Saturday, October 15, 2011

ಮನದ ಅಂಗಳದಿ......... ೬೨. ಗಮನ

ನಾವು ಚಿಕ್ಕವರಿದ್ದಾಗ ಹಿರಿಯರು ‘ಗಮನವಿಟ್ಟು ಓದು,' ಎಂದೋ, ‘ಮಾಡುವ ಕೆಲಸದ ಮೇಲೆ ಗಮನವಿರಲಿ,' ಎಂದೋ ಹೇಳುತ್ತಿದ್ದುದರ ನೆನಪಿರಬಹುದು. ಈಗಲೂ ನಾವು ನಮ್ಮ ಕಿರಿಯರಿಗೆ ಇದನ್ನೇ ಹೇಳುತ್ತಿರುತ್ತೇವೆ. ಇನ್ನೂ ಮುಂದುವರಿದಂತೆ, ‘ಗಮನವಿಟ್ಟು ಏಕಾಗ್ರತೆಯಿಂದ ಮಾಡುವ ಕೆಲಸಕ್ಕೆ ಜಯ ಇದ್ದೇ ಇರುತ್ತದೆ,'ಎನ್ನುವ ಮಾತನ್ನೂ ಕೇಳುತ್ತಿರುತ್ತೇವೆ. ಈ ‘ಗಮನ' ಎಂದರೇನು? ಏಕಾಗ್ರತೆಗೂ ಇದಕ್ಕೂ ಇರುವ ವ್ಯತ್ಯಾಸವೇನು? ಎನ್ನುವ ಬಗ್ಗೆ ನಾವು ಅಷ್ಟಾಗಿ ಚಿಂತಿಸುವುದಿಲ್ಲ. ಒಂದು ರೀತಿಯಲ್ಲಿ ಈ ಸೂಚನೆಗಳು ವಂಶಪಾರಂಪರ್ಯವಾಗಿ ಅಥವಾ ಸಾಂಪ್ರದಾಯಿಕವಾಗಿ ತಲೆಮಾರುಗಳಿಂದ ತಲೆಮಾರುಗಳಿಗೆ ವರ್ಗಾವಣೆಯಾಗುತ್ತಾ ಸಾಗುತ್ತವೆ. ‘ಗಮನ'ದ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ತಮ್ಮ ‘ಅನುದಿನ ಚಿಂತನ'ದಲ್ಲಿ ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ:
‘ಗಮನವೆಂದರೇನು? ಗಮನವಿರಬೇಕೆಂದು ಮನಸ್ಸನ್ನು ಒತ್ತಾಯಿಸಿಕೊಂಡಿದ್ದಾಗ ಗಮನವಿರುತ್ತದೆಯೆ? ‘ನಾನು ಗಮನಕೊಡಬೇಕು, ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು, ಎಲ್ಲಾ ಆಲೋಚನೆಗಳನ್ನೂ ದೂರತಳ್ಳಬೇಕು? ಎಂದುಕೊಂಡು ತತ್ಪರರಾದಾಗ ಗಮನವಿರುತ್ತದೆಯೇ? ನಿಜವಾಗಿಯೂ ಇದ್ಯಾವುದೂ ಗಮನವಲ್ಲ. ಮನಸ್ಸು ಬಲವಂತವಾಗಿ ಗಮನ ನೀಡಿದಾಗ ಏನಾಗುತ್ತದೆ? ತನ್ನ ಬಳಿ ಇತರ ಆಲೋಚನೆಗಳು ಸುಳಿಯದಂತೆ ಪ್ರತಿರೋಧವನ್ನು ಒಡ್ಡತೊಡಗುತ್ತದೆ. ಪ್ರತಿರೋಧದ ಬಗೆಗೇ ಎಚ್ಚರವಾಗಿದ್ದು ಬೇಡದ ಯೋಚನೆಗಳನ್ನೆಲ್ಲಾ ದೂರ ದಬ್ಬುವುದರಲ್ಲೇ ತೊಡಗುತ್ತದೆ. ಆದ್ದರಿಂದ ಆ ಸ್ಥಿತಿ ಗಮನದ ಸ್ಥಿತಿ ಅಲ್ಲ, ಅಲ್ಲವೇ?
