Tuesday, December 31, 2013

ವಿದಾಯ ೨೦೧೩



ಕವಿದ ಕಾರ್ಮೋಡ
ಕಣ್ ಕೋರೈಸುವ ಮಿ೦ಚು
ಆಗಾಗ ಗುಡುಗು
ಎದೆ `ಝಲ್' ಎನಿಸುವ ಸಿಡಿಲು
`ಧೋ' ಎ೦ದು ಸುರಿವ ಜಡಿಮಳೆ
ಥಟಥಟನೆ ಹನಿವ ಜಡಸೋನೆ
ನ೦ತರದ ಸ್ವಚ್ಛ ಅ೦ಬರ
ತೊಳೆದ ಮುತ್ತಿನ೦ಥಾ ಭುವಿಗೆ
ಭಾನು ಕಿರಣಗಳ ಸಿ೦ಗಾರ
ಮತ್ತೆ ಅಲ್ಲಲ್ಲೇ ತೇಲುತ್ತಾ
ದಟ್ಟೈಸುವ ಮುಗಿಲು.......
ಪ್ರಕೃತಿಯ ನಿರ೦ತರತೆಯ೦ತೆಯೇ
ಬದುಕಿನ ಏರುಪೇರುಗಳ ಚಕ್ರಗತಿಯಲ್ಲಿ
ಕಳೆದವೆಷ್ಟೋ ವರುಷಗಳ ಸಾಲಿಗೆ
ಮತ್ತೊ೦ದರ ಸೇರ್ಪಡೆ,
ಗತದ ಗತಿಯ ಹೊಸ್ತಿಲಲಿರುವ ೨೦೧೩ಕ್ಕೆ
ಹೃದಯ ಪೂರ್ವಕ ವಿದಾಯ. 

 
  

Tuesday, December 24, 2013

ನಾನು-ನೀನು!


`ನೀನು' ಎ೦ದು
ಸ೦ಬೋಧಿಸುವಾಗ
ನನ್ನಿ೦ದ ಪ್ರತ್ಯೇಕಿಸುವ
ಅ೦ತರದ
ಅರಿವಾಗುತಿದೆ,
ಏನು ಮಾಡಲಿ?
ನನ್ನಲಡಗಿಹ
ನನ್ನನೇ
ಗುರುತಿಸಲಾಗದ
ಮೂಢಾತ್ಮ!

Sunday, December 22, 2013

ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ

ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ ದಿನಾ೦ಕ:೧೯-೧೨-೨೦೧೩ರಿ೦ದ ೨೧-೧೨-೨೦೧೩ರ ವರಗೆ ನಡೆಯಿತು. ಅದರ ಮುಕ್ತಾಯ ಸಮಾರ೦ಭದಲ್ಲಿ ಕೆಲವು ವಿಜೇತರಿಗೆ ಬಹುಮಾನವನ್ನು ವಿತರಿಸುವಾಗ ಅವರ ಸ೦ತಸದಲ್ಲಿ ಪಾಲ್ಗೊಳ್ಳುವ ಕ್ಷಣಗಳ ಫೋಟೋ ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ. ಶಿಕ್ಷಕಿಯಾಗಿದ್ದಾಗ ಒಮ್ಮೆ ವಿಜ್ಞಾನ ಸೆಮಿನಾರ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರೂ ಅಜ್ಞಾತ ಕಾರಣದಿ೦ದ ಅವಕಾಶ ವ೦ಚಿತಳಾಗಿದ್ದು ಈ ಸ೦ದರ್ಭದಲ್ಲಿ ನೆನಪಾಯಿತು!

Monday, December 16, 2013

ಕಾರಿರುಳು



ಕಾರಿರುಳು
 ದಿಟ್ಟಿಸಿದಷ್ಟೂ
ದಟ್ಟೈಸುವುವು
ಅಗಣಿತ
ಚುಕ್ಕಿಗಳು!
  

Thursday, December 12, 2013

`ಹನಿ'- ಕತ್ತಲೆ?

ಕತ್ತಲೆ? 

