ನು ಹೊಂದಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದ ನನ್ನನ್ನು ಒಂದೆಡೆ ಹಿಡಿದು ಕೂರಿಸಿ ತೋರಿಸಿದ ಕೆಲವು ಚಿತ್ರಗಳು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವವನ್ನು ಬೀರಿವೆ. Lion King, Kung-Fu-Panda,…..ಮುಂತಾದ ಚಿತ್ರಗಳಲ್ಲಿ ಪ್ರಾಣಿಗಳು ಆಡುವ ಮಾತುಗಳಲ್ಲಿಯ ಅರ್ಥವಂತಿಕೆ ನೋಡಿಯೇ ಸವಿಯಬೇಕು. Lion King ನಲ್ಲಿ ಬರುವ `Hakuna matata- it means no worries for the rest of your days…’ಎನ್ನುವ ಹಾಡು, ‘Kung-Fu-Panda’ ದಲ್ಲಿ ಬರುವ `There is no secret ingredient, to make some thing special, we have to believe its special’ ಎನ್ನುವ ಸಂಭಾಷಣೆ ಅರ್ಥ ವೈಶಾಲ್ಯವನ್ನು ಪಡೆದಿವೆ. ನನಗೆ ಆ ಸಂಭಾಷಣೆಗಳು ಸರಿಯಾಗಿ ಅರ್ಥವಾಗದಿದ್ದಾಗ ಅದರ ಸಬ್ ಟೈಟಲ್ ಹಾಕಿ, ವಿವರಿಸಿ ಮಕ್ಕಳು ಅರ್ಥ ಮಾಡಿಸಿದ್ದಾರೆ.

ಮಕ್ಕಳು ನನಗೆ ತೋರಿಸಿದ ಚಿತ್ರಗಳಲ್ಲಿ ನನಗೆ ಬಹಳ ಮೆಚ್ಚುಗೆಯಾದದ್ದು `Peaceful Warrior’

ಡಾನ್ ಮಿಲ್ ಮನ್ ಒಬ್ಬ ಕಾಲೇಜು ವಿದ್ಯಾರ್ಥಿ. ಅವನು ಸ್ಥಳೀಯವಾಗಿ ಪ್ರಸಿದ್ಧನಾಗಿರುವ ಜಿಮ್ನಾಸ್ಟ್ ಕೂಡ ಆಗಿರುತ್ತಾನೆ. ಅವನಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸಿರುತ್ತದೆ. ಆದರೆ ಅವನನ್ನು ಅವಿಶ್ರಾಂತಸ್ಥಿತಿ(restlessness) ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಅವನು ಸೂರ್ಯೋದಯಕ್ಕೆ ಮೊದಲು ಓಡುವ ಅಭ್ಯಾಸವಿಟ್ಟುಕೊಂಡಿರುತ್ತಾನೆ. ಹಾಗೆ ಓಡುತ್ತಿರುವಾಗ ಒಂದು ದಿನ ಒಬ್ಬ ವೃದ್ಧ(ಸಾಕ್ರಟೀಸ್) ಅವನಿಗೆ ಎದುರಾಗುತ್ತಾನೆ. ಅವನಿಗೆ ಡಾನ್ ನ ಸಮಸ್ಯೆಯ ಬಗ್ಗೆ ಸ್ವತಃ ಡಾನ್‌ಗೇ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ತಿಳಿದಿರುವಂತಿರುತ್ತದೆ! ಸಾಕ್ರಟೀಸ್ ಒಬ್ಬ ಮಾರ್ಗದರ್ಶಿಯಾಗಿ, ಡಾನ್‌ಗೆ ಅನೇಕ ಕೆಲಸ(task)ಗಳನ್ನು ಕೊಟ್ಟು, ತಿಳಿಹೇಳುತ್ತಾ ಅವನಲ್ಲಿದ್ದ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. ..........ಡಾನ್ ಪ್ರತಿ ಕ್ಷಣಗಳ ಮಹತ್ವವನ್ನು ಅರಿಯುವುದನ್ನು ಕಲಿಯುತ್ತಾನೆ. ಗುರಿಗಿಂತಲೂ ಕ್ರಮಿಸುವ ಮಾರ್ಗ ಪ್ರಮುಖವಾದುದು ಎನ್ನುವ ಮಹತ್ವವನ್ನು ಡಾನ್ ಅನ್ನು ಒಂದು ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋಗುತ್ತಾ ಮನವರಿಕೆ ಮಾಡುತ್ತಾನೆ........ ಈ ಮಧ್ಯದಲ್ಲಿ ಒಂದು ಅಪಘಾತದಲ್ಲಿ ಡಾನ್ ನ ಬಲಗಾಲಿನ ಮೂಳೆ ಮುರಿದು ಅವನು ಜಿಮ್ನಾಸ್ಟಿಕ್ ಅಭ್ಯಾಸದಿಂದ ಹೊರಬರಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೂ ಸಾಕ್ರಟೀಸ್‌ನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದ ಅರ್ಹತೆಯನ್ನು ಪಡೆದು ಒಲಂಪಿಕ್ ಟ್ರಯಲ್ ನಲ್ಲಿ ಆಯ್ಕೆಯಾಗುತ್ತಾನೆ. ಅಂತಿಮ ಸ್ಪರ್ಧೆಯ ಮೊದಲು ಸಾಕ್ರಟೀಸ್ ಡಾನ್ ಗೆ ಎಲ್ಲಿಯೂ ಸಿಗುವುದಿಲ್ಲ. ಸ್ಪರ್ಧೆಯ ಕಡೆಯ ಸುತ್ತಿನಲ್ಲಿ ಸಾಕ್ರಟೀಸ್ ಅವನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ:

"Where are you, Dan?"

"Here."

"What time is it?"

"Now."

"What are You?"

"This Moment."

ನಂತರ ಡಾನ್ triple consecutive flips ಅನ್ನು ಸರಾಗವಾಗಿ ನಿರ್ವಹಿಸಿ ತೀರ್ಪುಗಾರರಿಗೇ ಅಚ್ಚರಿ ಮೂಡಿಸುತ್ತಾನೆ! ಅವರ ಟೀಂ ಮೊದಲ ನ್ಯಾಷನಲ್ ಅವಾರ್ಡನ್ನು ಪಡೆಯುತ್ತದೆ.

ಈ ಚಿತ್ರದಲ್ಲಿ ಬರುವ ಡಾನ್ ಮತ್ತು ಸಾಕ್ರಟೀಸ್ ನಡುವಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಎಲ್ಲೆಲ್ಲೋ ಅಲೆಯುವ ನಮ್ಮ ಮನಸ್ಸನ್ನು ಇಲ್ಲಿಗೆ, ಈಗ, ಈ ಕ್ಷಣಕ್ಕೆ ಹಿಡಿದು ನಿಲ್ಲಿಸಿದರೆ ಯಾವುದೇ ಸಾಧನೆಯೂ ಕಷ್ಟಕರವಲ್ಲ. ಅದಕ್ಕಾಗಿ ಒಬ್ಬ ಮಾರ್ಗದರ್ಶಕನ ಅವಶ್ಯಕತೆಯಿದೆ. ಅದು ಸದಾ ನಮ್ಮೊಂದಿಗೇ ಇರುವ ನಮ್ಮ ಅಂತರಂಗವೇ ಆದರೆ ಎಷ್ಟು ಚೆನ್ನ!