ಏನನ್ನಾದರೂ ಅರ್ಥಮಾಡಿಕೊಳ್ಳಬೇಕಿದ್ದರೆ ಅದಕ್ಕೆ ನಿಮ್ಮ ಪೂರ್ಣ ಗಮನವನ್ನು ನೀಡಬೇಕು. ಆದರೆ ಹಾಗೆ ಪೂರ್ಣ ಗಮನವನ್ನು ನೀಡುವುದು ಎಷ್ಟು ಕಷ್ಟ ಎಂಬುದು ಕೂಡಲೇ ತಿಳಿಯುತ್ತದೆ. ಚಾಂಚಲ್ಯಕ್ಕೆ ಮನಸ್ಸು ಎಷ್ಟು ಒಗ್ಗಿಹೋಗಿದೆ ಎಂದರೆ, ‘ದೇವರೇ, ಗಮನ ನೀಡುವುದೇನೋ ಒಳ್ಳೆಯದೇ, ಆದರೆ ಗಮನವನ್ನು ಹೇಗೆ ಕೊಡಲಿ?' ಎಂದು ಕೇಳತೊಡಗುತ್ತೀರಿ. ಅಂದರೆ, ಏನನ್ನೋ ಪಡೆಯುವ ಆಸೆ ನಮ್ಮಲ್ಲಿ ಮತ್ತೆ ತಲೆ ಎತ್ತುತ್ತದೆ. ಪೂರ್ಣ ಗಮನವನ್ನು ನೀಡದವರಾಗುತ್ತೀರಿ......ಪೂರ್ಣ ಗಮನವನ್ನು ನೀಡುವುದೆಂದರೆ ಮರವನ್ನೋ, ಹಕ್ಕಿಯನ್ನೋ ನೋಡಿದಾಗ, ‘ಇದು ಆಲದ ಮರ,' ‘ಇದು ಗಿಣಿ,' ಎಂದು ಹೇಳಿ ಸುಮ್ಮನೆ ನಡೆದುಬಿಡುವುದಲ್ಲ. ಹಾಗೆ ಹೆಸರಿಟ್ಟ ಕೂಡಲೇ ನೀವು ಗಮನ ನೀಡುವುದನ್ನು ನಿಲ್ಲಿಸಿರುತ್ತೀರಿ.......
ಆದರೆ ಏನನ್ನಾದರೂ ನೋಡುವಾಗ ಪೂರ್ಣ ಎಚ್ಚರವಿದ್ದರೆ, ಪೂರ್ಣ ಗಮನವಿದ್ದರೆ, ಆಗ ಪರಿವರ್ತನೆಯೊಂದು ಆಗುತ್ತಿರುವುದನ್ನು ಕಾಣುತ್ತೀರಿ, ಪೂರ್ಣ ಗಮನ ಒಳ್ಳೆಯದೆಂದು ತಿಳಿಯುತ್ತೀರಿ. ಅನ್ಯವಾದುದು ಯಾವುದೂ ಇಲ್ಲ. ಗಮನವನ್ನು ಅಭ್ಯಾಸದಿಂದ ಸಾಧಿಸುವುದೂ ಕೂಡ ಸಾಧ್ಯವಿಲ್ಲ. ಅಭ್ಯಾಸದಿಂದ ಏಕಾಗ್ರತೆ ಹುಟ್ಟುತ್ತದೆ, ಅಷ್ಟೆ. ಅಂದರೆ ಪ್ರತಿರೋಧದ ಗೋಡೆಯನ್ನು ಕಟ್ಟಿಕೊಳ್ಳುತ್ತೀರಿ. ಆ ಗೋಡೆಗಳ ಮಿತಿಯಲ್ಲ. ಏಕಾಗ್ರ ಸಾಧಕನ ಪ್ರತಿರೋಧವಿರುತ್ತದೆಯೇ ಹೊರತು ಗಮನವಲ್ಲ. ಅದು ಬೇರೆಲ್ಲವನ್ನೂ ದೂರವಿಡುವ ಸ್ಥಿತಿ.'
ಏಕಾಗ್ರತೆ ಮತ್ತು ಗಮನಕ್ಕಿರುವ ವ್ಯತ್ಯಾಸವನ್ನು ಹೀಗೆ ತಿಳಿಸುತ್ತಾರೆ:
