Sunday, March 11, 2012

ಮನದ ಅಂಗಳದಿ.........೮೩. ನಾನು ಯಾರು?

ನಮಗೆ ‘ನಾನು’ ಎಂಬ ಅರಿವು ಮೂಡಲಾರಂಭಿಸಿದ ನಂತರ ಒಂದಲ್ಲಾ ಒಂದು ಸಂದರ್ಭದಲ್ಲಿ ‘ನಾನು ಯಾರು?’ ಎಂಬ ಪ್ರಶ್ನೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಅದಕ್ಕೆ ನಮ್ಮ ಬುದ್ಧಿಗೆ ನಿಲುಕುವಂತೆ ಉತ್ತರಿಸುತ್ತಾ, ಸಮಜಾಯಿಸುತ್ತಾ ಸೂಕ್ತ ಉತ್ತರಕ್ಕಾಗಿ ಹುಡುಕುವುದರಲ್ಲಿಯೇ ನಮ್ಮ ಬದುಕಿನ ಬಹುಭಾಗ ಸರಿದುಹೋಗುತ್ತದೆ. ನನ್ನ ಮಗಳು ಸುಷ್ಮ ತನ್ನ ಹದಿವಯಸ್ಸಿನಲ್ಲಿ ಕಂಡ ಕನಸೊಂದು (ಕನಸಿನ ಕಥೆ ‘ನಾನು ಯಾರು?’) ನನ್ನ ಮನಸ್ಸಿನ ಆಳದಲ್ಲಿ ಹುದುಗಿದ್ದು ಆಗಾಗ ತಲೆಯೆತ್ತಿ ಕಾಡುವ ಈ ಪ್ರಶ್ನೆಗೆ ಸಮರ್ಪಕವೆನಿಸುವ ಉತ್ತರವನ್ನು ನೀಡಿತು. ಆ ಕನಸನ್ನು ಅದರಲ್ಲಿರುವ ವಿಚಾರಸರಣಿಯಿಂದ, ನಿಗೂಢತೆಯಿಂದ, ಅಂಥಾ ಇತರ ಕನಸುಗಳಂತೆಯೇ ನಾನು ಬಹಳವಾಗಿ ಇಷ್ಟಪಡುತ್ತೇನೆ. ಅದರ ಸಂಕ್ಷಿಪ್ತ ರೂಪ ಹೀಗಿದೆ:
‘ಒಂದು ದೊಡ್ಡ ಮೈದಾನದ ನಡುವೆ ಆಗಸವನ್ನು ನಿಟ್ಟಿಸುತ್ತಾ ‘ನಾನು’ ನಿಂತಿದ್ದಾಗ ಮೋಡವೊಂದು ವ್ಯಕ್ತಿಯ ಮೊಗದ ರೂಪ ತಳೆದು ‘ನೀನು ಯಾರು?’ ಎಂದು ಪ್ರಶ್ನಿಸುತ್ತದೆ. ಆ ಕ್ರೂರ ವದನವು ‘ಇನ್ನು ಮೂರು ದಿನದಲ್ಲಿ ಉತ್ತರಿಸದಿದ್ದರೆ ಈ ಭೂಮಿಯ ಮೇಲೆ ನಿನಗೆ ಜಾಗವಿಲ್ಲ,’ ಎಂದೂ ಅಚ್ಚರಿಗೊಳಿಸುತ್ತದೆ........ ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ಪ್ರಯತ್ನದಲ್ಲಿ ನನ್ನನ್ನು ವರ್ಷಗಳಿಂದ ನೋಡುತ್ತಿರುವ ಮನೆಯ ಗೋಡೆಗಳನ್ನು, ಮರವನ್ನು, ನೀರನ್ನು ‘ನಾನು ಯಾರು?’ ಎಂದು ಕೇಳಿದಾಗ, ಗೋಡೆಗಳು ‘ನೀನು ರಕ್ತಮಾಂಸವಿರುವ ಹುಡುಗಿ,’ ‘ನೀನು ಸೂಕ್ಷ್ಮ ಮನಸ್ಸಿನವಳು...,’ ‘ನೀನು ಈ ಮನೆಯ ಹುಡುಗಿ, ಇಂಥವರ ಮಗಳು, ತಂಗಿ.....’ಮುಂತಾಗಿ ಪ್ರತಿಧ್ವನಿಸುತ್ತವೆ. ಮರವು ‘ನೀನು ಕತ್ತಲ ಕೂಸು......’ಎಂದು ಪ್ರತಿಕ್ರಿಯಿಸುತ್ತದೆ. ನೀರಿನಲ್ಲಿರುವ ಪ್ರತಿಬಿಂಬವು ಕಣ್ಣು, ಮೂಗು, ಬಾಯಿಯನ್ನು ಅಳತೆಮಾಡಿದಂತೆ ತೋರಿಸಿ, ‘ನೀನು ಇದೇ.....’