Saturday, October 29, 2011

ಕ೦ಡಷ್ಟೇ ಬೆಳಕೇ?

ಅರಸುವುದಾಗಿದೆ ಬೆಳಕ

ಹಚ್ಚನೆಯ

ಹಗಲುಗಳಲ್ಲಿ

ಬೆಳದಿ೦ಗಳ

ರಾತ್ರಿಗಳಲ್ಲಿ!

ಸೂರ್ಯಾ೦ತರಾಳದ

ಬೈಜಿಕ ಸಮ್ಮಿಳನದೀ

ಫಲವೇ

ಪ್ರತ್ಯಕ್ಷ ಸಾಕ್ಷಿಯಾಗಿದೆ

ಜಗದ ವಿಘಟನೆಗಳಿಗೆಲ್ಲಾ

ಹಾರಿಬಿಟ್ಟ

ಶ್ವೇತ ಕಪೋತದಿ೦ದ

ಬಸಿದ ನೆತ್ತರಹನಿ

ರಕ್ತ ಬೀಜಾಸುರನಾಗಿ

ಬೆಳಕೇಕೋ

ಬೆಳಕೆನಿಸುತ್ತಿಲ್ಲ!

ಹರಿವ ನದಿಯೊಡನೆ

ಹೆಜ್ಜೆ ಇಡಲಾಗದೇ

ದಡಕ್ಕ೦ಟಿದ ಜೀವ

ಬಸವಳಿದು ಮುಚ್ಚಿದ

ಕ೦ಗಳೊಳಗೆ

ಕಣ್ಣಾಮುಚ್ಚಾಲೆಯಾಡುವ

ಬೆಳಕು!

ಕ೦ಡಷ್ಟೇ ಸತ್ಯವಲ್ಲ

ಹಿಡಿಗೆ

ಸಿಲುಕುವುದೂ ಇಲ್ಲ

ಧ್ಯಾನಸ್ಥ ಮನದ

ಮೂಲೆಯಲ್ಲಿ

ಸುಳಿವ

ಕಿರಣ ಗುಚ್ಚ!

Sunday, October 23, 2011

ಮನದ ಅಂಗಳದಿ......... ೬೩. ನಗುವ ಬುದ್ಧ

ನಾನು ವಿಜ್ಞಾನದ ವಿದ್ಯಾರ್ಥಿನಿಯಾದ್ದರಿಂದ ಮೊದಲಿನಿಂದಲೂಏಕೆ?' ‘ಹೇಗೆ?' ಎನ್ನುವ ಪ್ರಶ್ನೆಗಳ ಸುಳಿಯಲ್ಲಿ ಏನನ್ನೇ ಮಾಡಬೇಕಾದರೂ ತತ್ಕ್ಷಣ ಒಪ್ಪುವ ಮನಃಸ್ಥಿತಿ ಇರಲಿಲ್ಲ. ಈಗ ಕೆಲವು ವರ್ಷಗಳಿಂದವಾಸ್ತು'ವಿನ ವಿಶೇಷ ಪ್ರಭಾವಕ್ಕೆ ಒಳಗಾದವರು ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಲ್ಲಿ ಇರುವುದನ್ನು ಕಾಣುತ್ತಿದ್ದೇವೆ. ಚೀನೀ ವಾಸ್ತುವಿನ ಪ್ರಕಾರ ನಗುವ ಬುದ್ಧನನ್ನು ಇಟ್ಟುಕೊಳ್ಳುವುದರಿಂದ ಮನೆಗೆ ಸಂತಸ ಮತ್ತು ಸಂಪತ್ತು ಲಭಿಸುತ್ತದೆ, ಅದೃಷ್ಟಶಾಲಿಗಳಾಗುತ್ತಾರೆ ಎನ್ನುವ ನಂಬಿಕೆಯಲ್ಲಿ ಸಾಮಾನ್ಯವಾಗಿ ನಗುವ ತಾತನ ಪ್ರತಿಮೆಯನ್ನು ಮನೆಯಲ್ಲಿಡುತ್ತಾರೆ. ನನ್ನ ಪರಿಚಯದ ಹಿರಿಯರೊಬ್ಬರು ಸಲಹೆ ನೀಡಿದರು. ನಾನು ಅಷ್ಟಾಗಿ ಅದನ್ನು ಪರಿಗಣಿಸಿರಲಿಲ್ಲ. ಇತ್ತೀಚೆಗೆ ನಾವು ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಿದ್ದಾಗ ಅಲ್ಲಿಯ ನೆನಪಿಗಾಗಿ ಏನನ್ನಾದರೂ ಕೊಳ್ಳಲು ಹೋದಾಗ ರೀತಿಯ ವಿಗ್ರಹಗಳು ಬಹಳವಾಗಿ ನನ್ನ ಗಮನ ಸೆಳೆದವು. ಮುಕ್ತವಾಗಿ ನಗುತ್ತಿರುವ ತಾತನನ್ನು ನೋಡುವಾಗ ಅನಿಯಂತ್ರಿತವಾಗಿ ನನಗೂ ನಗು ಬರಲಾರಂಭಿಸಿತು. ತಾತನೊಟ್ಟಿಗಿರುವುದರಿಂದ ಬೇರೆ ಯಾವುದೇ ಸಂಪತ್ತಿಲ್ಲದಿದ್ದರೂ ನಗೆಯ ಸಂಪತ್ತಂತೂ ನಮ್ಮದಾಗುವುದರಲ್ಲಿ ಸಂಶಯವಿಲ್ಲ ಎನಿಸಿತು. ಇದನ್ನು ಏಕೆ ‘ Laughing Buddha (ಲಾಫಿಂಗ್ ಬುದ್ಧ)' ಎಂದು ಕರೆಯುತ್ತಾರೆ? ಬುದ್ಧನೋ, ಬುಡ್ಡನೋ? ಬುಡ್ಡ ಎಂದರೆತಾತ' ಎಂದಿರುವುದರಿಂದ ಹೀಗೆಯೇ ಇರಬಹುದೇ? ‘ಬುದ್ಧ' ಎಂದರೆ ಎಲ್ಲವನ್ನೂ ಬಲ್ಲವನು-ಜ್ಞಾನಿ ಎಂದು, ಈತ ಹೇಗೆ ಬುದ್ದನಾದ? ಎನ್ನುವ ಪ್ರಶ್ನೆಗಳೊಂದಿಗಿದ್ದಾಗ...... ಸ್ವಾಮಿ ಸುಖಬೋಧಾನಂದರಮನಸ್ಸೇ, ರಿಲ್ಯಾಕ್ಸ್ ಪ್ಲೀಸ್!' ( ತಮಿಳಿನಿಂದ ಕನ್ನಡಕ್ಕೆಚಿರಂಜೀವಿ') ಪುಸ್ತಕದಲ್ಲಿ ಅಕಸ್ಮಾತ್ತಾಗಿ (- ವರ್ಷಗಳ ಹಿಂದೆ ಓದಿದ್ದ ಪುಸ್ತಕವನ್ನು ಸುಮ್ಮನೆ ಪುಟಗಳನ್ನು ತಿರುಗಿಸುತ್ತಿದ್ದಾಗ) ವಿಷಯ ಗೋಚರಿಸಿತು!
‘ಚೀನಾ ದೇಶದಲ್ಲಿ ಮೂವರು ಬೌದ್ಧ ಸನ್ಯಾಸಿಗಳು ಇದ್ದರು. ಬುದ್ಧನಿಗೆ ಬೋಧಿವೃಕ್ಷದಡಿ ಜ್ಞಾನೋದಯವಾದಂತೆ ಈ ಸನ್ಯಾಸಿಗಳಿಗೆ- ನಾಲ್ಕು ಮಂದಿ ಸಂತೋಷದಿಂದಿದ್ದ ಸಮಯದಲ್ಲಿ ಜೋರಾಗಿ ನಕ್ಕಾಗ, ಇದನ್ನು ನೋಡುವಾಗ ಪರಮಾರ್ಥಜ್ಞಾನ ಹುಟ್ಟಿತಂತೆ. ನಗುವನ್ನೂ ಒಂದು ರೀತಿಯ ಧ್ಯಾನವಾಗಿ ಆಚರಿಸಬಹುದು ಎಂದು ಇವರಿಗೆ ಅನಂತರ ಮನದಟ್ಟಾಯಿತಂತೆ! ಇದಕ್ಕೆ Laughing Meditation ಎಂಬ ಹೆಸರನ್ನೂ ಕೊಟ್ಟುಬಿಟ್ಟರು. ಜೀವನದುದ್ದಕ್ಕೂ ಬಾಯಿಬಿಟ್ಟು ನಗುತ್ತಲೇ ಇರಬೇಕಾದ ಮಹತ್ವವನ್ನು ಈ ಸನ್ಯಾಸಿಗಳು ಪ್ರಪಂಚವೆಲ್ಲಾ ಹರಡಿದರು. ಒಂದು ದಿನ ಈ ಮೂವರು ಸನ್ಯಾಸಿಗಳಲ್ಲಿ ಒಬ್ಬನಿಗೆ ಮುಪ್ಪಡರಿ ಮರಣಹೊಂದಿದ. ಸತ್ತ ಸನ್ಯಾಸಿಯ ಎರಡು ಪಕ್ಕಗಳಲ್ಲಿಯೂ ಉಳಿದಿಬ್ಬರು ಕುಳಿತು ಜೋರಾಗಿ ನಗಲಾರಂಭಿಸಿದರು. ಇದರಿಂದ ಕೋಪಗೊಂಡ ಊರಜನ ಕೆಲವರು ಈ ಇಬ್ಬರು ಸನ್ಯಾಸಿಗಳನ್ನು ಬಯ್ಯಲು ಪ್ರಾರಂಭಿಸಿದರು. ಆಗ ಆ ಸನ್ಯಾಸಿಗಳು ಹೇಳಿದರು:
‘ನಗುವಿನ ಮಹತ್ವವನ್ನು ಹರಡುವುದಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿರಿಸಿದರು. ಕೊನೆಗೆ ಇವರು ಸತ್ತುಹೋದರು ಎನ್ನುವುದಕ್ಕಾಗಿ ನಾವು ಅತ್ತರೆ ಇದು ಸರಿಯಾಗುವುದಿಲ್ಲ! ಆದ್ದರಿಂದ ಸಾಯುವ ಮೊದಲು ಇವರು ಕೇಳಿಕೊಂಡಂತೆ ನಾವಿಬ್ಬರೂ ನಗುತ್ತಿದ್ದೇವೆ.' ಎಂದರು. ಊರವರಿಗೆ ಅಲ್ಪಸ್ವಲ್ಪ ಸಮಾಧಾನವಾಯಿತು.
ಅಂತ್ಯಸಂಸ್ಕಾರ ಮಾಡುವ ಸಂದರ್ಭ ಹತ್ತಿರವಾಯಿತು. ‘ಬದುಕೆಲ್ಲಾ ನಾನು ನಗುತ್ತಲೇ ಇದ್ದುದರಿಂದ ನನ್ನೆಲ್ಲ ಕಲ್ಮಶಗಳನ್ನು ನಗು ಹೊರಹಾಕಿಬಿಟ್ಟಿದೆ. ಆದ್ದರಿಂದ ನಾನು ಸತ್ತಮೇಲೆ ನನ್ನ ದೇಹವನ್ನು ನೀರಿನಲ್ಲಿ ತೊಳೆಯಬೇಡಿ' ಎಂದು ಸನ್ಯಾಸಿಯು ಹೇಳಿದ್ದರಂತೆ, ಆದ್ದರಿಂದ ಆ ದೇಹವನ್ನು ಹಾಗೆಯೇ ಸುಡುಗಾಡಿಗೆ ತೆಗೆದುಕೊಂಡುಹೋದರು. ದೇಹಕ್ಕೆ ಬೆಂಕಿ ಇಟ್ಟಾಗ ಇದ್ದಕ್ಕಿದ್ದ ಹಾಗೆ ‘ಪಟಪಟ' ಎನ್ನುವ ಸದ್ದು ಪ್ರಾರಂಭವಾಯಿತು. ಹೌದು, ತಾನು ಸತ್ತಮೇಲೂ ಎಲ್ಲರನ್ನೂ ಸಂತೋಷಗೊಳಿಸುವುದಕ್ಕಾಗಿ ಆ ಸನ್ಯಾಸಿ ತನ್ನ ಉಡುಪಿನೊಳಗೆಲ್ಲಾ ಪಟಾಕಿಗಳನ್ನು ಮರೆಮಾಚಿ ಇಟ್ಟುಕೊಂಡಿದ್ದನಂತೆ. ಈ ಸನ್ಯಾಸಿಯ ಹೆಸರೇ Laughing Buddha!’

