Sunday, October 23, 2011

ಮನದ ಅಂಗಳದಿ......... ೬೩. ನಗುವ ಬುದ್ಧ

ನಾನು ವಿಜ್ಞಾನದ ವಿದ್ಯಾರ್ಥಿನಿಯಾದ್ದರಿಂದ ಮೊದಲಿನಿಂದಲೂಏಕೆ?' ‘ಹೇಗೆ?' ಎನ್ನುವ ಪ್ರಶ್ನೆಗಳ ಸುಳಿಯಲ್ಲಿ ಏನನ್ನೇ ಮಾಡಬೇಕಾದರೂ ತತ್ಕ್ಷಣ ಒಪ್ಪುವ ಮನಃಸ್ಥಿತಿ ಇರಲಿಲ್ಲ. ಈಗ ಕೆಲವು ವರ್ಷಗಳಿಂದವಾಸ್ತು'ವಿನ ವಿಶೇಷ ಪ್ರಭಾವಕ್ಕೆ ಒಳಗಾದವರು ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಲ್ಲಿ ಇರುವುದನ್ನು ಕಾಣುತ್ತಿದ್ದೇವೆ. ಚೀನೀ ವಾಸ್ತುವಿನ ಪ್ರಕಾರ ನಗುವ ಬುದ್ಧನನ್ನು ಇಟ್ಟುಕೊಳ್ಳುವುದರಿಂದ ಮನೆಗೆ ಸಂತಸ ಮತ್ತು ಸಂಪತ್ತು ಲಭಿಸುತ್ತದೆ, ಅದೃಷ್ಟಶಾಲಿಗಳಾಗುತ್ತಾರೆ ಎನ್ನುವ ನಂಬಿಕೆಯಲ್ಲಿ ಸಾಮಾನ್ಯವಾಗಿ ನಗುವ ತಾತನ ಪ್ರತಿಮೆಯನ್ನು ಮನೆಯಲ್ಲಿಡುತ್ತಾರೆ. ನನ್ನ ಪರಿಚಯದ ಹಿರಿಯರೊಬ್ಬರು ಸಲಹೆ ನೀಡಿದರು. ನಾನು ಅಷ್ಟಾಗಿ ಅದನ್ನು ಪರಿಗಣಿಸಿರಲಿಲ್ಲ. ಇತ್ತೀಚೆಗೆ ನಾವು ಒಂದು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಿದ್ದಾಗ ಅಲ್ಲಿಯ ನೆನಪಿಗಾಗಿ ಏನನ್ನಾದರೂ ಕೊಳ್ಳಲು ಹೋದಾಗ ರೀತಿಯ ವಿಗ್ರಹಗಳು ಬಹಳವಾಗಿ ನನ್ನ ಗಮನ ಸೆಳೆದವು. ಮುಕ್ತವಾಗಿ ನಗುತ್ತಿರುವ ತಾತನನ್ನು ನೋಡುವಾಗ ಅನಿಯಂತ್ರಿತವಾಗಿ ನನಗೂ ನಗು ಬರಲಾರಂಭಿಸಿತು. ತಾತನೊಟ್ಟಿಗಿರುವುದರಿಂದ ಬೇರೆ ಯಾವುದೇ ಸಂಪತ್ತಿಲ್ಲದಿದ್ದರೂ ನಗೆಯ ಸಂಪತ್ತಂತೂ ನಮ್ಮದಾಗುವುದರಲ್ಲಿ ಸಂಶಯವಿಲ್ಲ ಎನಿಸಿತು. ಇದನ್ನು ಏಕೆ ‘ Laughing Buddha (ಲಾಫಿಂಗ್ ಬುದ್ಧ)' ಎಂದು ಕರೆಯುತ್ತಾರೆ? ಬುದ್ಧನೋ, ಬುಡ್ಡನೋ? ಬುಡ್ಡ ಎಂದರೆತಾತ' ಎಂದಿರುವುದರಿಂದ ಹೀಗೆಯೇ ಇರಬಹುದೇ? ‘ಬುದ್ಧ' ಎಂದರೆ ಎಲ್ಲವನ್ನೂ ಬಲ್ಲವನು-ಜ್ಞಾನಿ ಎಂದು, ಈತ ಹೇಗೆ ಬುದ್ದನಾದ? ಎನ್ನುವ ಪ್ರಶ್ನೆಗಳೊಂದಿಗಿದ್ದಾಗ...... ಸ್ವಾಮಿ ಸುಖಬೋಧಾನಂದರಮನಸ್ಸೇ, ರಿಲ್ಯಾಕ್ಸ್ ಪ್ಲೀಸ್!' ( ತಮಿಳಿನಿಂದ ಕನ್ನಡಕ್ಕೆಚಿರಂಜೀವಿ') ಪುಸ್ತಕದಲ್ಲಿ ಅಕಸ್ಮಾತ್ತಾಗಿ (- ವರ್ಷಗಳ ಹಿಂದೆ ಓದಿದ್ದ ಪುಸ್ತಕವನ್ನು ಸುಮ್ಮನೆ ಪುಟಗಳನ್ನು ತಿರುಗಿಸುತ್ತಿದ್ದಾಗ) ವಿಷಯ ಗೋಚರಿಸಿತು!
