Thursday, November 4, 2010

ಮನದ ಅ೦ಗಳದಿ......... ೧೬- ಒಂದು ಸಾರ್ಥಕ ಸಂಜೆ

(ವರಕವಿ ಬೇಂದ್ರೆಯವರ ನೆನಪು)

ತಾನು ಹೋದ ಕಡೆಗೆಲ್ಲಾ ನನ್ನನ್ನೂ ಕರೆದುಕೊಂಡು ಹೋಗಿ ಸ್ಥಳ ಪರಿಚಯ ಮಾಡಿಕೊಡುತ್ತಿದ್ದರು ನನ್ನಕ್ಕ. ಹಾಗೆಯೇ ಅವರು ಧಾರವಾಡಕ್ಕೆ ಮೌಲ್ಯಮಾಪನಕಾರ್ಯಕ್ಕೆ ಹೋದಾಗ ನನ್ನನ್ನೂ ಕರೆದುಕೊಂಡು ಹೋದರು. (ಆಗ S.S.L.C. ಉತ್ತರ ಪತ್ರಿಕೆಗಳ ಬೇರೆ ಬೇರೆ ವಿಷಯಗಳ ಮೌಲ್ಯಮಾಪನಕಾರ್ಯ ಬೇರೆಬೇರೆ ಊರುಗಳಲ್ಲಿ ನಡೆಯುತ್ತಿತ್ತು) ಬೇರೆಬೇರೆ ಸ್ಥಳಗಳಿಂದ ಹೋದವರಿಗೆ ಉಳಿಯಲೂ ವ್ಯವಸ್ಥೆ ಮಾಡಿದ್ದರು. ನಮ್ಮ ಕ್ಯಾಂಪಸ್ ಮುಂದೇ ಸಾಧನಕೇರಿಯ ಬಸ್ ಹಾದು ಹೋಗುತ್ತಿತ್ತು. ಧಾರವಾಡಕ್ಕೆ ಹೋಗುತ್ತೇವೆಂದು ತಿಳಿದಾಗಲೇ ವರಕವಿ ಬೇಂದ್ರೆಯವರನ್ನು ನೋಡಬೇಕು ಎಂದುಕೊಂಡಿದ್ದ ನಮಗೆ ಆ ಬಸ್ ನೋಡಿದ ತಕ್ಷಣ ಸಾಧನಕೇರಿ ಕೈ ಬೀಸಿ ಕರೆದಂತಾಯ್ತು. ಯಾವಾಗ ಅಲ್ಲಿಗೆ ಹೋಗುತ್ತೇವೆಯೋ ಎನ್ನುವ ತವಕ . ಆದರೆ ಅಕ್ಕನಿಗೆ ಬಿಡುವೇ ಇಲ್ಲ.
ಒಂದು ದಿನ ಸಂಜೆ ನಾವು ಸಮೀಪದಲ್ಲೇ ನಡೆಯುತ್ತಿದ್ದ ಒಂದು ಸಂಗೀತ ಕಛೇರಿಗೆ ಹೋದೆವು. ಪಕ್ಕದಲ್ಲಿ ಕುಳಿತ ಮಹಿಳೆ, `ನೀವು ಮೈಸೂರಿನ ಕಡೆಯವರೇ?’ ಎಂದು ಪ್ರಶ್ನಿಸಿದರು. ಅಕ್ಕ `ಹೌದು’ ಎಂದರು. `ನಿಮಗೆ ಕರ್ನಾಟಕ ಸಂಗೀತ ಕೇಳಿ ರೂಢಿಯಾಗಿರುವುದರಿಂದ ಹಿಂದೂಸ್ಥಾನಿ ಕೇಳುವುದು ಸ್ವಲ್ಪ ಬೇರೆ ರೀತಿಯೇ ಎನಿಸಬಹುದು’. ಎಂದು ಮೆಲುದನಿಯಲ್ಲಿ ಮಾತಿಗಾರಂಭಿಸಿದರು. ವೇದಿಕೆಯ ಮೇಲೆ ಕುಳಿತು ಹಾಡುತ್ತಿದ್ದ ಗಾಯಕಿಗೆ ಹಿಂದೆಯೇ ಕುಳಿತು ಪ್ರೋತ್ಸಾಹ ಕೊಡುತ್ತಿದ್ದವರು ಅವರ ತಂದೆ ಎಂದು ಹೇಳಿದ ಅವರು, `ನಾನೂ ಚಿಕ್ಕವಳಿದ್ದಾಗ ನೃತ್ಯ ಮಾಡುತ್ತಿದ್ದೆ. ಆಗ ನಮ್ಮ ತಂದೆಯವರು ಕಾಲಿಗೆ ಗೆಜ್ಜೆ ಕಟ್ಟಿ ಆಶೀರ್ವದಿಸುತ್ತಿದ್ದರು. ಈಗ ಆ ಪ್ರೋತ್ಸಾಹ ಬರೀ ನೆನಪು ಮಾತ್ರ...’ಎಂದು ತಮ್ಮ ವಿಷಯವನ್ನೂ ಹೇಳಿದರು. ನಾವು ನಮಗೆ ಬೇಂದ್ರೆಯವರನ್ನು ನೋಡಬೇಕೆಂಬ ಹಂಬಲವನ್ನು ತಿಳಿಸಿದೆವು. ಬೇಂದ್ರೆಯವರು ಹಾಗೆ ಎಲ್ಲರನ್ನೂ ನೋಡಿ ಮಾತನಾಡಿಸುವುದಿಲ್ಲ. ನನಗೆ ಚೆನ್ನಾಗಿ ಪರಿಚಯವಿದ್ದಾರೆ. ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ನಿಮಗೆ ಯಾವಾಗ ಬಿಡುವಾಗುತ್ತದೆ ತಿಳಿಸಿ.? ಎಂದರು.