ಎಂದಂತಾಗಿ ಮನಸ್ಸು ಖಿನ್ನವಾಗುತ್ತದೆ......... ಕೈಯಲ್ಲಿ ಒಂದು ಮಣಿಕಟ್ಟನ್ನು ಹಿಡಿದು ಎಣಿಸಲಾರಂಭಿಸಿದಾಗ ಎಲ್ಲ ಮಣಿಗಳೂ ಉದುರಿಹೋಗುತ್ತವೆ. ಕೈಗೆ ಸಿಗದಂತೆ ಉರುಳಿಹೋಗುತ್ತಲಿದ್ದ ಅವುಗಳನ್ನು ಮುಷ್ಟಿಯಲ್ಲಿ ಹಿಡಿಯುವ ಪ್ರಯತ್ನದಲ್ಲಿದ್ದಾಗ ‘ಮೌನ’ವು, ‘ನಾನು ಯಾರೆಂಬುದನ್ನು ಅವರು, ಇವರು, ನನಗೆ ತಿಳಿದವರಿಗೆಲ್ಲಾ ಪ್ರಶ್ನೆಹಾಕಿ ಅವರು ಕೊಡುವ ಉತ್ತರಗಳಲ್ಲೊಂದನ್ನು ಆಯ್ದುಕೊಳ್ಳುವ ಪ್ರಯತ್ನದಲ್ಲಿ ನನ್ನ ಪ್ರಯತ್ನವೆಲ್ಲಾ ಕಳೆದುಹೋಗುತ್ತಿದೆ.....’ಎನ್ನುವ ಅರಿವಾಗುತ್ತದೆ. ಓಡುತ್ತಿದ್ದ ಸಮಯವು ನನ್ನ ಪಾಲಿಗೆ ಒಂದು ಗಂಟೆಯನ್ನು ಮಾತ್ರ ಉಳಿಸಿದ್ದಾಗ ಮೈದಾನಕ್ಕೆ ಬಂದು ಮಂಡಿಯೂರಿ ಕುಳಿತೆ...... ಮೊದಲು ಆ ಮೈದಾನದಲ್ಲಿದ್ದ ಅದೇ ಜನ ಕೈಯಲ್ಲಿ ಸ್ವಪರಿಚಯ ವಿವರವನ್ನೊಳಗೊಂಡ ಹಾಳೆಯನ್ನು ಹಿಡಿದು ಆಗಸದತ್ತ ಮೊಗಮಾಡಿ ಆಕಾಶರಾಜನ ನಿರೀಕ್ಷೆಯಲ್ಲಿರುತ್ತಾರೆ. ಅಲ್ಲಿ ಸೌಮ್ಯ, ಸುಂದರ ಮೊಗವೊಂದು ಗೋಚರಿಸಿದ ತಕ್ಷಣವೇ ಸಾಮೂಹಿಕ ಪ್ರಾರ್ಥನೆಯಂತೆ ಸ್ವವಿವರವನ್ನು ಓದಲಾರಂಭಿಸುತ್ತಾರೆ. ಒಬ್ಬೊಬ್ಬರೂ ತಮ್ಮ ಪಾಲಿನದನ್ನು ಹೇಳಿ ಮುಗಿಸಿ ಹಾಳೆಯನ್ನಿಟ್ಟು ಹೋಗುತ್ತಾರೆ. ತಾನೊಬ್ಬಳೇ ಉಳಿದಾಗ ಆಕೆ, ‘ನೀನ್ಯಾರು ಎಂದು ತಿಳಿಯಲಿಲ್ಲವಾ?’ ಎಂದು ಕೇಳುತ್ತಾಳೆ. ‘.....’ ‘ನೀನ್ಯಾರು ಎಂದು ಯಾರಿಗೋ ಹೇಳುವ ಅಗತ್ಯವಿತ್ತಾ?’ ಎಂದು ಆಕೆಯೇ ಪ್ರಶ್ನಿಸಿದಾಗ, ‘ಹೌದಲ್ಲವೇ’ ಎನಿಸುತ್ತದೆ. ಉತ್ತರ ತಿಳಿಯಲು ಆಕೆಯ ಸಲಹೆಯಂತೆ ಬೆಟ್ಟದ ತುದಿಯಲ್ಲಿ ಹೋಗಿ ನಿಂತು ‘ನಾನು ಯಾರು?’ ಎಂದು ಅನೇಕ ಸಲ ಕೂಗಿದಾಗ ಅದೇ ಪ್ರತಿಧ್ವನಿ ಬರುತ್ತದೆ! ಸುಖದ ಕ್ಷಣಗಳಲ್ಲಿ ನಮ್ಮ ಸಾಮರ್ಥ್ಯದ ಅರಿವಾಗಬಹುದೆಂದು ಉಯ್ಯಾಲೆಯ ಮೇಲೆ ಕುಳಿತಾಗಲೂ, ಕಣ್ಣರೆಪ್ಪೆಯನ್ನು ಮುಚ್ಚಿ ತೆಗೆದಾಗಲೂ ತಿಳಿಯುವುದಿಲ್ಲ. ಕಡೆಗೆ ‘ಮರಳಿನ ಮೇಲೆ ನಿನ್ನ ಬಗ್ಗೆ ನಿನಗೆ ತೋಚಿದ್ದನ್ನು ಬರೆ. ಆಗಲಾದರೂ ಗೊತ್ತಾದೀತು,’ ಎಂದು ಆಕೆ ಹೇಳಿದಾಗ ಬರೆಯುತ್ತಾ ಹೋದಂತೆ ಮತ್ತೊಂದೆಡೆಯಿಂದ ಸುಯ್ಯನೆ ಬೀಸುವ ಗಾಳಿ ಆ ಬರಹವನ್ನು ಮುಚ್ಚುತ್ತಾ ಬರುತ್ತದೆ. ಆಕೆ ತಟ್ಟನೆ, ‘ಇದೇ ನೀನು’ ಎನ್ನುತ್ತಾಳೆ! ‘ಇದೇ ಮನುಷ್ಯ ಬದುಕು. ನಮಗೇ ಗೊತ್ತಿಲ್ಲದಂತೆ ಜೀವನದಲ್ಲಿ ಮರಳಮೇಲೆ ನಾವ್ಯಾರೆಂಬುದನ್ನು ಬರೆಯಲಾರಂಭಿಸಿರುತ್ತೇವೆ. ಬದುಕಿನ ಅನುಭವಗಳು ಗಾಳಿಯಂತೆ ಬಂದು ನಮ್ಮ ‘ಬರಹ’ವನ್ನು ಮುಚ್ಚುತ್ತಾ ನಮ್ಮನ್ನು ನಮಗೆ ತೋರಿಸುತ್ತಿರುತ್ತದೆ.............