‘ಚೀನಾ ದೇಶದಲ್ಲಿ ಮೂವರು ಬೌದ್ಧ ಸನ್ಯಾಸಿಗಳು ಇದ್ದರು. ಬುದ್ಧನಿಗೆ ಬೋಧಿವೃಕ್ಷದಡಿ ಜ್ಞಾನೋದಯವಾದಂತೆ ಈ ಸನ್ಯಾಸಿಗಳಿಗೆ- ನಾಲ್ಕು ಮಂದಿ ಸಂತೋಷದಿಂದಿದ್ದ ಸಮಯದಲ್ಲಿ ಜೋರಾಗಿ ನಕ್ಕಾಗ, ಇದನ್ನು ನೋಡುವಾಗ ಪರಮಾರ್ಥಜ್ಞಾನ ಹುಟ್ಟಿತಂತೆ. ನಗುವನ್ನೂ ಒಂದು ರೀತಿಯ ಧ್ಯಾನವಾಗಿ ಆಚರಿಸಬಹುದು ಎಂದು ಇವರಿಗೆ ಅನಂತರ ಮನದಟ್ಟಾಯಿತಂತೆ! ಇದಕ್ಕೆ Laughing Meditation ಎಂಬ ಹೆಸರನ್ನೂ ಕೊಟ್ಟುಬಿಟ್ಟರು. ಜೀವನದುದ್ದಕ್ಕೂ ಬಾಯಿಬಿಟ್ಟು ನಗುತ್ತಲೇ ಇರಬೇಕಾದ ಮಹತ್ವವನ್ನು ಈ ಸನ್ಯಾಸಿಗಳು ಪ್ರಪಂಚವೆಲ್ಲಾ ಹರಡಿದರು. ಒಂದು ದಿನ ಈ ಮೂವರು ಸನ್ಯಾಸಿಗಳಲ್ಲಿ ಒಬ್ಬನಿಗೆ ಮುಪ್ಪಡರಿ ಮರಣಹೊಂದಿದ. ಸತ್ತ ಸನ್ಯಾಸಿಯ ಎರಡು ಪಕ್ಕಗಳಲ್ಲಿಯೂ ಉಳಿದಿಬ್ಬರು ಕುಳಿತು ಜೋರಾಗಿ ನಗಲಾರಂಭಿಸಿದರು. ಇದರಿಂದ ಕೋಪಗೊಂಡ ಊರಜನ ಕೆಲವರು ಈ ಇಬ್ಬರು ಸನ್ಯಾಸಿಗಳನ್ನು ಬಯ್ಯಲು ಪ್ರಾರಂಭಿಸಿದರು. ಆಗ ಆ ಸನ್ಯಾಸಿಗಳು ಹೇಳಿದರು:
‘ನಗುವಿನ ಮಹತ್ವವನ್ನು ಹರಡುವುದಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿರಿಸಿದರು. ಕೊನೆಗೆ ಇವರು ಸತ್ತುಹೋದರು ಎನ್ನುವುದಕ್ಕಾಗಿ ನಾವು ಅತ್ತರೆ ಇದು ಸರಿಯಾಗುವುದಿಲ್ಲ! ಆದ್ದರಿಂದ ಸಾಯುವ ಮೊದಲು ಇವರು ಕೇಳಿಕೊಂಡಂತೆ ನಾವಿಬ್ಬರೂ ನಗುತ್ತಿದ್ದೇವೆ.' ಎಂದರು. ಊರವರಿಗೆ ಅಲ್ಪಸ್ವಲ್ಪ ಸಮಾಧಾನವಾಯಿತು.
ಅಂತ್ಯಸಂಸ್ಕಾರ ಮಾಡುವ ಸಂದರ್ಭ ಹತ್ತಿರವಾಯಿತು. ‘ಬದುಕೆಲ್ಲಾ ನಾನು ನಗುತ್ತಲೇ ಇದ್ದುದರಿಂದ ನನ್ನೆಲ್ಲ ಕಲ್ಮಶಗಳನ್ನು ನಗು ಹೊರಹಾಕಿಬಿಟ್ಟಿದೆ. ಆದ್ದರಿಂದ ನಾನು ಸತ್ತಮೇಲೆ ನನ್ನ ದೇಹವನ್ನು ನೀರಿನಲ್ಲಿ ತೊಳೆಯಬೇಡಿ' ಎಂದು ಸನ್ಯಾಸಿಯು ಹೇಳಿದ್ದರಂತೆ, ಆದ್ದರಿಂದ ಆ ದೇಹವನ್ನು ಹಾಗೆಯೇ ಸುಡುಗಾಡಿಗೆ ತೆಗೆದುಕೊಂಡುಹೋದರು. ದೇಹಕ್ಕೆ ಬೆಂಕಿ ಇಟ್ಟಾಗ ಇದ್ದಕ್ಕಿದ್ದ ಹಾಗೆ ‘ಪಟಪಟ' ಎನ್ನುವ ಸದ್ದು ಪ್ರಾರಂಭವಾಯಿತು. ಹೌದು, ತಾನು ಸತ್ತಮೇಲೂ ಎಲ್ಲರನ್ನೂ ಸಂತೋಷಗೊಳಿಸುವುದಕ್ಕಾಗಿ ಆ ಸನ್ಯಾಸಿ ತನ್ನ ಉಡುಪಿನೊಳಗೆಲ್ಲಾ ಪಟಾಕಿಗಳನ್ನು ಮರೆಮಾಚಿ ಇಟ್ಟುಕೊಂಡಿದ್ದನಂತೆ. ಈ ಸನ್ಯಾಸಿಯ ಹೆಸರೇ Laughing Buddha!’