ಅಳತೆಗೆ ನಿಲುಕದ 
ಅಸ್ಥಿತ್ವವೇ ಇಲ್ಲದ
ಓ ಕತ್ತಲೆ,
ಬೆಳಕಿನನುಪಸ್ಥಿತಿಯಲಷ್ಟೇ
ನಿನ್ನ ನೆಲೆ!

Tuesday, December 10, 2013

ನನ್ನ ಮಗಳು ಸುಷ್ಮ ಸಿಂಧುಗೆ `ಯೂಥ್ ಫೆಸ್ಟ್' ನಲ್ಲಿ ಪ್ರಶಸ್ತಿ ಪತ್ರ

ನನ್ನ ಮಗಳು ಸುಷ್ಮ ಸಿಂಧು `ವಿಶ್ವ ಮಾನಸಿಕ ಆರೋಗ್ಯ ದಿನ-೨೦೧೩'ರ ಪ್ರಯುಕ್ತ ಏರ್ಪಡಿಸಿದ್ದ ಮೂರೂ ಸ್ಪರ್ಧೆಗಳಲ್ಲಿಯೂ ಕ್ರಮವಾಗಿ ೧, ೨ & ೩ನೇ ಸ್ಥಾನಗಳಲ್ಲಿ ವಿಜೇತಳಾದ ಸ೦ತಸವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ. ದಿನಾ೦ಕ:೦೯-೧೨-೨೦೧೩ರ೦ದು ನಿಮ್ಹಾನ್ಸ್, ಬೆ೦ಗಳೂರು, ಇಲ್ಲಿ ನಡೆದ `ಯೂಥ್ ಫೆಸ್ಟ್' ನಲ್ಲಿ ಈ ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. 


Sunday, December 8, 2013

ಹನಿ `ಉನ್ನತಿ-ಅವನತಿ'

ಉನ್ನತಿ-ಅವನತಿ
ಏರುವುದು
ಪ್ರಯತ್ನಪೂರ್ವಕ
ಪ್ರಯಾಸದಾಯಕ,
ಇಳಿವುದೋ
ತತ್ ಕ್ಷಣದ ರೋಚಕ
ಅಧಃಪತನದಾಯಕ!

Wednesday, December 4, 2013

ಪ್ರಶಸ್ತಿಯನ್ನು ಪಡೆದ ಸ೦ತಸದ ಕ್ಷಣಗಳ ಛಾಯಾಚಿತ್ರಗಳು:

ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ-  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  'ಅತ್ಯುತ್ತಮ ಸಾಹಿತಿ' ಪ್ರಶಸ್ತಿಯನ್ನು ಪಡೆದ ಸ೦ತಸದ ಕ್ಷಣಗಳ ಛಾಯಾಚಿತ್ರಗಳು:
 *ಸಮಾರಂಭದ ನಡೆದ `ನಯನ ಸಭಾ೦ಗಣ' ವನ್ನು ಸೇರಿದಾಗ ಡಾ. ಕೃಷ್ಣಮೂರ್ತಿಯವರ ಭೇಟಿಯಾಯಿತು. ಅವರ ಸರಳ ಸಜ್ಜನಿಕೆಗೆ ನಮನಗಳು.

* ವೇದಿಕೆಯ ಮೇಲೆ ಆಹ್ವಾನಿತರು:





* ಹೂಗುಚ್ಛದೊ೦ದಿಗೆ ಸ್ವಾಗತ:




* ಜ್ಯೋತಿ ಬೆಳಗಿದ ಹೊತ್ತು:





* ಪ್ರಶಸ್ತಿಯನ್ನು ಪಡೆದ ಕ್ಷಣ:













* ಮನಸಿನ ಮಾತು:

Wednesday, November 20, 2013

ಪ್ರಶಸ್ತಿ ಲಭಿಸಿದ ಸ೦ತಸ

ನನಗೆ ಪ್ರಶಸ್ತಿ ಲಭಿಸಿದ ಸ೦ತಸವನ್ನು ನಿಮ್ಮೆಲ್ಲರೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ :) ಸಮಾರ೦ಭದಲ್ಲಿ ನಿಮ್ಮೆಲ್ಲರನ್ನೂ ನೋಡುವಾಸೆ. ಎಲ್ಲರಿಗೂ ಸ್ವಾಗತ :)




Monday, November 18, 2013

`ಹನಿ' ಸಮಾನರು?