‘ಲಾಫಿಂಗ್ ಬುದ್ಧನನ್ನು ಹ್ಯಾಪಿ ಬುದ್ಧ ಅಥವಾ ಮೈತ್ರೇಯಿ ಎಂದೂ ಕರೆಯುತ್ತಾರೆ. ಲಾಫಿಂಗ್ ಬುದ್ಧ ಋಣಾತ್ಮಕ ಶಕ್ತಿಯನ್ನು ಹೀರಿಕೊಂಡು ಧನಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುತ್ತದೆ ಎಂದೂ ಹೇಳುತ್ತಾರೆ. ಈ ಫೆಂಗ್ ಸುಯಿ ಸಂಕೇತವನ್ನು ಒಳ್ಳೆಯ ಅದೃಷ್ಟ ಮತ್ತು ಸಂಪತ್ತಿಗಾಗಿ ಬಳಸುತ್ತಾರೆ. ಇದು ಬಹಳ ಪವಿತ್ರವಾದ ಸಂಕೇತವಾಗಿದ್ದು ಮನೆ, ದೇವಸ್ಥಾನ, ರೆಸ್ಟೋರೆಂಟ್, ವಾಹನಗಳ ಡ್ಯಾಷ್ ಬೋರ್ಡ್ಗಳನ್ನು ಅಲಂಕರಿಸಿರುತ್ತದೆ. ನಮ್ಮ ಪ್ರೀತಿಪಾತ್ರರಿಗೆ ಕೊಡುಗೆ ನೀಡಲು ಪ್ರಶಸ್ತವಾದದ್ದು,......... ' ಎಂಬ ಸಂಗತಿಗಳು ಹಾಗೂ ವಿವಿಧ ಬಣ್ಣ-ಗಾತ್ರಗಳ, ಮೌಲ್ಯಗಳ, ಬೇರೆ ಬೇರೆ ಭಂಗಿಗಳಲ್ಲಿ ಮನದುಂಬಿ ನಗುತ್ತಿರುವ ಬುದ್ಧನ ಪ್ರತಿಮೆಗಳು, ಚಿತ್ರಗಳು ಮುಂತಾದ ಮಾಹಿತಿಗಳ ಮಹಾಪೂರವೇ ಅಂತರ್ಜಾಲದಲ್ಲಿ ದೊರೆಯಿತು.
‘ಲಾಫಿಂಗ್ ಬುದ್ಧನ ಬಗ್ಗೆ ಇರುವ ನಂಬಿಕೆಗಳು ಏನೇ ಇರಲಿ ಆತನಂತೆ ನಾವೂ ಕೂಡ ಬದುಕೆಲ್ಲಾ ನಗುತಾ, ನಗಿಸುತಾ, ನಗಿಸಿ ನಗುತ ಬಾಳುವಂತಾದರೆ ಎಷ್ಟು ಚೆನ್ನ!