Thursday, December 22, 2011

ಮನದ ಅಂಗಳದಿ.........೭೧ . ಹುಟ್ಟಿದ ಹಬ್ಬ

ಅನಾದಿ ಕಾಲದಿಂದಲೂ ಶ್ರೀರಾಮನವಮಿ, ಶ್ರೀಕೃಷ್ಣ ಜನ್ಮಾಷ್ಟಮಿ,......ಮುಂತಾಗಿ ದೇವತೆಗಳ ಜನ್ಮದಿನವನ್ನು ಆಚರಿಸುತ್ತಾ ಬಂದಿದ್ದೇವೆ. ನಂತರದ ದಿನಗಳಲ್ಲಿ ಬುದ್ಧ ಪೂರ್ಣಿಮಾ, ಗುರುನಾನಕ್ ಜಯಂತಿ, ಗಾಂಧಿ ಜಯಂತಿ ಮುಂತಾಗಿ ಮನುಕುಲದ ಏಳಿಗೆಗಾಗಿ ಶ್ರಮಿಸಿದ ಪ್ರಸಿದ್ಧ ಚೇತನಗಳ ಹುಟ್ಟಿದ ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುತ್ತಿದ್ದೇವೆ. ಜೊತೆಗೇ ಕೆಲವು ಶ್ರೇಷ್ಠವ್ಯಕ್ತಿಗಳ ಜನ್ಮದಿನವನ್ನು ಅವರ ಪ್ರತ್ಯಕ್ಷ ಅಥವಾ ಪರೋಕ್ಷ ಅಭಿಪ್ರಾಯದಂತೆ ವಿಜ್ಞಾನಿಗಳ ದಿನ( ಸರ್ ಎಮ್. ವಿಶ್ವೇಶ್ವರಯ್ಯನವರ ಜನ್ಮದಿನ), ಮಕ್ಕಳ ದಿನಾಚರಣೆ(ಜವಹರಲಾಲ್ ನೆಹರೂ ರವರು ಹುಟ್ಟಿದ ದಿನ), ಶಿಕ್ಷಕರ ದಿನ(ಡಾ. ರಾಧಾ ಕೃಷ್ಣನ್ ರವರದ್ದು),.....ಎಂದು ಆಚರಿಸುತ್ತೇವೆ. ನಮ್ಮ ಹಾಗೂ ನಮ್ಮ ಮಕ್ಕಳ ಹುಟ್ಟಿದ ಹಬ್ಬಗಳನ್ನು ನಮ್ಮದೇ ಆತ್ಮೀಯರ ವಲಯದಲ್ಲಿ ಆಚರಿಸಿಕೊಂಡು ಸಂತಸ ಪಡುತ್ತೇವೆ. ಒಂದೊಂದು ಹುಟ್ಟಿದ ಹಬ್ಬವೂ ನಮ್ಮ ವಯಸ್ಸನ್ನು ಒಂದೊಂದೇ ವರ್ಷ ಏರಿಸುತ್ತಾ ಮುನ್ನಡೆಯುತ್ತಿದೆ. ಹಾಗೆ ನೋಡುವುದಾದರೆ ಜೀವನದ ಪ್ರತಿ ಸೆಕೆಂಡುಗಳೂ ನಮ್ಮ ವಯಸ್ಸಿಗೆ ತನ್ನದೇ ಕಿರುಕೊಡುಗೆಯನ್ನು ನೀಡುತ್ತಲೇ ಸಾಗುತ್ತದೆ. ಆದರೆ ನಮ್ಮನ್ನು ನಾವು ವರ್ಷಗಳಲ್ಲೇ ಅಳೆದುಕೊಳ್ಳುವವರಾದ್ದರಿಂದ ವರ್ಷಕ್ಕೊಮ್ಮೆ ಬರುವ ಹುಟ್ಟಿದ ಹಬ್ಬಕ್ಕೇ ಪ್ರಾಮುಖ್ಯತೆ!

ಇತ್ತೀಚಿನ ದಿನಗಳಲ್ಲಿ ‘ಹುಟ್ಟಿದ ಹಬ್ಬ’ ಎನ್ನುವ ಪದವೇ ನೇಪಥ್ಯಕ್ಕೆ ಸರಿದು `BIRTH DAY’ ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಕ್ಕಳು ಚಿಕ್ಕವರಿದ್ದಾಗ ಯಾವಾಗಲೂ ನನ್ನ HAPPY `BIRTH DAY’ ಯಾವಾಗ? ಎಂದೇ ಕೇಳುತ್ತಿದ್ದರು. ಆ ದಿನ ಸಾಮಾನ್ಯವಾಗಿ ಎಲ್ಲರೂ, `HAPPY `BIRTH DAY’ TO YOU’ ಎಂದು ಹೇಳುತ್ತಿದ್ದುದೇ ಅದಕ್ಕೆ ಕಾರಣವಾಗಿರಲೂ ಬಹುದು! ಹುಟ್ಟಿದ ಹಬ್ಬದ ದಿನ ಸಮೀಪವಾದಂತೆ ಅವರ ಸಂಭ್ರಮ ಹೇಳತೀರದು! ನನ್ನ ಸಹ ಬ್ಲಾಗಿಗರಾದ ಭಾಶೇ(ಸೌಮ್ಯಶ್ರೀ)ಯವರು ತಮ್ಮ ‘ಅರ್ಧ ಸತ್ಯ’ ಬ್ಲಾಗಿನಲ್ಲಿ ಪ್ರಕಟಿಸಿರುವ ಕವನ ‘BIRTH FESTIVAL( ಹುಟ್ಟು ಹಬ್ಬ) ದಲ್ಲಿ ‘ಹುಟ್ಟಿದ ಹಬ್ಬ’ ಪದದಲ್ಲಿ ಅಡಗಿರುವ ಸಂಭ್ರಮ, ಅದರ ವಿಶೇಷತೆಗಳನ್ನೂ, `BIRTH DAY’ ಯ ಸಾಧಾರಣತನವನ್ನೂ ಬಹಳ ಚೆನ್ನಾಗಿ ಕವನಿಸಿದ್ದಾರೆ. ಕವನದ ಕನ್ನಡ ರೂಪ ಹೀಗಿದೆ:

