Sunday, December 25, 2011

ಮನದ ಅಂಗಳದಿ.........೭೨. ಚಲನ ‘ಚಿತ್ರ’

ನಾನು ಚಿಕ್ಕವಳಿದ್ದಾಗ ನೋಡಿದ ಚಲನ ಚಿತ್ರಗಳು ಬೆರಳೆಣಿಕೆಯಷ್ಟೇ ಇದ್ದವು. ಅವುಗಳನ್ನು, ಮೊದಲು ನೋಡಿದ್ದು- ಚಂದ್ರಸೇನೆ, ಎರಡನೆಯದು-ಮಕ್ಕಳ ರಾಜ್ಯ, ಮೂರನೆಯದು....... ಮುಂತಾಗಿ ಬೆರಳಿನಲ್ಲಿ ಎಣಿಸಿಕೊಂಡು ಆಗಾಗ ನೆನಪುಮಾಡಿಕೊಳ್ಳುತ್ತಾ ಇದ್ದುದು ಮನಸ್ಸಿನಲ್ಲಿ ಹಸಿರಾಗೇ ಇದೆ. ನಮ್ಮದು ಹಳ್ಳಿಯಾದ್ದರಿಂದ ನಾವು ಸಿನೇಮಾ ನೋಡಲು ಐದು ಮೈಲಿ ದೂರದ (ಆಗ ಹೇಳುತ್ತಿದ್ದಂತೆ! ಈಗಾದರೆ ಎಂಟು ಕಿ.ಮೀ.) ಪಟ್ಟಣಕ್ಕೇ ಎತ್ತಿನಗಾಡಿ ಕಟ್ಟಿಕೊಂಡು ಹೋಗಬೇಕಾಗಿತ್ತು. ನಮ್ಮ ಸೋದರತ್ತೆಗೆ ದೇವರ ಚಿತ್ರಗಳು ಯಾವುದೇ ಬಂದರೂ ನೋಡುವ ಹಂಬಲ. ಅಕ್ಕ ಯಾವಾಗಲೂ ಅತ್ತೆಯ ಜೊತೆಯೇ ಇರುತ್ತಿದ್ದುದರಿಂದ ಅವರೊಡನೆ ಸಾಕಷ್ಟು ಚಿತ್ರಗಳನ್ನು ನೋಡುತ್ತಿದ್ದಳು. ನಮಗೆಲ್ಲಾ ಅದರ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದಳು. ನನಗೂ ನೋಡಬೇಕೆನ್ನುವ ಆಸೆ. ಆದರೆ ನಾನು ಸದಾ ಇನ್ನೊಬ್ಬ ಸೋದರತ್ತೆಯ ಜೊತೆ ಇರುತ್ತಿದ್ದೆ. ಅವರಿಗೆ ಕಣ್ಣು ಸರಿಯಾಗಿ ಕಾಣದೇ ಇದ್ದುದರಿಂದ ಸಿನೇಮಾ ನೋಡಲು ಹೋಗುತ್ತಿರಲಿಲ್ಲ. ನನ್ನ ಆಸೆ ಆಸೆಯಾಗಿಯೇ ಉಳಿದಿತ್ತು. ಒಮ್ಮೆ ಅಮ್ಮ ಅಣ್ಣ(ತಂದೆ)ನ ಜೊತೆ ಮಕ್ಕಳಾದ ನಾವು ಕುಣಿಗಲ್‌ನ ಬಂಧುವೊಬ್ಬರ ಮನೆಗೆ ಸಮಾರಂಭಕ್ಕೆ ಹೋಗಿದ್ದೆವು. ಸಂಜೆ ನಾವೆಲ್ಲಾ ಚಲನ ಚಿತ್ರ ನೋಡಲು ಹೋಗುವ ಏರ್ಪಾಡಾಯಿತು. ಈಗಿನಂತೆ ಆಟೋಗಳಿಲ್ಲದ್ದರಿಂದ ಎಳೆಯರಾದ ನಮ್ಮನ್ನು ಹೆಗಲ ಮೇಲೆ ಕೂರಿಸಿಕೊಂಡು ಹೊರಟರು. ಆದರೆ ದಾರಿಯಲ್ಲಿ ಅಕ್ಕ ಸಿನೆಮಾ ನೋಡೋದು ಬೇಡವೇ ಬೇಡ ಎಂದು ಹಟ ಮಾಡಿದಾಗ ನಮ್ಮ ಸವಾರಿ ಕುದುರೆ ಲಾಯದ ಕಡೆಗೆ ಹೊರಟಿತು! ಆಗ ಆದ ನಿರಾಶೆ ಬಹಳ ದಿನ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು! ಆದರೆ ಅಕ್ಕನಿಗೆ ಕೆಲಸ ಸಿಕ್ಕಿದ ನಂತರ ನಾನು ಅವಳಿದ್ದ ಊರಿಗೆ ಹೋದಾಗಲೆಲ್ಲಾ ಒಳ್ಳೆಯ ಚಿತ್ರಗಳಿದ್ದರೆ ನನ್ನನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದುದನ್ನು ಮಾತ್ರ ಮರೆಯುವಂತಿಲ್ಲ.

