Saturday, March 31, 2012

ಮಡಿಕೆಗಳಡಿಯಲ್ಲಿ.............

ಬೀರುವಿನಡಿ
ಭದ್ರವಾಗಿರುವ
ಹಳೆಸೀರೆಗಳ
ಮಡಿಕೆಗಳನೇಕೋ
ಬಿಡಿಸಲಾಗುತ್ತಲೇ ಇಲ್ಲ
ಪುರಸೊತ್ತು
ಸಮೀಪಿಸುತ್ತಿದ್ದರೂ
ಇಳಿಹೊತ್ತು!

ಎ೦ದೋ ಇಟ್ಟವುಗಳ
ಜೊತೆಗೆ
ಒ೦ದೊ೦ದೇ ಪೇರಿಸಿ
ಪದರ ಪದರಗಳಡಿ
ಹೂತು ಹೋಗುತ್ತಿರುವ ಭಾವ
ಆದರೂ...
ಹೊಸ ಹೊಸವು
ಸೇರುವುದಕ್ಕಿಲ್ಲ ಅಭಾವ

ಕೈಗೆಟುಕದ೦ತೆ ಅ೦ಗಡಿಯ
ಕಪಾಟಿನಲ್ಲಿದ್ದಾಗಲಷ್ಟೇ
ನೂತನ
ಒಮ್ಮೆ ತನ್ನದಾಗಿಸಿ
ಬೀರು ಸೇರಿದಾಕ್ಷಣವೇ
ಹಳೆತನದ ವಹನ
ಹೊಸತನದ ದಹನ!

ತನ್ನದಾಗುತ್ತಿರುವ ರಾಶಿಗಳ
ಅರಿಯಲಾಗದ ಮೌಲ್ಯ
ಮಿಲಿಯ-ಮಿಲಿಯ ವರ್ಷಗಳ
ಪೂರ್ವದಲೋ ಎ೦ಬ೦ತೆ
ಮಡಿಕೆಗಳಡಿ
ಪಳೆಯುಳಿಕೆಯಾದ ಬಾಲ್ಯ!

ಮಡಿಕೆಗಳ ಮಡಿಲಲ್ಲೇ
ಮಗುವಾಗುವ
ಚಡಪಡಿಕೆಯಲಿ
ಹುದುಗಲಿಚ್ಚಿಸುವ ಮನಕೆ
ಕೆಲ ಕ್ಷಣಗಳನಾದರೂ
ತನ್ನದಾಗಿಸಿಕೊಳ್ಳುವ
ತವಕ
ಸಾಥ೯ಕವೆನಿಸಿಕೊಳ್ಳಲು ಬದುಕ!

Tuesday, March 27, 2012

‘ಆನಂದ’ ಸಾಗರ.........

‘ಹಾರಿದೆ ಸಾಗರದೊಳಗೆ
ಸುಖವನ್ನೇ ಬಾಚುತ್ತೇನೆಂದು,
ಸಮೃದ್ಧ ಮುತ್ತು ಹವಳ
ಮುತ್ತುವ ಶಾರ್ಕ ವೇಲ್
ನಿಲ್ಲದ ಉಬ್ಬರವಿಳಿತ
ನೀರೂ ಉಪ್ಪುಪ್ಪು!’
ಇದು ಸುಮಾರು ಎಂಟು ವರ್ಷಗಳ ಹಿಂದೆ ಬರೆದಿದ್ದ ‘ಸಂಸಾರ’ವೆಂಬ ‘ಹನಿ’! ‘ಸಂಸಾರ’ವೆಂದರೇ ಬೆದರಿ ಬೆಚ್ಚಿ ಬರೆದ ಹನಿ ಇದು ಎಂದೇನೂ ಅರ್ಥವಲ್ಲ! ನಾವು ಜನ್ಮತಾಳುವುದೇ ಒಂದು ಸಂಸಾರದೊಳಗೆ. ನಮಗೆ ಬುದ್ಧಿ ತಿಳಿಯುವ ಮೊದಲೇ, ಅರಿವಿಲ್ಲದೇ ಅಪ್ಪ-ಅಮ್ಮ, ಅಕ್ಕ-ತಮ್ಮ, ಮುಂತಾದ ಸಂಬಂಧಗಳ ನಡುವೆಯೇ ಜೀವನವು ಅರಳಲಾರಂಭಿಸುತ್ತದೆ. ಸುತ್ತಲೂ ಹಬ್ಬುವ ಬಂಧು-ಬಾಂಧವರ ನಡುವೆ ನಿಜಕ್ಕೂ ನಾವು ಸಾಗರದ ಬಿಂದುವೇ ಆಗಿರುತ್ತೇವೆ, ಬೃಹತ್ತಾಗುವ ಸಾಮರ್ಥ್ಯವನ್ನೂ ಪಡೆದಿರುತ್ತೇವೆ. ಆದರೆ ‘ನನ್ನ’ತನವನ್ನು ಸ್ಥಾಪಿಸುವ ಭರದಲ್ಲಿ ದಿನೇದಿನೇ ಕುಬ್ಜರಾಗಲಾರಂಭಿಸುತ್ತೇವೆ! ಹೀಗೆ ಒಂದು ಸಂಸಾರದೊಳಗೇ ಅವತರಿಸಿ ಅದರ ಬಲೆಯೊಳಗೆ ಒಂದಾಗಿರುವ ನಾವು ಬೆಳೆದಂತೆ ನಮ್ಮದೇ ಒಂದು ಸಂಸಾರವನ್ನು ಸ್ಥಾಪಿಸುವುದನ್ನು(ಕಟ್ಟಿಕೊಳ್ಳುವುದನ್ನು!) ಕನಸಲಾರಂಭಿಸುತ್ತೇವೆ!
ನಿಜಕ್ಕೂ ಸಮಸ್ಯೆ ಎಂದುಕೊಂಡರೆ ಅದು ಪ್ರಾರಂಭವಾಗುವುದೇ ಅಲ್ಲಿಂದ. ಪರಸ್ಪರ ಹೊಂದಾಣಿಕೆ, ಕೇವಲ ಎರಡು ವ್ಯಕ್ತಿಗಳದ್ದಲ್ಲ, ಒಬ್ಬಾಕೆ ಒಬ್ಬಾತನ ಕುಟುಂಬದವರನ್ನೆಲ್ಲಾ ಅನುಸರಿಸಬೇಕಾದ ಪರಿಸ್ಥಿತಿ. ಮೊದಲು ಹೆಣ್ಣುಮಕ್ಕಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗದಿದ್ದಾಗ ಇದು ಸಮಸ್ಯೆಯೇ ಎನಿಸಿದ್ದಿರಬಹುದು. ಇನ್ನೂ ಕೆಲವು ಕಡೆಗಳಲ್ಲಿ ಇದೇ ವಾತಾವರಣ ಪ್ರಸ್ತುತವಿರಲೂ ಬಹುದು. ಆದರೂ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದೆ ಎಂದುಕೊಳ್ಳುವಲ್ಲಿಯೇ ಅಸಮತೋಲನದ ಛಾಯೆ ಆವರಿಸಲಾರಂಭಿಸಿದೆ......... ಎನ್ನುವಂಥಾ ಗುರುತರವಾದ(!) ಆಲೋಚನೆ ಮಾಡಲೂ ಆಸ್ಪದ ಕೊಡಲಾರದಷ್ಟು ಕೆಲಸದ ಒತ್ತಡ, ಬದುಕ ಯಾಂತ್ರಿಕತೆ ಮಾನಸಿಕ ಜಡತ್ವವನ್ನುಂಟುಮಾಡುತ್ತಿದೆ.
ನಾವು ಒಂದು ಸಮಸ್ಯೆ ಎಂದುಕೊಳ್ಳುವುದನ್ನು ‘ಸಮಸ್ಯೆ’ ಎಂದುಕೊಂಡಷ್ಟೂ ಜಟಿಲವೇ ಆಗುತ್ತದೆ. ಅದರ ಪರಿಹಾರದತ್ತ ಮನಸ್ಸನ್ನು ಕೇಂದ್ರೀಕರಿಸಿ ಸ್ವಲ್ಪಸ್ವಲ್ಪವೇ ಮುಂದಡಿಯಿರಿಸಲಾರಂಭಿಸಿದರೆ ಅದನ್ನು ದಾಟಿಯೇ ಮುಂದೆ ಸಾಗಿರುತ್ತೇವೆ. ನಾವಂತೂ ಒಂದು ಸಂಸಾರದೊಳಗೇ ಹುಟ್ಟಿ, ಮತ್ತೊಂದು ಸಂಸಾರವನ್ನು ನಮ್ಮದಾಗಿಸಿಕೊಳ್ಳಹೊರಡುವುದು ಸಂತಸದಿಂದಿರಲು ತಾನೆ. ಯಾರಾದರೂ ‘ಕಷ್ಟಪಡುವುದಕ್ಕಾಗಿಯೇ ಸಂಸಾರ ಕಟ್ಟಿಕೊಂಡೆ’ ಎನ್ನುವುದನ್ನು ಕೇಳಿದ್ದೀರಾ? ಸುಖ-ಸಂತೋಷದಿಂದಿರಲು ನಮ್ಮದೇ ಸುಂದರ ಸಂಸಾರವನ್ನು ಪಡೆದುಕೊಂಡ ನಂತರ ನಮ್ಮ ಗುರಿ ಆನಂದದಿಂದಿರುವುದೇ ಆದರೆ, ನಡುವೆ ಎದುರಿಸಬೇಕಾದ ಎಡರುತೊಡರುಗಳನ್ನು ನಿವಾರಿಸಿಕೊಂಡು, ಪರಸ್ಪರ ಸಹಕರಿಸಿಕೊಂಡು, ‘ಆನಂದ?ದತ್ತಲೇ ಹೆಜ್ಜೆಯಿಡುತ್ತೇವೆ. ನಮ್ಮಲ್ಲಿರುವ ‘ಅಹಮಿಕೆ’ಯನ್ನು ಬದಿಗಿರಿಸಬೇಕು ಅಷ್ಟೆ. ನಮ್ಮಲ್ಲಿ ಎಷ್ಟೆಲ್ಲಾ ಸಾಮರ್ಥ್ಯಗಳಿವೆ, ನಾವು ಏನೆಲ್ಲಾ ಸಾಧಿಸಬಹುದು,........ಎಲ್ಲಾ ಕಡೆಗಣಿಸಿ ಯಃಕಚಿತ್ ಜೀವಿಗಳಾಗಿ ಜೀವನ ನಡೆಸುವುದಾದರೆ ಮನುಷ್ಯಜೀವಿಗಳೇ ಆಗುವ ಅನಿವಾರ್ಯತೆ ಇತ್ತೆ? ( ಆಯ್ಕೆ ನಮ್ಮದಲ್ಲ ಎಂದುಕೊಳ್ಳುವುದು ಬೇಡ!)
ಪರಸ್ಪರ ಆಕರ್ಷಣೆಯಿಂದ ನವಸಂಸಾರಗಳು ಉಗಮವಾಗುತ್ತವೆ, ಕ್ರಮೇಣ ವಿಕರ್ಷಣೆಯತ್ತ ಸಾಗಿ ಒಡೆಯುವ ಹಂತವನ್ನು ತಲುಪುತ್ತವೆ ಎನ್ನುವುದು ಸಾಮಾನ್ಯ ಅನಿಸಿಕೆ. ಆದರೆ ಆಕರ್ಷಣನಿಯಮದ ತಜ್ಞರಾದ ಬಾಬ್ ಡಯಲ್ರವರು ಹೇಳುವಂತೆ, `-`like attracts like’.ನಾವು ಒಂದು ಆಲೋಚನೆಯನ್ನು ಮಾಡಿದಾಗ ಅದೇ ರೀತಿಯ ಆಲೋಚನೆಗಳನ್ನು ಆಕರ್ಷಿಸುತ್ತೇವೆ,? ಎನ್ನುವುದನ್ನು ಅಳವಡಿಸಿಕೊಂಡರೆ ನಮಗೆ ಅಗತ್ಯವೆನಿಸುವ ಉತ್ತಮಾಂಶಗಳನ್ನೇ ಆಕರ್ಷಿಸುತ್ತಾ ಬದುಕನ್ನು ಉನ್ನತೀಕರಿಸಿಕೊಳ್ಳಬಹುದು.
`Peaceful Warrior’ನಲ್ಲಿ ಜೀವನದಲ್ಲಿ ಮೂರು ಪ್ರಮುಖಾಂಶಗಳು: paradox (ವಿರೋದಾಭಾಸ), humour (ಹಾಸ್ಯಪ್ರಜ್ಞೆ) ಮತ್ತು change (ಬದಲಾವಣೆ) ಎಂದಿದೆ. ಹಾಸ್ಯಪ್ರಜ್ಞೆ ಸಂಸಾರವನ್ನು ಸುಗಮವಾಗಿಸುವ ಟಾನಿಕ್ ಇದ್ದಂತೆ!