ಸಾರ್ವಜನಿಕ ರಜಾದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಅರ್ಧದಿನ ಮಾತ್ರ ನಡೆಯುತ್ತಿತ್ತು. ಅಂಥಾ ಒಂದು ದಿನವನ್ನು ಹೇಳಿ ಅಕ್ಕ ವೇಳೆಯನ್ನು ಗೊತ್ತುಪಡಿಸಿಕೊಂಡರು. ಅವರು ಸಾಧನಕೇರಿಯ ಬಸ್ಸ್ಟಾಪಿನಲ್ಲಿ ತಮಗಾಗಿ ಕಾಯಬೇಕಾಗಿ ತಿಳಿಸಿದರು. ನಾವು ಹೊಸ ಹುಮ್ಮಸ್ಸಿನಿಂದ ಆ ದಿನಕ್ಕಾಗಿ ಕಾಯಲಾರಂಭಿಸಿದೆಡವು. ಆ ದಿನವೂ ಬಂದು ಸಾಧನಕೇರಿ ಸ್ಟಾಪಿನಲ್ಲಿ ಇಳಿದು ಆಕೆಗಾಗಿ ಕಾದದ್ದೇ ಆಯ್ತು. ಸಂಜೆಯಾದರೂ ಅವರು ಬರಲೇ ಇಲ್ಲ. ಏನು ತೊಂದರೆಯಾಯಿತೋ ಏನೋ ಎನಿಸಿದರೂ ಅಲ್ಲಿಯವರೆಗೂ ಹೋಗಿ ಬೇಂದ್ರೆಯವರನ್ನು ನೋಡದೇ ಬರಲು ಮನಸ್ಸು ಒಪ್ಪಲಿಲ್ಲ.

