Thursday, December 22, 2011

ಮನದ ಅಂಗಳದಿ.........೭೧ . ಹುಟ್ಟಿದ ಹಬ್ಬ

ಅನಾದಿ ಕಾಲದಿಂದಲೂ ಶ್ರೀರಾಮನವಮಿ, ಶ್ರೀಕೃಷ್ಣ ಜನ್ಮಾಷ್ಟಮಿ,......ಮುಂತಾಗಿ ದೇವತೆಗಳ ಜನ್ಮದಿನವನ್ನು ಆಚರಿಸುತ್ತಾ ಬಂದಿದ್ದೇವೆ. ನಂತರದ ದಿನಗಳಲ್ಲಿ ಬುದ್ಧ ಪೂರ್ಣಿಮಾ, ಗುರುನಾನಕ್ ಜಯಂತಿ, ಗಾಂಧಿ ಜಯಂತಿ ಮುಂತಾಗಿ ಮನುಕುಲದ ಏಳಿಗೆಗಾಗಿ ಶ್ರಮಿಸಿದ ಪ್ರಸಿದ್ಧ ಚೇತನಗಳ ಹುಟ್ಟಿದ ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುತ್ತಿದ್ದೇವೆ. ಜೊತೆಗೇ ಕೆಲವು ಶ್ರೇಷ್ಠವ್ಯಕ್ತಿಗಳ ಜನ್ಮದಿನವನ್ನು ಅವರ ಪ್ರತ್ಯಕ್ಷ ಅಥವಾ ಪರೋಕ್ಷ ಅಭಿಪ್ರಾಯದಂತೆ ವಿಜ್ಞಾನಿಗಳ ದಿನ( ಸರ್ ಎಮ್. ವಿಶ್ವೇಶ್ವರಯ್ಯನವರ ಜನ್ಮದಿನ), ಮಕ್ಕಳ ದಿನಾಚರಣೆ(ಜವಹರಲಾಲ್ ನೆಹರೂ ರವರು ಹುಟ್ಟಿದ ದಿನ), ಶಿಕ್ಷಕರ ದಿನ(ಡಾ. ರಾಧಾ ಕೃಷ್ಣನ್ ರವರದ್ದು),.....ಎಂದು ಆಚರಿಸುತ್ತೇವೆ. ನಮ್ಮ ಹಾಗೂ ನಮ್ಮ ಮಕ್ಕಳ ಹುಟ್ಟಿದ ಹಬ್ಬಗಳನ್ನು ನಮ್ಮದೇ ಆತ್ಮೀಯರ ವಲಯದಲ್ಲಿ ಆಚರಿಸಿಕೊಂಡು ಸಂತಸ ಪಡುತ್ತೇವೆ. ಒಂದೊಂದು ಹುಟ್ಟಿದ ಹಬ್ಬವೂ ನಮ್ಮ ವಯಸ್ಸನ್ನು ಒಂದೊಂದೇ ವರ್ಷ ಏರಿಸುತ್ತಾ ಮುನ್ನಡೆಯುತ್ತಿದೆ. ಹಾಗೆ ನೋಡುವುದಾದರೆ ಜೀವನದ ಪ್ರತಿ ಸೆಕೆಂಡುಗಳೂ ನಮ್ಮ ವಯಸ್ಸಿಗೆ ತನ್ನದೇ ಕಿರುಕೊಡುಗೆಯನ್ನು ನೀಡುತ್ತಲೇ ಸಾಗುತ್ತದೆ. ಆದರೆ ನಮ್ಮನ್ನು ನಾವು ವರ್ಷಗಳಲ್ಲೇ ಅಳೆದುಕೊಳ್ಳುವವರಾದ್ದರಿಂದ ವರ್ಷಕ್ಕೊಮ್ಮೆ ಬರುವ ಹುಟ್ಟಿದ ಹಬ್ಬಕ್ಕೇ ಪ್ರಾಮುಖ್ಯತೆ!