‘ಅಯ್ಯಾ ಸಂಸಾರವೆಂಬ ಹಾಯಿ ಹೊಡೆದು ಆನು ಬೆಚ್ಚುತ್ತಿದ್ದೇನೆ,
ಬೆದರುತ್ತಿದ್ದೇನೆ. ಎಲೆಲೆ ಸಂಸಾರ ವೈರಿ! ನಿನ್ನವ ನಿನ್ನವ
ನಿನ್ನವನೆನಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ!’
ಎಂದು ವಚನಕಾರರಾದ ಸಿದ್ಧರಾಮೇಶ್ವರರವರು ಹೇಳಿದ್ದಾರೆ. ಇಲ್ಲಿ ಸಂಸಾರವೆನ್ನುವುದು ಅವರ ಆಧ್ಯಾತ್ಮಿಕ ಸಾಧನೆಗೆ ಅಡ್ಡವೆನಿಸಿರಲೂ ಬಹುದು ಅಥವಾ ಸಾಕಿನ್ನು ಈ ಸಂಸಾರದ ವ್ಯಾಮೋಹ, ಮುಕ್ತಿಯ ಕರುಣಿಸು ಎಂಬ ಕೋರಿಕೆಯೂ ಆಗಿರಬಹುದು. ಅಥವಾ...... ಈ ಸಂಸಾರವೆಂಬ ಸಂಕುಚಿತತೆಯಿಂದ ಅವರು ಬೇಸತ್ತಿರಬಹುದೆ?
ಈ ಸಂಸಾರವನ್ನು ಶರಧಿಗೆ ಹೋಲಿಸಿರುವುದು, ಅದರಲ್ಲಿ ಈ ಮೊದಲು ನಾವು ಕಂಡುಕೊಂಡಂತೆ ಏನೆಲ್ಲಾ ಕಷ್ಟಕೋಟಲೆಗಳಿವೆ ಎಂಬ ಅರ್ಥದಲ್ಲಿ ಅಲ್ಲ ಎನಿಸುತ್ತದೆ. ಮೇಲ್ನೋಟಕ್ಕೆ ಅದು ಹಾಗೇ ಕಂಡುಬಂದರೂ ನಾವು ನಮ್ಮ ಸಂಸಾರವೆಂದರೆ ‘ಪತಿ-ಪತ್ನಿ, ಮಕ್ಕಳು' ಎಂಬ ಸಂಕುಚಿತ ಭಾವದಿಂದ ಹೊರಬಂದು ‘ವಸುದೈವ ಕುಟುಂಬಕಂ’ ಎಂಬಂತೆ ಈ ಜಗತ್ತೇ ಒಂದು ಸಂಸಾರ ಸಾಗರ, ಅದರಲ್ಲಿನ ಬಿಂದುಗಳು ನಾವು ಎಂಬ ವೈಶಾಲ್ಯದತ್ತ ದೃಷ್ಟಿಹರಿಸಬೇಕೆನ್ನುವುದೇ ಉದ್ದೇಶವೆನಿಸುತ್ತದೆ. ‘ನಮ್ಮ ಈ ಸಂಸಾರ ‘ಆನಂದ’ ಸಾಗರ.........’
(ಈ ಲೇಖನವು `ಸಿಹಿ ಗಾಳಿ' ಮಾಸ ಪತ್ರಿಕೆಯ ಮಾರ್ಚ್ ೨೦೧೨ರ ಸ೦ಚಿಕೆಯಲ್ಲಿನ `ಸ೦ಸಾರ ಶರಧಿ' ಅ೦ಕಣದಲ್ಲಿ ಪ್ರಕಟವಾಗಿದೆ.)

