Friday, December 17, 2010

ಮನದ ಅ೦ಗಳದಿ........22 ಸೌಂದರ್ಯ-ಕುರೂಪ

ಸಾಮಾನ್ಯವಾಗಿ ಯಾರನ್ನಾದರೂ ಪರಿಚಿತರನ್ನು ಅಪರೂಪಕ್ಕೊಮ್ಮೆ ನೋಡಿದಾಗ ಮೊದಲು ನಾವು ಗಮನಿಸುವುದು ಅವರು ದಪ್ಪವಾಗಿದ್ದಾರೊ-ತೆಳ್ಳಗಾಗಿದ್ದಾರೊ ಅಥವಾ ಕಪ್ಪಗಾಗಿದ್ದಾರೊ-ಬೆಳ್ಳಗಾಗಿದ್ದಾರೊ ಎಂದು. ಸಲಿಗೆ ಇದ್ದರೆ ನೇರವಾಗಿ ಹೇಳಿಯೂ ಬಿಡುತ್ತೇವೆ. ವ್ಯಕ್ತಿಯ ಬಾಹ್ಯ ರೂಪಕ್ಕೆ ನಾವು ಕೊಡುವ ಪ್ರಾಮುಖ್ಯತೆಯೇ ಇದಕ್ಕೆ ಕಾರಣವಾಗಿರಲೂ ಬಹುದು. ಒಬ್ಬರನ್ನು ‘ಸುಂದರ’ ಎಂದು ಪರಿಗಣಿಸಬೇಕಾದರೆ ಅವರ ಎತ್ತರ, ಗಾತ್ರ, ಬಣ್ಣ ಇವುಗಳನ್ನೇ ಪ್ರಮುಖವಾಗಿ ಪರಿಗಣಿಸುತ್ತೇವೆ. ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಮದುವೆ ಮಾಡುವಾಗ ವಧೂ-ವರರನ್ನು ಜೋಡಿಸುವಾಗ ಅವರ ಬಾಹ್ಯ ಗೋಚರತೆಗೇ ಹೆಚ್ಚಿನ ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ವರಸಾಮ್ಯ ಎನ್ನುವ ಪದವೇ ಸಾಕ್ಷಿಯಾಗಿದೆ. ಇತ್ತೀಚೆಗೆ ಹೆಚ್ಚಾಗಿ ನಡೆಸುತ್ತಿರುವ ಸೌಂದರ್ಯ ಸ್ಪರ್ಧೆಗಳಲ್ಲಿ ದೇಹದ ಅಳತೆಯೇ ಪ್ರಮುಖ ಮಾನದಂಡವಾಗಿದೆ. ಈ ಅಳತೆಗಳು ಆರೋಗ್ಯ ಸೂಚಕವಾಗಿಯೂ ಇರಬಹುದು ಎಂದೂ ಎಷ್ಟೋ ಭಾರಿ ಅಂದುಕೊಂಡಿದ್ದೇನೆ. ಆದರೆ ವ್ಯಕ್ತಿಯನ್ನು ವಸ್ತುವಿನ ಮಟ್ಟಕ್ಕೆ ಇಳಿಸುವಷ್ಟು ಅತಿರೇಕವನ್ನು ಕಾಣುತ್ತಿರುವುದು ವಿಷಾದನೀಯ. ಆರೋಗ್ಯವಂತ ವ್ಯಕ್ತಿ ಹೇಗಿದ್ದರೂ ಸುಂದರನೇ. ಆದರೆ ಆರೋಗ್ಯ ಹಾಗೂ ಸೌಂದರ್ಯ ದೇಹಕ್ಕಷ್ಟೇ ಸೀಮಿತವಲ. ಒಬ್ಬ ವ್ಯಕ್ತಿಯಲ್ಲಿ ನಿಜವಾದ ಸೌಂದರ್ಯ ಹೊರಹೊಮ್ಮಬೇಕಾದರೆ ಅಂತರಂಗದ ಸೌಂದರ್ಯವನ್ನೂ ಹೊಂದಿರುವುದು ಬಹಳ ಅಗತ್ಯವಾಗುತ್ತದೆ. ‘ಸುಂದರನಾದ ಮೂರ್ಖನು ಕಣ್ಣಿಗೆ ಆನಂದವನ್ನೂ ಮನಸ್ಸಿಗೆ ನೋವನ್ನೂ ಉಂಟುಮಾಡುತ್ತಾನೆ’ ಎನ್ನುವ ಒಂದು ಉಕ್ತಿ ಇದೆ!
ಆತ್ಮೀಯ ಅನುಬಂಧ ಇರುವೆಡೆ ನಾವು ಸೌಂದರ್ಯವನ್ನು ಕಾಣುತ್ತೇವೆ. ‘ಮಜನೂ ದೃಷ್ಟಿ' ಎನ್ನುವ ಹನಿಗವನ ಈ ರೀತಿ ಇದೆ,