`ಮನಸ್ಸಿನ ಬೆಳವಣಿಗೆಯ ವಿಷಯದಲ್ಲಿ ಪ್ರಾಮುಖ್ಯವಿರಬೇಕಾದದ್ದು ಗಮನಕ್ಕೇ ಹೊರತು ಏಕಾಗ್ರತೆಗಲ್ಲ. ಏಕಾಗ್ರತೆಯಲ್ಲಿ ಮನಸ್ಸನ್ನು ಬಲವಂತದಿಂದ ಯಾವುದೋ ಒಂದು ಬಿಂದುವಿಗೆ ಸಂಕುಚಿತಗೊಳಿಸುವ ಕ್ರಿಯೆ ನಡೆಯುತ್ತದೆ. ಆದರೆ ಗಮನಕ್ಕೆ ಯಾವ ಗಡಿಯೂ ಇಲ್ಲ, ಯಾವ ಮಿತಿಯೂ ಇಲ್ಲ. ಏಕಾಗ್ರತೆಯಲ್ಲಿ ಮನಸ್ಸು ಯಾವಾಗಲೂ ಆಯ್ದ ವಿಷಯದ ಸೀಮೆಗೆ ಬದ್ಧವಾಗಿರುತ್ತದೆ. ಮನಸ್ಸಿನ ಇಡಿತನವನ್ನು ಅರ್ಥಮಾಡಿಕೊಳ್ಳುವಲ್ಲಿ ಕೇವಲ ಏಕಾಗ್ರತೆಯ ಅಡಚಣೆಯನ್ನು ಮಾತ್ರ ಉಂಟುಮಾಡಿಕೊಳ್ಳಬಲ್ಲದು. ಗಮನವೆನ್ನುವುದು ಜ್ಞಾನದ ಗಡಿರೇಖೆಗಳಿಲ್ಲದೆ ಅಮಿತವಾಗಿರುವಂಥದ್ದು, ನಿಸ್ಸೀಮವಾದದ್ದು. ಏಕಾಗ್ರತೆಯಿಂದ ಜ್ಞಾನ ಲಭಿಸುತ್ತದೆ. ಜ್ಞಾನದ ವಿಸ್ತರಣೆ ಎಷ್ಟೇ ನಡೆದರೂ ಅದು ಸೀಮಾಬದ್ಧವಾದದ್ದೇ. ಗಮನದ ಸ್ಥಿತಿಯಲ್ಲಿ ಏಕಾಗ್ರತೆಯ ಫಲಿತಾಂಶವಾಗಿ ಮೂಡಿದ ಜ್ಞಾನವನ್ನು ಬಳಸಿಕೊಳ್ಳಬಹುದು ಮತ್ತು ಬಳಸಿಕೊಳ್ಳಲಾಗುತ್ತದೆ. ಆದರೆ ಅಂಶವು ಎಂದೂ ಪೂರ್ಣವಲ್ಲ..............ಪೂರ್ಣತೆಯೆಂಬುದು ಎಂದೂ ಏಕಾಗ್ರ ಮನಸ್ಸಿನ ತುತ್ತಲ್ಲ. ಆದ್ದರಿಂದಲೇ ಗಮನಕ್ಕೆ ಮೊದಲ ಪ್ರಾಮುಖ್ಯ. ಏಕಾಗ್ರತೆಯ ಪ್ರಯತ್ನದ ಮೂಲಕ ಗಮನವನ್ನು ಸಾಧಿಸಿಕೊಳ್ಳಲಾಗುವುದಿಲ್ಲ.'
ಪೂರ್ಣಗಮನವನ್ನು ನೀಡುವುದಕ್ಕೆ ಸಾಧ್ಯವಾಗುವಂತಹ ಸ್ಥಿತಿಯು ಧ್ಯಾನವೆಂದರೇನೆಂಬುದನ್ನು ಅರ್ಥಮಾಡಿಸುತ್ತದೆ ಎನ್ನುವುದನ್ನು ಈ ರೀತಿಯಾಗಿ ಪ್ರಸ್ತುತಪಡಿಸುತ್ತಾರೆ:
‘ಮನಸ್ಸನ್ನು ಯಾವುದೂ ಹೀರಿಕೊಳ್ಳದಂತಹ ಗಮನವಿದೆಯೇ? ಯಾವುದೇ ಒಂದು ವಸ್ತುವಿನ ಬಗ್ಗೆಯೂ ಏಕಾಗ್ರವಾಗಿರದಂತಹ ಗಮನವಿದೆಯೇ? ಯಾವುದೇ ಬಗೆಯ ಉದ್ದೇಶ, ಪ್ರಭಾವ, ಒತ್ತಾಯಗಳಿಲ್ಲದ ಗಮನವಿದೆಯೇ? ಮನಸ್ಸು ಯಾವುದನ್ನೂ ಹೊರಗಿಡದೇ ಎಲ್ಲದರ ಬಗೆಗೂ ಪೂರ್ಣ ಗಮನವನ್ನು ನೀಡಬಲ್ಲದೇ? ಖಂಡಿತ. ಇಂಥದು ಮಾತ್ರ ನಿಜವಾದ ಗಮನದ ಸ್ಥಿತಿ, ಉಳಿದೆಲ್ಲವೂ ಮೈಮರೆವು ಅಥವಾ ಮನಸ್ಸಿನ ಜಾಣತಂತ್ರಗಳು. ಯಾವುದೂ ನಿಮ್ಮ ಮನಸ್ಸನ್ನು ಹೀರಿಕೊಳ್ಳದೇ, ಯಾವುದನ್ನೂ ತಿರಸ್ಕರಿಸದೇ, ಎಲ್ಲದರ ಬಗೆಗೂ ಪೂರ್ಣಗಮನವನ್ನು ನೀಡುವುದಕ್ಕೆ ನಿಮಗೆ ಸಾಧ್ಯವಾದರೆ ಧ್ಯಾನಿಸುವುದೆಂದರೇನೆಂದು ನಿಮಗೆ ತಿಳಿಯುತ್ತದೆ. ಏಕೆಂದರೆ ಅಂಥಾ ಗಮನದಲ್ಲಿ ಪ್ರಯತ್ನವಿಲ್ಲ, ವಿಭಜನೆಯಿಲ್ಲ, ಸಂಘರ್ಷವಿಲ್ಲ, ಫಲಿತಾಂಶದ ಹುಡುಕಾಟವಿಲ್ಲ. ಧ್ಯಾನವೆಂದರೆ ವಿವಿಧ ವ್ಯವಸ್ಥೆಗಳಿಂದ ಮನಸ್ಸನ್ನು ಬಿಡಿಸುವ ಪ್ರಕ್ರಿಯೆ, ಯಾವುದೂ ನಿಮ್ಮನ್ನು ಹೀರಿಕೊಳ್ಳದೇ ನಿಮ್ಮ ಪೂರ್ಣಗಮನವನ್ನು ನೀಡಲು ಆಗುವ ಸ್ಥಿತಿ, ಅಥವಾ ಏಕಾಗ್ರತೆಗಾಗಿ ಪ್ರಯತ್ನಿಸದೇ ಇರುವ ಸ್ಥಿತಿ.'
ಹಾಗಾದರೆ ಪೂರ್ಣಗಮನದ ಸ್ಥಿತಿಯನ್ನು ಪಡೆದುಕೊಳ್ಳುವುದಾದರೂ ಹೇಗೆಂಬುದನ್ನು ಮನವರಿಕೆ ಮಾಡುತ್ತಾ:
‘ಗಮನದ ಸ್ಥಿತಿ ಹೇಗೆ ಉಂಟಾಗುತ್ತದೆ? ಒತ್ತಾಯದಿಂದ, ಹೋಲಿಕೆಯಿಂದ, ಬಹುಮಾನದ ಆಸೆಯಿಂದ, ಶಿಕ್ಷೆಯ ಭಯದಿಂದ ಗಮನ ಹುಟ್ಟುವುದಿಲ್ಲ. ಇವೆಲ್ಲವೂ ಬಲವಂತದ ವಿವಿಧ ರೂಪಗಳು. ಭಯದ ನಿವಾರಣೆಯೇ ಗಮನದ ಆರಂಭ. ಏನೋ ಆಗಬೇಕು, ಏನೋ ಸಿಗಬೇಕು ಎಂಬ ಆಸೆ ಇರುವವರಗೆ ಭಯ ಇದ್ದೇ ಇರುತ್ತದೆ. ಅದು ಎಲ್ಲಾ ಹತಾಶೆ, ಕಸಿವಿಸಿ, ವೇದನೆ ತರುವ ವೈರುಧ್ಯಗಳೊಂದಿಗೆ ಯಶಸ್ಸನ್ನು ಹಿಂಬಾಲಿಸುವ ಕೆಲಸ. ಏಕಾಗ್ರತೆಯನ್ನು ಕಲಿಸಬಹುದು, ಆದರೆ ಭಯಮುಕ್ತರಾಗುವುದನ್ನು ಹೇಗೆ ಎಂಬುದನ್ನು ಕಲಿಸಲು ಸಾಧ್ಯವಿಲ್ಲ. ಅಂತೆಯೇ ಗಮನವನ್ನು ಕಲಿಸಲು ಕೂಡ ಸಾಧ್ಯವಿಲ್ಲ. ವಿದ್ಯಾರ್ಥಿಯ ಸುತ್ತಲೂ ಸ್ವಾಸ್ಥ್ಯದ ವಾತಾವರಣವಿದ್ದಾಗ, ಸುರಕ್ಷೆಯ ಹಾಗೂ ಸರಳೀತದ ಭಾವವಿದ್ದಾಗ ಪ್ರೀತಿಸಹಿತವಾದ ನಿರಾಸಕ್ತ ಗಮನವಿರುತ್ತದೆ. ಗಮನವೆನ್ನುವುದು ಸಹಜವಾಗಿ, ಸ್ವಚ್ಛಂದವಾಗಿ ಮೂಡುತ್ತದೆ.'
ಹೀಗೆ ಗಮನವು ಸಹಜವಾಗಿ ಮೂಡುವಂತೆ ಭಯಮುಕ್ತರಾಗಿ, ಧ್ಯಾನಸ್ಥ ಸ್ಥಿತಿಯನ್ನು ತಲುಪಲು ನಮ್ಮನ್ನು ನಾವು ಅಣಿಗೊಳಿಸಿಕೊಳ್ಳೋಣ.