Sunday, March 25, 2012

ಮನದ ಅಂಗಳದಿ.........85. ಓಂ

‘ಓಂ’ ಒಂದು ಪದವಲ್ಲ. ಅದು ಒಂದು ನಾದಯುಕ್ತ ಉಚ್ಛಾರಣೆಯ ವಿಧವಾಗಿದೆ. ಸಂಗೀತದಂತೆಯೆ ಅದಕ್ಕೆ ಯಾವುದೇ ಕಾಲ, ಜನಾಂಗ, ಸಂಸ್ಕೃತಿಗಳ ತಡೆಗೋಡೆಯಿಲ್ಲ. ‘ಓಂ’ ಮಂತ್ರವು ಸಂಸ್ಕೃತದ ಮೂರು ಅಕ್ಷರಗಳಾದ ಅ, ಉ ಮತ್ತು ಮ ಗಳಿಂದ ಆಗಿದೆ. ‘ಮಹಿಮಾ’ದಲ್ಲಿ ಅ, ಉ, ಮ ಗಳನ್ನು ಸೃಷ್ಟಿ, ಸ್ಥಿತಿ, ಲಯಗಳೆಂದು ಅರ್ಥೈಸಿದ್ದಾರೆ. ಈ ಅಕ್ಷರಗಳನ್ನು ಸಂಯೋಗಗೊಳಿಸಿದಾಗ ‘ಓಂ’ ಎಂದಾಗುತ್ತದೆ. ಇದನ್ನು ವಿಶ್ವದ ಮೂಲ ಶಬ್ಧ ಎಂದು ಪರಿಗಣಿಸಲಾಗಿದೆ. ಉಳಿದೆಲ್ಲಾ ಶಬ್ಧಗಳನ್ನೂ ಓಂಕಾರವು ಒಳಗೊಂಡಿದೆ. ಇದು ತನ್ನಂತೆಯೇ ಒಂದು ‘ಮಂತ್ರ’ ಅಥವಾ ‘ಪ್ರಾರ್ಥನೆ’ಯಾಗಿದೆ. ಇದನ್ನು ಸರಿಯಾದ ಸ್ವರಪ್ರಯೋಗದೊಂದಿಗೆ ಪುನರಾವರ್ತನೆಗೊಳಿಸಿದರೆ ಇದು ದೇಹದಾದ್ಯಂತ ಪ್ರತಿನಾದಿತವಾಗಿ(Resonate) ಶಬ್ಧವು ವ್ಯಕ್ತಿಯ ಇರುವಿಕೆಯ ಕೇಂದ್ರದೊಳಗೆ ತೂರಿಹೋಗಿ ಆತ್ಮನನ್ನು ಪ್ರವೇಶಿಸುತ್ತದೆ.
‘ಓಂ’ ಬಗ್ಗೆ ಶ್ರೀ ರಾಮಕೃಷ್ಣರು ಹೀಗೆ ಹೇಳುತ್ತಾರೆ: “ಓಂ’ ಎಂಬ ದನಿಯೇ ಬ್ರಹ್ಮ. ಋಷಿಮುನಿಗಳು ಈ ನಾದವನ್ನು ಬ್ರಹ್ಮಜ್ಞಾನವನ್ನು ಹೊಂದಲು ಸಾಧಿಸಿದರು. ಅವರು ಪರಿಪೂರ್ಣತೆಯನ್ನು ಹೊಂದಿದ ನಂತರ ಈ ಅನಾದ್ಯಾನಂತ ಪದವು ಸ್ವತಃಪ್ರವರ್ತಿತವಾಗಿ(spontaneously) ಅವರ ನಾಭಿಯಿಂದ ಹೊಮ್ಮುತ್ತಿತ್ತು. ‘ಈ ಶಬ್ದವನ್ನು ಕೇಳುವ ಮಾತ್ರದಿಂದ ನೀನು ಏನನ್ನು ಪಡೆಯಬಲ್ಲೆ?’ ಎಂದು ಕೆಲವು ಸಾಧುಗಳು ಕೇಳಬಹುದು. ಸ್ವಲ್ಪ ದೂರದಿಂದ ಸಮುದ್ರದ ಅಲೆಗಳ ಮೊರೆತವನ್ನು ನೀನು ಕೇಳುತ್ತಿದ್ದು, ಅದನ್ನೇ ಅನುಸರಿಸುತ್ತಾ ಹೋದರೆ ಸಮುದ್ರವನ್ನು ತಲುಪಬಹುದು. ಎಲ್ಲಿಯವರೆಗೆ ಸಮುದ್ರದ ಮೊರೆತವಿರುತ್ತದೋ ಅಲ್ಲಿ ಸಮುದ್ರ ಇದ್ದೇ ಇರುತ್ತದೆ. ‘ಓಂ’ ನಾದವನ್ನು ಅನುಸರಿಸುತ್ತಾ ಸಾಗಿದರೆ ‘ಬ್ರಹ್ಮ’ವನ್ನು ಪಡೆಯಬಹುದು. ಈ ‘ಬ್ರಹ್ಮ’ವೇ ವೇದಗಳಲ್ಲಿ ಅಂತಿಮ ಗುರಿ ಎಂದು ವಿವರಿಸಲ್ಪಟ್ಟಿದೆ.’ ಶ್ರೀ ರಾಮಕೃಷ್ಣರು ‘ಓಂ’(aum) ಶಬ್ಧವನ್ನು ಘಂಟಾನಾದವಾದ ‘ಟಾಂ’(tom: t-o-m)ನ್ನು ಉದಾಹರಿಸಿ ವಿವರಿಸಿದ್ದಾರೆ.
ಈ ಸರಳವಾದ ಆದರೆ ಆಳವಾದ ದಾರ್ಶನಿಕ ಧ್ವನಿಯಲ್ಲಿ ಶಾಂತಿ, ಏಕತೆ, ಆನಂದವು ಅಡಗಿದೆ. ಇದು ದ್ವಿಮುಖವಾದ ಅಭಿಪ್ರಾಯಗಳನ್ನು ಉಂಟುಮಾಡುತ್ತದೆ. ಇದು ಮನಸ್ಸನ್ನು ವಿವರಿಸಲು ಅಸಾಧ್ಯವಾದ ಅಮೂರ್ತದೆಡೆಗೆ ಕೊಂಡೊಯ್ಯುತ್ತದೆ. ಹಾಗೆಯೇ ಪೂರ್ಣತ್ವವನ್ನು ಹೆಚ್ಚು ಅರ್ಥಪೂರ್ಣಗೊಳಿಸುತ್ತದೆ.
ಧ್ಯಾನದ ಸಮಯದಲ್ಲಿ ಓಂಕಾರವನ್ನು ಉಚ್ಛಾರ ಮಾಡಿದರೆ ನಮ್ಮೊಳಗೇ ನಾವು ಉಂಟುಮಾಡುವ ಕಂಪನವು ಕಾಸ್ಮಿಕ್ ತರಂಗಗಳೊಡನೆ ಏಕೀಭವಿಸಿ ನಾವು ವಿಶ್ವವ್ಯಾಪಿಯಾಗಿ ಚಿಂತಿಸಲಾರಂಭಿಸುತ್ತೇವೆ. ಎರಡು ಉಚ್ಛಾರಗಳ ನಡುವಿನ ಮೌನವು ಸ್ಪಷ್ಟವಾಗಲಾರಂಭಿಸುತ್ತದೆ. ಮನಸ್ಸು ಮೌನ ಮತ್ತು ಶಬ್ಧಗಳ ವೈರುಧ್ಯಗಳ ನಡುವೆ ಚಲಿಸಲಾರಂಭಿಸಿ ಕಡೆಗೆ ಶಬ್ಧವನ್ನು ನಿಶ್ಶೇಷಗೊಳಿಸುತ್ತದೆ. ಮೌನದಲ್ಲಿ ಒಂದೇ ವಿಚಾರವಾದ ‘ಓಂ’ಅನ್ನು ಶೋಧಿಸಲಾರಂಭಿಸಿದಾಗ ಆಲೋಚನೆಯೇ ಇಲ್ಲವಾಗುತ್ತದೆ! ಇದೇ ಸಮಾಧಿಸ್ಥಿತಿ. ಈ ಪವಿತ್ರವಾದ ಅರಿವು ಮೂಡಿದ ಸ್ಥಿತಿಯಲ್ಲಿ ಮನಸ್ಸು ಮತ್ತು ಬುದ್ಧಿವಂತಿಕೆಯು ಮೇಲೇರಲ್ಪಟ್ಟು ವ್ಯಕ್ತಿಯ ತನ್ನತನವು ವಿಶ್ವದ ಆತ್ಮದೊಂದಿಗೆ ಲೀನವಾಗುತ್ತದೆ. ಈ ಕ್ಷಣದಲ್ಲಿ ವಿಶ್ವದ ಮಹಾಭಿಲಾಷೆಯೆದುರು ಪ್ರಾಪಂಚಿಕವಾದ ಸಣ್ಣಪುಟ್ಟ ಆಸೆಗಳು ಕಳೆದುಹೋಗುತ್ತವೆ. ಅಳತೆಗೆ ನಿಲುಕದ ‘ಓಂ’ ನ ಸಾಮರ್ಥ್ಯ ಹೀಗಿದೆ.
‘ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳು ನಮ್ಮಿಂದ ಏಕಾಗ್ರತೆ ಮತ್ತು ಜಾಗೃತಗುಣವನ್ನು ದೂರಮಾಡಿವೆ. ದಿನಬೆಳಗಾದರೆ ನಮ್ಮ ಕಾರ್ಯಕ್ಷೇತ್ರದಲ್ಲಿ ಅನೇಕ ಒತ್ತಡಗಳಿಗೆ ಒಳಗಾಗುತ್ತಿದ್ದೇವೆ. ವಿಶೇಷವಾಗಿ ಸಾಫ್ಟ್ ವೇರ್ ಇಂಡಸ್ಟ್ರಿಯವರು ಬೇರೆಬೇರೆ ರೀತಿಯ ಛಾಲೆಂಜ್ ಗಳು, ಅಡ್ಡಿ ಆತಂಕಗಳನ್ನು ಎದುರಿಸುತ್ತಿರುತ್ತಾರೆ. ಈ ರೀತಿಯ ಒತ್ತಡಗಳನ್ನು ನಿಭಾಯಿಸುವುದು ತ್ರಾಸದಾಯಕವೆನಿಸುತ್ತದೆ. ಈ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳಲು ಧ್ಯಾನವು ಎಲ್ಲಾ ಮಾನವ ಜೀವಿಗಳಿಗೂ ಅತ್ಯಗತ್ಯವಾಗಿದೆ. ಧ್ಯಾನವನ್ನು ಮಾಡುವಾಗ ‘ಓಂ’ಕಾರ ಮಂತ್ರ ಪಠಣವು ಮನಸ್ಸಿನಲ್ಲಿ ಶಾಂತಿ ಮತ್ತು ಸಮಾಧಾನವನ್ನು ಉಂಟುಮಾಡುತ್ತದೆ. ಮಾನಸಿಕ ಒತ್ತಡ ಮತ್ತು ಪ್ರಾಪಂಚಿಕ ಆಲೋಚನೆಗಳು ‘ಓಂ’ ಮಂತ್ರ ಪಠಣದಿಂದ ದೂರವಾಗುತ್ತವೆ,’ ಎಂದು Rycharde manne ಹೇಳಿದ್ದಾರೆ. ‘ಓಂ’ನ ವೈಜ್ಞಾನಿಕ ಮಹತ್ವದ ಬಗ್ಗೆ ಅವರು ಅಧ್ಯಯನ ಮಾಡಿದ್ದಾರೆ.
‘ಹಿಂದೂಗಳಲ್ಲಿ ಮತ್ತು ಬೌದ್ಧರಲ್ಲಿ ಧ್ಯಾನದ ಸಮಯದಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವ ಮೂಲಮಂತ್ರ ‘ಓಂ’ ಆಗಿದೆ. ನಿಮಗೆ ಗುರುವಿನಿಂದ ಈವರಗೆ ಯಾವುದೇ ನಿರ್ದಿಷ್ಟ ಮಂತ್ರ ದೊರೆಯದಿದ್ದರೆ ನೀವು ‘ಓಂ’ಕಾರವನ್ನು ಪಠಿಸುವುದು ಉತ್ತಮ. ಸಂಶೋಧಕರ ಪ್ರಮುಖ ಗುರಿ ‘ಓಂ’ಕಾರವನ್ನು ಪಠಿಸುವುದು ಮಾನಸಿಕ ಪ್ರಶಾಂತತೆಯನ್ನು ಉಂಟುಮಾಡುತ್ತದೆಯೇ ಎನ್ನುವುದಾಗಿದ್ದು, ಇದರ ಕಲ್ಪನೆಯು ಪಠನದ ಧ್ವನಿ ಸ್ಥಿರವಾಗಿದ್ದರೆ ಮನಸ್ಸೂ ಸ್ಥಿವಾಗಿರುತ್ತದೆ ಎನ್ನುವುದಾಗಿತ್ತು. ಅವರು ಜನರ ‘ಓಂ’ಪಠನದ ಸಿಗ್ನಲ್ ಅನ್ನು ಟೈಮ್-ಫ್ರಿಕ್ವೆನ್ಸಿ ಅನಲೈಸರ್ ಮೂಲಕ ಕಳುಹಿಸಿದರು. ಗ್ರಾಫನ್ನು ಪರಿಶೀಲಿಸಿದಾಗ ‘ಓಂ’ ಪಠನವನ್ನು ಅಭ್ಯಾಸಮಾಡಿ ಹೆಚ್ಚು ಪರಿಣತಿಯನ್ನು ಪಡೆದಂತೆ, ವಿಶ್ಲೇಷಿಸಿದ ಸಿಗ್ನಲ್ ಹೆಚ್ಚು ಸ್ಥಿರವಾಗಿರುವುದು ಕಂಡುಬಂದಿತು. ಇದರಿಂದ ಓಂ ಮಂತ್ರವನ್ನು ಪಠಿಸುವುದು ಮನಸ್ಸಿನಲ್ಲಿ ಸ್ಥಿರತೆಯನ್ನು ಉಂಟುಮಾಡುತ್ತದೆ ಎಂದು ವೈಜ್ಞಾನಿಕವಾಗಿ ತೀರ್ಮಾನಿಸಲಾಯಿತು. ಓಂಕಾರವು ಒತ್ತಡಕ್ಕೆ ಒಳಗಾದ ಮನಸ್ಸಿಗೆ ಶಾಂತಿ ಮತ್ತು ಸಮಾಧಾನವನ್ನು ಉಂಟುಮಾಡುತ್ತದೆ. ಮನಸ್ಸು ಸ್ಥಿರತೆಯನ್ನು ತಲುಪಿದಾಗ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ನಾವು ವೈಜ್ಞಾನಿಕವಾಗಿ ಓಂಕಾರ ಪಠನದಿಂದ ಮನುಷ್ಯನ ಮನಸ್ಸಿನ ಮೇಲಿನ ಒತ್ತಡ ನಿವಾರಣೆಯ ಬಗ್ಗೆ ಸಮರ್ಥವಾಗಿ ನಿರ್ಧರಿಸಿದ್ದೇವೆ. ಮುಂದೆ ಯಾರಾದರೂ ಈ ವಿಷಯದಲ್ಲಿ ಉತ್ತಮ ಕಾರ್ಯವನ್ನು ಮಾಡಬಹುದೆಂದು ಆಶಿಸೋಣ.......’ ಎನ್ನುತ್ತಾರೆ Rycharde manne.
‘ಓಂ’ಕಾರವು ನಿರ್ಗುಣ ಮತ್ತು ಸಗುಣಗಳೆರಡನ್ನೂ ಪ್ರತಿನಿಧಿಸುತ್ತದೆ. ಆದ್ದರಿಂದ ಅದನ್ನು ‘ಪ್ರಣವ’ ಎಂದು ಕರೆಯುತ್ತಾರೆ. ಇದರ ಅರ್ಥ, ಓಂಕಾರವು ನಮ್ಮ ಪ್ರಾಣ ಅಥವಾ ಉಸಿರಿನ ಮೂಲಕ ನಮ್ಮ ಜೀವನವನ್ನೇ ವ್ಯಾಪಿಸಿದೆ.
ಇಂಥಾ ‘ಓಂ’ ಮಂತ್ರದ ಪಠನದ ಮೂಲಕ ಪ್ರಶಾಂತ ಮನಃಸ್ಥಿತಿಯನ್ನು ಪಡೆಯೋಣ.