ಅಂಥಾ ಸುಪ್ರಸಿದ್ಧ ಕವಿಯ ಮನೆಯನ್ನು ಹುಡುಕುವುದು ಕಷ್ಟವೇನೂ ಆಗಲಿಲ್ಲ. `ಶ್ರೀಮಾತಾ’ ಬಾಗಿಲ ಬಳಿ ನಿಂತು ಅಂಜುತ್ತಾ, ಅಳುಕುತ್ತಾ ಕರೆಗಂಟೆಯನ್ನು ಒತ್ತಿದಾಗ ನಮ್ಮ ಎದೆಬಡಿತ ನಮಗೇ ಕೇಳುತ್ತಿತ್ತು. ಸ್ವತ: ಬೇಂದ್ರೆಯವರೇ ಬಾಗಿಲು ತೆರೆದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ. ಆದರೆ ಏನು ಮಾತನಾಡಬೇಕೆಂದೇ ತಿಳಿಯಲಿಲ್ಲ. ಬೇಂದ್ರೆಯವರೇ ನಮಗೆ ಒಳಗೆ ಬಂದು ಕುಳಿತುಕೊಳ್ಳಲು ಹೇಳಿ, `ಎಲ್ಲಿಂದ ಬಂದಿರಿ?’ ಎಂದು ವಿಚಾರಿಸಿಕೊಂಡರು. ನಾವು ವಿಷಯ ತಿಳಿಸಿದಾಗ, `ಎಲ್ರಿಗೂ ರಜ ಸಿಕ್ಕಾಗ ಸಿನೇಮಾ, ಪಿಕ್ನಿಕ್ ಅಂತ ಹೋಗ್ತಾರೆ. ನೀವು ಈ ಮುದುಕನ್ನ ನೋಡಕ್ಕೆ ಬಂದಿದೀರಲ್ಲ’ ಎಂದು ನಗುತ್ತಾ ಹೇಳಿದರು. (ಕ್ಷಮಿಸಿ, ಅವರದ್ದೇ ಮಾತಿನ ಧಾಟಿಯಲ್ಲಿ ಬರೆಯಲು ಆಗುತ್ತಿಲ್ಲ. ಸಾರಾಂಶ ತಿಳಿಸುತ್ತೇನೆ.) ನಂತರ ನಮ್ಮ ತಂದೆ, ತಾಯಿ, ಊರಿನಬಗ್ಗೆ ಎಲ್ಲಾ ವಿಚಾರಿಸಿಕೊಂಡರು. ಮಾತನಾಡುತ್ತಾ ನಮಗೂ ಮೊದಲಿನ ಅಂಜಿಕೆ ಕಮ್ಮಿಯಾಯ್ತು. `ನಮ್ಮ ತಂದೆಗೆ ಸಂತ, ಭೂಗೋಳ, ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಇತ್ತು. ಇಂಗ್ಲಿಷ್ ವ್ಯಾಕರಣವನ್ನು ಚೆನ್ನಾಗಿ ತಿಳಿದಿದ್ದರು.’ ಎಂದು ಹೇಳಿದೆವು. ನಮ್ಮ ಹೆಸರನ್ನು ಕೇಳಿದರು. ನಮ್ಮಕ್ಕ `ಸೀತ’ ಎಂದರು. ನಾನು `ಪ್ರಭಾ’ ಎಂದೆ. `ನಿಮ್ಮ ಪೂರ್ತಿ ಹೆಸರು ಹೇಳಿ. ಇಷ್ಟೆಲ್ಲಾ ತಿಳೀದುಕೊಂಡಿರುವ ನಿಮ್ಮ ತಂದೆ ನಿಮಗೆ ಇಷ್ಟು ಚಿಕ್ಕ ಹೆಸರು ಇಟ್ಟಿರಲಾರರು.’ ಎಂದರು. ಆಗ ನಮ್ಮ ಪೂರ್ತಿ ಹೆಸರುಗಳಾದ `ಸೀತಾಲಕ್ಷ್ಮಿ’ ಮತ್ತು `ಪ್ರಭಾಮಣಿ’ ಗಳನ್ನು ಹೇಳಿದೆವು.