Saturday, October 15, 2011

ಮನದ ಅಂಗಳದಿ......... ೬೨. ಗಮನ

ನಾವು ಚಿಕ್ಕವರಿದ್ದಾಗ ಹಿರಿಯರು ‘ಗಮನವಿಟ್ಟು ಓದು,' ಎಂದೋ, ‘ಮಾಡುವ ಕೆಲಸದ ಮೇಲೆ ಗಮನವಿರಲಿ,' ಎಂದೋ ಹೇಳುತ್ತಿದ್ದುದರ ನೆನಪಿರಬಹುದು. ಈಗಲೂ ನಾವು ನಮ್ಮ ಕಿರಿಯರಿಗೆ ಇದನ್ನೇ ಹೇಳುತ್ತಿರುತ್ತೇವೆ. ಇನ್ನೂ ಮುಂದುವರಿದಂತೆ, ‘ಗಮನವಿಟ್ಟು ಏಕಾಗ್ರತೆಯಿಂದ ಮಾಡುವ ಕೆಲಸಕ್ಕೆ ಜಯ ಇದ್ದೇ ಇರುತ್ತದೆ,'ಎನ್ನುವ ಮಾತನ್ನೂ ಕೇಳುತ್ತಿರುತ್ತೇವೆ. ಈ ‘ಗಮನ' ಎಂದರೇನು? ಏಕಾಗ್ರತೆಗೂ ಇದಕ್ಕೂ ಇರುವ ವ್ಯತ್ಯಾಸವೇನು? ಎನ್ನುವ ಬಗ್ಗೆ ನಾವು ಅಷ್ಟಾಗಿ ಚಿಂತಿಸುವುದಿಲ್ಲ. ಒಂದು ರೀತಿಯಲ್ಲಿ ಈ ಸೂಚನೆಗಳು ವಂಶಪಾರಂಪರ್ಯವಾಗಿ ಅಥವಾ ಸಾಂಪ್ರದಾಯಿಕವಾಗಿ ತಲೆಮಾರುಗಳಿಂದ ತಲೆಮಾರುಗಳಿಗೆ ವರ್ಗಾವಣೆಯಾಗುತ್ತಾ ಸಾಗುತ್ತವೆ. ‘ಗಮನ'ದ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ತಮ್ಮ ‘ಅನುದಿನ ಚಿಂತನ'ದಲ್ಲಿ ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ:
‘ಗಮನವೆಂದರೇನು? ಗಮನವಿರಬೇಕೆಂದು ಮನಸ್ಸನ್ನು ಒತ್ತಾಯಿಸಿಕೊಂಡಿದ್ದಾಗ ಗಮನವಿರುತ್ತದೆಯೆ? ‘ನಾನು ಗಮನಕೊಡಬೇಕು, ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು, ಎಲ್ಲಾ ಆಲೋಚನೆಗಳನ್ನೂ ದೂರತಳ್ಳಬೇಕು? ಎಂದುಕೊಂಡು ತತ್ಪರರಾದಾಗ ಗಮನವಿರುತ್ತದೆಯೇ? ನಿಜವಾಗಿಯೂ ಇದ್ಯಾವುದೂ ಗಮನವಲ್ಲ. ಮನಸ್ಸು ಬಲವಂತವಾಗಿ ಗಮನ ನೀಡಿದಾಗ ಏನಾಗುತ್ತದೆ? ತನ್ನ ಬಳಿ ಇತರ ಆಲೋಚನೆಗಳು ಸುಳಿಯದಂತೆ ಪ್ರತಿರೋಧವನ್ನು ಒಡ್ಡತೊಡಗುತ್ತದೆ. ಪ್ರತಿರೋಧದ ಬಗೆಗೇ ಎಚ್ಚರವಾಗಿದ್ದು ಬೇಡದ ಯೋಚನೆಗಳನ್ನೆಲ್ಲಾ ದೂರ ದಬ್ಬುವುದರಲ್ಲೇ ತೊಡಗುತ್ತದೆ. ಆದ್ದರಿಂದ ಆ ಸ್ಥಿತಿ ಗಮನದ ಸ್ಥಿತಿ ಅಲ್ಲ, ಅಲ್ಲವೇ?
ಏನನ್ನಾದರೂ ಅರ್ಥಮಾಡಿಕೊಳ್ಳಬೇಕಿದ್ದರೆ ಅದಕ್ಕೆ ನಿಮ್ಮ ಪೂರ್ಣ ಗಮನವನ್ನು ನೀಡಬೇಕು. ಆದರೆ ಹಾಗೆ ಪೂರ್ಣ ಗಮನವನ್ನು ನೀಡುವುದು ಎಷ್ಟು ಕಷ್ಟ ಎಂಬುದು ಕೂಡಲೇ ತಿಳಿಯುತ್ತದೆ. ಚಾಂಚಲ್ಯಕ್ಕೆ ಮನಸ್ಸು ಎಷ್ಟು ಒಗ್ಗಿಹೋಗಿದೆ ಎಂದರೆ, ‘ದೇವರೇ, ಗಮನ ನೀಡುವುದೇನೋ ಒಳ್ಳೆಯದೇ, ಆದರೆ ಗಮನವನ್ನು ಹೇಗೆ ಕೊಡಲಿ?' ಎಂದು ಕೇಳತೊಡಗುತ್ತೀರಿ. ಅಂದರೆ, ಏನನ್ನೋ ಪಡೆಯುವ ಆಸೆ ನಮ್ಮಲ್ಲಿ ಮತ್ತೆ ತಲೆ ಎತ್ತುತ್ತದೆ. ಪೂರ್ಣ ಗಮನವನ್ನು ನೀಡದವರಾಗುತ್ತೀರಿ......ಪೂರ್ಣ ಗಮನವನ್ನು ನೀಡುವುದೆಂದರೆ ಮರವನ್ನೋ, ಹಕ್ಕಿಯನ್ನೋ ನೋಡಿದಾಗ, ‘ಇದು ಆಲದ ಮರ,' ‘ಇದು ಗಿಣಿ,' ಎಂದು ಹೇಳಿ ಸುಮ್ಮನೆ ನಡೆದುಬಿಡುವುದಲ್ಲ. ಹಾಗೆ ಹೆಸರಿಟ್ಟ ಕೂಡಲೇ ನೀವು ಗಮನ ನೀಡುವುದನ್ನು ನಿಲ್ಲಿಸಿರುತ್ತೀರಿ.......
ಆದರೆ ಏನನ್ನಾದರೂ ನೋಡುವಾಗ ಪೂರ್ಣ ಎಚ್ಚರವಿದ್ದರೆ, ಪೂರ್ಣ ಗಮನವಿದ್ದರೆ, ಆಗ ಪರಿವರ್ತನೆಯೊಂದು ಆಗುತ್ತಿರುವುದನ್ನು ಕಾಣುತ್ತೀರಿ, ಪೂರ್ಣ ಗಮನ ಒಳ್ಳೆಯದೆಂದು ತಿಳಿಯುತ್ತೀರಿ. ಅನ್ಯವಾದುದು ಯಾವುದೂ ಇಲ್ಲ. ಗಮನವನ್ನು ಅಭ್ಯಾಸದಿಂದ ಸಾಧಿಸುವುದೂ ಕೂಡ ಸಾಧ್ಯವಿಲ್ಲ. ಅಭ್ಯಾಸದಿಂದ ಏಕಾಗ್ರತೆ ಹುಟ್ಟುತ್ತದೆ, ಅಷ್ಟೆ. ಅಂದರೆ ಪ್ರತಿರೋಧದ ಗೋಡೆಯನ್ನು ಕಟ್ಟಿಕೊಳ್ಳುತ್ತೀರಿ. ಆ ಗೋಡೆಗಳ ಮಿತಿಯಲ್ಲ. ಏಕಾಗ್ರ ಸಾಧಕನ ಪ್ರತಿರೋಧವಿರುತ್ತದೆಯೇ ಹೊರತು ಗಮನವಲ್ಲ. ಅದು ಬೇರೆಲ್ಲವನ್ನೂ ದೂರವಿಡುವ ಸ್ಥಿತಿ.'
ಏಕಾಗ್ರತೆ ಮತ್ತು ಗಮನಕ್ಕಿರುವ ವ್ಯತ್ಯಾಸವನ್ನು ಹೀಗೆ ತಿಳಿಸುತ್ತಾರೆ:
`ಮನಸ್ಸಿನ ಬೆಳವಣಿಗೆಯ ವಿಷಯದಲ್ಲಿ ಪ್ರಾಮುಖ್ಯವಿರಬೇಕಾದದ್ದು ಗಮನಕ್ಕೇ ಹೊರತು ಏಕಾಗ್ರತೆಗಲ್ಲ. ಏಕಾಗ್ರತೆಯಲ್ಲಿ ಮನಸ್ಸನ್ನು ಬಲವಂತದಿಂದ ಯಾವುದೋ ಒಂದು ಬಿಂದುವಿಗೆ ಸಂಕುಚಿತಗೊಳಿಸುವ ಕ್ರಿಯೆ ನಡೆಯುತ್ತದೆ. ಆದರೆ ಗಮನಕ್ಕೆ ಯಾವ ಗಡಿಯೂ ಇಲ್ಲ, ಯಾವ ಮಿತಿಯೂ ಇಲ್ಲ. ಏಕಾಗ್ರತೆಯಲ್ಲಿ ಮನಸ್ಸು ಯಾವಾಗಲೂ ಆಯ್ದ ವಿಷಯದ ಸೀಮೆಗೆ ಬದ್ಧವಾಗಿರುತ್ತದೆ. ಮನಸ್ಸಿನ ಇಡಿತನವನ್ನು ಅರ್ಥಮಾಡಿಕೊಳ್ಳುವಲ್ಲಿ ಕೇವಲ ಏಕಾಗ್ರತೆಯ ಅಡಚಣೆಯನ್ನು ಮಾತ್ರ ಉಂಟುಮಾಡಿಕೊಳ್ಳಬಲ್ಲದು. ಗಮನವೆನ್ನುವುದು ಜ್ಞಾನದ ಗಡಿರೇಖೆಗಳಿಲ್ಲದೆ ಅಮಿತವಾಗಿರುವಂಥದ್ದು, ನಿಸ್ಸೀಮವಾದದ್ದು. ಏಕಾಗ್ರತೆಯಿಂದ ಜ್ಞಾನ ಲಭಿಸುತ್ತದೆ. ಜ್ಞಾನದ ವಿಸ್ತರಣೆ ಎಷ್ಟೇ ನಡೆದರೂ ಅದು ಸೀಮಾಬದ್ಧವಾದದ್ದೇ. ಗಮನದ ಸ್ಥಿತಿಯಲ್ಲಿ ಏಕಾಗ್ರತೆಯ ಫಲಿತಾಂಶವಾಗಿ ಮೂಡಿದ ಜ್ಞಾನವನ್ನು ಬಳಸಿಕೊಳ್ಳಬಹುದು ಮತ್ತು ಬಳಸಿಕೊಳ್ಳಲಾಗುತ್ತದೆ. ಆದರೆ ಅಂಶವು ಎಂದೂ ಪೂರ್ಣವಲ್ಲ..............ಪೂರ್ಣತೆಯೆಂಬುದು ಎಂದೂ ಏಕಾಗ್ರ ಮನಸ್ಸಿನ ತುತ್ತಲ್ಲ. ಆದ್ದರಿಂದಲೇ ಗಮನಕ್ಕೆ ಮೊದಲ ಪ್ರಾಮುಖ್ಯ. ಏಕಾಗ್ರತೆಯ ಪ್ರಯತ್ನದ ಮೂಲಕ ಗಮನವನ್ನು ಸಾಧಿಸಿಕೊಳ್ಳಲಾಗುವುದಿಲ್ಲ.'
ಪೂರ್ಣಗಮನವನ್ನು ನೀಡುವುದಕ್ಕೆ ಸಾಧ್ಯವಾಗುವಂತಹ ಸ್ಥಿತಿಯು ಧ್ಯಾನವೆಂದರೇನೆಂಬುದನ್ನು ಅರ್ಥಮಾಡಿಸುತ್ತದೆ ಎನ್ನುವುದನ್ನು ಈ ರೀತಿಯಾಗಿ ಪ್ರಸ್ತುತಪಡಿಸುತ್ತಾರೆ:
‘ಮನಸ್ಸನ್ನು ಯಾವುದೂ ಹೀರಿಕೊಳ್ಳದಂತಹ ಗಮನವಿದೆಯೇ? ಯಾವುದೇ ಒಂದು ವಸ್ತುವಿನ ಬಗ್ಗೆಯೂ ಏಕಾಗ್ರವಾಗಿರದಂತಹ ಗಮನವಿದೆಯೇ? ಯಾವುದೇ ಬಗೆಯ ಉದ್ದೇಶ, ಪ್ರಭಾವ, ಒತ್ತಾಯಗಳಿಲ್ಲದ ಗಮನವಿದೆಯೇ? ಮನಸ್ಸು ಯಾವುದನ್ನೂ ಹೊರಗಿಡದೇ ಎಲ್ಲದರ ಬಗೆಗೂ ಪೂರ್ಣ ಗಮನವನ್ನು ನೀಡಬಲ್ಲದೇ? ಖಂಡಿತ. ಇಂಥದು ಮಾತ್ರ ನಿಜವಾದ ಗಮನದ ಸ್ಥಿತಿ, ಉಳಿದೆಲ್ಲವೂ ಮೈಮರೆವು ಅಥವಾ ಮನಸ್ಸಿನ ಜಾಣತಂತ್ರಗಳು. ಯಾವುದೂ ನಿಮ್ಮ ಮನಸ್ಸನ್ನು ಹೀರಿಕೊಳ್ಳದೇ, ಯಾವುದನ್ನೂ ತಿರಸ್ಕರಿಸದೇ, ಎಲ್ಲದರ ಬಗೆಗೂ ಪೂರ್ಣಗಮನವನ್ನು ನೀಡುವುದಕ್ಕೆ ನಿಮಗೆ ಸಾಧ್ಯವಾದರೆ ಧ್ಯಾನಿಸುವುದೆಂದರೇನೆಂದು ನಿಮಗೆ ತಿಳಿಯುತ್ತದೆ. ಏಕೆಂದರೆ ಅಂಥಾ ಗಮನದಲ್ಲಿ ಪ್ರಯತ್ನವಿಲ್ಲ, ವಿಭಜನೆಯಿಲ್ಲ, ಸಂಘರ್ಷವಿಲ್ಲ, ಫಲಿತಾಂಶದ ಹುಡುಕಾಟವಿಲ್ಲ. ಧ್ಯಾನವೆಂದರೆ ವಿವಿಧ ವ್ಯವಸ್ಥೆಗಳಿಂದ ಮನಸ್ಸನ್ನು ಬಿಡಿಸುವ ಪ್ರಕ್ರಿಯೆ, ಯಾವುದೂ ನಿಮ್ಮನ್ನು ಹೀರಿಕೊಳ್ಳದೇ ನಿಮ್ಮ ಪೂರ್ಣಗಮನವನ್ನು ನೀಡಲು ಆಗುವ ಸ್ಥಿತಿ, ಅಥವಾ ಏಕಾಗ್ರತೆಗಾಗಿ ಪ್ರಯತ್ನಿಸದೇ ಇರುವ ಸ್ಥಿತಿ.'
ಹಾಗಾದರೆ ಪೂರ್ಣಗಮನದ ಸ್ಥಿತಿಯನ್ನು ಪಡೆದುಕೊಳ್ಳುವುದಾದರೂ ಹೇಗೆಂಬುದನ್ನು ಮನವರಿಕೆ ಮಾಡುತ್ತಾ:
‘ಗಮನದ ಸ್ಥಿತಿ ಹೇಗೆ ಉಂಟಾಗುತ್ತದೆ? ಒತ್ತಾಯದಿಂದ, ಹೋಲಿಕೆಯಿಂದ, ಬಹುಮಾನದ ಆಸೆಯಿಂದ, ಶಿಕ್ಷೆಯ ಭಯದಿಂದ ಗಮನ ಹುಟ್ಟುವುದಿಲ್ಲ. ಇವೆಲ್ಲವೂ ಬಲವಂತದ ವಿವಿಧ ರೂಪಗಳು. ಭಯದ ನಿವಾರಣೆಯೇ ಗಮನದ ಆರಂಭ. ಏನೋ ಆಗಬೇಕು, ಏನೋ ಸಿಗಬೇಕು ಎಂಬ ಆಸೆ ಇರುವವರಗೆ ಭಯ ಇದ್ದೇ ಇರುತ್ತದೆ. ಅದು ಎಲ್ಲಾ ಹತಾಶೆ, ಕಸಿವಿಸಿ, ವೇದನೆ ತರುವ ವೈರುಧ್ಯಗಳೊಂದಿಗೆ ಯಶಸ್ಸನ್ನು ಹಿಂಬಾಲಿಸುವ ಕೆಲಸ. ಏಕಾಗ್ರತೆಯನ್ನು ಕಲಿಸಬಹುದು, ಆದರೆ ಭಯಮುಕ್ತರಾಗುವುದನ್ನು ಹೇಗೆ ಎಂಬುದನ್ನು ಕಲಿಸಲು ಸಾಧ್ಯವಿಲ್ಲ. ಅಂತೆಯೇ ಗಮನವನ್ನು ಕಲಿಸಲು ಕೂಡ ಸಾಧ್ಯವಿಲ್ಲ. ವಿದ್ಯಾರ್ಥಿಯ ಸುತ್ತಲೂ ಸ್ವಾಸ್ಥ್ಯದ ವಾತಾವರಣವಿದ್ದಾಗ, ಸುರಕ್ಷೆಯ ಹಾಗೂ ಸರಳೀತದ ಭಾವವಿದ್ದಾಗ ಪ್ರೀತಿಸಹಿತವಾದ ನಿರಾಸಕ್ತ ಗಮನವಿರುತ್ತದೆ. ಗಮನವೆನ್ನುವುದು ಸಹಜವಾಗಿ, ಸ್ವಚ್ಛಂದವಾಗಿ ಮೂಡುತ್ತದೆ.'
ಹೀಗೆ ಗಮನವು ಸಹಜವಾಗಿ ಮೂಡುವಂತೆ ಭಯಮುಕ್ತರಾಗಿ, ಧ್ಯಾನಸ್ಥ ಸ್ಥಿತಿಯನ್ನು ತಲುಪಲು ನಮ್ಮನ್ನು ನಾವು ಅಣಿಗೊಳಿಸಿಕೊಳ್ಳೋಣ.