Monday, March 19, 2012

ಮನದ ಅ೦ಗಳದಿ.........೮೪. ಆತ್ಮಭಾವ

ಎಳವೆಯಲ್ಲಿ ಸಾಮಾನ್ಯವಾಗಿ ಶರೀರವೇ ಸರ್ವಸ್ವವಾಗಿರುತ್ತದೆ. ನಮ್ಮ ಶರೀರದ ಬಗ್ಗೆ ನಮಗೇ ಕುತೂಹಲ, ಆಸಕ್ತಿ. ಶರೀರದ ಮೂಲಕ ಸುಖ ಸಂತೋಷಗಳನ್ನು ಹೊಂದುವ ಕಾತುರ! ಚಿಕ್ಕ ಮಗುವಿಗೆ ಕಚ್ಚಂಗುಳಿ ಕೊಟ್ಟು ನಗಿಸುತ್ತೇವೆ. ಅದಕ್ಕೆ ತನ್ನ ದೇಹದಲ್ಲಿ ಹುದುಗಿರುವ ಸಂತಸದ ಅರಿವು ಹೀಗೇ ಉಂಟಾಗಬಹುದು. ಇದರ ಒಟ್ಟೊಟ್ಟಿಗೇ ಮನಸ್ಸಿನ ಪ್ರಾಮುಖ್ಯತೆಯೂ ಅರ್ಥವಾಗಲಾರಂಭಿಸುತ್ತದೆ. ಜೀವನವು ಹಂತಹಂತವಾಗಿ ಮೇಲೇರಬೇಕಾದ ಸಂದರ್ಭದಲ್ಲಿ ಎಲ್ಲೋ ಒಂದುಕಡೆ ಸ್ಥಗಿತವಾಗಿ ನಿಂತಲ್ಲೇ ಸುತ್ತಲಾರಂಭಿಸಿಬಿಡುತ್ತೇವೆ.
ಶರೀರ, ಮನಸ್ಸು ಎರಡೇ ಅಲ್ಲದೆ ಇನ್ನೂ ಉನ್ನತ ಸ್ತರದಲ್ಲಿ ‘ಆತ್ಮ’ದ ಬೇಕು-ಬೇಡಗಳೂ ಅಡಗಿರುತ್ತವೆ ಎನ್ನುವುದನ್ನು ಶ್ರೀರಾಮ ಶರ್ಮಾ ಆಚಾರ್ಯರವರು ತಮ್ಮ ‘ನಾನು ಯಾರು?’ ಪುಸ್ತಕದಲ್ಲಿ ಹೃದಯಂಗಮವಾಗಿ ತಿಳಿಸಿದ್ದಾರೆ:
‘ಶರೀರಭಾವದಲ್ಲಿ ಜಾಗೃತನಾಗಿರುವ ವ್ಯಕ್ತಿ ಕೇವಲ ಆಹಾರ, ನಿದ್ರೆ, ಭಯ, ಮೈಥುನಗಳ ಸಾಧಾರಣ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಅದು ಕೇವಲ ಪಶುಜೀವನ ಮತ್ತು ಏನೂ ಸಾರ್ಥಕವಿಲ್ಲದ್ದು. ಒಂದು ವೇಳೆ ಅವನ ಇಚ್ಛೆಗಳು ಉಗ್ರಸ್ವರೂಪ ತಾಳಿದರೆ ಅಥವಾ ಆತುರಿಕೆ ತೋರಿದರೆ ಆಗ ಅವನು ರಾಕ್ಷಸೀ ಪ್ರವೃತ್ತಿಯವನಾಗುತ್ತಾನೆ. ತನ್ನ ಸ್ವಾರ್ಥವನ್ನು ಸಾಧಿಸಲು ಅನೀತಿ ಹಾಗೂ ಭ್ರಷ್ಟಮಾರ್ಗವನ್ನು ಅನುಸರಿಸಲು ಅವನು ಹಿಂಜರಿಯುವುದಿಲ್ಲ. ಬುದ್ಧಿಪೂರ್ವಕವಾಗಿಯಾದರೂ ಅದನ್ನು ಪರಿಗಣಿಸುವುದಿಲ್ಲ. ಇಂಥಾ ದೃಷ್ಟಿಕೋನವುಳ್ಳ ವ್ಯಕ್ತಿ ತಾನೂ ಸುಖಿಯಾಗಿರುವುದಿಲ್ಲ ಮತ್ತು ಬೇರೆಯವರನ್ನೂ ಸುಖಿಯಾಗಿರಲು ಬಿಡುವುದಿಲ್ಲ. ಕಾಮ ಮತ್ತು ಲೋಭಗಳುಳ್ಳ ವ್ಯಕ್ತಿಗಳಿಗೆ ಎಷ್ಟು ಭೋಗ ಸಿಕ್ಕಿದರೂ ತೃಪ್ತಿಯಾಗುವುದಿಲ್ಲ. ಎಷ್ಟು ದೊರೆತರೂ ಮತ್ತಷ್ಟು ಆಸೆಗಳು ಚಿಗುರೊಡೆಯುತ್ತವೆ. ಇದರಿಂದ ಅಶಾಂತಿ, ಚಿಂತೆ, ಕಾಮನೆಗಳು ಮತ್ತು ವ್ಯಾಕುಲತೆಗಳು ಅನೇಕ ಪಟ್ಟು ಹೆಚ್ಚುತ್ತವೆ........ ಹೀಗೆ ಶರೀರ ಭಾವನೆಯ ದೃಷ್ಠಿಕೋನವು ಮನುಷ್ಯನನ್ನು ದುರಾಸೆ ಮತ್ತು ಅಶಾಂತಿಯತ್ತ ಸೆಳೆಯುತ್ತದೆ. ಜೀವನದ ವಾಸ್ತವಿಕ ಸಫಲತೆ ಮತ್ತು ಸಮೃದ್ಧಿಯೆಂದರೆ ಆತ್ಮಭಾವದಲ್ಲಿ ಜಾಗೃತವಾಗುವಿಕೆ. ಮನುಷ್ಯ ತನ್ನನ್ನು ಆತ್ಮನೆಂದು ಭಾವಿಸಲಾರಂಭಿಸಿದಾಗ ಅವನ ಇಚ್ಛೆಗಳು, ಆಕಾಂಕ್ಷೆ ಮತ್ತು ಅಭಿರುಚಿ ಇವುಗಳು ಆಧ್ಯಾತ್ಮಿಕ ಸುಖಪಡೆಯುವ ಕಾರ್ಯಗಳತ್ತ ತಿರುಗುತ್ತವೆ. .......ದುಷ್ಕರ್ಮಗಳನ್ನು ಮಾಡುವಾಗ ನಮ್ಮ ಅಂತಃಕರಣವು ದಂಗೆ ಏಳುತ್ತದೆ. ಪಾಪಗಳನ್ನು ಮಾಡುವಾಗ ಕಾಲುಗಳು ನಡುಗುತ್ತವೆ. ಎದೆ ಡಬಡಬ ಹೊಡೆದುಕೊಳ್ಳುತ್ತದೆ. ಅಂದರೆ ಆ ಕಾರ್ಯಗಳು ಆತ್ಮನಿಗೆ ಒಪ್ಪಿಗೆ ಇಲ್ಲ ಎಂದು ಅರ್ಥ. ಹಾಗೆಯೇ ಪರೋಪಕಾರ, ಸೇವೆ, ಸಹಾಯಮಾಡುವಿಕೆ, ದಾನ, ಉದಾರತೆ, ತ್ಯಾಗ, ಮುಂತಾದ ಸತ್ಕರ್ಮಗಳನ್ನು ಮಾಡಲನುವಾದಾಗ ಮನಸ್ಸಿನ ಒಳ ಮೂಲೆಯಲ್ಲಿ ಅತ್ಯಂತ ಸಂತೋಷ, ಹಗುರತನ, ಆನಂದ ಮತ್ತು ಉಲ್ಲಾಸವುಂಟಾಗುತ್ತದೆ. ಇದರ ಅರ್ಥವೇನೆಂದರೆ ಇವು ಆತ್ಮನ ಹಿತಾಸಕ್ತಿಗೆ ಅನುಕೂಲವಾದದ್ದು, ಇಷ್ಟವಾದದ್ದು ಎಂದು.