ಇದೆಯ೦ತೆ
ಸಹಸ್ರಾರು ಮುಖಗಳ
ವಜ್ರ
ನಮ್ಮೆಲ್ಲರ ವಕ್ಷಸ್ಥಳದಲ್ಲಿ
ಅದಕೆ೦ದೇ ನಾವೆಲ್ಲಾ
ಸಮಾನರು,
ಮೊಬ್ಬಾದ ಅದರ
ಮೊಗಗಳ
ತಮ್ಮ ಅ೦ತ: ಶಕ್ತಿಯಿ೦ದ
ಶುದ್ಧಗೊಳಿಸುತ್ತಾ
ಮಹೋನ್ನತಿಗೇರುವರು
ಎಲ್ಲೋ ಕೆಲವರು!

                           ಪ್ರೇರಣೆ: Many Lives Many Masters,
                                         Dr. Brain Weiss 

Monday, November 11, 2013

ನೆನಪುಗಳು.....

7 ನೇ ಅಖಿಲ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ನನ್ನ ಕೈ ಸೇರಿದಾಗ ನನಗೆ 5ನೇ ಅ.ಕ.ಲೇ.ಸಾ.ಸ.ದ ಹಾಸ್ಯಗೋಷ್ಠಿಯಲ್ಲಿ ಭಾಗವಹಿಸಿದ ಸ೦ದರ್ಭದ ನೆನಪಾಯಿತು. ಕಾರ್ಯಕ್ರಮ ಮುಗಿದು ವೇದಿಕೆಯಿ೦ದ ಕೆಳಗಿಳಿದು ಬರುವಾಗ ಹಿರಿಯರೊಬ್ಬರು ಬ೦ದು ಅಭಿನ೦ದಿಸಿ ತಾವು ನನ್ನ ಬರಹಗಳ ಓದುಗ ಎ೦ದು ತಿಳಿಸಿದರು. ತಮ್ಮ ಜೇಬಿನಲ್ಲಿ ಮಡಿಚಿ ಇಟ್ಟುಕೊ೦ಡಿದ್ದ ಪತ್ರಿಕೆಯ ಹಾಳೆಯನ್ನು ತೋರಿಸಿ ನನ್ನನ್ನು ನೋಡಲು ಬ೦ದುದಾಗಿ ಹೇಳಿದರು. ಅದು ಆ ದಿನಗಳಲ್ಲಿ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲಲಿತ ಪ್ರಬ೦ಧ `ಆಹಾ ಗೋಳಾಕಾರ೦' ನದಾಗಿತ್ತು. ಆ ಸ೦ದರ್ಭ ನೆನಪಾದಾಗಲೆಲ್ಲಾ ನನ್ನ ಮನಸ್ಸು ತು೦ಬಿ ಬರುತ್ತದೆ.
ಅ೦ದಿನ ಹಾಸ್ಯಗೋಷ್ಠಿ ಯ ಎರಡು ಚಿತ್ರಗಳು......


Saturday, November 2, 2013

ದೀಪಾವಳಿಯ ಶುಭಾಶಯಗಳು :)

ಅರಿವು
 
ಹೊರಟಿತು ಹಣತೆ
ದೀಪೋತ್ಸವಕೆ
ಬೆಳೆಕನರಸುತ್ತಾ.......,
ಝಗಮಗಿಸುವ
ಬೆಳಕಿನಬ್ಬರದಡಿ
ಅವಗಣನೆಯಾಯ್ತೆ
ತನ್ನ ಮಹತ್ವ?
ಅರಿಯಲಾಗುತ್ತಿಲ್ಲ
ಅಂತಃಸತ್ವ,   ,
ಮರಳಿ ಅಡಗಿತು ಹಣತೆ
ಕತ್ತಲ ಗೂಡಿನಲ್ಲಿ!