Thursday, October 13, 2011

ಸಾಪೇಕ್ಷ

ಗರಗರ
ತಿರುಗು ಚಕ್ರದ
ಅಂಚಿಗೆ
ಒಗೆಯಲ್ಪಟ್ಟ ಕಾಯ
ವಿರಮಿಸಲು ಬೆಂಬಿಡದ ಭಯ
ಸ್ವಲ್ಪ ತಂಗುವೆನೆಂದರೂ
ತಪ್ಪದ ಅಪಾಯ!

ಪಯಣ ಸಾಗಿದಂತೆ
ಪರ್ಯಾಯ
ಗರಿಷ್ಠ-ಕನಿಷ್ಠ
ಗಮನಿಸುವವರೇ ಇಲ್ಲ
ತನ್ನಿಷ್ಟ

ಒಮ್ಮೆ...
ಒಮ್ಮೆಯಾದರೂ
ಮಧ್ಯಂತರದಲಿ
ಸ್ಥಿರವಾಗಲೂ
ಆಗದಂಥಾ
ಆವರ್ತಕ ಚಲನೆ
ಆಗಾಗ ಮೀರುವುದಾಗಿದೆ
ಘರ್ಷಣೆ

ಪರಿಧಿ ಮೀರಿದರಂತೂ
ಸ್ಪರ್ಶಕದ ನೇರದಲೇ ಒಗೆತ
ಬಿಟ್ಟುಹೋಗಲೇ ಬೇಕಾಗ
ಈ ಆತ್ಮೀಯ ವೃತ್ತ

ಇದ್ದಷ್ಟು ದಿನವೂ
ತಿರುಗುತ್ತಲೇ ಇರುವುದೋ
ತಿರುಗುವುದರಲೇ
ಸಾರ್ಥಕ್ಯ ಕಾಣುವುದೋ?..?..?

ಕಾಯಕವೇ
ತಾನೆಂದೆಣಿಸಿದಾಕ್ಷಣವೇ
ಕೇಂದ್ರದತ್ತ ಪಯಣ
ಏಳು ಬೀಳುಗಳಿಲ್ಲದ
ನಿಶ್ಚಿಂತ ತಾಣ
ನಿರ್ಲಿಪ್ತ ಕಾಯಕೀಗ
ಸಮಸ್ಯೆಗಳೇ ಗೌಣ!

Sunday, October 9, 2011

ಮನದ ಅಂಗಳದಿ.........೬೦.‘ಕವಿ'ಎಂದರೆ.........