ಮಕ್ಕಳಾಗಿದ್ದ ನಾವು ಸ್ವಲ್ಪ ಬೆಳೆದ ನಂತರ ಎಲ್ಲರೂ ಒಟ್ಟಾಗಿ ಎತ್ತಿನ ಗಾಡಿಯಲ್ಲಿ ಪಟ್ಟಣಕ್ಕೆ ಹೋಗಿ ಸಿನೇಮಾ ನೋಡಿಕೊಂಡು ಬರುವಾಗ, ಬೆಳದಿಂಗಳ ರಾತ್ರಿಯಲ್ಲಿ ದಾರಿಯುದ್ದಕ್ಕೂ ಜೋರಾಗಿ ಹಾಡು ಹೇಳಿಕೊಂಡು ಬರುತ್ತಿದ್ದೆವು. ಅದು ನಮ್ಮೊಳಗಿನ ಭಯವನ್ನು ಓಡಿಸುವ ತಂತ್ರವೂ ಆಗಿತ್ತು! ಒಳ್ಳೆಯ ಚಿತ್ರ ಬಂದಾಗ ಮಾತ್ರ ಹಾಗೆ ಹೋಗುತ್ತಿದ್ದುದರಿಂದ ಹಾಗೂ ಒಳ್ಳೆಯದು ಎಂದು ಆಯ್ಕೆ ಮಾಡಿಕೊಟ್ಟ ಪುಸ್ತಕಗಳನ್ನು ಮಾತ್ರ ಓದುತ್ತಿದ್ದುದರಿಂದ ಪ್ರಾರಂಭದಿಂದಲೂ ಒಳ್ಳೆಯದು ಎನಿಸಿಕೊಂಡಿದ್ದೇ ಮನಸ್ಸಿನಲ್ಲಿ ಉಳಿಯುವಂತಾಯಿತೇನೋ! ಕಾಲ ಚಕ್ರ ಉರುಳಿದಂತೆ ನಮ್ಮ ಮಕ್ಕಳು ಹುಟ್ಟಿ, ಬೆಳೆದು ಈಗ ಅವರ ಸ್ನೇಹದ ವರ್ತುಲದಲ್ಲಿ ನನ್ನನ್ನು ನಾನು ಉತ್ತಮೀಕರಿಸಿಕೊಳ್ಳುವ ಅವಕಾಶ ಕೂಡಿಬಂದಿದೆ. ಚಲನ ಚಿತ್ರಗಳನ್ನು ನೋಡುವುದು ಕೇವಲ ಮನರಂಜನೆಗಾಗಿ ಎನ್ನುವುದರಿಂದ ಮುಂದುವರೆದು ಅದರಲ್ಲಿರುವ ಸಂಭಾಷಣೆಗಳನ್ನು ಅರ್ಥೈಸಿಕೊಂಡು, ಆಸ್ವಾದಿಸುವ ಅವಕಾಶ ಈಗ ದೊರೆತಿದೆ. ಸದಾ ಒಂದಿಲ್ಲೊಂದು ಕೆಲಸವನ್ನು ಹೊಂದಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದ ನನ್ನನ್ನು ಒಂದೆಡೆ ಹಿಡಿದು ಕೂರಿಸಿ ತೋರಿಸಿದ ಕೆಲವು ಚಿತ್ರಗಳು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವವನ್ನು ಬೀರಿವೆ. Lion King, Kung-Fu-Panda,…..ಮುಂತಾದ ಚಿತ್ರಗಳಲ್ಲಿ ಪ್ರಾಣಿಗಳು ಆಡುವ ಮಾತುಗಳಲ್ಲಿಯ ಅರ್ಥವಂತಿಕೆ ನೋಡಿಯೇ ಸವಿಯಬೇಕು. Lion King ನಲ್ಲಿ ಬರುವ `Hakuna matata- it means no worries for the rest of your days…’ಎನ್ನುವ ಹಾಡು, ‘Kung-Fu-Panda’ ದಲ್ಲಿ ಬರುವ `There is no secret ingredient, to make some thing special, we have to believe its special’ ಎನ್ನುವ ಸಂಭಾಷಣೆ ಅರ್ಥ ವೈಶಾಲ್ಯವನ್ನು ಪಡೆದಿವೆ. ನನಗೆ ಆ ಸಂಭಾಷಣೆಗಳು ಸರಿಯಾಗಿ ಅರ್ಥವಾಗದಿದ್ದಾಗ ಅದರ ಸಬ್ ಟೈಟಲ್ ಹಾಕಿ, ವಿವರಿಸಿ ಮಕ್ಕಳು ಅರ್ಥ ಮಾಡಿಸಿದ್ದಾರೆ.

ಮಕ್ಕಳು ನನಗೆ ತೋರಿಸಿದ ಚಿತ್ರಗಳಲ್ಲಿ ನನಗೆ ಬಹಳ ಮೆಚ್ಚುಗೆಯಾದದ್ದು `Peaceful Warrior’

ಡಾನ್ ಮಿಲ್ ಮನ್ ಒಬ್ಬ ಕಾಲೇಜು ವಿದ್ಯಾರ್ಥಿ. ಅವನು ಸ್ಥಳೀಯವಾಗಿ ಪ್ರಸಿದ್ಧನಾಗಿರುವ ಜಿಮ್ನಾಸ್ಟ್ ಕೂಡ ಆಗಿರುತ್ತಾನೆ. ಅವನಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸಿರುತ್ತದೆ. ಆದರೆ ಅವನನ್ನು ಅವಿಶ್ರಾಂತಸ್ಥಿತಿ(restlessness) ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಅವನು ಸೂರ್ಯೋದಯಕ್ಕೆ ಮೊದಲು ಓಡುವ ಅಭ್ಯಾಸವಿಟ್ಟುಕೊಂಡಿರುತ್ತಾನೆ. ಹಾಗೆ ಓಡುತ್ತಿರುವಾಗ ಒಂದು ದಿನ ಒಬ್ಬ ವೃದ್ಧ(ಸಾಕ್ರಟೀಸ್) ಅವನಿಗೆ ಎದುರಾಗುತ್ತಾನೆ. ಅವನಿಗೆ ಡಾನ್ ನ ಸಮಸ್ಯೆಯ ಬಗ್ಗೆ ಸ್ವತಃ ಡಾನ್‌ಗೇ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ತಿಳಿದಿರುವಂತಿರುತ್ತದೆ! ಸಾಕ್ರಟೀಸ್ ಒಬ್ಬ ಮಾರ್ಗದರ್ಶಿಯಾಗಿ, ಡಾನ್‌ಗೆ ಅನೇಕ ಕೆಲಸ(task)ಗಳನ್ನು ಕೊಟ್ಟು, ತಿಳಿಹೇಳುತ್ತಾ ಅವನಲ್ಲಿದ್ದ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. ..........ಡಾನ್ ಪ್ರತಿ ಕ್ಷಣಗಳ ಮಹತ್ವವನ್ನು ಅರಿಯುವುದನ್ನು ಕಲಿಯುತ್ತಾನೆ. ಗುರಿಗಿಂತಲೂ ಕ್ರಮಿಸುವ ಮಾರ್ಗ ಪ್ರಮುಖವಾದುದು ಎನ್ನುವ ಮಹತ್ವವನ್ನು ಡಾನ್ ಅನ್ನು ಒಂದು ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋಗುತ್ತಾ ಮನವರಿಕೆ ಮಾಡುತ್ತಾನೆ........ ಈ ಮಧ್ಯದಲ್ಲಿ ಒಂದು ಅಪಘಾತದಲ್ಲಿ ಡಾನ್ ನ ಬಲಗಾಲಿನ ಮೂಳೆ ಮುರಿದು ಅವನು ಜಿಮ್ನಾಸ್ಟಿಕ್ ಅಭ್ಯಾಸದಿಂದ ಹೊರಬರಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೂ ಸಾಕ್ರಟೀಸ್‌ನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದಿಂದ ಅರ್ಹತೆಯನ್ನು ಪಡೆದು ಒಲಂಪಿಕ್ ಟ್ರಯಲ್ ನಲ್ಲಿ ಆಯ್ಕೆಯಾಗುತ್ತಾನೆ. ಅಂತಿಮ ಸ್ಪರ್ಧೆಯ ಮೊದಲು ಸಾಕ್ರಟೀಸ್ ಡಾನ್ ಗೆ ಎಲ್ಲಿಯೂ ಸಿಗುವುದಿಲ್ಲ. ಸ್ಪರ್ಧೆಯ ಕಡೆಯ ಸುತ್ತಿನಲ್ಲಿ ಸಾಕ್ರಟೀಸ್ ಅವನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ:

"Where are you, Dan?"