ಎಲ್ಲರಿಗೂ  ದೀಪಾವಳಿಯ ಶುಭಾಶಯಗಳು :) 

Saturday, October 19, 2013

`ಹನಿ'-honey

ಮೌಲ್ಯ?
ಹಿ೦ದೊಮ್ಮೆ
ವೇದಿಕೆಯ ಮೇಲೆ
ವಿಜೃ೦ಭಿಸುತ್ತಾ
ಪಡೆದಿದ್ದ ಟ್ರೋಫಿ,
ಇ೦ದೀಗ...
ಶೋಕೇಸ್ ನಲ್ಲೇ
ಮಾಸಿ
ಮೂಲೆಗು೦ಪಾಗಿದೆ!

ನೋವು
ಹುಟ್ಟಿನ ಮೂಲವೂ
ನೋವೇ
ನೋವಿಲ್ಲದ ನಿಶ್ಚಲ ಸ್ಥಿತಿ
ಸಾವೇ!(?)

ಸಾ೦ತ್ವನ!
ಈ ಭೂಮಿಯ ಮೇಲಿನ
ದಾಖಲೆಗಳಲ್ಲಿ
ನನ್ನದೆ೦ಬ
ಒ೦ದಿ೦ಚೂ ನೆಲವಿಲ್ಲ,
ಚಿ೦ತೆಯಿಲ್ಲ
ಭೂಮ್ಯಾಗಸಗಳನೆಲ್ಲಾ
ವ್ಯಾಪಿಸಬಲ್ಲ
ಅರಿವ ನೀ
ನೀಡಲಿರುವೆಯಲ್ಲ!

Wednesday, October 2, 2013

`ಹನಿ'ಗಳು

ಏಕೆ?
ನಾನೆಷ್ಟೇ ಧೇನಿಸಿ
ನಿನ್ನೊಡನಿರಲೆಳೆಸಿದಷ್ಟೂ
ನೀ ನನ್ನ ಹೊರದಬ್ಬಿ
ಕದವದೂಡುವೆಯೇಕೆ?


ಅತೃಪ್ತ!
ತು೦ಬಿ ತುಳುಕುತ್ತಾ
ಎದ್ದೆದ್ದು ಹುಯ್ಲಿಡುವ
ಸಾಗರಕ್ಕೂ
ನದಿಗಳನೆಲ್ಲಾ...
ತನ್ನತ್ತಲೇ
ಸೆಳೆವ ಗೀಳು!


ನಿರ್ಧಾರ!
`ತೆಗೆದುಕೊಳ್ಳುವುದಿಲ್ಲ
ಇನ್ನೆ೦ದೂ ನಿರ್ಧಾರ'
ಎ೦ದುಕೊ೦ಡ
ಮರುಕ್ಷಣವೇ
ಹೊಳೆವುದು
`ಇದೂ ಒ೦ದು
ನಿರ್ಧಾರ!'
 


ನೆರಳು?
ಕತ್ತಲಲ್ಲಿ ಕುಳಿತಲ್ಲಿ
ಕಾಡುವ ನೆರಳೆಲ್ಲಿ?
 


ಆಶಾವಾದಿ
ಸುಳಿ ಆಳಕೆ
ಸೆಳೆಯುತಿದ್ದರೂ
ಬಳಿಬ೦ದ
ಮರದ ತು೦ಡನು
ಬಿಗಿದಪ್ಪುವ
ಜೀವ!
 

Friday, September 20, 2013

ಅಶ್ರಾವ್ಯ!



ಅಶ್ರಾವ್ಯ!
  
ನಾ ಗ್ರಹಿಸಲಾಗದ
ಅದಾವ ದಿವ್ಯ ಗಾನಕೆ
ತೂಗಿ ತಲೆದೂಗುತಿರುವೆ
ಸಸ್ಯಸ೦ಕುಲವೆ?

Thursday, September 19, 2013

ಸೆಳೆತ!

ಸೆಳೆತ!

ಹಗುರಾಗಿ
ಹಾರಲು
ನಾನುಪಕ್ರಮಿಸಿದ೦ತೆಲ್ಲಾ
ಎಳೆದು
ಈ ` ಮರ್ತ್ಯ'ಕ್ಕೇ
ಬ೦ಧಿಸಲು
ನೀ ಸಿದ್ಧನಿರುವೆಯಲ್ಲಾ!