‘ಲಾಫಿಂಗ್ ಬುದ್ಧನನ್ನು ಹ್ಯಾಪಿ ಬುದ್ಧ ಅಥವಾ ಮೈತ್ರೇಯಿ ಎಂದೂ ಕರೆಯುತ್ತಾರೆ. ಲಾಫಿಂಗ್ ಬುದ್ಧ ಋಣಾತ್ಮಕ ಶಕ್ತಿಯನ್ನು ಹೀರಿಕೊಂಡು ಧನಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುತ್ತದೆ ಎಂದೂ ಹೇಳುತ್ತಾರೆ. ಈ ಫೆಂಗ್ ಸುಯಿ ಸಂಕೇತವನ್ನು ಒಳ್ಳೆಯ ಅದೃಷ್ಟ ಮತ್ತು ಸಂಪತ್ತಿಗಾಗಿ ಬಳಸುತ್ತಾರೆ. ಇದು ಬಹಳ ಪವಿತ್ರವಾದ ಸಂಕೇತವಾಗಿದ್ದು ಮನೆ, ದೇವಸ್ಥಾನ, ರೆಸ್ಟೋರೆಂಟ್, ವಾಹನಗಳ ಡ್ಯಾಷ್ ಬೋರ್ಡ್ಗಳನ್ನು ಅಲಂಕರಿಸಿರುತ್ತದೆ. ನಮ್ಮ ಪ್ರೀತಿಪಾತ್ರರಿಗೆ ಕೊಡುಗೆ ನೀಡಲು ಪ್ರಶಸ್ತವಾದದ್ದು,......... ' ಎಂಬ ಸಂಗತಿಗಳು ಹಾಗೂ ವಿವಿಧ ಬಣ್ಣ-ಗಾತ್ರಗಳ, ಮೌಲ್ಯಗಳ, ಬೇರೆ ಬೇರೆ ಭಂಗಿಗಳಲ್ಲಿ ಮನದುಂಬಿ ನಗುತ್ತಿರುವ ಬುದ್ಧನ ಪ್ರತಿಮೆಗಳು, ಚಿತ್ರಗಳು ಮುಂತಾದ ಮಾಹಿತಿಗಳ ಮಹಾಪೂರವೇ ಅಂತರ್ಜಾಲದಲ್ಲಿ ದೊರೆಯಿತು.
‘ಲಾಫಿಂಗ್ ಬುದ್ಧನ ಬಗ್ಗೆ ಇರುವ ನಂಬಿಕೆಗಳು ಏನೇ ಇರಲಿ ಆತನಂತೆ ನಾವೂ ಕೂಡ ಬದುಕೆಲ್ಲಾ ನಗುತಾ, ನಗಿಸುತಾ, ನಗಿಸಿ ನಗುತ ಬಾಳುವಂತಾದರೆ ಎಷ್ಟು ಚೆನ್ನ!

10 comments:

 1. ಪ್ರಭಾಮಣಿಯವರೆ,
  ನಗುವ ಬುದ್ಧನ ಬಗೆಗೆ ಈ ಮಾಹಿತಿ ಗೊತ್ತಿರಲಿಲ್ಲ. ಉಪಯುಕ್ತ ವಿವರಣೆ ಕೊಟ್ಟಿದ್ದೀರಿ.
  ಅಲ್ಲದೆ, ನಗುವಿನ ಮಹತ್ವವನ್ನೂ ತಿಳಿಸಿದ್ದೀರಿ. ಧನ್ಯವಾದಗಳು.