ಪಶು, ಪಕ್ಷಿಗಳು ಮತ್ತು ಅವಿಕಸಿತ ಪ್ರಾಣಿಗಳಲ್ಲಿ ಈ ‘ನಾನು’ ಎಂಬ ಭಾವನೆಯೇ ಇರುವುದಿಲ್ಲ. ಅವು ಭೌತಿಕ ಸುಖ-ದುಖಗಳನ್ನು ಅನುಭವಿಸುತ್ತಿರುತ್ತವೆ. ಆದರೆ ತಮ್ಮನ್ನು ಕುರಿತು ಹೆಚ್ಚು ಯೋಚಿಸಲಾರವು. ಉದಾಹರಣೆಗೆ ಕತ್ತೆಯು ಹೊರೆಯನ್ನು ಹೊರುತ್ತದೆ. ಅದಕ್ಕೆ ನನ್ನ ಮೇಲೆ ಏಕೆ ಹೊರೆಯನ್ನು ಹೊರಿಸುತ್ತಾರೆ? ಹೊರೆ ಹೊರಿಸುವನೊಂದಿಗಿನ ತನ್ನ ಸಂಬಂಧವೇನು? ನಾನು ಏಕೆ ಬಲಿಪಶುವಾಗುತ್ತಿದ್ದೇನೆ? ಎಂಬುದರ ಬಗ್ಗೆ ವಿಚಾರಮಾಡುವುದಕ್ಕಾಗುವುದಿಲ್ಲ. ಹಸಿರು ಹುಲ್ಲು ಸಿಕ್ಕಿದಾಗ ಸಂತೋಷ ಹಾಗೂ ಶಾಂತಿ ಅನುಭವಿಸುತ್ತದೆ. ಹೊರೆ ಹೊರಿಸಿದಾಗ ಕಷ್ಟ ಅನುಭವಿಸುತ್ತದೆ. ಆದರೆ ನಮ್ಮಂತೆ ವಿಚಾರ ಮಾಡಲಾಗುವುದಿಲ್ಲ. ಈ ಜೀವಿಗಳಲ್ಲಿ ಶರೀರವೇ ಆತ್ಮಸ್ವರೂಪವಾಗಿರುತ್ತದೆ. ಕ್ರಮಶಃ ಮನುಷ್ಯ ವಿಕಾಸದ ಹಾದಿಯಲ್ಲಿ ಮುಂದುವರೆದು ಇಲ್ಲಿಯವರೆಗೆ ತಲುಪಿದ್ದಾನೆ. ಆದರೆ ಎಷ್ಟು ಜನರು ಆತ್ಮಸ್ವರೂಪ ತಿಳಿಯಲು ಕಾತುರರಾಗಿದ್ದಾರೆ? ಜನಗಳು ಆತ್ಮಜ್ಞಾನದ ಬಗ್ಗೆ ಗಿಣಿಪಾಠದಂತೆ ಕೆಲವು ವಿಷಯಗಳನ್ನು ಓದಿ, ಅನೇಕ ವೇಳೆ ಚರ್ಚೆಯಲ್ಲಿ ಭಾಗವಹಿಸಿ ಸಮಯಕ್ಕನುಗುಣವಾಗಿ ಅದನ್ನೇ ಮತ್ತೊಬ್ಬರಿಗೆ ತಿಳಿಸಿ ತಾವು ಆತ್ಮಜ್ಞಾನಿಗಳೆಂದು ತಿಳಿಯುತ್ತಾರೆ................. ಸಮಾಜದಲ್ಲಿ ಸಭ್ಯ ನಾಗರೀಕರೆಂದು ಹೇಳಿಕೊಳ್ಳುವ ವ್ಯಕ್ತಿಗಳು ವಾಸ್ತವದಲ್ಲಿ ತಮ್ಮ ಶರೀರವನ್ನೇ ಆತ್ಮಸ್ವರೂಪವೆಂದು ತಿಳಿದಿರುತ್ತಾರೆ. ಧಾರ್ಮಿಕ ಆಚರಣೆಯನ್ನು ತಮ್ಮ ಮನಃಸಂತೋಷಕ್ಕಾಗಿ ಮಾಡುತ್ತಾರೆ. ಆದರೆ ಅದಕ್ಕೂ ಆತ್ಮಜ್ಞಾನಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ.
ನಮಗೆ ಆತ್ಮಸ್ವರೂಪದ ಪರಿಚಯವಾದರೆ ಸಂಪೂರ್ಣ ಭ್ರಮೆ ದೂರವಾಗುತ್ತದೆ. ಮುಷ್ಠಿಮಾಡಿದ ಕೈ ಸಡಿಲವಾಗುತ್ತದೆ. ಒಮ್ಮೆ ಒಂದು ಕೋತಿ ಧಾನ್ಯ ತುಂಬಿದ ಪಾತ್ರೆಯಿಂದ ಧಾನ್ಯ ತೆಗೆಯಲು ಕೈ ಹಾಕಿತು. ತನ್ನ ಮುಷ್ಠಿಯಲ್ಲಿ ಧಾನ್ಯ ಹಿಡಿಯಿತು. ಅದನ್ನು ಹೊರತರಲು ಆಗದೆ ದುಃಖದಿಂದ ಕೂಗಾಡಲು ಪ್ರಾರಂಭಿಸಿತು. ಅದು ಚಿಕ್ಕ ಬಾಯುಳ್ಳ ಪಾತ್ರೆಯಾದ್ದರಿಂದ ಕೈ ಹೊರಬರಲು ಸಾಧ್ಯವಾಗಲಿಲ್ಲ. ಆದರೆ ಅದಕ್ಕೆ ತನ್ನ ಕೈ ಮುಷ್ಠಿಯಾಗಿದೆ ಎಂದು ಅರಿವಾಗುತ್ತಿದ್ದಂತೆಯೇ ಅದು ತನ್ನ ಕೈಯನ್ನು ಸಡಿಲಮಾಡಿತು. ಆ ಧಾನ್ಯ ಒಳಗೆ ಬಿದ್ದು ಕೈ ಹೊರಬರಲು ಸಾಧ್ಯವಾಯಿತು. ನಾವು ಕಾಮಕ್ರೋಧಾದಿಗಳ ದಾಸರಾಗಿರುವುದರಿಂದ ಅವುಗಳು ನಮ್ಮನ್ನು ಸತಾಯಿಸುತ್ತವೆ. ನಾವು ಯಾವಾಗ ಅವನ್ನು ಹಿಮ್ಮೆಟ್ಟಿಸುತ್ತೇವೆಯೋ ಆಗ ಅರಿಷಡ್ವರ್ಗಗಳು ಮಾಯವಾಗುತ್ತವೆ. ಹೇಗೆ ಕುರಿಗಳಿಂದ ಪಾಲಿಸಲ್ಪಟ್ಟ ಸಿಂಹದ ಮರಿ ತನ್ನ ಪ್ರತಿಬಿಂಭವನ್ನು ನೀರಿನಲ್ಲಿ ನೋಡಿದಾಗ ಅದಕ್ಕೆ ತಾನು ಕುರಿಯಲ್ಲ ಸಿಂಹವೆಂದು ತಿಳಿದು, ಸಿಂಹದ ಲಕ್ಷಣಗಳನ್ನು ತೋರಿಸಲು ಅನುವಾಯಿತೋ ಹಾಗೆಯೇ ನಮಗೆ ಆತ್ಮಬೋಧವಾದ ಕ್ಷಣದಿಂದ ಈ ಕುರಿಯ ಲಕ್ಷಣಗಳು ಮರೆಯಾಗುತ್ತವೆ.
..........ಸಾಮಾನ್ಯವಾಗಿ ಮನುಷ್ಯನನ್ನು ಗಮನಿಸಿದಾಗ ಅವನು ಶರೀರಕ್ಕಾಗಿಯೇ ಎಲ್ಲವನ್ನೂ ಮಾಡುತ್ತಾನೆ. ಶರೀರವನ್ನೇ ‘ನಾನು? ಎಂದು ಭಾವಿಸಿದ್ದಾನೆ. ಆದರೆ ಶರೀರವು ಆತ್ಮನ ಮಂದಿರವಾಗಿದೆ. ಆದ್ದರಿಂದ ಜೀವನವನ್ನು ಶುದ್ಧ, ಸರಳ, ಸ್ವಾಭಾವಿಕ ಮತ್ತು ಪುಣ್ಯ ಪ್ರತಿಷ್ಠೆಯಿಂದ ತುಂಬಿರುವಂತೆ ಮಾಡುವ ರಾಜಮಾರ್ಗವೆಂದರೆ ನಮ್ಮನ್ನು ನಾವು ಶರೀರಭಾವದಿಂದ ಮೇಲಕ್ಕೇರಿಸಿ ಆತ್ಮಭಾವವನ್ನು ಜಾಗೃತಗೊಳಿಸಿಕೊಳ್ಳುವುದು. ಇದರಿಂದ ನಿಜವಾದ ಸುಖ, ಶಾಂತಿ ಮತ್ತು ಜೀವನದ ಲಕ್ಷ್ಯ ದೊರೆಯುತ್ತದೆ.’