‘ಸೌಂದರ್ಯ ಅಡಗಿರುವುದು
ನೋಡುವ ಕಣ್ಣುಗಳಲ್ಲಲ್ಲ
ಆಸ್ವಾದಿಸುವ ಮನಗಳಲ್ಲಿ,
ಎಲ್ಲರ ಕಣ್ಣಿನಲ್ಲಿ
ಸಾಮಾನ್ಯ ಲೈಲಾ
ಮಜನೂ ದೃಷ್ಟಿಯಲ್ಲಿ
ಮನೋಜ್ಞ ಚೆಲುವೆ!’

ನಮ್ಮ ಹಾಗೂ ಇತರ ಎಲ್ಲಾ ಪುರಾಣ, ಪುಣ್ಯಕಥೆಗಳಲ್ಲಿಯೂ ದೇವತೆಗಳೆಂದರೆ ಪರಮ ಸೌಂದರ್ಯದ ಖನಿಗಳಂತೆಯೂ, ರಾಕ್ಷಸರು ಹಾಗೂ ಭೂತ-ಪ್ರೇತಗಳನ್ನು ವಿಕಾರರೂಪದ ಕುರೂಪಿಗಳಂತೆಯೂ ಚಿತ್ರಿಸಿರುವುದನ್ನು ಕಾಣುತ್ತೇವೆ. ಏಕೆ ಹೀಗೆ ಎಂದು ಮೊದಲು ಬಹಳವಾಗಿ ಚಿಂತಿಸುತ್ತಿದ್ದೆ. ಈಗ ತಿಳಿದಂತೆ ದೇವತೆ ಎಂಬ ಕಲ್ಪನೆಯೇ ಆಂತರಿಕ ಹಾಗೂ ಬಾಹ್ಯವಾಗಿ ಧನಾತ್ಮಕತೆಯಿಂದ ಕೂಡಿದೆ. ಎಲ್ಲಾ ದೇವತೆಗಳೂ ಒಳ್ಳೆಯವರೇ! ಅವರು ಕೆಟ್ಟ ಆಲೋಚನೆ ಅಥವಾ ಕಾರ್ಯವನ್ನು ಮಾಡಿದಾಗ ಶಾಪ ಉಂಟಾಗಿ ಕುರೂಪಿಗಳಾಗುತ್ತಾರೆ! ಸಂಪೂರ್ಣವಾಗಿ ಋಣಾತ್ಮಕ ಅಂಶಗಳಿಂದಲೇ ಆಗಿರುವುದೆಲ್ಲಾ ಕುರೂಪ ಎಂದು ಕಲ್ಪನೆ ಮಾಡಿರಬಹುದೆನಿಸುತ್ತದೆ. ಆದರೆ ವಾಸ್ತವವಾಗಿ ಯಾವುದೂ ಶೇಕಡಾ ನೂರರಷ್ಟು ಒಳ್ಳೆಯದು ಅಥವಾ ಕೆಟ್ಟದಾಗಿರುವುದು ಕಂಡುಬರುವುದಿಲ್ಲ,
ಪ್ರಭುಶಂಕರ ಅವರು ತಮ್ಮ `ಖಲೀಲ್ ಗಿಬ್ರಾನ್’’ ಕೃತಿಯಲ್ಲಿ ಹೀಗೆ ಹೇಳುತ್ತಾರೆ, ಲೋಕದಲ್ಲಿ ನಾವು ಯಾವುದನ್ನು ಸೌಂದರ್ಯ ಎನ್ನುತ್ತೇವೆಯೋ-ಎಂದು ಭ್ರಮಿಸುತ್ತೇವೆಯೋ ಎಂಬುದು ಸರಿಹೊಂದಬಹುದು-ಅದು ಸೌಂದರ್ಯ ಆಗಿರಬಹುದು, ಆಗಿಲ್ಲದೆಯೂ ಇರಬಹುದು. ಹಾಗೆಯೇ ಅಸೌಂದರ್ಯದ ವಿಷಯವೂ ಆಗಿದೆ. ಅಲ್ಲೂ ಭ್ರಮೆ ಸಾಧ್ಯ. ಬಹುಷಃ ಸುಂದರವಲ್ಲದ್ದನ್ನು ಜನ ಹೊಗಳಿ, ಸುಂದರವಾದದ್ದನ್ನು ಅಸುಂದರ ಎಂದು ಕರೆದದ್ದು ಅವನ ಮನಸ್ಸನ್ನು ಕಲಕಿತ್ತೋ ಏನೋ. ಉಡುಪುಗಳು (Garments) ಎಂಬ ಒಂದು ದೃಷ್ಟಾಂತದಲ್ಲಿ ಅದನ್ನು ಸೂಚಿಸಿದ್ದಾನೆ.
‘ಒಂದು ದಿನ ಸೌಂದರ್ಯ ಮತ್ತು ಕುರೂಪ ಒಂದು ಸಮುದ್ರ ತೀರದಲ್ಲಿ ಭೇಟಿಯಾದರು. ಒಬ್ಬರಿಗೊಬ್ಬರು ಹೇಳಿಕೊಂಡರು, ‘ನಾವು ಸಮುದ್ರ ಸ್ನಾನ ಮಾಡೋಣ.’
ಅವರಿಬ್ಬರೂ ಬಟ್ಟೆ ಬಿಚ್ಚಿ ಸ್ನಾನಕ್ಕೆ ಹೋದರು. ಸ್ವಲ್ಪ ಹೊತ್ತಾದ ಮೇಲೆ ಕುರೂಪ ದಂಡೆಗೆ ಬಂದು ಸೌಂದರ್ಯದ ಬಟ್ಟೆಗಳನ್ನು ಹಾಕಿಕೊಂಡು ನಡೆದುಬಿಟ್ಟಿತು. ಸೌಂದರ್ಯ ದಂಡೆಗೆ ಬಂದು ನೋಡಿದರೆ ತನ್ನ ಬಟ್ಟೆ ಇಲ್ಲ. ಬತ್ತಲೆ ಇರಲು ನಾಚಿಕೆಯಾಗಿ ಕುರೂಪದ ಉಡುಪನ್ನು ಹಾಕಿಕೊಂಡು ತನ್ನ ದಾರಿ ಹಿಡಿಯಿತು.
ಇಂದಿಗೂ ಜನ ಸೌಂದರ್ಯ ಕುರೂಪಗಳನ್ನು ತಪ್ಪಾಗಿಯೇ ತಿಳಿಯುತ್ತಾರೆ. ಆದರೆ ಕೆಲವರಿದ್ದಾರೆ, ಸೌಂದರ್ಯದ ಮುಖವನ್ನು ನೋಡಿದವರು. ಉಡುಪು ಕುರೂಪದ್ದೇ ಆದರೂ ಅವರು ಸೌಂದರ್ಯವನ್ನು ಬಲ್ಲರು. ಮತ್ತೆ ಕೆಲವರು, ಕುರೂಪವನ್ನು ಬಲ್ಲವರೂ ಇದ್ದಾರೆ. ಅವರಿಗೆ ಸೌಂದರ್ಯದ ಉಡುಪು ಕುರೂಪವನ್ನು ಮುಚ್ಚಿಡಲಾರದು.’