10 comments:

  1. ಮೇಡಂ;ಗಮನ ಮತ್ತು ಏಕಾಗ್ರತೆಯ ಬಗ್ಗೆ ಬರಹ ಚೆನ್ನಾಗಿ ಮೂಡಿಬಂದಿದೆ.
    ಏಕಾಗ್ರತೆಯಲ್ಲಿ ಮನಸ್ಸಿನ ಪಾತ್ರವಿದೆ.ಮನಸ್ಸಿಗೆ ಏನೋ ಸಾಧಿಸಬೇಕಿದೆ.ಆದರೆ ಗಮನದಲ್ಲಿ ಏನೂ ಸಾಧಿಸಬೇಕಿಲ್ಲ.ಅಲ್ಲಿ ಮನಸ್ಸೇ ಇಲ್ಲದ ಸ್ವಾಭಾವಿಕ ಸ್ಥಿತಿ! ಮಕ್ಕಳು ಗಮನಿಸಿ ಕೇಳುವ ಪ್ರಶ್ನೆಗಳನ್ನೇ ನೋಡಿ.ಆಕಾಶದ ಬಣ್ಣ ನೀಲಿ .ಯಾಕೆ?ಮಳೆಆಕಾಶದಿಂದ ಬರುತ್ತೆ.ಯಾಕೆ?ನನಗೆ ಗಡ್ಡ ಇಲ್ಲ.ಯಾಕೆ?ಇತ್ಯಾದಿ ,ಇತ್ಯಾದಿ.....ಒಂದು ಮಗು ಇವನ್ನೆಲ್ಲಾ ಕೇಳಬೇಕೆಂದು ಕೆಳುವುದಿಲ್ಲ.ಎಲ್ಲವನ್ನೂ ಗಮನಿಸುವುದರಿಂದ ಉದ್ಭವಿಸುವ ಪ್ರಶ್ನೆಗಳುಅವು!ಧನ್ಯವಾದಗಳು.ನಮಸ್ಕಾರ.