ಇತ್ತೀಚಿನ ದಿನಗಳಲ್ಲಿ ‘ಹುಟ್ಟಿದ ಹಬ್ಬ’ ಎನ್ನುವ ಪದವೇ ನೇಪಥ್ಯಕ್ಕೆ ಸರಿದು `BIRTH DAY’ ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಕ್ಕಳು ಚಿಕ್ಕವರಿದ್ದಾಗ ಯಾವಾಗಲೂ ನನ್ನ HAPPY `BIRTH DAY’ ಯಾವಾಗ? ಎಂದೇ ಕೇಳುತ್ತಿದ್ದರು. ಆ ದಿನ ಸಾಮಾನ್ಯವಾಗಿ ಎಲ್ಲರೂ, `HAPPY `BIRTH DAY’ TO YOU’ ಎಂದು ಹೇಳುತ್ತಿದ್ದುದೇ ಅದಕ್ಕೆ ಕಾರಣವಾಗಿರಲೂ ಬಹುದು! ಹುಟ್ಟಿದ ಹಬ್ಬದ ದಿನ ಸಮೀಪವಾದಂತೆ ಅವರ ಸಂಭ್ರಮ ಹೇಳತೀರದು! ನನ್ನ ಸಹ ಬ್ಲಾಗಿಗರಾದ ಭಾಶೇ(ಸೌಮ್ಯಶ್ರೀ)ಯವರು ತಮ್ಮ ‘ಅರ್ಧ ಸತ್ಯ’ ಬ್ಲಾಗಿನಲ್ಲಿ ಪ್ರಕಟಿಸಿರುವ ಕವನ ‘BIRTH FESTIVAL( ಹುಟ್ಟು ಹಬ್ಬ) ದಲ್ಲಿ ‘ಹುಟ್ಟಿದ ಹಬ್ಬ’ ಪದದಲ್ಲಿ ಅಡಗಿರುವ ಸಂಭ್ರಮ, ಅದರ ವಿಶೇಷತೆಗಳನ್ನೂ, `BIRTH DAY’ ಯ ಸಾಧಾರಣತನವನ್ನೂ ಬಹಳ ಚೆನ್ನಾಗಿ ಕವನಿಸಿದ್ದಾರೆ. ಕವನದ ಕನ್ನಡ ರೂಪ ಹೀಗಿದೆ:

ಇದು ಹುಟ್ಟಿದ ‘ದಿನ’ವಲ್ಲ, ಇತರ ಸಾಧಾರಣ ದಿನಗಳಂತೆ

ಹುಟ್ಟು ಹಬ್ಬವೆನ್ನುತ್ತಾರೆ ಕನ್ನಡದಲ್ಲಿ

ಇದು ಕೆಲವೊಬ್ಬರ ಹಬ್ಬದ ದಿನ

ಸುತ್ತಿನವರು ಅವರ ಹುಟ್ಟಿಗಾಗಿಯೇ ಆಚರಿಸುವ ವಿಶೇಷ ದಿನ

ತಮಗೆ ಬೇಕೆನಿಸಿದಂತೆ ಈ ಜೀವಕಾಗಿ ಆಚರಿಸುತ

ಪ್ರತಿಯೊಬ್ಬರೂ ಅನನ್ಯ ವಿಭಿನ್ನವಾದ್ದರಿಂದ

ಈ ದಿನ, ಈ ಕ್ಷಣ ಈ ವ್ಯಕ್ತಿಗೆ ವಿಶೇಷವೆಂದರಿಯುತ

ಈತನ ಅಸ್ತಿತ್ವವ ಸಂಭ್ರಮಿಸುತಾ

ಕಾಣಿಕೆ ನೀಡಿದ ದೈವಕೆ ನಮಿಸುತ

ಈ ದಿನ ನನ್ನದು, ನನ್ನ ಹುಟ್ಟಿದ ದಿನ

ಅಮ್ಮ-ಅಪ್ಪ, ಕೆಳೆಯರು, ಕುಟುಂಬದೊಡನೆ ಕಳೆದದ್ದು,

ಹಿಂತಿರುಗಿ ಬರಲಾರದ ಆ ಕಳೆದ ಕಾಲದ ಚಿತ್ರಣ

ಈ ದಿನದವರೆಗಿನ ನನ್ನ ಬಾಳ ಪಯಣ

ಸಂತಸವೆನಿಸಿದೆ ಈದಿನ, ನನ್ನದೇ ಹಬ್ಬ ಆಚರಿಸುತ್ತಾ

ಈ ದಿನ ನನ್ನದು, ಆತ್ಮೀಯರು ಶುಭ ಕೋರಲು ನೆನೆವ ದಿನ

ವಂದನೆಗಳು ಇಂದಿನ ವಿಶೇಷತೆಯ ಸಂಭ್ರಮಿಸುವಂತೆ ಮಾಡಿದವರಿಗೆ

ಇತರ ವಾರ್ಷಿಕೋತ್ಸವ ಹಬ್ಬಗಳಂತಲ್ಲವಿದು,

ನನ್ನದೇ ಹುಟ್ಟಿದ ಹಬ್ಬ, ನನ್ನ ಸಂತಸದ ದಿನ!

ದಿನದ ಯಾಂತ್ರಿಕತೆಯಲ್ಲಿ, ಕೆಲಸಗಳ ಒತ್ತಡದಲ್ಲಿ ನಾವು ನಮ್ಮ ಆತ್ಮೀಯರ ಹುಟ್ಟಿದ ಹಬ್ಬಕ್ಕೆ ಶುಭಕೋರುವುದನ್ನೂ ಮರೆತೇ ಬಿಡುತ್ತೇವೆ. ಎಷ್ಟೋ ವೇಳೆ ನಮ್ಮ ಹುಟ್ಟಿದ ಹಬ್ಬವೂ ನೆನಪಿರುವುದಿಲ್ಲ! ಅದು ಹಾಗೆಯೇ ಆಯಿತು. ಈ ವರ್ಷ ನನ್ನ ತಮ್ಮನಿಗೆ ಹುಟ್ಟಿದ ಹಬ್ಬದ ಶುಭ ಕೋರುವಷ್ಟರಲ್ಲಿ ರಾತ್ರಿಯೇ ಆಗಿತ್ತು. ಅವನು ಮಾತನಾಡುತ್ತಾ, ‘....... ಈ ಭೂಮಿ ಜೊತೇಗೇ ಸೂರ್ಯನ್ನ ಆಗಲೇ ೫೫ಸಾರಿ ಸುತ್ತಿದೀನಿ ಅಂದ್ರೆ ಆಶ್ಚರ್ಯ ಆಗುತ್ತೆ ಅಲ್ವಾ?’ ಎಂದಿದ್ದ.

ವಿಶ್ವದ ಮಹಾನ್ ಚಿಂತಕ, ಕವಿ ಖಲೀಲ್ ಗಿಬ್ರಾನ್ ನನ್ನ ಹುಟ್ಟುಹಬ್ಬಎಂಬ ಕವನದಲ್ಲಿ ತಮ್ಮ ಆತ್ಮ ಕಥೆಯನ್ನೇ ಹೇಳಿಕೊಂಡಿದ್ದಾರೆ. ಅವರ ಕವನ ಓದುವಾಗ ತಮ್ಮ ಆಡಿದ ಮಾತುಗಳನ್ನು ಅದರಲ್ಲಿ ಕಂಡು ಅಚ್ಚರಿಯಾಯ್ತು! ಗಿಬ್ರಾನ್ ಪ್ಯಾರಿಸ್ಸಿನಲ್ಲಿ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾಗ ತಮ್ಮ ಇಪ್ಪತ್ತೈದನೆಯ ಹುಟ್ಟುಹಬ್ಬದಂದು ಬರೆದ ದೀರ್ಘ ಕವನದ ಮೊದಲ ಸಾಲುಗಳು ಹೀಗಿವೆ:

ಅಂದು, ನನ್ನ ತಾಯಿ ನನ್ನನ್ನು ಹೆತ್ತಂದು,

ಹೋರಾಟ ದ್ವಂದ್ವಗಳು ತುಂಬಿ ತುಳುಕುತಿಹ ನನ್ನನ್ನು

ಜೀವನದ ಹಸ್ತದಲಿ ಇರಿಸಿತಯ್ಯಾ ಮೌನ.

ಇರಿಸಿತೆನ್ನನು ಮೌನ, ಜೀವನದ ಹಸ್ತದಲಿ,

, ಐದು ಮೇಲಿಪ್ಪತ್ತು ಸಲ ಯಾತ್ರೆ ಸುತ್ತಿಹೆ ನಾನು

ಸೂರ್ಯನನು

ಎಷ್ಟು ಸಲ ಚಂದ್ರಮನು ಸುತ್ತಿ ಬಂದಿಹನೊ ನನ್ನನು

ಅರಿಯೆ ನಾನು,

ಇದು ಮಾತ್ರ ನಾ ಬಲ್ಲೆ, ನಾನಿನ್ನು ಅರಿತಿಲ್ಲ

ಬೆಳಕಿನ ರಹಸ್ಯಗಳನು

ನಾನಿನ್ನು ಅರಿತಿಲ್ಲ ಕತ್ತಲಿನ ಗೂಢಾರ್ಥಗಳನು!

ಪ್ರತಿ ಹುಟ್ಟುಹಬ್ಬವೂ ನಮ್ಮನ್ನು ಜೀವನದ ಮತ್ತೊಂದು ನಿಗೂಢ ತುದಿಗೆ ಕರೆದೊಯ್ಯುತ್ತಿರುತ್ತದೆ. ಆದರೆ ನಾವಿನ್ನೂ ಅರಿತುಕೊಳ್ಳಬೇಕಾದ ಜೀವನದ ರಹಸ್ಯಗಳು ಅಪಾರವಾಗಿಯೇ ಉಳಿದಿವೆ ಎನಿಸುವುದಿಲ್ಲವೆ?