ನಾವು ನಮ್ಮ ಬಾಹ್ಯ ಸೌಂದರ್ಯಕ್ಕಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಆಂತರಿಕವಾಗಿ ಕುಸಿಯುತ್ತಿದ್ದೇವೇನೋ ಎನಿಸುತ್ತಿದೆ. ನಮ್ಮ ಅಂತರಂಗವನ್ನು ಸದೃಢಗೊಳಿಸಿಕೊಂಡು ನಮ್ಮಲ್ಲಿ ನೆಲೆಸಿರಬಹುದಾದ ಕುರೂಪವನ್ನು ಹೊರದೂಡುವ ಪ್ರಯತ್ನವನ್ನು ಕೈಗೊಳ್ಳಬೇಕಾಗಿದೆ.

8 comments:

 1. ಬಾಹ್ಯ ಸೌಂದರ್ಯ ತಕ್ಷಣಕ್ಕೆ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ.ಆದರೆ ಅದಕ್ಕೆ ಆಂತರಿಕ ಸೌಂದರ್ಯ ಸಾಥ್ ನೀಡದಿದ್ದರೆ ಆ ಆಕರ್ಷಣೆ ಬಹಳ ಕಾಲ ಉಳಿಯುವುದಿಲ್ಲ.ಬಾಹ್ಯ ಸೌಂದರ್ಯವಿರದಿದ್ದರೂ ಆಂತರಿಕ ಸೌಂದರ್ಯ ಉಳ್ಳ ವ್ಯಕ್ತಿಗೇ ನಿಧಾನವಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.ಬಾಹ್ಯ ಸೌಂದರ್ಯ ಪ್ರಕೃತಿದತ್ತವಾಗಿ ಬಂದರೆ,ಆಂತರಿಕ ಸೌಂದರ್ಯಕ್ಕೆ ಸತತ ಕೃಷಿ ಬೇಕು (ಇದಕ್ಕೆ ಅಪವಾದವೆಂಬಂತೆ ಕೆಲವರಿಗೆ ಆಂತರಿಕ ಸೌಂದರ್ಯ ಅವರ ಹುಟ್ಟು ಗುಣವೇ ಆಗಿರುತ್ತದೆ).ಆಂತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡಬೇಕೆಂಬ ನಿಮ್ಮ ಲೇಖನ ಚೆನ್ನಾಗಿದೆ.ಅಭಿನಂದನೆಗಳು.

