Wednesday, December 14, 2011

ಮನದ ಅಂಗಳದಿ.........೬೯. ‘ದಿಗಂಬರ’ ಕವಿಗಳು


ನನ್ನ ಪುಸ್ತಕದ ಸಂಗ್ರಹವನ್ನು ಗಮನಿಸುತ್ತಿದ್ದಾಗ ಎಂದೋ ಕೊಂಡು ಸೇರಿಸಿದ್ದ ಡಾ. ಆರ್.ವಿ.ಎಸ್. ಸುಂದರಂ ಅವರ ‘ದಿಗಂಬರ ಕವಿಗಳು’ ಎನ್ನುವ ಒಂದು ಪುಟ್ಟ ಪುಸ್ತಕ ಸಿಕ್ಕಿತು. ಬಹುಷಃ ಅದನ್ನು ಕೊಂಡಾಗ ಅದು ಜೈನ ಕವಿಗಳ ಬಗೆಗಿನ ಪುಸ್ತಕ ಎಂದೇ ಕೊಂಡಿರಬಹುದು. (ಈವರೆಗೂ ಎಂದರೆ ಅದರ ಪುಟಗಳನ್ನು ತಿರುಗಿಸುವವರೆಗೂ ಹಾಗೇ ಭಾವಿಸಿದ್ದೆ!) ಹಗುರವಾದ ಪುಟ್ಟ ಪುಸ್ತಕವಾದ್ದರಿಂದ ಸಮಯ ದೊರೆತಾಗ ಓದಲೆಂದು ನನ್ನ ವ್ಯಾನಿಟಿ ಅಲ್ಲ ಅತ್ಯವಶ್ಯಕ (ನೆಸೆಸಿಟಿ) ಚೀಲದೊಳಗೆ ಸೇರಿಸಿದ್ದೆ. ಪುಸ್ತಕವನ್ನು ಓದಲಾರಂಭಿಸಿದಾಗ ನನ್ನ ಊಹೆಯೆಲ್ಲಾ ಬುಡಮೇಲಾಗಿ ಅಚ್ಚರಿ ಮೂಡಿತು! ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ:
ಭಾರತದಲ್ಲಿ ‘ದಿಗಂಬರ’ ಎಂಬುದು ಪ್ರಸಿದ್ಧ ಜೈನ ಸಂಪ್ರದಾಯ. ದಿಗಂಬರತ್ವ ಅಥವಾ ನಗ್ನತೆ ದೈಹಿಕವಾಗಿರಬಹುದು ಅಥವಾ ತಾತ್ವಿಕವಾಗಿರಬಹುದು. ಜೈನ ಸಂಪ್ರದಾಯದಲ್ಲಿ ಈ ಎರಡೂ ರೀತಿಯ ದಿಗಂಬರತ್ವ ಅಸ್ತಿತ್ವದಲ್ಲಿದೆ. ತೆಲುಗು ಸಾಹಿತ್ಯದ ಮಟ್ಟಿಗೆ ದಿಗಂಬರತ್ವಕ್ಕೆ ಸಾರ್ಥಕ ನಿದರ್ಶನವೆಂದರೆ ವೇಮನ. ಬಹುಶಃ ೧೫ನೆಯ ಶತಮಾನಕ್ಕೆ ಸೇರಿದ ಈ ಕವಿ ದಿಗಂಬರನಾಗಿಯೇ ಸಂಚರಿಸುತ್ತಿದ್ದನೆಂಬ ಪ್ರತೀತಿ. ಅವನ ಪದ್ಯಗಳಲ್ಲೂ ಅಷ್ಟೇ ದಿಗಂಬರವಾಗಿ ಭಾವನೆಗಳು ಮೂಡಿ ಬಂದವು. ಮೂಢಾಚಾರಗಳನ್ನು, ಅಸಮಾನತೆಗಳನ್ನು , ಮೂರ್ಖತನವನ್ನು ನಗ್ನವಾಗಿ ಟೀಕಿಸಿದ ಮೊದಲನೆಯ ತೆಲುಗು ಕವಿ ವೇಮನ.
೧೯೬೫, ಮೇ ೮ರಂದು ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಆರು ಜನ ತರುಣ ಕವಿಗಳು ದಿಗಂಬರ ಕವಿಗಳೆಂಬ ಹೆಸರಿನಲ್ಲಿ ಒಂದು ಕವನ ಸಂಕಲನವನ್ನು ಪ್ರಕಟಿಸಿದರು. ಇವರದು ದೈಹಿಕ ದಿಗಂಬರತ್ವವಲ್ಲ; ಮಾನಸಿಕ ದಿಗಂಬರತ್ವ. ಎಂದರೆ ಈ ಪ್ರಪಂಚದ ಎಲ್ಲ ಆಚ್ಛಾದನೆಗಳನ್ನು ತೊಲಗಿಸಿ ನಿತ್ಯ ಸಚೇತನ ಆತ್ಮಸ್ಫೂರ್ತಿಯಿಂದ ಬಾಳುವುದೇ ಗುರಿಯಾಗಿಟ್ಟಕೊಂಡ ತರುಣರ ಗುಂಪೇ ದಿಗಂಬರ ಕವಿಗಳು. ಉಸಿರಾಡುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ತಾದ್ಯಾತ್ಮ್ಯ ಪಡೆದು ವ್ಯಕ್ತಿಯ ಅಸ್ತಿತ್ವದ ಪರಿರಕ್ಷಣೆಗಾಗಿ ಸಮಾಜದಲ್ಲಿರುವ ಅಸಂತೋಷವನ್ನು, ಅತೃಪ್ತಿಯನ್ನು ಅಕ್ಷರಗಳಲ್ಲಿ ವ್ಯಕ್ತೀಕರಿಸಲು ಹೊರಟವರೇ ದಿಗಂಬರ ಕವಿಗಳು. ಇವರು ತಮ್ಮ ಕವನಗಳನ್ನು ‘ದಿಕ್?ಗಳೆಂದು ಕರೆಯಬೇಕೆಂದರು. ಅರಮನೆಗಳಲ್ಲಿ, ಅಕಾಡೆಮಿಗಳಲ್ಲಿ ಭೋಗವಸ್ತುವಾಗಿ, ಕಾಲಕ್ಷೇಪ ವಿಷಯವಾಗಿ ಬಿದ್ದಿರುವ ಕಾವ್ಯವನ್ನು ಮುಕ್ತಗೊಳಿಸಿ ರಸ್ತೆಗೆ ಎಳೆದು ತಂದಿರುವುದಾಗಿ ದಿಗಂಬರ ಕವಿಗಳು ಘೋಷಿಸಿದರು. ಜಾತಿಮತಗಳ ಗುರುತುಗಳನ್ನು ಬಿಟ್ಟು ಕೆಚ್ಚೆದೆದೆಯ ತರುಣ ಕವಿಗಳಿಗೆ ಪ್ರತೀಕವಾಗಿ ಹೊಸಹೆಸರುಗಳನ್ನು ಇಟ್ಟುಕೊಂಡಿರುವುದಾಗಿ ತಿಳಿಸಿದರು. ನಡುರಾತ್ರಿ ಬದಲಾವಣೆಯ ಮತ್ತು ಶುಭೋದಯದ ಸಂಕೇತ. ನಡುರಾತ್ರಿಯಲ್ಲಿ, ನಡುಬೀದಿಯಲ್ಲಿ ಒಬ್ಬ ಅತಿ ಸಾಮಾನ್ಯ ವ್ಯಕ್ತಿಯಿಂದ ಈ ಕವನ ಸಂಕಲನವನ್ನು ಬಿಡುಗಡೆ ಮಾಡಿಸಿದರು!
ದಿಗಂಬರ ಕವಿಗಳು ತಮ್ಮ ಧ್ಯೇಯೋದ್ದೇಶವನ್ನು ಹೀಗೆ ತಿಳಿಸುತ್ತಾರೆ, ‘ಭಯದಿಂದ ತತ್ತರಿಸಿ, ದಾಸ್ಯಕ್ಕೊಳಗಾಗಿ, ದುರ್ಭರವಾದ ಸಮಾಜವೆಂಬ ಕೊಳಚೆಗುಂಡಿಯಲ್ಲಿ ಬಿದ್ದಿರುವ ಜನಸಮೂಹಕ್ಕೆ ಹೊಸ ರಕ್ತವನ್ನು ಇಂಜೆಕ್ಟ್ ಮಾಡುವುದು ನಮ್ಮ ಉದ್ದೇಶ. ಆನರ ಅವಿದ್ಯೆ, ಅಜ್ಞಾನ, ಅಶಕ್ತತೆಗಳ ಆಧಾರದಿಂದ ದೇಶವನ್ನು ಲೂಟಿಮಾಡಲು ಪಳಗಿದ ರಾಜಕಾರಣಿಗಳು ಮತ್ತು ಸಮಾಜದ ವಿವಿಧ ಶೋಷಕ ವರ್ಗದವರು ಪ್ರಜೆಗಳ ಮೇಲೆ ಹೇರುತ್ತಿರುವ ಕುಷ್ಠ ವ್ಯವಸ್ಥೆಯನ್ನು ವಿರೋಧಿಸಿ ಹಾಕಿದ ಕೇಕೆಗಳನ್ನು ಧೈರ್ಯವಾಗಿ, ಸ್ಥೈರ್ಯವಾಗಿ ಪುಟಗಳಲ್ಲಿ ಹಿಡಿದಿಡಲು ಯತ್ನಿಸಲಾಗಿದೆ. ಇಲ್ಲಿ, ಈ ದೇಶದಲ್ಲಿ, ಈ ಪ್ರಪಂಚದಲ್ಲಿ ಉಸಿರಾಡುವ ಪ್ರತಿ ಮಾನವನ ಅಸ್ತಿತ್ವಕ್ಕಾಗಿ ತಾಪದಿಂದ ಆತನ ಭವಿಷ್ಯವನ್ನು ಚಿಂತಿಸಿ ಬಿಕ್ಕಿ ಬಿಕ್ಕಿ ಅತ್ತು ಹುಚ್ಚೆದ್ದು ಪ್ರವಚಿಸಿದ ಕಾವ್ಯವಿದು. ಈ ಕಾವ್ಯವನ್ನು ಓದಿದ ತಕ್ಷಣ ಗೇಲಿ ಮಾಡಬಹುದು, ಅಸಹ್ಯ ಪಡಬಹುದು. ಪ್ರಾಚೀನ ಕಾಲದಲ್ಲೇ ನಿಜವಾದ ಕಾವ್ಯ ನಿಂತು ಹೋಯಿತೆಂದು ಅಭಿಪ್ರಾಯ ಪಡಬಹುದು. ಸವೆದು, ಕೊಳೆತು, ದುರ್ನಾತ ಬೀರುತ್ತಿರುವ ಮಾತುಗಳನ್ನು, ಸಮಾಸಗಳನ್ನು, ಭಾವಗಳನ್ನು, ಹಿಡಿದು ನೇತಾಡುತ್ತಿರುವ ಜನರಿಗಾಗಿ ಈ ನಾಲ್ಕು ಮಾತುಗಳು.’
ದಿಗಂಬರ ಕವಿಗಳು ತಮ್ಮ ಹೆಸರುಗಳನ್ನು ಬಿಟ್ಟು ಹೊಸ ತರಹದ ಹೆಸರುಗಳನ್ನಿಟ್ಟುಕೊಂಡರು. ಮಹಾಸ್ವಪ್ನ( ಕಮ್ಮಿಶೆಟ್ಟಿ ವೆಂಕಟೇಶ್ವರರಾವ್) ‘ಮರಳುಗಾಡು’ ಎಂಬ ಕವನದಲ್ಲಿ,
‘ಕಾಲವೊಂದು ಕೊನೆಮೊದಲಿಲ್ಲದ ಮರುಭೂಮಿ
ಇದು ಉದ್ದನೆಯ ಕಾಲಿರುವ ಒಂಟೆಗಳ ದಾರಿ
ಈ ಲೋಕ ಕೆಲವರಿಗೆ ಮಾತ್ರ ಹೆದ್ದಾರಿ.’ ಎಂದರು.
ನಗ್ನಮುನಿ(ಎಂ.ಎಚ್. ಕೇಶವರಾವ್) ‘ಸುಖರೋಗಿ?ಯಲ್ಲಿ:
‘ಡಿಯರ್ ಸ್ಕೌಂಡ್ರಲ್
ನಾಲ್ಕು ಗೋಡೆಗಳ ನಡುವೆ ಒಳ್ಳೆತನ ಹೂತಿಟ್ಟು
ಕಣ್ಣೀರನ್ನು ಗುಲಾಬಿಗಳಿಗೆ ಗೊಬ್ಬರವಾಗಿ ಬಳಸಿ
ಹಚ್ಚನೆಯ ಹಸುಗೂಸುತನ ಬೆಚ್ಚನೆ ಯೌವನ
ದುರಂತಗಳಲ್ಲಿ ಕಳೆದುಕೊಂಡು
ದುರಂತನಾಯಕನಂತೆ
ಮೇಲೆತ್ತದ ಪರದೆಯಂತೆ ಪಕಪಕ ನಗುತ್ತಿರುವ
ನಿನ್ನ ಕಂಡರೆ ಕನಿಕರ’ ಎನ್ನುತ್ತಾರೆ.
ದಿಗಂಬರತ್ವ ಎಂಬುದು ಆತ್ಮವಂಚನೆಯಾಗಿರಬಾರದು, ಆತ್ಮದ ಆವಿಷ್ಕಾರ ಮಾಡುವಂತಿರಬೇಕು ಎನ್ನುವುದನ್ನು ಆಕವನದಲ್ಲಿಯೇ ಹೀಗೆ ಸ್ಪಷ್ಟಪಡಿಸುತ್ತಾರೆ:
ಏಳು ಎದ್ದೇಳು
ಮುಸುಕು ತೆಗಿ
ದುರ್ಗಂಧ ಬೀರುವ ಈ ಬಟ್ಟೆಗಳನ್ನು ಬಿಚ್ಚಿ
ಆತ್ಮದ ಮುಂದೆ ನಿಂತು ನಿನ್ನ ನೀನು ನೋಡಿಕೊ
ಮನುಷ್ಯನಂತೆ ಒಳ್ಳೆಯವನಾಗಿ
ಆಕಾಶದಂತೆ ಅವನಿಯಂತೆ ಬಾಳು.
ಜ್ವಾಲಾಮುಖಿ(ವೀರರಾಘವಾಚಾರ್ಯಲು)ಯವರ ‘ಶಸ್ತ್ರಚಿಕಿತ್ಸೆ’ ಎಂಬ ಕವಿತೆಯಲ್ಲಿಯಲ್ಲಿ ಹೀಗಿದೆ:
‘ವಿಶ್ವವಿದ್ಯಾಲಯಗಳ ನಿದ್ದೆ ಮಾತ್ರೆಗಳು