Friday, March 16, 2012

ಹಗ್ಗ

ಹೊಸೆಯುತ್ತಿದ್ದಾನೆ ಈತ
ಹಗ್ಗವ
ಹೊಸೆದ ಭಾಗವ
ಕಾಲಿನಿಂದ ಮೆಟ್ಟಿ
ಆಗಾಗ ಪರೀಕ್ಷಿಸುತ್ತಾ
ಗಟ್ಟಿತನವ

ಉಡಿಯುತ್ತಲೇ
ಮಧ್ಯೆ ಮಧ್ಯೆ
ಸೇರಿಸುವ ಸೆಣಬು
ಎಂದೋ ಕತ್ತಾಳೆ
ಕೊಳೆಯಿಸಿ
ಸಿದ್ಧಗೊಳಿಸಿದ
ಕಸುಬು

ಅಲ್ಲಲ್ಲಿ
ತೆಂಗಿನ ಜುಂಗು
ಈಗೀಗ
ಸಂಶ್ಲೇಶಿತ ನಾರು
ಎಂದೂ ಮುಗಿಯದ
ಕಾರುಬಾರು

ಆದಿಯಿಲ್ಲದ
ಈ ಹಗ್ಗ
ಚಾಚುತಿದೆ
ಅನಂತಕೆ
ಜೀಗುವುದಷ್ಟೇ
ಕಸುಬುಗಾರಿಕೆ!

ಅಂದು
ತೂಗುತೊಟ್ಟಿಲಾಗಿದ್ದು
ಜೀವಜಂತುಗಳಿಗೆ
ಉರುಲೂ ಆಗಿದೆ
ಇಂದು
ಅಪರಾಧಿ
ನಿರಪರಾಧಿಗಳಿಗೆಲ್ಲಾ

ಆಕಾಶಕ್ಕೇರಿಸುವ
ನೂಲು ಏಣಿ
ಪ್ರಪಾತದತ್ತ
ಹಾರಲೂ ಅಣಿ!

ಸುತ್ತ ಸೆಳೆಯುತಿದೆ
ಎಲ್ಲರನೂ ತನ್ನತ್ತ
ಅಲ್ಲಲ್ಲೆ ನಿರ್ಮಿತ
ದಾಟಲಾರದ ವೃತ್ತ

ಸ್ಪೋಟಗೊಳ್ಳುತಲೇ ಇದೆ
ಅತೃಪ್ತಿ
ಹಗ್ಗಕಿದರ
ಎಗ್ಗೇ ಇಲ್ಲ
ಉದ್ದುದ್ದ ಬೆಳೆಯುತ್ತಲೇ ಇದೆ
`ಕೊಳೆ’ಯನೇ
ಮೆತ್ತಿಕೊಳ್ಳುತ್ತಾ...
ಆಸ್ವಾದಿಸುತ್ತಾ...

Sunday, March 11, 2012

ಮನದ ಅಂಗಳದಿ.........೮೩. ನಾನು ಯಾರು?