`ಹಿಂದೆ ಎರಡು ಹೆಸರುಗಳನ್ನು ಏಕೆ ಇಡ್ತಿದ್ದರು ಎಂದರೆ ಒಂದು ಹೆಸರಿನಿಂದ ಒಳ್ಳೆಯದು ಆಗದಿದ್ದರೆ ಮತ್ತೊಂದರಿಂದಲಾದರೂ ಒಳ್ಳೆಯದಾಗಲಿ ಎಂದು’ ಎಂಬ ಕಾರಣವನ್ನು ತಿಳಿಸಿದರು. ಅದುವರೆಗೂ ಹ್ರಸ್ವನಾಮದ ಮೋಹದಲ್ಲಿದ್ದ ನಾನು ನಂತರ ಪೂರ್ಣ ಹೆಸರನ್ನು ಹೇಳಲಾರಂಭಿಸಿದೆ. ಈಗಂತೂ ನನ್ನ ಹೆಸರಿನ ಜೊತೆಗೆ ಅಷ್ಟೇ ಅಕ್ಷರಗಳ `ಇವರ’ ಹೆಸರನ್ನೂ ಸೇರಿಸಿಕೊಂಡು ದೀರ್ಘನಾಮಳಾಗಿದ್ದೇನೆ. ಜೀವಶಾಸ್ತ್ರದ ಬೈ ನಾಮಿಯಲ್ ನಾಮಿಂಕ್ಲೇಚರ್ನಂತೆ! (ದ್ವಿನಾಮ ನಾಮಕರಣ!)

ಸಾಹಿತ್ಯದ ಬಗ್ಗೆ ಯಾವುದೇ ಮಾತನಾಡುವುದೂ ಬೇಡ. ಅವರನ್ನು ನೋಡಿ ಬಂದರಷ್ಟೇ ಸಾಕು ಎಂದು ಮೊದಲೇ ತೀರ್ಮಾನಿಸಿಕೊಂಡು ಹೋಗಿದ್ದರೂ ಅದು ಹೇಗೋ ಮಾತು ಸಾಹಿತ್ಯದ ಕಡೆಗೇ ಹೊರಳಿತು. ಬೇಂದ್ರೆಯವರು, `ನನ್ನ ಸಾಹಿತ್ಯ ಎಂದರೆ ಕಾಸಾರದಲ್ಲಿ ಈಜಾಡಿದಂತೆ. ಅವರ ಕೃತಿಗಳನ್ನು ಓದುವುದು ಎಂದರೆ ಪರ್ವತವನ್ನು ಏರಿದಂತೆ. ಯಾವುದು ಹೆಚ್ಚು ಸಂತೋಷ ನೀಡುತ್ತದೆ ನೀವೇ ಹೇಳಿ’ ಎಂದರು. ಅದನ್ನು ಹೇಳುವಷ್ಟು ನಾವು ಪ್ರಬುದ್ಧರಾಗಿರಲಿಲ್ಲ. ಆದರೂ ಎರಡಕ್ಕೂ ತಮ್ಮದೇ ಆದ ಘನತೆ, ಆನಂದ ಇದೆ ಎಂದುಕೊಂಡೆವು. ಅಷ್ಟರಲ್ಲಿ ಜೋರಾಗಿ ಮಳೆ ಬೀಳಲಾರಂಭಿಸಿತು. ಒಳಗೆ ವರಾಂಡದಲ್ಲಿ ಕುಳಿತಿದ್ದ ನಮಗೂ ಇರಚಲು ಹೊಡೆಯುತ್ತಿತ್ತು. ನಮ್ಮನ್ನು ಒಳ ಮನೆಗೆ ಕರೆದುಕೊಂಡು ಹೋದರು.