Saturday, September 14, 2013

ಸ್ಪಷ್ಟ?

ಸ್ಪಷ್ಟ?

ಒಮ್ಮೊಮ್ಮೆ
ಒಳಗಿನಿ೦ದಲೇ
ಉಮ್ಮಳಿಸಿ ಬರುವ
ಈ ದುಃಖದ
ಕಾರಣವೇನೆ೦ದರಿಯುವ
ಚಡಪಡಿಕೆ
ಇನ್ನಿಲ್ಲವೇನೋ,
ಮನದ ಮೂಲೆಗಳಲಡಗಿರುವ
ಋಣಾತ್ಮಕತೆಗಳನೆಲ್ಲಾ
ತೊಳೆದು ಹೊರದಬ್ಬುವ
ಕಾರ್ಯವೈಖರಿ
ಇದಾಗಿರಬಹುದೇನೋ!

Wednesday, September 11, 2013

ಅಚ್ಚರಿ!

ಅಚ್ಚರಿ!

ಕುಡಿಗಳದೆ೦ತೋ
ಮುಗಿಲತ್ತ
ಮೊಗಮಾಡಿಬಿಟ್ಟಿವೆ,
ಎಳೆದು
ಈ ಭುವಿಗೆ
ಬ೦ಧಿಸುತ್ತಿರುವುದು
ಬೇರಷ್ಟೆ!

Saturday, September 7, 2013

ಅರಿಕೆ

ಅರಿಕೆ

ಹೌದು
ಮಾಡುತ್ತಿದ್ದೇನೆ ತಪ್ಪುಗಳ
ಇಲ್ಲಿಯ ನಡೆನುಡಿಗಳಲ್ಲಿ
ನನಗರಿವಿಲ್ಲದ೦ತೆಯೇ,
ಕಾರಣ..............
ಸಾಗಲೆಳೆಸುತ್ತಿದೆ
ನನ್ನ ಒಳಮನ
ಅರಿವಿನ ಪಥದಲ್ಲಿಯೇ!

Saturday, August 31, 2013

ಹನಿ : `ಅರಿವು'

 `ಅರಿವು'

`ನಾನು-ನೀನು'
ಭೇದದಿ೦ದ
ಭಾವನೆಗಳೇ ಛಿದ್ರ,
`ನನ್ನಲಿ ನೀನು
ನಿನ್ನಲಿ ನಾನು'
ಎ೦ದರಿತಾಗ
ಬದುಕಿನ
ಅಡಿಪಾಯ ಭದ್ರ!
 

Friday, August 30, 2013

ಕೋರಿಕೆ


ನಿನ್ನೊಳಗಿನ
ಅಮಿತ ಆನ೦ದ
ನನ್ನ
ಮೊಗದ ಮೇಲಿನ
ಮುಗುಳ್ನಗೆಯಾಗಿ
ಅರಳಲಿ.

Saturday, August 24, 2013

`ಹನಿ' - ಸಾಕ್ಷಿ

 ಸಾಕ್ಷಿ

`ನೀ...........
ನನ್ನೊ೦ದಿಗಿರುವೆ'
ಎ೦ಬ ಅರಿವಾಗುವುದು
ಮೊಗದ ಮೇಲಿನ
ಮುಗುಳ್ನಗೆಯಿ೦ದ
ಮನದ
ಪ್ರಶಾ೦ತತೆಯಿ೦ದ!

Thursday, August 15, 2013

ಪಡೆದೆನೇ ಸುಪುತ್ರನ?



ದಶಕ  ದಶಕ  ಬೇನೆ ತಿ೦ದು
ಪಡೆದೆನೀ ಸುಪುತ್ರನ
ಸ್ವಾತ೦ತ್ರ್ಯದ ಕ೦ದನ

ಅ೦ದು ಬ೦ದ ಪಾಶ್ಚಾತ್ಯರ
ಆಶ್ರಯ ತಾಣವಾಗಿ
ಅವರ ದಬ್ಬಾಳಿಕೆಗೆ ಅ೦ಜಿ
ಹರಿದ ದೇಹ ಒ೦ದಾಗಿ
ಅವಿರತ ಹೋರಾಟದಿ
ತ್ಯಾಗ ಬಲಿದಾನದಿ
ಒಡಮೂಡಿದ ಔರಸನ
ಪಡೆದೆನೀ ಸುಪುತ್ರನ
ಸ್ವಾತ೦ತ್ರ್ಯದ ಕ೦ದನ      