ಇತ್ತೀಚೆಗೆ ನಡೆದ ಒಂದು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ತಮ್ಮ ತಾಲ್ಲೂಕಿನವಳು ಎಂಬ ಅಭಿಮಾನದಿಂದ ಕವಿಗೋಷ್ಠಿಗೆ ಅಧ್ಯಕ್ಷತೆಯನ್ನು ವಹಿಸಲು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ಕವನ-ಕವಿಯ ಬಗ್ಗೆ, ಮಾತುಗಳನ್ನು ಆಡುವುದು ಅಗತ್ಯವೆನಿಸಿತು. ಸಾಮಾನ್ಯವಾಗಿ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಅಥವಾ ಅನುಭವವನ್ನು ಕವನವನ್ನಾಗಿಸುವ ಸಂದರ್ಭದಲ್ಲಿ ಬಳಸುವ ಭಾಷೆ, ರಚಿಸುವ ರೀತಿ ಒಬ್ಬೊಬ್ಬರದು ಒಂದೊಂದು ವಿಧವಾಗಿರುತ್ತದೆ. ಕವಿಯ ಈ ವೈಶಿಷ್ಟ್ಯವನ್ನೇ ‘ಶೈಲಿ(style)' ಎನ್ನುವುದರಿಂದ ಈ ಬಗ್ಗೆ ಮಾತನಾಡುವುದೇ ಸೂಕ್ತ ಎಂದುಕೊಂಡು ನನ್ನ ಬಳಿ ಇದ್ದ ಕೆ. ವಿ. ನಾರಾಯಣ ಅವರ ‘ಶೈಲಿಶಾಸ್ತ್ರ' ಎನ್ನುವ ಪುಸ್ತಕದಿಂದ ಕೆಲವು ಅಂಶಗಳನ್ನು ಗುರುತುಮಾಡಿಕೊಂಡೆ:
‘*ಈಗಾಗಲೇ ವಿಮರ್ಶಾ ಪರಂಪರೆಯಲ್ಲಿ ಕವಿಯ ಕೃತಿಗಳನ್ನು ಚರ್ಚಿಸುವಾಗ ಆಯಾ ಕವಿಗಳ ಭಾಷಿಕ ವೈಶಿಷ್ಟ್ಯಗಳನ್ನು ಆಯಾ ಕವಿಗಳ ಶೈಲಿ ಎಂದು ವಿವರಿಸುವುದು ವಾಡಿಕೆಯಿದೆ.
*ಅನುಭವಗಳನ್ನು, ಅವುಗಳ ಪರಿಣಾಮವಾದ ಭಾವತೀವ್ರತೆಯನ್ನು ಕಾವ್ಯವನ್ನಾಗಿ ಪರಿವರ್ತಿಸಲು ಕವಿ ‘ಭಾಷೆಯೊಡನೆ ನಡೆಸುವ ಹೋರಾಟ'ದಿಂದ ಅವನ ಶೈಲಿಯು ರೂಪುಗೊಳ್ಳುತ್ತದೆ. ಯುಕ್ತ ಶೈಲಿ ಎಂದರೆ ಅಭಿವ್ಯಕ್ತಿಯಲ್ಲಿ ಪರಿಪೂರ್ಣತೆ ಎಂದರ್ಥ.
*ಕೃತಿರಚನೆಯನ್ನು ‘ಅನುಭವ ಗ್ರಹಿಕೆ' ಹಾಗೂ ‘ಅನುಭವ ಮಂಡನೆ' ಎಂಬ ಎರಡು ಸ್ತರದಲ್ಲಿ ನೋಡುವ ಸಾಹಿತ್ಯ ತತ್ವಗಳು, ಇವೆರಡರ ಸಮತೋಲನವನ್ನು ಸಾಧಿಸಿದ ಸಂದರ್ಭವನ್ನು ‘ಶೈಲಿ'ನಿರ್ಮಾಣವೆನ್ನುತ್ತಾರೆ. ಅನುಭವ ಮತ್ತು ಶೈಲಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ.
*ಸಂಸ್ಕೃತ, ಇಂಗ್ಲಿಷ್.... ಪದಗಳನ್ನು ಬೆರೆಸುವ 'ನುಡಿಬೆರಕೆ'(code mixing)ಯು ಕನ್ನಡ ಕಾವ್ಯಗಳ ಶೈಲಿ ನಿರ್ವಹಿಸುವಲ್ಲಿ ಅನಿವಾರ್ಯ ಅಂಶವಾಗುತ್ತದೆ. ನುಡಿಬೆರಕೆಯ ವೈವಿಧ್ಯತೆಯಿಂದಲೇ ಶೈಲಿಯ ವೈವಿಧ್ಯ ರೂಪುಗೊಂಡಿದೆ.'
ನಾವು ಶಾಲೆಯಲ್ಲಿ ಓದುವಾಗ ‘ಪದ್ಯ'ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದುದು ಏಕೆಂದು ನೆನಪಿರಬಹುದು. ಅವುಗಳಲ್ಲಿದ್ದ ಗೇಯತೆಯ ಗುಣ ಪದೇಪದೇ ಮನಸ್ಸಿನಲ್ಲಿ ಗುಣಗುಣಿಸುವಂತೆ ಮಾಡಿ ಈಗಲೂ ಅವು ನಮ್ಮ ನೆನಪಿನ ಕೋಶದಲ್ಲಿ ಭದ್ರವಾಗಿ ಉಳಿದಿವೆ. ‘ಪದ್ಯಗಳು ಕಾವ್ಯೇತರ ವಾಞ್ಮಯದಲ್ಲೂ ಬಳಕೆಯಾಗಲು ಎರಡು ಮುಖ್ಯ ಕಾರಣಗಳಿವೆ' ಎಂದು ತಿಳಿಸುತ್ತಾ ಹೀಗೆ ಹೇಳುತ್ತಾರೆ, ‘ಅ) ಪದ್ಯಗಳು ಸಂಕ್ಷಿಪ್ತ ನಿರೂಪಣೆಯನ್ನು ಬಯಸುವುದರಿಂದ ಖಚಿತವಾಗಿಹೇಳುವುದು ಸಾಧ್ಯವಾಗುತ್ತದೆ.
ಆ) ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಶಿಕ್ಷಣವು ಮೌಖಿಕ ವಿಧಾನವನ್ನು ಅನುಸರಿಸುತ್ತಿದ್ದ ಕಾಲದಲ್ಲಿ ಇಂಥಾ ವಿಧಾನಗಳು ಅತ್ಯಂತ ಉಪಯುಕ್ತವೆನಿಸುತ್ತಿದ್ದಿರಬಹುದು.
ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ' ಗೆಳೆಯನೊಬ್ಬನಿಗೆ ಚರಿತ್ರೆಯ ಪಾಠದ ಇಸವಿಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಅನುವಾಗುವಂತೆ ಆ ಇಸವಿಗಳೆಲ್ಲಾ ಬರುವ ಪದ್ಯವೊಂದನ್ನು ಬರೆದು ಕೊಟ್ಟಿದ್ದರಂತೆ ಎಂದು ಹೇಳುತ್ತಾರೆ.'