ಇದು ಹುಟ್ಟಿದ ‘ದಿನ’ವಲ್ಲ, ಇತರ ಸಾಧಾರಣ ದಿನಗಳಂತೆ

ಹುಟ್ಟು ಹಬ್ಬವೆನ್ನುತ್ತಾರೆ ಕನ್ನಡದಲ್ಲಿ

ಇದು ಕೆಲವೊಬ್ಬರ ಹಬ್ಬದ ದಿನ

ಸುತ್ತಿನವರು ಅವರ ಹುಟ್ಟಿಗಾಗಿಯೇ ಆಚರಿಸುವ ವಿಶೇಷ ದಿನ

ತಮಗೆ ಬೇಕೆನಿಸಿದಂತೆ ಈ ಜೀವಕಾಗಿ ಆಚರಿಸುತ

ಪ್ರತಿಯೊಬ್ಬರೂ ಅನನ್ಯ ವಿಭಿನ್ನವಾದ್ದರಿಂದ

ಈ ದಿನ, ಈ ಕ್ಷಣ ಈ ವ್ಯಕ್ತಿಗೆ ವಿಶೇಷವೆಂದರಿಯುತ

ಈತನ ಅಸ್ತಿತ್ವವ ಸಂಭ್ರಮಿಸುತಾ

ಕಾಣಿಕೆ ನೀಡಿದ ದೈವಕೆ ನಮಿಸುತ

ಈ ದಿನ ನನ್ನದು, ನನ್ನ ಹುಟ್ಟಿದ ದಿನ

ಅಮ್ಮ-ಅಪ್ಪ, ಕೆಳೆಯರು, ಕುಟುಂಬದೊಡನೆ ಕಳೆದದ್ದು,

ಹಿಂತಿರುಗಿ ಬರಲಾರದ ಆ ಕಳೆದ ಕಾಲದ ಚಿತ್ರಣ

ಈ ದಿನದವರೆಗಿನ ನನ್ನ ಬಾಳ ಪಯಣ

ಸಂತಸವೆನಿಸಿದೆ ಈದಿನ, ನನ್ನದೇ ಹಬ್ಬ ಆಚರಿಸುತ್ತಾ

ಈ ದಿನ ನನ್ನದು, ಆತ್ಮೀಯರು ಶುಭ ಕೋರಲು ನೆನೆವ ದಿನ

ವಂದನೆಗಳು ಇಂದಿನ ವಿಶೇಷತೆಯ ಸಂಭ್ರಮಿಸುವಂತೆ ಮಾಡಿದವರಿಗೆ

ಇತರ ವಾರ್ಷಿಕೋತ್ಸವ ಹಬ್ಬಗಳಂತಲ್ಲವಿದು,

ನನ್ನದೇ ಹುಟ್ಟಿದ ಹಬ್ಬ, ನನ್ನ ಸಂತಸದ ದಿನ!

ದಿನದ ಯಾಂತ್ರಿಕತೆಯಲ್ಲಿ, ಕೆಲಸಗಳ ಒತ್ತಡದಲ್ಲಿ ನಾವು ನಮ್ಮ ಆತ್ಮೀಯರ ಹುಟ್ಟಿದ ಹಬ್ಬಕ್ಕೆ ಶುಭಕೋರುವುದನ್ನೂ ಮರೆತೇ ಬಿಡುತ್ತೇವೆ. ಎಷ್ಟೋ ವೇಳೆ ನಮ್ಮ ಹುಟ್ಟಿದ ಹಬ್ಬವೂ ನೆನಪಿರುವುದಿಲ್ಲ! ಅದು ಹಾಗೆಯೇ ಆಯಿತು. ಈ ವರ್ಷ ನನ್ನ ತಮ್ಮನಿಗೆ ಹುಟ್ಟಿದ ಹಬ್ಬದ ಶುಭ ಕೋರುವಷ್ಟರಲ್ಲಿ ರಾತ್ರಿಯೇ ಆಗಿತ್ತು. ಅವನು ಮಾತನಾಡುತ್ತಾ, ‘....... ಈ ಭೂಮಿ ಜೊತೇಗೇ ಸೂರ್ಯನ್ನ ಆಗಲೇ ೫೫ಸಾರಿ ಸುತ್ತಿದೀನಿ ಅಂದ್ರೆ ಆಶ್ಚರ್ಯ ಆಗುತ್ತೆ ಅಲ್ವಾ?’ ಎಂದಿದ್ದ.

ವಿಶ್ವದ ಮಹಾನ್ ಚಿಂತಕ, ಕವಿ ಖಲೀಲ್ ಗಿಬ್ರಾನ್ ನನ್ನ ಹುಟ್ಟುಹಬ್ಬಎಂಬ ಕವನದಲ್ಲಿ ತಮ್ಮ ಆತ್ಮ ಕಥೆಯನ್ನೇ ಹೇಳಿಕೊಂಡಿದ್ದಾರೆ. ಅವರ ಕವನ ಓದುವಾಗ ತಮ್ಮ ಆಡಿದ ಮಾತುಗಳನ್ನು ಅದರಲ್ಲಿ ಕಂಡು ಅಚ್ಚರಿಯಾಯ್ತು! ಗಿಬ್ರಾನ್ ಪ್ಯಾರಿಸ್ಸಿನಲ್ಲಿ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾಗ ತಮ್ಮ ಇಪ್ಪತ್ತೈದನೆಯ ಹುಟ್ಟುಹಬ್ಬದಂದು ಬರೆದ ದೀರ್ಘ ಕವನದ ಮೊದಲ ಸಾಲುಗಳು ಹೀಗಿವೆ:

ಅಂದು, ನನ್ನ ತಾಯಿ ನನ್ನನ್ನು ಹೆತ್ತಂದು,

ಹೋರಾಟ ದ್ವಂದ್ವಗಳು ತುಂಬಿ ತುಳುಕುತಿಹ ನನ್ನನ್ನು

ಜೀವನದ ಹಸ್ತದಲಿ ಇರಿಸಿತಯ್ಯಾ ಮೌನ.

ಇರಿಸಿತೆನ್ನನು ಮೌನ, ಜೀವನದ ಹಸ್ತದಲಿ,

, ಐದು ಮೇಲಿಪ್ಪತ್ತು ಸಲ ಯಾತ್ರೆ ಸುತ್ತಿಹೆ ನಾನು

ಸೂರ್ಯನನು

ಎಷ್ಟು ಸಲ ಚಂದ್ರಮನು ಸುತ್ತಿ ಬಂದಿಹನೊ ನನ್ನನು

ಅರಿಯೆ ನಾನು,

ಇದು ಮಾತ್ರ ನಾ ಬಲ್ಲೆ, ನಾನಿನ್ನು ಅರಿತಿಲ್ಲ

ಬೆಳಕಿನ ರಹಸ್ಯಗಳನು

ನಾನಿನ್ನು ಅರಿತಿಲ್ಲ ಕತ್ತಲಿನ ಗೂಢಾರ್ಥಗಳನು!

ಪ್ರತಿ ಹುಟ್ಟುಹಬ್ಬವೂ ನಮ್ಮನ್ನು ಜೀವನದ ಮತ್ತೊಂದು ನಿಗೂಢ ತುದಿಗೆ ಕರೆದೊಯ್ಯುತ್ತಿರುತ್ತದೆ. ಆದರೆ ನಾವಿನ್ನೂ ಅರಿತುಕೊಳ್ಳಬೇಕಾದ ಜೀವನದ ರಹಸ್ಯಗಳು ಅಪಾರವಾಗಿಯೇ ಉಳಿದಿವೆ ಎನಿಸುವುದಿಲ್ಲವೆ?