  ReplyDelete
 2. ಸೌಂದರ್ಯ ಮತ್ತು ಕುರೂಪದ ಬಗೆಗೆ ಸಾಮಾನ್ಯವಾಗಿ ಇರುವ ತಪ್ಪು ಧೋರಣೆಯನ್ನು ಸರಿಯಾಗಿ ಬಿಂಬಿಸಿದ್ದೀರಿ. ಅಂತರಂಗದ ಚೆಲುವೇ ನಿಜವಾದ ಚೆಲುವು ಎನ್ನುವದಕ್ಕೆ ಸಾಕ್ರೆಟೀಸನನ್ನೇ ನಿದರ್ಶನವನ್ನಾಗಿ ತೆಗೆದುಕೊಳ್ಳಬಹುದು. ಅಭಿನಂದನೆಗಳು.

  ReplyDelete
 3. ಇಂದಿನ ತೋರಿಕೆಯ ಸಮಾಜದಲ್ಲಿ ಎಲ್ಲರೂ ತಿಳಿದುಕೊಳ್ಳಲೇಬೇಕಾದ ವಿಷಯ.. ತುಂಬಾ ವೈಚಾರಿಕ ಲೇಖನ. ಕುಲಗೆಟ್ಟು ಹೋಗಿರುವ ಇಂದಿನ ಸಮಾಜಕ್ಕೆ ಉತ್ತಮ ವಿಷಯಗಳನ್ನು ತಿಳಿಸಿಕೊಡುವ ನಿಮ್ಮ ಪ್ರಯತ್ನ ಮೆಚ್ಚಬೇಕು. ಧನ್ಯವಾದಗಳು.

  ReplyDelete
 4. ಸೌಂದರ್ಯ ವಿಚಾರವಾಗಿ ನೀವು ನಿರೂಪಿಸಿದ ವಿವರಣೆ ಚೆನ್ನಾಗಿದೆ.
  ‘ಸುಂದರನಾದ ಮೂರ್ಖನು ಕಣ್ಣಿಗೆ ಆನಂದವನ್ನೂ ಮನಸ್ಸಿಗೆ ನೋವನ್ನೂ ಉಂಟುಮಾಡುತ್ತಾನೆ’ ಈ ಮಾತು ನಿಜಕ್ಕೂ ಸತ್ಯವಲ್ಲವೇ....

  ReplyDelete
 5. Interesting write up madam. Beautines always hidden in the look. Eye opener post.
  Thanks for visiting my blog. Pl. Visit my one more blog:
  www.badari-notes.blogspot.com

  ReplyDelete
 6. ಸೌಂದರ್ಯದ ಬಗ್ಗೆ ವಿಚಾರಪೂರ್ಣ ಲೇಖನ.
  ವಂದನೆಗಳು.

  ReplyDelete
 7. @ಪ್ರಭಾಮಣಿ ಯವರೇ,ಆಂತರಿಕ ಸೌಂದರ್ಯಕ್ಕೂ ಬಾಹ್ಯ ಸೌಂದರ್ಯಕ್ಕೂ ಇರುವ ವೆತ್ಯಾಸವನ್ನು ಕುರಿತಾದ ವೈಚಾರಿಕ ಲೇಖನ ವಿಚಾರಾತ್ಮಕವಾಗಿದೆ.ಅಭಿನಂದನೆಗಳು.

  ReplyDelete
 8. ನಿಮ್ಮ ಮಾತು ನಿಜ ಮೇಡಂ ನಮ್ಮ ಬಾಹ್ಯ ಸೌಂದರ್ಯಕ್ಕಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಆಂತರಿಕವಾಗಿ ಕುಸಿಯುತ್ತಿದ್ದೇವೆ

  ಲೇಖನ ಚಂದಾ ಉಂಟು

  ReplyDelete