ಕವಿಗೋಷ್ಟಿಯಲ್ಲಿ ವಾಚಿಸಿದ ಕವನಗಳು ವೈವಿಧ್ಯತೆಯಿಂದ ಕೂಡಿದ್ದವು. ಕನ್ನಡನಾಡು-ನುಡಿಗೆ ಸಂಬಂಧಿಸಿದವು, ರೈತರ ಅನುಭವಗಳು-ಸಮಸ್ಯೆಗಳು, ಸಮಾಜದ ಕುಂದು-ಕೊರತೆಗಳು, ರಾಜಕೀಯ, ಶಿಶುಗೀತೆ, ಪ್ರೀತಿ-ವಿರಹ......ಬಳ್ಳಾರಿಯ ಗಣಿಯ ಧೂಳೂ ವೇದಿಕೆಯನ್ನೇರಿ ಶ್ರೋತೃಗಳನ್ನು ಚಿಂತಿಸುವಂತೆ ಮಾಡಿತು! ಕವನಗಳನ್ನು ಆಲಿಸುತ್ತಾ ಇದ್ದಂತೆಯೇ ಸಮ್ಮೇಳನದ ಅಧ್ಯಕ್ಷರು ಹಂಚಿಕೊಂಡ ಅಭಿಪ್ರಾಯ ಮೌಲ್ಯಯುತವೆನಿಸಿತು,
*‘ರೂಪಕ ಪ್ರತಿಮೆ ಇಲ್ಲದಿದ್ದರೆ ಕವನ ಪಟ್ಟಿಯಾಗುತ್ತದೆ.'
ನೇರ-ನೇರವಾಗಿ ಮುಖಾಮುಖಿಯಾದಂತೆನಿಸುವಂತಿದ್ದ ಕೆಲವು ಕವನಗಳು ಅವರನ್ನು ಹಾಗೆ ಚಿಂತಿಸುವಂತೆ ಮಾಡಿದ್ದವು.
ಕವನ ಎಂದರೆ ಏನು? ಅದು ಗದ್ಯಕ್ಕಿಂತ ಹೇಗೆ ಭಿನ್ನವಾಗಿರುತ್ತದೆ? ಎನ್ನುವುದನ್ನು ಅರ್ಥಮಾಡಿಕೊಳ್ಳದೇ ಬರೆಯಲು ಹೊರಟಾಗ ಉಂಟಾಗುವ ಅಭಾಸದಿಂದ ಕವನವನ್ನು ರಚಿಸುವ ವಿಧಾನವನ್ನೂ ಕಲಿಯುವುದು ಅಗತ್ಯವಿದೆ ಎನಿಸುತ್ತದೆ. ಅದಕ್ಕೆ ಅಧ್ಯಕ್ಷರು ತಿಳಿಸಿದಂತೆ *‘ಶಾಲೆಗಳಲ್ಲಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು.' ಗದ್ಯದ ಸಾಲುಗಳನ್ನು ಕತ್ತರಿಸಿ ಬರೆದರೆ ಅದೇ ಪದ್ಯವಾಗುತ್ತದೆ ಎಂಬಂಥಾ ಕಲವು ಬಾಲಿಶ ಭಾವನೆಗಳಿಂದ ನಾವು ಹೊರಬರಬೇಕಾಗುತ್ತದೆ ಎನಿಸಬಹುದು ಆದರೆ ಈ ಮೊದಲು ನಾನು ಬರೆದಿದ್ದ ‘ಹಾರ' ಎಂಬ ಕಥೆಯಲ್ಲಿನ ಕವನವೆಂದರೇನೆಂದೇ ಅರಿಯದ ನಾಯಕಿ ತನ್ನ ಜೀವನದ ಕಷ್ಟಗಳಿಂದ ನೊಂದು-ಬೆಂದು, ತನ್ನ ಭಾವನೆಗಳನ್ನು ತನಗರಿವಿಲ್ಲದಂತೆಯೇ ಕವನದ ರೂಪದಲ್ಲಿ ಪ್ರಚುರ ಪಡಿಸುತ್ತಾಳೆ. ‘........ಆದರೂ ಆತನ ಅನುಪಸ್ಥಿತಿ ನೀಡಿದ ಏಕಾಂತ ಅವಳಿಗೆ ತನ್ನೊಳಗನ್ನು ತಾನೇ ಜಾಲಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆತನ ಸಾಮೀಪ್ಯ ತನ್ನ ಬದುಕಿಗೆ ಸಾರ್ಥಕ್ಯ ನೀಡಿತ್ತೇ ಎನ್ನುವ ಗೊಂದಲದಲ್ಲಿ ನೆನಪುಗಳು ಭೂತವ ಮೀಟಿ ನವೋದಯದ ದಾಟಿ ಹಿಡಿದವು. ಓದೇ ಜೀವಾಳವಾಗಿದ್ದವಳ ಕೈಗೆ ಲೇಖನಿ ಬಂತು. ಖಡ್ಗ ಹಿಡಿದ ‘ಸಮುರೈ'ನಂತೆ ಅವಳು ಬರೆಯುವುದರಲ್ಲಿ ತನ್ನಲ್ಲೇ ತಾನು ಲಯವಾದಳು. ಮನದಲ್ಲಿ ಮೊಳೆದ ನೂರಾರು ಪ್ರಶ್ನೆಗಳು-ಪ್ರಶ್ನೆಗಳಿಗೇ ಹುಟ್ಟು ನೀಡಿದವು. ಭಾವನೆಗಳನ್ನು ಮೆಟ್ಟಿನಿಂತ ವಿಚಾರ ಶಕ್ತಿ ವಿರಾಟರೂಪ ತಾಳಿತು. ಒಂಟಿ ಬದುಕು ಬಯಲಿಗಿಟ್ಟಂತಾಗಿ ಭಂಡಕಣ್ಣುಗಳ ಬೇಟೆಯ ವಸ್ತುವಾದ ಅರಿವಾಗಿ ಬಂಡಾಯಗೊಂಡರೂ ಸಮಸ್ಥಿತಿ ಸಾಧಿಸಿ ನವೋದಯ, ನವ್ಯ, ಬಂಡಾಯಗಳ ಅರಿವೇ ಇಲ್ಲದ ಅವಳು ತನ್ನದೇ ಹಾದಿಯಲ್ಲಿ ಸಾಗಲಾರಂಭಿಸಿದಳು. ‘ಸಂಗೀತದ ಸ್ವರ ಸಾಧನೆಯ ಅರಿವಿಲ್ಲದ ಮಗುವಿನ ಅಳುವಿನಂತೆ ತನ್ನ ಕವನ' ಎಂದುಕೊಂಡಳು.'
‘ಕವಿ ಕೇವಲ ಕವಿಯಲ್ಲ......' ಎನ್ನುವ ಕವನದಲ್ಲಿ ‘ಕವಿ'ಏನೇನೆಲ್ಲಾ ಆಗಿದ್ದಾನೆ ಎನ್ನುವ ಬಗ್ಗೆ ಕೇಳುವಾಗ........
‘ಒಮ್ಮೆ ಒಬ್ಬ ಹುಡುಗಿಯು ಬೇಂದ್ರೆಯವರಿಗೆ ತನ್ನ ಒಂದು ಕವನವನ್ನು ನೀಡಿ, ‘ಕವಿಯಾಗಲು ಎಷ್ಟು ಕವನಗಳನ್ನು ಬರೆಯಬೇಕು?' ಎಂದು ಕೇಳುತ್ತಾಳೆ. ಆಗ ಬೇಂದ್ರೆಯವರು, ‘ಒಂದು ಮಗುವನ್ನು ಪಡೆದ ತಾಯಿಯೂ ತಾಯಿಯೇ, ಒಂದು ಕವನವನ್ನು ಬರೆದರೂ ಕವಿ' ಎಂದು ಹೇಳುತ್ತಾರೆ!' ಎನ್ನುವುದು ನೆನಪಾಯಿತು.
ಮಾತನಾಡಲು ನಿಂತಾಗ ನಾನು ಗುರುತುಮಾಡಿಕೊಂಡಿದ್ದ ಆಂಶಗಳೆಲ್ಲಾ ಪರದೆಯ ಹಿಂದೆ ಸರಿದು ಬೇರೆಯದೇ ಧಾಟಿಯನ್ನು ಹಿಡಿಯಿತು. ನನ್ನೊಳಗಿನ ಪ್ರಾಮಾಣಿಕ ಅನಿಸಿಕೆಗಳೆಲ್ಲವೂ ಶಬ್ದರೂಪ ಪಡೆಯಲು ಹಂಬಲಿಸಿದವು. ಸಮಯದ ಅಭಾವದಿಂದ ಹೇಳಲು ಸಾಧ್ಯವಾದವುಗಳನ್ನು ಹೇಳಿ ಅವಕಾಶ ನೀಡಿದವರಿಗೆ ವಂದಿಸಿದೆ.