Saturday, December 17, 2011

ಮನದ ಅಂಗಳದಿ.........೭೦. ಒಂದು ಮುಂಜಾನೆಯ ಪಯಣ

ದಿನ ಬೆಳಗಿನ ಬಸ್ಸಿಗೇ ಮದುವೆಯೊಂದಕ್ಕೆ ನಗರಕ್ಕೆ ಹೋಗಬೇಕಾಗಿತ್ತು. ಮನೆಯ ಮುಂದೆ ಕಾರನ್ನು ಮುಸುಕು ಹಾಕಿ ನಿಲ್ಲಿಸಿ, ಬಸ್ ಸ್ಟ್ಯಾಂಡ್‌ಗೆ ಹೋಗಲು ಆಟೊ ಹುಡುಕಿಕೊಂಡು ಹೊರಟೆವು. ಈ ಸಾರಿ ಮಕ್ಕಳು ಮನೆಗೆ ಬಂದಾಗ ಕಾರಿನ ಡ್ರೈವಿಂಗ್ ಅಭ್ಯಾಸ ಮಾಡಿಕೊಂಡು ಡಿ.ಎಲ್. ಮಾಡಿಸಿ ಇನ್ನು ಮುಂದೆ ಅಗತ್ಯವಿದ್ದಾಗ ತೆಗೆದುಕೊಂಡು ಹೋಗಬೇಕು ಎಂದು ಎಷ್ಟು ಸಲ ಅಂದು ಕೊಂಡಿದ್ದೇನೆಯೋ ಲೆಕ್ಕವೇ ಇಲ್ಲ. ಆದರೂ ಅದು ಮನೆಯ ಮುಂದೆ ನಿಂತಿದೆ ಎನ್ನುವ ನೆನಪೂ ಬಾರದಂತೆ ದಿನಗಳು ಉರುಳಿ ಹೋಗುತ್ತಲೇ ಇವೆ. ಸ್ವಲ್ಪ ದೂರ ನಡೆದ ನಂತರ ಆಟೋ ಸಿಕ್ಕಿತು. ಮುಂದೆ ಹೋಗಿ ತಿರುಗುವಷ್ಟರಲ್ಲಿಯೇ ಎದುರೇ ಕೋಳಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಒಂದು ಮಿನಿ ಲಾರಿಯನ್ನೇ ಹಿಂಬಾಲಿಸುವಂತಾಯ್ತು. ಭರ್ತಿ ಪೇರಿಸಿ ಇಟ್ಟಿದ್ದ ಆಯತ ಘನಾಕೃತಿಯ ಪಂಜರಗಳಲ್ಲಿ ಇಕ್ಕಟ್ಟಾಗಿ ಕುಳಿತಿದ್ದ ಕೋಳಿಗಳು ಅತ್ತಿತ್ತ ಅಲುಗಲೂ ಆಗದೇ ಚಡಪಡಿಸುತ್ತಿದ್ದವು. ಮೂಗನ್ನು ಮುಚ್ಚಿಕೊಳ್ಳಲೇ ಬೇಕಾದಂತಹ ದುರ್ವಾಸನೆಯು ಬರುತ್ತಿದ್ದರೂ ಆ ಜೀವಗಳ ಸ್ಥಿತಿಯ ಬಗ್ಗೆ ವ್ಯಕ್ತಪಡಿಸಲಾಗದಂತಹ ವೇದನೆ ಮನಸ್ಸನ್ನು ತುಂಬಿತು. ಈ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಜೀವಿಯ ಅಸ್ಥಿತ್ವಕ್ಕೂ ಒಂದು ಉದ್ಧೇಶವಿದೆ ಎನ್ನುವುದಾದರೆ ಇವುಗಳ ಹುಟ್ಟಿನ ಉದ್ದೇಶವೇನು? ಎಂದು ಮನಸ್ಸು ಪ್ರಶ್ನಿಸಲಾರಂಭಿಸಿತು. ಇವುಗಳನ್ನು ತಿನ್ನುವ ಉದ್ದೇಶದಿಂದಲೇ, ವ್ಯಾಪಾರ ದೃಷ್ಟಿಯಿಂದಲೇ ಸಾಕುತ್ತಾರೆ ಎನ್ನುವುದೇನೋ ನಿಶ್ಚಿತ. ಆದರೆ ಅವುಗಳನ್ನು ಕನಿಷ್ಠ ಒಂದು ಜೀವಿ ಎಂದೂ ಪರಿಗಣಿಸದೇ ಪಂಜರದೊಳಗೇ ಕೂಡಿಟ್ಟು, ಅಲ್ಲಿಗೇ ನೀರು, ಪೌಷ್ಠಿಕ ಆಹಾರ ಕೊಟ್ಟು, ತೂಕ ಹೆಚ್ಚಿಸಿ.......ತನ್ನ ಜಿಹ್ವಾ ಚಾಪಲ್ಯಕ್ಕಾಗಿ ಬಳಸುವುದು ಎಷ್ಟು ಸರಿ? ನಮ್ಮ ಹಳ್ಳಿಯಲ್ಲಿ ಕೋಳಿಗಳು ಆರಾಮವಾಗಿ ಎಲ್ಲೆಂದರಲ್ಲಿ ತಿರುಗುತ್ತಾ, ಆಹಾರವನ್ನು ತಾವೇ ಅರಸಿಕೊಂಡು ತಿನ್ನುತ್ತಾ, ಇದ್ದಷ್ಟೂ ದಿನವೂ ಸ್ವತಂತ್ರವಾಗಿ ಜೀವಿಸುತ್ತಿದ್ದುದರ ನೆನಪಾಯ್ತು. ‘ಆರಿಸಿಕೊಂಡು ತಿನ್ನೋ ಕೋಳಿ ಕಾಲು ಮುರಿದಂತೆ,' ಎನ್ನುವ ಗಾದೆ ಮಾತೇ ರೂಢಿಯಲ್ಲಿತ್ತು!

ಇಕ್ಕಟ್ಟಾದ ರಸ್ತೆಯಿಂದ ನಮ್ಮ ಆಟೋ ಮೇನ್ ರೋಡಿಗೆ ಪ್ರವೇಶಿಸಿತು. ಎದುರಿನಿಂದ ಬಂದ ಲಾರಿಯೊಂದು ಪಕ್ಕದಿಂದಲೇ ಹಾದುಹೋಗುವಾಗ ರಸ್ತೆಯ ಗುಂಡಿಯಲ್ಲಿದ್ದ ನೀರನ್ನು ಹಾರಿಸಿ ಅನಿರೀಕ್ಷಿತವಾಗಿ ಅಭಿಷೇಕ ಮಾಡಿಬಿಟ್ಟಿತು! ಮದುವೆಗೆಂದು ಉಟ್ಟಿದ್ದ ರೇಷ್ಮೆ ಸೀರೆಗೆ ರಸ್ತೆಯ ಗಲೀಜು ನೀರು ಹಾರಿ ಹಾಳಾಯಿತು. ನನ್ನವರು ಲಾರಿ ಡ್ರೈವರ್ ಗೆ ನಿಂದಿಸಲಾರಂಭಿಸಿದರು. ನನಗೇಕೋ ಬೇಸರವೆನಿಸಲೇ ಇಲ್ಲ! ಕುಡಿಯಲು ಇಟ್ಟುಕೊಂಡಿದ್ದ ನೀರಿನಿಂದಲೇ ಆ ನೀರು ಹಾರಿದ್ದ ಭಾಗವನ್ನು ಸ್ವಲ್ಪ ತೊಳೆದುಕೊಂಡೆ. ಮನಸ್ಸನ್ನೂ ಹಾಳುಮಾಡಿಕೊಳ್ಳುವುದು ಬೇಡ ಎನಿಸಿತು. ಕಲುಷಿತ ನೀರಿನಿಂದ ಕಲುಷಿತವನ್ನು ಶುದ್ಧಗೊಳಿಸಲಾಗುವುದಿಲ್ಲ.’ -ಶುದ್ಧ ನೀರಿನಿಂದ ಕಲುಷಿತವನ್ನು ತೊಳೆಯಬಹುದು ಎನ್ನುವ ಅರ್ಥದ ಸ್ವಾಮಿ ವಿವೇಕಾನಂದರ ನುಡಿಯನ್ನು ದೂರವಾಣಿಯಲ್ಲಿ ಮಾತನಾಡುವಾಗ ಮಗ ಹೇಳಿದ್ದು ನೆನಪಾಯ್ತು. ಈಗ ಅವನು `Words of Wisdom- from Swamy Vivekananda’ (P. C. Ganesan) ಎಂಬ ಪುಸ್ತಕವನ್ನು ಓದುತ್ತಿದ್ದಾನೆ. ದೂರವಾಣಿಯ ಮೂಲಕ ಮಾತನಾಡುವಾಗಲೆಲ್ಲಾ ತಾನು ಓದಿದ್ದನ್ನು ಹೇಳಿ ಅದರ ಬಗ್ಗೆ ಚರ್ಚಿಸುತ್ತಾನೆ.