‘ಬೆರಳಡಿಯಲ್ಲಿ ಜೀವಂತವಾಗಿರುವ ಅಕ್ಷರವೇ ‘ನಾನು’’. ಆದರೆ ನನ್ನನ್ನು, ನನ್ನತನವನ್ನು ಇಡೀ ಲೋಕವೇ ನೋಡಬೇಕೆಂದು ಬಯಸಿ ನಮ್ಮ ಬರವಣಿಗೆಯ ಸುತ್ತಾ ‘ಗಾಳಿ’ ಬರದಂತೆ ತಡೆಗೋಡೆಯನ್ನು ಕಟ್ಟಿ ಬರೆದ ಅಷ್ಟನ್ನೂ ಉಳಿಸಿ ಅದನ್ನು ನಾವೇ ನೋಡಿ ಹಿಗ್ಗುತ್ತಾ ಹೆಮ್ಮೆಪಡುವ ಮೂರ್ಖರು ನಾವಾಗಬಾರದಷ್ಟೆ. ತಡೆಗೋಡೆಯೆಂಬ ಪರಿಮಿತಿಯೊಳಗೆ ಅಡಗಿ ಬೀಗುವವರಿಗೆ ‘ನಾನೇ’ ಎಂಬ ಹಮ್ಮು ಬಿಟ್ಟರೆ ಉಳಿದದ್ದೇನೂ ಇರಲು ಸಾಧ್ಯವಿಲ್ಲ............’
ಇತ್ತೀಚೆಗೆ ದೊರೆತ ಶ್ರೀರಾಮ ಶರ್ಮಾ ಆಚಾರ್ಯರ ‘ನಾನು ಯಾರು?’ ಎಂಬ ಪುಸ್ತಕವನ್ನು ಓದಲಾರಂಭಿಸಿದೆ. ಪ್ರಸ್ತಾವನೆಯಲ್ಲಿ ಲೇಖಕರು, ‘ಮನುಷ್ಯನು ತಿಳಿದುಕೊಳ್ಳಬೇಕಾದ ಅನೇಕ ವಿಷಯಗಳಲ್ಲಿ ತನ್ನನ್ನು ತಾನು ಅರಿಯುವುದೇ ಸರ್ವಶ್ರೇಷ್ಠವಾಗಿದೆ. ನಾವು ಹೊರಗಿನ ಅನೇಕ ವಿಷಯಗಳನ್ನು ತಿಳಿದಿರುತ್ತೇವೆ, ಇಲ್ಲವೇ ತಿಳಿದುಕೊಳ್ಳುವ ಪ್ರಯತ್ನದಲ್ಲಿರುತ್ತೇವೆ. ಆದರೆ ಸ್ವತಃ ನಾನು ಯಾರು ಎಂಬುದನ್ನೇ ಮರೆತುಬಿಡುತ್ತೇವೆ.ನಮ್ಮನ್ನು ನಾವು ಅರಿಯದಿದ್ದಲ್ಲಿ ಬದುಕಿನ ಹಾದಿ ತೀವ್ರ ತೊಳಲಾಟಕ್ಕೆ ಸಿಲುಕಿ, ನಮ್ಮನ್ನು ತೀವ್ರ ತೊಳಲಾಟಕ್ಕೆ ಸಿಲುಕಿಸಿ, ನಮ್ಮನ್ನು ಅನಿಶ್ಚಿತತೆ ಮತ್ತು ಕಂಟಕಗಳತ್ತ ತಳ್ಳುತ್ತದೆ. ತನ್ನ ಕುರಿತ ವಾಸ್ತವಿಕ ಜ್ಞಾನದ ಕೊರತೆಯಿಂದಾಗಿ ಮನುಷ್ಯ ಯೋಚಿಸಬಾರದ ವಿಷಯಗಳನ್ನು ಯೋಚಿಸುತ್ತಾನೆ ಮತ್ತು ಮಾಡಬಾರದ ಕಾರ್ಯಗಳನ್ನು ಮಾಡುತ್ತಾನೆ. ನಿಜವಾದ ಸುಖ-ಶಾಂತಿಗೆ ರಾಜಮಾರ್ಗ ಒಂದೇ; ಅದೆಂದರೆ ಆತ್ಮಜ್ಞಾನ. ಈ ಪುಸ್ತಕದಲ್ಲಿ ಆತ್ಮಜ್ಞಾನದ ಶಿಕ್ಷಣವಿದೆ. ‘ನಾನು ಯಾರು?’ ಈ ಪ್ರಶ್ನೆಗೆ ಉತ್ತರ ಶಬ್ಧಗಳಲ್ಲಲ್ಲ, ಬದಲಿಗೆ ಸಾಧನೆಯ ಮೂಲಕ ಹೃದಯಂಗಮ ಮಾಡಿಕೊಳ್ಳುವ ಪ್ರಯತ್ನ ಇದರಲ್ಲಿದೆ.’ ಎಂದು ತಿಳಿಸಿದ್ದಾರೆ. ಮುಂದೆ ಲೇಖನದಲ್ಲಿ ವಿವರವಾಗಿ ಪ್ರಸ್ತಾಪಿಸುತ್ತಾ ಗೀತೆ, ಈಶಾವ್ಯಾಸೋಪನಿಷತ್ತಿನ ಶ್ಲೋಕಗಳನ್ನು ಉದಾಹರಿಸುತ್ತಾ ‘ನಾನು ಯಾರು?’ ಎನ್ನುವ ಪ್ರಶ್ನೆಗೆ ಬರುವ ನಿಷ್ಕರ್ಷಕ ಉತ್ತರವೆಂದರೆ ‘ನಾನು ಆತ್ಮ’ ಎಂದು ತಿಳಿಸುತ್ತಾರೆ.