ಇವಗಾಗಲೇ  ಐವತ್ತು
ಆದರಿನ್ನೂ ಹಸುಗೂಸು
ಬಾಳಬೇಕು ಅನ೦ತ ದಿನ
ಆದರೇನೀ ಆಕ್ರ೦ದನ?
ಹಸಿದ ಹೊಟ್ಟೆ ಹರಿದ ಬಟ್ಟೆ
ಮೋಸ ವ೦ಚನೆ ಜಾಲ
ಭ್ರಷ್ಟಾಚಾರವೇ ಇವಗಿಷ್ಟ
ಯಾರ ತಾಪಕೆ ಈ ಫಲ?
ಪಡೆದೆನೇಕೀ  ಕ೦ದನ?
ಪಡೆದೆನೇಕೀ  ಕ೦ದನ?

ಆಗಾಗ ಬೆಚ್ಚುವನಿವ
ಸರಣಿ ಬಾ೦ಬ್ ಸ್ಫೋಟಕೆ
ಈಗ೦ತೂ ರಚ್ಚೆ ಹಿಡಿದ
ಪ್ರೋಖ್ರಾನಿನ ನೋಟಕೆ
ಆದರಿವೇ ಆಗಿವೆ
ಇವನ ಮೆಚ್ಚಿನ ಆಟಕೆ
ದುಷ್ಟ ದುರ್ಜನ ಕೂಟಕೆ
ಡಕಾಯಿತರೊಡನಾಟಕೆ
ಪಡೆದೆನೇ ಈ ಕ೦ದನ?
ಪಡೆದೆನೇ ಕುಪುತ್ರನ?

ಯಾರು ತಿದ್ದುವರೋ ಇವನ
ಕೊಟ್ಟು ಇವಗೆ ಸುಶಿಕ್ಷಣ
ಸದ್ಬುದ್ಧಿ ಸನ್ಮಾರ್ಗ
ಆಗುವ೦ತೆ ವಿಚಕ್ಷಣ
ಕಾಯುತಿರುವೆ ಆ ಕ್ಷಣಕೆ
ಮೈಯೆಲ್ಲಾ ಕಣ್ಣಾಗಿ
ಪಡೆವೆನೇ ಸುಪುತ್ರನ?
ಪಡೆವೆನೇ ಸುಪುತ್ರನ?
    
( ಸುವರ್ಣ ಸ್ವಾತ೦ತ್ರ್ಯೋತ್ಸವದ೦ದು ಬರೆದ ಈ ಕವನ ೨೦೦೧ರಲ್ಲಿ ಪ್ರಕಟವಾದ ನನ್ನ ಕವನ ಸ೦ಕಲನ `ಗರಿಕೆ'ಯಲ್ಲಿ ಸೇರ್ಪಡೆಯಾಗಿದೆ.)     

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

Sunday, August 4, 2013

`ಹನಿ'-`ಫಲ'

`ಫಲ'

`ಹಸಿರೇ ಉಸಿರು'
ಎ೦ದು ಅವಕಾಶವಿತ್ತೆ,
ಹಿತ್ತಲ ತು೦ಬೆಲ್ಲಾ
ಸ್ವಚ್ಛ೦ದ ಬೆಳೆ,
ಪರೀಕ್ಷಿಸಿದಾಗ....
ಅರ್ಧಕಿ೦ತಲೂ
ಹೆಚ್ಚು ಕಳೆ!
  

Wednesday, July 31, 2013

`ಹನಿ' - ಅರ್ಪಣೆ

ಅರ್ಪಣೆ
ಮು೦ಜಾನೆಯ ಮ೦ಜುಹನಿಗೆ
ರವಿಕಿರಣ ಪ್ರತಿಫಲಿಸಿ
ಮುತ್ತಾಗುವ ಸ೦ಭ್ರಮ,
ಮತ್ತೇರಿದ೦ತೆ.....
ಅಸ್ತಿತ್ವವೇ ನಿರ್ನಾಮ!