  ReplyDelete
 2. ಲಾಫಿಂಗ್ ಬುದ್ಧನ ಬಗ್ಗೆ ಮಾಹಿತಿಯುಕ್ತ ಲೇಖನ!ನಗುವನ್ನೇ ಮರೆತಿರುವ ನಮ್ಮೆಲ್ಲರ ಬದುಕಿನಲ್ಲಿ ನಗುವುದನ್ನು ನೆನಪಿಸಲಾದರೂ ನಾವು ಮನೆಯಲ್ಲಿ ಒಂದು ಲಾಫಿಂಗ್ ಬುದ್ಧನ ಮೂರ್ತಿ ಇಡಬೇಕು.ನನ್ನಬ್ಲಾಗಿನಲ್ಲೂ ಹೊಸದೊಂದು ಬರಹವಿದೆ.ಬಿಡುವಾದಾಗ
  ಭೇಟಿಕೊಡಿ.ನಮಸ್ಕಾರ.

  ReplyDelete
 3. ಲಾಫಿಂಗ್ ಬುದ್ಧನ ಬಗ್ಗೆ ಒಳ್ಳೆಯ ಲೇಖನ ಬರೆದಿದ್ದೀರಿ ಮೇಡಂ. ವಾಸ್ತುಶಾಸ್ತ್ರ ಎಷ್ಟು ಸಮರ್ಪಕವೋ ಇನ್ನೂ ವೈಜ್ಞಾನಿಕ ಸಂಶೋಧನೆಗಳು ಧೃಡಪಡಿಸಬೇಕಾಗಿದೆ. ಆದರೂ ಲಾಫಿಂಗ್ ಬುದ್ಧನಂತಹ ನಗೆ ಹರಡುವ ಪ್ರತಿಮೆಗಳು ಮನೆಯ ಶಾಂತಿಯನ್ನು ಕಾಪಾಡುತ್ತವೆ.

  ReplyDelete
 4. ನಮ್ಮ ಮನೆಯಲ್ಲೂ ನಗುವ ಬುದ್ಧ ಇದ್ದಾನೆ..

  ಆದರೆ ಇವೆಲ್ಲ ಗೊತ್ತಿಲ್ಲವಾಗಿತ್ತು..
  ಇಷ್ಟೆಲ್ಲ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

  ನಗುವ ಬುದ್ಧನ ಹಾಗೆ ನಮಗೂ
  ನಗುವ ಬಗ್ಗೆ "ಬದ್ಧತೆ" ಬೇಕು ಅಲ್ಲವಾ?

  ReplyDelete
 5. prabhaamaniyavare naguvina bagge uttama maahitigaagi dhanyavaadagalu.

  ReplyDelete
 6. ಪ್ರಭಾಮಣಿಯವರೆ,
  ನಗುವ ಬುದ್ಧನ ಬಗೆಗೆ ಈ ಮಾಹಿತಿ ಗೊತ್ತಿರಲಿಲ್ಲ. ಧನ್ಯವಾದಗಳು..

  ReplyDelete
 7. ಲಾಫಿಂಗ್ ಬುದ್ಧನ ನಗುವಿನಲ್ಲಿ ಭಾಗಿಗಳಾದ/ಭಾಗಿಗಳಾಗುವ ಎಲ್ಲರಿಗೂ ಧನ್ಯವಾದಗಳು. ಲಾಫಿಂಗ್ ಬುದ್ಧನಿ೦ದ ಪ್ರೇರಿತರಾಗಿ ಎಲ್ಲರೂ ನಗುನಗುತಾ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಎಲ್ಲರಿಗೂ `ದೀಪಾವಳಿಯ ಶುಭಾಶಯಗಳು.' ದೀಪದ ಹಬ್ಬ' ಎಲ್ಲರ ಬಾಳಿನಲ್ಲಿಯೂ ಸುಖ-ಸ೦ತಸಗಳನ್ನು ತರಲಿ.

  ReplyDelete
 8. nijakku ishtella maahiti kottiddakke thanks....:)

  ReplyDelete
 9. Madam Laughing buddhanantaagabeku endu ellaru naguttiddare olleyadu... aadare avanante deha gaatra belesidare kasta allave.. ha ha ha :)

  ReplyDelete
 10. ಚೆಂದದ ಮಾಹಿತಿ... ನಾನು ಫೆಂಗ್ ಶುಇ ಚೀನಿ ವಾಸ್ತು ಸ್ವಲ್ಪ ಓದಿದೆ ಮನೆ ಕಟ್ಟುವಾಗ...

  ReplyDelete