ಸಾಮಾನ್ಯವಾಗಿ ಪ್ರಯಾಣ ಹೊರಡುವ ಮೊದಲು ಓದಲು ಒಂದೆರಡು ಪುಸ್ತಕಗಳನ್ನು ಇಟ್ಟುಕೊಂಡು, ಮೊಬೈಲ್‌ಗೂ ನನಗೆ ಇಷ್ಟವೆನಿಸುವ ವಾದ್ಯಸಂಗೀತ, ಹಾಡುಗಳನ್ನು ಹಾಕಿಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವುದು ರೂಢಿ. ಬಸ್‌ನಲ್ಲಿ ಕುಳಿತ ನಂತರ ನೆನಪಾಯಿತು, ನಾನು ಕನ್ನಡಕವನ್ನೂ ತಂದಿಲ್ಲ, ಈಯರ್ ಫೋನ್‌ನೂ ಇಟ್ಟುಕೊಂಡಿಲ್ಲವೆನ್ನುವುದು! ಒಂದು ಕ್ಷಣ ಏನೂ ತೋಚದಂತಹ ಮನಃಸ್ಥಿತಿ ಉಂಟಾಯಿತು. ಮರುಕ್ಷಣವೇ ನನ್ನ ದೌರ್ಬಲ್ಯದ ಬಗ್ಗೆ ನನಗೇ ಅರಿವಾಗಿ ಅಚ್ಚರಿಯೆನಿಸಿತು! ಇದುವರೆಗೂ ಎಷ್ಟೋ ವರ್ಷಗಳಿಂದ ಹೀಗೇ ಪ್ರಯಾಣಮಾಡುವಾಗ ಅಲ್ಪ ಸ್ವಲ್ಪ ಓದುತ್ತಲೇ ಕಾಲವನ್ನು ಸದುಪಯೋಗಪಡಿಸಿಕೊಂಡಿದ್ದೇನೆ ಎಂದು ಭಾವಿಸಿದ್ದೇನೆ. ಕೆಲವು ದಿನಗಳಿಂದ ಈಯರ್ ಫೋನ್ ಹಾಕಿಕೊಂಡು ಮನಸ್ಸಿಗೆ ಹಿತವೆನಿಸುವ ಹಾಡುಗಳನ್ನು ಕೇಳುತ್ತಾ ಸಂತಸದಿಂದಿದ್ದೇನೆ ಎಂದುಕೊಂಡು ಸಂಭ್ರಮಿಸಿದ್ದೇನೆ. ಜೀವನವೆಲ್ಲಾ ಬಾಹ್ಯ ಇಂದ್ರಿಯಗಳೊಡನೆ, ಜೊತೆಗೆ ಅವಕ್ಕೆ ಪೂರಕವೆನಿಸುವ ಸಾಧನಗಳನ್ನು ಬಳಸಿಕೊಂಡು ಸಾರ್ಥಕ ಭಾವವನ್ನು ಹೊಂದುವುದೇ ಆದರೆ....... ಏಕೋ ಈ ದಿನ ಮನಸ್ಸು ಎತ್ತೆತ್ತಲೋ ಓಡುತ್ತಾ ಏನನ್ನೋ ಅರಸುವ ತವಕದಲ್ಲಿದೆ ಎನಿಸಿತು. ಕಿಟಕಿಯಾಚೆಗೆ ಸಾಗುತ್ತಿರುವ ಪ್ರಕೃತಿಯ ಹಸಿರ ಸಿರಿಯನ್ನು ಗಮನಿಸುತ್ತಿದ್ದಂತೆಯೇ, ‘.............ಪುಸ್ತಕದಲ್ಲಿರುವ ಜ್ಞಾನವನ್ನೇ ತುಂಬಿಕೊಳ್ಳುತ್ತಾ ಸಾಗಿದರೆ ನಮ್ಮ ಮಸ್ತಕದಲ್ಲಿರುವ ಜ್ಞಾನವನ್ನು ಹೊರತೆಗೆಯುವುದು ಯಾವಾಗ?........’ ಎನ್ನುವ ಮಗಳ ಮಾತುಗಳು ನೆನಪಾದವು. ಈ ದಿನ ನನ್ನ ಮರವೇ ನನಗೊಂದು ಅವಕಾಶ ಕಲ್ಪಿಸಿದೆ: ನನ್ನ ಅಂತರಂಗದ ಪುಸ್ತಕದ ಪುಟಗಳನ್ನು ತೆರೆಯುವ, ನನ್ನ ಶ್ರವಣೇಂದ್ರಿಯಗಳಿಗೆ ಅತೀತವಾದ ಗಾನವನ್ನು ಆಸ್ವಾದಿಸುವ ಪ್ರಯತ್ನ!

೨೦೦೮ರ ಮತಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ೫೨ದಿನಗಳು ನ್ಯಾಯಾಂಗ ಬಂಧನದಲ್ಲಿದ್ದು ಹೊರ ಬಂದ ಸುಧೀಂದ್ರ ಕುಲಕರ್ಣಿಯವರು ತಿಹಾರದ ಜೈಲಿನಲ್ಲಿನ ತಮ್ಮ ಅನುಭವವನ್ನು ಕನ್ನಡಪ್ರಭಪತ್ರಿಕೆಗಾಗಿ ಬರೆದಿದ್ದಾರೆ. `ತಿಹಾರ ಜೈಲಿನ ಅನುಭವವನ್ನು ಅಚ್ಚಳಿಯದಂತೆ ಮಾಡಿದ್ದು ಅಲ್ಲಿಯ ಏಕಾಂತ ಮತ್ತು ಮೌನ ಎಂದು ಹೇಳುತ್ತಾ...... ಏಳು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ ಮಹಾತ್ಮ ಗಾಂಧಿಯವರಷ್ಟು ಮೌನ ಶಬ್ಧವನ್ನು ಪ್ರಭಾವಿಯಾಗಿ ವಿವರಿಸಿದವರು ವಿರಳ. ಅವರು ಜೈಲಿನಿಂದ ಹೊರಗಿದ್ದಾಗಲೂ ಸಹ ನಾವು ಮನಸ್ಸು ಮಾಡಿದರಷ್ಟೇ ಕೇಳಿಸಿಕೊಳ್ಳಬಹುದಾದ ದೈವಿಕ ರೇಡಿಯೋಗೆ ಕಿವಿಗೊಟ್ಟುಕೊಂಡಿರುತ್ತಿದ್ದರು. ನಾನು ತಿಹಾರ ಜೈಲಿನಿಂದ ನನಗಾಗಿ ತಂದುಕೊಂಡಿರುವ ಉಡುಗೊರೆ ಎಂದರೆ ಇಂಥದೇ ದೈವಿಕ ಆಕಾಶವಾಣಿಗೆ ಕಿವಿಗೊಟ್ಟು ಅಲ್ಲಿನ ಮೌನದ ಹಾಡುಗಳನ್ನು ಕೇಳಿಸಿಕೊಳ್ಳುವ ಸಾಮರ್ಥ್ಯಎಂದು ತಿಳಿಸಿದ್ದಾರೆ.