"Here."

"What time is it?"

"Now."

"What are You?"

"This Moment."

ನಂತರ ಡಾನ್ triple consecutive flips ಅನ್ನು ಸರಾಗವಾಗಿ ನಿರ್ವಹಿಸಿ ತೀರ್ಪುಗಾರರಿಗೇ ಅಚ್ಚರಿ ಮೂಡಿಸುತ್ತಾನೆ! ಅವರ ಟೀಂ ಮೊದಲ ನ್ಯಾಷನಲ್ ಅವಾರ್ಡನ್ನು ಪಡೆಯುತ್ತದೆ.

ಈ ಚಿತ್ರದಲ್ಲಿ ಬರುವ ಡಾನ್ ಮತ್ತು ಸಾಕ್ರಟೀಸ್ ನಡುವಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಎಲ್ಲೆಲ್ಲೋ ಅಲೆಯುವ ನಮ್ಮ ಮನಸ್ಸನ್ನು ಇಲ್ಲಿಗೆ, ಈಗ, ಈ ಕ್ಷಣಕ್ಕೆ ಹಿಡಿದು ನಿಲ್ಲಿಸಿದರೆ ಯಾವುದೇ ಸಾಧನೆಯೂ ಕಷ್ಟಕರವಲ್ಲ. ಅದಕ್ಕಾಗಿ ಒಬ್ಬ ಮಾರ್ಗದರ್ಶಕನ ಅವಶ್ಯಕತೆಯಿದೆ. ಅದು ಸದಾ ನಮ್ಮೊಂದಿಗೇ ಇರುವ ನಮ್ಮ ಅಂತರಂಗವೇ ಆದರೆ ಎಷ್ಟು ಚೆನ್ನ!

15 comments:

 1. ಬೆಳೆದ ಮೇಲೆ ಮಕ್ಕಳೇ ನಮಗೆ ಮಾರ್ಗದರ್ಶಕರಾಗುವದು ಸುಳ್ಳೇನಲ್ಲ!ಒಳ್ಳೆಯ ಸಿನಿಮಾದ ಕತೆಯೊಂದನ್ನು ಹೇಳಿ ನಮಗೆ ಸ್ಫೂರ್ತಿ ಬರುವಂತೆ ಮಾಡಿದ್ದೀರಿ. ಧನ್ಯವಾದಗಳು.

  ReplyDelete
 2. @ ಸುನಾಥ್ ರವರೆ,
  ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

  ReplyDelete
 3. ಲೇಖನ ಚೆನ್ನಾಗಿದೆ ಮೇಡಂ. ನೀವೇ ಹೇಳಿದ ಹಾಗೇ , ನಮ್ಮ ಮನಸ್ಸೇ ನಮ್ಮ ಮಾರ್ಗದರ್ಶಕವಾದ್ರೆ ಎಷ್ಟು ಚೆನ್ನ. ಅಭಿನಂದನೆಗಳು

  ReplyDelete
 4. ಚಲನ ಚಿತ್ರ ಚೆನ್ನಾಗಿದ್ದರೆ ಭಾಷೆ ಅಗತ್ಯವಿಲ್ಲಾ ಅನ್ನಿಸುತ್ತದೆ.ಹೌದು ಹಿಂದಿನ ಚಿತ್ರಗಳಿಗೆ ಮೌಲ್ಯವಿತ್ತು, ಹಾಗಾಗಿ ಬಹಳಷ್ಟು ಹಿಂದಿನ ಚಲನ ಚಿತ್ರಗಳು ಇಂದಿಗೂ ಜನರ ಮನದಲ್ಲಿ ಮರೆಯಾಗದೆ ಉಳಿದಿವೆ. ನಿಮ್ಮ ಅನುಭವ ನನ್ನ ಬಾಲ್ಯದ ದಿನಗಳನ್ನೂ ಜ್ಞಾಪಿಸಿತು. ಲೇಖನ ಚೆನ್ನಾಗಿದೆ. ನಿಮಗೆ ಧನ್ಯವಾದಗಳು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 5. ಸಿನೆಮಾದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಅಂತಲ್ಲ. ಕೆಲವು ನಿಜವಾಗಿಯೂ ಅಧ್ಬುತ ಸೃಷ್ಟಿಗಳು.. ಚೆನ್ನಾಗಿದೆ ಬರಹ ಪ್ರಭಕ್ಕ :)))