ಪುಣ್ಯಕ್ಷೇತ್ರಗಳ ವ್ಯಾಪಾರ ಹುಂಡಿ ಲೂಟಿ ಮುಡಿಪುಗಳು
ಮಠಾಧಿಪತಿಗಳ ಮಹಾ ಮಹಾ ನೈವೇದ್ಯಗಳು
ಭಾರತಮಾತೆಯನ್ನು ಶಾಶ್ವತ ರೋಗಿಯನ್ನಾಗಿಸಿವೆ.’
ಚೆರಬಂಡರಾಜು(ಬದ್ದಂ ಭಾಸ್ಕರರೆಡ್ಡಿ) ‘ಎದ್ದೇಳು’ ಎಂದು ಹೊಡೆದೆಬ್ಬಿಸುವವರೇ ಹೊರತು ಜೋಗುಳ ಹಾಡುವ ಮೋಜುಗಾರನಲ್ಲ!
‘ನಿನ್ನ ಗುರಿಯೆಂಬ ಸೂರ್ಯನನ್ನು ಮಾತ್ರ
ಹಿಡಿತದಿಂದ ಜಾರಿಬಿಡಬೇಡ
ಪ್ರಾಣವನ್ನು ಪಣವಾಗಿಟ್ಟಾದರೂ
ಈ ಜಗತ್ತಿಗೆ ಮಾನವತಾ ಭಿಕ್ಷೆ ನೀಡು
ಏಳು, ಎದ್ದೇಳು.’
ಭೈರವಯ್ಯ(ಮನಮೋಹನ ಸಹಾಯ್) ಅವರ ‘ತುಟ್ಟಿಭಿಕ್ಷೆ’ ಎಂಬ ಕವನದಲ್ಲ ತುಟ್ಟಿ ಭತ್ಯಕ್ಕಾಗಿ ಉದ್ಯೋಗಿಗಳು ಹಂಬಲಿಸುವ ರೀತಿ, ಭತ್ಯ ಹೆಚ್ಚಿಸಿ ಬಾಯಿಮುಚ್ಚಿಸುವ ಸರ್ಕಾರದ ನೀತಿ ಪರಿಣಾಮಕಾರಿಯಾಗಿ ಮೂಡಿಬಂದಿದೆ:
‘ತಮ್ಮಾ ಹೆದರಬೇಡ
ತುಟ್ಟಿಭತ್ಯೆ ಹೆಚ್ಚಲಿದೆ
ಹೆಬ್ಬಾವಿನ ಬಾಯೊಳಗೆ ನೊಣದಮರಿ ನುಗ್ಗಲಿದೆ!’
ನಿಖಿಲೇಶ್ವರ್(ಯಾದವರೆಡ್ಡಿ) ‘ನನ್ನ ದೇಶದಲ್ಲಿ ನಾನು ಒಬ್ಬಂಟಿ’ಯಲ್ಲಿ ಸಾಮಾಜಿಕ ಕಳಕಳಿಯಿರುವ ಜನ ತಮ್ಮ ದೇಶ ಉಳಿಸಿದ ಮಹಾ ಸಮಸ್ಯೆಗಳ ನೇಣುಕುಣಿಕೆಗೆ ಸಿಕ್ಕಿ ಹೇಗೆ ನೆರಳುತ್ತಿದ್ದಾರೆಂಬುದನ್ನು ತಿಳಿಸಿದ್ದಾರೆ:
‘ಗಾಳಿಗೆ ಆರಿಹೋದ ದೀಪಗಳ ಬತ್ತಿಗಳು ಮಾತ್ರ
ಉಳಿದ ಕಗ್ಗತ್ತಲಲ್ಲಿ
ಸಾಲಾಗಿ ನಿಂತ ವಿದ್ಯುದ್ದೀಪಗಳಲ್ಲಿ
ನಾನು ನನ್ನ ದೇಶಕ್ಕೆ ಪರದೇಶಿ
ಆಲಿಸುತ್ತಿರುವ ಒಬ್ಬಂಟಿ
ಸ್ನೇಹ ನೀಡದ ದೇಶದಲ್ಲಿ
ಸ್ನೇಹವಿಲ್ಲದ ಪ್ರತಿಯೊಬ್ಬನೂ ಒಂದೊಂದು ದ್ವೀಪ.’
ದಿಗಂಬರ ಕವಿಗಳು ಅಸಭ್ಯ, ಅಸಹ್ಯ, ಅಶ್ಲೀಲ ಪದಜಾಲದಿಂದ ಕೋಪವನ್ನುಂಟುಮಾಡುತ್ತಾರೆಯೇ ಹೊರತು ಕನಿಕರವನ್ನಲ್ಲ ಎಂದವರೂ ಉಂಟು. ಆದರೂ ಇವರ ರಚನೆಗಳು ಇಂಗ್ಲಿಷ್, ಕನ್ನಡ ಹಾಗೂ ಇನ್ನೂ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿವೆ. ಕನ್ನಡದ ಕೆಲವು ಬಂಡಾಯ ಸಾಹಿತಿಗಳಿಗೆ ದಿಗಂಬರ ಕಾವ್ಯದ ಅನುವಾದ ಪ್ರೇರಣೆ ನೀಡಿದೆ.