`ನನ್ನ ನೋಡಕ್ಕೆ ದೂರದ ಊರಿನಿಂದ ಇಬ್ಬರು ಹೆಣ್ಣುಮಕ್ಕಳು ಬಂದಾಗ ರಂಬೆ, ಊರ್ವಶಿ ನರ್ತನ ಮಾಡ್ದಂಗೆ ಮಳೆ ಬರ್ತಿತ್ತು ಅಂತ ಇನ್ನು ಮುಂದ ಮಳೆ ಬಂದಾಗಲೆಲ್ಲಾ ನಿಮ್ಮ ನೆನಪು ಮಾಡ್ಕೋತೀನಿ’, ಎಂದರು. ನಮಗೆ ಒಂದು ಡಬ್ಬಿಯಿಂದ ಸಕ್ಕರೆ ತೆಗೆದು ಕೊಟ್ಟು ತಿನ್ನಲು ಹೇಳಿದರು. ತಮಗೆ ಪ್ರಿಯರಾದವರಿಗೆ ಮಾತ್ರ ಸಕ್ಕರೆ ತಿನ್ನಲು ಕೊಡ್ತಾರೆ ಎಂದು ಕೇಳಿ ತಿಳಿದಿದ್ದ ನಮಗೆ ಬಹಳ ಸಂತೋಷವಾಯ್ತು. ಅವರು ಕುಳಿತಿದ್ದಾಗ ಅವರ ಕಾಲ ಬಳಿಯೇ ಸುಳಿದಾಡುತ್ತಿದ್ದ ಬೆಕ್ಕನ್ನು ತೋರಿಸಿ ಅದು ತಮ್ಮ ಪತ್ನಿಯ ಮನೆಯಿಂದ ತಂದ ಸಂತತಿ ಎಂದು ತಿಳಿಸಿದರು. ಒಂದು ಪುಸ್ತಕ ಕೊಟ್ಟು ಅದರಲ್ಲಿ ನಮ್ಮ ಪೂರ್ಣ ವಿಳಾಸ ಬರೆಯಲು ತಿಳಿಸಿದರು. ಅಲ್ಲಿದ್ದ ಬ್ರಹ್ಮ ಚೈತನ್ಯರ ಫೋಟೋ ನೋಡಿ ನಮ್ಮ ತಂದೆಯವರೂ ಅವರ ಆರಾಧಕರು ಎಂದು ಹೇಳಿದಾಗ ಅವರಿಗೆ ತುಂಬಾ ಸಂತೋಷವಾಯಿತು.

ಸಂಜೆ ಸರಿದು ಇರುಳು ಪಸರಿಸಲಾರಂಭಿಸಿತು. ಒಲ್ಲದ ಮನಸ್ಸಿನಿಂದಲೇ ನಾವು ಹೊರಡಬೇಕಾಯ್ತು. ಇನ್ನೂ ಮಳೆ ಹನಿಯುತ್ತಿದ್ದುದರಿಂದ ನಮ್ಮನ್ನು ಬಸ್ಸ್ಟಾಪ್ವರಗೆ ಛತ್ರಿ ಹಿಡಿದು ಕಳುಹಿಸಿ ಬರಲು ತಮ್ಮ ಮಗನಿಗೆ ಹೇಳಿದರು. ನಾವು ಗಾಭರಿಯಿಂದ ಬೇಡವೆಂದು ತಿಳಿಸಿ ಬೀಳ್ಕೊಂಡು ಬಂದೆವು. ಆ ಒಂದು ಸಂಜೆ ಎಂದಿಗೂ ಮರೆಯಲಾಗದ ಸಂಜೆಯಾಗಿದೆ.
ಅದೇ ವರ್ಷ ದೀಪಾವಳಿಯ ದಿನವೇ ನಮಗೆ ಬೇಂದ್ರೆಯವರು ನಿಧನರಾದ ಸುದ್ಧಿ ತಿಳಿಯಿತು. ಆದಿನ ನಮಗೆ ಹಬ್ಬದಂತೆ ಕಾಣಲಿಲ್ಲ. ನನ್ನಕ್ಕ ಬೇಂದ್ರೆಯವರ ನೆನಪಿನಲ್ಲಿ ಅತ್ತೂ ಅತ್ತೂ ಸಾಕಾದರು. ನಾನೂ ಮೂಕವಾಗಿ ರೋಧಿಸುತ್ತಿದ್ದೆ. ಎಲ್ಲರ ಮನೆಗಳಲ್ಲೂ ದೀಪಗಳು ಬೆಳಗಬೇಕಾದ ದಿನ ಸಾಹಿತ್ಯಕ್ಷೇತ್ರವನ್ನೇ ತನ್ನ ದಿವ್ಯಪ್ರಭೆಯಿಂದ ಬೆಳಗಿದ ಒಂದು ಮಹಾನ್ ಜ್ಯೋತಿ ನಂದಿಹೋಗಿತ್ತು. ಆದರೆ ಆ ಜ್ಯೋತಿ ನೀಡಿದ ಬೆಳಕು ಚಿರನೂತನವಾಗಿದೆ. ಚಿರಸ್ಥಾಯಿಯಾಗಿದೆ.