ನಾನು, ನನ್ನದುಗಳಿಂದಲೇ ತುಂಬಿರುವ ಮನಸ್ಸು ಇದಕ್ಕೆ ಅವಕಾಶ ನೀಡುವುದೇ? ಈ ನಿಟ್ಟಿನಲ್ಲಿ ಮುನ್ನಡೆದಾಗ ಒಂದಲ್ಲಾ ಒಂದು ದಿನ ಸಾರ್ಥಕತೆಯನ್ನು ಹೊಂದುತ್ತೇವೆನ್ನುವ ಅಭೀಷ್ಟೆ ನಮ್ಮದಾಗಲಿ.

Wednesday, December 14, 2011

ಮನದ ಅಂಗಳದಿ.........೬೯. ‘ದಿಗಂಬರ’ ಕವಿಗಳು


ನನ್ನ ಪುಸ್ತಕದ ಸಂಗ್ರಹವನ್ನು ಗಮನಿಸುತ್ತಿದ್ದಾಗ ಎಂದೋ ಕೊಂಡು ಸೇರಿಸಿದ್ದ ಡಾ. ಆರ್.ವಿ.ಎಸ್. ಸುಂದರಂ ಅವರ ‘ದಿಗಂಬರ ಕವಿಗಳು’ ಎನ್ನುವ ಒಂದು ಪುಟ್ಟ ಪುಸ್ತಕ ಸಿಕ್ಕಿತು. ಬಹುಷಃ ಅದನ್ನು ಕೊಂಡಾಗ ಅದು ಜೈನ ಕವಿಗಳ ಬಗೆಗಿನ ಪುಸ್ತಕ ಎಂದೇ ಕೊಂಡಿರಬಹುದು. (ಈವರೆಗೂ ಎಂದರೆ ಅದರ ಪುಟಗಳನ್ನು ತಿರುಗಿಸುವವರೆಗೂ ಹಾಗೇ ಭಾವಿಸಿದ್ದೆ!) ಹಗುರವಾದ ಪುಟ್ಟ ಪುಸ್ತಕವಾದ್ದರಿಂದ ಸಮಯ ದೊರೆತಾಗ ಓದಲೆಂದು ನನ್ನ ವ್ಯಾನಿಟಿ ಅಲ್ಲ ಅತ್ಯವಶ್ಯಕ (ನೆಸೆಸಿಟಿ) ಚೀಲದೊಳಗೆ ಸೇರಿಸಿದ್ದೆ. ಪುಸ್ತಕವನ್ನು ಓದಲಾರಂಭಿಸಿದಾಗ ನನ್ನ ಊಹೆಯೆಲ್ಲಾ ಬುಡಮೇಲಾಗಿ ಅಚ್ಚರಿ ಮೂಡಿತು! ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ:
ಭಾರತದಲ್ಲಿ ‘ದಿಗಂಬರ’ ಎಂಬುದು ಪ್ರಸಿದ್ಧ ಜೈನ ಸಂಪ್ರದಾಯ. ದಿಗಂಬರತ್ವ ಅಥವಾ ನಗ್ನತೆ ದೈಹಿಕವಾಗಿರಬಹುದು ಅಥವಾ ತಾತ್ವಿಕವಾಗಿರಬಹುದು. ಜೈನ ಸಂಪ್ರದಾಯದಲ್ಲಿ ಈ ಎರಡೂ ರೀತಿಯ ದಿಗಂಬರತ್ವ ಅಸ್ತಿತ್ವದಲ್ಲಿದೆ. ತೆಲುಗು ಸಾಹಿತ್ಯದ ಮಟ್ಟಿಗೆ ದಿಗಂಬರತ್ವಕ್ಕೆ ಸಾರ್ಥಕ ನಿದರ್ಶನವೆಂದರೆ ವೇಮನ. ಬಹುಶಃ ೧೫ನೆಯ ಶತಮಾನಕ್ಕೆ ಸೇರಿದ ಈ ಕವಿ ದಿಗಂಬರನಾಗಿಯೇ ಸಂಚರಿಸುತ್ತಿದ್ದನೆಂಬ ಪ್ರತೀತಿ. ಅವನ ಪದ್ಯಗಳಲ್ಲೂ ಅಷ್ಟೇ ದಿಗಂಬರವಾಗಿ ಭಾವನೆಗಳು ಮೂಡಿ ಬಂದವು. ಮೂಢಾಚಾರಗಳನ್ನು, ಅಸಮಾನತೆಗಳನ್ನು , ಮೂರ್ಖತನವನ್ನು ನಗ್ನವಾಗಿ ಟೀಕಿಸಿದ ಮೊದಲನೆಯ ತೆಲುಗು ಕವಿ ವೇಮನ.
೧೯೬೫, ಮೇ ೮ರಂದು ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಆರು ಜನ ತರುಣ ಕವಿಗಳು ದಿಗಂಬರ ಕವಿಗಳೆಂಬ ಹೆಸರಿನಲ್ಲಿ ಒಂದು ಕವನ ಸಂಕಲನವನ್ನು ಪ್ರಕಟಿಸಿದರು. ಇವರದು ದೈಹಿಕ ದಿಗಂಬರತ್ವವಲ್ಲ; ಮಾನಸಿಕ ದಿಗಂಬರತ್ವ. ಎಂದರೆ ಈ ಪ್ರಪಂಚದ ಎಲ್ಲ ಆಚ್ಛಾದನೆಗಳನ್ನು ತೊಲಗಿಸಿ ನಿತ್ಯ ಸಚೇತನ ಆತ್ಮಸ್ಫೂರ್ತಿಯಿಂದ ಬಾಳುವುದೇ ಗುರಿಯಾಗಿಟ್ಟಕೊಂಡ ತರುಣರ ಗುಂಪೇ ದಿಗಂಬರ ಕವಿಗಳು. ಉಸಿರಾಡುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ತಾದ್ಯಾತ್ಮ್ಯ ಪಡೆದು ವ್ಯಕ್ತಿಯ ಅಸ್ತಿತ್ವದ ಪರಿರಕ್ಷಣೆಗಾಗಿ ಸಮಾಜದಲ್ಲಿರುವ ಅಸಂತೋಷವನ್ನು, ಅತೃಪ್ತಿಯನ್ನು ಅಕ್ಷರಗಳಲ್ಲಿ ವ್ಯಕ್ತೀಕರಿಸಲು ಹೊರಟವರೇ ದಿಗಂಬರ ಕವಿಗಳು. ಇವರು ತಮ್ಮ ಕವನಗಳನ್ನು ‘ದಿಕ್?