Sunday, October 2, 2011

ಮನದ ಅಂಗಳದಿ......... ೬೦. ಕ್ಷಮೆ ಕೇಳುವ ಪರಿ

ಸಾಮಾನ್ಯವಾಗಿ ನಾವು ಏನನ್ನಾದರೂ ತಪ್ಪು ಮಾಡಿದಾಗ ಕ್ಷಮೆಯನ್ನು ಕೇಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತೇವೆ. `sorry' (ಸಾರಿ) ಎನ್ನುವ ಪದವನ್ನು ನಾವು ದಿನದಲ್ಲಿ ಹತ್ತಾರು ಬಾರಿ ಅದರ ಅಗತ್ಯವಿರಲಿ-ಬಿಡಲಿ ಹೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಅಭ್ಯಾಸವು ಹಾಸ್ಯಾಸ್ಪದವೂ ಆಗಿರುತ್ತದೆ. ಒಮ್ಮೆ ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರದಲ್ಲಿ ನನ್ನ ಪಕ್ಕವೇ ಕುಳಿತು ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕಿಯೊಬ್ಬರಿಗೆ ಬಿಕ್ಕಳಿಕೆ ಬರಲಾರಂಭಿಸಿತು. ಪ್ರತಿಭಾರಿಯೂ ಅವರು`sorry' ಎನ್ನುತ್ತಿದ್ದರು. ಅದು ಎಷ್ಟೊಂದು ಕಿರಿಕಿರಿಯಾಯ್ತೆಂದರೆ ಅವರು ಬಿಕ್ಕಳಿಸುವುದಕ್ಕಿಂತಲೂ ಕ್ಷಮೆಕೋರಿಕೆಯೇ ಅಸಹನೀಯವೆನಿಸಲಾರಂಭಿಸಿತು! ಕೆಲವೊಮ್ಮೆ ಈ `sorry'ಎನ್ನುವ ಪದವು ಕೇವಲ ಅಭ್ಯಾಸ ಬಲದಿಂದ ಬರುತ್ತಿದೆಯೋ, ನಿಜಕ್ಕೂ ಕೇಳುತ್ತಿದ್ದಾರೋ ಎಂದು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ! ಕ್ಷಮೆಯನ್ನು ಕೇಳುವ ರೀತಿಯನ್ನು ರ್ಯಾಂಡಿಪಾಶ್ ಅವರು ತಮ್ಮ ‘ಲಾಸ್ಟ್ ಲೆಕ್ಚರ್’ನಲ್ಲಿ ಬಹಳ ಚೆನ್ನಾಗಿ ತಿಳಿಸಿದ್ದಾರೆ:
‘ಜೀವನದಲ್ಲಿ ನಾವು ಸಾಕಷ್ಟು ತಪ್ಪುಗಳನ್ನು ಮಾಡುತ್ತೇವೆ. ತಪ್ಪು ಮಾಡಿದಾಗ ಕ್ಷಮೆ ಕೇಳುವುದು ಉತ್ತಮ ಅಭ್ಯಾಸ. ಆದರೆ ಒಂದು ಬಾರಿ ಕ್ಷಮೆ ಕೇಳಿದ ನಂತರವೂ ಮತ್ತೆ ಅದೇ ತಪ್ಪನ್ನು ಮಾಡುವುದು ಅಕ್ಷಮ್ಯ ಅಪರಾಧ. ಅರ್ಧ ಮನಸ್ಸಿನಿಂದ ಅಥವಾ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಿಜಕ್ಕೂ ಹಾನಿಕರ. ಸದಕ್ಕಿಂತ ಕ್ಷಮೆ ಕೇಳದಿರುವುದೇ ಮೇಲು. ಈ ರೀತಿ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಾವು ಮತ್ತೊಬ್ಬರಿಗೆ ಮಾಡುವ ಅಪಮಾನವೆಂದೇ ನನ್ನ ಭಾವನೆ. ನೀವು ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ತಪ್ಪುಗಳಾದರೆ ಅದು ನಿಮ್ಮಿಂದ ಸಂಬಂಧಕ್ಕೆ ತಗುಲುವ ಸೋಂಕು. ಪೂರ್ಣ ಮನಸ್ಸಿನಿಂದ ಕೇಳುವ ಕ್ಷಮೆ ಆ ಸೋಂಕಿಗೆ ಜೀವನಿರೋಧಕ (ಆಂಟಿಬಯೋಟಿಕ್) ಇದ್ದಂತೆ. ಅಂತೆಯೇ ಅರ್ಧ ಮನಸ್ಸಿನಿಂದ ಅಥವಾ ಅಸಭ್ಯತೆಯಿಂದ ಕೇಳುವ ಕ್ಷಮೆ ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತೆ.
ನನ್ನ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಯಾವಾಗಲೂ ತಮ್ಮ ತಂಡದೊಂದಿಗೆ ಕೆಲಸ ಮಾಡಬೇಕಾಗಿತ್ತು. ಹೀಗೆ ಮಾಡುವಾಗ ಅನೇಕ ವಿಚಾರಗಳಿಗೆ ವಿದ್ಯಾರ್ಥಿಗಳಲ್ಲಿ ಸಂಘರ್ಷ ಉಂಟಾಗುತ್ತಿತ್ತು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ನಾನು ನೀಡುತ್ತದ್ದ ಕೆಲಸವನ್ನು ತಂಡದಲ್ಲಿದ್ದ ಕೆಲವೇ ಜನ ಮಾತ್ರ ಕಷ್ಟಪಟ್ಟು ಮಾಡುತ್ತಿದ್ದರು. ಇತರೆ ಕೆಲವರು ಸೋಮಾರಿಗಳಾಗಿ ಕಾಲಹರಣ ಮಾಡುತ್ತಿದ್ದರು. ಇದೇ ಸಂಘರ್ಷಕ್ಕೆ ಮುಖ್ಯಕಾರಣವಾಗಿತ್ತು. ಹಿಗಾಗಿ ಸೆಮಿಸ್ಟರ್ ನ ಮಧ್ಯದಲ್ಲಿ ಗದ್ದಲಗಳು, ನಂತರ ಕ್ಷಮೆಕೇಳುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಹಾಗೆ ಕ್ಷಮೆ ಕೇಳದೇ ವಿದ್ಯಾರ್ಥಿಗಳಲ್ಲಿ ಸಂಧಾನ ಏರ್ಪಡದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಗಳಿದ್ದವು. ಆದ್ದರಿಂದ ಇದನ್ನು ಪರಿಹರಿಸಲು ಆಗಿಂದಾಗ್ಗೆ ನಾನು ದೀರ್ಘ ಭಾಷಣಗಳನ್ನು ಮಾಡಬೇಕಾದ ಸಂದರ್ಭಗಳು ಎದುರಾಗುತ್ತಿದ್ದವು.
ನಾನು ವಿದ್ಯಾರ್ಥಿಗಳಿಗೆ ಅರ್ಧಮನಸ್ಸಿನ ಕ್ಷಮಾಪಣೆಯಲ್ಲಿ ಎರಡು ಬಗೆ ಇರುತ್ತದೆ ಎಂದು ಹೇಳುತ್ತಿದ್ದೆ.
ಮೊದಲನೆಯದು: ದಯವಿಟ್ಟು ಕ್ಷಮಿಸಿ, ನಾನು ಮಾಡಿದ ಕೆಲಸದಿಂದ ನಿಮಗೆ ಬೇಸರವಾಗಿದೆ ಎಂದು ತಾವು ಭಾವಿಸಿದ್ದೀರಿ.( ಈ ರೀತಿ ಕ್ಷಮೆ ಕೋರುವುದು ನೀವು ಅವರ ಭಾವನೆಗಳಿಗೆ ಸ್ಪಂದಿಸುವ ಪ್ರಯತ್ನವಷ್ಟೇ. ಆದರೆ ಇದರಿಂದ ಅವರಿಗಾದ ನೋವಿಗೆ ಯಾವುದೇ ಶಮನ ದೊರಕಿದಂತಾಗುವುದಿಲ್ಲ.)
ಎರಡನೆಯದು: ನಾನು ಮಾಡಿದ ತಪ್ಪಿಗೆ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ಆದರೆ ಈ ತಪ್ಪಿನಲ್ಲಿ ನಿಮ್ಮ ಪಾಲೂ ಇದೆ. ಹಾಗಾಗಿ ನೀವೂ ಕ್ಷಮೆ ಕೇಳಬೇಕು. (ಇದು ಕ್ಷಮೆ ಕೋರುವ ವಿಧಾನವಲ್ಲ. ಬದಲಾಗಿ ಮತ್ತೊಬ್ಬರು ಕ್ಷಮೆ ಕೇಳಲಿ ಎಂದು ನಿರೀಕ್ಷಿಸುವ ವಿಧಾನ.)
ಒಳ್ಳೆಯ ರೀತಿಯ ಕ್ಷಮೆ ಯಾಚನೆ ಮೂರು ಅಂಶಗಳನ್ನು ಒಳಗೊಂಡಿರುತ್ತದೆ.
೧. ನಾನು ತಪ್ಪು ಮಾಡಿದ್ದೇನೆ.
೨. ನಿಮ್ಮನ್ನು ನೋಯಿಸಿದೆನಲ್ಲಾ ಎಂಬ ನೋವು ನನ್ನಲ್ಲಿದೆ.
೩. ನನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ.
ನಿಜ.! ಇದರಲ್ಲಿ ಮೂರನೇ ಅಂಶವನ್ನು ಕೆಲವೊಂದು ಬಾರಿ ಜನ ದುರುಪಯೋಗಪಡಿಸಿಕೊಳ್ಳುತ್ತಾರೆ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಮಾಡುವ ಪ್ರಯತ್ನಕ್ಕೆ ಬಹುತೇಕ ಮಂದಿ ನಿಮ್ಮನ್ನು ಖಂಡಿತ ಅಭಿನಂದಿಸುತ್ತಾರೆ. ಅವರು ಅತ್ಯಂತ ಸರಳವಾಗಿ ನಿಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸುತ್ತಾರೆ. ಮುಂದೆ ಉತ್ತಮ ಕೆಲಸಗಳನ್ನು ಮಾಡಲು ನಿಮ್ಮೊಂದಿಗೆ ಕೈ ಜೋಡಿಸುತ್ತಾರೆ.
ಒಮ್ಮೊಮ್ಮೆ ವಿದ್ಯಾರ್ಥಿಗಳು, ‘ನಾವು ಕ್ಷಮೆ ಕೇಳಿದ ನಂತರವೂ ಮತ್ತೊಬ್ಬರು ಕ್ಷಮೆ ಕೇಳದಿದ್ದರೆ ಏನು ಮಾಡುವುದು?’ ಎಂದು ನನ್ನನ್ನು ಪ್ರಶ್ನಿಸುತ್ತಿದ್ದರು.
‘ಆದರೆ ಇದು ನಿಮಗೆ ಸಂಬಂಧಿಸಿದ ವಿಚಾರವಲ್ಲ. ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.’ ಎಂದು ನಾನು ಉತ್ತರಿಸುತ್ತಿದ್ದೆ.
ಕೆಲವೊಮ್ಮೆ ನೀವು ಮತ್ತೊಬ್ಬರನ್ನು ಕ್ಷಮೆ ಯಾಚಿಸಿದಾಗ, ನಿಮ್ಮ ಮಾತುಗಳು ಸರಿಯಾಗಿದ್ದರೂ, ಮನಃಪೂರ್ವಕವಾಗಿ ಕ್ಷಮೆ ಕೋರಿದ್ದರೂ ಅವರಿಂದ ಯಾವ ಪ್ರತಿಕ್ರಿಯೆಯೂ ಬಾರದೇ ಇರಬಹುದು. ಅದಕ್ಕೆ ಕಾರಣ ನಿಮ್ಮ ಕ್ಷಮೆಗೆ ಪ್ರತಿಕ್ರಿಯಿಸಲು ಅದು ಸರಿಯಾದ ವೇದಿಕೆಯಲ್ಲ ಎಂಬ ಭಾವನೆ ಅವರಿಗಿರಬಹುದು. ಆದ್ದರಿಂದ ತಾಳ್ಮೆಯಿಂದಿರಿ. ಅನೇಕ ಬಾರಿ ನನ್ನನ್ನು ಒಂದು ಗುಂಪಿನ ವಿದ್ಯಾರ್ಥಿಗಳು ಬಂದು ಕ್ಷಮೆ ಕೇಳುತ್ತಾರೆ. ಅದಾದ ಎಷ್ಟೋ ದಿನಗಳ ನಂತರ ಮತ್ತೊಂದು ಗುಂಪಿನ ವಿದ್ಯಾರ್ಥಿಗಳು ಕ್ಷಮೆ ಯಾಚಿಸುವರು. ಇಂತಹ ಸಂದರ್ಭಗಳಲ್ಲಿ ನಿಮ್ಮ ತಾಳ್ಮೆಯನ್ನು ಜನ ಶ್ಲಾಘಿಸುವರು ಮತ್ತು ಅದಕ್ಕೆ ತಕ್ಕ ಪ್ರತಿಫಲವನ್ನು ನೀವು ಪಡೆದೇ ಪಡೆಯುವಿರಿ.’
ಪರಸ್ಪರ ಸೌಹಾರ್ದತೆಯಿಂದ ಇರಬೇಕಾದರೆ ಕ್ಷಮಾಗುಣ ಅಗತ್ಯವಾಗುತ್ತದೆ. ತಪ್ಪುಮಾಡಿದಾಗ ಕ್ಷಮೆ ಕೇಳುವುದನ್ನು ಅಪಮಾನ ಎಂದು ಭಾವಿಸುವ ಅಗತ್ಯವಿಲ್ಲ. ಕ್ಷಮೆ ಕೇಳುವಾಗ ನಾಟಕೀಯವಾಗಿ ಅಥವಾ ಕಾಟಾಚಾರಕ್ಕೆ ಕೇಳದೇ ಹೃದಯಾಂತರಾಳದಿಂದ, ಮನಃಪೂರ್ವಕವಾಗಿ ಕೇಳುವುದನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಘನತೆಯನ್ನು ಕಾಪಾಡಿಕೊಳ್ಳೋಣ.