(ನನ್ನ ಮಗಳು ಸುಷ್ಮಳ ಕನಸಿನ ಕಥೆ ‘ನಾನು ಯಾರು?’ ಲಿ೦ಕ್ ಇಲ್ಲಿದೆ: ‘ನಾನು ಯಾರು?’ ಇದರ ಮೇಲೆ ctrl ಹಿಡಿದು ಕ್ಲಿಕ್ಕಿಸಿ.)

3 comments:

  1. ನಾನು ಓದಲೇ ಬೇಕಾದ ಪುಸ್ತಕದ ಪಟ್ಟಿಯಲ್ಲಿ ಶ್ರೀರಾಮ ಶರ್ಮಾ ಆಚಾರ್ಯರ ಈ ಪುಸ್ತಕವನ್ನೂ ಬರೆದಿಟ್ಟುಕೊಂಡೆ.

    ಸುಷ್ಮರ ಕನಸ್ಸಿನ ಸಾಕಾರ, ಪ್ರಶ್ನೋತ್ತರ ಮತ್ತು ಅದರ ಉತ್ತರ ಪಡೆವ ಕ್ಷಣ ಎಲ್ಲವೂ ಮನೋಚಿಕಿತ್ಸಕ.

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿ ಸರ್, ಬರುತ್ತಿರಿ.

      Delete
  2. ಮೇಡಮ್,
    ಒಂದು ಉತ್ತಮ ಪುಸ್ತಕದ ವಿಚಾರವನ್ನು ಪರಿಚಯಿಸಿದ್ದೀರಿ..ನಾನು ಅದನ್ನು ಓದಬೇಕೆನ್ನುವ ಆಸೆಯಾಗುತ್ತಿದೆ..

    ReplyDelete