    ReplyDelete
  2. @ಡಾ. ಕೃಷ್ಣ ಮೂರ್ತಿಯವರೆ,
    ಶೀಘ್ರವೇ ನನ್ನ ಲೇಖನಕ್ಕೆ ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. `ಗಮನ ಮತ್ತು ಏಕಾಗ್ರತೆ'ಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ತಿಳಿವಿನ ವಿಸ್ತಾರವನ್ನು ಹೆಚ್ಚಿಸಿದ್ದೀರಿ.ವ೦ದನೆಗಳು . ಬರುತ್ತಿರಿ.

    ReplyDelete
  3. gamanavittu oduvudu bareyuvudara kade nanna gamana madam. nice.

    ReplyDelete
  4. ಏಕಾಗ್ರತೆಯ ಬಗ್ಗೆ ಅತ್ಯುತ್ತಮ ಲೇಖನ ಇದು ಮೇಡಂ. ಮನಸ್ಸಿನ ಸುಸ್ಥಿತಿ ಕಾಪಾಡಲು ಮತ್ತು ಫಲಿತಾಂಶವನ್ನು ಸಾಧಿಸಲು ಇದು ಪ್ರಯೋಜನಕಾರಿ.

    ತಮ್ಮ ಲೇಖನಗಳು ಉಪಯುಕ್ತ ಮಾಹಿತಿಯ ವಿಶ್ವಕೋಶಗಳು.

    ReplyDelete
  5. ಮೇಡಮ್,
    ಗಮನದ ಸಾಧನೆಯ ಬಗೆಗೆ ತುಂಬ ಉತ್ತಮ ಲೇಖನ. ಧನ್ಯವಾದಗಳು.

    ReplyDelete
  6. Gamana,ekagrategala kuritu aala arivu tilisiddeeri,dhanyavadagalu..

    ReplyDelete
  7. ಪ್ರಭಾಮಣಿ ಮೇಡಂ ನಿಮ್ಮ ಗಮನಿಕೆಯ ಗಮನಾರ್ಹ ಲೇಖನ ಗಮನಿಸದೇ ಇರಲಾಗಲಿಲ್ಲ...ಚನ್ನಾಗಿದೆ.. ಹಲವು ಆಯಾಮಗಳ ಸುತ್ತ ಹೆಣೆದ "ಗಮನಿಕೆ" ಕಥನ.

    ReplyDelete
  8. ತುಂಬಾ ಚನ್ನಾಗಿದೆ.....ನಿಮ್ಮಿ೦ದ ಕಲಿಯಬೇಕಾಗಿದ್ದು ಬಹಳ ಇದೆ ನನಗೆ. ಅದ್ಭುತವಾದ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  9. ನಾನು ಸಣ್ಣವನಿದ್ದಾಗ ನನಗೆ "ಏಕಾಗ್ರತೆಯ" ತೊಂದರೆ ಇತ್ತು..
    ಚಂಚಲನಾಗಿದ್ದೆ..

    ನಿಮ್ಮಂಥಹ ಗುರುಗಳು ಆಗ ಸಿಗಬೇಕಿತ್ತು.. ಬಲು ಬೇಗ ಹೊರಗೆ ಬರುತ್ತಿದ್ದನೇನೊ..

    ನಿಮ್ಮ ಈ ವಸ್ತುನಿಷ್ಠ ಬರಹ ಬದುಕಿಗೆ ಹತ್ತಿರವಾದದ್ದು..
    ಧನ್ಯವಾದಗಳು...

    ReplyDelete