9 comments:

 1. ಬೇಂದ್ರೆಯವರ ಕವನಗಳೇ ಹಾಗೆ, ಸಾವಿರದ ಸಾವಿರದ ಕವನಗಳು. ಅವರನ್ನು ಭೇಟಿ ಮಾಡಿದ ನೀವೇ ಧನ್ಯರು

  ReplyDelete
 2. @ ಮಹೇಶ್ ರವರೆ,
  ನನ್ನ ಬ್ಲಾಗ್ ಗೆ ಸ್ವಾಗತ. ಬೆ೦ದ್ರೆಯವರನ್ನು ನೋಡಲು ಕಾರಣಕರ್ತರಾದದ್ದು ನನ್ನ ಅಕ್ಕ. ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು

  ReplyDelete
 3. @ ಸುನಾಥ್ ರವರೆ,
  ಧಾರವಾಡದವರೆ ಆದ ತಮಗೆ ಬೆ೦ದ್ರೆಯವರ ಒಡನಾಟ vitte0du ಭಾವಿಸುತ್ತೇನೆ .ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು

  ReplyDelete
 4. ಬೇಂದ್ರಜ್ಜಯನ ಭೇಟಿಯನ್ನು ಕಣ್ಮುಂದೆ ತಂದು ನಿಲ್ಲಿಸಿದ್ದಕ್ಕೆ ವಂದನೆಗಳು..

  ಶಬ್ದ ಗಾರುಡಿಗನ ಕಣ್ಣಾರೆ ಕಂಡು ಮಾತಾಡಿಸಿದ ನೀವೇ ಧನ್ಯರು.

  ReplyDelete
 5. ಬೇಂದ್ರೆಯವರ ಆಪ್ತತೆಯ ಆದರಾತಿತ್ಯ ಪಡೆದ ತಾವೇ ಧನ್ಯರು. ಅಂತ ಮೇರುವ್ಯಕ್ತಿಗಳು ಅಪರಿಚಿತರಾದ ತಮ್ಮೊಂದಿಗೆ ಅಷ್ಟು ಸಮಯ ಕಳೆದದ್ದೇ ಬೇಂದ್ರೆಯವರ ಸರಳ ಸಜ್ಜನಿಕೆ ತೋರಿಸುತ್ತೆ. ಅನುಭವ ಹಂಚಿದ್ದಕ್ಕೆ ದನ್ಯವಾದಗಳು.

  ReplyDelete
 6. @ ಸೀತಾರಾಂ ರವರೆ,
  ಬೆ೦ದ್ರೆಯವರು ಇನ್ನು ಹೆಚ್ಚಿನ ಸಮಯ ಮಾತನಾಡಿದರು. ಸಾರಾ೦ಶ ತಿಳಿಸಿದ್ದೇನೆ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 7. ಗೆಳತಿ ಪ್ರಭಾಮಣಿ ಯವರೇ samayavaagada kaarana blogge baralu saadhyavaagiralilla.varakavi bendre yavara aadarakke paatraraada neeve dhanyaru.ವಂದನೆಗಳು

  ReplyDelete
 8. http://pratheekshe.blogspot.in/2010/11/blog-post.html#comment-ಫಾರಂ

  ReplyDelete