  ReplyDelete
 6. ಚಲನಚಿತ್ರ ನೋಡೋಕೆ ಹೋಗೋದು ಬಾಲ್ಯದಲ್ಲಿ ಒಂದು ಹಬ್ಬ.. ಹೌದು ಹಳ್ಳಿಯ ಜೀವನ ಹಾಗಿತ್ತು..ಚನ್ನಾಗಿತ್ತು..

  ReplyDelete
 7. ಮೇಡಂ, ಚಲನಚಿತ್ರಗಳು ಅಚ್ಚೊತ್ತುವ ನೆನಪುಗಳನ್ನು ಚೆನ್ನಾಗಿ ನಿರೂಪಿಸಿದ್ದೀರಿ.

  ಬಾಲ್ಯದಲ್ಲೂ ನನ್ನನ್ನು ಬಹುವಾಗಿ ಕಾಡಿದ್ದು ನಮ್ಮೂರ ಟೆಂಟು. ನನ್ನ ಹಳ್ಳಿ ಗಡಿ ಗ್ರಾಮ. ಎಡವಿ ಬಿದ್ದರೆ ಆಂಧ್ರ ಪ್ರದೇಶ. ಹಾಗಾಗಿ ನೋಡಿದ್ದೆಲ್ಲ ತೆಲುಗು ಸಿನಿಮಾಗಳೇ! ಮಣ್ಣನ್ನು ಗುಡ್ಡೇ ಮಾಡಿ ಮೇಲೆ ಕುಳಿತು ಸಿನಿಮಾ ನೋಡಿದ್ದೇ ನೋಡಿದ್ದು!

  ಅದಕಾಗೇ ನನ್ನ tele film ತಯಾರಿಕಾ ಸಂಸ್ಥೆಯ ಹೆಸರೂ "TENT CINEMA".

  ReplyDelete
 8. ಕೊನೆಯ ಸಾಲುಗಳು ಬಹಳ ಪ್ರಭಾವಶಾಲಿಯಾಗಿ ಓದುಗನ ಮನಸ್ಸನ್ನು ತಟ್ಟುತ್ತದೆ...

  ಇಷ್ಟವಾಯ್ತು ಮೇಡಂ...

  ReplyDelete
 9. ಲೇಖನ ಓದುತ್ತ ತುಂಬಾ ಹಳೆಯ ನೆನಪುಗಳು ಕಣ್ಣಮುಂದೆ ಬಂದು ಮರೆಯಾಯಿತು ಹಾಗಿನ ಕಾಲದಲ್ಲಿ ಎಲ್ಲರಿಗೂ ಎಲ್ಲದಕ್ಕೂ ಸಮಯಾವಕಾಶವಿತ್ತು ಆಟ ಪಾಠಗಳಿಗೆ ಅಂತೆಯೇ ಇಲ್ಲದಂತ ಕಾಲವದು ಮರಕೋತಿ ಜಿನ್ನಿದಾಂಡು ಕಣ್ಣಾಮುಚ್ಚಾಲೆ ಕಪ್ಪೆಯೋಟ ಆದರೆ ದಿನಗಳು ಸರಿದಂತೆ ಎಲ್ಲರಿಗೂ ಸಮಯದ ಅಭಾವ ಬಂದು ಕಾಡುತ್ತಿದೆ ಆ ಕಾಲದ ಮದುರವಾದ ನೆನಪುಗಳಿಗೆ ನನ್ನದೊಂದು ಸಲಾಂ. ತುಂಬಾ ಉತ್ತಮವಾದ ಲೇಖನ ಧನ್ಯವಾದಗಳು ಮೇಡಂ....

  ReplyDelete
 10. ಎಷ್ಟು ಒಳ್ಳೆ ಸಂಭಾಷಣೆ ಮೇಡಂ
  ತಿಳಿಸಿದ್ದಕ್ಕೆ ಧನ್ಯವಾದಗಳು
  ಸ್ವರ್ಣ

  ReplyDelete
 11. ಪ್ರಭಾಮಣಿಯವರೆ,

  ನಿಮ್ಮ ಅನುಭವ ನನ್ನ ಬಾಲ್ಯದ ನೆನಪುಗಳನ್ನು ಹಸಿರಾಗಿಸಿತು......ನಾನು ಟಾಕೀಸಿಗೆ ಹೋಗಿ ಮೊದಲ ಸಿನಿಮಾ ನೋಡಿದ್ದು ಹತ್ತನೇ ತರಗತಿಯಲ್ಲಿರುವಾಗ ....ಅದು ಸಹ ಮನೆಯವರಿಗೆ ಗೊತ್ತಾಗದಂತೆ ಅಡಿಕೆ ಕದ್ದು ಮಾರಿ ಹೋಗಿದ್ದು.....ಮರೆಯಲಾಗದ ದಿನ.........ಚೆನ್ನಾಗಿದೆ ನಿಮ್ಮ ಲೇಖನ...

  ReplyDelete
 12. @ ಈಶ್ವರ್ ಭಟ್ ರವರೆ,
  @ಡಾ. ಕೃಷ್ಣ ಮೂರ್ತಿಯವರೆ,
  @ಪ್ರತಾಪ್ ರವರೆ,
  @ಬದರಿನಾಥ್ ರವರೆ,
  @ಅಶೋಕ್ ರವರೆ,
  @ಬಾಲು ರವರೆ,
  @ಸ್ವರ್ಣ ರವರೆ,
  @ ಮೌನರಾಗ ರವರೆ,.
  @ವಸಂತ್ ರವರೆ
  ನನ್ನ ಲೇಖನವನ್ನು ಓದಿ ನಿಮ್ಮ ಬಾಲ್ಯದ ನೆನಪುಗಳನ್ನು ಮೆಲುಕುಹಾಕುತ್ತಾ, ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ನಮನಗಳು.ಬರುತ್ತಿರಿ.

  ReplyDelete
 13. @ಆಜಾದ್ ರವರೆ
  ನಿಮ್ಮ ಬಾಲ್ಯದ ಹಳ್ಳಿಯ ನೆನಪುಗಳನ್ನು ಮೆಲುಕುಹಾಕುತ್ತಾ ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 14. ಜೀವನ ಕೆಲವೊಮ್ಮೆ ಒಂದು ಜೋಕಾಲಿಯಂತೆನಿಸುತ್ತದೆ, ಅದನ್ನು ಜೀಕಲು ಕಲಿಯಬೇಕು, ಜೀಕುವಾಗ ಮುಗ್ಗರಿಸಬಹುದು ಆದರೂ ಹಿಡಿದ ಹಗ್ಗ ಬಿಡದೇ ಅದನ್ನು ಜೀಕುವುದು ಜಾಣ್ಮೆ. ನಾವೆಲ್ಲಾ ಚಿಕ್ಕವರಿದ್ದಾಗ ಸಿನಿಮಾ ಬಹುದೂರದ ಮಾತು ಯಾಕಂದರೆ ನಮ್ಮದು ಕುಗ್ರಾಮ, ಅಲ್ಲಿಂದ ಸಿನಿಮಾಗೆ ಹೋಗುವುದೇ ಒಂದು ದೊಡ್ಡ ಯಾತ್ರೆ, ಹಾಗೂ ಕೆಲವು ಸಿನಿಮಾಗಳನ್ನು ನೋಡಿದ್ದಿದೆ, ರಾಜಕುಮಾರರ ಭಕ್ತಿಪ್ರಧಾನ ಚಿತ್ರಗಳನ್ನು ಎಲ್ಲರೂ ನೋಡುತ್ತಿದ್ದರು,ಅಂತಹವುಗಳಲ್ಲಿ ಭಕ್ತ ಕುಂಬಾರ ನನ್ನ ಮನದಾಳದಲ್ಲಿ ನೆಲೆನಿಂತಿದೆ. ಬಾಲ್ಯ ಮರೆಯಾದರೂ ನೆನಪುಗಳು ಮರೆಯಾಗುವುದಿಲ್ಲ.

  ReplyDelete
 15. ನಾನು ಸಂಭಾಷಣೆಗೆ ಹೆಚ್ಚು ಒತ್ತು ಕೊಡುವುದರಿಂದ ನನಗರ್ಥವಾಗದ ಭಾಷೆಯ ಚಿತ್ರಗಳನ್ನು ನೋಡುವುದಿಲ್ಲ,
  ಕನ್ನಡದ ಮಠ ಚಿತ್ರದಲ್ಲಿ ಉತ್ತಮ ಸಂಭಾಷಣೆಗಳಿವೆ.

  ReplyDelete