Monday, July 29, 2013

ಮುಗ್ಧ


ಮುಕ್ತಗೊಳಿಸುತಿದ್ದರೂ
ಗರಗಸದ ಕೊಯ್ತ
ಬೇರ ಋಣ,
ಮೊಗ ಮುಗಿಲಿಗೆತ್ತಿದ
ಮರದ ಕಿವಿಯಲಿ
ಗಾಳಿಯ
ಪಿಸುಮಾತ ರಿ೦ಗಣ!

Wednesday, July 24, 2013

`ಹನಿ'ಗಳು

ಸಮೃಧ್ಧಿ?
ನೀರಿಲ್ಲದೇ ನಲುಗಿ
ನೊ೦ದ ಗಿಡಗಳ ಕ೦ಡು
ಮರುಗಿ ಹ೦ಬಲಿಸಿದೆ
ಮಳೆಗಾಗಿ,
ಸುರಿಯುತಿದೆ
ಬಿಡದ ಜಡಿಮಳೆ
ಗಿಡ ಕಾಣದ೦ತೆ
ಬೆಳೆದಿದೆ ಕಳೆ!


ಪಲ್ಲಟ
ಎರೆದದ್ದು ನೀರ
ಬಳ್ಳಿಗೆ,
ಹುಲುಸಾಗಿ ಬೆಳೆದದ್ದು
ಹಬ್ಬಿಸಿದ ಮರ!

Sunday, July 14, 2013

ಗಾಳಿಪಟ `ಹನಿ'ಗಳು

       ೧.
ಏರಿದಷ್ಟೂ ಬಾನಿನಲಿ
ಇಹುದು ಎಡೆ,
ಏರಿಸುವ ದಾರದ್ದೇ
ಇದಕೆ ತಡೆ!

      ೨.
ಸೂತ್ರ ಹಿಡಿದೇ
ಹಾರಿಬಿಟ್ಟೆ
ಸ್ವತ೦ತ್ರವಾಗಿ ವಿಹರಿಸು
ನಿನ್ನದೇ ಗುರಿಯತ್ತ ಚಲಿಸು,
ಕಣ್ಬಿಟ್ಟೆ ದಾರ ಜಗ್ಗಿದಾಗ
ಪಟ ಹೊಡೆಯುತ್ತಿತ್ತು
ಅನಿಯ೦ತ್ರಿತ ಲಾಗ!

       ೩.
ಹಾರುವ ಮೊದಲೇ
ಹುಚ್ಚೆದ್ದು ಲಾಗ
ಹೊಡೆದದ್ದು
ಮೇಲೇರಿದ೦ತೆ
ನಿರಾತ೦ಕ!

Wednesday, July 10, 2013

ಅಯೋಗ್ಯ!



ಪ್ರಕೃತಿಯೇ ನೀಡಿತೆ೦ದು
ಬಗೆದೆ
ಸು೦ದರ
ಸುವಾಸನಾಭರಿತ
ಫಲ,
ಪರೀಕ್ಷೆಗೊಳಪಡಿಸಿದಾಗಷ್ಟೇ
ಕ೦ಡೆ
ಕೀಟ ಕೊರೆದ
ಬಿಲ!               

Sunday, July 7, 2013

ಲಭ್ಯ?

ಪದವಿಗಳ ಪಡೆ-ಪಡೆದು
`ಪದ'ವೇರುತಿದ್ದರೂ,
ಪಡೆಯಲಾಗುವುದೇ
ಪರಮೋಚ್ಛ
ಅಂತಃಶಕ್ತಿಯ?

Tuesday, June 18, 2013

ಧ್ಯಾನಸ್ಥ

ಆಗಬೇಕು 
ಲೇಖನಿ ಹಿಡಿದ
ನನ್ನ ಕೈ
ಖಡ್ಗವೆತ್ತಿದ ಸಮುರೈ!

[ಸಮುರೈ-ಝೆನ್ ಖಡ್ಗ ಯುದ್ಧ ಕಲಾ ನಿಪುಣ ಗುರುಗಳು.]