8 comments:

 1. @ ಸೌಮ್ಯಶ್ರೀ ಯವರೇ,
  ನಿಮ್ಮ ಕವನವನ್ನು ಈ ಲೇಖನದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿದ್ದಕ್ಕಾಗಿ ಹಾಗೂ ಶೀಘ್ರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

  ReplyDelete
 2. ನಮ್ಮನ್ನು ನಾವು ಅರಿಯೋಕೆ ಬದುಕುವ ದಿನಗಳು ಮಾತ್ರವಷ್ಟೇ ಸಾಲದು ಅನ್ನೋ ಅಭಿಪ್ರಾಯ ನನ್ನದು.. ಉತ್ತಮ ಲೆಖನ... ಧನ್ಯವಾದಗಳು ಕವನಗಳನ್ನಾ ಹಂಚಿಕೊಂಡದಕ್ಕೆ...

  ReplyDelete
 3. ಪ್ರಭಾಮಣಿ ಮೇಡಂ;ಹುಟ್ಟು ಹಬ್ಬದ ಬಗೆಗಿನ ನಿಮ್ಮ ಲೇಖನ ಸ್ವಲ್ಪ ಆಳವಾಗಿ ಯೋಚಿಸುವಂತೆ ಮಾಡಿತು.ಮಾಮೂಲಾಗಿ ಯೋಚಿಸುವುದಾದರೆ ಈ ದೇಹವನ್ನು ಧರಿಸಿ ಬಂದ ಈ ದಿನವನ್ನು ನನ್ನ ಹುಟ್ಟು ಹಬ್ಬ ಎಂದು ಆಚರಿಸಿ ಸಂಭ್ರಮ ಪಡುವುದು ಸಹಜ.ಆಧ್ಯಾತ್ಮಿಕವಾಗಿ ಯೋಚಿಸುವುದಾದರೆ ನಮ್ಮ ಅವಿನಾಶಿ ಆತ್ಮಕ್ಕೆ ಹುಟ್ಟೂ ಇಲ್ಲ,ಸಾವೂ ಇಲ್ಲ.ಇದು ಅನಾದಿ,ಅನಂತವಲ್ಲವೇ? ಡಿ.ವಿ.ಜಿ.ಯವರ ಕಗ್ಗದ ಸಾಲುಗಳು ನೆನಪಿಗೆ ಬಂದವು."ಹೊಸ ಹೊಸಬನಾಗುವನು ಅನುಕ್ಷಣವು ಮಾನವನು,ವಸುಧೆಯಾ ಮೂಸೆಯಲಿ ಪುಟ ಪಾಕವಾಂತು!ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೇ!ಕಸವೆಲ್ಲ ಕಳೆದವನು-ಮಂಕುತಿಮ್ಮ!".ನಮ್ಮ ಮನಕ್ಕೆ ಅಂಟಿದ ಕಸವನ್ನು ಕಳೆಯುತ್ತಾ ಪ್ರತಿ ಕ್ಷಣವೂ ಹೊಸ ಹುಟ್ಟು ಪಡೆಯುತ್ತಾ,ಪ್ರತಿ ಕ್ಷಣವೂ ಹುಟ್ಟು ಹಬ್ಬವೆನ್ನುತ್ತಾ ಸಂಭ್ರಮಿಸುವುದು ಹೆಚ್ಚು ಅರ್ಥಪೂರ್ಣವಲ್ಲವೇ? ನಮಸ್ಕಾರ.

  ReplyDelete
 4. ಹುಟ್ಟಿದ ಹಬ್ಬಗಳ ಬಗ್ಗೆ ಒಳ್ಳೆಯ ವಿಶ್ಲೇಷಣೆ ಮೇಡಂ.

  ReplyDelete
 5. ಪ್ರಭಾಮಣಿಯವರೆ,
  ಹುಟ್ಟುಹಬ್ಬದ ಚಿಂತನೆ ಸಾರ್ಥಕವಾಗಿ ಮೂಡಿ ಬಂದಿದೆ. ಸೌಮ್ಯಶ್ರೀಯವರ ಕವನ ಚೆನ್ನಾಗಿದೆ. ನಿಮ್ಮಿಬ್ಬರಿಗೂ ಅಭಿನಂದನೆಗಳು.

  ReplyDelete
 6. Prabhamani yavre,

  Soumya Shree yavra kavana haagi nimma Lekhana eardu superr...

  ReplyDelete
 7. @ ಸುನಾಥ್ ರವರೆ,
  @ಡಾ. ಕೃಷ್ಣ ಮೂರ್ತಿಯವರೆ,
  @ಪ್ರತಾಪ್ ರವರೆ,
  @ಬದರಿನಾಥ್ ರವರೆ,
  @ಅಶೋಕ್ ರವರೆ,
  ನನ್ನ ಲೇಖನವನ್ನು ಇಷ್ಟಪಟ್ಟು, ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ನಮನಗಳು.

  ಬರುತ್ತಿರಿ.

  ReplyDelete