ನಮಗೆ ‘ನಾನು’ ಎಂಬ ಅರಿವು ಮೂಡಲಾರಂಭಿಸಿದ ನಂತರ ಒಂದಲ್ಲಾ ಒಂದು ಸಂದರ್ಭದಲ್ಲಿ ‘ನಾನು ಯಾರು?’ ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಅದಕ್ಕೆ ನಮ್ಮ ಬುದ್ಧಿಗೆ ನಿಲುಕುವಂತೆ ಉತ್ತರಿಸುತ್ತಾ, ಸಮಜಾಯಿಸುತ್ತಾ ಸೂಕ್ತ ಉತ್ತರಕ್ಕಾಗಿ ಹುಡುಕುವುದರಲ್ಲಿಯೇ ನಮ್ಮ ಬದುಕಿನ ಬಹುಭಾಗ ಸರಿದುಹೋಗುತ್ತದೆ. ನನ್ನ ಮಗಳು ಸುಷ್ಮ ತನ್ನ ಹದಿವಯಸ್ಸಿನಲ್ಲಿ ಕಂಡ ಕನಸೊಂದು (ಕನಸಿನ ಕಥೆ ‘ನಾನು ಯಾರು?’) ನನ್ನ ಮನಸ್ಸಿನ ಆಳದಲ್ಲಿ ಹುದುಗಿದ್ದು ಆಗಾಗ ತಲೆಯೆತ್ತಿ ಕಾಡುವ ಈ ಪ್ರಶ್ನೆಗೆ ಸಮರ್ಪಕವೆನಿಸುವ ಉತ್ತರವನ್ನು ನೀಡಿತು. ಆ ಕನಸನ್ನು ಅದರಲ್ಲಿರುವ ವಿಚಾರಸರಣಿಯಿಂದ, ನಿಗೂಢತೆಯಿಂದ, ಅಂಥಾ ಇತರ ಕನಸುಗಳಂತೆಯೇ ನಾನು ಬಹಳವಾಗಿ ಇಷ್ಟಪಡುತ್ತೇನೆ. ಅದರ ಸಂಕ್ಷಿಪ್ತ ರೂಪ ಹೀಗಿದೆ:
‘ಒಂದು ದೊಡ್ಡ ಮೈದಾನದ ನಡುವೆ ಆಗಸವನ್ನು ನಿಟ್ಟಿಸುತ್ತಾ ‘ನಾನು’ ನಿಂತಿದ್ದಾಗ ಮೋಡವೊಂದು ವ್ಯಕ್ತಿಯ ಮೊಗದ ರೂಪ ತಳೆದು ‘ನೀನು ಯಾರು?’ ಎಂದು ಪ್ರಶ್ನಿಸುತ್ತದೆ. ಆ ಕ್ರೂರ ವದನವು ‘ಇನ್ನು ಮೂರು ದಿನದಲ್ಲಿ ಉತ್ತರಿಸದಿದ್ದರೆ ಈ ಭೂಮಿಯ ಮೇಲೆ ನಿನಗೆ ಜಾಗವಿಲ್ಲ,’ ಎಂದೂ ಅಚ್ಚರಿಗೊಳಿಸುತ್ತದೆ........ ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ಪ್ರಯತ್ನದಲ್ಲಿ ನನ್ನನ್ನು ವರ್ಷಗಳಿಂದ ನೋಡುತ್ತಿರುವ ಮನೆಯ ಗೋಡೆಗಳನ್ನು, ಮರವನ್ನು, ನೀರನ್ನು ‘ನಾನು ಯಾರು?’ ಎಂದು ಕೇಳಿದಾಗ, ಗೋಡೆಗಳು ‘ನೀನು ರಕ್ತಮಾಂಸವಿರುವ ಹುಡುಗಿ,’ ‘ನೀನು ಸೂಕ್ಷ್ಮ ಮನಸ್ಸಿನವಳು...,’ ‘ನೀನು ಈ ಮನೆಯ ಹುಡುಗಿ, ಇಂಥವರ ಮಗಳು, ತಂಗಿ.....’ಮುಂತಾಗಿ ಪ್ರತಿಧ್ವನಿಸುತ್ತವೆ. ಮರವು ‘ನೀನು ಕತ್ತಲ ಕೂಸು......’ಎಂದು ಪ್ರತಿಕ್ರಿಯಿಸುತ್ತದೆ. ನೀರಿನಲ್ಲಿರುವ ಪ್ರತಿಬಿಂಬವು ಕಣ್ಣು, ಮೂಗು, ಬಾಯಿಯನ್ನು ಅಳತೆಮಾಡಿದಂತೆ ತೋರಿಸಿ, ‘ನೀನು ಇದೇ.....’ಎಂದಂತಾಗಿ ಮನಸ್ಸು ಖಿನ್ನವಾಗುತ್ತದೆ......... ಕೈಯಲ್ಲಿ ಒಂದು ಮಣಿಕಟ್ಟನ್ನು ಹಿಡಿದು ಎಣಿಸಲಾರಂಭಿಸಿದಾಗ ಎಲ್ಲ ಮಣಿಗಳೂ ಉದುರಿಹೋಗುತ್ತವೆ. ಕೈಗೆ ಸಿಗದಂತೆ ಉರುಳಿಹೋಗುತ್ತಲಿದ್ದ ಅವುಗಳನ್ನು ಮುಷ್ಟಿಯಲ್ಲಿ ಹಿಡಿಯುವ ಪ್ರಯತ್ನದಲ್ಲಿದ್ದಾಗ ‘ಮೌನ’ವು, ‘ನಾನು ಯಾರೆಂಬುದನ್ನು ಅವರು, ಇವರು, ನನಗೆ ತಿಳಿದವರಿಗೆಲ್ಲಾ ಪ್ರಶ್ನೆಹಾಕಿ ಅವರು ಕೊಡುವ ಉತ್ತರಗಳಲ್ಲೊಂದನ್ನು ಆಯ್ದುಕೊಳ್ಳುವ ಪ್ರಯತ್ನದಲ್ಲಿ ನನ್ನ ಪ್ರಯತ್ನವೆಲ್ಲಾ ಕಳೆದುಹೋಗುತ್ತಿದೆ.....’ಎನ್ನುವ ಅರಿವಾಗುತ್ತದೆ. ಓಡುತ್ತಿದ್ದ ಸಮಯವು ನನ್ನ ಪಾಲಿಗೆ ಒಂದು ಗಂಟೆಯನ್ನು ಮಾತ್ರ ಉಳಿಸಿದ್ದಾಗ ಮೈದಾನಕ್ಕೆ ಬಂದು ಮಂಡಿಯೂರಿ ಕುಳಿತೆ...... ಮೊದಲು ಆ ಮೈದಾನದಲ್ಲಿದ್ದ ಅದೇ ಜನ ಕೈಯಲ್ಲಿ ಸ್ವಪರಿಚಯ ವಿವರವನ್ನೊಳಗೊಂಡ ಹಾಳೆಯನ್ನು ಹಿಡಿದು ಆಗಸದತ್ತ ಮೊಗಮಾಡಿ ಆಕಾಶರಾಜನ ನಿರೀಕ್ಷೆಯಲ್ಲಿರುತ್ತಾರೆ. ಅಲ್ಲಿ ಸೌಮ್ಯ, ಸುಂದರ ಮೊಗವೊಂದು ಗೋಚರಿಸಿದ ತಕ್ಷಣವೇ ಸಾಮೂಹಿಕ ಪ್ರಾರ್ಥನೆಯಂತೆ ಸ್ವವಿವರವನ್ನು ಓದಲಾರಂಭಿಸುತ್ತಾರೆ. ಒಬ್ಬೊಬ್ಬರೂ ತಮ್ಮ ಪಾಲಿನದನ್ನು ಹೇಳಿ ಮುಗಿಸಿ ಹಾಳೆಯನ್ನಿಟ್ಟು ಹೋಗುತ್ತಾರೆ. ತಾನೊಬ್ಬಳೇ ಉಳಿದಾಗ ಆಕೆ, ‘ನೀನ್ಯಾರು ಎಂದು ತಿಳಿಯಲಿಲ್ಲವಾ?’ ಎಂದು ಕೇಳುತ್ತಾಳೆ. ‘.....’ ‘ನೀನ್ಯಾರು ಎಂದು ಯಾರಿಗೋ ಹೇಳುವ ಅಗತ್ಯವಿತ್ತಾ?’ ಎಂದು ಆಕೆಯೇ ಪ್ರಶ್ನಿಸಿದಾಗ, ‘ಹೌದಲ್ಲವೇ’ ಎನಿಸುತ್ತದೆ. ಉತ್ತರ ತಿಳಿಯಲು ಆಕೆಯ ಸಲಹೆಯಂತೆ ಬೆಟ್ಟದ ತುದಿಯಲ್ಲಿ ಹೋಗಿ ನಿಂತು ‘ನಾನು ಯಾರು?’ ಎಂದು ಅನೇಕ ಸಲ ಕೂಗಿದಾಗ ಅದೇ ಪ್ರತಿಧ್ವನಿ ಬರುತ್ತದೆ! ಸುಖದ ಕ್ಷಣಗಳಲ್ಲಿ ನಮ್ಮ ಸಾಮರ್ಥ್ಯದ ಅರಿವಾಗಬಹುದೆಂದು ಉಯ್ಯಾಲೆಯ ಮೇಲೆ ಕುಳಿತಾಗಲೂ, ಕಣ್ಣರೆಪ್ಪೆಯನ್ನು ಮುಚ್ಚಿ ತೆಗೆದಾಗಲೂ ತಿಳಿಯುವುದಿಲ್ಲ. ಕಡೆಗೆ ‘ಮರಳಿನ ಮೇಲೆ ನಿನ್ನ ಬಗ್ಗೆ ನಿನಗೆ ತೋಚಿದ್ದನ್ನು ಬರೆ. ಆಗಲಾದರೂ ಗೊತ್ತಾದೀತು,’ ಎಂದು ಆಕೆ ಹೇಳಿದಾಗ ಬರೆಯುತ್ತಾ ಹೋದಂತೆ ಮತ್ತೊಂದೆಡೆಯಿಂದ ಸುಯ್ಯನೆ ಬೀಸುವ ಗಾಳಿ ಆ ಬರಹವನ್ನು ಮುಚ್ಚುತ್ತಾ ಬರುತ್ತದೆ. ಆಕೆ ತಟ್ಟನೆ, ‘ಇದೇ ನೀನು’ ಎನ್ನುತ್ತಾಳೆ! ‘ಇದೇ ಮನುಷ್ಯ ಬದುಕು. ನಮಗೇ ಗೊತ್ತಿಲ್ಲದಂತೆ ಜೀವನದಲ್ಲಿ ಮರಳಮೇಲೆ ನಾವ್ಯಾರೆಂಬುದನ್ನು ಬರೆಯಲಾರಂಭಿಸಿರುತ್ತೇವೆ. ಬದುಕಿನ ಅನುಭವಗಳು ಗಾಳಿಯಂತೆ ಬಂದು ನಮ್ಮ ‘ಬರಹ’ವನ್ನು ಮುಚ್ಚುತ್ತಾ ನಮ್ಮನ್ನು ನಮಗೆ ತೋರಿಸುತ್ತಿರುತ್ತದೆ.............‘ಬೆರಳಡಿಯಲ್ಲಿ ಜೀವಂತವಾಗಿರುವ ಅಕ್ಷರವೇ ‘ನಾನು’’. ಆದರೆ ನನ್ನನ್ನು, ನನ್ನತನವನ್ನು ಇಡೀ ಲೋಕವೇ ನೋಡಬೇಕೆಂದು ಬಯಸಿ ನಮ್ಮ ಬರವಣಿಗೆಯ ಸುತ್ತಾ ‘ಗಾಳಿ’ ಬರದಂತೆ ತಡೆಗೋಡೆಯನ್ನು ಕಟ್ಟಿ ಬರೆದ ಅಷ್ಟನ್ನೂ ಉಳಿಸಿ ಅದನ್ನು ನಾವೇ ನೋಡಿ ಹಿಗ್ಗುತ್ತಾ ಹೆಮ್ಮೆಪಡುವ ಮೂರ್ಖರು ನಾವಾಗಬಾರದಷ್ಟೆ. ತಡೆಗೋಡೆಯೆಂಬ ಪರಿಮಿತಿಯೊಳಗೆ ಅಡಗಿ ಬೀಗುವವರಿಗೆ ‘ನಾನೇ’ ಎಂಬ ಹಮ್ಮು ಬಿಟ್ಟರೆ ಉಳಿದದ್ದೇನೂ ಇರಲು ಸಾಧ್ಯವಿಲ್ಲ............’
ಇತ್ತೀಚೆಗೆ ದೊರೆತ ಶ್ರೀರಾಮ ಶರ್ಮಾ ಆಚಾರ್ಯರ ‘ನಾನು ಯಾರು?’ ಎಂಬ ಪುಸ್ತಕವನ್ನು ಓದಲಾರಂಭಿಸಿದೆ. ಪ್ರಸ್ತಾವನೆಯಲ್ಲಿ ಲೇಖಕರು, ‘ಮನುಷ್ಯನು ತಿಳಿದುಕೊಳ್ಳಬೇಕಾದ ಅನೇಕ ವಿಷಯಗಳಲ್ಲಿ ತನ್ನನ್ನು ತಾನು ಅರಿಯುವುದೇ ಸರ್ವಶ್ರೇಷ್ಠವಾಗಿದೆ. ನಾವು ಹೊರಗಿನ ಅನೇಕ ವಿಷಯಗಳನ್ನು ತಿಳಿದಿರುತ್ತೇವೆ, ಇಲ್ಲವೇ ತಿಳಿದುಕೊಳ್ಳುವ ಪ್ರಯತ್ನದಲ್ಲಿರುತ್ತೇವೆ. ಆದರೆ ಸ್ವತಃ ನಾನು ಯಾರು ಎಂಬುದನ್ನೇ ಮರೆತುಬಿಡುತ್ತೇವೆ.ನಮ್ಮನ್ನು ನಾವು ಅರಿಯದಿದ್ದಲ್ಲಿ ಬದುಕಿನ ಹಾದಿ ತೀವ್ರ ತೊಳಲಾಟಕ್ಕೆ ಸಿಲುಕಿ, ನಮ್ಮನ್ನು ತೀವ್ರ ತೊಳಲಾಟಕ್ಕೆ ಸಿಲುಕಿಸಿ, ನಮ್ಮನ್ನು ಅನಿಶ್ಚಿತತೆ ಮತ್ತು ಕಂಟಕಗಳತ್ತ ತಳ್ಳುತ್ತದೆ. ತನ್ನ ಕುರಿತ ವಾಸ್ತವಿಕ ಜ್ಞಾನದ ಕೊರತೆಯಿಂದಾಗಿ ಮನುಷ್ಯ ಯೋಚಿಸಬಾರದ ವಿಷಯಗಳನ್ನು ಯೋಚಿಸುತ್ತಾನೆ ಮತ್ತು ಮಾಡಬಾರದ ಕಾರ್ಯಗಳನ್ನು ಮಾಡುತ್ತಾನೆ. ನಿಜವಾದ ಸುಖ-ಶಾಂತಿಗೆ ರಾಜಮಾರ್ಗ ಒಂದೇ; ಅದೆಂದರೆ ಆತ್ಮಜ್ಞಾನ. ಈ ಪುಸ್ತಕದಲ್ಲಿ ಆತ್ಮಜ್ಞಾನದ ಶಿಕ್ಷಣವಿದೆ. ‘ನಾನು ಯಾರು?’ ಈ ಪ್ರಶ್ನೆಗೆ ಉತ್ತರ ಶಬ್ಧಗಳಲ್ಲಲ್ಲ, ಬದಲಿಗೆ ಸಾಧನೆಯ ಮೂಲಕ ಹೃದಯಂಗಮ ಮಾಡಿಕೊಳ್ಳುವ ಪ್ರಯತ್ನ ಇದರಲ್ಲಿದೆ.’ ಎಂದು ತಿಳಿಸಿದ್ದಾರೆ. ಮುಂದೆ ಲೇಖನದಲ್ಲಿ ವಿವರವಾಗಿ ಪ್ರಸ್ತಾಪಿಸುತ್ತಾ ಗೀತೆ, ಈಶಾವ್ಯಾಸೋಪನಿಷತ್ತಿನ ಶ್ಲೋಕಗಳನ್ನು ಉದಾಹರಿಸುತ್ತಾ ‘ನಾನು ಯಾರು?’ ಎನ್ನುವ ಪ್ರಶ್ನೆಗೆ ಬರುವ ನಿಷ್ಕರ್ಷಕ ಉತ್ತರವೆಂದರೆ ‘ನಾನು ಆತ್ಮ’ ಎಂದು ತಿಳಿಸುತ್ತಾರೆ.