7 comments:

 1. ಇದನ್ನು ಓದಿದಾಗ ಲೆಬೆನಾನ್ ದೇಶದ ಕವಿ ಖಲೀಲ್ ಗಿಬ್ರಾನ್ ನ ನೆನಪಾಯಿತು.. ಆತ ಕೂಡ ಸಮಾಜದ ಕೆಲವು ಉದ್ಧಟತನಗಳ ವಿರುದ್ಧ ಮತ್ತು ಧೋರಣೆಗಳ ವಿರುದ್ಧ ತನ್ನ ಕವಿತೆ ಮತ್ತು ಹೆಚ್ಹಾಗಿ ಕಥೆಗಳಲ್ಲಿ ನಿರೂಪಿಸಿದ್ದಾನೆ...

  ReplyDelete
 2. ದಿಗಂಬರ ಕವಿಗಳ ಬಗೆಗೆ ತುಂಬ ಉತ್ತಮ ಲೇಖನ. ಧನ್ಯವಾದಗಳು.

  ReplyDelete
 3. Prabhamaniyavre...

  Uttama Lekhana....

  ReplyDelete
 4. "ದಿಗ೦ಬರ ಕವಿಗಳ" ಬಗ್ಗೆ ಒ೦ದು ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ ಧನ್ಯವಾದಗಳು. ದಿಗ೦ಬರ ಕವಿಗಳ ಸಾಲುಗಳು ಕೂಡ ಬಹು ಇಷ್ಟವಾಯಿತು..:)

  ReplyDelete
 5. ಮೇಡಂ;'ದಿಗಂಬರ ಕವಿಗಳ'ಬಗ್ಗೆ ನನಗೆ ತಿಳಿದಿರಲಿಲ್ಲ.ಸಮಾಜದ ಬೂಟಾಟಿಕೆಯ ಶಿಷ್ಟಾಚಾರಕ್ಕೆ ಸಡ್ಡು ಹೊಡೆದು ಎದೆಸೆಟೆಸಿ ನಿಂತ ಧೀರ ದಿಗಂಬರರು ಇವರು!ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದಗಳು.ನಮಸ್ಕಾರ.

  ReplyDelete
 6. ಉತ್ತಮ ಮಾಹಿತಿ ಮೇಡಂ, ಧನ್ಯವಾದಗಳು.

  ReplyDelete
 7. ಹೊಸದೊಂದು ಬರಹವಿದೆ.ಬ್ಲಾಗಿಗೆ ಭೇಟಿಕೊಡಿ.ನಮಸ್ಕಾರ.

  ReplyDelete