ಗಳೆಂದು ಕರೆಯಬೇಕೆಂದರು. ಅರಮನೆಗಳಲ್ಲಿ, ಅಕಾಡೆಮಿಗಳಲ್ಲಿ ಭೋಗವಸ್ತುವಾಗಿ, ಕಾಲಕ್ಷೇಪ ವಿಷಯವಾಗಿ ಬಿದ್ದಿರುವ ಕಾವ್ಯವನ್ನು ಮುಕ್ತಗೊಳಿಸಿ ರಸ್ತೆಗೆ ಎಳೆದು ತಂದಿರುವುದಾಗಿ ದಿಗಂಬರ ಕವಿಗಳು ಘೋಷಿಸಿದರು. ಜಾತಿಮತಗಳ ಗುರುತುಗಳನ್ನು ಬಿಟ್ಟು ಕೆಚ್ಚೆದೆದೆಯ ತರುಣ ಕವಿಗಳಿಗೆ ಪ್ರತೀಕವಾಗಿ ಹೊಸಹೆಸರುಗಳನ್ನು ಇಟ್ಟುಕೊಂಡಿರುವುದಾಗಿ ತಿಳಿಸಿದರು. ನಡುರಾತ್ರಿ ಬದಲಾವಣೆಯ ಮತ್ತು ಶುಭೋದಯದ ಸಂಕೇತ. ನಡುರಾತ್ರಿಯಲ್ಲಿ, ನಡುಬೀದಿಯಲ್ಲಿ ಒಬ್ಬ ಅತಿ ಸಾಮಾನ್ಯ ವ್ಯಕ್ತಿಯಿಂದ ಈ ಕವನ ಸಂಕಲನವನ್ನು ಬಿಡುಗಡೆ ಮಾಡಿಸಿದರು!
ದಿಗಂಬರ ಕವಿಗಳು ತಮ್ಮ ಧ್ಯೇಯೋದ್ದೇಶವನ್ನು ಹೀಗೆ ತಿಳಿಸುತ್ತಾರೆ, ‘ಭಯದಿಂದ ತತ್ತರಿಸಿ, ದಾಸ್ಯಕ್ಕೊಳಗಾಗಿ, ದುರ್ಭರವಾದ ಸಮಾಜವೆಂಬ ಕೊಳಚೆಗುಂಡಿಯಲ್ಲಿ ಬಿದ್ದಿರುವ ಜನಸಮೂಹಕ್ಕೆ ಹೊಸ ರಕ್ತವನ್ನು ಇಂಜೆಕ್ಟ್ ಮಾಡುವುದು ನಮ್ಮ ಉದ್ದೇಶ. ಆನರ ಅವಿದ್ಯೆ, ಅಜ್ಞಾನ, ಅಶಕ್ತತೆಗಳ ಆಧಾರದಿಂದ ದೇಶವನ್ನು ಲೂಟಿಮಾಡಲು ಪಳಗಿದ ರಾಜಕಾರಣಿಗಳು ಮತ್ತು ಸಮಾಜದ ವಿವಿಧ ಶೋಷಕ ವರ್ಗದವರು ಪ್ರಜೆಗಳ ಮೇಲೆ ಹೇರುತ್ತಿರುವ ಕುಷ್ಠ ವ್ಯವಸ್ಥೆಯನ್ನು ವಿರೋಧಿಸಿ ಹಾಕಿದ ಕೇಕೆಗಳನ್ನು ಧೈರ್ಯವಾಗಿ, ಸ್ಥೈರ್ಯವಾಗಿ ಪುಟಗಳಲ್ಲಿ ಹಿಡಿದಿಡಲು ಯತ್ನಿಸಲಾಗಿದೆ. ಇಲ್ಲಿ, ಈ ದೇಶದಲ್ಲಿ, ಈ ಪ್ರಪಂಚದಲ್ಲಿ ಉಸಿರಾಡುವ ಪ್ರತಿ ಮಾನವನ ಅಸ್ತಿತ್ವಕ್ಕಾಗಿ ತಾಪದಿಂದ ಆತನ ಭವಿಷ್ಯವನ್ನು ಚಿಂತಿಸಿ ಬಿಕ್ಕಿ ಬಿಕ್ಕಿ ಅತ್ತು ಹುಚ್ಚೆದ್ದು ಪ್ರವಚಿಸಿದ ಕಾವ್ಯವಿದು. ಈ ಕಾವ್ಯವನ್ನು ಓದಿದ ತಕ್ಷಣ ಗೇಲಿ ಮಾಡಬಹುದು, ಅಸಹ್ಯ ಪಡಬಹುದು. ಪ್ರಾಚೀನ ಕಾಲದಲ್ಲೇ ನಿಜವಾದ ಕಾವ್ಯ ನಿಂತು ಹೋಯಿತೆಂದು ಅಭಿಪ್ರಾಯ ಪಡಬಹುದು. ಸವೆದು, ಕೊಳೆತು, ದುರ್ನಾತ ಬೀರುತ್ತಿರುವ ಮಾತುಗಳನ್ನು, ಸಮಾಸಗಳನ್ನು, ಭಾವಗಳನ್ನು, ಹಿಡಿದು ನೇತಾಡುತ್ತಿರುವ ಜನರಿಗಾಗಿ ಈ ನಾಲ್ಕು ಮಾತುಗಳು.’
ದಿಗಂಬರ ಕವಿಗಳು ತಮ್ಮ ಹೆಸರುಗಳನ್ನು ಬಿಟ್ಟು ಹೊಸ ತರಹದ ಹೆಸರುಗಳನ್ನಿಟ್ಟುಕೊಂಡರು. ಮಹಾಸ್ವಪ್ನ( ಕಮ್ಮಿಶೆಟ್ಟಿ ವೆಂಕಟೇಶ್ವರರಾವ್) ‘ಮರಳುಗಾಡು’ ಎಂಬ ಕವನದಲ್ಲಿ,
‘ಕಾಲವೊಂದು ಕೊನೆಮೊದಲಿಲ್ಲದ ಮರುಭೂಮಿ
ಇದು ಉದ್ದನೆಯ ಕಾಲಿರುವ ಒಂಟೆಗಳ ದಾರಿ
ಈ ಲೋಕ ಕೆಲವರಿಗೆ ಮಾತ್ರ ಹೆದ್ದಾರಿ.’ ಎಂದರು.
ನಗ್ನಮುನಿ(ಎಂ.ಎಚ್. ಕೇಶವರಾವ್) ‘ಸುಖರೋಗಿ?ಯಲ್ಲಿ:
‘ಡಿಯರ್ ಸ್ಕೌಂಡ್ರಲ್
ನಾಲ್ಕು ಗೋಡೆಗಳ ನಡುವೆ ಒಳ್ಳೆತನ ಹೂತಿಟ್ಟು
ಕಣ್ಣೀರನ್ನು ಗುಲಾಬಿಗಳಿಗೆ ಗೊಬ್ಬರವಾಗಿ ಬಳಸಿ
ಹಚ್ಚನೆಯ ಹಸುಗೂಸುತನ ಬೆಚ್ಚನೆ ಯೌವನ
ದುರಂತಗಳಲ್ಲಿ ಕಳೆದುಕೊಂಡು
ದುರಂತನಾಯಕನಂತೆ
ಮೇಲೆತ್ತದ ಪರದೆಯಂತೆ ಪಕಪಕ ನಗುತ್ತಿರುವ
ನಿನ್ನ ಕಂಡರೆ ಕನಿಕರ’ ಎನ್ನುತ್ತಾರೆ.
ದಿಗಂಬರತ್ವ ಎಂಬುದು ಆತ್ಮವಂಚನೆಯಾಗಿರಬಾರದು, ಆತ್ಮದ ಆವಿಷ್ಕಾರ ಮಾಡುವಂತಿರಬೇಕು ಎನ್ನುವುದನ್ನು ಆಕವನದಲ್ಲಿಯೇ ಹೀಗೆ ಸ್ಪಷ್ಟಪಡಿಸುತ್ತಾರೆ:
ಏಳು ಎದ್ದೇಳು
ಮುಸುಕು ತೆಗಿ
ದುರ್ಗಂಧ ಬೀರುವ ಈ ಬಟ್ಟೆಗಳನ್ನು ಬಿಚ್ಚಿ
ಆತ್ಮದ ಮುಂದೆ ನಿಂತು ನಿನ್ನ ನೀನು ನೋಡಿಕೊ
ಮನುಷ್ಯನಂತೆ ಒಳ್ಳೆಯವನಾಗಿ
ಆಕಾಶದಂತೆ ಅವನಿಯಂತೆ ಬಾಳು.
ಜ್ವಾಲಾಮುಖಿ(ವೀರರಾಘವಾಚಾರ್ಯಲು)ಯವರ ‘ಶಸ್ತ್ರಚಿಕಿತ್ಸೆ’ ಎಂಬ ಕವಿತೆಯಲ್ಲಿಯಲ್ಲಿ ಹೀಗಿದೆ:
‘ವಿಶ್ವವಿದ್ಯಾಲಯಗಳ ನಿದ್ದೆ ಮಾತ್ರೆಗಳು
ಪುಣ್ಯಕ್ಷೇತ್ರಗಳ ವ್ಯಾಪಾರ ಹುಂಡಿ ಲೂಟಿ ಮುಡಿಪುಗಳು
ಮಠಾಧಿಪತಿಗಳ ಮಹಾ ಮಹಾ ನೈವೇದ್ಯಗಳು
ಭಾರತಮಾತೆಯನ್ನು ಶಾಶ್ವತ ರೋಗಿಯನ್ನಾಗಿಸಿವೆ.’
ಚೆರಬಂಡರಾಜು(ಬದ್ದಂ ಭಾಸ್ಕರರೆಡ್ಡಿ) ‘ಎದ್ದೇಳು’ ಎಂದು ಹೊಡೆದೆಬ್ಬಿಸುವವರೇ ಹೊರತು ಜೋಗುಳ ಹಾಡುವ ಮೋಜುಗಾರನಲ್ಲ!
‘ನಿನ್ನ ಗುರಿಯೆಂಬ ಸೂರ್ಯನನ್ನು ಮಾತ್ರ
ಹಿಡಿತದಿಂದ ಜಾರಿಬಿಡಬೇಡ
ಪ್ರಾಣವನ್ನು ಪಣವಾಗಿಟ್ಟಾದರೂ
ಈ ಜಗತ್ತಿಗೆ ಮಾನವತಾ ಭಿಕ್ಷೆ ನೀಡು
ಏಳು, ಎದ್ದೇಳು.’
ಭೈರವಯ್ಯ(ಮನಮೋಹನ ಸಹಾಯ್) ಅವರ ‘ತುಟ್ಟಿಭಿಕ್ಷೆ’ ಎಂಬ ಕವನದಲ್ಲ ತುಟ್ಟಿ ಭತ್ಯಕ್ಕಾಗಿ ಉದ್ಯೋಗಿಗಳು ಹಂಬಲಿಸುವ ರೀತಿ, ಭತ್ಯ ಹೆಚ್ಚಿಸಿ ಬಾಯಿಮುಚ್ಚಿಸುವ ಸರ್ಕಾರದ ನೀತಿ ಪರಿಣಾಮಕಾರಿಯಾಗಿ ಮೂಡಿಬಂದಿದೆ:
‘ತಮ್ಮಾ ಹೆದರಬೇಡ
ತುಟ್ಟಿಭತ್ಯೆ ಹೆಚ್ಚಲಿದೆ
ಹೆಬ್ಬಾವಿನ ಬಾಯೊಳಗೆ ನೊಣದಮರಿ ನುಗ್ಗಲಿದೆ!’
ನಿಖಿಲೇಶ್ವರ್(ಯಾದವರೆಡ್ಡಿ) ‘ನನ್ನ ದೇಶದಲ್ಲಿ ನಾನು ಒಬ್ಬಂಟಿ’ಯಲ್ಲಿ ಸಾಮಾಜಿಕ ಕಳಕಳಿಯಿರುವ ಜನ ತಮ್ಮ ದೇಶ ಉಳಿಸಿದ ಮಹಾ ಸಮಸ್ಯೆಗಳ ನೇಣುಕುಣಿಕೆಗೆ ಸಿಕ್ಕಿ ಹೇಗೆ ನೆರಳುತ್ತಿದ್ದಾರೆಂಬುದನ್ನು ತಿಳಿಸಿದ್ದಾರೆ:
‘ಗಾಳಿಗೆ ಆರಿಹೋದ ದೀಪಗಳ ಬತ್ತಿಗಳು ಮಾತ್ರ
ಉಳಿದ ಕಗ್ಗತ್ತಲಲ್ಲಿ
ಸಾಲಾಗಿ ನಿಂತ ವಿದ್ಯುದ್ದೀಪಗಳಲ್ಲಿ
ನಾನು ನನ್ನ ದೇಶಕ್ಕೆ ಪರದೇಶಿ
ಆಲಿಸುತ್ತಿರುವ ಒಬ್ಬಂಟಿ
ಸ್ನೇಹ ನೀಡದ ದೇಶದಲ್ಲಿ
ಸ್ನೇಹವಿಲ್ಲದ ಪ್ರತಿಯೊಬ್ಬನೂ ಒಂದೊಂದು ದ್ವೀಪ.’
ದಿಗಂಬರ ಕವಿಗಳು ಅಸಭ್ಯ, ಅಸಹ್ಯ, ಅಶ್ಲೀಲ ಪದಜಾಲದಿಂದ ಕೋಪವನ್ನುಂಟುಮಾಡುತ್ತಾರೆಯೇ ಹೊರತು ಕನಿಕರವನ್ನಲ್ಲ ಎಂದವರೂ ಉಂಟು. ಆದರೂ ಇವರ ರಚನೆಗಳು ಇಂಗ್ಲಿಷ್, ಕನ್ನಡ ಹಾಗೂ ಇನ್ನೂ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕನ್ನಡದ ಕೆಲವು ಬಂಡಾಯ ಸಾಹಿತಿಗಳಿಗೆ ದಿಗಂಬರ ಕಾವ್ಯದ ಅನುವಾದ ಪ್ರೇರಣೆ ನೀಡಿದೆ.