(ನನ್ನ ಮಗಳು ಸುಷ್ಮಳ ಕನಸಿನ ಕಥೆ ‘ನಾನು ಯಾರು?’ ಲಿ೦ಕ್ ಇಲ್ಲಿದೆ: ‘ನಾನು ಯಾರು?’ ಇದರ ಮೇಲೆ ctrl ಹಿಡಿದು ಕ್ಲಿಕ್ಕಿಸಿ.)

Sunday, March 4, 2012

ಮನದ ಅಂಗಳದಿ.........೮೨.ಕ್ವಾಂಟಂ ಜಂಪಿಂಗ್

ಕ್ವಾಂಟಂ ಜಂಪಿಂಗ್ ಬಗ್ಗೆ ಭೌತಶಾಸ್ತ್ರದಲ್ಲಿ ಪರೀಕ್ಷೆಗಾಗಿ ಓದಿದ್ದನ್ನು ಹೊರತುಪಡಿಸಿ ನಂತರ ಆಲೋಚಿಸಿರಲಿಲ್ಲ. ಎಷ್ಟೋ ವರ್ಷಗಳ ನಂತರ ಹೊಸ ಆಯಾಮ ಪಡೆದ ‘ಕ್ವಾಂಟಂ ಜಂಪಿಂಗ್’ ನನ್ನತ್ತ ಜಂಪ್ ಮಾಡಿ ನನ್ನನ್ನೇ ತನ್ನಲ್ಲಿ ಲೀನಗೊಳಿಸಿಕೊಳ್ಳುತ್ತದೆಂದು ಎಂದೂ ಕಲ್ಪಿಸಿರಲೂ ಇಲ್ಲ! ಏನಿದು ‘ಕ್ವಾಂಟಂ ಜಂಪಿಂಗ್?’
ನಮ್ಮ ಸುಪ್ತಮನಸ್ಸಿನಲ್ಲಿ ಅಡಗಿರುವ ಮಹಾನ್ ಸಾಮರ್ಥ್ಯವನ್ನು ತಟ್ಟಿ ಎಚ್ಚರಿಸಿ ನಮಗೆ ಅಗತ್ಯವಾದದ್ದನ್ನು ನಮ್ಮೊಳಗಿನಿಂದಲೇ ಪಡೆದುಕೊಳ್ಳುವ ವಿಧಾನವೇ ಕ್ವಾಂಟಂ ಜಂಪಿಂಗ್! ನಮ್ಮೊಳಗೇ ಅರಿವಿದ್ದೋ ಇಲ್ಲದೆಯೋ ಹುದುಗಿರುವ ಸೃಜನಾತ್ಮಕತೆಯನ್ನು , ಅದರಲ್ಲಿ ಈಗಾಗಲೇ ಪರಿಣಿತನಾಗಿರುವ ನಮ್ಮ ಆಂತರ್ಯದೊಂದಿಗೆ ಸಂಪರ್ಕಿಸಿ ಪಡೆದುಕೊಂಡು ನಮ್ಮ ವಾಸ್ತವ ಜೀವನಕ್ಕೆ ಅಳವಡಿಸಿಕೊಳ್ಳುವುದು. ಒಟ್ಟಾಗಿ ಹೇಳುವುದಾದರೆ ಕ್ವಾಂಟಂ ಜಂಪಿಂಗ್ ಒಂದು ನವೀನ ರೀತಿಯ ಧ್ಯಾನಮಾಡುವ ಮತ್ತು ಮುನ್ನೋಟವನ್ನು ಹೊಂದುವ ತಂತ್ರ. ಇದು ‘ಅಮೇರಿಕನ್ ಮಾಂಕ್’ ಎಂದೇ ಖ್ಯಾತಿ ಹೊಂದಿದ ಬರ್ಟ್ ಗೋಲ್ಡ್ಮನ್ರವರ ೩೦ವರ್ಷಗಳ ದೀರ್ಘಕಾಲದ ಕಲಿಕೆ ಮತ್ತು ಸಾಧನೆಯ ಫಲ! ತಮ್ಮ ೧೯ನೆಯ ವಯಸ್ಸಿನಲ್ಲಿಯೇ ಈ ಬಗ್ಗೆ ಆಸಕ್ತಿಹೊಂದಿದ ಬರ್ಟ್ ಗೋಲ್ಡ್ಮನ್ ಮೊದಲು ‘ಸಿಲ್ವ ವಿಧಾನ’ದಿಂದ ರೂಪಿಸಲಾರಂಭಿಸುತ್ತಾರೆ. ನಂತರ ಭಾರತದ ಸಾಧಕರಿಂದ ಪಡೆದುಕೊಂಡ ಆಳವಾದ ಜ್ಞಾನ, ಹವಾಯನ್ನ ಕಹೂನಾ ರವರಿಂದ ಹಾಗೂ ತಮ್ಮ ಬದುಕಿನ ದಾರಿಯಲ್ಲಿ ಸಂಧಿಸಿದ ಇತರ ಪರಿಣತರ ಸಹಕಾರದಿಂದ ಪರಿಣಾಮಕಾರಿ ಮತ್ತು ಶಕ್ತಿಶಾಲಿಯಾದ ತಂತ್ರವನ್ನು ಸಂಶೋಧಸಿದರು. ತಮ್ಮ ೮೦+ ವಯಸ್ಸಿನಲ್ಲಿ ಅವರು ರೈಡಿಂಗ್, ಪೇಂಟಿಂಗ್, ಮ್ಯೂಸಿಕ್, ಫೋಟೋಗ್ರಫಿಗಳಲ್ಲಿ ಪರಿಣತರಾಗಿದ್ದಾರೆ. ತಾವು ಕಂಡ ಈ ವೈಶಿಷ್ಟ್ಯವನ್ನು ಬರಹರೂಪಕ್ಕೆ ಇಳಿಸುವ ಮೂಲಕ ಲೇಖಕರೂ ಆಗಿದ್ದಾರೆ. ಫೋಟೋಗ್ರಫರ್ ಆದದ್ದನ್ನು ಈ ರೀತಿಯಾಗಿ ತಿಳಿಸುತ್ತಾರೆ:
‘ನಾನು ನನ್ನ ಆಂತರ್ಯದ ಜಗತ್ತಿಗೆ ಜಿಗಿದು ಗ್ರೇಟ್ ಫೋಟೋಗ್ರಫರ್ ಬರ್ಟ್ ಗೋಲ್ಡ್ಮನ್ ನನ್ನು ಸಂಧಿಸಿದೆ. ಅವನು ವಿಂಟೇಜ್ ಕ್ಯಾಮೆರಾ ಎದುರು ನಿಂತಿದ್ದ. ನಾನು ಅವನಿಗೆ ‘ಗ್ರೇಟ್ ಫೋಟೋಗ್ರಫರ್ ಆಗಲು ನಿನ್ನಿಂದ ಸಲಹೆ ಪಡೆಯಲು ಬಂದೆ,’ ಎಂದು ಹೇಳಿದೆ. ಅದಕ್ಕೆ ಉತ್ತರವಾಗಿ ನನಗೆ ಎರಡು ಸ್ಪಷ್ಟ ಪದಗಳು ಕೇಳಿಸಿದವು, `plant yourself’ಹಾಗೆಂದರೇನು?’ ನಾನು ಕೇಳಿದೆ. ಸ್ವಲ್ಪ ಕಾಲದ ನಂತರ `Take a lot of pictures,’ ಎಂಬ ಉತ್ತರ ಬಂತು. ಆಗ ನನಗೆ ಏನೂ ಅರ್ಥವಾದಂತೆ ಕಾಣಲಿಲ್ಲ. ನಾನು ನನ್ನ ವಾಸ್ತವ ಪ್ರಪಂಚಕ್ಕೆ ಬಂದೆ ಮತ್ತು ಒಂದು ಕ್ಯಾಮೆರಾವನ್ನು ತೆಗೆದುಕೊಂಡೆ. ನಾನು ಸಾನ್ ದಿಯಾಗೊದಲ್ಲಿನ ಮರೀನ ಬೀಚ್ ಗೆ ಹೋಗಿ ಅನೇಕ ಚಿತ್ರಗಳನ್ನು ತೆಗೆದೆ. ನಾನು ಬಂಡೆಗಳ ಮೇಲೆ ಹೋದಾಗ ಅವು ತುಂಬಾ ಜಾರುತ್ತಿದ್ದವು. ನಾನು ಬಹಳ ನಿಗಾ ವಹಿಸಿ ಜಾರದಂತಹ ಒಂದು ಜಾಗವನ್ನು ಆಯ್ಕೆ ಮಾಡಿಕೊಂಡು ಜಾಗ್ರತೆಯಾಗಿ ನಿಂತುಕೊಂಡೆ. ಓಹ್, ತತ್ ಕ್ಷಣವೇ ನನಗೆ ಹೊಳೆಯಿತು. ಈಗ ನಾನು ನನ್ನನ್ನು ‘ಪ್ಲಾಂಟ್? ಮಾಡಿಕೊಳ್ಳುತ್ತಿದ್ದೇನೆ- ‘Now I am PLANTING myself,’ ಎಂದು! ಬಹುಷಃ ಇದೇ ನನ್ನ ಆಂತರ್ಯ(twinself-doppleganger) ನನಗೆ ನೀಡಿದ ಸೂಚನೆಯಿರಬಹುದು. `plant yourself’ ಎಂದರೆ ‘ಒಂದು ಜಾಗದಲ್ಲಿ ಸ್ಥಿರವಾಗಿ ನಿಲ್ಲು,’ ಎಂದು ಅರ್ಥವೆಂದು ತಿಳಿಯಿತು. ಈರೀತಿ ನನ್ನನ್ನು ನಾನು ‘ಪ್ಲಾಂಟ್’ ಮಾಡಿಕೊಂಡು ಸಾಕಷ್ಟು -ನನಗೆ ಖಚಿತವಾಗಿ ನೆನಪಿದೆ ೧೩೦ ಚಿತ್ರಗಳನ್ನು ತೆಗೆದೆ! ಇವುಗಳಲ್ಲಿ ಒಂದು ಉತ್ತಮವಾಗಿ ಇರಲೇಬೇಕು. ಅವುಗಳನ್ನು ಪ್ರಿಂಟ್ ಹಾಕಿಸಿ ನನ್ನ ಹೊಟೆಲ್ನ ರೂಂಗೆ ಹೋಗಿ ಉತ್ತಮವಾದದ್ದನ್ನು ಆಯ್ಕೆಮಾಡಲು ಹಾಸಿಗೆಯ ಮೇಲೆ ಹರಡಿದೆ. ಆದರೆ ಅವುಗಳನ್ನು ಹಾಸಿಗೆಯಮೇಲೆ ಹಾಕುತ್ತಿದ್ದಂತೆ ಅವು ಬೇರೆಬೇರೆ ಚಿತ್ರಗಳಲ್ಲ, ಒಂದೇ ಚಿತ್ರ ಎನ್ನುವಂತೆ ಕಂಡುಬಂದವು. ಅವೆಲ್ಲವೂ ಒಂದು ಸುಂದರವಾದ ‘ಜಿಗ್ ಝಾ ಪಝಲ್? ನಂತೆ ಒಂದರೊಡನೊಂದು ಹೊಂದಿಕೊಂಡವು. ನನಗೆ ನಂಬಲಸಾಧ್ಯವಾಗುವಂತೆ ಅದು ಅದ್ಭುತವಾಗಿತ್ತು. ನಾನು ಒಂದು ಫೋಂ ಬೋರ್ಡನ್ನು ತಂದು ಅವುಗಳನ್ನೆಲ್ಲಾ ಒಂದು ಚಿತ್ರದಂತೆ ಅಂಟಿಸಿದೆ.
ಆ ದಿನದಿಂದ ‘ಮಾಂಟೇಜಸ್’ ((Montages)) ಎಂದು ನಾನೇ ಹೆಸರಿಸಿದ ಇಂಥಾ ಅನೇಕ ಚಿತ್ರಗಳನ್ನು ತೆಗೆದೆ. ಅವು ಎಷ್ಟೊಂದು ಪ್ರಸಿದ್ಧಿಯಾದವೆಂದರೆ ೨೪ ಅಂಥಾ ಚಿತ್ರಗಳು ಅಮೇರಿಕಾದ ಒಂದು ಸುಪ್ರಸಿದ್ಧ ಗ್ಯಾಲರಿಯಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿವೆ!?
‘ಕ್ವಾಂಟಂ ಜಂಪಿಂಗ್ಅನ್ನು ಉಪಯೋಗಿಸಲಾರಂಭಿಸಿದ ಸುಮಾರು ೩೦ದಶಕಗಳ ನಂತರ, ನನ್ನನ್ನು ಪರಿವರ್ತಿಸಬಹುದಾದ ಇನ್ನೂ ಇತರ ನೂತನ ವಿಧಾನಗಳ ಬಗ್ಗೆ ಸಂಶೋಧಿಸುತ್ತಿದ್ದೇನೆ,’ ಎನ್ನುತ್ತಾರೆ ಬರ್ಟ್ ಗೋಲ್ಡ್ಮನ್! ‘ನಾನು ಕ್ವಾಂಟಂ ಜಂಪಿಂಗ್ಅನ್ನು ಬಳಸಿ ನನ್ನೊಳಗಿನ ನನ್ನನ್ನು ಸಂಪರ್ಕಿಸಿ ಕಲಿಯುತ್ತಾ ಅದ್ಭುತವಾದದ್ದನ್ನು ಪಡೆದುಕೊಳ್ಳಲಾರಂಭಿಸಿದ ನಂತರ ನನ್ನ ಜೀವನವೇ ಪುನಶ್ಚೇತನಗೊಂಡು ನವನವೀನವಾಗುತ್ತಿದೆ ಎನಿಸುತ್ತಿದೆ. ನನ್ನ ಈ ಪಯಣದ ಉತ್ತಮ ಭಾಗವೆಂದರೆ ನಾನು ಕಂಡುಕೊಂಡ ಈ ಮಹತ್ತರವಾದ ತಂತ್ರವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದು. ನನ್ನ ಈ ೮೩ನೆಯ ವಯಸ್ಸಿನಲ್ಲಿಯೂ ಮೆದುಳಿನ ಅಗಾಧ ಸಾಮರ್ಥ್ಯವನ್ನು ಕಂಡುಹಿಡಿದ ಪ್ರಾರಂಭದಲ್ಲಿನ ಉತ್ಸಾಹವೇ ನನಗಿದೆ. ಆಲ್ಫ ಹಂತವನ್ನು ಪ್ರವೇಶಿಸಿ ಮೆದುಳಿನ ಈ ಅದ್ಭುತ ಶಕ್ತಿಯ ಲಾಭಗಳನ್ನು ಪಡೆದುಕೊಳ್ಳುವ ವಿಧಾನವನ್ನು ನಾನು ನಿಮಗೆ ತಿಳಿಸುತ್ತೇನೆ.....
ನನ್ನ ಈ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಸುತ್ತಿ, ಸೆಮಿನಾರ್ಗಳನ್ನು ನಡೆಸುವುದು ಕಷ್ಟಕರ. ಆದ್ದರಿಂದ ನಾನು ಇಂಟರ್ನೆಟ್ ಮೂಲಕ ನನಗೆ ತಿಳಿದದ್ದನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ.’
ಬರ್ಟ್ ಗೋಲ್ಡ್ಮನ್ರವರ ಫೇಸ್ ಬುಕ್ ನ ಇತ್ತೀಚಿನ ಪೋಸ್ಟಿಂಗ್, `Energizing a glass of water’
ಈ ರೀತಿಯ ಸಾಧಕರ ವಿಚಾರಗಳನ್ನು ತಿಳಿದಾಗಲೆಲ್ಲಾ ‘ಆನಂದ’ ಎಂಬ ಶೀರ್ಷಿಕೆಯ ಈ ‘ಹನಿ’ ನೆನಪಾಗುತ್ತದೆ,
‘ಕಣ್ಣು ಹಾಯಿಸಿದಲ್ಲೆಲ್ಲಾ
ಬೆಳೆ ತುಂಬಿದ ಬಯಲು
ಇಳಿದಿದ್ದೇನೆ ಆರಿಸಿ ಕೊಯ್ಯಲು
ಕನಜ ತುಂಬಿದ ನಂತರ
ಹದವರಿತು ಬಿತ್ತಲು!’
ಜಗತ್ತಿನಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದಂಥಾ ಮಹನೀಯರು ನಮ್ಮೊಡನೆ ಮೂರ್ತ ಅಥವಾ ಅಮೂರ್ತ ರೂಪದ ತಮ್ಮ ಕೃತಿಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಅವುಗಳನ್ನು ಒಳಿತಿಗಾಗಿ ಬಳಸಿ, ಉಳಿಸಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿದೆ.